ಕಾವ್ಯದ ಹೊಸ ಅಲೆ-2: ಕಿರಸೂರ ಗಿರಿಯಪ್ಪ

ಬಾಗಲಕೋಟೆ ತಾಲೂಕಿನ ಕಿರಸೂರಿನ ಗಿರಿಯಪ್ಪ ಈಚೆಗೆ  ಭರವಸೆ ಹುಟ್ಟಿಸಿದ ಕವಿ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಗುಗಲಗಟ್ಟಿ(ಕಕ್ಕೆರಾ) ಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕೆಲಸ ಮಾಡುವ ಗಿರಿಯಪ್ಪ ಕವಿತೆಯ ಹೊಸ ನುಡಿಗಟ್ಟಿನ ಹುಡುಕಾಟದಲ್ಲಿರುವವರು. ೨೦೧೫ ರಲ್ಲಿ ಪುಸ್ತಕ ಪ್ರಾಧಿಕಾರದ ಧನಸಹಾಯ ಪಡೆದು ತನ್ನ ಮೊದಲ ಕವಿತಾ ಸಂಕಲನ ‘ನಾಭಿಯ ಚಿಗುರು’ ಪ್ರಕಟಿಸಿದ್ದಾರೆ. ಕವಿತೆಗಾಗಿ ಸಂಚಯ, ಸಂಕ್ರಮಣ, ತುಷಾರ ಪತ್ರಿಕೆಯ ಕಾವ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ.

ಗಿರಿಯಪ್ಪ ಕವಿ ಹೇಗೋ ಅತ್ಯುತ್ತಮ ಶಿಕ್ಷಕ ಕೂಡ. ಕಾಳಜಿಯಿಂದ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಸದಾ ಕ್ರಿಯಾಶೀಲರಾಗಿರುತ್ತಾರೆ. ಇದರ ಪರಿಣಾಮ ಕಳೆದ ಶೈಕ್ಷಣಿಕ ವರ್ಷದಲ್ಲಿ ೪ ಮಕ್ಕಳು ನವೋದಯ ಶಾಲೆಗೂ, ೯ ಮಕ್ಕಳು ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೂ, ೬ ಮಕ್ಕಳು ಮುರಾರ್ಜಿ ವಸತಿ ಶಾಲೆಗೂ ಆಯ್ಕೆ ಆಗಿದ್ದಾರೆ. ಕಡುಬಡತನದ ಮಕ್ಕಳಲ್ಲಿ ಹೊಸ ಕನಸುಗಳನ್ನು ಹೆಣೆಯುತ್ತ ಭರವಸೆ, ಆತ್ಮವಿಶ್ವಾಸ ತುಂಬುವ ಗಿರಿಯಪ್ಪ ನಿಜಕ್ಕೂ ಶಿಕ್ಷಕರಾಗಿ
ಸಾರ್ಥಕ ಕೆಲಸ ಮಾಡುತ್ತಿದ್ದಾರೆ.

ಗಿರಿಯಪ್ಪನ ‘ನಾಭಿಯ ಚಿಗುರು’ ಕವಿತಾ ಸಂಕಲನ ತಾಜಾತನದ ನುಡಿಗಟ್ಟಳಿಂದ ಗಮನಸೆಳೆಯುತ್ತದೆ. ಗಜಲುಗಳ ಪ್ರಯೋಗವನ್ನೂ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕದ ಬದುಕಿಗೂ ಗಿರಿಯಪ್ಪನ ಕಾವ್ಯ ಧ್ವನಿಯಾಗುತ್ತಿದೆ. ಇವರ ಕಾವ್ಯ ಪಯಣದಲ್ಲಿ ಮತ್ತಷ್ಟು ಕಾಡುವ ಕವಿತೆಗಳು ಹುಟ್ಟಲಿ.

