ಕರ್ನಾಟಕ ಭಿತ್ತಿಚಿತ್ರಕಲೆಯ ಪಾರಂಪರಿಕ ನೆಲೆಗಳು: ಐಹೊಳೆಯ ಭಿತ್ತಿಚಿತ್ರಗಳು

-ಎಸ್. ವೆಂಕಟೇಶ್, ಕಲಾ ಬರಹಗಾರರು

ರಾವನ್ಫಡಿ ಗುಹಾಲಯದ ಹೊರನೋಟ

ರಾವನ್ಫಡಿ ಗುಹಾಲಯದ ಹೊರನೋಟ

ಒಂದು ಕಾಲದಲ್ಲಿ ಚಾಲುಕ್ಯರ ಪ್ರಾರಂಭದ ರಾಜಧಾನಿಯಾಗಿದ್ದ ಐಹೊಳೆಯು ಇಂದು ಬಾಗಲಕೋಟೆ ಜಿಲ್ಲೆಯ, ಬಾದಾಮಿ ತಾಲ್ಲೂಕಿನ ಒಂದು ಕುಗ್ರಾಮವಾಗಿದೆ. ಇದು ಬೆಂಗಳೂರಿನಿಂದ 483 ಕಿ.ಮೀ., ಬಾದಾಮಿಯಿಂದ 46 ಕಿ.ಮೀ. ಮತ್ತು ಪಟ್ಟದಕಲ್ಲಿನಿಂದ 17 ಕಿ.ಮೀ. ದೂರದಲ್ಲಿದೆ. ಈ ಗ್ರಾಮದಲ್ಲಿ ನಿಂತು ಕಣ್ಣು ಹಾಯಿಸಿದಲ್ಲೆಲ್ಲಾ ಬರೀ ದೇಗುಲಗಳೇ ಕಾಣುತ್ತವೆ. ನೂರಕ್ಕೂ ಹೆಚ್ಚಿನ ದೇಗುಲಗಳು ಇಲ್ಲಿವೆ. ಇಡೀ ಭಾರತದಲ್ಲಿ ಇಲ್ಲಿ ಕಂಡು ಬರುವಷ್ಟು ವಿಭಿನ್ನ ಶೈಲಿ ಮತ್ತು ವಿಭಿನ್ನ ತಳವಿನ್ಯಾಸ ಹೊಂದಿದ ಚಾಲುಕ್ಯ ದೇವಾಲಯಗಳು ಮತ್ತೆಲ್ಲೂ ಕಂಡು ಬರುವುದಿಲ್ಲ. ಆದ್ದರಿಂದಲೇ ಐಹೊಳೆಯನ್ನು “ಭಾರತೀಯ ವಾಸ್ತುಶೈಲಿಯ ತೊಟ್ಟಿಲು” ಎಂದಿರುವುದು.ಇದರ ಜೊತೆಗೆ ಇಡೀ ದಕ್ಷಿಣ ಭಾರತದ ಅತ್ಯಂತ ಪ್ರಾಚೀನ ಗುಹಾದೇವಾಲಯಗಳೂ ಇಲ್ಲೇ ಕಂಡು ಬರುತ್ತವೆ.

