ಕಾನೂನುಗಳು ಕಠಿಣವಾದಷ್ಟೂ  ಸಂಕಷ್ಟಕ್ಕೀಡಾಗುವವರು ಸಾಮಾನ್ಯರು!

-ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

 

ಇಂಡಿಯಾದಂತಹ  ವಿಶಾಲವಾದ ಪ್ರಜಾಪ್ರಭುತ್ವದಲ್ಲಿ ಜನತೆ ಬಯಸವುದು  ಸರಕಾರಗಳು ಜಾರಿಗೆ ತರುವ ಕಾನೂನು ಕಾಯಿದೆಗಳು ಜನಪರವಾಗಿರಬೇಕೆಂದು ಮಾತ್ರವಲ್ಲ ಬದಲಿಗೆ ಸರಳವೂ, ಸಾಮಾನ್ಯರಿಗೆ ಸುಲಭವಾಗಿ ಅರ್ಥ ಆಗಬೇಕೆಂಬುದಾಗಿದೆ.  ತೊಂಭತ್ತರ ದಶಕದಲ್ಲಿ   ಮಾಜಿ ಪ್ರದಾನಮಂತ್ರಿಗಳಾದ ದಿವಂಗತ ಪಿ.ವಿ. ನರಸಿಂಹರಾವ್ ಅವರ ಅಧಿಕಾರದ ಅವಧಿಯಲ್ಲಿ  ಜಾರಿಗೊಳಿಸಲ್ಪಟ್ಟ  ಮುಕ್ತ ಆರ್ಥಿಕ ನೀತಿಯನ್ನು ಈ ನೆಲದ ಬಹುತೇಕ ವಿದ್ಯಾವಂತರು ಸ್ವಾಗತಿಸಿದ್ದರ ಹಿಂದೆ ಇದ್ದದ್ದು  ಸರಕಾರದ ಕೆಂಪು ಪಟ್ಟಿಯಿಂದ( ರೆಡ್ ಟೇಪಿಸಂ) ಮುಕ್ತಿ ಪಡೆಯಬಹುದೆಂಬ  ಮನೋಬಾವ ಸಹ ಇತ್ತು. ಅಗ ಅಂದಿನ ಅರ್ಥ ಮಂತ್ರಿಗಳಾದ ಮನಮೋಹನ್ ಸಿಂಗ್ ಪ್ರತಿಪಾದಿಸಿದ್ದ ‘ಏಕಗವಾಕ್ಷಿ ನೀತಿ’ ಮತ್ತು ‘ಲೈಸೆನ್ಸ್ ರಾಜ್’ ನಿಂದ ಮುಕ್ತಿ ಎಂಬ ಘೋಷಣೆಗಳು ಸಾರ್ವಜನಿಕರಿಂದ ಸ್ವಾಗತಿಸಲ್ಪಟ್ಟಿದ್ದರೆ ಆ ತಕ್ಷಣಕ್ಕೆ ಜನರಿಗಿದ್ದುದು  ಕಾನೂನುಗಳು ಇನ್ನಾದರು ಸರಳವಾಗುತ್ತವೆ ಎಂಬ ನಿರೀಕ್ಷೆಯೆ!

ಇದಾಗಿ  ಹೆಚ್ಚು ಕಡಿಮೆ ಎರಡು ದಶಕಗಳೇ ಆಗಿವೆಯಾದರು ನಮ್ಮ ಸರಕಾರಗಳ ನಡವಳಿಕೆಗಳಲ್ಲಿ ಯಾವ ಬದಲಾವಣೆಗಳೂ ಆಗಿಲ್ಲ. ತೆರೆದ ಬಾಹುಗಳಿಂದ ವಿದೇಶಿಬಂಡವಾಳವನ್ನುಸ್ವಾಗತಿಸುವ ಸರಕಾರಗಳು ಜನಸಾಮಾನ್ಯರ ಪಾಲಿಗೆ ಮಾತ್ರ ಕಾನೂನುಗಳನ್ನು ಇನ್ನಷ್ಟು  ಜಟಿಲಗೊಳಿಸುತ್ತ, ಜನರಲ್ಲಿ ಗೊಂದಲ ಮೂಡಿಸುವ ಕೆಲಸದಲ್ಲಿ ನಿರತವಾಗಿವೆ. ಯಾವುದೇ ರಾಷ್ಟ್ರ ನಿಜಕ್ಕೂ ಪ್ರಗತಿಯ ಹಾದಿಯಲ್ಲಿ ಸಾಗಬೇಕೆಂದರೆ ಸರಕಾರಗಳ ಚಟುವಟಿಕೆಗಳಲ್ಲಿ ಸಾಮಾನ್ಯ ಜನತೆ ಸಕ್ರಿಯವಾಗಿ ಬಾಗವಹಿಸಬೇಕಾಗುತ್ತದೆ.  ಅದಕ್ಕಾಗಿ ಸರಕಾರವೊಂದು ರಚಿಸುವ ಕಾನೂನುಗಳನ್ನು  ಅರ್ಥಶಾಸ್ತ್ರಜ್ಞರು ಅಥವಾ ವಕೀಲರು  ವ್ಯಾಖ್ಯಾನಿಸಿ ಜನತೆಗೆ  ಮನವರಿಕೆ ಮಾಡಿಕೊಡುವಷ್ಟರ ಮಟ್ಟಿಗೆ ಕಠಿಣವಾಗಿರಬಾರದು.

