ಕಾವ್ಯಯಾನ-6 : ಒದ್ದೆ ಎವೆಗಳ ಸುತ್ತ ವಿನಯಾ ಅವರ ಕಾವ್ಯ

-ಸುರೇಶ ನಾಗಲಮಡಿಕೆ

ಅನುಭವಗಳನ್ನು ಅಭಿವ್ಯಕ್ತಿಸುವ ವಿಧಾನಗಳು ಯಾವಗಲೂ ನಮಗೆ ಸವಾಲಾಗಿಯೇ ಇರುತ್ತವೆ. ಅದರಲ್ಲೂ ಕವಿತೆಯಲ್ಲಿ ಭಾಷಿಕ ವಿನ್ಯಾಸಗಳನ್ನು ದುಡಿಸಿಕೊಳ್ಳುವ ಬಗೆ: ಆ ಮೂಲಕ ತಕ್ಕುದಾದ ಪ್ರತಿಮೆ, ರೂಪಕಗಳನ್ನು ಜೋಡಿಸುವ ಕಲೆಗಾರಿಕೆ ಸಿದ್ಧಿಸಿಕೊಳ್ಳಬೇಕಾಗುತ್ತದೆ. ಈ ಜಾಡಿಗೆ ಪ್ರವೇಶವಾಗ ಬೇಕಾದರೇ ಅನುಭವಗಳ ಪ್ರಾಮಾಣಿಕತೆ: ಬದುಕಿನ ವಿಚಾರದಲ್ಲಿ ಬದ್ಧತೆ: ಸ್ವ ಚರಿತೆಯನ್ನು ಮಾಗಿಸಿಕೊಳ್ಳುವಿಕೆ, ಮುಂತಾದ ಅಂಶಗಳಲ್ಲಿ ಮುಕ್ತವಾಗಬೇಕು. ವಿನಯಾ ಅವರ ಕವಿತೆಗಳನ್ನು ಓದುವಾಗ ಇಷ್ಟೆಲ್ಲಾ ಅನಿಸಿದ್ದು ಅವರು ಮೇಲಿನ ವಿಚಾರಗಳಿಗೆ ತಮ್ಮನ್ನು ತೆತ್ತುಕೊಳ್ಳುವ ಹಾದಿಯಲ್ಲಿ ಸರಾಗವಾಗಿದ್ದಾರೆ. ಸಾಮಾಜಿಕ ಕವಿತೆ ಹಲವೊಮ್ಮೆ ರಾಜಕೀಯ ಕವಿತೆಯಾಗಿಯೂ ಪರಿಣಮಿಸುತ್ತದೆ. ವಿನಯಾ ಅವರನ್ನು ಹೆಣ್ಣು ಎಂದು ಸ್ವೀಕರಿಸಿ ಆ ಮೂಲಕವೇ ಅವರ ಕವಿತೆಯನ್ನು ಅಭ್ಯಾಸ ಮಾಡಿದರೇ ನಮ್ಮ ಒಳಗಿನ ಅಪ್ರಾಮಾಣಿಕತೆಯನ್ನು ಮತ್ತೊಮ್ಮೆ ಮುಂದಿಟ್ಟಂತೆ. ಸಮಾಜದ ದಟ್ಟ ವಿವರಗಳಿಗೆ ಸ್ಪಂದಿಸುವಾಗ ಇದು ಹೆಣ್ಣಿನ ಮೂಲಕ, ಅಥವಾ ಗಂಡಿನ ಮೂಲಕವೆಂದು ವರ್ಗೀಕರಣದ ರಾಜಕಾರಣಕ್ಕೆ ಇನ್ನಾದರೂ ಮುಗಿತಾಯ ನೀಡಬೇಕು.