ಐಹೊಳೆಯಲ್ಲಿ ಒಟ್ಟು ಮೂರು ಗುಹಾದೇವಾಲಯಗಳಿವೆ. ಇಲ್ಲಿನ ಗುಡ್ಡದ ಮೇಲಿರುವ ಮೇಗುತಿ ದೇವಾಲಯ ಒಂದಾದರೆ, ಸರ್ಕಾರಿ ವಸತೀಗೃಹದ ಹಿಂದಿರುವ ಹುಚ್ಚಮಲ್ಲೀ ಗುಡಿ ಬಳಿಯಿರುವ ರಾವಣಫಡಿ ಗುಹಾಲಯ ಇನ್ನೊಂದು. ಮೂರನೆಯದು ಜೈನ ಗುಡಿ. ಇದು ಮೇಗುತಿ ದೇವಾಲಯಕ್ಕೆ ಹೋಗುವ ದಾರಿಯಲ್ಲಿದೆ. ಇವುಗಳಲ್ಲಿ ರಾವಣಫಡಿ ಗುಹಾಲಯವೇ ಅತ್ಯಂತ ಹಳೆಯದು. ಇದನ್ನು ಕ್ರಿ.ಶ. 6ನೇ ಶತಮಾನದ ಮಧ್ಯಕಾಲದಲ್ಲಿ ಕೊರೆಯಲಾಗಿದೆ. ಈ ಗುಹಾಂತರ ದೇವಾಲಯವು ಒಂದನೇ ಪುಲಿಕೇಶಿ (ಕ್ರಿ.ಶ.540-566)ಯ ಕಾಲದಲ್ಲಿ ನಿರ್ಮಾಣಗೊಂಡಿದೆ ಎಂಬುದನ್ನು ಅಲ್ಲೇ ದೊರೆತಿರುವ ಶಿಲಾಶಾಸನವೊಂದು ಮತ್ತಷ್ಟು ದೃಢಪಡಿಸುತ್ತದೆ. ಬಹುಶ: ಇಲ್ಲಿನ ಭಿತ್ತಿಚಿತ್ರಗಳೂ ಇದೇ ಕಾಲಾವಧಿಯಲ್ಲೇ ರಚನೆಯಾಗಿರಬೇಕು. ಅಂತೆಯೇ ಕೆರೋಲ್ ರ್ಯಾಡ್‍ಕ್ಲಿಪ್ ಎಂಬ ವಿದ್ವಾಂಸ ‘ಈ ಗುಹಾಲಯ ಕ್ರಿ.ಶ. 545 ರಿಂದ 555 ರೊಳಗೆ ರಚನೆಯಾಗಿದ್ದು, ಚಿತ್ರಗಳೂ ಅದೇ ವೇಳೆಯಲ್ಲಿ ರಚನೆಯಾಗಿರುವ ಸಾಧ್ಯತೆಗಳಿವೆ’ ಎಂದು ಅಭಿಪ್ರಾಯಪಡುತ್ತಾರೆ.

ಸುಮಾರು 12 ಮೀಟರ್ ಉದ್ದ, 8 ಮೀಟರ್ ಅಗಲ ಮತ್ತು 4 ಮೀಟರ್ ಎತ್ತರವುಳ್ಳ ಈ ಮರಳುಗಲ್ಲಿನ ಗುಹಾದೇಗುಲದಲ್ಲಿ ಚಾಲುಕ್ಯರ ಅನೇಕ ಶಿಲ್ಪ ಕಲಾಕೃತಿಗಳಿವೆ. ಗುಹೆಯ ಮುಂಭಾಗದಲ್ಲಿ ಎರಡೂ ಕಡೆ ಕೋಷ್ಠಗಳಲ್ಲಿ ಶಂಖ-ಪದ್ಮನಿಧಿಗಳ ವಿಗ್ರಹಗಳಿವೆ. ಗೋಡೆಕಂಬಗಳಲ್ಲಿ ದ್ವಾರಪಾಲಕರಿದ್ದಾರೆ. ಒಳಹೊಕ್ಕರೆ ಅರ್ಧನಾರೀಶ್ವರ, ಹರಿಹರ, ಮಹಿಷಾಸುರ ಮರ್ದಿನಿ, ವರಾಹ, ನಟರಾಜ, ಮೂರು ಕಣ್ಣುಳ್ಳ ಗಂಗಾ-ಯಮುನಾ-ಸರಸ್ವತಿಯರ ಸಮೇತನಾದ ಗಂಗಾಧರ ಮುಂತಾದ ದೇವಾನುದೇವತೆಗಳ ಅಧ್ಬುತವಾದ ಮೂರ್ತಿಶಿಲ್ಪಗಳಿವೆ. ಇವುಗಳ ಮೇಲಿನ ಛಾವಣಿಯಲ್ಲಿ ಚಿತ್ರಕಲೆಯ ಕುರುಹುಗಳನ್ನು ಕಾಣಬಹುದು.

