“ಕಮ್ಯೂನಿಸ್ಟ್ ನಾಯಕನೊಳಗೊಬ್ಬ ಪಾಳೇಗಾರ”

ಕಾಮ್ರೇಡ್ ದೀಪಕ್

ಎಡ ಪಕ್ಷಗಳಲ್ಲಿ ಸಮ್ಮೇಳನಕ್ಕೆ ಒಂದು ಮಹತ್ವದ ಸ್ಥಾನವಿದೆ. ಸಾಮಾನ್ಯವಾಗಿ ಮೂರು ವರ್ಷಕ್ಕೆ ಒಮ್ಮೆ ಎಡ ಪಕ್ಷಗಳ ಘಟಕದಿಂದ ಹಿಡಿದು ರಾಷ್ಟ್ರ ಮಟ್ಟದವರೆಗಿನ ಸಮ್ಮೇಳನಗಳು ನಡೆಯುತ್ತವೆ. ಘಟಕ ಸಮ್ಮೇಳನಗಳಿಂದ ಗ್ರಾಮಕ್ಕೆ, ಗ್ರಾಮದಿಂದ ಹೋಬಳಿಗೆ, ಹೋಬಳಿಯಿಂದ ತಾಲೂಕಿಗೆ, ತಾಲೂಕಿನಿಂದ ಜಿಲ್ಲೆಗೆ, ಜಿಲ್ಲೆಯಿಂದ ರಾಜ್ಯಕ್ಕೆ, ರಾಜ್ಯದಿಂದ ರಾಷ್ಟ್ರಕ್ಕೆ ಪ್ರತಿನಿಧಿಗಳು ಆಯ್ಕೆಯಾಗುತ್ತಾರೆ. ಪ್ರತಿಯೊಂದು ಸಮ್ಮೇಳನದಲ್ಲೂ ಪ್ರತಿನಿಧಿಗಳು ಕೆಲವೊಮ್ಮೆ ಒಮ್ಮತದ ಮೂಲಕ, ಮತ್ತೆ ಕೆಲವೊಮ್ಮೆ ಚುನಾವಣೆಯ ಮೂಲಕ

ತಮಗೆ ಬೇಕಾದ ನಾಯಕತ್ವವನ್ನು ಆಯ್ಕೆಮಾಡಿಕೊಳ್ಳುತ್ತಾರೆ. ಅಲ್ಲಿ ಹಿಂದಿನ ಸಮಿತಿಗಳ ತೀರ್ಮಾನವೇ ಅಂತಿಮವಲ್ಲ. ಯಾರು ಬೇಕಾದರೂ ಚುನಾವಣೆಯಲ್ಲಿ ಭಾಗವಹಿಸಬಹುದು. ಆ ಒಂದು ಸ್ವಾತಂತ್ರವನ್ನು ಎಡ ಪಕ್ಷಗಳು ಇಂದಿಗೂ ತನ್ನ ಪಕ್ಷದ ಕಾರ್ಯಕರ್ತರಿಗೆ ನೀಡಿದೆ.

