ಕೂಡ್ಲಿಗಿ ಜನರ ಕಲ್ಪವೃಕ್ಷ ‘ಹುಣಸೆ ಮರ’

- ಸಿದ್ಧರಾಮ ಹಿರೇಮಠ ಕೂಡ್ಲಿಗಿ.

ಸ್ನೇಹಿತರೆ,
ಕೂಡ್ಲಿಗಿ ತಾಲೂಕು ಐತಿಹಾಸಿಕ, ಪ್ರೇಕ್ಷಣೀಯ ಸ್ಥಳಗಳನ್ನು ಒಳಗೊಂಡಿದ್ದರೂ ತೆರೆಯ ಮರೆಯಲ್ಲಿ ಹೇಗೆ ಹುದುಗಿಹೋಗಿದೆಯೋ, ಹುಣಸೆಹಣ್ಣಿನ ಬೆಳೆಯಲ್ಲಿಯೂ ಸಾಕಷ್ಟು ಶ್ರಮವಿದ್ದರೂ ಯಾವುದೇ ಆಧುನಿಕ ಸೌಲಭ್ಯಗಳಿಲ್ಲದೆ ಮೂಲ ಹೆಸರು ಮರೆಯಾಗಿದೆ.

FB_IMG_1487680197396ತಾಲೂಕಿನಲ್ಲಿ ಅಂದಾಜು ೧ ಲಕ್ಷ ಹುಣಸೆ ಮರಳಿವೆ. ಪ್ರತಿ ಗ್ರಾಮಗಳ ಹಾಗೂ ಗ್ರಾಮಗಳ ಮಾರ್ಗದಲ್ಲಿ ಹುಣಸೆ ಮರಗಳಿವೆ. ಇವಕ್ಕೆ ಯಾವುದೇ ಆರೈಕೆ ಬೇಡದೆ ರೈತರಿಗೆ ಒಂದು ರೀತಿಯಲ್ಲಿ ವರದಾನವಾಗಿವೆ ಎಂದೇ ಹೇಳಬಹುದಾಗಿದೆ. ತೋಟಗಳಲ್ಲಿ ಬೆಳೆದ ಹುಣಸೆ ಮರಗಳನ್ನು ರೈತರು ಹುಣಸೆ ಹಣ್ಣಿನ ಗುತ್ತಿಗೆದಾರರಿಗೆ ಗುತ್ತಿಗೆ ಕೊಡುತ್ತಾರೆ. ಗುತ್ತಿಗೆದಾರರು ಅಂದಾಜು ಮೇಲೆಯೇ ಮರಗಳನ್ನು ಗುತ್ತಿಗೆ ಹಿಡಿದು, ಹಣ್ಣನ್ನೆಲ್ಲ ಕೀಳಿಸಿ, ಅವುಗಳನ್ನು ಸಂಸ್ಕರಿಸಿ ಮಾರುಕಟ್ಟೆಗೆ ಕಳಿಸುವವರೆಗೆ ಅವರದೇ ಜವಾಬ್ದಾರಿ. ಸೀಸನ್ ನಲ್ಲಿ ತಾಲೂಕಿನಾದ್ಯಂತ ಎಲ್ಲಿ ಹೋದರೂ ಹುಣಸೆಯನ್ನು ಬಡಿದು ಸಿಪ್ಪೆ ಬಿಡಿಸುವ, ಹಣ್ಣಿನಿಂದ ಬೀಜಗಳನ್ನು ತೆಗೆದು ತೊಳೆಯನ್ನು ಬಿಡಿಸುವ, ನಾರನ್ನು ತೆಗೆಯುವ, ಪುಟ್ಟಿಯಲ್ಲಿ ಹಣ್ಣನ್ನು ಸಿದ್ಧಗೊಳಿಸುವ ಕಾರ್ಯ ಕಾಣುತ್ತದೆ.

