ಕುರುಡು ಕಾಂಚಾಣ

ಫಾತಿಮಾ ಸುರಯ್ಯ

ಮುಂಗಾರು ಕಥಾ ಸ್ಪರ್ದೆಯಲ್ಲಿ ಬಹುಮಾನ ಪಡೆದ ಕತೆ ‘ಕುರುಡು ಕಾಂಚಾಣ’

ರಸ್ತೆ ದಾಟಿ ಕವಲು ದಾರಿಯಲ್ಲಿ ಹೆಜ್ಜೆ ಹಾಕುತ್ತಲೇ ಇಜಾರಿನ ಕಿಸೆಯನ್ನು ತಡಕಾಡಿದ ಚಂದ್ರು. ದಂಟು ಕೈಗೆ ತಗುಲಿದಾಗ ನೆಮ್ಮದಿಯಾಯ್ತು. ಮಡದಿ ಮಾದೇವಿ ಎಚ್ಚರಿಸುತ್ತಲೇ ಇದ್ದಳು ಜಾಗ್ರತೆಯಾಗಿ ನೋಡಿಕೋ…… ಬೀಳಿಸಿಬಿಟ್ಟೀಯ ಜೋಕೆ. ಬಾರಿ ಬಾರಿಗೂ ಎಚ್ಚರಿಸಿ ಇಜಾರಿನ ಕಿಸೆಯಲ್ಲಿ ತುರುಕಿದ್ದಳು.

ಹೆಜ್ಜೆ ತೀವ್ರಗೊಳಿಸುತ್ತಿದ್ದಂತೆ ಸೂರ್ಯ ಮೇಲೇರಿ ಮೇಲೇರಿ ತನ್ನ ಇರವನ್ನು ಜಗತ್ತಿಗೇ ತೋರ್ಪಡಿಸುವಂತೆ ತೋರಿ ಬರುತ್ತಿದ್ದ. ಬಿಸಿಲು ಬೇಗೆಯನ್ನು ಲೆಕ್ಕಿಸದೇ ಹೆಜ್ಜೆ ಹಾಕುತ್ತಿದ್ದರೂ ಪಕ್ಕದಲ್ಲೆಲ್ಲೋ ಮರಗಿಡಗಳಿಲ್ಲದೇ ಬಿಸಿಲ ಝಳ ಮುಖಕ್ಕೇ ಬಡಿಯುತ್ತಿತ್ತು. ಸವೆದ ಅರ್ಧ ಚಪ್ಪಲಿ ಡಾಂಬರು ರಸ್ತೆಯ ಬಿಸಿಯನ್ನು ತಡೆಯುವಲ್ಲಿ ವಿಫಲವಾಗಿತ್ತು. ಬಿಸಿ ನೆಲದ ಕಾವು ಉಂಗುಷ್ಟದಿಂದ ನೇರ ನೆತ್ತಿಗೇ ತಲುಪುವಂತೆ ಭಾಸವಾಗುತ್ತಿತ್ತು. ಇನ್ನೂ ಎಷ್ಟೊಂದು ದೂರ ಹೆಜ್ಜೆ ಹಾಕಬೇಕು. ಕಿಸೆಯಲ್ಲಿ ಒಂದಿಪ್ಪತ್ತು ರೂಪಾಯಿಯಾದರೂ ಇದ್ದಿದ್ದರೆ ಆಟೋದಲ್ಲಾದರೂ ಹೋಗಬಹುದಿತ್ತು. ತನ್ನ ಪರಿಸ್ಥಿತಿಯ ಬಗ್ಗೆ ಮರುಕ ಬಂದೊಡನೆ ಪತ್ನಿಯ ಮಾತು ನೆನಪಾಯಿತು. “ಇನ್ನು ಮುಂದೆ ನಮಗೆ ಒಳ್ಳೆಯ ದಿನಗಳೇ”.

ಅರ್ಥವಾಗದವನಂತೆ ಆಕೆಯತ್ತ ದಿಟ್ಟಿಸಿದ್ದ. ಆಕೆ ಕಿವಿಯಲ್ಲಿ ಪಿಸುಗುಟ್ಟುತ್ತಾ… ಬಿಡಿಸಿ ಹೇಳಿದಾಗ ಕಾಲುಗಳು ನೆಲದ ಮೇಲೆ ನಿಂತಿರಲಿಲ್ಲ. ಹುರ್ರೇ… ಎಂದು ಕೂಗಿಕೊಳ್ಳುತ್ತಾ… ಕುಣಿದಾಡುವಂತಾಗಿತ್ತು.
ಮೊದಲು ಎರಡು ಲಕ್ಷ ಹೊಂದಿಸಿ ತನ್ನಿ ಆಮೇಲೆ ಕುಣಿದಾಡುವಿರಂತೆ ಹೆಂಡತಿ ತಿವಿದಾಗ ಎರಡು ಲಕ್ಷ… ಎಲ್ಲಿಂದ ಹೊಂದಿಸಲಿ ತೆರೆದ ಬಾಯಿ ಮುಚ್ಚದೇ ಕೇಳಿದ… ರಾತ್ರಿಯಿಡೀ ಚಿಂತಿಸಿ ಹೈರಾಣಾಗುವುದರೊಂದಿಗೆ ಬೆಳಕು ಹರಿದಿತ್ತು.
ಹಿರಿಮಗಳ ಓಲೆ. ಕಿರಿಮಗಳ ಲೋಲಾಕು, ಮಡದಿಯ ಒಂದೆಳೆ ಸರ, ಕಿಲಿಯೋಲೆ, ಸವೆದ ಉಂಗುರ ಇದ್ದ ಚೂರು ಪಾರು ಚಿನ್ನವನ್ನೆಲ್ಲಾ ಗಂಟು ಕಟ್ಟಿ ಎರಡು ಲಕ್ಷ ಸಿಗಬಹುದೇನೋ ಎಂಬಂತೆ ಹೊರಟು ಬಂದಾಗಿತ್ತು.

ಪ್ರತಿಯೊಂದನ್ನೂ… ತಿಕ್ಕಿ ತಿಕ್ಕಿ ಪರೀಕ್ಷಿಸುತ್ತಿದ್ದ ಚಿನಿವಾರನನ್ನೇ ತದೇಕಚಿತ್ತದಿಂದ ವೀಕ್ಷಿಸುತ್ತಿದ್ದ ಚಂದ್ರು ಉದ್ದ ತೋಳಿನ ಬಿಳಿಯ ಶರ್ಟು ಅದೇ ಬಣ್ಣದ ಲುಂಗಿ ಕಣ್ಣಿಗೆ ದಪ್ಪ ಕನ್ನಡಕ ಮಿಂಚುವಂತಿರುವ ಚಿನ್ನದ ಬಣ್ಣದ ವಾಚು, ಆಚೆ-ಈಚೆ ತಿರುಗುವಾಗ ಫಳಕ್ಕನೇ ಹೊಳೆಯುವ ಉಂಗುರ ಬಹುಶಃ ವಜ್ರದ್ದಿರಬೇಕು ನನಗೂ ಅದೇ ತರಹದ ಉಂಗುರವನ್ನು ಖರೀದಿಸಬೇಕು ಇನ್ನೆರಡು ತಿಂಗಳ ಬಳಿಕ ನಾನು ಇದೇ ಸೇಟ್‍ಜೀ ತರಹ ಡ್ರೆಸ್ ಮಾಡಿಕೊಂಡು ಇಲ್ಲಿಗೆ ಬರಬೇಕು. ಇದೇ ತರಹ ಕ್ರಾಪ್ ಬಾಚಿಕೊಂಡರೆ ನಾನು ಇದಕ್ಕಿಂತಲೂ ಚೆನ್ನಾಗಿ ಕಾಣಿಸಬಹುದು. ಓರಗೆಯವರು ಬಂಧುಗಳೆಲ್ಲಾ ತನ್ನನ್ನು ಎಷ್ಟೊಂದು ಆಧರಿಸಿ ಉಪಚರಿಸಬಹುದು. ಈಗ ತುಚ್ಛವಾಗಿ ಕಂಡವರೆಲ್ಲಾ ಎಂಜಲಿಗೆ ಮುತ್ತಿದ ನೊಣದಂತೆ ನಮ್ಮ ಮನೆ ಬಾಗಿಲಲ್ಲೇ ಠಿಕಾಣಿ ಹೂಡಬಹುದು. ಅದಕ್ಕೆಲ್ಲಾ ಅವಕಾಶ ಮಾಡಿಕೊಡಬಾರದು. ಗೇಟಿನ ಬಳಿ ಕಾಯಲು ಒಬ್ಬ ಗೂರ್ಖನನ್ನು ನೇಮಿಸಬೇಕು. ನಾನು ಬರುವಾಗ ಹೋಗುವಾಗಲೆಲ್ಲಾ ಸೆಲ್ಯೂಟ್ ಹೊಡೆದು ಎದ್ದು ನಿಂತು ನನ್ನನ್ನು ಸ್ವಾಗತಿಸಬೇಕು.

ಇದರಲ್ಲಿ ಕ್ಯಾರೆಟ್ ಕಮ್ಮಿ. ಚಿನಿವಾರನ ಗೊಣಗುವಿಕೆ ಚಂದ್ರುವನ್ನು ಕಲ್ಪನಾ ಲೋಕದಿಂದ ವಾಸ್ತವಕ್ಕೆ ತಂದಿತು. ಅರ್ಥವಾಗದವನಂತೆ ತರಕಾರಿಗೂ ಇದಕ್ಕೂ ಎಲ್ಲಿಂದ ಸಾಮ್ಯ ಎಂದು ಯೋಚಿಸುತ್ತಾ… ಮುಗ್ಧತೆಯಿಂದಲೇ ಚಿನಿವಾರನತ್ತ ದಿಟ್ಟಿಸತೊಡಗಿದ. ಲೋಲಾಕು ತಿಕ್ಕುವುದನ್ನು ಕಾಣುವಾಗ ಕಿರಿಮಗಳು ಪಿಂಕಿಯ ನೆನಪಾಯಿತು. ಕೊಡುವುದಿಲ್ಲವೆಂದು ಎಷ್ಟೊಂದು ಹಠ ಹಿಡಿದಿದ್ದಳು ತನ್ನ ಅಂಗವೊಂದು ಕಳಚಿದಂತೆ ನೆಲಕ್ಕೆ ಬಿದ್ದು ಹೊರಳಾಡುತ್ತಾ… ರಂಪಾಟ ನಡೆಸುತ್ತಿದ್ದವವಳನ್ನು ಸಮಾಧಾನ ಪಡಿಸಲು ಇದ್ದ ಬುದ್ಧಿಯನ್ನೆಲ್ಲಾ ಖರ್ಚು ಮಾಡಬೇಕಾಗಿ ಬಂದಿತ್ತು. ಕೊನೆಗೂ ಇದಕ್ಕಿಂತ ಒಳ್ಳೆಯದನ್ನೇ ತೆಗೆದು ಕೊಡುವ ಎಂದರೂ ಸಮಾಧಾನವಾಗಿರಲಿಲ್ಲ.

