ಕಾರ್ಗಿಲ್ ಚಲೋ! ಆಪರೇಷನ್ ವಿಜಯದ ಮೊದಲ ದಿನವೇ ಗುಂಡಿನ ಚಕಮಕಿಗೆ ಸಾಕ್ಷಿ

ಅಜಿತ್ ಪಿಳ್ಳೈ : ಅನುವಾದ-ಸತೀಶ್ ಜಿ ಟಿ

ಕಾರ್ಗಿಲ್ ಯುದ್ಧ ಪತ್ರಕರ್ತರಿಗೆ ಧುತ್ತೆಂದು ಎದುರಾಯಿತು. ನಾವು ಬಹುತೇಕ ಮಂದಿ ಭಾರತ ಮತ್ತು ಪಾಕಿಸ್ತಾನಗಳೆರಡು 1998ರಲ್ಲಿ ಅಣ್ವಸ್ತ್ರ ರಾಷ್ಟ್ರಗಳಾದ ನಂತರ, ಎರಡು ದೇಶಗಳ ನಡುವಿನ ವಾತಾವರಣ ಯುದ್ಧದ ಹಂತಕ್ಕೆ ಹೋಗುವುದಿಲ್ಲ ಎಂಬ ಪಂಡಿತರ ಅನಿಸಿಕೆಗಳನ್ನು ನಂಬಿಕೊಂಡು ಕೂತಿದ್ದೆವು. ಮೊದಲು ನಾವು ಚಕಿತಗೊಂಡಿದ್ದು ಭಾರತ 1998ರ ಮೇ 11 ಮತ್ತು 13ರಂದು ಒಂದರ ಹಿಂದೆ ಒಂದೆಂಬಂತೆ ಅಣ್ವಸ್ತ್ರ ಪರೀಕ್ಷೆ ಮಾಡಿದಾಗ. ಪಾಕಿಸ್ತಾನ ಕೂಡ ಅಷ್ಟೇ ಬೇಗ ಅದೇ ತಿಂಗಳ 28 ಮತ್ತು 30ರಂದು ಪರೀಕ್ಷೆ ನಡೆಸಿ ಪ್ರತಿಕ್ರಿಯೆ ನೀಡಿತು. ಎರಡೂ ದೇಶಗಳು ಅಣ್ವಸ್ತ್ರ ವಿಭಾಗದಲ್ಲಿ ಸಮ-ಸಮ ಸಾಧನೆ ಮಾಡಿದ ನಂತರ, ಶಾಂತಿಗಾಗಿ ಮಾತುಕತೆ ನಡೆಸುವ ಕಾಲ ಒದಗಿ ಬಂದಿದೆ ಎಂದು ವಾಜಪೇಯಿ ನೇತೃತ್ವದ ಎನ್.ಡಿ.ಎ. ಸರಕಾರ ಘೋಷಿಸಿತ್ತು.

ನವದೆಹಲಿಯಲ್ಲಿ ಆಡಳಿತ ವ್ಯವಸ್ಥೆ ಕೂಡಾ ಈ ಯುದ್ಧ ಸಾಧ್ಯವಿಲ್ಲ ಎಂಬ ನಿಲುವಿನಲ್ಲಿ ಮಗ್ನವಾಗಿತ್ತು. ಅಷ್ಟೇ ಅಲ್ಲ, ಸೇನೆಯ ಕೆಲ ವಿಭಾಗಗಳಲ್ಲಿ ಸಿಬ್ಬಂದಿ ಸಂಖ್ಯೆಯನ್ನು ಕಡಿತಗೊಳಿಸುವ ಬಗ್ಗೆಯೂ ಚರ್ಚೆ ನಡೆದಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಪರಮಾಣು ಕ್ಷಿಪಣಿ ತಯಾರಿಕೆ ಹಾಗೂ ಅವುಗಳನ್ನು ಹೊತ್ತೊಯ್ಯುವ ಸಾಧನಗಳ ಸಿದ್ಧತೆ ಬಗ್ಗೆ ಹೆಚ್ಚಿನ ಗಮನ ನೀಡಬೇಕಿದ್ದ ಕಾರಣ, ಇತರೆ ಶಸ್ತ್ರಾಸ್ತ್ರಗಳ ಖರೀದಿಗೆ ಮಾಡುವ ಖರ್ಚಿ ನಲ್ಲಿಯೂ ಕಡಿತ ಆಗಬಹುದೆಂಬ ಲೆಕ್ಕಾಚಾರಗಳೂ ಇದ್ದವು. ಪರಮಾಣು ಶಕ್ತಿ ಕೇಂದ್ರಿತ ವಾದ ಹೊಸ ಸೇನಾ ವ್ಯವಸ್ಥೆ ರೂಪುಗೊಳ್ಳುವ ಬಗ್ಗೆ ಎಲ್ಲೆಲ್ಲೂ ಚರ್ಚೆಗಳು ನಡೆಯುತ್ತಿದ್ದ ಕಾಲವದು. ರಕ್ಷಣಾ ಇಲಾಖೆಯ ಕೆಲ ಹಿರಿಯ ಅಧಿಕಾರಿಗಳು ಈ ಯೋಚನೆಗಳನ್ನು ಪತ್ರಕರ್ತರೊಂದಿಗೆ ಸಾಂದರ್ಭಿಕವಾಗಿ ಹಂಚಿಕೊಂಡಿದ್ದರು.

ಇದೆಲ್ಲಕ್ಕಿಂತ ಸದ್ಯ ಯುದ್ಧ ಸಂಭವಿಸಲಾರದು ಎಂಬಂತಹ ಸ್ಥಿತಿ ನಿರ್ಮಾಣವಾಗಲು ಕಾರಣ ವಾಜಪೇಯಿ ಅವರ ಲಾಹೋರ್ ಯಾತ್ರೆ. ವಾಜಪೇಯಿಯವರು 1999ರ ಫೆಬ್ರವರಿ 20ರಂದು ವಾಘಾ ಗಡಿಯಲ್ಲಿ ತಮ್ಮೊಂದಿಗೆ ಇತರೆ 20 ಜನರೊಂದಿಗೆ ಬಸ್ ನಲ್ಲಿ ಬಂದಿಳಿದಾಗ ಅಲ್ಲಿ ಸಂಭ್ರಮದ ಜೊತೆಗೆ ಆ ಕ್ಷಣ ಸಾಂಕೇತಿಕವಾಗಿಯೂ ಪ್ರಾಮುಖ್ಯ ಪಡೆದಿತ್ತು. ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಕೆಂಪು ಹಾಸಿನ ಮೇಲೆ ನಡೆದು ಬಂದು ವಾಜಪೇಯಿಯವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಎರಡು ದೇಶಗಳ ನಡುವಿನ ಸ್ನೇಹದ ಬಾಗಿಲನ್ನು ತೆರೆಯಲಾಗಿತ್ತು. ಮಾಧ್ಯಮವೂ ಸೇರಿದಂತೆ ಎಲ್ಲರೂ ಆ ನಡೆಯನ್ನು ಹೊಗಳಿದರು ಹಾಗೂ ಭಾರತ-ಪಾಕ್ ಮಧ್ಯದ ಬಾಂಧವ್ಯಕ್ಕೆ ಹೊಸ ಹೆಜ್ಜೆ ಎಂದೆಲ್ಲಾ ಬಣ್ಣಿಸಿದರು. ಅದರ ಹಿಂದಿನ ದಿನವಷ್ಟೇ ನಡೆದಿದ್ದ ಎರಡು ಪ್ರಮುಖ ಘಟನೆಗಳಿಗೆ ಯಾರೂ ಹೆಚ್ಚಿನ ಮಹತ್ವ ನೀಡಿರಲಿಲ್ಲ. ಜಮ್ಮು ಭಾಗದಲ್ಲಿ ಉಗ್ರರು 20 ಮಂದಿ ಹಿಂದೂಗಳನ್ನು ಗುಂಡಿಟ್ಟು ಕೊಂದಿದ್ದರು ಹಾಗೂ ಸಿಯಾಚಿನ್ ಗಡಿಯಲ್ಲಿ ಗುಂಡಿನ ಚಕಮಕಿ ನಡೆದಿತ್ತು. ಈ ಘಟನೆಗಳನ್ನು ಶಾಂತಿ ಮಾತುಕತೆ ಪ್ರಯತ್ನಗಳನ್ನು ಹಾಳುಗೆಡವಲೆಂದೇ ಕೆಲವರು ನಡೆಸಿದ ಕೃತ್ಯಗಳೆಂಬಂತೆ ನೋಡಲಾಯ್ತು.

