ಕಾವ್ಯದ ಹೊಸ ಅಲೆ-6: ರಾತ್ರಿ ಹೆಣಗಳ ಮುಂದೆ, ಹಗಲು ಗನಸುಗಳು ಗುಳೆ ಹೊರಟಿವೆ

IMG-20170429-WA0006ತನ್ನ ಕಾಲದ ಚಲನೆಗಳನ್ನು ಸೂಕ್ಷ್ಮವಾಗಿ ಗಮನಿಸುವ ಕವಿ ಮನಸ್ಸೊಂದು ಅದೇ ಕಾಲದ ವಸ್ತುಗಳನ್ನೇ ರೂಪಕಗಳನ್ನಾಗಿಸಿ ಪರಿಣಾಮಕಾರಿ ಕಾವ್ಯ ಕಟ್ಟಲು ಸಾಧ್ಯವಿದೆ. ಇಂತಹ ಹಲವು ಪ್ರಯೋಗಗಳನ್ನು ಹೊಸತಲೆಮಾರಿನ ಕವಿಗಳು ಮಾಡುತ್ತಿದ್ದಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕನ್ನಡ ಕಾವ್ಯದಲ್ಲಿ ಹೊಸ ನುಡಿಗಟ್ಟುಗಳು ತಾಜಾತನವನ್ನು ಉಸಿರಾಡುತ್ತಿರುವುದು ಕಾಣುತ್ತದೆ. ಅಷ್ಟೇನು ಜನಪ್ರಿಯವಲ್ಲದ ತನ್ನ ಪಾಡಿಗೆ ತಾನಿರುವ, ಸದಾ ಮೌನಿಯಾಗಿಯೂ, ಧ್ಯಾನದಲ್ಲಿದ್ದಂತೆಯೂ ಕಾಣುವ ಮಹಂತೇಶ್ ಪಾಟೀಲ್ ಅವರ ಕವಿತೆಗಳು ನಮ್ಮ ಕಾಲವನ್ನು ಹೊಸಗಣ್ಣಿನಿಂದ ನೋಡುವಂತೆ ಮಾಡುತ್ತವೆ.

‘ನೇಣಿಗೇರಿದ ನೇಗಿಲ
ಸಮಾಧಿಯ ಮೇಲೆ
ತಲೆಯೆತ್ತಿದ ಕಾಂಕ್ರೇಟ್ ಕುಸುಮಕ್ಕೆ
ಹೆಣದ ವಾಸನೆ’ ಎಂದು ಬರೆಯುವ ಮಹಾಂತೇಶ್ ಹೀಗೆ ನಮ್ಮ ಕಾಲದ ವೈರುಧ್ಯವನ್ನು ಕಾಣಿಸುತ್ತಾ ಹೋಗುತ್ತಾರೆ. ”ನಾವು  ಮನೆಕಟ್ಟುವ ಬದಲು
ಮರ ನೆಟ್ಟಿದ್ದರೆ
ಹತ್ತಾರು ಹಕ್ಕಿಗಳಾದರೂ
ಗೂಡ ಕಟ್ಟುತಿದ್ದವು…” ಎಂದು ಮನುಷ್ಯರ ಸ್ಥಾವರದಾಚೆ, ನಿಸರ್ಗದ ಚಲನಶೀಲನತೆಯೆಡೆಗೆ ತುಡಿಯುತ್ತಾರೆ.
”ಗಾಯಕ್ಕೆ ಜೀವವಿಮೆ ನೀಡಿ
ಮಲಾಮು ಸಬ್ಸಿಡಿ ಕೊಡುವರಂತೆ” ಎನ್ನುವ ಪ್ರಭುತ್ವದ ಹುಸಿ ನೀತಿಗಳ ಬಗ್ಗೆಯೂ ಕವಿಗೆ ಆತಂಕವಿದೆ.
ಹೀಗೆ ಮಹಂತೇಶರ ಕಾವ್ಯದಲ್ಲಿ ತನ್ನ ಕಾಲದ ಸಂಕಟಗಳ ಜತೆ, ಬದುಕಿನ ಚೈತನ್ಯದ ಸೆಲೆಗಳನ್ನೂ ಗುರುತಿಸುವ ಆಯಾಮವೂ ಇದೆ.

ಮಹಾಂತೇಶ ಪಾಟೀಲ ಅವರು ಬಾಗಲಕೋಟ ಜಲ್ಲೆಯ ಮುಧೋಳ ತಾಲೂಕಿನ ರಂಜಣಗಿ ಊರಿನ ರೈತಕುಟುಂಬದಲ್ಲಿ ಕರೆಪ್ಪ, ಮಹಾದೇವಿ ಅವರ ಮಗನಾಗಿ  ಜೂನ್ 1, 1986 ರಲ್ಲಿ ಜನಿಸಿದರು.

