ಕವಿ ಭೂಮಿ ಮೇಲಿನ ಅಸುಖಿ

-ವೆಂಕಟೇಶ್ ನೆಲ್ಲುಕುಂಟೆ

ಭೂಮಿ ಮೇಲಿನ ಅತ್ಯಂತ ಅಸುಖಿ ಜೀವಿ ಕವಿಯೇ ಇರಬೇಕು. ನಿರಂತರ ಅತೃಪ್ತಿ ಅವನನ್ನು ಕಾಡುತ್ತಲೇ ಇರುತ್ತವೆ. ಆಸ್ಥಾನದೊಳಗಿದ್ದೂ ಅರಸನನ್ನು ಹುಳಕ್ಕಿಂತ ಕಡೆ ಎಂದು ಧಿಕ್ಕರಿಸಿ ಹೊರ ಬರುವ ದಿಟ್ಟತನ ಕವಿಯದು. ಕಾಲದ ಅತಿರೇಕಗಳ ವಿರುದ್ಧ ಬಂಡೇಳಲು ಆತ ಹಿಂದು ಮುಂದು ನೋಡುವುದಿಲ್ಲ. ಸಮಾಜ ತಣ್ಣಗೆ ಹೆಪ್ಪುಗಟ್ಟಿದಂತಾದಾಗ ಹಿಮಕ್ಕೆ ಬೆಂಕಿ ಹಚ್ಚುವೆನೆಂದು ಹೊರಡಲು ಮನಸ್ಸು ಮಾಡುತ್ತಾನೆ. ಸಮಾಜದ ಮನಸ್ಸನ್ನು ಓದುವ ಶಕ್ತಿಯುಳ್ಳ ವಿಜ್ಞಾನಿ, ಪತ್ರಕರ್ತ. ಹಾಗಾಗಿಯೇ ಆತ ವೈರುದ್ಯಗಳಲ್ಲಿರುತ್ತಾನೆ. ಹುಂಬನಂತೆಯೂ, ಅತಿಸೂಕ್ಷ್ಮ ಸ್ವಭಾವದವನಂತೆಯೂ ಕಾಣಿಸುತ್ತಾನೆ. ಸ್ಥಾಪಿತ ಮೌಲ್ಯಗಳನ್ನು ಮುರಿಯುವುದರಲ್ಲಿ ಕವಿಗೆ ವಿಚಿತ್ರ ಖುಷಿ. ಇದಕ್ಕೆ ಜನಪದ-ವ್ಯಕ್ತಿಪದಗಳೆಂಬ ವ್ಯತ್ತಾಸವೇನಿಲ್ಲ. ಗಂಡ-ಮಕ್ಕಳ ಜೊತೆ ನೆಮ್ಮದಿಯಾಗಿರುವಂತೆ ಕಾಣಿಸುತ್ತಿದ್ದಾಗಲೇ ‘ಎಲ್ಲೋ ಜೋಗಪ್ಪ ನಿನ್ನರಮಾನೆ’ಎಂದು ಹೊರಡುವ ಜಂಗಮತನ ಕವಿಯದು. ಭೀಕರ ಯುದ್ಧದೊಳಗೆ ಮನುಷ್ಯತ್ವವನ್ನು ಆಶಿಸುವ, ಕೈಗಾರಿಕೆಗಳ ಕೊಳವೆಯಲ್ಲಿ ಬೆಂಕಿ ಹೊಗೆ ದಟ್ಟವಾದಾಗ ಹಳ್ಳಿ ಹುಡುಗಿಯ ಆಟವನ್ನು ಕುರಿತು ಹಾಡುವ, ವ್ಯಾಪಾರದ ಯಾನದ ಜೊತೆಯಲ್ಲಿ ಜನಾಂಗಗಳ ಮಿತಿಯ ಹಂಗು ತೊರೆದು ಪ್ರೇಮ ಅರಳುವುದನ್ನು ಕುರಿತು ಧ್ಯಾನಿಸಿದ್ದು ಇದೇ ಕವಿಯೇ. ಕವಿ ಕಾಲದ ವಿರುದ್ಧ ಬಂಡೆದ್ದ ಸೈತಾನನ ಸಂಗಾತಿ, ನಿರಂತರ ಪ್ರೇಮ-ಕರುಣೆಯನ್ನು ಕುರಿತು ಧ್ಯಾನಿಸುವ ಮಮತಾಮಯಿ.

ಕವಿ ಛಂದಸ್ಸಿನಲ್ಲಿ, ರೂಪಕ-ಪ್ರತಿಮೆಗಳಂತಹ ಅಲಂಕಾರಗಳಲ್ಲಿ ಯಾಕೆ ಅಡಗಿಕೊಳ್ಳೊತ್ತಾನೆ ಎಂಬುದೂ ಕುತೂಹಲಕರ ವಿಚಾರವೆ. ಅಲಂಕಾರಗಳನ್ನೊಳಗೊಂಡ ಕುಸುರಿ ಕೆಲಸಗಳು ಕಾವ್ಯದ ಅಂದವನ್ನು ಹೆಚ್ಚಿಸುವ ಪ್ರಿಯತಮೆಯೆಂದು ಅನೇಕರು ಭಾವಿಸಿದ್ದಾರೆ. ಆದರೆ ಅವು ಕಾವ್ಯದೊಳಗೆ ಅಡಗಿದ ರಾಜಕೀಯ ಸ್ಪೋಟಕಗಳು ಎಂಬಂತೆ ಯಾಕೋ ಅನ್ನಿಸುತ್ತಿದೆ. ಹಾಗಿಲ್ಲದಿದ್ದರೆ, ಪ್ಲೇಟೋ ಯಾಕೆ ಕವಿಯನ್ನು ತನ್ನ ಆದರ್ಶ ರಾಜ್ಯದಿಂದ ಹೊರಗಟ್ಟುತ್ತೇನೆ ಅಂದ. ನಿಜವಾದ ಕವಿ ಆದರ್ಶ ರಾಜ್ಯಕ್ಕೆ ತಾನೇ ನಿರಂತರವಾಗಿ ಹಂಬಲಿಸುತ್ತಿರುವುದು. ಪ್ಲೇಟೋನ ಆದರ್ಶ ರಾಜ್ಯ ಅಲೆಗ್ಸಾಂಡರನ ರಕ್ತಸಿಕ್ತ ಖಡ್ಗದ ಮೂಲಕ ಸಾಧಿಸುವುದಾದರೆ, ಅಂಥ ಆದರ್ಶ ರಾಜ್ಯಕ್ಕೆ ಮೊದಲು ಅಡ್ಡ ಬರುವವನು ಕವಿಯೇ ಇರಬೇಕು. ರಾಜನ ಬಲಿಷ್ಠ ಖಡ್ಗದ ಎದುರು ನಿಂತು ಕವಿ ತಣ್ಣಗೆ ವಿದೂಷಕನಂತೆ ವೇಷಗಳನ್ನು,ಮುಖವಾಡಗಳನ್ನು ಅನಾವರಣಗೊಳಿಸಲು ಯತ್ನಿಸುತ್ತಾನೆ.