ಲಾಹೋರ್ ಭೇಟಿ ನಂತರ ಭಾರತ ತನ್ನ ಗಡಿಯಲ್ಲಿ ಪಹರೆಯನ್ನು ಸಡಿಲಗೊಳಿಸಿತ್ತು. ಎಷ್ಟೋ ದಿನಗಳ ನಂತರ ಭಾರತೀಯ ಸೇನೆ ಸಂಗ್ರಹಿಸಿದ ಮಾಹಿತಿ ಪ್ರಕಾರ, ವಾಜಪೇಯಿ ತಮ್ಮ ಐತಿಹಾಸಿಕ ಭೇಟಿಯಿಂದ ಇನ್ನೂ ಭಾರತಕ್ಕೆ ಹಿಂತಿರುಗಿ ಬರುವ ಮುನ್ನವೇ ಪಾಕಿಸ್ತಾನ ಗಡಿಯಲ್ಲಿ ಆಯಕಟ್ಟಿನ ಸ್ಥಾನಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಆರಂಭಿಸಿತ್ತು. ಚಳಿಗಾಲದಲ್ಲಿ ಸಾಮಾನ್ಯವಾಗಿ ನಿರ್ಲಕ್ಷಿಸುತ್ತಿದ್ದ ತಾಣಗಳಲ್ಲಿ ಈ ಬಾರಿ ಸೇನೆ ಬಂದು ಕೂತಿತ್ತು. ಇನ್ನೂ ಗಂಭೀರವಾದ ವಿಚಾರ ಎಂದರೆ, ಪಾಕಿಸ್ತಾನ ಆ ಹೊತ್ತಿಗೆ ನುಸುಳುಕೋರರನ್ನು ಭಾರತದ ಒಳಗೆ ಕಳುಹಿಸಲೂ ಆರಂಭಿಸಿತ್ತು. ಅಷ್ಟೇ ಅಲ್ಲ, ಗಡಿ ಪ್ರದೇಶದ ಕೆಲ ಕುರಿಗಾಹಿಗಳು ಪಾಕಿಸ್ತಾನಿ ನುಸುಳುಕೋರರ ಬಗ್ಗೆ ಮಾಹಿತಿ ನೀಡಿದ್ದರೂ, ಅದೊಂದು ತೀರಾ ಸಣ್ಣ ಬೆಳವಣಿಗೆ ಎಂಬಂತೆ ನಿರ್ಲಕ್ಷಿಸಲಾಯಿತು. ಕೊನೆಗೆ ಯುದ್ಧವೆಲ್ಲಾ ಆದ ಮೇಲಷ್ಟೆ ಕೆಲ ಗುಪ್ತಚರ ವಿಭಾಗದ ಅಧಿಕಾರಿಗಳು, ಪರಮಾಣು ಪರೀಕ್ಷೆ ಹಾಗೂ ಲಾಹೋರ್ ಬಸ್ ಯಾತ್ರೆ ನಂತರ ಯುದ್ಧದ ಸಾಧ್ಯತೆ ಬಗ್ಗೆ ಯಾರಿಗೂ ಕಲ್ಪನೆ ಇರಲಿಲ್ಲ, ಯಾರೂ ಎಚ್ಚರಗೊಳ್ಳಲಿಲ್ಲ. ಆದ ಕಾರಣ ಪಾಕಿಸ್ತಾನ ಇದೇ ಪರಿಸ್ಥಿತಿಯ ಲಾಭ ಪಡೆದುಕೊಂಡು ಆಯಕಟ್ಟಿನ ತಾಣಗಳಿಗೆ ಬಂದು ಕೂತಿತ್ತು ಎಂದು ಒಪ್ಪಿಕೊಂಡರು.

ನಾನು ನಮ್ಮ ಕಚೇರಿಯಲ್ಲಿ ಸಹೋದ್ಯೋಗಿಗಳ ಜೊತೆ ಮಾತನಾಡುತ್ತ ವಾಜಪೇಯಿ ಇದ್ದಕ್ಕಿದ್ದಂತೆ ಶಾಂತಿಯಾತ್ರೆಗೆ ಧುಮುಕಿದ್ದನ್ನು ಪ್ರಶ್ನಿಸಿದಾಗ, ನನ್ನ ಸಹೋದ್ಯೋಗಿಗಳು ನನ್ನನ್ನು ಟೀಕಿಸಿ ದ್ದುಂಟು. “ನಿಂಗೆ ಎಲ್ಲದರಲ್ಲೂ ಅನುಮಾನ, ಒಳ್ಳೆ ಕೆಲಸ ಆದಾಗಲೂ ಪ್ರಶಂಸೆ ಮಾಡದವನು” ಎಂದು ಮೂದಲಿಸಿದ್ದರು. ಅವರು ನಂಬಿದ್ದೇನೆಂದರೆ, ಪಾಕಿಸ್ತಾನದೊಂದಿಗೆ ಸುದೀರ್ಘ ಕಾಲದ ಶಾಂತಿ ಸಾಧಿಸಲು ಬಲಪಂಥೀಯ ಪಕ್ಷವಾದ ಬಿಜೆಪಿಗೆ ಮಾತ್ರ ಸಾಧ್ಯ. ಲಾಹೋರ್ ಬಸ್ ಯಾತ್ರೆ ಕೂಡಾ ನನ್ನಂತಹ ಅಭಿಪ್ರಾಯ ಹೊಂದಿದವರು ಅಲ್ಪಸಂಖ್ಯಾತರು ಎಂಬುದನ್ನು ಸಾಬೀತುಪಡಿಸಿತು. ಹಾಗಾಗಿ ನಾನು ಸುಮ್ಮನಿರಬೇಕಾಯಿತು.

ಲಾಹೋರ್ ಒಪ್ಪಂದವಾದ ಕೇವಲ ಮೂರು ತಿಂಗಳ ಬಳಿಕವಷ್ಟೆ ಅಂದರೆ ಅದೇ ಮೇನಲ್ಲಿ ಆರ್ಮಿ ಪ್ಯಾಟ್ರೊಲಿಂಗ್ ಸಿಬ್ಬಂದಿಯ ಮಾಹಿತಿ ಆಧಾರದ ಮೇಲೆ ಭಾರತೀಯ ಸೇನೆ ಕಾರ್ಗಿಲ್ ಭಾಗದಲ್ಲಿ ಹೆಚ್ಚಿನ ಮಟ್ಟದ ನುಸುಳಿಯುವಿಕೆ ಬಗ್ಗೆ ಗಮನ ಹರಿಸಿತು. ಅಕ್ರಮ ನುಸುಳುವಿಕೆಯ ಮಾಹಿತಿ ದೆಹಲಿಗೆ ತಲುಪುತ್ತಿರುವಂತೆಯೇ, ರಕ್ಷಣಾ ಇಲಾಖೆಯ ಮೂಲಗಳು “ಯುದ್ಧದಂತಹ ಸ್ಥಿತಿ ಎದುರಾಗುತ್ತಿದೆ’’ ಎಂದು ಅನಧಿಕೃತವಾಗಿ ಹಂಚಿ ಕೊಂಡರು. ಆದರೆ ಅಧಿಕೃತ ಹೇಳಿಕೆಗಳಲ್ಲಿ “ಅಂತಹ ಸ್ಥಿತಿ ಏನಿಲ್ಲ, ನುಸುಳಿರುವ ಉಗ್ರರನ್ನು ಮುಗಿಸಲಾಗುವುದು’’ ಎಂದಷ್ಟೇ ಇತ್ತು. ರಕ್ಷಣಾ ಇಲಾಖೆ ಅಧಿಕೃತವಾಗಿ ಇಂತಹ ನಿಲುವು ತಾಳಿದ್ದರ ಉದ್ದೇಶವೇ ಸರಕಾರ ಇದುವರೆಗೆ ಶಾಂತಿ ಪ್ರಕ್ರಿಯೆ ಮಧ್ಯೆ ಪಾಕಿಸ್ತಾನ ಸೇನೆಯ ನಡೆಗಳನ್ನು ಸೂಕ್ಷ್ಮವಾಗಿ ಗ್ರಹಿಸಲು ಸಾಧ್ಯವಾಗಿಲ್ಲ ಎಂಬ ಸಂಗತಿಯನ್ನು ಮರೆಮಾಚುವುದು.

ಕಾರ್ಗಿಲ್‍ನ ಪ್ರಸ್ತುತ ಸ್ಥಿತಿ ವಾಜಪೇಯಿ ಸರಕಾರ ಹಾಗೂ ಸೇನೆಗೆ ಮುಜುಗರದ ಸಂಗತಿಯಾಗಿತ್ತು. ಪಾಕಿಸ್ತಾನ ಹಾಗೂ ಭಾರತ ಲಾಹೋರ್ ಶಾಂತಿ ಕರಾರಿಗೆ ಸಹಿ ಹಾಕಿದ ನಂತರ ಇಂತಹ ಸ್ಥಿತಿ ಎದುರಾಗಲಾರದು ಎಂದು ಭಾವಿಸಿ ದೊಡ್ಡ ತಪ್ಪು ಮಾಡಿತ್ತು. ಹಾಗೆ ನೋಡಿದರೆ, ಇಬ್ಬರು ಪ್ರಧಾನಿಗಳ ನಡುವೆ ಒಳ್ಳೆಯ ಸೌಹಾರ್ದತೆಯೇ ಇತ್ತು. ಬಸ್ ಪ್ರಯಾಣದ ಸಂದರ್ಭದಲ್ಲಿ ಇದು ಸಾರ್ವಜನಿಕವಾಗಿ ಕಂಡಿತ್ತು. ಕಾರ್ಗಿಲ್ ನಲ್ಲಿ 121ನೇ ಬ್ರಿಗೇಡ್ ಮುನ್ನಡೆಸಿದ ಬ್ರಿಗೇಡಿಯರ್ ಸುರಿಂದರ್ ಸಿಂಗ್ ನಂತರ 2013ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ, “ಅವರೆಲ್ಲಾ (ಸೇನೆಯ ಹಿರಿಯ ಅಧಿಕಾರಿಗಳು) ಆಗ ದೆಹಲಿಯಲ್ಲಿದ್ದರು. ಅವರೆಲ್ಲಾ ರಾಜಕೀಯದ ಮೂಡ್‍ನಲ್ಲಿದ್ದರು. ಸೈನಿಕರಾಗಿ ಪರಿಸ್ಥಿತಿಯನ್ನು ಅವಲೋಕಿಸುವುದನ್ನು ಬಿಟ್ಟಿದ್ದರು. ಹಿರಿಯ ಅಧಿಕಾರಿಗಳ ಪೈಕಿ ಕೆಲವರಂತೂ ಬಸ್ ಯಾತ್ರೆ ನಂತರ ಎಲ್.ಓ.ಸಿ.ಯಲ್ಲಿ ಸೌಹಾರ್ದ ವಾತಾವರಣ ಇರುತ್ತದೆ ಹಾಗೂ ನಂತರ ಯಾವುದೇ ಅಹಿತಕರ ಘಟನೆ ನಡೆಯುವುದಿಲ್ಲ ಎಂದೇ ನಂಬಿದ್ದರು” ಎಂದಿದ್ದರು.

