ಕೆಂಬೂತನ ಗೂಡು

-ದೀಕ್ಷಣ್ ಕುಮಾರ್

deekshan‘ಮುಂಗಾರು’ ಕತಾಸ್ಪರ್ಧೆಯಲ್ಲಿ ಎರಡನೆಯ  ಬಹುಮಾನ ಪಡೆದ ಕತೆ 

ಬೇಸಗೆಯ ರಜೆಯ ಒಂದು ಸಂಜೆಯಲ್ಲಿ ಇಳಿ ಬಿಸಿಲಿನಲ್ಲಿ ಪುಟ್ಟ ಆ ದೊಡ್ಡ ಮಾವಿನ ಮರದ ಕೆಳಗೆ ತನ್ನ ಗೆಳೆಯರ ಜೊತೆ ಆಟವಾಡುತ್ತಿದ್ದ. ಅವನು ಆ ಗುಂಪಿನಲ್ಲಿರುವ ಇತರರಿಗಿಂತಲೂ ದೊಡ್ಡವನು ಹಾಗೂ ಚುರುಕಿನವನೆನ್ನುವ ಹೆಮ್ಮೆ ಅವನ ಮುಖದಲ್ಲಿ ಕಾಣಿಸುತ್ತಿತ್ತು. ಆದ್ದರಿಂದಲೇ ಪುಟ್ಟನು ಆ ಗುಂಪಿನ ನಾಯಕನಾಗಿದ್ದನು. ಅವರೆಲ್ಲರೂ ಸೇರಿ ಮರಳಿನಲ್ಲಿ ಗೊಂಬೆಯೊಂದನ್ನು ಮಾಡುತ್ತಿದ್ದರು. ಸಾಮಾನ್ಯರಿಗೆ ಅದರಲ್ಲಿ ಮನಷ್ಯಾಕೃತಿ ಮಾತ್ರ ಕಾಣಬಹುದಾಗಿತ್ತು. ಆದರೆ ಅವರ ಆ ಪುಟಾಣಿ ಕಣ್ಣುಗಳಿಗೆ ಅವರ ಆ ಗೊಂಬೆ ಮನುಷ್ಯನಾಗಿಯೇ ಕಾಣುತ್ತಿದ್ದ.

ರಾಜು ಹೇಳಿದ “ಗೊಂಬೆ ಎಷ್ಟು ಚೆನ್ನಾಗಿದೆ ಅಲ್ವ? ನಮ್ಮ ಹಾಗೆ ಮಾತನಾಡುವುದಿಲ್ಲ ಅಷ್ಟೇ”

“ಇದು ಮಾತನಾಡುತ್ತಿದ್ದರೆ ಎಷ್ಟು ಚೆನ್ನಾರ್ತಿತ್ತು ಅಲ್ವೇ?” ಪವಿ ಮತ್ತೆ ಪ್ರಶ್ನಿಸಿದಳು.

“ದೊಡ್ಡ ದೊಡ್ಡ ವಿಜ್ಞಾನಿಗಳು ಮಾಡುವ ಗೊಂಬೆಯನ್ನು ರೋಬೊಟ್ ಅಂತ ಕರೀತಾರೆ ಅದು ಎಷ್ಟು ಚೆನ್ನಾಗಿ ಮಾತಣಾಡುತ್ತದೆ. ಮಾತ್ರªಲ್ಲ ಅವರು ಹೇಳಿದ ಎಲ್ಲಾ ಕೆಲಸಗಳನ್ನೂ ಕೂಡಾ ಮಾಡ್ತದೆ. ನಾನು ಮೊನ್ನೆ ಟಿವಿಯಲ್ಲಿ ನೋಡಿದ್ದು ಗೊತ್ತಾ?” ಪುಟ್ಟ ತನಗೆ ಗೊತ್ತಿದ್ದನ್ನು ಗೆಳೆಯರಿಗೆ ತಿಳಿಸಿದ.

ವಿಜ್ಞಾನಿಗಳ ಹಾಗೆ ನಿನಗೆ ಈ ಗೊಂಬೆಯನ್ನು ಮಾತನಾಡುವ ಹಾಗೆ ಮಾಡ್ಲಿಕ್ಕೆ ಆಗುವುದಿಲ್ಲಾ? ಆನಂದ ಪುಟ್ಟ ತನ್ನ ಕನಸ್ಸನ್ನು ಗೆಳೆಯರೊಂದಿಗೆ ಹಂಚಿಕೊಂಡ.

“ಈಗ ಆಗುವುದಿಲ್ಲ ಆದರೆ ದೊಡ್ಡವನಾದ ಮೇಲೆ ನಾನೂ ಒಬ್ಬ ವಿಜ್ಞಾನಿಯಾಗುತ್ತೇನೆ. ಆಗ ಮಾತನಾಡುವ ಗೊಂಬೆಯನ್ನು ತಯಾರಿಸ್ತೇನೆ. ಬೇಕಾದರೆ ನಿಮಗೂ ಕೊಡ್ತೇನೆ” ಪುಟ್ಟ ತನ್ನ ಕನಸ್ಸನ್ನು ಗೆಳೆಯರೊಂದಿಗೆ ಹಂಚಿಕೊಂಡ.

“ರಾಜು…. ಹೊತ್ತಾಯ್ತು ಬಾ ಸ್ನಾನಮಾಡಿಸ್ತೇನೆ…” ರಾಜುವಿಗೆ ಅವನ ತಾಯ ಕರೆ ಬಂತು.

ರಾಜು “ನಾನು ಬರುತ್ತೇನೆ” ಎಂದು ಹೇಳಿ ತನ್ನ ಕೈಯನ್ನೆ ಸ್ಟೇರಿಂಗ್ ಮಾಡಿಕೊಂಡು ಪೀಂ…. ಎಂದು ಬಾಯಲ್ಲಿ ಹೇಳಿಕೊಳ್ಳುತ್ತಾ ಮನೆಯೆಡೆಗೆ ಓಡಿದ ಅವನ ಹಿಂದೆ ಉಳಿದವರೂ ಅವರವರ ಮನೆಗೆ ಹೊರಡಲನುವಾದರು. ಪುಟ್ಟ ತನ್ನ ಮರಳಿನ ಗೊಂಬೆಯನನ್ನು ರಕ್ಷಿಸುವುದಕ್ಕಾಗಿ ಅದರ ಮೇಲೆ ಒಂದು ಪ್ಲಾಸ್ಟಿಕ್‍ನ ಚೀಲವನ್ನು ಹೊದೆಸಿದ. ಅವನು ಏನೇ ಮಾಡಿದರೂ ಅದು ನಾಳೆ ಯಥಾಃಸ್ಥಿತಿಯಲ್ಲಿ ಇರುವುದಿಲ್ಲ ಎನ್ನುವುದು ತಿಳಿದಿದ್ದರೂ ಹಾಗೆ ಮಾಡಿಟ್ಟು ಅವನೂ ಮನೆಯೆಡೆಗೆ ಓಡಿದ.

