ಕಾಂಗ್ರೆಸ್ ಆತ್ಮವಿಮರ್ಶೆ ಮಾಡಿಕೊಳ್ಳಲು ಇದಕ್ಕಿಂತ ಒಳ್ಳೆಯ ಸಮಯ ಬೇಕೇ?

- ಎ. ಆರ್. ಗೋಪಾಲಕೃಷ್ಣ ಮತ್ತು ಇಮ್ರಾನ್ ಪಾಷಾ

rahul-gandhi_9ಕೆಲವು ದಿನಗಳ ಹಿಂದಷ್ಟೇ ಹೊರಬಂದ ಪಂಚರಾಜ್ಯಗಳ ವಿಧಾನ ಸಭೆ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಸೋತಿರುವುದನ್ನು ಹಲವಾರು ‘ಹಿಮಾಲಯನ್ ಫೇಲ್ಯೂರ್’ಅಂತಲೇ ಕರೆಯುತ್ತಿದ್ದಾರೆ. ಗೋವಾ ಮತ್ತು ಮಣಿಪುರದಲ್ಲಿ ಹೆಚ್ಚಿನ ಶಾಸಕರು ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾಗಿ ಬಂದರೂ, ಸ್ಪಷ್ಟ ಬಹುಮತ ಸಿಗದಿದ್ದಲ್ಲಿ ಹಿಂಬಾಗಿಲಿನಿಂದ ಸರ್ಕಾರ ರಚನೆ ಮಾಡಲು ಹೈಕಮಾಂಡ್ ಆದೇಶಗಳಿಗೆ ಕಾಯುತ್ತಾ ಇದ್ದ ಅವಕಾಶವನ್ನು ಕಳೆದುಕೊಂಡಿದೆ. ಜೊತೆಗೆ ತನ್ನ ಅದಕ್ಷತೆಯನ್ನು ಮುಚ್ಚಿ ಹಾಕಲು ಅಲ್ಲಿನ ರಾಜ್ಯಪಾಲರನ್ನು ದೂರುತ್ತಿದೆ. ಈ ಸೋಲಿನೊಂದಿಗೆ ದೇಶದಲ್ಲಿನ ಹಲವು ರಾಜ್ಯಗಳಲ್ಲಿ ಪ್ರಸ್ತುತತೆ ಕಳೆದುಕೊಳ್ಳುತ್ತಿದೆ.

2014ರ ಲೋಕಸಭೆ ಚುನಾವಣೆಯ ದೊಡ್ಡ ಸೋಲಿನ ನಂತರ, ಕಾಂಗ್ರೆಸ್ ಅಧಿಕಾರ ಹಿಡಿದಿರುವುದು ಪಂಜಾಬಿನಲ್ಲಿ ಮಾತ್ರ. ಪಂಜಾಬ್ ವಿಧಾನಸಭೆ ಕಾಂಗ್ರೆಸ್ ಪಾಲಾಗಲು ಮುಖ್ಯ ಕಾರಣಗಳಲ್ಲಿ ಒಂದಾದ ಪಕ್ಷದ ಚುನಾವಣಾ ಯೋಜನೆ ಮತ್ತು ತಂತ್ರಗಾರಿಕೆಯ ಕೆಲಸ ನಿಭಾಯಿಸುತ್ತಿರುವ ಪ್ರಶಾಂತ್ ಕಿಶೋರ್. 2012 ರಲ್ಲಿ ಗುಜರಾತ್ ವಿಧಾನ ಸಭೆ, 2014 ಲೋಕಸಭೆ ಚುನಾವಣೆಯಲ್ಲಿ ಮೋದಿಯ ಪರವಾಗಿ ಹಾಗು 2015 ರಲ್ಲಿ ಬಿಹಾರದ ನಿತೀಶ್ ಕುಮಾರ್ ಪರವಾಗಿ ಪ್ರಶಾಂತ್ ಕಿಶೋರ್ ಚುನಾವಣಾ ತಂತ್ರಗಳನ್ನು ರೂಪಿಸಿ ಯಶಸ್ವಿಯಾಗಿದ್ದರು. ಇವರೊಂದಿಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತಮ್ಮ ಪಕ್ಷಕ್ಕೆ 2019ರ ಲೋಕಸಭೆ ಚುನಾವಣೆ ಸಮಯದ ವರೆಗು ನಡೆಯುವ ದೇಶದ ಎಲ್ಲಾ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಿಗೆ ಕಾಂಗ್ರೆಸ್ ಪರವಾಗಿ ಯೋಜನೆ ಮತ್ತು ತಂತ್ರಗಳನ್ನು ರೂಪಿಸಲು ಒಪ್ಪಂದ ಮಾಡಿಕೊಂಡಿದ್ದರು. ಇದರ ಫಲವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿಯ ಅಭ್ಯರ್ಥಿಯಾಗಿ ಶೀಲಾ ದಿಕ್ಷಿತ್‍ರನ್ನು ತರುವುದರಿಂದ ಹಿಡಿದು, ರಾಹುಲ್ ಹಾಗು ಪ್ರಿಯಾಂಕಾ ಇಬ್ಬರನ್ನು ಪ್ರಚಾರದ ಸಾರಥ್ಯಕ್ಕೆ ಸಜ್ಜುಗೊಳಿಸಿ, ತದನಂದರ ಸಮಾಜವಾದಿ ಪಕ್ಷದ ಜೊತೆಗೆ ಮೈತ್ರಿ ರಚಿಸುವವರೆಗು ಪ್ರಶಾಂತ್ ಕಿಶೋರ್ ಮುಂದಾಳತ್ವ ವಹಿಸಿದ್ದರು. ಆದರೆ ಹಿರಿಯ ನಾಯಕರುಗಳಲ್ಲಿ ಉಂಟಾದ ಭಿನ್ನಾಬಿಪ್ರಾಯಗಳ ಕಾರಣದಿಂದಾಗಿ ಉತ್ತರ ಪ್ರದೇಶದ ಪ್ರಚಾರದಿಂದ ದೂರ ಉಳಿದಿದ್ದರು.

ಉತ್ತರ ಪ್ರದೇಶ ಮತ್ತು ಉತ್ತರಖಂಡ ವಿಧಾನ ಸಭೆಯ ಫಲಿತಾಂಶ ಒಂದನ್ನು ಬಿಟ್ಟು ಗೋವಾ ಮಣಿಪುರ ಹಾಗು ಪಂಜಾಬ್ ರಾಜ್ಯಗಳಲ್ಲಿ ಕಾಂಗ್ರೆಸ್ ಅತ್ಯಧಿಕ ಶಾಸಕರನ್ನು ತರುವಲ್ಲಿ ಯಶಸ್ವಿಯಾಗಿದೆ. ಆದರೆ ಸರ್ಕಾರ ರಚಿಸುವಷ್ಟು ಬಹುಮತ ಸಿಗದಿರುವುದು ಸೋಲಲ್ಲದಿದ್ದರೆ ಮತ್ತಿನ್ನೇನು.ಕಡೇ ಪಕ್ಷ ಚುನಾವಣೆಯಲ್ಲಿ ಅನುಭವಿಸಿದ ಸೋಲಿಗೆ ಪಕ್ಷದ ಅಧ್ಯಕ್ಷೆಯಾಗಲಿ ಉಪಾಧ್ಯಕ್ಷರಾಗಲಿ ಸೋಲಿನ ಹೊಣೆ ಹೊರುವುದಕ್ಕೂ ಮುಂದಾಗಲಿಲ್ಲ. ಬದಲಾಗಿ ಪಕ್ಷದ ಹಿರಿಯ ನಾಯಕರು ಗಾಂಧಿ ಪರಿವಾರದ ಪರವಾಗಿ ಸಮರ್ಥನೆಗೆ ನಿಂತಿದ್ದಾರೆ.