ಹಾಗಾಗಿಯೇ ಅವರ ಕವಿತೆ ರೈತರನ್ನು, ಅತ್ಯಾಚಾರಕ್ಕೆ ಒಳಗಾದ ಮಹಿಳೆಯರನ್ನು ಏಕವಾಗಿ ಕಾಣುತ್ತದೆ. ಹೆಣ್ಣಿನ ಅಭಿವ್ಯಕ್ತಿಯನ್ನು ಒಟ್ಟು ಮನುಷ್ಯ ಪ್ರಜ್ಞೆಯ ಆವರಣದಲ್ಲಿ ಕಾಣಬೇಕು. ನಮಗೆ ಹೆಣ್ಣಿನ ಅಭಿವ್ಯಕ್ತಿ ಎಂಬ ಪ್ರತ್ಯೇಕ ನಿಲುವು ಯಾಕಾಗಿ ಕಾಣಬೇಕು? ಈ ಪ್ರಶ್ನೆಯನ್ನು ಕೆಲವರು ತಮ್ಮ ತಮ್ಮ ವೈಯಕ್ತಿಕ ಮನಸ್ಸಿನ ಬೆನ್ನಲ್ಲಿ ತೀರ್ಮಾನಕ್ಕೆ ಬರುತ್ತಾರೆ. ಹಾಗೆ ನೋಡಿದ್ದೇ ಆದಲ್ಲಿ ಹೆಣ್ಣಿನ ಸ್ವಚರಿತೆಯ ಮೇಲೆ ಎಸುಗುವ ವಂಚನೆ ಎಂದೇ ಭಾವಿಸಬೇಕು. ತನಗೆ ಬಗೆದ ವಂಚನೆಯಿಂದ ಆಕೆ ತನ್ನ ಅಭಿವ್ಯಕ್ತಿಯನ್ನು ಪ್ರತ್ಯೇಕಗೊಳಿಸಿಕೊಂಡು ತನ್ನದೇ ದನಿಯಲ್ಲಿ ಮಾತನಾಡಿದಳು. ಈ ನಿಟ್ಟಿನಲ್ಲಿ ‘ಸಂವೇದನೆ’ ಎಂಬ ನುಡಿಗಟ್ಟಿಗಿಂತ ‘ಅಭಿವ್ಯಕ್ತಿ’ ಎಂಬುದೇ ಆಕೆಯ ಸ್ಚ ಚರಿತೆಯನ್ನು ಮಂಡಿಸಲು ಹೆಚ್ಚು ಸೂಕ್ತವಾದ ನುಡಿಗಟ್ಟು. ಆಧುನಿಕೋತ್ತರ ಸಂದರ್ಭದಲ್ಲಿ ಬಿರುಸಾಗಿ ಪಲ್ಲಟಗೊಳ್ಳುತ್ತಿರುವ ಸಾಮಾಜಿಕ ನೆಲೆಗಳು: ಮನುಷ್ಯನಲ್ಲಿ ಸ್ಪೋಟಿಸುತ್ತಿರುವ ‘ನಾನತ್ವ’ (ಅಹಂ) ಧೃವೀಕರಣಗೊಳ್ಳುತ್ತಿರುವ ಮನಸ್ಸುಗಳು: ಪೈಶಾಚಿಕ ಚೌಕಟ್ಟಿಗೆ ಬರುತ್ತಿರುವ ಕಾಮ: ಮುಗ್ಧತೆಯ ನಾಶ ಮುಂತಾದ ಅಂಶಗಳು ವಿನಯಾ ಅವರ ಕವಿತೆಯನ್ನು ಆವರಿಸಿವೆ. ಇದುವರೆಗೆ ಅವರು ‘ಬಾಯಾರಿಕೆ’ ‘ ನೂರು ಗೋರಿಯ ದೀಪ’ ‘ಹಸಬಿ’ ಎಂಬ ಮೂರು ಸಂಕಲನಗಳನ್ನು ಬರೆದಿದ್ದಾರೆ.

ಈ ಮೂರು ಸಂಗ್ರಹಗಳಲ್ಲಿ ಖಚಿತವಾದ ತಾತ್ವಿಕ ನಿಲುವುಗಳನ್ನು ಸೃಷ್ಟಿಸಿಕೊಳ್ಳುವುದಕ್ಕೆ ಅವರೇನು ಹೆಣಗಾಡಿಲ್ಲ. ತಮಗೆ ‘ಕಂಡ’ ಉಂಡ’ ಅನುಭವಗಳನ್ನು ಪ್ರಾಮಾಣಿಕವಾಗಿ ಅಭಿವ್ಯಕ್ತಿಸಲು ಯತ್ನಿಸಿದ್ದಾರೆ. ಹಲವು ಕಡೆ ಎವೆಗಳು ಒದ್ದೆ ಯಾದರೂ ಅದು ಭಾವುಕತೆ ಎಂದು ಭಾವಿಸಬಾರದು. ಕಣ್ಣೀರು ಎಚ್ಚರದ ಪ್ರಜ್ಞೆಯಾಗಿಯೂ ಕಾಣಿಸುವಂತೆ ಮಾಡುತ್ತಾರೆ. ಇದು ಅವರ ಕಾವ್ಯದ ಮುಖ್ಯ ಕಾಳಜಿ ಕೂಡ. ಕವಿತೆಗೆ ಭಾವುಕ ನೆಲೆ ಎಂಬುದು ಅಂತಸ್ಥ ಎಂದು ಭಾವಿಸುವಾಗಲೂ, ಹಲವು ಸಾರೆ ಇದು ತನ್ನನ್ನು ತಾನು ಕೇಂದ್ರೀಕರಿಸುವ ಗುಣವೆಂದು ತಪ್ಪು ತಿಳಿಯಬಾರದು. ಹೆಣ್ಣು ಕವಿತೆಯಲ್ಲಿ ‘ಸ್ವ’ದ ಆಯಾಮಗಳನ್ನು ಭಿನ್ನ ಬಗೆಯಲ್ಲಿ ಕಾಣುವ ಸಾಧ್ಯತೆಗಳಿರುತ್ತವೆ. ಭಾವಕೇಂದ್ರೀತ ನೆಲೆ ಎಂಬುದು ಹೆಣ್ಣು ತನ್ನ ಎದುರಿಗೆ ಇರುವ ಸಮುದಾಯವನ್ನು ಎಚ್ಚರಿಸುವ ಹಾಗು ತನ್ನನ್ನು ಹೀಗೆ ಕಂಡಿದ್ದು ಸಾಕು, ಹೀಗೂ ನೋಡು ಎಂಬ ನಿಲುವುಗಳನ್ನು ಅಭಿವ್ಯಕ್ತಿಸಲು ಕಂಡುಕೊಂಡಿರಿವ ವಿಧಾನ. ಹಲವರು ಇದನ್ನು ಹೆಣ್ಣು ಕವಿತೆಯ ಮುಖ್ಯ ಅಂಗವೆಂದು ಭಾವಿಸಿ, ಸಂಕುಚಿತ ಚೌಕಟ್ಟಿಗೆ ಎಳೆದಿದ್ದಾರೆ. ವಿನಯಾ ಅವರ ಕವಿತೆ ಹೀಗೆ ಭಾವುಕಲೋಕವನ್ನು ಹಾದು ಸಮುದಾಯಲೋಕವನ್ನು ಮುಟ್ಟುತ್ತದೆ.

