ಕರ್ನಾಟಕ ಭಿತ್ತಿಚಿತ್ರಕಲೆಯ ಪಾರಂಪರಿಕ ನೆಲೆಗಳು-2: ಆನೆಗೊಂದಿ

-ಡಾ: ಎಸ್. ವೆಂಕಟೇಶ್

Anegundi palace. ಆನೆಗೊಂದಿಯು ಪ್ರಸಿದ್ಧ ಐತಿಹಾಸಿಕ ಸ್ಥಳ ಹಂಪೆಯ ಎದುರಿಗಿರುವ ತುಂಗಭದ್ರಾ ನದಿಯ ಎಡದಂಡೆಯ ಮೇಲಿರುವ ಒಂದು ಚಿಕ್ಕ ಗ್ರಾಮ. ಇಲ್ಲಿಗೆ ತೆಪ್ಪದಲ್ಲಿ ಹೋಗಬಹುದಾದರೂ ಅದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿಗೆ ಸೇರಿದೆ. ಹಂಪೆಯಂತೆ ಇದೂ ಐತಿಹಾಸಿಕ ಮಹತ್ವ ಪಡೆದಿರುವ ಸ್ಥಳ. ಊರೊಳಗೆ ಪ್ರಾಚೀನ ಕೋಟೆಕೊತ್ತಲಗಳು, ಪಂಪಾಸರೋವರ, ವಾಲಿಭಂಡಾರ, ಶೇಷಶಾಯಿ ದೇಗುಲ, ಮಾಧ್ವಗುರುಗಳ ನವಬೃಂದಾವನ, ಹಳೆಯ ಅರಮನೆ ಮುಂತಾದ ಪ್ರೇಕ್ಷಣೀಯ ವಾಸ್ತುಶಿಲ್ಪಗಳಿವೆ.

ನದಿಯ ಉತ್ತರ ದಡದ ಸಮೀಪದಲ್ಲೇ ಬಾಳೆ ತೋಟಗಳ ನಡುವೆ ಊಂಚಪ್ಪ ಮಠ (ಹುಚ್ಚಪ್ಪಯ್ಯನ ಮಠ) ಎಂದು ಕರೆಯಲಾಗಿರುವ ಹಳೆಯ ಕಟ್ಟಡವೊಂದಿದೆ. ಇದರ ದಕ್ಷಿಣ ಭಾಗದಲ್ಲಿ ಬೇರೆಲ್ಲಿಂದಲೋ ತಂದು ಜೋಡಿಸಿರುವ ಹೊಯ್ಸಳ ಶೈಲಿಯ ಸ್ತಂಭಗಳಿರುವ ಒಂದು ಹಾಳು ಮಂಟಪವಿದೆ. ಇದರ ಒಳಛತ್ತಿನಲ್ಲಿ ಸುಂದರವಾದ ಆದರೆ ಸ್ವಲ್ಪ ಒರಟಾದ ಚಿತ್ರಗಳ ಕೆಲವು ತುಣುಕುಗಳಿದ್ದು, ಅವು ವಿಜಯನಗರ ಅರಸೊತ್ತಿಗೆಯ ಕಾಲದಲ್ಲಿಯೇ ರಚಿತವಾದವುಗಳೆಂದು ಹೇಳಲಾಗಿದೆ.

