ಕಾವ್ಯಯಾನ-5 : ಜಿಜ್ಞಾಸು ಕೋಣೆಯಿಂದ ಹೊರಡುವ ಎಸ್.ಮಂಜುನಾಥ್ ಅವರ ಕಾವ್ಯ

-ಸುರೇಶ ನಾಗಲಮಡಿಕೆ

ನ್ನಡದ ಪ್ರಸಿದ್ಧ ಕವಿ ಎಸ್ ಮಂಜುನಾಥ ಅವರು ೧೯೬೦ರಲ್ಲಿ ಜೋಗದಲ್ಲಿ ಹುಟ್ಟಿದವರು. ಇಂಗ್ಲಿಷ್ ಎಂ. ಎ ಪದವಿ ಪಡೆದವರು. ಹಕ್ಕಿಪಲ್ಟಿ, ಬಾಹುಬಲಿ, ನಂಬಟ್ಟಲು, ಮೌನದ ಮಣಿ, ಮಗಳು ಸೃಜಿಸಿದ ಸಮುದ್ರ, ಕಲ್ಲ ಪಾರಿವಾಳಗಳ ಬೇಟ ಮತ್ತು ‘ನೆಲದ ಬೇರು ನಭದ ಬಿಳಲು’ ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದರು. ಇವರ ಕವಿತೆಗಳು ಕನ್ನಡ ಓದುಗರ ಮನಸ್ಸನ್ನು ಗೆದ್ದಿದ್ದವು. ಇಂತಹ ಮಹತ್ವದ ಕವಿಯೊಬ್ಬರು ಇನ್ನಿಲ್ಲವಾಗಿದ್ದರೆ. ಅವರ ನೆನಪಿನಲ್ಲಿ ಅವರ ಕಾವ್ಯದ ಕಾಳಜಿಗಳನ್ನು ವಿಮರ್ಶಕ ಸುರೇಶ ನಾಗಲಮಡಿಕೆ ಇಲ್ಲಿ ಪರಿಚಯಿಸಿದ್ದಾರೆ. ಅವರ ಕಾವ್ಯವನ್ನು ಓದುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕಾಗಿದೆ. 

smಎಸ್. ಮಂಜುನಾಥ ಅವರು ತಮ್ಮ ಇದುವರೆಗಿನ ಕವಿತೆಗಳನ್ನು ‘ನೆಲದ ಬೇರು ನಭದ ಬಿಳಲು’ ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ. ಇದಕ್ಕೆ ತಮ್ಮದೇ ಪ್ರಸ್ತಾವನೆಯನ್ನು ಬರೆದಿದ್ದಾರೆ. ಇದರಲ್ಲಿ ಅವರ ಕಾವ್ಯದ ಯಾನ ಹಾಗೂ ತಾತ್ವಿಕ ನೆಲೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಎಸ್.ಆರ್. ವಿಜಯಶಂಕರ ಅವರು ತಮ್ಮ ವಿಮರ್ಶಾ ಸಂಕಲನ `ನಿಜಗುಣ’ದಲ್ಲಿ ಇವರ ಬಗ್ಗೆ ಒಂದು ಲೇಖನವನ್ನು ಬರೆದ್ದಿದ್ದಾರೆ. ಇಷ್ಟನ್ನು ಹೊರತುಪಡಿಸಿದರೆ ಗಂಭೀರವಾದ ಲೇಖನಗಳು ಬಂದಿಲ್ಲ. ಎಸ್.ಮಂಜುನಾಥ್ ಅವರ ಕವಿತೆಗಳು ಕನ್ನಡ ಕಾವ್ಯಕ್ಕೆ ಯಾವ ಬಗೆಯ ಕೊಡುಗೆಯನ್ನು ನೀಡಿವೆ? ಬದುಕಿನ ವಿಸ್ಮಯದ ಕುರಿತಾಗಿ ಇವು ಏನನ್ನು ಹೇಳುತ್ತವೆ. ದೈವ-ಸೃಷ್ಟಿ ದ್ವೈತವೊ ಅದ್ವೈತವೋ ಎಂಬ ಜಿಜ್ಞಾಸೆ, ಕಾಲ ಮತ್ತು ಮನುಷ್ಯನ ನಡುವೆ ಸಂಬಂಧಗಳ ಕುರಿತಂತೆ ಇವರ ವೈಚಾರಿಕ ನಿಲುವುಗಳೇನು? ನಿಸರ್ಗ-ಮನುಷ್ಯ ಸಂಬಂಧಗಳ ನಡುವೆ ಇವರು ನಿರ್ಮಿಸುವ ಚೌಕಟ್ಟು ಯಾವ ಬಗೆಯದು? ಎಂಬೆಲ್ಲ ಪ್ರಶ್ನೆಗಳು ಇವರ ಕಾವ್ಯವನ್ನು ಓದಿದ ಮೇಲೆ ಹುಟ್ಟಿವೆ. ಈಗಾಗಲೇ ಮಂಜುನಾಥ್ ಅವರನ್ನು ಭಕ್ತಿ ಕವಿ ಎಂದು ಜಾಗ ಕೊಟ್ಟಿದ್ದಾರೆ. ಇವೆಲ್ಲ ಮೇಲುನೋಟಕ್ಕೆ ನವೋದಯ ಕಾವ್ಯದ ಲಕ್ಷಣಗಳಾಗಿ ಗೋಚರಿಸಿಬಿಡಬಹುದು. ಆದರೆ ಮಂಜುನಾಥ್ ಪುನರ್ ಶೋಧಿಸುವ ಕ್ರಮಗಳನ್ನು ಹುಡಕಬೇಕಷ್ಟೇ. ಇವರ ಕಾವ್ಯದ ಸೃಜನಶೀಲತೆ ಅಡಗಿರುವುದೇ ಇಲ್ಲಿ.