ಪುಟ್ಟನಿಗೆ ತನ್ನ ಓರೆಗೆಯ ಗೆಳೆಯರಿಗಿಂತ ಪ್ರೀತಿಯ ಗೆಳೆಯ ಮತ್ತೊಬ್ಬರಿದ್ದರು. ಅವನ ಅಜ್ಜ, ರಾಮಣ್ಣ ಶೆಟ್ರು, ರಾಮಣ್ಣ ಶೆಟ್ರಿಗೂ ಅಷ್ಟೇ ಪುಟ್ಟನೆಂದರೆ ಬಹಳ ಪ್ರೀತಿ. ರಾಮಣ್ಣ ಶೆಟ್ರು ಊರಿನಲ್ಲಿ ಒಂದು ಕಿರಾಣಿ ಅಂಗಡಿಯನ್ನು ನಡೆಸುತ್ತಿದ್ದರಿಂದ ಅಂಗಡಿಯ ಶೆಟ್ರು ಎಂದೇ ಊರಿನಲ್ಲೆಲ್ಲಾ ಹೆಸರಾಗಿದ್ದರು. ಶೆಟ್ರಗೆ ಐದು ಜನ ಮಕ್ಕಳು. ಐದರಲ್ಲಿ ದಿನPರನೊಬ್ಬನೇ ಮಗ. ತಂದೆಯ ಅಂಗಡಿಯ ವ್ಯವಹಾರವನ್ನು ಈಗ ಅವನೇ ನಡೆಸುತ್ತಿದ್ದಾನೆ. ದಿನಕರನ ಒಬ್ಬನೇ ಮಗ ಈ ಪುಟ್ಟ. ಆದ್ದರಿಂದಲೇ ಅಜ್ಜನಿಗೆ ವಿಶೇಷ ಪ್ರೀತಿ. ಪುಟ್ಟನಿಗೆ ಪ್ರಶಾಂತ ಎನ್ನುವ ಚೆನ್ನಾಗಿರುವ ಹೆಸರಿದ್ದರೂ ಅದು ಶಾಲೆಯ ಹಾಜರಿ ಪುಸ್ತಕಕ್ಕೆ ಮಾತ್ರ ಮೀಸಲಾಗಿತ್ತು. ಮನೆಯವರಿಗೆ ಊರಿನವರಿಗೆಲ್ಲಾ ಪ್ರಶಾಂತ ಪುಟ್ಟನೇ ಆಗಿದ್ದ. ಶೆಟ್ರಿಗೆ ಪುಟ್ಟನ ಮೇಲೆ ಕಾಳಜಿ ಹೆಚ್ಚಾಗಲು ಇನ್ನೂ ಒಂದು ಕಾರಣವಿದೆ. ಶೆಟ್ರು ಚಿಕ್ಕಂದಿನಲ್ಲಿ ಕಾಣಲು ಪುಟ್ಟನ ನೆಳಿ ಹೋಲುತ್ತದ್ದರಂತೆ. ಎಲ್ಲರೂ ‘ಅಂಗಡಿ ಶೆಟ್ರು ಮೊಮ್ಮಗ ಥೇಟ್ ನೋಡ್ಲಿಕ್ಕೆ ಅಂಗಡಿ ಶೆಟ್ರ ಹಾಗೆಯೇ” ಎಂದು ಹೇಳುವಾಗ ಶೆಟ್ರುಗೆ ಮತ್ತಷ್ಟು ಖುಷಿ.

yaksha1ಕೊಲು, ನೇಮ, ಯಕ್ಷಗಾನ ಎಂದು ಶೆಟ್ರು ಎಲ್ಲಿಗಾದರೂ ಹೊರಟರೆ ಪುಟ್ಟನೂ ಶೆಟ್ರ ಜೊತೆ ರೆಡಿ. ಪುಟ್ಟನಿಗೆ ತನ್ನ ಅಜ್ಜನ ಜೊತೆ ಹೋಗುವುದೆಂದರೆ ವಿಶೇಷ ಆಸಕಿ.್ತ ತನ್ನ ಅಜ್ಜನನ್ನು ಊರಿನವರು ಗೌರವಿಸುವ ರೀತಿಯಿಂದಾಗಿ ಪುಟ್ಟನಿಗೂ ಅಜ್ಜನಲ್ಲಿ ವಿಶೇಷ ಗೌರವ.

ಮನೆಗೆ ಬಂದವನೇ ಚಾವಡಿಯಲ್ಲಿ ಕುಳಿತ ಅಜ್ಜನಲ್ಲಿ ಕೇಳಿದ ಇವತ್ತು ಆಟಕ್ಕೆ (ಯಕ್ಷಗಾನ) ಕರ್ಕೊಂಡು ಹೋಗ್ತೀರಲ್ವಾ?” ಎಂದಿನಂತೆಯೇ ಮೊಮ್ಮಗನನ್ನು ಜೊತೆಮಾಡಿಕೊಂಡು ಹೊರಡುವ ಉತ್ಸಾಹ ಶೆಟ್ರಗೂ ಇತ್ತಾದರೂ ಇಂದೇಕೋ ಮೈ ಹುಷಾರಿಲ್ಲದಂತೆ ಅನಿಸಲಾರಂಭಿಸಿತು.

“ಇಲ್ಲ ಪುಟ್ಟ ಯಾಕೋ ಹುಷಾರಿಲ್ಲ. ಬೇಗ ಸ್ನಾನ ಮಾಡಿ ಮಲಗಿಕೋ ದಿನಕರ ಬಂದ ಮೇಲೆ ಎಬ್ಬಿಸುತ್ತೇನೆ. ಅವನಲ್ಲಿ ಕರ್ಕೊಂಡು ಹೋಗ್ಲಿಕ್ಕೆ ಹೇಳ್ತೇನೆ” ಪುಟ್ಟನನ್ನು ಅಜ್ಜ ನಿರಾಸೆಗೊಳಿಸಲಿಲ್ಲ.

ಆದರೆ ಅಪ್ಪ ಅಂಗಡಿ ಮುಚ್ಚಿ ಬರುವ ಹೊತ್ತಿಗೇ ತಡವಾಗುತ್ತದೆ. ಮತ್ತೆ ಇಲ್ಲಿಂದ ಹೊರಟು ದೇವಸ್ಥಾನ ತಲುಪುವಾಗ ಆಟ ಪ್ರಾರಂಭವಾಗಿರುತ್ತದೆ ಎನ್ನುವುದು ಪುಟ್ಟನಿಗೆ ಗೊತ್ತಿತ್ತು.

ಯಕ್ಷಗಾನ ಪ್ರಾರಂಭವಾಗುವುದಕ್ಕಿಂತ ಮುಂಚೆ ಚೌಕಿಯಲ್ಲಿ ಸುತ್ತಾಡುವುದೆಂದರೆ ಪುಟ್ಟನಿಗೆ ಏನೋ ಖುಷಿ. ಅಲ್ಲಿ ಮನುಷ್ಯರೇ ಬೇರೆ ಬೇರೆ ಪಾತ್ರಗಳಾಗಿ ಮಾರ್ಪಡುವುದ ಅವನಿಗೆ ಕುತೂಹಲದ ಸಂಗತಿಯೇ ಆಗಿತ್ತು. ಆ ಅವಕಾಶ ತಪ್ಪಿ ಹೋದದ್ದರಲ್ಲಿ ಆತನಿಗಿನ್ನೂ ನಿರಾಸೆ ಇತ್ತು.