Huchappayyana Math.ಆನೆಗೊಂದಿಯಲ್ಲಿ ಅನೇಕ ಕುತೂಹಲಕಾರಿ ಚಿತ್ರಣಗಳಿವೆ. ಒಂದು ಅಂಕಣದಲ್ಲಿ ಹೂಗೊಂಚಲು, ಅಳಿಲುಗಳಿರುವಂತೆ ಚಿತ್ರಿಸಿದೆ. ಅಲ್ಲೇ ಇಬ್ಬರು ಸ್ತ್ರೀಯರು ಮತ್ತು ಅಸ್ಪಷ್ಟವಾಗಿರುವ ಅನೇಕ ಚಿಕ್ಕ ಆಕೃತಿಗಳು ಲಯಬದ್ಧವಾಗಿ ನೃತ್ಯಮಾಡುತ್ತಿರುವಂತಿದೆ. ಇದನ್ನು ಇಬ್ಬರು ಪುರುಷರು ನಿಂತು ನೋಡುತ್ತಿರುವರು. ಇವರ ಮೇಲ್ಭಾಗದಲ್ಲಿ ದೊಡ್ಡದಾದ ಕಮಲಾಕೃತಿಯಿದೆ. ಇನ್ನೊಂದು ಅಂಕಣದಲ್ಲಿ ಇಬ್ಬರು ಮಹಿಳೆಯರು ರಾಣಿ (?)ಯನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಮೆರವಣಿಗೆ ಹೊರಟಿರುವ ದೃಶ್ಯವಿದೆ. ಪಲ್ಲಕ್ಕಿಯನ್ನು ಆ ಇಬ್ಬರೂ ಮಹಿಳೆಯರು ತಮ್ಮ ಭುಜದ ಮೇಲೆ ಹೊತ್ತಿದ್ದು, ಅವರ ಕೈಯಲ್ಲಿ ಮೇಣೆಗೆ ಆಧಾರ ನೀಡುವ ಕಡ್ಡಿಯನ್ನೂ ಕಾಣಬಹುದು. ಇವರಲ್ಲಿ ಮುಂದಿನವಳು ತನ್ನ ತಲೆಯನ್ನು ಹಿಂದೆ ತಿರುಗಿಸಿ ತನ್ನ ಸಹಪಾಠಿಯನ್ನು ನೋಡುತ್ತಿರುವಳು. ಈ ದೃಶ್ಯದ ಮೇಲ್ಗಡೆ ಮತ್ತೆ ಕಮಲದ ಮೊಗ್ಗು ಮತ್ತು ಹಾರಗಳನ್ನು ರಚಿಸಿರುವರು.

ಮತ್ತೊಂದು ಅಂಕಣದಲ್ಲಿ ಕಿರೀಟಧಾರಿಯಾದ, ಗಡ್ಡ ಬಿಟ್ಟಿರುವ ವ್ಯಕ್ತಿ ಒಂಟೆಯ ಮೇಲೆ ಕುಳಿತು ಸವಾರಿ ಹೊರಟಿರುವ ಚಿತ್ರಣವಿದೆ. ಅವನ ಮುಂದೆ ಆನೆಯೊಂದು ಚಲಿಸುತ್ತಿದೆ. ಇದರ ಜೊತೆಗೆ ನವನಾರೀ ಕುಂಜರ ಮತ್ತು ಪಂಚನಾರೀ ತುರಗ ದೃಶ್ಯಗಳನ್ನೂ ಸಹ ನೋಡಬಹುದು. ಇವುಗಳ ಮುಂದೆ ಛತ್ರಿಹಿಡಿದು ಜಿಗಿಯಲು ಸಿದ್ಧವಾದ ಧಾಟಿಯಲ್ಲಿರುವ ಮಹಿಳೆ, ಚಾಮರ ಹಿಡಿದು ಸೇವೆಸಲ್ಲಿಸುತ್ತಿರುವ ಮತ್ತು ವಸ್ತ್ರವೊಂದನ್ನು ಹಾರಾಡಿಸುತ್ತಿರುವ ಮಹಿಳೆಯರನ್ನು ಚಿತ್ರಿಸಿದೆ.

Mural 3ಆನೆಗೊಂದಿಯ ಚಿತ್ರಗಳಿಗೂ, ಹಂಪೆಯ ವಿರೂಪಾಕ್ಷ ದೇವಾಲಯದಲ್ಲಿನ ಚಿತ್ರಗಳಿಗೂ ಹೆಚ್ಚು ಸಾಮ್ಯವಿದೆ. ಕಾಂಚೀಪುರದ ವರದರಾಜಸ್ವಾಮಿ ದೇವಾಲಯದ ಮನ್ಮಥನ ಚಿತ್ರ, ತಾಟಕೀ ಸಂಹಾರದ ಚಿತ್ರಗಳನ್ನು ನೋಡಿ ಎನ್.ವೆಂಕಟರಮಣಯ್ಯನವರು ಲೇಪಾಕ್ಷಿಯ ಕಲೆಗಿಂತಲೂ ಕಾಂಚೀಪುರದ ಕಲೆಯು ಶ್ರೇಷ್ಠವರ್ಗದ ಕಲೆಯೆಂದು ಅಭಿಪ್ರಾಯ ಪಡುತ್ತಾರೆ. ಅಂತೆಯೇ ಅವರು “ಆನೆಗೊಂದಿಯ ಕಲೆಯು ಕಾಂಚೀಪುರದ ಕಲೆಯನ್ನು ಹೆಚ್ಚಾಗಿ ಹೋಲುತ್ತದೆ” ಎಂದಿರುವರು. ಇದೆಲ್ಲಾ ಈ ಹಿಂದೆ ಇದ್ದ ಚಿತ್ರಗಳನ್ನು ನೋಡಿದ್ದವರ ವಿವರಣೆಗಳು.