ಎಲ್ಲವೂ ಅಸಲಿ ಎಂದರಿವಾಗುತ್ತಲೇ ಕತ್ತೆತ್ತಿ ವೀಕ್ಷಿಸಿದ ಚಿನಿವಾರನ ಮುಖದಲ್ಲಿ ಕನಿಕರ ಮಡುಗಟ್ಟಿ… ನಿಂತಿತ್ತು. ಪಾಪ ಏನು ತಾಪತ್ರಯವೋ… ಇದ್ದ ಚೂರು ಪಾರು ಚಿನ್ನವನ್ನೆಲ್ಲಾ ಮಾರಲು ತರಬೇಕಾದರೆ ಎಷ್ಟೊಂದು ಸಂಕಷ್ಟವಿರಬಹುದು. ಹಾಗೆಂದು ಕೇಳಲು ಸಾಧ್ಯವೇ…. ತನಗೇ ತಗಲಿಕೊಂಡರೆ…. ಯೋಚಿಸುತ್ತಲೇ ತೂಗುವ ಕಾಯಕದಲ್ಲಿ ತೊಡಗಿದ.
ಎಲ್ಲದರ ಒಟ್ಟು ಮೊತ್ತ ಎಪ್ಪತ್ತು ಸಾವಿರ ಎಂದೆನ್ನುವಾಗ ಚಂದ್ರುವಿನ ಮುಖ ಅಮವಾಸ್ಯೆಯ ಚಂದ್ರನಂತಾದುದನ್ನು ಕಂಡು ಇಪ್ಪತ್ತೆರಡು ಕ್ಯಾರೆಟ್ ಚಿನ್ನದಿಂದ ಮಾಡಿದ ಆಭರಣ ಅಲ್ಲ ಇದರಲ್ಲಿರುವುದು. ಹದಿನೆಂಟು ಕ್ಯಾರೆಟ್ ಹಾಗಿದೆ ದುಡ್ಡು ಕಮ್ಮಿ ಸಿಗುವುದು. ಇಪ್ಪತ್ತೆರಡು ಕ್ಯಾರೆಟ್ ಆಗಿದ್ದರೆ ಹೆಚ್ಚು ಮೊತ್ತ ಸಿಗುತ್ತಿತ್ತು. ಏನ್ ಮಾಡ್ತೀರಿ? ಮಾರ್ತೀರಾ ಹೇಗೆ?

ಚಂದ್ರುವಿನ ಮನದಲ್ಲಿ ಆಗಲೇ ಚಿಂತನ ಮಂಥನ ಶುರುವಾಗಿತ್ತು. ಬರೀ ಎಪ್ಪತ್ತು ಸಾವಿರದಿಂದ ಕಾರ್ಯ ಕೈಗೂಡುವುದಿಲ್ಲ. ಇನ್ನು ಎರಡು ಲಕ್ಷಕ್ಕೆ ಎಷ್ಟೊಂದು ಮೊತ್ತ ಕೂಡಬೇಕು. ಅದೆಲ್ಲ ಹೊಂದಿಸುವುದು ಎಲ್ಲಿಂದ? ಹೊಂದಿಸದಿದ್ದರೆ ಕನಸು ನನಸಾಗುವುದಾದರೂ ಹೇಗೆ? ಇಲ್ಲಿ ನೋಡಿದರೆ ಇವನು ಕ್ಯಾರೆಟ್ ಬೀಟ್‍ರೋಟ್ ಅಂತ ಏನೇನೋ ಅಂತಿದ್ದಾನೆ. ಅದೆಲ್ಲಾ ನನಗೆಲ್ಲಿ ಅರ್ಥವಾಗಬೇಕು. ಒಟ್ಟಿನಲ್ಲಿ ನನಗೀಗ ದುಡ್ಡು ಮುಖ್ಯ. ಆಗಲಿ ಮಾರ್ತೀನಿ ಎಂದು ತಲೆಯಾಡಿಸಿದ.
ಚಿನಿವಾರ ಎಣಿಸಿಕೊಟ್ಟ ಗರಿಗರಿ ನೋಟಿನ ಕಟ್ಟನ್ನು ಇಜಾರಿನ ಕಿಸೆಯಲ್ಲಿ ಭದ್ರಪಡಿಸಿಕೊಂಡರೂ ಮನ ಚಿಂತೆಯ ಗೂಡಾಗಿತ್ತು. ಉಳಿದ ಮೊತ್ತವನ್ನು ಎಲ್ಲಿಂದ ಹೊಂದಿಸಲಿ ಎಂಬ ಗುಣಾಕಾರ ಭಾಗಾಕಾರದಲ್ಲೇ ಮನೆಯಂಗಳ ತಲುಪಿಯಾಗಿತ್ತು. ಉಸ್ಸಪ್ಪ ಎಂದು ಉಸಿರು ಬಿಡುತ್ತಲೇ ವರಾಂಡದ ಪಕ್ಕದಲ್ಲಿದ್ದ ಕಂಬಕ್ಕೆ ಒರಗಿದಂತೆ ಕುಕ್ಕರಿಸಿ ಬೈರಾಸಿನ ಚುಂಗಿನಿಂದ ಗಾಳಿ ಬೀಸುತ್ತಲೇ ಮಗಳು ತಂದು ಕೊಟ್ಟ ಮಜ್ಜಿಗೆ ಪಾನಕ ಕುಡಿದ ಮೇಲೆ ಚೈತನ್ಯ ಬಂದಂತಾಯಿತು. ಎದ್ದು ಅಡಿಗೆ ಮನೆಗೆ ಸಾಗಿದವನೇ ಒಲೆಯ ದಿಂಡೆಯ ಮೇಲೆ ಬಿಡಿಸಿಟ್ಟ ಬೀಡಿಯಿಂದ ಒಂದನ್ನು ತೆಗೆದು ಹೆಬ್ಬೆರಳು ಮತ್ತು ತೋರುಬೆರಳುಗಳ ಮಧ್ಯೆ ಹಿಡಿದು ತಿರುವಿದ. ಪರಪರ ಸದ್ದು ಕೇಳಿ ಬಂದಾಗ ಅದರ ಗುಣಮಟ್ಟ ಖಾತ್ರಿಯಾಗಿ ನೆಮ್ಮದಿಯಾಯ್ತು. ಏಳೆಂಟು ಬೀಡಿಯನ್ನು ಅಂಗಿಯ ಕಿಸೆಗೆ ತುರುಕಿ ಒಂದು ಬೀಡಿಯನ್ನು ಒಲೆಯ ಬಳಿ ಒಯ್ದು ಅದರ ತುದಿಯನ್ನು ಕೆಂಡದ ಬದಿಗೆ ಸೋಕಿಸಿದ. ಬೆಂಕಿ ತಾಗಿದ ಬೀಡಿಯಿಂದ ಹೊಗೆ ಬರತೊಡಗಿದಂತೆ ತುಟಿಗಳೆರಡರ ಮಧ್ಯೆ ಸಿಕ್ಕಿಸಿ ತೋರು ಬೆರಳು ಮತ್ತು ಮಧ್ಯ ಬೆರಳುಗಳಲ್ಲಿ ಹಿಡಿದು ದಂ ಎಳೆಯತೊಡಗಿದ. ಕಷ್ಟ ಚಿಂತೆ ನೋವುಗಳನೆಲ್ಲಾ ಕ್ಷಣಕಾಲ ಮರೆತಂತೆ ಮುಂಬಾಗಿಲ ಬಳಿ ಕೂತು ಏಕಾಗ್ರತೆಯಿಂದ ದಂ ಎಳೆಯತೊಡಗಿದ.

ಮೊಬೈಲ್‍ನಲ್ಲಿ ಮಾತಾಡುತ್ತಿದ್ದ ಮಗಳು ಉಷಾಳನ್ನು ದಂಪತಿಗಳಿಬ್ಬರು ತದೇಕ ಚಿತ್ತದಿಂದ ದಿಟ್ಟಿಸುತ್ತಿದ್ದರು. ಅರ್ಧಂಬರ್ಧ ಅರಿವಾದರೂ ಕುತೂಹಲಗೊಂಡ ಕಣ್ಣಿನಿಂದ ಮಗಳತ್ತ ನೋಡುತ್ತಲೇ ಅವಳೇನನ್ನುವಳೋ ಎಂದು ಆಲಿಸತೊಡಗಿದರು.
ವಾರದೊರಳಗೆ ಕಟ್ಟಿಯಾಗಬೇಕಂತೆ, ಗಡುವು ಮುಗಿದ ಮೇಲೆ ಕಟ್ಟಿ ಪ್ರಯೋಜನವಿಲ;್ಲ ಆದಷ್ಟು ಬೇಗ ಕಟ್ಟಿದರೆ ಮಾತ್ರ ನಿಮ್ಮ ದುಡ್ಡು ನಿಮ್ಮ ಖಾತೆಗೆ ಜಮಾ ಆಗ್ತದೆ ಎಂದರಮ್ಮ ಈಗ ಏನ್ ಮಾಡೋದು ಸಪ್ಪೆ ಮೋರೆಯೊಂದಿಗೆ ಕೇಳಿದ ಮಗಳನ್ನು ಕಂಡು ದಂಪತಿಗಳಿಬ್ಬರೂ ಮುಖ ಮುಖ ನೋಡಿಕೊಂಡರು. ಚಂದ್ರು ಏನೋ ಯೋಚಿಸುತ್ತಾ ಕೈಯಲ್ಲಿದ್ದ ಅರ್ಧ ಸುಟ್ಟ ಬೀಡಿಯನ್ನೊಮ್ಮೆ ಆಪಾದಮಸ್ತಕ ದಿಟ್ಟಿಸುತ್ತಾ ಅದರ ತುದಿಯಲ್ಲಿದ್ದ ಬೂದಿಯನ್ನು ಕೊಡವಿದ. ಯಾರಿಂದಲಾದರೂ ಸಾಲ ತಗೊಂಡರೆ ಹೇಗೆ ಕೇಳುತ್ತಲೇ ಬೀಡಿಯನ್ನು ತುಟಿಗಿಟ್ಟು ದೀರ್ಘವಾಗಿ ದಂ ಎಳೆದ ಬೀಡಿ ಕುತ್ತಿಯನ್ನು ಕಾಲಡಿ ಹಾಕಿ ತುಳಿದು ಬೆಂಕಿ ನಂದಿಸಿದ.

