ಕಾವ್ಯಯಾನ-7 : ಮೈ ಮನಸು ಬೇರೆಯಾಗದ ಬೆರಗು: ತೇಜಶ್ರೀ ಕಾವ್ಯ

-ಸುರೇಶ ನಾಗಲಮಡಿಕೆ.

ಬದುಕಿನೊಂದಿಗೆ ಗುದ್ದಾಟವೆಂದರೆ ಅದು ಏಕಕಾಲಕ್ಕೆ ಲೋಕದ ಜತೆ ನಡೆಸುವ ಸಂವಾದವೂ ಆಗಬಲ್ಲದು. ಆದರೆ ಬದುಕಿನಲ್ಲಿ ಗೂಢವಾಗಿ ತನ್ನನ್ನು ತಾನು ಲೋಕಕ್ಕೆ ಪರಿಚಯಿಸಿಕೊಳ್ಳುವ ಇರಾದೆ ದೇಹದ್ದು. ತಾನು ಇದ್ದೇನೆ? ಹೇಗೆ ಇರಲಾಗಿದೆ? ಅಥವ ಯಾವ ಬಗೆಯಲಿ ಇರಿಸಲಾಗಿದೆ ಎಂಬುದಕ್ಕೆ ಕಾರಣಗಳು ಕೆಲವೊಮ್ಮೆ ವೆಕ್ತೀಕರಣದ ಆಯಾಮದಲ್ಲಿ ಹಲವು ಬಾರಿ ಲೋಕದ ಜತೆ ಇರಲೂಬಲ್ಲದು. ಕನ್ನಡ ಕಾವ್ಯ ದೇಹದ ಜತೆ ನಡೆಸಿದ ಸಂವಾದ ಲೋಕದ ಬಗ್ಗೆಯೂ ಆಗಿದೆ. ತೇಜಶ್ರೀ ಯವರ ಕಾವ್ಯದಲ್ಲಿ ಕೆಲವೊಮ್ಮ ಲೋಕದ ಹಂಗು ಬೇಕಿಲ್ಲವೇನೊ? ಎಂಬಂತೆ ಅವರ ಒಟ್ಟು ಕಾವ್ಯ ಮೈದಾಳಿದೆ. ಮನಸು ಮತ್ತು ಮೈ ಬೇರ್ಪಡದ ಹಾಗೆ ಅಂಟಿಕೊಂಡಿದೆ.

ಲೋಕ ಮತ್ತು ದೇಹ ಎಂಬುದಕಿಂತ ಇವರ ಕವಿತೆ ದೇಹ ಮತ್ತು ನಾನು, ದೇಹ ಮತ್ತು ನೀನು ಎಂಬ ಬೈನರಿಗಳು ಇದ್ದರೂ ಏಕಕಾಲಕ್ಕೆ ಅದ್ವೈತವಾಗುತ್ತವೆ. ಡಿ.ಆರ್. ನಾಗರಾಜ ಅವರ ‘ಕಾವ್ಯ ವಿಮರ್ಶೆ ಅಂತಿಮವಾಗಿ ಲೋಕವಿಮರ್ಶೆಯೂ ಆಗುತ್ತದೆ’ ಎಂಬ ಮಾತು ನೆನಪಾಗುತ್ತಿದೆ. ತೇಜಶ್ರೀ ಯವರ ಕವಿತೆ ದೇಹವನ್ನೇ ಲೋಕವೆಂದು ಭಾವಿಸಿದೆ. ಇಲ್ಲಿ ‘ನಾನು’ ಎಂಬುದು ಕೇವಲ ಸರ್ವನಾಮವಲ್ಲ ಬದಲಿಗೆ ತನ್ನ ಸ್ವ ಚರಿತೆ ಯನ್ನು ಕಂಡುಕೊಳ್ಳುವುದು; ಪರೀಕ್ಷಿಸಿಕೊಳ್ಳುವುದು: ಇಂದ್ರೀಯಗಳ ಎಚ್ಚರ; ಅವುಗಳ ನೋವು, ಸುಖ ಈ ಯಾನಗಳನ್ನು ಕಣ್ರೆಪ್ಪೆಗಳ ಆಳದಲ್ಲಿ ಕಾಣಲು ಸಾಧ್ಯವಾಗಿದೆ. ತೇಜಶ್ರೀಯವರ ಕವಿತೆ ಬೇಂದ್ರೆ ಯವರ ‘ಹುದಗಲಾರದ ದುಃಖ’ ಎಂಬ ನುಡಿಗಟ್ಟನ್ನು ಮತ್ತೆ ಮತ್ತೆ ನೆನಪಿಸುತ್ತದೆ. ಅವರ ಕವಿತೆ ಲೋಕದ ಜತೆಗೆ ಅಂಟಿಕೊಂಡಿರುವ ಸಾಮಾಜಿಕ ಗದ್ದಲಗಳಿಂದ ದೂರ ಸರಿದಿದೆ.

ಇಲ್ಲಿನ ದೇಹ ಮೀಮಾಂಸೆ ಅಂತಿಮವಾಗಿ ಹೆಣ್ಣಿನ ಅಂತಸ್ಥ ಚರಿತೆಯಾಗುತ್ತದೆ. ನಮ್ಮ ಪೂರ್ವಸೂರಿಗಳ ದೇಹ ಮೀಮಾಂಸೆಯ ಮಾದರಿಗಳು ಇವರಿಗೆ ನೆರವಾಗಿಲ್ಲ. ನೆರವಾದರೂ ಕಷ್ಟವೇ ಏಕೆಂದರೆ ಅವರ ಜಾಡಿನಲ್ಲಿ ತನ್ನ ಅನುಭವ ಯಾನ ಮಸುಕಾಗುತ್ತದೆ. ಇಷ್ಟಕ್ಕೂ ಇಲ್ಲಿನ ದೇಹಮೀಮಾಂಸೆ ಎಲ್ಲೆಲ್ಲಿ ಇದು ನನ್ನದು ಹೌದು? ಎಲ್ಲಿ ಇವರದೂ ಮಾತ್ರ? ಎಂದು ಅನಿಸುತ್ತದೆ ಎಂಬುದಕ್ಕೆ ಜಾಗವೇ ಬೇಡ ಅನಿಸುತ್ತದೆ. ಕಾವ್ಯವಿಮರ್ಶೆ ಹಲವೊಮ್ಮೆ ತನ್ನ ಸೋಲನ್ನು ಕಾಣವುದು ಎಲ್ಲಿ ಎಂಬುದೇ ತಿಳಿಯುವುದಿಲ್ಲಿ. ಅಕ್ಕನ ಸ್ವಚರಿತೆ, ಸೂಳೆಸಂಕವ್ವನ ಸ್ವ ಅನುಭವಗಳು ಏಕವೇ ಎಂಬ ಮಾತು ಬಂದಾಗ ವಿವರಿಸ ಬಹುದೇ ಹೊರೆತು ಏನು ಮಾಡಲು ಸಾಧ್ಯ? ಕೆಲವೊಮ್ಮೆ ಕಾವ್ಯ ಅಂತರಂಗದಲ್ಲೇ ಲೋಕ ವಿಮರ್ಶೆಯೂ ಜಾಗ ಪಡೆದಿರುತ್ತದೆ. ತೇಜಶ್ರೀ ಕವಿತೆ ತನ್ನನ್ನು ಹೀಗೆ ನೋಡು ಎಂದೂ ,ಹೀಗೂ ನೋಡು ಎಂದೂ ನಮ್ಮನ್ನು ಒತ್ತಾಯಿಸದೆ, ತನ್ನ ಕವಿತೆಯಲ್ಲಿ ಗೆಳಯನಿಗೆ ಹೇಳಿದಂತೆ ನಿನ್ನಿಷ್ಟ ವೆಂದು ಸುಮ್ಮನಾಗಬಹುದು.