ಸೈದ್ಧಾಂತಿಕ ಹಿನ್ನೆಲೆಯಿಂದ ನೋಡುವುದಾದರೆ ದೇಶದಲ್ಲಿ ಆರ್ಥಿಕ ಮತ್ತು ರಾಜಕೀಯವಾಗಿ ‘ಸೆಂಟರ್-ಲೆಫ್ಟ್’ ಧೋರಣೆಯುಳ್ಳ ಪಕ್ಷಗಳಲ್ಲಿ ದೇಶದಾದ್ಯಂತ ಬಲಿಷ್ಟವಾದ ಸಂಘಟನೆ ಹೊಂದಿರುವುದು ಕಾಂಗ್ರೆಸ್ ಮಾತ್ರ. 2014ರ ಸೋಲಿನ ನಂತರ ಪಕ್ಷದಲ್ಲಿನ ನಾಯಕತ್ವ ಕುರಿತು ಹಲವು ಪ್ರಶ್ನೆಗಳುದ್ಭವಿಸಿದ್ದವು. ಇವು ಪಂಚರಾಜ್ಯ ಚುನಾವಣಾ ಫಲಿತಾಂಶ ಹೊರಬಂದ ನಂತರ ಮತ್ತೆ ಚರ್ಚೆಯ ವಿಷಯವಾಗಿವೆ. ಪಕ್ಷದ ರಾಷ್ಟ್ರಾಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿಯಿಂದ ಹಿಡಿದು ಬ್ಲಾಕ್ ಮಟ್ಟದ ಅಧ್ಯಕ್ಷ ಮತ್ತು ಕಾರ್ಯದರ್ಶಿಯವರೆಗೂ ಹಲವು ನಿರ್ವಹಣಾ ಜವಾಬ್ದಾರಿಗಳನ್ನು ಹಣಬಲ ಇದ್ದವರ ಪಾಲಾಗುವುದು ತಡೆದು ಆಂತರಿಕ ಚುನಾವಣೆಗಳ ಮೂಲಕ ಆಯ್ಕೆಯಾದವರಿಗೆ ಜವಾಬ್ದಾರಿಗಳನ್ನು ನೀಡುವುದರೊಂದಿಗೆ ಆಂತರಿಕ ಚುನಾವಣೆಗಳಿಗೆ ಮತ್ತೆ ಮರುಜೀವ ತುಂಬುವ ಅವಶ್ಯಕತೆ ಎದ್ದು ಕಾಣುತ್ತಿದೆ. ಮಹಾತ್ಮಾ ಗಾಂಧೀಜಿ 1920ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೇಸ್ ನೊಂದಿಗೆ ಸ್ನೇಹ ಬೆಳೆಸಿದ ನಂತರ ರಾಜಕೀಯ ಪಕ್ಷದಲ್ಲಿ ಆಂತರಿಕ ಚುನಾವಣೆಗಳು ಭಾರತದಲ್ಲಿ ಮೊದಲು ಪ್ರಾರಂಭವಾದದ್ದು ಕಾಂಗ್ರೆಸ್ಸಿನಲ್ಲೇ. ನೆಹರು ಅಧಿಕಾರ ಹಿಡಿದ ಸಮಯದಿಂದ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಸಮಯದವರೆಗೂ ಆಂತರಿಕ ಚುನಾವಣೆಗಳು ಉತ್ತಮವಾಗಿ ಸಾಗಿ ಬಂದಿತ್ತು, ಪಿ.