ತಾತ್ವಿಕ ಸಿದ್ಧಾಂತಗಳನ್ನು ವರ್ತಮಾನಕ್ಕೆ ಒಗ್ಗಿಸಿಕೋಡು ಕವಿತೆ ಕಟ್ಟುವುದು ಒಂದು ಕ್ರಮ. ಆ ಪಂಥಗಳ ಎಳೆಗಳು ನಿಜ ಬದುಕಿನಲ್ಲೆ ಉಸಿರಾಡುತ್ತವೆ. ಅವುಗಳನ್ನು ಇತರರಿಂದ ಕಲಿತು ಪ್ರಭಾವ ಆಗುವುದಕ್ಕಿಂತ ನಾವೇ ಶೋಧಿಸುವುದು ಮತ್ತೊಂದು ಕ್ರಮ. ಬಹುಶಃ ಮಂಜುನಾಥರ ಕಾವ್ಯ ಎರಡನೇ ಅಂಶಕ್ಕೆ ವಾಲಿದೆ ಎಂದು ಕಾಣುತ್ತದೆ. ಹಾಗೆ ತಿಳಿದುಕೊಂಡರೆ ಕವಿತೆಯ ಶರೀರವು ಸೃಜನಶೀಲತೆಯಿಂದ ಸ್ಫೋಟಗೊಂಡು ಹೆಚ್ಚು ಜಿಜ್ಞಾಸೆಗಳನ್ನು ನಿರ್ಮಾಣ ಮಾಡಬಹುದು. ಪ್ರಾಯಶಃ ಮಂಜುನಾಥರು ಪು.ತಿ.ನ.ರಿಂದ ಇದನ್ನು ಪಡೆದುಕೊಂಡಿರಬಹುದು. ‘ಹಕ್ಕಿಪಲ್ಟಿ’ ಎಂಬ ನುಡಿಗಟ್ಟು ಕಾಲದ ಸ್ಥಿತ್ಯಂತರವನ್ನು ಸೂಚಿಸುವ ದೊಡ್ಡ ಪ್ರತಿಮೆ. ಮನುಷ್ಯನಿಗೆ ಬದುಕಿನ ಬಗ್ಗೆ ಅತೀವ ಉತ್ಸಾಹ, ನಂಬಿಕೆ ಇದ್ದರೂ ಅಂತಿಮವಾಗಿ ಯಾವುದೋ ಒಂದು ಕಾಲಘಟ್ಟದಲ್ಲಿ ಅದನ್ನು ಕಳೆದುಕೊಂಡುಬಿಡಬಹುದು. ಇವರ ಕವಿತೆಗಳಲ್ಲಿ ಬರುವ ಹಲವು ವ್ಯಕ್ತಿಗಳು ಈ ದಾರಿಯಲ್ಲಿ ಯೋಚಿಸುತ್ತಾರೆ. ಕಾಲವೇ ಕಾಲವೆಂಬುದು ಸಮಯವೋ ಅಥವಾ ಬದುಕಿನ ತಲ್ಲಣಗಳೋ ಎಂಬ ಪ್ರಶ್ನೆಗಳು ಇವರನ್ನು ಕಾಡಿವೆ.
ನಾನೀಗ ಹೋಗಲೇ
ಹಳೆಮರವನ್ನು ಹಿಡಿದು ಬುಡದಲ್ಲಿ
ಎಲೆಟೊಂಗೆ ಕಾಯಿ ಕಸ ತರಗೆಲೆಗಳಾಗಿ ಆಗಿರುವ
ತಿಪ್ಪೇರಾಶಿಯಷ್ಟೇ ಅರ್ಥ ನೀ ನಡೆಸಿದ್ದಕ್ಕೆ
ಎಂದು ಅಲ್ಲಾಡಿಸಲೇ?
ಅದರ ದಟ್ಟ ನೆರಳಲ್ಲಿ ಆಗಾಗ ನಾವು ತಣಿದಿದ್ದೇವಲ್ಲವೇ
ಬೀಳುವ ಮರಕ್ಕೆ ಕೊಡಲಿಯೆತ್ತಲಾರೆ. (ಪುಟ 43)

ಕಾಲ ಮತ್ತು ಬದುಕು ವಿಸ್ಮøತಿಯ ಜಗತ್ತಿನಲ್ಲಿ ಸಂಚರಿಸುತ್ತದೆ ಎಂದು ಇವರ ಕವಿತೆ ಬಹುಪಾಲು ನಂಬುತ್ತದೆ. ಮನುಷ್ಯ ಸಂಬಂಧ ಇರುವಿಕೆಯಿಂದ ಆಗುವಿಕೆಯ ಕಡೆ ಹೆಚ್ಚು ಚಲಿಸುತ್ತದೆ. ಅನುಭವವು ಬದುಕಿಗೆ ಸಹಾಯಕವಾಗಬಹುದು. ಆದರೆ ಕಾಲ ಇದಕ್ಕೆ ಬಹಳಷ್ಟು ಅವಕಾಶ ನೀಡಲಾರದು.

ಅಂಗೈ ನೆಲಕ್ಕೂರಿ ಏಳುವಂತೆಯೇ ಹಿಂಜರಿದ ಮೂಲೆಗೆ
ಮುಂದೆ ಸರಿದೆ ನಾನು; ಮಧ್ಯೆ ಮಿಂಚಿದವರಿಬ್ಬರು
ನಾ ಕಳೆದಿರುವ ಹುಡುಗ. ಮುದುಕ ಕಳೆದಿರುವೆ ನಾನು
ಓದುತ್ತಿರುವಂತೆಯೇ ಅಕ್ಷರಗಳು ಹಾರಿಹೋಗುವ ಪುಸ್ತಕ
ಸಾವ ಮಂಚದ ಮೇಲೆ ಮುದುಕನಂತೆಯೇ ಅನಿಸುತ್ತದೆ
ಇಲ್ಲ ಬದುಕಿದಂತೆಯೇ ಇಲ್ಲ (ಪುಟ 45)

