ಕಿಲಾರಿ ಬೋರಯ್ಯನ ಆತ್ಮಕಥೆ-3: ಮ್ಯಾಸರಿಗೆಲ್ಲ ಮುತ್ತಯ್ಯಗಳೆ ಗುರುಗಳು

ಮುತ್ತಯ್ಯಗಳೆ ಗುರುಗಳು
ಒಂದ್ಸಲ ಮುತ್ತಯ್ಯಗಳನ್ನು ದೊಡ್ಡಿಗೆ ಕೂಡಿದ್ದನಂತೆ ಒಬ್ನು, ಆವಾಗ ನಮ್ಮವರು ಏನೋ ಮಾಡಿ ಬಿಡಿಸಿಕೊಂಡು ಬಂದ್ರಂತೆ. ಆ ದೊಡ್ಡಿಗೆ ಕೂಡಿದವನಿಗೆ ಆವೊತ್ತಿನಿಂದ್ಲೆ ಚಳಿ-ಜ್ವರ ಬಂದಿತ್ತಂತೆ. ಇಂಗಾದ ಕೆಲವು ದಿನಗಳ ನಂತರ ಪದಿಯಾಗಳ ದೇವರು ಸಾಗಿತ್ತು. ಆವಾಗ ಆ ದೇವರಿಗೆ ಕಾಯಿಲೆಗೆ ಬಿದ್ದ ಪಾರಂನವನು ಬಂದ. ಆವಾಗ ಇಲ್ಲಿ ಸಜ್ಜೆ ಮುದ್ದೆ ಮಾಂಸದ ಸಾರು ಮಾಡಿದ್ದರಂತೆ. ಈ ಸಜ್ಜೆ ಅನ್ನ ಮತ್ತು ಮಾಂಸದ ಸಾರನ್ನು ಉಂಡು ಹೋದನಂತೆ. ಹೋದ ಎರಡು ಮೂರು ತಿಂಗಳ ನಂತರ ಆತ ಸತ್ತು ಹೋದ. ಸತ್ತ ಆವೊತ್ತಿನ ದಿನ ಅವನು ಹಿಂದೆ ನಮ್ಮ ದೇವರಲ್ಲಿ ತಿಂದು ಹೋಗಿದ್ದ ಸಜ್ಜೆ ಮುದ್ದೆ ಮತ್ತು ಮಾಂಸದ ಸಾರನ್ನು ಅಂಗೆ ಕಕ್ಕಿಕೊಂಡು ಸತ್ತಿದ್ದನಂತೆ! ಆವೊತ್ತು ತಿಂದ ಅನ್ನ ಇಷ್ಟು ದಿನಾನು ಅಂಗೆ ಇತ್ತಂತೆ. ಇದನ್ನು ನಮ್ಮ ಹಿರಿಯರು ಹೇಳುತ್ತಿದ್ದು.

2ನಾನು ನೋಡಿದ್ದು ಒಂದು ವಿಷಯವಿದೆ. ನಮ್ಮ ದೇವರ ಎತ್ತುಗಳಲ್ಲಿ ಒಂದು ಕೆಂಪು ಎತ್ತು ಇತ್ತು. ಅದನ್ನು ಊರಕೆ ಗೂಳಿಯಾಗಿ ಬಿಟ್ಟಿದ್ವಿ. ಭಾರಿ ದೊಡ್ಡ ಗೂಳಿ. ಅದನ್ನ ಇತ್ಲಿತ್ಲಾಗೆ ಹೊಡೆದು ಸಾಯ್ಸಿದ್ರು. ಸುಳಿಗೆ ಹೊಡೆದು ಸಾಯಿಸಿದ್ರು. ನಮ್ಮ ನೆಂಟರ ಮದುವೆಯಿತ್ತು. ಆ ದಿನಾನೇ ಹೊಡೆದು ಸಾಯಸಿದ್ರು. ಬೆಳಗ್ಗೆ ಎದ್ದು ನೋಡಿದ್ವಿ. ಅದನ್ನು ಹೂಣಿಸಬೇಕಲ್ಲ. ಅದಕ್ಕೆ ಗಾಡಿಕಟ್ಟಿಕೊಂಡು ಅದನ್ನು ಏರಿಕೊಂಡು ಬಂದ್ವಿ. ಅದನ್ನು ಹೂಣಿಸಲು ಊರಾಗಿನ ಬಾಳ ಜನ ಬಂದಿದ್ದರು. ಜೊತೆಗೆ ಒಂದೊಂದು ಕಾಯಿನೂ ತಂದಿದ್ರೂ. ಆ ಕಾಯಿಗಳನ್ನೆಲ್ಲಾ ಹೊಡಿಸಿ ಪೂಜೆ ಮಾಡಿದ್ವಿ. ನಿನ್ನ ಮೇಲೆ ಯಾವನಾದರೂ ಕೈಮಾಡಿದ್ರೆ ಇನ್ನು ಆರು ತಿಂಗಳಿಗೋ ವರ್ಷಕ್ಕೋ ನಮಗೆ ತೋರಿಸಬೇಕು. ನಿನ್ನಂಗೆ ನಿನ್ನ ಹೊಡೆದವನು ಸಾಯ್ಬೇಕು; ಹುಳ ಹುಪ್ಪಡಿ ಮುಟ್ಟಿದ್ದರೆ ನೀನೇನು ಮಾಡಕಾಗುತ್ತೇ ಅಂತೇಳಿ ಕೈ ಮುಗಿದ್ವಿ. ಆರು ತಿಂಗಳಿಗೆ ಅದನ್ನು ಹೊಡೆದು ಸಾಯಿಸಿದ ಮನುಷ್ಯನನ್ನು ತೆಗಿದ್ಬಿಟ್ಟ ದೇವ್ರು. ನಮ್ಮ ದೇವರೆತ್ತು ಯಾವ ರೀತಿ ಸತ್ತಿತ್ತೋ ಅದೇ ರೀತಿ ಸತ್ಬಿಟ್ಟ ಅವನು. ಅವರ ಮನೆಯವರಿಗೂ ಇಂಥವೇ ಬಾಳ ತೊಂದರೆಗಳು ಬಂದ್ವು. ಆವಾಗ ಅವರು ಚೌಡಮ್ಮನ ಹತ್ತಿರ ಹೋಗಿದ್ದರಂತೆ. ಆವಾಗ ಚೌಡಮ್ಮ ನಮ್ಮ ಅಣ್ಣಗಳಲ್ಲಿಗೆ ಸುರುಬು ಬಿಟ್ಟರೆ ಬಿಡುಗಡೆ ಆಗುತ್ತೆ ಇಲ್ಲದೇ ಹೋದರೆ ಬಿಡುಗಡೆ ಇಲ್ಲ ಅಂತ ಹೇಳಿದಳಂತೆ. ಆ ಮೇಲೆ ಅವುರು ಒಂದು ಸುರುಬು (ದೇವರಿಗೆ ಬಿಡುವ ಎತ್ತು/ಆಕಳ) ಬಿಟ್ರು. ಅವರು ಬಿಟ್ಟ ಸುರುಬು ಈಗಲೂ ಇದೆ.