ಇಂದು ರಾವಣಪಢಿ ಗುಹಾಲಯದ ಮೇಲ್ಛಾವಣಿಯಲ್ಲಿರುವ ಭಿತ್ತಿಚಿತ್ರಗಳು ಸಂಪೂರ್ಣವಾಗಿ ಹಾಳಾಗಿದ್ದು, ಹೌದೋ ಅಲ್ಲವೋ ಎಂಬಂತೆ ಗೋಚರಿಸುತ್ತವೆ. ದೂರದರ್ಶಕ ಯಂತ್ರದಿಂದ ಅತೀ ಸೂಕ್ಷ್ಮವಾಗಿ ನೋಡಿದರೆ ಕೆಲವು ಆಕೃತಿಗಳು ಕಂಡು ಬರುತ್ತವೆ. ಒಂದು ಕಾಲಕ್ಕೆ ಗುಹೆಯ ಬಲಭಾಗದ ಅಂಕಣದ ಮೇಲ್ಛಾವಣಿಯ ತುಂಬೆಲ್ಲಾ ಭಿತ್ತಿಚಿತ್ರಗಳಿದ್ದವೆಂದು ತೋರುತ್ತದೆ. ಮಲಗಿ, ಸಾವಧಾನವಾಗಿ ತೆರೆದ ಕಣ್ಣುಗಳಿಂದ ಪರಿಶೀಲಿಸಿದರೆ ಮೇಲ್ಛಾವಣಿಯಲ್ಲಿ ಅಲ್ಲಲ್ಲಿ ಹಸಿರು ಮತ್ತು ಕೆಂಪುಬಣ್ಣದ ಗುರುತುಗಳನ್ನು ಕಾಣಬಹು3.Bhittichitragaliruva Melchavani.ದು. ಆದರೆ ಈಗ 0.80 ಮೀಟರ್ ಅಗಲ ಮತ್ತು 2 ಮೀಟರ್ ಉದ್ದದ ವಿಸ್ತೀರ್ಣದಲ್ಲಿರುವ ಅಂಕಣದ ಕೊನೆಯಲ್ಲಿ ಮಾತ್ರ ಮಸಕಾದ ಚಿತ್ರಗಳು ಉಳಿದುಕೊಂಡಿವೆ.
ವರ್ಣಚಿತ್ರಕಲೆಯ ದೃಷ್ಟಿಯಿಂದ ಐಹೊಳೆಯ ರಾವಣಫಡಿ ಗುಹಾಲಯಕ್ಕೆ ಕರ್ನಾಟಕದ ಕಲಾಚರಿತ್ರೆಯಲ್ಲಿ ತನ್ನದೇ ಆದ ವಿಶೇಷ ಮಹತ್ವವಿದೆ. ಕರ್ನಾಟಕದ ಶಿಷ್ಟಪದ ವರ್ಣ ಭಿತ್ತಿಚಿತ್ರಕಲೆಯ ಇತಿಹಾಸ ಪ್ರಾರಂಭವಾಗುವುದೇ (ಕ್ರಿ.ಶ.545-555) ಇಲ್ಲಿಂದ.

ಆನಂತರ ಅದು ಇಪ್ಪತ್ತನೇ ಶತಮಾನದವರೆಗೂ ಜೀವನದಿಯಂತೆ ಅವಿಚ್ಛಿನ್ನವಾಗಿ ಪ್ರವಹಿಸಿಕೊಂಡು ಬಂದಿದೆ. ಐಹೊಳೆಗಿಂತ ಪೂರ್ವದಲ್ಲಿ ವರ್ಣಚಿತ್ರಕಲೆ ರಚಿಸಿದ ಇನ್ನೊಂದು ನೆಲೆ ಕಂಡುಬಂದಿಲ್ಲ. ಹೀಗಾಗಿ ಕರ್ನಾಟಕದ ವರ್ಣಚಿತ್ರಕಲೆಯ ಪರಂಪರೆ ಇಲ್ಲಿಂದ ಆರಂಭವಾಗುತ್ತದೆ.
ಹಾರುತ್ತಿರುವ ಗಂಧರ್ವ ದಂಪತಿಗಳು ಇಲ್ಲಿನ ಭಿತ್ತಿಚಿತ್ರಗಳನ್ನು ಕುರಿತು ಜೆ.ಸಿ.ನಾಗಪಾಲ ಅವರು ತಮ್ಮ ‘Mural Paintings in India’ ಎಂಬ ಉದ್ಗ್ರಂಥದಲ್ಲಿ ‘ಕೆಲವು ಹಾರುತ್ತಿರುವ ಆಕೃತಿಗಳು ಮಸುಕಾಗಿ ಕಂಡುಬರುತ್ತವೆ’ ಎಂದಷ್ಟೇ ಪ್ರಸ್ತಾಪಿಸಿರುವರಾದರೂ ಚಿತ್ರಿತ ವಸ್ತುವಿಷಯವನ್ನು ಕುರಿತು ಸರಿಯಾದ ವಿಚಾರಗಳನ್ನೇ ಮಂಡಿಸುತ್ತಾರೆ.

