ಕಾಕುಪೋಕು ವಿದ್ಯೆಗಳನೇಕ ಇದ್ದರೇನು

-ಸರ್ಪಭೂಷಣ ಶಿವಯೋಗಿಗಳ ತತ್ವಪದ

ರಾಗ : ಆನಂದ ಭೈರವಿ

sappannaಕಾಕುಪೋಕು ವಿದ್ಯೆಗಳು ಅನೇಕ ಇದ್ದರೇನು ಜನ್ಮ
ಶೋಕವನ್ನು ನೀಗಿ ಮೋಕ್ಷದೇಕಾನಂದವೀಯವಿಂತೀ || ಪಲ್ಲ ||

ವೇದಾಗಮ ಪೌರಾಣಾದಿ ಗಾಥೆ ಶಬ್ದ ಶಾಸ್ತ್ರ ಮಂತ್ರ
ಭೇದ ಕಾವ್ಯ ತರ್ಕ ಮೀಮಾಂಸಾದಿ ಡಂಭ ವಿದ್ಯವಾ
ಹಾದಿಹೋಕರಲ್ಲಿಯಿಲ್ಲಿ ಓದಿ ದೈನ್ಯದೋರಿ ತಮ್ಮ
ಕಾದ ಹೊಟ್ಟೆಗನ್ನವಂ ಸಂಪಾದಿಸವರಲ್ಲದಿಂತೀ || 1 ||

ಜ್ಯೋತಿಷ್ಯ ಛಂದಸ್ಸು ಶಿಲ್ಪ ವಾಸ್ತು ವೈದ್ಯ ಗಾರುಡಂ ಸಂ-
ಗೀತ ನಾಟ್ಯ ಸಾಮುದ್ರಿಕ ಭೂತಾದ್ಯಲ್ಪ ವಿದ್ಯವ-
ನೋತು ಕಲ್ತರೆಲ್ಲ ತೂತು ಮಾತ ಮುಂದು ಮಾಡಿ ದೃಶ್ಯ
ಜಾತವನ್ನೇ ಹೇಳಿ ಯಮ ದೂತರಪ್ಪರಲ್ಲದಿಂತೀ || 2 ||

ವಾದವಶ್ಯಾಕರ್ಷಣೋರ್ವಿ ಭೇದನಾಕಾಶಾಂಬುಯಾನ
ಪಾದುಕಾಂಜನಾದಿ ಕ್ಷುದ್ರ ಮೋದವಿದ್ಯಾವಂತರು
ಕಾದಿ ಕಣ್ಣುಗೆಟ್ಟು ಕಲ್ಲ ಕಾದು ಸತ್ತು ಮುಂದೆ ಕಾಲ-
ಬಾಧೆಯಲ್ಲಿ ನೊಂದು ಬೆಂದು ಬೂದಿಯಪ್ಪರಲ್ಲದಿಂತೀ || 3 ||

ಬಂಧ ಲಕ್ಷ ಮುದ್ರೆ ನಾಡಿ ತಂದ ಚಕ್ರತಾರೆ ನಾದ
ಬಿಂದು ಮಂಡಲಾದಿ ಯೋಗದಂಧವಿದ್ಯಾನಿಷ್ಠರು
ಅಂದು ಇಂದು ತೋರಿತೆಂದಾನಂದಿಸುತ್ತೆ ಪೂರ್ಣಭಾವ-
ದಂದಗೆಟ್ಟ ಜ್ಞಾನವನ್ನೆ ತಿಂದು ತೇಲ್ವರಲ್ಲದಿಂತೀ || 4 ||

ವೇದಾಗಮ ಜ್ಯೋತಿಷ ಛಂದೋ ವಾದವಶ್ಯ ಬಂಧ ಲಕ್ಷ-
ವಾದಿಯಾದ ವಿದ್ಯವೆಲ್ಲ ಭೇದಮಾರ್ಗವೆನ್ನುತ-
ನಾದಿ ಗುರುಸಿದ್ಧನನ್ನೆ ಬೋಧಿಸುತ್ತದ್ವೈತರೂಪ-
ವಾದ ಮುಕ್ತಿಸೌಖ್ಯವೀವ ವೇದಾಂತಮೊಂದಲ್ಲದಿಂತೀ || 5 ||

