ಕಾವ್ಯಯಾನ-4: ಗೋರೋಜನ ಮತ್ತು ಕಹಳೆ: ಎನ್ಕೆ ಕಾವ್ಯ

-ಸುರೇಶ ನಾಗಲಮಡಿಕೆ

ಎನ್ಕೆ ಹನುಮಂತಯ್ಯ ನವರ ಕಾವ್ಯ ಒಂದು ತಲೆಮಾರನ್ನು ಎಚ್ಚರಿಸುವ ಪ್ರಜ್ಞೆಯಾಗಿ ಕಾಣುತ್ತದಯೇ? ಎಂಬ ಪ್ರಶ್ನೆ ಆರಂಭದಲ್ಲೇ ಹುಟ್ಟುತ್ತದೆ. ಇವರು ಬರೆಯುವ ಕಾಲಕ್ಕೆ ಕಾವ್ಯ ತನ್ನದೇ ದಾರಿಗಳನ್ನು ಕಂಡುಕೊಳ್ಳಬಯಸಿತ್ತು. ದಲಿತತ್ವವು ಕೂಡ ಮರುನಿರೂಪಣೆಗಳನ್ನು ಹುಡುಕುವ ಹಾದಿಯಲ್ಲಿದೆ. ಇಂದು ಹನುಮಂತಯ್ಯ ನಮ್ಮೊಂದಿಗೆ ಇಲ್ಲವಾದ್ದರಿಂದ ಅವರ ಕವಿತೆಗಳನ್ನು ಯಾವ ಮಾನದಂಡಗಳಿಂದ ಗ್ರಹಿಸಬಹುದು? ಅವರು ನಿಜವಾಗಲೂ ದಲಿತಕಾವ್ಯಕ್ಕೆ ಆ ಮೂಲಕ ಹೊಸತಲೆಮಾರಿನ ಕನ್ನಡಕಾವ್ಯಕ್ಕೆ ಸೇರಿಸಿಹೋಗಿದ್ದು ಏನು? ಅವರು ಇಲ್ಲವೆನ್ನುವ ಭಾವುಕತೆಯಿಂದ ಮತ್ತೆ ಮತ್ತೆ ಅವರ ಕವಿತೆ ಬಗೆಗೆ ಚರ್ಚೆ ನಡೆಯುತ್ತಾ ಇದೆಯಾ? ಅಥವಾ ಅವರು ಕಟ್ಟಹೋದ ಗಟ್ಟಿಯಾದ ರೂಪಕ ಲೋಕದಿಂದ ನೆನಪುಗಳಲ್ಲಿ ಇದ್ದಾರೋ? ಎಂಬ ಮತ್ತಷ್ಟು ಪ್ರಶ್ನೆಗಳು ಕಾಡುತ್ತವೆ. ಇವರ ಒಟ್ಟು ಕಾವ್ಯವನ್ನು ನಾನು ಗೋವಿನ ಮಾಂಸದೊಳಗಿನ ಗೋರೋಜನ ಮತ್ತು ಕಹಳೆಗೆ ನಂಟನ್ನು ನೀಡಲಾಗಿದೆ. ಇವೆರಡನ್ನು ದಲಿತ ಸಮುದಾಯಗಳು ಮಾತ್ರ ಹತ್ತಿರದಿಂದ ಕಾಣಬಲ್ಲವರಾಗಿದ್ದರು. ಗೋರೋಜನ ಅತಿ ಹೆಚ್ಚು ಕಾಲ ಬಾಳುವ ಗೋವಿನ ಮಾಂಸದಲ್ಲಿ ಸಿಗುವ ದ್ರವ್ಯ. ಅಂಥ ಗೋವನ್ನು ಬಹು ಎಚ್ಚರಿಕೆಯಿಂದ ಕಾಣುತ್ತಿದ್ದರು. ಇದು ಅವರ ಹಸಿವನ್ನು ನೀಗಿಸುವ ಬಹು ದೊಡ್ಡ ವಸ್ತುವೂ ಆಗಿತ್ತು.À ನಮ್ಮ ಜನಪದರು ಹೆಚ್ಚು ಕಾಲ ಬದುಕಿದ ಮನುಷ್ಯರನ್ನು ಇವರಲ್ಲಿ ಗೋರೋಜನವಿದೆ ಎಂದು ಹೇಳುವ ರೂಢಿಯಿತ್ತು. ದನಗಳಾಗಲೀ ಮನುಷ್ಯರಾಗಲೀ ಗೋರೋಜನವುಳ್ಳವರು ಬೆವರಿಗೆ ಅಂಟಿಕೊಂಡವರು. ಇನ್ನು ಕಹಳೆಯನ್ನು ಊದುವವರು ಕೂಡ ದಲಿತರೇ. ಊರಿನಲ್ಲಿ ನಡೆಯುವ ಆಚರಣೆಗಳಿಗೆ ಇದರ ನೀನಾದ ಇಲ್ಲದಿದ್ದರೆ ಯಾವ ಕೆಲಸಗಳು ನಡೆಯುವುದಿಲ್ಲ. ಈ ನಾದ ಊದುವವನ ನಾಭೀ ಮೂಲದಿಂದ ಬಂದಿರುತ್ತದೆ.

