ಕಿಲಾರಿ ಬೋರಯ್ಯನ ಆತ್ಮಕಥೆ-5: ನಾನು ಮತ್ತು ನನ್ನ ಕುಟುಂಬ

-ಡಾ. ಎಸ್. ಎಂ. ಮುತ್ತಯ್ಯ

ನಾನು ಮತ್ತು ನನ್ನ ಕುಟುಂಬ
ನಾನು ಮದುವೆಯಾಗಿದ್ದು ಇತ್ತಿತ್ಲಾಗೆ-ದಗಮುು ಮರ್ರಿಯ್ಲಲ್ಲಿ ಗೂಡು ಇದ್ದಾಗ. ನಲ್ಲನ ಮುತ್ತಜ್ಜನೇ ಮದುವೆ ಮಾಡ್ಸಿದ್ದು. ನನ್ನ ಹೆಂಡ್ತಿ ಹೆಸರು ಸಣ್ಣಕ್ಕಯ್ಯ ಅಂತ. ನಾವು ಮೂರು ದಿನ ಮುಂಜಿ ಹೋಗಿದ್ವಿ. ಮುಂಜಿ ಹೋಗುವುದು ಅಂದ್ರೆ ನಮ್ಮ ಮದುವೆಯ ಮೊದಲ ಶಾಸ್ತ್ರಕ್ಕಿಂತ ಮೂರನೇ ದಿನದ ಹಿಂದಿನ ರಾತ್ರಿ ಊರಿನ ದೇವರ ಗುಡಿಯ ಮುಂದೆ ನೀರಾಕಿಸಿಕೊಳ್ಳಬೇಕು. ನೀರನ್ನು ಊರಿನ ಪೆದ್ದಗಳ ಮನೆಯವರು ಹಾಕ್ಬೇಕು. ಪೂಜಾರಿಗಳ ಮನೆಗಳ ಹತ್ರ ನೀರು ಕಾಯಿಸಿರುತ್ತಾರೆ. ಮೂರು ಜನ ಪೂಜಾರಿಗಳೆಂದರೆ ಚನ್ನಕೇಶವ ಪೂಜಾರಿ, ಗಾದ್ರಿದೇವರ ಪೂಜಾರಿ, ಎತ್ತಿನ ಕಿಲಾರಿಗಳು. ಮುಂಜಿ ಹೊರಡುವ ರಾತ್ರಿ ಮೂರು ಪೂಜಾರಿಗಳ ಮನೆಗಳ ಮುಂದಕ್ಕೆ ಊರಿನ ಏಳು ಜನ ಪೆದ್ದಗಳು (ಹಿರಿಯರು) ಮನೆಗೊಬ್ಬರಂತೆ ಸೇರುತ್ತಾರೆ. ಆವಾಗ ಅವರನ್ನು ಒಂದೊಂದು ಕಂಬ್ಳಿ ಕೋರಿ, ಒಂದು ಮೆರಗೋಲು ಕೊಟ್ಟು ಕಳುಹಿಸುತ್ತಾರೆ. ಊರ ಹೊರಕ್ಕೆ ಆ ಮೆರಗೋಲಿಗೆ ಬಳಿ ಬಟ್ಟೆಯಲ್ಲಿ ಬೀಡಿ ಎಲೆ ಅಡಿಕೆ ಕಟ್ಟುತ್ತಾರೆ.

ನಮ್ಮ ಮದುವೆಯ ಬೀಡಿನಲ್ಲಿ ಐದೋ, ಆರೋ ಮದುವೆ ಆದ್ವು. ಈಗ ನಮ್ಮೂರಲ್ಲಿ 50 ಗಂಡು 50 ಹೆಣ್ಣು ಒಂದೇ ಸಲ ಮದುವೆಯಾಗ್ತಾರೆ. ಬೇರೆ ಊರಿನಿಂದ ಹೆಣ್ಣು ತರುವುದು ಭಾರಿ ಕಡಿಮೆ. ಮುಂಜಿ ಹುಡುಗರನ್ನು ಊರಿಂದ ಹೊರಗೆ ಕಳುಸಿದ ಮೇಲೆ ಅವರನ್ನು ಯಾರೂ ಮುಟ್ಟುವಂತಿಲ್ಲ. ಈಗ ಇಂಥ ಬಿಗಿ ಇದ್ದರೂ ನಮ್ಮ ಕಾಲಕ್ಕೆ ಇದ್ದ ಹಾಗೆ ಇಲ್ಲ. ಈಗಿನ ಹುಡುಗರು ಹೋಗಿ ಅವರ ಹತ್ತಿರವೇ ಬೀಡಿ, ಸಿಕ್ರೇಟ್ ಸೇದೋದು, ತಿಂಡಿ ತಿನ್ನೋದು ಮಾಡ್ತಾರೆ. ಅವರು ಅಂಗೆ ಮಾಡಿದ್ರು ಮತ್ತೆ ನೀರಾಕಿಕೊಂಡು ಬರಬೇಕು ಇಲ್ಲದಿದ್ರೆ ಅವರಿಗೇ ಒಳ್ಳೇದಲ್ಲ.

3ನಮ್ಮ ಕಾಲಕ್ಕೆ ಮೂರು ದಿನದ ಮುಂಜಿ ಮಾತ್ರ ಇತ್ತು. ನಂಗಿಂತ ಹಿಂದಿನವರು ಈ ಮುಂಜಿಯನ್ನು ಎಂಟು ದಿನ, ಹನ್ನೊಂದು ದಿನ ಮಾಡುತ್ತಿದ್ದರು. ನಮ್ಮೂರಾಗೆ ಹೆಣ್ಣು ಮಕ್ಕಳನ್ನು ಮದುವೆಯ ಮುಂಚಿನ ಹುಣ್ಣಿಮೆ, ಅಮಾವಾಸ್ಯೆಯ ದಿನಗಳಲ್ಲಿ ಹನ್ನೊಂದು ದಿನ ಗುಡ್ಲಿಗೆ ಕೂರಿಸೋದು ಪದ್ಧತಿ. ಆ ಹನ್ನೊಂದು ದಿನಾನು ಅವರು ಹಸಿರುಗುಡ್ಲು ಹಾಕಿಸಿಕೊಂಡು ಊರೊಳಗೆ ಇರುತ್ತಾರೆ. ಆ ಹೆಣ್ಣುಮಕ್ಕಳಿಗೆ ಅವರವರ ಸಂಬಂಧಿಕರು ಹೊಸಿಗೆ ಊಟ ಹಾಕ್ತಾರೆ. ಅಡಿಗೆಯನ್ನು ಮಾಡಿಸಿ ಸೋಬಾನೆ ಪದ ಹಾಡುತ್ತಾ ಅದೂ ವಿಶೇಷವಾಗಿ ಒಸಗೆ ಹಾಕಿಸಿಕೊಳ್ಳುವವರ ಸಂಬಂಧಗಳ ಬಗ್ಗೆ ಸೋಬಾನೆ ಹಾಡ್ತಾ ಊರಿನ ದೇವಸ್ಥಾನಕ್ಕೆ ಹೋಗಿ ಕೈ ಮುಗಿದು ಗುಡ್ಲಿಗೆ ಹೋಗಿ ಅವರ ಮಡಿಲಿಗೆ ಆ ಅಡುಗೆಯನ್ನು ಸುರಿಯುತ್ತಾರೆ. ಅದರಲ್ಲಿ ಸ್ವಲ್ಪ ಉಳಿಸಿಕೊಂಡು ಹೆಣ್ಣು ಹುಡುಗಿಯರನ್ನು ಕಾಯಲು ಇಟ್ಟಿರುವ ಕಾಯುವ ಅಜ್ಜಿಗೆ ಕೊಡುತ್ತಾರೆ.

ಹುಡುಗಿಯರನ್ನು ಮತ್ತು ಹುಡುಗರನ್ನು ಜೊತೆಗೆ ಮುಂಜಿ ಹೊರಡುಸುತ್ತಿದ್ರಲ್ಲ. ಆವಾಗ ಹುಡುಗಿಯರು ಊರಲ್ಲಿ ಹಸಿರುಗುಡ್ಲಲ್ಲಿ ಕುಳಿತರೆ, ಹುಡುಗರು ಊರ ಹೊರಗೆ ಹನ್ನೊಂದು ದಿನ ಇರ್ತಿದ್ರಂತೆ. ಆವಾಗ ಅಡವಿಯಲ್ಲಿ ಬೇಟೆಯಾಡುವುದು ಮೊಲ ಅಂಥವು ಇಂಥವುಗಳನ್ನು ಹೊಡಕೊಳ್ಳದು, ಸಾರು ಮಾಡಿಕೊಂಡು ತಿನ್ನೋದು. ಹಿಂದೆ ಎಂಟು ದಿನ, ಹನ್ನೊಂದು ದಿನ ಮಾಡ್ತಿದ್ರಂತೆ. ನಮ್ಮ ಮದುವೆಯ ಕಾಲಕ್ಕೆ ಈ ಮುಂಜಿ ಮೂರು ದಿನ ಇತ್ತು. ಅಷ್ಟೇ. ಈಗ ಒಂದೇ ದಿನ ಮುಂಜಿ ಹೋಗೋದು.