ನಮಗೆ ಸಾಲ ಕೊಡುವವರ್ಯಾರು? ಅದೂ ಅಷ್ಟೊಂದು ಮೊತ್ತವನ್ನು ಮಾದೇವಿ ಹೇಳಿದ್ದರಲ್ಲಿಯೂ ಹುರುಳಿದೆ ಎನಿಸಿತು. ಒಂದು ಕಟ್ಟು ಬೀಡಿ ಸಾಲ ಕೊಡಲೇ ಹಿಂದೆ ಮುಂದೆ ನೋಡ್ತಾರೆ ಅಂಥಾದರಲ್ಲಿ ಈ ಇಷ್ಟೊಂದು ದೊಡ್ಡ ಮೊತ್ತವನ್ನು ಇದೆಲ್ಲಾ ಆಗದ ಹೋಗದ ಮಾತು
ನಿನ್ನ ಅಣ್ಣನಿಂದಾದರೂ ಕೇಳಿಕೊಂಡು ಬಾರೇ, ಚಂದ್ರು ಪತ್ನಿಯನ್ನು ಪುಸಲಾಯಿಸತೊಡಗಿದ. “ ಏನ್ರಿ ನೀವು ಹೋಗಿ ಹೋಗಿ ಅಣ್ಣನಿಂದ ಕೇಳುವುದಾ? ಅವನಾದರೋ ಪತ್ನಿ ಹಾಕಿದ ಗೆರೆ ದಾಟುವವನಲ್ಲ ಅತ್ತಿಗೆ ತನಿಖಾಧಿಕಾರಿಯಂತೆ ಪ್ರತಿಯೊಂದನ್ನು ಕೆದಕಿ ಕೆದಕಿ ನಮಗೆ ಸಿಗುವ ದುಡ್ಡನ್ನು ತಾನೇ ಕಬಳಿಸಹುದು. ಅವಳ ನರಿ ಬುದ್ಧಿ ನಮಗೇನು ಹೊಸದಾ…
ಹೋಗ್ಲಿ ನಿನ್ನ ತಮ್ಮನ ಹತ್ತಿರನಾದ್ರೂ ಇಸ್ಕೊಂಡು ಬಾ…
ಬೇಡಪ್ಪ ಅವನೊಬ್ಬ ವಿಚಾರವಾದಿ ಅದು ಹಾಗೆ ಇದು ಹೀಗೆ ಅಂತ ಹೇಳಿ ಮಾತಿನಲ್ಲಿ ಮರುಳು ಮಾಡಿ ನಮ್ಮನ್ನೇ ಹೋಗದಂತೆ ತಡೆಯುತ್ತಾನಷ್ಟೇ ಅಲ್ಲದೆ ಈಗಿನ ಕಾಲದಲ್ಲಿ ಎಲ್ಲರೂ ಕಾಲು ಎಳೆಯುವವರೇ ಇರುವುದು. ಯಾರ ಉದ್ಧಾರವನ್ನೂ ಯಾರೂ ಸಹಿಸಲ್ಲ.

ಹಾಗಾದರೆ ಈಗ ಏನು ಮಾಡುವುದು. ದೇವರು ಕೊಟ್ಟರೂ ಪೂಜಾರಿ ಬಿಡುವುದಿಲ್ಲ ಎಂಬಂತಾಯಿತಲ್ಲ. ದೊಡ್ಡ ಮೊತ್ತದ ಫ್ರೈಜ್ ಬಂದರೂ ಅವರು ಕೇಳಿದಷ್ಟು ದುಡ್ಡು ಕಟ್ಟಲಾಗುತ್ತಿಲ್ಲವಲ್ಲ. ದುಡ್ಡು ಕಟ್ಟದಿದ್ದರೆ ಅಷ್ಟೊಂದು ದೊಡ್ಡ ಮೊತ್ತ ಕೈ ತಪ್ಪಿ ಹೋಗುವುದಂತೂ ಗ್ಯಾರಂಟಿ. ಉಷಾ ಹಲುಬತೊಡಗಿದಳು.
ಹೇಗೋ ಮೂರು ಕೋಟಿ ಕೊಡ್ತಾರಂತಲ್ಲ. ಅದರಿಂದಲೇ ಎರಡು ಲಕ್ಷ ತೆಗೆದುಕೊಂಡು ಬಿಡಕ್ಕೆ ಹೇಳಕ್ಕ ಹತ್ತು ವರ್ಷದ ತಮ್ಮ ಶೇಖರ ಮಾತಿಗೆ ಹೌದಲ್ಲಾಂತ ಅನಿಸಿದರೂ ಹೋಗೋ ತಲೆಹರಟೆ ಎಂದು ಉಷಾ ತಮ್ಮನನ್ನು ಗದರುತ್ತಾ ತಲೆಗೊಂದು ಮೊಟಕಿದಳು

ದುಡ್ಡು ಸಿಕ್ಕಿದ ಮೇಲೆ ಹೇಗೂ ನಾವು ಸೈಟು ಖರೀದಿಸಿ ದೊಡ್ಡ ಮನೆ ಕಟ್ಟುತ್ತೀವಲ್ಲ, ಈಗ ಈ ಮನೆಯನ್ನು ಮಾರಿದರೆ ಹೇಗೆ? ದುಡ್ಡು ಹೊಂದಿಸಲು ಇದಕ್ಕಿಂತ ಬೇರೆ ದಾರಿ ಇಲ್ಲ ಬೀಡಿ ಹೊಗೆಯನ್ನು ಬಾಯಿಯಿಂದ ಮೂಗಿನಿಂದ ಸುರುಳಿ ಸುರುಳಿಯಾಗಿ ಬಿಡುತ್ತಾ ಕೇಳಿದ ಚಂದ್ರು.

ಬೇಡಪ್ಪ ಮನೆ ಮಾರಿದರೆ ನಾವು ಉಳಕೊಳ್ಳುವುದು ಎಲ್ಲಿ? ಅದಕ್ಕಿಂತ ಮನೆಯನ್ನು ಫೈನಾನ್ಸ್‍ನಲ್ಲಿ ಅಡವಿಟ್ಟು ದುಡ್ಡು ತೆಗೆದರೆ ದುಡ್ಡು ಸಿಕ್ಕಿದ ತಕ್ಷಣ ಬಿಡಿಸಿಕೊಳ್ಳಬಹುದು. ನಾವು ಬೇರೆ ಮನೆ ಕಟ್ಟಿದ ನಂತರ ಇದನ್ನು ಬಾಡಿಗೆಗೆ ಕೊಟ್ಟರಾಯಿತು.
ಮಗಳ ಮಾತಿಗೆ ಮಾದೇವಿಯ ಮುಖ ಅರಳಿತು. ಎಷ್ಟೆಂದರೂ ನನ್ನ ಮಗಳಲ್ವೇ ಬುದ್ಧಿವಂತಿಕೆ ಇರದೇ ಇರುತ್ತಾ… ಮಗಳ ಮೇಧಾವಿತನದಿಂದ ತಾನೇ ಈಗ ಕೋಟಿಗಟ್ಟಳೆ ದುಡ್ಡು ಬರಲು ಸಜ್ಜಾಗಿ ನಿಂತಿರುವುದು. ಇವನಿದ್ದಾನೆ ಇವನಪ್ಪನಂತೆ ನಾಲಾಯಕ್ಕು. ಬಾಯ್ಬಿಟ್ಟು ಹೇಳದಿದ್ದರೂ ಮನದಲ್ಲೇ ಅಂದುಕೊಂಡರು ಮಗನ ಬಗ್ಗೆ.

ಮನೆ ಅಡವಿಟ್ಟ ಒಂದು ಲಕ್ಷ, ಒಡವೆಗಳನ್ನೆಲ್ಲಾ ಮಾರಿದ ಎಪ್ಪತ್ತುಸಾವಿರ ಇನ್ನು ಮೂವತ್ತು ಸಾವಿರವನ್ನು ಎಲ್ಲಿಂದ ಹೊಂದಿಸುವುದು. ಯೋಚಿಸಿದಷ್ಟು ತಲೆ ಕೆಡುತ್ತಿತ್ತೇ ವಿನಃ ಏನೂ ಪ್ರಯೋಜನವಾಗಿರಲಿಲ್ಲ. ಮೂವರೂ ಕುಳಿತು ಗಹನವಾಗಿ ಚರ್ಚಿಸಿ ಯೋಚಿಸುವುದನ್ನು ಕಂಡು ಶೇಖರನ ಪುಟ್ಟ ಮನ ಕೂಡ ಯೋಚನೆಯಲ್ಲಿ ತೊಡಗಿತು. ತಾನು ಎಲ್ಲಿಂದಾದರೂ ದುಡ್ಡು ಹೊಂದಿಸಲು ಸಾಧ್ಯವಾಗಿದಿದ್ದರೆ ಇವರ ಕಷ್ಟ ಪರಿಹಾರವಾಗುತ್ತಿತ್ತು. ನಾಲ್ಕೈದು ದಿನದಿಂದ ಈ ಮನೆಯಲ್ಲಿ ದುಡ್ಡಿನದೇ ಯೋಚನೆಯಾಗಿ ಬಿಟ್ಟಿದೆ. ಯಾರೂ ಸರಿಯಾಗಿ ನಿದ್ದೇನೂ ಮಾಡ್ತಾ ಇಲ್ಲ ಊಟಾನೂ ಮಾಡ್ತಾ ಇಲ್ಲ. ನಾನಾದರೂ ಊಟ ಮಾಡುವ ಎಂದರೆ ಅಮ್ಮ ಅಡುಗೆಯನ್ನೇ ಮಾಡ್ತಾ ಇಲ್ಲ. ಅಪ್ಪ ಮಾತ್ರ ಇಷ್ಟು ಬೀಡಿ ಸೇದಿ ಸೇದಿ ಬೀಡಿ ಕುತ್ತಿಯನ್ನು ರಾಶಿ ಹಾಕ್ತಾರೆ. ಮೊದ ಮೊದಲು ಅಪ್ಪ ಮೂಗಿನಲ್ಲಿ ಬಾಯಿಯಲ್ಲಿ ಬಿಡುವ ಸುರುಳಿ ಸುರುಳಿ ಹೊಗೆಯನ್ನು ನೋಡುವುದೆಂದರೆ ಮೋಜೆನಿಸುತ್ತಿತ್ತು. ಮೊನ್ನೆ ಲೀನ ಟೀಚರು ಧೂಮಪಾನದ ದುಷ್ಟರಿಣಾಮದ ಬಗ್ಗೆ ವಿವರಿಸಿ ಪಾಠ ಮಾಡುವಾಗ ಅಪ್ಪಯ್ಯನ ನೆನಪೇ ಕಾಡುತ್ತಿತ್ತು. ಶ್ವಾಸಕೋಶಕ್ಕೆ ಈ ಹೊಗೆಯಿಂದಾಗುವ ಹಾನಿಯ ಬಗ್ಗೆ ತಿಳಿಸಿದಾಗಲಂತೂ ನಡುಕವೇ ಶುರುವಾಗಿತ್ತು. ಧೂಮಪಾನ ಮಾಡುವವರಂತೆ ಅವರ ಬಳಿಯಲ್ಲಿದ್ದವರಿಗೂ ಮಾರಕ ಕಾಯಿಲೆಗಳು ತಗಲುವುದೆಂದು ತಿಳಿಸಿದಾಗಲಂತೂ ನಮಗೇ ಈ ಕಾಯಿಲೆಗಳು ಅಂಟಿಕೊಳ್ಳುವ ಭೀತಿ ತಲೆದೋರಿತ್ತು ಅಪ್ಪಯ್ಯನ್ನ ಬಳಿ ಇದನ್ನೆಲ್ಲಾ ಹೇಳುವಾಗ ನನಗೇ ಬೈದು ಬಿಟ್ಟಿದ್ದರು. ಆ ಟೀಚರಿಗೆ ಬೇರೆ ಕೆಲಸವಿಲ್ಲ ಅದಕ್ಕೆ ನಿಮ್ಮ ತಲೆ ತಿಂತಿರ್ತಾರೆ ಎಂದು ಟೀಚರ ಬಗ್ಗೆಯೇ ಕೇವಲವಾಗಿ ಮಾತಾಡಿದ್ದರು. ನಮ್ಮ ಪ್ರೀತಿಯ ಲೀನ ಟೀಚರ್ ಬಗ್ಗೆ ಅಪ್ಪ ಆ ರೀತಿಯೆಲ್ಲಾ ಹೇಳುವುದು ಕೇಳಿಸಿದಾಗ ತುಂಬಾ ಬೇಜಾರಾಗಿತ್ತು. ಅಪ್ಪನೊಡನೆ ಮಾತಾಡದೆ ಎದ್ದು ಹೊರ ನಡೆದಿದ್ದೆ.

