ಕಿರಂ ಮತ್ತು ಹಕ್ಕಿಮರಿಗಳು

-ರಂಗನಾಥ ಕಂಟನಕುಂಟೆ

ಕಿರಂ ಮತ್ತು ಹಕ್ಕಿಮರಿಗಳು

ಒಳದನಿ ನುಡಿದಿದೆ ಇದಲ್ಲ ಇದಲ್ಲ
ಎಂದು; ಅವರು ಬಿಡಿಸಿದ ಚಿತ್ತ
ಇವರು ಬಿಡಿಸಿದ ಚಿತ್ತ
ವಿಚಿತ್ರ; ಯಾವುದೂ ಪೂರ್ಣವಲ್ಲ;
ಯಾವುದೂ ತ್ಯಾಜ್ಯವಲ್ಲ
ಎಲ್ಲವೂ ಅವರವರ ಭಾವಕ್ಕೆ
ಅವರವರ ಬಕುತಿಗೆ
ಕುರುಡರು ಆನೆ ಮುಟ್ಟಿದಂತೆ
ಬಿಡಿಸುವರು ಬಿಡಿ ಬಿಡಿ ಚಿತ್ರ
ಈ ಕವಿತೆಯೂ ಒಂದು ಅಪೂರ್ಣ ಚಿತ್ರ

ಎಂದು ಹೇಳುತಿದೆ; ಇದಲ್ಲ ಇದಲ್ಲ ಕಿರಂ ಇದಲ್ಲ
ಎಂದು ಹೇಳುತಿದೆ; ಒಂದೇ ಕ್ಯಾನ್ವಾಸಿನಲಿ
ಅವರಿವರು ತುರಕುವುದು ಕಂಡು ನಕ್ಕರು.
ಮತ್ತೆ ಮತ್ತೆ
ಕ್ಯಾನ್ವಾಸಿನ ಹೊರ ಹೊರಗೆ
ಜಿಗಿ ಜಿಗಿದು
ಸಿಕ್ಕರೆ ಸಿಕ್ಕಶ್ಟನ್ನು ಹಿಡೀರೆಂದು
ಮುಸಿ ಮುಸಿ ಮುಗುಳ್ನಕ್ಕರು;

ನಗಬೇಡಿ ಹಾಗೆ ನಮಗೆಲ್ಲ ಅದು ಬೇಗೆ
ನೀವು ಉದುರಿಸಿದ
ಸುಟ್ಟರೂ ಸುಡದ
ಯಾವ ಗರಿಗಳನ್ನು ನಿಮ್ಮದೆಂದು
ಈಗ ನಮ್ಮ ನೋಟುಬುಕ್ಕಿನಲ್ಲಿ ಬಚ್ಚಿಡುವುದು?
ಆಗ ಹೇಳಿದ್ದು ಈಗಿಗೆ ವಿರುದ್ದ
ಈಗ ಹೇಳಿದ್ದು ಆಗಿಗೆ ವಿರುದ್ದ
ಎಂದು ಬೈನರಿಗಳಲ್ಲಿ ಕೊರಗುವ ನಾವು;
ಮಕ್ಕಳ ಹಾಗೆ ನವಿಲುಗರಿಯ ಮೊಟ್ಟೆಯಿಡಿಸಿ
ಮರಿಹಾಕಿಸಲು
ಅರಿಸಿನ ಕುಂಕುಮ ಊದುಬತ್ತಿಯಿಟ್ಟು
ಜೊತೆಗೆ ಚಿಲ್ಲರೆ ನಾಣ್ಯಗಳ ಕಾವಲಿಟ್ಟು
ಜೋಪಾನವಾಗಿ ಕಾಪಿಟ್ಟು
ಮತ್ತೆ ಮತ್ತೆ ಮರಿ ಹಾಕಿತೇ ಎಂದು ತೆರೆದಿಟ್ಟು
ಯಾವ ಗರಿಯ ಯಾವ ತಳಿಯ ಕಾಪಿಡಲಿ
ನಿಮ್ಮದೆಂದು ಈ ನೆಲದಲಿ ಹೂತಿಟ್ಟು;

ನೀವು ಸುಟ್ಟ ಗರಿಗಳನ್ನೋ ಸುಡಲೆಂದೇ ತೇಲಿಬಿಟ್ಟ ಗರಿಗಳನ್ನೋ
ಯಾವುದಕ್ಕೂ ಇರಲಿ ಎಂದು ಬಚ್ಚಿಟ್ಟ ಗರಿಗಳನ್ನೋ
ನೀವು ಕಾದಿರಿಸಲು ಅಂಜಿದ ಸ್ಥಾವರ ಗರಿಗಳನ್ನೋ
ನಿಂತ ನೆಲದಲ್ಲಿ ನಿಲ್ಲದ ಅನಂತ ಕಾಲದಲ್ಲಿ
ಯಾವ ಗರಿಯ
ಯಾವ ತತ್ತಿಯ
ಮರಿ ಮಾಡಿಸಲಿ?