ಕರ್ನಾಟಕ ವಿ.ವಿಯಲ್ಲಿ 2011 ರಲ್ಲಿ ಕನ್ನಡ ಎಂ.ಎ ಮಾಡಿ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ವಿಕ್ರಮ ವಿಸಾಜಿ ಅವರ ಮಾರ್ಗದರ್ಶನದಲ್ಲಿ ”ದಶಕದ ಕಥೆಗಳಲ್ಲಿ ಪರಂಪರೆ ಮತ್ತು ಆಧುನಿಕತೆ” ಎನ್ನುವ ವಿಷಯವಾಗಿ  ಪಿಎಚ್.ಡಿ ಪದವಿ ಪಡೆದ ಮಹಾಂತೇಶ್ ಸಧ್ಯ ಮಂಗಳೂರು ವಿ.ವಿ ಸ್ನಾತಕೋತ್ತರ ಕೇಂದ್ರ ಚಿಕ್ಕಅಳುವಾರ (ಕೊಡಗು) ಕನ್ನಡ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಾವ್ಯ, ಕಥೆ, ವಿಮರ್ಶೆ, ಸಂವಾದ, ಸಿನಿಮಾ ಸಾಹಿತ್ಯದಲ್ಲಿ ಆಸಕ್ತಿ.
ಐದಾರು ವರ್ಷಗಳ ಕಾವ್ಯದ ಸಾಂಗತ್ಯದ ಫಲವಾಗಿ ಸಂಕ್ರಮಣ ಸಾಹಿತ್ಯ ಬಹುಮಾನ (2012). ಕ್ರೈಸ್ಟ್ ವಿಶ್ವವಿದ್ಯಾಲಯದ ಬೇಂದ್ರೆ ಸ್ಮøತಿಕಾವ್ಯ ಬಹುಮಾನ (2014, 2015, 2016) ಪ್ರಜಾವಾಣಿ ದೀಪಾವಳಿ ವಿಶೇಷಾಂಕ- ವಿದ್ಯಾರ್ಥಿ ಕಾವ್ಯ ಬಹುಮಾನ (2015, 2016), ಸಂಚಯ ಕಾವ್ಯ ಬಹುಮಾನ (2014, 2015), ಅಂಕುರ ಕಾವ್ಯ ಬಹುಮಾನ (2013, 2014, 2015). ಯುತ್ ಮಿಡಿಯಾ ಮ್ಯಾಗಜೀನ್ ಕಾವ್ಯ ಬಹುಮಾನ (2014) ದೊರಕಿವೆ. ಮತ್ತು ಪ್ರಜಾವಾಣಿ, ಮಯೂರ ಪತ್ರಿಕೆಗಳಲ್ಲಿ ಕವಿತೆಗಳ ಪ್ರಕಟನೆ.

ಇದೀಗ ಗದಗ ಲಡಾಯಿ ಪ್ರಕಾಶನದಿಂದ ಕೊಡಮಾಡುವ ‘ವಿಭಾ ಕಾವ್ಯ ಪ್ರಶಸ್ತಿ-2016’ರಕ್ಕೆ ಮಹಾಂತೇಶ್ ಅವರ ‘ಒಡೆದ ಬಣ್ಣದ ಚಿತ್ರಗಳು’ ಸಂಕಲನ ಆಯ್ಕೆಯಾಗಿದೆ. ಮೇ 6-7 ರಂದು ನಡೆಯುವ ಮೇ ಸಾಹಿತ್ಯ ಮೇಳದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಮಹಂತೇಶ್ ಅವರಿಗೆ ಅನಿಕೇತನ ಬಳಗದ ಪರವಾಗಿ ಅಭಿನಂದನೆಗಳು.

1) ಮರದ ಹಕ್ಕಿ

images (1)ನಾವು  ಮನೆಕಟ್ಟುವ ಬದಲು
ಮರ ನೆಟ್ಟಿದ್ದರೆ
ಹತ್ತಾರು ಹಕ್ಕಿಗಳಾದರೂ
ಗೂಡ ಕಟ್ಟುತಿದ್ದವು

ಚಿಗುರುವ ಚೈತ್ರವ ಕಂಡು
ಮುಪ್ಪಾದರೂ ಮುಂದೂಡಬಹುದಿತ್ತು

ಜೀವ ಪಡೆಯಬಹುದಿತ್ತು ನೆಮ್ಮದಿಯ
ಹಕ್ಕಿಗಳ ಸ್ವಚ್ಛಂದ ನೋಡಿಯಾದರೂ…

ಸಾವು ಮರೆಯಬಹುದಿತ್ತು ನಾವು
ಹಕ್ಕಿಗಳ ಕಲರವ ಕೇಳಿಯಾದರೂ…

ಮರಭೂಮಿ ಕಾಡಾಗಬಹುದಿತ್ತು ಇಂದಿಗೆ
ಹಕ್ಕಿಗಳ ಹಾಗೆ ಬೀಜ ಬಿತ್ತಿದ್ದರೆ.