ಗಡಿಯಿಂದ ಬರುತ್ತಿದ್ದ ವರದಿಗಳು ಗಂಭೀರ ಸ್ವರೂಪದ್ದೆಂದು ಗೊತ್ತಾಗುತ್ತಿದ್ದಂತೆಯೇ ನನಗೆ ಮೊದಲು ಶ್ರೀನಗರಕ್ಕೆ, ನಂತರ ಕಾರ್ಗಿಲ್‍ಗೆ ಹೊರಡುವಂತೆ ಆದೇಶ ಬಂತು. ನನ್ನೊಂದಿಗಿದ್ದ ಫೋಟೋಗ್ರಾಫರ್ ಜಿತೇಂದ್ರ ಗುಪ್ತಾ, ಸದ್ಯದ ಪರಿಸ್ಥಿತಿಯಲ್ಲಿ ಅಲ್ಲೆಲ್ಲಾ ಸಂಚರಿಸಲು ಅವಕಾಶ ಸಿಗುವುದರ ಬಗ್ಗೆ ಅನುಮಾನದಲ್ಲಿದ್ದರು. ನಾನು ರಕ್ಷಣಾ ಮಂತ್ರಾಲಯ ಮಾಧ್ಯಮ ವಿಭಾಗಕ್ಕೆ ಫೋನ್ ಮಾಡಿ ವಿಚಾರಿಸಿದೆ. ಇಲಾಖೆ ವತಿಯಿಂದ ಪತ್ರಕರ್ತರ ಕಾರ್ಗಿಲ್ ಭೇಟಿಗೆ ಯಾವುದೇ ಪಾಸ್ ನೀಡುತ್ತಿಲ್ಲ. ಹಾಗಾಗಿ ಈ ವಿಚಾರದಲ್ಲಿ ಮಂತ್ರಾಲಯ ನಿಸ್ಸಹಾಯಕ ಎಂಬ ಪ್ರತಿಕ್ರಿಯೆ ಬಂತು.
ಆ ಹೊತ್ತಲ್ಲಿ ಆ ಪ್ರತಿಕ್ರಿಯೆ ಸಹಜವಾಗಿತ್ತು. ಹೇಗೂ `ಔಟ್‍ಲುಕ್’ ಬಗ್ಗೆ ರಕ್ಷಣಾ ಇಲಾಖೆಗೆ ಒಳ್ಳೆಯ ಭಾವನೆ ಇರಲಿಲ್ಲ. 1999ರ ಫೆಬ್ರವರಿ 1ರ ಸಂಚಿಕೆಯಲ್ಲಿ ನಿತಿನ್ ಎ.ಗೋಖಲೆ (ಸದ್ಯ `ಎನ್.ಡಿ.ಟಿ.ವಿ.’) ರಕ್ಷಣಾ ಇಲಾಖೆ ಕಾರ್ಯದರ್ಶಿ ಮೂರೂ ಸೇನೆಯ ಮುಖ್ಯಸ್ಥರಿಗೆ ಕಳುಹಿಸಿದ್ದ ಒಂದು ನಿರ್ದೇಶನದ ಬಗ್ಗೆ ವರದಿ ಮಾಡಿದ್ದರು. ಅಂದಿನ ಕಾರ್ಯದರ್ಶಿ ಅಜಿತ್ ಕುಮಾರ್, ಸೇನಾ ಮುಖ್ಯಸ್ಥರಿಗೆ ಅಂಡಮಾನ್‍ನ ಸಮುದ್ರ ಮಾರ್ಗದಲ್ಲಿ ಬರ್ಮಾದ ಬಂಡುಕೋರರು ನಡೆಸುತ್ತಿದ್ದ ಬಂದೂಕು ಕಳ್ಳಸಾಗಣೆ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಒಂದು ಆದೇಶ ನೀಡಿದ್ದರು.

ಅದರರ್ಥ, ಎ.ಕೆ. ಸರಣಿಯ ಬಂದೂಕುಗಳು ಹಾಗೂ ರಾಕೆಟ್‍ನಿಂದ ಉಡಾಯಿಸುವ ಗ್ರೆನೇಡ್‍ಗಳ ಕಳ್ಳಸಾಗಣೆ ಬಗ್ಗೆ ಬಂದ ಮಾಹಿತಿಯನ್ನು ನಿರ್ಲಕ್ಷ್ಯ ಮಾಡಿ ಎನ್ನುವುದು. ಅಂದಿನ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಬರ್ಮಾದ ಬಂಡುಕೋರರ ಜೊತೆ ಹೊಂದಿರುವ ಸಂಬಂಧ ಗೊತ್ತಿದ್ದದ್ದೇ, ಹಾಗೂ ನಮ್ಮ ವರದಿ ಹೇಳ ಬಯಸಿದ್ದು ಅದನ್ನೇ. ಅಷ್ಟೇ ಅಲ್ಲ, ಹಿಂದೊಮ್ಮೆ ಅದೇ ಬಂಡುಕೋರರು ದೆಹಲಿಯಲ್ಲಿ ರಕ್ಷಣಾ ಸಚಿವರ ಮನೆಯಲ್ಲೇ ವಾಸ್ತವ್ಯ ಹೂಡಿದ್ದರು. ನಾನು ಕೂಡಾ ಬಂಡುಕೋರರನ್ನು ಸಂದರ್ಶಿಸಿದ್ದೆ, ಹಾಗೂ ಅವರ ಬಗ್ಗೆ `ಔಟ್‍ಲುಕ್’ ಪತ್ರಿಕೆಗೆ ಬರೆದಿದ್ದೆ.
ನಿತಿನ್ ಬರೆದ ಸುದ್ದಿ ಫರ್ನಾಂಡಿಸ್‍ಗೆ ಸಿಟ್ಟು ತರಿಸಿತ್ತು. ಇಂತಹ ಸಂದರ್ಭದಲ್ಲಿ ನಾನು ರಕ್ಷಣಾ ಮಂತ್ರಾಲಯವನ್ನು ಸಂಪರ್ಕಿಸಿ ಸಹಕಾರಕ್ಕೆ ಕೋರಿದ್ದೂ ಮೂರ್ಖತನವೇ. ಒಂದು ಕ್ಷಣ ಶ್ರೀನಗರ, ಕಾರ್ಗಿಲ್ ಪ್ರಯಾಣವನ್ನು ರದ್ದುಗೊಳಿಸುವ ಬಗ್ಗೆಯೂ ಯೋಚಿಸಿದೆ. ಬಹುಶಃ ಹಾಗೆ ಮಾಡಿದ್ದರೆ ನನ್ನ ಕಡೆಯಿಂದ ಅದೊಂದು ಪ್ರಮಾದವಾಗಿರುತ್ತಿತ್ತು. ಕಾರ್ಗಿಲ್‍ಗೆ ಹೋಗುವುದೇ ಮುಖ್ಯವಾಗಿದ್ದರಿಂದ ಸೇನೆ 15 ಕಾಪ್ರ್ಸ್‍ನ ಪಿ.ಆರ್.ಓ. ಮೇಜರ್.ಪಿ.ಪುರುಷೋತ್ತಮ್‍ಗೆ ಕರೆ ಮಾಡಿದೆ. ಆತ ಬೇರೆ ಪಿ.ಆರ್.ಓ.ಗಳಿಗಿಂತ ಭಿನ್ನ. ಮಾಧ್ಯಮದವರನ್ನು ಮದ್ಯದ ಬಾಟಲಿಗಳ ಸಹಾಯದಿಂದ ಓಲೈಸಿಕೊಳ್ಳುವ ಕೆಲಸ ಮಾಡಲಿಲ್ಲ. ಸಂಭಾವಿತ, ನಿಜವಾದ ಗೆಳೆಯ ಹಾಗೂ ಸಹಾಯ ಮಾಡಲು ತಯಾರಿದ್ದ. “ರಕ್ಷಣಾ ಇಲಾಖೆ ಯಾವುದೇ ನೆರವು ನೀಡುವುದಿಲ್ಲ ಎಂದು ನನ್ನನ್ನು ಈಗಾಗಲೇ ತಿರಸ್ಕರಿಸಿದೆ” ಎಂದು ಆತನ ಗಮನಕ್ಕೆ ತಂದೆ. “ಆ ಬಗ್ಗೆ ಎಲ್ಲಾ ಚಿಂತೆ ಬಿಡು. ನೇರವಾಗಿ ಇಲ್ಲಿಗೆ ಬಾ. ಉಳಿದದ್ದನ್ನು ಹೇಗೋ ವ್ಯವಸ್ಥೆ ಮಾಡುತ್ತೇನೆ” ಎಂದು ಭರವಸೆ ನೀಡಿದ. ಈಗ ನೋಡಿದರೆ, ನಾನು ಇವರನ್ನು ಬಿಟ್ಟು ರಕ್ಷಣಾ ಇಲಾಖೆಯನ್ನು ಸಂಪರ್ಕಿಸುವ ಅಗತ್ಯವೇ ಇರಲಿಲ್ಲ.

