ಕಿಲಾರಿ ಬೋರಯ್ಯನ ಆತ್ಮಕಥೆ-4: ನಡೀತಾ ಬರುವಾಗ ಹಾವು ಮೇಲೆ ಕಾಲಿಟ್ಟೆ!

-ಡಾ. ಎಸ್. ಎಂ. ಮುತ್ತಯ್ಯ

ಈಗ 80 ದೇವರೆತ್ತುಗಳು  ಇವೆ.

ಇದರಾಗೆ ಪೂರ್ವದಿಂದ ಬಂದವು ಸ್ವಲ್ಪ ಇವೆ. ಇನ್ನುಳಿದವು ಭಕ್ತರು ಬಿಟ್ಟವು. ಭಕ್ತರಿಗೆ ಏನಾದರೂ ಕಷ್ಟ ಬಂತು ಅಂದ್ರೆ ಮುತ್ತಯ್ಯಗಳಿಗೆ ಒಂದು ಸುರುಬು ಬಿಡುತ್ತೇವೆ ಅಂತ ಹರಕೆ ಕಟ್ಟಿಕೊಳ್ಳುತ್ತಾರೆ. ಹಿಂಗೆ ಭಕ್ತರು ಬಿಡುವ ಎತ್ತುಗಳನ್ನು ನಮ್ಮ ಹತ್ತಿರ ಮುದ್ರೆಕೋಲುಗಳು ಅಂಥ ಇದಾವೆ. ಮುದ್ರೆಗಳು ತ್ರಿಶೂಲ, ಬಿಲ್ಲು, ಬಾಣ, ಸೂರ್ಯ, ಚಂದ್ರ ಆಕಾರದವು. ಅವುಗಳಲ್ಲಿ ಸೂರ್ಯ-ಚಂದ್ರನ ಮುದ್ರೆಗಳನ್ನು ಎಲ್ಲ ಎತ್ತುಗಳಿಗೂ, ಆಕಳುಗಳಿಗೂ ಹಾಕ್ತೀವಿ. ಆದರೆ, ಬಿಲ್ಲು, ಬಾಣ ತ್ರಿಶೂಲ ಇವುನ್ನೆಲ್ಲ ಬರೀ ಎತ್ತುಗಳಿಗೆ ಮಾತ್ರ ಹಾಕ್ತೀವಿ. ಭಕ್ತರು ಬಿಟ್ಟ ಎತ್ತುಗಳಿಗೆ ಅಲ್ಲದೇ ನಮ್ಮಲ್ಲಿ ಹುಟ್ಟಿದ ಎತ್ತುಗಳಿಗೂ ಕೂಡ ಈ ಮುದ್ರೆಗಳನ್ನು ಹಾಕ್ತೀವಿ.

ಮುದ್ರೆ ಹಾಕದು ಹೆಂಗೆ ಅಂದ್ರೆ ದೇವರ ಮನೆಮುಂದೆ ಕುಳ್ಳು ಹಾಕಿ ಬೆಂಕಿ ಹಚ್ಚಿ ಅದರಲ್ಲಿ ಈ ಮುದ್ರೆ ಕೋಲುಗಳನ್ನು ಇಟ್ಟು ಕಾಸ್ತೀವಿ. ಬೆಂಕಿಗೆ ಕುಳ್ಳನ್ನು ಚನ್ನಪ್ನೋರು ಯಾವಾಗಲೂ ತರಬೇಕು. ಮುದ್ರೆ ಕೋಲುಗಳು ಚನ್ನಾಗಿ ಕಾಯೋವೊತ್ತಿಗೆ ಎತ್ತುಗಳನ್ನು ಕಾಲುರಿ ಹಾಕಿ ಕೆಡವಿ ಕಾಲು ಕಟ್ಟಿಕೊಂಡು ರೆಡಿಯಾಗಿರ್ತಿವಿ. ಎತ್ತುಗಳ ಹಿಂದಿನ ಕಾಲುಗಳ ತೊಡೆಯ ಮೇಲೆ ಕಾದ ಮುದ್ರೆಯನ್ನು ಒತ್ತುತ್ತೇವೆ. ಹಿಂಗೆ ಹಾಕಿದಾಗ ಆ ಜಾಗ ಎಲ್ಲ ಸುಟ್ಟಿರುತ್ತೆ. ಅಂಗೆ ಸುಟ್ಟ ಕರಕನ್ನು, ಗಿಡ ಹಾಗೂ ಮಜ್ಜಿಗೆಯನ್ನು ಕಲಸಿದ ಸಾಲೆ (ಮಗೆ)ಯಲ್ಲಿ ಬೀಳಿಸಿಕೊಳ್ಳುತ್ತಾರೆ. ಗಿಡ, ಮಜ್ಜಿಗೆ ಕಲಿಸಿದ ರಸವನ್ನು ಸುಟ್ಟ ಆ ಜಾಗದ ಮೇಲೆ ಹೊಯ್ದು ಮತ್ತೆ ಅದನ್ನು ಸಾಲೆಯೊಳಗೆ ಎಳೆದುಕೊಳುತ್ತಾರೆ. ಆಮೇಲೆ ನಮ್ಮಂಥವರ ಹತ್ತಿರ ಸವ್ರುರು ಹಾಕಿಸುತ್ತೇವೆ. (ನಿಮ್ಮಂಥವರು ಅಂದರೆ ದೇವರ ಕೆಲಸದ ಮೆಲೆ ಕಾಳಜಿ ಇರುವಂತಹವರು), ದೇವರಿಗೆ ಚೆನ್ನಾಗಿ ಬರಬೇಕು ಎನ್ನುವುದಕ್ಕೆ ಈ ಸುವುರು ಹಾಕ್ತೀವಿ.

ಸವುರು ಹಾಕಾದು ಎಂಗೆ ಅಂದ್ರೆ – ಕಟ್ಟಿ ಕೆಡಿವಿದ್ದ ಎತ್ತು ಅಂಗೆ ಬಿದ್ದಿರುತ್ತೆ. ಯಾರಾದರೂ ನಿಮ್ಮಂಥವರಿಗೆ ಕಂಬ್ಳಿ ಹೊದಿಸಿ ಕೈಗೆ ಸುಟ್ಟ ಕರುಕು, ಗಿಡ, ಮಜ್ಜಿಗೆಯಿಂದ ಮಾಡಿರ್ತಿವಲ್ಲ ಅದು ಇರುವ ಸಾಲೆ (ಮಗೆ)ಯನ್ನು ಕೊಟ್ಟು, ಜೊತೆಗೆ ಒಂದು ಕೋಲನು ಕೊಡ್ತಾರೆ. ಇವೆಲ್ಲವನ್ನೂ ಹಿಡಿದು ಕೇ…ಅಂಥ ಮೂರು ಸುತ್ತು ಬಿದ್ದ ಎತ್ತಿನ ಸುತ್ತ ತಿರುಗಬೇಕು. ಅಲ್ಲಿ ಸುತ್ತಾ ನಿಂತ ಜನ ಸವುರು ತಿರುಗುವವನ ಬೆನ್ನಿಗೆ ದಪ್ ದಪ್ ಅಂತ ಹೊಡಿತಾರೆ. ಆಗ ಯಜಮಾನ (ಈಗ ದೇವರ ಯಜಮಾನಲ್ಲನ ಬೋರಯ್ಯ) ಅಲ್ಲೇ ಕುಂತಿರುತ್ತಾನೆ. ಸಾರು ಹೊತ್ತು ತಿರುಗುವವನು ಹಿಂದಕ್ಕೆ ತಿರುಗಿ ನೋಡಂಗಿಲ್ಲ. ಮುಂದ್ಲ ಮುಖದಾಗೆ ನಡೀಬೇಕು. ಅಲ್ಲಿ ಕುಂತಿದ್ದ ಯಜಮಾನ ತಿರುಗುವವನ ಕೈಯಲ್ಲಿರುವ ಸೌರನ್ನು ಎತ್ತಿನ ಬಾಯಿತಗೆ, ಮೂಗು ಸೊಳ್ಳೆಗಳಿಗೆ ಬಿಡ್ತಾರೆ. ಕೊಂಬುಗಳಿಗೆ ಸವುರುತ್ತಾರೆ ಅಷ್ಟೇ ಆ ಸವುರು.