ದೇವರೆತ್ತುಗಳು ನಮಗೆ ಬಾರಿ ದೊಡ್ಡವು. ನಮ್ಮ ದೇವರಿಗಿಂತ ದೊಡ್ಡವು. ಅವ್ರು ಕುಮಾರಸ್ವಾಮಿ ಗುಡ್ಡದಿಂದ ಬಂದವು ಅಂತ ಹೇಳ್ತಾರೆ. ನನಗೇನು ಅಷ್ಟೊಂದು ಗೊತ್ತಿಲ್ಲ. ಇಂಥ ವಿಚಾರಗಳನ್ನು ಒಟ್ಟು ಕುಲದ ವಿಚಾರಗಳ ಬಗ್ಗೆ ನಮ್ಮೂರಿನ ಚಿತ್ತಯ್ಯಗಳ ಬೋರಜ್ಜ, ಸಣ್ಣಬೊಮ್ಮದೇವಡ್ಲ ಮುತ್ತಪ್ಪ, ಅಂಗಡಿ ಕ್ಯಾಸಯ್ಯ ಇವರೆಲ್ಲ ಚೆನ್ನಾಗಿ ಹೇಳ್ತಾರೆ. ಅವರಿಗೆಲ್ಲಾ ಚೆನ್ನಾಗಿ ಗೊತ್ತು ನಾನು ಇಲ್ಲಿಗೆ ನನಗೆ ತಿಳಿದಂತೆ ಹೇಳ್ತೀನಷ್ಟೆ.

ಮ್ಯಾಸರಿಗೆಲ್ಲ ಮುತ್ತಯ್ಯಗಳೆ ಗುರುಗಳು. ಮ್ಯಾಸರಲ್ಲಿ ಎಲ್ಲರ ಹತ್ತಿರವೂ ದೇವರೆತ್ತುಗಳಿರುತ್ತವೆ. ಇಂಥ ದೇವರೆತ್ತುಗಳು ನಮ್ಮ ಮ್ಯಾಸ ನಾಯಕರು ಎಲ್ಲೆಲ್ಲಿರುತ್ತಾರೋ ಅಲ್ಲೆಲ್ಲಾ ಇರುತ್ತವೆ. ಇಷ್ಟು ಗುಂಪುಗಳಲ್ಲಿ ಮೂರು ಗುಂಪುಗಳನ್ನು ಬಿಟ್ಟರೆ ಉಳಿದವೆಲ್ಲವು ಬರೀ ಎತ್ತುಗಳು ಅನಿಸಿಕೊಂಡಿವೆ. ಆದರೆ ಇನ್ನು ಮೂರು ಗುಂಪುಗಳು ಮಾತ್ರ ಮುತ್ತಯ್ಯಗಳು ಅನಿಸಿಕೊಂಡಿವೆ. ಆವಂದ್ರೆ ನಲಗೇತಲ ಮುತ್ತಯ್ಯಗಳು,  ಪದಿ ಮುತ್ತಯ್ಯಗಳು, ಇವುಗಳಲ್ಲೂ ನಲಗೇತಲ ಮುತ್ತಯ್ಯಗಳು ಬಾರಿ ದೊಡ್ಡವು. ಯಾಕೆಂದ್ರೆ ಒಂದು ಪಂದ್ಯ ನಡೆಸಿದ್ದರಂತೆ. ಆ ಪಂದ್ಯದಲ್ಲಿ ಪದಿಮುತ್ತಯ್ಯಗಳು, ನನ್ನಿವಾಳದ ಮುತ್ತಯ್ಯಗಳು ಸೋತವಂತೆ. ನಲಗೇತಲ ಮುತ್ತಯ್ಯಗಳು ಬಾರಿ ದೊಡ್ಡವು. ಯಾಕೆಂದ್ರೆ ಒಂದು ಪಂದ್ಯ ನಡೆಸಿದ್ದರಂತೆ. ಆ ಪಂದ್ಯದಲ್ಲಿ ಪದಿಮುತ್ತಯ್ಯಗಳು, ನನ್ನಿವಾಳದ ಮುತ್ತಯ್ಯಗಳು ಸೋತವಂತೆ.