Mideast Israel Palestiniansನಾನಿಲ್ಲಿ ಕಾವ್ಯವೆಂದರೆ, ಹಾಡು,ನಾಟಕ, ಇತ್ಯಾದಿಗಳೆಲ್ಲವನ್ನೂ ಏಕೀಭವಿಸಿ ಧ್ಯಾನಿಸುವ ಹಳೆಯ ವ್ಯಾಖ್ಯಾನದ ಸಹಾಯ ಪಡೆಯಲೆತ್ನಿಸುತ್ತೇನೆ.ಎಲ್ಲವನ್ನೂ ‘ಸ್ಪೆಷಲೈಜೇಷನನ್ನು’ ಧ್ಯಾನಿಸುವ ಈ ಕಾಲದಲ್ಲಿ ಸಾಹಿತ್ಯವೂ ಸಹ ಕುರುಡರು ಮುಟ್ಟಿದ ಆನೆಯಂತಾಗಿ ಹೋಗಿದೆ. ಮರವನ್ನು ಇಡಿಯಾಗಿ ಧ್ಯಾನಿಸದೆ ಹೋಗುವ ಕುಬ್ಜತನವೊಂದು ಪ್ರಭಾವಶಾಲಿಯಾಗಿರುವುದರ ವಿರುದ್ಧ ಚೋಮ್ಸ್ಕಿ ಕಿಡಿಕಾರುತ್ತಾರೆ. ಚೋಮ್ಸ್ಕಿ ಪ್ರಕಾರ ಈ ‘ಸ್ಪೆಷಲೈಜೇಷನ್’ ಎನ್ನುವುದು ಸಮಾಜದ ಸಾಂಸ್ಕøತಿಕ ಮತ್ತು ರಾಜಕೀಯದ ಮೇಲೆ ನಕಾರಾತ್ಮಕ ಪರಿಣಾಮವನ್ನುಂಟು ಮಾಡಿದೆ. ಸಮಾಜವೊಂದರಲ್ಲಿ ಹುಟ್ಟುವ ಕ್ರೂರ ಸರ್ವಾಧಿಕಾರಿಗಳನ್ನು, ಕೊಲೆಗಡುಕರನ್ನು ವಿಜ್ಞಾನಿಗಳು, ರಾಜಕೀಯ ಪಂಡಿತರು ಹಾಗೂ ಇನ್ನಿತರೆ ಕ್ಷೇತ್ರಗಳವರು, ಇದು ತಮಗೆ ಸಂಬಂಧ ಪಡೆದ ವಿಚಾರವೆಂದು ಸಹಿಸಲಾರಂಭಿಸಿರುವುದೆ ಬಹುದೊಡ್ಡ ದೌರ್ಬಲ್ಯವೆಂದು ವಿವರಿಸುತ್ತಾರೆ. ಭಾರತದ ಸಂದರ್ಭದಲ್ಲಿಯಂತೂ ಬಿಡಿ ಬಿಡಿಯಾದ ವ್ಯಕ್ತಿಗಳು ಆಳುವವರನ್ನು ಕೇಳುವ ಕೆಲಸ ಮಾಡಿದರೆ’ ಬುದ್ಧಿಜೀವಿಗಳನ್ನು ಕಂಪಾರ್ಟುಮೆಂಟಿನಲ್ಲಿಟ್ಟು ಏಕಾಂಗಿಯಾಗಿಸಿ ದಮನಿಸುವ ಕೆಲಸವೂ ನಡೆಯುತ್ತಿದೆ. ಇದರಲ್ಲಿ ಬಹುಪಾಲು ಜನ ಸಾಹಿತ್ಯದ ಹಿನ್ನೆಲೆಯವರೇ ಆಗಿರುವುದು ನಿರ್ಲಕ್ಷಿಸಬಾರದ ವಿಚಾರ. ಕವಿಯ ಮೇಲೆ ನಡೆಯುತ್ತಿರುವ ದಾಳಿಯನ್ನು ಗಮನಿಸಿದರೆ ಕಾವ್ಯದ ಶಕ್ತಿಯೇನೆಂದು ಅರ್ಥಮಾಡಿಕೊಳ್ಳಬಹುದು. ಇಲ್ಲದಿದ್ದರೆ ಹಿಟ್ಲರ್ ಕವಿ ಬ್ರೆಕ್ಟನ ಹಿಂದೆ ಬೀಳುತ್ತಿರಲಿಲ್ಲ. ಕಲ್ಬುರ್ಗಿಯವರಿಗೆ ಗುಂಡಿನೇಟು ತಾಕುತ್ತಿರಲಿಲ್ಲ.
‘ನನ್ನ ದೃಢ ಸಂಕಲ್ಪವನ್ನು ಸಡಿಲಗೊಳಿಸುವ ಮನಸ್ಸನ್ನು ದುರ್ಬಲಗೊಳಿಸುವ ಸಂಗೀತವನ್ನು ಕೇಳಲಾರೆ’ ಎನ್ನುತ್ತಾನೆ ಕಮ್ಯುನಿಸ್ಟ್ ನಾಯಕ ಲೆನಿನ್. ರಕ್ತ ಒಣಗದ ಖಡ್ಗ ಒರೆಯೊಳಗಿರಿಸಿಕೊಂಡೇ ಇಹದ ನಶ್ವರತೆಯನ್ನು ಸಾರುವ ಸೂಫಿ ಹಾಡುಗಳನ್ನು ದಿಲ್ಲಿಯ ಅರಸರು ಕೇಳುತ್ತಿದ್ದರಂತಲ್ಲ ಅದು ಹೇಗೆ? ಹಾಡು ಸಂಗೀತಗಳು ದಿಲ್ಲಿಯ ಅರಸರನ್ನು ಕಡೆಕಡೆಗೆ ದುರ್ಬಲಗೊಳಿಸಿ ಬಿಟ್ಟವೇ? ಎಂಬ ಪ್ರಶ್ನೆಗಳು ಹಿಂಬಾಲಿಸುತ್ತವೆ.

ಹೊಸಗನ್ನಡದ ಕವಿ ತಾನು ಯಾಕೆ ಪದ್ಯ ಬರೆಯುತ್ತೇನೆ ಎಂದು ಕೇಳಿಕೊಂಡೇ ಬರೆದ ‘ಕವಿತೆ’ಹೆಸರಿನ ಅನೇಕ ಪದ್ಯಗಳಿವೆ. ಅವುಗಳು ಒಂದರಂತೆ ಇನ್ನೊಂದಿಲ್ಲ ಎಂಬ ಕಾರಣಕ್ಕೆ ಬಾಳಿಕೆ ಬರುತ್ತಿವೆ. ಕವಿಯ ಆದ್ಯತೆ ಬೇರೆ ಬೇರೆಯೆನ್ನಿಸಿದರೂ ಆಂತರ್ಯದಲ್ಲಿ ಮಾನವೀಯತೆಯ ಸೆಲೆ ಹರಿಯುತ್ತಿರುತ್ತದೆ. ಕವಿಗಳು ತನ್ನ ಆದ್ಯತೆಗಳು ಏನೆಂದು ಹಾಗೂ ತನ್ನ ಆಶಯವಿದೆಂದು ದಾಖಲಿಸುವುದು ತುಸು ವಾಚ್ಯವೆನ್ನಿಸಿದರೂ,ಕವಿಯ ಒತ್ತಾಸೆಯನ್ನು ತಳ್ಳಿಹಾಕಲಾಗದು.1951 ರಲ್ಲಿ ಕವಿ ಬ್ರೆಕ್ಟ್ ಬರೆದ ಪದ್ಯ ಇದು.
ದುರ್ಜನರಿಗೆ ನಿನ್ನ ಪಂಜ ಕಂಡರೆ ಭಯ
ಸಜ್ಜನರಿಗೆ ಮೆಚ್ಚಿಗೆ ನಿನ್ನ ನಯ
ನನ್ನ ಕವಿತೆಗಳ ಬಗ್ಗೆ
ನಾನು ಕೇಳ ಬಯಸುವುದು
ಇದನ್ನೇ’{ಶಾ ಬಾಲುರಾವ್ ಅನುವಾದದ ಬರ್ಟೋಲ್ಟ್ ಬ್ರೆಷ್ಟ್ ನ 70 ನೇ ಪದ್ಯ] ಎನ್ನುತ್ತಾನೆ.