ನಮ್ಮಲ್ಲಿದ್ದ ಫ್ಯಾನ್, ಮಿಕ್ಸಿ, ಗ್ರೈಂಡರ್ ಎಲ್ಲಾ ಮಾರಿದರೆ ಎಷ್ಟಾಗಬಹುದು ಉಷಾ ಅನುಮಾನಿಸುತ್ತಾ ಕೇಳಿದಾಗ ಮಾದೇವಿಗೆ ಒಮ್ಮೆ ಕಸಿವಿಸಿಯಾಯ್ತು. ಮಿಕ್ಸಿ ಗ್ರೈಂಡರ್ ಮಾರಿದರೆ ನಂತರ ಅರೆಯಲು ಕುಟ್ಟಲು ನಾನೇ ಪಾಡು ಪಡಬೇಕು ಅಮ್ಮ ಯೋಚಿಸುತ್ತಿರುವುದನ್ನು ಕಂಡು ಉಷಾ ಮತ್ತೆ ದುಡ್ಡು ಬಂದ ಮೇಲೆ ಹೊಸದೇ ಕೊಂಡುಕೊಳ್ಳಲಿಕ್ಕೆ ಇದೆಯಲ್ಲಮ್ಮ ಹೊಸ ಮನೆಗೆ ಹಳೆ ಸಾಮಾಗ್ರಿಗಳು ಯಾಕೆ? ಈಗ ಮಾರಿ ದುಡ್ಡು ಹೊಂದಿಸಿಕೊಳ್ಳುವಾ…

ಅಮ್ಮಾ ಫ್ಯಾನ್ ಇಲ್ಲದಿದ್ದರೆ ನನಗೆ ನಿದ್ದೆ ಬರಲ್ಲ ಶೇಖರ ಮೂತಿ ಊದಿಸಿ ಹೇಳಿದಾಗ ಚಂದ್ರುವಿಗೂ ಯೋಚಿಸುವಂತಾಯಿತು. ಹೊಸ ಮನೆಗೆ ಒಂದಲ್ಲ ನಾಲ್ಕಾರು ಕೊಳ್ಳಬಹುದು. ಆದರೂ ಅಷ್ಟರವರೆಗೆ ನಿದ್ರಿಸಬೇಕಲ್ವೇ….
ರೀ… ನನಗೊಂದು ಉಪಾಯ ಹೊಳೆಯಿತು. ಕೊಲಂಬಸ್ ಅಮೇರಿಕ ಕಂಡು ಹಿಡಿದಂತೆ ಮಾದೇವಿ ಕೂಗಿಕೊಂಡಾಗ ಅಲ್ಲಿದ್ದ ಎಲ್ಲರ ದೃಷ್ಟಿ ಅತ್ತ ತಿರುಗಿತು. “ಈ ವಸ್ತು ವಗೈರೆಯಿಂದ ಎಷ್ಟು ದುಡ್ಡು ಹೊಂದಿಸ್ ಬಹುದು, ಅದಕ್ಕಿಂತ ಒಡವೆಗಳನ್ನು ಅಡವಿಟ್ಟರೆ ಹೇಗೆ?
ಒಂದು ತುಂಡು ಒಡವೆಯಿಲ್ಲ. ಇದ್ದ ಚೂರು ಪಾರನೆಲ್ಲಾ ಮಾರಿಯಾಯಿತು. ಇನ್ನೆಲ್ಲಿಂದ ತರುವುದು ಅಡವಿಡಲು ಚಂದ್ರು ಸಂಶಯಿಸಿದ.

ಪಕ್ಕದ ಮನೆಯವರಿಂದ ಎರವಲು ಪಡೆದು ಅದನ್ನು ಅಡವಿಡೋಣ ದುಡ್ಡು ಸಿಕ್ಕಿದ್ಮೇಲೆ ಬಿಡಿಸಿ ಕೊಟ್ಟರಾಯಿತು. ಮಾದೇವಿ ಯಾವುದೇ ಏರಿಳಿತಗಳಿಲ್ಲದೇ ಹೇಳಿದಾಗ ಆಶ್ಚರ್ಯವಾಯಿತು. ಜೊತೆಗೆ ಸಿಟ್ಟೂ ಬಂತು. ಅದೆಲಾ ಉಸಾಬರಿ ಯಾಕೆ ನಾನೇನಾದರೂ ಹೆಚ್ಚು ಕಡಿಮೆಯಾದರೆ ಏನು ಗತಿ.
ರೀ… ಏನೂ ಆಗಲ್ಲ ನೀವು ಸಮ್ನಿರಿ ಅದೆಲ್ಲಾ ನಾನು ನೋಡ್ಕೋತೀನಿ ದಬಾಯಿಸಿ ನುಡಿದ ಮಡದಿಗೆ ಏನುತ್ತರಿಸದೇ ಮೌನವಾದ.

ವನಜಕ್ಕನ ಸೊಸೆ ಶಾರದಾಳ ನೆಕ್ಲೇಸ್, ರಾಧಕ್ಕನ ಮಗಳು ನಿಶಳ ಎರಡು ಜೊತೆ ಬಳೆಗಳನ್ನು ಮದುವೆಗೆ ಹೋಗಲಿಕ್ಕೆಂದು ಎರವಲು ಪಡೆದಿದ್ದಳು ಮಾದೇವಿ, “ಏನೋ ಅಕ್ಕಪಕ್ಕದವರು ಕೇಳಿದರೆ ಇಲ್ಲಾನ್ನೋಕ್ಕಾಗುತ್ಯೇ” ಎಂಬ ಮುಲಾಜಿಗೆ ಕಟ್ಟು ಬಿದ್ದು ಕೊಡಲಾರದೆ ಕೊಟ್ಟಿದ್ದರೂ ಎರಡು ದಿವಸ ಕಳೆದರೂ ಸಿಗದ್ದು ಕಂಡು ಕೇಳ್ಕೊಂಡು ಮನೆ ಬಾಗಿಲಿಗೆ ಬಂದಿದ್ದರು.
ಬಂದವರ ಮರ್ಮ ಅರಿವಾಗುತ್ತಿದ್ದಂತೆ ಅವರನ್ನು ಆದರ ಪೂರ್ವಕವಾಗಿ ಬರಮಾಡಿಕೊಂಡು ಚಹಾ ತಿಂಡಿ ನೀಡಿ ಸತ್ಕರಿಸಿದಳು ಮಾದೇವಿ. ಕ್ರಮೇಣ ಮಾತಿಗೆಳೆಯುತ್ತಾ… ನಿಮ್ಮ ಚಿನ್ನವನ್ನು ಮರಳಿಸಬೇಕೆನ್ನುವಷ್ಟರಲ್ಲಿ ನಮಗೆ ದೊಡ್ಡ ಮೊತ್ತದ ಬಹುಮಾನ ಬಂದ ಮಾಹಿತಿ ಸಿಕ್ಕಿತು.

ಹೌದಾ… ತೆರೆದ ಬಾಯಿಯಿಂದ ಕೇಳಿದಳು ನಿಶ. ಹೌದಮ್ಮ ಎಂದು ಮಾತು ಮುಂದುವರೆಸುತ್ತಾ ಎರಡು ಕೋಟಿ ಎಂದರೆ ಸಾಮಾನ್ಯ ಮೊತ್ತವಾ ಅದನ್ನು ಪಡೆಯಲು ನಾವೂ ದುಡ್ಡು ಖರ್ಚು ಮಾಡಬೇಕೆಂದರು ಅದರ ಏಜೆಂಟರು
ಎರಡು ಕೋಟಿ… ಹುಬ್ಬೇರಿಸಿದಳು ಶಾರದ.
ಹೌದಮ್ಮ ಹೇಗೋ ಎರಡು ಕೋಟಿ ಸಿಕ್ಕಾಗ ನಿಮಗೂ ಒಂದೈದು ಲಕ್ಷ ಕೊಡಬಹುದಲ್ಲ ಹೇಗೋ ನೆರೆಹೊರೆಯವರು ಪರಸ್ಪರ ಕಷ್ಟ ಸುಖಕ್ಕಾಗುವವರು ಎಂದು ಮಾತು ನಿಲ್ಲಿಸಿ ಅವರ ಮುಖದತ್ತ ದಿಟ್ಟಿಸಿದಳು.

ಅವರೂ ತದೇಕ ಚಿತ್ತದಿಂದ ಆಲಿಸುತ್ತಾ… ಕೋಟಿಗೆಷ್ಟು ಸೊನ್ನೆ ಎಂದು ಲೆಕ್ಕ ಮಾಡುತ್ತಾ ಬರುವ ಲಕ್ಷದತ್ತ ಲಕ್ಷ್ಯ ನೆಟ್ಟಿದ್ದರು.
ಇದೇ ಸುಸಮಯವೆಂದರಿತ ಮಾದೇವಿ ನೀವೇನೂ ತಪ್ಪು ತಿಳಿಯುವುದಿಲ್ಲಾ ಅಂತಂದ್ರೆ ಒಂದು ಮಾತು ಹೇಳ್ತೇನೆ. ನಿಮ್ಮ ಚಿನ್ನವನ್ನು ಅಡವಿಟ್ಟು ದುಡ್ಡು ತಗೊಂಡಿದ್ದೇನೆ ಹೇಗೋ ಇಂದೋ ನಾಳೆಯೋ ದುಡ್ಡು ಕೈಗೆ ಬಂದ ತಕ್ಷಣ ನಿಮ್ಮ ಚಿನ್ನ ಬಿಡಿಸಿಕೊಂಡು ಬರ್ತಿನಿ ಜೊತೆಗೆ ಎಂದು ಮಾತು ನಿಲ್ಲಿಸಿದಳು.

