“ಕಮ್ಯನಿಸ್ಟ್ ನಾಯಕನೊಳಗೊಬ್ಬ ಪಾಳೆಗಾರ” ಎಂಬ ಬರಹಕ್ಕೆ ಸಿಪಿಐ (ಎಂ) ರಾಜ್ಯ ಸಮಿತಿ ಪತ್ರಿಕ್ರಿಯೆ.

ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ

ಕಾಂ. ದೀಪಕ್ ಎಂಬುವವರು ‘ಬರೆದ ಲೇಕನಕ್ಕ್ಕೆ ಸಿಪಿಐ (ಎಂ) ರಾಜ್ಯ ಸಮಿತಿ ಬರೆದ ಸ್ಪಷ್ಟನೆಯ ಬರೆಹವಿದು. ಚರ್ಚೆಗಾಗಿ ಇದನ್ನು ಪೂರ್ಣವಾಗಿ ಇಲ್ಲಿ ಪ್ರಕಟಿಸಲಾಗಿದೆ.  ಲೇಖನದ ಲಿಂಕ್ ಕೆಳಗಿದೆ. http://aniketana.org/%E0%B2%95%E0%B2%AE%E0%B3%8D%E0%B2%AF%E0%B3%82%E0%B2%A8%E0%B2%BF%E0%B2%B8%E0%B3%8D%E0%B2%9F%E0%B3%8D-%E0%B2%A8%E0%B2%BE%E0%B2%AF%E0%B2%95%E0%B2%A8%E0%B3%8A%E0%B2%B3%E0%B2%97%E0%B3%8A%E0%B2%AC/

ಮಾನ್ಯರೇ,

 ಇದು ಜನವರಿ 7ರಂದು ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾದ “ಕಮ್ಯನಿಸ್ಟ್ ನಾಯಕನೊಳಗೊಬ್ಬ ಪಾಳೆಗಾರ” ಎಂಬ ಬರಹಕ್ಕೆ ಪತ್ರಿಕ್ರಿಯೆ. ಈ ಬರಹ ಜವಾಬ್ದಾರಿಯುತ ಎಡ-ಪ್ರಗತಿಪರ ಎಂದು ಪರಿಗಣಿಸಲಾಗುವ ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾಯಿತು ಎಂಬುದು ಫ್ಯಾಸಿಸ್ಟ್-ವಿರೋಧಿ ಹೋರಾಟದಲ್ಲಿ ಎಲ್ಲಾ ಎಡ-ಪ್ರಜಾಸತ್ಥಾತ್ಮಕ ಶಕ್ತಿಗಳು ಒಂದುಗೂಡಿ ಕೆಲಸ ಮಾಡಬೇಕಾದ ಇಂದಿನ ಸನ್ನಿವೇಶದಲ್ಲಿ ಬಹಳ ಬೇಸರದ ಮತ್ತು ಆತಂಕದ ಸಂಗತಿ. ಮೂಡಬಿದಿರೆಯಲ್ಲಿ ನಡೆದ ಸಿಪಿಐ(ಎಂ) ರಾಜ್ಯ ಸಮ್ಮೇಳನದ ಬಗೆಗಿನ ಈ ಬರಹದಲ್ಲಿ ಈ ಕೆಳಗಿನ ಅಂಶಗಳನ್ನು ಓದುಗರ ಗಮನಕ್ಕೆ ತರಬಯುಸುತ್ತೇವೆ :