ಎಂದದ್ದಕ್ಕೆ;
ನಗು ನಗುತ್ತಲೇ ಸಿಂಬಳ ಸುರಿಸಿ ಮಕ್ಕಳ ಹಾಗೆ
ಎರಡು ಕೈಗಳಲಿ ಬೆಣ್ಣೆಯ ಹಾಗೆ
ತೀಡಿ
ಆ ಕಡೆ ಈ ಕಡೆ
ಅದು ಮತ್ತೂ ನಿಲ್ಲದಿದ್ದರೆ ಬೇರೆ ಕಡೆ
ಕಾಲಡಿಯಲ್ಲಿ ಮುದುರಿ ಬಿದ್ದಿದ್ದ
ಯಾವುದೋ ಅರಿವೆ ತೆಗೆದು
ಸಿರ್ರ ಬರ್ರ ಸೀದಿ ಉಂಡೆ ಸುತ್ತಿ
ಅವರಿವರು ಕೆತ್ತಿದ ಕ್ಯಾನ್ವಾಸುಗಳಿಗೆ ಮೆತ್ತಿ
ಹುಸಿನಗೆಯಲ್ಲೇ ಹರಿದು ಚಿಂದಿ ಮಾಡಿದರು;
ಅಡಿಗೆ ಮನೆಗೆ ನುಗ್ಗಿ ಲೋಟವೆತ್ತಿ ಗಟ ಗಟ ಹೀರಿದರು;
ಕನ್ನಡವ ಭಾರತವ ಇಡೀ ವಿಶ್ವ ಸಾಹಿತ್ಯವ.

ಕೊನೆಗೆ ತಾವೇ ಕಟ್ಟಿದ ಕ್ಯಾನ್ವಾಸು ಚೌಕಟ್ಟುಗಳ
ಬೀಡಿ ಸಿಗರೇಟು ಭಂಗಿಗಳಂತೆ ತಾವೇ ಸುಟ್ಟು
ಅರ್ಥಗಳನು ಸೇಂದಿಯಂತೆ ಕುಡಿದುಬಿಟ್ಟು
ಉಚ್ಚೆಯಂತೆ ಹೊರ ಚೆಲ್ಲಿಬಿಟ್ಟು
ಹೊಸ ಹೊಸ ಕ್ಯಾನ್ವಾಸುಗಳ ಮತ್ತೆ ಮತ್ತೆ ಹೆಕ್ಕಿದ್ದನ್ನು
ನೀವು ಕಾಣಿರೆ ನೀವು ಕಾಣಿರೆ
ಎಂದು ಕೊಂಚ ಗರಂ ಆಗಿ;
ಮನೆ ಮಕ್ಕಳಂತೆ ಮನದ ತುಂಬ ಆಡಿಕೊಂಡಿದ್ದ
ಅಕ್ಕ ಅಲ್ಲಮರ ಮಂಟೇದ ಮಾಸ್ತರ ಜೊತೆಗೆ
ವಾಕಿಂಗ್ ಹೊರಟರು ಕಲ್ಯಾಣ ಕಪ್ಪಡಿಗಳ ಕಡೆಗೆ;
ನಡುವೆ ಕೋಳಿವಾಡಕ್ಕೆ.

ಕೆಂಪುತೋಟದ ಮರಗಳು ಎಲೆಗಳ ಉದುರಿಸಿದ ಹಾಗೆ
ನೀಲಿಬಾನಿನ ನವಿಲು ಗರಿಯ ಕೊಡವಿದ ಹಾಗೆ
ಬಗೆ ಬಗೆಯ ಓದಿನ ಕ್ಯಾನ್ವಾಸುಗಳ ಬಿಡಿಸಿ
ಅರ್ಥ ದಿಗಂತಗಳ ಕೊನರಿಸಿ
ಮತ್ತೆ ಮತ್ತೆ ಅವನ್ನು, ಕೊಡವಿದ್ದನ್ನು
ನೀವು ಕಾಣಿರೇ ನೀವು ಕಾಣಿರೇ
ಎಂದು ಮೌನವಾದರು;
ಅರ್ಥಗಳ ಬಂಧನ ಬಿಡಿಸಲು ಮತ್ತೆ ಅಣಿಯಾದರು.
ಅರ್ಥಗಳ ಭವಬಂಧನ ಬಿಡಿಸಿ
ಹಸುಗೂಸಾಗಿ ಮತ್ತೆ ಹೊಕ್ಕರು
ಹೊಕ್ಕು ಹೊಸ ದಿಗಂತಗಳ ಹರಸಿ
ಈಸಿದರು
ಓದುಕಲ್ಪನೆಯ ಕಾವ್ಯ ಕಡಲಲ್ಲಿ;