3ಹಿಂಗೆ ಹೊಸದಾಗಿ ದೇವರೆತ್ತುಗಳಕೆ ಬಂದ ಎತ್ತುಗಳು ಕುದುರಿಕೊಳ್ಳಾಕೆ ಬಾಳದಿನ ಬೇಕು. ಆವಾಗ ಆ ಎತ್ತುಗಳು ತಪ್ಪಿಸಿಕೊಂಡು ಅವುಗಳ ಮನೆಗಳಿಗೆ ಓ
ಡಿ ಹೋಗಿಬಿಡ್ತಾವೆ. ಅದಕ್ಕೆ ನಾವು ಏನ್ಮಾಡ್ತಿವಿ ಅಂದ್ರೆ ಹಳೆ ಎತ್ತುಗಳಿಗೂ, ಹಿಂಗೆ ಬಂದ ಹೊಸ ಎತ್ತುಗಳಿಗೂ ಟೆಕ್ಕೆ ಹಾಕ್ತೀವಿ. ಇದಕ್ಕೆ ನಮ್ಮತಾಗೆ ಟೆಕ್ಕೆಬಳೆಗಳು ಇದ್ದಾವೆ. ನಮ್ಮ ದೇವರೆತ್ತುಗಳಲ್ಲಿ ಬೀಜಕ್ಕೆ ಎರಡು ಹೋರಿಗಳನ್ನು ಬಿಡ್ತೀವಿ. ಇನ್ನುಳಿದ ಹೋರಿಗಳನ್ನೆಲ್ಲಾ ಕಸಿ ಮಾಡ್ತೀವಿ. ನಾವೇ ಕಸಿ ಮಾಡಾದು.
ಕಸಿ ಮಾಡಾದು ಎಂಗೆ ಅಂದ್ರೆ ಕಾಲು ಉರುಲು ಹಾಕಿ ಹೋರಿಗಳನ್ನು ಹಿಡಿದು ಕೆಡವಿ ಕಾಲು ಕಟ್ಟಿರುತ್ತೇವೆ. ಬೀಜ ತೆಗೆತಿದ್ದು ಹಿಂದೆ ಒಂದು ತರ, ಈಗ ಒಂದು ತರ. ಹಿಂದೆ ಎಂಗೆ ಅಂದ್ರೆ-ಕೆಡವಿದ ಎತ್ತಿನ (ಹೋರಿ) ಬೀಜಗಳಿಗೆ ಕೆಳಗೆ ಮೇಲೆ ಬಿದಿರಿನ ಕೋಲುಗಳಿಂದ ಅದುಮಿ ಹಿಡಿದುಕೊಂಡು ಬೀಜಗಳು ಬಿಗಿಯಾಗಿ ಮುಂದಕ್ಕೆ ಬರುವಂತೆ ಮಾಡಿ ಮುಂಭಾಗದ ಚರ್ಮವನ್ನು ಚಾಕುವಿನಿಂದ ಕೊಯ್ದು ಬಿಡಾದು. ಆವಾಗ ಬೀಜಗಳು ಹೊರಗೆ ಬರ್ತಿದ್ದು. ಆ ಹೊರಗೆ ಬಂದ ಬೀಜಗಳ ನರವನ್ನು ಕತ್ತರಿಸಿ ಬೀಜಗಳನ್ನು ಸಂಪೂರ್ಣವಾಗಿ ಹೊರಗೆ ತೆಗೆದ ಬೀಜಗಳನ್ನು ಚನ್ನಪ್ಪನೋರು (ಮ್ಯಾಸಬೇಡರ ಉಪಬೇಡಗು) ಮನೆಯಲ್ಲಿ ಸಾರು ಮಾಡುತ್ತಿದ್ದ್ರು. ಹಿಂಗೆ ಮಾಡಿದ ಸಾರನ್ನು ಎಲ್ಲರೂ ತಿನ್ನುತ್ತಿದ್ದರು. ಇಲ್ಲಿಗೆ ಒಂದು ಏಳೋ ಎಂಟೋ ವರ್ಷಗಳಿಂದೆ ಹಿಂಗೆ ಮಾಡ್ತಿದ್ದ್ರೂ.ಪುರ್ನ ಪಾಪಜ್ಜ ಅಂತ ಒಬ್ಬಾತ. ದೇವರೆತ್ತುಗಳ ಜೊತೆಗೆ ತಮ್ಮ ಎತ್ತುಗಳನ್ನು ಕಾಯ್ತಾ ಇದ್ದ. ಆವಾಗ ಆತ ಸತ್ತರೂ ತನ್ನ ಹೆಸರು ಉಳಿಬೇಕು ಅಂತೇಳಿ ಕಸಿ ಮಾಡುವ ಕತ್ತರಿಯನ್ನು ತಂದು ಕೊಟ್ಟ. ಅವಾಗಿನಿಂದ ಬೀಜಗಳನ್ನು ಹೊರ ತೆಗೆಯದೇ ಒಳಗೇ ಕತ್ತರಿಸಿಬಿಡ್ತೀವಿ.

ಹಿಂಗೆ ಕಸಿ ಮಾಡಿದಾಗ, ಮುದ್ರೆ ಹಾಕಿದಾಗ ನಾನು ಯಾವ ಔಷಧೀನೂ ಹಚ್ಚುವುದಿಲ್ಲ. ಭಾರಿ ಖಾಯಿಲೆಗಳು ಬಂದಾಗ ಮಾತ್ರ ದೇವರೆತ್ತುಗಳಿಗೆ ಔಷಧಿ ಹಾಕ್ತೀನಿ. ಇಲ್ಲಿ ಬಾಳ ಬರುವ ಕಾಯಿಲೆ ಅಂದ್ರೆ ‘ಸೆಲೆ’ ಆಗುವುದು. ಆವಾಗ ಏನ್ಮಾಡ್ತೀನಿ ಅಂದರೆ ಸೆಲೆ ಆದ ಎತ್ತಿನ ಮೂಗಿನ ಮೇಲೆ ಇರುವ ನರವನ್ನು ಶಾನದಿಂದ ಚುಚ್ಚಿ ರಕ್ತ ಹೊರಡಿಸೋದು. ಇಲ್ಲದಿದ್ರೆ ನಾಲಿಗೆಯ ಕೆಳಗೆ ಇರುವ ನರಗಳನ್ನು ಪಿನ್ನದಿಂದ ಚುಚ್ಚಿ ರಕ್ತ ಬರುವಂತೆ ಮಾಡಾದು. ರಕ್ತ ಕಪ್ಪುಗೆ ಬಂದ್ರೆ ಸೆಲೆ ಆಗಿರುವುದು ಕಾಯಂ ಅಂತ.