ಇದರ ಮೂಲಕ ಬ್ರೆಕ್ಟ್ ಕವಿತೆಗಳು ಜೀವಂತವಾಗುವುದು ಹೇಗೆ ಎಂಬ ಪ್ರಶ್ನೆ ಹಾಕಿಕೊಂಡು ಬರೆಯುತ್ತಾನೆನ್ನಿಸುತ್ತದೆ.
ಜೀವಂತವಾದ ಕಾವ್ಯ ಕಾಲದ ಎಲ್ಲ ಅತಿರೇಕಗಳ ವಿರುದ್ಧ ಬಂಡೇಳುವ ಗುಣವನ್ನು ತನ್ನೊಳಗೆ ಉಳಿಸಿಕೊಂಡಿರುತ್ತದೆ. ಸ್ಥಾವರವನ್ನು, ಆಡಂಬರಗಳನ್ನು,ಸರ್ವಾಧಿಕಾರತ್ವವನ್ನು ಅದು ಪ್ರಶ್ನಿಸುತ್ತದೆ. ಮನುಷ್ಯನ ಮೂಲಭೂತ ಚೈತನ್ಯವನ್ನು ಹುಡುಕುತ್ತದೆ ಎಂದರೆ ಅದು ಆತ್ಮವಾದವಲ್ಲ. ವಾಸ್ತವದೊಡನೆ ವ್ಯವಹರಿಸುತ್ತದೆಯೆಂದರೆ ಅದು ಭೌತವಾದವಲ್ಲ. ಎಲ್ಲ ಅಲ್ಲಗಳ ಆಚೆಗೆ ನಿರಂತರ ಕೈಚಾಚುವ ಮಗುವಿನಂತೆ ಕಾವ್ಯ.ಸೂಫಿ ಕಾವ್ಯವೂ ಹಾಗೆಯೇ. ತಾದಾತ್ಮ್ಯವೇ ಅದರ ಆತ್ಯಂತಿಕ ಶಕ್ತಿ. ಪ್ರೇಮಿಯೊಡನೆ,ಗುರುವಿನೊಡನೆ ,ನಿಸರ್ಗಸ್ಥ ದೇವರೊಡಗಿನ ತಾದಾತ್ಮ್ಯ ಅದು. ಅದು ಲಿಂಗ-ಭೇದವಿಲ್ಲದೆ ದೇಹದ ಹಂಗಿಲ್ಲದೆ ತಲ್ಲೀನವಾಗುತ್ತದೆ. ಅನೇಕ ಸೂಫಿಗಳು ವ್ಯವಸ್ಥೆಯ ಸ್ಥಾವರವನ್ನು ಪ್ರಶ್ನಿಸಿದವರು. ತತ್ವ ಪದಕಾರರೂ ಹಾಗೆಯೇ. ಆದ್ದರಿಂದಲೂ ಜನಮಾನಸದಲ್ಲಿ ಬಹುಕಾಲ ಬಾಳಿದರು.
2
bmಬಿ. ಎಂ ಬಶೀರರ ‘ಸೂಫಿಯ ಕಣ್ಣಲ್ಲಿ ಹನಿಗಳು’ ಮೇಲೆ ಹೇಳಿದ ಎಲ್ಲ ಅಂಶಗಳಿಂದ ಪ್ರಮುಖವಾದ ಕೃತಿ. ಬಶೀರರ ಪದ್ಯಗಳ ಕುರಿತು ಗೆಳೆಯರೊಂದಿಗೆ ಮಾತನಾಡಿದೆ. ಸಣ್ಣ ಸಣ್ಣ ಪದ್ಯಗಳು ಚೆನ್ನಾಗಿವೆ. ಪದ್ಯ ವಿಸ್ತರಿಸುವುದಕ್ಕೆ ಧ್ಯಾನ ಅಗತ್ಯ ಎಂದರು. ಮತ್ತೆ ಓದಿದೆ. ಸಂಕಲನದಲ್ಲಿರುವ ಅಷ್ಟೂ ಪದ್ಯಗಳು ಒಂದೇ ಮರದ ರೆಂಬೆ-ಕೊಂಬೆ-ಹೂವು-ಹಣ್ಣುಗಳಂತೆ ಕಾಣಿಸಲಾರಂಭಿಸಿದವು. ಮತ್ತು ಇಡೀ ಮರವೇ ಆಘಾತಕ್ಕೆ ಸಿಕ್ಕಿ ರೋಧಿಸುತ್ತಿರುವಂತೆ ಪದ್ಯಗಳು ಕೇಳಿಸತೊಡಗಿದವು. ಕಾಲದ ದುರಂತವನ್ನು ಒಡಲೊಳಗಿಟ್ಟುಕೊಂಡು ನುಡಿಯುತ್ತಿರುವ ನುಡಿಗಳಂತೆ ಅವು ಕೇಳಿಸುತ್ತವೆ. ಅಲ್ಲದೆ ಬೇಟೆಗಾರನೊಬ್ಬನ ಬಾಣ ತಾಗಿ ಜೀವವುಳಿಸಿಕೊಳ್ಳಲು ಓಡಿ ಬಂದು ಕಕ್ಕಾಬಿಕ್ಕಿಯಾಗಿ ನಿಂತ ಎಳೆ ಜಿಂಕೆಯೊಂದರ ಹೃದಯದ ತಿದಿಯಂತೆಯೂ, ಸಿಟ್ಟು,ಹತಾಶೆ, ನೋವು ಅವಮಾನ ಏಕೀಭವಿಸಿದ ಚೋಮನದುಡಿಯಂತೆಯೂ ಕೇಳಿಸುತ್ತವೆ. ಯುದ್ಧ ಭೂಮಿಯಲ್ಲಿ ವೀಣೆ ನುಡಿಸಲಾಗದು. ನುಡಿಸಿದರೆ ರುದ್ರವೀಣೆ ಮಾತ್ರ ನುಡಿಸಬಹುದೆಂಬಂತೆ ಇಸ್ಮತ್ ಚುಗ್ತಾಯಿ ಕಥೆ ಬರೆಯುತ್ತಾರೆ. ಒಡಲ ದಾಗೀನಿಗೆ ಬೆಂಕಿ ಬಿದ್ದಂತೆ ಚುಟುಕು ಮಾತುಗಳ,ಸಣ್ಣ ವಾಕ್ಯಗಳ ಕಥೆಗಳು, ದೇಶ ಇಬ್ಭಾಗದ ರಕ್ತ ಸಿಕ್ತ ಘಟನೆಗಳನ್ನು ಚುಗ್ತಾಯಿಯವರ ಕಥೆಗಳು ಹೇಳುತ್ತವೆ. ಅವು ಯಾವಾಗ ಬೇಕಾದರೂ ತನ್ನ ಒಡಲು ಸೀಳಬಹುದೆಂಬ ಏದುಬ್ಬಸದಲ್ಲಿ ಹುಟ್ಟಿದ ಹಾಡುಗಳಂತೆ ಕೇಳಿಸುತ್ತವೆ.

ದೀರ್ಘ ಧ್ಯಾನಕ್ಕೆ ನೆಮ್ಮದಿ ಬೇಕು. ಬೇಟೆಗಾರನ ಹಂಗಿಲ್ಲದೆ ಹಸಿರು ತುಂಬಿದ ಅರಣ್ಯದೊಳಗೆ ಮೇಯುವ ಆನೆಯಂಥಾ ನೆಮ್ಮದಿ ಅದು. ಇದನ್ನು ಪರೀಕ್ಷಿಸಲು ದುಡಿವ ವರ್ಗದ ಸಂಗೀತವನ್ನೂ ,ಹೊಟ್ಟೆ ತುಂಬಿದವರ ಸಂಗೀತವನ್ನೂ ಕೇಳಿ ನೋಡಿ.ವ್ಯತ್ಯಾಸ ಥಟ್ಟನೆ ಗೋಚರಿಸುತ್ತದೆ.ಆದರೆ ನಿಜವಾದ ಕಾವ್ಯ ರಿಯಾಯಿತಿಗಳಿಂದ ಹೊರತಾಗಲು ಪ್ರಯತ್ನಿಸುತ್ತಲೇ ಇರುತ್ತದೆ.