ನಲಗೇತಲ ಮುತ್ತಯಗಳು ಕಷ್ಟಪಟ್ಟು ಗೆದ್ದವಂತೆ. ಈ ಗೆದ್ದ ಮುತ್ತಯ್ಯಗಳೇ ನಮ್ಮವು ನಲಗೇತಲ ಮುತ್ತಯ್ಯಗಳು. ಇವು ಈ ಪಂದ್ಯವನ್ನು ಗೆಲ್ಲದಿದ್ರೆ ಇಡೀ ಮ್ಯಾಸ ಮಂಡಲವೇ ಬೇರೆ ಯಾರೋ ಹಿಡಿತಕ್ಕೆ ಸಿಕ್ಕಿ ಬಿಡ್ತಿತ್ತಂತೆ. ಈ ಪಂದ್ಯ ಎಂಗೆ ನಡೀತು ಅಂದ್ರೆ, ಬೋರೇದೇವರ ಗುಡಿ (ಖುದಾಪುರದ ಹತ್ತಿರ) ಐತಲ್ಲ, ಅಲ್ಲಿ ಒಂದ್ಸಲ ಮೂರು ನಾಮದವನು ಏಳು ಚಪ್ಪರದವನು(ಎರಡು ಬೆಡಗುಗಳು) ಪಂದ್ಯವನ್ನು ಕಟ್ಟಿದ್ರಂತೆ. ಆವಾಗ ಆಗ್ಲೆ ಈ ಮೂರು ಗುಂಪಿನ ಮುತ್ತಯ್ಯಗಳು ಬೇರೆ ಬೇರೆ ಇದ್ದು. ಆವಾಗ ಈ ಪಂದ್ಯವನ್ನು ಹಾಕಿದರು. ನಮ್ಮ ನಲಗೇತಲೋರು ನಮಗೆ ನಮ್ಮ ಮುತ್ತಯ್ಯಗಳೆ ಗುರುಗಳು ಎಂದು ಹೇಳಿದರು. ಆದರೆ ಈ ಮೂರು ನಾಮದವನು, ಏಳು ಆಂದಾಡ್ಲವನು ಎಲ್ಲ ಮ್ಯಾಸ ಮಂಡಲಕ್ಕೆ ಗುರುವಾಗ್ಬೇಕು ಅಂತ, ಮ್ಯಾಸ ಮಂಡಲದವರೆಲ್ಲ ನಮಗೆ ಕಪ್ಪು ಕಾಣಿಕೆ (ಕಪ್ಪ ಕಾಣಿಕೆ) ಕೊಡಬೇಕು ಅಂತ ಅವರ್ದು. ಆಗ ಚಿಂತಗುಂಟ್ಲು ನೋಮಲ್ಲಿ ಪಂದ್ಯ ಕಟ್ಟುತ್ತೇವೆ. ಅವುಗಳಲ್ಲಿ ನಿಮ್ಮ ಮುತ್ತಯ್ಯಗಳು ಗೆದ್ದರೆ ಅವೇ ಗುರುಗಳು ಅಂತ ಮೂರು ನಾಮದವನು, ಏಳು ಚಪ್ಪರದವನು ಅಂದರು. ಆವಾಗ ಮತ್ತೆ ಕಟ್ಟಿ ಅಂದ್ರು, ಕಟ್ಟಿದರು. ಅವರು ಪಂಡಿತರಂತೆ ತಡಿ-ಮುಡಿ ಎಲ್ಲ ಹಾಕಿಕೊಂಡು ಮುತ್ತಯ್ಯಗಳನ್ನು ಪಂದಕ್ಕೆ ಬಿಡಿಸಲು ಸಿದ್ಧವಾದರು.

ಇದು ಎಂತ ಪಂದ್ಯ ಅಂದ್ರೆ ಮುತ್ತಯ್ಯಗಳನ್ನು ಮೆರೆಸುವ (ಓಡಿಸುವುದು) ಹಾದಿಗೆ ಅಡ್ಡ ವಿಷದ ಕಾಲುವೆ ಹರಿಸುವುದು. ಮತ್ತೆ ಅಡ್ಡ ಗಂಡಕತ್ತರಿಗಳನ್ನು ನಿಲ್ಲಿಸುವುದು. ಇವಲ್ಲವನ್ನು ದಾಟಿ ಮುತ್ತಯ್ಯಗಳು ಓಡಬೇಕು, ಆವಾಗ ಗೆದ್ದಂಗೆ. ಪಂದ್ಯದಲ್ಲಿ ಮೊದಲ ದಿನ ಪದಿ ಮುತ್ತಯ್ಯಗಳನ್ನು ಬಿಟ್ಟರಂತೆ. ಹಿಂಗೆ ಮೂರು ದಿನಗಳ ಕಾಲ ಬಿಟ್ರೂ ದಾಟಿ ಹೋಗಾಕೆ ಆಗದೆ ಹಿಂದಕ್ಕೆ ಬಂದ್ವಂತೆ, ಆಮೇಲೆ ನನ್ನಿವಾಳದ ಮುತ್ತಯ್ಯಗಳನ್ನು ಬಿಟ್ಟರಂತೆ, ಅವೂ ಮೂರು ದಿನ ಹೋಗಿ ಮೂರು ದಿನಾನು ವಾಪಾಸ್ಸು ಬಂದ್ವಂತೆ. ಕೊನೆಗೆ ನಲಗೇತಲ ಮುತ್ತಯ್ಯಗಳನ್ನು ಬಿಟ್ಟರಂತೆ. ಇವು ಕೂಡ ಎರಡು ದಿನ ಹಿಂದಕ್ಕೆ ಬಂದ್ವಂತೆ. ಮೊದಲಿನ ಎರಡು ಗುಂಪು ಸೋತಿದಾವೆ ನಮ್ಮ ಗುಂಪು ಗೆದ್ದೇ ಗೆಲ್ತದೆ. ಅಂತ ಧೈರ್ಯದಿಂದ ಇದ್ದ ನಲಗೇತಲದವರಿಗೆ ಚಿಂತೆ ಆಯಿತು. ಆವಾಗ ಹಿರೇಕೆರೆ (ನಾಯಕನಹಟ್ಟಿ ಹಿರೇಕೆರೆ) ಹತ್ತಿರ ಇರುವ ಕಕ್ಕೆಮರದ ಹತ್ತಿರ ಗೂಡಾಕಿದ್ದರಂತೆ, ಅವೊತ್ತು ಎತ್ತಿನ ಕಿಲಾರಿ ಯೋಚನೆ ಮಾಡ್ಕೊಂಡು ಕುಂತಿದ್ನಂತೆ. ಅವೊತ್ತು ಬುಡುಬುಡಿಕೆಯವನು ನೇರ್ಲಗುಂಟೆಯಿಂದ ಗೂಡಿಗೆ ಒಳ್ಳೆ ಕಲ್ಲು ಕರಗೋವೊತ್ತಿನಾಗೆ ಬಂದ್ನಂತೆ-ಗೂಡಾಕಿದ್ದ ಜಾಗಕ್ಕೆ. ಅವನತ್ರ ಆಲಕ್ಕಿ ಇತ್ತಂತೆ.