ಅಂತಿಮವಾಗಿ ಇಲ್ಲಿನ ಹೆಣ್ಣು ಲೋಕದ ಭಾಗವೆಂದು ಭಾವಿಸಿಯೇ ಮುಂದೆ ಹೋಗಲು ಸಾಧ್ಯ. ನಾವೆಲ್ಲ ಒಂದೇ ಲೋಕದಲ್ಲೇ ಜೀವಿಸುತ್ತಿದ್ದರೂ ಸ್ಚ ಚರಿತೆಗಳ ಬೇರುಗಳು ಬೇರೆನೆ ಅಗಿರುತ್ತವಲ್ಲವೆ. ಹಲವು ಚರಿತ್ರೆಗಳು ಸುಖದ ಅಮಲಿನಲ್ಲಿ ಇರುವುದಿಲ್ಲ ಅದರಲ್ಲೂ ಸಾವಿಗೆ ತಾಕಿಕೊಂಡ ಹೆಣ್ಣಬ್ಬೊಳ ಚರಿತೆ ದೇಹದ ಸಮಗ್ರತೆಯಲ್ಲಿ ದುಃಖವನ್ನೇ ಧ್ಯಾನಿಸುತ್ತದೆ. ಉಸಿರಿನ ಲಯ ಇದ್ದಂತೆ ಸಾವಿನ ಲಯವೂ ಇದೆ. ನೋವಿನ ಬೇರುಗಳು ಮತ್ತಷ್ಟು ಸಡಿಲವಾದಾಗ ಅದರ ಭಾಷೆಗೂ ಉಸಿರು ಕಟ್ಟಬಹುದು. ತೇಜಶ್ರೀ ಯವರ ಭಾಷೆ ಹಲವು ಭಾರಿ ಉಸಿರು ಕಟ್ಟಿಸುತ್ತದೆ. ಭಾಷೆಯ ಕಾಣ್ಕೆ ಇರುವುದು ತನ್ನ ದೇಹ ಲಯಗಳ ಕಣ್ಕಟ್ಟುಗಳಲ್ಲಾ ಗೊತ್ತಿಲ್ಲ. ಇಲ್ಲಿನ ಭಾಷಿಕ ಲಯಗಳು ನಿಸರ್ಗದೋಂದಿಗೆ ಸಂವಾದಿಸುತ್ತಲೇ ಆಂತರ್ಯದಲ್ಲಿ ಗುದ್ದಾಡಿವೆ. ತಾನರಿವ ಮತ್ತು ತಾನಿರುವ ಸ್ಥಿತಿಯಲ್ಲೇ ನಿಸರ್ಗದ ಪ್ರತಿಮೆಗಳನ್ನು ಕಟ್ಟಿಕೊಳ್ಳುವುದು ಸುಲಭವಲ್ಲ. ‘ಲಯ’ ಎಂಬ ಮೊದಲ ಪ್ರಯತ್ನದ ಸಂಕಲನದಲ್ಲಿ ಅನುಭವಕ್ಕೆ ದಕ್ಕಿದ ಪ್ರತಿಮೆ ಗಳನ್ನು ನಿರ್ಮಿಸುವಾಗ ಹಲವು ಕಡೆ ಲಯತಪ್ಪಿದ್ದಾರೆ.

ಆದರೆ ‘ಕತ್ತಲೆಯ ಬೆಳಗು’ ಪದ್ಯಗಳಲ್ಲಿ ಮತ್ತೆ ತನ್ನುಸಿರಿ ಬದುಕಿನ ಲಯಗಳಿಗೆ ಮರಳಿದ್ದಾರೆ. ಬಹುಶಃ ಅಲ್ಲಿಂದ ತೇಜಶ್ರೀಯವರ ನಿಜವಾದ ಕಾವ್ಯದ ಕಾವು ಪ್ರಾರಂಭವಾಗಿದೆ ಎನ್ನಲು ಅಡ್ಡಿಯಿಲ್ಲ. ಬದುಕು ಎಂದರೆ ಏನು? ಕೇವಲ ಇರುವುದೇ? ಹೊತ್ತನ್ನು ಸಾವಿನ ಮೂಲಕ ನೂಕುವುದು ಅಷ್ಟು ಸುಲಭವೂ ಅಲ್ಲ. ಕಾವ್ಯ ಅದನ್ನು ಹೇಗೆ ನಿರ್ವಹಿಸಬಲ್ಲದು ಎಂಬ ಆಲೋಚನೆಗಳು ಬಂದಾಗ ಉತ್ತರಗಳು ಹೇಗೆ ಬೇಕಾದರೂ ಮೂಡಬಹುದು. ದೇಹ ಅದರಲ್ಲೂ ಕ್ಷಣಿಕತೆಯನ್ನೇ ಧ್ಯಾನಿಸುವ ಮನಸ್ಸು ಬದುಕಿನ ಎಲ್ಲ ಮಗ್ಗಲುಗಳನ್ನು ವಿವರಿಸಿಕೊಳ್ಳುವುದು ಅದರ ವ್ಯಾಪ್ತಿಯಲ್ಲೇ ಅಲ್ಲವೆ. ಇಲ್ಲಿನ ಕವಿತೆ ಹೊರಗಿದ್ದು ದೇಹ ತತ್ವವನ್ನು ಕಾಣದೇ ಒಳಗಿದ್ದು ಅದರ ಲಯವನ್ನು ಅಭಿವ್ಯಕ್ತಿಸುತ್ತದೆ. ಹೆಣ್ಣು ತನ್ನ ದೇಹವನ್ನು ವಿವರಿಸಿಕೊಳ್ಳುವಾಗ ಇಂದ್ರಿಯಗಳ ಸೌಂದರ್ಯವನ್ನು ಪ್ರತಿಮೆ, ರೂಪಕಗಳ ಮೂಲಕ ಕಟ್ಟಿಕೊಳ್ಳುವುದು ಒಂದು ಬಗೆ; ಇದರ ಗರ್ಭದಲ್ಲೇ ಇವುಗಳ ಗೊಡವೆ ಇಲ್ಲದೇ ಅನುಭವವೇ ಪ್ರಮಾಣವೆಂದು ಭಾವಿಸುವುದು ಬೇರೆ. ಇಲ್ಲಿನ ಹೆಣ್ಣಿಗೆ ನಾನು ಎಂದು ಪದೇ ಪದೇ ಉಸುರುವುದು ಬೇಕಿಲ್ಲ. ವೈಯಕ್ತಿಕ ಮನುಷ್ಯನ ಅಂತಸ್ಥ ನೆಲೆಗಳೇ ಮುನ್ನೆಲೆಗೆ ಬರಬಲ್ಲವು. ಅನುಭಾವಿಗಳು ದೇಹ ತತ್ವ ನಶ್ವರತೆ ಯನ್ನು ಪ್ರತಿ ಹಂತದಲ್ಲೂ ಅಭಿವ್ಯಕ್ತಿಸಬಲ್ಲರು.

