ಕಾವ್ಯದ ಹೊಸ ಅಲೆ-7 : ಹಕ್ಕಿ ಕಲಾವಿದ ಮಾತ್ರವಲ್ಲ, ಜಗದ ಮೊದಲ ಇಂಜನಿಯರ…

-ನಭಾ

Okkunda1 20170430_163658ಹೈಸ್ಕೂಲ್ ವಿದ್ಯಾರ್ಥಿನಿ ನಭಾ ತನ್ನ ಕವಿತೆಗಳ ಪುಟ್ಟ ಕಟ್ಟನ್ನು ‘ಚಿಟ್ಟೆ’ ಹೆಸರಲ್ಲಿ ನಮ್ಮ ಮುಂದಿಟ್ಟಿದ್ದಾಳೆ. ಅವಳ ಕವಿತೆಗಳನ್ನು ಓದುತ್ತಿದ್ದರೆ, ಓದುಗರ ಬಾಲ್ಯ ಸುಳಿದಾಡಿ ಕಚಗುಳಿ ಇಡುತ್ತದೆ. ನೆನಪಿನಾಳಕ್ಕೆ ಕರೆದೊಯ್ಯುತ್ತದೆ. ಇದೇ ಹೊತ್ತಲ್ಲಿ ತಮ್ಮ ಬಾಲ್ಯ ಮತ್ತು ನಭಾಳ ಬಾಲ್ಯದ ಬದಲಾದ ಚಹರೆಗಳನ್ನು ಮನಸ್ಸು ಹೋಲಿಸಲಿಕ್ಕೆ ಶುರು ಮಾಡುತ್ತದೆ.

ಎಲ್ಲಾ ಕಾಲದ ಬಾಲ್ಯ ಅಖಂಡವಾಗಿ ಏಕರೂಪವಾಗೇನು ಇರುವುದಿಲ್ಲ. ಆಯಾ ಕಾಲದ ಬಾಲ್ಯದ ಅನುಭವಗಳಿಗೆ ಆಯಾ ಕಾಲದ ಮುದ್ರೆಯ ಗುರುತಿರುವುದು ಕಾಣುತ್ತದೆ. ಹಾಗಾಗಿ ನಭಾಳ ಕವಿತೆಗಳು ಒಂದು ರೀತಿಯಲ್ಲಿ ತನ್ನ ಕಾಲದ ಮುದ್ರೆಯ ಗುರುತುಗಳನ್ನು ಕವಿತೆಗಳಲ್ಲಿ ಮೂಡಿಸಿದ್ದಾಳೆ.

“ಮರಗಳ ಕಡಿಯಬಾರದೆಂದು
ಎಲ್ಲರಿಗೂ ಗೊತ್ತು
ಆದರೂ ಅದ ಕಡಿದು
ಮಾಡುತ್ತಾರೆ ಎಲ್ಲರ
ಜೀವಕ್ಕೆ ಆಪತ್ತು”  ಹೀಗೆ ಸರಳವಾಗಿಯೂ, ಮುಗ್ದವಾಗಿಯೂ ಪ್ರಶ್ನಿಸುತ್ತಾ, ಕುತೂಹಲಗಳನ್ನು ಹೊರಹಾಕುತ್ತಾ ಹೋಗುತ್ತಾಳೆ‌. ತನ್ನ ಸುತ್ತಣ ಪರಿಸರದ ಬಗ್ಗೆಯೂ, ತನ್ನ ಒಡನಾಟಕ್ಕೆ ಸಿಕ್ಕುವ ಜೀವಗಳ ಬಗ್ಗೆಯೂ ತನ್ನದೇ ಅರಿವಿನ ಲೋಕದೊಳಗೆ ನುಡಿರೂಪದ ಚಿತ್ರಗಳ ಬರೆಯುತ್ತಾಳೆ. ಇಲ್ಲಿನ ಮುಗ್ದ ಪ್ರಶ್ನೆಗಳು ದೊಡ್ಡವರನ್ನು ಕಾಡುವ, ಕಲಕುವ ಗುಣ ಹೊಂದಿವೆ. ಅದುವೇ ನಭಾಳ ಕವಿತೆಯ ಜೀವಾಳ.