ನಾಳೆ ಗೊಂಬೆತ್ತು ಹೊತ್ತು ಹುಟ್ಟೋವೊತ್ತಿಗೆ ನಲಗೇತಲ ಮುತ್ತಯ್ಯಗಳನ್ನು ಪಂದಕ್ಕೆ ಬಿಡಕೆ ಹೇಳು, ಗೆಲ್ಲತ್ವೆ ಅಂಥ ಆಲಕ್ಕಿ ಬುಡುಬುಡಿಕೆಯವನಿಗೆ ಹೇಳ್ತಂತೆ. ಆವಾಗ ಅವನು ಇನ್ನೇನು ನೇರ್ಲಗುಂಟೆಯಿಂದ ಹಿರೇಕೆರೆ ಹತ್ತಿರದ ನಲಗೇತಲ ಮುತ್ತಯ್ಯನ ಗೂಡಿಗೆ ಬಂದ್ನಂತೆ. ಬಂದು ಗೂಡಿನ ಮುಂದೆ ನಿಂತು ಬುಡುಬುಡು ಅಂದ್ನಂತೆ. ಆವಾಗ ಕಿಲಾರಿ ಯಾರವನು ಎಂದ್ನಂತೆ. ನಾನು ಬುಡುಬುಡಿಕೆಯವನು ಕಣಪ್ಪ; ಒಂದು ಸ್ವಲ್ಪ ನೀರನ್ನಾದರೂ ತಾರಪ್ಪ ಅಂದ್ನಂತೆ. ಆವಾಗ ಕಿಲಾರಿ ಹೋಗೋ ನಂದೆ ನನಗಾಗೈತೆ ನಾನೆಲ್ಲಿ ನೀರು ತರಲಿ ಅಂದ. ಆವಾಗ ಬುಡುಬುಡಿಕೆಯವನು ನಿನ್ ಕಷ್ಟವೇನೇ ಬರಲಿ ನಾನು ನಿವಾರಿಸ್ತೀನಿ ನೀರು ತಾರಪ್ಪ ಅಂತ ಅಂದ್ನಂv. ಆವಾಗ ಕಿಲಾರಿ ನೀರು ತಂದ್ನಂತೆ. ನಾಳೆ ಎಷ್ಟೊತ್ತಾಗಲಿ ಗೊಂಬೆತ್ತು ಏರುವ ವೊತ್ತಿಗೆ ನೀನು ಈಜು(ಮೆರಿಸುವುದು) ಬಿಡುಬೇಕು ಕಣಪ್ಪ, ನೀನು ಗೆಲ್ತೀಯ ಅಂದ್ನಂತೆ ಬುಡುಬುಡಿಕೆಯವನು. ಅಂಗಾದ್ರೆ ನೀನು ಈ ವೋತ್ತು ಇಲ್ಲೇ ಇರು, ನಾಳೆ ಹೋಗಿಬಿಡವಂತೆ ಅಂದು ಆವೊತ್ತು ಅವುನ್ನ ಅಲ್ಲೇ ಉಳಿಸಿಕೊಂಡು ಬೆಳಿಗ್ಗೆ ಎದ್ದು ಹೋದ್ರಂತೆ. ಗೊಂಬೆತ್ತು ಏರೂವೊತ್ತಗೆ ಮುತ್ತಯ್ಯಗಳನ್ನು ಪಂದ್ಯದಲ್ಲಿ ಈಜುಬಿಟ್ರಂತೆ.

 

ಪಂದ್ಯದಲ್ಲಿ ಗೆದ್ವಂತೆ

ಅವೊತ್ತು ನಲಗೇತಲಮುತ್ತಯ್ಯಗಳು ಪಂದ್ಯದಲ್ಲಿ ಗೆದ್ವಂತೆ. ನಮ್ಮ ನಲಗೇತಲಮುತ್ತಯ್ಯಗಳು ಓಡುವ ನಿಬ್ಬರಕ್ಕೆ ಅವರು ಇಟ್ಟ ಗಂಡಕತ್ತರಿಗಳು ಅವೆಲ್ಲ ಹದ್ದುಗಳಾರಿದಂತೆ ಹಾರಿ ಹೋದವಂತೆ. ವಿಷ ಕಲೆಸಿದ ಕಾಲುವೆ ಇತ್ತಲ್ಲ, ಅದರಲ್ಲಿ ಒಂದು ಎತ್ತು ಮತ್ತು ಆಕಳ ನೀರು ಕುಡಿದುಬಿಟ್ವಂತೆ. ಅಷ್ಟೊತ್ತಿಗೆ ಅವುಗಳ ಜೊತೆ ಓಡಿದ ಕಿಲಾರಿಗೆ ಮೊಣಕಾಲ ಚಿಪ್ಪುಗಳು ಹೋಗಿ ಬಿಟ್ವಂತೆ. ಆವಾಗ ಎರಡು ಎತ್ತುಗಳು ಅವನ್ನು ಕೊಂಬಿನಲ್ಲಿ ಎತ್ತಿಕೊಂಡು ಕಾಲುವೆಯನ್ನು ದಾಟಿ ಹೋದವು. ಆವಾಗ ಆ ಕಡೆ ಭೂಮಿ ಇಬ್ಭಾಗವಾಗಿ ಹೋಯಿತು. ಅದರೊಳಗೆ ಆ ಕಿಲಾರಿ ಮತ್ತು ಆ ಎರಡು ಎತ್ತುಗಳು ಒಳಗೆ ಹೋದವು. ಅಂಗೆ ಭೂಮಿ ಮತ್ತೆ ಮುಚ್ಚಿಕೊಳ್ತು. ಆ ಮುಚ್ಚಿಕೊಂಡ ಜಾಗವನ್ನು ‘ಮೂಗಮಾಲೆ’ ಅಂತ ಕರೆಯುತ್ತಾರೆ. ಆ ಮೂಗಮಾಲೆ ಇರುವ ಜಾಗದಲ್ಲಿ ಒಂದು ಬಂಡೆ ಇದೆ. ಬೋರೇದೇವರಿಗೆ ಹೋಗುವ ನಮ್ಮೂರಿನ ಜನರೆಲ್ಲ ಮೊದಲು ‘ಮೂಗಮಾಲೆಗೆ ಮೀಸಲು ಹಾಕಿ ಪೂಜೆ ಮಾಡಿಕೊಂಡು ಬರುತ್ತಾರೆ. ಅಲ್ಲಿ ಪೂಜೆ ಮಾಡುವ ಹಕ್ಕು ನಮಗೇ ಇರೋದು. ಯಾವನೂ ಇದರ ಬಗ್ಗೆ ಮಾತಾಡುವಂಗಿಲ್ಲ. ಗೋವಿಂದಯ್ಯ ಎನ್ನುವವರ ಮಗನಿಂದ ಒಂದು ಜಮೀನಿನ ವಿಚಾರದಲ್ಲಿ ಯಾಜ್ಯವು ಬಿದ್ದು ಆ ಬೋರೇದೇವರ ಗುಡಿಗೆ ಕಳಸವೇ ಎತ್ತಿರಲಿಲ್ಲ. ತರ ಹಾಕಿ ಎಷ್ಟೋ ವರ್ಷಗಳಾಗಿದ್ದವು. ಈ ದೇವರ ಹಳೆ ಪೂಜಾರಿ ಸತ್ತುಹೋದ.