ಆದುದ್ದರಿಂದಲೇ ಎಡ ಪಕ್ಷಗಳಲ್ಲಿ ಇನ್ನು ಪ್ರಜಾಪ್ರಭುತ್ವ ಜೀವಂತವಾಗಿದೆ. ಅದಕ್ಕೆ ಎಡ ಪಕ್ಷದ ಕಾರ್ಯಕರ್ತರಿಗೆ ತಮ್ಮ ಪಕ್ಷದ ಸಮ್ಮೇಳನಗಳು ಒಂದು ರೀತಿಯಲ್ಲಿ ಸುಪ್ರಿಂಕೋರ್ಟ್ ಇದ್ದಂತೆ. ಅಲ್ಲಿಯ ತೀರ್ಮಾನಗಳು ಸುಪ್ರಿಂಕೋರ್ಟ್‍ನ ಮುಖ್ಯ ನ್ಯಾಯಧೀಶರು ನೀಡುವ ತೀರ್ಪಿನಂತೆ. ಏಕೆಂದರೆ ಅದು ಅವರೇ ಬರೆದುಕೊಂಡ ತೀರ್ಪಾಗಿರುವುದರಿಂದ ಮುಂದಿನ ಮೂರು ವರ್ಷಗಳು ಅಂದರೆ ಮುಂದಿನ ಸಮ್ಮೇಳನದವರೆಗೆ ಅದೇ ಅವರಿಗೆ ಪವಿತ್ರ ಗೀತೆ, ಕುರಾನ್, ಬೈಬಲ್ ಎಲ್ಲವೂ. ಅಲ್ಲಿಯೂ ಕೂಡ ಮನುಷ್ಯರೇ ಇರುವುದರಿಂದ ಕೆಲವೊಮ್ಮೆ ತಪ್ಪು ತೀರ್ಮಾನಗಳು ಆಗುತ್ತವೆ. ಅದಕ್ಕೆ ಸಾಕ್ಷಿ ಮೊನ್ನೆ ನಡೆದ ಸಿ.ಪಿ.ಐ(ಎಂ) ಕರ್ನಾಟಕ ರಾಜ್ಯ ಸಮ್ಮೇಳನದಲ್ಲಿ ಕರ್ನಾಟಕದ ಕಾರ್ಯದರ್ಶಿಯಾಗಿ ಅಲ್ಲಿನ ಪ್ರತಿನಿಧಿಗಳು ಮತ್ತೇ ಮೂರನೇ ಭಾರಿಗೆ ಕಾಮ್ರೇಡ್ ಜಿ.ವಿ ಶ್ರೀರಾಮರೆಡ್ಡಿಯನ್ನು ಆಯ್ಕೆ ಮಾಡಿರುವುದು. ಅದು ಎಲ್ಲಾ ಪ್ರತಿನಿಧಿಗಳ ಆಯ್ಕೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅದು ಬಹುಮತವಿಲ್ಲದೆ ನಡೆದಿರಲಾರದು ಎನ್ನುವುದು ನನ್ನ ನಂಬಿಕೆ.

ಕಾಮ್ರೇಡ್ ಜಿ.ವಿ ಶ್ರೀರಾಮರೆಡ್ಡಿ ತಮ್ಮ ವಿದ್ಯಾರ್ಥಿ ದೆಸೆಯಿಂದಲೇ ಎಡಪಂಥೀಯ ಚಳುವಳಿಗಳಲ್ಲಿ ತೊಡಗಿಕೊಂಡು ಬಂದವರು. ಶಾಸಕನಾಗಿ ಅತ್ಯುತ್ತಮ ಕೆಲಸಗಳನ್ನು ಮಾಡಿದವರು. ಅದರ ಪರಿಣಾಮವಾಗಿ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಪಡೆದವರು. ಅತ್ಯಂತ ನಿಷ್ಟೆಯಿಂದ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡಿದವರು. ಅವರ ಕೆಲಸ ಕಾರ್ಯಗಳನ್ನು ಗುರುತಿಸಿ ಪಕ್ಷ ಅವರಿಗೆ ಕರ್ನಾಟಕ ರಾಜ್ಯದ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಿತ್ತು. ಕಳೆದ ಆರು ವರ್ಷಗಳಿಂದ ಅವರು ಪಕ್ಷದ ಕಾರ್ಯದರ್ಶಿಯಾಗಿದ್ದಾರೆ. ಆ ಅವಧಿಯಲ್ಲಿ ಅವರು ಪಕ್ಷವನ್ನು ಕಟ್ಟಿ ಬೆಳೆಸಲು ಕಾರ್ಯದರ್ಶಿಯಾಗಿ ಮಾಡಿದ ಪ್ರಯತ್ನಗಳು ಶೂನ್ಯವೆಂದೆ ಹೇಳಬೇಕು. ಆದರೂ ಮೂರನೇ ಭಾರಿಗೆ ಪಕ್ಷದ ಕಾರ್ಯದರ್ಶಿಯಾಗಿ ಆಯ್ಕೆಯಾದದ್ದು ಹೇಗೆ?.
ಸಮ್ಮೇಳನಕ್ಕೂ ಮುಂಚೆ ಅವರು ಮತ್ತೆ ಪಕ್ಷದ ಕಾರ್ಯದರ್ಶಿಯಾಗಿ ಮರು ಆಯ್ಕೆಯಾಗುತ್ತಾರೆ ಎನ್ನುವ ಬಗ್ಗೆ ಪಕ್ಷದ ಕಾರ್ಯಕರ್ತರಿಗೆ ಅನುಮಾನಗಳಿದ್ದವು. ಏಕೆಂದರೆ ಕಾಮ್ರೇಡ್ ಜಿ.ವಿ.ಎಸ್ ಅವರ ಮೇಲೆ ಪಕ್ಷದ ಸದಸ್ಯರಿಂದಲೇ ಅನೇಕ ಆರೋಪಗಳಿವೆ. ಆರೋಪಗಳ ತನಿಖೆಗಾಗಿ ಒಂದು ಸಮಿತಿಯನ್ನು ಕೂಡ ಪಕ್ಷದ ಪಿ.ಬಿ ರಚಿಸಿದೆ. ಅವರ ಮೇಲಿನ ಆರೋಪಗಳ ವಿಚಾರಣೆ ಕೂಡ ನಡೆಯುತ್ತಿದೆ. ಇಂತಹ ಅನೇಕ ಅಡೆತಡೆಗಳಿದ್ದರೂ ಕೂಡ ಅವೆಲ್ಲವನ್ನೂ ದಾಟಿ, ಅಡ್ಡವಾಗಿದ್ದವರನ್ನೂ ತುಣಿದು ಜಿ.ವಿ.ಎಸ್ ಮತ್ತೆ ಅನಾಯಾಸವಾಗಿ ಕಾರ್ಯದರ್ಶಿಯಾಗಿದ್ದಾರೆ.