ನಭಾ ಚಿತ್ರಗಳನ್ನೂ ಬರೆಯುತ್ತಾಳೆ. ನೃತ್ಯ ಕಲಿಯಲು ಹಲವರನ್ನು ಆಶ್ರಯಿಸುವ ಬದಲು, ಯಾರನ್ನೂ ಆಶ್ರಯಿಸದೆ ತನ್ನ ಪಾಡಿಗೆ ತಾನು ಚಿತ್ರ ಬರೆಯುವುದೇ ವಾಸಿ ಎನ್ನುತ್ತಾಳೆ. ಈ ಮಾತು ಅವಳ ಕವಿತೆಗಳ ರಚನೆಗೂ ಅನ್ವಯವಾಗುತ್ತದೆ. ಕಾರಣ ಅವಳ ಏಕಾಂತದ ಬಿಡುವು ಅವಳೊಳಗೆ ಕವಿತೆಗಳ ಬೀಜವನ್ನು ಮೊಳೆಸಿವೆ.

“ಅಲ್ಲೊಂದು ಹಕ್ಕಿ ಹಾಡುವಾಗ
ನನಗೂ ಹಾಡಬೇಕೆನಿಸುತ್ತದೆ
ಆದರೇನು ಮಾಡಲಿ ನಾನು ಹಕ್ಕಿಯಲ್ಲ

ಅಲ್ಲೊಂದು ನವಿಲು ಕುಣಿಯುವಾಗ
ನನಗೂ ಕುಣಿಯಬೇಕೆನಿಸುತ್ತದೆ
ಆದರೇನು ಮಾಡಲಿ ನಾನು ನವಿಲಲ್ಲ

ಅಲ್ಲೊಂದು ಮೀನು ಈಜುವಾಗ
ನನಗೂ ಈಜಬೇಕೆನಿಸುತ್ತದೆ
ಆದರೇನು ಮಾಡಲಿ ನಾನು ಮೀನಲ್ಲ

ಎಲ್ಲವನ್ನೂ ಮಾಡಬೇಕೆನಿಸುತ್ತದೆ
ಸರಿಯೋ ತಪ್ಪೋ ಗೊತ್ತಿಲ್ಲ
ಅವನ್ನೆಲ್ಲ ಮಾಡಲು ಅನುಮತಿಯಿಲ್ಲ
ಆ ಹಕ್ಕಿ, ನವಿಲು, ಮೀನು ಎಲ್ಲವೂ
ನನ್ನ ಅಣಕಿಸುತ್ತಿವೆ
ಅವುಗಳೆದುರಿಗೆ ನಾನೇನಾದರೂ
ಮಾಡಬೇಕಿದೆ
ಅದು ನನ್ನದಾಗಬೇಕಿದೆ” ಎಂದು ಬಾಲ್ಯದಲ್ಲಿಯೇ ನಿಸರ್ಗದ
ಸ್ವತಂತ್ರಕ್ಕೆ ಹಂಬಲಿಸುವ ನಭಾ ಮುಂದೆ ಹೆಚ್ಚಿನದನ್ನು ಬರೆಯುವ ಭರವಸೆ ಹುಟ್ಟಿಸುತ್ತಾಳೆ.

ಅಂದಹಾಗೆ, ನಭಾ ಕನ್ನಡದ ಸೂಕ್ಷ್ಮಸಂವೇದನೆಯ ಕವಯಿತ್ರಿ ವಿನಯಾ ಮತ್ತು ಕವಿ ಸಂಶೋಧಕ ಎಂ.ಡಿ.ಒಕ್ಕುಂದ ಅವರ ಮುದ್ದಿನ ಮಗಳು. ನಭಾಳ ಬಾಲ್ಯದ ಗುರುತಿನ ರೇಖೆಗಳ ದಾಖಲೆಯ ಜತೆಗೆ ಮನೆ ಪರಿಸರವೂ ಹದವಾಗಿ ಬೆರೆತಿದೆ.