ತೆಂಗಿನ ಮರವನ್ನು ಕಲ್ಪವೃಕ್ಷ ಎನ್ನುವುದು ವಾಡಿಕೆ. ತೆಂಗಿನ ಗಿಡದ ಯಾವುದೇ ಭಾಗವೂ ವ್ಯರ್ಥವಲ್ಲ ಎಂಬ ಕಾರಣಕ್ಕೆ ಕಲ್ಪವೃಕ್ಷ ಎನ್ನಲಾಗುತ್ತದೆ. ಅದೇ ರೀತಿಯಲ್ಲಿಯೇ ರೈತರಿಗೆ ಮತ್ತೊಂದು ಕಲ್ಪವೃಕ್ಷವೆಂದರೆ ಈ ಹುಣಸೆ ಮರ. ಹುಣಸೆ ಮರದಿಂದ ದೊರಕುವ ಯಾವುದೇ ಉತ್ಪನ್ನವು ವ್ಯರ್ಥವಲ್ಲ. ಹುಣಸೆ ಮರದಿಂದ ದೊರಕುವ ಹುಣಸೆ ಕಾಯಿ, ಹಣ್ಣು, ಅದರ ಸಿಪ್ಪೆ, ಹುಣಸೆ ಬೀಜ, ಹಣ್ಣಿನೊಳಗಿನ ನಾರು ಎಲ್ಲವೂ ರೈತರಿಗೆ ವರದಾನವೇ. ಇಷ್ಟು ಅಮೂಲ್ಯವಾದ ಹುಣಸೆ ಮರಗಳ ತವರು ನಮ್ಮ ತಾಲೂಕೆಂದರೆ ತಪ್ಪಾಗದು. ಯಾಕೆಂದರೆ ಇಲ್ಲಿ ಹುಣಸೆ ಮರಗಳ ತೋಪು, ಇಳುವರಿ, ವಹಿವಾಟು ಅತ್ಯಧಿಕ.

ತಾಲೂಕಿನಲ್ಲಿ ಇದೀಗ ಹುಣಿಸೆಹಣ್ಣಿನ ಸೀಸನ್. ರೈತರ ‘ಪಾರ್ಟಟೈಂ’ ಕೆಲಸವಾಗಿರುವ ಹುಣಿಸೆಹಣ್ಣಿನ ಕೆಲಸದಿಂದ ಸಾಕಷ್ಟು ಲಾಭವೂ ಇದೆ, ಅದೃಷ್ಟ ಕೈಕೊಟ್ಟರೆ ನಷ್ಟವೂ ಇದೆ.
ತಾಲೂಕಿನಲ್ಲಿ ಅಂದಾಜು ೧ ಲಕ್ಷ ಹುಣಿಸೆಮರಗಳಿವೆ. ಯಾವುದೇ ರೀತಿಯ ಕಾಳಜಿ, ಗೊಬ್ಬರ, ಏನನ್ನೂ ಬೇಡದ ಹುಣಿಸೆಮರ ಈ ಭಾಗದ ರೈತರಿಗೆ ವರದಾನವಾಗಿದೆ. ತಾಲೂಕಿನಲ್ಲಿ ಬೃಹತ್ ಹುಣಿಸೆಮರಗಳ ತೋಪುಗಳೇ ಇವೆ. ಕೂಡ್ಲಿಗಿ ಪಟ್ಟಣದ ಸುತ್ತುಮುತ್ತಲು ಪ್ರದೇಶದಲ್ಲಿಯೇ ಸಹಸ್ರಾರು ಹುಣಿಸೆ ಮರಗಳಿವೆ. ತಾಲೂಕಿನ ಹೊಸಹಳ್ಳಿ, ಗುಡೇಕೋಟೆ, ಕೊಟ್ಟೂರು ಹೋಬಳಿ ಭಾಗಗಳಲ್ಲೂ ಸಾಕಷ್ಟು ಹುಣಸೆಮರಗಳಿದ್ದು, ವಹಿವಾಟು ಜೋರಾಗಿದೆ. ಇಲ್ಲಿನ ಕೆಲ ಗುತ್ತಿಗೆದಾರರು ಮರಗಳಲ್ಲಿ ಬಿಡುವ ಹೂಗಳನ್ನು ನೋಡಿ ಅಂದಾಜಿನ ಮೇಲೆ ೨ ವರ್ಷಕ್ಕೊಮ್ಮೆ ರೈತರಿಂದ ಮರಗಳನ್ನು ಗುತ್ತಿಗೆ ಹಿಡಿಯುತ್ತಾರೆ. ಲಾಭ ನಷ್ಟವೆಲ್ಲವೂ ಗುತ್ತಿಗೆದಾರನಿಗೆ ಬಿಟ್ಟಿದ್ದು. ಈ ರೀತಿಯಲ್ಲಿ ಒಂದು ಅಂದಾಜಿನ ಪ್ರಕಾರ ಕೋಟಿಗಟ್ಟಲೆ ವ್ಯವಹಾರ ನಡೆಯುತ್ತದೆ. ಈ ಭಾಗದ ಹುಣಿಸೆಹಣ್ಣು ನೆರೆ ರಾಜ್ಯಗಳಿಗೂ ಸರಬರಾಜಾಗುತ್ತದೆ ಎಂದರೆ ಇಲ್ಲಿನ ಹುಣಿಸೆಹಣ್ಣಿನ ವಹಿವಾಟನ್ನು ಊಹಿಸಬಹುದಾಗಿದೆ.