ತೇಜಶ್ರೀಯವರ ಕಾಯದ ಲಯ ಅಂತಸ್ಥನೆಲೆಯದು. ಪೂರ್ವಸೂರಿಗಳು ಒಳಗಿವಿ, ಒಳಕಣ್ಣು ಎಂಬ ನುಡಿಗಟ್ಟುಗಳನ್ನು ದೇಹ ಲಯದ ಹಿನ್ನಲೆಯಲ್ಲಿ ಬಳಸಿದ್ದಾರೆ. ಅವು ಮೋಸ ಮಾಡಲಾರವು ಎಂಬುದು ಅದೇ ಪರಿಕಲ್ಪನೆಗಳನ್ನು ಬಳಸುವ ಇವರ ಕವಿತೆಗೆ ತಿಳಿದಿದೆ. ಇವರ ದೇಹ ತತ್ವವನ್ನು ಸ್ತ್ರೀವಾದಿ ನೆಲೆಯಿಂದಲೋ, ಅಥವಾ ಸಮಕಾಲೀನ ಘರ್ಷನೆಗಳಿಂದ ಅಳೆಯಲು ಸಾಧ್ಯವಾಗದು. ಇಲ್ಲಿ ಅನುಭವ ಬದುಕನ್ನು ನೂಕುವಂತೆ ಒತ್ತಾಯಿಸಬಲ್ಲದು. ಇಲ್ಲಿನ ‘ಅವನು’ ಯಾರು? ಗೆಳಯ/ ಪ್ರೇಮ/ ಹೊತ್ತು/ ಅಂತಿಮವಾಗಿ ಬದುಕು ಆಗಬಲ್ಲದು.ಅವನಿಂದ ತಾನು ಮೋಸ ಹೋಗಿದ್ದೇನೆ, ಅದನ್ನು ಸಂಘರ್ಷದಿಂದ ತೆರವುಗೊಳಿಸ ಬೇಕೆಂಬ ಹಪಾÀಹಪಿ ಇಲ್ಲವೇ ಇಲ್ಲ. ಇವರ ವೈಚಾರಿಕ ಆಕೃತಿಗಳೇನಿದ್ದರೂ ದೇಹದ ಲಯದಿಂದಲೇ ಹೊರಟು ಸಾಹಚರ್ಯದೊಂದಿಗೆ ಕೊನೆಯಾಗುತ್ತವೆ. ಕವಿತೆ ದೊಡ್ಡ ಸಿದ್ದಾಂತಗಳನ್ನು ಹೊಂದಬೇಕೆಂಬ ನಂಬಿಕೆ ಇಲ್ಲದ ಇವರಿಗೆ ಸ್ವ ಬದುಕೇ ಒಂದು ಸಿದ್ದಾಂತವೆಂದು ನಂಬಿದಂತಿದೆ.
‘ಕತ್ತಲೆಯೆಂದರೆ ಹಾಗೆ
ಅದೊಂದು ದೊಡ್ಡ ನಿರಾಶೆ,
ದೊಡ್ಡ ಹೇಸಿಗೆ,
ಮಾತನ್ನು ನುಂಗಿದ ಮಹಾ ಮೌನ,
ಒಳಗಿಳಿದು ಹೆಪ್ಪುಗಟ್ಟಿದ ಸಾವು.
ಬೆಳಕಿಗೆ ಹೆದರುವ ನನ್ನಂಥವರ
ಮಡಲಲ್ಲಿ ಮಾತ್ರ
ಕತ್ತಲೆಂದರೆ ಬದುಕು.( ಕತ್ತಲೆಯ ಬೆಳಗು)