ಜೊತೆಗೆ ಎಂದರು ಒಕ್ಕೊರಲಿನಿಂದ ಈಗಾಗಲೇ ಲಕ್ಷಗಳ ಆಫರ್ ಬಂದಾಗಿದೆ ಇನ್ನು ಏನು ದೊರಕಬಹುದೆಂಬ ಕುತೂಹಲದೊಂದಿಗೆ.
ಜೊತೆಗೆ ಅಂತಾದ್ದೇ ಚಿನ್ನ ಅಥವಾ ಅದಕ್ಕಿಂತಲೂ ಜಾಸ್ತಿ ಬೆಲೆ ಬಾಳುವ ಚಿನ್ನವನ್ನು ನಿಮಗಿಬ್ಬರಿಗೆ ಉಡುಗೊರೆಯಾಗಿ ಕೊಡಬೇಕೆಂದಿದ್ದೇನೆ ಎಂದಾಗ ಅವರಿಬ್ಬರ ಮುಖಗಳೂ ಅರಳಿದ ತಾವರೆಯಂತೆ ಇಷ್ಟಗಲವಾಗಿ ಕಣ್ಣುಗಳಲ್ಲಿ ಮಿಂಚು ಫಳಕ್ಕನೇ ಮಿಂಚಿತ್ತು.
ಅದಕ್ಕೆಲ್ಲಾ ಯಾಕಿಷ್ಟು ಸಂಕೋಚ ಪಟ್ಕೋತೀರ ನೆರೆ ಕೆರೆ ಅಂದ ಮೇಲೆ ಅಷ್ಟೂ ಮಾಡದಿದ್ರೆ ಹೇಗೆ ನೀವು ಹೀಗ್ಹೇಗೆ ಅಂತ ಕೇಳಿದ್ದಿದ್ರೆ ಸ್ವತಃ ನಾವೇ ಕೊಡುತ್ತಿದ್ವಿ ಎಂದು ನಿಶಾ ಹೇಳಿದಾಗ ಹೌದೌದು ಎನ್ನುತ್ತಾ ಗೋಣು ಕುಣಿಸಿದ್ದಳು ಶಾರದ.
ಈ ಪ್ರಕರಣ ಇಷ್ಟೊಂದು ಸುಲಭವಾಗಿ ಸುಖಾಂತ್ಯ ಕಂಡದ್ದು ಹಿಡಿಸಲಾರದಷ್ಟು ಖುಷಿಯಾಗಿತ್ತು ಉಷಾಳಿಗೆ. ಜೊತೆಗೆ ಅಮ್ಮ ಅವರಿಗೆ ಲಕ್ಷ ಚಿನ್ನಗಳ ಉಡುಗೊರೆಗಳನ್ನು ಕೊಡಲು ಒಪ್ಪಿಕೊಂಡದ್ದು ಮಾತ್ರ ಕಗ್ಗಂಟಿನಂತಾಗಿತ್ತು. ಅಮ್ಮ ಅಷ್ಟೊಂದು ಮೊತ್ತವನ್ನು ಕೊಡಲುಂಟೇ ಎಂಬ ಸಂಶಯ ಕಾಡತೊಡಗಿತ್ತು.

ನೀನ್ಯಾಕಮ್ಮ ಅವರಿಗೆ ಕೋಟಿ ಬಹುಮಾನ ಬಂದ ವಿಷಯ ತಿಳಿಸಿದ್ದು. ಲಕ್ಷ ಚಿನ್ನಗಳ ಉಡುಗೊರೆ ಬಗ್ಗೆ ಬೇರೆ ಪ್ರಸ್ತಾಪವೆತ್ತಿದ್ದೀಯಾ ಲಘುವಾಗಿ ಅಮ್ಮನನ್ನು ತರಾಟೆಗೆ ತೆಗೆದುಕೊಂಡಿದ್ದಳು ಉಷಾ.
ಇರ್ಲಿ, ನಾನವರಿಗೆ ಎರಡು ಕೋಟಿ ಮಾತ್ರ ತಿಳಿಸಿದ್ದು… ಮೂರು ಕೋಟಿ ಎಂದು ತಿಳಿಸದೆ ಒಂದು ಕೋಟಿಯನ್ನು ಮರೆಮಾಚಲಿಲ್ವ. ನಾನಷ್ಟು ಹೇಳಿದ್ದರಿಂದ ಆಸೆಯಿಂದ ಚಪ್ಪರಿಸಿ ಹೊರಟು ಹೋದರು. ಇಲ್ಲದಿದ್ದರೆ ರಂಪ ರಾದ್ಧಾಂತ ಮಾಡಿ ನಮ್ಮ ಮಾರ್ಯಾದೆ ತೆಗೆಯುತ್ತಿದ್ದರು.

ನೀನವರಿಗೆ ಲಕ್ಷ ಲಕ್ಷ ದುಡ್ಡು ಚಿನ್ನ ಎಲ್ಲಾ ಕೊಡೋದು ನಿಜಾನ ಅನುಮಾನಿಸಿ ಕೇಳಿದ್ದಳು “ಯಾರಿಗೆ ಮನಸ್ಸು ಬರುತ್ತೆ ಅಷ್ಟೊಂದು ಪುಕ್ಕಟೆಯಾಗಿ ಕೊಡಲು ಏನೋ ಬಾಯಿ ಮಾತಿಗೆ ಹೇಳಿದ್ದಷ್ಟೇ. ಅಷ್ಟೋ ಇಷ್ಟೋ ಚೂರು-ಪಾರು ಕೊಟ್ಟರಾಯಿತು.
ಎರಡು ಲಕ್ಷ ಹೇಗೋ ಹೊಂದಿಸಿ ಕೊಟ್ಟಾಯ್ತಲ್ಲ; ಅವರ್ಯಾವಗಂತೆ ದುಡ್ಡು ಕಳುಹಿಸುವುದು. ಏನಾದರೂ ಮೆಸೇಜು ಬಂತಾ ದಿನನಿತ್ಯ ಅಪ್ಪ ಅಮ್ಮನಿಂದ ಬರುವ ಈ ಪ್ರಶ್ನೆಗೆ ಉತ್ತರ ನೀಡುವುದೇ ಪ್ರಯಾಸವಾಗಿ ತೋರತೊಡಗಿತು ಉಷಾಳಿಗೆ ಮುಂದಿನ ತಿಂಗಳು ಮುಂದಿನ ವಾರ ಮುಂತಾದವುಗಳನ್ನೆಲ್ಲಾ ಹೇಳಿ ಹೇಳಿ ಬಾಯ್ಮುಚ್ಚಿಸುವುದು ಇನ್ನು ಸಾಧ್ಯವಿಲ್ಲವೆನಿಸತೊಡಗಿತ್ತು. ಆ ಕಡೆಯಿಂದ ಮೆಸೇಜೂ ಇಲ್ಲ ಕಾಲ್ ಕೂಡಾ ಇಲ್ಲ. ಫೋನ್ ಮಾಡಿ ಕೇಳುವ ಎಂದು ಎಷ್ಟು ಪ್ರಯತ್ನ ಪಟ್ಟರೂ “ಈ ನಂಬರ್ ಅಸ್ತಿತ್ವದಲ್ಲಿಲ್ಲ” ಎಂಬುದನ್ನು ಬಿಟ್ಟು ಬೇರೆ ಮಾಹಿತಿಯೂ ಇಲ್ಲ. ಏನೆಂದು ಉತ್ತರಿಸಿಯಾಳು ಉಷಾ ಅಪ್ಪ ಅಮ್ಮನಿಗೆ. ಇಡೀ ದಿನ ಮೊಬೈಲ್ ನೋಡುತ್ತಾ ಕೂರುವುದೇ ಅವಳ ದಿನಚರಿಯಾಗಿತ್ತು. ಇದ್ಯಾವುದರ ಅರಿವಿರದ ಮಾದೇವಿ ಕನಸು ಕಟ್ಟುವುದರಲ್ಲೇ ದಿನಕಳೆಯುತ್ತಿದ್ದಳು.

ಈಗ್ಲೇ ಒಂದು ಸೈಟು ನೋಡಿ ಆಯ್ಕೆ ಮಾಡಿಟ್ಟುಕೊಂಡರೆ ದುಡ್ಡು ಸಿಕ್ಕ ತಕ್ಷಣ ಮನೆ ಕಟ್ಟಲು ಪ್ರಾರಂಭಿಸಬಹುದು. ಅದಕ್ಕಿಂತ ಮುಂಚೆ ಒಂದು ಫ್ಲ್ಯಾಟ್ ತಗೊಂಡು ಈ ಮನೆಯಿಂದ ಹೊರ ಬರಬೇಕು ನನಗ್ಯಾಕೋ ಈ ಮನೆಯಲ್ಲಿ ಇರೋಕೆ ಇಷ್ಟವಿಲ್ಲ ಮಾದೇವಿಯ ಉವಾಚ ನೋಡಿ ಬಾಯಲ್ಲಿಟ್ಟ ಬೀಡಿಗೆ ಬೆಂಕಿ ಸೋಕಿಸುತ್ತಾ ಚಂದ್ರು ನನಗಂತೂ ಸ್ವಂತ ಬಿಸ್‍ನೆಸ್ ಮಾಡಿ ಸ್ವತಂತ್ರವಾಗಿ ಇರಬೇಕೂಂತ ಆಸೆ ಇನ್ನೊಬ್ಬರ ಮರ್ಜಿಯಲ್ಲಿ ದುಡಿದು ಸಾಕಾಗೋಯಿತು.
ಅಪ್ಪಾ ನಮಗೊಂದು ಕ್ವಾಲಿಸ್ ಕಾರು ಬೇಕು. ಸೂಟು ಬೂಟು ಕೋಟು ಧರಿಸಿ ಜುಂ ಅಂತ ಅದರಲ್ಲಿ ಓಡಾಡ್ತಾ ಇರ್ಬಹುದು.
ನನ್ ಕಿವಿಗೆ ಹೊಸ ಓಲೆ ಜುಮುಕಿ ಕೊಡ್ತೀರಿಂತ ಹೇಳಿದ್ರಲ್ಲ ನೆನಪಿದೆ ತಾನೇ ಕಿರಿಮಗಳು ಪಿಂಕಿ ಮುದ್ದು ಮುದ್ದಾಗಿ ಉಲಿದದ್ದು ಕಂಡು ಉಳಿದವರಿಗೆ ನಗು ತಡೆಯಲಾಗಿರಲಿಲ್ಲ.