2014ರ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರ ಹಿಡಿದ ಬಾಜಪದಿಂದ ಜನತೆ ನಿರೀಕ್ಷಿಸಿದ್ದು ಸಹ ಇಂತಹುದೇ ಸರಳ ಸುಗಮ ಆಡಳಿತದ ಕ್ರಮಗಳನ್ನು ಮತ್ತು ಜನಸಾಮಾನ್ಯರಿಗೆ  ಸುಲಭವಾಗಿ ಬಾಗವಹಿಸಲು ಮತ್ತು ಅನುಸರಿಸಲು ಸಾದ್ಯವಾಗಬಹುದಾದಂತಹ ಕಾನೂನು ಜಾರಿಗೊಳಿಸುವ ನೀತಿಯನ್ನು.  ಇಂತಹ ಭರವಸೆಗಳನ್ನು ನೀಡಿಯೇ ಬಾಜಪ ಚುನಾವಣೆಗಳನ್ನು ಗೆದ್ದಿದ್ದನ್ನು ಸಹ ನಾವು ನೆನಪಿಸಿಕೊಳ್ಳಬೇಕಾಗುತ್ತದೆ. ಆದರೆ ಅಧಿಕಾರಕ್ಕೆ ಬಂದ ನಂತರ ಆಗಿದ್ದೇ ಬೇರೆ! ಇಲ್ಲಿಯವರಗು ಇದ್ದ ಕಾನೂನುಗಳನ್ನು ಇನ್ನಷ್ಟು ಜಟಿಲಗೊಳಿಸುವ  ಕಾರ್ಯಕ್ಕೆ ಕೇಂದ್ರ ಸರಕಾರ ಮುಂದಾಯಿತು.

