ಕಿಲಾರಿ ಬೋರಯ್ಯನ ಆತ್ಮಕಥೆ-6: ಬರ ಬಂದಾಗ ಬಾಳ ದಿನ ಪ್ರಯಾಣ ಮಾಡಿದ್ದೀವಿ

-ಡಾ. ಎಸ್. ಎಂ. ಮುತ್ತಯ್ಯ

6. ಪಯಣ ಹೋದಾಗ
ದೇವರೆತ್ತುಗಳಿಗೆ ಕಾವಲಲ್ಲಿ ಹುಲ್ಲು ಸಿಗತ್ತೇ, ಆದರೂ ಮಳೆ ಹೋದಾಗ ಹುಲ್ಲು ಇಲ್ದಂಗೆ ಆಗುತ್ತೆ. ಆವಾಗ ನಾವು ಪ್ರಯಾಣ ಹೋಗುತ್ತೇವೆ. ಪ್ರಯಾಣ ಹೋಗುವುದಕ್ಕೆ ಊರಿನ ಹಿರಿಯರೆಲ್ಲ ಸೇರಿ ಯಾವಕಡೆ ಬಿಡಬೇಕು ಅಂತ ನಿರ್ಧರಿಸುತ್ತಾರೆ. ಅಂಥ ಕಡೆಗೆ ಹೊಡಕೊಂಡು ಹೋಗೀವಿ. ಬರ ಬಂದಾಗ ಮಾತ್ರ ಬಾಳ ದಿನ ಇಂತ ಪ್ರಯಾಣ ಮಾಡಿದ್ದೀವಿ. ಇತ್ಲಿತ್ಲಾಗೂ ಮಸ್ತ್ ಹೋಗಿದ್ದೇವೆ. ಹೋಗುವಾಗ ಊರಿನ ದನಗಳಿಗೂ ಮೇವು ಇರುವುದಿಲ್ಲ. ಅವರು ಕೂಡ ಮುತ್ತಯ್ಯಗಳ ಜೊತೆ ಸೇರಿಕೊಂಡು ಬರ್ತಾರೆ. ಯಜಮಾನರಲ್ಲಿ ಕೆಲವು ಜನ ಮೊದಲೇ ಬಸ್ಸಿಗೆ ಹೋಗಿ ಹುಲ್ಲು ನೀರು ಎಲ್ಲಿ ಚೆನ್ನಾಗಿ ಇದೆ ಅಂತ ನೋಡಿ ಗೊತ್ತು ಮಾಡಿದ ಮೇಲೆ ಊರಿನಲ್ಲಿ ಒಂದು ಜಾಗಕ್ಕೆ ಗೂಡಾಕುತ್ತಾರೆ. ಅಲ್ಲಿಗೆ ನಾವು ಎತ್ತುಗಳನ್ನು ಹೊಡಕೊಂಡು ಹೋಗ್ತೀವಿ. ಅಂಗೆ ಯಜಮಾನ್ರು ಒಂದು ದಿನ ಇದ್ದು ವಾಪಸ್ಸು ಬಂದು ಬಿಡುತ್ತಾರೆ. ಅವಾಗಿನಿಂದ ಎಲ್ಲ ಕಷ್ಟ ನಂದೆ.