****

images (8)1. ಜಾಲಿಗಳ ಮೈಯಾಗ ಅಲ್ಲಮನ ಅಂಗಳ

ಅಜ್ಜನ ನೆನಪುಗಳ ಆಲದ ಬೇರಿಗೆ ಇಳಿಸಿ
ಬಿಡುಗಣ್ಣಲ್ಲಿ ಕುಂತಿವೆ ರಸ್ತೆಪಕ್ಕದ ಜಾಲಿಗಳು
ಶಾಪದ ಕೊಳೆ ಕಳಚಲು
ಆಗಾಗ ಚಿಗುರು ಮೊನೆಯ ತುರುಬುಗಳಾಗಿ
ಹರಡಿವೆ ನೆಲದ ತುಂಬಾ

ಕೆರೆ ಬದು ಹಳ್ಳದ ಗುಂಟ ಮೈಹಾಸಿ ಮಲಗಿರವ ಜಾಲಿಗಳು
ವಸಂತ ಗಾಳಿಯಲಿ
ಬಾಡಿದ ತುಟಿಗೆ ಅಂಟು ಲೇಪಿಸಿ
ನಿಲ್ಲುವವು  ಕರಿಮೈಗಳ ಕಲ್ಪವೃಕ್ಷಗಳಾಗಿ

ಜಾರಿಬಿದ್ದ ಎದೆಯ ದನಿಗೆ
ನೆರಳ ಮಾಲೆಯಾಗಿ
ಹಾಳು ಬಾವಿ ಬಿದ್ದ ಮನೆಗಳ ತುಂಬಾ ನಗುವಿನ ದೂಪವಿರಿಸಿ
ಮಿಂಚಿನ ಓಲೆಗಳಾಗಿ ಸುತ್ತುವವು ಬೆವರ ಕಣ್ಣಿಗೆ

**
ಕಣದ ರಾಶಿಯ ಸುತ್ತ ಡಿರಿಕೆ ಹೊಡೆಯುತ್ತಾ
ಮನೆಯ ಜಂತಿಗಳಾದವು ಜಾಲಿಗಳು
ಬದುಕ ಬಂಡಿಗೆ ನೊಗವಾಗಿ
ಕೂರಿಗೆ ದಿಂಡಾಗಿ ಹೊಲದ ತುಂಬಾ ಉರುಳಾಡಿ
ಮಣ್ಣ ಉಡಿಯೊಳಗೆ ದ್ಯಾನಸ್ಥ ಬುದ್ದನಂತೆ ಕಂಡವು

ವಲಸೆ ಹೆಜ್ಜೆಗಳಿಗೆ  ಕನಸುಗಳ ತಾಣಗಳ ನೇಯ್ದು
ಮೈಮುಳ್ಳುಗಳ ಹೂವಾಗಿಸಿ
ಹೊಸ್ತಿಲುಗಳಾದವು ಮುಗಿಲ ಮುಗುಳ್ನಗೆಯಂತೆ

**
ಉರಿವ ಪಾದಗಳಿಗೆ ಕಾಯಕದ ಕೋಲುಗಳಾಗಿ
ಹರಿವ ನಾಡಿಗಳ ಕುದಿಸಿ ಜೀವತೇದು  ಇದ್ದಿಲುಗಳಾದ ಜಾಲಿಗಳು
ಮನೆ ಮನೆಯ ಕುಲುಮೆಯೊಳಗೆ ಮನಷ್ಯರ ನೆರಳುಗಳಾಗಿ
ಸುತ್ತಿ ಬಂದವು ಅಲ್ಲಮನ ಅಂಗಳದಲಿ
*

2. ನೊರೆ ಹಾಲಿನ ರೆಪ್ಪೆ

ಕೋಳಿ ಕೂಗಿಗೆ ಎಚ್ಚರಗೊಂಡ ಕಿವಿ
ಇರುಳ ಬಾಲ ಚಡಪಡಿಸಿ
ಮಂಪರುಗಣ್ಣಲ್ಲಿ
ಹುಬ್ಬೇರಿಸಿ ಬೆಳಕ ಕಣ್ಣಿಗೊತ್ತಲು
ತವಕಗೊಂಡವು ರೆಪ್ಪೆಗಳು

ಮೈ ತೆವಲಿಗೆ ಜೋತುಬಿದ್ದ
ತಗಣಿಗಳ ಯುದ್ಧದ ಗಳಿಗೆ
ನಿಟ್ಟುಸಿರು ಬಿಟ್ಟ ಹಾಸಿಗೆಯಲಿ
ಜೋತುಬಿದ್ದಿವೆ ಗಾಯದ ಗುರುತುಗಳಾಗಿ