ಇದರಲ್ಲಿ ಬಹಳ ಮುಖ್ಯವಾದದ್ದು, ನೋಟ್ ಬ್ಯಾನ್ . ಕಳೆದ ನವೆಂಬರಿನಲ್ಲಿ ನೋಟ್ ಬ್ಯಾನ್ ಮಾಡಿದ್ದಕ್ಕೆ ಸರಕಾರ ನೀಡಿದ ಯಾವುದೆ ತತ್ಕ್ಷಣದ ಕಾರಣಗಳೂ ಜನಸಾಮಾನ್ಯರ ಬದುಕಿನೊಂದಿಗೆ ತಳುಕು ಹಾಕಿಕೊಂಡಿರಲಿಲ್ಲ.  ಪ್ರದಾನಮಂತ್ರಿಗಳು ಹೇಳಿದ ಕಪ್ಪುಹಣ ನಿವಾರಣೆಯ ಸಮಸ್ಯೆ ಖಂಡಿತಾ ಜನರ ಸಮಸ್ಯೆಯಾಗಿರಲಿಲ್ಲ. ಪ್ರತ್ಯಕ್ಷವಾಗಿಯಂತು ಜನರಿಗೆ ಕಪ್ಪುಹಣ ತಮ್ಮ ಸಮಸ್ಯೆಯಾಗಿ ಕಂಡಿರಲಿಲ್ಲ. ಕಪ್ಪುಹಣವನ್ನು ನಿಯಂತ್ರಿಸುವುದು ಮತ್ತು ಅದರ ಮೂಲಗಳನ್ನು ಹುಡುಕಿ ಅವುಗಳ ಮೂಲೋತ್ಪಾಟನೆ ಮಾಡುವುದು ಸರಕಾರದ ಕೆಲಸವೇ ಹೊರತು ಜನಸಾಮಾನ್ಯರದಲ್ಲ. ಜೊತೆಗೆ ನಿಟ್ಟಿನಲ್ಲಿ ಸರಕಾರ ತೆಗೆದುಕೊಳ್ಳಬಹುದಾದ ಯಾವುದೇ ಕ್ರಮಗಳು ಸಾಮಾನ್ಯ ಜನತೆಯ ದೈನಂದಿನ ಬದುಕಿಗೆ ತೊಂದರೆಯಾಗದಂತೆ ಇರಬೇಕಾಗುತ್ತದೆ. ಇದು ಪ್ರಜಾಸತ್ತೆಯ ಮೂಲ ನಿಯಮ. ಆದರೆ ನೋಟುಬ್ಯಾನಿನ ನಂತರ ಆಗಿದ್ದೇ ಬೇರೆ. ಆದೇಶ ಹೊರಟ ಆರು ತಿಂಗಳವರೆಗು  ಇದರ ದುಷ್ಪರಿಣಾಮಗಳು ಜನತೆಯ ಮೇಲೆ ಆಗುತ್ತಲೇ ಇವೆ. ಇವತ್ತಿಗು ಜನತೆ ಸುಗಮವಾಗಿ ತಮ್ಮ ಹಣಕಾಸು ವ್ಯವಹಾರಗಳನ್ನು ನಿರ್ವಹಿಸಲು ಸಾದ್ಯವಾಗುತ್ತಿಲ್ಲ. ಮೊದಲ ಹಂತವಾಗಿ ತಮ್ಮ ಬಳಿ ಇದ್ದ ಹಳೆಯ ನೋಟುಗಳನ್ನು  ನಿಗದಿತ ದಿನಾಂಕದೊಳಗೆ ಬ್ಯಾಂಕುಗಳಿಗೆ ಹಿಂದಿರುಗಿಸಲು ಮತ್ತು ಬದಲಿಸಿಕೊಳ್ಳಲು ಜನರು ಪಟ್ಟ ಶ್ರಮವಿದೆಯಲ್ಲ ಅದು ಯಾವ ಪ್ರಜಾಪ್ರಭುತ್ವಕ್ಕೂ ಶೋಭೆ ತರುವಂತಹುದ್ದಲ್ಲ. ಈ ದಿಸೆಯಲ್ಲಿ ಸರಕಾರ ಮತ್ತು ಕೇಂದ್ರಬ್ಯಾಂಕು ದಿನಕ್ಕೊಂದು ಆದೇಶ ಹೊರಡಿಸುತ್ತ ಜನರಲ್ಲಿ ಹುಟ್ಟುಹಾಕಿದ ಗೊಂದಲಗಳು ಈ ದೇಶದ ಕಾನೂನು ಸುವ್ಯವಸ್ಥೆಯನ್ನೇ ಪ್ರಶ್ನಿಸುವ ಮಟ್ಟಕ್ಕೆ ಕೊಂಡೊಯ್ತಿತ್ತು. ಇವತ್ತಿಗೂ ಬಹಳಷ್ಟು ಜನಕ್ಕೆ ನೋಟುಬ್ಯಾನಿನ ಹಿಂದಿನ ನೈಜ ಉದ್ದೇಶಗಳಾಗಲಿ, ಅದನ್ನು ಜಾರಿಗೆ ತಂದ ಸರಕಾರದ ಕ್ರಮಗಳ ಸ್ವರೂಪದ ಬಗ್ಗೆಯಾಗಲಿ ಒಂದು ಸ್ಪಷ್ಟತೆ ಸಿಕ್ಕಿಲ್ಲ.