ಆದರೆ ದುರಾದೃಷ್ಟವಶಾತ್ ಈಗ ಆ ಯಾವ ಚಿತ್ರಗಳ ಕುರುಹೂ ಉಳಿದಿಲ್ಲ. ಸುಮಾರು ಅರ್ಧಶತಮಾನದ ಹಿಂದೆ ಕೂಡ ಮೇಲೆ ಹೇಳಿದ ಚಿತ್ರಗಳ ಕೆಲವೊಂದು ತುಣುಕುಗಳನ್ನು ನೋಡಬಹುದಿತ್ತು. ಸ್ಟೆಲ್ಲಾ ಕ್ರಾಮರಿಷ್‍ರವರು ಸುಮಾರು ನಾಲ್ಕು ದಶಕಗಳ ಹಿಂದೆ ಇಲ್ಲಿಗೆ ಭೇಟಿ ನೀಡಿದ್ದಾಗ ಅನೇಕ ದೃಶ್ಯಗಳಿದ್ದವು. ಅವುಗಳನ್ನು “A Servey of paintings in Deccan”  ಎಂಬ ತಮ್ಮ ಗ್ರಂಥದಲ್ಲಿ ವಿವರಿಸುತ್ತ, ಇವು 16ನೇ ಶತಮಾನದ ಆರಂಭದಲ್ಲಿ ರಚನೆಗೊಂಡಿರಬಹುದೆಂದು ಹೇಳಿದ್ದಾರೆ.

ಈಗ ಅಲ್ಲಿ ಬಣ್ಣ ಕಳೆದುಕೊಂಡು ಮಬ್ಬಾದ ನವನಾರೀ ಕುಂಜರದ ಸೊಂಡಲಿನ ಭಾಗದ ಇಬ್ಬರು ಮಹಿಳೆಯರು (ಇವರು ಕಾಲಿಗೆ ತೊಟ್ಟ ಪಾದರಕ್ಷೆಗಳು ಗಮನಾರ್ಹವಗಿವೆ), ಎದುರಿಗೆ ಚಾಮರ ಸೇವೆ ಸಲ್ಲಿಸುತ್ತಿರುವ ಮಹಿಳೆ, ಕಮಲದ ಹಾರಗಳು ಮತ್ತು ಪಂಚನಾರೀ ತುರಗದ ತಲೆಯ ಭಾಗದ ಒಬ್ಬ ಮಹಿಳೆ, ಅದನ್ನು ಕರೆದೊಯ್ಯುತ್ತಿರುವ ಸೇವಕನ ದೃಶ್ಯಗಳಷ್ಟೇ ಉಳಿದುಕೊಂಡಿದೆ. ಅಷ್ಟರಿಂದಲೇ ಅವು ರೇಖೆ ಮತ್ತು ಬಣ್ಣಗಾರಿಕೆಯಲ್ಲಿ ವಿಜಯನಗರ ಕಾಲದ ಮಾದರಿಯಲ್ಲಿರುವುದನ್ನು ಗುರುತಿಸಬಹುದಾಗಿದೆ. ವೀರ್ಯವತ್ತಾದ ರೇಖೆಯೇ ಇಲ್ಲಿನ ಕಲಾಕೃತಿಗಳ ಪ್ರಮುಖ ಲಕ್ಷಣ. ಜೊತೆಗೆ ಮಹಿಳೆಯರು ನಿಂತಧಾಟಿ ಮತ್ತು ಅವರ ಕಣ್ಣಿನ ರಚನೆ, ತೆಳ್ಳನೆಯ ನೀಳ ಕೈಬೆರಳುಗಳು, ಅವರ ಸಣ್ಣ ನಡು ಕೂಡ ಇದನ್ನು ಮತ್ತಷ್ಟು ಸ್ಪಷ್ಟಪಡಿಸುತ್ತವೆ. ಚಿತ್ರಗಳ ಮಧ್ಯೆಯಿರುವ ಅಂಚುಪಟ್ಟಿಯಲ್ಲಿ ಚಿತ್ರಗಳ ಹೆಸರುಗಳನ್ನು ಬರೆದಿದ್ದರೆಂದು ತೋರುತ್ತದೆ. ಈಗ ನವನಾರೀ ಕುಂಜರ ಮತ್ತು ಪಂಚನಾರೀ ತುರುಗದ ನಡುವೆಯಿರುವ ಅಂಚುಪಟ್ಟಿಯಲ್ಲಿ “ಪಂಚನಾರೀ ತುರಗ” ಎಂಬ ಕನ್ನಡ ಬರವಣಿಗೆಯಿದೆ. ಇದನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಬೇಕು. ಐತಿಹಾಸಿಕ ದೃಷ್ಟಿಯಿಂದ ಇದು ಗಮನಾರ್ಹ.