nkhಎನ್ಕೆ ಕಾವ್ಯ ಇವೆರಡರ ನಡುವೆ ಸ್ಥಾಯಿಯಾಗಿ ಇತ್ತು. ದಲಿತಕಾವ್ಯದ ಮತ್ತು ಹೊಸಕವಿತೆಯ ಗೋರೋಜನವಾಗಿ ಆತನ ರೂಪಕಗಳು, ಪ್ರತಿಮೆಗಳು ಇಂದಿಗೂ ಹೊಳೆಯುತ್ತಿವೆ. ಕಹಳೆ ಆತ ಬಿಟ್ಟುಹೋದ ವೈಚಾರಿಕ ಆಕೃತಿಗಳಿಗೆ ಸಂಬಂಧಗಳನ್ನು ಸೂಚಿಸಬಲ್ಲದು. ಅಥವ ತಾನು ಇನ್ನೂ ಹೆಚ್ಚು ಕಾಲ ನಾಭೀ ಮೂಲದಿಂದ ಇಡೀ ಕಾವ್ಯದ ಊರನ್ನು ಎಚ್ಚರಿಸುವ ಅವಕಾಶವು ಇತ್ತು. ಆದರೆ ಹನುಮಂತಯ್ಯ ಊದಬಹುದಾಗಿದ್ದ ಕಹಳೆಯನ್ನು ಮುಂದುವರೆಸುವ ಜವಾಬ್ಧಾರಿಯನ್ನು ಟಿ.ಯಲ್ಲಪ್ಪ, ರಮೇಶ ಅರೋಲಿ, ರಾಮಪ್ಪ ಮಾದಾರ, ಲಕ್ಷ್ಮೀನಾರಾಯಣಸ್ವಾಮಿ, ಸತ್ಯಮಂಗಲ ಮಹದೇವ,ಗಂಗಪ್ಪ ತಳವಾರ, ಶಿವಕಮಾರ ಕಂಪ್ಲಿ, ಬಸವರಾಜ ಹೃತ್ಸಾಕ್ಷಿ, ಅನುಸೂಯ ಕಾಂಬಳೆ, ಕಲ್ಲಹಳ್ಳಿ ನಾರಾಯಣಪ್ಪ, ವಿ.ಎಂ.ಮಂಜು, ಗಿರಿಯಪ್ಪ, ಹುಲಿಕುಂಟೆ ಮೂರ್ತಿ, ಮುಂತಾದ ಹಲ ಬಗೆಯ ಪ್ರತಿಭೆಗಳಿಗೆ ಬಿಟ್ಟುಕೊಟ್ಟು ವಿದಾಯ ಹೇಳಿದ್ದು ಕೊಂಚ ದುಃಖದ ಸಂಗತಿ. ಹನುಮಂತಯ್ಯ ನವರ ಕಾವ್ಯದ ಗುಂಗಿನಲ್ಲಿ ಉಳಿದವರ ಕಾವ್ಯವನ್ನು ಗೌಣವಾಗಿ ಕಾಣುವುದು ಅಷ್ಟು ಸರಿಯಲ್ಲ. ಇದು ಹನುಮಂತಯ್ಯ ನವರಿಗೂ ಸಲ್ಲಿಸುವ ಗೌರವವೂ ಅಲ್ಲ. ಬದಲಿಗೆ ಅವರು ನಿರ್ಮಿಸಿದ ಪ್ರತಿಮೆಗಳ ಮುಖೇನ ದಾಟುವ ಶಕ್ತಿಯನ್ನು ನಮ್ಮ ಹೊಸ ಕವಿಗಳು ರೂಪಿಸಿಕೊಳ್ಳುತ್ತಿರುವ ದಾರಿಗಳೇನು ಎಂಬುದನ್ನು ಚರ್ಚೆ ಮಾಡಬೇಕು. ಇದರ ಜತೆಯಲ್ಲಿ ದಲಿತ ಕಾವ್ಯ ಮೀಮಾಂಸೆಯನ್ನು ಕಟ್ಟಬೇಕಾದರೆ ಅದು ಯಾವುದೋ ಒಬ್ಬ ಕವಿಯಿಂದ ಎಂದೂ ಸಾಧ್ಯವಾಗಲಾರದು. ಎನ್ಕೆ ದಲಿತ ಕಾವ್ಯಕ್ಕೆ ಹಲ ಬಗೆಯ ತತ್ವಗಳನ್ನ ಸೇರಿಸುವ ಯತ್ನದಲ್ಲಿ ಇದ್ದರು. ಅವರ ಎರಡನೇ ಕವಿತೆಯ ಗುಚ್ಚವಾದ ‘ಚಿತ್ರದ ಬೆನ್ನು’ ವಿನ ಹಲವು ಪದ್ಯಗಳು ನಮಗೆ ನೀಡುವ ಓದುವ ಸವಾಲು ಇದನ್ನೇ ಅಭಿವ್ಯಕ್ತಿಸುತ್ತದೆ. ಮೊದಲ ಸಂಕಲನ ‘ಹಿಮದ ಹೆಜ್ಜೆ’ ಯ ಹಲವು ಪದ್ಯಗಳು ತನ್ನ ವೈಯಕ್ತಿಕ ಲೋಕದಿಂದ ಬಂದವು. ಆ ಮೂಲಕವೇ ಅವರು ಹೊಸ ಅಭಿವ್ಯಕ್ತಿಯ ಕಾವ್ಯತತ್ವವನ್ನು ಹೆಣೆಯಲು ಪ್ರಯತ್ನ ಮಾಡುತ್ತಿದ್ದರು.