ನಾವು ಒಂದಾರೇಳು ಜನ ಮುಂಜಿ ಹೊರಟ್ವಿ. ನಮ್ಮ ಜೊತೆ ತಪ್ಪಡಿಯವನು ಇದ್ದ. ಅವೋತ್ತು ಬೆಳಗ್ಗೆ ನಾವು ಊರ ಹೊರಗೆ ಇದ್ದವಲ್ಲ ಅಲ್ಲಿಗೆ ಕ್ಷೌರದವನು ಬಂದಿದ್ದ. ಈವಾಗಲೂ ಮುಂಜಿ ಹುಡುಗರಾದಾಗೆಲ್ಲಾ ಬರುತ್ತಾನೆ. ಅವೊತ್ತು ಕ್ಷೌರದವನಿಗೆ ಕೇಳಿದಷ್ಟು ದುಡ್ಡು ಕೊಡ್ತಾರೆ. ನಾನು ತಲೆ ಚೌರ ಮಾಡ್ಸಿಕೊಳ್ಳಲಿಲ್ಲ. ನಮ್ಮ ಜೊತೆಗಿನ ಹುಡುಗರೆಲ್ಲ ಮಾಡ್ಸಿಕೊಂಡ್ರು.

ಮೂರು ದಿನ ಮುಂಚೆ ಹೋದ ನಮಗೆ ನಮ್ಮ ಮನೆಗಳಿಂದ ಊಟ ತಂದು ಹಾಕುತ್ತಿದ್ದರು. ಈಗ ಒಂದೇ ದಿನ ಮುಂಜಿ ಹೋಗುವುದರಿಂದ ಅವರಿಗೆ ಹೊಸಗೆ ಹಾಕುವ ತಿಂಡಿಯೇ ಸಾಕಾಗತ್ದೆ. ಆದರೆ ನಮಗೆ ಮೂರು ದಿನ ಆದ್ದರಿಂದ ಹೆಚ್ಚಿಗೆ ಹೊಸಗೆ ಏನೂ ಹಾಕುತ್ತಿರಲಿಲ್ಲ. ಹಾದಿಯಲ್ಲಿ ಬರುವ ನಿಮ್ಮಂತವರನ್ನ ತರುಬಿ ಹಿಡಿದು ದುಡ್ಡು ಉದುರಿಸಿಕೊಳ್ತಿದ್ವಿ. ಆ ದುಡ್ಡಿನಲ್ಲಿ ತಿಂಡಿತಿನ್ನುತ್ತಿದ್ದೆವು. ಇನ್ನೊಂದೊಂದು ಸಲ ಅವರನ್ನೆ ಏನಾದರೂ ಮಂಡಕ್ಕಿ ಮೆಣಸಿನಕಾಯಿ ಅಂಥವು-ಇಂಥವು ತಂದು ಕೊಡಲು ಒಪ್ಪಿಸುತ್ತಿದ್ದೆವು. ಹೀಗೆ ಮೂರು ದಿನಗಳ ಕಾಲ ಕಳೆಯುತ್ತಿದ್ದೆವು. ನಂತರ ಮೊದಲ ಶಾಸ್ತ್ರದ ದಿನದ ಹಗಲೊತ್ತು ನಮ್ಮ ಮನೆಯವರು ನೀರು ಕಾಯಿಸಿ ಊರಿನ ಪಕ್ಕದ ಹೊಲಕ್ಕೆ ತರುವುದು ಪದ್ಧತಿ.

ನಮಗೂ ಅಂಗೆ ಮಾಡಿದರು. ಮದುವೆಯ ಮೊದಲ ಶಾಸ್ತ್ರದ ದಿನ ಹಗಲೊತ್ತು ನಮ್ಮ ಮನೆಯವರು ನೀರು ಕಾಯಿಸಿ ಊರಿನ ಪಕ್ಕದ ಹೊಲಕ್ಕೆ ತಂದರು. ಹೊಲದಲ್ಲಿ ಮೈತೊಳಸಿ ಹಣೆಗೆ ವಿಭೂತಿ ಇಟ್ಟು ಹಳೆ ಬಟ್ಟೆಯನ್ನು ಹಾಕ್ಸಿದ್ರು, ಆ ಮೇಲೆ ತಪ್ಪಡಿ ಮತ್ತೆ ನಮ್ಮ ಮದುವೆಗೆ ಬಂದಿದ್ದ ಬ್ಯಾಂಡ್‍ಸೆಟ್ ಮಾಡ್ತಾ ಅಲ್ಲಿಯೇ ಗಿಡದ ಪೂಜೆ ಮಾಡಿದರು. (ತಂಗಟಿ ಗಿಡಕ್ಕೆ ಪೂಜೆ ಮಾಡಿದರು) ಆ ಪೂಜೆಗೆ ಬೇಕಾದ ಹಣ್ಣು-ಕಾಯಿ ಇನ್ನು ಬೇರೆ ಬೇರೆ ಸಾಮಾನುಗಳನ್ನು ನಮ್ಮ ಮನೆಯವರೇ ತಂದಿರುತ್ತಾರೆ. ಹಾಗೆ ಪೂಜೆ ಮಾಡಿ ನೇರವಾಗಿ ಮನೆಗೆ ಹೋದೆವು. ಮನೆಗೆ ಬರೋವೊಷ್ಟೊತ್ತಿಗೆ ಮನೆಯ ಅಂಗಳದಲ್ಲಿ ಕರಿ ಕಂಬ್ಳಿ ಗದ್ದುಗೆ ಹಾಕಿ ನಮ್ಮ ಉಗುರು ಕತ್ತರಿಸಿ, ನಾಲಿಗೆ ಸುಟ್ಟು ಗೋತೀರ್ಥ ಹಾಕಿ; ಆಮೇಲೆ ಒಂದು ನಾಯಿಯನ್ನು ಇಡಕೊಂಡು ಬಂದು ನಮ್ಮ ಗದ್ದುಗೆಗೆ ಪೂಜೆ ಮಾಡಿದ ಅಗಲು ಅನ್ನ (ಎಡೆ ಅನ್ನ)ವನ್ನು ತಿನ್ನುವಂತೆ ಮಾಡಿ, ಅದು ಸ್ವಲ್ಪ ತಿಂದ ಮೇಲೆ ಅದರ ಕಿವಿ ಹಿಂಡಿ ಕಿರುಚುವ ಹಾಗೆ ಮಾಡಿ ಅದನ್ನು ಓಡಿಸುತ್ತಾರೆ. ಹಾಗೆಯೇ ನಮಗೂ ಮಾಡಿದರು. ಹಿಂಗೆ ಉಗುರು ಕತ್ತರಿಸಿ, ತೀರ್ಥ ಹಾಕಿ ಶುದ್ಧ ಮಾಡುವವರು ಸೋದರಮಾವಂದಿರು. ಶುದ್ಧ ಮಾಡಿದ ಮೇಲೆ ದೇವಸ್ಥಾನಕ್ಕೆ ಕರಕೊಂಡು ಹೋದರು. ಆವಾಗ ದೇವರಿಗೆ ಕೈಮುಗಿದು ಪೂಜಾರಿಗೆ ದಕ್ಷಿಣೆ ನೀಡಿ ಮನೆಗೆ ವಾಪಸ್ಸು ಬಂದೆವು. ಆವಾಗಿನಿಂದ ನನ್ನನ್ನು ಯಾವ ಕಡೆಗೂ ಹೋಗಲು ಬಿಡಲಿಲ್ಲ. ಎಲ್ಲಿಯಾದರು ಹೋಗಬೇಕೆಂದರೆ ಜೊತೆಗೆ ಒಬ್ಬ ಹುಡುಗನನ್ನು ಕರೆದುಕೊಂಡು ಹೋಗಬೇಕಂತೆ. ನಮ್ಮ ಮೊದಲ ಶಾಸ್ತ್ರಕ್ಕೆ ಉಗ್ಗಿ, ಅನ್ನ ಮಾಡಿದ್ದರು. ಈ ಉಗ್ಗಿ, ಅನ್ನವನ್ನು ಮೊದಲು ಊರಿ ಪೆದ್ದಗಳ ಹೆಂಡತಿಯರು ಬಂದು ತಿನ್ನಬೇಕು. ಅವರು ಬರದೇ ಇದ್ದರೂ ಅವರ ಮನೆಗೆ ತೆಗೆದುಕೊಂಡು ಹೋಗಿ ಕೊಟ್ಟುಬರಬೇಕು. ಈವಾಗಂತೂ ಯಾರೂ ಬರುವುದಿಲ್ಲ. ಅಂಗಾಗಿ ಎಲ್ಲರೂ ಅವರುಗಳ ಮನೆಗೆ ತೆಗೆದುಕೊಂಡು ಹೋಗಿ ಕೊಟ್ಟುಬರುತ್ತಾರೆ. ನಮ್ಮ ಮದುವೆಗೇನೋ ಎಲ್ಲರೂ ಬಂದಿದ್ದರು.