ರಾತ್ರಿಯಿಡೀ ಚುಕ್ಕಿಗಳ ಎಣಿಸಿ ಸುಸ್ತಾದಂತೆ
ಕಂಡ!
ಈ ರೆಪ್ಪೆಗಳ ತಿಳಿಗೊಳದಲಿ
ಇರುಳ ಚಂದಿರನ ನ್ರತ್ಯಬಿಂಬ

**
ಕಾವುಗೊಂಡ ನೆನಪುಗಳೀಗ
ಹೆಗಲ ರುಮಾಲಿಗೆ
ಮೆತ್ತಿದ ಕನಸುಗಳ ನೆನೆಸಲು
ಹದಗೊಂಡವು ಕುರಿ ಹಿಕ್ಕೆಗಳಾಗಿ

ಬಲಿತ ಬಂಡೆಗಳ ಮ್ಯಾಲೆ ಕುಣಿದವು ರೆಪ್ಪೆಗಳು
ಕಾಡ ಗವಿಗಳ ಹೊಕ್ಕು
ಮುಳ್ಳ ಪೊದೆಗಳ ತೂರಿಸಿ
ಹಾತೊರೆದವು ಹಸಿಗರಿಕೆಯ ಹೊಸ ಚಿಗುರಿಗಾಗಿ

ಮಸಾರಿ ನೆಲದ ಒಣಗರಿಕೆಯ ಸುತ್ತ
ಡಿರಿಕೆ ಹೊಡೆವ ರೆಪ್ಪೆಗಳು
ಕೆಂಪು ಧೂಳಿನ ನಾಲಿಗೆಯಲೂ
ಬಾನಂಗಳವ ಬಯಸಿ ಸುತ್ತಿ ಸುರಭಿಯಾಗಿ
ಬಿತ್ತರಗೊಂಡಿವೆ ಹಾಲ್ಗಲ್ಲದ ಹೊಕ್ಕಳಿಗೆ
ನೊರೆಹಾಲಿನ ರೆಕ್ಕೆಗಳಾಗಿ..
*
3. ನೆಲದ ಹೆಗಲೂರಿದ ಗುರುತು

(ದಿಡ್ಡಳ್ಳಿಯ ಆದಿವಾಸಿ ಜನರ
ಜೀವಮಿಡಿತಕ್ಕೆ ಈ ಕವಿತೆ ಅರ್ಪಿತ.)

ಇಳಿಬಿದ್ದ ಮುಗಿಲು
ಎದೆಯಾಗ ಹೊಕ್ಹಂಗ!
ಗುಡಾರದ ಕಾಲುಗಳು ತಲೆಯ ನೇವರಿಸಿ
ಪಕ್ಕೆಲುಬಲಿ ಸೆಳೆತಗೊಂಡು ಉರುಳಿದಂತೆ

ಈ ಕತ್ತಲ  ಸರಳ ಬಂದಿ  ಹುಣ್ಣಿಗೆವೆಗಳಲಿ
ಜಾಲಿಗಂಟಿದ ಜೋಳಿಗೆಗೆ
ಕರುಳುಣಿಸಿದ ಬೀದಿ ಬದಲಿಯಾದ ಸುದ್ಧಿ

ಎದೆಯುಬ್ಬಿಸಿ ಬೆವರ  ಕುಡಿದ ನೆಲ
ಒಡಲಿಗೆ ಕಪ್ಪು ಬಟ್ಟೆ ಬಿಗಿಸಿಕೊಂಡು
ಕಣ್ಣೀರ ಕಡಲುರಿತದ ರೆಪ್ಪೆಗೆ
ಅಹವಾಲು ಹೊರಡಿಸಿದೆ
ಗುರುತಿನ ಸಾಕ್ಷಿಗಾಗಿ