 * “ಕಾರ್ಯದರ್ಶಿಯಾಗಿ ಅಲ್ಲಿನ ಪ್ರತಿನಿಧಿಗಳು ಮತ್ತೇ ಮೂರನೇ ಬಾರಿಗೆ ಕಾಮ್ರೇಡ್ ಜಿ.ವಿ ಶ್ರೀರಾಮರೆಡ್ಡಿಯನ್ನು ಆಯ್ಕೆ ಮಾಡಿರುವುದು. ಅದು ಎಲ್ಲಾ ಪ್ರತಿನಿಧಿಗಳ ಆಯ್ಕೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅದು ಬಹುಮತವಿಲ್ಲದೆ ನಡೆದಿರಲಾರದು ಎನ್ನುವುದು ನನ್ನ ನಂಬಿಕೆ.” ಇಲ್ಲಿ ಒಂದೇ ಉಸಿರಿನಲ್ಲಿ ಕಾ. ದೀಪಕ್ “ಪ್ರತಿನಿಧಿಗಳ ಆಯ್ಕೆಯೋ ಇಲ್ಲವೋ ಗೊತ್ತಿಲ್ಲ.” ಅಂತಲೂ, ”ಆದರೆ ಅದು ಬಹುಮತವಿಲ್ಲದೆ ನಡೆದಿರಲಾರದು” ಅಂತಲೂ ಹೇಳುತ್ತಾರೆ. ಅವರು ಯಾವುದಾದರೂ ಒಂದನ್ನು ಹೇಳಬೇಕು. ಅವರ “ಮಾಹಿತಿ” ಅಥವಾ “ವದಂತಿ” ಬಹುಮತವಿಲ್ಲದೆ ಆಯ್ಕೆಯಾದರು ಅಂತ ಇದ್ದರೆ ಅದನ್ನು ಸ್ಪಷ್ಟವಾಗಿ ಹೇಳಬೇಕು. ಸಿಪಿಐ(ಎಂ) ಸಂವಿಧಾನದ (ಮತ್ತು ಹೆಚ್ಚಿನ ಲೆನಿನ್ ವಾದಿ ಪಕ್ಞದ ನೀತಿಗಳನ್ನು ಒಪ್ಪಿರುವ ಕಮ್ಯುನಿಸ್ಟ್ ಪಕ್ಷಗಳ ಪದ್ಧತಿ) ಪ್ರಕಾರ .ಪಕ್ಷದ ರಾಜ್ಯ ಸಮ್ಮೇಳನ ರಾಜ್ಯ ಸಮಿತಿಯನ್ನು ಆರಿಸುತ್ತದೆ. ರಾಜ್ಯ ಕಾರ್ಯದರ್ಶಿಯನ್ನು ರಾಜ್ಯ ಸಮಿತಿ ಆರಿಸುತ್ತದೆ.  ಸಿಪಿಐ(ಎಂ)ನ ಮೂಡುಬಿದಿರೆ ರಾಜ್ಯ ಸಮ್ಮೇಳನ ಪಕ್ಷದ ಸಂವಿಧಾನದ ಪ್ರಕಾರ ರಾಜ್ಯ ಸಮಿತಿಯನ್ನು ಮತ್ತು ರಾಜ್ಯ ಸಮಿತಿ ಕಾರ್ಯದರ್ಶಿಯನ್ನು ಬಹುಮತದಿಂದ ಆರಿಸಿದೆಯೆಂದು ಸ್ಪಷ್ಟಪಡಿಸಲು ಬಯಸುತ್ತೇವೆ.