ಒಂದೇ ಒಂದು ಸಲ ಮರವಾಗಿದ್ದರೆ
ಮನುಷ್ಯರಾಗಬಹುದಿತ್ತು ನಾವು !

8cdf21b170298fd8f43355243b25810b2) ‘ಸೇರುಪೇಟೆ’

      1
ಖರೀದಿಗಿವೆ
ಹೂ ನಗೆ, ವೈಯಾರ, ವಚನ
ಮೂಲಬೆಲೆಗೆ ಮೊದಲಾಗಿ

ಜಲರಂಧ್ರ, ಬೀಜಕೇಂದ್ರ ಮತ್ತು
ಎದೆತೀರ್ಥ; ಈಗ
‘ಸೇರುಪೇಟೆ’ಯ ಸಭ್ಯ ಸರಕು !

      2
ಬೇಯಿಸಿ ಬಿತ್ತಿದ ಬೀಜಕ್ಕೆ
ಭೂಮಿ ನಾನು
ಉಳುಲಾಗದ ಒಕ್ಕಲು ನೀನು
ಸಬಲೀಕರಣದ ಸೂಲಗಿತ್ತಿ
ಜಗ್ಗಿ ಹೊರ ತಗೆದಿದ್ದು
ಬರೀ ಬಾಡಿಗೆ ಬಸಿರನ್ನು
ನಿಟ್ಟುಸಿರನ್ನು…

ಕರುಳ ಕಂಪಿನ ಕುಸುಮ
ಡಾಲರು ದೇವರ ಶ್ರೀಮುಡಿಗೆ !

3
ಬತ್ತಿದ ಬಂದೂಕು, ಬೊಜ್ಜಿನ ಹುತ್ತ
ಬಿಕರಿಗಿವೆ…
ಮೈಥುನದ ಮಾರುಕಟ್ಟೆಯಲ್ಲಿ !

ಕವಡೆ ಕಿಮ್ಮತ್ತಿನ ಜೀವ
ಮಾರಿಕೊಂಡವರಿಗೆ
ಮಾತ್ರೆ ನುಂಗುವ ಖಯಾಲೆ

ಋತುಮತಿಯ ರಕ್ತ
ಲೋಕ ಚಕ್ರದ ಕೀಲೆಣ್ಣೆ !

     4
ಸಾಂಗತ್ಯದ ಸೂತಕ
ಸಪ್ತಪದಿಯ ಸರಕು
ಶನಿವಾರ ಸಂತೆ ತುಂಬಾ;

ತೊಗಲಿನಾಟಕೆ ಜಗವೇ ತೊಟ್ಟಿಲು !
ಜೋಗುಳಕ್ಕೆ ಕರಡಿ ಕುಣಿತ
ನಿತ್ಯನೂತನ ನೋವು !
ಬಾಡಿಗೆ ಮನೆಯ ಸರಕಿಗೆ

ಇಲ್ಲಿ ಸದಾ ಸಾವು :
ಬದುಕಿನ ಬೆಲೆ ಕುಸಿತಕ್ಕೆ !
ಹಸಿವುಗಳ ಹಣದುಬ್ಬರಕ್ಕೆ !

ನನ್ನನ್ನು ನಾ ಮಾರಿಕೊಂಡಿದ್ದೇನೆ
ಲಾಭದ ಗಂಟು, ಡಾಲರು ದೇವರ ಹುಂಡಿಗೆ
**

3) ಋತುಗೀತ

1
ಬಂಡವಾಳ ಹೂಡಿವೆ ಭ್ರೂಣದಲ್ಲಿ
ಈಡಿಪಸ್‍ನ ಖಾಸಾ ಹಳವಂಡಗಳು

ಬಿಳಿ ಕಾಲರಿನವರದೇನೂ
ತಕಾರಿಲ್ಲ: ಬೇಳೆ ಬೇಯಿಸುವುದಕ್ಕೆ
ಹಣದ ಹಡದಿಯ ಹಾಸಿ
ವಿನಾಯಿತಿಗಳ ವಿನಯ ತೋರಿದ್ದಾರೆ

ಅರೇ- ಅದೆಂತಹ ಮಾತೃ ವಾತ್ಸಲ್ಯ !!