ಹೆಣ್ಣು ಕವಿತೆಯನ್ನು ಕೇವಲ ದೇಹಲೋಕದಿಂದ ಕಂಡು ಮತ್ತಷ್ಟು ನಾವು ಸಂಕುಚಿತಗೊಂಡಿದ್ದೇವೆ ಅನಿಸುತ್ತದೆ. ಯಾವುದೋ ಒಂದು ಸಂಕಲನ ದೇಹವನ್ನು ಕೇಂದ್ರ ಮಾಡಿಕೊಂಡ ತಕ್ಷಣ ಆಕೆಯನ್ನು ಅದೇ ನೆಲೆಯಲ್ಲಿ ಕಂಡು ಬ್ರಾಂಡ್ ಮಾಡುವ ಬಗೆ ಕನ್ನಡ ವಿಮರ್ಶೆ ಭರಾಟೆಯಿಂದ ಮಾಡಿದೆ. ವೈಯಕ್ತಿಕವಾಗಿ ಹೆಣ್ಣು ಗಂಡಿನ ಜೊತೆಯಲ್ಲಿ ಒಳಸಂಘರ್ಷ ನಡೆಸುತ್ತಲೇ ಬದುಕನ್ನು ಕಂಡುಕೊಳ್ಳುವುದು ಕವಿತೆಯಲ್ಲಿ ಅಂತರ್ಗತವಾಗಿದೆ. ಇದಕ್ಕೆ ಕಥನ ಕ್ರಮ, ಸ್ವಗತ, ಸಣ್ಣಲಯಗಳ ಆಯ್ಕೆಯನ್ನು ಕಾಣಬಹುದು. ನಿಸರ್ಗದೊಂದಿಗೆ ತನ್ನನ್ನು ಒಳಗುಮಾಡಿಕೊಳ್ಳುವುದು: ಪುರಾಣಗಳ ಹೆಣ್ಣುಲೋಕವನ್ನು ಅನುಸಂಧಾನ ಮಾಡುವುದು: ಕುಟುಂಬ, ಸಮಾಜಗಳ ಜಿಗಿತಗಳನ್ನು ವಿನಯಾ ಅವರು ಭಿನ್ನವಾಗಿ ನೋಡಿದ್ದಾರೆ.

ಹೆಣ್ಣನ್ನು ಸಂಭ್ರಮದ ನೆಲೆಗೂ ಮತ್ತು ಸಂಕಷ್ಟದ ಆಯಾಮಕ್ಕೂ ತರುವಾಗ ಹಲವು ಸವಾಲುಗಳನ್ನು ಇವರ ಕವಿತೆ ಅನಾವರಣ ಮಾಡಿದೆ. ಒಂದು ಪಾರಿವಾಳವನ್ನು ದಿನಾ ಅದೇ ಗೂಡು, ಅದೇ ಹಕ್ಕಿಮರಿಗಳೇ ಎಂದು ಕೇಳುವ ಇವರ ಕವಿತೆಯ ಹೆಣ್ಣು ಅಂತಿಮವಾಗಿ ಅದರಿಂದ ನಿರೀಕ್ಷಿಸುವುದು ಅದರ ನಗುವನ್ನು. ಮುಂದೆ ಕವಿತೆಯ ಕೊನೆಯ ಸಾಲುಗಳನ್ನು ತನ್ನ ಅಸ್ಮಿತೆಯ ಜಾಡುಗಳನ್ನು ಅಭಿವ್ಯಕ್ತಿಸುತ್ತಾಳೆ.
‘ಒಂದು ಹೊಳೆಯಾಗಲು
ಒಂದು ಮರವಾಗಲು
ಒಂದು ಮಣ್ಣದಿಬ್ಬವಾಗಲು
ಕಡೆಗೊಂದು ಕರಕಿಯ ಕುಡಿಯಾಗಲು
ನನ್ನ ನಾನೇ ಕೊಡವಿ ಏಳುತ್ತೇನೆ.’ ( ಬಾಯಾರಿಕೆ)

ಹೆಣ್ಣು ಕವಿತೆ ನಿಸರ್ಗದ ಮೂಲಕವೇ ತನ್ನ ಬದುಕಿನ ಅಸ್ಮಿತೆಯನ್ನು ರೂಪಿಸಿಕೊಳ್ಳಲು ಯತ್ನಿಸಿದೆ ಎಂದರೆ ಅಡ್ಡಿಇಲ್ಲ. ತನ್ನ ಬದುಕಿನಲ್ಲಿ ನಿಸರ್ಗಕ್ಕೆ ದಕ್ಕಿದ ಸ್ವಾತಂತ್ರ ತನ್ನ ಭಾವನೆಗಳಿಗೆ ಒದಗಿದೆಯಾ ಎಂಬ ನುಡಿಯನ್ನು ಪ್ರತಿಗಳಿಗೆಯಲ್ಲೂ ಆಕೆ ಕೇಳಿಕೊಳ್ಳುವುದರಲ್ಲಿ ನಿಜಗಳಿವೆ. ಹಾಗಾಗಿಯೇ ತನ್ನ ಒಳ ಸಂಷರ್ಷಗಳನ್ನು: ಪ್ರೇಮವನ್ನು ಹಲವು ಸಾರೆ ನಿಸರ್ಗದ ರೂಪಕಗಳಿಗೆ, ಪ್ರತಿಮೆಗಳಿಗೆ ಮಾರುಹೊಗುತ್ತದೆ.’ಕೋಣೆಯೊಂದು ಹಕ್ಕಿಗೂಡಾಗುತ್ತದೆ’ ಎಂಬ ಪ್ರತಿಮೆ ಆಕೆಯ ಒಳಗನ್ನು ದಟ್ಟವಾಗಿ ಅನಾವರಣ ಮಾಡುತ್ತದೆ.ವಿಷಾದಗಳನ್ನು ಅಭಿವ್ಯಕ್ತಿಸುವಾಗಲೂ ವಿನಯಾ ಅವರಿಗೆ ಭೂಮಿಗಿಂತ ಮತ್ತೊಂದು ಪ್ರತಿಮೆ ಸಿಗಲಾರದು.
‘ಎಲ್ಲಿ ಹೂಳಲಿ ನನ್ನ ವಿಷಾದಗಳ
ಹೇಸಿಗೆ ತಿಂದು ಹೂ ಅರಳಿಸುವ
ಭೂಮಿಯ ಗುಣ ಕಲಿತ ದಿನ
ಸಾರ್ಥಕ ಪ್ರೀತಿ, ಬಾಳುವೆ ಎಲ್ಲ! ( ಬಾಯಾರಿಕೆ)