3ಬರ ಬಂದಾಗ ಒಂದ್ಸಲ ಅಂಕರನಾಳಿಗೆ ಹೋಗಿದ್ವಿ. ಅಲ್ಲಿ ಮಳೆ ಆಗಿತ್ತು. ಹುಲ್ಲು ಬಿತ್ತು. ಆವಾಗ ಮುನ್ನೂರು ರೂಪಾಯಿಗೆ ಒಂದು ಚೀಲ ಮೆಕ್ಕೆಜೋಳ, ಆ ಮೆಕ್ಕೆಜೋಳಾನ ಮುದ್ದೆ ಮಾಡಿಕೊಂಡು ತಿನ್ನುತಿದ್ವಿ. ಅದೂ ಅಳತೆ ಮುದ್ದೆ, ನೀರು. ಒಂದು ಸೆಂಡು ಮುದ್ದೆ ಮಾತ್ರ ತಿನ್ನಬೇಕಿತ್ತು. ಆವಾಗ ಎತ್ತುಗಳಲ್ಲಿ ಕೆಲವು ಆಕಳುಗಳು ಈದಿದ್ದವು. ಅವುಗಳನ್ನು ಕರಕೊಂಡು ಮಜ್ಜಿಗೆ ನೀರು ಮಾಡಿಕೊಂಡು ಉಣ್ಣುತ್ತಿದ್ವಿ. ದಪ್ಪನಾಗಿ ಮಜ್ಜಿಗೆ ನೀರನ್ನ ಕುಡಿಯಾದು ಮಲಗಾದು. ಆವಾಗ ಅಲ್ಲಿ ಹುಲ್ಲು ಚೆನ್ನಾಗಿ ಆಗಿತ್ತು. ಆದ್ರೂ ದೇಶದಾಗೆ ಇರ ದನಗಳೆಲ್ಲಾ ಅಲ್ಲಿಗೆ ಬಂದ್ರೆ ಎಲ್ಲಿರುತ್ತೆ. ಅಲ್ಲಿ ಹುಲ್ಲು ಕಡೆಯಾಗಿ ಹೋಯ್ತು. ಆವಾಗ ಹೈನಳ್ಳಿ ಕಡೆಗೆ ಮಳೆ ಆಗಿ ಹುಲ್ಲು ಆಗಿತ್ತು. ಅಲ್ಲಿಗೆ ಹೋದ್ವಿ. ಅಲ್ಲಿ ಕೂಡ ಎರಡೇ ತಿಂಗಳಿಗೆ ಹುಲ್ಲನ್ನೆಲ್ಲಾ ಕಡೇ ತಿಂದು ಬಿಟ್ಟವು. ಆವಾಗ ಒಬ್ಬರಿಗೆ ಒಬ್ಬರು ಎತ್ಲಗೆ ಹೋಗ್ತೀವಿ ಅಂತ ಹೇಳದಿದ್ದರೂ, ಒಂದು ಗುಂಪಿನವರು ಯಾವ ಕಡೆಗೆ ಹೋಗ್ತಾರೆ ಆ ಕಡೇನ ಎಲ್ಲರೂ ಹಿಂಬಾಲ ಹತ್ತಿಬಿಡಾರು. ಹೈನಳ್ಳಿಗೆ ಹೋದಾಗಲೂ ಹಂಗೇ ಆಗಿದ್ದು. ನಾವು ಮೊದಲು ಹೈನಳ್ಳಿ ಕಡೆಗೆ ಹೋಗಾನ ಅಂತ ಹೊರಟ್ವಿ ಆವಾಗ ನಮ್ಮ ಹಿಂದೇನೇ ಎಲ್ಲಾ ಗುಂಪುಗಳು ಹೊರಟು ಬಿಟ್ಟವು.

ಆವಾಗ ನಮ್ಮ ಜೊತೆ ಹೆಳವ ಕ್ಯಾಸಯ್ಯ, ಪೆದೋಬಜ್ಜರ ಬೋಡಯ್ಯ, ಕರೆ ಓಬಯ್ಯರ ಚನ್ನಯ್ಯ, ಎತ್ತಿನ ಕ್ಯಾಸಜ್ಜ, ಸೆಪ್ಪನೋಬಜ್ಜರ ಒಂದಿಬ್ಬರು ಹುಡುಗರು ಎಲ್ಲ ಒಂದು ಇಪ್ಪತ್ತು ಜನ ಹೋಗಿದ್ವಿ ಅವಾಗ. ಈ ಹುಡುಗರೆಲ್ಲಾ ತಮ್ಮ ತಮ್ಮ ದನಗಳನ್ನು ಹೊಡಕೊಂಡು ಬಂದ್ರು.