ಮೊದಲ ಶಾಸ್ತ್ರದ ದಿನ ರಾತ್ರಿ ಉಗ್ಗಿ, ಅನ್ನ ಎಲ್ಲರಿಗೂ ಉಣಬಡಿಸಿದರು. ತಿರಗದಿನ ಬೆಳಗ್ಗೆ ನಾಲ್ಕು-ಐದು ಗಂಟೆಗೆ ನನ್ನನ್ನು ಮದುಮಗನನ್ನಾಗಿ ಮಾಡಿದರು. ಹಿಂಗೆ ಮದುಮಗ ಮಾಡಿಲಿಕ್ಕೂ ಪೆದ್ದಗಳ್ಳೆಲ್ಲರೂ ಬರಬೇಕು. ನನಗೆ ಕಚ್ಚೆ ಪಂಚೆ ಹಾಕಿ, ತಲೆಗೆ ಪೇಟ ಸುತ್ತಿ, ಪೇಟಕ್ಕೆ ಹೊಂಬಾಳೆ ಸಿಕ್ಕಿಸಿದರು. ಇಂಗೆ ಮಾಡಿದ್ದೂ ಆದ ಮೆಲೆ ಬೆಳಗ್ಗೆ ಎಂಟು ಗಂಟೆಯ ಹೊತ್ತಿಗೆ ದೇವಸ್ಥಾನದ ಮುಂದಕ್ಕೆ ಕರೆದುಕೊಂಡು ಹೋಗಿ ಕೂರಿಸಿದರು. ಅಲ್ಲಿ ನಾನು ಮತ್ತು ನಮ್ಮ ಬೀಡಿನ (ಮದುಮಕ್ಕಳಾದ) ಹುಡುಗರೆಲ್ಲರೂ ಕೂತೆವು. ಅಲ್ಲಿ ಬಂದವರಿಗೆ ಸಂಪ್ರದಾಯದಂತೆ ಬೀಡಿ, ಎಲೆ-ಅಡಿಕೆ ಕೊಟ್ಟೆವು. ಆವಾಗ ಸಿಕ್ರೇಟು ಇರಲಿಲ್ಲ. ಈವಾಗಿನ ಹುಡುಗರಾದರೆ ಬರೀ ಸಿಕ್ರೇಟ್, ವಿಮಲ್ ಅದೆಲ್ಲಾ ಕೊಡ್ತಾರೆ. ನಮ್ಮ ಕಾಲಕ್ಕೆ ಇವೆಲ್ಲ ಇರಲಿಲ್ಲ. ನಾವು ಅಲ್ಲಿ ಕೂತಾಗ ಊರಿನ ಪೆದ್ದಗಳು ಎಲ್ಲ ಸೇರಿಕೊಂಡು ವೀಳ್ಯ ತಿದ್ದುವ ಕೆಲಸ ಮಾಡುತ್ತಾರೆ. ಈ ವೀಳ್ಯ ತಿದ್ದಲು ಹೆಣ್ಣಿನ-ಗಂಡಿನ ಮನೆಯವರು ಒಂದೊಂದು ಪುಟ್ಟಿ ಎಲೆ ಮತ್ತೆ ಒಂದೆರಡು ಕೆ.ಜಿ. ಅಡಿಕೆ ತಂದು ಪೆದ್ದಗಳಿಗೆ ಅರ್ಪಿಸಿರುತ್ತಾರೆ. ಪೆದ್ದಗಳು ಹುಡುಗಿಯರ ಆಧಾರದ ಮೇಲೆ ಅವಕಾಶ ಮಾಡಿಕೊಂಡು ವೀಳ್ಯ ತಿದ್ದುತ್ತಾರೆ.

ವೀಳವನ್ನು ಪೂಜಾರಿ ಮೊದಲು ಚೆನ್ನಯ್ಯ ಮತ್ತು ಕ್ಯಾಸಯ್ಯರ ವೀಳ್ಯ ಎಂದು ಎರಡು ವೀಳ್ಯವನ್ನು ತೆಗೆದು ಇಟ್ಟುಕೊಳ್ಳುತ್ತಾನೆ. ಆ ಮೇಲೆ ವಡೇಲುವೀಳ್ಯ ಹಂಗೆ ಇನ್ನೂ ಬೇರೆ ಬೇರೆ ವೀಳ್ಯವನ್ನು ಹಕ್ಕುದಾರರಿಗೆ ಕೊಡುತ್ತಾರೆ. ಇದರ ಉದ್ದೇಶ ನಮ್ಮ ಮದುವೆಯ ಬಗ್ಗೆ ಹಿರಿಯರನ್ನು ಒಪ್ಪಿಸುವುದು. ಈ ವೀಳ್ಯ ತಿದ್ದುವುದು ಮುಗಿದ ನಂತರ ಅವರವರ ಮನೆಗಳ ಮುಂದೆ ಮೂಹೂರ್ತ ಮಾಡುತ್ತಾರೆ. ಮುಹೂರ್ತ ಮಾಡಲು ಪೂಜಾರಿಗಳ ಮನೆಯವರೋ ಇಲ್ಲದಿದ್ರೆ ಊರಿನ ಹಿರಿಯರೋ ಬರುತ್ತಾರೆ. ನಾವು ದೇವರ ಮನೆಯ ಮುಂದೆ ಕೂತಿರುವಾಗಲೇ ಪೂಜಾರಿಗಳ ಮನೆಯಿಂದ ನೀರು ಹಾಕಿಸಿಕೊಂಡು ಹುಡುಗಿಯರನ್ನು ಮದುಮಕ್ಕಳಾಗಿ ಸಿಂಗರಿಸುತ್ತಾರೆ. ನನ್ನದು ವೀಳ್ಯ ತಿದ್ದುವುದು ಮುಗಿದ ನಂತರ ಹೆಣ್ಣಿನ ಮನೆಯ ಹತ್ತಿರ ಕರೆದುಕೊಂಡು ಹೋಗಿ ತಾಳಿ ಕಟ್ಟಿಸಿದರು. ತಾಳಿ ಕಟ್ಟಿದಾಗ ನನ್ನ ಜೀವನದಲ್ಲಿ ನಾನು ಮಾಡಿದ ಸಂಪತ್ತೆಲ್ಲ ನಿನ್ನದೇ ಇಂಥ ಕೆಲವು ಮಾತುಗಳನ್ನು ಹೇಳಿಸಿ ತಾಳಿ ಕಟ್ಟಿಸಿದರು. ಆಮೇಲೆ ಬೇಷನ್‍ನಲ್ಲಿ ಹಾಲು ಹಾಕಿ ಅದರಲ್ಲಿ ಉಂಗುರ ಹಾಕಿ ಹುಡುಕಿಸಿದರು. ನಾವಿಬ್ಬರೂ ಗಂಡ ಹೆಣ್ತಿ ಆ ಉಂಗುರ ಹುಡುಕುವುದು ಮಾಡಿದೆವು. ನಮ್ಮ ಬೀಡಿನಲ್ಲಿ ಮದುವೆಯಾದವರೆಂದರೆ, ಯರ್ರ ತಾಯಜ್ಜರ ಬೋರಯ್ಯ, ಪುರ್ನ ಓಬಯ್ಯ, ಗುಡ್ಡಪ್ಪೋರ ಸಣ್ಣಣ್ಣಯ್ಯ ಇನ್ನು ಯಾರ್ಯಾರೋ ಇದ್ವಿ.

ಹಿಂಗೆ ಮುಹೂರ್ತ ಮುಗಿಸಿಕೊಂಡು ಹಾರನ್ಜೋತಿ ನೋಡಲು ಬಂದೆವು. ಹಾರನ್ಜೋತಿ ನೋಡುವುದು ಎಂದರೆ ಗಂಡ ಹೆಂಡತಿಯರು ಸೇರಿ ಊರ ಬಾಗಿಲಿಗೆ ಬಂದು ಸೂರ್ಯನನ್ನು ನೋಡಿ ನಮಸ್ಕಾರ ಮಾಡುವುದು. ಆವಾಗ ಎಲ್ಲಾ ಜೋಡಿಗಳು ಜೊತೆಯಲ್ಲೇ ಹೋಗಿ ನೋಡುತ್ತಾರೆ. ಹಾರನ್ಜೋತಿ ನೋಡಿಕೊಂಡು ಮನೆಗೆ ಹೋಗಿ ಊಟ ಮಾಡಿದೆವು. ಆವೊತ್ತು ಬೆಳಗ್ಗೆ ಅಂದರೆ ನಾಲ್ಕು ಅಥವಾ ಐದು ಗಂಟೆಗೆ ಊಟ ಮಾಡಿದ್ದು ತಿರಗ ಹಾರನ್ಜೋತಿ ನೋಡಿಕೊಂಡು ಬಂದು ಊಟ ಮಾಡಿದಾಗ ಮದ್ಯಾಹ್ನ ಎರಡು, ಮೂರು ಗಂಟೆಯಾಗಿತ್ತು. ಅಮೇಲೆ ದಾರೆ (ಮುಹೂರ್ತ) ಊಟ ಮಾಡಿದ್ದರಲ್ಲ ಅದನ್ನು ಎಲ್ಲರು ಉಂಡರು. ನಮ್ಮ ಮದುವೆಗಳಿಗೆ ಉಗ್ಗಿ-ಅನ್ನ ಮಾಡಿದ್ರು. ನನಗಿಂತ ಹಿಂದೆ ಸಜ್ಜೆ ಅನ್ನ, ಉರಳಿ ಪ್ಪೊಪ್ಪು (ಸಾರು) ಮಾಡುತ್ತಿದ್ರು. ಇವಾಗಿನ ಮದುವೆಗಳಲ್ಲಿ ಬರೀ ಲಾಡು (ಬೂಂದಿ) ಕೇಸರಿ ಬಾತ್ ಮಾಡ್ತಾರೆ. ಎಂಥರೆ ಆದರೂ ಲಾಡು ಮಾಡಿಸುತ್ತಾರೆ.