ಮುಂದೆಯೂ, ನಭಾ ಕಾವ್ಯ ಸಾಂಗತ್ಯದಲ್ಲಿ ಮುಂದುವರಿದು ಕವಿತೆಗಳನ್ನು ಕಟ್ಟಲಿ ಎಂದು ಅನಿಕೇತನ ಬಳಗ ನಭಾಳಿಗೆ ಶುಭಕೋರುತ್ತದೆ.

ಪುಸ್ತಕ:
‘ಚಿಟ್ಟೆ’
ನಭಾ ಒಕ್ಕುಂದ
ವರ್ಷ: ೨೦೧೬
ಚಿಲಿಪಿಲಿ ಪ್ರಕಾಶನ, ಧಾರವಾಡ.

images (3)


೧. ಆಸ್ತಿ

ಬೆಳಿಗ್ಗೆ ಬರುವಾಗ ಸೂರ್ಯ
ಜಗವ ನೋಡುತ್ತ
ಆನಂದಿಸುತ್ತ ಜಗತ್ತು
ಅದ್ಭುತ!

ಎಂದುಕೊಳ್ಳುತ್ತಾನೆ;

ಸಮಯ ಕಳೆದಂತೆಲ್ಲ
ಜಗದ ಕೆಡಕು ನೋಡುತ್ತ
ಮುಳುಗಿ ಹೋದರೆ ಸಾಕು
ಎಂದುಕೊಳ್ಳುತ್ತಾನೆ.

ಮತ್ತೆ ಸೂರ್ಯೋದಯ
ಬದಲಾಗಿರಬಹುದೇ

ಜಗತ್ತು
ಎಂಬ ಆಸೆ

ಅಸಾಧ್ಯ ಎಂಬ ಉತ್ತರ
ಎಲ್ಲದರೊಂದಿಗೆ ತನ್ನ ಬದುಕ
ಕಳೆಯುತ್ತಾನೆ
ಒಂದಲ್ಲೊಂದು ದಿನ ಜಗತ್ತು
ಬದಲಾಗಬಹುದೆಂದು
ಕಾಯುತ್ತಿರುತ್ತಾನೆ

೨. ಅಮ್ಮ

ನನ್ನ ಅಮ್ಮ ನನಗೆ ಶಿಕ್ಷಕಿಯಂತೆ
ಬುದ್ದಿ ಹೇಳುತ್ತಾಳೆ ತಪ್ಪ ತಿದ್ದುತ್ತಾಳೆ

ನನ್ನ ಅಮ್ಮ ಹರಿವ ನದಿಯಂತೆ
ಸದಾ ಹರಿಯುತ್ತಾಳೆ ಕೆಟ್ಟದನೆಲ್ಲ
ನನ್ನಿಂದ ದೂರವಿರಿಸುತ್ತಾಳೆ

ನನ್ನ ಅಮ್ಮ ಹೊಳೆವ ನಕ್ಷತ್ರದಂತೆ
ಹೊಳೆಯುತ್ತಿರುತ್ತಾಳೆ ನನ್ನ ಮನದಲ್ಲಿರುತ್ತಾಳೆ;

ನನ್ನ ಅಮ್ಮ ಒಬ್ಬ ದೇವತೆಯಂತೆ
ತಪ್ಪ ತಿದ್ದುತ್ತಾಳೆ
ಸನ್ಮಾರ್ಗವ ಸೂಚಿಸುತ್ತಾಳೆ.

ನನ್ನ ಅಮ್ಮ ನನಗೆ ಸ್ನೇಹಿತೆಯಂತೆ
ನೋವ ಕೇಳುತ್ತಾಳೆ
ನೋವ ದಾಟುವ ಬಗೆಯ ತಿಳಿಸುತ್ತಾಳೆ

೩. ಹೆದರಿಕೆ

ಆ ಹಕ್ಕಿಗೀಗ ಹಾರಲು ಹೆದರಿಕೆ
ಆ ಕೋಗಿಲೆಗೀಗ ಹಾಡಲು ಹೆದರಿಕೆ
ಆ ನವಿಲಿಗೆ ಕುಣಿಯಲು ಹೆದರಿಕೆ
ಆ ಹಂಸಕ್ಕೆ ಈಜಲು ಹೆದರಿಕೆ

