ಕರ್ನಾಟಕದಲ್ಲಿ ಮತ್ತೆ ಶುರುವಾದ ಪಕ್ಷಾಂತರ ಪರ್ವ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

‘ಆಯಾರಾಂ-ಗಯಾರಾಂ’

ಅಂತೂ ಕರ್ನಾಟಕದಲ್ಲಿ ಪಕ್ಷಾಂತರ ಪರ್ವವೊಂದು ಮತ್ತೆ ಶುರುವಾಗಿದೆ.. ತಮ್ಮ ಕ್ಷೇತ್ರಗಳಲ್ಲಿ ನೆಲೆಯೇ ಇಲ್ಲದವರು,ನೆಲೆಯಿದ್ದೂ ಮುಂದಿನ ಚುನಾವಣೆಗಳಲ್ಲಿ ಗೆಲ್ಲುವ ಭರವಸೆಯಿಲ್ಲದವರೂ, ತಮ್ಮ ವೈಯುಕ್ತಿಕ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಹವಣಿಸುತ್ತಿರುವವರೂ,  ಹೀಗೆ  ನಮ್ಮ ಹಲವು ರಾಜಕಾರಣಿಗಳು ಪಕ್ಷಾಂತರ ಮಾಡುತ್ತ  ಪ್ರಜಾಪ್ರಭುತ್ವದ ಮೌಲ್ಯಗಳನ್ನೇ ಪ್ರಶ್ನಿಸಬೇಕಾದಂತಹ ವಾತಾವರಣವೊಂದನ್ನು ಸೃಷ್ಠಿಸುತ್ತಿದ್ದಾರೆ.

ಪಕ್ಷಾಂತರ ಎನ್ನುವುದು ಇಂಡಿಯಾದ ರಾಜಕಾರಣದ ಮಟ್ಟಿಗೆ ಹೊಸತೇನಲ್ಲ. ಇಂತಹ ಪಕ್ಷಾಂತರಿಗಳ ಕುರಿತಾಗಿಯೇ ಹಿಂದಿ ಬಾಷೆಯಲ್ಲಿ ‘ಆಯಾ ರಾಂ-ಗಯಾರಾಂ’ ಎನ್ನುವ ಒಂದು ವಿಶೇಷ ನಾಣ್ನುಡಿಯೇ ಸೃಷ್ಠಿಯಾಗಿತ್ತು. ಅದು 1967ರ ಸಮಯ: ಹರಿಯಾಣ ರಾಜ್ಯದ ಗಯಾರಾಂ ಎನ್ನುವ ಕಾಂಗ್ರೇಸ್ ಪಕ್ಷದ ಒಬ್ಬ ಶಾಸಕ ಕೇವಲ ಹದಿನೈದು ದಿನಗಳ ಅಂತರದಲ್ಲಿ ಮೂರು ಬಾರಿ ಪಕ್ಷಗಳನ್ನು ಬದಲಾಯಿಸಿದ್ದರು. ಮೊದಲು ಕಾಂಗ್ರೇಸ್ ಪಕ್ಷದಿಂದ ಯುನೈಟೆಡ್ ಫ್ರಂಟ್ ಸೇರಿದ್ದರು. ಕೆಲವೇ ದಿನದಲ್ಲಿ ಮತ್ತೆ ಕಾಂಗ್ರೇಸ್ಸಿಗೆ ವಾಪಾಸಾದರು. ಆದರೆ ಹೀಗೆ ವಾಪಾಸಾದ ಒಂಬತ್ತೆ ಗಂಟೆಗಳಲ್ಲಿ ಮತ್ತೆ ಯುನೈಟೆಡ್ ಫ್ರಂಟಿಗೆ ಹಿಂದಿರುಗಿ ರಾಜಕೀಯ ಪಕ್ಷಾಂತರಕ್ಕೆ ಹೊಸ ಮುನ್ನುಡಿ ಬರೆದಿದ್ದರು. ಬಹುಶ: ವಿಶ್ವದಲ್ಲೇ ಇದು ಅತ್ಯಂತ ಕ್ಷಿಪ್ರಗತಿಯ ಪಕ್ಷಾಂತರ ಪ್ರಕರಣ ಎನಿಸುತ್ತದೆ. ನಂತರದಲ್ಲಿದು ಅನೇಕ ವ್ಯಂಗ್ಯಚಿತ್ರಗಳಿಗೆ, ಹಾಸ್ಯ ಪ್ರಸಂಗಗಳ ಬರಹಗಳಿಗೆ ಕಾರಣವಾಯಿತು. ಅಲ್ಲಿಂದೀಚೆಗೆ ಪಕ್ಷಾಂತರಿಗಳನ್ನು ‘ಆಯಾರಾಂ-ಗಯಾರಾಂ’  ಎನ್ನುವ ರೂಢಿ ಪ್ರಾರಂಭವಾಯಿತು.