 * .”ಕಳೆದ ಆರು ವರ್ಷಗಳಿಂದ ಅವರು ಪಕ್ಷದ ಕಾರ್ಯದರ್ಶಿಯಾಗಿದ್ದಾರೆ. ಆ ಅವಧಿಯಲ್ಲಿ ಅವರು ಪಕ್ಷವನ್ನು ಕಟ್ಟಿ ಬೆಳೆಸಲು ಕಾರ್ಯದರ್ಶಿಯಾಗಿ ಮಾಡಿದ ಪ್ರಯತ್ನಗಳು ಶೂನ್ಯವೆಂದೆ ಹೇಳಬೇಕು.” ಇದು ಕಾ.ದೀಪಕ್ ಯಾವುದೇ ಆಧಾರವಿಲ್ಲದೆ ಮಾಡುವ ಆಪಾದನೆ. ಕಳೆದ ಆರು ವರ್ಷಗಳಲ್ಲಿ ಸಿಪಿಐ(ಎಂ) ಪಕ್ಷದ ನೇತೃತ್ವದಲ್ಲಿ ನಡೆದ ಕನಿಷ್ಟ ಕೂಲಿಗಾಗಿ ಖಾಯಮೇತರ ಕಾರ್ಮಿಕರ ಖಾಯಮಾತಿಗಾಗಿ ಕಾರ್ಮಿಕರ, ಭೂಮಿಗಾಗಿ ರೈತರ, ನಿವೇಶನಕ್ಕಾಗಿ ಬಡ ನಿವೇಶನರಹಿತರ, ಕೋಮು ಸೌಹಾರ್ದತೆ, ಮೂಢನಂಭಿಕೆ, ದಲಿತ-ಆದಿವಾಸಿ-ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳೇ ಮುಂತಾದ ಸಾಮಾಜಿಕ ಪ್ರಶ್ನೆಗಳನ್ನು ಎತ್ತಿಕೊಂಡು ನಡೆಸಿದ ಹೋರಾಟದಲ್ಲಿ ಸಿಪಿಐ(ಎಂ) ಮುಂಚೂಣಿಯಲ್ಲಿದೆ. ಪಕ್ಷದ ರಾಜಕೀಯ ಪ್ರಭಾವ ಬೆಳೆದಿದೆ.  ಮಡೆಸ್ನಾನ ವಿರುದ್ಧ ಉಡುಪಿ ಕೃಷ್ಣ ದೇವಾಲಯಕ್ಕೆ ಪ್ರವೇಶ ಪ್ರಯತ್ನ, ಮಂಗಳೂರಿನಲ್ಲಿ ಸಂಘ ಪರಿವಾಕ್ಕೆ ಸವಾಲು ಹಾಕಿ ಕಾ. ಪಿಣರಾಯಿ ವಿಜಯನ್ ಭಾಗವಹಿಸಿದ ನಡೆದ ಸೌಹಾರ್ದ ಸಮಾವೇಶ, ಅಂಗನವಾಡಿ ನೌಕರರ ಚಾರಿತ್ರಿಕ ಹೋರಾಟ, ಇತ್ತೀಚಿನ ಕಾರ್ಮಿಕರ ಚಾರಿತ್ರಿಕ ಮಹಾನಡೆ – ಇವೆಲ್ಲಾ ಸಿಪಿಐ(ಎಂ) ನಾಯಕತ್ವದಲ್ಲಿನ ಸಂಘಟನೆಗಳ ರಾಜ್ಯದ ಗಮನ ಸೆಳೆದ ಹೋರಾಟಗಳು. ಇವನ್ನು ಮುನ್ನಡೆಸುವಲ್ಲಿ ಕಾ. ಜಿ.ವಿ.ಎಸ್. ಸಮರ್ಥ ನಾಯಕತ್ವ ಕೊಟ್ಟಿದ್ದಾರೆ ಎಂಬುದು ಪಕ್ಷದ ರಾಜ್ಯ ಸಮ್ಮೇಳನದ ಪ್ರತಿನಿಧಿಗಳ  ಅಭಿಪ್ರಾಯವೆಂದು ಸ್ಪಷ್ಟಪಡಿಸಬಯಸುತ್ತೇವೆ.  ಇದು ಎಷ್ಟೋ ಪಕ್ಷದ ಹೊರಗಿರುವವರ ಅಭಿಪ್ರಾಯವೂ ಹೌದು.