ಆ ಕಾಲಕ್ಕೆ ಯಾರೂ ನಮ್ಮ ಎತ್ತುಗಳ ಮಂದೆಯನ್ನು ತಮ್ಮ ಹೊಲಗಳಿಗೆ ಬಿಡಿಸಿಕೊಳ್ಳುತ್ತಿರಲಿಲ್ಲ. ನಾವೇ ಬೇರೆ ಗೂಡಾಕಿಕೊಂಡು ದನಗಳ ದೇವರ ಎತ್ತುಗಳ ಗೊಬ್ಬರ ದುಂಡುಗೆ ಮಾಡಿಕೊಂಡು ಅದು ಬಾಳ ಆದಾಗ ಮಾರಿ ಅದರಿಂದಲೇ ಕಾಳು ತಂದುಕೊಂಡು ತಿನ್ನಬೇಕು. ಆವಾಗ ಊರಿನ ಯಜಮಾನ್ರೇನು ಕೊಡುತ್ತಿರಲಿಲ್ಲ. ಈಗ ಹೋದರೂ ಕೊಡದಿಲ್ಲ. ಗೊಬ್ಬರ ಮಾರಿ ಬಂದ ದುಡ್ಡಿನಿಂದಲೇ ಎಲ್ಲಾ ಮಾಡಿಕೊಳ್ಳಬೇಕು. ಆ ಹೈನಳ್ಳಿ ಹತ್ತಿರ ಹೋದಾಗಲೇ ಭಾರಿ ಕಷ್ಟ, ಅಲ್ಲಿ ಬತ್ಯೇನೆ ಹುಟ್ಟುತ್ತಿರಲಿಲ್ಲ. ಆವಾಗ ಎಂಗೋ ಮಾಡಿಕೊಂಡು ಅಲ್ಲಿಯ ಜನರ ಹೊಲಗಳಿಗೆ ಮಂದೆ ಬಿಡುವಂತೆ ಮಾಡ್ಸಿಕೊಂಡ್ವಿ. ಆವಾಗ ಒಂದು ದಿನಕ್ಕೆ ಹತ್ತು ಸೇರು ಕಾಳು ಸಿಗುತ್ತಿದ್ದು. ಕುರಿ ಮಂದೆ ಬಿಡುವಂಗೆ ಸುಮ್ನ ಬಿಡಾದು ಅಲ್ಲ. ಕುರಿಯಾದರೆ ಹೊಲದ ತುಂಬಾ ಮಲಗುತಾವೆ. ಇವು (ಎತ್ತುಗಳು) ಅಂಗಲ್ಲ, ಎಲ್ಲಾ ಒಂದೇ ಹತ್ರ ದಪ್ಪನಾಗಿ ಸಗಣಿ ಹಾಕ್ತವೆ. ಆವಾಗ ನಾವು ಬೆಳಗ್ಗೆ ಎದ್ದು ದಪ್ಪ ಇದ್ದ ಜಾಗದಿಂದ ಸಗಣಿಯನ್ನು ಇಲ್ಲದಿದ್ದ ಜಾಗಕ್ಕೆ ಕೈಯಿಗಳಿಂದ ತೆಗೆದು ವಗೀಬೇಕಿತ್ತು (ಎಸಿ ಬೇಕಿತ್ತು) ಒಂದು ದಿನಕ್ಕೆ ಹತ್ತು ಹನ್ನೆರಡು ಸೇರು ಕಾಳು, ಐದು ರೂಪಾಯಿ ದುಡ್ಡು, ಕೊನೆಕೊನೆಗೆ ಸಿಗಾಕೆ ಅತ್ತಿಕ್ಯಂಡ್ವು. ಐದು ರೂಪಾಯಿಯಲ್ಲಿ ಸಾರಿಗೆ ಬೇಕಾಗುವ ಸಾಮಾನು ಎಲ್ಲಾ ಕೊಂಡು; ಅದರಾಗೆ ನಮಗೆ ಬೀಡಿ, ಎಲೆ-ಅಡಿಕೆ ತಗೋಬೇಕಿತ್ತು. ಹಿಂಗೇ ಕಾಲ ಮಾಡಿದ್ವಿ.