ಇದೀಗ  ಗಯಾರಾಂ ಅಂತಹ ರಾಜಕಾರಣಿಗಳು ಅಪರೂಪವೇನಲ್ಲ. ಹಾಗೇ ಸುಮ್ಮನೆ ನಮ್ಮ ರಾಜಕೀಯ ಪಕ್ಷಗಳ ಕಡೆ ಕಣ್ಣಾಡಿಸಿದರೆ ಸಾಕು. ಬೇಕಾದಷ್ಟು ಗಯಾರಂಗಳು ಸಿಗುತ್ತಾರೆ.ಇನ್ನು ನಮ್ಮ ರಾಜ್ಯವೇನೂ ಇದರಿಂದ ಹೊರತಾಗೇನು ಇಲ್ಲ. ಹಾಗಾದರೆ ಯಾಕೆ ರಾಜಕಾರಣಿಯೊಬ್ಬ ತಾನು ನಂಬಿಕೊಂಡ ಪಕ್ಷವನ್ನು ಬಿಟ್ಟು ಇನ್ನೊಂದು ಪಕ್ಷವನ್ನು  ಸೇರಿ ಪಕ್ಷಾಂತರಿ ಎನಿಸಿಕೊಳ್ಳುತ್ತಾನೆ. ಪಕ್ಷಾಂತರಿ ಎನ್ನುವ ಶಬ್ದ ಸಾಮಾಜಿಕವಾಗಿ, ರಾಜಕೀಯವಾಗಿ ಅಷ್ಟೇನೂ ಗೌರವ ಹುಟ್ಟಿಸುವ ಶಬ್ದವಲ್ಲದಿದ್ದರೂ ಸಹ ರಾಜಕಾರಣಿಗಳು ಮತ್ತೆಮತ್ತೆ ಅದನ್ನೇ ಮಾಡುವುದರ ಹಿಂದಿರುವ ರಹಸ್ಯವಾದರೂ ಏನು? ಎಂಬುದನ್ನು ನೋಡಿದರೆ ಉತ್ತರಕ್ಕೆ ತೀರಾ ತಲೆ ಕೆಡಿಸಿಕೊಂಡು ಹುಡುಕಬೇಕಿಲ್ಲ. ಯಾಕೆಂದರೆ  ಶಕ್ತಿ ರಾಜಕಾರಣದಲ್ಲಿ ಹೇಗಾದರು ಮಾಡಿ ಆಧಿಕಾರ ಗಿಟ್ಟಿಸಿಕೊಳ್ಳುವುದಷ್ಟೇ ಪಕ್ಷಾಂತರದ ಏಕೈಕ ಗುರಿಯಾಗಿರುತ್ತದೆ. ಆದರೆ ನಮ್ಮ ರಾಜಕಾರಣಿಗಳ ವರಸೆಯೇ ಬೇರೆ. ಪ್ರತಿ ಸಾರಿ  ಪಕ್ಷಾಂತರ ಮಾಡುವಾಗಲೂ ಅವರು  ನೀಡುವ ಕಾರಣಗಳು ಮಾತ್ರ ಅತ್ಯಂತ ಉದಾತ್ತವಾದವುಗಳು. ಅವುಗಳತ್ತ ನೋಡೋಣ:

ಪಕ್ಷಾಂತರಿಯೊಬ್ಬ ತಾನು ಪಕ್ಷ ಬಿಡುವಾಗ ಕೊಡುವ ಪತ್ರಿಕಾ ಹೇಳಿಕೆಗಳು ಹೇಗಿರುತ್ತವೆ ಮತ್ತು ವಾಸ್ತವತೆ ಏನಿರುತ್ತದೆ ಎಂಬುದನ್ನು ನೀವೇ ನೋಡಿ:

1.ಸೈದ್ದಾಂತಿಕವಾಗಿ ಈಗ ನಾನಿರುವ ಪಕ್ಷದಲ್ಲಿ  ಉಸಿರುಗಟ್ಟುತ್ತಿದೆ. ಆಂತರೀಕ ಪ್ರಜಾಸತ್ತೆ ಈ ಪಕ್ಷದಲ್ಲಿ ನಾಶವಾಗಿ, ಉಸಿರುಗಟ್ಟುವ ವಾತಾವರಣ ಉದ್ಭವವಾಗಿದೆ.(ವಾಸ್ತವ-ಅವನಿಗೆ ಸಿದ್ದಾಂತದ ಗಂಧಗಾಳಿಯೂ ಗೊತ್ತಿರುವುದಿಲ್ಲ.)

2.ಇಲ್ಲಿ  ಪಕ್ಷದ ನಿಷ್ಠಾವಂತ ಕಾರ್ಯಕರ್ತರುಗಳಿಗೆ ಮನ್ನಣೆ ಸಿಗುತ್ತಿಲ್ಲ.ನನ್ನ ಕಾರ್ಯಕರ್ತರುಗಳನ್ನು ಯಾರೂ ಕೇಳುತ್ತಿಲ್ಲ. ( ವಾಸ್ತವ-ಸ್ವತ: ಅವನೇ ಕಾರ್ಯಕರ್ತರುಗಳನ್ನು ಕ್ಯಾರೆ ಎಂದಿರುವುದಿಲ್ಲ.)