ಇಲ್ಲೆ ಮದುವೆಯ ಸಂದರ್ಭದಲ್ಲಿ ನಡೆಯುವ ಸಕಮಂಚಿ ಅಳಯುವುದರ ಬಗ್ಗೆ ಹೇಳಬಹುದು. ಮದುವೆಯು ಇನ್ನೂ ಸ್ವಲ್ಪ ದಿನ ಇದೆ ಅನ್ನಂಗೆ ಗಂಡಿನ ಮನೆಯವರು ಕಾಳನ್ನು ಚೀಲಕ್ಕೆ ತುಂಬಿ ಹೆಣ್ಣಿನ ಮನೆಗೆ ಹಾಕಿ ಬರಬೇಕು. ನಮಗಿಂತ ಹಿಂದಿನ ಕಾಲಕ್ಕೆ ಸಜ್ಜೆ, ಜೋಳವನ್ನು ಕೊಡುತ್ತಿದ್ರು. ನಮ್ಮ ಕಾಲಕ್ಕೆ ನಾವು ಕೂಡ ಒಂದು ಚೀಲ ಬತ್ತ, ಒಂದು ಚೀಲ ಸಜ್ಜೆ ಹಾಕಿದ್ವಿ. ಈಗಿನವರು ಗೋಧಿ, ಅಕ್ಕಿ ಒಂದು ಇಪ್ಪಿಪ್ಪತ್ತು ಸೇರು, ಒಂದು ಚೀಲದವರೆಗೂ ಕೊಡುವವರು ಇದ್ದಾರೆ.

1ಒಟ್ಟು ಇಂಗೆಲ್ಲ ಮಾಡ್ತಾರೆ. ಮೂರ್ತ ಆದ ಮೇಲೆ ಅವೊತ್ತು ಹಗಲೆಲ್ಲ ಬರೀ ಉಗ್ಗಿ, ಅನ್ನ ಮಾಡಿದ್ದನ್ನ ಇಡುವುದೇ ಆಗುತ್ತೇ. ಸಾಯಂಕಾಲ ಇಲ್ಲಿಂಪಲು (ಹೆಣ್ಣಿನ ಮನೆಯಿಂದ ಗಂಡ ಹೆಂಡತಿಯರನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಿ ಗಂಡನ ಮನೆ ತುಂಬಿಸಿಕೊಳ್ಳುವುದು)ವಿಗೆ ಹೋದೆವು. ಬ್ಯಾಂಡ್ ಸೆಟ್ನವರು ಚೆನ್ನಾಗಿ ಕುಡಿದು ಭಾರಿ ಊದಿದರು. ಹುಡುಗರೆಲ್ಲ ಭಾರಿ ಕುಣಿದರು. ನಾವು ನಮ್ಮ ಮನೆಯ ಹತ್ತಿರಕ್ಕೆ ಮೆರವಣಿಗೆಯಲ್ಲಿ ಹೋದಾಗ ನನ್ನ ಕೈಗೆ ಒಂದು ಕೂರಿಗೆ ಬಟ್ಟಲು (ಬಿತ್ತಲು ಉಪಯೋಗಿಸುವ ಸಾಧನ) ನನ್ನ ಹೆಂಡ್ತಿಯ ಕೈಗೆ ಒಂದು ಮಜ್ಜಿಗೆ ಕಡಿಯುವ ಸಾಧನವನ್ನು ಕೊಟ್ಟರು. ನಾವು ಅವುಗಳನ್ನು ಹೆಗಲ ಮೆಲೆ ಇಟ್ಟುಕೊಂಡು ನಮ್ಮ (ಗಂಡಿನ) ಮನೆಯ ಬಾಗಿಲಿಗೆ ಹೋದೆವು. ಆವಾಗ ಮನೆಯ ಹೊಸ್ತಿಲಿಗೆ ಒಂದು ಎರಡು ಇಂಚಿನ ಮೊಳೆಹೊಡೆದು ನಮ್ಮನ್ನು ಒಳಗೆ ಕರೆದುಕೊಂಡರು. ಆವೊತ್ತಿಗೆ ಶಾಸ್ತ್ರಗಳು ಮುಗಿದವು. ಉಳಿದವು ಇನ್ನೊಂದು ದಿನ ಅಂದರೆ ತಿರಗದಿನಕ್ಕೆ.

ತಿರಗದಿನ ಗಂಗಮ್ಮನ ಶಾಸ್ತ್ರ, ಅವೊತ್ತು ಗಂಡನ ಮನೆಯವರದೇ ಊಟದ ವ್ಯವಸ್ಥೆ. ಮದುಮಗಳನ್ನು ಗಂಗಮ್ಮಗೆ ಕರೆದುಕೊಂಡು ಹೋಗುವುದಕ್ಕಿಂತ ಮುಂಚಿತವಾಗಿ ಅವೊತ್ತು ಮದ್ಯಾಹ್ನ ಊರಿನಲ್ಲೇ ಒಳ್ಳೆಯ ಮನೆಯಲ್ಲಿ ಮದುಮಗಳನ್ನು ಬಚ್ಚಿಡುತ್ತಾರೆ. ಅದನ್ನು ನಾವು ಹುಡುಕಿಕೊಂಡು ಹೋಗಬೇಕು. ನಾನು ಹುಡುಕಿಕೊಂಡು ಹೋದೆ. ಒಂದು ಮನೆಯಲ್ಲಿ ಬಚ್ಚಿಟ್ಟಿದ್ದ ನನ್ನ ಹೆಂಡತಿಯನ್ನು ಹುಡುಕಿ ಮನೆಯ ಹೊಸ್ತಿಲ ಹೊರಗೆ ಹೊತ್ತುಕೊಂಡು ಬಂದೆ. ಕೆಲವು ಸಮಯಗಳಲ್ಲಿ ನಾಲ್ಕೈದು ಜನ ಮದುಮಕ್ಕಳನ್ನು ಒಂದೆ ಮನೆಯಲ್ಲಿ ಬಚ್ಟಿಟ್ಟಿರುತ್ತಾರೆ. ಆವಾಗ ಮಂದಲಿಂಗರು (ವರಗಳು) ಗುಂಪಾಗಿ ಹೋಗಿ ಕತ್ತಲ ಕೋಣೆಯಲ್ಲಿ ಕುಳಿತಿರುವ ತಮ್ಮ ಹೆಂಡತಿಯನ್ನು ಹೊತ್ತುಕೊಂಡು ಬರಬೇಕು. ಇಂಥ ಸಮಯದಲ್ಲಿ ತಮ್ಮ ಹೆಂಡತಿಯರನ್ನು ಬಿಟ್ಟು ಬೇರೆಯವರನ್ನು ಹೊತ್ತುಕೊಂಡು ಬಂದು ನಗೆಪಾಟಲಾಗಿದ್ದು ಇದೆ. ನನಗೇನು ಇಂಥ ಕಷ್ಟ ಇರಲಿಲ್ಲ. ಹಿಂಗೆ ಬಚ್ಟಿಟ್ಟಿದ್ದ ಹೆಂಡತಿಯನ್ನು ಕರೆದುಕಂಡು ಬಂದ ಮೆಲೆ ಮನೆಯ ಅಂಗಳದಲ್ಲಿ ಅಥವಾ ಅಂಗಳದ (ಚಪ್ಪರದ) ಕೆಳಗೆ ಮುಯ್ಯಿ ಮಾಡಲು (ಬಹುಮಾನ ಸ್ವೀಕರಿಸಲು) ಕೂರಿಸುತ್ತಾರೆ. ನಮ್ಮನ್ನು ಹಾಗೆ ಕೂರಿಸಿದರು. ಆವಾಗ ನಮಗೆ ಸ್ಟೀಲ್ ಸಾಮಾನು ಹೆಚ್ಚಿಗೆ ಬಂದಿರಲಿಲ್ಲ. ದುಡ್ಡು ಮಾಡಿದರು ಬಾಳ ಜನ. ಹೀಗೆ ಕೂರಿಸಿ ಆದ ಮೇಲೆ ನಮಗೆ ಮತ್ತೆ ಮೈತೊಳಸಿದರು.