ನಂತರದ್ದು ಗೋಹತ್ಯೆ ನಿಷೇಧದ ಕಾನೂನಿನ ಬಗ್ಗೆ ಸಹ ಈ ಕ್ಷಣದವರೆಗು ಜನತೆಗೆ  ಸರಿಯಾದ ಮಾಹಿತಿಯಾಗಲಿ, ಸ್ಪಷ್ಟತೆಯಾಗಲಿ ಸಿಕ್ಕಿಲ್ಲ. ಗೋಹತ್ಯೆ ನಿಷೇಧದ ಕಾನೂನಿನ ಸರಿಯಾದ ವ್ಯಾಖ್ಯೆಯನ್ನು  ಮಾಡಿ ಜನರಿಗೆ ತಲುಪಿಸುವಲ್ಲಿ ನಮ್ಮ ನುರಿತ ವಕೀಲರುಗಳೇ ವಿಫಲರಾಗುತ್ತಿದ್ದಾರೆ. ಆ ಮಟ್ಟಿಗೆ ಈ ಕಾನೂನು ಅಥವಾ ಹಳೆಯ ಕಾನೂನಿನ ತಿದ್ದುಪಡಿ ಕ್ಲಿಷ್ಟವಾಗಿದೆ. ಎರಡು ವಾಕ್ಯಗಳಲ್ಲಿ  ಹೇಳಬಹುದಾಗಿದ್ದ ಕಾನೂನೊಂದನ್ನು ಜನರಲ್ಲಿ ಗೊಂದಲ ಮೂಡಿಸಲೆಂದೇ ಹೀಗೆ ಸಂಕೀರ್ಣಗೊಳಿಸಲಾಗಿದೆಯೇ ಎಂಬ ಅನುಮಾನ ಜನಸಾಮಾನ್ಯರಲ್ಲಿ ಮೂಡುತ್ತಿದೆ.