ಬಹುಶಃ ಮೊದಲ ಸಂಕಲನದಲ್ಲೇ ಆಶಯ ಮತ್ತು ಆಕೃತಿಗಳನ್ನು ಸಮ ಪ್ರಮಾಣದಲ್ಲಿ ಸಾಧಿಸಿದ್ದು ಹೊಸಬರಲ್ಲಿ ಕಡಿಮೆ. ಎನ್ಕೆ ಅದನ್ನು ಬಹುಪಾಲು ನೇರವೇರಿಸಿದ್ದರು. ಒಂದು ಸಂಸ್ಕøತಿಯ ಆಶಯಗಳನ್ನು ಬಿಚ್ಚಡುವಾಗ ಯಾವ ಬಗೆಯ ಭಾಷಿಕ ವಿನ್ಯಾಸಗಳು ನೆರವಿಗೆ ಬರಬಲ್ಲವು ಎಂಬುದು ಮುಖ್ಯ ಸಂಗತಿ. ಸಮಾಜಕ್ಕೆ ವೈಯಕ್ತಿಕ ಬದುಕಿನ ತಲ್ಲಣಗಳನ್ನು ಅನಾವರಣ ಮಾಡಬೇಕಾದ ಸಂದರ್ಭದಲ್ಲಿ ಒಂದು ಭಾಷೆಗೆ ಇರಬೇಕಾದ ಎಲ್ಲ ಆಯಾಮಗಳನ್ನು ಗರ್ಭೀಕರಿಸುಕೊಳ್ಳುವುದು ಹೇಗೆಂಬುದು ಅಷ್ಟೇ ಮುಖ್ಯ. ಹನುಮಂತಯ್ಯ ನವರ ಕವಿತೆಗಳನ್ನು ಓದುವಾಗ ಕನ್ನಡಕಾವ್ಯದ ಇದುವರೆಗಿನ ಲಯವಿದಾನಗಳು ಅವರ ಮೇಲೆ ಅಷ್ಟಾಗಿ ಪ್ರಭಾವ ಬೀರದೆ ಹೋಗಿವೆ. ಸಿದ್ದಲಿಂಗಯ್ಯನವರ ಕಾವ್ಯದ ನೆಲೆಗಳು ದೊಡ್ಡ ಪ್ರಮಾಣದಲ್ಲಿ ಇವರ ಮೇಲೆ ಆಗಿಲ್ಲ. ಜನಪದ ಕಾವ್ಯದಲ್ಲಿ ಇರಬಹುದಾದ ಆಕೃತಿ ಅಂದರೆ ಪದಕ್ಕೆ ಇರಬಹುದಾದ ರೂಪಕ ಶಕ್ತಿ, ಪ್ರತಿಮಾ ವಿದಾನಗಳು: ಆಶಯಗಳ ದೃಷ್ಟಿಯಿಂದ ವೈಯಕ್ತಿಕ ಬದುಕಿನ ಸಂಕಟಗಳು, ಬದುಕನ್ನು ಆ ಮೂಲಕವೇ ಎದುರುಗೊಳ್ಳುವ ಧಾರಣ ಶಕ್ತಿ ಮೈಪಡೆದಿವೆ ಎನ್ನಬಹುದು. ಎನ್ಕೆ ಕಾವ್ಯದ ಬಗ್ಗೆ ವಿಸ್ತಾರವಾಗಿ ಮಾತನಾಡಿರುವ ಹುಳಿಯಾರ್ ಮತ್ತು ರಹಮತ್ ಅವರು ಈ ಕ್ರಮವನ್ನು ‘ವೇದನೆ’ ಎಂದು ಕರೆದು ವಿಶ್ಲೇಷಣೆ ಮಾಡಿದ್ದಾರೆ. ದಲಿತ ಕಾವ್ಯವನ್ನು ಚರ್ಚೆ ಮಾಡುವಾಗ ಅದರ ಪೂರ್ವಿಕಲೋಕವು ನಮ್ಮ ಕಣ್ಣೆದುರಿಗೆ ಹಲವು ಬಗೆಯಲ್ಲಿ ಕಾಣಿಸುಕೊಳ್ಳುತ್ತದೆ. ಈ ಲೋಕವೇ ಕೆಲವೊಮ್ಮೆ ಅವರ ತಾತ್ವಿಕತೆಯನ್ನು ಸಿದ್ದಪಡಿಸುತ್ತದೆ. ಯಲ್ಲಪ್ಪ ನವರ ಕಾವ್ಯದಲ್ಲಿ ಈ ಪೂರ್ವಿಕಲೋಕ ಅತಿ ಭಾವುಕತೆಯಿಂದ ಬರುತ್ತದೆ. ಅದು ನಮ್ಮನ್ನು ಅದರ ಒಳಲೋಕವನ್ನು ಒಪ್ಪಿಸಿಕೊಳ್ಳುವಂತೆ ಒತ್ತಾಯಿಸುತ್ತದೆ. ಆದರೆ ಎನ್ಕೆ ಕಾವ್ಯ ಲೋಕ ಭಾವುಕತೆಯಿಂದ ಭಾಷೆಯನ್ನು ಅಳುವಂತೆ ಮಾಡುವುದಿಲ್ಲ. ತಮ್ಮದೇ ರೂಪಕ ಶಕ್ತಿಯಿಂದ ಸಾಮಾಜಿಕ ಲೋಕಕ್ಕೆ ದಾಟಿಸುತ್ತಾರೆ. ಈ ಪ್ರಕ್ರಿಯೇ ಅವರ ‘ಚಿತ್ರದ ಬೆನ್ನು’ ಸಂಕಲನದ ಹಲವು ಕವಿತೆಗಳು ಸಾರುತ್ತವೆ.

ಹನುಮಂತಯ್ಯ ನವರ ಕವಿತೆಯ ಮೇಲೆ ಅಂಬೇಡ್ಕರ್ ಅವರ ಪ್ರಭಾವ ಕ್ವಚಿತ್ತಾಗಿ ಕಾಣಬಹುದಷ್ಟೆ. ಅವರ ಕುರಿತು ಎರಡು ಪದ್ಯಗಳನ್ನು ಬರೆದಿರುವುದು ಕಾಣಬಹುದು. ಪದೇ ಪದೇ ಅವರ ಹೆಸರು ಪ್ರಸ್ತಾಪ ಬಂದರೆ ಮಾತ್ರ ಪ್ರಭಾವವಿದೆ ಎಂದು ಹೇಳುವುದು ತಪ್ಪು. ಈ ಬಗೆಯ ವೈಚಾರಿಕ ಆಕೃತಿಗಳನ್ನು ನೇರವಾಗಿ ಸುಬ್ಬು ಅವರಲ್ಲಿ ಕಾಣಬಹುದು. ಎನ್ಕೆ ಪದ್ಯಕ್ಕೆ ಇರುವ ಶಕ್ತಿಯೇ ಬೇರೆ. ಅವರು ಜನಾಂಗದ ನೆನಪುಗಳಲ್ಲಿ, ಬದುಕಿನ ಲಯಗಳಲ್ಲಿ ವೈಚಾರಿಕ ಆಕೃತಿಗಳನ್ನು ರೂಪಕಗಳ ಅಂತರಂಗದಲ್ಲಿ ಹುಡುಕಬಲ್ಲರು. ಹುಳಿಯಾರ್ ಅವರು ಹೀಗಾಗಲೇ ಗುರುತಿಸಿದ ಹಾಗೆ ‘ಅವ್ವ’ನ ಚಿತ್ರಗಳು ಅವರ ಒಟ್ಟು ಕವಿತೆಯ ನಾಡಿಮಿಡಿತ ಎಂದರೂ ಆದೀತು. ಇಲ್ಲಿನ ಅವ್ವ ದಲಿತತ್ವದ ರೂಪಕವೂ, ಒಂದು ಕಾಲಘಟ್ಟದ ಭಯವನ್ನುಂಟು ಮಾಡುವ ಜನಾಂಗಗಳಿಗೆ ಅಧೀನಳಾಗಿಯೂ, ಮಗನ ಮತ್ತು ತಂದೆಯ ಸಿಟ್ಟಿಗೂ, ಸಾವಿಗೂ ಪ್ರತಿಮೆಯಾಗಿ ಗೋಚರಿಸುತ್ತಾಳೆ. ಇದರ ಒಳಗಿನಿಂದ ಹೊರಹೊಮ್ಮುವ ಸಿಟ್ಟು ಕಿರುಚಾಟದ ಮಟ್ಟಕ್ಕೆ ತಲುಪದೇ ಸಾವಧಾನದ ಸ್ಥಿತಿಯಿಂದ ವಾಸ್ತವವನ್ನು ಎದುರಿಗೆ ಇಡುವಾಗ ಭಾಷೆಯೂ ಕೂಡ ತನ್ನ ನಡಿಗೆಯನ್ನು ಮುಂದುವರೆಸುತ್ತದೆ. ಎನ್ಕೆ ಕವಿತೆಯ ಭಾಷೆಯ ನಡಿಗೆ ಮತ್ತು ನಾಟ್ಯಗಳು ಹೊಸ ತಲೆಮಾರಿನ ಕಾವ್ಯದಲ್ಲಿ ವಿಶಿಷ್ಟ ಮಾದರಿಯದು. ನಡಿಗೆಗೆ ಕಥನ ಮಾದರಿಯನ್ನು, ನಾಟ್ಯಕ್ಕೆ ಕೊಂಚ ರೂಪಕದಿಂದ ಅವಲಂಬಿಸಿದ ಭಾಷಿಕ ಲಯಗಳನ್ನು ಬಳಕೆಮಾಡುತ್ತಾರೆ. ‘ಹಿಮದ ಹೆಜ್ಜೆ’ಯ ಮೊದಲ ಕವಿತೆಯಲ್ಲಿಯೇ ಇದನ್ನು ಗ್ರಹಿಸಬಹುದು. ಅದು ಏಕಕಾಲದಲ್ಲಿ ಒಂದು ದಲಿತ ಜಗತ್ತನ್ನು ಅನಾವರಣ ಮಾಡುತ್ತದೆ. ಕವಿತೆಯಲ್ಲಿ ಬರುವ ಗೊರ್ರಮಪಾದ್ರಿಯ ಮಾತುಗಳು ದಲಿತ ತಾತ್ವಿಕತೆಯನ್ನೇ ಒಳುಗುಮಾಡಿಕೊಂಡಿವೆ. ‘ಕಣ್ಣೀರೊಳಗಿನ ಅರ್ಥಗಳ ಅರಗಿಸಿಕೋ ಭಾಡ್ನಾ ಅಂದು ನೀನು ಬುದ್ದನನ್ನೂ ಮೀರಿದ ಮನುಷ್ಯನಾಗುತ್ತೀಯ’ ಎಂಬ ಪಾದ್ರಿಯ ನುಡಿಗಳು ಜೀವನದ ತತ್ವದಂತೆ ಕಂಡರೂ ಮನುಷ್ಯನ ಮಾನಸಿಕ ಪ್ರಕೃತಿಯನ್ನು ಹೇಳುತ್ತದೆ. ಇಡೀ ಕವಿತೆ ಗದ್ಯದ ಮಾದರಿಯಿಂದ ಕೂಡಿ ಒಂದು ಜನಾಂಗದ ಅಸ್ಮಿತೆಗಳನ್ನು ಅಭಿವ್ಯಕ್ತಿಸುತ್ತದೆ.