ಎತ್ತುಗಳು ಆವಾಗಾವಾಗ ಕಾಲು ಮುರ್ಕೊಳ್ತವೆ. ಕಾಲು ಕಟ್ಟಲು ಬಿದಿರಿನ ದಬ್ಬೆಗಳನ್ನು ಮಾಡಿಕೊಳ್ಳೋದು, ಕೆಂಪು ಮಣ್ಣು ತರಾದು, ತಂದು ಕಾಲು ಮುರಿದ ಜಾಗಕ್ಕೆ ಕೆಂಪು ಮಣ್ಣು ಬಳಿದ ಬಟ್ಟೆಯನ್ನು ಬಿಗಿಯಾಗಿ ಸುತ್ತಿ ಅದರ ಮೇಲೆ ಬಿದಿರಿನ ದಬ್ಬೆಗಳನ್ನು ಇಟ್ಟು, ಹುರಿಯಿಂದ ಭಾರೀ ಬಿಗಿಯಾಗಿ ಕಟ್ಬೇಕು. ಸ್ವಲ್ಪ ದಿನಗಳಿಗೆ ಚೆನ್ನಾಗಿ ಆಗಿಬಿಡುತ್ತೆ.  ‘ಕುಂದು’ ಅಂತ ಒಂದು ಕಾಯಿಲೆ ಬರುತ್ತೇ. ಅದಕ್ಕೆ (ದೊಡ್ಡಕಾಯಿ) ಬಳ್ಳಿ ಹಾಕ್ತೀವಿ. ಹಿಂಗೆ ಹಾಕಿದ ಬಳ್ಳಿ ಎಂಗೆ ಬಾಡುತ್ತೋ ಅಂಗೆ ಆ ಕಾಯಿಲೆ ಇಳಿಯುತ್ತೆ, ಇದರ ಜೊತೆಗೆ ನೀರು ಕಾಯಿಸಿ ಬೆನ್ನಿನ ಮೇಲೆ ಸುರೀತೀವಿ.

ಒಂದೆರಡು ಸಲ ದೊಡ್ಡ ಜಾಡ್ಯಗಳು ಬಂದವು. ಊರಿನ ದನಗಳಿಗೆಲ್ಲ ಈ ಜಾಡ್ಯ ಬಂದಿತ್ತು. ಆವಾಗ ನಾನು ಅದಕ್ಕೆ ಗಿಡ ತಂದು ಮೊದಲು ರೆಡಿ ಮಾಡಿದ ಗಿಡವನ್ನು ಗೂಡಲ್ಲಿ ದೇವರೆತ್ತುಗಳ ಮುಂದೆ ಇಟ್ಟು ಪೂಜೆ ಮಾಡಿ, ಮೊದಲು ದೇವರೆತ್ತುಗಳಿಗೆ ಗಿಡ ಹಾಕಿ ಅನಂತರ ನನ್ನ ಜೊತೆಗೆ ಇನ್ನೊಬ್ಬರನ್ನು ಕರಕೊಂಡು ಊರಿನವರ ದನ ಕರಗಳಿಗೆಲ್ಲ ಹಾಕ್ತಾ ಬಂದ್ವಿ. ಹಿಂಗೆ ಮಾಡ್ಬಿಟ್ರೆ ಎಲ್ಲಾ ಕಾಯಿಲೆಗಳು ವಾಸಿಯಾಗುತ್ತವೆ. ನಮ್ಮ ಮುತ್ತಯ್ಯಗಳು ದೊಡ್ಡವು. ಆದಿಕಾಲದಿಂದಲೂ ಇಷ್ಟು ಸತ್ಯವಾಗಿ ಅವು ನಡಕೊಂಡು ಬಂದಿದಾವೆ. ಬಾಳ ಹಿಂದಿನಿಂದಲೂ ನಮ್ಮ ಮುತ್ತಯ್ಯಗಳು ಇದ್ದಾವೆ. ನಮ್ಮ ದೇವ್ರು ಗಾದ್ರಿಪಾಲನಾಯಕ ಎತ್ತಿನ ಕಿಲಾರಿ ಆಗಿದನಂತೆ. ಈತನ ಬಗ್ಗೆ ನಮ್ಮ ಕುಲ ವಿಚಾರದಲ್ಲಿ ಹಿಂಗೆ ಹೇಳ್ತಾರೆ:

ಹುಲಿಗೂ ಕೈ ಭಾಷೆ ಆಗಿತ್ತಂತೆ

 

ಗ್ರಾದಿಪಾಲನಾಯಕನಿಗೂ ಹುಲಿಗೂ ಹಿಂದೆ ಕೈ ಭಾಷೆ ಆಗಿತ್ತಂತೆ. ಹಿಂಗೆ ಕೈಭಾಷೆ ಆಗಿದ್ದು ಬಿಡುತ್ತೇನು ಅದು. ಎಂಗೆ ಕೈಭಾಷೆ ಅಗಿತ್ತಂತೆ ಅಂದ್ರೆ; ಹುಲಿ ತನ್ನ ಮರಿಗಳನ್ನು ಗಾದ್ರ್ರಿಪಾಲನಾಯಕನ ಎತ್ತುಗಳಲ್ಲಿ ಬಿಟ್ಟು ಇವು ನಿನ್ನ ಮರಿಗಳು ನನ್ನ ಮರಿಗಳಲ್ಲ ಅಂತ ಬಿಟ್ಟಿತ್ತಂತೆ. ಹಾಗೆ ಈ ಎತ್ತುಗಳು ನಿನ್ನವಲ್ಲ ನನ್ನವು ಅಂಥ ಭಾಷೆ ಕೊಟ್ಟಿತ್ತಂತೆ. ಅಂಗೆ ಈ ಎತ್ತುಗಳಲ್ಲಿ ಒಂದನ್ನು ನಾನು ಮುಟ್ಟಿದರೂ ಅವತ್ತೆ ಸಾಯಬೇಕು ಅಂತಾನು ಹೇಳಿತ್ತÀಂತೆ. ಆವಾಗ ತಾನಿದ್ದ ಗುಡ್ಡವನ್ನು ಬಿಟ್ಟು ಇಲ್ಲಿ ಗಾದ್ರಪಾಲನಾಯಕ ಎತ್ತುಗಳನ್ನು ಜೊತೆಗೆ (ಹುಲಿಯ) ತನ್ನ ಮರಿಗಳನ್ನು ಸಾಕ್ತಾ ಇರ್ಬೇಕು ಅಂಥೇಳಿ-ಗಾದ್ರಿಪಾಲನಾಯನಿಗೆ ನಿಮ್ಮ ದೇಶದಲ್ಲಿ ಹುಲ್ಲು ಆಗುವವರಿಗೂ ಇಲ್ಲೇ ಇರು ಅಂಥೇಳಿ ಬೇರೊಂದು ಗುಡ್ಡಕ್ಕೆ ಹೋಯ್ತು. ಹಿಂಗೆ ಹುಲಿಗೆ ಭಾಷೆ ಕೊಟ್ಟು, ಹುಲಿ ಮರಿಗಳನ್ನು ಎತ್ತುಗಳ ಜೊತೆಗೆ ಸಾಕ್ತಾ ಇರುವ ವಿಷಯವನ್ನು ಗಾದ್ರಿಪಾಲನಾಯಕ ಇಲ್ಲಿಯ ಎಲ್ಲಾ ಪ್ರದೇಶಗಳಿಗೂ ಹೋಗಿ ತಿಳಿಸಿಬಂದಿದ್ದ. ಆದರೆ ಒಂದೇ ಒಂದು ಊರಿಗೆ (ಯರಮಂಚಯ್ಯನ ಹಟ್ಟಿ) ಮಾತ್ರ ಹೇಳಿರಲಿಲ್ಲ. ಮಾರನೇ ದಿನ ಆ ಊರವರಿಗೆ ವಿಷಯ ತಿಳಿಸ್ಬೇಕು ಅಂತ ಹೊರಟ. ಇತ್ಲಾಗೆ ಅದೇ ಊರವರು ಕುರಿಗಳಿಗೆ ಸೂಪ್ಪು ತೆಗೆದುಕೊಂಡು ಹೋಗಲು ಬಂದ್ರು.