ಹೆಣ್ಣು ಮತ್ತು ಭೂಮಿ ಇಲ್ಲಿ ಅಭೇದ. ತನ್ನ ಕುಟುಂಬದ ವಿಷಾದಗಳನ್ನು ಮನಸ್ಸಿನ ಗರ್ಭದಲ್ಲೂ ಹೂಳುವುದು ಅಷ್ಟೇನು ಸುಲುಭವಲ್ಲ. ಆದರೆ ಮನಸ್ಸಿಗೆ ಭೂಮಿಯಷ್ಟು ತಾಳಿಕೆಯ ಗುಣವಿದೆ. ಇಲ್ಲಿನ ಸ್ವಗತ ಸಂವಾದದಲ್ಲಿ ಸಂಘರ್ಷಕ್ಕಿಂತ ಹೊಂದಿಕೆಯ ಗುಣವಿದೆ. ಅಂದರೆ ಇದು ಸೋಲನ್ನು ಒಪ್ಪಿಕೊಳ್ಳುವುದಲ್ಲ. ಬದಲಿಗೆ ಸಂಬಂಧಗಳನ್ನು ನೆಮ್ಮದಿಯ ಮತ್ತು ಸಾಹಚರ್ಯದ ಚೌಕಟ್ಟಿಗೆ ತರುವುದು.ಈ ಕ್ರಮ ಉತ್ಕಟ ಬದುಕಿನ ನಂಟನ್ನು ವಿಸ್ತರಿಸುವ ಹಾದಿಯದು. ಬದುಕು ಒಂದೇ ತೆರನಾದುದಲ್ಲ ಎಂಬ ತಿಳಿವಳಿಕೆ ವಿನಯಾ ಅವರ ಕವಿತೆಗಿದೆ. ‘ಒದ್ದೆ ಎವೆಗಳ ಸುತ್ತ/ ತುಂಬಿ ತುಳುಕುವ ನೆನಪು/ ಹುಟ್ಟು ಕಟ್ಟಿದ ಪ್ರೀತಿ/ ತೊಟ್ಟಿಕ್ಕಿದಂತೆ. ಎಂಬು ಮಾತುಗಳೂ ಬರುತ್ತವೆ. ಆದರೆ ಇವು ವಿಷಾದದಿಂದ ಹೊರಹೊಮ್ಮಿದ ನುಡಿಗಳು ಮಾತ್ರವಲ್ಲ. ಅದನ್ನು ಮೀರುವ ಗುಣವೂ ಪ್ರೀತಿಗಿದೆ. ವಿನಯಾ ಅವರ ಕವಿತೆ ಎರಡು ಬಹು ಮುಖ್ಯ ಕೇಂದ್ರಗಳನ್ನು ಹೊಂದಿದೆ. ಒಂದು: ಮಗುವಿನ ಪ್ರತಿಮೆ.ಎರಡು: ಹಿಂಸೆಯ ರೂಪಕ. ಇದರಾಚೆಗೂ ಕೆಲವು ಕೇಂದ್ರಗಳಿವೆ. ಆದರೆ ಬಹುಮಟ್ಟಿಗೆ ಇವುಗಳ ಮುಖೇನ ತಾತ್ವಿಕತೆಯನ್ನು ರೂಪಿಸಿಕೊಂಡಿದ್ದಾರೆ.