ಮೈ ಮನಸ್ಸುಗಳ ತಾಕಲಾಟವೆಂದರೆ ಹೀಗೇ ಇರಬಹುದೇ? ದೇಹದ ಲಯ ಆತಂಕಗೊಂಡು ಸಹಿಸಿಕೊಳ್ಳುವ ಬಗೆಯನ್ನು ನೆನಪಿಸಿಕೊಳ್ಳಿ. ಕತ್ತಲೆಗೆ ಹಲವು ತಲೆಗಳಿವೆ ಹಲವು ತಲ್ಲಣಗಳೂ ಇವೆ. ತೇಜಶ್ರೀ ಯವರ ಒಟ್ಟು ಕಾವ್ಯದಲ್ಲಿ ಕತ್ತಲು ಬೆಳಕುಗಳ ಮತ್ತೆ ಮತ್ತೆ ಬರುವ ಪ್ರತಿಮೆಗಳು. ಕತ್ತಲೆಗೆ ಅನುಭವಿಸುವ, ಆಲೋಚಿಸುವ ವ್ಯವಧಾನವಿದೆ ಯೆಂದಾದರೆ ಅದನ್ನು ಅಪ್ಪಿಕೊಳ್ಳುತ್ತದೆ.ಬೆಳಕು ಬದುಕಿನ ಅವಸರವಾದರೆ ಕತ್ತಲು ನಿಂತ ನಿಲುವು. ಇಲ್ಲಿನ ಹೆಣ್ಣಿಗೆ ಕತ್ತಲು ಬದುಕು. ಕಣ್ಣಿಗೆ ಕಂಡು ಕಾಣದ ಅಲೆಗಳು ಮತ್ತೆ ಬರುವ ಹಾಗೆ ಕತ್ತಲು. ನಿಸರ್ಗಕ್ಕೆ ಕಾಯುವ ಶಕ್ತಿ ಇದೆ ಎಂದರೆ ಮನುಷ್ಯನಿಗೇಕೆ ಇಲ್ಲ ಎಂದು ಇವರ ಕವಿತೆ ಪದೇ ಪದೇ ಕೇಳುತ್ತದೆ. ಮೌನವನ್ನು ಒಂದು ಧ್ಯಾನವೆಂದು ಒಪ್ಪಿಕೊಳ್ಳುವ ಇವರು ಅದನ್ನು ನಾಶಮಾಡುವ ಪರಿಸರವನ್ನು ಒಪ್ಪಲಾರರು. ಇದರ ನಡುವೆ ಕವಿತೆ ಅತಿಯಾದ ವ್ಯಕ್ತೀಕರಣಕ್ಕೆ ತಿರುಗುತ್ತದೆ ಎನಿಸುವುದು. ಅದು ಇವರ ಕಾವ್ಯದ ತಾತ್ವಿಕತೆಗೆ ಸಹಜವೂ ಕೂಡ. ಸ್ವಗತವನ್ನು ಹೆಣ್ಣು ಕಾವ್ಯದ ಮುಖ್ಯ ಅಂಗವೆಂದರೂ ತೇಜಶ್ರೀಯವರ ಕಾವ್ಯದಲ್ಲಿ ಅದನ್ನು ಸಂಪೂರ್ಣ ತನ್ನದಾಗಿ ಮಾಡಿಕೊಂಡಿದೆ. ತನಗೆ ತನ್ನ ಸ್ವ ಚರಿತೆಯನ್ನು ವಿವರಿಸಿಕೊಳ್ಳುವುದಕ್ಕೆ ‘ಕತ್ತಲು’ ಒಂದು ರೂಪಕ. ‘ಅವನು’ ಬೆಳಕು. ಬೆಳಕು ಅಂದ ತಕ್ಷಣ ಗಂಡು ಕುಲಕ್ಕೆ ಹೆಚ್ಚು ಪ್ರಾಧ್ಯಾನ್ಯತೆ ನೀಡಬೇಕಾಗಿಲ್ಲ. ಇಲ್ಲಿ ರೂಪಕ ಎಂದು ಕರೆಯುವುದಕ್ಕೆ ಕಾರಣವಿದೆ. ಕತ್ತಲು ಬೆಳಕು ಇಲ್ಲಿ ಅನ್ಯವಲ್ಲ.ಕತ್ತಲೆಯ ಬೆಳಗು ಎಂಬ ಮಾತಿನಲ್ಲೇ ಒಂದು ಒಳಾರ್ಥವನ್ನು ಹುಡುಕಲು ಸಾಧ್ಯವಿದೆ. ಕತ್ತಲೆಯ ಮೂಲಕ ಬೆಳಗು ಆಗಿದೆ. ನನ್ನ ಮೂಲಕ ಅವನೂ ಆಗಬಹುದು? ಅವನೊಳಗೆ ನಾನು ಆಗಬಹುದು. ಇದರ ಸಂಘರ್ಷದ ದಾರಿಗಳು ಇವರಿಗೆ ಅನಗತ್ಯ.ಹಾಗಾಗಿಯೇ ‘ ನೀನಾಗಿ ನಾನಾಗಿ/ ಒಂದರೊಳಗೊಂದು ಸೇರಿ/ ಕತ್ತಲು ಬೆಳಕಾಗಿತ್ತು/ ಆಕಾಶಬಯಲಾಗಿತ್ತು’. ಎಂಬ ಸಾಲುಗಳು ಬರಬಲ್ಲವು.ಗಾಳಿ, ಆಕಾಶ, ಬೆಳಕು, ಮಣ್ಣು ಇವುಗಳ ನಡುವೆ ಕತ್ತಲೆಗೆ ಒಳತುಡಿತವಿದೆ.ಇದು ಅಂತರಂಗದ ಯಾನದ ತಲ್ಲಣಗಳು ಹೌದು.ಕತ್ತಲೆಯೂ ಬಾಳಿನ ಒಳಾರ್ಥವೂ ಆಗಿ ಹೊರಾರ್ಥ ವಾಗಿ ಪಲ್ಲಟಗೊಳ್ಳುವ ಪ್ರಕ್ರಿಯೆ ಸಾಗುತ್ತಾ ಹೋಗುತ್ತದೆ.ಹೆಣ್ಣು ಕಾವ್ಯ ನಿಸರ್ಗದ ಪ್ರತಿಮೆಗಳನ್ನು ಕನ್ನಡದಲ್ಲಿ ಅಚ್ಚುಕಟ್ಟಾಗಿ ಬಳಸಿಕೊಂಡಿದೆ. ತೇಜಶ್ರೀ ಅವರ ಕಾವ್ಯ ಕತ್ತಲನ್ನು ತನ್ನ ಒಳಬಾಳನ್ನು ತಾಕಲು ಬಳಸಿಕೊಂಡಿದೆ.
‘ತೆರದ ಕಣ್ಣುಗಳೊಳಗೆ
ಹಾಯುವ ಬೆಳಕು ಬೆಳಕೆ?
ಮುಚ್ಚಿದ ರೆಪ್ಪೆಯೊಳಗಿನ
ಕತ್ತಲು ಕತ್ತಲೆಯೇ?
ಓ ನನ್ನವನೇ, ಬೆಳಕ ಬೇಟೆಗಾರನೆ,
ಕತ್ತಲ ಬೇಟೆಗೆ ಬಾ,
ನನ್ನೊಳಗೆ ಬೆಳಕಾಗಿ,
ಬೆಳಕ ಬೇಟೆಗೆ ಕತ್ತಲಾಗಿ.( ಕತ್ತಲೆಯ ಬೆಳಗು)
ನನ್ನ ಸಂಬಂಧಗಳಿಗೆ, ಭಾವಗಳಿಗೆ ಒಗ್ಗುವ ಪ್ರತಿಮೆಯಾದರೆ ನನ್ನ ಬಳಿ ಇರು.ಇಲ್ಲವಾದರೆ ಬೇಡ ಎಂಬ ಸ್ವಗತವಿರುವ ಇರುವ ಇಲ್ಲಿನ ಪದಗಳಗೆ ಮುರಿದು ಕಟ್ಟುವ ಇರಾದೆ ಇದೆ. ಕತ್ತಲೆಗೆ ಕಾಮದ ಧ್ಯಾನವಿರುವುದೇ ಅಲ್ಲ ಅವಳನ್ನಾಗಿಸುವುದ ಅದರ ಕರ್ತವ್ಯವೂ ಹೌದು.ಬೇಟಗಾರನ ಕೆಲಸ ಕತ್ತಲನ್ನು ಅಪ್ಪಿಕೊಳ್ಳುವುದು. ಬೇಟ ಎಂಬ ಪದಕ್ಕೆ ಪ್ರೇಮ ಎಂಬ ಅರ್ಥವೂ ಇದೆ.ಅವಳು ಕೆಂಡವಾಗುವುದು ಬೆಳಕಿನ ಪ್ರೀತಿಯಿಂದಲೇ ಎಂಬುದಕ್ಕೆ ಅವರ ಕವಿತೆಯಲ್ಲಿ ನಿದರ್ಶನಗಳಿವೆ. ಈ ಬಗೆಯ ಪ್ರತಿಮೆಗಳು ಅವರ ‘ಉಸ್ರುಬುಂಡೆ’ ಸಂಕಲನದಲ್ಲಿ ಮತ್ತಷ್ಟು ಕಸವು ಪಡೆದುಕೊಂಡವು. ಸಾವಿನ ಎದೆಯ ಬಡಿತದ ಸದ್ದು ಮತ್ತಷ್ಟು ಕೇಳಿಸುತ್ತದೆ.