ಬಶೀರರ ‘ನನ್ನ ಮಸೀದಿಯ ಧ್ವಂಸಗೈದವರಿಗೆ ಕೃತಜ್ಞ…ಸೂಫಿಯ ಕಣ್ಣಲ್ಲಿ ಹನಿಗಳು’ ಎಂಬುದು ಸಂಕಲನ. ಮಂಗಳೂರಿನ ; ಇರುವೆ’ ಪ್ರಕಾಶನ 2015 ರಲ್ಲಿ ಈ ಸಂಕಲನವನ್ನು ಪ್ರಕಟಿಸಿದೆ. ಈ ಕೃತಿ ನನಗೆ ಆಕರ್ಷಕವೆನ್ನಿಸಿದ್ದು; ಇದನ್ನು ಒಬ್ಬ ಮೌಲ್ವಿಗೆ ಅರ್ಪಿಸಲಾಗಿದೆ. ಅರ್ಪಣೆ ಈ ರೀತಿ ಇದೆ;’ನನ್ನನ್ನು ಸಹಿಸಿಕೊಳ್ಳಲಾಗದ ಮೌಲ್ವಿ ಒಂದು ದಿನ ಬೆತ್ತ ಹಿಡಿದು ಬಲವಂತವಾಗಿ ಮದ್ರಸದಿಂದ ಹೊರದಬ್ಬಿದರು! ನನ್ನ ಆದ್ಯಾತ್ಮದ ಕಲಿಕೆ ಅಲ್ಲಿಂದಲೇ ಆರಂಭವಾಯಿತು’. ಆ ಮೌಲ್ವಿಗೆ ಕೃತಜ್ಞತೆಯಿಂದಾಗಿ ಅರ್ಪಣೆ ಎನ್ನಲಾಗಿದೆ. ಮಸೀದಿಯೆಂಬ ಕಟ್ಟಡದಿಂದ ಬಯಲಿಗೆ ಬಂದ ಈ ಸೂಫಿ ಕವಿ ‘ಸ್ಥಾವರ ರೂಪದ’ ಧಾರ್ಮಿಕ ಆಚರಣೆಗಳ ವಿರುದ್ಧ ದಂಗೆ ಆರಂಭಿಸುತ್ತಾನೆ. ಬಯಲಲ್ಲಿ, ಶೂನ್ಯದಲ್ಲಿ ಬಡವನಲ್ಲಿ, ಹಸಿದವನ ಕಣ್ಣುಗಳಲ್ಲಿ ದೇವರನ್ನು ಹುಡುಕಲಾರಂಭಿಸುತ್ತಾನೆ. ಸೂಫಿ ಕವಿಗೆ ಉಳ್ಳವರು ಮಸೀದಿ,ಮಂದಿರಗಳ ಹೆಸರಲ್ಲಿ ಮೋಸ ಮಾಡುತ್ತಿದ್ದಾತ್ತಿದ್ದಾರೆಂದು ಅನ್ನಿಸಲಾರಂಭಿಸುತ್ತದೆ. ವ್ಯಂಗ್ಯ ಮತ್ತು ವ್ಯಥೆಗಳಲ್ಲಿ ಪದ್ಯಗಳು ಮೈದಳೆಯುತ್ತಾ ಹೋಗುತ್ತವೆ. ಎಲ್ಲಿಯೂ ಕೃತಕವೆನ್ನಿಸುವುದಿಲ್ಲ. ಕರುಳು ಸುಟ್ಟುಕೊಂಡಂತೆ ದೇವನೆಂಬ ಪ್ರೇಮಿಯನ್ನು ಹಂಬಲಿಸಿ ಹಾಡುವ, ಕಲ್ಪನೆಯ ಬೊಗಸೆಗೆ ಅವನನ್ನು ತುಂಬಿಸಿಕೊಳ್ಳುವ ಪ್ರಯತ್ನವನ್ನು ರೂಮಿ ಆದಿಯಾಗಿ ಅನೇಕ ಸೂಫಿಗಳು ಮಾಡುತ್ತಾರೆ.
ಬಶೀರರು ಬರೆಯುತ್ತಾರೆ.
‘ಧರ್ಮ ಪಂಡಿತರು
ಕಟ್ಟಿಕೊಟ್ಟ ಬುತ್ತಿಯನ್ನು
ಹೇಳಿಕೊಟ್ಟ ಮಾತನ್ನು
ಹೊತ್ತುಕೊಂಡು…ಹೊರಟೆ.
… …
ಅರ್ಧ ದಾರಿಯಲ್ಲೇ ಮುಗಿದು ಹೋಗಿವೆ
ನಿನ್ನ ತಲುಪಲು ದಿಕ್ಕು ತಿಳಿಯದೆ
ತೊಳಲಾಡುತ್ತಿದ್ದೇನೆ..’

ಪದ್ಯ ಮೇಲು ನೋಟಕ್ಕೆ ಹೊಸದೇನನ್ನು ಹೇಳುತ್ತಿಲ್ಲವೆಂದು ಅನ್ನಿಸುತ್ತದೆ. ಆದರೆ ಪುರೋಹಿತಶಾಹಿಯೆಂಬ ಧಾರ್ಮಿಕ ಮಧ್ಯವರ್ತಿಯ ಮೂಲಕವೇ ದೇವನ್ನು ತಲುಪಬೇಕಾದ ವ್ಯವಸ್ಥೆಯ ಕುರಿತು ವ್ಯಂಗ್ಯ ಮಾಡುವ ಪದ್ಯವಿದು. ಇದನ್ನೇ ಬಸವಣ್ಣ ‘ಅಂಧಕನ ಕೈಯ ಅಂಧಕ ಹಿಡಿದಡೆ’ಎನ್ನುತ್ತಾನೆ. ಟಾಲ್ ಸ್ಟಾಯ್ ಇನ್ನೊಂದು ಹೆಜ್ಜೆ ಮುಂದೆ ಹೋಗಿ ದ್ವೀಪವೊಂದರಲ್ಲಿನ ಮೂವರು ಸಂತರನ್ನು ಅನಾಗರಿಕರೆಂದು ಭಾವಿಸಿ ಬೈಬಲ್ಲಿನ ಮಂತ್ರಗಳನ್ನು ಹೇಳಿಕೊಟ್ಟ ಪಾದ್ರಿಯನ್ನು ಹಂಗಿಸುವಂತೆ ಆ ವೃದ್ಧರು ಮಂತ್ರಗಳನ್ನು ಮರೆತು ಹಡಗಿನ ಹಿಂದೆ ನೀರ ಮೇಲೆ,ನೆಲದ ಮೇಲೆ ನಡೆಯುವಂತೆ ನಡೆಯುತ್ತಾ ಓಡಿ ಬರುತ್ತಾರೆ.ಕೊನೆಗೆ ಪಾದ್ರಿ ಅವರನ್ನು ನೋಡಿ ತಲೆಬಾಗಿಸಿ ಶರಣಾಗುತ್ತಾನೆ. ಶಾಸ್ತ್ರಾಗಮಗಳ ಮೂಲಕ, ಆಚರಣೆಗಳ ಮೂಲಕ ದೇವರನ್ನು ತಲುಪುವುದರ ವಿರುದ್ಧವೇ ಎಲ್ಲ ಸಂತರು, ಅವಧೂತರು,ಸೂಫಿಗಳು ಬಂಡೆದ್ದಿದ್ದಾರೆ. ಪುರೋಹಿತಶಾಹಿಗೆ ‘ಭಕ್ತಿಯೆಂಬುದು ತೋರುಂಬ ಲಾಭ’ವೆಂದು ವಚನಕಾರರು ನೇರ ದಾಳಿ ಮಾಡುತ್ತಾರೆ. ಬುದ್ಧ, ವಚನಕಾರರು ಆಕಾರಗಳನ್ನು ಒಡೆದು ಹಾಕಿ ಶೂನ್ಯವನ್ನು, ನಿರ್ವಿಕಾರಗಳನ್ನು ಕುರಿತು ಧ್ಯಾನಿಸುತ್ತಾರೆ. ದಕ್ಕಿದ ವಿವೇಚನೆಯನ್ನು ಜನರ ಕೈಗೆ ನೀಡುತ್ತಾರೆ. ಮನುಷ್ಯನಿಗೆ ಮಿತಿಗಳಿವೆ. ಕಲ್ಪನೆಗಳನ್ನು ಮೂರ್ತ ರೂಪಕ್ಕಿಳಿಸಬೇಕೆಂಬ ಹಂಬಲ ಮತ್ತು ಹಠ ಅದು. ವೈದಿಕ ಶಾಹಿಯ ಮುಖ್ಯ ಶಕ್ತಿಯಿರುವುದೇ ಸಂಕೇತಗಳಲ್ಲಿ. ಜನರಿಗೆ ಪಟಗಳು ದೈವದಾರಿಯ ನಕಾಶೆಗಳಂತೆ ಕಾಣುತ್ತವೆ. ಅದಕ್ಕಾಗಿ ಭೀಕರ ಕಷ್ಟಕ್ಕೆ ಸಿಲುಕಿದ ಹಳ್ಳಿಗಳು ನರಕ ಸದೃಶವಾಗುತ್ತಿದ್ದರೆ,ಊರುಗಳ ದೇವಾಲಯ, ಮಸೀದಿ,ಚರ್ಚುಗಳು ಅರಮನೆಗಳಂತಾಗುತ್ತವೆ. ಬಿದ್ದ ರೈತನ ಹೆಣದ ನಡುವೆ ಘಂಟಾನಾದ, ಆಝಾನ್ ಗಳೆಲ್ಲ ಕ್ರೂರ ವ್ಯಂಗ್ಯದಂತೆ ಕೇಳಿಸುತ್ತವೆ.ಅದಕ್ಕೆ ಕುವೆಂಪು’ಗುಡಿ-ಚರ್ಚು,ಮಸಜೀದಿಗಳ ಬಿಟ್ಟು ಹೊರಬನ್ನಿ’ಎನ್ನುತ್ತಾರೆ. ಭಾರತಾಂಬೆಯೇ ದೇವಿ ಎನ್ನುತ್ತಾರೆ. ಕೊನೆಗೆ ಆಕೆಯೂ ಪಟರೂಪಿಯಾಗುತ್ತಾಳೆ. ಇದು ದುರಂತ.
ಬಶೀರ್ ಬರೆಯುತ್ತಾರೆ.
‘ಮಸೀದಿಯ ಅಮೃತಶಿಲೆಯ
ನೆಲದ ಹಾಸು ಕನ್ನಡಿಯಂತೆ
ಹೊಳೆಯುತಿತ್ತು..
ನನ್ನ ದೊರೆಯೇ,
ನಿನಗೆಂದು ಬಾಗಿದವರು
ಆ ಕನ್ನಡಿಯಲ್ಲಿ ತಮ್ಮ ಮುಖವನ್ನೇ ನೋಡಿ ಸುಖಿಸುತ್ತಿದ್ದಾರೆ’.[30]