ಇಲ್ಲಿಂದ ಮೊದಲುಗೊಂಡ ಸಾವಿನ ಪ್ರತಿಮೆಗಳು ಅವರ ಕಾವ್ಯದ ಉದ್ದಕ್ಕೂ ಕೆಂಡದಂತೆ ಚಲ್ಲಾಡಿವೆ. ಅದರಲ್ಲೂ ಅವ್ವನ ಚಿತ್ರಗಳು ಬಂದಾಗೆಲ್ಲಾ ಅಪ್ಪನ ನೇಣಿನ ಸಾವು ಪದೇ ಪದೇ ನೆನಪಿಸುತ್ತದೆ. ಒಬ್ಬ ಕವಿ ತನಗೆ ದಕ್ಕಿರುವ ಭಾವವನ್ನು ಎಷ್ಟರ ಮಟ್ಟಿಗೆ ಅಂತಃಸತ್ವವಾಗಿ ಮೈಗೂಡಿಸಿಕೊಳ್ಳಬಲ್ಲನೋ ಅದರ ಮೇಲೆ ಆತನ ತಾತ್ವಿಕತೆ ಅಡಗಿರುತ್ತದೆ ಎಂಬ ಯೇಟ್ಸನ ಮಾತುಗಳನ್ನು ಕುರ್ತಕೋಟಿ ‘ನವ್ಯ ಕಾವ್ಯ ಪ್ರಯೋಗ’ ಕೃತಿಯನ್ನು ಬರೆಯುವಾಗ ಹೇಳುತ್ತಾರೆ. ಇವರ ಭಾವಪ್ರಂಪಚ ತನ್ನ ವೈಯಕ್ತಿಕತೆಯನ್ನು ದಾಟಿ ಸಾಮಾಜೀಕರಣಕ್ಕೇ ಮುಟ್ಟುತ್ತದೆ ಎಂದರೆ ಅದರ ತಾತ್ವಿಕತೆಯ ಗಟ್ಟಿತನವೆಂದೇ ಭಾವಿಸಬೇಕ. ಎನ್ಕೆ ಭಾವಲೋಕ ತಮ್ಮನ್ನು ಲೀನಗೋಳಿಸುವುದು ಗೀಳಾಗದೇ ಅದು ತನ್ನದೇ ಸ್ವಪ್ರಜ್ಞಯನ್ನು ರೂಪಿಸಿಕೊಳ್ಳಬಯಸುತ್ತದೆ. ಇಂಥ ಕಡೆ ಕೆಲವೊಮ್ಮೆ ಅವರ ಕವಿತೆ ಹೇಳಿಕೆಗಳಿಂದ ತಪ್ಪಿಸಿಕೊಳ್ಳುವ ಇರಾದೆ ಇತ್ತು ಎಂದು ಕಾಣುತ್ತದೆ.