ಇದಾದ ನಂತರ ಬಹಳ ಸಂಭ್ರಮ ಸಡಗರಗಳಿಂದ ಜಾರಿಗೊಳಿಸಲ್ಪಟ್ಟ ಜಿ.ಎಸ್.ಟಿ. ಕಾಯಿದೆ ಸಹ ಜನರಿರಲಿ, ನುರಿತ ವ್ಯಾಪಾರಸ್ಥರಲ್ಲಿಯೂ ಅಗಾದ ಗೊಂದಲಗಳನ್ನು ಹುಟ್ಟು ಹಾಕಿದೆ. ಒಂದು ರಾಷ್ಟ್ರ, ಒಂದೇ ತೆರಿಗೆಯ ಕಲ್ಪನೆಯೇನೊ ಸುಂದರವಾಗಿದ್ದೇ ಆದರೂ ಇದರ ಲಾಭ ಯಾರಿಗೆ ಆಗುತ್ತದೆ ಎನ್ನುವ ಬಗ್ಗೆ ಸ್ವತ: ಬಹಳಷ್ಟು ಜನಪ್ರತಿನಿಧಿಗಳಿಗೇ ಇಲ್ಲವಾಗಿದೆ. ತಾವು ಯಾವ ವಸ್ತುಗಳಿಗೆ ಎಷ್ಟು ತೆರಿಗೆ  ನೀಡಬೇಕು ಮತ್ತು ಈ ಹೊಸ ಕಾನೂನಿಂದ ಯಾವ ವಸ್ತುವಿನ ಬೆಲೆ ಹೆಚ್ಚಾಗಿದೆ ಮತ್ತು ಯಾವ ಸೇವೆಯ ಬೆಲೆ ಕಡಿಮೆಯಾಗಿದೆ ಎಂದು ತಿಳಿದುಕೊಳ್ಳಲು ಜನತೆಗೆ ಇನ್ನೂ ಕನಿಷ್ಠ ಎರಡು ವರ್ಷಗಳಾದರು ಬೇಕಾಗುತ್ತದೆ. ಇಷ್ಟಲ್ಲದೆ ತಾನು ನೀಡುವ ತೆರಿಗೆ ಅಂತಿಮವಾಗಿ ಯಾರಿಗೆ (ಕೇಂದ್ರ ಸರಕಾರಕ್ಕೊ-ರಾಜ್ಯಸರಕಾರಕ್ಕೊ) ತಲುಪತ್ತದೆ ಎಂದು ತಿಳಿಯುವ ಹಕ್ಕು ಪ್ರತಿಯೊಬ್ಬ ತೆರಿಗೆದಾರನಿಗೂಇರುತ್ತದೆ. ಯಾಕೆಂದರೆ ದೇಶದಲ್ಲಿ ಸಂಗ್ರಹವಾಗುವ ತೆರಿಗೆಯ ಹಣ  ಜನತೆಯ ಆಸ್ತಿಯೇ ಆಗಿರುತ್ತದೆ. ಸ್ವತ: ಹಲವು ರಾಜ್ಯಸರಕಾರಗಳ ಮುಖ್ಯಮಂತ್ರಿಗಳಿಗ ಮತ್ತು ಹಣಕಾಸು ಸಚಿವರುಗಳಿಗೇಯೇ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಜಿ.ಎಸ್.ಟಿ. ತೆರಿಗೆ ಸಂಗ್ರಹದಲ್ಲಿ ರಾಜ್ಯಗಳಿಗೆ ದೊರೆಯಬಹುದಾದ ಪಾಲಿನ ಬಗ್ಗೆ  ಈಗಲೂ ಹಲವು ಗೊಂದಲಗಳಿವೆ. ತಮ್ಮ ಸರಕಾರಗಳ ಆದಾಯಗಳನ್ನು ಇತರೆ ಮಾತ್ರ ಸರಕಾರ ತಮಗಾಗಿ ಖರ್ಚು ಮಾಡುವ ಹಣದ ಬಗ್ಗೆ ಜನ ಮಾತಾಡಬಹುದಾಗಿದೆ. ಸರಕಾರಗಳೂ ಜನತೆಗೆ ಸರಳವಾಗಿ ಈ ಮಾಹಿತಿ ದೊರೆಯಬಾರದೆಂಬಂತೆ ಈ ಕಾಯಿದೆಯನ್ನೂ ಕ್ಲಿಷ್ಟಗೊಳಿಸಿಟ್ಟಿವೆ. ದೇಶದ ಉತ್ಪಾದನೆಗೆ ಕೊಡುಗೆ ನೀಡುವ  ಜನತೆಗೆ ಅದರ ಉಪಯೋಗ ಹೇಗೆ ಆಗುತ್ತಿದೆ ಎಂಬುದನ್ನು ತಿಳಿದುಕೊಳ್ಳುವ  ಹಕ್ಕು ಇರುತ್ತದೆ. ಇವತ್ತಿನ ಈ ತೆರಿಗೆ ವ್ಯವಸ್ಥೆ ಹೇಗಿದೆ ಎಂದರೆ ನುರಿತ ಲೆಕ್ಕಪರಿಶೋಧಕರುಗಳಿಗೆ ಮಾತ್ರ ಇದು ಅರ್ಥವಾಗುವಷ್ಟರ ಮಟ್ಟಿಗೆ ಕಷ್ಟಕರವಾಗಿದೆ. ಜನರಿಗೆ ಇವತ್ತು ಬಹಳ ಮುಖ್ಯವಾಗಿರುವುದು, ನಾವುಎಷ್ಟು ತೆರಿಗೆ ಕಟ್ಟುತ್ತೇವೆ ಎನ್ನುವುದಕ್ಕಿಂತ ಹೆಚ್ಚಾಗಿ  ತೆರಿಗೆಯನ್ನು ಹೇಗೆ ಕಟ್ಟಬೇಕು ಎಂಬುದಾಗಿದೆ. ಒಬ್ಬ ಸಾಮಾನ್ಯ  ಅನಕ್ಷರಸ್ಥ ವರ್ತಕನಿಗೆ ಇವತ್ತಿಗೂಆದಾಯ ತೆರಿಗೆ ಇಲಾಖೆಗೆ ಹೋಗಿ ತನ್ನ  ಆದಾಯಮೂಲಗಳ ಬಗ್ಗೆ ಮಾಹಿತಿ ನೀಡಲು ಅಂಜುವಂತ ಪರಿಸ್ಥಿತಿ ಇದೆ.ಯಾಕೆಂದರೆ ಆದಾಯ ತೆರಿಗೆ ಇಲಾಖೆಯವರು ನೀಡುವ ನಿಗದಿತ ನಮೂನೆಯ ಫಾರಮ್ಮುಗಳನ್ನು ನೋಡಿದರೆ ಅದನ್ನುತುಂಬುವ ಕಷ್ಟ ಎಷ್ಟೆಂಬುದು ಅರ್ಥವಾಗುತ್ತದೆ.