Mural 4ಆನೆಗೊಂದಿಯ ಅರಮನೆಯಲ್ಲೂ ಚಿತ್ರಕಲೆಯಿದ್ದ ಬಗ್ಗೆ ದಾಖಲೆಯಿದೆ. ಅದೇ ರೀತಿ ಅಲ್ಲಿನ ಗಗನ ಮಹಲ್‍ನಲ್ಲಿಯೂ ಚಿತ್ರಕಲೆ ಇದ್ದ ಬಗ್ಗೆ ಮಾಹಿತಿ ದೊರೆಯುತ್ತಾದರೂ ಇಂದು ಏನೇನೂ ಉಳಿದಿಲ್ಲ. ಪಿ.ಶಾಮರಾವ್‍ರವರು ತಮ್ಮ “ವಿಜಯನಗರದ ಕಲೆ ಮತ್ತು ಸಾಹಿತ್ಯ” ಎಂಬ ಕೃತಿಯಲ್ಲಿ “ಹಂಪೆಗೆ ಮೂರು ಮೈಲಿಗಳ ದೂರದಲ್ಲಿರುವ ಆನೆಗೊಂದಿಯ ಅರಮನೆಯಲ್ಲಿ ಮಾತ್ರ ಚಿತ್ರಕಲೆಯಿದೆ. ಅವು ವಂಗದೇಶದ ಮಡಕೆಗಳ ಮೇಲಿನ ಅಶಿಕ್ಷಿತವಾದ ಚಿತ್ರಗಳನ್ನು ಹೋಲುತ್ತವೆ” ಎಂದು ಬರೆದಿರುವರು.

ಆದರೆ ಅವರು ತಿಳಿಸುವ ಅರಮನೆಯಲ್ಲಿ ಈ ಹಿಂದೆ ಚಿತ್ರಗಳಿದ್ದ ಯಾವ ಕುರುಹೂ ಇಂದು ಉಳಿದಿಲ್ಲ. ಬಹುಶ: ಅವರ ಕೃತಿ ರಚನೆಯ ಕಾಲಕ್ಕೆ ಕೆಲವೊಂದು ತುಣುಕುಗಳಿದ್ದಿರಬೇಕು. ಆದರೆ ಶಾಮರಾವ್‍ರವರು ಅಲ್ಲೇ ಸಮೀಪದ ಊಂಚಪ್ಪ ಮಠದಲ್ಲಿನ ಚಿತ್ರಗಳ ಬಗ್ಗೆ ಪ್ರಸ್ತಾಪಿಸದಿರುವುದು ಆಶ್ಚರ್ಯಕರವಾಗಿದೆ. ಬಹುಶ: ಅವರು ಇಲ್ಲಿನ ಚಿತ್ರಗಳನ್ನು ಗಮನಿಸದೇ ಇರಬಹುದು.

 

One Response to "ಕರ್ನಾಟಕ ಭಿತ್ತಿಚಿತ್ರಕಲೆಯ ಪಾರಂಪರಿಕ ನೆಲೆಗಳು-2: ಆನೆಗೊಂದಿ"

  1. Suresh chalawadi  November 16, 2015 at 5:39 am

    Anegundiyalli kote melbagadalli matthu jinjir bettadalli historical kuruhugalive. Thajnarige hampi matra pramukyavagthide embude viparyasa.

    Reply

Leave a Reply

Your email address will not be published.