ಸಾವು ಮನುಷ್ಯನ ಯಾನದಲ್ಲಿ ಒಂದು ಅಂಶವಷ್ಟೆ. ಅದರ ಮಧ್ಯೆ ಇರುವ ಕ್ಷಣಗಳು ಬಹುಮುಖ್ಯ. ಮಂಜುನಾಥ ಅವರು ಸಾವನ್ನು ಗಂಬೀರವಾದ ವಸ್ತುವೆಂದು ಭಾವಿಸಿಲ್ಲ. ಸಾವು ಮತ್ತು ಮಂಚದ ಮೇಲೆ ಇರುವ ಮುದುಕ ಒಂದೇ ಎಂದು ನೋಡುವ ರೀತಿ ಇದನ್ನು ಹೇಳುತ್ತದೆ. ಈ ಬಗೆಯ ಚಿಂತನೆಗೆ ಪ್ರಕೃತಿಯ ಪ್ರತಿಮೆಗಳು ಬಂದಿವೆ. ಕಾಲ-ಮನುಷ್ಯ-ಪ್ರಕೃತಿಯೂ ಇವರ ಕವಿತೆಯ ಪ್ರಧಾನ ಅಂಶಗಳು ಎಂದು ಭಾವಿಸಬಹುದು. ಈ ಮೂರು ಅಂಶಗಳಲ್ಲಿ ಮನುಷ್ಯ, ಕಾಲ ಮತ್ತು ಪ್ರಕೃತಿಯ ನಡುವೆ ಕ್ಷಣಿಕನಾಗುವ ಪ್ರಕ್ರಿಯೆಯೂ ಕಂಡುಬರುತ್ತದೆ. ಅದೊಂದು ಬಗೆಯ ಲಯವೆಂದು ಮಂಜುನಾಥ್ ಕರೆಯುತ್ತಾರೆ. ಇವರ ಚಿಂತನಾ ಕ್ರಮ ಇರುವುದು ಪ್ರಕೃತಿಯ ಎಲ್ಲಾ ವಲಯಗಳಿಗೂ ಪುನರ್‍ಸೃಷ್ಟಿ ಕಂಡು ಬಂದು ಮನುಷ್ಯ ಇದರಿಂದ ದುಃಖ ಅನುಭವಿಸುತ್ತಾನೆ.
ಕಪ್ಪು ಗುಳಿ ಕಣ್ಣುಗಳ ನೆಟ್ಟು ನೋಡುತ್ತಿದೆ
ಸಂವತ್ಸರಗಳ ಸುಳಿಸುತ್ತಿರುವ ಕಣ್ಣುಗಳಲ್ಲಿ ಏನಿದೆ
ಒಡಲೊಳಕ್ಕೆ ಚಾಚಿಕೊಳ್ಳುವ ಅಲೆ ಎದ್ದಿದೆ. (ಪುಟ 253)
‘ಜೀವಯಾನ’ದಲ್ಲಿ ಮನುಷ್ಯ ಪ್ರಕೃತಿಯನ್ನು ಎದುರು ಹಾಕಿಕೊಳ್ಳುವುದು ಸಾಧ್ಯವಿಲ್ಲದ ಮಾತು. ಅದು ಧ್ಯಾನಸ್ಥಿತಿಯನ್ನು ರೂಪಿಸುತ್ತದೆ.

