ಕರ್ನಾಟಕದ ಮೇಲೆ ಪರಿಣಾಮ ಬೀರದ ಗುಜರಾತಿನ ಪಲಿತಾಂಶ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

ಗುಜರಾತಿನ ಪಲಿತಾಂಶ ಹೊರಬಿದ್ದಿದ್ದು ಬಾಜಪ ಏದುಸಿರು ಬಿಡುತ್ತಲೆ ಗೆದ್ದಿದ್ದು, ಕಾಂಗ್ರೆಸ್ ತನ್ನ ಸೋಲಿನಲ್ಲೂ ಸಂಭ್ರಮಿಸಬಹುದಾದ ಸಾಧನೆ ಮಾಡಿದೆ. ಈ ಪಲಿತಾಂಶ ನಮ್ಮ ಕರ್ನಾಟಕದ ಮೆಲೆ ಯಾವ ತೆರನಾದ ಪ್ರಭಾವ ಬೀರಬಹುದೆಂಬುದರ ಬಗ್ಗೆ ಈಗಾಗಲೇ ಚರ್ಚೆ ಶುರುವಾಗಿದೆ.

ರಾಜ್ಯದ ಬಾಜಪದ ನಾಯಕರಂತು ಈ ಪಲಿತಾಂಶ ರಾಜ್ಯದ ಮತದಾರರ ಮೇಲೆಯೂ ಪ್ರಭಾವ ಬೀರಿ ಮೋದಿಯವರ ನಾಮಬಲದಿಂದಲೇ ತಾವು ಗೆಲ್ಲಬಹುದೆಂಬ  ಭ್ರಮೆಯಲ್ಲಿ ಬೀಗುತ್ತಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೇಸ್ಸಿನ ನಾಯಕರುಗಳು ಗುಜರಾತಿನ ಪಲಿತಾಂಶಗಳ ಪರಿಣಾಮ ನಮ್ಮ ರಾಜ್ಯದಲ್ಲಿ ಅಗುವುದಿಲ್ಲವೆಂದು ಘಂಟಾಘೋಷವಾಗಿ ಹೇಳುತ್ತಿದ್ದಾರೆ. ಹಾಗಾದರೆ ವಾಸ್ತವ ಏನು ಎನ್ನುವುದನ್ನು ನೋಡುತ್ತ ಹೋದರೆ ಸತ್ಯ ಇವೆರಡರ ನಡುವೆ ಇದೆ. ಆ ಬಗ್ಗೆ ಒಂದಿಷ್ಟು ನೋಡೋಣ:

ಗುಜರಾತಿನ ಪರಿಸ್ಥಿತಿಗೂ ಕರ್ನಾಟಕದ ರಾಜಕೀಯ ಪರಿಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿದೆ. ಕಳೆದ ಇಪ್ಪತ್ತೆರಡು ವರ್ಷಗಳಿಂದಲೂ ಗುಜರಾತಿನಲ್ಲಿ ಬಾಜಪದ ಆಳ್ವಿಕೆಯಿದ್ದು, ತಳಮಟ್ಟದಲ್ಲಿ ಬಾಜಪ ಗಟ್ಟಿಯಾಗಿ ಬೇರು ಬಿಟ್ಟಿದೆ. ಎರಡು ದಶಕಗಳಿಂದಲೂ ಅಧಿಕಾರ ವಂಚಿತರಾಗಿರುವ ಕಾಂಗ್ರೇಸ್ಸಿಗೆ ಅಲ್ಲಿ  ತಳ ಮಟ್ಟದ ಸಂಘಟನೆಯ ಕೊರತೆಇತ್ತು. ಆದರೆ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಬಾಜಪದ ಸಂಘಪರಿವಾರದ ಅಂಗಸಂಸ್ಥೆಗಳನ್ನು ಹೊರತುಪಡಿಸಿಯೂ, ಕಾಂಗ್ರೇಸ್ಸಿನಲ್ಲಿ  ಕಾರ್ಯಕರ್ತರ ದಂಡೇ ಇದೆ. ಈವಿಚಾರದಲ್ಲಿ ಗುಜರಾತಿನಲ್ಲಿದ್ದ ಸಮಸ್ಯೆ ಕರ್ನಾಟಕದಲ್ಲಿ ಇಲ್ಲ.