**
ಬೇರಿನ್ಹಂಗ ಆಳ ಹೊಕ್ಕ ನೆನಪು
ಚಂದ್ರನ್ಹಂಗ ಇರುಳ ಕುಡಿದ ಕನಸುಗಳು
ಬೀದಿ ಬದಿಯಲಿ
ಕಾಡು ಎದೆಯಲಿ ನೆಲೆಯೂರಿವೆ
ಇರುಳ ಹಕ್ಕಿಯಾಗಿ

ಹೆಜ್ಜೆಗೆ ಗೆಜ್ಜೆ ಕಟ್ಟಿ ಕುಣಿದು
ಕುಪ್ಪಳಿಸಿದ ತಮಟೆಗಳು
ಹಾಡಿಗೆ ಕಣ್ಣಾದ
ಢಮರುಗದ ಕೋಲ್ಮಿಂಚುಗಳು
ಕಿವಿಯೋಲೆಗಳಾಗಿ ಇಳಿಬಿದ್ದು
ಉಯ್ಯಾಲೆಯಾದ ಬಿಸಿಯುಸಿರು
ಹೊರಳಾಡಿದವು ನಿತ್ಯಚಕ್ರದ ಸುರುಳಿಯಲಿ

**
ತಲೆಮಾರುಗಳ ಕಾವುಂಡ ನೆಲೆ
ಹಲವು ಬುರುಡೆಗಳ ಜೀವಮಿಡಿತಕ್ಕೆ
ಶತಮಾನದ ಕಸೂತಿಯಾಗಿ
ವಂಶವ್ರಕ್ಷ ಚಿತ್ರಿಸಿ
ಹದವಾದ ಮಣ್ಣೊಳಗೆ
ಬೆಸೆದುಕೊಂಡ ಬೀಜಗಳಾಗಿವೆ

ಸಾಲುದೀಪದ ನಕ್ಷತ್ರಗಳ್ಹಂಗ
ನೆಲದ ಹೆಗಲೂರಿದ ಪುರಾವೆಗಳು
ವಸಂತದ ಅಕ್ಕರೆಯಲಿ
ನಿತ್ಯನೂತನ ಘೋಷಗಳು
*

images (10)4. ಬೆಳಕ ಗೆಜ್ಜೆ ಕಟ್ಟಿ
(ಗಜಲ್ )

ಎದೆಯ ಗುರುತುಗಳ ಬಯಲಲಿ ಚಲ್ಲಿ ಅನಿಷ್ಟಗಳ ದಿಕ್ಕರಿಸಿ  ನಿಂತ ಗಾಯಗಳು
ಮಗುಚಿ ಮಲಗಿದ ನೆಲದ ಗರಿ ಹೆಜ್ಜೆ ಹೆಜ್ಜೆಗಳ ದನಿಯಲಿ ಬಿತ್ತರಿಸಿ ನಿಂತ ದನಿಗಳು

ಬಯಲ ತೆಕ್ಕೆಯ ನುಂಗಿದಂತೆ ಹಸಿರ ಕೊರಳಿಗೆ ಇರುಳ ಮಾಲೆಯ ದೂಪ!
ಹೊಗೆಯ ಹೊದಿಕೆಯೊಳಗೆ ಬೆಳಕ ಗೆಜ್ಜೆ ಕಟ್ಟಿ
ಮುಷ್ಠಿಯಲಿ ಎತ್ತರಿಸಿ ನಿಂತ ದನಿಗಳು

ಒಳಮುಖದ ಪೊರೆಯೊಳಗೆ ಕಾಲದ ಬದುಕಿಗೆ ಮೋಡಿಯಾದ ನೆರಳು
ಮುಖವಾಡದ ಗತ್ತಿಗೆ ಬೆದರದ ನೆಲದ ನೇಯ್ಗೆ
ನವ ಚಿಗುರಿನೊಡಣೆ ಅರಳಿಸಿ ನಿಂತ ದನಿಗಳು

ಜೀವ ಜೀವಗಳ ತಗಲ್ಹಾಕಿ!  ನಗ್ನ ಕುರುಡಿಯ ಪಂಚಾಂಗದ ಉಧೋ! ಊಧು!
ಕಲಬೆರಿಕೆಯ ಮನಸುಗಳ ವ್ಯಾಘ್ರತೆ ಕಳಚಿ ನೆಲದ ನೆಲೆಗಾಗಿ ಅರಸಿ ನಿಂತ ದನಿಗಳು