ದಲಿತ ಮೀಮಾಂಸೆ ಬಹುಮಟ್ಟಿಗೆ ತನ್ನ ವೈಯಕ್ತಿಕ ಲೋಕಪ್ರಜ್ಞೆಯ ಅಡಿಯಲ್ಲೇ ತನ್ನ ಆಯಾಮಗಳನ್ನು ಕಂಡುಕೊಳ್ಳಲು ಹವಣಿಸುತ್ತಿರುತ್ತದೆ. ಎನ್ಕೆ ಈ ಮಾದರಿಗಳನ್ನು ತಮ್ಮ ಕಾವ್ಯದ ಗರ್ಭದಲ್ಲಿ ಒಳಗುಮಾಡಿಕೊಳ್ಳುವ ವಿಧಾನಗಳೇ ಬೇರೆ. ನಿದರ್ಶನಕ್ಕೆ ‘ಅವ್ವ’ನ ಚಿತ್ರಗಳ ಮೂಲಕವೇ ಹೊರಡೋಣ. ಇಲ್ಲಿನ ಅವ್ವ ಕೇವಲ ಹೆಣ್ಣಲ್ಲ ಆಕೆಯ ಮೂಲಕವೇ ಒಂದು ಸಂವೇದನೆಯನ್ನು ಮತ್ತು ಕಾವ್ಯತತ್ವವನ್ನು ಹೆಣೆಯಬಲ್ಲರು. ಅವರು ಆರಿಸಿಕೊಳ್ಳುವ ಶಬ್ಧಗಳು ಕೂಡ ಇದನ್ನೇ ಉಸುರುತ್ತವೆ. ಅವ್ವನ ಚರಿತೆಯನ್ನು ಹೇಳುವಾಗ ಅವರು ಬಳಸುವ ಪದಗಳು ಏಕರೂಪದ್ದಲ್ಲ. ಹಾಗೆಯೇ ಅವು ಬದುಕಿನ ಹಲವು ಜಿಗಿತಗಳನ್ನು ಅಭಿವ್ಯಕ್ತಿಸ ಬಲ್ಲವು. ‘ಅವ್ವ’ ಹೊಲೆಯವ್ವ’ ಎಂಬ ನುಡಿಗಳು ಅವರಿಗೆ ಅಂಟಿರುವ ಅವಮಾನವೆಂದು, ಅದರೋಳಗಿನ ಪ್ರೇಮವನ್ನು ಸೂಚಿಸಿದರೇ ಏನು ಹೇಳಿದಂತೆ ಆಗುವುದಿಲ್ಲ.
‘ಎಲ್ಲರೂ ನಿನ್ನನ್ನೇ ಬೈದರವ್ವಾ
ಜಗಕೆ ತೊಡೆತೆರೆದ ಮುಂಡೆಯಂತೆ
ಇವರೂ ಬೈದರವ್ವಾ
ನಿನ್ನ ಬೆವರೋಳಗೆ ಈಜಿದವರು..
ಅವರೂ ಬೈದರವ್ವಾ.. (ಹಿಮದ ಹೆಜ್ಜೆ)
ಅವ್ವನ ನುಡಿಗೆ ಅಂಟಿಕೊಂಡಿರುವ ಭಾಷೆಯನ್ನು ಹೇಳುವಾಗ ಏಕಕಾಲಕ್ಕೇ ಭೂತ ಮತ್ತು ವರ್ತಮಾನಗಳು ತಲೆಗೆಳಗಾಗುತ್ತವೆ.ಹೊಲೆತನವನ್ನು ರೂಪಕದ ಭಾಷೆಯಲ್ಲಿ ಅಭಿವ್ಯಕ್ತಿಸುವಾಗ ಅದರ ಮೀಮಾಂಸೆ ದುಃಖದ ನೆಲೆಗೆ ಮಾತ್ರ ಜಾರುವುದಿಲ್ಲ, ಬದಲಿಗೆ ಆಗಲೇ ಹೇಳಿದಂತೆ ಕಹಳೆಯ ನುಡಿಗಳನ್ನು ಅವರು ಬಳಸಬಲ್ಲರು. ಇಂಥ ಕಡೆ ಘೋಷಣೆಯಾಗ ಬಹುದಾಗಿದ್ದ ಭಾಷಿಕ ಲಯಗಳನ್ನು ಕಾವ್ಯತತ್ವಕ್ಕೆ ಏರಿಸಬಲ್ಲರು. ‘ನಿನ್ನ ಬೆವರೋಳಗೆ ಈಜಿದವರು’ ಎಂಬ ರೂಪಕ ಏನ ಬೇಕಾದರೂ ಸೂಚಿಸಬಲ್ಲದು. ಸುದ್ದಿಗೆ ಕತೆಯನ್ನು, ಕತೆಗೆ ಕಾವ್ಯಗುಣವನ್ನು ತುಂಬಬಲ್ಲ ಶಕ್ತಿ ಇವರ ಕೆಲವು ಕವಿತೆಗಳಗೆ ಸಹಜವಾಗಿಯೇ ಲಭ್ಯವಾಗಿತ್ತು. ಲೋಕಕ್ಕೆ ಅಂಟಿದ ಜಾತಿಯನ್ನು ಅದರ ಭಿನ್ನ ಆಯಾಮಗಳನ್ನು ತರುವಾಗ ಭಾಷೆಯ ಒಳಾರ್ಥಗಳು ಇವರ ಕಾವ್ಯದಲ್ಲಿ ಕೆಂಡದಂತೆ ಕಾಣುತ್ತವೆ. ‘ರಕ್ತಗಮಲೆ’ ಎಂಬ ರೂಪಕದಲ್ಲಿ ಅಡಗಿರುವ ಅರ್ಥ ಮತ್ತು ಅದರಾಚೆಗಿನ ಹೆಣ್ಣಿನ ಚರಿತೆ ಏಕಕಾಲಕ್ಕೆ ತೆರದುಕೊಳ್ಳಬಲ್ಲದು.
‘ಹೆತ್ತ ರಕ್ತದ ಮೇಲೆ
ಸತ್ತು ಹೋದಳು ತಾಯಿ
ಇರುಳ ಸುರುಳಿಯ ನಡುವೆ ಕರುಳ ಬಿಟ್ಟು
ಅಳುತಲಿದೆ ಮಗು;
‘ಬಸಿರಿಗೆ ಬ್ಯಾಟರಿ ಬಿಡುವ ಬೇಟೆಗಾರ’..
ನಿನಗೆಂದು ಸಾವೋ. (ಹಿಮದ ಹೆಜ್ಜೆ)