ಜೀವಧಾತುಗಳ ಪೂರೈಕೆಗೆ
ಉಂಬಳಿ ಬಿಡುತ್ತಾರಂತೆ
ಊಳಲಾಗದ ಉತ್ತರರು
ಅಲೀಯಾಸ್ ಕಂಬಳಿ ಹುಳುಗಳು

ಕುದುರೆ ಹಿಂದೆ ಕಿನ್ನೂರಿ ನುಡಿಸುವವರೇ
ಸೋ…  ಎನ್ನಿರೇ- ಸಂಪನ್ನರಿಗೆ

             2
ಕಾಗೆ ಗೂಡು ಬಾಡಿಗೆ ಬಸಿರು
ಕರುಳ ಬಳ್ಳಿಯ ಸರಕುಗಳು
ಸರಿದು ಹೋಗುತ್ತಿವೆ
ಹೃದಯಾಂತರದಿಂದ ದೇಶಾಂತರಕ್ಕೆ

ಹೊಕ್ಕಳ ಹುರಿ ಕತ್ತರಿಸಿ
ಕರುಳಿಗೊಂದು ಕಾನೂನು ಮಾಡವರೆ
ನ್ಯಾಯವಂತ ಸೈತಾನರು !

             3
ಗಾಯಕ್ಕೆ ಜೀವವಿಮೆ ನೀಡಿ
ಮಲಾಮು ಸಬ್ಸಿಡಿ ಕೊಡುವರಂತೆ

ಹರಾಮಿ ಸಂಕಟಗಳೆದುರು
ಹಲಕಾ ಮಂದಿ ಸಾಧುಗಳಾಗವರೇ
ಸಿದ್ಧಿತನಕೆ ಶೀಲದ ಸೋಗಲಾಡಿತನ !

           4
ಮೋಜಿನ ಹಾಡು
ಲೋಕದ ಲಾಲಿತ್ಯಕ್ಕೆ
ಎದೆ ಕುಟುಕರ ಲೋಕದಲ್ಲಿ
ಗಾಯಗಳು ಖಾಸಾ ಬೀಗರಿದ್ದಂತೆ

ಹಂಗಾಮಿ ಹರೆಯಕ್ಕೆ
ಸುಖದ ನೋವು.
ಋತುಗೀತೆಯೊಂದು ರಕ್ತ ಕವಿತೆ.

**

4. ಸನ್ಮಾನ್ಯ ಸಖಿಗಾಗಿ

ನಿನಗಾಗಿ
ದೀಪದ ಹುಳುಗಳನ್ನು ಆರಿಸಿ ತಂದು
ಚಂದ್ರನನ್ನು ಸೃಷ್ಟಿ ಮಾಡಿದೆ

ನಿನ್ನ ಮನೆಯ ದಾರಿಯಲ್ಲಿ
ಎಡವಿಬಿದ್ದ ಕಲ್ಲು ಕಿತ್ತು ತಂದು
ಅರಮನೆಯ ಕಟ್ಟಿದೆ
ಇನ್ನೇನು ಮಾಡಬೇಕಿತ್ತು ಸಖಿ?

ಬೆವರಿನ ಹನಿಗಳೆಲ್ಲ ಸಂಗ್ರಹಿಸಿ
ಅಭ್ಯಂಜನಕ್ಕೆ ನೂರು ತಂಬಿಗೆ ನೀರು ತಂದೆ
ನಿನಗಾಗಿ
ಇನ್ನೇನು ಮಾಡಬೇಕಿತ್ತು ಸಖಿ?

ನಿನ್ನ ಬಗ್ಗೆ ಕಿವಿಯಲ್ಲಿ ಹೂವಿಟ್ಟವರ
ಹೂಗಳ ಪೊಣಿಸಿ ಮುಡಿಗೆ ಮೂಡಿಸಿದೆ
ಹಾದಿ-ಬೀದಿಯ
ಹೂಗಿಡಗಳ ಕಿತ್ತು ತಂದು ಉದ್ಯಾನ ಮಾಡಿದೆ
ಇನ್ನೂ ಏನನ್ನು ಮಾಡಬೇಕಿತ್ತು ಸಖಿ ?
ನಿನಗಾಗಿ

ಸೂರ್ಯನನ್ನು ಚಂದ್ರನಾಗಿಯೇ ?
ಶುಕ್ರಗ್ರಹವನ್ನು ಭೂಮಿಯನ್ನಾಗಿಯೇ ?
ಮಾಡಬೇಕಿತ್ತೇನೂ ಹೇಳಿಬಿಡು
**

5. ಒಂದು ಪ್ರಶ್ನೆ

ಜಾಲಿಯ ಮರದೆದುರು
ಎನ್ನ ಜಾತಿ ಹೇಳಿಕೊಂಡೆ
ಅರಳಿತು ಮರವೆಲ್ಲ ಮಲ್ಲಿಗೆ !