ಇವರಿಗೆ ಈ ವಿಷಯ ಗೊತ್ತಿರಲಿಲ್ಲ. ಗೂಡಿನ ಕಡೆ ಬಂದರು. ದಿನಾ ಹಾಲು ಕುಡಿದು ಕುಣಿಯುತ್ತಿದ್ದ ಹುಲಿ ಮರಿಗಳು ಅವೋತ್ತು ಅಂಗೆ ಕುಣೀತಾ ಇದ್ದವು. ಅವುಗಳನ್ನು ನೋಡಿ ಬಿಟ್ಟ ಇವರು ಇವುಗಳನ್ನು ಕೊಂದಾಕಿಬಿಟ್ಟರೆ ಗಾದ್ರಿಪಾಲನಾಯಕ ನಮಗೆ ನಿರ್ಬಾನೆಮು (ಬಹುಮಾನ, ಸನ್ಮಾನದ ಸ್ವರೂಪದ್ದು) ಕೊಡುತ್ತಾನೆಂದು ಹೇಳಿ ಆ ಹುಲಿ ಮರಿಗಳ ಶಿರಗಳನ್ನು ಕತ್ತರಿಸಿ ಅವುಗಳಿಗೆ ಹಗ್ಗ ಕಟ್ಟಿ ಮರಗಳಿಗೆ ನೇತುಹಾಕಿಹೋದ್ರು. ಊರಿಗೆ ಹೋಗಿ ವಿಷಯ ತಿಳಿಸಿ ವಾಪಸ್ಸು ಬಂದ ಗಾದ್ರಿಪಾಲನಾಯಕ ನೋಡ್ತಾನೆ. ಹುಲಿಮರಿಗಳು ಸತ್ತು ಬಿಟ್ಟಿವೆ. ಥೋ ಇವ್ನವ್ವನ ಕೇಡು ಸೊಳೆಮಕ್ಳು ಎಂಥಾ ಕೆಲಸ ಮಾಡ್ಹೋಗಿ ಬಿಟ್ಟಿದ್ದಾರೆ. ನಾನು ಆತ್ಲಾಗೋದ್ರೆ ಇತ್ತಲಾಗೆ ಹಿಂಗೆ ಮಾಡಿದಾರೆ. ಆವಾಗ ಇನ್ನೇನು ಗಾದ್ರಿಪಾಲನಾಯಕನಿಗೆ ಯೋಚನೆ ಹುಟ್ಬಿಡ್ತು. ಹುಟ್ಟಿ ಅವನಿನ್ನೇನು ಪ್ರಯಾಣ ಕಟ್ಟಿಬಿಟ್ನಂತೆ. ಗೋಸೆಡ್ಲು ರೇವುಗೆ ಬಂದ್ನಂತೆ ಬಂದು ಅಲ್ಲಿ ಪಕ್ಳಿ ಆಕಳ (ಈಯ್ಯದ ಆಕಳು)ನ್ನ ಕರ್ದನಂತೆ. ಹಿಂಗೆ ಹಾಲು ಕರೆದು ಮೂರು ತಿಂಗಳು ಯಾರಿಗೂ ತೆರಪು (ಹಾದಿ, ಜಾಗ) ಕೊಡ್ದಂಗೆ ಹರಿಬೇಕು ಅಂತ ಮುಗಿದನಂತೆ. ಅಂಗೆ ಹಾಲು ರೇವು (ನದಿ) ಹರಿತಂತೆ. ಅಷ್ಟರಾಗೆ ಹುಲಿಗೆ ಕನಸು ಬಿದ್ದು ಬಿಡ್ತಂತೆ. ಅಂಗೆ ಅದು ಗೋಸೆಡ್ಲು ರೇವಿನ ಗಡ್ಡೆಗೆ ಬಂದುಬಿಡ್ತು.

Siberian_Tigerಗಾದ್ರಿಪಾಲನಾಯಕನಿಗೆ ನಲಗೇತಲೋರು ನೆಂಟರು. ಒಂದು ಕಾಲಕ್ಕೆ ಈ ನೆಲಗೇತಲೋರು ಗಾದ್ರಿಪಾಲನಾಯಕನನ್ನು ಗಾದ್ರಿಗುಡ್ಡದಲ್ಲಿ ಬಿಟ್ಟು ಬಂದಿದ್ದಾರೆ. ಹಿಂಗೇ ಎತ್ತುಗಳನ್ನು ಕಾಯಲು ಗುಡ್ಡಕ್ಕೆ ಹೋದಾಗ ಅಲ್ಲಿ ಹುಲಿ ಗಾದ್ರಪಾಲನಾಯಕನ್ನು ತಿನ್ನುವುದಾಗಿ ಶತಪಥಮಾಡಿತಂತೆ. ಆವಾಗ ನೆಂಟರು ನಲಗೇತಲು ಅದ್ಯಾವ ಹುಲಿ ಮಕ್ಕಳು ಬರುತ್ತವೆಯೋ ನೋಡುತ್ತೇವೆ ಎಂದು ಉಂಡು, ಉಂಡು ಕಾಯ್ತಾ ಇದ್ರಂತೆ. ಕಾಡಲ್ಲಿ ಮೊಣಕಾಲ್ಮಟ್ಟ ಬಿದ್ದಿದ್ದ ಎಲೆಗಳ ರಾಶಿಯೊಳಗೆ ಗಡಗಡಗಡ ಅಂತ ಶಬ್ದ ಮಾಡಿತ್ತಂತೆ ಆ ಹುಲಿ. ಎಷ್ಟೋ ದಿನ ಆದರೂ ಈ ಹುಲಿ ನಲಗೇತಲ ಕಣ್ಣಿಗೆ ಕಾಣದೇ ಇದ್ದುದರಿಂದ ಇವರು ಬರ್ರೋ ನಿನ್ನ ಯಾವನನ್ನ ತಿಂದು ಕೊಳ್ಳಲಿ ಎಂದು ವಾಪಸ್ಸು ಬಂದರು. (ಆವಾಗ ಗಾದ್ರಿಪಾಲನಾಯಕನ ತಮ್ಮ ಚಿನ್ನಪಾಲನಾಯಕ ಎನ್ನುವಾತ ಆ ಹುಲಿ ಜತೆ ಹೋರಾಡಿದವನು) ಈ ನಲಗೇತಲೋರು ಯಾವಾಗ ವಾಪಸ್ಸು ಬಂದರೋ ಆ ಹುಲಿ ಎಲೆಗಳ ರಾಶಿಯಿಂದ ನಿಜರೂಪದಲ್ಲಿ ಹೊರಟು ಬಿಡ್ತಂತೆ.