ಭಜನೆಯ ನೆಪದಲಿ ಜಗದ ಕಣ್ಣಿಗೆ ಬಾಳು ಮುರುಕ ಪುಂಗಿ ವೇಷದ ನಾಮ!
ಮಾತಿನ ಮೋಡಿಗೆ ಸಿಲುಕದೇ ಜನ ಜಾಥಾದ ರೆಕ್ಕೆಗಳು ಚಲೋ ಉಡುಪಿ ಕಡೆಗೆ ಗಟ್ಟಿಸಿ ನಿಂತ ದನಿಗಳು

ಸ್ವಾಭಿಮಾನದ ಪ್ರಶ್ನೆ ಗಿರಿಯ ಕರುಳು  ನುಂಗಿದ ಕತ್ತು ಬಲೆಗೆ ಸಿಲುಕಿದೆ
ಬಯಲ ನದಿಗಳ ಕಣ್ಣು ಕಡಲ ಕೂಟದಲಿ ನೆಮ್ಮದಿಯ ರತ್ನಗಳರಸಿ ನಿಂತ ದನಿಗಳು
*

5. ನೀ ನಾನಾದ ಗಳಿಗೆ
(ಗಜಲ್ )

ನೀ ನಾನಾದ ಮೇಲೆ ಕಲ್ಲು ಹೂಗಳು ಕನವರಿಸಿ ಮೊಗ್ಗಾದ ಗಳಿಗೆ
ಬೆರಗಿನ ಬಂಡೆಗಳಲಿ ನಿನ್ನ ಗೆಜ್ಜೆಗಳ ಮೋಹವು ಈಗಲೂ ರಂಗುರಂಗು!

ನೀ ನಾನಾದ ಮೇಲೆ ಹಸಿದ ಬಡ್ಡೆಯ ಕರುಳಿಗೆ ಚಿಗುರೆಲೆಗಳ ಹಿಗ್ಗಾದ ಗಳಿಗೆ
ಬೋಳು ಎಲೆಗಳ ಕೊರಳ ಹೊತ್ತ ನಿನ್ನ ಕಣ್ಣ ಪಾತ್ರೆಗಳು ಈಗಲೂ ರಂಗುರಂಗು

ನೀ ನಾನಾದ ಮೇಲೆ ಇಬ್ಬನಿಯ ಹನಿಗಳು
ಅಚ್ಚಾಗಿ ಎದೆಯೊಳಗೆ ಹಿಗ್ಗಾದ ಗಳಿಗೆ
ನೋಟದ ಪರಿಗೆ ಅರಳಿದ ನಿನ್ನ ರೆಪ್ಪೆಗಳ
ತಕದಿಮಿತಾ! ಈಗಲೂ ರಂಗುರಂಗು!

ನೀ ನಾನಾದ ಮೇಲೆ ಮುಳ್ಳಪೊದೆಯ  ರೆಕ್ಕೆಗಳ ತುರುಬು ನವಿಲಾದ ಗಳಿಗೆ
ಹಸಿ ಮೊಗದ ಚಿತ್ತ ಇರಿಸಿದ ನಿನ್ನ ಕೆಂದುಟಿ ತೋಟದ ನಗು ಈಗಲೂ ರಂಗುರಂಗು!

ನೀ ನಾನಾದ ಮೇಲೆ ಮಕರಂದದಲಿ ಮದುವಣಗಿತ್ತಿಯ ಚಿಟ್ಟೆ ಬಯಲಾದ ಗಳಿಗೆ
ಮುಗ್ಧ ಮುಗಿಲುಗಳ ಎದೆಯೊಳಗೆ ಮಳೆಹನಿಗಳ ಬೆರಗು ಈಗಲೂ ರಂಗುರಂಗು

ನೀ ನಾನಾದ ಮೇಲೆ ನೆಲದ ತೇವ ಕಟ್ಟಿಸಿದ ಬೇರು ವಿಸ್ತ್ರತ ನೆಲೆಯಾದ ಗಳಿಗೆ
ಬಿರುಕು ನೆರಿಗೆ ಹೊತ್ತು ಸಂತೈಸೋ ಮುಗುಳ್ನಗೆ ತುಂಬಿದ ಒಡಲು ಈಗಲು ರಂಗುರಂಗು!