ಹಾಗೆಯೇ ಪಲ್ಲಟಗಳಿಗೂ ಕಾರಣವಾಗುತ್ತದೆ. ಭಕ್ತಿ ಎನ್ನುವುದು ಮಂಜುನಾಥ್ ಅವರಲ್ಲಿ ಈಗಾಗಲೇ ಚರ್ಚಿತಗೊಡಿರುವ ಶರಣಾಗತಿ ನೆಲೆಯಲ್ಲಿ ಕಂಡುಬರುವುದಿಲ್ಲ ಅಥವಾ ಅದ್ವೈತ ವಚನ ಕೇಂದ್ರವು ಹೊರಡಿಸುವ ನೆಲೆಯಿಂದಲೂ ಕಾಣಿಸುವುದಿಲ್ಲ. ಭಕ್ತಿ ಅಂತರ್ಜಲದಂತೆ ಕಾಣಿಸಿಕೊಳ್ಳುತ್ತದೆ ಅಷ್ಟೆ. ಆದರೆ ಬಹಿರಂಗದಲ್ಲಿ ನಮಗೆ ದಟ್ಟವಾಗಿ ಗೋಚರಿಸುವುದು ಪ್ರಕೃತಿಯೊಂದಿಗಿನ ಮನುಷ್ಯನ ಮುಖಾಮುಖಿ ಮತ್ತು ಧ್ಯಾನಸ್ಥಿತಿ. ಇದಕ್ಕೆ ಬಹುದೊಡ್ಡ ನಿದರ್ಶನ `ಬಾಹುಬಲಿ’ ಎಂಬ ಕವಿತೆ. ಕಥನ/ಸ್ವಗತ ರೂಪದ ಧಾಟಿಯಲ್ಲಿ ಸಾಗುವ ಈ ಕವಿತೆ ಬಾಹುಬಲಿಯನ್ನು ಪುರಾಣ ವ್ಯಕ್ತಿಯಾಗಿ ಕಾಣುವುದೇ ಇಲ್ಲ. ಸಾಮಾನ್ಯತೆಯ ಆವರಣದಲ್ಲಿ ಜೀವ-ಧ್ಯಾನಸ್ಥಿತಿ-ಪ್ರಕೃತಿಯ ಅಖಂಡತೆ ಇವು ಏಕತ್ವವಾಗುವುದನ್ನು ಕಾಣಬಹುದು.
ಹಠವಿಲ್ಲ ಅವ್ವ ಸುಮ್ಮನೆ ಬಂದೆ
ಗಾಳಿಮಳೆ ಬಿಸಿಲಲ್ಲಿ ದುಂಡಗೆ ನಿಂತೆ
ನಿಂತದ್ದೆ ನನ್ನ ಬೇರಿಳಿದು ತಿರೆಗೆ
ಕಲ್ಲೆದೆಯ ಮೇಲೊಂದು ಹೂವರಳಿ ಬಂತು
ಸುತ್ತ ಬೆಟ್ಟದ ಆದ್ರ್ರ ಹಸಿರು ನೋಟ
ತಳಗೆ ಬುಡದಲ್ಲಿ ಸ್ತಬ್ಧ ಕೊಳ
ಎಲ್ಲವನು ನೋಡುತ್ತಾ ಸುಖಿಸುತ್ತಾ ಇದ್ದೆ
ನೋಡ ನೋಡುತ್ತಾ ಆಗಿಹೋದೆ
ಸರಿಯಾಗಿ ಕರೆದರೆ ಕದಲಿ ಬಿಡುವೆ
ಜೀವಾಳ ಕೂಗಿಗೆ ಎದ್ದು ಬರುವೆ (ಪುಟ 255)
ಸಾಮಾನ್ಯ ಮನುಷ್ಯನಾಗಿ ಕಾಣಿಸಿಕೊಳ್ಳುವ ಬಾಹುಬಲಿ ಮಾರು ಹೋಗಿದ್ದು ಪ್ರಕೃತಿಯ ವಿಸ್ಮಯಕ್ಕೆ. ಆವಿಸ್ಮಯವೇ ಆತನಲ್ಲಿ ಧ್ಯಾನಸ್ಥಿತಿಯನ್ನು ಸೃಷ್ಟಿಮಾಡಿದೆ. ಜೈನ ತತ್ವಜ್ಞಾನದಲ್ಲಿ ಬರುವ ಯಾವ ಕಾರಣಗಳೂ ಇಲ್ಲಿ ಗೋಚರಿಸುವುದಿಲ್ಲ. ಜೀವಾಳ ಕೂಗು ಎಂದರೆ ಯಾವುದು? ಎಂಬ ಪ್ರಶ್ನೆಯೂ ಮೂಡಬಹುದು. ಆತನ ಇಂದ್ರಿಯಗಳು ಏಕಾಗ್ರತೆಯಿಂದ ಭಂಗಗೊಂಡಿಲ್ಲ. ಭಂಗವಾಗದ ಹಾಗೆ ಪ್ರಕೃತಿ ರೂಪಿಸಿದೆ. ಇಂದ್ರಿಯ ಜಗತ್ತನ್ನು ಭಗ್ನಗೊಳಿಸುವುದು ಲೌಕಿಕವೇ ಆಗಬಹುದು. ಬಾಹುಬಲಿ ‘ನೆಲದ ಬೇರು-ನಭದ ಬಿಳಿಲಿ’ನಲ್ಲಿ ಏಕನಾಗಿದ್ದಾನೆ.

ಈ ಬಗೆಯ ನೆಲೆಯಲ್ಲಿ ಮಂಜುನಾಥರು ಪು.ತಿ.ನ.ರಿಂದ ಪಡೆದುಕೊಂಡು ಮತ್ತಷ್ಟು ಮುಂದುವರೆದಿದ್ದಾರೆ. ಎಚ್.ಎಸ್.ರಾಘವೇಂದ್ರ ರಾವ್ ಅವರು ಪು.ತಿ.ನ. ಕವಿತೆಗಳ ವಿಶಿಷ್ಟತೆಯ ಅಧ್ಯಯನ ಮಾಡುವಾಗ ತಾಳುವ ಒಂದು ತೀರ್ಮಾನ ಹೀಗಿದೆ: ಪು.ತಿ.ನ. ಅವರಿಗೆ ಮನುಷ್ಯ ಸಂಬಂಧಗಳಿಂದ ಲೇಪಿತವಾಗದ ಪ್ರಕೃತಿ ಲೋಕವು ಅವಲೋಕನ ಸಾಮಗ್ರಿಯಾಯಿತು. ಅತಿ ಸೂಕ್ಷ್ಮವಾದ ನಿರೀಕ್ಷಣೆಯ ಫಲವಾದ ವಿವರಗಳನ್ನು, ತತ್ವಗಳನ್ನು ಕೊಡುವುದು ಅವರಿಗೆ ಸಾಧ್ಯವಾಯಿತು (ಪುಟ 104, `ಹಾಡೆ ಹಾದಿಯ ತೋರಿತು’). ಆದರೆ ಮಂಜುನಾಥ್ ಅವರು ಮನುಷ್ಯ ಸಂಬಂಧ ಮತ್ತು ಪ್ರಕೃತಿಯ ವಿಸ್ಮಯವನ್ನು ಅದ್ವೈತವೆಂದು ಭಾವಿಸಿದಂತೆ ಇದೆ. ಮನುಷ್ಯ ಕೆಲವೊಮ್ಮೆ ವಿಸ್ಮಯ ಮತ್ತು ಕಲ್ಪನಾ ಲೋಕದಲ್ಲೂ ಬದುಕುತ್ತಿರುತ್ತಾನೆ; ಎಂದು ಭಾವಿಸಿಯೂ ಈ ಕ್ರಮಕ್ಕೆ ಕೇವಲ ಪ್ರಕೃತಿಯ ಪ್ರತಿಮೆಗಳಿಂದ ಕಟ್ಟಿ ಅದರ ವೈಚಾರಿಕತೆಗೆ ಇವರು ಭಂಗ ತರುವುದಿಲ್ಲ. ಹಾಗಿದ್ದರೆ ಪು.ತಿ.ನ. ಅವರ ಪ್ರಭಾವದಲ್ಲೇ ಇರಬೇಕಾಗಿತ್ತೇನೋ. ಎಲ್ಲದರಲ್ಲೂ ಜೀವದ ಉಸಿರನ್ನು ಕಾಣುವ ಮಂಜುನಾಥ್ ಅವರ ಕಾವ್ಯ, ಸಂಬಂಧದ ಕೊಂಡಿಯನ್ನು ಮುರಿಯುವುದಿಲ್ಲ.
ಸಮುದ್ರ ಉಕ್ಕಿತು! ನೆಲದವರೆಲ್ಲ
ಅದ್ದಿಹೋದರು ಜಲದಲ್ಲಿ
ನಾವು ನಾವೆ
ಅಲೆಗಳಾಗಿ ಏರಿಳಿಯತೊಡಗಿದವು
ಕರಗಿಹೋಗುವ ಮೋಡ ದಿಬ್ಬಣವ ನೆಚ್ಚಿ
ಕಡೆಗೆ ತಾನೊಬ್ಬಂಟಿ ನಿಲ್ಲುವ ಪರಿಗೆ
ಆಕಾಶ ಕೊರುಗತ್ತದೆ. (ಪುಟ 301)