3.ನನ್ನ ವಿರೋಧಿಗಳಿಗೆ ಮತ್ತು ಪಕ್ಷವಿರೋಧಿಗಳಿಗೆ ಮಣೆ ಹಾಕಲಾಗುತ್ತಿದೆ.(ವಾಸ್ತವ- ಅವನ ವಿರೋಧಿಗಳನ್ನೆಲ್ಲ ಪಕ್ಷವಿರೋಧಿಗಳೆಂದು ಬಿಂಬಿಸುವಲ್ಲಿ ಅವನು ನಿಪುಣ)

4.ನನ್ನ ಕ್ಷೇತ್ರದ ಅಭಿವೃದ್ದಿಗೆ ಸಾಕಷ್ಟು ಅನುದಾನ ದೊರೆಯುತ್ತಿಲ್ಲ.(ವಾಸ್ತವ- ಅವನೇ ಅದಿಕಾರದಲ್ಲಿದ್ದಾಗಲೂ ಕ್ಷೇತ್ರಕ್ಕೆ ನಯಾ ಪೈಸೆಯ ಕೆಲಸ ಮಾಡಿರುವುದಿಲ್ಲ.)

5.ಕ್ಷೇತ್ರದ ಬಹುಪಾಲು ಜನ ಪಕ್ಷ ತೊರೆಯುವಂತೆ ನನಗೆ ಒತ್ತಾಯಿಸುತ್ತಿದ್ದಾರೆ.( ಒಬ್ಬನೇ ಒಬ್ಬನೂ ಅವನ ಮನೆಬಾಗಿಲಿಗೆ ಹೋಗಿರುವುದಿಲ್ಲ.)

  1. ಪಕ್ಷದ ನಾಯಕರ ನಡವಳಿಕೆಗಳಿಂದ ನನ್ನ ಸ್ವಾಬಿಮಾನಕ್ಕೆ ಧಕ್ಕೆ ಬರುತ್ತಿದೆ(ವಾಸ್ತವ- ಎಲ್ಲಾ ಮಾನವನ್ನು ಬಿಟ್ಟೇ ಅವನು ಅದೇ ನಾಯಕರುಗಳ ಮನೆಬಾಗಿಲು ಕಾದಿರುತ್ತಾನೆ)

ಹೀಗೆ ಪಕ್ಷಾಂತರ ಎನ್ನುವುದು ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಒಂದು ಪಿಡುಗಾಗಿದೆ. ಹಿಂದೆಲ್ಲ ನಿಜವಾದ ಸೈದ್ದಾಂತಿಕ ಭಿನ್ನಮತಗಳಿಂದ ಪಕ್ಷಾಂತರಗಳು ನಡೆಯುತ್ತಿದ್ದವು. ಆದರೆ ಅರವತ್ತರ ದಶಕದ ಹೊತ್ತಿಗೆ ಸ್ವಾತಂತ್ರಾಸಮಯದ ಬಹುತೇಕ ರಾಜಕೀಯ ಆದರ್ಶಗಳು, ಉದಾತ್ತಮೌಲ್ಯಗಳು ಕಣ್ಮರೆಯಾಗಿ, ಅಧಿಕಾರ ಹೊಂದುವುದೇ ರಾಜಕಾರಣದ ಪರಮ ಗುರಿಯಾಗಿ ಬಿಟ್ಟಿತು. ಹಾಗಾಗಿ ನಂತರದಲ್ಲಿ ನಡೆದ ಬಹುತೇಕ ಪಕ್ಷಾಂತರಗಳು ಸರಕಾರವೊಂದರ ಭಾಗವಾಗುವ ಒಂದು ಸರಳ ಸುಲಭ ದಾರಿಯೆಂದು ಪರಿಗಣನೆಯಾಯಿತು. ಇಂತಹ ಪಕ್ಷಾಂತರಗಳು ಕರ್ನಾಟಕಕ್ಕೇನು ಹೊಸವಲ್ಲ ಮತ್ತು ಇವತ್ತಿಗೂ ಅವು ನಿರಂತರವಾಗಿ ನಡೆಯುತ್ತಲೇ ಇವೆ. ಈ ಬಗ್ಗೆ ಚರ್ಚಿಸಲು ನಾನು ಬಹಳ ಹಿಂದಕ್ಕೇನೂ ಹೋಗುವುದಿಲ್ಲ ಮತ್ತು ಅದೀಗ ಪ್ರಸ್ತುತವೂ ಅಲ್ಲ. ವರ್ತಮಾನದ ರಾಜ್ಯ ರಾಜಕಾರಣದಲ್ಲಿ ನಡೆಯಲು ಶುರುವಾಗಿರುವ ಪಕ್ಷಾಂತರಗಳ ಬಗ್ಗೆ  ಒಂದಷ್ಟು ಅವಲೋಕಿಸುವುದಷ್ಟೆ ಈ ಲೇಖನದ ಉದ್ದೇಶ.