ಮೈತೊಳಿಸುವಾಗ ನಾವು ಹಾಕಿಕೊಂಡಿದ್ದ ಎಲೆ ಅಡಿಕೆಯ ರಸವನ್ನು ಒಬ್ಬರ ಮೈಮೇಲೆ ಒಬ್ಬರಿಗೆ ಉಗಿಸುತ್ತಾರೆ. ಹಾಗೆಯೇ ಒಬ್ಬರ ಮೇಲೆ ಇನ್ನೊಬ್ಬರನ್ನು ಬಗ್ಗಿಸಿ ಇಬ್ಬರ ಮೇಲೂ ನೀರು ಹಾಕುತ್ತಾರೆ. ಆಮೇಲೆ ನನ್ನ ಹೆಂಡತಿಯನ್ನು ಗಂಗಮ್ಮಗೆ ಕರೆದುಕೊಂಡು ಹೋದ್ರು ಗಂಗಮ್ಮ ಮಾಡಿಕೊಂಡು ಬಂದ್ರು, ಬಂದಾಗ ನನ್ನ ಹೆಂಡತಿ ಹೊತ್ತುಕೊಂಡು ಬಂದ ಕೊಡವನ್ನು ನಾನು ಇಳಿಸಿಕೊಂಡೆ. ಆವಾಗ ನಾನು ಯಾರ್ಯಾರು ಬಂದ್ರಿ ಎಂದು ಕೇಳಿದೆ. ಅದಕ್ಕೆ ಆ ಹುಡುಗಿ ನಾನು ಮತ್ತು ಗಂಗಮ್ಮ ಬಂದ್ವಿ ಎಂದು ಹೇಳಿದಳು. ಇದು ಪದ್ಧತಿ. ಆಮೇಲೆ ಅಡಿಗೆ ಮಾಡಿದ್ದನ್ನು ಜನರಿಗೆ ಬಡಿಸಿದ್ವಿ. ಇಲ್ಲಿಗೆ ನಮ್ಮ ಮದುವೆ ಮುಗಿಯಿತು. ಹಿಂಗೆ ಮದುವೆಯಾಗಿ ಎಂಗೆಂಗೊ ಬದುಕಿ ಬಾಳಿದ್ವಿ. ನನಗೆ ಇಬ್ಬರು ಗಂಡು ಮಕ್ಕಳು, ಆರು ಜನ ಹೆಣ್ಣು ಮಕ್ಕಳು. ಇವರಿಗೆಲ್ಲಾ ಮದುವೆಯಾಗಿ ಇಪ್ಪತ್ತು ಜನ ಮೊಮ್ಮಕ್ಕಳು ಆಗಿದ್ದಾರೆ. ಇವಾಗ ನಮಗೆ ಭಾರಿ ಕಷ್ಟಗಳಿದ್ದಾವೆ. ಆದ್ರೂ ಆ ಮುತ್ತಯ್ಯಗಳ ಆಶೀರ್ವಾದದಿಂದ ಹೆಂಗೋ ಬದುಕುತ್ತಿದ್ದೇವೆ.
ನನ್ನ ದೊಡ್ಡ ಮಗ ಎತ್ತಿನ ಓಬಯ್ಯ. ಈತನಿಗೆ ಈವಾಗ 30 ವರ್ಷದ ಮೇಲೆ ಆಗೈತಿ. ಒಂದ್ಸಲ ಪೂರ್ವದ ದೇವರು ಆಗಿತ್ತು. ಆವಾಗ ನನ್ನಿವಾಳದ ಗುಡ್ಡ ಹತ್ತುವಾಗ ಈಗಿನ ಯರಬೋತಲ ಬೋರಯ್ಯನ (ಮುಕ್ಕಡಿ ಬೋರಯ್ಯ) ತಮ್ಮ ಪಾಲಯ್ಯ ಅಂತ ಒಬ್ಬ ಇದ್ದ. ಅವನು ನಮ್ಮ ಓಬಯ್ಯನನ್ನು ಎತ್ತಿಕೊಂಡು ಗುಡ್ಡ ಹತ್ತಿದ್ದ. ಯಾರಾದರೂ ಯಾರ ಮಗ ಅಂತ ಅವನನ್ನು ಕೇಳಿದರೆ ಗಗ್ಗ ಬೋರಯ್ಯನ ಮಗ ಅಂತ ಹೇಳ್ತಿದ್ದನಂತೆ ಹ್ಹ…ಹ್ಹ….

ಹಿಂಗೆ ಯಾಕೆ ಹೇಳ್ತಿದ್ದ ಅಂದ್ರೆ ನಾವು ಬಾಳ ದಿನ ಗಗ್ಗಬೋರಯ್ಯ(ಅಣ್ಣ)ನ ಮನೆಯಲ್ಲಿಯೇ ಇದ್ದೆವು. ಈಗಲೂ ನಮ್ಮ ಓಬಯ್ಯ ಅವರ ಮನೆಯಲ್ಲೇ ಇದ್ದಾನೆ. ನಾಯಕನಹಟ್ಟಿಯಲ್ಲಿ ಗೊಬ್ಬರದ ಅಂಗಡಿಯನ್ನು ಹಾಕಿದ್ದಾನೆ. ಇದಕ್ಕೆ ಬೇಕಾದ್ದದನೆಲ್ಲಾ ಗಗ್ಗಬೋರಣ್ಣನೇ ಕೊಡಿಸುತ್ತಾನೆ. ನನ್ನ ಮಗನನ್ನು ಓದಿಸಿದ್ದು ಗಗ್ಗಬೋರಣ್ಣನೇ ನಮ್ಮ ಓಬಯ್ಯ ಬಾಳ ಓದಿದ್ದಾನೆ.

ನಾವು ಗಗ್ಗಬೋರಣ್ಣನ ಮನೆಗೆ ಬಂದದ್ದು ಯಾವಾಗೆಂದರೆ ನನ್ನಹೆಂಡ್ತಿಗೆ ಗಂಡಮಾಳು (ಗಂಟಲಲ್ಲಿ ಗೆಡ್ಡೆ ತರಾಗುವ ಕಾಯಿಲೆ) ಎದ್ದಿದ್ದವು. ಆವಾಗ ಗಗ್ಗಬೋರಣ್ಣನೇ ಆಸ್ಪತ್ರೆಗೆ ಕರಕೊಂಡೋಗಿ ತೋರಿಸಿದರು. ಆಪ್ಲೇಸನ್ ಮಾಡ್ಸಿದರು. ಮೂರು ತಿಂಗಳು ಅಲ್ಲೇ ಆಸ್ಪತ್ರೆಗೆ ಇದ್ರು. ನನ್ನ ಮೂರನೇ ಮಗಳು ಎತ್ತಿನ ಓಬಮ್ಮ ಹುಟ್ಟಿದಾಗಲೇ ಈ ಗಂಡ ಮಾಳಲು ಎದ್ದಿದ್ದು. ಈಯಮ್ಮನ ಹಿಂದೆ ಎತ್ತಿನ ಓಬಯ್ಯ, ಎತ್ತಿನ ಬೋರಮ್ಮ ಹುಟ್ಟಿದರು. ಇಂಥ ಸಮಯದಾಗ ಮಂಡು ದಡಾರ ಎದ್ದಿದ್ದವು. ಅವುಗಳಲ್ಲಿ ಅಂಗೇ ಗಂಡಮಾಳು ಎದ್ದುಬಿಟ್ಟವು. ದುರುಗದಲ್ಲಿ ಆಪ್ಲೇಸನ್ ಮಾಡ್ಸಿ ಸರಿಮಾಡಿದರು. ಆಪ್ಲೇಸನ್ ಮಾಡುವಾಗಲೂ ನಾನು ಹೋಗುತ್ತಿರಲಿಲ್ಲ. ಅವರು ಬರುವವರೆಗೂ ಅಣಕಿ ನೋಡಿರಲಿಲ್ಲ. ಅಲ್ಲಿಗೂ ಅಲ್ಲಿ ಆಸ್ಪತ್ರೆಗೆ ಯಾರಾದರೂ ಕೇಳಿದ್ರೆ ಕೆಲಸದ ಮೇಲೆ ಹೋಗಿದ್ದಾನೆ ಅಂತ ಹೇಳ್ತಿದ್ರಂತೆ ಹ್ಹ…ಹ್ಹ…ಆವಾಗ ಅವರ (ಗಗ್ಗಬೋರಣ್ಣ) ಮನೆಗೆ ಹೋಗಿದ್ದು. ನನ್ನ ಎಲ್ಲಾ ಮಕ್ಕಳ ಮದುವೆ ಮಾಡಿಕೊಡುವವರೆಗೂ ಅಲ್ಲೇ ಇದ್ವಿ. ಮೊನ್ನೆ ಮೊನ್ನೆ ನಮ್ಮದು ಒಂದು ಹೊಸ ಮನೆ ಕಟ್ಟಿದ್ವಿ. ಆವಾಗ ಆ ಮನೆ ಬಿಟ್ಟು ಬಂದ್ವಿ.