ಕವಿತೆ ವ್ಯಕ್ತಿಪರ ಆದಾಗ ತನ್ನನ್ನು ತಾನು ಶೋಧಿಸಿಕೊಳ್ಳುವ ನೆಲೆ ಅಧಿಕವಾಗಬಹುದು. ತನ್ನ ಸ್ವ ಬದುಕಿನ ಯಾನವನ್ನು ಇನ್ನಷ್ಟು ತೀವ್ರವಾಗಿ ಕಾಣುವ ಉಮೇದು ಬಂದುಬಿಟ್ಟಿದೆ. ಆಗ ಭಾಲ್ಯದ ಬದುಕನ್ನು ಸಾವಿನ ಅಂಚಿನಲ್ಲಿ ಹಿಂತಿರುಗಿನೋಡಿದರೆ ಹೇಗೆ? ನಿದ್ದೆ, ಕನಸು, ಎಚ್ಚರ, ಕಳೆದ ಆ ದಿನಗಳು ಕವಿತೆಗೆ ಎಲ್ಲವೂ ವಸ್ತುವಾಗಿ ಕಾಡಿವೆ.ಇಲ್ಲಿನ ‘ಅವನು’ ಆತಂಕಿತ ಅಲ್ಲ ಬದಲಿಗೆ ಆಪ್ತನಾಗಿ ಗೋಚರಿಸುತ್ತಾನೆ. ದೇಹ ಚರಿತೆ ತನ್ನ ತಲ್ಲಣಗಳನ್ನು ಗರ್ಭೀಕರಿಸಿಕೊಂಡೇ ಮಾಗುತ್ತ ಸಾಗಿದೆ. ಸಾಮಾನ್ಯವಾಗಿ ಈಗಿನ ಕಾವ್ಯದಲ್ಲಿ ತನ್ನೆಲ್ಲಾ ಸಮಗ್ರತೆ ಯೊಂದಿಗೆ ಭಾಲ್ಯದ ದಟ್ಟ ಅನುಭವಗಳು ತಲೆಮರಿಸಿಕೊಳ್ಳುವ ಇರಾದೆಯಲ್ಲಿವೆ. ಆದರೆ ಇದರ ಕೊರತೆಯನ್ನು ತೇಜಶ್ರೀ ಯವರ ಕೆಲವು ಕವಿತೆಗಳು ನೀಗಿಸಿವೆ. ಇಲ್ಲಿನ ಅನುಭವಗಳು ಮರುಕಳಿಸುವುದು ಒಂದು ದುಃಖದ ಅಂಚಿನ ನಮೂನೆಯಲ್ಲಿ ಎಂದರೂ ಆದೀತು. ದೇಹ ಮತ್ತು ಅವನು, ತಾನು ಮತ್ತು ಲೋಕ ಎಂಬ ದ್ವೈತಗಳನ್ನು ಮನಸ್ಸಿನಲ್ಲಿ ಅದ್ವೈತಗೊಳಿಸಿಕೊಳ್ಳುವ ಕ್ರಿಯೆಗೆ ಒತ್ತು ಇದೆ. ‘ಚಿಟ್ಟೆ ಹತ್ತಿದ ಹುಡುಗಿ ಕತೆಯಾದ ಕವಿತೆ’ ಎಂಬ ಕವಿತೆ ಹೆಣ್ಣೊಬ್ಬಳ ಆತ್ಮಕತೆಯ ಆರಂಭದ ಘಟ್ಟದಂತಿದೆ. ಕತೆ ಕವಿತೆ ಯಾಗುವುದೆಂದರೇನು? ಇಲ್ಲಿನ ಹಾರುವ ಚಿಟ್ಟೆಗಳು, ಕನಸುಗಳು, ಮಾಯೆ, ಕಾಣುವುದು, ಕಾಣಿಸಿ ಕಾಣದಂತೆ ಹೋಗುವುದು ಎಲ್ಲವೂ ಬದುಕಿನ ತಂತ್ರಗಳೇ ಅಲ್ಲವೇ? ಹುಡುಗಿಯೊಬ್ಬಳ ಧ್ಯಾನ ಕಳೆದು ಹೋಗಿದ್ದನ್ನು ಮರು ಮಡೆಯಲು ಬಯಸುವುದು ಕವಿತೆಯ ಒಟ್ಟು ಆಕೃತಿಯನ್ನು ನಿರ್ಮಿಸಿದೆ. ಇಲ್ಲಿನ ಬಹುತೇಕ ಕವಿತೆಗಳಲ್ಲಿ ‘ನಿದ್ದೆ’ ಯ ಚಿತ್ರ ಬರುತ್ತದೆ. ಅದು ಯಾವ ಬಗೆಯ ನಿದ್ದೆ? ಅದರೊಳಗೆ ಅವಿತಿರುವ ಹಲ ಬಗೆಯ ಕನಸುಗಳು ಹಲವೊಮ್ಮೆ ನಮ್ಮನ್ನು ಕಾಡುಬಲ್ಲವು; ಪೀಡಿಸಲೂಬಲ್ಲವು. ನಿದ್ದೆಯ ಬಗ್ಗೆ ನೆರೂಡ ಹೀಗೆ ಹೇಳುತ್ತಾನೆ.
‘ಪ್ರತಿ ರಾತ್ರಿ ನಾನು ನಿದ್ರಿಸಿದಾಗ
ನನ್ನ ಹೆಸರು ಯಾವುದು, ಯಾವುದಲ್ಲ ನನ್ನ ಹೆಸರು?
ನಾನು ಮಲಗಿದಾಗ ನಾನು ನಾನೇ ಅಲ್ಲವಾದರೆ
ನಾನು ಎಚ್ಚೆತ್ತಾಗ ನಾನು ಯಾರು? ( ‘ಮರಳಿ ಬರುವೆ’ ನೆರೂಡ. ಅನು: ತೇಜಸ್ವಿನಿ ನಿರಂಜನ)
ನಾನು ಎಂಬ ಸರ್ವನಾಮ ಮತ್ತೆ ಮತ್ತೆ ಬಂದರಿವುದೇತಕ್ಕೆ? ಬೇಂದ್ರೆ ಹೇಳುವ ಹಾಗೆ ಮನುಷ್ಯನಿಗೆ ಹಲ ಬಗೆಯ ಎಚ್ಚರಗಳಿವೆ. ಅಂದರೆ ಸಾವುಗಳಿವೆ. ಆದರೆ ಸಾವನ್ನು ಧ್ಯಾನಿಸುವ ಮನಸ್ಸಿಗೆ ನಿದ್ದೆ ಏನಾಗಿ ಕಾಣಬಲ್ಲದು? ತಾನಿರುವ ಬದುಕಿಗೆ ಎಷ್ಟು ಕತ್ತಲಿದೆ, ಬೆಳಕಾದರೂ ಯಾವುದು? ತೇಜಶ್ರೀಯವರ ‘ನಿದ್ರೆಯೊಳಗೆ ಮೈಮರೆತ ಸಾವು’ ಎಂಬ ಕವಿತೆ ಹೀಗಿದೆ.
‘ಮರುದಿನವೆಲ್ಲ ನನಗೆ ಮಂಪರು…
ಹಾವಂತೆ ಹೊರಳಿದ ಹಾಗೆ
ಮೈಯೊಳಗೆ ಹೆಡೆಯೆತ್ತಿ ಈಡಾಡಿದ ಹಾಗೆ
ನಿದ್ರೆಗೆ ಜೋತು ಮೈಯಿಂದ
ಏನೋ ಹರಿದು ಹೋದ ಹಾಗೆ
ನನ್ನ ನೋಡಿದ ಗೆಳಯ
‘ಹೇಗೆ ನಿದ್ದೆ ಹೋತ್ತೊಯ್ಯುತ್ತಿದೆಯಲ್ಲೆ ನಿನ್ನ’ ಎಂದ,
ನನಗೆ ಗೊತ್ತಾಗುತ್ತಿತ್ತ….
ಅದು ನಿದ್ರೆಯಲ್ಲಿ ಮೈಮರೆತ
ನನ್ನ ಸಾವೆಂದು.( ಉಸ್ರುಬುಂಡೆ)