ನಾವು ಶ್ರೀನಗರದ ಅಹ್ದೂಸ್ ಹೊಟೇಲ್‍ನಲ್ಲಿ ರೂಂ ಪಡೆದ ನಂತರ ಮಾಡಿದ ಮೊದಲ ಕೆಲಸ ಮೇಜರ್ ಪುರುಷೋತ್ತಮ್ ಅವರನ್ನು ಭೇಟಿ ಮಾಡಿದ್ದು. ಕೆಲವೇ ನಿಮಿಷಗಳಲ್ಲಿ ನಮಗೆ ಪಾಸ್ ವ್ಯವಸ್ಥೆ ಮಾಡಿದರು. ಜೊತೆಗೆ ಕಾರ್ಗಿಲ್‍ನ ಬೆಳವಣಿಗೆಗಳ ಬಗ್ಗೆ ಒಂದಿಷ್ಟು ಮಾಹಿತಿ ನೀಡಿದರು. “ಇನ್ನೂ ಹೇಳೋಕೆ ಬೇಕಾದಷ್ಟಿದೆ, ಆದರೆ ನನಗೆ ಮಾಹಿತಿ ನೀಡುವ ಅಧಿಕಾರ ಇಲ್ಲ” ಎಂದರು. ನಂತರ ನಾವು ಶ್ರೀನಗರದಿಂದ ಝೋಜಿಲಾ ಪಾಸ್ ತನಕ ಸಾಗಬೇಕಾದ ದುರ್ಗಮ ಹಾದಿಯ ಬಗ್ಗೆ ಒಂದಿಷ್ಟು ಸಲಹೆ ನೀಡಿದರು. “ನೀವು ಒಂದು ಅಂಬಾಸಡರ್ ಕಾರ್ ಬಾಡಿಗೆಗೆ ಪಡೆಯಿರಿ. ಅಲ್ಲೆಲ್ಲಾ ಪ್ರಯಾಣಿಸಲು ಅದುವೇ ಸರಿ” ಎಂದರು. “ಆದಷ್ಟು ಬೇಗ ಹೊರಡುವುದು ಒಳ್ಳೆಯದು. ಏಕೆಂದರೆ ನಂತರ ಸೇನೆ ತುಕಡಿಗಳ ಚಲನವಲನ ಹೆಚ್ಚಿರುವುದರಿಂದ ಪ್ರಯಾಣ ಹೇಗೂ ನಿಧಾನವಾಗುತ್ತದೆ’’ ಎಂದರು. “ಜೊತೆಗೆ ಒಂದಿಷ್ಟು ಊಟ, ನೀರು ತಗೊಳ್ಳಿ. ಅಲ್ಲಿ ಏನೂ ಸಿಗದಿರಬಹುದು” – ಇದು ಆತ ಕೊಟ್ಟ ಕೊನೆಯ ಸಲಹೆ. (ನಿಮಗೆ ಗೊತ್ತಿರಲಿ, ಮೇಜರ್ ಪುರುಷೋತ್ತಮ್ ನಂತರ 1999ರ ನವೆಂಬರ್‍ನಲ್ಲಿ ಬದಾಮಿ ಬಾಗ್‍ನ ಕಂಟೋನ್ಮೆಂಟ್‍ನ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಹತರಾದರು. ಅವರ ಕಚೇರಿಯಲ್ಲಿಯೇ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು).

ಮಾರನೇ ದಿನ ಮೇ 26 ಬೆಳಗ್ಗೆ ನಾವು ಕಾರ್ಗಿಲ್ ಕಡೆ ಪ್ರಯಾಣ ಆರಂಭಿಸಿದೆವು. ಝೋಜಿಲಾ ಪಾಸ್‍ನ ಸಮೀಪ ಸೋನಾಮಾರ್ಗ್‍ನಲ್ಲಿ ಮೇಲಿನಿಂದ ಕೆಳಗೆ ಪ್ರಯಾಣಿಸು ತ್ತಿದ್ದವರಿಗೆ ಅನುವು ಮಾಡಿಕೊಡಲೆಂದು ನಿಂತೆವು. ಕಾರ್ಗಿಲ್ ಕಡೆ ಹೊರಟಿದ್ದ ಸೇನೆಯ ಅಧಿಕಾರಿಗಳು ಅಲ್ಲಿಯ ಡಾಬಾಗಳಲ್ಲಿ ಟೀ ಕುಡಿಯುತ್ತಿದ್ದುದನ್ನು ಕಂಡೆವು. ಅವರೊಂದಿಗೆ ಮಾತನಾಡುತ್ತಿರುವಾಗ ಒಬ್ಬರು ಹೇಳಿದ್ದು, “ನಡೆಯುತ್ತಿರುವುದು ಉಗ್ರರೊಂದಿಗಿನ ಚಕಮಕಿ ಯಲ್ಲ, ನೇರವಾಗಿ ಪಾಕಿಸ್ತಾನ ಸೇನೆಯೊಂದಿಗಿನ ಯುದ್ಧ”.

ಅವರಲ್ಲೇ ಒಬ್ಬರು ಹೇಳಿದ್ದು, “ಕಾರ್ಗಿಲ್‍ನಲ್ಲಿದ್ದ ನಮ್ಮ ಶಸ್ತ್ರಾಸ್ತ್ರಗಳ ದಾಸ್ತಾನನ್ನು ಪರ್ವತಗಳ ಮೇಲೆ ಕೂತಿದ್ದ ಇದೇ ಹಲ್ಕಾಗಳು ಸುಟ್ಟು ಹಾಕಿದರು. ಇದರ ಬಗ್ಗೆ ಯಾರಿಗೂ ಗೊತ್ತೇ ಇಲ್ಲ. ಮಾಧ್ಯಮಗಳಲ್ಲೂ ಇದು ವರದಿಯಾಗಲಿಲ್ಲ. ಇದರ ಬಗ್ಗೆ ಸೇನೆ ಕೇಂದ್ರ ಕಚೇರಿಯ ನುರಿತ ತಂತ್ರಗಾರರನ್ನು ಕೇಳುವುದು ಒಳ್ಳೆಯದು” ಎಂದು. (ಯುದ್ಧದ ನಂತರ ಮಾಧ್ಯಮಗಳಲ್ಲಿ ವರದಿಯಾದ ಪ್ರಕಾರ, ಲೇಹ್‍ನ ಮೂರನೇ ಡಿವಿಷನ್ ಹೆಡ್ ಕ್ವಾಟರ್ಸ್ ಅಧಿಕಾರಿಗಳ ನಿರ್ಲಕ್ಷ್ಯವೇ ಇಂತಹ ಅನಾಹುತಕ್ಕೆ ಕಾರಣ. ತನ್ನಲ್ಲಿದ್ದ ಹೆಚ್ಚುವರಿ ಶಸ್ತ್ರಾಸ್ತ್ರಗಳನ್ನು ಕಾರ್ಗಿಲ್‍ಗೆ ತಂದು ಹಾಕಿದ್ದರು. ಅಂತಹದೊಂದು ನಡೆಯಿಂದ ಮುಂದೆ ಅಪಾಯ ಒದಗಬಹುದು ಎಂಬ ಮುನ್ಸೂಚನೆ ಇದ್ದರೂ ಹಾಗೆ ಮಾಡಿದ್ದರು. ಮೇಲೆ ಆಯಕಟ್ಟಿನ ಜಾಗೆಯಲ್ಲಿ ಕುಳಿತಿದ್ದ ಶತ್ರು ಸೈನಿಕರು ದಾಸ್ತಾನನ್ನು ಧ್ವಂಸ ಮಾಡಿದ್ದರು. ಈ ಘಟನೆಯಿಂದ ಅಂದು ಆದ ನಷ್ಟ ಬರೋಬ್ಬರಿ 500 ಕೋಟಿ ರೂ.).

ದಾರಿ ನಮಗೆ ಮುಕ್ತವಾದ ನಂತರ ನಾವು ಆ ದುರ್ಗಮ ಹಾದಿಯಲ್ಲಿ ಪ್ರಯಾಣ ಮಾಡಿ ಝೋಜಿಲಾ ತಲುಪಿದೆವು. ಅದಂತೂ ಶ್ರೀನಗರ-ಲೇಹ್ ಸಂಪರ್ಕಿಸುವ ಹೆದ್ದಾರಿ ಅತ್ಯಂತ ಅಪಾಯಕಾರಿ, ತೀರಾ ಕಿರಿದಾದ ಹಾದಿ. ಪ್ರಪಂಚದಲ್ಲಿಯೇ ತೀವ್ರ ಕಡಿದಾದ ರಸ್ತೆ ಇದು ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ಒಮ್ಮೆ ಅದನ್ನು ದಾಟಿ ಮುಂದೆ ಮುಷ್ಖೋ ಕಣಿವೆ ತಲುಪಿಬಿಟ್ಟರೆ ಸಲೀಸು. ಅಲ್ಲಿಯ ಪ್ರದೇಶ ಸಾಮಾನ್ಯ ವೇಳೆಯಲ್ಲಿ ಶಾಂತವಾಗಿರುತ್ತಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಂತೂ ಅದು ಫಿರಂಗಿಗಳ ಓಡಾಟದ ಸದ್ದಿನಲ್ಲಿ ಮುಳುಗಿತ್ತು. ನಾವು ಅಲ್ಲಿಗೆ ಹೋದ, ಆಪರೇಷನ್ ವಿಜಯದ ಮೊದಲ ದಿನವೇ ಗುಂಡಿನ ಚಕಮಕಿಗೆ ಸಾಕ್ಷಿಯಾಗಬೇಕಾಗುತ್ತೆ ಎಂಬುದನ್ನು ತಿಳಿಯಲು ಸ್ವಲ್ಪ ಸಮಯ ಬೇಕಾಯಿತು.
ನಾವು ಅಲ್ಲಿ ತಲುಪುತ್ತಿದ್ದಂತೆಯೇ ಆಕಾಶದಲ್ಲಿ ಶಸ್ತ್ರ ಸಜ್ಜಿತ ಹೆಲಿಕಾಪ್ಟರ್‍ಗಳು ಹಾರಾಡು ತ್ತಿದ್ದವು. ವಾಯು ಸೇನೆಯ ಜೆಟ್ ಒಂದು ನಮ್ಮ ತಲೆ ಮೇಲೆಯೇ ಹಾರಿತು. ಫಿರಂಗಿಗಳ ಸದ್ದು ಇದೆಲ್ಲವನ್ನೂ ಮರೆಮಾಚುವಂತಿತ್ತು. ಭಾರತದ ಕಡೆಯಿಂದ ಅಂದು ಸಾಕಷ್ಟು ಕಾರ್ಯಚಟುವಟಿಕೆ ನಡೆದವು. ಪರ್ವತದ ಎತ್ತರದ ಪ್ರದೇಶಗಳಲ್ಲಿ ನುಸುಳುಕೋರರು ಸ್ಥಾಪಿಸಿದ್ದ ಕ್ಯಾಂಪ್‍ಗಳತ್ತ ಗುರಿಯಿಟ್ಟು ಫಿರಂಗಿಗಳು ದಾಳಿ ಇಡುತ್ತಿದ್ದವು. ಅಧಿಕಾರಿಯೊಬ್ಬರು ಹೇಳಿದಂತೆ, ಈ ನಿರಂತರ ದಾಳಿಯ ಉದ್ದೇಶ, ಎದುರಾಳಿಯ ಸಪ್ಲೈ ಚೈನ್ ಧ್ವಂಸ ಮಾಡುವುದು. ನಂತರವಷ್ಟೆ ಪದಾತಿ ದಳ ಮುಂದೆ ನಡೆಯುತ್ತೆ.