ನವೆಂಬರ್‌ನಿಂದ ಫೆಬ್ರುವರಿಯವರೆಗೂ ಹುಣಿಸೆಹಣ್ಣಿನ ಸೀಸನ್. ಮೊದಲೇ ಗುತ್ತಿಗೆ ಹಿಡಿದ ಗುತ್ತಿಗೆದಾರ ಮಾರುಕಟ್ಟೆಯ ಬೆಲೆಯನ್ನು ಅಂದಾಜು ಮಾಡಿ ಗುತ್ತಿಗೆ ಹಿಡಿಯುತ್ತಾನೆ. ಒಂದು ವೇಳೆ ಮಾರುಕಟ್ಟೆಯ್ಲಲಿ ಹಣ್ಣಿನ ದರ ಇಳಿದರೆ, ನಷ್ಟವೆಲ್ಲ ಗುತ್ತಿಗೆದಾರನದು. ಹೀಗಾಗಿ ಹುಣಿಸೆಹಣ್ಣಿನ ವಹಿವಾಟನ್ನು ಹೀಗೇ ಎಂದು ಲೆಕ್ಕಾಚಾರ ಮಾಡಲಾಗುವುದಿಲ್ಲ. ಮಧ್ಯವರ್ತಿಗಳ ಹಾವಳಿಯೂ ಇದಕ್ಕೆ ಕಾರಣವಾಗಿದೆ. ಇಲ್ಲಿ ಬೆಳೆದ ಹಣ್ಣನ್ನು ಸಂಸ್ಕರಿಸಿ, ಹೊಸಪೇಟೆಗೆ ಕಳಿಸಲಾಗುತದೆ. ಹೊಸಪೇಟೆಯಿಂದ ಟನ್‌ಗಟ್ಟಲೆ ಹುಣಸೆಹಣ್ಣು ಹೈದ್ರಾಬಾದ್‌ಗೆ ರವಾನೆಯಾಗುತ್ತದೆ. ಅಲ್ಲಿಂದ ಬೇರೆಲ್ಲ ಕಡೆ ಸರಬರಾಜಾಗುತ್ತದೆ ಎಂದು ಸ್ಥಳೀಯ ಗುತ್ತಿಗೆದಾರರು ಹೇಳುತ್ತಾರೆ. ಏನೇ ಇರಲಿ ಕೂಡ್ಲಿಗಿಯ ಹುಣಿಸೆಹಣ್ಣಿಗೆ ಭಾರಿ ಬೇಡಿಕೆ. ಇದಕ್ಕೆ ಕಾರಣ ಇಲ್ಲಿನ ಹುಣಿಸೆಹಣ್ಣಿಗೆ ಹುಳಿ ಹೆಚ್ಚು ಹಾಗೂ ಹಣ್ಣಿನ ತೊಳೆಯೂ ದೊಡ್ಡದು.

