ಕೂಡ್ಲಿಗಿಯ ಗುಳೆಲಕ್ಕವ್ವನ ವಿಶಿಷ್ಟ ಜಾತ್ರೆ

-ಸಿದ್ದರಾಮ ಹಿರೇಮಠ, ಕೂಡ್ಲಿಗಿ.

FB_IMG_1490918183170ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನಲ್ಲಿ ಐತಿಹಾಸಿಕ, ಧಾರ್ಮಿಕ, ಪ್ರೇಕ್ಷಣೀಯ ಸ್ಥಳಗಳು ಹೇಗಿವೆಯೋ ಹಾಗೆಯೇ ಜನಪದ ಆಚರಣೆಗಳೂ ಹಾಸುಹೊಕ್ಕಾಗಿವೆ. ಒಂದು ಗ್ರಾಮದ ಸಂಸ್ಕೃತಿಯೆಂದರೆ ಅಲ್ಲಿನ ಆಚರಣೆಗಳು. ಅವು ಧಾರ್ಮಿಕ ಹಿನ್ನೆಲೆಯಲ್ಲಿರಬಹುದಾದರೂ ಆ ಊರಿನ ಇತಿಹಾಸ, ಐತಿಹ್ಯವನ್ನು ಅವು ಖಂಡಿತವಾಗಿ ತಿಳಿಸಬಲ್ಲವು. ಈ ದೃಷ್ಟಿಯಿಂದ ನಾನು ಯಾವುದೇ ಗ್ರಾಮದಲ್ಲಿ ಗುಡಿ ಗುಂಡಾರಗಳಿಗೆ ಭೇಟಿ ನೀಡುತ್ತೇನೆಂದರೆ ಅದು ಇತಿಹಾಸವನ್ನು ತಿಳಿದುಕೊಳ್ಳುವ ಅಲ್ಲಿನ ಸಂಸ್ಕೃತಿಯನ್ನು ತಿಳಿದುಕೊಳ್ಳುವ ಉದ್ದೇಶದಿಂದ.

ಬಳ್ಳಾರಿ ಜಿಲ್ಲೆಯಲ್ಲಿ ಬಹಳ ವಿಶಿಷ್ಟವಾದ ಜನಪದ ಆಚರಣೆಗಳಿವೆ. ಅವುಗಳಲ್ಲಿ ಗುಳೆ ಹೋಗುವುದು ಒಂದು. ಇದೊಂದು ಶೋಧನಾತ್ಮಕವಾಗಬಲ್ಲ ಆಚರಣೆಯಾಗಿದೆ. ಹೆಸರೇ ಸೂಚಿಸುವಂತೆ ಇಡೀ ಊರಿಗೆ ಊರೇ ಒಂದು ದಿನದ ಮಟ್ಟಿಗೆ ಗುಳೆ ಹೋಗುವ ಸಂಪ್ರದಾಯ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಸರಿಸುಮಾರು ೪-೫ ವರ್ಷಗಳಿಗೊಮ್ಮೆ ಆಚರಿಸಲಾಗುವ ಈ ವಿಶಿಷ್ಟವಾದ ಜಾತ್ರೆಯಂದು ಇಡೀ ಊರು ಖಾಲಿಯಾಗುತ್ತದೆ. ಇದು ಅಂತಿಂಥ ರೀತಿಯಲ್ಲಿ ಖಾಲಿಯಾಗುವದಲ್ಲ. ಗ್ರಾಮದ ನಾಯಿ, ಕುರಿ, ಕೋಳಿ, ಜಾನುವಾರುಗಳಿಂದ ಹಿಡಿದು ಇಡೀ ಗ್ರಾಮದಲ್ಲಿ ಒಂದು ನರಪಿಳ್ಳೆಯೂ ಇರದಂತೆ ಖಾಲಿಯಾಗುವ ಪ್ರಕ್ರಿಯೆ. ಇಲ್ಲಿ ಇದನ್ನು ಹೇಳಲು ಕಾರಣ ಇದೇ ಎಪ್ರಿಲ್ ತಿಂಗಳಲ್ಲಿ ಕೂಡ್ಲಿಗಿಯಲ್ಲಿ ಗುಳೇ ಲಕ್ಕಮ್ಮ ಜಾತ್ರೆಯಿದೆ. ಭೂಮಿಯಿಂದ ಚಂದ್ರನೆಡೆಗೆ ದಾಪುಗಾಲಿಟ್ಟ ಮನುಷ್ಯ, ಮಂಗಳನೆಡೆಯೂ ಇಣುಕಿ ನೋಡುವ ಹೊತ್ತಿನಲ್ಲಿ ಊರು ಬಿಟ್ಟು ಹೋಗುವ ಸಂಪ್ರದಾಯ ಮಾತ್ರ ವಿಶೇಷವೆನಿಸುತ್ತದೆ. ಮನುಷ್ಯನೊಳಗಿನ ಸಂಪ್ರದಾಯ, ಆಚರಣೆಗಳು ಅಷ್ಟು ಸುಲಭದಲ್ಲಿ ಬದಲಾವಣೆಯಾಗಲಾರವು ಎಂಬುದಕ್ಕೆ ಇಂತಹ ಆಚರಣೆಗಳೇ ಸಾಕ್ಷಿ. ಕೂಡ್ಲಿಗಿ ಇಷ್ಟೊಂದು ಆಧುನಿಕತೆಯನ್ನು ಮೈಗೂಡಿಸಿಕೊಳ್ಳುತ್ತಿದೆಯೆಂದರೂ, ತಾಲೂಕು ಕೇಂದ್ರವಾಗಿದೆಯೆಂದರೂ ಇಂತಹ ವಿಶಿಷ್ಟವಾದ ತಳಸಮುದಾಯದ ಆಚರಣೆಯನ್ನು ಇನ್ನೂ ಉಳಿಸಿಕೊಂಡುಬಂದಿರುವುದು ನಿಜಕ್ಕೂ ವಿಶಿಷ್ಟವಾದುದು.