ಇವೆರಡೂ ಚಿತ್ರಗಳಿಗೆ ಸೌಂದರ್ಯ ಮೀಮಾಂಸೆಯನ್ನು ಸದ್ದಿಲ್ಲದೆ ಕಟ್ಟಿಕೊಟ್ಟಿದ್ದಾರೆ. ಮನುಷ್ಯ ತಾನೇ ಸಮುದ್ರದ ಅಲೆಗಳಲ್ಲಿ ಲೀನವಾಗುವುದು, ಅದೊಂದು ತನ್ಮಯತೆ. ಸೃಷ್ಟಿಯ ಲೋಕದಲ್ಲೂ ಜೀವಯಾನವನ್ನು ಗುರುತಿಸಬೇಕಾಗುತ್ತದೆ.

ಕವಿಯಾದವನು ಪ್ರಕೃತಿಯ ಸೌಂದರ್ಯವನ್ನು ಮಾತ್ರ ವರ್ಣಿಸುವುದು ಸಹಜ. ಅದನ್ನು ಅನುಭವಕ್ಕೆ ಸ್ವೀಕರಿಸುವಾಗ ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ರಮ್ಯ ಕವಿ ಎಂದು ಹಣೆಪಟ್ಟಿ ಹಚ್ಚುವ ಅಪಾಯಗಳೂ ಇವೆ. ಅದರ ಒಳಗುಟ್ಟನ್ನು ಗ್ರಹಿಸಿ ತಾನು ನಿರ್ಮಿಸಿಕೊಳ್ಳುವ ವೈಚಾರಿಕತೆ ಹಾಗೂ ದರ್ಶನದಲ್ಲಿ ಕವಿ ಭಿನ್ನವಾಗುತ್ತಾ ಹೋಗುತ್ತಾನೆ. ಇದಕ್ಕೆ ನವೋದಯ ಕಾವ್ಯವೇ ಸಾಕ್ಷಿ. ಮಂಜುನಾಥರಿಗೆ ಈ ಎಲ್ಲಾ ಸಂಗತಿಗಳು ಎದುರಿಗಿವೆ. ಮಾನವನಿಗೆ ಎದುರುಗೊಳ್ಳುವ ಎಲ್ಲಾ ಘಟನೆಗಳು ಅಮುಖ್ಯವಲ್ಲ. ಮೂಗ ಪ್ರಪಂಚದ ಅನಾವರಣ ಹಾಗೂ ಸಂಘರ್ಷಗಳು, ಅಗೋಚರ ಶಕ್ತಿ ಇವುಗಳ ಅವ್ಯಕ್ತ ಸಂಬಂಧ ಅನೇಕ ಕವಿತೆಗಳಲ್ಲಿ ನುಸುಳುತ್ತವೆ. ಪೂರ್ವಜನ್ಮ ಅನ್ನುವುದಕ್ಕಂತ ಜೀವದ ಸ್ಥಿತ್ಯಂತರಗಳನ್ನು ಇವರ ಕವಿತೆಗಳು ಅನೇಕತೆಗೊಂಡಿವೆ. ಒಳಗುಮಾಡಿ ಪೂರಕವಾಗಿ ಬರುವ ಮನುಷ್ಯ ಲೋಕದ ಹಲವು ವರ್ತನೆಗಳು ಇದಕ್ಕೆ ನಿದರ್ಶನವೆನ್ನಬಹುದು. ಇವೆಲ್ಲವೂ ಒಂದು ಶಕ್ತಿ ಅಥವಾ ಮೂಲದ ಕುರಿತೂ ಇವರಿಗೆ ಜಿಜ್ಞಾಸೆ ಇದೆ. ದೈವ-ಸೃಷ್ಟಿಗಳ ಹುಡುಕಾಟದ ವಿಧಾನವು ಅನುಭವದ ಚೌಕಟ್ಟಿನಲ್ಲೇ ಬರುತ್ತದೆ ವಿನಃ ಯಾವುದೇ ನಿರ್ದಿಷ್ಟ ಭಕ್ತಿಪಂಥಗಳ ಪ್ರಭಾವವನ್ನು ನಿಚ್ಚಳವಾಗಿ ಗುರುತಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಸೃಷ್ಟಿಲೋಕವನ್ನು ನಂಬುವವನು ಅದರ ಕರ್ತನನ್ನು ನಂಬಬೇಕು. ಆಗ ಬದಲಾಗುವ ನುಡಿಗಟ್ಟೇ ಬೇರೆ. ಮಂಜುನಾಥರ ಬಹುಪಾಲು ಕವಿತೆಗಳಲ್ಲಿ ಸೃಷ್ಟಿಯ ಜಿಜ್ಞಾಸೆಯ ವಿಧಾನದಲ್ಲಿ ಭಕ್ತಿ ಬರುತ್ತದೆ.
ಗೂಢ ತಿರುಳಿನ ಹಾಗೆ ಪ್ರಕಟಗೊಳ್ಳೋಣ
ಕಾಯ ಒಡೆದು
ನಂದ ಬಟ್ಟಲ ದಲದ ಪಲ್ಲಂಗದಲಿ ನುಸುಳಿ
ಸೇರೋಣ ನೀನು ನಾನೂ
ಇಳಿಸು ನಿನ್ನ ಬೆಳಕ ನನ್ನ
ಹೃದಯದೊಳಗೆ
ಕರಗಿ ಹೋಗಲಿ
ನಮ್ಮ ಅಗಲಿಕೆಯ ಬ್ರಹ್ಮಾಂಡ ಭಾರ (ಪುಟ 165)