ಎರಡನೆಯದಾಗಿ  ಗುಜರಾತಿನಲ್ಲಿ ತಮ್ಮಪಕ್ಷ ಗೆಲ್ಲಲಾಗುವುದೇ ಇಲ್ಲವೆನ್ನುವ ಮಟ್ಟಿಗೆ  ಕಾಂಗ್ರೇಸ್ಸಿನ ಕಾರ್ಯಕರ್ತರು ಹತಾಶರಾಗಿದ್ದು, ಈ ಹತಾಶೆ  ಮತದಾರರ ಮೇಲೆಯೂ ಸ್ವಲ್ಪ ಮಟ್ಟಿಗೆಪ್ರಭಾವ ಬೀರಿದೆ. ಗೆಲ್ಲದ ಪಕ್ಷಕ್ಕೆ ಯಾಕೆ ಮತನೀಡಬೇಕೆಂಬ ಜನರ ಯೋಚನಾ ಲಹರಿಯೇ ಕನಿಷ್ಠ ಒಂದೆರಡು ಪರ್ಸೆಂಟ್ ಮತದಾರರಾದರೂ ಬಾಜಪಕ್ಕೆ ಮತಚಲಾಯಿಸಲು ಕಾರಣವಾಗಿರುವುದಂತೂ ಸತ್ಯ..

ಇನ್ನು ಗುಜರಾತ್ ಪ್ರದಾನಿ ನರೇಂದ್ರ ಮೊದಿಯವರ ತವರು ರಾಜ್ಯವಾಗಿದ್ದು, ತಮ್ಮವರೊಬ್ಬರು ಪ್ರದಾನಿಗಳಾಗಿರುವಾಗ ಆ ಪಕ್ಷವನ್ನು ಸೋಲಿಸುವುದು ತರವಲ್ಲ ಎನ್ನುವ ಜನತೆಯ ಅಭಿಮಾನವೂ ಅಲ್ಲಿ ಬಾಜಪದ ಪರ ಕೆಲಸ ಮಾಡಿದೆ. ಅದಕ್ಕೆ ಪೂರಕವಾಗಿ ಮೋದಿಯವರು ‘ನಾನು ನಿಮ್ಮ ಮನೆಯ ಮಗ ನನ್ನ ಕೈಬಿಡಬೇಡಿ’ ಎಂಬರ್ಥ ಬರುವ ಮಾತುಗಳನ್ನಾಡಿ ಜನರ ಬಾವನೆ ಕೆರಳಿಸುತ್ತ ಮತದಾರರನ್ನು ಒಲಿಸಿಕೊಳ್ಳಲು ಪ್ರಯತ್ನ ಪಟ್ಟರು. ಆದರೆ ಕರ್ನಾಟಕದಲ್ಲಿ ನರೇಂದ್ರ ಮೋದಿಯವರಿಗೆ ಆ ಅವಕಾಶವಿಲ್ಲ.  ಕಾಂಗ್ರೇಸ್ಸಿನ ಹೈಕಮ್ಯಾಂಡಿಗೆ ಅಂದರೆ ರಾಹುಲ್ ಗಾಂದಿ ಕುಟುಂಬಕ್ಕೆ ಕರ್ನಾಟಕದೊಂದಿಗೆ ಇರುವ ಬಾವನಾತ್ಮಕ ಸಂಬಂದದ( ಎಷ್ಟೇ ಆದರೂ ದಿವಂಗತ ಇಂದಿರಾ ಗಾಂದಿಯವರಿಗೆ ರಾಜಕೀಯ ಪುನರ್ಜನ್ಮ ನೀಡಿದ  ಮತ್ತು ಸೊನಿಯಾ ಗಾಂದಿಯವರನ್ನೂ ಒಮ್ಮೆ ಗೆಲ್ಲಿಸಿ ಕಳಿಸಿದ ರಾಜ್ಯವಿದು) ಮುಂದೆ ಮೋದಿಯವರಿಗೆ ಅಂತಹ ಯಾವುದೇ ಬಾವನಾತ್ಮಕ ಸಂಬಂದವಿಲ್ಲ.. ಹೀಗಾಗಿ ಕರ್ನಾಟಕದಲ್ಲಿ ಜನತೆಯ ಮನ ಗೆಲ್ಲಲು ಮೋದಿಯವರಿಗೆ ವೈಯುಕ್ತಿಕ ಬಾವನಾತ್ಮಕ ನಂಟೇನಿಲ್ಲ.

ಇನ್ನು  ಗುಜರಾತ್ ಕಾಂಗ್ರೇಸ್ ಎಷ್ಟರ ಮಟ್ಟಿಗೆ  ಸ್ಥಳೀಯ ನಾಯಕರುಗಳಿರದೆ ಸೊರಗಿತ್ತೆಂದರೆ ಒಟ್ಟು182ಕ್ಷೇತ್ರಗಳಲ್ಲಿಯೂ ಸ್ವತ; ರಾಹುಲ್ ಗಾಂದಿಯವರೇ ತಾರಾ ಪ್ರಚಾರಕರಾಗಿ ಕೆಲಸ ಮಾಡಬೇಕಾಗಿ ಬಂತು. ಅದರಲ್ಲೂ ಕೊನೆಯ ಗಳಿಗೆಯಲ್ಲಿ ಅಂದರೆ ಚುನಾವಣೆಗೆ ಎರಡು ತಿಂಗಳುಗಳಿರುವಾಗ ಶಂಕರಸಿಂಗ್ ವಘೇಲಾರವರು ಪಕ್ಷ ತೊರೆದು ಹೋದನಂತರ ಹೇಳಿಕೊಳ್ಳಲೂ ಕಾಂಗ್ರೇಸ್ಸಿಗೆ ಒಬ್ಬನೆಒಬ್ಬ ಪ್ರಾದೇಶಿಕ ನಾಯಕ ಇರದಂತಹ ಸ್ಥಿತಿ ಬಂದಿತ್ತು.. ಬಾಜಪದಲ್ಲಿದ್ದ ಸ್ಥಳೀಯ ನಾಯಕರುಗಳ ಮುಂದೆ ಕಾಂಗ್ರೆಸ್ಸನ್ನು ಮುನ್ನಡೆಸುವ ನಾಯಕರೇ ಇರದ ಶೂನ್ಯ ಸ್ಥಿತಿ ಇತ್ತು.

ಆದರೆ ಕನರ್ಾಟಕದ ಚಿತ್ರವೇಬೇರೆ.  ಯಾಕೆಂದರೆ ಕರ್ನಾಟಕ ಕಾಂಗ್ರೇಸ್ಸಿನಲ್ಲಿ ಸ್ಥಳೀಯ ನಾಯಕರುಗಳಿಗೇನು ಕೊರತೆಯಿಲ್ಲ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಂದ ಹಿಡಿದು  ಸಂಸತ್ತಿನಲ್ಲಿ ಕಾಂಗ್ರೇಸ್ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರ ತನಕ  ಮತದಾರರ ಮೇಲೆ ಪ್ರಭಾವ ಬೀರಬಹುದಾದ ಹಲವು ಪ್ರಾದೇಶಿಕ ನಾಯಕರುಗಳು ಇದ್ದಾರೆ. ಕೆ.ಪಿ.ಸಿ.ಸಿ. ಅದ್ಯಕ್ಷರಾದ ಪರಮೇಶ್ವರ್ ಡಿ.ಕೆ.ಶಿವಕುಮಾರ್, ಅಲ್ಪಸಂಖ್ಯಾತ ನಾಯಕರುಗಳಾದ ಇಬ್ರಾಹಿಂ ಮತ್ತು ಜಾಪರ್ ಷರೀಫ್ ಮುಂತಾದ ಘಟಾನುಘಟಿ ಸ್ಥಳೀಯ ನಾಯಕರುಗಳಿದ್ದು  ಮತದಾರರ ಮೇಲೆ  ಪ್ರಭಾವ ಬೀರಬಲ್ಲ ಶಕ್ತಿಯುಳ್ಲವರಾಗಿದ್ದಾರೆ. ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಎಲ್ಲಾ ಜಾತಿ ಸಮುದಾಯಗಳ ಮೆಲೆ ತಮ್ಮದೇ ಆದ ಪ್ರಭಾವ ಬೀರುವಂತಹ  ನಾಯಕರುಗಳಿದ್ದು  ಚುನಾವಣಾ ಪ್ರಚಾರ ಕಾರ್ಯದಲ್ಲಿ ರಾಹುಲ್ ಗಾಂದಿ ಅವರೊಬ್ಬರನ್ನೇ ಅವಲಂಬಿಸಬೇಕಾದ ಸ್ಥಿತಿಯೇನೂ ಇಲ್ಲ. ಅದೂ ಅಲ್ಲದೆ ಕರ್ನಾಟಕದಲ್ಲಿ ಕಾಂಗ್ರೇಸ್ಸಿಗೆ ತನ್ನದೇ ಆದ ಮತಬ್ಯಾಂಕೊಂದು ಯಾವತ್ತಿಗೂ ಇದೆ.