ನಾವು ದ್ರಾಸ್ ತಲುಪಿದೆವು. ಅದೊಂದು ಕೆಲವೇ ಅಂಗಡಿಗಳು, ಅಂಚೆ ಕಚೇರಿ ಇರುವ ಸಣ್ಣ ಪಟ್ಟಣ. ಇದೇ ಅಂಚೆ ಕಚೇರಿ ಮುಂದಿನ ಕೆಲವೇ ದಿನಗಳ ಯುದ್ಧ ಸಂದರ್ಭದಲ್ಲಿ ಹೆಚ್ಚು ಸುದ್ದಿಗೆ ಗ್ರಾಸವಾಯ್ತು. ಸಮುದ್ರ ಮಟ್ಟದಿಂದ 11,000 ಅಡಿ ಎತ್ತರದಲ್ಲಿರುವ ಈ ಜಾಗ, ಜನವಸತಿ ಇರುವ ಪ್ರಪಂಚದಲ್ಲೇ ಎರಡನೇ ಅತಿಹೆಚ್ಚು ಶೀತ ಪ್ರದೇಶ. ಇಲ್ಲಿನ ಸರಾಸರಿ ತಾಪಮಾನ -22 ಡಿಗ್ರಿ ಸೆಲ್ಸಿಯಸ್. ಚಳಿಗಾಲದ ಉತ್ತುಂಗದಲ್ಲಿ ಇಲ್ಲಿಯ ತಾಪಮಾನ -45 ಕ್ಕೂ ತಲುಪುವುದುಂಟು. ಜುಲೈ 4 ರಂದು ಭಾರತ ಸೇನೆ ತನ್ನ ತೆಕ್ಕೆಗೆ ತೆಗೆದುಕೊಂಡ ಟೈಗರ್ ಹಿಲ್ (17,000 ಅಡಿ ಎತ್ತರ) ಈ ಪಟ್ಟಣಕ್ಕೆ ಹತ್ತಿರದಲ್ಲಿದೆ. ಇದೇ ಪರ್ವತದ ಆಯಕಟ್ಟಿನ ತಾಣಗಳಿಂದ ಪಾಕಿಸ್ತಾನಿ ನುಸುಳುಕೋರರು ಶ್ರೀನಗರ-ಲೇಹ್ ಮಧ್ಯದ ಹೆದ್ದಾರಿಯ 25 ಕಿ.ಮೀ. ತನಕ ಗುರಿ ಇಟ್ಟು ದಾಳಿ ಮಾಡುತ್ತಿದ್ದರು. ಆ ಮೂಲಕ ಕಾರ್ಗಿಲ್‍ಗೆ ಅಗತ್ಯ ಸಾಮಾಗ್ರಿಗಳ ಸಾಗಾಣೆಯನ್ನು ತಡೆಯುವುದೇ ಅವರ ಉದ್ದೇಶ.

KAS05:KASHMIR:MUSHKOH,INDIA,9JUL99 – Indian soldiers pose with their national tri-colour after they captured post number 4825 in Mushkoh July 9. India’s army said that it had made substantial advances against infiltrators on its side of the military control line in the Kashmiri mountains, but intense fighting was still going on. The death toll in the battle on both sides had risen to nearly 1,000 since India launched its biggest offensive in Kashmir two months ago. (INDIA OUT NO ARCHIVE NO RESALES) kk/DIGITAL/Photo/Str REUTERS

ನಾವು ಪಾಕಿಸ್ತಾನದ ನುಸುಳುಕೋರರ ದಾಳಿ ಹೊರತಾಗಿಯೂ ಅಲ್ಲಿಯೇ ನೆಲೆಸಿದ್ದ ದ್ರಾಸ್‍ನ ಕೆಲ ನಾಗರಿಕರನ್ನು ಭೇಟಿ ಮಾಡಿದೆವು. ಆ ಪಟ್ಟಣದ ಒಟ್ಟು 10,000ದಷ್ಟು ಜನಸಂಖ್ಯೆಯ ಬಹುತೇಕ ಮಂದಿ ಯುದ್ಧದ ವಾತಾವರಣ ಆರಂಭವಾಗುತ್ತಿದ್ದಂತೆಯೇ ಸುರಕ್ಷಿತ ತಾಣಗಳಿಗೆ ಹೋಗಿದ್ದರು. ಅಲ್ಲಿಯೇ ಚೆಕ್ ಪೋಸ್ಟ್ ಒಂದರಲ್ಲಿ ನಿಯೋಜನೆ ಗೊಂಡಿದ್ದ ಪೊಲೀಸ್, “ಎಲ್ಲರೂ ಊರು ಬಿಟ್ಟು ಹೋಗಿದ್ದಾರೆ. ಬೀದಿ ನಾಯಿಗಳೂ ಉಳಿದಿಲ್ಲ” ಎಂದರು. ಆತ ಹೇಳಿದಂತೆ ಮುಸಲ್ಮಾನರೇ ಅಧಿಕ ಸಂಖ್ಯೆಯಲ್ಲಿರುವ ಈ ಊರಲ್ಲಿ (ಕೆಲವೇ ಕೆಲವು ಬೌದ್ಧ ಕುಟುಂಬಗಳು ಅಲ್ಲಿದ್ದವು), ಯುದ್ಧದ ವಾತಾವರಣ ಆರಂಭವಾದಂತೆ ನಾಗರಿಕರು ಭೀತಿಗೆ ಒಳಗಾದರು. “ಇಲ್ಲಿರುವವರೆಲ್ಲಾ ಕಷ್ಟ ಜೀವಿಗಳು. ಬೇಸಿಗೆಯಲ್ಲಿ ಕಷ್ಟಪಟ್ಟು ದುಡಿಯುತ್ತಾರೆ. ದುಡಿದು ಗಳಿಸಿದ್ದನ್ನೆಲ್ಲಾ ಚಳಿಗಾಲಕ್ಕೆಂದು ಇಟ್ಟುಕೊಳ್ಳುತ್ತಾರೆ. ಇಂತಹವರ ಪರಿಸ್ಥಿತಿ ತುಂಬಾ ಕಷ್ಟಕರವಾಗಿದೆ. ಪಾಕಿಸ್ತಾನಿಗಳು ಇಲ್ಲಿಯ ಆಸ್ಪತ್ರೆ ಮತ್ತು ಸೇನಾ ಕ್ಯಾಂಪ್ ಮೇಲೆ ದಾಳಿ ಮಾಡಿದರು. ಅಷ್ಟೇ ಅಲ್ಲ, ಇಲ್ಲಿಯ ನಾಗರಿಕರ ಮೇಲೂ ದಾಳಿಗಳು ನಡೆಯುತ್ತಿವೆ” ಎಂದು ಅವರು ತಿಳಿಸಿದರು.

ದ್ರಾಸ್ ಹೊರವಲಯದಲ್ಲಿರುವ ಸೇನಾ ಕ್ಯಾಂಪ್ ಸಾಕಷ್ಟು ದಾಳಿಗೆ ತುತ್ತಾಗಿತ್ತು. ಸುತ್ತಲೂ ದಾಳಿಗೆ ತುತ್ತಾದ ಕ್ಯಾಂಪ್ ಮಧ್ಯೆ ತಾತ್ಕಾಲಿಕವಾಗಿ ಕಚೇರಿಯೊಂದನ್ನು ಸಿದ್ಧಪಡಿಸಿ ಕೊಂಡು ಕೂತಿದ್ದ ಒಬ್ಬ ಕರ್ನಲ್ ಸಿಕ್ಕರು. “ಊಟದ ಮೆಸ್, ದೇವಸ್ಥಾನ ಎಲ್ಲವೂ ದಾಳಿಗೆ ತುತ್ತಾಗಿವೆ. ದಾಳಿ ಭೀಕರವಾಗಿತ್ತು. ನಮ್ಮ ಫಿರಂಗಿ ದಳ ಎದುರಾಳಿಯನ್ನು ಹದ್ದುಬಸ್ತಿನಲ್ಲಿಡಲು ಮುಂದೆ ಬಂದಿರುವುದರಿಂದ ನಾವು ಈಗ ಸದ್ಯ ಸ್ವಲ್ಪ ನೆಮ್ಮದಿಯಾಗಿ ದ್ದೇವೆ. ಹೊರಗಡೆ ಹೈವೇ ಬಳಿಯಿಂದ ಫಿರಂಗಿಗಳು ಕಾರ್ಯಗತವಾಗಿದ್ದವು. ಅವುಗಳು ಹೊಮ್ಮಿಸುತ್ತಿದ್ದ ಶಬ್ದದಿಂದ ಭೂಮಿಯೇ ಅಲುಗಾಡುತ್ತಿದ್ದ ಅನುಭವ.