ಆದರೆ ಶೀಲಾಕಾಂತ ಪತ್ತಾರರು ನಾಗಪಾಲರ ಅಭಿಪ್ರಾಯವನ್ನು ಒಪ್ಪುವುದಿಲ್ಲ. ಬದಲಾಗಿ ನಾಗಪಾಲರು ಚಿತ್ರದ ವಸ್ತುವಿಷಯವನ್ನು ಸರಿಯಾಗಿ ಗುರುತಿಸಿಲ್ಲವೆಂದು ಹೇಳುತ್ತ, ‘ಇದೊಂದು ಯುದ್ಧದ ದೃಶ್ಯವಾಗಿದ್ದು, ಸೈನಿಕರ ಚಿತ್ರಗಳು ಇಲ್ಲಿವೆ. ಮೇಲ್ಛಾವಣಿಯ ಬಲಭಾಗದಲ್ಲಿ ಸೈನಿಕನೊಬ್ಬ ಯುದ್ಧನಿರತನಾಗಿದ್ದು, ಆತನ ಮೇಲ್ಭಾಗದಲ್ಲಿ ಮತ್ತೊಬ್ಬ ಯೋಧ ಈಟಿಯನ್ನು ಹಿಡಿದು ತಿವಿಯುತ್ತಿರುವಂತೆ ತೋರುತ್ತದೆ. ಎಡಭಾಗದಲ್ಲಿ ಇನ್ನೊಬ್ಬ ವ್ಯಕ್ತಿ ಲೋಹಜಾಲಕವನ್ನು ಧರಿಸಿ ಎಡಗೈಯಲ್ಲಿ ಗುರಾಣಿಯನ್ನು ಹಿಡಿದಿದ್ದಾನೆ. ಮಧ್ಯದಲ್ಲಿನ ವ್ಯಕ್ತಿಯು ಚಡ್ಡಿಯಂತಹ ಅಧೋವಸ್ತ್ರ ಧರಿಸಿದ್ದು, ಅದಕ್ಕೆ ವಸ್ತ್ರವನ್ನು ಕಟಿಬಂಧವಾಗಿ ಬಿಗಿದುಕೊಂಡಿದ್ದಾನೆ. ಮೇಲ್ಭಾಗದಲ್ಲಿ ಎದೆಯ ಭಾಗಕ್ಕೆ ಕುಪ್ಪಸದಂತಹ ಕವಚ ತೊಟ್ಟಿದ್ದು, ಬಹುಶ: ಇದು ಕಬ್ಬಿಣದ್ದಾಗಿರಬಹುದು’ ಎಂದು ಶೀಲಾಕಾಂತ ಪತ್ತಾರರು ಅಭಿಪ್ರಾಯ ಪಡುತ್ತಾರೆ.ಅದೇ ರೀತಿ ಮತ್ತೆ ಕೆಲವು ಕಲಾಬರಹಗಾರರು ಈ ಚಿತ್ರ ಮಹಿಷಮರ್ದಿನಿಯದಾಗಿದ್ದು, ಆಕೆ ಮಾನುಷ ರೂಪಿ ಮಹಿಷನನ್ನು ಸಂಹಾರ ಮಾಡುತ್ತಿರುವಂತೆ ನಿರೂಪಿಸಲಾಗಿದೆ ಎಂದಿರುವರು. ಆದರೆ ಈ ಎಲ್ಲ ಸಾ4. Haaruttiruva Gandharva.ಮಾನ್ಯೀಕೃತ ಹೇಳಿಕೆಗಳನ್ನು ಪುನರ್ ಪರಿಶೀಲಿಸಬಹುದು.

ಚಿತ್ರವಿರುವ ಮೇಲ್ಛಾವಣಿಯ ಅಂಕಣದ ಬಹುತೇಕ ಗಾರೆಯೆಲ್ಲಾ ಕಿತ್ತುಹೋಗಿದ್ದು, ಕೆಳಭಾಗದಲ್ಲಿ ನಾಲ್ವರು ಮಾನವಾಕೃತಿಗಳನ್ನು ಗುರುತಿಸಬಹುದು. ಆದರೆ ಇವರು ಸೈನಿಕರೂ ಅಲ್ಲ. ಮಹಿಷಮರ್ದಿನಿಯೂ ಅಲ್ಲ. ಬದಲಾಗಿ ಅಂತರಿಕ್ಷದಲ್ಲಿ ಮೋಡಗಳ ನಡುವೆ ಹಾರಾಡುತ್ತಿರುವ ಗಂಧರ್ವ ದಂಪತಿಗಳು. ಈ ನಾಲ್ವರಲ್ಲಿ ನಮ್ಮ ಗಮನವೆಲ್ಲಾ ಕೆಳಭಾಗದಲ್ಲಿರುವ ಮಧ್ಯದ ಗಂಧರ್ವನ ಮೇಲೆಯೇ ಕೇಂದ್ರೀಕೃತವಾಗುತ್ತದೆ. ಏಕೆಂದರೆ ಅವನನ್ನು ಮಾತ್ರ ಪ್ರಧಾನವೆಂಬಂತೆ ಸ್ವಲ್ಪ ದೊಡ್ಡದಾಗಿ ಚಿತ್ರಿಸಿ, ಉಳಿದವರನ್ನು ಚಿಕ್ಕದಾಗಿ ಚಿತ್ರಿಸಿದ್ದಾರೆ. ಅವನ ಮುಖ ಎದುರು ನೋಟದಲ್ಲಿದೆ.