ಈ ಕಳಸವನ್ನು ಮೊನ್ನೆ ಹೋಗಿ ನಾವು ಎತ್ತಿ ಬಂದ್ವಿ. ಕಳಸ ಎತ್ತುವ ಹಿಂದಿನ ದಿನ (1999ರ ಕೊನೆಯ ತಿಂಗಳಲ್ಲಿ) ಮುತ್ತಯ್ಯಗಳನ್ನು ಹಟ್ಟಿಗೆ ಹೊಡಕೊಂಡು ಹೋದ್ವಿ. ಆವೊತ್ತು ರಾತ್ರಿ ಗುಡಿ ಮುಂದೆ ಮಲಗಿಸಿ ಬೆಳಗಿಂಜಾವ ಐದು ಗಂಟೆಗೆ ಎದ್ವಿ. ಅವೊತ್ತು ಹಟ್ಟಿಯಲ್ಲಿ ಒಬ್ರೂ ಇರಲಿಲ್ಲ ಹಂಗೆ ಹೊರಟ್ಟಿದ್ದರು. ಬರೀ ಗಾಡಿಗಳೇ 200-250 ಇದ್ವು. ಕಳಸನ ನಾವೇ ಮಾಡಿಸಿದ್ವಿ. ಆದನ್ನ ತಂದು ಮುತ್ತಯ್ಯಗಳ ಪದಿಯಲ್ಲಿ ಇಟ್ಟರು. ಆವಾಗ ಎಲ್ಲಾ ಮುತ್ತಯ್ಯಗಳು ಎದ್ದು ನಿಂತು ಅಂಬೋ ಆಂಥ ಅರಸಿದವು. ಆವಾಗ ಹಣ್ಣು-ಕಾಯಿ ಮಾಡಿಕೊಂಡು ಕಣಸ (ಕಳಸ)ನ ಬಂಡಿಯ ಮೇಲೆ ಇಟ್ಟರು. ಅಲ್ಲಿಂದ ಉರುಮೆ, ದಗಮು, ತಪ್ಪಟೆಗಳನ್ನು ಹೊಡೆದುಕೊಂಡು ಬೋರೇದೇವರ ಗುಡಿಗೆ ಹೊರಟುಬಿಟ್ರು. ಉರುಮೆ ತಪ್ಪಟಿಯವರು ಮುಂದೆ ಮುಂದೆ, ಅವರ ಹಿಂದೆ ನಾನು ದೇವರ ಎತ್ತುಗಳನ್ನು ಕರಕೊಂಡು ಹೊರಟೆ. ನಮ್ಮಿಂದೆ ಎತ್ತಗಳನ್ನು ಹೊಡಕೊಂಡು ಊರಿನ ಹಿರಿಯರು, ಕಣಸ ಹೊತ್ತ ಬಂಡಿ. ಆ ಬಂಡಿಯ ಹಿಂದೆ ಹಟ್ಟಿಯವರ ಬಂಡಿಗಳು ಹೊರಟವು. ಹೊರಟು ಎಂಟು ಗಂಟೆಯ ವೊತ್ತಿಗೆ ಬೋರೆದೇವರ ಗುಡಿ ಹತ್ತಿರಕ್ಕೆ ಹೋಗಿಬಿಟ್ವಿ. ಹೋಗಿ ಗುಡಿ ಪಕ್ಕದಲ್ಲಿಯೇ ಮುತ್ತಯ್ಯಗಳನ್ನು ನಿಲ್ಲಿಸಿಕೊಂಡ್ವಿ.

ಸ್ವಲ್ಪ ಹೊತ್ತು ಆದ ಮೇಲೆ ಮೂಗಮಾಲೆಗೆ ಹಣ್ಣು-ಕಾಯಿ ಮಾಡ್ಸಿದ್ವಿ. ಆ ಮೇಲೆ ಮುತ್ತಯ್ಯಗಳನ್ನು ಗುಡಿ ಸುತ್ತಾ ಸುತ್ತಿಸಿದ್ವಿ. ಆಮೇಲೆ ಗುಡಿಮುಂದೆ ಇರುವ ವಾಸಿಗುಂಡು (ವಾಸಿ ಕೊಯ್ಯುವ ಸ್ಥಳ) ಹತ್ರ ನಿಲ್ಸಿದ್ವಿ. ಆ ಗುಂಡಿಗೆ ಪೂಜೆ ಮಾಡಿದ್ದು, ವಾಸಿ ಕೊಯ್ದಿದ್ದು, ಕಣಸಕ್ಕೆ ಪೂಜೆ ಮಾಡಿದ್ದು, ಕಾಸು ಇಟ್ಟಿದ್ದು, ಕಣಸ ಏರಿಸಿದ್ದು. ಕಣಸ ನಾವು ಇಡಬೇಕು ನಾವು ಇಡಬೇಕು ಅದರ ಹಕ್ಕು ಇರೋದು ನಮಗೆ ಅಂತ ನಮ್ಮ ಕೋಮಿನವರ ಬಾಳ ಜನ ಬಂದಿದ್ರು. ತಿಪ್ಪೇಸ್ವಾಮಿ (ಮಾಜಿ ಸಚಿವರು, ಚಳ್ಳಕೆರೆ) ಅಂಥ ದೊಡ್ಡ ಮನುಷ್ಯರು ಬಂದಿದ್ರು. ಇವುರ್ದೆಲ್ಲ ರಾಜನಹಳ್ಳಿ ಸ್ವಾಮಿಯ (ಪುಣ್ಯಾನಂದ ಪುರಿಸ್ವಾಮಿ) ಹತ್ತಿರ ಕಣಸ ಎತ್ತಿಸಬೇಕು ಅಂತ. ಎತ್ತುವ ಹಕ್ಕು ನಮಗೇ ಇರುವುದು ಅಂತಂದು ನಮ್ಮ ಹುಡುಗರು ಕಣಸ ಎತ್ತಿಬಿಟ್ರು. ಅದಕ್ಕೆ ನಮ್ಮ ಯಜಮಾನ್ರು ಧೈರ್ಯಕೊಟ್ರು. 10ಗಂಟೆಗೆ ಕಣಸ ಎತ್ತಬೇಕು. ಅದರಾಗೆ ಪದಿಮುತ್ತಯ್ಯಗಳು ಮೊದಲು ಅಂಥ ಹ್ಯಾಂಡ್‍ಬಿಲ್ ಮಾಡ್ಸಿದ್ರು ಅವು.್ರ ಅದಕ್ಕೆ ನಲಗೇತಲ ಮುತ್ತಯ್ಯಗಳನ್ನು ಹಿಂದೆ ಮಾಡಲು ಹೊರಟ ಅವರನ್ನು, ಹಿಂದೆ ಮಾಡಬೇಕು ಅನ್ನೊದು ನಮ್ಮದು.