ಗಡ್ಡೆಗೆ ಹೋಗ್ಬೇಕು ಅಂತ ನೋಡ್ತದೆ ಹೋಗಲು ತೆರಪಿಲ್ಲ. ಆವಾಗ ಇನ್ನೇನು ಅಲ್ಲೇ ಗಡ್ಡೆ ಮೇಲೆ ಮಲಗ್ಬಿಡುತ್ತೇ. ಅದರ ಜೊತೆಗೆ ಹೆಣ್ಣು ಹುಲಿ ಬಂದಿರುತ್ತದೆ. ಅದೂ ಗಂಡು ಹುಲಿ ಜೊತೆ ಮಲಗಿರುತ್ತದೆ. ಬಾಳ ದಿನಗಳು ಅಂಗೆ ಮಲಗಿದವು. ಆವಾಗ ಅವುಗಳ ಮೇಲೆ ಹುತ್ತುಗಳು ಬೆಳ್ದವು. ಆ ಹುತ್ತಗಳ ಮೇಲೆ ಹುಲ್ಲು ಕಡ್ಡಿಗಳು ಬೆಳೆದವು. ಹಿಂಗೆ ಮೂರು ತಿಂಗಳು ಆಯ್ತು. ಅವುಗಳಲ್ಲಿ ಹೆಣ್ಣು ಹುಲಿ ಎದ್ದು ಹುತ್ತನ ಕೊಡವಿ ಬಿಡ್ತಂತೆ. ಅಂಗೆ ಗಂಡು ಹುಲಿ ಕೂಡ ಎದ್ದು ಕೊಡವಿ ಬಿಡ್ತಂತೆ. ಆವಾಗ ಹೆಣ್ಣು ಹುಲಿ ಗಂಡು ಹುಲಿಗೆ ಈ ರೇವಲ್ಲಿ ಒನ್ದು ಹನಿ ನೀರು ಕುಡಿಬ್ಯಾಡ ಅಂತ ಹೇಳಿತು. ಆದರೆ ಬಾಳ ದಿನ ಬಾಯಾರಿಸಿದ್ದು ಪಾಪ, ಮೇವು ನೀರು ಇರಲಿಲ್ಲ. ಹೆಣ್ಣು ಮುಂದೆ ಮುಂದೆ, ಗಂಡು ಹಿಂದೆ ಹಿಂದೆ ಹೋಗುತ್ತಿರುವಾಗ ಗಂಡು ಹುಲಿ ಬಾಯಾರಿಕೆಗೆ ತಡೀಲಾರದೆ ರೇವಲ್ಲಿ ನೀರು ಕುಡಿದುಬಿಡ್ತು. ಹಿಂಗೆ ಕುಡಿದು ಆಕಡೆ ಗಡ್ಡೆಗೆ ಬರುವವೊತ್ತಿಗೆ ಗಂಡು ಹುಲಿ ಸತ್ತೋಯ್ತಂತೆ. ಆವಾಗ ಹೆಣ್ಣು ಹುಲಿ ಗಾದ್ರಪಾಲನಾಯಕನನ್ನು ಹುಡುಕಿಕೊಂಡು ಹೊರಟಿತು. ಹಾದಿಯಲ್ಲಿ ಯಾರೋ ಒಬ್ಬ ಮನುಷ್ಯ ಸಿಕ್ಕ. ಆವಾಗ ಹೆಣ್ಣು ಹುಲಿ ಗಾದ್ರಿಪಾಲನಾಯಕನನ್ನು ನೋಡಿದೇನು ಅಂತ ಕೇಳ್ತು. ಅಲ್ಲಿ ಇದಾನೆ ನೋಡು  ಗುಡ್ಡದಾಗೆ ಅಂತ ಆ ಮನುಷ್ಯ ಹೇಳಿದ. ನೋಡಿದ್ದೇ ತಡ ಓಡಿ ಹೋಗಿ ಹಾಲು ಕರದು ರೇವು ಹರಿಸಿತ್ತಲ್ಲ ಅಲ್ಲಿ ಅದೇ ಆಕಳನ್ನು ಹಿಡಿದು ಬಿಟ್ತಂತೆ.

ಭಾಷೆ ಕೊಟ್ಟದ್ದು ಯಾಕೆ ಬಿಟ್ಟೀತು ಪಾಪ. ಅದೇ ಸಮಯದಲ್ಲಿ ಗಾದ್ರಿಪಾಲನಾಯಕನ ಅತ್ತೆ ಸೀಕು ಸೊಪ್ಪು ಕೊಯ್ಯಕೊಂಡು ಗಾದ್ರಿಪಾಲನಾಯಕನ ಎತ್ತುಗಳನ್ನು, ನಾಯಿಗಳನ್ನು, ನರಿಗಳು ಹಿಡಿಲಪ್ಪೋ ಅಂಥ ಪದ ಹೇಳ್ತಿದ್ಲಂತೆ? ಆವಾಗ್ಲ್ಲೆ ಮತ್ತೆ ನೆಂಟರು ನಲಗೇತಲನ್ನು ಸಹಾಯಕ್ಕೆ ಕರೆದುಕೊಂಡಿದ್ದು. ಪಾಪ ಅವರಿಗೆ ಕಾಣ್ದಿದ್ದು ಏನು ಮಾಡ್ಲಿಕ್ಕೆ ಆಗುತ್ತೆ. ಆವಾಗ್ಲೆ ಈ ನಲಗೇತ್ಲು ದೇವರುಗಳನ್ನು ಹೊತ್ತುಕೊಂಡು ಈ ಕಡೆಗೆ ಓಡಿಬಂದದ್ದು. ಆವಾಗ ಅವರು ಯಂಗೆಂಗೆ ಓಡಿ ಬಂದಿದ್ದಾರೆ. ಅಂಗಂಗೆ ಗಿಡಗಳು ಹುಟ್ಟಿದ್ದಾವಂತೆ. ಆವಾಗಿನೀಂದಲೇ ಮುತ್ತಯಯ್ಯಗಳು ಗಾದ್ರಿ ಗುಡ್ಡಕ್ಕೆ ಹೋಗುವುದಿಲ್ಲ. ಜನಗಳು ಮಾತ್ರ ಹೋದರೆ ಹೋಗ್ತಾರೆ ಅಷ್ಟೆ. ಗಾದ್ರಿ ಪಾಲನಾಯಕನ ಸೊತ್ತು (ಸ್ವತ್ತು)ಗಳೆಲ್ಲ ಬಿಲ್ಲು ಇನ್ನು ಯಾವ್ಯಾವೋ ವಸ್ತುಗಳು ನಮ್ಮ ದೇವರಲ್ಲಿಯೇ ಇವೆ. ಇವಾಗ ನನ್ನಿವಾಳದ ಕಡೆ ಇರುವವರ ಹತ್ತಿರ ಏನೂ ಇಲ್ಲ.

ಗಾದ್ರಿಪಾಲನಾಯಕ ಹುಲಿ ಹತ್ತಿರ ಹೋರಾಡುವಾಗ ತಮ್ಮ ಚಿನ್ನಪಾಲನಾಯಕ ಭಾರಿ ಹೋರಾಡಿದನಂತೆ. ಆವಾಗ ಗಾದ್ರಿಪಾಲನಾಯಕ ಹೇಳಿದನಂತೆ ಬಿಡಪ್ಪ ಯಾಕೆ ಸುಮ್ನೆ ಹೋರಾಡ್ತಿ. ಅವೊತ್ತು ಕೈಭಾಷೆ ಅಗಿದೆ ಅಂತ. ಅಷ್ಟೊತ್ತಿಗೆ ಗಾದ್ರಿಪಾಲನಾಯಕ ತಮ್ಮನಿಗೆ ಇನ್ನೊಂದು ಮಾತು ಹೇಳ್ದ್ನಂತೆ ಏನಂದ್ರೆ ಅದರ ಬಾಯಕೆ ಸ್ವಲ್ಪ, ನನ್ನ ಬಾಯಾಕೆ ಸ್ವಲ್ಪ ಪಕ್ಳಿ ಆಕಳದ ಹಾಲು ಬಿಡಪ್ಪ ಜೀವ ಬಿಡ್ತೀವಿ ಅಂದ್ನಂತೆ. ಆವಾಗ ಚಿನ್ನಪಾಲನಯಕ ನಮ್ಮಣ್ಣ ಉಳುದುಕೊಳ್ಳಿ ಅಂತ ಮೊದಲು ಹುಲಿ ಬಾಯಾಕೆ ಬಿಟ್ನಂತೆ. ಅದೆಲ್ಲಿ ನುಂಗೀತು? ಆಮೇಲೆ ಅಣ್ಣನ ಬಾಯಾಕೆ ಸ್ವಲ್ಪ ಬಿಟ್ನಂತೆ. ಆವಾಗ ಗಾದ್ರಿಪಾಲನಾಯಕ ಗುಟುಕ್ ಅಂತ ನುಂಗಿದ ಮೇಲೆ, ಹುಲಿ ಗುಟುಕ್ ಅಂತಂತೆ. ಆವಾಗ ಚಿನ್ನಪಾಲನಾಯಕ ನನ್ನಿವಾಳದ ಕಡೆಗೆ ಹೋಗಿ ಸೇರ್ಕೊಂಡ. ಈ ನಲಗೇತ್ಲು ದೇವರುಗಳನ್ನು ತಗೊಂಡು ಇತ್ಲಾಗೆ ಬಂದರು. ಆ ಚಿನ್ನಪಾಲನಾಯಕನಿಂದಲೇ ನನ್ನಿವಾಳದ ಮುತ್ತಯ್ಯಗಳಿರುವುದು.