ಇನ್ನೊಂದು ಸಲ ಬರ ಬಂದ ವರ್ಷ ಮೊದಲು ಬಣವಿಕಲ್ಲಿಗೆ ಹೋದ್ವಿ ಅಲ್ಲಿಂದ ಕುಮಾರಸ್ವಾಮಿ ಗುಡ್ಡಕ್ಕೆ ಹೋದ್ವಿ. ಅಲ್ಲಿ ಎರಡು ತಿಂಗಳು ಕಾಲ ಆಯಿತು. ಆವಾಗ ಹೈನಳ್ಳಿ ಕಡೆಗೆ ಹೋದ್ವಿ. ಹೈನಳ್ಳಿಯಲ್ಲಿ ಮೈಯಿಸಿಕೊಂಡು ಬೋರುಗನಹಳ್ಳಿ ಅಣಜಿ ಸುತ್ತಿಕೊಂಡು ಬಂದ್ವಿ. ಆ ಟೈಮಿನಲ್ಲಿ ದಾವಣಗೆರೆ-ಗೀವಣಗೆರೆನೆಲ್ಲ ಅಲ್ಲಾಡಿಸಿ ಬಂದಿದ್ದೇನೆ.
ಹೈನಳ್ಳಿ, ಅಣಜಿ ಊರುಗಳ ಹತ್ತಿರ ಇರುವಾಗ ದಾವಣಗೆರೆಗೆ ನಡೆದೇ ಹೋಗುತ್ತಿದ್ದೆ. ನಾನು (ಕಿಲಾರಿ) ಹೆಚ್ಚು ಪಟ್ಟಣಗಳಿಗೆ ಹೋಗುವುದಿಲ್ಲ. ಹೋದ್ರು ಹೋಟ್ಲು-ಅಂಗಡಿಗಳಲ್ಲಿ ಏನು ತಿನ್ನುವಂತಿಲ್ಲ. ಏನಾದರೂ ಹೊಟ್ಟೆ ಹಸಿದರೆ ಎಲೆ ಅಡಿಕೆ, ಬೀಡಿ ಕೊಂಡುಕೊಳ್ಳುವುದು, ಅಮ್ಮಮ್ಮಾ ಅಂದ್ರೆ ಕಾರ ಮಂಡಕ್ಕಿ ಕೊಂಡುಕೊಂಡು ತಿನ್ನುತ್ತೇನೆ. ಅದು ಅಲ್ಲಿನ ಪಿಲೇಟು (ಪ್ಲೇಟ್)ಗಳಲ್ಲಿ ತಿನ್ನುವಂತಿಲ.್ಲ ನಮ್ಮ ಮನೆಯಲ್ಲಿಯಾದರೂ ನನಗೆ ಬೇರೆ ತಟ್ಟೆ: ಅದನ್ನು ನಮ್ಮ ಮನೆಯವರೂ ಕೂಡ ಬಳಸುವಂತಿಲ್ಲ. ಕಾರಮಂಡಕ್ಕಿಯಂಥದನ್ನು ಪೇಪರ್‍ನಲ್ಲಿ ತಿನ್ನಬಹುದು. ಇಂಥದ್ರಾಗೂ ದಾವಣಗೆರೆ ನೆಡಕೊಂಡೋಗಿ ನಮ್ಮ ಜೊತೆ ಇರುವ ಹುಡುಗರಿಗೆ, ಸಾಯಂಕಾಲದ ಊಟಕ್ಕೆ ಏನನ್ನಾದರೂ ಕೊಂಡ್ಕೊಂಡು ಬರುತ್ತಿದ್ದೆ.
ನಾನು ಪೇಟೆಗಳಿಗೆ ಹೋಗಿರುವುದು ತುಂಬಾ ಕಡಿಮೆ. ಮೊದಲು ಅಂದ್ರೆ ಕಿಲಾರಿಯಾಗುವುದಕ್ಕಿಂತ ಮುಂಚೆ ನಮ್ಮ ಹೊಲದಲ್ಲಿ ಬೆಳೆದ ನೆಲಗಡಲೆ, ಹಸಿಮೆಣಸಿನಕಾಯಿ ಹಾಕಿಕೊಂಡು ಚಳ್ಳಕೆರೆಗೆ ಮಾರಲು ಹೋಗುತ್ತಿದ್ದೆವು. ಎತ್ತಿನ ಗಾಡಿಯಲ್ಲಿ ಹಾಕಿಕೊಂಡು, ಸಾಯಂಕಾಲ ಹೋಗಿ ಅವುಗಳನ್ನು ಮಾರಿ ರಾತ್ರಿ ಅಲ್ಲೇ ಮಲಗುತ್ತಿದ್ದೆವು. ನಾನೊಬ್ಬನೇ ಅಲ್ಲ ನನ್ನ ಜೊತೆಗೆ ಇನ್ನೂ ಜನ ಇರುತ್ತಿದ್ದರು.