ಪ್ರತಿದಿನವೂ ಗುತ್ತಿಗೆದಾರ ಹಣ್ಣಾದ ಹುಣಿಸೆ ಬೋಟುಗಳನ್ನು ಕೂಲಿಗಳಿಂದ ಕೀಳಿಸುತ್ತಾನೆ. ಸಾಮಾನ್ಯ ಮರವಾದರೆ ಸೀಸನ್‌ನಲ್ಲಿ ೭೦-೮೦ ಕೆ.ಜಿ ಹಣ್ಣನ್ನು ಕೊಟ್ಟರೆ, ದೊಡ್ಡ ಮರಗಳು ೨-೩ ಕ್ವಿಂಟಾಲ್‌ವರೆಗೂ ಹಣ್ಣು ಕೊಟ್ಟ ಉದಾಹರಣೆಗಳಿವೆ. ಅನುಭವಿ ಗುತ್ತಿಗೆದಾರ ಮಾತ್ರ ಮರಗಳಿಂದ ಸಂಗ್ರಹವಾಗುವ ಹಣ್ಣನ್ನು ಅಂದಾಜು ಮಾಡಬಲ್ಲ. ಸಂಗ್ರಹವಾದ ಬೋಟುಗಳನ್ನು ಒಡೆದು, ತೊಳೆಯನ್ನು ಬೇರ್ಪಡಿಸುವ ಕೆಲಸವನ್ನು ಕೂಲಿಕಾರರಿಗೆ ಕೊಡುತ್ತಾನೆ. ಬಿಡುವಿನ ವೇಳೆಯಲ್ಲಿ ರೈತರ ಕುಟುಂಬ ವರ್ಗದವರೆಲ್ಲರೂ ಈ ಕೆಲಸಕ್ಕೆ ತೊಡಗುತ್ತಾರೆ. ಮಾಮೂಲಿ ಹಣ್ಣನ್ನು ೧ ಪುಟ್ಟಿ ಜಜ್ಜಿ ಕೊಡಲು ಒಂದು ದರವಾದರೆ, ದೊಡ್ಡ ತೊಳೆಯ ಹಣ್ಣನ್ನು ಜಜ್ಜಿಕೊಡಲು ಬೇರೆಯದೇ ದರವಿದೆ. ಹುಣಸೆಹಣ್ಣನ್ನು ಜಜ್ಜಿ, ಅಗಲವಾಗಿರುವ ತೊಳೆಗಳಿಂದ ನಾರನ್ನು, ಬೀಜವನ್ನು ಬೇರ್ಪಡಿಸಿ, ಪರಿಶುದ್ಧವಾದ ಹಣ್ಣನ್ನು ದುಂಡಾಕೃತಿಯಲ್ಲಿ ಸುಂದರವಾಗಿ ಹೊಂದಿಸುತ್ತಾರೆ. ಅಲ್ಲಿಗೆ ಹುಣಿಸೆಹಣ್ಣು ಮಾರಾಟಕ್ಕೆ ಸಿದ್ಧ. ಹೀಗೆ ಸಿದ್ಧಗೊಂಡ ಹಣ್ಣನ್ನು ಈ ಭಾಗದಲ್ಲಿ ‘ಚಪಾತಿ ಹಣ್ಣು’ ಎಂದೇ ಕರೆಯುತ್ತಾರೆ. ಹೆಚ್ಚು ಅಗಲವಾದ ತೊಳೆ ಹಾಗೂ ಬಂಗಾರ ಬಣ್ಣವನ್ನು, ಹೆಚ್ಚು ಹುಳಿಯನ್ನು ಹೊಂದಿದ ಹಣ್ಣಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ. ಇದರಲ್ಲಿ ಕೆಂಪು ಬಣ್ಣ, ಕಡಿಮೆ ಹುಳಿ, ನಾರಿರುವ ಹಣ್ಣಿಗೆ ಬೆಲೆ ಕಡಿಮೆ. ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡಿಗೆ ಮಾರಾಟಗೊಳ್ಳುವ ಹಣ್ಣೆಲ್ಲ ಚಪಾತಿ ಹಣ್ಣು.

FB_IMG_1487680205482ಹುಣಿಸೆಹಣ್ಣಿನ ೪ ತಿಂಗಳ ಸೀಸನ್‌ನಲ್ಲಿ ಗುತ್ತಿಗೆದಾರರಿಂದ ಹಿಡಿದು, ರೈತರು, ಮಹಿಳೆಯರು, ಮಕ್ಕಳು, ಮಧ್ಯವರ್ತಿಗಳು ಹೀಗೆ ಹಲವಾರು ಜನರಿಗೆ ಕೆಲಸವನ್ನೊದಗಿಸುವ ಕಾಮಧೇನು ಹುಣಿಸೆಮರ. ಕೂಡ್ಲಿಗಿ ತಾಲೂಕಿನಾದ್ಯಂತ ಹುಣಿಸೆಹಣ್ಣಿನ ಸೀಸನ್‌ನಲ್ಲಿ ಎಲ್ಲಿಯೇ ಹೋದರೂ, ರಾಶಿ ರಾಶಿ ಹುಣಿಸೆ ಬೋಟುಗಳನ್ನು ಜಜ್ಜುವ, ತೊಳೆ ಬಿಡಿಸುವ, ಪುಟ್ಟಿಗಳಲ್ಲಿ ಹಣ್ಣನ್ನು ಸಿದ್ಧಪಡಿಸಿ ಮಾರಾಟ ಮಾಡುವ ದೃಶ್ಯ ಸಾಮಾನ್ಯ. ಹುಣಸೆಹಣ್ಣಿನಿಂದ ಬೇರ್ಪಡಿಸಿದ ಯಾವುದೂ ವ್ಯರ್ಥವಲ್ಲ ಎಂಬುದೂ ಇಲ್ಲಿ ಗಮನಾರ್ಹ. ಅದರ ನಾರನ್ನು ಮಡಕೆ ಸುಡಲು ಕುಂಬಾರರು ಒಯ್ಯುತ್ತಾರೆ. ಹುಣಸೆಹಣ್ಣಿನ ಸಿಪ್ಪೆಯನ್ನು ಇಟ್ಟಿಗೆ ಭಟ್ಟಿಗೆ ಉರುವಲಾಗಿ ಉಪಯೋಗಿಸಲಾಗುತ್ತದೆ. ಅದರ ಬೀಜವನ್ನು ವಿವಿಧ ರೀತಿಯಲ್ಲಿ ಸಂಸ್ಕರಿಸಿ ಮಾರುಕಟ್ಟೆಯಲ್ಲಿ ಬಳಸಲಾಗುತ್ತದೆ. ಹೀಗಾಗಿ ಹುಣಸೆಮರವೆಂದರೆ ಕಲ್ಪವೃಕ್ಷವೇ ಸರಿ.