ಎಲ್ಲೋ ಅವುಗಳೂ ನನ್ನಂತೆ
ನೋಡುತ್ತಿರಬಹುದು ಪೇಪರ್
ಕೇಳಿರಬಹುದು ಬಾಂಬು, ಬಂದೂಕು, ಬ್ಲಾಸ್ಟ್
ಎಂಬ ಪದಗಳ

ಹೆದರುತ್ತಿವೆ ಎಲ್ಲದಕ್ಕೂ
ಪಾಪ! ಅವುಗಳಿಗೆ ಸಮಾಧಾನ ಹೇಳುವವರಿಲ್ಲ
ಭಯ ದಾಟುವ ಬಗೆ  ತಿಳಿಸುವವರಿಲ್ಲ
ಆದರೂ ಹಾರುತ್ತವೆ, ಹಾಡುತ್ತವೆ, ಈಜುತ್ತವೆ
ಎಲ್ಲ ತಿಳಿದರೂ ತಿಳಿಯದಂತೆ
ತಿಳಿಯದಿದ್ದರೂ ತಿಳಿದಂತೆ
ಬದುಕುತ್ತವೆ
ಬದುಕುವದ ಕಲಿಸುತ್ತವೆ

images (5)೪. ಮಳೆಗಾಲ

ಈ ಸಲ ಬಿಸಿಲಿನೊಂದಿಗೆ
ಮಳೆಗಾಲ ಆರಂಭವಾಗಿದೆ
ಇದು ಮಳೆಯೇ
ಇಲ್ಲದ ಮಳೆಗಾಲವಾಗಿದೆ

ಈ ಸಲ ಒಣಮರಗಳೇ
ಮಳೆಗಾಲದಲ್ಲಿವೆ
ನೀರಿಲ್ಲ! ಯಾರಿಗೂ
ಬದುಕಲಾಗುತ್ತಿಲ್ಲ

ಈ ಸಲ ಬರಗಾಲ
ಬರಲಿದೆ ಎಂದು ಹೇಳಿದ್ದಾರೆ
ಜನರೆಲ್ಲ ಪಾಪ
ಭಯದಲ್ಲಿದ್ದಾರೆ

ಹಕ್ಕಿಗಳಂತು ಕಾಣುತ್ತಿಲ್ಲ
ಅವುಗಳಿಗೆ ನೀರೂ ಇಲ್ಲ
ಆಹಾರವೂ ಇಲ್ಲ
ರೈತರೆಲ್ಲ ಕಂಗಾಲಾಗಿದ್ದಾರೆ
ಮಳೆಗಾಗಿ
ಕಾಯುತ್ತಿದ್ದಾರೆ

ನನಗೂ ಮಳೆಯ ನೋಡಬೇಕೆನಿಸಿದೆ
ಆದರಿದು ಮಳೆ ಇಲ್ಲದ
ಮಳೆಗಾಲವಾಗಿದೆ

೫. ನನಗೇಕೋ ಈಗೀಗ ತುಂಬ ಬೇಜಾರು

ನನಗೇಕೋ ಈಗೀಗ ತುಂಬ ಬೇಜಾರು
ಯಾರನ್ನೂ ನಂಬುವಂತಿಲ್ಲ
ಯಾರ ಜೊತೆಯೂ ಮಾತಾಡುವಂತಿಲ್ಲ
ಹೊರಗೆ ಹೋಗಿ ನಿಲ್ಲುವಂತಿಲ್ಲ
ಅಟ್ಟಕ್ಕೆ ಕಾಲಿಡುವಂತಿಲ್ಲ
ಫ್ರೆಂಡ್ಸ ಜೊತೆ ಮಾತಾಡುವಂತಿಲ್ಲ
ಹೊರಗೆ ಆಡಲು ಅನುಮತಿಯಿಲ್ಲ
ಮಾತು ಮಾತಿಗೂ ನೀನೀಗ
ಚಿಕ್ಕ ಹುಡುಗಿಯಲ್ಲ ಎಂಬ ಅಮ್ಮನ ಮಾತು
ಜಗತ್ತು ಸರಿಯಿಲ್ಲ ಎಂಬ ಅಪ್ಪನ ಮಾತು
ಎಂಥ ಕಾಲ ಬಂತಪ್ಪ ಎಂಬ
ಯಾರದೋ ಮಾತು
ತಿಳಿದಿದೆ ನನಗೆ, ಬಿಡಬೇಕು ಬೇಸರ
ಎದ್ದು ನಿಲ್ಲಬೇಕು
ಎಲ್ಲಿಂದಲೋ ಬಂದ ಈ
ಯಾತನೆಯ ಕಳೆಯಬೇಕು