ಹುಲಿಯ ಮುಂದೆ
ಎನ್ನ ಕಾಯಕವ ಬಿನ್ನಯಿಸಿದೆ
ಒರಗಿತು ಹುಲ್ಲೆಯಾಗಿ !

ಚರಂಡಿಯ ನೀರಲ್ಲಿ
ಅಭ್ಯೆಂಜನಗೈದೆ
ಪಾವನವಾಯಿತು ಗಂಗೆಯಂತೆ !

ಮುಚ್ಚುತ್ತಾರೆ ಎದೆಯ ಕದ
ಈ ಮನುಷ್ಯರು ಮಾತ್ರ
ನನ್ನ ಹೆಸರ ಕೇಳಿ

ಆ ಮರ, ಮೃಗ, ಮಾರ್ಜಲಕ್ಕಿಂತ
ಕರುಳ ಹೀನರೇನು ಇವರು ???

**

6. ಈ ಕೈಗಳ ಕಾರುಣ್ಯ

ಈ ಕೈಗಳ ಮೇಲೆ
ನಡೆದು ಬಂದಿದೆ ಕಾಲು

ಲೋಕದ ಸುಖ ನಿದ್ರೆಗಾಗಿ
ರಾತ್ರಿಗಳ ಕಳೆದುಕೊಂಡ
ಈ ಕೈಗಳಿಗೆ ಕನಸೆಂದರೆ
ಎರಡು ತುತ್ತು ಅನ್ನ

ಯಾರೇ ಕುರ್ಚಿಗೇರಿದರೂ
ಕೈಗಳಿಗಂಟಿದ ಕೆಲಸಕ್ಕೆ ಮುಕ್ತಿಯಿಲ್ಲ
ಮುಗಿಯದ ಹಸಿವು
ಬಡತನ, ಭವನೆಗಳ ಸ್ಥಾಯಿಭಾವ

ಹೆಗಲಿಗೆ ನೋಗ, ಕೈಗೆ ನೇಗಿಲು
ಕಾಲು ಉರುಳುವ ಚಕ್ರ
ದುಡಿಮೆಯ ಯೋಗ
ಮೈ ಮನಕೆ

ನಿತ್ಯ ನರಕಗಳ ಮಧ್ಯ
ಸುಖದ ಪೈರು
ಸಂತಸದ ಸುಗ್ಗಿ

ಈ ಕೈಗಳಿಗೆ ಪ್ರಾರ್ಥಿಸಿದ ದೇವರು
ಮನುಷ್ಯನಾಗಿದ್ದಾನೆ !

**

7. ಕಾಗೆಗಳ ಚರಮಗೀತೆ

    ಗದ್ದಲ-1

ಕಾಂತಗೊಂಡ ಬೆರಳ ತುದಿಯಲ್ಲಿ
ಉರುಳುವ ಬೊಜ್ಜುಗೊಂಡ ಯಂತ್ರಭೂಮಿ
ಖಯಾಲಿಯಾಗಿ…
ಬಂಜೆ ರಾತ್ರೆಗೆಲ್ಲಾ ಸಂಜೆ ಹಾಡು
ಚರಮಗೀತೆಯೊಂದು ಚೊರ ಕವಿತೆ !

ವಾಸಿಂಗ್ಟನಿನ ಪ್ರಯೋಗಾಲಯದಲ್ಲಿ
ಕನಸುಗಳಿಗೆ ಮದ್ದು ನೀಡುವರೆಂಬ
ಹೆಳವಮಾತು ಕೇಳಿದಾಗಲೆಲ್ಲ
ಡಾಲರಿನೆದುರು ರೂಪಾಯಿಯಂತೆ
ಕುಸಿದು ಬಿಡುವೆವು

ಪೇಟೆಂಟಿನ ಪೇಟೆಯಲ್ಲಿ
ಬೆಂಬಲ ಬೆಲೆ ಘೋಷಿಸಿದ್ದಾರೆ
ಮೊಲೆಹಾಲು, ನೀಲಿ ಹೂವಿನ ವಾಸನೆಗೆ;
ಗೊಸುಂಬೆ ಸರಕಾರದ ಪ್ರಧಾನಿಯೊಬ್ಬರು
ತುರ್ತಾಗಿ ತಿದ್ದುಪಡಿ ತರುತ್ತಾರಂತೆ
‘ಬಲಿಪಶು’ ಎಂಬ ಪದಕ್ಕೆ,
ವೈರಾಗ್ಯ ಹೊಂದಿದ ಕೋಗಿಲೆಗಳಿಗೆ
ವಸಂತದ ಚುಚ್ಚುಮದ್ದು ಕೊಡುತ್ತಾರಂತೆ !