ತಂದೆಯ ಜೊತೆ ಯಕ್ಷಗಾನಕ್ಕೆ ತೆರಳಿದಾಗ ಭಾಗವತರು ಅದಾಗಲೇ ಪ್ರಸಂಗವನ್ನು ಪ್ರಾರಂಭಿಸಿದ್ದರು. ಪ್ರಸಂಗ “ಇಂದ್ರಜಿತು ಕಾಳಗ” ಎನ್ನುವುದು ಪುಟ್ಟನಿಗೆ ಅಲ್ಲಿಗೆ ತಲುಪಿದಾಗಲೇ ತಿಳಿದದ್ದು. ಪುಟ್ಟ ತನ್ನ ಗೆಳೆಯರ ಬಳಗವನ್ನು ಸೇರಿಕೊಂಡು ಯಕ್ಷಗಾನ ವಿಕ್ಷಿಸಲು ಮುಂದಿನ ಸಾಲಿನಲ್ಲಿಯೇ ಕುಳಿತುಕೊಂಡು ಇಂದ್ರಜಿತು, ರಾವಣಾದಿ ರಾಕ್ಷಸರು, ರಾಮ, ಲಕ್ಷಣ, ಹನುಮಂತ ಮೊದಲಾದ ಪಾತ್ರಗಳು ಪ್ರಸಂಗದ ತುಂಬಾ ಓಡಾಡುತ್ತಿದ್ದರು. ಆದರೆ ಪುಟ್ಟನನ್ನು ಸೆಳೆದದ್ದು ಮೂರ್ಛೆ ಹೋದ ಲಕ್ಷಣನನ್ನು ಬದುಕಿಸಲು ಹನುಮಂತ ಸಂಜೀವಿಯನ್ನು ತಂದದ್ದು, ಸಂಜೀವಿನಿಯನ್ನು ತಾಗಿಸಿದೊಡನೇ ಲಕ್ಷ್ಮಣನು ನಿದ್ದೆಯಿಂದ ತಿಳಿದೆದ್ದು ಕುಳಿತಂತೆ ಮತ್ತೆ ಬದುಕಿದ್ದು ಅಂದರೆ ಆ ಸಂಜೀವಿನಿಗೆ ಅಷ್ಟೊಂದು ಶಕ್ತಿ ಇದೆಯೇ? ಈಗ ಸಂಜೀವಿನಿ ಎಲ್ಲಿ ಸಿಗುತ್ತದೆ? ಎನ್ನುವ ಪ್ರಶ್ನೆಗಳು ಅವನ ಪುಟ್ಟ ತಲೆಯಲ್ಲಿ ಮೂಡಲಾರಂಭಿಸಿತ್ತು. ಇಂತಹ ಪ್ರಶ್ನೆಗಳಿಗೆ ಪುಟ್ಟನಿಗೆ ತೃಪ್ತಿಕರ ಉತ್ತರ ಒದಗಿಸುವುದು ಅವನ ಅಜ್ಜ ಮಾತ್ರ. ಅಜ್ಜನಲ್ಲಿಯೇ ಇದನ್ನು ಕೇಳಬೇಕೆಂದು ನಿರ್ಧರಿಸಿದ.

ಅಂದಿನ ಪ್ರಸಂಗಕ್ಕೆ ಭಾಗವತರು ಮಂಗಳ ಹಾಡಿ ಮೇಳ ಯಾವುದೋ ಊರನ್ನು ಸೇರಿ ಇಂದಿಗೆ ವಾರಕಳೆದಿದ್ದರೂ ಪುಟ್ಟ ಹಾಗೂ ಆತನ ಮೇಳಕ್ಕೆ ಯಕ್ಷಗಾನವೇ ಆಟದ ವಿಷಯವಾಗಿತ್ತು. ಅಂದು ರಂಗಸ್ಥಳದಿಂದ ಹೆಕ್ಕಿ ತಂದಿದ್ದ ಉದುರಿದ ಮಣಿ. ಗೆಜ್ಜೆ ಇವುಗಳು ಅವರ ಆಟಕ್ಕೆ ಹೊಸ ಸಾಮಗ್ರಿಗಳಾಗಿದ್ದವು ಇಂದಿಗೂ ಸಂಜೆಯ ವೇಳೆಗೆ ಪುಟ್ಟನ ಬಳಗದ “ಗಜಮುಖದವಗೇ….” ಬಯಲು ಗದ್ದೆಯ ಬಳಿಯಿಂದ ಕೇಳಿಬರುತ್ತದೆ.

ಈ ನಡುವೆ ಪುಟ್ಟನಿಗೆ ಬಹಳ ಬೇಸರವಾಗುವಂತಹ ಘಟನೆಗಳು ಮನೆಯಲ್ಲಿ ನಡೆಯುತ್ತಿದ್ದವು. ದೇವಸ್ಥಾನದ ಯಕ್ಷಗಾನದ ದಿನವೇ ಹುಷಾರಿಲ್ಲ ಎಂದು ಹೇಳಿದ್ದ ಅಜ್ಜನ ಕಾಯಿಲೆ ಉಲ್ಬಣಿಸುತ್ತಾ ಹೋಗಿತ್ತು. ಮಣಿಪಾಲಕ್ಕೆ ಕರೆದುಕೊಂಡು ಹೋದದ್ದು ಹಾಗೂ ಅವರನ್ನು ಅಲ್ಲಿ ಐದು ದಿನಕ್ಕೆ ದಾಖಲು ಮಾಡಿದ್ದು ಎಲ್ಲಾ ನಡೆದಿತ್ತು ಅಜ್ಜನ ಒಡನಾಟವಿಲ್ಲದೆ ಪುಟ್ಟ ಏನನ್ನೋ ಕಳೆದುಕೊಂಡವನಂತಿದ್ದ. ಮನೆಗೆ ಬಂದವರಲ್ಲಿ ಯಾರಲ್ಲೋ ಅಮ್ಮ ಹೇಳುವುದನ್ನು ಪುಟ್ಟ ಅಲ್ಪಸ್ವಲ್ಪ ಕೇಳಿಸಿಕೊಂಡಿದ್ದ. ಇದರಿಂದ ಅವನಿಗೆ ಅರ್ಥವಾದದ್ದು ಅಜ್ಜನ ಎರಡೂ ಕಿಡ್ನಿಯೂ ಹೋಗಿದೆ ಹಾಗೂ ಹತ್ತು ದಿನಕ್ಕೊಮ್ಮೆ ಡಯಾಲಿಸಿಸ್ ಮಾಡಬೇಕು ಎನ್ನುವುದು ಮಾತ್ರ ಡಯಾಲಿಸಿಸ್ ಅಂದರೆ ಏನು ಎನ್ನುವ ಪ್ರಶ್ನಾಕೃತಿ ಅವನಿಗೆ ಮಚ್ಚಾಗಿಯೇ ಕಂಡಿತು. ಆದರೆ ಅಜ್ಜನ ಆರೋಗ್ಯದ ಸ್ಥಿತಿಗೆ ಇದು ಏನೋ ಮಾರಕವಾದ ಸುದ್ದಿ ಎನ್ನುವುದು ಅಮ್ಮನ ಮಾತಿನ ಲಯದಿಂದ ಅವನಿಗೆ ಅರ್ಥವಾಗಿತ್ತು.