ಇನ್ನು ಆಧಾರ್  ಗುರುತಿನ ಚೀಟಿಯ ಬಗೆ ಮಾತಾಡುವುದೇ ಬೇಡ.  ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಇದೇ ಬಾಜಪ 2014ರ ಚುನಾವಣೆಗು ಮುಂಚೆ ಆಧಾರ್ ಕಾರ್ಡ ಎನ್ನುವುದು ನಮ್ಮ ವೈಯಕ್ತಿಕ ಮಾಹಿತಿಗಳನ್ನು ವಿದೇಶಿ ಕಂಪನಿಗಳಿಗೆ ಮಾರುವ ಅಂದಿನ ಸರಕಾರದ ಹುನ್ನಾರವೆಂದು ಬೊಬ್ಬೆ ಹೊಡೆದಿತ್ತು.   ನಮ್ಮ ರಾಜಕೀಯದ ವಿಪರ್ಯಾಸಗಳನ್ನು ನೋಡಿ: ಯು.ಪಿ.ಎ. ಸರಕಾರದ ಅವಧಿಯಲ್ಲಿ ಯಾವ ಆಧಾರ್ ಗುರುತಿನ ಚೀಟಿ ಐಚ್ಚಿಕವಾಗಿತ್ತೊ ಅದೇ ಆಧಾರ್ ಗುರುತಿನ ಚೀಟಿಯನ್ನು ನಖಶಿಖಾಂತ ವಿರೋದಿಸಿದ ಬಾಜಪ ಸರಕಾರ ಅದನ್ನೀಗ ಕಡ್ಡಾಯಗೊಳಿಸಿದೆ. ಯ.ಪಿ.ಎ. ಸರಕಾರದ ಅವಧಿಯಲ್ಲಿ ಒಂದು ಸಾಮಾನ್ಯ ಗುರುತಿನ ಚೀಟಿ ಮಾತ್ರವಾಗಿದ್ದ ಆಧಾರ್ ಗುರುತಿನ ಚೀಟಿ ಇವತ್ತು ನಮ್ಮ ಒಟ್ಟಾರೆ ಅಸ್ಥಿತ್ವದ ಗುರುತಿನ ಚೀಟಿಯಾಗಿ ಪರಿವರ್ತನೆಯಾಗಿ ಬಿಟ್ಟಿದೆ.

ಇವತ್ತು ನೀವು ಒಂದು ಸಿಮ್ ಕಾರ್ಡನ್ನು ಪಡೆಯಬೇಕೆಂದರೂ ನಿಮ ಆಧಾರ್ ಗುರುತಿನ ಚೀಟಿಯನ್ನು ನೀಡಲೇ ಬೇಕಾಗಿದೆ. ನಿಮ್ಮ ಬ್ಯಾಂಕ್ ಖಾತೆಯನ್ನು ಅಧಿಕೃತಗೊಳಿಸಲು ಹೊಸ ಖಾತೆಯನ್ನು ತೆರೆಯಲು,  ನಿಮ್ಮ ಪಾಸ್ ಪೋರ್ಟ್ ಪಡೆಯಲು, ನೀವು ಹಣ ಕೊಟ್ಟುಒಂದು  ವಾಹನ ಖರೀಧಿಸಲು ಸಹ ಆಧಾರ್ ಗುರುತಿನ ಚೀಟಿಯನ್ನು ಕಡ್ಡಯಗೊಳಿಸಲಾಗಿದೆ. ಇದೀಗ ನಾವುಈ ಹಿಂದೆ ಪಡೆದಿದ್ದ  ಸಿಮ್ ಕಾರ್ಡನ್ನು ಅಧಿಕೃತಗೊಳಿಸಲು ಆ ಪೋನ್ ನಂಬರಿಗೆ ನಮ್ಮ ಆಧಾರ್ ಗುರುತಿನ ಚೀಟಯ ನಂಬರನ್ನು ಲಿಂಕ್ ಮಾಡಬೇಕಾಗಿದೆ. ಯಾವತ್ತೊ ನಮ್ಮ ಸಂಬಳ ಪಡೆಯಲು ತೆರೆದಿದ್ದ ನಮ್ಮ ಬ್ಯಾಂಕ್ ಖಾತೆಯನ್ನು ಅಧಿಕೃತಗೊಳಿಸಲು ಸಹ ಆಧಾರ್ ನಂಬರ ನೀಡಬೇಕಾಗಿ ಬಂದಿದೆ. ಅಂತರ್ಜಾದಲ್ಲಿ ರೈಲು ಮತ್ತು ವಿಮಾನಗಳ ಟಿಕೇಟಗಳನ್ನು ಕಾದಿರಿಸಲು ಸಹ ಆಧಾರ್ ನಂಬರ್ ನೀಡಬೇಕಾದ  ಅನಿವಾರ್ಯತೆಯನ್ನು ಸರಕಾರ ಸೃಷ್ಠಿಸಿದೆ. ಇವತ್ತು  ಲಕ್ಷಾಂತರ ಜನ ತಮ್ಮ ಕೆಲಸಗಳನ್ನು ಬಿಟ್ಟು ತಮ್ಮ ಆಧಾರ್ ನಂಬರುಗಳನ್ನು ನೀಡಲು ಮೊಬೈಲು ಅಂಗಡಿಗಳ ಮುಂದೆ, ಬ್ಯಾಂಕುಗಳ ಮುಂದೆ ಸರತಿಯಸಾಲಿನಲ್ಲಿ ನಿಂತಿರುವುದನ್ನು ನಾವು ನೋಡಬಹುದಾಗಿದೆ ಇದೀಗ ನಮ್ಮ ಪಾನ್ ಕಾರ್ಡಗಳಿಗು ಸಹ ಆಧಾರ್ ಗುರುತಿನ ಚೀಟಿಯ ನಂಬರುಗಳನ್ನು ಲಿಂಕ್ ಮಾಡಿಸಲು ಆದೇಶ ಹೊರಡಿಸಲಾಗಿದ್ದು ಜನ ಇದಕ್ಕಾಗಿ  ಅಂಗಡಿಅಂಗಡಿಗಳನ್ನುಅಲೆಯಬೇಕಾಗಿ ಬಂದಿದೆ.ಶೇಕಡಾ ಹತ್ತರಷ್ಟಿರಬಹುದಾದ ತೆರಿಗೆ ಕಳ್ಳರನ್ನುಹಿಡಿಯಲು ಶೇಕಡಾ ತೊಭತ್ತರಷ್ಟು ಜನರಿಗೆ ಪರೋಕ್ಷ ಶಿಕ್ಷೆ ವಿದಿಸಲಾಗುತ್ತಿದೆ.