ಗಗ್ಗಬೋರಣ್ಣನ ಮನೆಯಲ್ಲಿ ನಾವೆಲ್ಲ ಇದ್ರೂ ಹೆಣ್ಣು ಮಕ್ಕಳ ಮದುವೆಯಲ್ಲ ಮಾಡಿದ್ದೂ ನಾನೇ. ಅವರ ದೊಡ್ಡಪ್ಪ (ಗಗ್ಗಬೋರಣ್ಣ) ಒಂದಿಬ್ಬರು ಹೆಣ್ಣುಮಕ್ಕಳಿಗೆ ಸ್ವಲ್ಪ ಒಡವೆ ತಂದಿದ್ದಾನೆ. ನನ್ನ ಆರು ಜನ ಹೆಣ್ಣು ಮಕ್ಕಳನ್ನು ನಾನು ಭಕ್ತರ ಹತ್ತಿರ ಎತ್ತಿದ ಕಾಳು ಕಡಿಯಲ್ಲಿ ಸ್ವಲ್ಪ ಮಾರಿ ದುಡ್ಡು ಮಾಡಿಕೊಂಡು ಮದುವೆ ಮಾಡಿಕೊಟ್ಟಿದ್ದೇನೆ. ನನ್ನ ಹೆಣ್ಣು ಮಕ್ಕಳನ್ನೆಲ್ಲಾ ನನ್ನ ಸಂಬಂಧದಲ್ಲಿಯೇ ಕೊಟ್ಟಿದ್ದೇನೆ. ಬೊಮ್ಮದೇವಡ್ಲಿಗೆ ಮೂವರನ್ನು, ಒಬ್ಬರನ್ನು ಈಗಲೋರ ಮನೆಗೆ, ಇನ್ನೊಬ್ಬಾಕೆಯನ್ನು ಅಜ್ಜುಡ್ಲೋರ ಮನೆಗೆ, ಇನ್ನೊಬ್ಬಾಯಮ್ಮನನ್ನು ಕುಕ್ಕಲೋರ ಮನೆಗೆ ಕೊಟ್ಟಿದ್ದೇನೆ. ಎಲ್ಲರಿಗೂ ಮಕ್ಕಳು ಆಗಿದ್ದಾವೆ. ಆಳಿಯಂದಿರು ಎಲ್ಲರು ಒಳ್ಳೆಯವರು. ಯಾರು ನಮಗೆ ಭಾರಿ ಕಷ್ಟವನ್ನು ಕೊಟ್ಟಿಲ್ಲ. ಕಳ್ಸಿಕೊಡದಕ್ಕೋ, ಕರಕ್ಕೊಂಡು ಬರೋದಕ್ಕೋ ಸಣ್ಣ-ಪುಟ್ಟ ಗಲಾಟೆಗಳು ಆಗಿದ್ದಾವೆ. ಅವರು ಮುನಿಸಿಕೊಂಡು ಹೋಗಿದ್ದಾರೆ. ನಾವು ಮುನಿಸಿಕೊಂಡಿದ್ದೀವಿ. ಆದರೆ ಭಾರೀ ವಿರೋಧಗಳನ್ನು ಕಟ್ಟಿಕೊಂಡಿಲ್ಲ. ನನ್ನ ದೊಡ್ಡ ಮಗ ಓಬ್ಬಯ್ಯ ಅವರ ಅಕ್ಕನ ಮಗಳನ್ನೇ ಮದುವೆಯಾದ. ಅವನು ಚೆನ್ನಾಗಿದ್ದಾನೆ. ಅವರ ದೊಡ್ಡಪ್ಪ (ಗಗ್ಗಬೋರಯ್ಯ) ಮತ್ತು ಮಾವಂದಿರೆಲ್ಲ ಒಂದೇ ಕುಟುಂಬದಲ್ಲಿ ಇದ್ದಾರೆ. ಇವನು ಕೂಡ ಅಲ್ಲೇ ಹೆಣ್ತಿಯತ್ತರ ಇದ್ದಾನೆ. ನಮ್ಮ ಹೊಸ ಮನೆಗೆ ದಿನಾ ಸಾಯಂಕಾಲ ಬಂದೋಗುತ್ತಾನೆ.

ನನ್ನ ತಂದೆ-ತಾಯಿಗಳು ಯಾವಾಗ ಸತ್ತರು ಅನ್ನೋದು ಸರಿಯಾಗಿ ಗೊತ್ತಿಲ್ಲ. ಸತ್ತಾಗ ನಾನು ತುಂಬಾ ದುಃಖ ಪಟ್ಟಿದ್ದೇನೆ. ಇಂಥ ಟೈಮಲ್ಲೇ ಸತ್ರು ಅಂಥ ಹೇಳಾಕೆ ನನಗೆ ಸರಿಯಾಗಿ ನೆನಪಲ್ಲಿ ಉಳಿದಿಲ್ಲ. ನಾನು ಮೊದಲಿಂದಲೂ ಯಾವುದಾದರೂ ಒಂದು ಕೆಲಸ ಮಾಡುತ್ತಲೇ ಬಂದಿದ್ದೇನೆ. ಸಣ್ಣವನಿರುವಾಗ ನಮ್ಮ ಅಪ್ಪನ ಹತ್ತಿರ ಭಾರಿ ಹೊಡೆತ ತಿನ್ನುತ್ತಿದ್ದೆ. ಒಂದು ಸಲ ಬಾಳಸಿ (ಆಯುಧ) ಹೊಲದಲ್ಲೇ ಬಿಟ್ಟು ಬಂದು ನಮ್ಮ ಅಪ್ಪನ ಹತ್ತಿರ ಭಾರಿ ಹೊಡೆಸಿಕೊಂಡಿದ್ದು ನನಗಿನ್ನೂ ನೆನಪಿದೆ.

2ನಾವು ಮೂರು ಜನ ಅಣ್ಣ ತಮ್ಮಂದಿರು, ಇಬ್ಬರು ತಂಗಿಯರು. ನಮ್ಮದು ಒಂದು ಇಪ್ಪತ್ತು ಎಕರೆ ಜಮೀನು ಇದೆ. ಅದನ್ನು ನಾವು ಮೊದಲು ಕೂಡಿಯೇ ಮಾಡುತ್ತಿದ್ವಿ. ನಾವು ಅಲ್ಲಿ ಬಿಟ್ಟು ಇತ್ಲಗೆ ಬಂದ ಮೇಲೆ ಹತ್ತಿರಕ್ಕೂ ಹೋಗಿಲ್ಲ. ಅವರು ಹೊಲದಲ್ಲಿ ಬೆಳದದ್ದು ಯಾವುದನ್ನೂ ನನಗೆ ಸ್ವಲ್ಪವಾದರೂ ಕೊಡುವುದಿಲ್ಲ. ನಾನು ಭಾಗ ಕೂಡ ಅವರನ್ನು ಕೇಳಿಲ್ಲ. ನಾನು ದೇವರ ಮನೆಯ ಹತ್ತಿರ ಸಿಕ್ಕ ಸಾಮಾನುಗಳು ಏನೇ ಆದರೂ ನಾನೊಬ್ಬನೇ ನನ್ನ ಮನೆಗೆ ತಗೊಂಡೋಗುವುದಿಲ್ಲ. ಅವರ ಮನೆಗೆ ಕೊಟ್ಟು ನಾನು ಸ್ವಲ್ಪ ಮಾತ್ರ ತಗೊಂಡೋಗುತ್ತೇನೆ. ಇಂಥದರಾಗೆ ನನ್ನ ಬಿಟ್ಟು ಇನ್ನು ಯಾರಾಗಿದ್ದರು ಇಷ್ಟೊತ್ತಿಗೆ ನನ್ನದು ನನಗೆ ಕೊಡ್ರಿ ಅಂಥ ಭಾಗ ಕೇಳ್ತಿದ್ರು. ನನಗೂ ಭಾರೀ ಜನ ಹಿಂಗೆ ಅವರೊಬ್ಬರೇ ದುಡಕೊಂಡು ತಿನ್ನುತ್ತಾರೆ. ನಿನಗೇನೂ ಕೊಡುವುದಿಲ್ಲ ಅಂತ ಹೇಳ್ತಾರೆ. ನಾನು ಮಾತ್ರ ಯಾರ ಮಾತೂ ಕೇಳಲಿಲ್ಲ. ನನ್ನದೇನು ಅಂದ್ರೆ ಬರೋದು ಬಂದೇ ಬರುತ್ತೆ ಇನ್ನೂ ಸ್ವಲ್ಪ ದಿನ ಮಾಡಿಕೊಂಡು ತಿನ್ನಲಿ ಅಂತ. ಅವರು ಕಷ್ಟಪಡುತ್ತಾರೆ. ಅವರು ತಿನ್ನುತ್ತಾರೆ. ಆಮೇಲೆ ಅವರು ನನ್ನ ಮೇಲೆ ನಿಷ್ಠುರ ಹೊರಿಸಬಾರದು. ಅದಕ್ಕಾಗಿ ನಾನು ಅವರಿಗೆ ಹೇಳಿದ್ದೀನಿ. ನೀವು ಒಂದೆರಡು ಮನೆ ಕಟ್ಟಿಸಿಕೊಳ್ರಿ. ಹಿಂಗೆ ಇರುವವರು ಹಿಂಗೆ ಇರಾಕೆ ಆಗದಿಲ್ಲ.