ಹಿಂಗೆ ನಮ್ಮ ಕಿಲಾರಿತನ ಬಾಳ ಪೂರ್ವದಿಂದಲು ನಡ್ಕೊಂಡು ಬಂದದ್ದು. ನಮ್ಮದು ಜೀವನಾನೆಲ್ಲ ಬರೀ ಅಡಿವಿಯಲ್ಲಿ ಕಳೀತೀವಿ. ಭಾರಿ ಕಷ್ಟಗಳು. ಒಂದು ಕಾಯಿಲೆ ಬಂದ್ರೆ, ಎತ್ತುಗಳಿಗಾಗಲಿ ನನಗಾಗ್ಲಿ ಅದು ಎಂತ ಕಷ್ಟ ಅಂದ್ರೆ ಹೇಳಬಾರ್ದು. ಎತ್ತುಗಳಲ್ಲಿ ಆಕಳುಗಳು ಈಯುವಾಗಲು ಕಷ್ಟ ಕೊಡ್ತಾವೆ. ಗೂಟ ಊಣಿಸಿ ಹಗ್ಗ ಹಾಕಿ ಕಟ್ಟಿ ಈಯ್ಸಿಸಬೇಕು. ಬೇಸಿಗೆ ಕಾಲ್ದಾಗೆ ಈದು ಬಿಟ್ಟರಂತೂ ಭಾರಿ ಕಷ್ಟ. ಆಕಳುಗಳು ಕರುಗಳಿಗೆ ಹಾಲೆ ಕುಡಿಸುವುದಿಲ್ಲ. ಮಳೆಗಾಲದಲ್ಲಿ ಈದರೆ ಪರವಾಗಿಲ್ಲ ಹಸಿ ಹುಲ್ಲು ತಿಂತಾವೆ. ಆವಾಗ ಕರುಗಳನ್ನು ಸರಿಯಾಗಿ ಕುಡಿಸಿಕೊಳ್ಳುತ್ತವೆ.ಎತ್ತುಗಳು ನನ್ನನ್ನು ಯಾವತ್ತೂ ಇರಿದಿಲ್ಲ. ಬೇರೆಯವರನ್ನು ಇರಿತವೆ. ದೇವರೆತ್ತುಗಳು ಭಕ್ತರನ್ನು ತುಳಿದರೆ, ಇರಿದರೆ ಬಲು ಒಳ್ಳೇದು, ಯಾವುದೇ ರೋಗ ರುಜಿನ ಬರುವುದಿಲ್ಲ. ಒಂದ್ಸಲ ಅಡಿವಯ್ಯನ ಮಗಳಿಗೆ ಹೆಜ್ಜೆ ಬೀಳುವ ಹಾಗೆ ತುಳಿದಿತ್ತು. ಆ ಹುಡುಗಿ ಉಳುಕೊಂಡ್ಲು.ಆವಾಗ್ಲೆ ಗಡಿ ಆ ಹುಡುಗಿಗೆ ಯಾವ ಕಾಯಿಲೆ-ಕಸಾಲೆ ಬಂದಿಲ್ಲ.

ನಾನು ದೇವರೆತ್ತುಗಳನ್ನು ಹೊಡಕೊಂಡು ಎಲ್ಲೆಲ್ಲೋ ತಿರುಗಿದ್ದೀನಿ. ಎಷ್ಟೋತ್ತೊಂದ್ರೆ ಅಷ್ಟೊತ್ತಿನಾಗೆ, ಒಳ್ಳೆ ಸರ್ವತ್ತಿನಾಗೆ ಅಡಿವಿಗೆ-ಊರಿಗೆ ತಿರುಗಿದ್ದೀನಿ. ನನಗೆ ಏನೂ ಆಗಿಲ್ಲ. ಒಂದು ಹುಳು ಹುಪ್ಪಡಿಯಾಗ್ಲಿ ಮುಟ್ಟಿಲ್ಲ. ಒಂದೇ ಒಂದೇ ದಿನ ಹಾವುನ್ನ ತುಳಿದಿದ್ದೆ. ತುಳಿದಿದ್ದರೂ ಹಿಂಗೆ ಮುಟ್ಟನ್ನ ಮುಟ್ಟಿರಲಿಲ್ಲ. ಸುಮ್ನೆ ನರಿನರಿ ಅಂದಿತ್ತು. ಆ ದಿನ ಊರಾಗೆ ದೇವರು ಇತ್ತು. ದೇವರು ಮುಗಿಸಿಕೊಂಡು ದೇವರೆತ್ತುಗಳನ್ನು ಹೊಡಕೊಂಡು ಗೂಡಿಗೆ ಬಂದು ಎತ್ತುಗಳನ್ನೆಲ್ಲ ಕೂಡಿ ಹೋಗುತ್ತಿದ್ದೆ. ಹೋಗುವಾಗ ಹೊಲದ ಕಲ್ಲಿನ ರಾಶಿಯ ಪಕ್ಕ ಹಾದಿಯಲ್ಲಿ ಆ ಹಾವು ಮಲಗಿದ್ದೈತೆ. ನನಗೇನು ದಿನಾ ಓಡಾಡಿದ ಹಾದಿ. ಅದೂ ಹಾದಿಯಲ್ಲೇ ಮಲಗಬೇಕಾ? ನಡೀತಾ ಬರುವಾಗ ಹಾವು ಮೇಲೆ ಕಾಲಿಟ್ಟೆ. ಅಂಗೆ ತಣ್ಣಗೆ ಆಯ್ತು. ಅಂಗೆ ಹಿಂದಕ್ಕೆ ಸರಿದುಬಿಟ್ಟೆ. ಆಗ ಹಾದಿ ಬಿಟ್ಟು ಪಕ್ಕಕ್ಕೆ ಹಿಂಗೆ ತಿರುಗಿ ನಡೆದುಬಿಟ್ಟೆ.
ಒಂದ್ಸಲ ರಾತ್ರಿ ಹೋಗುವಾಗ ಚೇಳು ಕಡ್ದಿತ್ತು. ಚೇಳು ಕಡಿದರೆ ಸುಣ್ಣ ಬಳಿತಿದ್ವಿ. ಇಲ್ಲದಿದ್ದರೆ ಏರುವುದು ಇಳಿಯುತ್ತಿರಲಿಲ್ಲ. ದೊಡ್ಡ ಕಾಯಿ ಹೊಡಸಿ ಹಚ್ಚುವುದು ಮಾಡ್ತಿದ್ವಿ. ಅದು ಸ್ವಲ್ಪ ಮೇಲು. ಕರಿಯಮ್ಮನ ಹಟ್ಟಿಯಲ್ಲಿ (ನಲಗೇತನಹಟ್ಟಿಯ ಮಜರಿ) ಸಣ್ಣ ಕಂದಮ್ಮನಿಗೆ ಚೇಳು ಕಡಿದಿತ್ತು. ಆಗ ನಾನು ದೊಡ್ಡಕಾಯಿ ಬಳ್ಳಿ ಹಚ್ಚಿದ್ದೆ.