ಮಗುವಿನ ಪ್ರತಿಮೆ ಬದುಕಿನ ಸ್ವಕೇಂದ್ರಿತ ಚಿಂತನೆಗಳನ್ನು ತೆರದಿಡುತ್ತಾರೆ. ಇದರ ಕಕ್ಷೆಯಲ್ಲಿ ಕುಟುಂಬ,ಗೆಳೆಯ,ಸುತ್ತಣ ಪರಿಚಿತ ಪರಿಸರಗಳು ನುಗ್ಗುತ್ತವೆ. ಹಿಂಸೆಯ ರೂಪಕವು ಅಧುನಿಕೋತ್ತರ ಸಂದರ್ಭದ ಸಮಾಜ: ಅಧಿಕಾರ ಕೇಂದ್ರಗಳ ಸಾಂಸ್ಕøತಿಕ ಮತ್ತು ಧಾರ್ಮಿಕ ಭ್ರಷ್ಟತೆ: ಪ್ರಜಾಪ್ರಭುತ್ವದ ನಾಶ ಮುಂತಾದ ವಿವರಗಳನ್ನು ಕಾಣಬಹುದು. ವಿನಯಾ ಅವರು ಇವೆರಡನ್ನು ನಮನಶೀಲತೆಯಿಂದ ಮುಖಾಮುಖಿಗೊಳಿಸಿದ್ದಾರೆ. ಅವರಿಗೆ ಸಮಾಜದ ಹಿಂಸೆ ಮತ್ತು ಕುಟುಂಬದ ಹಿಂಸೆಗಳನ್ನು ಏಕಕಾಲದಲ್ಲಿ ಗ್ರಹಿಸುವುದಕ್ಕೆ ಸಾಧ್ಯವಾಗಿದೆ. ಅನೇಕ ಕಡೆ ಮಗುವಿನ ಚಿತ್ರಗಳು ಬರುತ್ತವೆ. ಮುಗ್ಧತೆ ಮತ್ತು ಅದರ ನಾಶವನ್ನು ಸಾಂಕೇತಿಕವಾಗಿ ತರುವ ಇವರ ಕವಿತೆ ಲೋಕದ ಹಿಂಸೆಯನ್ನು ಒಳತುಡಿತದಿಂದಲೇ ಅಭಿವ್ಯಕ್ತಿಸುತ್ತದೆ. ಇದು ಲೋಕದ ಹಿಂಸೆ ಎಂದಿಗೂ ವೈಯಕ್ತಿಕವಾದ ಚೌಕಟ್ಟಿಗೆ ಬರುವುದಿಲ್ಲ: ಅದು ನಿರಂತರವಾದ ಮಾನವನ ಸಮಸ್ಯೆ ಎಂದು ಬಾವಿಸುವ ಶಕ್ತಿ ಇವರ ಕವಿತೆಗಿದೆ.
‘ಸಾವು ಅರ್ಥ ಕಳಕೊಂಡ ನೆಲದಲ್ಲಿ
ಹುಟ್ಟುಹಬ್ಬ ವಾಗುವುದಿಲ್ಲ ಮಗೂ,
ನೀನೊಂದು ಬೆಳಕಿನ ಬೀಜ
ಹೊತ್ತು ತಾ ಜೀವಸೆಲೆಯನ್ನು
ಬಸವಳಿದ ಬದುಕಿಗೆ’ ( ಬಾಯಾರಿಕೆ)
‘ಮಲಗಿದ್ದ ಮಗುವಿನ ಗಲ್ಲ ತಟ್ಟಿ
ಕಿವಿಯಲ್ಲಿ ಉಸುರಿದೆ
ಸ್ಪರ್ಶಿಸಿದ್ದೀಯಾ ನೀನು ಮೌನವ?
ಕೇಳಿದ್ದೇ ಸಾಕೆಂದು ಸೆರಗಂಚನು ಬಿಗಿದು
ಮಗು ಮುಗುಳು ನಕ್ಕಿತು.’ (ನೂರು ಗೋರಿಯ ದೀಪ)

ಆಧುನಿಕ ಮಹಿಳಾ ಕವಿತೆಯನ್ನು ಸ್ವಗತದ ಹಣೆಪಟ್ಟಿಯಲ್ಲಿ ಹಲವು ಕಡೆ ಬಂಧಿಸಲಾಗಿದೆ ಎನಿಸುತ್ತದೆ. ಸ್ವಗತದಲ್ಲಿ ನಡೆಯುವ ಸಂವಾದವನ್ನು ವಾಚ್ಯವೆಂದು ಜಾರಿಕೆಯ ಮಾತುಗಳನ್ನು ಹೇಳುತ್ತಲೇ ಇದ್ದೇವೆ. ಸ್ವಗತ ಹಲವು ದಿಕ್ಕುಗಳಿಂದ ಬರುತ್ತದೆ. ಇದು ನೇತ್ಯಾತ್ಮಕವಲ್ಲ. ವಿನಯಾ ಅವರ ಕವಿತೆಗಳು ಈ ಹಾದಿಯನ್ನು ತಂಗಾಳಿಯಲ್ಲಿ ನುಗ್ಗಿಸಿ ಅಗ್ನಿಕುಂಡದ ತನಕ ತೋರಿಸುತ್ತಾರೆ. ಮೊದಲ ಕವಿತೆಗಳಲ್ಲಿ ಭಾಷಿಕವಾಗಿ ಮಾತು ಅಧಿಕವಾದರೂ ‘ಹಸಬಿ’ಯಲ್ಲಿ ಕಾವ್ಯಗುಣವನ್ನು ವಿಸ್ತರಿಸುವ ಪ್ರಯತ್ನದಲ್ಲಿದ್ದಾರೆ. ಸಿಟ್ಟನ್ನು ಎಸೆದರೆ ಅದು ಕಾವ್ಯವಾಗಲಾರದು ಎಂಬುದು ಇವರಿಗೆ ತಿಳಿದೇ ಇದೆ. ಸಾಮಾಜಿಕ ಕಾವ್ಯವನ್ನು ಬರೆಯುವ ಯಾವ ಕವಿಗಾದರೂ ಹಲ ಬಗೆಯ ಸವಾಲುಗಳು ಎದುರಾಗುತ್ತವೆ. ಪ್ರೀತಿ ಮತ್ತು ಹಿಂಸೆಯನ್ನು ಕವಿತೆಯ ಚೌಕಟ್ಟಿಗೆ ತಂದು ಪ್ರೀತಿಯನ್ನು ಗೆಲ್ಲಿಸುವುದು ಅಷ್ಟು ಸುಲಭವಲ್ಲ.