ಕರ್ನಾಟಕದ ರಾಜ್ಯ ವಿದಾನಸಭಾ ಚುನಾವಣೆಗಳಿಗೆ ಇನ್ನೂ ಸರಿಸುಮಾರು ಹದಿನೈದು ತಿಂಗಳುಗಳಿವೆ. ಕಳೆದ ಮೂರುವರೆ ವರ್ಷದಿಂದ(ಆಡಳಿತ ಪಕ್ಷದೊಳಗಿನ ಆಂತರೀಕ ಭಿನ್ನಮತಗಳೇನೇ ಇರಲಿ,) ಸ್ಥಿರವಾದ ಸರಕಾರವೊಂದು  ಸ್ಥಾಪನೆಯಾಗಿ, ಸಾಂವಿದಾನಿಕ ಚೌಕಟ್ಟಿನಲ್ಲಿ ತನ್ನ ಕರ್ತವ್ಯಗಳನ್ನು ನಿಬಾಯಿಸುತ್ತಿದೆ. ಇದರಲ್ಲಿ ಅದು ಎಷ್ಟರಮಟ್ಟಿಗೆ ಯಶಸ್ವಿಯಾಗಿದೆಯೊ ವಿಫಲವಾಗಿದೆಯೊ ಎನ್ನುವ ಚರ್ಚೆಯನ್ನು ನಾನಿಲ್ಲಿ ಮಾಡಲು ಹೊರಟಿಲ್ಲ.  ಸಾಮಾನ್ಯವಾಗಿ ಪಕ್ಷಾಂತರಗಳು ನಡೆಯುವುದು ಇನ್ನೇನು ಚುನಾವಣೆಗಳು ಎರಡು ಮೂರು ತಿಂಗಳುಗಳಿವೆ ಎನ್ನುವಾಗ. ಆದರೆ ಈ ಬಾರಿ ಪರಿಸ್ಥಿತಿ ತುಂಬಾ ವಿಭಿನ್ನವಾಗಿದೆ. ಅಧಿಕೃತ ವಿರೋಧಪಕ್ಷವಾದ ಬಾಜಪ  ಮುಂದಿನ ಬಾರಿಯ ಚುನಾವಣೆಯಲ್ಲಿ ಗೆದ್ದು ತಾನು ಅಧಿಕಾರಕ್ಕೆ ಬಂದೇ ಬರುತ್ತೇನೆ ಎಂಬ ಅತೀವ ಆತ್ಮವಿಶ್ವಾಸದಲ್ಲಿದೆ. ಅದರ ಇಂತಹ ವಿಶ್ವಾಸಕ್ಕೆ ಕಾರಣ ಕಳೆದಬಾರಿ ಬಾಜಪದ ಸೋಲಿಗೆ ಕಾರಣರಾಗಿದ್ದ ಮಾಜಿಮುಖ್ಯಮಂತ್ರಿಗಳಾದ  ಯಡಿಯೂರಪ್ಪನವರು ಮರಳಿ ಪಕ್ಷಕ್ಕೆ ಬಂದು ಅದರ ರಾಜ್ಯಾದ್ಯಕ್ಷರಾಗಿರುವುದು.