೬. ಭಯ

ವಾರ್ತೆ ನೋಡಬೇಕು
ದಿನವೂ ಪೇಪರ ಓದಬೇಕು
ಹೇಳಿದ್ದರು ಮಿಸ್. ಮೆತ್ತಿದ್ದರು ತಲೆಗೆ
ಅದೇ ಗುಂಗು ಪ್ರಾರಂಭಿಸಿದ್ದೆ ವಾರ್ತೆ ನೋಡಲು

ಆಗಿನಿಂದಲೂ ರಾತ್ರಿ ನಿದ್ದೆಯಿಲ್ಲ
ಭಯ ಗಾಬರಿ ಹೋಗಿಲ್ಲ
ಕನಸಿನಲ್ಲೂ ಅವೇ ಚಿತ್ರಗಳು
ತಿಳಿದರೂ ತಿಳಿಯದಂತ ವಾರ್ತೆಗಳು
ಕೇಳಿ ರೂಢಿಯಾದಂತ ಪದಗಳು
ಕಣ್ಣೀರು ಅತ್ಯಾಚಾರ ಕೊಲೆ, ದೌರ್ಜನ್ಯ

ಯಾಕೆ ಈ ಶಿಕ್ಷೆ? ಯಾರಿಗೆ ಶಿಕ್ಷೆ?
ಯಾಕೆ ನೋವು? ಯಾರಿಗೆ ನೋವು
ಆಡಲು ಆಗುತ್ತಿಲ್ಲ ಉಣ್ಣಲು ಮನಸ್ಸಿಲ್ಲ
ಯಾವುದೂ ಖುಷಿ ಕೊಡುತ್ತಿಲ್ಲ

ಎಲ್ಲೆಲ್ಲೂ ಸಿಸಿ ಕ್ಯಾಮರಾಗಳೇ
ಕಾಣುತ್ತಿವೆ.
ನಮ್ಮದೇ ಶಾಲೆ ನಮಗೆ ಕಾವಲು?
ಮನೆಯಲ್ಲೂ ಬರಬಹುದೇ ಕ್ಯಾಮರಾ?
ಈಗಾಗಲೇ ಬೇಡಗಳ ಪಟ್ಟಿ ಬೆಳೆದಿದೆ
ಉಪದೇಶಗಳಿಗೆ ಕತ್ತು ನೋಯುತ್ತಿದೆ
ದಿನವಿಡೀ ತಪ್ಪು ತಿದ್ದಿಕೊಳ್ಳುವುದೇ ಆಗಿದೆ.

ನಮ್ಮ ಮನೆಯಲಿ ನಮಗೇ ಭಯ
ಬಾಗಿಲಲಿ ಭಯ ಕಿಟಕಿಯಲಿ ಭಯ
ದಾರಿಯಲಿ ಹೋಗುವವರ ಭಯ
ಪಕ್ಕದಮನೆ ಅಣ್ಣಂದಿರ ಭಯ
ಭಯದ ವೈರಸ್ ಹರಡಿದ್ದಾರೆ ಯಾರೋ