ಎನ್ಕೆ ಕಾವ್ಯ ಹಲವು ಕಡೆ ನವೋದಯದವರು ಬಳಸುವ ನಿಸರ್ಗ ಪ್ರತಿಮೆಗಳನ್ನು ನೆನಪಿಸಿದರೂ, ದಲಿತ ಮೀಮಾಂಸೆಯೊಂದು ಅಂತಃಸತ್ವದಲ್ಲಿ ಹರಿಯುತ್ತಾ ಇರುತ್ತದೆ. ಬಂಡಾಯ ಕಾವ್ಯದ ಸೋಲುಗಳನ್ನು ಚನ್ನಾಗಿ ಅರಿತಿದ್ದ ಇವರು ಅದರ ಮರು ನಿರೂಪಣೆಗಳನ್ನು ತರುವಾಗ ಕಿರುಚುವುದಿಲ್ಲ. ಇದೇ ಕವಿತೆಯಲ್ಲಿ ‘ಹೂವು’ ಕೆಂಡ’ ದಂಥಹ ಪ್ರತಿಮೆಗಳನ್ನು ಬಳಸುತ್ತಾರೆ. ಮುಂದೆ ಅವರು ಹಿಂಸೆಯ ಮುಖಗಳನ್ನು ಭಾಷಿಕ ಲಯಗಳಲ್ಲಿ ಕಟ್ಟಿಕೊಡಲು ಮತ್ತು ಅದನ್ನು ಮೀರಲು ‘ತೊಟ್ಟಿಲು’ ಮತ್ತು ‘ಬಂದೂಕು’ ‘ಕನಸು’ ನವಿಲು’ ‘ಏಡಿ’ಮುಂತಾದ ಚಿತ್ರಗಳನ್ನು ತರುತ್ತಾರೆ. ಇವೇ ಅವರ ಕಾವ್ಯತತ್ವವನ್ನು ರೂಪಿಸುತ್ತಾ ಹೋಗುತ್ತವೆ. ನುಡಿಗೆ ಸೂತಕವೆಂದು ವಚನಕಾರರು ಅನುಭಾವದ ಬೆನ್ನಲ್ಲಿ ಅರ್ಥೈಸಿಕೊಂಡಿದ್ದರು. ಅದು ಹಲವು ಬಾರಿ ಬೆಡಗಿನ ಭಾಷೆಯಲ್ಲಿ ಕಾಣಿಸಿಕೊಳ್ಳತಲಿತ್ತು.

nkhಇಲ್ಲಿ ಹನುಮಂತಯ್ಯ ಮಾತಿಗೆ ಇರಬಹುದಾದ ‘ಅಂಟು’ (ಸೂತಕ) ವಿನ ಭಾವವನ್ನು ಹೀಗೆ ಕಟ್ಟುತ್ತಾರೆ: ‘ಮುಟ್ಟಲಾರದ ಮಾತ ಮುಟ್ಟಿ ಹಾಡಾಗಿಸುವ’ ಎಂಬ ರೂಪಕ ದಲಿತ ಜೀವನಕ್ರಮದ ಒಳ ನೆಲೆಗಳನ್ನು ಅನಾವರಣ ಮಾಡುತ್ತದೆ.ಅವರ ಕಾವ್ಯಭಾಷೆಯಲ್ಲಿ ‘ವೇದನೆ’ ಮೇಲು ನೋಟಕ್ಕೆ ಗ್ರಹಿಸಬಹುದು. ಆದರೆ ಅದು ‘ಸಂವೇದನೆ’ಯೂ ಆಗಬಲ್ಲದು. ಬರಿ ದುಃಖದ, ನೋವಿನ ಪರಿಭಾಷೆ ದಲಿತ ಮೀಮಾಂಸೆಯನ್ನು ರೂಪಿಸುವುದಿಲ್ಲ, ಬದಲಿಗೆ ಕೆಲವೂಮ್ಮೆ ಅದರ ಪೊರೆಗಳನ್ನು ಕಳಚಿಕೊಂಡು ಉತ್ತರಗಳನ್ನು ತಾವಾಗಿಯೇ ಕಂಡುಕೊಳ್ಳುವ ಇರಾದೆಯನ್ನು ಹೊಂದಬೇಕು. ಇದರ ಸುಳುಹುಗಳು ಎನ್ಕೆ ಯವರ ‘ಚಿತ್ರದ ಬೆನ್ನು’ ಸಂಕಲನದ ‘ಗೋವು ತಿಂದು ಗೋವಿನಂತಾದವನು’ ಎಂಬ ರೂಪಕವೇ ಉತ್ತರವಾಗಬಲ್ಲದು. ಸೂರ್ಯ ಒಂದು ಕಾಲಕ್ಕೆ ಕನ್ನಡಕಾವ್ಯದಲ್ಲಿ ಅದರಲ್ಲೂ ಬಂಡಾಯದಲ್ಲಿ ಹೋಸ ಬದುಕಿಗೆ ಕಾರಣವಾಗುವ ಸಂಕೇತವಾಗಿದ್ದ. ಆದರೆ ಹನುಮಂತಯ್ಯ ಅದನ್ನು ಮುರಿದು ‘ಒಡಲ್ಹಕ್ಕಿ ಕೊಕ್ಕಿನಲಿ ಸೂರ್ಯನಿಗೆ ಧಿಕ್ಕಾರ’/ ಸುಡದಿರೋ ರವಿಯೇ ಎದೆಯ ಮಿದುವ’. ಎಂಬ ಮಾತುಗಳು ಹೊಸದನ್ನು ಕಟ್ಟುವ ಉಮೇದಿನಲ್ಲಿದ್ದವು.