‘ಮಸೀದಿಯನ್ನು
ಅಮೃತಶಿಲೆಯಲ್ಲಿ
ಬಗೆ ಬಗೆಯಾಗಿ ಅಲಂಕರಿಸಲಾಗಿದೆ
ಇವರು ನನ್ನ ದೊರೆಯ ಮರೆತು
ಮಸೀದಿಯನ್ನೇ ಆರಾಧಿಸತೊಡಗಿದ್ದಾರೆ!’[55]

‘ಅರಮನೆಯಂತಹ ಮಸೀದಿ!
ಅಮೃತಶಿಲೆಯಲ್ಲಿ
ದಾನಿಗಳ ಹೆಸರು ಕೆತ್ತಿದ್ದಾರೆ,
ರಾತ್ರಿ ನನಗೆ ನರಕದ ಕನಸು ಬಿತ್ತು
ನನ್ನ ದೊರೆಯೇ
ನರಕದ ಬಾಗಿಲಲ್ಲಿ ಆ ದಾನಿಗಳ ಹೆಸರೂ ಕೆತ್ತಲ್ಪಟ್ಟಿತ್ತು’.[53]

‘ಅರಮನೆಯಂತಹ ಹಂಗು
ಬೇಡವೆಂದು
ಮಸೀದಿಯೆಡೆಗೆ ನಡೆದೆ.
ಆದರೆ ಮಸೀದಿಯ ಪುರೋಹಿತನೋ
ಅರಮನೆಗೆ ಮುಖ ಮಾಡಿ
ಪ್ರಾರ್ಥನೆ ಸಲ್ಲಿಸುತ್ತಿದ್ದ!’[52] ಈ ನಾಲ್ಕೂ ಪದ್ಯಗಳು ಬಹುಪಾಲು ಒಂದೇ ವಿಚಾರವನ್ನು ಧ್ಯಾನಿಸುತ್ತಿವೆ. ಅರಮನೆ ಮತ್ತು ಗುರುಮನೆಗಳು ದೇಶ,ಕಾಲ,ಧರ್ಮಗಳನ್ನು ಮೀರಿ ಸಮಾಜವನ್ನು ಹಿಂದು ಹಿಂದಕ್ಕೆ ಎಳೆದು ಕಟ್ಟಿಹಾಕಲು ನಿರಂತರ ಪ್ರಯತ್ನಿಸುತ್ತಲೇ ಇರುತ್ತವೆ. ಪಟ್ಟಭದ್ರಪಡಿಸಿಕೊಳ್ಳಲು ಒಟ್ಟುಗೂಡುವ ಇವು ಯಾವುದೇ ಕಾಲದ ಅತ್ಯಂತ ದುಷ್ಟ ಮತ್ತು ಅಪಾಯಕಾರಿ ಶಕ್ತಿಗಳು. ನಾಡಿನ ಭೌತಿಕ ಅಭಿವೃದ್ಧಿಯ ವಿಷಯದಲ್ಲಿ ಮುಂದಕ್ಕೂ ಧರ್ಮ,ಸಂಸ್ಕøತಿಗಳ ವಿಚಾರದಲ್ಲಿ ಮಧ್ಯಕಾಲೀನ ಕಟ್ಟಳೆಗಳಿಗೂ ಏಕಕಾಲದಲ್ಲಿ ಸೇತುವೆ ಕಟ್ಟ ಬಯಸುವ ಧಾವಂತ ಇವರಿಗೆ.ಎರಡು ತಲೆ,ಹಲವು ನಾಲಿಗೆಗಳ ಈ ಜೋಡಿಯನ್ನು ಪ್ರತಿಗಾಮಿಗಳೆಂದೋ, ಪುರೋಗಾಮಿಗಳೆಂದೋ ಒಂದು ಇಕ್ಕಳದಲ್ಲಿ ಸಿಲುಕಿಸದಂತೆ ಎಚ್ಚರವಹಿಸುತ್ತವೆ. ಹಾಗಾಗಿಯೇ ಮಸೀದಿಯ ಧ್ವಂಸವೂ,ಅಣುಬಾಂಬು ಪ್ರಯೋಗವೂ ವೈರುಧ್ಯಗಳಿಲ್ಲದ ಕ್ರಿಯೆಗಳಾಗುತ್ತವೆ.ಗುರು ಮತ್ತು ಅರಸುಗಳ ಸೇತುವೆ ದಿನೇ ದಿನೇ ಬಲಿಷ್ಟವಾಗುತ್ತಿರುವ ಈ ಸಂದರ್ಭದಲ್ಲಿ ಕವಿ ಪ್ರಾಮಾಣಿಕವಾಗಿ ಪ್ರತಿಭಟಿಸದೆ ದಾರಿಯಿಲ್ಲ.ಅದಕ್ಕೂ ಮೊದಲು ತನ್ನ ಮನೆಯ ಯಜಮಾನನ ವಿರುದ್ಧವೂ ಪ್ರತಿಭಟಿಸಬೇಕಾದ ದುರಂತ ಬಂದೊದಗಿರುವುದು ಬರೀ ವಿಪರ್ಯಾಸವಷ್ಟೇ ಅಲ್ಲ.