ಬಿಸಿಲಿನ ಧಗೆ ಹೆಚ್ಚುತ್ತಾ ಹೋಗಿ ಬಾನಿನಲ್ಲಿ ಕಾರ್ಮುಗಿಲುಗಳು ಕಾಣಲಾರಂಭಿಸಿತು. ಈ ಸಂದರ್ಭ ಎಲ್ಲರೂ ಮಳೆ ಯಾವಾಗ ಬರ್ತದೋ ಅಂತ ಮಾತ್ತಾಡಿದ್ರೆ ಪುಟ್ಟನಿಗೆ ಮಾತ್ರ ಮಳೆ ಬರಬಾರದು ಎನ್ನುವ ಬಯಕೆ. ಯಾಕೆಂದರೆ ಮಳೆ ಸುರಿಯಲು ಪ್ರಾರಂಭವಾಗಿ ವಾರ, ಮಗದೊಂದು ವಾರ ಕಳೆಯೋದರೊಳಗೆ ಶಾಲೆ ಪ್ರಾರಂಭ ಆಗುತ್ತದೆ ಎನ್ನುವುದು ಪುಟ್ಟನ ಅನುಭವದ ವಿಚಾರ. ಶಾಲೆ ಮತ್ತೆ ಪ್ರಾರಂಭವಾದರೆ ಬೆಳಗ್ಗಿನಿಂದ ಸಂಜೆಯವರೆಗೆ ಆಟವಾಡಬಹುದಾದ ಈ ಸ್ವಾತಂತ್ರ್ಯ ತಪ್ಪಿ ಹೋಗುತ್ತದಲ್ಲಾ ಎನ್ನುವುದೇ ಅವನ ಬೇಸರಕ್ಕೆ ಕಾರಣ ಯಾರ ನಿರೀಕ್ಷೆ ನಿರ್ಲಕ್ಷಗಳನ್ನೂ ಪ್ರಕೃತಿ ಅವಲಂಭಿಸುವುದಿಲ್ಲ ತಾನೆ? ಅದು ತನ್ನ ತಾಳದಲ್ಲೇ ಸಾಗುತ್ತದೆ. ಕವಿದ ಕಾರ್ಮುಗಿಲು ದಟ್ಟವಾಗಿ ಒಂದು ಸಂಜೆ ಥೋ…. ಅಂತ ಮಳೆ ಪ್ರಾರಂಭವಾಗಿ ಎಲ್ಲೆಡೆ ಮಣ್ಣಿನ ಕಂಪು ಹರಡಿತು.

ಹೀಗೆ ಪ್ರಾgಂಭವಾದ ಮಳೆಗೆ ಪುಟ್ಟ ಮತ್ತು ಅವನ ಗೆಳೆಯರು ಮೂಲೆ ಸೇರಿದ್ರೆ, ಹಪ್ಪಳ ಸಂಡಿಗೆ ಅಂತ ಅಮ್ಮನ ಕುರುಕಲು ತಿಂಡಿಗಳು ಅಟ್ಟದಿಂದ ಕೆಳಗಿಳಿತ್ತಿದ್ದರೂ ಅಜ್ಜನೊಂದಿಗೆ ಪುಟ್ಟ ಮೊದಲಿನಂತೆ ಮಾತನಾಡುವಾಗ ಅಮ್ಮ ಅವರಿಗೆ ತೊಂದರೆ ಕೊಡ್ಬೇಡ ಅಂತ ಎಚ್ಚರಿಸುತ್ತಿದ್ದರು.

ಮಳೆ ಸುರಿಯುತ್ತಿದ್ದ ಇಂತಹುದೇ ಒಂದು ಸಂಜೆಯಲ್ಲಿ ಪುಟ್ಟನಿಗೆ ಸಂಜೀವಿನಿಯ ವಿಷಯ ನೆನಪಿಗೆ ಬಂದಿತ್ತು.

‘ಅಜ್ಜಾ… ಮೊನ್ನೆ ದೇವಸ್ಥಾನದ ಆಟ ಚೆನ್ನಾಗಿತ್ತು…….”
ಪುಟ್ಟ ಅಜ್ಜನೊಂದಿಗೆ ಮಾತಿಗೆ ಪೀಠಿಕೆ ಹಾಕಿದ.
“ಹೌದಾ…..ನನಗೆ ನೀನು ಕಥೆ ಹೇಳಲೇ ಇಲ್ಲ ಮತ್ತೆ…”

“ನಿಮಗೆ ಹುಷಾರಿರಲಿಲ್ಲ ಅಲ್ವೇ ಹಾಗಾಗಿ ಹೋಳ್ಗಿಕ್ಕೆ ಆಗ್ಲಿಲ್ಲ, ಕಥೆ ರಾಮಾಯಣದ್ದು ನೀವು ನನಗೆ ಹೇಳಿದ್ದೀರಿ” ಪುಟ್ಟ ಕಥೆ ನೆನಪಿಸಿದ .

ರಾಮಣ್ಣ ಶೆಟ್ರಿಗೆ ರಾಮಾಯಣ ಮಹಾಭಾರತವೆಲ್ಲಾ ಹಳೇ ಕಥೆಗಳಾದರೂ ಅದನ್ನು ಪುಟ್ಟನ ಬಾಯಿಯಿಂದಲೇ ಕೇಳುವುದು ಅವನ ತಪ್ಪನ್ನು ತಿದ್ದುವುದೆಂದರೆ ಏನೋ ಆಸಕ್ತಿ.

“ಅಜ್ಜಾ ಈ ಸಂಜೀವಿನಿ ಅಂದರೆ ಏನು? ಕಥೆಯ ಕೊನೆಯಲ್ಲಿ ಪುಟ್ಟ ಅಜ್ಜನ ಮುಂದೆ ಪ್ರಶ್ನೆಯನ್ನಿಟ್ಟ.

‘ಅದಾ… ಆದೊಂದು ರೀತಿಯ ಮದ್ದಿನ ಗಿಡವಂತೆ ದ್ರೋಣಾಚಲದಲ್ಲಿ ಬೆಳೆಯುತ್ತಿತ್ತಂತೆ’ ಪುಟ್ಟನಿಗೆ ಅಜ್ಜ ಸರಳವಾಗಿಯೇ ತಿಳಿಸಿದರು.

“ಸಂಜೀವಿನಿಯನ್ನು ಸತ್ತವರಿಗೆ ತಾಗಿಸಿದ್ರೆ ಸತ್ತವರು ಬದುಕ್ತಾರಾ….?”

ರಾಮಣ್ಣ ಶೆಟ್ರು ನೀರಸವಾಗಿ ಉತ್ತರಿಸಿದರು.

“ಈಗ ಸಂಜೀವಿನಿ ಎಲ್ಲಿ ಸಿಗ್ತದೆ?” ಪುಟ್ಟನ ಕುತೂಹಲ ತಣಿದಿರಲಿಲ್ಲ.

“ಈಗ ಎಲ್ಲಿ ಸಿಗ್ಲಿಕೆ? ಆಂ… ಅದು ಎಲ್ಲಿ ಸಿಗ್ತದೆ ಅಂತ ಕುಪುಳಿಗೆ [ಕೆಂಬೂತ ಹಕ್ಕಿ] ಗೊತ್ತುಂಟಂತೆ. ಆದರ ಗೂಡಿನಲ್ಲಿ ಅದು ಯಾವತ್ತೂ ಸಂಜೀವಿನಿಯನ್ನು ತಂದಿಡುತ್ತದಂತೆ. ಅದಕ್ಕೇ ಅದರ ಗೂಡು ಯಾರಿಗೂ ಕಾಣ್ಲಿಕ್ಕೆ ಸಿಗುವುದೇ ಇಲ್ವಂತೆ….”