 * “ಕಳೆದ ಭಾರಿ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಮತ್ತು ಜಿಲ್ಲಾ ಕಾರ್ಯದರ್ಶಿಯಾಗಿದ್ದ ಮುನಿವೆಂಕಟಪ್ಪ ಈ ಭಾರಿ ರಾಜ್ಯ ಸಮಿತಿ ಸದಸ್ಯರಾಗಿ ಆಯ್ಕೆಯಾಗುವುದಿರಲಿ ಜಿಲ್ಲಾ ಕಾರ್ಯದರ್ಶಿಯೂ ಕೂಡ ಆಗಿಲ್ಲ. ಇದು ಕಾಮ್ರೇಡ್ ಜಿ.ವಿ.ಎಸ್ ಅವರ ಪಾಳೇಗಾರಿ ಧೋರಣೆಗೆ ಒಂದು ಸಣ್ಣ ಜಲಕ್.” ಆ ಜಿಲ್ಲೆಯಲ್ಲಿ ಸಾವಿರಾರು ಸದಸ್ಯರು ನೂರಾರು ಶಾಖೆಗಳು ಇದ್ದು ನಾಲ್ಕು (ಶಾಖೆ, ಸ್ತಳೀಯ, ತಾಲೂಕು, ಜಿಲ್ಲಾ) ಹಂತಗಳ ಸಮ್ಮೇಳನ ಪ್ರತಿನಿಧಿಗಳ ಆಯ್ಕೆಯನ್ನು ಒಬ್ಬ ವ್ಯಕ್ತಿ ಹೇಗೆ ಪ್ರಭಾವಿಸಲು ಸಾಧ‍್ಯ? ಎಲ್ಲಾ ಹಂತದ ಸಮಿತಿಗಳನ್ನು ಕಾರ್ಯದರ್ಶಿಗಳನ್ನು ಆರಿಸುವುದು ಪಕ್ಷದ ಸದಸ್ಯರ ಹಕ್ಕು ಮತ್ತು ಜವಾಬ್ದಾರಿ. “ಸೀತಾರಂ ಯೆಚೂರಿಯವರೇ ಖುದ್ದು ಹಾಜರಿದ್ದದ್ದನ್ನು ನೋಡಿ ಪಕ್ಷದ ನಾಯಕತ್ವದಲ್ಲಿ ಒಂದು ಪರಿಣಾಮಕಾರಿಯಾದ ಬದಲಾವಣೆಯಾಗುತ್ತದೆ” ಎಂಬುದೂ ಸಹ ಹಾಸ್ಯಾಸ್ಪದ ಹೇಳಿಕೆ. ಒಂದು ಹಂತದ ಸಮ್ಮೇಳನದಲ್ಲಿ  ಮೇಲಿನ ಹಂತದ ಸಮಿತಿಯ ಪ್ರತಿನಿಧಿಗಳ ಪಾತ್ರ  ಯಾರೋ ಆಯ್ಕೆಯಾಗುವಂತೆ ಅಥವಾ ಆಯ್ಕೆಯಾಗದಂತೆ ನೋಡುವುದಲ್ಲ. ಪಕ್ಷದ ಸಂಘಟನಾ ನಿಯಮಗಳ ಪಾಲನೆಯಾಗುವಂತೆ ನೋಡಿಕೊಳ್ಳುವುದಷ್ಟೇ.  ಹಾಗಿರುವಾಗ ಒಬ್ಬ ಸಂಗಾತಿ ಆಯ್ಕೆಯಾಗಿಲ್ಲ ಅಥವಾ ಇನ್ನೊಬ್ಬ ವ್ಯಕ್ತಿ ಆಯ್ಕೆಯಾದರು ಎಂಬುದರ ಆಧಾರದ ಮೇಲೆ ವಿವಿಧ ತೀರ್ಮಾನಗಳಿಗೆ ಬರುವುದು ಕಾ. ದೀಪಕ್ ಅವರೇ ಮೊದಲ ಪಾರಾದಲ್ಲಿ ವಿವರಿಸುವ, ಸಿಪಿಐ(ಎಂ)ನ (ಮತ್ತು ಹೆಚ್ಚಿನ ಕಮ್ಯುನಿಸ್ಟ್ ಪಕ್ಷಗಳ) ಸಂಘಟನಾ ಪದ್ಧತಿ ಅವರಿಗೆ ಪೂರ್ಣ ಅರ್ಥವಾಗಿಲ್ಲದರ ಪರಿಣಾಮ ಎನ್ನಬೇಕಾಗುತ್ತದೆ.

