ಕಾವ್ಯದ ಹೊಸ ಅಲೆ: ರುಕ್ಮಿಣಿ ನಾಗಣ್ಣನವರ ಪ್ರೇಮಕಾವ್ಯ

ಹೊಳೆಗೆ ಹೊಸನೀರು ಎಂಬಂತೆ ಕನ್ನಡ ಕಾವ್ಯದ ಹೊಳೆಗೆ ಹೊಸಬರ ಹೊಸನೀರಿನಂಥಹ ಕಾವ್ಯ ಜುಳುಜುಳು ಹರಿದು ಸೇರುತ್ತಿದೆ. ಅದರ ಸದ್ದು ಸಾಮಾಜಿಕ ಜಾಲತಾಣಗಳಲ್ಲಿ ಪಸರಿಸುತ್ತಿದೆ. ಅಂತಹ ಹೊಸ ತಲೆಮಾರಿನ ಕಾವ್ಯದ ಸಂಗಾತಿಗಳನ್ನು ಪರಿಚಯಿಸುವ ಅವರ ಕಾವ್ಯದ ಕೆಲವು ಎಳೆಗಳನ್ನು ದಾಖಲಿಸುವ ಪ್ರಯತ್ನವೇ ‘ಕಾವ್ಯದ ಹೊಸ ಅಲೆ’ ಸರಣಿಯ ಪ್ರಯತ್ನ. ಈ ಸರಣಿಯ ಮೊದಲ ಕವಯಿತ್ರಿ ರುಕ್ಮಿಣಿ ನಾಗಣ್ಣನವರ.

FB_IMG_1488252258843ರುಕ್ಮಿಣಿ ನಾಗಣ್ಣನವರ 
ವಯೋಸಹಜ ಪ್ರೀತಿ, ಪ್ರೇಮ, ಉತ್ಸಾಹ, ಕೌತುಕ, ತನ್ನ ಕಾಲದ ಸಂಕಟ ಎಲ್ಲವನ್ನೂ ತನ್ನೊಳಗೆ ಕರಗಿಸಿಕೊಂಡು ಕವಿತೆ ಕಟ್ಟುತಿರುವ ಹೊಸ ತಲೆಮಾರಿನಲ್ಲಿ ಗಮನಸೆಳೆಯುವಂತವರು.

ತೀವ್ರವಾಗಿ ಮನಸ್ಸಿನಲ್ಲಿ ಉಳಿಯಬಲ್ಲ ಕಾಡಬಲ್ಲ ಸಾಲುಗಳನ್ನು ಬರೆವ ರುಕ್ಮಿಣಿಯವರಿಗೆ ಕವಿತೆ ತನ್ನ ಒಂಟಿತನದ  ಸಂಗಾತಿ. ಕತೆ, ಅನುವಾದ, ಪುಟ್ಟ ಗದ್ಯಬರಹವನ್ನೂ ಬರೆವ ಇವರು ಜೀವಪರ ಚಳವಳಿಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುತಿರುವವರು. ರುಕ್ಮಿಣಿ ಕನ್ನಡದ ಕಾವ್ಯಲೋಕದ ಒಡನಾಟಕ್ಕೆ ತೆರೆದುಕೊಂಡರೆ ಇನ್ನಷ್ಟು ಗಟ್ಟಿಯಾಗಿ, ದೃಢವಾಗಿ ಬರೆಯಬಲ್ಲರು.

ರುಕ್ಮಿಣಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೋರಣಗಟ್ಟಿ ಗ್ರಾಮದವರು.
ಎಮ್.ಎಸ್.ಡಬ್ಲ್ಯೂ ಅಧ್ಯಯನ ಮಾಡಿ ಕೆಲವು ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದು. ಸಧ್ಯ ಬೆಂಗಳೂರಿನಲ್ಲಿ ಪತ್ರಿಕೋದ್ಯಮದ ವಿದ್ಯಾರ್ಥಿನಿಯಾಗಿ ಓದಿನಲ್ಲಿ ನಿರತವಾಗಿದ್ದಾರೆ.

modern-abstract-art1೧. ಮುಸುಕು
ಕತ್ತಲ ಮುಸುಕು ಹೊದ್ದ ಕ್ಷಣಗಳು
ಸೂಜಿಯ ಮೊನೆಯಂತೆ
ಎದೆ ಚುಚ್ಚುತ್ತವೆ;