ಇದರಿಂದಾಗಿ ರಾಜ್ಯದ ಬಹುದೊಡ್ಡ ಸಮುದಾಯವೊಂದು ತನ್ನ ಪರವಾಗಿ ನಿಲ್ಲಲಿದೆಯೆಂಬುದು ಅದರ  ನಂಬಿಕೆ. ಇದರ  ಜೊತೆಗೆ ಜನತೆಗೆ ಸಿದ್ದರಾಮಯ್ಯನವರ ಬಗೆ ಇದ್ದ ಅತಿಯಾದ ನಿರೀಕ್ಷೆಯೇ ಕಾಂಗ್ರೇಸ್ಸಿಗೆ ಸಂಕಟ ತರುವುದರಲ್ಲಿದೆ. ಕಾಂಗ್ರೇಸ್ ಪಕ್ಷವನ್ನು ಹೊರತು ಪಡಿಸಿಯೂ, ಶ್ರೀ ಸಿದ್ದರಾಮಯ್ಯನವರ ಪ್ರಾಮಾಣಿಕತೆ, ಕರ್ತವ್ಯಪರತೆ ಮತ್ತು ಆಡಳಿತ ದಕ್ಷತೆಯ ಬಗ್ಗೆ ಜನರಿಗೆ ಅಪಾರ ನಂಬುಗೆ ಇದ್ದುದು ನಿಜ. ಆದರೆ ಕಾಂಗ್ರೇಸ್ಸಿನಂತಹ ರಾಷ್ಟ್ರೀಯ ಪಕ್ಷದಲ್ಲಿ ಸಿದ್ದರಾಮಯ್ಯನವರು  ವೈಯುಕ್ತಿಕವಾಗಿ ಯಾವುದೇ ನಿರ್ಣಯಗಳನ್ನೂ ತೆಗೆದುಕೊಳ್ಳುವುದು ಸಾದ್ಯವಿಲ್ಲ. ಜೊತೆಗೆ ಆ ಪಕ್ಷದ ಅನಾದಿಕಾಲದ ಹೈಕಮ್ಯಾಂಡನ್ನು ಮೀರಿ ಅವರು ಸರಕಾರ ನಡೆಸುವುದು ಸಾದ್ಯವಾಗುತ್ತಲೇ ಇಲ್ಲ. ಇವೆಲ್ಲದರಿಂದ ಜನತಾ ದಳದ ಸರಕಾರಗಳಲ್ಲಿ ಉಪಮುಖ್ಯಮಂತ್ರಿಯಾಗಿ,  ಹಣಕಾಸು ಸಚಿವರಾಗಿ ಅವರು ತೋರಿಸಿದ ದಕ್ಷತೆಯನ್ನು ಈಗ ತೋರುವುದು ಸಾದ್ಯವಾಗುತ್ತಿಲ್ಲ. ಜನರಿಗೆ ಈ ಕುರಿತು ಬಹುದೊಡ್ಡ ನಿರಾಸೆಯಾಗಿರುವುದು ನಿಜ. ಹೀಗಾಗಿ ಕಾಂಗ್ರೇಸ್ ಸರಕಾರದ ಬಗ್ಗೆ ಜನರಲ್ಲಿ ಅಪಾರವಾದ ವಿಶ್ವಾಸವಾಗಲಿ ಉಗ್ರ ಅಭಿಮಾನವಾಗಲಿ ಇರುವಂತೆ ಕಂಡು ಬರುತ್ತಿಲ್ಲ.

ಇವೆಲ್ಲದರ ಜೊತೆಗೆ ಬಲಪಂಥೀಯ ಸಿದ್ದಾಂತಗಳ ಬಹುತೇಕ ಮಾಧ್ಯಮಗಳು ಸರಕಾರದ ವಿರುದ್ದ ಒಂದು ರೀತಿಯ ನಕಾರಾತ್ಮಕ ಪ್ರಚಾರ ಪ್ರಾರಂಬಿಸಿವೆ. ಬಾಜಪದ ಬಗ್ಗೆ  ಒಲವು ತೋರಿಸುತ್ತಿರುವ ಅನೇಕ ಮಾಧ್ಯಮಗಳು 2014ರ ಚುನಾವಣೆಯಲ್ಲಿ ಹೇಗೆ ಮೋದಿಯವರ ಮತ್ತು ಬಾಜಪದ ವಕ್ತಾರರಂತೆ ಕೆಲಸ ಮಾಡಿದವೊ ಅದೇ ರೀತಿ ಈಗಲೂ ಮಾಡುತ್ತಿವೆ.  ಇವೆಲ್ಲವನ್ನು ಹತ್ತಿರದಿಂದ ಗಮನಿಸುತ್ತಿರುವ ಕೆಲವು ನಾಯಕರುಗಳು ಮುಂದಿನ ಚುನಾವಣೆಯಲ್ಲಿ ಬಾಜಪ ಗೆಲ್ಲುತ್ತದೆಯೆಂದು ಬಾವಿಸಿಕೊಂಡು ಆ ಪಕ್ಷಕ್ಕೆ ವಲಸೆ ಹೋಗಲು ಶುರು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿಯೇ ನಾವಿವತ್ತು ಪಕ್ಷಾಂತರಗಳನ್ನು ನೋಡಬೇಕಿದೆ. ಕಾಂಗ್ರೇಸ್ ಮುಳುಗುತ್ತಿರುವ ಹಡಗು ಎಂದು ಭ್ರಮಿಸಿಕೊಂಡಿರುವ ಜನತಾದಳ ಮತ್ತು ಕಾಂಗ್ರೇಸ್ಸಿನ ಹಲವಾರು  ಹಾಲಿ ಮತ್ತು ಮಾಜಿ ಶಾಸಕರುಗಳು, ಮಂತ್ರಿಗಳು ಗೆಲ್ಲಬಹುದೆಂಬ ನಿರೀಕ್ಷೆಯಲ್ಲಿರುವ ಬಾಜಪದ ಕಡೆ  ಗುಳೆ ಹೋಗಲು ತಯಾರಾಗಿದ್ದಾರೆ.