ವಿ ನರಸಿಂಹರಾವ್ ಪ್ರಧಾನಿಯಾದಾಗ ಆಂತರಿಕ ಚುನಾವಣಾ ಪ್ರಕ್ರಿಯೆಗೆ ಮರುಜೀವವನ್ನು ನೀಡಲಾಗಿತ್ತು. ಆದರೆ ಈಗಿನ ಕಾರ್ಯಕಾರಿ ಸಮಿತಿ 2015ರಿಂದ ಹಲವು ಕಾರಣಗಳನ್ನು ನೀಡುತ್ತಾ ರಾಷ್ಟ್ರ ಕಾರ್ಯಕಾರಿ ಸಮಿತಿಯ ಚುನಾವಣೆಯನ್ನು ಮುಂದೂಡುತ್ತಲೇ ಬರುತ್ತಿದೆ. ಚುನಾವಣಾ ಪ್ರಾಧಿಕಾರ (ಎಲೆಕ್ಷನ್ ಕಮಿಷನ್) ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಚುನಾವಣೆ (ಆಂತರಿಕ ಚುನಾವಣೆ) ನಡೆಸಲು ಜೂನ್ 30ರ ಗಡುವು ನೀಡಿದೆ. ಇಷ್ಟೆಲ್ಲಾ ಇತಿಹಾಸ ಹೊಂದಿರುವ ಪಕ್ಷ ಆಂತರಿಕ ಚುನಾವಣೆಯನ್ನು ಮುಂದೂಡಲು ನೀಡುತ್ತಿರುವ ಕಾರಣಗಳನ್ನು ಗಮನಿಸಿದರೆ ನಂಬಲಸಾಧ್ಯ ಅನ್ನಿಸುತ್ತಿದೆ.  ಆಂತರಿಕ ಚುನಾವಣೆಗಳನ್ನು ಹೀಗೇ ಹತ್ತಿಕ್ಕುತ್ತಿರುವವರೆಗೂ ಪ್ರಜಾಪ್ರಭುತ್ವದ ಹೆಸರಿನಲ್ಲಿ ಹಣಬಲ ಉಪಯೋಗಿಸಿ ಬರುವವರು ಮಾತ್ರ ತರತಮವಿಲ್ಲದ ಪ್ರಜಾಪ್ರಭುತ್ವದ ಆಶಯಗಳಿಗೆ ಮಸಿ ಬಳೆಯುತ್ತಿರುವುದು ಮುಂದುವರೆಯುತ್ತಲೇ ಇರುತ್ತದೆ.  ಸ್ಥಳೀಯ ಮಟ್ಟದಿಂದ ರಾಷ್ಟ್ರ ಮಟ್ಟದವರೆಗೂ ಪಕ್ಷದ ಕಾರ್ಯಕರ್ತರು ಮತ್ತು ಸದಸ್ಯರಿಗೆ ತಮ್ಮ ನೇತ್ರತ್ವ ವಹಿಸುವವರನ್ನು ತಾವೇ ಆಯ್ಕೆ ಮಾಡಿಕೊಳ್ಳು ಸ್ವಾತಂತ್ರ್ಯ ಸಿಗಬೇಕಿದೆ.

ಪಕ್ಷದ ನಾಯಕತ್ವ ಗಾಂಧಿ ಪರಿವಾರದ ಕೈಯಲ್ಲಿಲ್ಲದಿದ್ದರೆ ಕಾಂಗ್ರೆಸ್ ಪಕ್ಷ ಮುರಿದು ಬೀಳುತ್ತದೆ ಎಂದು ಹಲವರ ಅಭಿಪ್ರಾಯ, ಪಕ್ಷದ ಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಅಧ್ಯಕ್ಷೆಯಾದ ಸೋನಿಯಾ ಗಾಂಧಿ ಎರಡು ದಶಕಗಳ ಉಸ್ತುವಾರಿಯ ಫಲವಾಗಿ ಇಂದು ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವುದು ಬೆರಳೆಣಿಕೆಯಷ್ಟು ರಾಜ್ಯಗಳಲ್ಲಿ ಮಾತ್ರ. ಪಕ್ಷದ ನಾಯಕತ್ವ ಗಾಂಧಿ ಪರಿವಾರದ ಕೈಯಲ್ಲೇ ಕೇ೦ದ್ರೀಕೃತವಾಗಿರುವುದು ಹೊಸ ಪೀಳಿಗೆಯ ಕಾರ್ಯಕರ್ತರಲ್ಲಿ ಹಾಗು ಮತದಾರರಲ್ಲಿ ನಿರಾಸೆ ಮೂಡಿಸುವ ವಿಷಯ. ನಾಯಕತ್ವ ಬದಲಾವಣೆಗೆ ಕಾಂಗ್ರೆಸ್ ಮುಂದಾದರೂ ಅದು ಕ್ರಮಬದ್ಧ ಚುನಾವಣಾ ಪ್ರಕ್ರಿಯೆಯಿಂದಾಗದೇ ಇದ್ದರೆ ಹತ್ತಾರು ನಾಯಕರು ಬದಲಾದರೂ, ಪಕ್ಷದಲ್ಲಿನ ಮೂಲ ಸಮಸ್ಯೆಗಳಿಗೆ ಪರಿಹಾರ ದೊರಕದ ಹೊರೆತು ಕಾಂಗ್ರೆಸ್ ಚೇತರಿಸಿಕೊಳ್ಳಬಲ್ಲ ಲಕ್ಷಣಗಳು ಕಾಣಸುವುದಿಲ್ಲ. ಪಕ್ಷದಲ್ಲಿ ಗಾಂಧಿ ಪರಿವಾರದ ಹೊರಗೂ ಬಹಳಷ್ಟು ಹೊಸ ಪೀಳಿಗೆಯ ಮತ್ತು ಭರವಸೆ ಮೂಡಿಸಿರುವ / ಮೂಡಿಸುತ್ತಿರುವ ನಾಯಕರಿದ್ದಾರೆ. ಪಕ್ಷದ ಸೈದ್ಧಾಂತಿಕ ನಿಲುವನ್ನು ಮತ್ತು ಆ ನಿಲುವಿನ ಪ್ರಸ್ತುತತೆಯನ್ನು ಜನರ ಮುಂದಿಡಲು ವಿಫಲರಾಗಿರುವ ಪಕ್ಷದ ಅಧ್ಯಕ್ಷಾ-ಉಪಾಧ್ಯಕ್ಷರಿಗಿಂತ ಸಮರ್ಥ ರೀತಿಯಲ್ಲಿ ಜನರೊಂದಿಗೆ ಸಂವಾದ ಏರ್ಪಡಿಸಬಲ್ಲ ನಾಯಕರ ಕೈಯಲ್ಲಿ ಪಕ್ಷದ ಅಧಿಕಾರ ವರ್ಗಾವಣೆಯಾಗುವ ದಿನಗಳನ್ನು ಕಾದು ನೋಡಬೇಕಿದೆ.

soniaಒಂದಾದ ಮೇಲೊಂದರಂತೆ ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಳ್ಳುತ್ತಿದ್ದರೂ ಬುದ್ದಿ ಕಲಿಯದ ನಾಯಕತ್ವ ತನ್ನನ್ನು ಮರುಮೌಲ್ಯಮಾಪನಕ್ಕೆ ಒಡ್ಡಿಕೊಳ್ಳದಿದ್ದರೆ ದೇಶದ ಜನರಿಗೆ ಒಳ್ಳೆಯ ಆಡಳಿತ ಕೊಡುವುದಿರಲಿ  ಕೇಂದ್ರ ಮತ್ತು ರಾಜ್ಯ ಶಾಸನ ಸಭೆಗಳಲ್ಲಿ ಸಬಲ ವಿರೋಧ ಪಕ್ಷದ ಸ್ಥಾನ ಅಲಂಕರಿಸುವಲ್ಲೂ ವಿಫಲವಾಗುವುದರಲ್ಲಿ ಅನುಮಾನವಿಲ್ಲ. ಕಾಂಗ್ರೆಸ್ ಸದ್ಯದಲ್ಲಿ ಎಡವುತ್ತಿರುವುದು ಮಂತ್ರಿಗಳು ಮಾಡಿರುವ ಬ್ರಷ್ಟಾಚಾರದ ಅವಾಂತರಗಳಲ್ಲೋ ಅಥವಾ ನಾಯಕತ್ವದಲ್ಲೋ ಎಂದು ಮರು ಪರೀಕ್ಷಿಸಿಕೊಳ್ಳ ಬೇಕಿದೆ.