ಇನ್ನು ಪದೇ ಪದೇ ನರೇಂದ್ರಮೋದಿಯವರೂ ಸೇರಿದಂತೆ ಬಾಜಪದ ರಾಷ್ಟ್ರೀಯ ನಾಯಕರುಗಳು ಹೇಳುವ ಭ್ರಷ್ಟಾಚಾರದ ವಿಚಾರ ಕರ್ನಾಟಕದ ಮಟ್ಟಿಗೆ ಅಪ್ರಸ್ತುತವಾಗುವ ಅಪಾಯವಿದೆ. ಏಕೆಂದರೆ 2008ರಿಂದ 2013ರವರೆಗು ಇಲ್ಲಿ ಅಧಿಕಾರ ನಡೆಸಿದ ಬಾಜಪ ಸರಕಾರದ ಹಗರಣಗಳು  ಕಾಂಗ್ರೇಸ್ಸಿನ ಬಗ್ಗೆ ಮಾತಾಡುವ ಬಾಜಪ ನಾಯಕರುಗಳ ನೈತಿಕತೆಯನ್ನು ಇಲ್ಲವಾಗಿಸಿದೆ.

ಅದೇ ರೀತಿ ಬಾಜಪದವರ ಅಭಿವೃದ್ದಿಯ ಮಂತ್ರವೂ ಇಲ್ಲಿ ಕೆಲಸ ಮಾಡುವುದು ಅಸಾದ್ಯ. ಯಾಕೆಂದರೆ ಗುಜರಾತಿನ ಚುನಾವಣೆಯವರೆಗು ಗುಜರಾತ್ ಮಾಡೆಲ್ ಬಗ್ಗೆ ಮಾತನಾಡುತ್ತಿದ್ದ  ಮೋದಿಯವರೇ ಸ್ವತ: ಈಗ ಗುಜರಾತ್ ಮಾಡೆಲ್ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದಂತೆ ಕಾಣುತ್ತಿದೆ. ‘ಗುಜರಾತ್ ಮಾಡೆಲ್’ ಎನ್ನುವುದೇ ಒಂದು ದೊಡ್ಡ ಮಿಥ್ಯೆ ಎನ್ನುವುದನ್ನು ಸ್ವತ: ಗುಜರಾತಿಗರೇ ತೋರಿಸಿಕೊಟ್ಟಿದ್ದಾರೆ. ಅದೂ ಅಲ್ಲದೇ ಉತ್ತರ ಭಾರತದ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಸಾಕಷ್ಟು ಅಭಿವೃದ್ದಿಯನ್ನು ಸಾದಿಸಿದೆ. ಅದರಲ್ಲೂ   ಮಹಿಳೆಯರ ಮತ್ತು ಮಕ್ಕಳ ಅಪೌಷ್ಠಿಕತೆಯ ವಿಚಾರದಲ್ಲಿ, ಆಹಾರ ಉತ್ಪಾದನೆಯಲ್ಲಿ ಕರ್ನಾಟಕ ಗುಜರಾತಿನಂತಹ ರಾಜ್ಯಗಳಿಗಿಂತ ಮೇಲಿನ ಸ್ಥಾನದಲ್ಲಿದೆ. ಇನ್ನು ಹೂಡಿಕೆದಾರರ ವಿಚಾರಕ್ಕೆ ಬಂದರೆ ಇವತ್ತಿಗೂ  ನಮ್ಮ ರಾಜ್ಯ ಹೂಡಿಕೆದಾರರ ನೆಚ್ಚಿನ ರಾಜ್ಯವೆನಿಸಿದೆ. ಬಹುಶ; ವಿದ್ಯುತ್ ಹೊರತು ಪಡಿಸಿದರೆ ನಮ್ಮ ರಾಜ್ಯ ಉತ್ತರಭಾರತದ ರಾಜ್ಯಗಳಿಗಿಂತ ಕಳಪೆಯೇನಲ್ಲ. ಮೋದಿಯವರ ‘ಸಬ್ ಕಾ ಸಾಥ್- ಸಭ್ ಕಾ ವಿಕಾಸ್’ ವಿಷಯದಲ್ಲಿ ನಿಜವಾದ ‘ಸಭ್ ಕಾ ಸಾಥ್’ ನಿಬಾಯಿಸುತ್ತಿರುವುದು ಕರ್ನಾಟಕವೇ ಎನ್ನಬಹುದು.