2ಇತ್ಲಿತ್ಲಾಗೆ ಒಂದೆರಡು ಮೂರು ಸಲ ಪೇಟೆಗೆ ಅದು ದುರ್ಗಕ್ಕೆ ಹೋಗಿದ್ದೇನೆ. ನನ್ನ ಮೊಮ್ಮಕ್ಕಳಿಗೆ ಕಾಯಿಲೆ ಅದು ಇದೂ ಬಂದಾಗ ಹೋಗಿದ್ದೇನೆ. ಆವಾಗ ಬಸ್ಸಿಗೆ ಹೋಗಿದ್ದೇನೆ. ಮೊದಲು ಆದರೆ ದುರ್ಗ, ನಾಯಕನಹಟ್ಟಿಗೆಲ್ಲ ನಡೆದುಕೊಂಡೆ ಹೋಗಿ ಬಿಡುತ್ತಿದ್ದೆ. ಇಲ್ಲಿಗೆ ಒಂದೆರಡು ಮೂರು ವರ್ಷಗಳ ಹಿಂದೆ ಚಳ್ಳಕೆರೆಗೆ ಹೋಗಿದ್ದೆ. ಯಾಕೆಂದ್ರೆ ಗಗ್ಗ ದೊಡ್ಡಬೋರಯ್ಯನ (ಗಗ್ಗಬೋರಯ್ಯನ ಮಗ) ಮದುವೆಗೆ ಬಂಗಾರ ಮಾಡಿಸಲು ಹೋಗಿದ್ದೆ.

ಮೊದಲು ಪ್ರತಿವರ್ಷ ಪ್ರಯಾಣ ಹೋಗೋದೇ ಕೆಲಸ (ನೇರಲಗುಂಟೆ ಕಾವಲ್‍ನಲ್ಲಿ). ಕಾರಿ ಪಾರಂ ಅದಾಗಿನಿಂದ ಈ ಹುಲ್ಲು ನೀರಿಂದು ಬರ ಕಡಿಮೆಯಾಯ್ತು. ಅದಕ್ಕಿಂತ ಮೊದಲು ಸ್ವಲ್ಪ ಮಳೆ ಹೋಗಿಬಿಟ್ಟರೆ ಅಂಗೆ ಹುಲ್ಲು ನೀರಿನಿಂದ ತೊಂದರೆ ಅಗ್ಬಿಡುತ್ತಿತ್ತು. ಪಾರಂನವರು ಅಲ್ಲಿ ಕಾವಲು ಇದ್ದು ಅದ್ದುಬಸ್ತು ಮಾಡ್ತಾರೆ. ಅದಕ್ಕೆ ಮೇವು ಇರುತ್ತದೆ. ಇದರಿಂದ ನಾವು ಇಲ್ಲಿಗೆ ಒಂದೈದು ವರ್ಷದಿಂದ ಎಲ್ಲಿಗೂ ಹೋಗಿಲ್ಲ. ಈ ಕುರಿಪಾರಂ ಆಗುವುದಕ್ಕಿಂತ ಮೊದಲು ಅಮೃತ್‍ಮಹಲ್ ಕಾವಲು ಇದ್ದಾಗ ಇಲ್ಲಿ ಹುಲ್ಲೇ ಇರುತ್ತಿದ್ದಿಲ್ಲ. ಅದಕ್ಕೆ ವರ್ಷದಲ್ಲಿ ಮೂರು ತಿಂಗಳು ಹೋಗಲೇಬೇಕು ಹೊರಗಡೆಗೆ ನಮ್ಮೂರಿನ ಕುರಿಯವರು ಮೇಕೆಯವರು ನುಗ್ಗಿ ಬಿಡುತ್ತಿದ್ದರು.