ನೀ ನಾನಾದ ಮೇಲೆ ಗಿರಿಯ ಕನಸಿಗೆ ಹಸಿರ ವನ ತುಂಬಿ ಇಬ್ಬಿನಿಯ ರೆಕ್ಕೆಯಾದ ಗಳಿಗೆ

ಬಯಲ ತೋಟದ  ವಿಸ್ಮಯದ  ಉಯ್ಯಾಲೆ ನೆನಪುಗಳು ಈಗಲೂ ರಂಗುರಂಗು

*
6. ನೆಲದ ತುಟಿ

ಮಿಂಚಿನ ಕಣ್ಣೊಳಗೆ  ಮೋಡ ಗಭ೯ಧರಿಸಿ ನೆಲದ ತುಟಿಗೆ ತಾಕಿದೆ
ಹಸಿರ ಬುಡದೊಳಗೆ ಮಣ್ಣು ಬಂಜೆಯಾಗದೆ ಸಾಗಬೇಕಿದೆ

ಮೋಡದ ಕಣ್ಣೊಳಗೆ ಚುಕ್ಕಿಗಳು ಇಳಿಬಿದ್ದು ಚಂದ್ರನತುಟಿಗೆ ತಾಕಿವೆ
ನಿಟ್ಟುಸಿರ ತೇವದೊಳಗೆ ಚಂದ್ರ ಮರಿಚಿಕೆಯಾಗದೆ ಸಾಗಬೇಕಿದೆ

ಮಣ್ಣ ದನಿಯೊಳಗೆ ಜೀವತಂತು ಮೀಟಿ ಬೆಳಕ ತುಟಿಗೆ ತಾಕಿದೆ
ಇರುಳ ಕೊರಳೊಳಗೆ ಮಿಂಚು ಕುರುಡಿಯಾಗದೆ ಸಾಗಬೇಕಿದೆ

ಕಡಲ ಕಣ್ಣೊಳಗೆ ಮುತ್ತುಗಳು ಬೆಸೆದು ಮರಳು ತುಟಗೆ ತಾಕಿದೆ
ಅಲೆಯ ರಭಸದೊಳಗೆ ಜೀವಗಳು ಕೊನೆಯಾಗದೆ  ಸಾಗಬೇಕಿದೆ

*

7. ಕಂಬನಿಯ ಪಾತ್ರೆ

ಅವಳು ಮಧು ಪಾತ್ರೆಯಲಿ ನೆನಪುಗಳ ಕಣ್ಣೀರು  ಸುರಿದಳು
ನನ್ನ ದುಃಖದ ನೆರಳೆ ಮಧುಶಾಲೆಯ ನಶೆಯಾಗಿ ತೇಲುತಿತ್ತು

ಅವಳು ಪ್ರತಿ ಹೆಜ್ಜೆಯಲಿ ತಿರುವುಗಳ  ಕಣ್ಣೀರು ಸುರಿದಳು
ನನ್ನ ನೆನಪುಗಳ ಓಲೆ ಮಧುಶಾಲೆಯ ಕಥೆಯಾಗಿ ತೇಲುತಿತ್ತು

ಅವಳು ಚಿತ್ರದ ಬೆನ್ನಿಗೆ ಹಸಿಗಾಯಗಳ ಕಣ್ಣೀರು ಸುರಿದಳು
ನನ್ನ ಕಣ್ಣ ರೆಪ್ಪೆಯ ತೇವ ಮಧುಶಾಲೆಯ ಬಣ್ಣವಾಗಿ ತೇಲುತಿತ್ತು

ಅವಳು ಕನಸ ಕೌದಿಯಲಿ ನಿಟ್ಟುಸಿರುಗಳ  ಕಣ್ಣೀರು ಸುರಿದಳು  ನನ್ನ ಒಡಲ ಗರಿ ಮಧುಶಾಲೆಯ ಹೊಲಿಗೆಯಾಗಿ ತೇಲುತಿತ್ತು

ಅವಳು ರಾತ್ರಿಯ ಹೊಟ್ಟೆಗೆ ನಲುಗಿ ಕನಸುಗಳ ಕಣ್ಣೀರು ಸುರಿದಳು
ನನ್ನ ಹೃದಯದ ಪದ ಮಧುಶಾಲೆಯ ಜೋಗುಳವಾಗಿ ತೇಲುತಿತ್ತು