ಇನ್ನು ಕರ್ನಾಟಕದಲ್ಲಿ ಬಾಜಪಕ್ಕೆ ಗೆಲ್ಲಲು ಉಳಿಯಬಹುದಾದ ಏಕೈಕ ದಾರಿ ಎಂದರೆ ಬಹುಸಂಖ್ಯಾತ ಹಿಂದೂ ಮತಬ್ಯಾಂಕಿನ ದೃವೀಕರಣವಷ್ಟೆ. ಕಳೆದ ಕೆಲ ತಿಂಗಳುಗಳಿಂದ ಬಾಜಪದ ನಾಯಕರುಗಳ ಕಾರ್ಯತಂತ್ರವನ್ನು ನೋಡಿದರೆ ಅದು ಹಿಂದೂ ಮತಬ್ಯಾಂಕಿನ ದೃವೀಕರಣದತ್ತಲೇ ಗಮನ ಕೊಟ್ಟಂತೆ ಕಾಣುತ್ತಿದೆ. ಕರಾವಳಿ ಭಾಗದಲ್ಲಿ ಸಂಘಪರಿವಾರದ ಕಾರ್ಯಕರ್ತರುಗಳ ಕೊಲೆಯ ವಿಚಾರದಲ್ಲಿ ಅದು ನಡೆದುಕೊಂಡ ರೀತಿ, ಮೊನ್ನೆ ಹುಣಸೂರಿನಲ್ಲಿ ಹನುಮಜಯಂತಿಯಂದು ಅದುಕೋಮುಗಲಭೆಯನ್ನು ಹುಟ್ಟು ಹಾಕಲು ನಡೆಸಿದ ಪ್ರಯತ್ನ, ಇತ್ತೀಚೆಗೆ ಶಿರಸಿ ನಗರದಲ್ಲಿ ನಿಷೇದಾಜ್ಞೆಯನ್ನೂ ಮೀರಿಮೆರವಣಿಗೆ ನಡೆಸಲು ಪ್ರಯತ್ನಿಸಿ  ಸಮಾಜದ ಸೌಹಾರ್ದತೆಗೆ ಬೆಂಕಿ ಹಚ್ಚಲು ಮುಂದಾದ ಘಟನೆಗಳನ್ನೆಲ್ಲ ನೋಡಿದರೆ  ಇದು ಅರ್ಥವಾಗುತ್ತದೆ.