ಅವರು ಅವ್ವನ ದೇಹ ಭಾಷೆಯನ್ನು ಮತ್ತು ಆಕೆಯ ಉಡುಪುಗಳನ್ನು ವರ್ಣಿಸುವಾಗಲೂ ಭಿನ್ನತೆಯನ್ನು ಕಾಣುತ್ತಾರೆ. ಯಲ್ಲಪ್ಪನವರ ಮೊದಮೊದಲ ಪದ್ಯಗಳನ್ನು ಇವರ ಪದ್ಯಗಳ ಜತೆಗಿಟ್ಟು ಕಂಡಾಗ ಹಲವು ಒಳನೋಟಗಳು ಲಭ್ಯವಾಗುತ್ತವೆ.ಇದರಲ್ಲಿ ಒಂದನ್ನು ಹೇಳಬಹುದಾದರೇ ಮುಗ್ಧತೆಯ ಮೂಲಕವೇ ಉತ್ತರಗಳನ್ನು ಕಂಡುಕೊಳ್ಳು ಹವಣಿಸುವುದು. ಅಪ್ಪನ ಮಗ್ಧತೆಯೂ ದಲಿತಲೋಕದಲ್ಲಿ ದುಃಖದಲ್ಲಿ, ನೋವಿನಲ್ಲಿ ಅಂತ್ಯಗೊಂಡಿತ್ತು. ‘ನಿದ್ದೆಯ ಕಳವು’ ಎಂಬ ಅಪರೂಪದ ರೂಪಕ ಇದನ್ನೇ ಹೇಳುತ್ತದೆ.’ಇರುವೆ ಮತ್ತು ಸೂಜಿಯ ಚಿತ್ರಗಳನ್ನು ಬಳಸುವಾಗ ಬಾಳಿನ ಕ್ರೌರ್ಯಗಳನ್ನು, ಹಿಂಸೆಯನ್ನು ತರಬಲ್ಲರು.
‘ಅಗ್ನಿಮಾಂಸದ ಕುಲುಮೆಯಲಿ
ನನ್ನ ಕಾಯಿಸಿ ಬಣ್ಣವ ಮಾಡಿ
ಮರಳಿ ನನ್ನ ರೂಪನೇ ಕಡೆವ
ಏ ನನ್ನಾಳದ ಅಳುವೇ
ನನ್ನ ಚಿತ್ರಕ್ಕೇಕೆ ಬೆನ್ನು ಬರೆವೆ? ( ಚಿತ್ರದ ಬೆನ್ನು)
ಈ ಬಗೆಯ ರೂಪಕಗಳು ಅವರ ವೈಯಕ್ತಿಕತೆಯನ್ನು ಮೀರಬಲ್ಲವು.ಇಲ್ಲಿ ‘ಇರುವುದು’ ಮತ್ತು ‘ಆಗುವುದು’ ಎರಡೂ ಅದ್ವೈತಗೊಳ್ಳುವುದನ್ನು ಕಾಣಬಹುದು. ಅವರ ಕಾವ್ಯದ ಕೊನೆ ಕೊನೆಯಲ್ಲಿ ‘ನವಿಲು, ಮಾಂಸ, ಗೋವು. ಏಡಿ ಮುಂತಾದ ಹಲಬಗೆಯ ಚಿತ್ರಗಳನ್ನು ಬಳಸುತ್ತಾರೆ. ಇವೆಲ್ಲವೂ ಇರುವ ಸ್ಥಿತಿಯನ್ನು ಮೀರಬೇಕೆಂಬ ಹಂಬಲ ಹಾಗು ಮರುಕಟ್ಟುವಿಕೆಯ ಬಯಕೆಯನ್ನು ಮಂಡಿಸುತ್ತವೆ. ಅವರ ಬಹು ಚರ್ಚಿತ ಕವನ ‘ಗೋವು ತಿಂದು ಗೋವಿನಂತಾದವನು’ ಆಹಾರ ಕ್ರಮಗಳ ರೀವಾಜುಗಳನ್ನು ಮೀರಿ ದಲಿತ ಮೀಮಾಂಸೆಯನ್ನು ಮಂಡಿಸುತ್ತದೆ.

ಆ ಮೂಲಕ ಮನುಷ್ಯನ ಕ್ರೌರ್ಯದ ಮುಖಗಳನ್ನು ಬಿಚ್ಚಿಡಬಲ್ಲದು. ‘ಮನುಷ್ಯರನ್ನು ತಿನ್ನಲಾರೆ’ ಎಂಬ ನುಡಿಗಟ್ಟು ಘೋಷಣೆ ಯಾಗದೆ ಅನುಭವದಿಂದ ಹೆಪ್ಪಗಟ್ಟಿದ್ದು ಎಂಬಂತೆ ಗೋಚರಿಸುತ್ತದೆ. ಈ ಕವಿತೆಯಲ್ಲಿ ‘ಹೌದು’ ಎಂಬುದು ಸಾಮಾನ್ಯ ಉತ್ತರವಲ್ಲ. ಅದು ದಲಿತರಿಗೆ ಅಂಟಿದ ಪರಂಪರೆಯ ಕೆಟ್ಟ ಪ್ರಶ್ನೆಗೊಂದು ಕೊಡುವ ದೊಡ್ಡ ಮತ್ತು ಮಾನವೀಯ ಸಮಾಧಾನ.ಇಂಥ ಕಡೆಯೇ ನಾವು ದಲಿತ ಮೀಮಾಂಸೆಯನ್ನು ಕಂಡುಕೊಳ್ಳಬೇಕು ಅನಿಸುತ್ತೆ. ‘ಮಾಂಸದಂಗಡಿಯ ಮುಂದೆ ನವಿಲು’ ಎಂಬ ಕವಿತೆಯಲ್ಲಿ ಹಸಿವು ನರ್ತನ ಮಾಡುವುದು ರೊಮ್ಯಾಂಟಿಕ್ ಅಲ್ಲ ಬದಲಿಗೆ ಪರಂಪರೆಯ ನೋವು. ನಾವೀಗ ದಲಿತ ಮೀಮಾಂಸೆಯನ್ನು ಶೋಧಿಸಬೇಕಾದ್ದು ಸಂಸ್ಕ್ರತ ಮೀಮಾಂಸೆಯ ಪರಂಪರೆಯನ್ನು ಬೇರೊಂದು ಬಗೆಯಲ್ಲಿ ಮುರಿದುಕಟ್ಟುವುದರಿಂದ ಅನಿಸುತ್ತದೆ. ಅದು ಬೆಳಸಿದ ಶಬ್ಧ ಮತ್ತು ಅರ್ಥ ಗಳ ತತ್ವಗಳನ್ನು ಯಥಾವತ್ತಾಗಿ ಕನ್ನಡೀಕರಿಸುವದಲ್ಲ. ಇವುಗಳ ಮುಖೇನ ಕನ್ನಡದ ಕಾವ್ಯತತ್ವವನ್ನು ಗಟ್ಟಿನೆಲೆಯಲ್ಲಿ ಹುಡಕಬೇಕಾಗಿದೆ. ಎನ್ಕೆ ಈ ನಿಟ್ಟಿನಲ್ಲಿ ಪ್ರಯತ್ನಿಸಿದ್ದು ಹೇಗೆಂದರೆ, ಅವರು ಬಹುತೇಕ ಕಡೆ ರೋಮ್ಯಾಂಟಿಕ್ ಎಂದು ಕಂಡರೂ ಆಳದಲ್ಲಿ ಸಮುದಾಯದ ಮೀಮಾಂಸೆಯ ರಕ್ತಮಾಂಸಗಳನ್ನು ತುಂಬಬಲ್ಲರು. ಶಬ್ಧಕ್ಕೆ ಸೌಂದರ್ಯದ ಕವಚವನ್ನು ತೊಡಿಸುವುದು ಇವರ ಕಾಯಕವಾಗುವುದಿಲ್ಲ, ಬದಲಿಗೆ ಶಬ್ಧಕ್ಕೆ ಅನುಭವದ ಭಿನ್ನ ನೆಲೆಗಳನ್ನು ‘ಸ್ವ’ದ ಆಯಾಮಗಳಲ್ಲಿ ತುಂಬುತ್ತಾರೆ. ನಿದರ್ಶನಕ್ಕೆ ‘ಶಬ್ಧದ ಶಿರ ಹಿಡಿದು’ ಎಂಬ ಕವಿತೆಯ ಸಾಲುಗಳನ್ನು ಗಮನಿಸಬಹುದು.
‘ತೊಟ್ಟು ಬಿಟ್ಟು ಹೂಮುಡಿದ ಗಾಳಿ
ಯುಗದ ಚಿತ್ರ ಬಿಡಿಸುವ ವೇಳೆ
ಬೊಗಸೆಯಲಿ ಮೌನವನೆತ್ತಿ
ಕೇಳಿದೆ
ನೀನು ಬುದ್ಧ ನೀನು ಗಾಂಧಿ ನೀನು ಆಕಾಶ ತಾನೆ
ನಕ್ಕು ಜಾರಿತು ಮೌನ
ಶಬ್ಧದ ಮೊಟ್ಟೆಯಿಟ್ಟು’ ( ಚಿತ್ರದ ಬೆನ್ನು) ಶಬ್ಧದೊಂದಿಗೆ ಸಂವಾದ ಬದುಕನ್ನು ಆವರಿಸಿಕೊಳ್ಳುವ ಪರಿ ಇದು. ಮೇಲುನೋಟಕ್ಕೆ ಇವರ ಹಲವು ಕವಿತೆಗಳು ಭಾವಗೀತೆಯಂತೆ ಕಂಡರೂ, ಅವು ನವೋದಯ ಮಾದರಿಯ ಗೀತೆಗಳಲ್ಲ. ‘ಸಂತೆಯಲ್ಲಿ ಕಂಡವಳು’ ‘ಬಣ್ಣದ ಕಣ್ಣು’ ‘ ಆ ಒಂದು ಹನಿ ಮಳೆ’ ‘ಏಡಿ’ ‘ಇದ್ದಿಲಾಗುವ ಆಲಿ’ ಮುಂತಾದ ಪದ್ಯಗಳಲ್ಲಿ ಕಾವ್ಯತತ್ವದ ಹಿನ್ನಲೆಯಲ್ಲಿ ಸಾಕಷ್ಟು ಸಾಧಿಸುತ್ತಾರೆ.ಬಹುತೇಕ ಮೇಲಿನ ಪದ್ಯಗಳು ವಾಚ್ಯವನ್ನು ಮೀರುವದಕ್ಕೆ ಯತ್ನಿಸುತ್ತಾರೆ.