ನಾಯಿ-ಪಾಯಿ

 

ನಾಯಿ-ಪಾಯಿ ಎಂದೂ ಕಡ್ದಿಲ್ಲ. ಇಲ್ಲೇ (ಗೂಡಿಗೆ ಸ್ವಲ್ಪ ದೂರದಲ್ಲಿ) ಊರಿನ ಕೆಲವು ಜನ ಹೊಲದಲ್ಲಿ ಮನೆಗಳನ್ನು ಕಟ್ಟಿಕೊಂಡು ಬಾಳ್ತಾ ಇದ್ದಾರೆ. ಆ ಮನೆಗಳ ಹತ್ತಿರ ಬೊಮ್ಮದೇವಡ್ಲ ಕಾಮಯ್ಯ ಗುಡ್ಲು ಹಾಕಿಕೊಂಡು ಇದ್ದ. ಅಲ್ಲಿ ಒಂದು ನಾಯಿ ಅಂಗೆ ಮನುಷ್ಯರ ಮೇಲೆ ತಾರಾ ಮಾರಾ ಬರ್ತಿತ್ತು. ಆವಾಗ ದಗುಮು ಮರ್ರಿ (ಕಾವಲಿನಲ್ಲಿ ಒಂದು ಸ್ಥಳ) ಗೂಡಾತಾವ ಈ ನಾಯಿ ದಿನಾ ಅಡ್ಡ ಬಂದು ಬಿಡ್ತಿತ್ತು. ಒಂದು ದಿನ ಇನ್ನೇನು ಸರಿಯಾದ ಒನ್ದು ಗುಂಡು ತಂಗೊಂಡೆ, ತಗೊಂಡು ಸರಿಯಾಗಿ ಬಿಟ್ಟುಬಿಟ್ಟೆ. ಎಲ್ಲಿಗೆ ಬಿತ್ತೋ ಬಿದ್ದು ಬಿಡ್ತು. ಆ ನಾಯಿ ಸುತ್ತಿಕೊಂಡು ನೆಲಕ್ಕೆ ಬಿತ್ತು ಆವಾಗಲೆ ಗಡಿ (ಕೊನೆ) ನನ್ನ ಮ್ಯಾಲೆ ಯಾವಾಗಲೂ ಮತ್ತೆ ಬರಲೆ ಇಲ್ಲ. ಬೇರೆಯವರಿಗೆ ಹೋಗುತ್ತಿತ್ತೋ ಏನೋ, ಆದ್ರೆ ನನಗೆ ಮಾತ್ರ ಬರಲೇ ಇಲ್ಲ. ನನ್ನ ದನಿ ಕೇಳಿದರೆ ಅದು ಹತ್ರಕ್ಕೆ ಬರುತ್ತಿರಲಿಲ್ಲ.

ಗೂಡಲ್ಲಿ ನಾನು ಮುದ್ದೆ-ನೀರು ಮಾಡಿಕೊಳ್ಳುವ ಮಡಿಕೆಗಳೆಲ್ಲ ಇಟ್ಟುಕೊಳ್ಳುತ್ತೇನೆ. ಆಕಳುಗಳು ಕರಿತವೆ. ಕರದ ಹಾಲನ್ನು ಮನೆಗೆ ತೆಗೆದುಕೊಂಡು ಹೋಗುವುದಿಲ್ಲ. ಇಲ್ಲೇ ಹೆಪ್ಪು ಹಾಕಿ ಮಜ್ಜಿಗೆ ಮೊಸರು ಕುಡಿತೀವಿ. ಎಲ್ಲೋ ಒಂದೊಂದು ದಿನ ಮಾತ್ರ ಮೊಸರನ್ನು ಮನೆಗೆ ತೆಗೆದುಕೊಂಡು ಹೋಗ್ತೀವಿ.
ಮೊದಲು ಗೂಡಲ್ಲಿ ಆಲನ್ನು ಹೆಪ್ಪಾಕಿ ಹೋದ್ರೆ ಯಾರು ಮುಟ್ಟುತ್ತಿರಲಿಲ್ಲ. ಆದರೆ ಈಗ ಕಳ್ಳರು ಬಾಳ ಜನ ಆಗಿದ್ದಾರೆ. ಇಲ್ಲಿಯ ಹತ್ತಿರದ ಜನರೇ, ಹಗಲೊತ್ತು ನಾನು ಎತ್ತುಗಳ ಹಿಂದೆ ಹೋಗಿದ್ದೀನಿ ಅಂತ ಗೊತ್ತಿರುತ್ತಲ್ಲ. ಬಂದು ತಂಗೊಂಡೋಗುವುದೋ ಇಲ್ಲದಿದ್ರೆ ಇಲ್ಲೇ ಕುಡಿಯೋದೋ ಮಾಡ್ತಾರೆ. ನಮ್ಮ ಗೂಡು ನೋಡ್ರಿ-ಇಂಗೈತಿ ಯಾವುದು ಸರಿಯಾಗಿರುತ್ತೆ ಇಂಗಿದ್ರೆ. ನಾನು ಹಿಂಗೆ ನಿಮ್ಮಂತವರಿಗೆ ಕೊಟ್ಟರೆ ನೆನಸಿಕೊಳ್ಳತ್ತಾರೆ ಅಂತ ಇದ್ದರೆ. ಇವುರು ಹಿಂಗೆ ಮಾಡ್ತಾರೆ.