ಈ ಎಲ್ಲಾ ಗದ್ದಲದ ಮಧ್ಯೆ PRESS ಎಂದು ಸ್ಟಿಕ್ಕರ್ ಅಂಟಿಸಿಕೊಂಡಿದ್ದ ಕಾರುಗಳ ಚಾಲಕರೆಲ್ಲಾ (ಆ ಹೊತ್ತಿಗೆ ಅನೇಕ ಪತ್ರಕರ್ತರು ಅಲ್ಲಿಗೆ ಧಾವಿಸಿದ್ದರು) ಒಂದೆಡೆ ಸೇರಿ ಊಟಕ್ಕೆ ತಂತಮ್ಮ ಡಬ್ಬಿಗಳನ್ನು ತೆರೆದರು. ತಂದಿದ್ದ ತಿನಿಸುಗಳನ್ನೆಲ್ಲ ಹರಡಿಕೊಂಡು ನಮಗೂ ಕರೆದರು. ಅಲ್ಲಿಯ ವಾತಾವರಣ ಒಂದು ಕ್ಷಣ 11,000 ಅಡಿಯಷ್ಟು ಎತ್ತರದ ಪ್ರದೇಶದಲ್ಲಿ ನಾವೆಲ್ಲಾ ಪಿಕ್‍ನಿಕ್‍ಗೆ ಬಂದವರಂತೆ ಕಂಡಿತ್ತು.

ಝೋಜಿಲಾ ಪಾಸ್ ದಾಟಿ ಬಂದ ನನಗೆ ಅಲ್ಲಿಯ ಯುದ್ಧದ ಸನ್ನಿವೇಶ, ಪತ್ರಕರ್ತ ಪಾತ್ರಗಳಿರುವ ಯಾವುದೋ ಒಂದು ಸಿನಿಮಾ ಸೆಟ್‍ನಂತೆ ಭಾಸವಾಯಿತು. ಒಂದು ಕಡೆ ಶ್ರೀನಗರ-ಲೇಹ್ ಹೆದ್ದಾರಿ, ಅಲ್ಲಿಯೇ ಯುದ್ಧನಿರತ ಫಿರಂಗಿಗಳು. ಅಲ್ಲಿಂದ ಕೇವಲ 20 ಮೈಲುಗಳ ದೂರದ ಗುಡ್ಡಗಳಲ್ಲಿ ಕೂತಿದ್ದ ಪಾಕಿಸ್ತಾನಿ ನುಸುಳುಕೋರರು. ಇಲ್ಲಿ ನಡೆಯುತ್ತಿರುವುದು, ಕನಿಷ್ಠ ಆರಂಭದ ದಿನಗಳಲ್ಲಿ, ದೂರಗಾಮಿ ಯುದ್ಧ. ಎರಡೂ ಕಡೆಯ ದಾಳಿ ಪ್ರತಿದಾಳಿ ಮಧ್ಯೆ ಸಿಲುಕದೇ ಇದ್ದರೆ, ಅಲ್ಲೇ ಸಮೀಪದಲ್ಲಿ (ಯುದ್ಧ ಭೂಮಿಯಲ್ಲಿ) ಆರಾಮಾಗಿ ಅಲೆದಾಡಿಕೊಂಡಿರಬಹುದು. ಅಲ್ಲೇನು ಕಾಲ್ದಳಗಳ ಕಾಳಗ ಇರಲಿಲ್ಲ. ಯುದ್ಧ ಆ ಹಂತಕ್ಕೆ ತಲುಪಿದ್ದು ಎಷ್ಟೋ ದಿನಗಳ ನಂತರ. ಭಾರತೀಯ ಸೇನೆಯ ತುಕಡಿಗಳಿಗೆ ಹಿಮಶಿಖರಗಳನ್ನು ಹತ್ತಿ ಪಾಕಿಸ್ತಾನಿ ಸೈನಿಕರ ವಶದಲ್ಲಿದ್ದ ಪ್ರದೇಶ ಗಳನ್ನು ಹಿಂದಕ್ಕೆ ಪಡೆಯುವ ಸಂದರ್ಭದಲ್ಲಿ ಮಾತ್ರ ಇಂತಹ ಕಾಳಗ ನಡೆಯಿತು. ಟಿ.ವಿ. ಪತ್ರಕರ್ತರಿಗೆ ಹೆದ್ದಾರಿಯಲ್ಲಿ ಪಿ2ಸಿ (piece to camera)ಗೆ ಅವಕಾಶ ಇತ್ತು. ಅಲ್ಲಿಂದ ಅವರು ಸುರಕ್ಷಿತವಾಗಿ ಹಾಗೂ ಧೈರ್ಯಶಾಲಿಗಳಾಗಿ ಕ್ಯಾಮರಾ ಎದುರಿಸ ಬಹುದಿತ್ತು. ನಾನು ಆಗ “ಜಿತೇಂದರ್, ನೋಡು ಈ ಟಿ.ವಿ. ಪತ್ರಕರ್ತರಿಗೆ ಒಳ್ಳೆ ಅವಕಾಶ ಸಿಕ್ಕಿದೆ. ಪತ್ರಕರ್ತರು ಕ್ಯಾಮರಾ ಎದುರು ಮೈಕ್ ಹಿಡಿದು ಮಾತನಾಡುತ್ತಿದ್ದರೆ, ಅವರ ಹಿಂದೆ ಫಿರಂಗಿಗಳು. ಇಲ್ಲಿಯ ಪತ್ರಕರ್ತರಿಗೆ ಇದೊಂದು ತರಹ ಗಲ್ಫ್ ವಾರ್ ಕ್ಷಣ” ಎಂದಿದ್ದೆ.

ನಾವು ಕಾರ್ಗಿಲ್ (ಶ್ರೀನಗರದಿಂದ 208 ಕಿ.ಮೀ.) ತಲುಪುವ ಹೊತ್ತಿಗಾಗಲೇ ಸಂಜೆಯಾಗಿತ್ತು. ಮೇಜರ್ ಜನರಲ್ ವಿ.ಎಸ್.ಬುಧ್ವಾರ್ ತುರ್ತಾಗಿ ಒಂದು ಪತ್ರಿಕಾಗೋಷ್ಠಿ ಕರೆದಿದ್ದರು. ಬುಧ್ವಾರ್ ಲೇಹ್  3ನೇ ವಿಭಾಗದ ಕಮಾಂಡಿಂಗ್ ಆಫೀಸರ್. ಪತ್ರಕರ್ತರೊಂದಿಗೆ ಮಾತನಾಡುತ್ತಾ ಯುದ್ಧದ ವರದಿಗಳನ್ನು ಅಲ್ಲಗಳೆದರು. ಸೇನೆ ಕೇವಲ ನುಸುಳುಕೋರರನ್ನು ಹಿಮ್ಮೆಟ್ಟಿಸುತ್ತಿದೆ ಎಂದರು. ಈ ಕೆಲಸ ಯಶಸ್ವಿಯಾಗಿ ಮುಗಿಯಲು ಕನಿಷ್ಠ ಎರಡು ತಿಂಗಳು ಅಗತ್ಯ ಎಂದರು. ಬುಧ್ವಾರ್ ಶಸ್ತ್ರಾಸ್ತ್ರಗಳು ಹಾನಿಯಾದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲಿಲ್ಲ. ಮೇಜರ್ ಜನರಲ್ ಮಾತನಾಡುತ್ತಿರುವಾಗಲೇ ಒಂದು ಫಿರಂಗಿ ಘರ್ಜಿಸಿತು. ಅಲ್ಲಿಯೇ ಇದ್ದ ಕಾರ್ಗಿಲ್ ಬ್ರಿಗೇಡ್ ಕಮಾಂಡರ್ ಸುರಿಂದರ್ ಸಿಂಗ್, “ಅದು ನಮ್ಮವರೇ ಫೈರ್ ಮಾಡುತ್ತಿರುವುದು, ಶತ್ರುಗಳಲ್ಲ” ಎಂದರು. (ಮುಂದೆ `ಔಟ್‍ಲುಕ್’ನಲ್ಲಿ ಸುರಿಂದರ್ ಸಿಂಗ್ ಸುದ್ದಿಯಾದರು).