ನಾನು ಹಿಂಗೆಪ್ರಯಾಣದಲ್ಲೇ ಬಾರಿ ಸಮಯ ಕಳೆದು ಬಿಟ್ಟಿದ್ದೇನೆ. ಆವಾಗ ನನ್ನ ಕುಟುಂಬವನ್ನೇ ಬಿಟ್ಟು ಬಾಳ ದಿನಗಳು ಹಿಂಗೆ ಪ್ರಯಾಣದಾಗೆ ಇರುತ್ತಿದ್ದೆ. ಈಗಾಗಲೇ ಹೇಳ್ದಂಗೆ ನನ್ನ ಕುಟುಂಬ ಎಲ್ಲ ಗಗ್ಗಬೋರಣ್ಣನ ಮನೆಯಲ್ಲೇ ಇದ್ದುದರಿಂದ ಅಲ್ಲಿ ಏನೂ ತೊಂದ್ರೆ ಆಗ್ತಾ ಇರಲಿಲ್ಲ. ನನಗೂ ಯಾವ ಭಯನೂ ಇರುತ್ತಿರಲಿಲ್ಲ. ಅಂಗೆ ನೋಡಿಕೊಂಡ್ರೆ ನಾನು ಕುಟುಂಬದ ಬಗ್ಗೆ ಈಗ ಜವಾಬ್ದಾರಿ ವಹಿಸಿಕೊಂಡಂಗೆ ಹಿಂದೆ ವಹಿಸಿಕೊಂಡಿರಲಿಲ್ಲ. ನನ್ನ ಜವಬ್ದಾರಿಯನ್ನೆಲ್ಲ ಗಗ್ಗಬೋರಣ್ಣ, ಆತನ ಹೆಂಡ್ತಿ ಇಬ್ಬರೇ ನೋಡಿಕೊಂಡಿದ್ದಾರೆ. ನನ್ನ ಹೆಂಡ್ತಿ ಕೂಡ ಬಾಳ ಜವಾಬ್ದಾರಿಯಿಂದ ಮಕ್ಕಳನ್ನು ಬೆಳಸಿ ಸಾಕಿದಳು.

ಪಯಣದಲ್ಲಿರುವಾಗ ಯಾವುದೇ ವಿಷಯವನ್ನು ನಾನು ಮೊದಲು ಯಜಮಾನರಿಗೆ ತಿಳಿಸಬೇಕು. ಮುಖ್ಯ ಯಜಮಾನನಿಗೆ ಮಾತ್ರ ತಿಳಿಸುತ್ತೇವೆ. ಇನ್ನುಳಿದ ಯಜಮಾನ್ರು ನಮಗೂ ಹೇಳ್ಬೇಕು ಅಂಥ ಮಸ್ತ ಸಲ ಗಲಾಟೇನೂ ಮಾಡಿದ್ದಾರೆ. ಪರಸ್ತಳಕ್ಕೆ ಹೋದಾಗಲೂ ಯಜಮಾನ್ರಿಗೆ ತಿಳಿಸಬೇಕು. ಆದ್ರೆ ಸತ್ತ ಎತ್ತನ್ನು ಅಂಗೆಬಿಟ್ಟು ಊರಿಗೆ ಬಂದು ಹೇಳೋದಕ್ಕೆ ಅಗುವುದಿಲ್ಲ. ಆ ವಿಷಯದಲ್ಲಿ ಅವರು (ಯಜಮಾನ್ರು) ಏನೂ ಅನುಮಾನ ತಿಳಿದುಕೊಳ್ಳುವುದಿಲ್ಲ. ನೀನು ಮಾರಿಕೊಂಡು ಸುಮ್ನೆ ಸತ್ವು ಅಂತ ಹೇಳಬಹುದಲ್ಲ ಅಂತ ನನಗೆ ಅನೇಕ ಜನ ಕೇಳಿದ್ದಾರೆ. ಆದರೆ ನಮ್ಮ ದೇವರೆತ್ತುಗಳನ್ನು ಯಾರೂ ಮಾರುವಂತಿಲ್ಲ. ಮಾರಿದರೆ ಅವನು ಉಳಿಯುವುದಿಲ್ಲ. ಮುತ್ತಯ್ಯಗಳನ್ನು ಮಾರುವುದಂದ್ರೆ. ಏನೂ ನರಮನುಷ್ಯನಿಂದ ಸಾಧ್ಯವಿಲ್ಲ. ಈ ಸತ್ಯ ನಮ್ಮ ಯಜಮಾನರಿಗೂ ಗೊತ್ತು. ಆಂಗಾಗಿ ನಮ್ಮ ನಡುವೆ ಇಂಥ ಅನುಮಾನಗಳು ಬರುವುದಿಲ್ಲ. ಯಾವುದೇ ದೇವರೆತ್ತು ಸತ್ರು ಅದನ್ನು ಮಣ್ಣು ಮಾಡ್ತೀವಿ. ಕೆಲವು ಸಲ ಕಲ್ಲು ಬಣವೆ ಮಾಡ್ತೀವಿ.

(ಮುಂದುವರಿಯುವುದು)

Leave a Reply

Your email address will not be published.