ಬಾಜಪವು ಇಂತಹ ಮುಖೇಡಿ ನಾಯಕರುಗಳನ್ನು ಕೆಂಪುಹಾಸು ಹಾಸಿ ಅವರನ್ನು ಸ್ವಾಗತಿಸಲು ಪ್ರಾರಂಭಿಸಿದೆ. ತಮಾಷೆ ಎಂದರೆ ಹೀಗೆ ಮಾತೃಪಕ್ಷವನ್ನು ತೊರೆದು ಬರುವವರಿಗೆ ಮುಂದಿನ ಚುನಾವಣೆಯಲ್ಲಿ ಅವರವರ ಕ್ಷೇತ್ರಗಳಲ್ಲಿ ಪಕ್ಷದ ಟಿಕೇಟುಗಳನ್ನು ನೀಡುವ ವಚನವನ್ನೂ ಬಾಜಪ ಮಾಡಿದೆಯೆಂಬ ಮಾತು ರಾಜಕೀಯವಲಯದಲ್ಲಿ ಕೇಳಿ ಬರುತ್ತಿದೆ.  ಇಲ್ಲದೇ ಹೋದರೆ ಯಾವ ನಾಯಕನೂ ಉಚಿತವಾಗಿ ಬಾಜಪದ ಸೇವೆ ಮಾಡಲು ಬರುವುದಿಲ್ಲ. ಅಕಸ್ಮಾತ್ ಟಿಕೇಟು ನೀಡಲಾಗದಿದ್ದರೂ ಎಂ.ಎಲ್.ಸಿ. ಮಾಡುವ ಅಥವಾ ಯಾವುದಾದರು ನಿಗಮ ಮಂಡಳಿಯ ಅದ್ಯಕ್ಷತೆಯನ್ನು ನೀಡುವ ಆಮೀಷವನ್ನೂ ಒಡ್ಡಲಾಗಿರುತ್ತದೆ.  ಇಂತಹ ಬಹುತೇಕ ಪಕ್ಷಾಂತರಗಳಲ್ಲಿ ಹಣವೂ ಕೆಲಸ ಮಾಡಿರುವ ಸಾಧ್ಯತೆಯೂ ಇರಬಹುದೇನೊ?

ಈ ಹಿಂದೆ ಆಪರೇಷನ್ ಕಮಲ ಮಾಡಿ ಅನುಭವ ಹೊಂದಿರುವ ಬಾಜಪಕ್ಕೆ ಇದೇನೂ ಹೊಸತಲ್ಲ.  ಚುನಾವಣೆ ಗೆದ್ದ ಕೆಲವೇ ದಿನಗಳಲ್ಲಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಬಾಜಪ ಸೇರಿ ಆಪಕ್ಷದ ಚಿಹ್ನೆ ಪಡೆದು ಹಣಕಾಸಿನ ನೆರವನ್ನೂ ಪಡೆದು, ಮಂತ್ರಿಗಿರಿಯ ದೌಲತ್ತನ್ನು ಅನುಭವಿಸಿದ ಉದಾಹರಣೆಗಳು ನಮ್ಮೆದುರಿಗೇ ಇವೆ. ಹೀಗಾಗಿಯೇ ಸನ್ಮಾನ್ಯ ಯಡಿಯೂರಪ್ಪನವರು ವಾರಕ್ಕೊಂದು ಸಮಾರಂಭ ಮಾಡಿ  ಪಕ್ಷಕ್ಕೆ ಬರುವವರನ್ನು ಸೇರಿಸಿಕೊಳ್ಳುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದು ಹೇಳಿಕೊಂಡಿದ್ದಾರೆ. ಇದೊಂದು ರೀತಿಯ ಹೊಸ ವಿಧಾನ. ಪಕ್ಷದ ಬಾಗಿಲು ಸದಾ ತೆರೆದಿದೆಯೆಂಬ  ರೀತಿಯ ಅರ್ಥವನ್ನು ಹೊಮ್ಮಿಸಿ, ಇತರೇ ಪಕ್ಷಗಳ ಅತೃಪ್ತ ನಾಯಕರುಗಳನ್ನು ಸೆಳೆಯುವ ತಂತ್ರ ಹೂಡಲಾಗಿದೆ. ಯಾಕೆಂದರೆ ಹಿಂದೆಲ್ಲ ಪಕ್ಷಕ್ಕೆ ಸೇರಿದ ಮೇಲೆ ಅವರಿಗೆ ಸ್ವಾಗತದ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಆದರೀಗ ಮೊದಲೇ ಸ್ವಾಗತದ ಕಾರ್ಯಕ್ರಮ ಮುಗಿಸಲಾಗಿದೆ. ಇದೊಂದು ರೀತಿಯಲ್ಲಿ. ಬಸುರಿಯಾಗುವುದಕ್ಕಿಂತ ಮುಂಚೆಯೇ( ಆಗೇ ಆಗುತ್ತಾಳೆ ಎಂಬ ದೃಢ ನಂಬಿಕೆಯೊಂದಿಗೆ) ಸೀಮಂತದ ಸಂಭ್ರಮ ಆಚರಿಸುವಂತಿದೆ.