ಈ ಜಾತ್ರೆಯ ಹೆಸರಿನಲ್ಲಿಯೂ ವಿಶೇಷತೆಯಿದೆಯೆಂದು ನನಗನಿಸುತ್ತದೆ. ಗುಳೆ ಅಂದರೆ ಗುಳೆ ಹೋಗುವುದು ಸರಿ. ಆದರೆ ಅದಕ್ಕೊಂದು ದೇವತೆಯಾಗಿರುವ ಲಕ್ಕಮ್ಮನ ಹೆಸರು. ಲಕ್ಕಮ್ಮ ಹೆಸರು ಬಹುಶ: ಶಿಷ್ಟ ದೇವತೆಯಾಗಿರುವ ಲಕ್ಷ್ಮಿಯಿಂದ ಬಂದಿರಬಹುದೇ ಎಂಬುದು ನನ್ನ ಊಹೆ. ಲಕ್ಷ್ಮಿ ತಳ ಸಮುದಾಯದಲ್ಲಿ ಲಕುಮಿಯಾಗುತ್ತಾಳೆ, ಲಕ್ಕಮ್ಮನೂ ಆಗಿರಬಹುದೇ ? ಎಂಬುದು ನನ್ನ ವಿಚಾರ. ಇದಕ್ಕೆ ಸಂಶೋಧಕರೇ ಉತ್ತರಿಸಬೇಕು. ಆದರೆ ನಾನು ಗಮನಿಸಿರುವಂತೆ ಇಡೀ ಕೂಡ್ಲಿಗಿ ತಾಲೂಕು ತಳ ಸಮುದಾಯದ ಜನಾಂಗವನ್ನು ಹೊಂದಿರುವುದರಿಂದ, ಇಲ್ಲಿನ ದೇವರು, ದೇವತೆಗಳೂ ಸಹ ತಳ ಸಮುದಾಯವನ್ನೇ ಪ್ರತಿನಿಧಿಸುವುದರಿಂದಾಗಿ ಲಕ್ಕಮ್ಮ ದೇವತೆ ಲಕ್ಷ್ಮಿಯಿಂದ ಬಂದಿರಬಹುದು ಎಂಬುದು ನನ್ನ ವಿಚಾರ. ಹೇಗೆ ಅಹೋಬಲ-ಓಬಳ ಆಗಿದೆಯೋ, ಕೊತ್ತಳ ಆಂಜನೇಯ-ಕೊತ್ಲಯ್ಯ ಆಗಿದೆಯೋ ಹಾಗೆಯೇ ಲಕ್ಷ್ಮಿ-ಲಕ್ಕಮ್ಮ ಆಗಿರಬಹುದೇ ? ಇಡೀ ಗ್ರಾಮ ಖಾಲಿಯಾಗುವುದೆಂದರೆ ಅಲ್ಲಿನ ಗ್ರಾಮದ ಕಳೆಯೇ ಹೊರಬಂದಂತೆ. ಹೀಗಾಗಿ ನನಗೆ ಈ ರೀತಿಯ ವಿಚಾರ ಬಂತು. ಅದೇನೇ ಇರಲಿ ಗುಳೇ ಲಕ್ಕಮ್ಮ ಜಾತ್ರೆ ಮಾತ್ರ ಬಹು ವಿಶಿಷ್ಟವಾದ ಆಚರಣೆಯೇ ಸರಿ.