ದೇವರು ಎಂಬ ಪದಕ್ಕೆ ಬೆಳಕು ಎಂಬ ಅರ್ಥವೂ ಇದೆ. ದೇವರು-ಮನುಷ್ಯ ಎಂಬ ದ್ವೈತವನ್ನು ಮುರಿದು ಒಂದಾಗುವ ಪ್ರಕ್ರಿಯೆ ಇದೆ.
ಮತ್ತೊಂದು ಕಡೆ-

ರುದ್ರಭೂಮಿಯಲ್ಲಿ ಇದು
ಭುವಿ ಧರಣಿ ವಸುಂಧರೆ
ಎಂಬ ಎಲ್ಲ ಹೆಸರು
ಎಂದೂ ಬರುತ್ತದೆ. ಸೃಷ್ಟಿಯೂ ಜೈನರ ಸಂಕೇತವೆಂದು ಭಾವಿಸಿದರೆ ಮಾನವಲೋಕ ಕಟ್ಟಿಕೊಂಡಿರುವ ಮತ್ತೊಂದು ಅರ್ಥವನ್ನು ಹೇಳುತ್ತದೆ. ಇಂಥ ಕಡೆ ಕೆಲವೊಮ್ಮೆ ದ್ವಂದ್ವದ ಬಗೆಯಲ್ಲಿ ಇವರ ಕವಿತೆಗಳು ಕಾಣಿಸಿಕೊಳ್ಳುತ್ತವೆ.

ಏನ ಹೇಳಲಿ ಶಿವನೇ
ನಿನ್ನ ಡಮರುಗದ ಎಷ್ಟೊಂದು ನಾದವನು ಹೀರಿಕೊಳ್ಳುತ್ತಿರುವೆ ನಾನು
ಎಷ್ಟು ತಾಂಡವವನು ಮೈದುಂಬಿಕೊಳ್ಳುತಿರುವೆ
ಇವರ ಕವಿತೆ ಶೋಧಿಸುವ ಮತ್ತೊಂದು ನೆಲೆ ದೇವರ ವ್ಯಕ್ತಿತ್ವಕ್ಕಿಂತ ಅಸ್ತಿತ್ವದ್ದು ಎಂದು ಕಾಣುತ್ತದೆ. ಇದನ್ನು ಜೀವಯಾನಕ್ಕೆ ಅನ್ವಯಿಸುತ್ತಾರೆ. ಈ ಯಾನದಲ್ಲಿ ಪ್ರತಿಯೊಂದು ಜೀವಿಯೂ ತಮ್ಮ ಇರವಿನ ಪ್ರಶ್ನೆಯನ್ನು ಎದುರಿಸಲೇಬೇಕು. ಇದೊಂದು ಬಗೆಯ ವೈಜ್ಞಾನಿಕ ಕ್ರಮ. ಪ್ರಕೃತಿಯ ಅಸ್ತಿತ್ವದ ಹುಡುಕಾಟ ಹಾಗೂ ಮಾನವ ಬದುಕಿನ ಅಸ್ತಿತ್ವಕ್ಕೆ ಮುಖಾಮುಖಿಯಾಗುವುದು ಇವರ ಕಾವ್ಯಕ್ಕೆ ಸಾಧ್ಯವಾಗಿದೆ. ಇವರ ಸಮಕಾಲೀನರಲ್ಲಿ ಎಸ್.ಜಿ. ಸಿದ್ದರಾಮಯ್ಯ, ಲಕ್ಷ್ಮೀಪತಿ ಕೋಲಾರ ಇದೇ ಕಾಲ್ನಡಿಗೆಯಲ್ಲಿ ಇದ್ದಾರೆ. ಇರವಿನ ಪ್ರಶ್ನೆ ಬಂದಾಗ ಆತಂಕದ ಮಾತು ಎದುರಾಗುತ್ತದೆ. ಹಾವು ಕವಿತೆ ಇದಕ್ಕೆ ದೊಡ್ಡ ನಿದರ್ಶನ.
ಮುಳ್ಳು ಕಲ್ಲುಗಳ ಮೇಲೆ ಈ ಗೋಳು ಮೈಯನ್ನೆಳೆದು
ಹಾಯುವ ನರಕ
ದೇವರಿಗೆ ಸವಾಲು; ಹೊರಳುತಿರಲು
ಹೊಟ್ಟೆ ಬಾಲಗಳೇ ನನ್ನ ವೈರಿಯೆನಿಸಿರಲು
ಮತ್ಯಾರ ದ್ವೇಷಿಸುವುದು?
ಕತ್ತಲ ಹುತ್ತದೊಳಗಿಳಿವ ಹೀನಾಯ. ಹಕ್ಕಿ ಬಿಡಿ
ಯಾವ ನಾಯಿಗೂ ಇರದು ಅರ್ಥವಾಗುವುದು
ಇನ್ನೊಂದು ಹಾವಿಗೇ (ಪುಟ 324)