ಹಲವು ಬಾರಿ ಸಾವಿನ ಅನುಭವಗಳನ್ನು ಪದಗಳನ್ನು ಬದಲಾಯಿಸಿ ಕವಿತೆ ಕಟ್ಟಿದಾಗ ಮುಖ್ಯ ಅನಿಸುವುದಿಲ್ಲ. ಆದರೆ ಹಾಗಾಗುವುದಕ್ಕೆ ಕಾರಣಗಳೂ ಇರಬಹುದೇ? ಬೆನ್ನಗಂಟಿಸಿಕೊಂಡ ಭಾರವನ್ನು ಇಳಿಸುವುದು ಅಷ್ಟು ಸುಲಭವೂ ಅಲ್ಲ. ಭಾಷಿಕವಾಗಿ ಇವರ ಕವಿತೆ ಹಂತ ಹಂತವಾಗಿ ಮಾಗುತ್ತಹೋಗಿದೆ. ‘ತಿಳಿಗೊಳ’ ದಲ್ಲಿ ಅಷ್ಟೇನೂ ಪ್ರಭಾವಿಯಲ್ಲದ ಸವಕಲು ನಿಸರ್ಗ ಪ್ರತಿಮೆಗಳನ್ನು ಬಳಸುತ್ತಾರೆ. ಹಲವೊಮ್ಮೆ ನವೋದಯದ ಚಿತ್ರಗಳ ಪಡಿನೆರಳಂತೆ ಕಾಣುತ್ತವೆ. ಅನುಭವಗಳು ಮಾಗಿದಂತೆ , ಸಂಕೀರ್ಣಗೊಂಡಂತೆ ಭಾಷೆ ಬೇರೆ ಮಗ್ಗಲುಗಳನ್ನು ಪಡೆದು ತನ್ನದಾಗುತ್ತ ಸಾಗಿದೆ. ಅನ್ಯ ಅನುಭವಗಳಿಗೆ ಇವರ ಕವಿತೆ ಅಷ್ಟಾಗಿ ಜಾಗವಿಲ್ಲ ಎಂದು ಪದೇ ಪದೇ ಹೇಳಬೇಕಾಗಿಲ್ಲ. ಸಮಾಜದ ಕೇಂದ್ರದಿಂದ ಇವರ ಕವಿತೆ ಹೊರಡುವುದಿಲ್ಲ. ಕುಟುಂಬ ಕೇಂದ್ರವೆಂದು ಹೆಚ್ಚು ಹೇಳಲಾರೆ. ತನಗೆ ಲೋಕ ಕಾಣುವುದು ಹೇಗೆ? ಕಣ್ಣಿನ ಆಳದ ಕತ್ತಲಿಂದ; ಮಂಪರಿನಿಂದ, ಕಾಣುತ್ತಲೇ ಮರೆಯಾಗುವ ಮೋಡಗಳಹಾಗೆ ಎನ್ನಬಹುದೇ?ದೇಹದ ನೋವು ಉಸಿರನ್ನು ಕೊಂದಿದೆ; ಅಂತಿಮವಾಗಿ ಅದರ ಎಲ್ಲ ಅವಯವಗಳೂ ಯಾರ ಬಳಿ ಇವೆ? ಅವರ ಒಂದು ಕವಿತೆ ಶರೀರದ ಹೊರ ನೋವುಗಳನ್ನು , ಒಳಾನುಭವಗಳನ್ನು ಹೀಗೆ ಅಭಿವ್ಯಕ್ತಿಸುತ್ತದೆ.
ಮೊದಲು ಕಿಬ್ಬೊಟ್ಟೆಯ ಬಲಭಾಗದಲ್ಲಿ
ಬೆಳೆದ ಹೆಚ್ಚುವರಿ ಮಾಂಸ
ಆ ಮೇಲೆ ಗರ್ಭಕೋಶದ ಮೇಲ್ಬಾಗದಲ್ಲಿ ಗೆಡ್ಡೆ
ಅನಂತರ ಒಳಭಾಗದಲ್ಲಿ ಗೆಡ್ಡೆಗಳ ಗುಚ್ಚ
ಈಗ ಮಣಿಯಂಥ ಬೆನ್ನ ಮೂಳೆಯೊಳಗೆ
ಬದುಕು ನೀರಗುಳ್ಳೆ (ಉಸ್ರುಬುಂಡೆ)

ಇಡೀ ಕವಿತೆ ನಮಗೆ ನೀಡುವ ಅನುಭವವೇನು? ಹೆಣ್ಣು ತನಗೆ ತಿಳಿದಿರುವ ಭಾಷೆಯಿಂದ ನೋವಿನ ಆಳತೆಯನ್ನು ಹೇಗೆ ಅಭಿವ್ಯಕ್ತಿಸಬಲ್ಲಳು? ಇಲ್ಲಿನ ಸ್ವಗತ ಭಾಷೆಯನ್ನು ದುಡಿಸಿಕೊಳ್ಳುವ ಬಗೆ ಯನ್ನು ನೋಡಿ. ತನ್ನ ದೇಹವನ್ನು ಹೆಣ್ಣು ಲೈಂಗಿಕ ಪ್ರತಿಮೆಗಳ ಮೂಲಕ ಹೀಗಾಗಲೇ ಕಾಣಲಾಗಿದೆ.ಶರೀರದ ರಚನೆಯನ್ನು ಯಾವ ನೋವಿನ ಬೇರುಗಳಿಂದ ಕಟ್ಟಲಾಗಿದೆ ಎಂಬುದನ್ನು ಗಮನಿಸಿ. ಶರೀರದ ಆಚೆ ಅಲ್ಲ ಅದಕ್ಕೆ ಅಂಟಿಕೊಂಡೇ ಮತ್ತೊಂದು ಶರೀರ ಬೆಳೆಯುತ್ತಿದೆ ಅದು ಬದುಕನ್ನು ನೀರಗುಳ್ಳೆ ಮಾಡುವಷ್ಟು. ಇಂಥ ಪ್ರತಿಮೆಗಳನ್ನು ಬಳಸುವ ತೇಜಶ್ರೀಯವರು ‘ಅವನು’ ಎಂಬ ಪುರುಷನನ್ನು ಬಳಸಿಕೊಳ್ಳುವ ರೀತಿಯಂತೂ ಬೆರಗು. ‘ಅವನರಿವಲ್ಲಿ’ ಎಂಬ ಖಂಡಕಾವ್ಯದ ತನಕ ಆತ ಒಬ್ಬ ಅತಿಥಿಯಾಗಿಯೇ ಕಾಣಿಸುತ್ತಾನೆ. ತನ್ನ ನೋವಿನಲ್ಲಿ ಭಾಗಿಯಾಗಿ ಕಾಣುವುದಕ್ಕೆ ಮೊದಲು ಕಂಡರೇ ಇಲ್ಲಿ ದೇಹದಲ್ಲೂ ಭಾಗವಾಗುವಂತೆ ಅಭಿವ್ಯಕ್ತಿಗೊಂಡಿದೆ. ಇಲ್ಲಿ ಅವನು ನನ್ನ ಮೂಲಕವೇ ಹೊರೆತು ಅವನ ಮೂಲಕ ನಾನಲ್ಲ ಎಂಬ ಭಾವ ಕ್ವಚಿತ್ತಾಗಿ ವ್ಯಕ್ತಗೊಳ್ಳುವುದು ಭಾಷೆಯ ಸ್ವಗತ ಕ್ರಮದಿಂದಲೇ ವಿನಾ ಬದುಕಿನ ಮಧ್ಯದಿಂದ ಅಲ್ಲ ಎನಿಸುತ್ತದೆ.