ಜಾತ್ರೆಯಂದು ಎಲ್ಲೆಲ್ಲಿಂದಲೋ ಬಂದು ಊರು ಸೇರಬೇಕಾದ ಜನ, ಊರ ದೇವತೆಯೊಂದಿಗೆ ಊರನ್ನೇ ಬಿಡುತ್ತಾರೆ. ಇದರೊಂದಿಗೆ ಇಡೀ ಪಟ್ಟಣವೇ ಖಾಲಿಯಾಗುತ್ತದೆ. ಕಳೆದ ಹಲವಾರು ದಶಕಗಳಿಂದ ಅನೂಚಾನವಾಗಿ, ಸಂಪ್ರದಾಯದಂತೆ ನಡೆದುಕೊಂಡು ಬಂದಿರುವ ಈ ಜಾತ್ರೆಯ ದಿನ ಪಟ್ಟಣದಲ್ಲಿ ಒಂದು ನರಪಿಳ್ಳೆ ಅಥವಾ ಸಾಕುಪ್ರಾಣಿಗಳಾವವೂ ಕಣ್ಣಿಗೆ ಬೀಳುವುದಿಲ್ಲ. ಇಡೀ ಊರು ಬಿಕೋ ಅನ್ನುತ್ತದೆ. ಇಲ್ಲಿ ಯಾವುದೇ ರೀತಿಯ ಕರ್ಫ್ಯೂ ವಿಧಿಸದಿದ್ದರೂ ಜನತೆ ತಮ್ಮ ಮನೆಗಳಿಗೆ ಬೀಗ ಹಾಕಿ ಊರ ಹೊರಗೆ ತೋಟಗಳಲ್ಲಿ ನೆಮ್ಮದಿಯಾಗಿ ಸೇರುತ್ತಾರೆ. ಎಂಥ ವೈಚಿತ್ರ್ಯವಲ್ಲವೆ ?

FB_IMG_1490918186577ಗುಳೆಲಕ್ಕಮ್ಮನ ಜಾತ್ರೆಯ ಹೆಸರೇ ಸೂಚಿಸುವಂತೆ ಇಡೀ ಊರಿನ ಜನರು ಒಂದು ದಿನದ ಮಟ್ಟಿಗೆ ಗುಳೆ ಹೋಗುತ್ತಾರೆ. ಊರನ್ನು ಖಾಲಿ ಮಾಡುವುದರಿಂದ ಊರು ಸ್ವಚ್ಛವಾಗಿ, ಜಾನುವಾರುಗಳಿಗೆ, ಜನತೆಗೆ ಯಾವುದೇ ರೀತಿಯ ಕಾಯಿಲೆಗಳು ಬರಲಾರವೆಂಬುದು ಜನಪದರ ನಂಬಿಕೆ. ಹಿಂದೆ ಪ್ಲೇಗ್ ಮಾರಿ ಬರುತ್ತಿದ್ದ ಸಂದರ್ಭಗಳನ್ನು ನಾವಿಲ್ಲಿ ನೆನೆಯಬಹುದಾಗಿದೆ. ಆಗ ಇಡೀ ಗ್ರಾಮಗಳೇ ಖಾಲಿಯಾಗಿ ಹೊರಭಾಗದಲ್ಲಿ ಟೆಂಟ್ ಹಾಕಿಕೊಂಡು ವಾಸ ಮಾಡುತ್ತಿದ್ದರು. ಪ್ಲೇಗ್ ಮಾರಿ ಹೋದರೂ ಈ ಆಚರಣೆ ಸಾಂಪ್ರದಾಯಿಕವಾಗಿ ಉಳಿದುಕೊಂಡೇ ಬಂದಿರುವುದು ಇದರ ವಿಶೇಷ.