ಇವರು ಮತ್ತೆ ಕಾರ್ಯದರ್ಶಿಯಾಗಿ ಆಯ್ಕೆಯಾದ ರೀತಿ, ಇವರನ್ನು ಪ್ರಶ್ನಿಸುವವರನ್ನು ತುಣಿದ ರೀತಿ ಎಲ್ಲವೂ ಕೂಡ ಒಬ್ಬ ಪಾಳೇಗಾರನನ್ನು ಮತ್ತೆ ಮತ್ತೆ ನನ್ನ ಕಣ್ಣೆದುರಿಗೆ ತಂದು ನಿಲ್ಲಿಸುತ್ತವೆ. ಅವರನ್ನು ಪಾಳೇಗಾರ ಎಂದರೆ ಅವರ ಅಭಿಮಾನಿಗಳಿಗೆ ಬೇಸರವಾಗಬಹುದು. ಆದರೆ ಅವರು ಪಾಳೇಗಾರನಲ್ಲದೆ ಮತ್ತೇನಲ್ಲ. ಅದಕ್ಕೆ ಒಂದು ಉದಾಹರಣೆ ಹಿಂದೆ ಚಿಕ್ಕಬಳ್ಳಾಪುರದ ಕಾರ್ಯದರ್ಶಿ ಮತ್ತು ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾಗಿದ್ದ ಕಾಮ್ರೇಡ್ ಮುನಿವೆಂಕಟಪ್ಪ. ಜಿ.ವಿ.ಎಸ್ ಅವರು ಮತ್ತೆ ಕಾರ್ಯದರ್ಶಿಯಾಗಲೂ ಮತ್ತು ಈ ಭಾರಿ ಬಾಗೆಪಲ್ಲಿಯಿಂದ ಅಭ್ಯರ್ಥಿಯಾಗಲೂ ಮುನಿವೆಂಕಟಪ್ಪ ತಡೆಗೋಡೆಯಾಗಿದ್ದರು. ಆದುದರಿಂದ ಕಳೆದ ಭಾರಿ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಮತ್ತು ಜಿಲ್ಲಾ ಕಾರ್ಯದರ್ಶಿಯಾಗಿದ್ದ ಮುನಿವೆಂಕಟಪ್ಪ ಈ ಭಾರಿ ರಾಜ್ಯ ಸಮಿತಿ ಸದಸ್ಯರಾಗಿ ಆಯ್ಕೆಯಾಗುವುದಿರಲಿ ಅಥವಾ ಜಿಲ್ಲಾ ಕಾರ್ಯದರ್ಶಿಯೂ ಕೂಡ ಆಗಿಲ್ಲ. ಇದು ಕಾಮ್ರೇಡ್ ಜಿ.ವಿ.ಎಸ್ ಅವರ ಪಾಳೇಗಾರಿ ಧೋರಣೆಗೆ ಒಂದು ಸಣ್ಣ ಜಲಕ್.