   ನಾದ-2

ಗಂಡಹೆಂಡಿರ ಜಗಳದಲ್ಲಿ
ಮೂಗು ತೂರಿಸುವ ‘ವಿದೇಶಾಂಗ ನೀತಿ’
ನಡುರಾತ್ರಿ ಜೋಡಿದಿಂಬಗಳು ಬೀದಿಗಿಳಿದಿವೆ
ವೃದ್ದಿಗೊಂಡ ವಿಚ್ಛೇದನಗಳೆದರು.

ರೋಗಗೊಂಡ ನೆಲ, ಔಷದಿಯಾದ ಮಲ
ನೇಪಥ್ಯದ ‘ಲೋಭಶಾಸ್ತ್ರ’ ಕೋಶದ ಮುಂದೆ
ಅರ್ಥ ಕಳೆದುಕೊಂಡ ‘ಜೀವಶಾಸ್ತ್ರ’
‘ಕೆಮ್ಮೀನು’ಗಳು ತಿಂದ ಹೆಣವಾಗಿದೆ

   ಲಯ-3

ಪ್ರೀತಿಯನ್ನು ರಪ್ತು ಮಾಡಿ
ಸಂಕಟಗಳನ್ನು ಆಮದು ತಂದು
ಇಲ್ಲಿ…
ಶಿಲುಬೆಗೆರಿಸಲಾಗಿದೆ ಜೋಡಿ ಗುಲಾಬಿಗಳನ್ನು
ಪ್ರಾಣಪಕ್ಷಿಯ ಎದೆಯ ಮೇಲೆ:

ರಾತ್ರಿ ಹೆಣಗಳ ಮುಂದೆ: ಹಗಲು
ಗನಸುಗಳು  ಗುಳೆ ಹೊರಟಿವೆ !

ಕೋಗಿಲೆಗಳು ಬದುಕುವುದಿಲ್ಲ ತಾಯಿ
ಕಾಗೆಗಳಿರದೀ ಲೋಕದೊಳಗೆ
ಕಾಮ ರೋಗವಾದಿ ಧರೆಯಲ್ಲಿ
ಪ್ರೀತಿ ಮದ್ದಾಗುವುದೇ ಗೆಳತಿ ??

ಕಾಪಾಲ ಕಾಗೆ ಪಿಂಡದೆದರು
ಚರಮಗೀತೆ ಹಾಡುವ ಕೋಗಿಲೆಯಾತ್ಮಗಳು;
ಹಾಲಕ್ಕಿ ಕೂಗುವ ಹೊತ್ತು
ಆತ್ಮದ ಹಾದರಗಳು ಹೆಣವಾಗಿ
ಆಕಾಶ ಗಂಗೆಯಲಿ ತೇಲುತ್ತಿವೆ !
ಅನಾಯಾಸವಾಗಿ…
**

8. ಹಾಲಕ್ಕಿ ನುಡಿದೈತೆ

ಎದಿಹಾಲ ಹುಳಿಯುಂಡು
ಹಾಲಕ್ಕಿ ನುಡಿದೈತೆ…

1
ಉತ್ತರದುರಿಯ ಹೊಂಜು
ದಕ್ಷಿಣದಾಗ ನಂಜಾಗುವ
ಕಾಲ ಬಂದೈತೆ;

ಹಿರಿಹೊಳಿಯಾಗ
ಬಿಸಿಲುಗುದುರೆ ಕಾಲೂ ಮುರಿದೈತೆ;
ಬತ್ತೀಸ ಬಾವಿಯಲ್ಲಿ
ಬೆಂಕಿ ಕಣ್ಣ ಬಿಡತೈತೆ!

ಊರಬೂದಿಯಲ್ಲಿ
ಮಾದೇವನ ಉಸಿರ
ಮೇಲ ಕೆಳಗಾಗತೈತೆ
ಹಾಲಕ್ಕಿ ನುಡಿದೈತೆ… ಅಕ್ಕಾ

         2
ಹಡೆದವ್ವನ ಹೊಟ್ಟ್ಯಾಗ
ಗಿಡುಗ ಹುಟ್ಟಿ
ಎಲಿಯಿಲ್ಲದ ಮರಾ ಕೂಗೈತೆ;
ಹರಾ ಹರಾ ಅಂತಾ
ಬರಾ ಬರಾ ನರಳತೈತೆ
ತಾಯಿ ಬೇರ ಪೂರ!