ನಾನು ಮೊನ್ನೆ ಮೊನ್ನೆ ಒಂದು ಆರ್.ಸಿ.ಸಿ ಮನೆಕಟ್ಟಿಸಿದ್ದೀನಿ. ಒಂದೂವರೆ ಲಕ್ಷ ರೂಪಾಯಿ ಆಯಿತು. ನನ್ನ ದೊಡ್ಡಮಗ ಓಬಯ್ಯನ ಮದುವೆ ಮನೆ ಖರ್ಚುಗಳೆಲ್ಲ ಒಂದೇ ಸಲ ಬಂದವು. ಈಗ ಅದಕ್ಕೆಲ್ಲ ಸ್ವಲ್ಪ ಸಾಲ ಮಾಡಿಕೊಂಡಿದ್ದೇನೆ. ನನ್ನ ತಮ್ಮ ಸಣ್ಣೋಬಯ್ಯನು ಆವಾಗ ಅರ್ಧ ಖರ್ಚು ಹಾಕಿಕೊಂಡಿದ್ದಾನೆ. ನನ್ನ ಮಕ್ಕಳ ಮದುವೆಯಲ್ಲಿ ಸಹಾಯ ಮಾಡಿದ. ಗೋದಿ ಬೆಳೆದು ಕೊಟ್ಟಿದ್ದ.

ನಮ್ಮ ಮನೆ ಊರಿನ (ಗುರುಮಠ) ನರಹರಿಸ್ವಾಮಿಗಳ ಮಠದ ಪಕ್ಕ್ಕದಲ್ಲಿದೆ. ಅದರ ಆಯ ಇಪ್ಪತ್ಮೂರು ಅಡಿ ಉದ್ದ, ಹದಿಮೂರು ಅಡಿ ಅಗಲ. ಇದನ್ನು ಆಯ ಕೂಡಿಕೊಟ್ಟವರು ಸಣ್ಣ ಬೊಮ್ಮದೇವಡ್ಲ ಮುತ್ತಪ್ಪ. ಆರ್‍ಸಿಸಿ ಮನೆ ನಮ್ಮದು. ನೀವೇನು ನಾವೆಲ್ಲ ಭಿಕ್ಷುಕರು, ಅರ್‍ಸಿಸಿ ಮನೆ ಎಲ್ಲಿ ಕಟ್ಟಿಸುತ್ತೀವಿ ಅಂಥ ತಿಳಿದುಕೊಂಡಿದ್ದೀರಿ. ನಮ್ಮ ಮಗನನ್ನು ಯಾವನೋ ಒಬ್ಬ ನೌಕರಿದಾರ ಮುದ್ದೇನು ಅಂದ್ನಂತೆ. ಆವಾಗ ನಾನು ಇದ್ದಿದ್ದರೆ ಸರಿಯಾಗಿ ಹೇಳ್ತಿದ್ದೆ. ನಾವು ರಣ ರಣ ದುಡಕೊಂಡು ತಿಂತೀವಿ. ನೀನು ಕಂಡರ ಹತ್ತಿರ ಸಂಬಳ ಐದಿಯಲ್ಲೋ ಅಂತ ಹೇಳ್ತಿದ್ದೆ.

ನಾವೇನೂ ಬಾರಿ ಸಾವುಕಾರರಲ್ಲದಿದ್ದರೂ ಬರೀ ಭಕ್ತರು ಕೊಟ್ಟ ಭಿಕ್ಷದಲ್ಲೇ ಮನೆಕಟ್ಟಿದೆ. ಎಲ್ಲ ಮುತ್ತಯ್ಯಗಳ ಒಲುಮೆ. ನಾನೇನು ಬಾರಿ ಕಷ್ಟಬಿದ್ದು ದುಡಿದು ಕಟ್ಟಿಲ್ಲ. ಎಲ್ಲಾ ಮುತ್ತಯ್ಯಗಳ ಭಕ್ತಿಯಾಗೆ ನಡೀತು. ನಾನು ಭಕ್ತರ ಹತ್ತಿರ ಸಿಕ್ಕ ಪಾವೋ-ಸೋರೋ ಕಾಳನ್ನು ಅಂಗಡಿಗೆ ಹಾಕಿ ದುಡ್ಡು ಮಾಡಿಕೊಂಡು ಮನೆದೊಡ್ಡದು ಮಾಡಿದೆ.

ಮೊದಲು ಮನ್ನೆಬೋರಜ್ಜ ಅಂತ ಸೇರ್ಮನ್ (ಚೇರ್‍ಮನ್) ಇದ್ದ. ಆತ ಮನೆಕಟ್ಟಲು ಜಾಗಗಳನ್ನು ಕೊಡುವಾಗ ಏನನ್ನು ತೆಗೆದುಕೊಳ್ಳುತ್ತಿರಲಿಲ್ಲ. ಬರೀ ಎಲೆ ಅಡಿಕೆ ಕೊಟ್ಟರೆ ಸಾಕು ಜಾಗ ಕೊಟ್ಟು ಹೋಗ್ತಿದ್ದ. ಅದರೆ ಈಗ ನೋಡು ಎಂಗಾಗಿದೆ ಹತ್ತೋ, ಹನ್ನೆರಡೂ ಸಾವಿರ ಕೇಳ್ತಾರೆ. ನನಗೇನು ಮಾರಾಯ ನಲಗೇತು (ದಿ:ಪಿ.ಎಂ.ನಲಗೇತಯ್ಯ) ಅವನಿಗೆ ಕೈ ಎತ್ತಿ ಮುಗೀಬೇಕು. ಅವನು ನೀನು ಕೊಡಪ್ಪ ಅಂತ್ ಕೇಳ್ದೋನು ಅಲ್ಲ. ಬಿಡಪ್ಪ ಅಂತ ಕೇಳ್ದೋನು ಅಲ್ಲ. ಊರಿನ ಕೆಲವು ಜನ ನನ್ಗೆ ಮಾಡಿದರು. ನಲಗೇತುಗೆ ಏನನ್ನ ಕೊಡು ಅಂತ ಹೇಳಿದರು. ಆವಾಗ ನಾನು ಬರೀ ನಾನೂರು ತಗೊಂಡೋಗಿ ಕೊಟ್ಟೆ. ಆತನೂ ಸುಮ್ಮನೆ ಇಸ್ಕೊಂಡ, ನೀನು ಇಷ್ಟು ಕೊಡಪ್ಪ ಅಂತ ಕೇಳಲಿಲ್ಲ. ಆವಾಗ ಮೂರು ಜಾಗಗಳು ಮಾಡಿಕೊಟ್ಟ. ಸತ್ತು ಸ್ವರಗದಾಗೆ ಇದಾನೆ. ಅವನ್ನ ನೆನಸಬೇಕು. ಈವಾಗ ಅಗಿದ್ದಿದ್ದರೆ ಅಂಥ ಜಾಗಗಳನ್ನು ನನಗೆ ಮಾಡಿಕೊಡುತ್ತಿರಲಿಲ್ಲ. ನಲಗೇತು ಅವರ ಅಪ್ಪ (ಪುರ್ನ ಮುತ್ತಪ್ಪ) ನಿಗೂ ಒಂದು ಇನ್ನೂರು ರೂಪಾಯಿ ಕೊಟ್ಟಿದ್ದೆ. ಅವುನ್ನ ಅವರ ಮನೆಯ ಹೆಣ್ಣು ಮಕ್ಕಳ ಕೈಗೆ ಕೊಟ್ಟು ಬಂದಿದ್ದೆ. ಅವುನ್ನ ಆ ಹೆಣ್ಣುಮಕ್ಕಳು ಅವಜ್ಜಗೆ ಕೊಟ್ರೋ ಯಂಗೋ ಗೊತ್ತಿಲ್ಲಪ್ಪ. ಎಂಗೋ ಹಿಂಗೆ ಮಾಡಿಕೊಂಡು ಬಂದಿದ್ದೀನಿ.

ಇವಾಗ ಅಂಗಿಲ್ಲ. ಭಕ್ತರು ಕೂಡ ನ್ಯಾಯವಾಗಿ ನನಗೆ ಬರಬೇಕಾದ ಪಾಲನ್ನು ಸರಿಯಾಗಿ ಕೊಡುವುದಿಲ್ಲ. ನಾನು ಹೋಗದೆಇದ್ರೆ ಕೊಡುವುದೇ ಇಲ್ಲ. ಕೆಲವು ಯಜಮಾನ್ರು ಮಾತ್ರ ನಾನು ಹೋಗದೆ ಇದ್ರೂನು ಮನೆಗೆ ಹೊರಿಸಿಕಳಿಸುತ್ತಾರೆ. ಮೊದಲು ಕೆಲವು ಜನ ಚೆನ್ನಾಗಿ ಕೊಡುತ್ತಿದ್ದರು. ಆ ಮನೆಗಳ ಯಜಮಾನ್ರು ಸತ್ತೋದ ಮೇಲೆ ಈ ಹುಡುಗರು ಕೊಡುವುದೇ ಇಲ್ಲ. ಹಿಂಗೆ ಭಕ್ತರು ಕೊಟ್ಟಿದ್ರಲ್ಲೇ ಕಾಲ ಕಳೆಯಬೇಕು ಹೊರತು ಬೇರೇನು ಆದೀಕ (ಆದಾಯ) ಇದೆಯಪ್ಪ ತಿಳಿದಂತವರು ನೀವೆ ಹೇಳ್ರಪ್ಪ.