ನಲಗೇತಲಮುತ್ತಯ್ಯಗಳನ್ನು ಹಿಂದೆ ಮಾಡ್ಬೇಕು ಅಂತ ಬಯ್ಯಲು ಹೊರಟಿರುವ ಇವರಿಗೆ ಎಷ್ಟು ಇರಾನ ಅಂತ. ಕಣಸ, ಎತ್ತು ಎಲ್ಲ ನಮ್ಮ ಹತ್ರ ಇದ್ದಾವೆ. ಅಂಥದಾರಾಗೆ ಅವರು ಯಂಗೆ ಬಂದು ತರುಬುತ್ತಾರೆ. ಮಿನಿಷ್ಟ್ರು (ತಿಪ್ಪೇಸ್ವಾಮಿ) ಅವುರೆಲ್ಲ ತಡೀರಿ ಇನ್ನೊನ್ದು ಅರ್ದಗಂಟೆ ಅಂದ್ರು. ಆದ್ರು ಕಾಸು ಇಟ್ಟು ವಾಸಿ ಕೊಯ್ದ ಮೇಲೆ ನಮ್ಮ ಕಟ್ಲೆ ಮುಗೀತು. ನಾವು ಕಣಸ ಎತ್ತದೇ ಸರಿ ಅಂತಂದು ಕಣಸ ಇಟ್ಟಿದ್ದು ಹೊರಟ್ಟಿದ್ದು. ನಮ್ಮ ಮುತ್ತಯ್ಯಗಳನ್ನು ಓಡಿಸ್ಬೇಕು ಅಂತ ಅವರು ದೊಡ್ಡ ಪಟಾಕಿ ಸರವನ್ನು ಹಚ್ಚಿದರು. ಸುಮ್ನೆ ದಡದಡದಡ ಅಂತ ಅಂದವು. ಆವಾಗ ಪದಿಮುತ್ತಯ್ಯಗಳೇ ಓಡಿ ಹೋಗಿ ಬೋರೇದೇವರಟ್ಟಿ ಬಿದ್ದವು. ನಮ್ಮವು ಮಾತ್ರ ಮಿಸುಕುದೆ ಹಾಗೆ ಇದ್ದವು. ಕಣಸ ಇಟ್ಟ ಮೇಲೆ ಅಲ್ಲಿ ಊಟದ ವ್ಯವಸ್ಥೆ ಇತ್ತು. ನಮ್ಮ ಮುತ್ತಯ್ಯಗಳಿಗೆ ಎಂಜಲುಗಳೆಂದರೆ ಆಗುವುದಿಲ್ಲ. ಅದಕ್ಕೆ ಎಂಜಲು ಬೀಳುವುದಕ್ಕಿಂತ ಮೊದಲು ಮುತ್ತಯ್ಯಗಳನ್ನು ಸಾಗ ಹಾಕಿದರು. ನಮ್ಮ ಹಟ್ಟಿಯ ಬಾಳ ಜನ ಅಲ್ಲೇ ಉಳಕೊಂಡ್ರು. ನಾನು ಎತ್ತು ಹೊಡ್ಕೊಂಡು ಹಂಗೆ ಬಂದೆ. ನನ್ನ ಜೊತೆಗೆ ಕೆಲವು ಹುಡುಗರು ಇದ್ರು.

3ಬೋರೇದೇವ್ರ ಗುಡಿಯ ತರ ಹಾಕಿದ್ದವು ಇವು. ಗುಡಿಕಟ್ಟಿಸಿರುವವರು ನಾವು. ಕಣಸ ಮಾಡಿಸಿರುವವರು ನಾವು, ಅಂಥದರಾಗೆ ನಮ್ಮನ್ನು ಹ್ಯಾಂಡ್‍ಬಿಲ್‍ನಲ್ಲಿ ಹಿಂದಕ್ಕೆ ಹಾಕಿಸಿದ್ದಾರೆ. ಅದಕ್ಕೆ ನಾವು ಇವರಿಗೆ ಮಾಡಬೇಕು ಅಂತ ಮಾಡಿದ್ವಿ. ಮರ್ಯಾದೆ ಕಳೆದು ಅದೇ ಬಂದ್ವಿ. ಅವೊತ್ತು ಬೊರೇದೇವರ ಗುಡಿ ಹತ್ತಿರ ವಾಸಿಕೊಯ್ದು ಬೇಟೆಯನ್ನು (ಗಾಡಿ) ಬಂಡಿಯಲ್ಲಿ ಹಾಕಿದ್ವಿ. ಅಲ್ಲಿ ಎರಡು ಪಾಕೇಟು ಅಕ್ಕಿ ಕೊಟ್ಟಿದ್ರು. ಅವುನ್ನ ಊರಿನ ಕೆಲವು ಜನ ಮನೆಗೆ ತಗೊಂಡೋಗಿ ಹಾಕಿಕೊಂಡ್ರು. ಅವುನ್ನ ಮುತ್ತಯ್ಯಗಳಿಗೆ ಕೊಟ್ಟಿದ್ರೋ ಆಥವಾ ಜನರಿಗೆ ಕೊಟ್ಟಿದ್ರೋ? ಈಗ ನಮ್ಮಲ್ಲೂ ಇಂಥ ಜನ ಐದಾರಪ್ಪೊ. ಮುತ್ತಯ್ಯಗಳಿಗೆ ಏನು ಕೊಟ್ರು ಅವು ಮುತ್ತಯ್ಯಗಳಿಗೆ ಸೇರಬೇಕೇ ಹೊರತು ಜನರಿಗಲ್ಲ. ಆದರೆ ಕೆಲವು ಜನ ಹಿಂಗೆ ಮಾಡ್ತಾರೆ. ಹಿಂದೆ ಆದಾಯ ಬಂದ್ರೆ ಯಾರು ಬೇಕಾದ್ರು ತೆಗೆದುಕೊಳ್ತಾರೆ. ಆದರೆ ಈ ಗೂಡಿನ ಕಡೆ ಮುತ್ತಯ್ಯಗಳ ಕಡೆ ಯಾರೂ ಅಣುಕಿ (ಇಣುಕಿ) ನೋಡುವುದಿಲ್ಲ. ದೇವರು ದಿನ ಮಾತ್ರ ಕೋಲು ಹಿಡ್ಕೊಂಡು, ನೀಟಾಗಿ ಬಟ್ಟೆ ಹಾಕಿಕೊಂಡು, ಶೆಲ್ಯ ಹಾಕ್ಕೊಂಡು ಬರೀ ಮಾತಾಡ್ತಾ ಬಂದ್ಬಿಡ್ತಾರೆ.