 * “ಪಕ್ಷಕ್ಕಾಗಿ ಅನೇಕ ದಶಕಗಳಂದ ದುಡಿದ ಕಾರ್ಯಕರ್ತರನ್ನೆಲ್ಲಾ ರಾಜ್ಯ ಸಮಿತಿಯಿಂದ ಹೊರಗಿಟ್ಟು ಜಿ.ವಿ.ಎಸ್. ತನ್ನ ಪಟಾಲಮ್ ಕಟ್ಟಿಕೊಂಡು ನಿರಾಯಾಸವಾಗಿ ಮತ್ತೆ ಸಿಂಹಾಸನವನ್ನೇರಿದ್ದಾರೆ ” ಎಂಬ ಅವರ ಹೇಳಿಕೆ ಸಹ ಇದೇ ರೀತಿಯ ಗೊಂದಲದಿಂದ ಹುಟ್ಟಿದ ಒಂದು ನಿರೊಪಣೆ. ಸಿಪಿಐ(ಎಂ) ಸಂವಿಧಾನದ ಪ್ರಕಾರ ಹಿಂದಿನ ರಾಜ್ಯ ಸಮಿತಿ (ಅಗತ್ಯ ಬಿದ್ದರೆ ಸಮಿತಿಯೊಳಗೆ ಚುನಾವಣೆ ನಡೆಸಿ) ಒಂದು ಪಟ್ಟಿಯನ್ನು ಸಮ್ಮೇಳನದ ಪ್ರತಿನಿಧಿಗಳ ಮುಂದಿಡುತ್ತದೆ. ಪಟ್ಟಿ ತಯಾರಿಸುವಾಗ ಯುವ-ನಾಯಕತ್ವಕ್ಕೆ ಅನುವು ಮಾಡಿಕೊಡಲು “ಅನೇಕ ದಶಕಗಳಂದ ದುಡಿದ”ವರನ್ನು ಕೈಬಿಡಬಹುದು ಅಥವಾ ಅವರೇ ಹಿಂದೆ ಸರಿಯಬಹುದು. ವಿವಿಧ ಪ್ರದೇಶ/ರಂಗಗಳಿಗೆ ಪ್ರಾತಿನಿಧ್ಯ, ವರ್ಗ-ಸಾಮಾಜಿಕ ಸಂಯೋಜನೆ ಮುಂತಾದ ಹಲವು ಸಂಕೀರ್ಣ ಆಯಾಮಗಳು ಪಟ್ಟಿಯ ತಯಾರಿಯಲ್ಲಿ ಸೇರಿರುತ್ತವೆ. ಸಮ್ಮೇಳನದಲ್ಲಿ ಪಟ್ಟಿಯಲ್ಲಿರುವ ಸಂಗಾತಿಗಳು ಹಿಂದೆ ಸರಿಯಬಹುದು ಅಥವಾ ಯಾವುದೇ ಪ್ರತಿನಿಧಿ ಪಟ್ಟಿಯಲ್ಲಿ ಇಲ್ಲದಿರುವವರನ್ನು ಸೂಚಿಸಬಹುದು. ಕೊನೆಗೆ ಒಟ್ಟು ಪಟ್ಟಿಯಲ್ಲಿರುವವರ ಸಂಖ್ಯೆ ರಾಜ್ಯ ಸಮಿತಿಯ ನಿಗದಿತ ಸಂಖ್ಯೆಗಿಂತ ಹೆಚ್ಚಿದ್ದರೆ ಮತದಾನ ನಡೆಯುತ್ತದೆ. ಅತ್ಯಂತ ಹೆಚ್ಚು ಮತ ಪಡೆದವರು ಚುನಾಯಿತರಾಗುತ್ತಾರೆ.