ಭಕ್ತರು ಹರಕೆ ಮಾಡಿಕೊಂಡಾಗ, ಸುರುಬು ಬಿಡುವಾಗಲೋ, ಒಡವೆ ಒಪ್ಪಿಸುವಾಗ್ಲೋ ನನ್ಗೆ ಬಟ್ಟೆ ತರ್ತಾರೆ. ಪೆದ್ದಗಳೇನೂ ತರುವುದಿಲ್ಲ. ದೇವರಾಗೆ ಮಾತ್ರ ನಾವು ಆಧಿಕಾರಿಗಳು ಅಂಥ ಹೇಳಿಕೊಳ್ಳುತ್ತಾರೆ. ನನ್ನ ಕಷ್ಟ ಏನು ಅಂತ ಅವರಿಗೇನು ಗೊತ್ತಾಗಬೇಕು?
ಈವಾಗ ನಮ್ಮೂರಾಗೆ ಕೆಲವು ಕಡೆ ಗಂಡಸರು ಕಾಳು ಕೊಡದೇ ನಾನು ಕಣಕ್ಕೆ ಹೋದಾಗ ಹೆಂಗಸರ ಹತ್ತಿರ ಕೊಡಿಸುತ್ತಾರೆ. ಆ ಗಂಡಸರು, ಹೆಂಗ್ಸರಾಗಿದ್ದರೆ ಚೆನ್ನಾಗಿತ್ತು. ಕಣದಲ್ಲಿ ಯಾರಿಗೆ ಕೊಡಬೇಕು ಎನ್ನುವ ಅರಿವು ಇಲ್ಲದೇ ಹೋದ್ರೆ ಎಂಗಪ್ಪ? ನಾನು ಗಂಡು ಮಗ ಆಗಿ ಹೆಂಗಸರ ಹತ್ತಿರ ಸೆರಗೊಡ್ಡಬೇಕೋ ಅವನೇಣ್ತಿ, ಅಷ್ಟು ಬುದ್ದಿ ಬ್ಯಾಡ್ವಾ?

ನಾನು ಸಂಸಾರ ಕಟ್ಟಿಕೊಂಡಾಗಿನಿಂದ ಗೂಡು ಹತ್ತಿರ ಮಲಗೊದನ್ನು ಬಿಟ್ಟೆ. ಹಗಲೆಲ್ಲ ದೇವರೆತ್ತುಗಳನ್ನು ಕಾವಲಿಗೆ ಹೊಡೆದುಕೊಂಡು ಹೋಗೋದು, ಸಾಯಂಕಾಲ ವಡಪು (ಆಗ್ನಿ ಕುಂಡದ ತರದ ಗುಂಡಿಗೆ ಹೊಗೆ ಹಾಕುವುದು) ಹಾಕಿ ದೇವರೆತ್ತುಗಳನ್ನು ಕೂಡಿ ಮಲಗೋದಕ್ಕೆ ಬರ್ತೀನಿ. ಯಾಕೆಂದರೆ ನೋಡಪ್ಪೋ ಇಂತವರಿಗೆ ಕೊಟ್ಟರೆ ಅವನು ಸಂಸಾರ ಬಿಟ್ಟು ಎಲ್ಲೋ ಮಲಗುತ್ತಾನೆ ಅಂತ ಅನ್ನಬಾರದು ಅಂತ. ಅದರಿಂದ ಗೂಡಿನ ಹತ್ತಿರಾನೆ ಕಾದುಕೊಂಡು ಮಲಗಲಿಕ್ಕೆ ಆಗುವುದಿಲ್ಲ. ಸೋಮುವಾರದ ದಿನ ಮಾತ್ರ ಇಲ್ಲೆ ಮಲಗುತ್ತೇನೆ. ಯಾಕೆಂದ್ರೆ ಊರಿನ ಜನ ಗೂಡು ಮಲಗಲು ಗೂಡಿಗೆ ಬರುತ್ತಾರೆ. ಅವರಿಗೆಲ್ಲ ಪೂಜೆ ಮಾಡಾಕೆ ಮತ್ತು ಬೆಳಗ್ಗೆ ಎದ್ದು ಅವರಿಗೆಲ್ಲ ಮುದ್ದೆ ಮಾಡಿಡಬೇಕಲ್ಲ ಅದಕ್ಕೆ ಇರ್ತೀನಿ. ಇಂಥ ದಿನ ಜನರು ನುಚ್ಚು ಹಿಟ್ಟು ಸಾರಿನ ಕಾಳು ಅವೆಲ್ಲ ತರ್ತಾರೆ. ಅದರಗೇನು ನನಗೆ ಉಳಿಯುವುದಿಲ್ಲ. ಅದನ್ನೆಲ್ಲ ಅವರಿಗೆ ಮುದ್ದೆ ಮಾಡಿ ಹಾಕಿಬಿಡ್ತೀನಿ. ಅದನ್ನು ಅವರು ಉಂಡು-ಪಂಡು ಅವರ ಅವರ ಕೈಯಾಗೆ ಇದ್ದಷ್ಟು ಕಾಣಿಕೆಗಳನ್ನು ಕೊಟ್ಟು ಹೋಗ್ತಾರೆ. ನನ್ನ ಜೀವನ ಭಕ್ತರ ಹತ್ತಿರ ಕಣಗಳಗುಂಟೆ ಹೋಗಿ ಕಾಳು ತಗೊಂಡು ಬರುವುದರ ಮೇಲೆ ನಿಂತಿದೆ. ಆದರೆ ಪಕ್ಕದ ನನ್ನಿವಾಳದ ‘ಹೂಲಿಗ’ (ಹೆಸರು) ಮತ್ತು ಎತ್ತಿನÀಗೌಡ ಅವರಿಗೆ ಅಲ್ಲಿರುವ ಗಿಡಗಳ ಜವಾಬ್ದಾರಿ ಕೊಡಿಸಿ ತಿಂಗಳಾ ಸಂಬಳ ಬರುವಂಗೆ ಮಾಡ್ತೀನಿ ಅಂತ ನಮ್ಮ ಎಂ.ಎಲ್.ಎ ಸಾಹೇಬ್ರು ಕೇಳಿದ್ರಂತೆ. ಈತ ಸುಮ್ನೆ ಮಾಡಾನ, ಅಂತ ಅಂಗೆ ಹೋಗಿಬಿಟ್ಟ. ಇಂಥವರೆಲ್ಲ ಏನ್ಮಾಡ್ತಾರೆ.

ಮದುವೆಯ ಸಂಬಂಧ ಇದ್ದ ಇನ್ನೊಂದರ ಬಗ್ಗೆ ಹೇಳ್ಳಿಲ್ಲ ಮರತೋಗಿತ್ತು. ಈಗ ಹೇಳ್ತೀನಿ ನೋಡ್ರಿ. ಆವಾಗಿನ ಮದುವೆ ಸಮಯದಾಗೆ ಒಸಗೆ ಬೇಟೆ ಅಂತ ಕೊಡುತ್ತಿದರು. ಗಂಡಿನವರು ಎರಡು ಬೇಟೆಯನ್ನು, ಹೆಣ್ಣು ಕಡೆಯವರು ಎರಡು ಬೇಟೆಗಳನ್ನು ಕೊಡುತ್ತಿದ್ದರು. ಗಂಡು ಬೇರೆ ಊರಲ್ಲಿ ಮದುವೆಯಾದರೆ (ಬೇರೆ ಊರಿಂದ ಹೆಣ್ಣನ್ನು ತಂದರೆ) ಇನ್ನೊಂದು ಬೇಟೆ ಹೆಚ್ಚಿಗೆ ಕೊಡಬೇಕು. ಅಂದ್ರೆ ಮೂರು ಬೇಟೆಗಳನ್ನು ಕೊಡಬೇಕು. ಹಿಂಗೆ ಕೊಟ್ಟಿದ್ದ ಬೇಟೆಗಳನ್ನು ಮುದುವೆಯಾದ ಮೇಲೆ ಕೊಯ್ದುಕೊಂಡು ತಿನ್ನುತ್ತಿದ್ದರು. ಈಗ ಹಿಂಗೆ ಮಾಡುವುದಿಲ್ಲ.

ಹೆಂಗೋ ಇಲ್ಲಿಯವರೆಗೆ ಬಾರಿ ತೊಂದರೆಗಳಿಲ್ಲದೆ ಬದುಕಿದ್ದೇನೆ. ಯಾವುದೇ ಕಾಯಿಲೆ ಕಸಾಲೆಗಳು ಬಂದಿಲ್ಲ. ಕಿಲಾರಿಯಾದಾಗಿನಿಂದಲೂ ಯಾವ ಕಾಯಿಲೆ ಬಂದಿಲ್ಲ. ಬಂದರೆ ಚಳಿ ಜ್ವರ ಬರುತ್ತೆ ಅಷ್ಟೆ. ನಮ್ಮ ಮನೆಯವರಿಗೆ ಯಾರಿಗೂ ಅಂತ ಕಷ್ಟವೇನೂ ಇಲ್ಲ ನನ್ನ ಸಣ್ಣ ಮಗ ಅವರಮ್ಮನವು ಸ್ವಲ್ಪ ಮೇಕೆ ಇದ್ದಾವೆ. ಅದರ ಜೊತೆಗೆ ಸ್ವಲ್ಪ ಕುರಿ ಮಾಡಿದ್ದೀನಿ. ಅವನ್ನು ಕಾಯುದುಕೊಂಡು ಅವನು ಆರಾಮಾಗಿದ್ದಾನೆ.

(ಮುಂದುವರಿಯುವುದು)

Leave a Reply

Your email address will not be published.