ಇಷ್ಟೆಲ್ಲ ಇದ್ದರೂ ದುರಂತವೆಂದರೆ, ಹುಣಿಸೆಹಣ್ಣನ್ನು ಸಂಗ್ರಹಿಸುವ ಶೀಥಲೀಕರಣ ಘಟಕ ತಾಲೂಕು ಕೇಂದ್ರದಲ್ಲಿ ಇಲ್ಲದೇ ಇರುವುದು. ಇಲ್ಲಿನ ಎಷ್ಟೋ ಜನ ಗುತ್ತಿಗೆದಾರರು ನೆರೆ ರಾಜ್ಯದ ಶೀಥಲೀಕರಣ ಘಟಕಗಳಲ್ಲಿ ಹಣ್ಣನ್ನು ಸಂಗ್ರಹಿಸಿಡುತ್ತಾರೆ. ಸ್ಥಳೀಯ ರೈತರೆಲ್ಲ ಹುಣಿಸೆಹಣ್ಣನ್ನು ಮಾರಾಟ ಮಾಡುವುದು ಹೊಸಪೇಟೆ ಮಾರುಕಟ್ಟೆಗೆ. ದೊಡ್ಡ ಗುತ್ತಿಗೆದಾರರು ನೆರೆ ರಾಜ್ಯಗಳಿಗೆ ಮಾರಾಟ ಮಾಡುತ್ತಾರೆ. ಹೊಸಪೇಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ ಹಾಗೂ ಹಣ್ಣನ್ನು ಸಂಗ್ರಹಿಸುವ ಸೂಕ್ತ ವ್ಯವಸ್ಥೆಯಿಲ್ಲ ಎಂಬುದು ರೈತರ ಅಳಲಾಗಿದೆ. ಕೋಟಿಗಟ್ಟಲೆ ವಹಿವಾಟಿರುವ ಹುಣಿಸೆಹಣ್ಣಿನ ಮಾರಾಟಕ್ಕೆ ಕೂಡ್ಲಿಗಿಯಲ್ಲಿಯೇ ಸೂಕ್ತ ಸೌಲಭ್ಯ, ಸೌಕರ್ಯಗಳನ್ನು ಒದಗಿಸಬೇಕಾಗಿದೆ.

ಅಂದಹಾಗೆ ಕೂಡ್ಲಿಗಿಗೆ ಬರುವ ಉದ್ಯೋಗಸ್ಥರು, ಪರಿಚಿತರು, ಬಂಧುಗಳು ಕೂಡ್ಲಿಗಿಯಿಂದ ಹುಣಸೆಹಣ್ಣನ್ನು ತಮ್ಮ ಊರುಗಳಿಗೆ ಒಯ್ಯುತ್ತಾರೆ. ಎಲ್ಲೆಡೆ ನಮ್ಮ ತಾಲೂಕಿನ ಹುಣಸೆಹಣ್ಣು ಬಳಕೆಯಾಗುತ್ತದೆ. ಆದರೆ ದುರಂತವೆಂದರೆ ಕೂಡ್ಲಿಗಿಯ ಹುಣಸೆಹಣ್ಣೆಂದು ಎಲ್ಲಿಯೂ ಪ್ರಚಾರ ಪಡೆಯದೇ ಇರುವುದು. ಇದು ನಮ್ಮ ತಾಲೂಕಿನ ದುರ್ದೈವ.
ಧನ್ಯವಾದಗಳು,

One Response to "ಕೂಡ್ಲಿಗಿ ಜನರ ಕಲ್ಪವೃಕ್ಷ ‘ಹುಣಸೆ ಮರ’"

  1. basavaraj Hima  February 28, 2017 at 5:02 pm

    Nice..

    Reply

Leave a Reply

Your email address will not be published.