ಅವಳು ಉರಿವ ಕಾಲದಲಿ ಎದೆಬಡಿತಗಳ ಕಣ್ಣೀರು ಸುರಿದಳು
ನನ್ನ ನಾಡಿಯ ನಾದವು ಮಧುಶಾಲೆಯ ವಸಂತವಾಗಿ ತೇಲುತಿತ್ತು

ಅವಳು ಬಂಜೆ ನೆಲದಲಿ ಕರುಳ ಕುಡಿಗಳ ಕಣ್ಣೀರು ಸುರಿದಳು
ಗಿರಿಯ ತುಟಿ ಅವಳ ಉಡಿಯಲಿ ಮಧುಶಾಲೆಯ ನಗುವಾಗಿ ತೇಲುತಿತ್ತು

*
8. ಪಾದಗಳು ಚಿತ್ರಿಸಿದ ಬಾಗಿಲು

ಇರುಳ ಮುಖ ಸರಿಸಿ ಬೆಳಕ ಚಿತ್ರದ ಮೇಲೆ ಮೂಡಿವೆ ಪಾದಗಳು
ಬಾಗಿಲು ಬಳ್ಳಿಗಳಾಗಿ ಗಾಯಗಳ ಕಣ್ಣೀರಲಿ ಮೂಡಿವೆ ಪಾದಗಳು

ಅಲೆಮಾರಿಯ ಜೋಳಿಗೆಯಾಗಿ ರಸ್ತೆಗಳ ಬಾಯಿಗೆ ರೆಕ್ಕೆಯಾದವು
ಕೌದಿಯ ಚಿತ್ರವಾಗಿ ನೆನಪಗಳ ಹೊಸ್ತಿಲಲಿ ಮೂಡಿವೆ ಪಾದಗಳು

ಕಾಲದ ಗೆಜ್ಜೆಯಾಗಿ ಮಣ್ಣ ಬೇಗುದಿಯೊಳಗೆ ಅರಳಿ ನಿಂತವು
ಕಂಬಗಳ ಕಣ್ಣಾಗಿ ಜೀವಮಿಡಿವ ನೋಟದಲಿ ಮೂಡಿವೆ ಪಾದಗಳು

ಮುಳ್ಳಬೇಲಿಗಳ ದಾಟಿ ದನಕರುಗಳ ಹೆಜ್ಜೆಗಳಲಿ ಬೆಟ್ಟ ಸುತ್ತಿದವು
ಕಲ್ಲುಗಳ ಕರಗಸಿ ನೆಲಗಂಬದ ಬೇರಾಗಿ ನೆಲೆಯೂರಿವೆ ಪಾದಗಳು

ಬಿಸಿಲ ನೆತ್ತಿಯಲಿ ಎದೆಬಡಿತದ ಕೈಗಳಾಗಿ ’ಗಿರಿ’ ಕನಸುಗಳಲಿ  ಬೆವರಾದವು
ಹೂವು ಮಿಡಿಗಳ ತೋರಣವಾಗಿ ವಸಂತದ ಚಿತ್ತವಾಗಿ ಮೂಡಿವೆ ಪಾದಗಳು

FB_IMG_1488510850375ವಿಳಾಸ: ಕಿರಸೂರ ಪೋ/ಸಾ,  ಬಾಗಲಕೋಟ ತಾ/ಜಿ
೫೮೭೧೧೧
ಶಾಲೆ ವಿಳಾಸ: ಸ.ಕಿ.ಪ್ರಾ.ಶಾಲೆ      ಗುಗಲಗಟ್ಟಿ (ಕಕ್ಕೇರಾ) ಸರಪುರ(ತಾ)
ಯಾದಗಿರಿ (ಜಿ)https://www.facebook.com/girish.asangi

ಸಂಪರ್ಕ:+919449380556

 

One Response to "ಕಾವ್ಯದ ಹೊಸ ಅಲೆ-2: ಕಿರಸೂರ ಗಿರಿಯಪ್ಪ"

  1. ಅನಿಲ್ ಗುನ್ನಾಪೂರ  March 4, 2017 at 5:32 pm

    ಹೌದು, ಕಿರಸೂರು ಗಿರಿಯಪ್ಪನವರು ಭರವಸೆಯ ಕವಿ.

    Reply

Leave a Reply

Your email address will not be published.