ಆಧುನಿಕ ಭಾರತದ ಚರಿತ್ರೆಯೂ ಮುಖವಾಡ ತೊಟ್ಟ ಬಗೆ ದಂಗುಬಡಿಸುತ್ತದೆ. ಮಾರುಕಟ್ಟೆ ಪ್ರೇರಿತ ಬದುಕು ಇದಕ್ಕೆ ಸಹಾಯಕವೂ ಆಗುತ್ತಿದೆ ಎಂಬ ಗುಮಾನಿಯೂ ಇದೆ. ಧರ್ಮದ ವಿಚಾರದಲ್ಲಿ ಮನುಷ್ಯ ಮತ್ತಷ್ಟು ಉಗ್ರನಾಗಿ ಧ್ರುವೀಕರಣಗೊಳ್ಳುತ್ತಿರುವುದು ಈ ಕಾಲಮಾನದ ಲಕ್ಷಣವೆಂಬಂತೆ ಇದೆ. ಹಾಗೆ ನೋಡಿದರೆ ನಮ್ಮ ದಿನನಿತ್ಯದ ಬದುಕಿನಕ್ರಮ ಎರಡು ರೀತಿಯಲ್ಲಿ ಕಾಣಿಸುತ್ತಿದೆ. ಒಂದು: ಮಾರುಕಟ್ಟೆ ಪ್ರೇರಿತ. ಮತ್ತೊಂದು: ತನ್ನ ವೈಯಕ್ತಿಕ ಪರಿಸರವನ್ನು ಭದ್ರಪಡಿಸಿಕೊಂಡರೆ ಸಾಕೆಂಬ ನಿಲುವು. ಇದರಿಂದ ಮನುಷ್ಯ ಸೋಗಿನ ಚೌಕಟ್ಟುಗಳಲ್ಲಿ ಬದುಕುತ್ತಿದ್ದಾನೆ.
‘ಒಂದು ಚಿತ್ರ ಮಾತ್ರ
ಕಾಂಡಕೊರಕ ಹುಳದಂತೆ ಕೊರೆಯುತ್ತಿದೆ
ಸಜ್ಜನಿಕೆಯ ಕ್ಯಾನವಾಸಿನೊಳಗವರು
ಮಗುವಿನ ತಬ್ಬಲಿತನವ ಬಳಸುತ್ತಿದ್ದರು’.( ಹಸಬಿ)
ಮನುಷ್ಯ ಇಂದು ತನ್ನ ಮನಸ್ಸಿಗೆ ಢೋಂಗಿ ಮಾನವತೆಯ ಪರದೆಯನ್ನು ಧರಿಸಿ, ಒಳ-ಹೊರಗುಗಳಲ್ಲಿ ಭ್ರಷ್ಟಗೊಂಡಿದ್ದಾನೆ. ಸೋಗಿನ ಪ್ರಗತಿಪರತೆಗಳು ನಮ್ಮ ಮುಗ್ಧತೆಯನ್ನು ನಾಶಮಾಡುವ ಹಂತದಲ್ಲಿ ಇದ್ದರೆ, ಧರ್ಮಗಳ ಮೂಲಭೂತವಾದೀತನಗಳು ಮತ್ತಷ್ಟು ಮುನ್ನೆಲೆಗೆ ಬರುತ್ತಿವೆ. ಇವುಗಳ ನಡುವೆ ‘ತಿಳುವಳಿಕೆ’ಯ ಮೇಲಿನ ಧಾಳಿಗಳಿಂದ ಗಂಡು-ಹೆಣ್ಣು ಎಂಬ ಲಿಂಗತ್ವದ ಭೇದಗಳು ಚಾಲ್ತಿಯಲ್ಲಿವೆ.
‘ಆಳದಾಳದ ನೋವ ಶಾಸನವೆ
ನಿನ್ನ ಸುತ್ತಿದ ಪ್ರಪಂಚಕೆ ಸಾವಿರ ಕೈ ಕಾಲು ತಲೆ
ಪ್ರಜ್ಞೆಯ ಮೂಲವ ಒತ್ತಿಡುವ ಕ್ರೌರವೇ ನಿನ್ನ ಪಹರೆಗೆ ಶರಣು
ಬೆಂಕಿ ಬಸಿರೊಳಗರಳುವ ತಿಳಿವಿನ ಬೇನೆಯೇ ನಿನ್ನ ಪರಿಮಳಕ್ಕೆ ಶರಣು’.( ಹಸಬಿ)