ತನ್ನ ಸ್ವ ಚರಿತೆಯಲ್ಲಿ ತಾನು ಕತ್ತಲೆಯಾದರೇ ಅವನು ಬೆಳಗು. ಇಲ್ಲಿ ತಾನು ಶಬ್ಧ ಆದರೆ ಅವನು ಅರ್ಥ. ಬದುಕಿನ ಮೀಮಾಂಸೆಯು ಹೆಣ್ಣು-ಗಂಡಿನಿಂದ ರೂಪು ಪಡೆಯುತ್ತದೆ.ಅವನನ್ನು ಅರಿಯುವುದು ತನ್ನ ಅನುಭವಗಳಿಂದಲೇ ಎಂಬುದನ್ನು ಮರೆಯುವ ಹಾಗಿಲ್ಲ.ಇಲ್ಲಿನ ಹೆಣ್ಣು ಜೀವ ಉಸಿರಿನ ಕ್ರೂರತೆಯನ್ನು ಮಡಿಲಲ್ಲಿ ಹೊತ್ತುಕೊಂಡೇ ಮಾತಾಡಿದ್ದಾಳೆ.ಇಲ್ಲಿ ನದಿ-ದಡ,ಬೆಳಕು-ಕತ್ತಲು, ಭೂಮಿ-ಆಕಾಶ ಮುಂತಾದ ನಿಸರ್ಗ ಚಿತ್ರಗಳು ತನ್ನ ಅನುಭವಗಳ ಆಂತರ್ಯಕ್ಕೆ ರೆಕ್ಕೆಮೂಡಿಸಿವೆ. ಕಾಮದ ಕತ್ತಲು ಬೆಳಕಿಗೋಸ್ಕರ ಹಾತೊರೆಯುವುದು, ಕಾಯುವುದು,ಸಂಭ್ರಮಿಸುವುದು,ಕಾತರಿಸುವುದು ಕಾಯದ ಲಯದಲ್ಲಿಯೇ. ಆ ಲಯಕ್ಕೆ ಕಾಲದ ಹಂಗಿಲ್ಲ ಎನ್ನುವಾಗಲೇ ಅದರ ಹಂಗು ಒತ್ತರಿಸಿಕೊಂಡು ಮುನ್ನುಗ್ಗುತ್ತದೆ.ನೆರೂಡನ ಮಾತು ಮತ್ತೆ ನೆನಪಾಗುತ್ತಿದೆ ‘ಕಾಲ ತನ್ನ ಚಪ್ಪಲಿ ಕಳೆದು ಕೊಂಡಿದೆ’ ಇಲ್ಲಿನ ಹೆಣ್ಣಿನ ಶರೀರದ ಲಯವೂ ಹಾಗೆಯೇ.ಇದರ ಲಯವನ್ನು ಮಾಗಿಸಿರುವುದು ‘ಅವನು’.
‘ಈ ನನ್ನ ದೇಹ ನನ್ನದಲ್ಲವೆಂದು,
ಎರಡು ಬಾಹುಗಳ ನಡುವಿನ
ಶೂನ್ಯವನ್ನು ನೀನು ತುಂಬುವವರೆಗೂ
ಅನ್ನಿಸಿರಲಿಲ್ಲ ನಾನು ಹೆಣ್ಣೆಂದು!
ಅದಕ್ಕೆ, ನಾನು ಒಬ್ಬಳೇ ಇರುವಾಗಲೂ ಒಬ್ಬಳಲ್ಲ,
ಕೂಡಿದಾಗ ಇಬ್ಬರಲ್ಲ;
ದೇಹ-ದೇಹಗಳ ಮಾತು ಇದು
ಪ್ರತಿಮೆಗಳಿಗೆ ಅರ್ಥ ಬೇಡದ ಲೋಕವಿದು… ..( ಅವನರಿವಲ್ಲಿ)
ಸಂಘರ್ಷದ ಮೂಲಕ ಕಟ್ಟಿಕೊಳ್ಳುವ ಬದುಕು ಇವರದ್ದಲ್ಲವೆಂದು ಆಗಲೇ ಹೇಳಿದೆ.ಈ ಕಾವ್ಯದಲ್ಲಿ ರಾಧೆ ಮತ್ತು ಮಾಧವರು ಅಲ್ಲಲ್ಲಿ ಪ್ರಸ್ತಾಪವಾಗುತ್ತಾರೆ.