ಸೃಷ್ಟಿಲೋಕದ ಪ್ರತಿಯೊಂದು ಜೀವಿಯೂ ಈ ಬಗೆಯ ಸಂಕಷ್ಟವನ್ನು ಎದುರಿಸಲೇಬೇಕು. ಇದರ ನಡುವೆ ಅಸ್ತಿತ್ವದ ಪ್ರಶ್ನೆಯೂ ಮುಖ್ಯವಾಗುತ್ತದೆ. ಬದುಕಬೇಕೆಂಬ ಬಯಕೆಯಿಂದ ಮಾತ್ರ. ಇಂಥ ಸಂದರ್ಭದಲ್ಲಿ ನವೋದಯದ ಲಕ್ಷಣ ಮತ್ತು ನವ್ಯದ ತಾತ್ವಿಕತೆಗಳನ್ನು ಅರಗಿಸಿಕೊಂಡು ಮೀರುವ ಬಗೆ ಕಂಡು ಬರುತ್ತದೆ. ಈ ಕವಿತೆಗಳಿಗೆ ದಕ್ಕಿರುವ ಮತ್ತೊಂದು ಕಲಾನುಭವ-ಭಕ್ತಿ-ದರ್ಶನ ಇವು ಮೂರನ್ನೂ ಅಭಿವ್ಯಕ್ತಿಸುವಾಗ ಹೊರಡುವ ರೂಪಕ ವಿಧಾನಗಳು, ಭಕ್ತಿಯು ನಾಸ್ತಿಕ ವಿಧಾನದಲ್ಲಿ ಬರುತ್ತದೋ ಆಸ್ತಿಕ ವಿಧಾನದಲ್ಲಿ ಹೊರ ಹೊಮ್ಮುತ್ತದೋ ಎಂಬ ಜಿಜ್ಞಾಸೆಯನ್ನು ಇವರ ಕವಿತೆ ಅನಾವರಣಗೊಳಿಸುತ್ತದೆ. ಕೆಲವೊಮ್ಮೆ ಭಕ್ತಿಯ ಬೆನ್ನಲ್ಲಿ ಕಲೆಯ ಅಸ್ತಿತ್ವವನ್ನು ತೆರೆದಿಡುವ ಪ್ರಯತ್ನವೂ ಇದೆ.
ಪುಟ್ಟಕಲ್ಲಿಗೂ ಹುಲ್ಲಿಕಡ್ಡಿಗೂ
ಆಕಾರ ಬಂಧ
(ಪುಟ 339)
ಕಲ್ಲು ನೋಡೋರಿಗೆ ಲಿಂಗ ಕಾಣೋದಿಲ್ಲ
ಕಣ್ಣೆ ಕಲ್ಲಾದವರಿಗೆ ಬೆಳಕಿಲ್ಲ
ಎದೆ ಲಿಂಗದ ಮೇಲೆ
ಬಾಗಿಸಿಕೊಂಡಲ್ಲದೆ
ಕಲ್ಲ ಮೇಲೆ ಬೀಳೋದು ಬೆಳಕಲ್ಲ (ಪುಟ 340)

ದೇವರು, ಭಕ್ತಿಯ ಪ್ರಶ್ನೆ ಬಂದಾಗ ನಂಬಿಕೆಯ ಪ್ರಶ್ನೆಯೂ ಎದುರಾಗುತ್ತದೆ. ಈ ಸಂದರ್ಭದಲ್ಲಿ ಲಕ್ಷ್ಮೀಶ ತೋಳ್ಪಾಡಿಯವರ ಎರಡು ಹೇಳಿಕೆಗಳನ್ನು ಗಮನಿಸಬಹುದು. ಇವೇ ಆತ್ಯಂತಿಕವಲ್ಲದಿದ್ದರೂ ಮಂಜುನಾಥ ಅವರ ಕಾವ್ಯದ ಹಿನ್ನೆಲೆಯಲ್ಲಿ ಮುಖ್ಯವೆಂದು ಭಾವಿಸಬಹುದು.
1.ನಮ್ಮ ಅನುಭವಕ್ಕಿಂತ ಭಿನ್ನವಾದ ಅನುಭವವಿದೆ ಎಂಬ ತಿಳಿವಳಿಕಯೇ ಎಲ್ಲ ಬೆಳವಣಿಗೆಯ ಮೂಲ. ಹಾಗೆಯೇ ಇನ್ನೊಂದು ರೀತಿಯಲ್ಲಿ ಎಲ್ಲ ಸಂಕಟಗಳ ಮೂಲ ಕೂಡ.
2 ಮಾನವನ ಇತಿಹಾಸವೆಂದರೆ ಅಂತರಂಗದ ಇತಿಹಾಸ ಕೂಡ. ತಮ್ಮ ಸೃಷ್ಟಿಯಲ್ಲಿ ತಾನು ಅಡಗಿ ಆ ಕಾರಣದಿಂದ ಮಾನವನ ಮನಸ್ಸನ್ನೂ ಹುಡುಕಾಟಕ್ಕೆ ಹಚ್ಚಿ ತನ್ನ ಹುಡುಕಾಟದ ಮೂಲಕವೇ ತಾನು ಉದ್ಧಾರವಾಗುವಂತೆ ಸೃಷ್ಟಿಯನ್ನು ರೂಪಿಸಿದ ಉದ್ಧರಕ ತತ್ವವೇ ದೇವರು. (ಪುಟ 119-120 ನುಡಿಹಾರ-2 ಸಂ. ನಾ. ಮೊಗಸಾಲೆ, ಕಾಂತಾವರ ಕನ್ನಡ ಸಂಘ)
ಪಟ್ಟದಕಲ್ಲಿನ ಪದ್ಯಗಳಲ್ಲಿ ಜಡ ಎಂದು ಸ್ಥಾಪಿಸಲ್ಪಟ್ಟ ಲೋಕಕ್ಕೆ ಜೀವವನ್ನು ತುಂಬುವ ಪ್ರಯತ್ನ ಗಾಢವಾಗಿದೆ. ಈ ಕವಿತೆಗಳೆಲ್ಲವೂ ಕಲಾಕೃತಿಗಳಂತೆ ಗೋಚರಿಸುತ್ತವೆ. ಇಲ್ಲಿ ದೇವರು ಪ್ರಕ್ಷಿಪ್ತ ಅಷ್ಟೆ.