ಕಾವ್ಯವನ್ನು ಸಾಂಪ್ರದಾಯಕವಾಗಿ ಓದುವ ಪಂಡಿತರು ಮೇಲಿನ ಪದ್ಯಗಳನ್ನು ಸ್ಲೋಗನ್ನುಗಳೆಂದು ,ರೆಟರಿಕ್ಕುಗಳೆಂದು ಹೇಳುತ್ತಾರೆ. ಆದರೆ ಮೊದಲೇ ಹೇಳಿದ ಹಾಗೆ ಇವು ಕಾಲದ ಅತಿರೇಕಗಳ ವಿರುದ್ಧ ನಡೆಸಿದ ಪ್ರತಿಭಟನೆ ಎನ್ನಿಸುತ್ತವೆ. ಹೆಚ್ಚು ಹಣ ಕೊಟ್ಟವನು[ಅವನು,ತಲೆಹಿಡುಕ,ಕಳ್ಳ,ಕೊಲೆಗಾರ, ಭೂಮಾಫಿಯಾ, ಗಣಿಮಾಫಿಯಾದವನಾಗಿದ್ದರೂ] ಸಮುದಾಯದ ಮುಖ್ಯ ವ್ಯಕ್ತಿಯೆನ್ನಿಸಿಕೊಳ್ಳುತ್ತಾನೆ. ಆ ಧಾರ್ಮಿಕ ಕಟ್ಟಡಕ್ಕೆ ಮುಖ್ಯಸ್ಥನಾಗುತ್ತಾನೆ. ಧರ್ಮ ಪಂಡಿತ ಕಾಬಾದೆಡೆಗೆ ತಿರುಗಿ ಪ್ರಾರ್ಥಿಸುತ್ತಿದ್ದರೂ ಬಂಡುಕೋರನಾದ ಕವಿಗೆ ಅರಮನೆಯೆಡೆಗೆ ಆತ ತಿರುಗಿರುವುದು ಕಾಣಿಸುತ್ತದೆ.ರಾಜನ ಆಸ್ಥಾನದಲ್ಲಿ ಕೂತು ಹಾಡಿದ ಕವಿಗಳು, ಸೂಫಿಗಳು ಆಳುವವರಿಗೆ ಏನನ್ನು ಬೋಧಿಸಿರಬಹುದು? ಎಂಬ ಪ್ರಶ್ನೆ ಹುಟ್ಟುತ್ತದೆ.’ ಕಾಯಾ ನಹೀ ತೇರಿ’ ಎಂದ ಕಬೀರ ಅರಮನೆಯೆಡೆಗೆ ತಿರುಗಲಿಲ್ಲ.’ಲೋಕದ ಕಾಳಜಿ ಮಾಡತೀನಂತಿ. .ನಿಂಗ್ಯಾರ್ ಬ್ಯಾಡಂತಾರ ಮಾಡಪ್ಪ ಚಿಂತಿ’ ಎಂದು ಹಂಗಿಸಿದ ಶರೀಫನೂ ಅರಮನೆಯೆಡೆಗೆ ಹೋಗಲಿಲ್ಲ. ಮೊದಲಿನಿಂದಲೂ ಪುರೋಹಿತಶಾಹಿ ಮತ್ತು ಆಳುವವರ ಜುಗಲ್ಬಂದಿಗಳಲ್ಲಿ ಸಮುದಾಯಗಳು ಸಿಲುಕಿ ನಲುಗಿ ಹೋಗಿವೆ ಎಂಬುದು ಅರಿವಿಗೆ ಬರಲಾರಂಭಿಸುತ್ತಿದ್ದಂತೆ ಬಶೀರರ ಪದ್ಯಗಳು ಸ್ಲೋಗನ್ನುಗಳಲ್ಲ ಎನ್ನಿಸುತ್ತವೆ.ಆದ್ದರಿಂದಲೇ ಬಸವಣ್ಣ ಕುವೆಂಪು ಮುಂತಾದವರ ಪದ್ಯಗಳು ಹೆಚ್ಚೆಚ್ಚು ಪ್ರಸ್ತುತವಾಗುತ್ತಲೇ ಇವೆ.’ ನರಕದ ಬಾಗಿಲಲ್ಲಿ[ ಮಸೀದಿಯ ಫಲಕದಲ್ಲಿನ] ದಾನಿಗಳ ಹೆಸರು ಕೆತ್ತಲ್ಪಟ್ಟಿತ್ತು ಎಂಬ ಪದಗಳು ಧನಾಡ್ಯರ ಕುರಿತು ಕವಿಯೊಬ್ಬ ಮಾಡುತ್ತಿರುವ ಆತ್ಯಂತಿಕ ವಿಮರ್ಶೆ ಎನ್ನಿಸುತ್ತದೆ. ಜೊತೆಗೆ ಕವಿಗೂ ನರಕದ ಕನಸು ಬೀಳುತ್ತದೆ ಎಂಬುದೂ ಸುಳ್ಳಲ್ಲ. ಬಶೀರ್ ಬದುಕುತ್ತಿರುವ ಸಮಾಜವೂ ಸೇರಿದಂತೆ ಎಲ್ಲ ಸಮಾಜಗಳೂ ಉಸಿರುಕಟ್ಟಿದ ಸ್ಥಿತಿಯಲ್ಲಿ ಒದ್ದಾಡುತ್ತಿವೆ. ಆದರೆ ಜಾತಿ ಸಮಾಜಗಳಲ್ಲಿ ಬದುಕುತ್ತಿರುವ ದಲಿತ ಮತ್ತು ದಮನಿತರಿಗೆ ಹತ್ತಿರದ ದಮನಕಾರರೆಂದರೆ ಪ್ರಬಲ ಜಾತಿಗಳೇ. ಪುರೋಹಿತಶಾಹಿಯೆಂಬುದು ಅಮೂರ್ತವಾದ ವಿಚಾರ. ಬಶೀರರಿಗೆ ಹಾಗಲ್ಲ .ಇಡೀ ಸಮಾಜವೇ ಧರ್ಮಪಂಡಿತರ ನಿರ್ದೇಶನದಂತೆ ನಡೆಯುತ್ತಿರುವಂತೆ ಕಾಣುತ್ತಿದೆ. ಅದರ ಫಲವಾಗಿಯೇ ಐಸಿಸ್ ಮುಂತಾದ ಸಂಘಟನೆಗಳು ಕ್ರಿಯಾಶೀಲವಾಗುವುದು, ಮಹಿಳೆಯರು ವಿವಿಧ ರೂಪಗಳಲ್ಲಿ ಬಂಧಿಯಾಗುವುದು ಇವೆಲ್ಲ ಅದರ ಪರಿಣಾಮಗಳೇ. ಧನಾಡ್ಯ ಶಕ್ತಿಗಳು ಮತ್ತು ಧರ್ಮಪಂಡಿತರು ಒಟ್ಟುಗೂಡಿ ಜನಸಾಮಾನ್ಯರ ಮೇಲೆ ನಡೆಸುತ್ತಿರುವ ದಾಳಿಯ ಬಲಿಪಶುಗಳ ಸಂಖ್ಯೆ ದೊಡ್ಡದು. ಆರ್ಥಿಕ ಅಸಮಾನತೆ ಮತ್ತು ಧಾರ್ಮಿಕ ಶೋಷಣೆ 21 ನೇ ಶತಮಾನದಲ್ಲಿ ಎಲ್ಲ ಸಮಾಜಗಳೂ ಎದುರಿಸುತ್ತಿರುವ ಸಮಸ್ಯೆ. ಹಾಗಾಗಿ ಬಶೀರರ ಸರಳವೆನ್ನಿಸುವ ಪ್ರಶ್ನೆಗಳು ವಿಶ್ವಸ್ಥವಾಗುತ್ತಾ ಹೋಗುತ್ತವೆ.