ತಮಗೆ ಬೇಕಾದವರನ್ನು ನೇಮಿಸಿಕೊಳ್ಳುವ ವಿಶೇಷಾಧಿಕಾರ, ಪಕ್ಷದಲ್ಲಿ ಉಂಟಾಗುವ ಸ್ಥಳೀಯ ಬಿಕ್ಕಟ್ಟುಗಳನ್ನು ನಿವಾರಿಸಿಕೊಳ್ಳಲು ಕೇಂದ್ರ ನಾಯಕರ ಮೊರೆ ಹೋಗುವುದು, ರಾಜ್ಯ ಸಂಪುಟ ರಚನೆ/ ಪುನರ್ರಚನೆಗೆ ಹೈಕಮಾಂಡ್ ಮಧ್ಯ ಪ್ರವೇಶ, ಪಕ್ಷದ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರಲ್ಲಿ ಪಕ್ಷ ಸಂಬಂಧಿತ ಯಾವುದೇ ವಿಷಯಗಳಲ್ಲಿ ‘ಹೈಕಮಾಂಡ್ ತೆಗೆದು ಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ’ ಎನ್ನುವ ಪ್ರವೃತ್ತಿ., ಇವೆಲ್ಲವೂ ಸಮ್ರಾಜ್ಯಶಾಹಿತನವನ್ನು ಪ್ರತಿಬಿಂಬಿಸುತ್ತದೆ. ಕಾಂಗ್ರೆಸ್ ತನ್ನ ಈ ಪ್ರವೃತ್ತಿಯಿಂದ ಹೊರಬಂದು ಪಕ್ಷಕ್ಕೆ ಹೊಸರೂಪ ಕೊಡಲು ರಾಜ್ಯಗಳಲ್ಲಿನ ನಾಯಕರನ್ನು ಅವಲಂಬಿತವಾಗ ಬೇಕಿದೆ. ಭಾರತದಂತಹ ಒಕ್ಕೂಟ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳಲ್ಲೂ ಸಹ ಅಧಿಕಾರವೂ ಕೇಂದ್ರೀಕೃತವಾಗಿದ್ದಾಗ ರಾಜ್ಯಗಳ ಪ್ರಾದೇಶಿಕತೆಗೆ ಮತ್ತು ಪಕ್ಷದ ಪ್ರಾದೇಶಿಕ ಘಟಕಗಳಿಗೆ ಸಿಗಬೇಕಾದ ಸ್ವಾತಂತ್ರ್ಯ ಮತ್ತು ಮಹತ್ವ ಸಿಗದೇ, ಪಕ್ಷದ ಗುರಿ ಮತ್ತು ಕಾರ್ಯ ವೈಖರಿಗಳಲ್ಲಿ ನಾವೀನ್ಯತೆ ಕಾಣದೆ ರಾಜಕೀಯದಲ್ಲಿ ತಮ್ಮ ಪ್ರಸ್ತುತತೆ ಕ್ಷೀಣಿಸುವೆಡೆಗೆ ಹೆಜ್ಜೆ ಹಾಕತೊಡಗುತ್ತದೆ. ಹೊಸಪೀಳಿಗೆಯ ಮತದಾರರ ಬಯಕೆಗಳನ್ನು ಅರ್ಥಮಾಡಿಕೊಳ್ಳುವ, ಕಾಂಗ್ರೆಸ್ ಆಡಳಿತ ನಡೆಸಿದ್ದ ರಾಜ್ಯಗಳಲ್ಲಿ ಬೆಳೆಸಿರುವ ಮಾದರಿಗಳನ್ನು ಮತದಾರರಿಗೆ ಸಮರ್ಥವಾಗಿ ತಿಳಿಸುವ, ತಾನು ಬೆಳೆಸಿರುವ ಮಾದರಿಗಳಿಂದಾಚೆಗೆ ಇನ್ನೇನು ಮಾಡಬಲ್ಲದು ಅನ್ನುವ ಭರವಸೆಗಳನ್ನು ಜನರಲ್ಲಿ ಮೂಡಿಸುವ ಅವಶ್ಯಕತೆ ಇದೆ. ಭಾರತದ ರಾಜಕಾರಣದಲ್ಲಿ ಸೆಂಟರ್-ಲೆಫ್ಟ್ ಆಲೋಚನೆ ಮತ್ತು ನೀತಿಗಳಿಗೆ ಬಹಳ ಪ್ರಮುಖ ಸ್ಥಾನವಿದೆ, ಹೆಚ್ಚಾಗುತ್ತಿರುವ ಬಲಪಂಥೀಯ ವಾತಾವರಣದೆದುರು ಕಾಂಗ್ರೇಸ್ ಇದನ್ನು ಸಮರ್ಥನೀಯವಾಗಿ ನಿಭಾಯಿಸುವಲ್ಲಿ ಎಡವಿದರೆ ಹೊಸದೊಂದು ರಾಜಕೀಯ ಪಕ್ಷ ಇದನ್ನು ಆಕ್ರಮಿಸಿಕೊಳ್ಳಲು ಬಹಳ ಸಮಯ ಬೇಕಾಗುವುದಿಲ್ಲ.

Leave a Reply

Your email address will not be published.