ಸಪ್ಪಣ್ಣನವರ(ಕ್ರಿ.ಶ. 1795-1839) ಮೇಲಿನ ತತ್ವಪದವು ವೈದಿಕ ಸಾಂಸ್ಕøತಿಕ ಪರಂಪರೆ ರೂಪಿಸಿಕೊಂಡು ಬಂದಿದ್ದ ಎಲ್ಲ ವಿಚಾರಗಳನ್ನು ಹೊಟ್ಟೆಪಾಡಿಗಾಗಿ ರೂಪಿಸಿಕೊಂಡಿರುವ ಡಂಭದ ವಿಚಾರಗಳು ಎನ್ನುವ ಮೂಲಕ ಅವನ್ನು ಸಾರಾಸಗಟಾಗಿ ನಿರಾಕರಿಸಿದೆ. ಅಲ್ಲದೆ ಅವೆಲ್ಲವು ಭೇದವನ್ನು ಸೃಷ್ಟಿಸುವ ವಿಚಾರಗಳು ಎನ್ನುತ್ತ ಅವುಗಳ ಬದಲಿಗೆ ವೇದಾಂತವನ್ನು ಮಂಡಿಸುವ ಕೆಲಸ ಮಾಡಿದೆ. ಇಂದೂ ಕೂಡ ಅವೈದಿಕ ಪರಂಪರೆ ವೈದಿಕ ಪರಂಪರೆಯ ಜೊತೆಗೆ ನಿತ್ಯದ ಗುದ್ದಾಟವನ್ನು ಮುಂದುವರೆಸಿದೆ. ವೈದಿಕಶಾಹಿಯ ಜ್ಞಾನಲೋಕ ಅವೈದಿಕತೆಯ ಮೇಲೆ ಸಾರಿರುವ ನಿತ್ಯದ ಆಕ್ರಮಣವು ಯಾವತ್ತೂ ಸಾಗಿದ್ದು ಅದನ್ನು ಎಲ್ಲ ಕಾಲದಲ್ಲಿಯೂ ಎದುರಿಸುತ್ತಲೇ ಬಂದಿದೆ. ಅದನ್ನು ತತ್ವಪದಕಾರರು ಮಾಡಿದ್ದಾರೆ. ಆ ದಾರಿಯಲ್ಲಿ ಸಾಗಿಬಂದ ಸಪ್ಪಣ್ಣನವರಲ್ಲಿಯೂ ಅದನ್ನು ಕಾಣಲು ಸಾಧ್ಯವಿದೆ.

ಅಂದರೆ ಸಪ್ಪಣ್ಣನವರು ಮತ್ತು ಇತರೆ ತತ್ವಪದಕಾರರು ವೈದಿಕಶಾಹಿಯ ಎದುರು ನಡೆಸಿದ ಸೆಣಸಾಟವನ್ನು ಬಹಳ ಸ್ಪಷ್ಟವಾಗಿ ತೆರೆದು ತೋರಿಸುತ್ತದೆ. ಹೀಗೆ ತತ್ವಪದಕಾರರು ವೈದಿಕ ಜ್ಞಾನಮೀಮಾಂಸೆಯನ್ನಲ್ಲದೆ ಪ್ರಭುತ್ವ, ಸಂಸಾರ-ಕುಟುಂಬ ವ್ಯವಸ್ಥೆ, ಸಂಪತ್ತು-ಖಾಸಗಿ ಆಸ್ತಿ, ಜಾತಿ-ವರ್ಗಗಳ ಸಾಮಾಜಿಕ ಅಸಮಾನತೆ ಇತ್ಯಾದಿಗಳನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಇವು ಆತ್ಮಜ್ಞಾನದ ಗಳಿಕೆಗೆ ಮುಕ್ತಿಗೆ ತಮ್ಮನ್ನು ತಾವು ಅರಿವುದಕ್ಕೆ ದೊಡ್ಡ ತೊಡಕುಗಳೆಂದು ಭಾವಿಸುತ್ತ ಅವುಗಳನ್ನು ನಿರಾಕರಿಸುವ ಮೀರುವ ಪ್ರಯತ್ನ ಮಾಡಿದ್ದಾರೆ. ಇದನ್ನು ಜನಸಾಮಾನ್ಯರಿಗೂ ಬೋಧಿಸಿದ್ದಾರೆ. ಆ ಮೂಲಕ ಪ್ರಸ್ತುತದ ಬಂಧನದ ವ್ಯವಸ್ಥೆಯಿಂದ ಬಿಡುಗಡೆಗೊಳ್ಳುವಂತೆಯೂ ಸೂಚಿಸಿದ್ದಾರೆ. ಇಂದು ವಾಸ್ತವದಲ್ಲಿ ಸಮಾಜ ವಿಜ್ಞಾನಿಗಳು, ಪ್ರಗತಿಪರ ಚಿಂತಕರು, ಕ್ರಾಂತಿಕಾರಿಗಳಾದಿಯಾಗಿ ಎಲ್ಲ ಪ್ರಗತಿಪರ ಚಿಂತಕರು ಈ ಸಾಮಾಜಿಕ ಸಂಸ್ಥೆಗಳ ವಿನ್ಯಾಸವನ್ನು ಪ್ರಶ್ನಿಸುತ್ತಿರುವುದು ತಿಳಿದ ಸಂಗತಿಯೇ. ಅನುಭಾವಿ ಕವಿಗಳು ಸಂತರು ಕೂಡ ಇದನ್ನೇ ಮಾಡಿದ್ದಾರೆ.

Leave a Reply

Your email address will not be published.