ಇವಾಗಿನ ಜನ ಹಿಂಗೆ ಮಾಡುತ್ತಾರೆ. ನನಗೆ ಬರಬೇಕಾದ ಪಾಲನ್ನೂ ಒಬ್ಬರೂ ಸರಿಯಾಗಿ ಕೊಡುವುದಿಲ್ಲ. ನಾನು ಕಣಗಳಿಗೆ ಹೋಗಿ ಕೇಳಿದಾಗ ಮಾತ್ರ ಅದೂ ಸ್ವಲ್ಪ ಕೊಡುತ್ತಾರೆ. ಇಲ್ಲ ಅಂದ್ರೆ ಇಲ್ಲ. ಕೆಲವರು ಒಂದೆರಡು ಮನೆಯವರು ಮಾತ್ರ ಈಗ್ಲೂ ತಪ್ಪದಂತೆ ನನಗೆ ಬರಬೇಕಾದ ಪಾಲನ್ನು ಮನೇಗೇ ಕಳ್ಸುತ್ತಾರೆ. ಕೆಲವು ಜನರಿಗೆ ಬಾರಿ ಮೆಜೆರೇಟು ಬಂದಿದೆ. ಕೆಲವು ಕಡೆ ಕಣದಲ್ಲಿ ಹೆಣ್ಣು ಮಕ್ಕಳದೇ ದರ್ಭಾರು. ಯಾರು ಎಲ್ಲಿ ಕೆಲ್ಸ ಮಾಡ್ಬೇಕು ಅನ್ನೋದೆ ಗೊತ್ತಿಲ್ಲ. ನಾನು ಆ ಹೆಂಗ್ಸರ ಹತ್ತಿರ ಸೆರಗೊಡ್ಬೇಕೇ? ಅಂಥವರ ಹತ್ತಿರ ಇರುವ ಗಂಡಸುರಲ್ಲ ಹೆಂಗ್ಸರಾಗಿರಬೇಕಿತ್ತು.

ಹಿಂಗೆ ಕಷ್ಟ ಪಟ್ಟು ಅಲ್ಪಸ್ವಲ್ಪ ದುಡ್ಡುಕಾಳು ದುಂಡ್ಗಾರ್ತೀನಿ. ಇದರಾಗೆ ನಮ್ಮ ಪೆದ್ದಗಳು ದೇವರ ಆಡು _ ಬಾಡನ್ನು ಕೇಳ್ತಾರೆ. ಮಸ್ತು ಕೊಟ್ಟಿದ್ದೇವೆ. ಮೊನ್ನೆ ದಿನ ನಮ್ಮ ದೇವರಿಗೆ ಕೊಳಲು ಮಾಡ್ಸಿದ್ರು. ದೇವರು ದಿನ ದೇವರ ಸುತ್ತ ಕುರಿಗಳನ್ನು ಈಜು ಬಿಟ್ರು. ಆವಾಗ ದೇವರು ಕುರಿಯವನ ಕೈಯಲ್ಲಿರುವ ಕೊಳಲುವಿನಂತದ್ದು ನನಗೆ ಮಾಡ್ಸಿ ಅಂತ ಕೇಳ್ತು. ಆವಾಗ ಕುರಿಯವವರೆಲ್ಲ ಸೇರಿ ಮಾಡ್ಸಬೇಕು ಅಂತಿದ್ರು. ಬರೀ ಕುರಿಯರು ಮಾಡ್ಸಿದ್ರೆ ಮುಂದೊಂದು ದಿನ ನಾವು ಮಾಡ್ಸಿದ್ದು ಅಂಥ ಅನ್ನಬಹುದು. ಸುಮ್ನೆ ಸಾವಿರದವರು ಸೇರಿ ಮಾಡ್ಸಿಬಿಟ್ರೆ ಯಾವ ತಕರಾರು ಇಲ್ಲ ಅಂತ ಹಟ್ಟಿಯ ಪ್ರತಿ ಮನೆಯಿಂದಲೂ ಆಡು-ಬಾಡು ಎತ್ತಿದರು. ಆವಾಗ ನನಗೂ ಹಾಕಿದರು. ಇದನ್ನು ಇಸ್ಕೊಂಡು ಹೋಗ್ಲಿಕ್ಕೆ ಯಜಮನರೇ ಬಂದಿದ್ದರಿಂದ ಕೊಟ್ಟೆ. ಅವರೇ ಹೇಳಿದ್ರು 501 ರೂಪಾಯಿ ಕೊಡಬೇಕು ಅಂತ. ನಾನು ಆವಾಗ್ಲೆ ಕೊಟ್ಟೆ.

ಗೂಡಿಗೆ ಬಂದು ಹೋಗುವ ಯಾವ ಯಜಮಾನರೇ ಆಗಲಿ ನನಗೆ ಒಂದು ಕಂಬ್ಳಿ ಕೊಡಿಸುವುದಿಲ್ಲ. ಗೂಡಿಗೆ ಬರುವ ಕೆಲವು ನೌಕರಿದಾರರನ್ನು ನನಗೆ ಒಂದು ಕಂಬ್ಳಿ ಕೊಡ್ಸಿ ಅಂಥ ಕೇಳುತ್ತೇನೆ. ಆದರೆ ಅವುರೂ ತಂದು ಕೊಡುವುದಿಲ್ಲ. ಹೇಳ್ಸ್ಕೂಂಡ ದಿನ ಕಂಡವರು ಮತ್ತೆ ಕಾಣುವುದೇ ಇಲ್ಲ. ಇನ್ನೇನು ಮಾತಾಡ್ಲಿ ಅವ್ರುರಿಗೆ ತಿಳೀದಿದ್ದ ಮೇಲೆ ನಾವೇನು ಮಾಡಕಾಗುತ್ತೇ?