ವಿನಯಾ ಅವರ ಕವಿತೆ ಸಮಕಾಲೀನ ಚಿಂತನ ವಲಯಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ ಎನ್ನಬಹುದು. ಅಮೆರಿಕಾ ಕುರಿತ ಅವರ ಕವಿತೆಗಳು ರಾಜಕೀಯ ಮತ್ತು ಆರ್ಥಿಕ ಪಲ್ಲಟಗಳ ಬೆನ್ನಲ್ಲಿ ನೋಡಿದರೇ ಹಲವು ಒಳನೋಟಗಳು ಲಭ್ಯವಾಗಬಲ್ಲವು. ಆದರೆ ಆ ಬಗೆಯ ಕವಿತೆಗಳ ಕವಿತ್ವ ಮಂಕಾದಂತೆ ಗೋಚರಿಸುತ್ತದೆ. ಇವರ ಕವಿತೆಯಲ್ಲಿ ಹೆಣ್ಣು ಮಕ್ಕಳ ಜನಪದ ಭಾಷಿಕ ಲಯಗಳಿವೆ. ಮುಂದುವರೆದು ಹೇಳುವುದಾದರೆ ಅವರ ಬದುಕಿನ ಲಯಗಳು ಮರುವ್ಯಾಖ್ಯಾನಕ್ಕೆ ಒಳಗಾಗಿವೆ.ಮಾತ್ರವಲ್ಲ ಇಲ್ಲಿ ಗಂಡಿನ ರಾಜಕಾರಣಕ್ಕೆ ಒಳಗಾದ ದೇವಿಯ ಸ್ವಚರಿತೆಯನ್ನು ಎಚ್ಚರಿಸಿದ್ದಾರೆ.ದೇವಿ ಪುರಾಣಗಳು ನಮ್ಮಲ್ಲಿ ವೈದಿಕ ನಂಬಿಕೆಗಳಿಂದ ಆಚೆ ಬಂದಿಲ್ಲ.ಹೆಣ್ಣಿನ ವೈಯಕ್ತಿಕ ಬಯಕೆಗಳಿಂದ ವಂಚಿತಗೊಂಡಿರುವ ದೇವಿಗಿಂತ ಅಜ್ಜಿಯ ಬದುಕು ಸಹ್ಯಗೊಂಡಿದೆ. ದೇವಿಯ ನಿಂತ ನಿಲುವಿಗಿಂತ ಅವೈದಿಕ ವ್ಯಕ್ತಿಯ ನಿಜಬದುಕಿನ ನೆನಪುಗಳೇ ಇಲ್ಲಿ ಗೆದ್ದಿವೆ. ಪುರಾಣದ ಸಾಂಸ್ಕøತಿಕ ರಾಜಕಾರಣದಿಂದ ದೇವಿ ತನ್ನ ಅಸ್ಮಿತೆಯನ್ನು ಮರೆತಿದ್ದಾಳೆ. ಹೆಣ್ಣು ಕಾವ್ಯದ ನಿಜವಾದ ಬೆಳವಣೆಗೆ ಎಂದರೆ ಇದೇ ತಾನೆ. ಇವರ ಹಸಬಿ ಸಂಕಲನ ಕಾವ್ಯಗುಣದ ದೃಷ್ಟಿಯಿಂದ ಹೆಚ್ಚು ಮಾಗಿದೆ. ಹೆಣ್ಣು ಚರಿತೆಗಳು ಇದರಲ್ಲಿ ಅಪೂರ್ಣವಾಗಿ ಗೋಚರಿಸಿದರೂ, ಆಕೆಯ ವ್ಯಕ್ತಿತ್ವದ ಭಾಗವಾಗಿಯೂ ಕಾಡುತ್ತದೆ. ನಟರಾಜ ಬೂದಾಳು ಅವರು ಹೇಳಿದ ಹಾಗೆ ‘ಹಸಬಿ’ ಕವನ ಅಪೂರ್ಣ.

ಎಂದರೆ ಈ ಮಾತು ತೀರಾ ನೇತ್ಯಾತ್ಮಕವಲ್ಲ. ಆಧುನಿಕ ಸಂದರ್ಭದ ಅವಕಾಶಗಳ ನಡುವೆಯೂ ಈಬಗೆಯ ಕವಿತೆಗಳು ಕಾಡವುದೇಕೆ? ಸ್ವ ಚರಿತೆಗಳ ಸಾತತ್ಯವನ್ನು ತಡೆಯುವ ಶಕ್ತಿಗಳು ಮಾರುವೇಷಗಳಲ್ಲಿ ನುಗ್ಗುತ್ತಿವೆ. ಮಾತು ಸೋತಿದೆ, ಇದು ಸೋಲಿನ ಕಾಲ ಎಂದು ಹೇಳುವ ವಿನಯಾ ಅವರ ಕವಿತೆ ಹೆಣ್ಣು ತನ್ನತನವನ್ನು ಉಳಿಸಿಕೊಳ್ಳುವುದಕ್ಕೆ ಸಾಕಷ್ಟು ಹೆಣಗಾಡಿದ್ದಾಳೆ.
‘ತಕಾ ತೋರು ನಿನ್ನ ಕಾಳಿಯವತಾರ ಎಂದು ಮೀಸೆ ತಿರುವುವ
ಯಜಮಾನ್ಯವೆ, ಮೊಲೆಯುಂಡ ನೆನಪು ಮಾಸಿದ
ಸಂತಾನವೇ, ನನ್ನ ಹಕ್ಕಲ ಈ ಒಕ್ಕಲಾಟದಲಿ
ಯಾರು ಸೋಲಿಸುವರಯ್ಯ ಸೋತವಳ
ಸೋಲಲೆಂದೇ ಸೆಣಸುವವಳ’.( ಹಸಬಿ)