ಈ ಗಂಧರ್ವನು ಮೈಗಂಟಿದ ಚಡ್ಡಿಯಂತಹ ಕಂದುಬಣ್ಣದ ಕೆಳವಸ್ತ್ರವನ್ನು ಧರಿಸಿದ್ದು, ಅದಕ್ಕೆ ಇನ್ನೊಂದು ವಸ್ತ್ರವನ್ನು ಕಟಿಬಂಧವಾಗಿ ಬಿಗಿದುಕೊಂಟಿದ್ದಾನೆ. ಅದರ ಎರಡೂ ತುದಿಗಳು ಅವನ ಎರಡೂ ಕಾಲುಗಳ ಮಧ್ಯೆ ತೊಯ್ದಾಡುತ್ತಿದ್ದು, ಅವನ ಕಾಲಿನ ವಿನ್ಯಾಸಕ್ಕನುಗುಣವಾಗಿದೆ. ಈ ವಸ್ತ್ರಗಳ ಮೇಲೆ ಉದ್ದನೆಯ ಗೆರೆಗಳನ್ನೂ ಕಾಣಬಹುದು. ಎದೆಯ ಭಾಗಕ್ಕೆ ತೋಳಿಲ್ಲದ ರವಿಕೆಯಂತಹ ಮೇಲುಡಿಗೆಯಿದೆ.

ತಲೆಯಲ್ಲಿ ಉದ್ದನೆ ಕಿರೀಟವಿದೆ. ಎಡಗೈಯಲ್ಲಿ ಕಮಲದ ಮೊಗ್ಗು ಹಿಡಿದಿದ್ದು, ಬಲಗೈಯಲ್ಲಿನ ವಸ್ತು ಅಸ್ಪಷ್ಟವಾಗಿದೆ. ಆದರೆ ಬಳೆಯಂತಹ ಆಭರಣ ಧರಿಸಿರುವುದನ್ನು ಗುರುತಿಸಬಹುದು. ಅದೇ ರೀತಿ ತೋಳು ಮತ್ತು ಕಂಠಾಭರಣವನ್ನೂ ಗಮನಿಸಬಹುದು. ಅವನು ತನ್ನ ಎರಡೂ ಕಾಲುಗಳನ್ನು ಹಿಂದಕ್ಕೆ ಅರ್ಧಮಡಚಿಕೊಂಡು ಅಂತರಿಕ್ಷದಲ್ಲಿ ಹಾರಿಹೋಗುತ್ತಿರುವಂತೆ ಚಿತ್ರಿಸಿರುವ ಧಾಟಿ ಸೊಗಸಾಗಿದೆ.

ಗಂಧರ್ವನ ಹಿಂಭಾಗದಲ್ಲಿ ಎಡಕ್ಕೆ ಇವನ ಪತ್ನಿಯಿದ್ದಾಳೆ. ಅವಳೂ ಬಲಗೈಯಲ್ಲಿ ಹೂವೊಂದನ್ನು ಹಿಡಿದಿರುವಳು. ಎಡಗೈ ಭಾಗದ ಗಾರೆಯೆಲ್ಲಾ ಬಿದ್ದುಹೋಗಿದೆ. ಆದರೂ ಎರಡೂ ಕೈಯ ರೆಟ್ಟೆಗಳಿಗೆ ಆಭರಣ ತೊಟ್ಟಿರುವುದನ್ನು ಗಮನಿಸಬಹುದು. ಕರ್ಣಕುಂಡಲವೂ ಇದೆ. ತಲೆಗೂದಲನ್ನು ಸುಂದರವಾಗಿ ಕಟ್ಟಿಕೊಂಡಿದ್ದು, ತಲೆಯಲ್ಲೂ ಕೆಲವೊಂದು ಆಭರಣಗಳಿವೆ. ಅವಳು ಚೌಕದ ನಮೂನೆಯಿರುವ ಕುಪ್ಪಸ ಮತ್ತು ಅಡ್ಡಗೆರೆಗಳಿರುವ ಕಸೂತಿ ಹಾಕಿದ ಸೀರೆಯನ್ನುಟ್ಟಿದ್ದಾಳೆ. ಮುಖ ಕಾಲಕಳೆದಂತೆ ಗಾಢ ನೀಲಿವರ್ಣದಿಂದ ಕಂದು ಬಣ್ಣಕ್ಕೆ ತಿರುಗಿದೆ.