ಚಂದ್ರು ಸಮಾಧಾನ ಪಡಿಸುವ ಧ್ವನಿಯಲ್ಲಿ ಹೌದು ಪುಟ್ಟ ನಿನಗೆ ಹೊಸ ಓಲೆ ಜುಮುಕಿ, ಕೈಗೆ ಮುತ್ತಿನ ಬಳೆ ಚಿನ್ನದ ಸರ, ಸೊಂಟಕ್ಕೆ ಚಿನ್ನದ ಡಾಬು ಮಾಡಿಸಿಕೊಡುವ. ಚಂದ್ರು ಕೈ ಬಾಯಿ ತಿರುಗಿಸುತ್ತಾ ಹೇಳಿದಾಗ ಪಿಂಕಿ ಎವೆಯಿಕ್ಕದೆ ಮಿಂಚು ಕಣ್ಣಿಂದ ಕನಸು ಕಾಣತೊಡಗಿದ್ದಳು.
ಏನಮ್ಮ ನಿಮ್ಮ ದುಡ್ಡು ಬಂತಾ ಶಾರದ ನಿಶಾ ಕೂಡ ಕಂಡಲ್ಲಿ ಕೇಳ ತೊಡಗಿದಾಗ ಮೊದ ಮೊದಲು ತಾಳ್ಮೆಯಿಂದಿರುತ್ತಿದ್ದ ಮಾದೇವಿಗೆ ಈಗೀಗ ಕೋಪ ಬೇಸರ ಉಕ್ಕುಕ್ಕಿ ಬರತೊಡಗಿತ್ತು ತಿಂಗಳೆರಡು ಕಳೆದು ಹದಿನೈದು ದಿನದ ಮೇಲಾಯ್ತು. ಇವತ್ತು ಬರ್ತದೆ ನಾಳೆ ಬರ್ತದೆ ಎಂದು ಕಾಯುವುದರಲ್ಲೇ ದಿನಗಳು ಉರುಳುತ್ತಿತ್ತು. ಕಂಡ ಕಂಡ ದೇವರಿಗೆ ಕೈ ಮುಗಿದು ಹರಕೆ ಹೋರುತ್ತಾ ಮನವನ್ನು ಸಮಾಧಾನಗೊಳಿಸುತ್ತಿದ್ದಳು ಮಾದೇವಿ.

ತಿಂಗಳು ನಾಲ್ಕು ಕಳೆದದ್ದರಿಂದ ಶಾರದ ಮತ್ತು ನಿಶಾಳಿಗೆ ಲಕ್ಷದ ಕಡೆ ಗಮನ ನಶೀಸಿ ತಮ್ಮ ಆಭರಣ ಸಿಕ್ಕಿದರೆ ಅಷ್ಟೇ ಸಾಕಿತ್ತು ಎಂಬಂತಾಗತೊಡಗಿತ್ತು. ನಾಲ್ಕೈದು ಲಕ್ಷ ತಮ್ಮ ಕೈ ಸೇರುವುದೆಂಬ ಕನಸು ಕಾಣುವ ಜೊತೆಗೆ ಆ ದುಡ್ಡು ಪೂರ ನಮಗೇ ಸಿಗಲಿ ಗಂಡನ ಪಾಲಾಗುವುದು ಬೇಡವೆಂದು ಯಾವ ವಿಷಯವನ್ನು ಮನೆಯವರಿಗೆ ತಿಳಿಸಿರಲಿಲ್ಲ. ಇದೀಗ ಆಭರಣ ಎಲ್ಲಿ ಎಂದು ಕೇಳಿದರೆ ಏನುತ್ತರಿಸುವುದು ಎಂಬ ಭೀತಿಯ ಜೊತೆ ಒಡವೆ ಕಳೆದುಕೊಳ್ಳುವ ಭೀತಿಯೂ ಮನೆ ಮಾಡಿತ್ತು. ಆತಂಕದಿಂದಲೇ ಇವರ ಮನೆಬಾಗಿಲಿಗೆ ಅಂಡಲೆಯುತ್ತಿದ್ದರು.

ದುಡ್ಡು ಬಂತೇನ್ರಿ ಎಂದು ಮೊದ ಮೊದಲು ಶಾಂತವಾಗಿ ಕೇಳುತ್ತಿದ್ದವರು ಇದೀಗ ತಮ್ಮ ಮಾತಿನ ಧಾಟಿಯನ್ನೇ ಬದಲಿಸಿ ಲಕ್ಷಕ್ಕೆ ಮಣ್ಣು ಬೀಳಲಿ ನಮ್ಮ ಒಡವೆ ಹೇಗಾದರೂ ನಮಗೆ ಕೊಟ್ಟು ಬಿಡಿ ಎಂದು ದಬಾಯಿಸುತ್ತಿದ್ದರು.
ಸಮುದ್ರದ ಅಲೆಗಳಂತೆ ಮೇಲಿಂದ ಮೇಲೆ ಬರುವ ಫೈನಾನ್ಸ್‍ನ ನೋಟಿಸು ಚಂದ್ರುವಿನ ಜಂಘಾಬಲವನ್ನೇ ಉಡುಗಿಸಿ ಬಿಡುತ್ತಿತ್ತು.

ಮಗಳ ಬುದ್ಧಿವಂತಿಕೆಯನ್ನು ಬಹಳವಾಗಿ ಕೊಂಡಾಡುತ್ತಿದ್ದ ಮಾದೇವಿಗೆ ಈಗ ಮಗಳ ತಲೆ ಕಂಡರೇ ಕೋ ಉಕ್ಕೇರಿ ಬರುತ್ತಿತ್ತು. ಈ ಚಿನಾಲಿ ದೆಸೆಯಿಂದ ನಮಗೀ ಗತಿ ಬಂತು. ನೆಮ್ಮದಿಯಿಂದ ಬದುಕುತ್ತಿದ್ದವರಿಗೆ ಏನೇನೋ ಆಸೆ ಹುಟ್ಟಿಸಿ ಎಲ್ಲಾ ಸರ್ವನಾಶ ಮಾಡಿಬಿಟ್ಟಳು ಎಂದು ಜರೆಯುತ್ತಾ ಮೋಸ ಮಾಡಿದವರಿಗೆ ಹಿಡಿ ಶಾಪ ಹಾಕುತ್ತಾ ಕಣ್ಣೀರಿಳಿಸುವುದೇ ಅವಳ ನಿತ್ಯ ಕಾಯಕದಂತಾಗಿತ್ತು.
ಈ ಅಕ್ಕನ ಮೊಬೈಲ್‍ಗೆ ಅದ್ಯಾಕೆ ಬಹುಮಾನ ಬಂತೋ ಅವತ್ತಿನಿಂದ ಈ ಮನೆಯಲ್ಲಿ ನೆಮ್ಮದಿಯೇ ಇಲ್ಲವಾಗಿದೆ. ಬರೀ ದುಡ್ಡು ದುಡ್ಡು ಎಂದು ಎಲ್ಲರೂ ಕನವರಿಸುತ್ತಾ ಇರೋದು ಅಷ್ಟರವರೆಗೆ ಮೂರು ಹೊತ್ತೂ ಹೊಟ್ಟೆ ತುಂಬಾ ಗಂಜಿ ಸಿಗುತ್ತಿತ್ತು. ಈಗ ಒಂದ್ಹೊತ್ತು ಸಿಗುವುದೇ ಕಷ್ಟವಾಗ್ತಾ ಇದೆ. ಅಪ್ಪ ದುಡಿಯಲಕ್ಕೆ ಹೋಗ್ತಾ ಇಲ್ಲ ಅಮ್ಮ ಬೀಡಿ ಕಟ್ತಾ ಇಲ್ಲ. ಅಕ್ಕ ಟೈಲರಿಂಗ್ ಕ್ಲಾಸಿಗೆ ಕೂಡ ಹೋಗ್ತಾ ಇಲ್ಲ ಎಲ್ಲರೂ ಮೌನವಾಗಿಯೋ ಗೊಣಗಿಕೊಂಡೋ ಕಾಲ ಕಳೀತಾರೆ. ಇವರಿಗೆಲ್ಲಾ ಅಂತ ಏನೇನೋ ಬಡಬಡಿಸ್ತಾ ಇದ್ದರು. ಈಗ ದೆವ್ವ ಬಡಿದಂಗೆ ಒಂದ್ಕಡೆ ಕೂತುಕೊಂಡು ಯೋಚಿಸ್ತಿರ್ತಾರೆ. ಮಾತಿಲ್ಲ ಕತೆಯಿಲ್ಲ. ನಗುವಂತೂ ಕಾಣದೆ ಯಾವ ಕಾಲವಾಯ್ತೋ ವಯಸ್ಸಿಗೆ ಮೀರಿದ ನಿಟ್ಟುಸಿರನ್ನು ಚೆಲ್ಲುತ್ತಾ ಯೋಚಿಸ್ತಿರ್ತಾನೆ ಶೇಖರ್.
ಯಾವಾಗಲೂ ಗರಬಡಿದಂತೆ ಕುಳಿತಿರುತ್ತಿದ್ದ ಅಪ್ಪ ಅಮ್ಮ ಅಕ್ಕನನ್ನು ಕಂಡು ಪಿಂಕಿಯೂ ಮೌನವಾಗಿ ಕೂತುಬಿಡುತ್ತಾಳೆ. ಕೈ ತನ್ನಿಂತಾನೇ ಕಿವಿಯೋಲೆ ಇದ್ದ ಜಾಗಕ್ಕೆ ತಲುಪಿ ತೂತು ಬರಿದಾಗದಿರಲೆಂಬಂತೆ ಸಿಕ್ಕಿಸಿಟ್ಟಿದ್ದ ಬೇವಿನ ಕಡ್ಡಿಯ ಒಣಗಲನ್ನು ಸವರಿ ಕಿವಿಯೋಲೆಯ ಆಸೆಯನ್ನು ನೆನಪಿಸಿ ಬಿಡುತ್ತದೆ. ಕಣ್ಣು ತನ್ನಿಂತಾನಾಗಿ ಅಕ್ಕ ಅಮ್ಮನ ಬೋಳು ಕಿವಿಯತ್ತ ಚಲಿಸಿ ಸಮಾಧಾನ ಪಟ್ಟುಕೊಳ್ಳುವಲ್ಲಿ ಸಹಕಾರಿಯಾಗುತ್ತದೆ.