ಇವೆಲ್ಲವನ್ನೂ ಗಮನಿಸಿದರೆ ಗುಜರಾತಿನ  ರಾಜಕೀಯ ಪರಿಸ್ಥಿತಿಗೂ ಕರ್ನಾಟಕಕ್ಕೂ ಯಾವುದೇ ಹೋಲಿಕೆ ಮಾಡಲಾಗುವುದಿಲ್ಲ.  ಹಾಗಾಗಿ ಗುಜರಾತಿನ ಪಲಿತಾಂಶಗಳು ನಮ್ಮ ರಾಜ್ಯದ ಮಲೆ ಯಾವುದೇ ಪರಿಣಾಮವನ್ನೂ ಉಂಟುಮಾಡಲಾರದೆಂಬುದು ಖಚಿತ. ಅದೂ ಅಲ್ಲದೆ ಗುಜರಾತಿನಂತೆ ಕರ್ನಾಟಕದಲ್ಲಿ ನೇರಾನೇರಾ ಹಣಾ ಹಣಿಯಿಲ್ಲ. ಬದಲಿಗೆ ಇವೆರಡೂ ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯವಾಗಿ ಜನರ ಮುಂದೆ ಜಾತ್ಯಾತೀತ ಜನತಾದಳ ಇದೆ. ಕಾಂಗ್ರೇಸ್ಸನ್ನು ತಿರಸ್ಕರಿಸುವ ಜನತೆಗೆ ಬಾಜಪವೇ ಆಗಬೇಕೆಂದೇನೂ ಇಲ್ಲ. ಗುಜರಾತಿನಲ್ಲಿ ಬಾಜಪವನ್ನು ತಿರಸ್ಕರಿಸಿದರೆ ಅವರಿಗಿದ್ದ ಏಕೈಕ ಪರ್ಯಾಯ ಕಾಂಗ್ರೇಸ್ ಮಾತ್ರ.. ಹಾಗಾಗಿ  ಕಾಂಗ್ರೇಸ್ಸನ್ನು ಎಂದೂ ಬೆಂಬಲಿಸದ, ಆದರೆ ಬಾಜಪದ ವಿರುದ್ದವಾಗಿದ್ದ ಜನತೆ ಅಂತಿಮವಾಗಿ ಬಾಜಪಕ್ಕೇ ಮತಹಾಕಬೇಕಾಗಿ ಬಂದಿತ್ತು. ಕರ್ನಾಟಕದ ಮಟ್ಟಿಗೆ ಮತದಾರರಿಗೆ ಮೂರನೇ ಆಯ್ಕೆಯೊಂದು ಇದ್ದು, ಕಾಂಗ್ರೇಸ್ ವಿರೋಧಿ ಮತಗಳು ಬಾಜಪಕ್ಕೆ ಮಾತ್ರ ಹೋಗುತ್ತವೆಯೆಂದು ನಂಬಿಕೊಳ್ಳುವುದು ಮೂರ್ಖತನ. ಹಾಗಾಗಿ ಗುಜರಾತಿನ ಪಲಿತಾಂಶಗಳಂತೆಯೇ ಇಲ್ಲಿ ಬಾಜಪ ಗೆದ್ದುಬಿಡುತ್ತದೆ ಎಂದು ನಂಬುವುದು ತರವಲ್ಲ.

  ಇಷ್ಟಾದರೂ ಪ್ರದಾನಮಂತ್ರಿಗಳಾದ ನರೇಂದ್ರ ಮೋದಿಯವರ ಮೇಲಿನ ಜನರ ನಂಬಿಕೆಯಿನ್ನೂ ಸಂಪೂರ್ಣವಾಗಿ  ಇಲ್ಲವಾಗಿಲ್ಲ.  ನಾವೇನೆ ಹೇಳಿದರು ಬಹುಸಂಖ್ಯಾತ ಅನಕ್ಷರಸ್ಥ ಜನರಿನ್ನೂ ಒಳ್ಳೆಯ ದಿನಗಳ ನಿರೀಕ್ಷೆಯಲ್ಲಿ ಮೋದಿಯವರ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ. ಜನತೆಯ ಈ ನಂಬಿಕೆಯನ್ನು ತನಗೆ ಪೂರಕವಾಗಿ ಬಳಸಿಕೊಳ್ಳುವಲ್ಲಿ ಬಾಜಪ ಯಶಸ್ವಿಯಾದರೆ  ಕಾಂಗ್ರೇಸ್ಸಿಗೆ ಕಷ್ಟವಾಗಬಹುದು.

ಅದರೆ ಬಾಜಪ ನಡೆಸುತ್ತಿರುವ ಪರಿವರ್ತನಾ ರ್ಯಾಲಿಯ ವಿಪಲತೆಯನ್ನು ಹತಾಶೆಯಿಂದ ನೋಡುತ್ತಿರುವ ಬಾಜಪದ ಕಾರ್ಯಕರ್ತರನ್ನು ಒಂದಿಷ್ಟಾದರೂ ಹುರಿದುಂಬಿಸಲು  ಗುಜರಾತಿನ ಪಲಿತಾಂಶಗಳನ್ನು ಅದರ ನಾಯಕರುಗಳು ಬಳಸಿಕೊಳ್ಳಬಹುದಷ್ಟೆ. ಮಿಕ್ಕಂತೆ ಕರ್ನಾಟಕ ರಾಜ್ಯದ ಚುನಾವಣೆಗಳ ವಿಷಯ ಮತ್ತು ವೈವಿಧ್ಯತೆಯೇ ಬೇರೆ..

 

Leave a Reply

Your email address will not be published.