ಗಂಧರ್ವನ ಬಲಗಡೆಗೆ ತಲೆಗೂದಲನ್ನು ಕೆದರಿಕೊಂಡಿರುವ, ಹಸನ್ಮುಖಿಯಾಗಿ ನೃತ್ಯ ಮಾಡುತ್ತಿರುವಂತಿರುವ ಕುಬ್ಜಗಣನೊಬ್ಬನನ್ನು ಚಿತ್ರಿಸಲಾಗಿದೆ. ಅವನು ಕೆಳ ಉಡುಗೆ ಮಾತ್ರ ಧರಿಸಿದ್ದಾನೆ. ಮೇಲುಡುಗೆಯಿಲ್ಲ. ಅವನ ಹಾವಭಾವ ಸೊಗಸಾಗಿ ನಿರೂಪಿತವಾಗಿದ್ದು, ಗಮನ ಸೆಳೆಯುತ್ತದೆ. ಗಂಧರ್ವನ ಮೇಲ್ಗಡೆ ಹಾರಾಡುತ್ತಿರುವ ಇನ್ನೊಬ್ಬ ಕುಬ್ಜಗಣನಿದ್ದು, ಅವನು ಕೈಯಲ್ಲಿ ಉದ್ದನೆಯ ಕಡ್ಡಿಯಿರುವ ಛತ್ರಿ ಹಿಡಿದಿದ್ದಾನೆ. ಅವನ ಕಪ್ಪನೆಯ ಕೆಳವಸ್ತ್ರವು ಗಾಳಿಗೆ ಹಾರಾಡುತ್ತಿದೆ. ಇವನ ಕೈ, ಕಿವಿ, ತಲೆಯಲ್ಲಿ ಆಭರಣಗಳಿವೆ. ಇವನೂ ಹಸನ್ಮುಖಿ. ಅವನು ಜಿಗಿಯುತ್ತಿರುವ ಧಾಟಿಯಲ್ಲಿರುವುದು ಸೊಗಸಾಗಿ ನಿರೂಪಿತಗೊಂಡಿದೆ. ಹಿನ್ನೆಲೆಯಲ್ಲಿ ಗುಂಗುರು ಗುಂಗುರಾಗಿರುವ ಮೋಡಗಳನ್ನು ಗುರುತಿಸಬಹುದು.

ಗಂಧರ್ವನ ತಲೆಯ ಮೇಲೆ ಛತ್ರಿಹಿಡಿದ ಗಣನ ಬೆನ್ನ ಮೇಲೆಯೇ ಇನ್ನೊಂದು ಚಿಕ್ಕದಾದ ಮಾನವಾಕೃತಿಯಿದೆ. ಅದೂ ಹಾರಾಡುತ್ತಿದ್ದು, ಅದರ ವಸ್ರ್ತ ಮೇಲ್ಮುಖವಾಗಿ ತೊಯ್ದಾಡುತ್ತಿದೆ. ಇದರ ಮೇಲೆ ಮುಖಮಾತ್ರ ಅದೂ ಅಸ್ಪಷ್ಟವಾಗಿರುವ ಸ್ತ್ರೀ ಆಕೃತಿಯೊಂದನ್ನು ಗುರುತಿಸಬಹುದು. ಆಕೆಯ ಮುಖವೂ ಕಂದುಬಣ್ಣದಲ್ಲಿದೆ. ಎಲ್ಲಕ್ಕೂ ಮೇಲ್ಗಡೆ, ಅಂಕಣದ ಪ್ರಾರಂಭದಲ್ಲಿ ಉದ್ದನೆಯ ಕಿರೀಟವುಳ್ಳ ಪುರುಷನ ತಲೆ ಮಾತ್ರ ಕಾಣಿಸುತ್ತಿದೆ. ಇದರ ಎದುರಿಗೆ ಮಹಿಳೆಯ ತಲೆಯನ್ನು ಗುರುತಿಸಬಹುದು. ಆಕೆಯ ತಲೆಯ ಹಿಂಭಾಗದಲ್ಲಿ ಇನ್ನೊಂದು ಪೇಟವಿರುವ ಶಿರವನ್ನು ಗಮನಿಸಬಹುದು.