ರಾಮಣ್ಣ ಶೆಟ್ರಿಗೆ ತಿಳಿದಿದ್ದ ಅಂತೆ ಕಂಡೆಯನ್ನು ಪುಟ್ಟನ ಮುಂದೆ ತೆರೆದಿಟ್ಟಿದ್ದರು. “ಕುಪುಳನ ಗೂಡು ಯಾರಿಗೂ ಕಾಣ್ಲಿಕ್ಕೇ ಸಿಗುವುದಿಲ್ವೇ…?

ಪುಟ್ಟ ಆಸಕ್ತಿಯಿಂದ ಮತ್ತೆ ಅಜ್ಜನನ್ನು ಪ್ರಶ್ನಿಸಿದ.

ನನ್ನ ಜೀವನಾವಧಿಯಲ್ಲಿ ನಾನೆಲ್ಲಿಯೂ ನೋಡಿಲ್ಲ…. ಅದರ ಗೂಡಿನಲ್ಲಿ ಎಲ್ಲಾ ಬಣಗಿದ ಕಡ್ಡಿಗಳಿರುತ್ತವೆಯಂತೆ ಅದರ ನಡುವೆ ಹಸಿರಾಗಿಯೇ ಇರುವ ಕಡ್ಡಿ ಸಂಜೀವಿನಿಯಂತೆ”

ಅಜ್ಜನ ಈ ವಿವರಣೆಗಳು ಪುಟ್ಟನ ಆಸಕ್ತಿಯನ್ನು ಮತ್ತಷ್ಟು ಕೆರಳಿಸಿತು. ಕುಪುಳು ಪುಟ್ಟನಿಗೇನೂ ಅಪರೂಪದ ಹಕ್ಕಿಯಾಗಿರಲಿಲ್ಲ. ಮನೆಯ ಅಂಗಳದಲ್ಲಿ ಮರದಿಂದ ಮರಕ್ಕೆ ಜಿಗಿಯುತ್ತಾ ದೋಸೆ ಹೊಯ್ಯುವ ಶಬ್ದ ಮಾಡುತ್ತಲೋ ಅಕ್ಕಿ ಕುಟ್ಟುವ ಶಬ್ದ ಮಾಡುತ್ತಲೋ ಮನೆಗೆ ಎಂತಹ ಅಥಿತಿಗಳು ಬರುತ್ತಾರೆ ಎನ್ನುವುದನ್ನು ಕಣಿ ಹೇಳುತ್ತದೆ. ಈ ಹಕ್ಕಿ ಎನ್ನುವುದನ್ನು ಅಮ್ಮನಿಂದ ಪುಟ್ಟ ತಿಳಿದಿದ್ದ. ಆದರೆ ಅಂತಹ ಹಕ್ಕಿ ತನ್ನ ಗೂಡಿನಲ್ಲಿ ಸಂಜೀವಿನಿಯನ್ನು ಇಟ್ಟುಕೊಳ್ಳುತ್ತದೆ ಎನ್ನುವುದು ಪುಟ್ಟನಿಗೆ ಹೊಸ ಸಂಗತಿಯೇ ಆಗಿತ್ತು.

ಪುಟ್ಟ ಅಂದುಕೊಂಡಂತೆ ಮಳೆ ತನ್ನ ಅಬ್ಬರವನ್ನು ಪದರ್ಶಿಸುವ ಅದೇ ಸಂದರ್ಭದಲ್ಲಿ ಅವನಿಗೆ ಶಾಲೆ ಪುನರಾರಂಭವಾಗಿತ್ತು. ಈ ಶಾಲೆಯ ಪ್ರಾರಂಭದ ದಿನವೇ ಪುಟ್ಟನಿಗೆ ತನ್ನ ಗೆಳೆಯನಿಂದ ಕೆಂಬೂತ ಹಕ್ಕಿಯ ಬಗೆಗಿನ ಹೊಸದೊಂದು ವಿಚಾರ ತಿಳಿಯಿತು.

ಪುಟ್ಟ ಮತ್ತು ಅವನ ಗೆಳೆಯ ಆನಂದ ಜತೆಯಾಗಿಯೇ ಶಾಲೆಗೆ ಹೋಗುವವರು. ಎಂದಿನಂತೆ ಶಾಲೆಯ ಮೊದಲ ದಿನಕ್ಕೆ ಹುರುಪಿನಿಂದ ಹೊರಟಿದ್ದರು ಗೆಳೆಯರು. ರಸ್ತೆಯ ತಿರುವಿನಲ್ಲಿರುವ ಪೇರಳೆ ಮರದಲ್ಲಿ ಜೋಡಿ ಕೆಂಬೂತ ಹಕ್ಕಿಗಳು ಕುಳಿತಿದ್ದವು. ಇದನ್ನು ನೋಡಿದ ಆನಂದ ‘ಗೇಲ್……ಗೇಲ್…..” ಎಂದು ಹೇಳುತ್ತಾ ಜೋರಾಗಿ ಚಪ್ಪಾಳೆ ತಟ್ಟಲಾರಂಭಿಸಿದ.

“ಏನಾಯ್ತು ಯಾಕೆ ಕಿರುಚುತ್ತಿದ್ದೀಯಾ….?” ಗೆಳೆಯನ ಈ ವಿಚಿತ್ರ ವರ್ತನೆಯನ್ನು ನೋಡಿದ ಪುಟ್ಟ ಅಚ್ಚರಿಯಿಂದ ಕೇಳಿದ.

“ನೋಡಲ್ಲಿ ನಿನಗೆ ಜೋಡಿ ಕುಪುಳುಗಳು ಕಾಣಿಸ್ತಿದೆಯಾ…?” ಆನಂದ ಪ್ರಶ್ನಿಸಿದ. “ಹೌದು ಅದಕ್ಕೇನಾಯ್ತು?” ಪುಟ್ಟ ಕುತೂಹಲದಿಂದ ಕೇಳಿದ.

“ನಾವು ಎಲ್ಲಿಗಾದ್ರು ಹೊರಟರೆ ಎದುರಿಗೆ ಕುಪುಳು ಸಿಕ್ಕಿದರೆ ಶುಭವಾಗ್ತದಂತೆ. ನಾವು ಚಪ್ಪಾಳೆ ತಟ್ಟಿ ‘ಗೇಲ್…. ಗೇಲ್’ ಅಂತ ಹೇಳಿದಾಗ ಅದು ಕುಪ್ಪಳಿಸಿ ಮರದ ಮೇಲೆ ಎತ್ತರೆತ್ತರಕ್ಕೆ ಜಿಗಿಯುತ್ತಾ ಸಾಗಿದರೆ ತುಂಬಾ ಶುಭ ಶಕುನ, ಒಂದು ವೇಳೆ ಕೆಳಕ್ಕೆ ಜಿಗಿದರೆ ಕೆಟ್ಟದಾಗುತ್ತದಂತೆ” ಆನಂದ ವಿವರಿಸಿದ ಅವನು ಈ ವಿಚಾರವನ್ನು ರಜೆಯಲ್ಲಿ ಎಲ್ಲಿಂದಲೋ ತಿಳಿದುಕೊಂಡು ಬಂದಿದ್ದ.