ಯುಗಾದಿ ಅಮವಾಸೆದಿನ ಮುತ್ತಯ್ಯಗಳನ್ನು ಭಕ್ತರ ಹೊಲದಲ್ಲಿ ಮಲಗಿಸ್ತೀವಿ. ಯಾರಿಗೆ ತಮ್ಮ ಹೊಲದಲ್ಲಿ ಹರಸಿಕೊಳ್ಳಬೇಕು (ಮಲಗಿಸಬೇಕು) ಅಂತ ಅನ್ನಿಸುತ್ತೋ ಅವ್ರು ಯಜಮಾನರನ್ನು ಬಂದು ಕೇಳ್ತಾರೆ. ಅವರು ಊರಿನ ಸಾವಿರದವರನ್ನು ಸೇರಿಸಿ, ಇಂಥವರು ಕೇಳ್ತಾ ಇದ್ದಾರೆ, ಅಲ್ಲಿಗೆ ಬಿಡಾನ ಅಂತ ಕೇಳ್ತಾರೆ; ಅಂಗೆ ಬಿಡ್ತಾರೆ. ಮೊದಲು ಹಿಂಗೆ ಬೇರೆಯವರ ಹೊಲಕ್ಕೆ ಹರಿಸುವುದು ಇರಲಿಲ್ಲ. ಗೂಡು ಎಲ್ಲಿರುತ್ತೋ ಅಲ್ಲೇ ಯುಗಾದಿ ಗೂಡು ಮಾಡ್ತಾ ಇದ್ರು. ಅದನ್ನ ತಮ್ಮ ಸ್ವಂತ ಹೊಲಗಳಿಗೆ ಹರಿಸುವುದನ್ನು ಕಲ್ಸಿದವರೇ ಗಗ್ಗಬೋರಣ್ಣ. ಈತ ಲೆಕ್ಕಿಲ್ಲದಷ್ಟು ಸಲ ಹರಿಸಿದ್ದಾನೆ. ಯಾರು ಹರಿಸದಿದ್ದರೂ ಆತ ಹರಿಸುತ್ತಿದ್ದ. ಇವಾಗ ಜನ ಯುಗಾದಿ ಗೂಡನ್ನು ತಮ್ಮ ಹೊಲದಲ್ಲಿ ಹಾಕಿಸಿಕೊಂಡು ಒಂದು ಸುರುಬು ಕೊಡಲು ಹಿಂದೆ ಮುಂದೆ ನೋಡ್ತಾರೆ. ಅದನ್ನು ಕೆಲವರ ಹತ್ತಿರ ನಾನೇ ಕೇಳ್ಬೇಕು. ಕೆಲವರು ಮಾತ್ರ ಕೇಳ್ದನೆ ಕೊಟ್ಟು ಬಿಡ್ತಾರೆ. ದೇವರೆತ್ತುಗಳನ್ನು ಹೊಲದಲ್ಲಿ ಮಲಗಿಸಿದಾಗ ಸುರುಬು ಬಿಡಬೇಕು. ಅದನ್ನ ಬಿಟ್ಟು ಬೇಟೆ ಕೊಯ್ದು ಮಾಂಸದ ಸಾರು ಮಾಡಿಟ್ಟಿದ್ದು ಏನೂ ಲೆಕ್ಕಕ್ಕೆ ಇಲ್ಲ.

ಸುರುಬನ್ನು ಬಿಡಬೇಕು ಅದು ಊಳಿತದೆ. ಅದುನ್ನ ಬಿಟ್ಟು ಬರಿ ಅಡಿಗೆ ಮಾಡಿಟ್ಟರೆ ತಿಂದು ಹೋಗ್ತಾರೆ. ಹೋಗಿ ಏಲ್ತಾರೆ. ಆ್ಹ… ಆ್ಹ…ಅವುರ ಹೆಸರು ಇನ್ನೆಲ್ಲಿ ಇರ್ತದೆ. ನಮ್ಮ ಹೊಲದಲ್ಲಿ ಗೂಡು ಮಲಗಿಸಿದಾಗ ದೇವರಿಗೆ ಬಿಟ್ಟಿದ್ದು ಅಂತ ನೋಡಬಹುದು. ಈಗ ಗೂಡು ಮಲಗಲುಕೂಡ ನಮ್ಮ ಊರಿನ ಎಲಕ್ಸನ್ ಬೆರೆತು ಬಿಡುತ್ತೆ. ಹಿಂದೆ ಹಾಗಿರಲಿಲ್ಲ. ನಲ್ಲನ ಮುತ್ತಜ್ಜ ಇರುವಾಗ ಇವು ಯಾವುವು ನಡೀತಿರಲಿಲ್ಲ. ಯಾರೂ ತುಟಿಕ್-ಪಿಟಿಕ್ ಅನ್ನುತಿರಲಿಲ್ಲ.
ನಲ್ಲನ ಮುತ್ತಜ್ಜ ಭಾರಿ ಒಳ್ಳೆಯ ಮನುಷ್ಯ. ಅವಜ್ಜ ನಮ್ಮ ದೇವರ ಹತ್ತಿರ ಮಾತಾಡಿದಂತೆ ಯಾರೂ ಮಾತಾಡಲಿಲ್ಲ. ಅವಜ್ಜನದು ಒಂದು ದೊಡ್ಡ ಆಸೆ ಇತ್ತು. ಮುತ್ತಯ್ಯಗಳ ಮಾರಮ್ಮ ದೇವರು ಮಾಡ್ಸಿಬೇಕು ಅಂತ. ನಾವು ಹುಟ್ಟಿದಾಗಿನಿಂದಲೂ ಈ ಹಬ್ಬ ಮಾಡಿಲ್ಲ. ಈಗ ಗೂಡಲ್ಲಿ ಬೇಟೆ ಕೊಯ್ಯುವುದು ಈ ಮುತ್ತಯ್ಯಗಳ ಮಾರಮ್ಮಾಗೇ ಆದ್ರೂ, ಬೇರೆ ಈ ದೇವರನ್ನು ಅದ್ದೂರಿಯಾಗಿ ಮಾಡ್ಬೇಕು ಅಂಥ ಆವಜ್ಜ ಹೇಳ್ತಿದ್ದ. ಆದರೆ ಆಗಲಿಲ್ಲ. ಪಾಪ ಆವಜ್ಜ ಆಂಗೆ ಸತ್ತು ಹೋದ.

(ಮುಂದುವರಿಯುವುದು)

Leave a Reply

Your email address will not be published.