ಮಣ್ಣ ತಿನ್ನುವ ಮಂದಿ ಹುಟ್ಟಿ
ಮೋಡದಾಗೆ ಬೀಜಬಿತ್ತಿ
ಗಾಳಿ ತಿಂದವ ಗಾಳಿಗರುವಾಗಿ,
ಹುಣಿಮೆದಾಗೆ ಸೂರ್ಯನ ಹೆಣ
ತೇಲಿ ಬರತೈತೆ

ತಿಥಿಗೊಮ್ಮೆ ಚಂದಪ್ಪ ಬಂದು
ಸಾಲಕೇಳತಾನು ಧಾತು
ಗಂಡಸರಿಲ್ಲದ ಊರು ಬರತಾವೋ ತಮ್ಮಾ
ಹಾಲಕ್ಕಿ ನುಡಿದೈತೆ…

         3
ಹೇಳುಕೇಳುವ ಜನಕ
ಜಂಗ ಹಿಡಿದೈತೆ
ಗಂಟುಳ್ಳವಗ ಅಂಟುವ ರೋಗ;
ಮಾತ್ರೆ ನುಂಗುವ ಮಂದಿಗೆ
ಖಾತ್ರಿ ಮನಸ ಖಾಲಿ ಅಗತೈತೆ,

ಹೆಂಗಸರ ಮನಿ ಮುಂದ
ಸೀರೆ ಕೇಳತಾನ ಬುಡಬುಡುಕಿ;
ಪೂರಮಾಸೀ ಪುಂಡಿಪಲ್ಲೆ ಖಾರ ಕೇಳಿ
ಸುಡುಗಾಡ ದಾರಿಗುಂಟ
ದೂರವಾಗ್ಯಾನೋ ಜೋಗಿಯಂಗ

ಇತ್ತ
ಕೂಗೇ ಕೂಗತದ ಹಾಲಕ್ಕಿ
ಬೆಂಕಿಮಳಿಯ ಹರಿದೈತೆ ಉಕ್ಕಿ…!

**

9. ಪ್ರೇಮದ ಪ್ರೋಟಿನು

     1
ಆಲಿಂಗನದ ಅಳು
ಯಾತನೆಯ ಯೌವ್ವನಕೆ;
ಹಗಲ ಭೂತಗಳ ಹಾವಳಿ
ಸರಸ ಸ್ಮಶಾನವೆಲ್ಲ
ಬರೀ ನೀರಧಾತು
ಬಂಜರುಭೂಮಿಗೆ !

ಕಲಬೇರಿಕೆಯ ಸುಖ
ಖೋಟಾ ಲೋಕದೊಳಗೆ;
ಪಾಚಿಗಟ್ಟಿದ ಶೀಲಕ್ಕೆ
ಹುಚ್ಚುತನದ ಹಾದರಾರೈಕೆ

ಇಲ್ಲಿ ಸದಾ ಜೀವಂತ
ಸುಖದ ಸಾವು…!!

    2
ಉರುಳಿಹೋದ ಉದ್ರೇಕ
ಸೋಂಟ ಮುರಿದುಕೊಂಡು ಬಿದ್ದಿದೆ
ಕಣಿವೆಯಲಿ;
ರಕ್ತಹೀನ ರಾತ್ರಿಯಲಿ
ರಕ್ತದಾನದ ಕನಸು
ಬರೀ ಖಯಾಲೆ

ದಾರಿದ್ರ್ಯಶೀಲ ದೇಹದಲ್ಲಿ
ಜಡಗೊಂಡ ಮೋಹ;

ಇಲ್ಲಿ
ಸಾವಿಗೂ ಸುಖದ ಮಾತ್ರೆ;

ಕೈಲಾದಷ್ಟು ಕೊಡಿ:
ಪ್ರೇಮದ ಪ್ರೋಟಿನು
ಒಗೆತನದ ವಿಟಾಮಿನು

ಕೋಮಾದ ಕಣ್ಣರಳಬಹುದು
ಚೈತನ್ಯದ ಅಪ್ಪುಗೆಯಲಿ..

**

9. ದಯಪಾಲಿಸಿ

ದೇವರೆ ನನಗೆ
ಕತ್ತಲನ್ನು ಕರುಣಿಸು;
ಮುಚ್ಚಿಕೊಳ್ಳುತ್ತೇನೆ
ಬೆಳಕಿನ ಬೆತ್ತಲೆಯನು !

ದೇವರೆ ನನಗೆ
ವಿಷವನ್ನು ನೀಡು;
ಶುದ್ಧಿಕರಸಿಕೊಳ್ಳುತ್ತೇನೆ
ಮೈಮನದ ಮಧುಮೋಹವನು !