ನಿಸರ್ಗದ ಪ್ರತಿಮೆಗಳನ್ನು ಅವರು ಸ್ವಂತೀಕರಣಕ್ಕೆ ಒಗ್ಗಿಸಿಕೊಳ್ಳುಬಲ್ಲರು. ‘ಮಿಂಚು ಹುಳ’ ಇರುವೆ’ ಆನೆ, ಏಡಿ ಮುಂತಾದ ಪ್ರತಿಮೆಗಳನ್ನು ದಲಿತಮೀಮಾಂಸೆಯ ಚೌಕಟ್ಟಿನಲ್ಲಿ ಕಟ್ಟಬಲ್ಲರು.
‘ಹರಿಯುತ್ತಲಿವೆ ಇರುವೆ
ಈ ಮಹಾಬೆಳಗಿನ ಮಾಂಸದಂಗಡಿಯಲ್ಲಿ ತಲೆಕೆಳಗಾಗಿ
ತೂಗುತ್ತಿರುವ ನನ್ನ ಮೇಲೆ’
‘ಬುಡದಲ್ಲಿ ಬಿದ್ದ ಆನೆ ಅಂಬಾರಿಗಳು/ ಎರೆಹುಳದ ಬಾಯಲ್ಲಿ ಕರಗುತ್ತಿದ್ದವು’ ‘ ಕಣ್ಣೀರ ಗುಡ್ಡದಲಿ ಕೇಕೆ ಹಾಕುವ ನವಿಲು/ ಕಾಡುತ್ತಿದೆ ಹಗಲಿರುಳು’ ಮುಂತಾದ ಚಿತ್ರಗಳು ಕೇವಲ ಪದ ಜೋಡನೆಗಳಲ್ಲ. ಮೀಮಾಂಸೆಯನ್ನು ಕಟ್ಟುವುದಕ್ಕೆ ಹವಣಿಸುತ್ತಿದ್ದವು. ಮತ್ತೂ ಕೆಲವು ನಿಸರ್ಗದ ಚಿತ್ರಗಳು ತೀರ ವಾಚ್ಯಕ್ಕೆ ಇಳಿಯುತ್ತವೆ. ಹಾಗೆ ನೋಡಿದರೆ ಅವರ ‘ಚಿತ್ರದ ಬೆನ್ನು’ ಸಂಕಲನದ ಹಲವು ಕವಿತೆಗಳು ಸಮಾಜದ ಬಿನ್ನಮುಖಗಳನ್ನು ಹೇಳ ಹೊರಟಿದ್ದವು. ಎನ್ಕೆ ಕಾವ್ಯದ ಕಾವು ಆಗ ತಾನೆ ದೊಡ್ಡ ಮಟ್ಟದಲ್ಲಿ ಸಾಧಿಸಲು ಸಿದ್ಧವಾಗಿತ್ತು. ಅವರ ಮೊದಲ ಸಂಕಲನದ ಕವಿತೆಗಳು ಅವ್ವನ ಪ್ರತಿಮೆಯಿಂದ ಆವರಿಸಿಕೊಂಡಿದ್ದು, ಅದರಿಂದ ಹೊರಬರಲು ಯತ್ನಮಾಡುತ್ತಿದ್ದರು ಅನಿಸುತ್ತೆ. ಇಷ್ಟಿದ್ದರೂ ಹನುಮಂತಯ್ಯ ದಲಿತಕಾವ್ಯ ಮೀಮಾಂಸಗೆ ಸಾಕಷ್ಟು ನೀಡಿದ್ದಾರೆ. ಕೆಲವರು ಈಚಿನವರ ಕವಿತೆ ಗುಂಗಾಗಿ ಕಾಡುವುದಿಲ್ಲ ಎಂದು ಪದೇ ಪದೇ ಹೇಳುತ್ತಾರೆ. ಎನ್ಕೆ ಅವರ ಕೆಲವು ಪದ್ಯಗಳನ್ನು ನಮ್ಮವನ್ನಾಗಿ ಮಾಡಿಕೊಂಡರೆ ಗುಂಗಾಗಿ ಕಾಡಬಲ್ಲವು. ಎಲ್ಲರ ಕವಿತೆಯೂ ಅಷ್ಟೇ ತಾನೆ.

 

Leave a Reply

Your email address will not be published.