ಇನ್ನು ಕಾಂಗ್ರೇಸ್ ಪಕ್ಷ ಕೂಡ ಇದೇ ಹಾದಿ ಹಿಡಿದಿದೆ. ಒಂದು ರಾಷ್ಟ್ರೀಯ ಪಕ್ಷವಾಗಿ ಬಾಜಪಕ್ಕಿಂತ  ಯಾವುದರಲ್ಲಿಯೂ ತಾನು ಕಡಿಮೆ ಇಲ್ಲವೆಂಬುದನ್ನು  ಸಾಬೀತು ಪಡಿಸಲು ಅದು ಪ್ರಯತ್ನಿಸುತ್ತಿರುವಂತೆ ಕಾಣುತ್ತಿದೆ. ಹೀಗಾಗಿಯೇ ಅದು ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ಜನತಾದಳದ ಎಂಟು ಜನ ಸದಸ್ಯರನ್ನು ತನ್ನ ಅಭ್ಯಥರ್ಿಗಳಿಗೆ ಮತ ಚಲಾಯಿಸುವಂತೆ ನೋಡಿಕೊಂಡಿತ್ತು. ಆ ಎಂಟೂ ಜನಕ್ಕೆ ಮುಂದಿನ ಚುನಾವಣೆಯಲ್ಲಿ ಟಿಕೇಟು ನೀಡುವ ಮತ್ತು ಇತರೇ ಸಹಾಯವನ್ನು ಮಾಡುವ ಭರವಸೆಯನ್ನು ಅದು ಆಗಲೇ ನೀಡಿರಲೇ ಬೇಕು. ಇಲ್ಲದೇ ಹೋದಲ್ಲಿ ಅವರು ತಮ್ಮ ಪಕ್ಷದ ವಿಪ್  ಮೀರಿ ಮತಚಲಾಯಿಸುವ ದಿಟ್ಟತನ ತೋರುತ್ತಿರಲಿಲ್ಲ. ಇತ್ತೀಚೆಗಿನ ಸುದ್ದಿಯಂತೆ ಆ ಎಂಟುಜನ ಶಾಸಕರಲ್ಲಿ ಒಬ್ಬರನ್ನು ಹೊರತು ಪಡಿಸಿ ಉಳಿದೆಲ್ಲರೂ ಕಾಂಗ್ರೇಸ್ ಸೇರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಇನ್ನು ನಂಜನಗೂಡು ಉಪಚುನಾವಣೆಗಾಗಿ ಕಾಂಗ್ರೇಸ್ ಜನತಾದಳದ ವ್ಯಕ್ತಿಯೊಬ್ಬರನ್ನು ತನ್ನತ್ತ ಸೆಳೆದುಕೊಂಡು ತಾವೇನು ಪಕ್ಷಾಂತರದ ವಿರುದ್ದ ಕರ್ಮಠರೇನಲ್ಲ ಎಂಬುದನ್ನು ಮನವರಿಕೆ ಮಾಡಿ ಕೊಟ್ಟಿದೆ.

ydappaಇನ್ನು ಈ ವಿಷಯದಲ್ಲಿ ಜನತಾದಳ  ಅನಗತ್ಯ ಉತ್ಸಾಹ ತೋರಿಸದೆ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಯಾಕೆಂದರೆ ಮುಂದಿನ ಬಾರಿ ಅದು ಅಧಿಕಾರ ಹಿಡಿದೇ ಹಿಡಿಯುತ್ತದೆಯೆಂಬ ಉಗ್ರ ನಂಬಿಕೆ ಯಾವ ನಾಯಕರಿಗೂ ಇದ್ದಂತಿಲ್ಲ. ಹಾಗಾಗಿ ದಳವನ್ನು ಸೇರಲು ಸದ್ಯಕ್ಕಂತು ಯಾರೂ ಉತ್ಸುಕತೆ ತೋರಿಸುತ್ತಿಲ್ಲ.  ಆದರೆ ಜನತಾದಳ ಬಿಟ್ಟು ಹೋದ ಶಾಸಕರ ಪೈಕಿ ಕೆಲವರಿಗೆ ಕಾಂಗ್ರೇಸ್ ಟಿಕೇಟು ನೀಡಬಹುದೆಂಬ ಹೆದರಿಕೆಯಿಂದ ಈಗಾಗಲೇ ಕಾಂಗ್ರೇಸ್ಸಿನಲ್ಲಿರುವ ಆ ಕ್ಷೇತ್ರಗಳ ನಾಯಕರುಗಳು ಜನತಾದಳದತ್ತ ಮುಖ ಮಾಡಿ ನಿಂತಿದ್ದಾರೆ. ಅದಕ್ಕೆ ಪೂರಕವಾಗಿ ತಮಗೆ ಕೈಕೊಟ್ಟು ಹೋಗಿರುವ ಶಾಸಕರುಗಳನ್ನು ಸೋಲಿಸಲು ಜನತಾದಳ ಕಳೆದಬಾರಿ ಕಾಂಗ್ರೇಸ್ಸಿನಿಂದ ಸ್ಪರ್ದಿಸಿ ಸೋತಿದ್ದ ನಾಯಕರುಗಳಿಗೆ ಟಿಕೇಟಿನ ಆಮೀಷ ಒಡ್ಡಿ ಕಾಯುತ್ತಿದೆ. ನಾಗಮಂಗಲ ಮತ್ತು ಶ್ರೀರಂಗ ಪಟ್ಟಣ ಕ್ಷೇತ್ರಗಳು ಈ ಪಟ್ಟಿಯಲ್ಲಿವೆ ಎನ್ನಲಾಗುತ್ತಿದೆ. ಕೆಲವು ಮೂಲಗಳ ಪ್ರಕಾರ ಯೋಜನಾ ಆಯೋಗದ ಹಾಲಿ ಉಪಾದ್ಯಕ್ಷರಾಗಿರುವವರು ಅವರು ಜನತಾದಳಕ್ಕೆ ಸೇರ್ಪಡೆಯಾಗಬಹುದೆಂಬ ವದಂತಿಗಳಿವೆ. ಆದರೆ ಚುನಾವಣೆ ಘೋಷಣೆಯಾದ ಕೂಡಲೇ ಈ ಚಿತ್ರಣ ಸಂಪೂರ್ಣ ಬದಲಾಗುವ ಸಾಧ್ಯತೆ ಇದೆ. ಯಾಕೆಂದರೆ ಬಾಜಪ ಮತ್ತು ಕಾಂಗ್ರೇಸ್ಸಿನಲ್ಲಿ ಟಿಕೇಟು ಸಿಗದ ಹಲವು ನಾಯಕರುಗಳು ಸಹಜವಾಗಿಯೇ ಜನತಾದಳದತ್ತ ಹೋಗತೊಡಗುತ್ತಾರೆ.  ಆಗ ಗೆಲ್ಲುವ ಸಲುವಾಗಿ ಜನತಾದಳವೂ ಇಂತವರಿಗೆ ಟಿಕೇಟು ನೀಡ ತೊಡಗುತ್ತದೆ.