ಭಯವೆಂಬ ಭಾವ ಕರಗಿಹೋಗಲಿ
ಭಾವನೆಗಳಿಗೆ ರೆಕ್ಕೆ ಮೂಡಲಿ
ಶಾಂತಗಾಳಿ ನೆಮ್ಮದಿಯ ನಿದ್ದೆ
ಸುಂದರ ಕನಸು
ಹೊಸ ಬೆಳಕಿಗೆ ಚೈತನ್ಯ ಕೊಡಲಿ

೭. ಜಗದ ಮೊದಲ ಇಂಜಿನಿಯರ್-1

ಹಕ್ಕಿ ಗೂಡ ಕಟ್ಟುತ್ತಿದೆ
ಎಲ್ಲೆಲ್ಲಿಯದೋ ಕಸ
ಒಣ ಎಲೆ ಕಡ್ಡಿ ಸೇರಿಸಿ
ಹೆಣೆಯುತ್ತಲೇ ಇದೆ ಗೂಡು
ಮೊಟ್ಟೆ ಜಾರದ ಹಾಗೆ
ಮರಿ ಬೀಳದ ಹಾಗೆ
ಹುಳ ನುಗ್ಗದ ಹಾಗೆ

ಸಿಮೆಂಟು ಗಾರೆಗಳಿಲ್ಲ
ಒಂದು ಕೊಕ್ಕು ಎರಡು ರೆಕ್ಕೆ
ಅಪಾರ ಶ್ರದ್ಧೆ

ಹಕ್ಕಿ ಕಲಾವಿದ ಮಾತ್ರವಲ್ಲದ
ಜಗದ ಮೊದಲ ಇಂಜನಿಯರ
**

ಜಗದ ಮೊದಲ ಇಂಜಿನಿಯರ್-2

ಹೊಳೆಯ ದಡಕೆ ತೂಗುಬಿದ್ದ ಮರ
ಮರದ ತುದಿಯ ಅಂಚಲ್ಲಿ
ತೂಗುತಿದೆ ಗೂಡು

ಎಲ್ಲೆಲ್ಲಿಯದೋ ಕಸ ಕಡ್ಡಿ ಹೆಣೆದ ಕೊಕ್ಕು
ಎಲ್ಲಿತ್ತು ಸೂಜಿ, ದಾರ, ಏಣಿ, ಮೊಳೆ,
ಕಬ್ಬಿಣ, ಡ್ರಿಲ್ಲಿಂಗ ಮಷಿನ
ಸಹಾಯಕ್ಕೆ ಸುತ್ತ ಜನ
ಯಾವ ಹುಳವೂ ಮೊಟ್ಟೆ ಕೆಡಿಸದಂತೆ
ಯಾವ ಶತ್ರುವೂ ಮರಿಯ ಕುಕ್ಕದಂತೆ
ಗಾಳಿ, ಮಳೆ, ತೂಗುಗಳಲ್ಲಿ
ಜೀವ ತೂಗುವ
ತಾಯಿ