ಮನೆ ಒಳಗಿದ್ದ ಸ್ಮಶಾನ ಮೌನ ಉಷಾಳನ್ನು ನುಂಗಲು ಬಾಯ್ದೆರೆದಂತೆ ಗೋಚರವಾಗಿ ಕಂಗೆಡುತ್ತಾಳೆ. ಅಪ್ಪ ಅಮ್ಮನ ಕಣ್ಣುಗಳಲ್ಲಿರುವ ಯಾತನೆ ಜ್ವಲಿಸುತ್ತಿರುವ ಕ್ರೋಧದ ಬೆಂಕಿಗೆ ತಾನು ಆಹುತಿಯಾಗುವೆನೋ ಎಂಬಂತೆ ಬೆಚ್ಚುತ್ತಾಳೆ. ಎಲ್ಲವೂ ಆಗಿದ್ದು ಈ ಮೊಬೈಲ್ ದೆಸೆಯಿಂದ ಇದನ್ನೇ ಬೆಂಕಿಗೆಸೆಯಬೇಕೆಂದು ಯೋಚಿಸಿ ಅವುಡುಗಚ್ಚುತ್ತಾಳೆ. ಅಂದು ಯಾವುದೋ ಪ್ರಶ್ನೆ ಬಂದಾಗ ತಾನು ಅಚ್ಚರಿ ಪಟ್ಟಿದ್ದೆ ಇಷ್ಟು ಸುಲಭದ ಪ್ರಶ್ನೆ ಯಾಕೆ ಕೇಳ್ತಾರೆ ಎಂದು ಯೋಚಿಸುತ್ತಲೇ ಉತ್ತರವನ್ನು ಕಳುಹಿಸಿಬಿಟ್ಟಿದ್ದೆ. ಒಂದೆರಡು ವಾರದಲ್ಲೇ ನೀವು ಕಳುಹಿಸಿದ ಉತ್ತರಕ್ಕೆ ಮೂರು ಕೋಟಿ ಬಹುಮಾನ ಬಂದಿದೆ ಎಂದಾಗ ಇದು ಕನಸೋ ನನಸೋ ಎಂದು ಆಶ್ಚರ್ಯವಾಗಿತ್ತು. ತನಗೆ ನಂಬಿಕೆ ಬರದೇ ಅದರಲ್ಲಿದ್ದ ನಂಬರಿಗೆ ಕರೆ ಮಾಡಿ ಬಹುಮಾನ ಬಂದದ್ದು ಖಾತ್ರಿಯಾದಾಗ ಕುಣಿದಾಡಿ ಬಿಟ್ಟಿದ್ದೆ.

ಬಹುಮಾನದ ಮೊತ್ತ ನಿಮ್ಮ ಖಾತೆಗೆ ಜಮಾ ಆಗಬೇಕಾದರೆ ನಾವು ಕಳುಹಿಸುವ ಖಾತೆ ನಂಬರಿಗೆ ಎರಡು ಲಕ್ಷ ಕಟ್ಟಿ ಎಂದು ಪದೇ ಪದೇ ಮೊಬೈಲ್ ಸಂದೇಶ ಬರುತ್ತಿರುವುದರ ಜೊತೆಗೆ ಕರೆ ಕೂಡ ಬರುತ್ತಲಿತ್ತು. ಅತ್ತ ಕಡೆಯಿಂದ ಕೇಳಿ ಬರುತ್ತಿದ್ದ ಆ ಮುಧುರ ಕರೆಯ ನಿನಾದಕ್ಕೆ ಹೃದಯ ಸೂರೆಗೊಳ್ಳುವ ಅದೆಷ್ಟು ಮಾಂತ್ರಿಕ ಶಕ್ತಿ ಇತ್ತು. ಆದಷ್ಟು ಬೇಗ ಹಣ ಕಟ್ಟಲು ಪ್ರೇರೆಪಿಸುವ ಆ ನುಡಿ ಊಹ್ ಆಮೇಲಿನದೆಲ್ಲಾ ಕನಸಿನಂತೆ ನಡೆದು ಹೋಯಿತು. ಹಣ ಹೊಂದಿಸಲು ಪಟ್ಟ ಪಾಡು ಎಷ್ಟೊಂದು ಅಸಹನೀಯ. ಮನೆ ಒಡವೆ ಅಕ್ಕ-ಪಕ್ಕದವರ ಚಿನ್ನ ಇದನೆಲ್ಲಾ ಮರಳಿ ತರುವುದೆಲ್ಲಿಂದ? ಯಾರಲ್ಲಿ ತೋಡಿಕೊಳ್ಳುವುದು ತಮ್ಮ ಅಳಲನ್ನು. ಯಾರಿದ್ದಾರೆ ನಮಗೆ? ಸಹಾಯ ಹಸ್ತ ಚಾಚಲು ಇದೆಲ್ಲಾ ಸ್ವಯಂಕೃತ ಅಪರಾಧವೆಂದು ತಮ್ಮನ್ನೇ ದೂಷಿಸಬಹುದು. ಹಣ ಕಳುಹಿಸುವಷ್ಟು ದಿನ ಕಾಲ್ ಮೆಸೇಜ್ ಎಂದು ಮಾಡುತ್ತಿದ್ದವರು ಹಣ ಸಿಕ್ಕ ಕ್ಷಣದಿಂದ ನಾಪತ್ತೆಯಾಗುವುದೆಂದರೆ ಇದು ಮೋಸದಾಟವೇ ಸರಿ. ಈ ಮೋಸದ ಕುಣಿಕೆಗೆ ಕೊರಳೊಡ್ಡಿ ಎಲ್ಲವೂ ಹೋಯ್ತು. ಎಲ್ಲವೂ ಹೋಯ್ತು.

“ಒಳ್ಳೇ ಮಾತಿನಿಂದ ಕೇಳ್ತಿದ್ದೇನೆ ಇನ್ನೆರಡು ದಿನಗಳೊಳಗಾಗಿ ನಮ್ಮ ಒಡವೆ ನಮ್ಮ ಕೈ ಸೇರಿದರೆ ಸರಿ ಇಲ್ಲದಿದ್ದರೆ ಪೋಲಿಸ್ ಕಂಪ್ಲೆಂಟ್ ಕೊಡ್ತೇವೆ “ನಿಶಾಳ ಗಂಡನ ಅರಚುವಿಕೆಗೆ ಶಾರದಳಾ ಗಂಡ ಸಾಥ್ ನೀಡುತ್ತಿರುವಾಗ ಉಷಾ ಯೋಚನೆ ಗುಂಗಿನಿಂದ ಹೊರಬಂದು ಬಂದವರತ್ತ ದೃಷ್ಟಿ ಹಾಯಿಸಿದಳು. ರೌದ್ರಾವತಾರ ತಾಳಿದಂತೆ ಕಂಡು ಬರುತ್ತಿದ್ದ ಆ ಇಬ್ಬರನ್ನೂ ಕಂಡು ನಡುಕ ಬರತೊಡಗಿತು.

ಅಕ್ಕ-ಪಕ್ಕದ ಮನೆಯ ಕಿಟಕಿ ಬಾಗಿಲುಗಳ ಎಡೆಯಲ್ಲೆಲ್ಲಾ ತಲೆಗಳು ಇಣುಕಿ ಇವರ ಮನೆಯತ್ತಲೇ ದೃಷ್ಟಿ ಬೀರುವುದನ್ನು ಕಂಡು ಭೂಮಿ ಈ ಕ್ಷಣವೇ ನಮ್ಮನ್ನೆಲ್ಲಾ ನುಂಗಬಾರದೇ ಅನ್ನಿಸತೊಡಗಿತು.
ಎಲ್ಲವೂ ನನ್ನಿಂದಲೇ ಆದದ್ದು ಎಂಬಂತೆ ಕೋಪ ಅಸಹ್ಯ ಬೆರೆತ ನೋಟದಿಂದ ಚಂದ್ರು ಮಾದೇವಿಯತ್ತ ನೋಡಿದ ಆಕೆ ಇದಕ್ಕೆಲ್ಲಾ ಕಾರಣವಾದ ಮಗಳತ್ತ ತೀಕ್ಷ್ಣ ನೋಟ ಬೀರಿದಳು. ಅಪ್ಪ ಅಮ್ಮನ ಇಂದಿನ ದಯನೀಯ ಸ್ಥಿತಿಗೆ ಅಕ್ಕನೇ ಕಾರಣವೆಂಬಂತೆ ಶೇಖರ್ ಮತ್ತು ಪಿಂಕಿ ಅಕ್ಕನೆಡೆಗೆ ಚೂಪು ನೋಟ ಬೀರಿದರು.
ಕೋಟಿ ಮೊತ್ತ ಬಂದಿದ್ದರೆ ಇವರೆಲ್ಲಾ ನನ್ನನ್ನು ಎಷ್ಟೊಂದು ಆಧರಿಸುತ್ತಿದ್ದರು. ಈಗ ಕ್ರೂರವಾಗಿ ನೋಡ್ತ್ತಿದ್ದಾರೆ. ಉಷಾಳ ಯೋಚನೆ ಸಾಗುತ್ತಿದ್ದಂತೆ ಮನೆಯ ಮುಂದೆ ದೊಡ್ಡ ಗುಂಪೇ ನೆರೆದಿತ್ತು. ಶಾರದಾಳ ಪತಿ ಮತ್ತು ನಿಶಾಳ ಪತಿಯ ವಾಗ್ದಾಳಿಗೆ ಅಕ್ಕ-ಪಕ್ಕದ ಮನೆಯವರೆಲ್ಲಾ ಜಮಾಯಿಸಿದ್ದರು.

ವಿಷಯ ಒಬ್ಬರಿಂದೊಬ್ಬರಿಗೆ ಹರಡುತ್ತಿದ್ದಂತೆ ಅದಕ್ಕೆ ರೆಕ್ಕೆ ಪುಕ್ಕ ಸೇರಿ ಇನ್ನಷ್ಟು ಗಂಭೀರತೆಯನ್ನು ಸೃಷ್ಟಿಸಿತು. ಕೆಲವರು ಛೇ ಹೀಗಾಗ್‍ಬಾರದಾಗಿತ್ತು. ಓಹ್, ಈ ಬಗ್ಗೆ ನಮಗೆ ಒಂದು ಮಾತು ತಿಳಿಸಿದ್ದರೆ ನಾವು ದುಡ್ಡು ಕಟ್ಟೋಕೆ ಬಿಡ್ತಿರಲಿಲ್ಲ. ಇದೆಲ್ಲಾ ಮೋಸ ವಂಚನೆ ಎಂದು ಪೇಪರಲ್ಲಿ ಬರ್ತಾ ಇರ್ತದೆ. ನಿಮ್ಮಂತೆ ಮೋಸದ ಜಾಲಕ್ಕೆ ಸಿಲುಕಿದವರ ಕಥೆ ಆಗಾಗ ಪೇಪರಲ್ಲಿ ಓದ್ತಾ ಇರ್ತೇವೆ. ಆದರೂ ಬುದ್ಧಿ ಬಂದಿಲ್ಲ ಎಂದರೆ ಏನರ್ಥ? ಏನಮ್ಮಾ ಉಷಾ, ನೀನು ಇಷ್ಟೊಂದು ಕಲಿತವಳಾಗಿ ಇಂತಹ ವಂಚನೆಯ ಜಾಲಕ್ಕೆ ಬಲಿಬೀಳುವುದೆಂದರೆ ನಂಬಲಿಕ್ಕೇ ಆಗ್ತಾ ಇಲ್ಲ.
ನಿಮ್ಮಂತಹ ಕಲಿತವರೇ ಈ ರೀತಿಯಾದರೆ ನಮ್ಮಂತಹವರ ಗತಿ ಏನು? ಗುಂಪಿನಲ್ಲಿದ್ದ ಅಜ್ಜಿಯೊಬ್ಬರ ಉವಾಚ ಕೇಳಿ ಬಂದಾಗ ಉಷಾಳಿಗೆ ನಾಚಿಕೆಯಿಂದ ತಲೆ ತಗ್ಗಿಸುವಂತಾಯಿತು.