ದೇವರೆ ನನಗೆ
ಕಡುಕಷ್ಟವನು ಕೊಡು;
ಕಂಡುಕೊಳ್ಳುತ್ತೇನೆ
ನಿತ್ಯಸುಖದ ಮಿಥ್ಯಮುಖಗಳನು !

ದೇವರೆ ನಿನಗೆ
ಮನುಷ್ಯರನ್ನು ತೋರಿಸುತ್ತೇನೆ;
ಹೃದಯಕ್ಕೆರಡು ಕಣ್ಣು ದಾನಿಸು.

**

s-l29810 ಸನ್ಮಾನ್ಯ ಸಚಿವರ ಸುಪ್ರಭಾತ

ದೇಶವನ್ನು
‘ಇಂಡಿಯಾ’ ಮಾಡುತ್ತಾರಂತೆ
ಕರೆಕೊಟ್ಟವರೇ ಕರುಳ ಕತ್ತರಿಗಳೆಲ್ಲ !

       1
ತಿದ್ದುಪಡಿ ತರುತ್ತಾರಂತೆ
ಚರಿತ್ರೆಯ ಚೇಷ್ಟೆಗೆ, ಕುಚೇಷ್ಟೆಗೆ
‘ಕದ್ದ ಹೋಳಿಗೆಯಲಿ ಹೂರಣಿಲ್ಲ’ ಎನ್ನದಂತೆ
ಕಟ್ಟಪ್ಪಣೆಯ ಮಾಡವರೆ
ಸೈತಾನನ ಸನ್ಮಾನ್ಯ ಸಚಿವರು !

ತೀರ್ಥಗಂಗೆ ಚರಂಡಿ ನೀರು
ತೇಲುವ ದೇವರ ಹೆಣ; ಈಗ
ಮಸಿ ಬಳಿವ ಕೈಗಳಿಗೆ !
ವಿಲೇವಾರಿಯ ಚುಕ್ಕಾಣಿ

        2
ನೇಣಿಗೇರಿದ ನೇಗಿಲ
ಸಮಾಧಿಯ ಮೇಲೆ
ತಲೆಯೆತ್ತಿದ ಕಾಂಕ್ರೇಟ್ ಕುಸುಮಕ್ಕೆ
ಹೆಣದ ವಾಸನೆ

ಬೊಜ್ಜಿನ ಬಳ್ಳಿಗೆ ಬೆವರ ಹೂ
ಬರೀ ಈಗ ಗಗನ ಕುಸುಮ

ನಗರದ ನರನಾಡಿಯಲ್ಲಿ
ಕಂಪನಿಗಳ ಇರುವೆ ಸಾಲು !
ತುಟ್ಟಿ ಮಾಲಿಗೆ
ಬಿಟ್ಟಿಭತ್ಯೆಯ ಹಮಾಲರು ನಾವೇ

           3
ಹೊತ್ತಿಯುರಿವ ಒಡಲು
ಬೇಳೆ ಬೇಯಿಸುವವರದೇ ಸರದಿ
ಬೂಸಾತನ ಬೊಬ್ಬೆಮಾತಿನ ಚಪಲ
ಗರಮ್ ಮಸಾಲೆಯಾಗುವ ವರದಿ

ಮಾತನಾಡುತ್ತಾವೆ
ಲಾಠಿ, ಲಾಂಗು, ಬಂದೂಕು
ಹುಳುಮಾನವ ಹಲ್ಲುಕಿತ್ತ ಹಾವು ಈಗ !

ಹಾಡಿಕುಣಿಯುತ್ತಾವೆ
ಆರಿಪ್ಪತ್ತುಕೋಟಿ ಜಂತುಗಳು
ರಾಷ್ಟ್ರಗೀತೆಯನ್ನು ವಿರಹಗೀತೆಯಂತೆ !

ಸುಖದ ನಂಜು ಸಾವಾಗಿ
ಪ್ರಸವಿಸುವ ನಿತ್ಯ ನರಕದಲ್ಲಿ
ಸನ್ಮಾನ್ಯ ಸಚಿವರ ಸುಪ್ರಭಾತ !

ದೇಶದ ಉಪ್ಪುಂಡು
ನೀರು ಕುಡಿಸುವ ಚಾಲಾಕಿಗಳು
ಪ್ರಮಾಣಗೈದವರೆ
ಊಸರವಳ್ಳಿ ತಲೆಯ ಮೇಲೆ ಕೈಯಿಟ್ಟು

‘ದೇಶವನ್ನು ಇಂಡಿಯಾ ಮಾಡುತ್ತಾರಂತೆ’
ಸ್ವಾಮಿ !!

Leave a Reply

Your email address will not be published.