ಬಶೀರರ ಪದ್ಯಗಳಲ್ಲಿ ಪದೇ ಪದೇ ಬರುವ ದೊರೆ ಕೂಡಲ ಸಂಗಮ,ಗುಹೇಶ್ವರ, ಚನ್ನಮಲ್ಲಿಕಾರ್ಜುನನಂತವನು. ರೂಮಿ ಮತ್ತು ತಬ್ರೀಜ್ ರ ಪ್ರೇಮದಹಂಬಲದ ಸಾಂಗತ್ಯದಂತೆಯೇ.ಇಲ್ಲಿನ ‘ದೊರೆ’ಆಳುವವನು ಮಾತ್ರವೇ? ಆತನಿಗೆ ಪ್ರಾರ್ಥನೆ ಮತ್ತು ನಿವೇದನೆ ಮಾತ್ರ ಸಾಧ್ಯ. ವಚನಕಾರರು ‘ಒಡಲುಗೊಂಡು ನೋಡು’ ಎಂದು ಸವಾಲು ಹಾಕುತ್ತಾರೆ. ಅದು ಜನಪದರ ಸವಾಲು. ಹಾಗಾಗಿ ವಚನಗಳು ಜನಪದರ ಅಭಿವ್ಯಕ್ತಿಯೂ ಆಗಿಬಿಡುತ್ತವೆ. ಹಳ್ಳಿಯ ಹೆಂಗಸರು, ದೇವರಿಗೆ ‘ನಿನ್ ಮಕಕ್ಕೆ ಮುಳ್ಳಾಕ’ ‘ನಿನ್ ಕಣ್ಣಿಂಗಿ ಹೋಗಾ’ಎಂದು ಬೈಗುಳ ಮಾಡುತ್ತಾರೆ.ಅಷ್ಟರ ಮಟ್ಟಿಗೆ ಅವರು ವಾಸ್ತವವಾದಿಗಳು ಮತ್ತು ಭೌತವಾದಿಗಳು.ಈ ರೀತಿಯ ವರ್ತನೆಗಳನ್ನು ಪಶ್ಚಿಮದ ಏಕದೇವತಾರಾಧನೆಯ ಏಕೀಕೃತ ಬುಡಕಟ್ಟುಗಳು ‘ಪೇಗನ್ ರಿಲಿಜನ್’ಎಂದು ಹಂಗಿಸುತ್ತವೆ.ಬಶೀರ್ ಹೀಗೆ ತನ್ನ ದೊರೆಯನ್ನು ಪ್ರಶ್ನಿಸಲಾಗದ, ಅವನೊಂದಿಗೆ ಸಂವಾದ ಮಾಡಲಾಗದ ಸಂಕಟದಲ್ಲಿ ಬರೆಯುತ್ತಾರೆ. ಮಧ್ಯವರ್ತಿಯೆಂಬ ಪುರೋಹಿತನನ್ನು ನಿರಾಕರಿಸದೆ, ತಾವು ನಂಬಿದ ದೇವರಿಗೂ[ಹಾಗೆ ಕರೆಯಬಹುದೇ ಎಂಬ ಅನುಮಾನದೊಂದಿಗೆ]ಸವಾಲು ಹಾಕುವ ದಿಟ್ಟತನ ವಚನಕಾರರದು.ಇದಕ್ಕೆ ಆಂತರಿಕ ಮುಕ್ತ ಅಭಿವ್ಯಕ್ತಿಯುಳ್ಳ ಗಟ್ಟಿ ಸಂಘಟನೆಯ ಅಗತ್ಯವೂ ಇರುತ್ತದೆ.ವಚನಕಾರರು ಇದನ್ನು ಸಾಧಿಸಿದ್ದರು ಎನ್ನಿಸುತ್ತದೆ. ಮಾತಿಗೆ ಬಹುದೊಡ್ಡ ‘ಸ್ಪೇಸ್’ಕಲ್ಪಿಸಿಕೊಂಡಿದ್ದರು.
ಬಶೀರ್ ಬದುಕುತ್ತಿರುವ ಸಮಾಜವೂ ಸೇರಿದಂತೆ ಭಾರತದ ಬಹುತೇಕ ಸಮಾಜಗಳು ಆಂತರಿಕ ಪ್ರಜಾಪ್ರಭುತ್ವವನ್ನು ಕಳೆದುಕೊಂಡ ಸ್ಥಿತಿಗೆ ತಲುಪಿವೆ. ಇದನ್ನು ಅನಂತಮೂರ್ತಿಯವರು ‘ಮಾತು ಸೋತ ಭಾರತ’ ಎಂದು ಕರೆದರು. ಬಶೀರ್ ಬದುಕುತ್ತಿರುವ ಸಮಾಜ ಈಗ ಇನ್ನಷ್ಟು ಅಪ್ರಜಾಪ್ರಭುತ್ವದ ಗುಣಗಳನ್ನು ಬೆಳೆಸಿಕೊಳ್ಳಲಾರಂಭಿಸಿದೆ.
‘ನನ್ನ ಗುರುವಿನ ಗೋರಿಯ ಮೇಲೆ
ಹೊದಿಸಿದ ಚಾದರಗಳನ್ನು ನೋಡುತ್ತಿರುವಾಗ
ಆತ ಸತ್ತಿರೋದು ದಿಟ ಎನ್ನಿಸುತ್ತದೆ
ಈ ಶಿಷ್ಯ ಹೀಗೆ
ದರ್ಗಾದ ಹೊರಗೆ
ಚಳಿಯಲ್ಲಿ ನಡುಗುತ್ತಿರುವಾಗ
ಆತ ಅಷ್ಟೂ ಚಾದರಗಳನ್ನು
ಒಬ್ಬನೇ ಹೊದ್ದು ಮಲಗುತ್ತಿರಲಿಲ’್ಲ.[106]
ಎಂದ ಕೂಡಲೇ ಅದು ಈ ನೆಲದ ತತ್ವವಾಗಿ ಬಿಡುತ್ತದೆ. ಇದು ‘ಗಾಡ್ ಈಸ್ ಡೆಡ್’ಎಂದ ನೀಷೆಯ ದೇವರಲ್ಲ. ಈತ ಕೈಹಿಡಿದು ನಡೆಸುವ ಗುರುವಾಗುತ್ತಾನೆ. ಈ ಗುರುವಿಗೆ ಸಾವು ನಿಶ್ಚಿತ. ಅರ್ಥದ ಒಳಪದರಗಳು ಸುಲಿಯುತ್ತಾ ಹೋದಂತೆ ಅದು ನೀಷೆಯ ‘ಗಾಡ್’ ಇರಬಹುದೇ ಎಂಬ ಸಂದೇಹ ಹುಟ್ಟುತ್ತದೆ.ಭಯ ಆವರಿಸುತ್ತದೆ.
ಕಟ್ಟಡಗಳು ಎಷ್ಟು ಕಲುಷಿತವಾಗಿವೆಯೆಂದು ಕವಿ ಬರೆಯುತ್ತಾನೆ.
‘ಹೊರಟಾಗ ಈ ಗಾಳಿ
ಎಷ್ಟು ಶುದ್ಧವಾಗಿತ್ತು
ಮಸೀದಿ, ಮಂದಿರ, ಚರ್ಚುಗಳನ್ನು
ಹಾದು ಬಂದಿರಬೇಕು
ಉಸಿರಾಟ ಕಷ್ಟವಾಗುತ್ತಿದೆ’.[83]
ಎಂದ ಕೂಡಲೆ ರಾಜಕೀಯಗೊಂಡ ಧರ್ಮದ ಕೊಳೆತ ವಾಸನೆ ಶುರುವಾಗುತ್ತದೆ.ಕವಿ ಮತ್ತೆ ಮತ್ತೆ ಪ್ರಕೃತಿಯೊಂದಿಗೆ ಬೆರೆತು ನಿಜಗುರುವನ್ನು ಹುಡುಕುತ್ತಾನೆ.ಸಾಂಸ್ಥೀಕೃತಗೊಂಡ ಕಟ್ಟಡಗಳ ನಿರ್ಜೀವಿತನವನ್ನು ರಾಜಕೀಯವನ್ನು ವಿಷಾದಭರಿತ ಭಾಷೆಯಲ್ಲಿ ವಿವರಿಸುತ್ತಾನೆ.ಬಡವನ ಹಸಿವನ್ನು,ಕಣ್ಣೀರನ್ನು,ಕೊನೆಗೆ ನಾಯಿಯೊಂದರ ಹಸಿವನ್ನು ನೀಗಿಸದ ಮನುಷ್ಯನ ಸಂಪತ್ತನ್ನು ವ್ಯಂಗ್ಯ ಮಾಡುತ್ತಾನೆ.ಆಹಾರವು ಧರ್ಮದ ಮುದ್ರೆಯೊತ್ತಿಸಿಕೊಂಡು ಸಮಾಜದ ಬಿರುಕಿಗೆ,ರಕ್ತಪಾತಕ್ಕೆ ಕಾರಣವಾಗುವುದಾದರೆ ಅದನ್ನು ಸಹಿಸುವುದು ಹೇಗೆ?
‘ಹಂದಿಯಿರಲಿ, ಗೋಮಾಂಸವಿರಲಿ
ಎಸೆಯುವುದೇನೋ ಎಸೆದು ಬಿಟ್ಟಿರಿ
ಮಸೀದಿ, ದೇವಸ್ಥಾನದ ಮುಂದೆ ಯಾಕೆ ಎಸೆದಿರಿ?
ಹಸಿದವನ ಮನೆಯ ಅಂಗಳಕ್ಕೆ ಎಸೆಯಬಹುದಿತ್ತು
ಬಡವನ ‘ಮನೆ’ ಉರಿಯುವ ಬದಲು
‘ಒಲೆ’ಉರಿಸಿದ ಪುಣ್ಯ ನಿಮ್ಮದಾಗುತಿತು’್ತ.[123] ಎನ್ನುವಾಗ ಕವಿಯದು ಮುಗ್ಧತನವಲ್ಲ. ಅದು ರಾಜಕೀಯ, ಮಾನವೀಯ, ಧಾರ್ಮಿಕ ತಿಳುವಳಿಕೆಯ ಫಲ ಎಂದು ಅರಿವಿಗೆ ಬರುತ್ತದೆ.