‘ಅತಿಯಾಸೆ ಗತಿಗೇಡು’ ಎನ್ನುವುದು ಇದಕ್ಕೇ ಎಂದು ವ್ಯಂಗ್ಯವೋ ಕುಹಕವೋ ಎಂಬರಿವಾಗದಂತೆ ಪರಸ್ಪರ ಮಾತಾಡಿಕೊಳ್ಳತ್ತಾ ನಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬತೆ ಬಂದವರೆಲ್ಲಾ ಹೊರಟು ಹೋಗಿದ್ದರೂ ಉಷಾಳಿಗೆ ಅಲ್ಲಿಂದ ಕದಲುವ ಮನಸ್ಸಾಗಿರಲಿಲ್ಲ. ಶಾರದ ನಿಶಾರ ಆಭರಣಗಳನ್ನು ಮರಳಿಸುವ ದಾರಿ ಹೇಗೆ? ಇದ್ದ ಚೂರು ಪಾರು ಆಭರಣಗಳನೆಲ್ಲಾ ಮಾರಿ ಹಣ ಕಳಕೊಂಡದ್ದು ನೆನಯುವಾಗಲೇ ಹೊಟ್ಟೆಯೊಳಗೆ ಬೆಂಕಿ ಬಿದ್ದಂತಾಗುತ್ತದೆ. ಅಡವಿಟ್ಟ ಚಿನ್ನವನ್ನು ಬಿಡಿಸಿ ಕೊಡುವುದೆಂತು? ಯೋಚನೆಯು ಗುಂಗಿ ಹುಳುವಿನಂತೆ ಮನವನ್ನು ಕೊರೆಯುತ್ತಲೇ ಇರುವಾಗ ಕತ್ತಲಾದದ್ದೂ ಗಣನೆಗೆ ಬಂದಿರಲಿಲ್ಲ. ಹಸಿವು ಬಾಯಾರಿಕೆ ಹಿಂಗಿ ಹೋದಂತಾಗಿತ್ತು. ಶೇಖರ್ ಮತ್ತು ಪಿಂಕಿ ಆಗಲೇ ನಿದ್ದೆ ಹೋಗಿದ್ದರಿಂದ ಮಾದೇವಿ ಕೂಡ ಅಲ್ಲೇ ಮುದುಡಿ ಬಿದ್ದುಕೊಂಡಳು. ಉಷಾಳ ಅನುಪಸ್ಥಿತಿಯನ್ನು ಯಾರೂ ಗಮನಿಸುವ ಗೋಜಿಗೆ ಹೋಗಿರಲಿಲ್ಲ.
ನಸು ಬೆಳಗಿನಲ್ಲಿ ಚುಮು ಚುಮು ಚಳಿಗೆ ಬಿಸಿ ಚಹಾ ಬಿದ್ದರೆ ಹಾಯೆನಿಸಬಹುದೆಂದು ಮಲಗಿದಲ್ಲಿಂದಲೇ ಉಷಾಳನ್ನು ಕೂಗಿದ ಚಂದ್ರು ಪ್ರತಿಕ್ರಿಯೆ ಬಾರದನ್ನು ಕಂಡು ಎದ್ದು ಬಂದಿದ್ದ ಉಷಾ ಮಲಗುವ ಜಾಗ ಖಾಲಿಯಾಗಿ ಮಲಗಿದ ಕುರುಹೂ ಇಲ್ಲದಂತಿತ್ತು ಎಲ್ಲೋಗಿರಬಹುದೆಂದು ಯೋಚಿಸುತ್ತಾ ಒಳ ಹೊರಗೆಲ್ಲಾ ಹುಡುಕಾಡಿದರೂ ಮಗಳ ಸುಳಿವಿರಲಿಲ್ಲ. ಆತಂಕಗೊಂಡು ಉಷಾ, ಉಷಾ, ಮಗಳೇ ಎಲ್ಲಿದ್ದೀಯಾ? ಎಂಬ ಕೂಗಿಗೆ ಮಾದೇವಿ ಸೇರಿದಂತೆ ಶೇಖರ್ ಪಿಂಕಿಯೂ ಎದ್ದು ಕುಳಿತಿದ್ದರು.

ಒಳ ಹೊರಗೆಲ್ಲಾ ಹುಡುಕಾಟ ನಡೆಸಿದ್ದರೂ ಫಲ ಶೂನ್ಯವಾಗಿತು.್ತ ಆತಂಕಗೊಂಡ ಎದೆಯೊಂದಿಗೆ ಚಪ್ಪಲಿ ಮೆಟ್ಟಿ ಹೊರ ಬಾಗಿಲಿಗೆ ಬರುತ್ತಿದ್ದಂತೆ ಯಾರೋ ಮನೆ ಕಡೆಗೆ ಓಡಿ ಬರುವುದು ಕಾಣಿಸಿತು.
ನಿಮ್ಮ ಮಗಳು ಕೆರೆಗೆ ಬಿದ್ದವ್ಳೇ ರಾಮಗೌಡರ ಜೀತದಾಳು ನಿಂಗ ಉಸುರಿದಾಗ ಪಕ್ಕದಲ್ಲೇ ಸಾವಿರ ಬಾಂಬ್ ಸ್ಪೋಟಿಸಿದಂತಾಗಿತ್ತು.
ಮಗಳ ನಿಸ್ತೇಜ ಜಡ ದೇಹವನ್ನು ಅಪ್ಪಿ ರೋಧಿಸುತ್ತಿರುವ ಪತ್ನಿ ಪಕ್ಕದಲ್ಲೇ ಅಳುತ್ತಿದ್ದ ಶೇಖರ್ ಪಿಂಕಿ ಇವರೆಲ್ಲರ ನಡುವೆ ಅಳುವನ್ನೇ ಮರೆತವನಂತೆ ಕೂತ ಚಂದ್ರು ಉಸಿರಾಡುವ ಬೊಂಬೆಯಂತ್ತಿದ್ದ.
ಕಾರಿನಿಂದ ನಾಲ್ಕೈದು ಮಂದಿ ಇಳಿದು ಮನೆಯತ್ತಲೇ ದಾಪುಗಾಲಿಡುತ್ತಾ ಬಂದು ನಿಂತಾಗ ಎಲ್ಲರ ಮುಖದಲ್ಲೂ ಪ್ರಶ್ನಾರ್ಥಕ ಚಿಹ್ನೆ ಎದ್ದು ಕಾಣುತ್ತಿತ್ತು.

ಮನೆ ಯಜಮಾನ ಚಂದ್ರು ಎಲ್ಲಿ? ದಡೂತಿ ಆಸಾಮಿಯೊಬ್ಬನ ಒರಟು ಪ್ರಶ್ನೆಗೆ ಚಂದ್ರು ತಗ್ಗಿಸಿದ ತಲೆಯನ್ನು ಮೇಲೆತ್ತಿದ್ದ.
ಮನೆ ಜಪ್ತಿಗೆ ಬಂದಿದೀವಿ ಫೈನಾನ್ಸ್‍ನ ಸಾಲ ಮರು ಪಾವತಿಸುವ ಅವಧಿ ಕಳೆದರೂ ಸಾಲನೂ ತೀರಿಸಿಲ್ಲ. ಬಡ್ಡಿಯೂ ಕಟ್ಟಿಲ್ಲ ನೋಟೀಸ್ ಮೇಲೆ ನೋಟೀಸ್ ಕಳುಹಿಸಿದರು ರಿಪ್ಲೈ ಇಲ್ಲದ್ದರಿಂದ ನಾವೇ ಬರುವುದು ಅನಿವಾರ್ಯವಾಯಿತು. ವಾರಂಟ್ ನೋಟೀಸ್‍ನೊಂದಿಗೆ ಸಾಲ ಪಡೆದ ನೋಟೀಸನ್ನು ತೋರಿಸಿದಾಗ ಚಂದ್ರು ನಿರ್ಲಿಪ್ತನಾಗಿಯೇ ಎದ್ದು ನಿಂತಿದ್ದ.
ಒಂದು ವಾರದೊಳಗೆ ಅಸಲು ಬಡ್ಡಿ ಸಮೇತ ಎರಡು ಲಕ್ಷ ಕಟ್ಟಿ ಮನೆ ಉಳಿಸಿಕೊಳ್ಳಿ ಬಂದವರಲ್ಲೊಬ್ಬ ಕನಿಕರದಿಂದೆಂಬಂತೆ ಚಂದ್ರುವಿಗೆ ಸಲಹೆ ನೀಡಿದ.

ಬಿಡಿಗಾಸಿಗೂ ಗತಿಯಿಲ್ಲದವನ ಬಳಿ ಲಕ್ಷ ಲಕ್ಷಗಳ ವ್ಯವಹಾರ ವ್ಯಂಗ್ಯದಿಂದೊಡಗೂಡಿದ ಶುಷ್ಕ ನೋಟವನ್ನು ಪತ್ನಿಯೆಡೆಗೆ ಬೀರಿದ ಆಕೆಯೂ ಅಸಹಾಯಕತೆಯ ನೋಟವನ್ನು ಬೀರಿ ಮಕ್ಕಳನ್ನು ತಬ್ಬಿ ಕಣ್ಣೀರಿಡುತ್ತಿದ್ದಳು ಕುರುಡು ಕಾಂಚಾಣ ಕುಣಿಯುತ್ತಲಿತ್ತು. ಕಾಲಿಗೆ ಬಿದ್ದವರ ತುಳಿಯುತ್ತಲಿತ್ತು. ಕುರುಡು ಕಾಂಚಾಣ, ಕುರುಡು ಕಾಂಚಾಣ ಪಕ್ಕದ ಮನೆಯ ಸ್ಟೀರಿಯೋದಿಂದ ಹಾಡೊಂದು ಕಿವಿ ತಮಟೆಗೆ ಬಡಿಯುತ್ತಲಿತ್ತು.
ಉಟ್ಟ ಬಟ್ಟೆಯಲ್ಲಿಯೇ ಹೊರ ನಡೆದ ಚಂದ್ರು,
ಮಾದೇವಿ ಮಕ್ಕಳ ಕೈ ಹಿಡಿದು ಪತಿಯನ್ನನುಸರಿಸಿದಳು.

 

Leave a Reply

Your email address will not be published.