ಕಾರ್ಗಿಲ್ ಪಟ್ಟಣದ ಜನ ಒಂದು ತಿಂಗಳ ಹಿಂದೆ ಆರಂಭವಾಗಿದ್ದ ಪಾಕಿಸ್ತಾನಿ ದಾಳಿಗಳ ಸಂದರ್ಭದಲ್ಲಿ ಅನುಭವಿಸಿದ್ದನ್ನು ನಮ್ಮೊಂದಿಗೆ ಹಂಚಿಕೊಂಡರು. ಅಲ್ಲಿಯ ಬಹುತೇಕ ಮಂದಿ ಆ ಹೊತ್ತಿಗಾಗಲೇ ಊರು ಬಿಟ್ಟಿದ್ದರು. ಪಟ್ಟಣಕ್ಕೆ ಆಹಾರ ಸಾಮಾಗ್ರಿ ಸರಬರಾಜು ನಿಂತು ಹೋಗಿತ್ತು. ಶ್ರೀನಗರ-ಲೇಹ್ ಹೆದ್ದಾರಿಯನ್ನು ಆ ಹೊತ್ತಿಗಾಗಲೇ ನಾಗರಿಕರ ಸಂಚಾರಕ್ಕೆ ಬಂದ್ ಮಾಡಲಾಗಿತ್ತು. ಅಲ್ಲಿಗೆ ಬಂದ ಪತ್ರಕರ್ತರಿಗೆಂದೇ ಒಂದು ಹೊಟೇಲ್ ಆರಂಭವಾಗಿತ್ತು. ಆದರೆ ಅಲ್ಲಿಗೆ ನೀರು ಅಥವಾ ಆಹಾರ ಸಾಮಾಗ್ರಿ ಸರಬರಾಜು ಇರಲಿಲ್ಲ. ಹತ್ತಿರದ ಬಾವಿಯೊಂದರಿಂದ ಬಕೆಟ್‍ನಲ್ಲಿ ನೀರು ತರಲಾಗುತ್ತಿತ್ತು. ನಮ್ಮ ಪತ್ರಕರ್ತರು, ಅದರಲ್ಲೂ ಫೋಟೋಗ್ರಾಫರ್ಸ್ ತಮ್ಮ ಫೋಟೋಗಳನ್ನು ಕಚೇರಿಗೆ ಕಳುಹಿಸುವ ಬಗ್ಗೆ ತಲೆಕೆಡಿಸಿಕೊಂಡಿದ್ದರು. ನಮ್ಮ ಪತ್ರಿಕೆಯ ಜಿತೇಂದರ್ ನನ್ನ ಬಳಿ ಬಂದವರೇ, “ನಮ್ಮ ರೈವಲ್ ಮಾಗಜೀನ್‍ನ ಫೋಟೋಗ್ರಾಫರ್ ತನ್ನ ರೋಲ್‍ಗಳನ್ನು ಆರ್ಮಿ ಹೆಲಿಕಾಪ್ಟರ್ ಮೂಲಕ ಶ್ರೀನಗರಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ’’ ಎಂದರು. ಮತ್ತೊಬ್ಬರು, “ಫೋಟೋಗಳನ್ನು ಇಲ್ಲಿಂದಲೇ ಕಳುಹಿಸಲು ಅದೆಂತದೋ ಸಾಧನವನ್ನೂ ಇಲ್ಲಿಗೆ ತಂದಿದ್ದಾರೆ’’ ಎಂದರು. ಆಗೆಲ್ಲಾ ಫೋಟೋಗಳನ್ನು ಈಗಿನಷ್ಟು ಸುಲಭವಾಗಿ ಕಳುಹಿಸುವ ವ್ಯವಸ್ಥೆ ಇರಲಿಲ್ಲ. ಇದ್ದರೂ ಅದು ನಮ್ಮ ಭಾರತೀಯ ಮಾಧ್ಯಮಕ್ಕೆ ಅಷ್ಟಾಗಿ ಪರಿಚಿತವಾಗಿರಲಿಲ್ಲ. ರೋಲ್‍ಗಳನ್ನು ಒಂದೋ ಕೊರಿಯರ್ ಮೂಲಕ ಕಳುಹಿಸಬೇಕಿತ್ತು, ಇಲ್ಲವೇ ಖುದ್ದಾಗಿ ಹೋಗಿ ತಲುಪಿಸಬೇಕಿತ್ತು. ಅಷ್ಟು ಸಾಲದೆಂಬಂತೆ, ಆ ಹೊತ್ತಿಗೆ ಜಮ್ಮು ಮತ್ತು ಶ್ರೀನಗರದ ವಿಮಾನ ನಿಲ್ದಾಣಗಳನ್ನು ನಾಗರಿಕ ವಿಮಾನಗಳಿಗೆ ಬಂದ್ ಮಾಡಲಾಗಿದೆ ಎಂದೂ ಜಿತೇಂದರ್ ಮಾಹಿತಿ ಕಲೆ ಹಾಕಿದ್ದರು.

ಆಗ ನನಗೆ ಹೊಳೆದದ್ದು ಒಂದು ದಕ್ಷಿಣ ಭಾರತೀಯ ಉಪಾಯ. ಅದೇ ದಿನ ಬೆಳಗ್ಗೆ ಸೂರ್ಯ ಹುಟ್ಟುವ ಮೊದಲೇ ಎದ್ದು ಶ್ರೀನಗರ ತಲುಪಿ, ಅಲ್ಲಿಂದ ಜಮ್ಮುಗೆ ಫೋಟೋ ಕಳುಹಿಸುವ ವ್ಯವಸ್ಥೆ ಮಾಡುವುದು. ಜಮ್ಮುವಿನಿಂದ ಕೊರಿಯರ್ ವ್ಯವಸ್ಥೆಗೆ ಯಾವ ತೊಂದರೆ ಇಲ್ಲ ಎಂಬುದು ಖಚಿತವಾಗಿತ್ತು. ನಾನು ಜಿತೇಂದರ್ ಮತ್ತು ನಮ್ಮ ಕಾರು ಚಾಲಕ (ಈ ಬಾರಿ ಅಲಿ ಚಾಚಾ ಇರಲಿಲ್ಲ) ರನ್ನು ಬೆಳಗ್ಗೆ 3 ಗಂಟೆಗೆ ಎಬ್ಬಿಸಿದೆ. ನಾವು 3.30 ಕ್ಕೆಲ್ಲಾ ಪ್ರಯಾಣ ಆರಂಭಿಸಿದ್ದೆವು. ಆ ಹೊತ್ತಲ್ಲಿ ಸೇನೆಯ ಲಾರಿಗಳನ್ನು ಹೊರತು ಪಡಿಸಿ ಬೇರೆ ಯಾವ ವಾಹನಗಳೂ ಇಲ್ಲದ ಕಾರಣ ಎರಡು ಗಂಟೆಗಳಲ್ಲಿ ಝೋಜಿಲಾ ಪಾಸ್ ದಾಟಿದೆವು. ಅಲ್ಲಿ ಸ್ವಲ್ಪ ನಿಧಾನವಾಯಿತು. ಕಾರಣ ಕೆಳಗಿನಿಂದ ಬೋಫೋರ್ಸ್ ಗನ್‍ಗಳನ್ನು ಮೇಲೆ ಕೊಂಡೊಯ್ಯುತ್ತಿದ್ದ ಕಾರಣ ಕೆಳಗೆ ಇಳಿಯುತ್ತಿದ್ದ ವಾಹನಗಳನ್ನು ಕೆಲ ಕಾಲ ತಡೆದು ನಿಲ್ಲಿಸಲಾಗಿತ್ತು. ಮಧ್ಯಾಹ್ನದ ಹೊತ್ತಿಗೆ ನಾವು ಶ್ರೀನಗರ ತಲುಪಿದ್ದೆವು.

ಅಂದಿನ ದಿನವನ್ನು ಈಗ ನೆನೆಸಿಕೊಂಡರೆ ನನಗನ್ನಿಸುವುದು, ನಾನು ಜಿತೇಂದರ್‍ನನ್ನು ದೆಹಲಿಗೇ ಕಳುಹಿಸಿದ್ದರೆ ಒಳ್ಳೆಯದಿತ್ತು. ಆದರೆ, ಜಿತೇಂದರ್ ಆಗ ಶ್ರೀನಗರದಲ್ಲಿ ಏನೂ ಸಂಭವಿಸಬಹುದು. ಹಾಗಾಗಿ ಅಲ್ಲಿ ಉಳಿಯುವುದು ಸೂಕ್ತ ಎಂದರು. ಶ್ರೀನಗರದಲ್ಲಿ ನಮ್ಮವರಾದ ಜಾಫರ್ ನಮ್ಮ ರೋಲ್‍ಗಳನ್ನು ಕ್ಯಾಬ್‍ನಲ್ಲಿ ಜಮ್ಮುಗೆ ಕಳುಹಿಸುವ ವ್ಯವಸ್ಥೆ ಮಾಡಿದರು. ಅಲ್ಲಿಂದ ಬಸ್‍ನಲ್ಲಿ ದೆಹಲಿ ತಲುಪಬೇಕಿತ್ತು. ಅದೃಷ್ಟವಶಾತ್ ಏನೂ ತೊಂದರೆ ಇಲ್ಲದೆ, ಸರಿಯಾದ ಸಮಯಕ್ಕೆ ಫೋಟೋಗಳು ತಲುಪಿದವು. ನಮ್ಮ ಎದುರಾಳಿಗೆ ಅದು ಸಾಧ್ಯವಾಗಲಿಲ್ಲ. ಏಕೆಂದರೆ ಅಲ್ಲಿ ಸೇನೆಯ ಹೆಲಿಕಾಪ್ಟರ್ ಲಭ್ಯವಿರಲಿಲ್ಲ.

ನಾನು ನನ್ನ ವರದಿಯನ್ನು ಮಾರನೇ ದಿನ ಕಳುಹಿಸಿದೆ ಮತ್ತು ಒಂದು ದಿನ ವರದಿ ಡೆಸ್ಕ್‍ನಲ್ಲಿ ಕ್ಲಿಯರ್ ಆಗುವ ತನಕ ಕಾದೆ. ನಾವು ಅಲ್ಲಿಗೆ ಬರುವ ಮೊದಲು ಕಚೇರಿಯಿಂದ ಮುಂಗಡವಾಗಿ ತೆಗೆದುಕೊಂಡು ಬಂದಿದ್ದ ಹಣ ಬೇಗ ಬೇಗನೇ ಖರ್ಚಾಗಿ ಹೋಗಿತ್ತು. ನಾವು ಅಂದುಕೊಂಡದ್ದಕ್ಕಿಂತ ಹೆಚ್ಚಿನ ಹಣ ಕಾರಿಗೆ ಖರ್ಚಾಯಿತು. ಇಂತಹ ಸಂದರ್ಭದಲ್ಲಿ ನಮಗೆ ಹಿಂತಿರುಗಿ ಬನ್ನಿ ಎಂಬ ಸಂದೇಶ ಬಂತು. ನಾವು ಜಮ್ಮುಗೆ ಹೊರಟೆವು, ಅಲ್ಲಿಂದ ರಾತ್ರಿ ರೈಲು ಅಥವಾ ಬಸ್ ಸಿಗಬಹುದು ಎಂಬ ಲೆಕ್ಕಾಚಾರದಲ್ಲಿ. ಆದರೆ, ಮಿಲಿಟರಿ ವಾಹನಗಳ ಸಂಚಾರ ದಟ್ಟಣೆಯ ಕಾರಣ ಉಂಟಾದ ಟ್ರಾಫಿಕ್ ಜಾಮ್‍ನಿಂದಾಗಿ ನಾವು ಜಮ್ಮು ತಲುಪುವುದು ತುಂಬಾ ತಡವಾಯಿತು. ಅಷ್ಟು ಹೊತ್ತಿಗೆ ಕೊನೆಯ ಬಸ್ ಮತ್ತು ರೈಲು ಎಲ್ಲವೂ ಊರು ಬಿಟ್ಟಾಗಿತ್ತು. ನಾವು ಅಲ್ಲಿಯೇ ಬಸ್ ನಿಲ್ದಾಣದಲ್ಲಿ ಬೆಳಗಿನ ಜಾವದ ತನಕ ಕಾಲ ತಳ್ಳಲು ನಿರ್ಧರಿಸಿದೆವು.