ಗೆಳೆಯನ ಮಾತಿನಂತೆ ಅಂದಿನ ಶಕುನ ಪರೀಕ್ಷೆಗೆ ಪುಟ್ಟನೂ ಮುಂದಾದ. ಆನಂದನಂತೆ ಪುಟ್ಟನೂ ಜೋರಾಗಿ ಚಪ್ಪಾಳೆ ತಟುತ್ತಾ “ಗೇಲ್ ಗೇಲ್” ಎಂದು ಕಿರುಚಲಾರಂಭಿಸಿದ.

ಆನಂದನ ಮಾತಿನಂತೆ ಕೆಂಬೂತ ಹಕ್ಕಿ ಹಾರುತ್ತಾ ಮರದ ತುದಿಗೆ ಬಂದು ಪಕ್ಕದ ಎತ್ತರದ ಅರಳೀ ಮರದೆಗೆಡೆ ಹಾರಿಹೋಯಿತು ಗೆಳೆಯರಿಬ್ಬರೂ “ಹೋ….” ಎಂದು ಉದ್ಗರಿಸುತ್ತಾ ಮುಂದೆ ಸಾಗಿದರು.

ಶಾಲೆ ಪ್ರಾರಂಭವಾಗಿ ತಿಂಗಳು ಕಳೆದಿರಬಹುದು. ಅಂದು ಶಾಲೆ ಬಿಟ್ಟು ಮನೆಗೆ ಬಂದ ಪುಟ್ಟನಿಗೆ ಮನೆಯಲ್ಲಿ ವಿಶೇಷವೊಂದು ಕಾಯುತ್ತಿತ್ತು. ಪುಟ್ಟನ ಪ್ರೀತಿಯ ದನ ಕಾಳಿ ಹೆಣ್ಣುಕರುವನ್ನು ಹಾಕಿದ್ದಳು. ಹಣೆಯ ಮೇಲೆ ಬೆಳಗ್ಗಿನ ಬೊಟ್ಟನ್ನು ಹೊಂದಿದ್ದು ಕಂದು ಬಣ್ಣದ ಆ ಕರು ತುಂಬಾ ಮುದ್ದಾಗಿತ್ತು. ಪುಟ್ಟನಿಗಂತೂ ಸ್ವರ್ಗವೇ ಸಿಕ್ಕಷ್ಟು ಖುಷಿ ಕರುವನ್ನು ಮೈದಡವಿ ‘ಗೌರಿ….’ ಎಂದು ಕರೆದ ಮನೆಯವರಿಗೆಲ್ಲಾ ಕರುವನ್ನು ಅದೇ ಹೆಸರಿನಿಂದ ಕರೆಯಬೇಕೆಂದು ತಾಕೀತು ಮಾಡಿದ್ದ. ಮನೆಯಲ್ಲಿ ಪುಟ್ಟನ ಶಾಸನ ಮೀರುವ ಧೈರ್ಯ ಯಾರಿಗೂ ಇರಲಿಲ್ಲವಾದ್ದರಿಂದ ಕರುವಿನ ಹೆಸರು ಗೌರಿ ಎನ್ನುವುದೇ ನಿರ್ಧಾರವಾಗಿತ್ತು.

ಅಂದು ಸಂಜೆ ಪುಟ್ಟ ಆಟವಾಡಲು ಬಯಲಿಗೆ ಹೋಗಿರಲಿಲ್ಲ. ಅದಾಗಲೇ ಹಾಲು ಕುಡಿದು ಚೇತರಿಸಿಕೊಂಡಿದ್ದ ಗೌರಿ ಜಿಗಿಯುತ್ತಾ ಅತ್ತಿಂದಿತ್ತ ಓಡುತ್ತಿದ್ದಳು. ಅವಳ ಜೊತೆಗೆ ಪುಟ್ಟನೂ ಕುಣಿಯುತ್ತಿದ್ದ.

emmegaluಗೌರಿಯ ಜೊತೆಗಿನ ಈ ಆಟದ ನಡುವೆ ಪುಟ್ಟ ತೆಂಗಿನ ಮರದ ಮೇಲೊಂದು ಕೆಂಬೂತ ಹಕ್ಕಿಯನ್ನು ನೋಡಿದ. ಸೂಕ್ಷ್ಮವಾಗಿ ಅದರ ಚಟುವಟಿಕೆಯನ್ನು ನೋಡಿದ ಪುಟ್ಟನಿಗೆ ಆಶ್ಚರ್ಯ ಕಾದಿತ್ತು. ತೆಂಗಿನ ಮರದಲ್ಲಿ ಕುಳಿತಿದ್ದ ಆ ಕೆಂಬೂತ ಹಕ್ಕಿ ಗರಿಯಿಂದ ಗರಿಗೆ ಜಿಗಿಯುತ್ತಾ ತನ್ನ ಕೊಕ್ಕಿನಿಂದ ತೆಂಗಿನ ಗರಿಗಳನ್ನು ಸೀಳುತ್ತಿತ್ತು. ಹಕ್ಕಿಯ ಈ ವರ್ತನೆ ಪುಟ್ಟನಿಗೆ ತುಂಬಾ ವಿಶೇಷವಾಗಿ ಕಂಡಿತು. ಅವನು ಹಕ್ಕಿಯನ್ನು ಸ್ವಲ್ಪ ಹೊತ್ತು ಸೂಕ್ಷ್ಮವಾಗಿ ಗಮನಿಸುತ್ತಾ ನಿಂತ ಹಕ್ಕಿ ಸೀಳಿದ ಒಂದೆರಡು ಗರಿಗಳೊಂದಿಗೆ ಪಕ್ಕದ ಬೀರುಂಡಿ ಮರದೆಡೆಗೆ ಹಾರಿಹೋಯಿತು. ಸ್ವಲ್ಪ ಹೊತ್ತಿನ ಬಳಿಕ ಅಲ್ಲಿಂದ ಹಾರಿ ಬಂದ ಹಕ್ಕಿ ಮತ್ತೆ ಮೊದಲಿನಂತೆ ತೆಂಗಿನ ಗರಿಗಳನ್ನು ಸೀಳಲಾರಂಭಿಸಿತು. ಪುಟ್ಟನು ಕುತೂಹಲದಿಂದ ಬೀರುಂಡಿ ಮರದೆಡೆಗೆ ಸಾಗಿದ. ದಟ್ಟವಾಗಿ ಎಲೆಗಳಿಂದ ಆವೃತವಾಗಿರುವ ಆ ಬೀರುಂಡಿ ಮರದ ರೆಂಬೆಗಳೆಡೆಗೆ ಸಾಗಿದ. ದಟ್ಟವಾಗಿ ಎಲೆಗಳಿಂದ ಆವೃತವಾಗಿರುವ ಆ ಬೀರುಂಡಿ ಮರದ ರೆಂಬೆಗಳೆಡೆಗೆ ಸೂಕ್ಷ್ಮವಾಗಿ ನೋಡಿದ ಪುಟ್ಟ ತನ್ನ ಕಣ್ಣನ್ನು ತಾನೇ ನಂಬದಾದ. ಕೆಂಬೂತ ಹಕ್ಕಿ ಮರದ ರೆಂಬೆಯಲ್ಲಿ ದೊಡ್ಡದಾಗಿ ತನ್ನ ಗೂಡು ಕಟ್ಟುತ್ತಿತ್ತು. ಅದನ್ನು ನೋಡಿದೊಡನೇ ಪುಟ್ಟನಿಗೆ ಸಂಜೀವಿನಿ ಅಜ್ಜನ ಮಾತುಗಳೆಲ್ಲಾ ನೆನಪಿನ ಬಂದವು. ಅಜ್ಜನಲ್ಲಿ ಈ ವಿಚಾರವನ್ನು ತಿಳಿಸಬೇಕೆಂದು ಅಜ್ಜನ ಕೋಣೆಯೆಡೆಗೆ ಓಡಿದ.