ಅವನಿಲ್ಲದ ತಬ್ಬಲಿತನವೊಂದು
ರಚ್ಚೆ ಹಿಡಿದು ಅತ್ತು ಕರೆದು
ಮೌನದ ಸೆರೆಯಾಗುತ್ತದೆ;

ತಡರಾತ್ರಿಯಲಿ ಒಡೆದ
ಕನಸುಗಳು
ಕಿಟಾರನೆ ಚೀರಿ ಅಬ್ಬರಿಸುತ್ತವೆ;

ಕಣ್ಣ ಕಿನಾರೆಯಲಿ
ಭೋರ್ಗರೆವ ಅವನ ನೆನಪುಗಳಿಗೆ
ಪ್ರತಿ ಇರುಳು ಸಣ್ಣದೆನಿಸುತ್ತದೆ…


೨. ಉಡುಗೊರೆ

ಅವರಿವರಿಂದ
ಉಡುಗೊರೆಯಾಗಿ
ಬಂದ ನೋವುಗಳನ್ನು
ಖರ್ಚು ಮಾಡದೆ
ಹಾಗೆಯೇ ಇಟ್ಟಿದ್ದೇನೆ
ಎದೆಯ ಸಂದೂಕಿನಲ್ಲಿ

ಆಗಾಗ್ಗೆ ಇಂಥಹ
ಉಡುಗೊರೆಗಳು
ಸಿಕ್ಕು ಸಿಕ್ಕು
ತುಂಬುವ ಸಂದೂಕು
ಚಿಟಿಪಿಟಿ ಒದ್ದಾಡುತ್ತದೆ
ಬಾಯಿ ಮುಚ್ಚಲಾಗದೆ

ಹಗಲೆಲ್ಲ ವೇಷ ಧರಿಸಿ
ಎಲ್ಲರೊಡನೆ ಬೆರೆಯುವ
ಇವುಗಳೆಡೆಗೆ
ಅತೀವ ಪ್ರೀತಿ ಉಕ್ಕಿ
ಒಮ್ಮೊಮ್ಮೆ
ಅಪ್ಪಿ ಮುದ್ದಾಡುತ್ತೇನೆ

ಈ ಹೊತ್ತು
ಸಂದೂಕಿನೊಳಗೆ
ಮತ್ತೋರ್ವ ಸದಸ್ಯನ ಪ್ರವೇಶಕ್ಕೆ
ಗೌಜು ಗದ್ದಲವಾಗಿ
ಚದುರಿ ಹೋಗಿವೆ ಎಲ್ಲ
ಹೊಸಬ ಮತ್ತೆ ಅನಾಥ!

ಅಲ್ಲಲ್ಲಿ ಕೆಲವು
ಸಾವು ನೋವಿನಿಂದ
ಅನಾಥವಾದರೆ
ಹಲವು
ಬದುಕಿನ ದುರಂತಗಳ
ನೆನೆನೆನೆದು ಚೀತ್ಕರಿಸುತ್ತವೆ

ಇರಲಿ ಬಿಡಿ
ಬಣ್ಣದ ಬದುಕು ನಿಭಾಯಿಸುವಷ್ಟು
ಪರಿಣಿತಿ ನೀಡಿದ್ದೇನೆ
ನಿಮ್ಮ ಟಿ.ವಿ ಸಿರಿಯಲ್ಗಳಿಗೆ
ಸರಿ ಹೊಂದಬಹುದು

ರಿಯಾಯತಿ ದರದಲ್ಲಿ ಕೊಡುತ್ತೇನೆ
ಬೊಗಸೆ ನೋವುಗಳಿಗೆ
ಒಂದಷ್ಟು ಖುಷಿ
ಕೊಡುವಿರಾದರೆ ಕೊಂಡುಹೋಗಿ
ನನ್ನ ನೋವುಗಳನ್ನು ಬಿಕರಿಗಿಟ್ಟಿದ್ದೇನೆ…

೩. ಕೊನೆಯ ಪತ್ರ

ಪ್ರಿಯ,
ನಾವು ಸೇರುತ್ತಿದ್ದೇವಲ್ಲ
ಆ ನದಿ ತೀರ
ಪಕ್ಕದಲ್ಲಿ
ನಮ್ಮ ಗುಟ್ಟುಗಳನ್ನು
ತನ್ನ ಸೆರಗಿನಡಿ ಬಚ್ಚಿಟ್ಟು
ಉನ್ಮತ್ತ ಹೃದಯಗಳನ್ನು
ತೂಗುತ್ತಿದ್ದ ಆ ಮರ
ಅದರಡಿಗೆ ಬಾ