ಇಂತಹ ಪಕ್ಷಾಂತರಗಳಿಂದ ಇಂಡಿಯಾದ ಪ್ರಜಾಸತ್ತೆಗೆ ಸಮೀಪದಲ್ಲಿ ಯಾವ ಅಪಾಯವೂ ಇಲ್ಲದೇ ಹೋದರೂ, ದೀರ್ಘಕಾಲದಲ್ಲಿ ಪ್ರಜಾಸತ್ತೆಯಲ್ಲಿ ಜನರ ನಂಬಿಕೆ ಕುಸಿಯ ತೊಡಗುತ್ತದೆ ಎಂಬುದಂತು ಸತ್ಯ! ನಿನ್ನೆಯವರೆಗೂ ಕಾಂಗ್ರೇಸ್ಸಿನ  ಘನಘೋರಭ್ರಷ್ಟತೆಯ ಬಗ್ಗೆ  ಮಾತಾಡುತ್ತಿದ್ದವರು ಇವತ್ತು  ಅದು ಹೇಗೆ ಅದೇ ಪಕ್ಷದ ನಾಯಕರುಗಳ ಜೊತೆ ಸೇರಿ ತಮಗೆ ಮತ ನೀಡಿ ಎಂದು ಕೇಳುತ್ತಾರೆ? ಅದೇರೀತಿ ನಿನ್ನೆಯವರೆಗು ಬಾಜಪವನ್ನು ಕೋಮುವಾದಿ ಎಂದು ಜರಿಯುತ್ತಿದ್ದವರು ಇವತ್ತು ಅದೇ ಅಜೆಂಡಾ ಇಟ್ಟುಕೊಂಡು ಮತ ಕೇಳುತ್ತಾರೆ? ಇನ್ನು ಜನತಾದಳವನ್ನು ಅಪ್ಪಮಕ್ಕಳ ಪಕ್ಷವೆಂದು ಲೇವಡಿ ಮಾಡುತ್ತಿದ್ದವರು ಇವತ್ತು ಅದೇ ಅಪ್ಪ ಮಕ್ಕಳ ಬಾವಚಿತ್ರ ತೋರಿಸಿ, ಮತ ಕೇಳುತ್ತಾರೆ? ಇವು ನನ್ನ ಪ್ರಶ್ನೆಗಳಲ್ಲ! ಯಾವತ್ತೂ ಬಹಿರಂಗವಾಗಿ ಮಾತಾಡದ ಜನಸಾಮಾನ್ಯರ ಪ್ರಶ್ನೆಗಳು. ಇವತ್ತು ಸ್ವಗತದಲ್ಲಿರುವಂತೆ  ಕಾಣುತ್ತಿರುವ ಈ ಪ್ರಶ್ನೆಗಳು ಮುಂದೊಂದು ದಿನ ಸಿಡಿಲಿನಂತ ಶಬ್ದಗಳಾಗಿ ಕೇಳಬಹುದೆಂಬುದನ್ನು ರಾಜಕಾರಣಿಗಳು ಮರೆಯಬಾರದು.

 

Leave a Reply

Your email address will not be published.