ಈ ಪೇಟದ ವಿನ್ಯಾಸವು ಬಾದಾಮಿಯ ವಿದ್ಯಾಧರಿಯ ಪೇಟವನ್ನು ಬಹುವಾಗಿ ಹೋಲುತ್ತದೆ. ಇಲ್ಲಿ ಎಲ್ಲರನ್ನೂ (ಆಕೃತಿಗಳನ್ನೂ) ಎದುರು ನೋಟದಲ್ಲಿ ಚಿತ್ರಿಸಿರುವುದು ಗಮನಾರ್ಹ. ಗಂಧರ್ವ ಮತ್ತು ಕುಬ್ಜಗಣರ ಉಡುಪುಗಳು ಕೆಂಪುಮಿಶ್ರಿತ ಕಂದುಬಣ್ಣದಲ್ಲಿದ್ದು, ಮೈಬಣ್ಣ ನಸುಹಳದಿಯಾಗಿದೆ. ಗಂಧರ್ವನ ಪತ್ನಿಯ ಮೈಬಣ್ಣವನ್ನು ಗಾಢನೀಲಿ ವರ್ಣದಲ್ಲಿ ಚಿತ್ರಿಸಿದೆ. ಅಂದರೆ ಸ್ತ್ರೀಪುರುಷರ ಮೈಬಣ್ಣವನ್ನು ಮೊದಲ ಬಾರಿಗೇ ಬೇರೆ ಬೇರೆಯಾಗಿ ತೋರಿಸಲಾಗಿದೆ. ಅಂಗಾಂಗಗಳೂ ಪ್ರಮಾಣಬದ್ಧವಾಗಿವೆ. ಕಪ್ಪನೆಯ ಹೊರ ರೇಖೆಗಳು ಲಾಲಿತ್ಯಪೂರ್ಣವೂ, ಸತ್ವಯುತವೂ ಆಗಿವೆ. ಅದೇ ರೀತಿ ಆಕೃತಿಗಳನ್ನು ಒಂದು ಸಂಯೋಜನಾ ಚಿತ್ರವೆಂದು ಪರಿಗಣಿಸಿ, ಸುತ್ತಲೂ ಭಿತ್ತಿಚಿತ್ರದ ಚೌಕಟ್ಟನ್ನು ಕೆಂಪು, ಹಸಿರು ಬಣ್ಣದ ಹೂಬಳ್ಳಿಯ ನಕ್ಷೆಗಳಿಂದ ವ್ಯವಸ್ಥಿತವಾಗಿ ಅಲಂಕರಿಸಿರುವುದು ಕರ್ನಾಟಕ ಶಿಷ್ಟ ಭಿತ್ತಿಚಿತ್ರಕಲೆಯಲ್ಲಿ ಇದೇ ಮೊದಲನೆಯದೆಂಬುದೂ ಗಮನಾರ್ಹ. ಅನಂತರ ಭಿತ್ತಿಚಿತ್ರಗಳ ಅಂಚನ್ನು ಹೂಬಳ್ಳಿಗಳಿಂದ ಅಲಂಕರಿಸುವುದು ಒಂದು ಪರಂಪರೆಯಾಗಿ ಬೆಳೆದುಕೊಂಡು ಬಂದಿರುವುದನ್ನು ಗಮನಿಸಬಹುದು. ಇಲ್ಲಿ ಚಿತ್ರಗಳಿಗೆ ಕಪ್ಪುಬಿಳುಪಿನ ಜೊತೆಗೆ ಕೆಂಪು, ಹಸಿರು, ಹಳದಿ ಮತ್ತು ಕಂದು ಬಣ್ಣಗಳೂ ಬಳಕೆಯಾಗಿವೆ. ಚಿತ್ರರಚನೆಗೂ ಮುನ್ನ ಮೇಲ್ಛಾವಣಿಯ ಕಲ್ಲಿಗೆ ತೆಳುವಾದ ಭಿತ್ತಿಪದರವನ್ನು ಲೇಪಿಸಲಾಗಿದ್ದು, ಅದರ ಮೇಲೆ ಚಿತ್ರಬಿಡಿಸಲಾಗಿದೆ.
ಒಟ್ಟಾರೆ ಐಹೊಳೆಯ ಈಗಿರುವ ಭಿತ್ತಿಚಿತ್ರಗಳ ವಸ್ತುವಿಷಯ “ಹಾರುತ್ತಿರುವ ಗಂಧರ್ವ ದಂಪತಿಗಳು” ಎಂಬುದು ನಿಸ್ಸಂಶಯ.