ಗೀಜಗಕೆ ವಂದಿಸು ಮನವೆ
ಜಗದ ಮೊದಲ ಇಂಜಿನಿಯರ್
ಈ ಹಕ್ಕಿಗೆ ವಂದಿಸು ಮನವೆ

8. ನನ್ನ ಶಾಲೆ

ಮಳೆಗಾಲದ ಬೆಳಗು
ಹುಲ್ಲಿನ ಹೂದಳ ಅರಳಿಸಿ
ನಕ್ಕಿತ್ತು ಏಸುವಿನಂತೆ
ಪ್ರೀತಿಯ ಚೆಲುವ ಹೇಳಿತ್ತು

ಅಂದಿನಿಂದಲೂ ಪಾಠ
ಕಲಿಕೆಯಲ್ಲಿ ಬದುಕು ಅಂತ ತಿಳಿದಂತಾಯ್ತು

ಎಲ್ಲರೂ ಕೂಡಿ ಆಡಿ ನಕ್ಕು ನಗಿಸುವ
ಈ ಶಾಲೆಯಂಗಳವೇ ದೇವಾಲಯ
ನಾನು ಪಡೆದಿರುವೆ ನಡೆದಾಡುವ
ಪ್ರೀತಿಸುವ ದೇವರಂತಹ ಶಿಕ್ಷಕರ
ಅವರು ಕಲಿಸುವ ಪಾಠ
ಬದುಕಿನ ನೀತಿಕೋಶ
ಮರೆಯಲಾರೆ ಕಡೆಯವರೆಗೂ
ನಾನು ಎಲ್ಲೇ ಇರಲಿ ಇಡುವ
ಒಂದೊಂದು ಹೆಜ್ಜೆಯಲ್ಲೂ
ಕಳೆವ ಕ್ಷಣದಲ್ಲೂ
ದುಡಿವ ಘನತೆ, ಪ್ರೀತಿ, ನ್ಯಾಯ, ಶಾಂತಿ
ಸತ್ಯಗಳ ಬಯಸುವೆ
ಮನುಷ್ಯತ್ವವೇ ಎಲ್ಲ ಧರ್ಮಗಳ
ಸಾರವೆಂದು ತಿಳಿಸುವೆ.

9. ಚಿಟ್ಟೆ

ಅಂದದ ಚಂದದ ಬಣ್ಣವ ಹೊಂದಿದ
ಸುಂದರವಾದ ಚಿಟ್ಟೆ
ನೀನು ಹಾಕಿದ ಬೇರೆ ತರಹದ
ಬಣ್ಣ ಬಣ್ಣದ ಬಟ್ಟೆimages (1)

ನಾನು ನಿನ್ನನ್ನು ಮುಟ್ಟಲು ಬಂದರೆ
ಏಕೆ ಓಡುವೆ ನೀನು
ನಾನು ನಿನ್ನನು ಏನೂ ಮಾಡೆನು
ಹೆದರಬೇಡವೆ ನೀನು

ಬರಿದೆ ನೋಡುವೆ ಒಮ್ಮೆ
ನನ್ನ ಗುರು ನೀನು
ಬಣ್ಣ ಬ್ರಶ್ಶು ಹಿಡಿದುಕೊಂಡು
ನಿನ್ನ ನೆನೆವೆ ನಾನು

ಬಣ್ಣ ಬಣ್ಣದ ಮೈಯವಳೆ
ಹೇಗಿದ್ದೀ ನೀನು?
ಕಪ್ಪು ಮುಳ್ಳಿನ ಹುಳುವಾಗಿಯೂ
ಧ್ಯಾನ ಮಾಡಿದೆ ಏನು?

ಆಹಾ ಚಿಟ್ಟೆ ಬಣ್ಣದ ಮೊಟ್ಟೆ
ಬಣ್ಣ ಎಲ್ಲಿ ಹುಟ್ಟಿತು?
ಬೆಪ್ಪು ತಕ್ಕಡಿಯಂತೆ ಬಿದ್ದು
ಧ್ಯಾನ ಮಾಡಿದೆಯೇನು?
ಧ್ಯಾನ ಎಂದರೆ ನೀನು

ಬಣ್ಣ ಎಂದರೆ ನೀನು
ನಿನ್ನ ಬಣ್ಣದ ಚಿತ್ತಾರದಲಿ
ಮಗ್ನವಾಗಿರುವೆ ನಾನು

10.ಕಾಗೆ ಮತ್ತು ಕೋಗಿಲೆ

ಕಪ್ಪು ಬಣ್ಣದ ಕಾಗೆ
ಬಿಳಿ ಆಗಲು ಬಯಸಲಿಲ್ಲ
ಕಪ್ಪು ಕೋಗಿಲೆ
ಹಾಡುವುದ ನಿಲ್ಲಿಸಲಿಲ್ಲ

ಕಾಗೆ ಕೋಗಿಲೆಯ ಮೊಟ್ಟೆಗೂ
ಕಾವು ಕೊಟ್ಟಿತು
ಪುಟ್ಟ ಮರಿಗೆ ಕೊಕ್ಕಿನಲ್ಲಿ ಊಟ ತಂದಿತು
ಕೋಗಿಲೆ ತನ್ನ ಮೊಟ್ಟೆ
ಮರೆತು ಹಾಡತೊಡಗಿತು
ಹಾಡಿ ಹಾಡಿ ಸಂಗೀತಕ್ಕೆ
ಪ್ರಸಿದ್ಧಿ ಪಡೆಯಿತು