2ನಾವು ಬಾರಿ ಕಟ್ಟು ನಿಟ್ಟಿನಲ್ಲಿ ಇರಬೇಕು. ಬಸ್ಸು ಹತ್ತುವ ಅಂಗೆ ಇಲ್ಲ. ಎಲ್ಲಿ ಪೇಟೆಗಳಲ್ಲಿ ಊಟ ಮಾಡುವಂಗಿಲ್ಲ. ನೀರು ಕುಡಿಯುವಂಗಿಲ್ಲ. ಚಪ್ಪಲಿಯಲ್ಲಿ ಹೊಡೆದಾಡಿದರೆ, ಹೊಡೆದವರು ಹೊಡಿಸಿಕೊಂಡವರು ಕುಲಗೆಟ್ಟಂತೆ, ಹಿಂಗೆ ಕುಲಗೆಟ್ಟವರು ಗೂಡಿಗೆ ಬಂದು ನೀರಾಕಿಸಿಕೊಂಡು ಹೋಗ್ಬೇಕು. ಆವಾಗ ಅವರು ಸಿದ್ಧಿಯಾಗ್ತಾರೆ. ನೀರು ಹಾಕಿ ಸಿದ್ಧಿ ಮಾಡುವವನು ನಾನೆ (ಕಿಲಾರಿ). ನಾನು ಕಿಲಾರಿಯಾದಾಗಿನಿಂದ ಮಸ್ತ್ ನೀರಾಕಿದ್ದೀನಿ. ಹಿಂಗೆ ಕುಲಗೆಟ್ಟವರನ್ನು ಸಿದ್ಧಿ ಮಾಡುವುದು ಎಂಗೆ ಅಂದ್ರೆ ಚಪ್ಪಲಿಯಲ್ಲಿ ಹೊಡೆದವನು ಭತ್ಯೆ-ಬೇಟೆ ದಂಡ ಕೊಡಬೇಕು. ಹಿಂಗೆ ಕೊಟ್ಟ ಬತ್ತೆಯನ್ನು ಬೇಟೆಯನ್ನು ಊರಿನ ಯಜಮಾನರಿಗೆ ತಿಳಿಸಿ ಗೂಡಿಗೆ ತಗೊಂಡು ಬರಬೇಕು. ಅವೊತ್ತು ಗೂಡಲ್ಲಿ ಅನ್ನ ಮಾಡಿ ಮೂರು ಅಗಲು(ಎಡೆ) ಹಾಕ್ತೀವಿ. ಅಲ್ಲಿ ಪೂಜೆ ಮಾಡಿ ಯಜಮಾನನಿಗೆ ಕಾಯಿ ಕೊಟ್ಟಾಗ ಬೇಟೆ ಕಡಿಯುತ್ತಾನೆ. ಕಡಿದಾಗ ನಾನು ಮುತ್ತಯ್ಯಗಳ ತೀರ್ಥ(ಗಂಜುಲು) ಹಿಡಿದು ಪೂಜೆಗೆ ಇಟ್ಟಿರುತ್ತೇನೆ. ಆ ಮೇಲೆ ಆ ತೀರ್ಥವನ್ನು ಗೌಡರ ಕೈಗೆ ಕೊಡುತ್ತೇನೆ. ಅಲ್ಲಿಯವರೆಗೂ ಕುಲಗೆಟ್ಟವರು ಗೂಡಿನ ಹೊರಗೆ ಇರುತಾರೆ. ಆವಾಗ ಗೌಡ್ರು ಈ ತೀರ್ಥ ತಗೊಂಡು ಹೋಗಿ ಅವನಿಗೆ (ಕುಲಗೆಟ್ಟವನಿಗೆ) ಕುಡಿಸಿ, ಮೈಗೆ ಚಿಮುಕಿಸಿ ಗೂಡಿನ ಒಳಗೆ ಕರೆದುಕೊಳ್ಳುತ್ತಾನೆ. ಆಮೇಲೆ ಮಾಂಸ ಮುದ್ದೆ ಮಾಡಿರುತ್ತೇವೆ. ಆ ಮುದ್ದೆ ಉಣ್ಣುವಾಗ ಎಲ್ಲರ ಜನ್ನೆಗಳಿಂದ ಅಂದರೆ ಏಳು ಜನ ಪೆದ್ದಗಳು ತಮ್ಮ ಜನ್ನೆಯಿಂದ ಒಂದೊಂದು ತುತ್ತನ್ನು ಕುಲಗೆಟ್ಟಿದ್ದವನಿಗೆ ಕೊಡುತಾರೆ. ಅದನ್ನು ಅವನು ತಿಂದು ಶುದ್ಧನಾಗಬೇಕು. ಹೊಡೆಸಿಕೊಂಡವರು, ಹೊಡೆದವರು ಒಂದೇ ದಿನ ಬರುವುದಿಲ್ಲ. ಬೇರೆ ಬೇರೆ ದಿನ ಬಂದು ಶುದ್ಧರಾಗಿ ಹೋಗುತ್ತಾರೆ. ಹಿಂಗೆ ಜೈಲಿಗೆ ಹೋಗಿ ಬಂದವರು ಕೂಡ ಕುಲಗೆಟ್ಟಿರುತ್ತಾರೆ. ಅವರನ್ನು ಕೂಡ ಹಿಂಗೆ ಶುದ್ದ ಮಾಡ್ತೀವಿ.

ಗೂಡಲ್ಲಿ ಮಲಗುವುದು ನಮಗೆ ಸಂಪ್ರದಾಯ. ಬೇಸಿಗೆ ಕಾಲದಲ್ಲಿ ಊರಿನ ಜನರು ಗೂಡು ಮಲಗಲು ಬರುತ್ತಾರೆ. ಆವಾಗ ಅವರು ಮನೆಯಿಂದ ರೊಟ್ಟಿ, ಅನ್ನ ಮಾಡಿಕೊಂಡು ಬಂದಿರುತ್ತಾರೆ. ಹಾಗೇ ಬೆಳಿಗ್ಗೆ ಅಡಿಗೆ ಮಾಡ್ತೀವಿ. ಅದಕ್ಕೆ ಬೇಕಾದ ನುಚ್ಚು, ಹಿಟ್ಟು, ಸಾರಿನ ಕಾಳು, ಮೆಣಸಿನಕಾಯಿ ತಂದು ಕೊಡುತ್ತಾರೆ. ನಾನು ಅವೊತ್ತು ವತ್ತುಂಟೆ ಮೂರು ಅಥವಾ ನಾಲ್ಕು ಗಂಟೆಗೆ ಎದ್ದು ಗೂಡಿಗೆ ಬಂದ ಹುಡುಗರನ್ನು ಇಡ್ಕೊಂಡು ಅಡಿಗೆ ಮಾಡಿ ಉಣಬಡಿಸುತ್ತೇನೆ. ಉಂಡು ಜನರೆಲ್ಲ ಊರಿಗೆ ಹೋಗುತ್ತಾರೆ.

ಮದುವೆಯಾದ ಮದಲಿಂಗ, ಮದಲಗಿತ್ತಿ ಮೂರ್ತವಾದ ಮೊದಲವಾರ ಗೂಡಿಗೆ ಬರುತ್ತಾರೆ. ಬರುವಾಗ ಮನೆಯಿಂದ ಗೋದಿ,ರವೆ, ಅಕ್ಕಿ ಎಲ್ಲ ತರ್ತಾರೆ. ಅದನ್ನು ಹಾಗೆ ಬೆಳಿಗ್ಗೆ ಉಗ್ಗಿ ಅನ್ನ ಮಾಡಿ ಉಣಬಡಿಸುತ್ತೆನೆ. ಹಿಂಗೆ ಭಕ್ತರು ತಂದ ಬತ್ತದಲ್ಲಿ ಸ್ವಲ್ಪ ಉಳಿಯುತ್ತದೆ. ಅದನ್ನು ನಾನು ಆಗಾಗ ಮಾಡಿಕೊಂಡು ತಿನ್ನುತ್ತೇನೆ. ಗೂಡಿಗೆ ಸೋಮವಾರ ಬರಬೇಕು. ಸಮಯ ಬಂದಾಗ ನಡುವೆಯೂ ಬರುತ್ತಾರೆ. ಮನೆಗಳಲ್ಲಿ ಯಾವುದೇ ಒಳ್ಳೆ ಕೆಲಸ ಮಾಡುವಾಗಲೂ ಗೂಡಿಗೆ ಬಂದು ಪೂಜೆ ಮಾಡ್ಸಿಕೊಂಡು ಹೋಗ್ತಾರೆ. ನಾನು ಈವಾಗಾಗ್ಲೆ ಹೇಳ್ದಂತೆ ನಾವು ಬಾರಿ ಕಟ್ಟು ನಿಟ್ಟಿನಲ್ಲಿರಬೇಕು. ನಾನು ಮೊದಲಿನಿಂದಲೂ ತಲೆ ಚೌರ ಮಾಡ್ಸಿಲ್ಲ. ಈಗ್ಲೂ ಮಾಡ್ಸಲ್ಲ. ಗಡ್ಡ ಮಾತ್ರ ತಗಿಸ್ತೀನಿ.

(ಮುಂದುವರಿಯುವುದು)

Leave a Reply

Your email address will not be published.