ಗಂಡು ಕೇಂದ್ರಿತ ಪುರಾಣಗಳಿಗೆ ಮರುಭೇಟಿ ನೀಡಿದಾಗ ಅಲ್ಲಿ ಹೆಣ್ಣಿನ ಅವ್ಯಕ್ತ ಸೋಲುಗಳ,ಗಂಡಿನ ವ್ಯಕ್ತ ಪ್ರೇರಿತ ಒಳಸಂಚುಗಳೇ ಅಧಿಕ.ಈ ಕ್ರಮ ವೈದಿಕ ಪುರಾಣಗಳಲ್ಲಿ ತುಸು ಅಧಿಕವಾಗಿಯೇ ಇದೆ. ಆದರೆ ತಿಳುವಳಿಕೆಯನ್ನು ಪಡೆದ ಹೆಣ್ಣು ಬದುಕನ್ನು ವ್ಯಾಖ್ಯಾಸಿಕೊಳ್ಳುವುದು ಹೀಗೆ. ‘ನನ್ನದೇ ಕೊಕ್ಕು ನನ್ನ ರೆಕ್ಕೆಯ ಗರಿಯುದುರಿಸಿತು/ ಸಂಭಾಳಿಸಬೇಕು ಬದುಕ’. ಈ ಪ್ರಕ್ರಿಯೆ ಸಂಪ್ರದಾಯದ ಹೆಣ್ತನದ ನಿರ್ವಚನಗಳನ್ನು ಮುರಿಯುತ್ತ ಸಾಗುತ್ತದೆ. ವಿನಯಾ ಅವರು ವ್ಯಕ್ತಿಕೇಂದ್ರಿತ ಕವಿತೆಗಳಲ್ಲಿ ಅನುಭವಗಳನ್ನು ಹೊಸ ಬಗೆಯಲ್ಲಿ ನಿರ್ವಚಿಸಬಲ್ಲರು. ‘ಶರೀಫ’ ‘ಅಲ್ಲಮ’ ‘ಕನಕ’ ತೇಜಸ್ವಿ’ ‘ ವಿಭಾ’ ಮುಂತಾದವರನ್ನು ಕುರಿತು ಕಾವ್ಯದ ನುಡಿಗಟ್ಟಿನಲ್ಲಿ ಬರೆದಿದ್ದಾರೆ.ಇದರಲ್ಲಿ ಅಲ್ಲಮ ಪದ್ಯ ಕಾಡುತ್ತದೆ. ಒಳ್ಳೆಯ ಪದ್ಯದ ಸಾಲುಗಳು ಕೆಲವೊಮ್ಮೆ ವಿವರಣೆಗೆ ದಕ್ಕುವುದಿಲ್ಲ.
‘ಬಂದವ ಅಲ್ಲಮ ಅಂದೆ ಅರಳಿದ್ದ ಹೂವಿಗೆ
ಅವನ ಪಟಗಾ ತಟ್ಟಿದ ಪಾರಿಜಾತದ ಕುಡಿಗೆ
ಮೈನಿಮಿರಿ ನಿಂತ ನಾಯಿಲಿಂಗನಿಗೆ.
ಯಾಕೆ ನುಡಿಯದೆ ನಡೆದನೋ, ನಿರ್ಜನಕೆ ಜೀವ ಆಡಿದಂತೆ
ಬಂದವ ಬಂದ, ಈ ಜೊಂಪಿನಲಿ
ಕಣ್ಣುಜ್ಜುವ ಮೊದಲೇ ಅತ್ತತ್ತ ದಾಟಿ
ಬರುವನೇ, ಬಾರನೇ
ಅವನ ಉಸಿರ ಹೊಕ್ಕುಬೆಚ್ಚಗಾದ ಗಾಳಿ ನೆತ್ತಿ ನೇವರಿಸುತ್ತಿತ್ತು.’ (ಹಸಬಿ)

ಅಲ್ಲಮ ಹೇಗೆ ಬೇಕಾದರೂ ಬರಬಹುದು. ಅವನು ನಿರ್ಜನದ ಬದುಕಿನ ಆಯ್ಕೆ ಸ್ವಾರ್ಥವನ್ನು ಮೀರಿದ್ದು. ಹಾಗಾಗಿಯೇ ಅವನು ಗುಹೇಶ್ವರಕ್ಕೆ ಹೊಕ್ಕ. ಇಂದಿನ ನಮ್ಮ ಇಡೀ ಬದುಕಿಗೆ ಜೋಂಪು ಆವರಿಸಿದೆ. ಅದು ಅಧಿಕಾರದ, ಅಹಂನ ಜೋಂಪು. ಅಲ್ಲಮ,ಕನಕ,ಶರೀಫ ಇವರೆಲ್ಲ ಇದರಿಂದ ಮೈಕೊಡವಿಕೊಂಡು ಹೊರಬಂದಿದ್ದರು. ವಿನಯಾ ಅವರ ಕಾವ್ಯ ಹಲವು ಕಾರಣಗಳಿಂದ ಮುಖ್ಯವಾಗುತ್ತದೆ. ಇವರ ಕವಿತೆ ಕುಟುಂಬ ಕೇಂದ್ರವನ್ನು ಧಾಟಿಕೊಂಡು ಹೆಚ್ಚು ಸಮುದಾಯ ಕೇಂದ್ರಕ್ಕೆ ಜಿಗಿಯುತ್ತದೆ. ಈ ಅನುಕ್ರಮದಲ್ಲಿ ಅವರು ಭಾಷಿಕ ವಿನ್ಯಾಸಗಳ ಬಗ್ಗೆ ಎಚ್ಚರ ಇದ್ದಾರೆ. ಒಂದು ಹಂತವನ್ನು ಮೀರಿದ ಮೇಲೆ ಕವಿತೆಯ ವಸ್ತುವಿನ ದೃಷ್ಟಿಯಿಂದ ಹೆಚ್ಚು ಪ್ರಾಮಾಣಿಕ ಜಾಡನ್ನು ಹಿಡಿಯುವ ಸಾಧ್ಯತೆಗಳಿರುತ್ತವೆ. ವಿನಯಾ ಅವರಿಗೆ ಇದನ್ನು ಹೇಳಬೇಕಾಗಿಲ್ಲ.

 

Leave a Reply

Your email address will not be published.