ಇತ್ತೀಚೆಗೆ ಆರೋಗ್ಯದ ಸ್ಥಿತಿ ತೀರಾ ಹದಗೆಟ್ಟಿರುವುದರಿಂದ ರಾಮಣ್ಣ ಶೆಟ್ರು ಈಗ ತಮ್ಮ ಹೆಚ್ಚಿನ ಸಮಯವನ್ನು ಹಾಸಿಗೆಯಲ್ಲಿ ಮಲಗಿಯೇ ಕಳೆಯುತ್ತಿದ್ದರು. ನೀರನ್ನೂ ಕೂಡ ಹೆಚ್ಚಾಗಿ ಕುಡಿಯಬಾರದೆನ್ನುವ ವೈದ್ಯರನ್ನು ಶಪಿಸುತ್ತಾ ದೇವರಲ್ಲಿ ನನ್ನನ್ನು ಆದಷ್ಟು ಬೇಗೆನೇ ಕರೆದುಕೋ ಎನ್ನುವ ದೊರೆಯಿಡುತ್ತಿದ್ದರು. ಹೀಗಿದ್ದರೂ ರಾಮಣ್ಣ ಶೆಟ್ರಿಗೆ ಪುಟ್ಟನ ಮಾತುಗಳು ಹೊಸ ಚೇತನವನ್ನು ನೀಡುತ್ತಿತ್ತು.

“ಅಜ್ಜಾ… ಅಜ್ಜಾ…. ಕುಪುಳಿನ ಗೂಡ ಯಾರಿಗೂ ನೋಡೋಕೆ ಸಿಗುವುದಿಲ್ವೇ?” ಓಡುತ್ತಾ ಬಂದ ಪುಟ್ಟ ಏದುಸಿರು ಬಿಡುತ್ತಾ ಅಜ್ಜನನ್ನು ಪ್ರಶ್ನಿಸಿದ.

“ನಾನು ಇದುವರೆಗೆ ನೋಡಿಲ್ಲ” ಪುಟ್ಟನ ಈ ಅನಿರೀಕ್ಷಿತ ಪ್ರಶ್ನೆಯ ಔಚಿತ್ಯ ಅರಿಯದೇ ರಾಮಣ್ಣ ಶೆಟ್ರು ಉತ್ತರಿಸಿದರು.

“ಹಾಗಾದರೆ ಬನ್ನಿ ನಾನು ತೋರಿಸುತ್ತೇನೆ” ಪುಟ್ಟ ತನ್ನ ಅಜ್ಜನ ಕೈಯನ್ನು ಜಗ್ಗುತ್ತಾ ಕರೆದ.

“ಎಲ್ಲಿದೆ… ನೀನು ಎಲ್ಲಿ ನೋಡಿದೆ?” ಆಶ್ಚರ್ಯದಿಂದಲೇ ಪ್ರಶ್ನಿಸಿದರು ರಾಮಣ್ಣ ಶೆಟ್ರು “ಬನ್ನಿ…. ಮನೆಯ ಹಿಂದಿನ ಬೀರುಂಡಿ ಮರದಲ್ಲಿ ಗೂಡು ಕಟ್ಟುತ್ತಿದೆ. ನಾನೀU ನೋಡಿದೆ….” ಅಜ್ಜನಿಗೆ ಮಂಚದ ಮೇಲೆ ಕುಳಿತುಕೊಳ್ಳಲು ಸಹಾಯ ಮಾಡುತ್ತಾ ಪುಟ್ಟ ಹೇಳಿದ.

“ಗೂಡನ್ನು ದೂರದಿಂದಲೇ ನೋಡಿದರೆ ಸಾಕು; ಹತ್ತಿರಕ್ಕೆ ಹೋಗುವುದು ಬೇಡ. ನಮ್ಮನ್ನು ಕಂಡರೆ ಹಕ್ಕಿ ಮತ್ತೆ ಅಲ್ಲಿಗೆ ಬರುವುದಿಲ್ಲ”

ಪುಟ್ಟನ ಕೈ ಹಿಡಿದು ಕೋಣೆಯನ್ನು ದಾಟುತ್ತಿದ್ದ ಶೆಟ್ಟರು ಪುಟ್ಟನನ್ನು ಎಚ್ಚರಿಸಿದರು. “ಹಾಂ…” ಪುಟ್ಟ ತಲೆ ಅಲ್ಲಾಡಿಸಿದ.
ಪುಟ್ಟನ ಕೈ ಹಿಡಿದು ನಡೆದು ಬರುತ್ತಿರುವ ರಾಮಣ್ಣ ಶೆಟ್ಟರು ಬೀರುಂಡಿ ಮರದಿಂದ ತೆಂಗಿನ ಮರದೆಡೆಗೆ ಹಾರುತ್ತಿರುವ ಕೆಂಬೂತ ಹಕ್ಕಿಯನ್ನು ನೋಡಿದರು.

“ಅಲ್ಲಿ… ಅಲ್ಲಿ ನೋಡಿ ಎಷ್ಟು ಚೆನ್ನಾಗಿದೆ ಗೂಡು….”

ಬೀರುಂಡಿ ಮರದ ಗೆಲ್ಲುಗಳೆಡೆಗೆ ಕೈ ಚಾಚಿ ತೋರಿಸುತ್ತಾ ಪುಟ್ಟ ಹೇಳಿದ.

“ಹೌದು ಚೆನ್ನಾಗಿದೆ…. ನಾವು ಹಿಂದೆ ಹೋಗೋಣ. ನಾವು ಎಲ್ಲೇ ನಿಂತರೆ ಹಕ್ಕಿ ಮತ್ತೆ ಬರಲು ಹೆದರಬಹುದು”

ಗೂಡನೊಮ್ಮೆ ಇಣುಕಿ ನೋಡಿದ ರಾಮಣ್ಣ ಶೆಟ್ಟರು ಪುಟ್ಟನ ಕೈ ಹಿಡಿದು ಹಿಂದಿರುಗಿ ನಡೆಯುತ್ತಾ ಹೇಳಿದರು.

‘ನೋಡು ಪುಟ್ಟ ಹಕ್ಕಿಗೆ ಯಾವುದೇ ತೊಂದರೆ ಕೊಡಬೇಡ… ಏನು…’ ಪುಟ್ಟನನ್ನು ಮತ್ತೆ ಎಚ್ಚರಿಸುತ್ತಾ ಶೆಟ್ಟರು ಹೇಳಿದರು.

“ಆಯ್ತು…..” ಪುಟ್ಟ ತಲೆ ಅಲ್ಲಾಡಿಸುತ್ತಾ ಹೇಳಿದ.