ಆಗ ಅಲ್ಲಿದ್ದವರೊಬ್ಬರು ನಮಗೆ ಟ್ಯಾಕ್ಸಿಯೊಂದು ದೆಹಲಿಗೆ ಹೊರಡುತ್ತಿರುವ ಬಗ್ಗೆ ಮಾಹಿತಿ ನೀಡಿದರು. ಪ್ರಯಾಣಿಕರು ಒಟ್ಟು ಪ್ರಯಾಣ ವೆಚ್ಚವನ್ನು ಶೇರ್ ಮಾಡಿಕೊಂಡು ಹೋಗಬಹುದಿತ್ತು. ಚಾಲಕ ಆಗಷ್ಟೆ ಊಟಕ್ಕೆ ಹೋಗಿದ್ದ. ಬಂದ ತಕ್ಷಣ ಹೊರಡುವುದಿತ್ತು. ಕೆಲವೇ ಕ್ಷಣಗಳಲ್ಲಿ ನಾವು ಮಾರುತಿ ವ್ಯಾನ್ ಒಂದರಲ್ಲಿ ಇಬ್ಬರು ಅಪರಿಚಿತ ಸಹಪ್ರಯಾಣಿಕರೊಂದಿಗೆ ದೆಹಲಿಗೆ ಹೊರಟೆವು. ಅವರಿಬ್ಬರೂ ಜಮ್ಮುಗೆ ಬಂದಿದ್ದ ವ್ಯಾಪಾರಿಗಳಂತೆ ಕಂಡರು. ನಾವು ಹೊರಡುತ್ತಿದ್ದಂತೆಯೇ 20ರ ಆಸುಪಾಸಿನಲ್ಲಿರುವ ಚಾಲಕ ಹೇಳಿದ ಒಂದು ಮಾತು ನನ್ನನ್ನು ವಿಚಲಿತನನ್ನಾಗಿ ಮಾಡಿತು. ಆತ ಬೆಳಗಿನಿಂದ ಡ್ರೈವ್ ಮಾಡುತ್ತಲೇ ಇದ್ದ, ಒಂದೇ ಒಂದು ಕ್ಷಣ ನಿದ್ರೆ ಮಾಡಿಲ್ಲ. ಹಾಗಿರುವಾಗ ಮುಂದಿನ 12 ಗಂಟೆ ಹೇಗೆ ಡ್ರೈವ್ ಮಾಡುತ್ತಾನೆ. “ಇವರೆಲ್ಲಾ ಇಂತಹ ಕೆಲಸದಲ್ಲಿ ನಿಷ್ಣಾತರು. ಅದೇ ಕಾರಣಕ್ಕೆ ಇವರು ಹೆಚ್ಚು ಗಳಿಸುತ್ತಾರೆ. ಅವರು ರಿಟರ್ನ್ ಜರ್ನಿಗೆ ಮಾಲೀಕರಿಗೆ ಲೆಕ್ಕ ಕೊಡುವ ಅಗತ್ಯ ಇರೋಲ್ಲ” ಎಂದರು ಸಹಪ್ರಯಾಣಿಕರೊಬ್ಬರು. ನಮ್ಮ ವಾಹನ ಹೆದ್ದಾರಿ ತಲುಪುತ್ತಿದ್ದಂತೆಯೇ ಒಂದೇ ವೇಗದಲ್ಲಿ ಚಲಿಸುತ್ತಿತ್ತು. ಕೆಲವೊಮ್ಮೆ ಲಾರಿಗಳು ತೀರಾ ಹತ್ತಿರಕ್ಕೆ ಬಂದು ಆತಂಕ ಸೃಷ್ಟಿಸಿದ್ದೂ ಉಂಟು. ಒಂದೇ ಲೇನ್ ರಸ್ತೆ ಇರುವ ಕೆಲವೆಡೆ ನಿಜಕ್ಕೂ ಭಯ ಹುಟ್ಟಿಸುವ ಪ್ರಯಾಣ. ಕಳೆದ ಮೂರು ದಿನಗಳ ಆಯಾಸದ ಕಾರಣ ನಾನು ನಿದ್ರೆಗೆ ಜಾರಿದೆ.

ಒಂದು ಸಾರಿ ನಾನು ದಿಗ್ಗನೆ ಎದ್ದು ನೋಡಿದರೆ, ನಮ್ಮ ವಾಹನ ರಸ್ತೆಯ ಅಂಚಿಗೆ ಬಂದಿದೆ, ನಮ್ಮ ಚಾಲಕ ನಿದ್ರೆಯಲ್ಲಿದ್ದ. ತಕ್ಷಣ ಅವನನ್ನು ಎಬ್ಬಿಸಿ, ಎಲ್ಲಿಯಾದರು ಸ್ವಲ್ಪ ಹೊತ್ತು ಗಾಡಿ ನಿಲ್ಲಿಸು, ನಂತರ ಹೋಗೋಣ ಎಂದೆ. ಆದರೆ ನನ್ನೊಂದಿಗಿದ್ದ ಸಹ ಪ್ರಯಾಣಿಕರಿಗೆ ನನ್ನ ಸಲಹೆ ಸರಿ ಕಾಣಲಿಲ್ಲ. ವಿಮಾನ ಪ್ರಯಾಣಗಳಲ್ಲಿ ತಾಂತ್ರಿಕ ತೊಂದರೆ ಅಥವಾ ಪ್ರತಿಕೂಲ ಹವಾಮಾನದ ಮಧ್ಯೆಯೂ ಬೇಗ ಟೇಕ್ ಆಫ್ ಆಗಬೇಕೆಂದು ಬಯಸುವ ಪ್ರಯಾಣಿಕರಂತೆ, ಇವರಿಗೆ ನಮ್ಮ ಚಾಲಕ ವಿಶ್ರಾಂತಿ ತೆಗೆದುಕೊಳ್ಳುವುದರ ಬಗ್ಗೆ ಸಹಮತ ಇರಲಿಲ್ಲ. ನಾನು ಅವನು ವಿಶ್ರಾಂತಿ ತೆಗೆದುಕೊಳ್ಳದೆ ಮುಂದೆ ಹೋದರೆ ಸಂಭವಿಸಬಹುದಾದ ಅಪಾಯದ ಬಗ್ಗೆ ಮನವರಿಕೆ ಮಾಡಿಕೊಟ್ಟ ನಂತರ ಒಪ್ಪಿದರು. ಹತ್ತಿರದ ಒಂದು ಡಾಬಾದಲ್ಲಿ ಟೀಗೆಂದು ನಿಲ್ಲಿಸಿದೆವು. ಅಲ್ಲಲ್ಲಿ ಬಿಡುವಿನ ಬಳಿಕ, ನಾವು ಸೋನೆಪೇಟ್ (ದೆಹಲಿಯಿಂದ 45 ಕಿ.ಮೀ. ದೂರ) ತಲುಪಲು 14 ಗಂಟೆ ಬೇಕಾಯಿತು. ಅಲ್ಲಿಂದ ಮುಂದಕ್ಕೆ ಎಲ್ಲಿಯೂ ಬ್ರೇಕ್ ಬೇಡವೇ ಬೇಡ ಎಂದು ನಮ್ಮ ಸಹಪ್ರಯಾಣಿಕರು ತಾಕೀತು ಮಾಡಿದರು. ಬದಲಿಗೆ, ಚಾಲಕನಿಗೆ ಒಂದು ಬಾಟಲಿ ಕೋಲ್ಡ್ ಬಿಯರ್ ಕೊಟ್ಟು, ಅವನು ಎಚ್ಚರದಲ್ಲೇ ಇರುವಂತೆ ನೋಡಿಕೊಂಡೆವು. ನಾವು ದೆಹಲಿಯ ಹೊರ ಭಾಗದಲ್ಲಿ ಇಳಿದೆವು. ಅಲ್ಲಿಂದ ನಮ್ಮ ನಮ್ಮ ಸ್ಥಳಗಳಿಗೆ ಹೋಗಲು ಆಟೋಗಳು ಲಭ್ಯವಿದ್ದವು. ಅದೊಂದು ಯಮಯಾತನೆಯ ಪ್ರಯಾಣ.

ಇದು ಯಾವ ಸೀಮೆಯ ಚರಿತ್ರೆ? ಹೇಳದೆ ಉಳಿದ ಸುದ್ದಿಯ ಕತೆಗಳು : ಅಜಿತ್ ಪಿಳ್ಳೈ : ಅನುವಾದ-ಸತೀಶ್ ಜಿ ಟಿ

-ಅಹರ್ನಿಶಿ ಪ್ರಕಾಶನ : ಜ್ಞಾನವಿಹಾರ ಬಡಾವಣೆ , ಕಂಟ್ರಿಕ್ಲಬ್ ಎದುರು ,ವಿದ್ಯಾನಗರ , ಶಿವಮೊಗ್ಗ 577203

Leave a Reply

Your email address will not be published.