ಬೇರೆ ಪಕ್ಷಗಳ ನಾಯಕರ ಮೇಲೆ ಆರೋಪಗಳು ಕೇಳಿ ಬಂದರೆ ಸಾಕು ರಾಜೀನಾಮೆಯನ್ನು ಕೇಳುವ ಆನೇಕ ಕಮ್ಯೂನಿಸ್ಟ್ ಗೆಳೆಯರು ತಮ್ಮ ಪಕ್ಷದ ಕಾರ್ಯದರ್ಶಿಯ ಮೇಲೆ ಅನೇಕ ಗಂಭೀರ ಆರೋಪಗಳಿದ್ದರು ಜೈ ಜೈ ಹೇಳಿ ತಾವು ರಾಜ್ಯ ಸಮಿತಿಯಲ್ಲಿ ಜಾಗ ಪಡೆದ ಕುಸಿಯಲ್ಲಿದ್ದಾರೆ. ಸಮ್ಮೇಳನದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾದ ಕಾಮ್ರೇಡ್ ಸೀತಾರಂ ಯೆಚೂರಿಯವರೇ ಖುದ್ದು ಹಾಜರಿದ್ದದ್ದನ್ನು ನೋಡಿ ಪಕ್ಷದ ನಾಯಕತ್ವದಲ್ಲಿ ಒಂದು ಪರಿಣಾಮಕಾರಿಯಾದ ಬದಲಾವಣೆಯಾಗುತ್ತದೆ ಎನ್ನುವುದು ಅನೇಕ ಕಾರ್ಯಕರ್ತರ ಮಾತಾಗಿತ್ತು. ಆದರೆ ಅವರೆಲ್ಲರ ನಿರೀಕ್ಷೆಗಳು ಉಸಿಯಾಗಿವೆ.

ಪಕ್ಷಕ್ಕಾಗಿ ಅನೇಕ ದಶಕಗಳಿಂದ ದುಡಿದ ಕಾರ್ಯಕರ್ತರನ್ನೆಲ್ಲ ರಾಜ್ಯಸಮಿತಿಯಿಂದ ಹೊರಗಿಟ್ಟು ಜಿ.ವಿ.ಎಸ್ ತನ್ನ ಪಟಾಲಮ್ ಕಟ್ಟಿಕೊಂಡು ನಿರಾಯಾಸವಾಗಿ ಮತ್ತೆ ಸಿಂಹಾಸನವನ್ನೇರಿದ್ದಾರೆ. ಈಗ ರಾಜ್ಯದಲ್ಲಿ ಪಕ್ಷದ ಅತ್ಯನ್ನತ ಅಂಗವಾದ ಸಿ.ಪಿ.ಐ(ಎಂ) ರಾಜ್ಯ ಸಮಿತಿಯಲ್ಲಿ ಬಹುತೇಕ ಜಿ.ವಿ.ಎಸ್ ಅವರ ಶಿಷ್ಯಕೋಟಿಯೇ ತುಂಬಿದೆ. ಇದೆಲ್ಲವನ್ನು ನೋಡುತ್ತಿದ್ದರೆ ಅದೇ ಪಕ್ಷದ ಕಾರ್ಯಕರ್ತನೊಬ್ಬನ ಮಾತು ಸತ್ಯ ಅನ್ನಿಸುತ್ತದೆ. “ಸರ್ವಾಧಿಕಾರಿ ತನ್ನ ವಿರೋಧಿಗಳನ್ನು ಇಲ್ಲದಂತೆ ಮಾಡಿ ತಾನು ಇನ್ನೂ ಬಲಗೊಳ್ಳಲು ಪ್ರಯತ್ನ ಪಡುತ್ತಾನೆ. ಇವೆಲ್ಲವುಗಳ ಹೊರತಾಗಿಯೂ congratulation Comrade G.V Sri amareddy.

 

Leave a Reply

Your email address will not be published.