ಜೀವ, ದೇವ ಮತ್ತು ಕಲ್ಲು
ಈ ಗೂಢವ
ಭೇದಿಸಬಲ್ಲರು ಯಾರು
(ಪುಟ 349)
ಕಟೆದಿರುವ ಶಿಲ್ಪ ವೃಕ್ಷರೂಪ
ಯಾಕಿರುವುದಿಲ್ಲ
ಆಗಂತುಕವಾಗಿ
(ಪುಟ 351)
ನೆಲದ ಬೇರು ನಭದ ಬಿಳಲು
ಹೆಣೆದ ಜಟೆ
ಚಂದ್ರ ಬಂದದ್ದು ತಾನು ಚೆಂದಗೊಳಲೆಂದೇ
ಕಳೆ ಶಿವನ ಕರುಣೆ
(ಪುಟ 355)

ರೂಪಕಶಕ್ತಿಯ ಚೌಕಟ್ಟಿನಲ್ಲಿ ಪ್ರಕೃತಿಗೂ-ಸೃಷ್ಟಿಕರ್ತನಿಗೂ ಅಭೇದವನ್ನು ಕಲ್ಪಿಸಲಾಗಿದೆ. ಇಲ್ಲಿನ ಭಾಷೆಯು ಆಶಯ ಮತ್ತು ಆಕೃತಿಗೂ ಯಾವುದೇ ಅಡೆತಡೆಗಳಿಲ್ಲ.

ಕಾವ್ಯದ ಗುಣ ಕುರಿತು ಮಂಜುನಾಥ ಅವರ ಕವಿತೆಗೆ ಸಾಕಷ್ಟು ಮಹತ್ವವಿದೆ. ಪ್ರಾಯಶಃ ಸಮಕಾಲೀನರಲ್ಲಿ ಕವಿತೆಗೆ ಕಲಾಕೃತಿಯ ರೂಪವನ್ನು ಕೊಟ್ಟವರಲ್ಲಿ ಇವರೂ ಒಬ್ಬರು. ಆದರೆ ಆಶಯಗಳ ದೃಷ್ಟಿಯಿಂದ ಸಾಕಷ್ಟು ಸಾಧಿಸಬಹುದಿತ್ತು ಎನಿಸುತ್ತದೆ. ಇವರ ಕಾವ್ಯ ವರ್ತಮಾನದ ಸಂಗತಿಗಳಿಗೆ ಹೆಚ್ಚು ಸ್ಪಂದಿಸುವುದಿಲ್ಲ. ಪ್ರಾರಂಭದಲ್ಲಂತೂ ವಿಮುಖಗೊಂಡಂತೆ ಗೋಚರಿಸುತ್ತದೆ. ಸಾಮಾಜಿಕ ಪ್ರಜ್ಞೆಯನ್ನು ಕಾವ್ಯದ ರೂಪಕ ಲೋಕದಲ್ಲಿ ಹಿಡಿದಿಟ್ಟಿದ್ದರೆ ಬೇರೊಂದು ವ್ಯಾಪ್ತಿ ಲಭ್ಯವಾಗುತ್ತಿತ್ತು. ಬಹುಶಃ ಮಂಜುನಾಥ ಅವರ ದಾರಿ ಇದಲ್ಲವೇನೋ? ಇದನ್ನು ಮುರಿಯುವುದಕ್ಕೆ ಅವರು ಜೀವಯಾನದಲ್ಲಿ ಹಸಿವಿನ ಪ್ರಶ್ನೆ ಗಂಭೀರವಾಗೇ ಬಂದಿದೆ. ಆದರೆ ಅಲ್ಲಿಯೂ ಸಂವಹನಶೀಲತೆ ಅಡ್ಡಿಯಾದಂತೆ ಕಾಣುತ್ತದೆ. ಜೀವಯಾನದಲ್ಲಿ ವರ್ತಮಾನವನ್ನು ಕಾವ್ಯಗುಣದಲ್ಲಿ ತರಲು ಗಂಭೀರ ಪ್ರಯತ್ನವಿದೆ. ಆದರೆ ಬೆಡಗಿನ ಆಯ್ಕೆಯು ಏನನ್ನು ಸೂಚಿಸುತ್ತದೆ ಎಂಬುದು ಪ್ರಶ್ನೆ. ಹಿಂದೆ ಮಧುರಚೆನ್ನರು ಇದನ್ನು ಸಾಕಷ್ಟು ಶೋಧನೆಗೆ ಒಡ್ಡಿದ್ದರು. ಜೀವಯಾನದಲ್ಲಿ ಸಂಪ್ರದಾಯಸ್ಥ ಕುಟುಂಬಗಳ ಹಸಿವಿನ ಲೋಕ ಸದ್ದಿಲ್ಲದೆ ಪ್ರವೇಶ ಪಡೆದುಕೊಂಡಿದೆ. ಮತ್ತಷ್ಟು ಅಂತರಂಗದ ಹುಡುಕಾಟವೂ ಇದೆ. ಅಂತಿಮವಾಗಿ ಮಂಜುನಾಥ ಅವರು ಈಚಿನ ಕನ್ನಡ ಕಾವ್ಯಕ್ಕೆ ಅಪರೂಪವಾಗಿದ್ದ ಕಲಾನುಭವ-ಲೋಕಾನುಭವಗಳನ್ನು ಏಕತ್ರಗೊಳಿಸುವ ಪ್ರಯತ್ನದಲ್ಲಿದ್ದಾರೆ.

Leave a Reply

Your email address will not be published.