ಕಾನೂನುಗಳು ಕ್ಲಿಷ್ಟವಾಗಿದ್ದಷ್ಟು ಅದರ ಲಾಭವನ್ನು ಉಳ್ಳವರೇ ಪಡೆಯುತ್ತ ಹೋಗುತ್ತಾರೆ. ಯಾಕೆಂದರೆ ಅ ಕಾನೂನುಗಳನ್ನು ತಮಗಿಷ್ಟಬಂದಂತೆ  ವಿಶ್ಲೇಷಿಸಿಕೊಂಡು ತಮ್ಮ ಹಿತಾಸಕ್ತಿಗಳಿಗೆ ಪೂರಕವಾಗಿ ಬಳಸಿಕೊಳ್ಳುವ  ಎಲ್ಲ ಮಾರ್ಗಗಳೂ ಅವರಿಗೆಲಭ್ಯವಾಗುತ್ತಿರುತ್ತವೆ. ಕಾನೂನುತಜ್ಞರುಗಳ ಸೇವೆಯನ್ನು, ಲೆಕ್ಕ ಪರಿಶೋಧಕರುಗಳ ಸೇವೆಯನ್ನು ಪಡೆಯುವುದು ಅವರಿಗೆ ಮಾತ್ರ ಸುಲಭವಾಗಿರುತ್ತವೆ.

ದೈನಂದಿನ ಬದುಕಿನ ಇದೆ-ಇಲ್ಲಗಳ ಜಂಜಾಟದಲ್ಲಿ ಮುಳುಗಿಹೋಗಿರುವ ಸಾಮಾನ್ಯಜನತೆಗೆ  ಈ ಕಾನೂನುಗಳೇ ಕುಣಿಕೆಯಾಗುವ ಸಾದ್ಯತೆಗಳಿವೆ. ಸರಕಾರದ ಸದುದ್ದೇಶಗಳೇನೆ ಇದ್ದರೂ  ಸಾಮಾನ್ಯರಿಗೆ ತೊಂದರೆಯಾಗದಂತೆ ಕಾನೂನುಗಳನ್ನು ಸರಳಗೊಳಿಸುವುದೆ ಸರಕಾರಗಳ ಮೊದಲ ಆದ್ಯತೆಯಾಗಬೇಕಿದೆ.

 

Leave a Reply

Your email address will not be published.