ಇನ್ನೂ ಈ ಜಾತ್ರೆಯ ಆಚರಣೆಗಳ ಬಗ್ಗೆ ನೋಡುವುದಾದರೆ, ಜಾತ್ರೆ ಆರಂಭದ ಮುನ್ನ ದಿನ ರಾತ್ರಿ ದೇವಿಯನ್ನು ಪಟ್ಟಣದ ಊರಮ್ಮ ಬಯಲಿನಲ್ಲಿರುವ ಗುಳೆಲಕ್ಕಮ್ಮನ ಕಟ್ಟೆಯ ಮೇಲೆ ದೇವಿಯನ್ನು ತಂದು ಕೂಡಿಸಲಾಗುತ್ತದೆ. ಮರುದಿನ ಬೆಳಗಿನ ಜಾವ ೩ ಗಂಟೆಯಿಂದ ಪಟ್ಟಣ ಮಹಿಳೆಯರೆಲ್ಲ ದೇವಿಗೆ ಉಡಿಯನ್ನು(ಕಾಯಿ, ಅಕ್ಕಿ, ಬೇಳೆ, ಬೆಲ್ಲ, ಹಸಿರುಬಳೆ, ದಕ್ಷಿಣೆ ತುಂಬಿದ ಮೊರ) ತೆಗೆದುಕೊಂಡು ಹೋಗಿ ಆರ್ಪಿಸಲಾಗುವುದು. ಬೆಳಿಗ್ಗೆ ಬಂದಂತಹ ದವಸ ಧಾನ್ಯಗಳನ್ನು ಊರಿನ ಪ್ರಮುಖರ‍್ಲೆಲ ಸೇರಿ ಬೇರ್ಪಡಿಸುವರು. ಈ ಕಾರ್ಯಕ್ರಮ ಮುಗಿಯುವ ಹೊತ್ತಿಗೆ ಪಟ್ಟಣದಲ್ಲಿ ಎಲ್ಲ ಮನೆಗಳು ಖಾಲಿಯಾಗುತ್ತವೆ. ನಂತರ ಸಕಲ ವಾದ್ಯಗಳೊಂದಿಗೆ ಗುಳೆಲಕ್ಕಮ್ಮ ಊರಲ್ಲಿ ಒಂದು ಸುತ್ತು ಹಾಕಿ ಬರುವಳು. ಪಟ್ಟಣದಲ್ಲಿ ಯಾರೂ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡ ನಂತರ ಊರ ಬಾಗಿಲಿಗೆ ಬೇಲಿಯನ್ನು ಹಾಕಲಾಗುವುದು. ಇಲ್ಲಿಗೆ ಒಂದು ಹಂತ ಮುಗಿಯುತ್ತದೆ.