ಅಹಮ್ಮಿನ ಪೋಷಾಕುಗಳ
ಕಳಚಿಟ್ಟು; ಗಂಡಸೆಂಬ
ತಲೆಮೇಲಿನ ಕಿರೀಟ
ಬದಿಗಿಟ್ಟು
ಒಂದು ಹೆಣ್ಣಾಗಿ,
ಮಡಿಲೊಳು ಸಂಭ್ರಮಿಸುವ
ಮಗುವಾಗಿ ಬಾ

ಎಲುವಿಲ್ಲದ ನಾಲಿಗೆ
ಅತ್ತಿತ್ತ ಹೊರಳಾಡುತ್ತದೆ
ನಿಯತ್ತು
ಎನ್ನವುದಾದರೆ ಬಿಡು
ನೋಡು,
ಈ ತಟಸ್ಥ ಕಣ್ಣುಗಳ
ಅದರಾಳದೊಳಗೊಮ್ಮೆ ಇಳುಗು
ಅಲ್ಲಿ ನಿಶ್ಚಲವಾಗಿರುವುದು
ನೀನು ಮಾತ್ರ.
ಒಂದುವೇಳೆ,

ನೀನಲ್ಲಿ ಇಲ್ಲವಾದಲ್ಲಿ
ಸತ್ತಂತಿರುವ ನನ್ನ ಎದೆಗೆ
ಗುರಿಯಿಟ್ಟುಬಿಡು
ನಿನ್ನ ಹೆಸರ ಜಪಿಸುವ
ಉಸಿರಿಗಿಂದು
ಸಾವು ಸಂಭವಿಸಲಿ…

೪.
ಹೌದೇ ಹುಡುಗಿ,
ಆ ಕಲ್ಲು ಕರಗುವ ಸಮಯಕ್ಕೆ
ಕಾತರಿಸುವ ನಾನು
ನಿತ್ಯ ನಿಶಾಚಾರಿ

ಈ ಸ್ಥಬ್ಧತೆಯ ಹುಲುಸಾದ ಎದೆ-
ಯೊಳಗೆ, ನನ್ನ ಬಯಕೆ, ತುಡಿತಗಳು
ಮೊಳಕೆಯೊಡೆಯುತ್ತವೆ
ಒಲವಿನ ಹಕ್ಕಿಯನ್ನು ಕೂಗುತ್ತವೆ
ಕನಲುತ್ತವೆ ಕನಸುತ್ತವೆ

ವಿರಹದ ನೋವಿಗೆ
ಶರಾಬಿನ ಮೊರೆ ಹೋಗುತ್ತವೆ
ಗುಟುಕು ಗುಟುಕಿನಲಿ
ಅವನದೇ ಚಿತ್ರ

ಈ ಸರಿ ಹೊತ್ತು ಎದೆ ಇರಿಯುತ್ತ ಕಣ್ಣಾಮುಚ್ಚಾಲೆ ಆಡುವ
ಅವನ ನೆನಪುಗಳನ್ನು ಹೊದ್ದುಕೊಳ್ಳುತ್ತ
ಕಣ್ರೆಪ್ಪೆಗಳು ಪರಸ್ಪರ ಆಕರ್ಷಿಸುತ್ತವೆ
ಆಮೇಲೆ ಬರಿಯ ಕತ್ತಲು
ಮತ್ತು ನಾನು…

೫.
ಅವನನ್ನು ಪ್ರೀತಿಸುವುದೆಂದರೆ
ಅವನೆದೆಯೊಳವಿತ
ಅವಳನ್ನು ಪ್ರೀತಿಸುವುದು.

One Response to "ಕಾವ್ಯದ ಹೊಸ ಅಲೆ: ರುಕ್ಮಿಣಿ ನಾಗಣ್ಣನವರ ಪ್ರೇಮಕಾವ್ಯ"

  1. ವೀರೇಂದ್ರ ರಾವಿಹಾಳ್  March 3, 2017 at 10:15 am

    ನೈಸ್. ಒಳ್ಳೆಯ ಪದ್ಯಗಳು. ಭಾವಪೂರ್ಣವಾಗಿವೆ.

    Reply

Leave a Reply

Your email address will not be published.