ಆದರೆ ನನಗೆ ತಿಳಿದ ಮಟ್ಟಿಗೆ ಅವರ ಮನಸ್ಥಿತಿಗೆ ಇಲ್ಲಿನ ಗಂಡು-ಹೆಣ್ಣಿನ ಬಾಳು ಒಗ್ಗಿದಂತೆ ಕಾಣುವುದಿಲ್ಲ. ಶಿವ-ಶಿವೆಯರ ಬದುಕು ಮನುಷ್ಯನ ಸಂಕಟಗಳಿಗೆ ಹೆಚ್ಚು ಸಮೀಪವಾದದ್ದು. ಮೇಲುನೋಟಕ್ಕೆ ಇಲ್ಲಿನ ಭಾಷೆ ಪುರುಷನಿಗೆ ಅಧೀನಳಾಗಿ ಹೆಣ್ಣು ಇದ್ದಾಳೆಂದು ಅನಿಸಿದರೂ ಅದಲ್ಲ. ಇಲ್ಲಿ ಸೋಲು-ಗೆಲುವುಗಳು ಮುಖ್ಯ ಅಲ್ಲ ಒಳಗುಮಾಡಿಕೊಳ್ಳದಷ್ಟೇ ಪ್ರಧಾನ.ನಂಬಿಕೆ, ಪ್ರೇಮಗಳು ವಾಸ್ತವತೆಯನ್ನು ಕಳೆದುಕೊಳ್ಳದಂತೆ ಇಲ್ಲಿನ ಜೀವಗಳು ಸಾಗಿವೆ.ಇಲ್ಲಿ ಕಾಮವು ಬದುಕಿನ ಭಾಗವೆಂದು ಸರಳೀಕರಣ ಮಾಡಬಹುದು. ಆದರೆ ಅವನನ್ನು ಅರಿಯಲು ‘ಅವಳಿಗೆ’ ಅವಳನ್ನು ಅರಿಯಲು ‘ಅವನಿಗೆ’ ಸೇತುವೆಯಾಗಿದೆ. ನಿರೂಪಣಾ ಕ್ರಮವನ್ನೇ ಈ ಕಾವ್ಯ ನಂಬಿಕೊಂಡಿದೆ.ಹೆಚ್ಚು ‘ಹೇಳುವ’ ಕ್ರಮದಿಂದ ಮಾತು ಜಾಸ್ತಿಯಾದಂತೆ ಕಾಣುತ್ತದೆ. ಅದರಿಂದ ತಪ್ಪಿಸಿಕೊಳ್ಳುವಂತೆ ಅವರಿಗೆ ಅನ್ನಿಸುವುದೇ ಇಲ್ಲ. ಕಾರಣ ವಸ್ತು ಅವರನ್ನು ಎಡಬಿಡದೇ ಕಾಡಿದೆ. ಇದರ ಸವಾಲುಗಳನ್ನು ಸಂಪೂರ್ಣವಾಗಿ ಅರಗಿಸಿಕೊಂಡಿದ್ದು; ಕಾವ್ಯಗುಣದಿಂದ ಸಾಕಷ್ಟು ಮಾಗಿದ್ದು ಈಚಿಗಿನ ‘ಮಾಗಿಕಾಲದ ಸಾಲುಗಳು’ ಸಂಕಲನದಿಂದ. ಕಾಡಿನ ಅಂಚಿನಲ್ಲಿ ಗಿಡವೊಂದರ ಜೋಡಿ ಎಲೆಗಳು ಹೊತ್ತು ಗುÀಡ್ಡದ ಮರೆಗೆ ಜಾರಿದಾಗ ಅವು ಹಕ್ಕಿಗಳಾಗಿ ಕಂಡಹಾಗೆ ಇಲ್ಲಿನ ಅನೇಕ ಕವಿತೆಗಳು ನನಗೆ ಕಂಡಿವೆ. ‘ಅವನರಿವಲ್ಲಿ’ ಕವಿತೆಯ ಮುಂದುವರಿದ ಭಾಗವೆಂದು ಮೇಲುನೋಟಕ್ಕೆ ಅನಿಸದರೂ ದೇಹದ ಅಂಗಗಳನ್ನು ಇಲ್ಲಿ ಉಸಿರು ಬಿಗಿಹಿಡಿದಂತೆ ಕಟ್ಟಲಾಗಿದೆ. ‘ನಿರಾಳ’ ‘ಉಸಿರು’ ‘ದಡ’ಮುಂತಾದ ಶಬ್ಧಗಳು ಬದುಕಿನ ಲಯವನ್ನು ಮತ್ತಷ್ಟು ಆದ್ರ್ರಗೊಳಿಸಿವೆ. ಎಲ್ಲಕ್ಕೂ ಮಾತಿದೆ; ಮಾತು ಕಳೆದುಹೋಗುವ ಇರಾದೆಯೂ ಇದೆ. ಇಲ್ಲಿನ ಕವಿತೆ ತನ್ನೊಗೆ ಹಿಗ್ಗಿದೆ. ಪದಗಳು ಸ್ವ ಚರಿತೆಯನ್ನು ತೀವ್ರಗೊಳಿಸಲು ಸಕಾರಾತ್ಮಕವಾಗಿ ಹೆಣಗಾಡಿವೆ. ಅನುಭವ ಮಾಗಲಾಗಿದೆ ಎನ್ನುವುದಕ್ಕಿಂತ ಉಸಿರಿನ ಬಡಿತದ ತೀವ್ರತೆಯಲ್ಲಿ ತನ್ನ ಅಸ್ಮಿತೆಯನ್ನು ಕಂಡುಕೊಳ್ಳುಲು ಯತ್ನಿಸಲಾಗಿದೆ. ಶಬ್ಧಗಳಿಗೆ ಕಾವ್ಯಗುಣ ಲಭ್ಯವಾಗಿರುವುದೇ ಇದರ ಬೆನ್ನಲ್ಲಿ ಎಂದು ಕಾಣುತ್ತದೆ.ಇಲ್ಲಿನ ಕವಿತೆಗಳ ಕೆಲವು ಸಾಲುಗಳನ್ನು ಗಮನಿಸಿ
‘ನಾಚಿಕೆ ಕಳಚಿದ ಬೆತ್ತಲು’
ಕರುಗುತ್ತಿದ್ದೇನೆ ಗಂಟೆ ನಿಮಿಷ/ ಗಳಿಗೆ ವ್ಯತ್ಯಾಸ ತಿಳಿಯದಂತೆ.’
‘ಸಾವು ನಿನ್ನ ಬಳಿ ಸುಳಿಯದಂತೆ/ ಕಾಯಬೇಕು ನಾನು’.
‘ಕಣ್ಣಗುಡ್ಡೆಯೊಳಗೆ /ಸಾವು ಬೆಳಕು
‘ಜಗದ ಬಂಧನಗಳಾಚೆಗೆ/ ಕನಸಲ್ಲಿ ಕಂಡ ಪಂಜರದ ಗಿಳಿ/ ಬಟ್ಟ ಬಯಲಿಗಿಳಿದು ನವಿಲಾಗಬೇಕಿದೆ’.
‘ಹೊಕ್ಕುಳ ಮೇಲೆ ಹಚ್ಚಿಟ್ಟ ಹಣತೆ/ ಜೀವಕ್ಕೋ ಸಾವಿಗೊ?’ (ಎಲ್ಲವೂ ಬಿಡಿ ಕವಿತೆಗಳಿಂದ ಆರಿಸಿದೆ. ‘ಮಾಗಿಕಾಲದ ಸಾಲುಗಳು’)

ಇವನ್ನು ಅಂತರಂಗದ ಆಲೋಚನೆಗಳು ಎಂದು ಕರೆಯಬೇಕೆ? ಅಲ್ಲ ನಾನು ಆರಂಭದಲ್ಲಿ ಒಂದು ಪ್ರತಿಮೆ ಬಳಸಿದೆ ಬೆಳಕಿನಲ್ಲಿ ಗಿಡದ ಎಲೆಗಳು ಹೇಗಾದರೂ ಕಾಣಬಹುದು, ಆದರೆ ಸೂರ್ಯ ಮುಳುಗಿದ್ದಂತೆ ಅವುಗಳ ತಮ್ಮ ಸ್ವರೂಪವನ್ನು ಬದಲಿಸಿಕೊಳ್ಳುತ್ತವೆ. ಇವು ಹಾಗೆಯೇ ಬದುಕಿನಂಚಿನಲ್ಲಿ ಉಸಿರಾಡಿವೆ.ತೇಜಶ್ರೀ ಯವರ ಮೊದಲ ಸಂಕಲನಗಳಿಂದ ಅಷ್ಟೇನು ವಸ್ತುವಿನಿಂದ ತಾತ್ವಿಕತೆ ಪ್ರಕಟಗೊಂಡಿರಲಿಲ್ಲ. ‘ಕತ್ತಲೆಯ ಬೆಳಗು’ ‘ಉಸ್ರುಬುಂಡೆ’ ‘ಅವನರಿವಲ್ಲಿ’ ‘ಮಾಗಿಕಾಲದ ಸಾಲುಗಳು’ ಕವಿತೆಗಳಿಗೆ ನಿರ್ದಿಷ್ಟ ತಾತ್ವಿಕತೆ ಇದೆ. ಅದು ಸಾವು ಮತ್ತು ಪ್ರೇಮಗಳ ನಡುವೆ ಮಡುಗಟ್ಟಿದೆ.ಇಲ್ಲಿನ ‘ಅವನು’ ಬೆದರಿದಂತೆ ಕಾಣದೇ ಹೆಣ್ಣಿನ ಆಂತರ್ಯವನ್ನು ಸಾವಧಾನದಿಂದ ಆಳಿಸುವ ಕೇಂದ್ರಕ್ಕೆ ತಲುಪಿದ್ದಾನೆ. ಅವರಿಬ್ಬರಲ್ಲಿ ಬದುಕಿನ ಹೊಣೆಗಾರಿಕೆಯ ಪ್ರಶ್ನೆ ಎದುರಾದಾಗ ‘ಅವಳು’ ಹೆಚ್ಚು ನಿಭಾಯಿಸಬಲ್ಲಲು. ಅಂತರಂಗದ ಅಲೆಗಳ ಮೂಲಕವೇ ಪ್ರಾಣಕ್ಕೆ ಎಡತಾಕುವುದು ಅಷ್ಟು ಸುಲುಭವಲ್ಲ. ಇಲ್ಲಿನ ಕೆಲವು ಕವಿತೆಗಳು ಅದನ್ನು ಸಾಧಿಸಿವೆ.

 

Leave a Reply

Your email address will not be published.