ಲಕ್ಕಮ್ಮನು ಊರ ಹೊರಗೆ ಹೋಗುವಾಗ ಊರಿನ ಆಯಗಾರರ ಮನೆಯವರು ದೇವಿಯ ಜೊತೆಗೆ ತಮಗೆ ಬೇಕಾದ ಸಾಮಾನುಗಳನ್ನು ಕಟ್ಟಿಕೊಂಡ ಪುಟ್ಟಿಯನ್ನು ತಲೆಯ ಮೇಲೆ ಹೊತ್ತುಕೊಂಡು ಹೊರಡುವರು. ಊರಮ್ಮನ ಬಾವಿಯ ಹಾದಿಯಲ್ಲಿ ಹೊರಟ ಗುಳೆಲಕ್ಕಮ್ಮನನ್ನು ಊರ ಹೊರಗೆ ಹಾಕಿರುವ ಪೌಳಿಗಳಲ್ಲಿ ಹಾದು ಪಟ್ಟಣದಿಂದ ಸುಮಾರು ೪ ಕಿ.ಮೀ. ದೂರದಲ್ಲಿರುವ ಗೋವಿಂದಗಿರಿ ಬಳಿ ಇರುವ ಅಲದ ಮರದ ಬಳಿ ಸ್ಥಾಪಿಸಲಾಗುವುದು. ಬಾಣಂತಿಯರು, ಅಂಗವಿಕಲರು, ಮುದುಕರು, ಸಾಕು ಪ್ರಾಣಿಗಳು ಸೇರಿದಂತೆ ಒಂದನ್ನು ಬಿಡದೇ ಮನೆಗಳಿಗೆ ಬೀಗ ಹಾಕಿಕೊಂಡು ಎಲ್ಲವನ್ನೂ ತಮ್ಮೊಂದಿಗೆ ಕರೆದುಕೊಂಡು ಬೆಳಿಗ್ಗೆ ಊರನ್ನು ಖಾಲಿ ಮಾಡುವರು.

ತಮ್ಮೊಂದಿಗೆ ಬೇಕಾಗುವ ಸರಕು-ಸಾಮಾನುಗಳು, ಆಡುಗೆ ಮಾಡಲು ಬೇಕಾಗುವ ಪಾತ್ರೆ-ಪಡುಗಗಳುನ್ನು ಕಟ್ಟಿಕೊಂಡು ಊರನ್ನು ಖಾಲಿ ಮಾಡಲಾಗುವುದು. ಹೀಗೆ ಗುಳೆ ಹೊರಟ ಜನ ಊರ ಹೊರೆಗಿನ ತೋಟಗಳಲ್ಲಿ, ತಮ್ಮ ಸ್ವಂತ ತೋಟಗಳಲ್ಲಿ ಅಥವಾ ತಮಗೆ ಅನುಕೂಲವಾದ ಸ್ಥಳಗಳಲ್ಲಿ ಬಿಡಾರವನ್ನು ಹಾಕಿಕೊಂಡು, ಅಡುಗೆ ಮಾಡಿ, ಸುತ್ತಮುತ್ತಲಿನ ಊರಿನ ಜನರನ್ನು, ತಮ್ಮ ಸ್ನೇಹಿತರು, ಸಂಬಂಧಿಕರೊಂದಿಗೆ ಊಟ ಮಾಡಿ ಜಾತ್ರೆಯ ಸಂಪ್ರದಾಯದಂತೆ ನಡೆದುಕೊಳ್ಳುವರು.

ಮತ್ತೆ ಗೋಧೂಳಿ ಸಮಯಕ್ಕೆ ದೇವಿಯನ್ನು ಪಟ್ಟಣಕ್ಕೆ ಕರೆತರಲಾಗುವುದು. ಪಟ್ಟಣಕ್ಕೆ ಬರುವಾಗ ಗುಳೆ ಹೋದ ಜನರೆಲ್ಲ ದೇವಿಯ ಹಿಂದೆಯೇ ಬರುವುದರೊಂದಿಗೆ ಜಾತ್ರೆ ಪೂರ್ಣಗೊಳ್ಳುವುದು.

ಗುಳೆ ಹೋದ ನಂತರ ಪರಊರಿನ ಯಾರೂ ಊರೊಳಗೆ ಪ್ರವೇಶಿಸದಂತೆ ನಿರ್ಬಂಧಿಸಲಾಗುವುದು. ಇಡೀ ಊರು ಕರ್ಪ್ಯೂ ವಿಧಿಸಿದಂತೆ ಬಿಕೋ ಅನ್ನುತ್ತಿರುತ್ತದೆ. ಎಷ್ಟು ವಿಶೇಷವಾದ ಆಚರಣೆಯಲ್ಲವೆ ?

Leave a Reply

Your email address will not be published.