ಮರಿಯೀಗ ಸತ್ಯವನ್ನು
ತಿಳಿದುಕೊಂಡಿದೆ.
ಅಮ್ಮ ಕೋಗಿಲೆಯಂತೆ ಹಾಡುತ್ತಿದ್ದರೂ
ಕಾಗೆಯಮ್ಮನ ನೆನೆಯುತ್ತಿದೆ.
ಅದಕೆ ದೊಡ್ಡದನಿ ತೆಗೆದು ಸಾರಿ ಕೇಳಿದೆ
ತಿಳಿಯದ ಕಾಗೆ ಹೋಗುದೂರ
ಎಂದು ಕೊಕ್ಕು ಮಸೆದಿದೆ.

11. ಗೋಳಗುಮ್ಮಟ

ಆ ನಸು ಬೆಳಗು
ತೂಕಡಿಸುತ್ತ ನಿಂತಿದ್ದೆ
ಗೋಲಗುಮ್ಮಟದ ಹೊಟ್ಟೆಯೊಳಗೆ
ಗಲ್ಲ ಗೋಡೆಗೆ ಹಚ್ಚಿ ಕಿವಿ ನಿಮಿರಿ
ಕೇಳಿಸಿತ್ತು ನನ್ನ ಹೆಸರು ಏಳು ಬಾರಿ
ಅಪ್ಪನ ಮುದ್ದಿನೊಂದಿಗೆ

ಎತ್ತ ಓಡಿತೋ ನಿದ್ದೆ
ಮೈ ತುಂಬ ಖುಷಿಯುಕ್ಕಿ
ಬ್ರಹ್ಮಾಂಡದೊಳಗೆ ಓಡಾಡಿದಂತೆ
ಓ, ಅದ್ಬುತವೇ, ಕಲೆಯ ವಿಜ್ಞಾನವೇ
ಶ್ರಮವೇ, ನಿರಂತರ ದುಡಿಮೆಯ ಫಲವೆ,

ಏನೋ ತಿಳಿದಂತೆ ಏನೋ ಕಂಡಂತೆ
ಹಸಿವಿಲ್ಲದ ದಣಿವಿಲ್ಲದ ಸುಖವೇ
ಎಲ್ಲಿದ್ದರೋ ಅವರು
ಗುಂಪುಗಳ ಮಂದೆಯಲಿ ಮುಕುರಿದರು
ಕೂಗುತ್ತ ಚೀರುತ್ತ ಗೀರುತ್ತ
ಕೇಕೆ ಹೊಡೆಯುತ್ತ
ಪುರಾತನ ಪರಿಶ್ರಮವ ಅಳಿಸಿಹಾಕುವೆವೆಂಬ
ದೊಣ್ಣೆ ನಾಯಕರು
ಮರಳಿ ಬರುವಾಗ ಮನಸು ಕಕ್ಕಾವಿಕ್ಕಿ
ಯಾಕೆ ಆಗುತ್ತಿಲ್ಲ ನಮಗೆ
ಕಿಂಚಿತ್ ಸಮಾಧಾನ!
ತಿಳಿಯುವದಿಲ್ಲವೇ, ನಿರ್ಮಾಣದಷ್ಟೇ
ಮುಖ್ಯ ಕಾಪಾಡಿಕೊಳ್ಳುವದೆಂದು

ದಿನಂಪ್ರತಿ ಪ್ರತಿಗಳಿಗೆಯೂ ಯೇಸು
ಬೇಡಿಕೊಳ್ಳತ್ತಲೇ ಇದ್ದಾನೆ ಶಿಲುಬೆ ಹೊತ್ತು
‘ದೇವರೆ ಇವರನ್ನು ಕ್ಷಮಿಸು’
ಗೋಳಗುಮ್ಮಟದಲ್ಲಿ ಏಸು ಶಿಲುಬೆಯ ಕಂಡೆ -ನಭಾ

Leave a Reply

Your email address will not be published.