ಬಾದಾಮಿಯ ವರ್ಣಚಿತ್ರದಲ್ಲೂ ಇದೇ ವಸ್ತುವಿಷಯದ ಚಿತ್ರಣವನ್ನು ಕಾಣಬಹುದು. ಈ ರೀತಿಯ ಹಾರುತ್ತಿರುವ ಗಂಧರ್ವ ದಂಪತಿಗಳ ಚಿತ್ರಣ ಚಾಲುಕ್ಯರ ಶಿಲ್ಪಗಳಲ್ಲಂತೂ ಯಥೇಚ್ಛವಾಗಿಯೇ ದೊರಕುತ್ತವೆ. ಅದು ಅವರ ಶಿಲ್ಪಕಲೆಯ ಒಂದು ವಿಶಿಷ್ಟ ಲಕ್ಷಣವೇ ಆಗಿತ್ತೆಂಬುದು ಗಮನಾರ್ಹ. ಆದಾಗ್ಯೂ ಕೆಲವರು ಚಿತ್ರಿತ ವಿಷಯ ಮಹಿಷಮರ್ದಿನಿ ಎನ್ನುವುದು ಸಮಂಜಸವಲ್ಲ. ಬಹುಶ: ಗಾಳಿಯಲ್ಲಿ ತೊಯ್ದಾಡುತ್ತಿರುವ ಕುಬ್ಜಗಣನನ್ನು ಮಹಿಷಮರ್ದಿನಿ ಎಂದೂ, ಆತ ಕೈಯಲ್ಲಿ ಹಿಡಿದ ಛತ್ರಿಯ ಉದ್ದನೆಯ ಕಡ್ಡಿಯನ್ನು ತ್ರಿಶೂಲವೆಂದೂ, ಕೆಳಗಡೆಯ ಇನ್ನೊಬ್ಬ ಗಣನು ಮಹಿಷನೆಂದು ಭಾವಿಸಿ ಈ ತೀರ್ಮಾನಕ್ಕೆ ಬಂದಿರಬಹುದು. ಆದರೆ ಇಲ್ಲಿ ಗಮನಿಸಬೇಕಾದ ಒಂದು ಮಹತ್ವದ ಅಂಶವೆಂದರೆ ಮಹಿಷಮರ್ದಿನಿಗೆ ಇರಬೇಕಾದ ಪ್ರತಿಮಾ ಲಕ್ಷಣಗಳಾಗಲೀ, ಭಾವಭಂಗಿಯಾಗಲೀ, ವೀರಾವೇಶವಾಗಲೀ ಇಲ್ಲಿನ ಆಕೃತಿಗಳಲ್ಲಿ ಕಂಡು ಬರುವುದಿಲ್ಲ. ಬದಲಾಗಿ ಎಲ್ಲವೂ ಉಲ್ಲಾಸಭರಿತವಾಗಿಯೂ, ಹಸನ್ಮುಖಿಯಾಗಿಯೂ ಇವೆ. ಎಲ್ಲಕ್ಕೂ ಹೆಚ್ಚಾಗಿ ಮುಖ್ಯದೇವತೆಯನ್ನು ಚಿಕ್ಕದಾಗಿ ಚಿತ್ರಿಸಿ, ಉಳಿದ ಉಪ ಆಕೃತಿಗಳನ್ನು ದೊಡ್ಡದಾಗಿ ಚಿತ್ರಿಸಿರುವುದು ನಮ್ಮ ಭಿತ್ತಿಚಿತ್ರ ಪರಂಪರೆಯಲ್ಲೆಲ್ಲೂ ಕಂಡು ಬರುವುದಿಲ್ಲ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಐಹೊಳೆಯ ರಾವಣಪಢಿ ಗುಹಾಲಯದಲ್ಲಿರುವ ಚಿತ್ರಿತ ವಸ್ತುವಿಷಯ ಹಾರುತ್ತಿರುವ ಗಂಧರ್ವ ದಂಪತಿಗಳು ಎಂಬುದು ಖಚಿತ.

Leave a Reply

Your email address will not be published.