ಹಕ್ಕಿಗೆ ತೊಂದರೆ ಕೊಡಬೇಡವೆಂದು ಅಜ್ಜ ಹೇಳಿದ್ದರೂ ಪ್ರತೀದಿನ ಗೂಡಿನ ಅವಲೋಕನ ಮಾತ್ರ ಪುಟ್ಟನಿಂದ ನಡೆಯುತ್ತಿತ್ತು. ಅದರ ವಿವರಣÉಯನ್ನೂ ಅಜ್ಜನಿಗೆ ಮುಟ್ಟಿಸುತ್ತಿದ್ದ. ಪುಟ್ಟನ ಅವಲೋಕನದ ನಡುವೆ ಹಕ್ಕಿ ಗೂಡುಕಟ್ಟಿ ಮೊಟ್ಟೆ ಇಟ್ಟು, ಅದು ಬಿರುದು ಈಗ ಗೂಡಿನಿಂದ ‘ಚಿಂವ್…. ಚಿಂವ್’ ಶಬ್ದ ಕೇಳುತ್ತವೆ.

ಒಂದು ವಾರದಿಂದ ರಾಮಣ್ಣ ಶೆಟ್ರು ಆರೋಗ್ಯ ತೀರಾ ಹದಗೆಟ್ಟದೆ. ಎರಡು ದಿನದಿಂದ ಸಣ್ಣಗೆ ಜ್ವರವೂ ಕಾಣಿಸಿಕೊಂಡು ಮನೆಯವರಿಗೆಲ್ಲಾ ಆತಂಕ ಹೆಚ್ಚಾಗಿದೆ. ಪುಟ್ಟನಿಗಂತೂ ಅಜ್ಜನ ಈ ಸ್ಥಿತಿ ಬೇಸರ ಮೂಡಿಸಿತ್ತು.

ಏನೋ ಗದ್ದಲ ಕೇಳಿಸಿದ್ದರಿಂದ ಅಂದು ಪುಟ್ಟನಿಗೆ ಬೇಗನೆ ಎಚ್ಚರವಾಗಿತ್ತು. ಎದ್ದವನೇ ಕಣ್ಮುಜ್ಜಿಕೊಳ್ಳುತ್ತಾ ಕೋಣೆಯ ಹೊರಬಂದವ ಅಮ್ಮ ಅತ್ತೆಯಂದಿರೆಲ್ಲಾ ಬಿಸಿನೀರು ತೀರ್ಥ ಎಂದೆಲ್ಲಾ ಅಜ್ಜನ ಕೋಣೆಯ ಆಚೀಚೆ ಓಡಾಡುತ್ತಿರುವುದು ಕಂಡು ಗಾಬರಿಯಿಂದ ಅಜ್ಜನ ಕೋಣೆಯೆಡೆಗೆ ಓಡಿದ.

“ಬಾ…. ಅಜ್ಜನಿಗೆ ಈ ತೀರ್ಥವನ್ನು ಕೊಡು…”

ಪುಟ್ಟನನ್ನು ಕಂಡ ಅವನ ಚಿಕ್ಕತ್ತೆ ನಡುಗುವ ಕೈಗಳಿಂದ ಮಂಜುನಾಥನ ತೀರ್ಥ ತುಂಬಿದ ಚಮಚವನ್ನು ಚಾಚುತ್ತಾ ಕರೆದರು.

ಪುಟ್ಟನ ಕಣ್ಣು ತುಂಬಿ ಬಂತು ಉಸಿರಾಡಲು ಕಷ್ಟಪಡುತ್ತಿದ್ದ ಅಜ್ಜನ ಮುಖವನ್ನು ಅವನಿಂದ ನೋಡಲಾಗಲಿಲ್ಲ. ಚಮಚದಲ್ಲಿದ್ದ ತೀರ್ಥವನ್ನು ಅಜ್ಜನ ಬಾಯಿಗೆ ನಿಧಾನವಾಗಿ ಸುರಿದ. ಶೆಟ್ರು ಕಣ್ಣುಗಳಿಂದ ಎರಡು ಹನಿ ಕಣ್ಣೀರು ಹರಿದು ಕೆನ್ನೆಯಿಂದ ಉದುರಿತು.

ಪುಟ್ಟ ಏನೋ ನೆನಪಾದವನಂತೆ ಚಮಚವನ್ನು ಅತ್ತೆಯ ಕೈಗಿಟ್ಟು ಹಿತ್ತಲಿನೆಡೆಗೆ ಓಡಿದ.

ಈಗಷ್ಟೇ ಬೆಳಕು ಹರಿಯಲಾರಂಭಿಸಿತ್ತು. ಆ ನಸುಬೆಳಕಿನಲ್ಲಿ ಪುಟ್ಟ ಬೀರುಂಡಿಯ ಮರದ ಬುಡಕ್ಕೆ ಬಂದ.

ಪುಟ್ಟನನ್ನು ಕಂಡೊಡನೇ ಕೆಂಬೂತ ಹಕ್ಕಿಯೊಂದು ಹಾರಿ ಹೋಯಿತು ತಕ್ಷನ ಮರವೇರಿದ ಪುಟ್ಟ ತನ್ನ ಕೈಗಳಿಂದ ಗೂಡನ್ನು ಕಿತ್ತು ತೆಗೆದ.

ಗೂಡನ್ನು ಚಿಂದಿ ಮಾಡುತ್ತಾ ಗೂಡಿನಲ್ಲಿ ಸದಾ ಹಸಿರಾಗಿರುವ ಸಂಜೀವಿನಿ ಕಡ್ಡಿಗಾಗಿ ಹುಡುಕಿದ. ಆದರೆ ಪುಟ್ಟನಿಗೆ ಆ ಗೂಡಿನಲ್ಲಿ ಯಾವ ಹಸಿರಾದ ಕಡ್ಡಿಯೂ ಕಾಣಲಿಲ್ಲ. ಪುಟ್ಟನಿಗೆ ಅಳು ತಡೆದುಕೊಳ್ಳಲಾಗಲಿಲ್ಲ.

“ಅಪ್ಪಾ….”

ಮನೆಯೆಡೆಯಿಂದ ಚಿಕ್ಕತ್ತೆಯ ಜೋರಾದ ಕೂಗು ಕೇಳಿಸಿತು.

ಪುಟ್ಟನ ಕಣ್ಣಿಗೆ ಕತ್ತಲಾವರಿಸಿದಂತೆ ಭಾಸವಾಯಿತು. ನೆಲದ ಮೇಲೆ ಬಿದ್ದಿದ್ದ ಮೂರು ಪುಟ್ಟ ಹಕ್ಕಿ ಮರಿಗಳು ‘ಚಿಂವ್….ಚಿಂವ್….’ ಎಂದು ಕೂಗುತ್ತಲೇ ಇದ್ದವು……

2 Responses to "ಕೆಂಬೂತನ ಗೂಡು"

  1. ರಾಜಶೇಖರ  January 28, 2017 at 8:36 am

    ಕಥೆ ತುಂಬಾ ಚೆನ್ನಾಗಿದೆ.

    Reply
  2. ಮಹೇಶ ಏಣಗಿ  January 28, 2017 at 5:06 pm

    ಚೆನ್ನಾಗಿದೆ….ನಿಧಾನವಾಗಿ ಓದಿಸಿಕೊಂಡು ಹೋಗುತ್ತೆ.

    Reply

Leave a Reply

Your email address will not be published.