ಕವಿತೆಗಳನ್ನು ಓದಿದ ಕೂಡಲೇ ಪರಿಸ್ಥಿತಿಯ ಸಣ್ಣ ತಿಳಿವಿದ್ದರೂ ಅವು ದಕ್ಕಲಾರಂಭಿಸುತ್ತವೆ. ಅವು ನಮ್ಮ ನಿಟ್ಟುಸಿರುಗಳೂ ಆಗುತ್ತವೆ. ಆ ಮೂಲಕ ಅವು ನಮ್ಮವೇ ಅನ್ನುವಷ್ಟು ಆಪ್ತವಾಗುತ್ತವೆ.ಕವಿತೆ ಓದುಗನ ಎದೆಯಲ್ಲಿ ಮೊಳಕೆ ಒಡೆಯುವ ಪರಿ ಇದು. ಕವಿತೆಗಳು ಮಂಗಳೂರಿನ ಕನ್ನಡದಲ್ಲಿ ಒಡಮೂಡಿರುವುದರಿಂದ ಅವಕ್ಕೆ ಜಾನಪದ ಸ್ಪರ್ಶದ ತುಸು ಕೊರತೆಯಿದೆ ಎನ್ನಿಸುತ್ತದೆ. ಅದರ ಹೊರತಾಗಿ ಪದ್ಯಗಳು ತಾಜಾತನದಿಂದಾಗಿ ನಮ್ಮೊಳಗೆ ಉಳಿಯುತ್ತವೆ.

ಬದುಕನ್ನು ಸಂಕೀರ್ಣಗೊಳಿಸಿಕೊಳ್ಳದೆ ಬದುಕುವುದು ಹೇಗೆ ಎಂದು ವಚನಕಾರರು ಬದುಕಿ ತೋರಿಸುತ್ತಾರೆ.’ ದೇಹವೇ ದೇಗುಲ’,’ಬಯಲು ಆಲಯ’ಮುಂತಾದ ಪರಿಕಲ್ಪನೆಗಳೆಲ್ಲ ಇವುಗಳಿಗೆ ಉದಾಹರಣೆಗಳು. ಕುಶಲಕರ್ಮಿ ಮತ್ತು ದುಡಿಯುವ ಜಾತಿಗಳ ಹಿನ್ನೆಲೆಯಿಂದ ಬಂದಿದ್ದ ವಚನಕಾರರು ಮಾತಿಗೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ.’ನುಡಿಯು ಸ್ಪಟಿಕದ ಶಲಾಕೆಯಂತಿರಬೇಕು’ಎನ್ನುವಾಗ ಗೊಂದಲಗಳಿಗೆ ಅವಕಾಶವೇ ಇಲ್ಲ. ಸಣ್ಣ ಸಣ್ಣ ಕುಸುರಿ ಕೆಲಸಗಳ ಮೂಲಕ ವಚನಗಳನ್ನು 8 ಶತಮಾನಗಳ ಕಾಲ ಜೀವಂತವಾಗಿಟ್ಟಿದ್ದಾರೆ. ಕುಸುರಿ ಕೆಲಸಕ್ಕೂ ,ಸ್ಪಷ್ಟತೆಗೂ, ಕುಶಲಕರ್ಮಿತನಕ್ಕೂ ಸಂಬಂಧವಿರುವಂತಿದೆ. ಬಶೀರ್ ಈ ಸಾಧ್ಯತೆಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎನ್ನಿಸುತ್ತದೆ. ಹಾಗಾಗಿ ಪದ್ಯಗಳಲ್ಲಿ ಸಂಕೀರ್ಣತೆ ಇಲ್ಲ. ವಾಚ್ಯವೆನ್ನಿಸುತ್ತವೆ, ಕ್ಲೀಷೆ ಅತಿಯಾಗಿದೆ ಎಂಬ ಮಾತುಗಳನ್ನು ಸಾಂಪ್ರದಾಯಿಕ ಕನ್ನಡ ವಿಮರ್ಶೆಯ ತತ್ವಗಳನ್ನು ಬಶೀರರ ಪದ್ಯಗಳಿಗೆ ಅನ್ವಯಮಾಡಿಬಿಡಬಹುದು. ಆದರೆ ವ್ಯಕ್ತಿತ್ವಕ್ಕಿಂತ ಅಲಂಕಾರಕ್ಕೆ ಒತ್ತುಕೊಡುವ ಈ ರೀತಿಯ ಪರಿಭಾಷೆಯ ವಿರುದ್ಧವೆ ಕುವೆಂಪು ನಿರಂತರ ಸಂಘರ್ಷ ನಡೆಸಿದ್ದರು. ರಾಜಕೀಯ, ಆರ್ಥಿಕ ಪ್ರಶ್ನೆಗಳನ್ನು ಕಾವ್ಯದ ಮೂಲಕ ಅಭಿವ್ಯಕ್ತಿ ಪಡಿಸುವುದನ್ನೆ ನಿರ್ಬಂಧಿಸಿದ ಕಾವ್ಯಮೀಮಾಂಸೆಯ ಪರಿಕಲ್ಪನೆಗಳನ್ನು ಪ್ರಶ್ನಿಸುವ ಕ್ರಮ ತೀವ್ರವಾಗುತ್ತಿರುವುದರಿಂದ ಬಶೀರರ ಪದ್ಯಗಳಿಗೆ ಕನ್ನಡ ಸಾಹಿತ್ಯದಲ್ಲಿ ಮುಖ್ಯಸ್ಥಾನವಿದೆ.

Leave a Reply

Your email address will not be published.