`ಕವಿಗೆ ಕವಿ ಮಣಿವನ್’ ಎಂದರಲ್ಲಿ
ಕವಿ, ಕಾವ್ಯದ ಅನುಭಾವಿ ಎದುರು ಮಣಿದನ್ ಇಲ್ಲಿ
ಅವರ ಓದಿನ ಪಟ್ಟುಗಳು ತಿಳಿಯದಾಗ
ನಾವು ಪೆಕರು ಪೆಕರು ಕಣ್ಣು ಬಿಟ್ಟಾಗ
ಈಗಲ್ಲ ಹಾಗೆ ಹಾಗಲ್ಲ ಹೀಗೆ ಎಂದು
ಹೇಳಿದರೂ ನಮಗೆ ಅದೂ ತಿಳಿಯದಾಗ
ನಮ್ಮನ್ನೂ ತಮ್ಮದೇ ಕಡಲ ಯಾನಿಗಳು ಎಂದು ಮನ್ನಿಸಿದರು
ಅವರು ಆಳ ಅಗಲ ಅನಂತಗಳಲ್ಲಿ
ದೈತ್ಯ ತಿಮಿಂಗಿಲದಂತೆ ಈಸುವಾಗ
ನಾವು ಸಸಲಂತೆ
ಕಡೆ ಕಡೆ ಕಡಲ ಕಿನಾರೆಯಲ್ಲಿ ಈಸುತ್ತಿದ್ದೆವು
ಬೆರಗಿನಲ್ಲಿ ಮತ್ತೆ ನಾವು ಪಿಳಿಪಿಳಿ ಕಣ್ಣುಬಿಡುತ್ತಿದ್ದೆವು.

ಅರ್ಥಗಳ ಹಂಗು ಹರಿದು
ಪಾಚಿಕಟ್ಟಿದ ಕೊಡವ ಬರಿದು
ಮಾಡಿ; ಹೊಳೆಗೆ ಹೊಸ ನೀರು ಸೇದಿದರು
ಮಾತಿನ ಲೀಲೆಯ ಹಗ್ಗದಲಿ ಹಾಗೇ ಸೇದುತ್ತಲೇ
ಜೋಗಿಯ ಹಾಡು ಹಾಡುತ್ತಲೇ
ಜಂಗಮ ಫಕೀರನಾಗಿ
ಎಲ್ಲತತ್ವದೆಲ್ಲೆ ಮೀರಿ
ಹೊರಟರು ಕೂಡಲಸಂಗಮನಾಗಿ ಅರ್ಥಗಳ ಮಾತಿನಲೆ ನಾಟ್ಯವಾಡಿ
ರೆಕ್ಕೆ ಬಲಿಯದ ಹಕ್ಕಿಮರಿಗಳ ಕೈಬಿಟ್ಟು ಹೋದರು
ನಿಮ್ಮ ಕಾಳುಗಳ ನೀವೆ ಹೆಕ್ಕಿರಿ;
ನಿಮ್ಮ ರೆಕ್ಕೆಗಳ ನೀವೆ ಬಿಚ್ಚಿ ಬೀಸಿರಿ
ಎಂದು; ಅಸಂಖ್ಯ ಹಕ್ಕಿಮರಿಗಳ ಇಲ್ಲಿ ಬಿಟ್ಟು ಹೋದರು
ಅವರು ಹೋದ ದಿಕ್ಕನ್ನೇ ದಿಕ್ಕೆಟ್ಟು ನೋಡುತಿವೆ;
ತಾಯಿ ಹಕ್ಕಿ
ಹಾರುವುದು ನೋಡಿ ಹಾರಾಡಲು ಕಲಿಯಲಿಚ್ಚಿಸುವ
ಅಸಂಖ್ಯ ಹಕ್ಕಿಮರಿಗಳು ದಿಕ್ಕೆಟ್ಟು ನೋಡುತಿವೆ;
ಸುಟ್ಟ ಬಚ್ಚಿಟ್ಟ ತೇಲಿಬಿಟ್ಟ ಗರಿಗಳ ಮೇಲೆ ಕೂತು
ನೋಡುತ್ತಿವೆ: ಹಾರುವ ತಾಲೀಮು ನಡೆಸುತ್ತ, ಅನಂತ
ಈ ನಾಡಹಕ್ಕಿಗಳು ನೋಡುತಿವೆ ದಿಗಂತ.
ಹಕ್ಕಿಮರಿಗಳು; ಕನ್ನಡದ ಹಕ್ಕಿಮರಿಗಳು.
ಅವರ ಸಂಬಂಜದ ಹಕ್ಕಿಮರಿಗಳು ದಿಕ್ಕೆಟ್ಟು ನೋಡುತ್ತಿವೆ.

Leave a Reply

Your email address will not be published.