ರಾಜ್ಯ ಸಮಿತಿಯ ಸಂಖ್ಯೆಯಷ್ಟೇ ಅಭ್ಯರ್ಥಿಗಳಿದ್ದರೂ ಪ್ರತಿನಿಧಿಗಳು ಕೈ ಎತ್ತುವ ಮೂಲಕ ಅವರ ಸಮ್ಮತಿ, ವಿರೋಧ ಅಥವಾ ತಟಸ್ಥತೆಯನ್ನು ದಾಖಲು ಮಾಡಲಾಗುತ್ತದೆ. ಪ್ರತಿನಿಧಿಗಳ ಬಹುಮತದ ಬೆಂಬಲ ಇಲ್ಲದೆ ರಾಜ್ಯ ಸಮಿತಿಗೆ ಯಾರೂ ಆಯ್ಕೆಯಾಗುವುದಿಲ್ಲ. ಈ ಇಡೀ ಪ್ರಕ್ರಿಯೆಯನ್ನು ಮೇಲ್ಸಮಿತಿಯವರು (ರಾಜ್ಯ ಸಮಿತಿಯ ಆಯ್ಕೆಯಲ್ಲಿ ಪೊಲಿಟ್ ಬ್ಯುರೊ ಸದಸ್ಯರು) ನಡೆಸುತ್ತಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸಮಿತಿಯಲ್ಲಿ ಕೊನೆಗೆ ಯಾರು ಇದ್ದಾರೆ ಅಥವಾ ಇಲ್ಲ ಎಂಬುದನ್ನು  ಸರಳವಾಗಿ ಹೀಗೆ ಅಥವಾ ಹಾಗೆ ಎಂದು ನಿರೂಪಿಸ;ಲು ಬರುವುದಿಲ್ಲ. ಅದು ಸಮ್ಮೇಳನದ ಪ್ರತಿನಿಧಿಗಳ ಸಾಮೂಹಿಕ ನಿರ್ಧಾರ. ಅದನ್ನು ಯಾವುದೇ ಯಾವುದೇ ವ್ಯಕ್ತಿ (ಮೇಲ್ಸಮಿತಿಯ ಸದಸ್ಯರೂ ಸೇರಿದಂತೆ) ಪ್ರಭಾವಿಸಲು ಬರುವುದಿಲ್ಲ. ರಾಜ್ಯ ಸಮಿತಿಗೆ ಆಯ್ಕೆಯಾದವರು ಮಾತ್ರ ಪಕ್ಷಕ್ಕಾಗಿ ಅತ್ಯುತ್ತಮವಾಗಿ ಅಥವಾ ಅತ್ಯಂತ ಪ್ರಾಮಾಣಿಕವಾಗಿ ದುಡಿಯುವವರು. ಉಳಿದವರು ಅಲ್ಲ ಎಂಬುದೂ ಸಿಪಿಐ(ಎಂ) ಅಥವಾ ಯಾವುದೇ ಕಮ್ಯುನಿಸ್ಟ್ ಪಕ್ಷದ ನಿಲುವು ಅಲ್ಲ. ಸಿಪಿಐ(ಎಂ)ನಲ್ಲಿ ರಾಜ್ಯ ಸಮಿತಿಯ ಸದಸ್ಯತ್ವ ಮುಂದಿನ 3 ವರ್ಷಗಳಿಗೆ ಒಂದು ನಿರ್ದಿಷ್ಟ ಜವಾಬ್ದಾರಿಯ ಹೊರಿಸುವಿಕೆ. ಅದು ಒಂದು ಪ್ರಶಸ್ತಿ ಅಥವಾ ಅಧಿಕಾರ ಅಲ್ಲ.

 *  ಆರೋಪಗಳು, ತನಿಖೆಗಳ ಬಗ್ಗೆ ಸಹ ಕಾ. ದೀಪಕ್ ಬರೆದಿದ್ದಾರೆ.  ರಾಜಕೀಯ ಸಂಘಟನೆಗಳಲ್ಲಿ ಹಲವು ರಾಜಕೀಯ ಧೋರಣೆಗಳು ಹಾಗೂ ಸಂಘಟನಾ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯ, ಅವುಗಳ ಜಾರಿಯಲ್ಲಿ ತಪ್ಪುಗಳಾಗುವುದು ಸಹಜ. ಸಿಪಿಐ(ಎಂ)  ಅಥವಾ ಕಮ್ಯನಿಸ್ಟ್ ಪಕ್ಷಗಳು ಇದಕ್ಕೆ ಹೊರತಲ್ಲ. ಆದರೆ ಇಂತಹ ಸಮಸ್ಯೆಗಳನ್ನು ವಿವಿಧ ಹಂತಗಳಲ್ಲಿ ಪರಿಹರಿಸಲು ಸಿಪಿಐ(ಎಂ)  ಸಂವಿಧಾನದಲ್ಲಿ ಸ್ಪಷ್ಟ ವಿಧಾನಗಳಿವೆ. ಯಾವುದೇ ಸದಸ್ಯ ಇಂತಹ ಸಮಸ್ಯೆಗಳ ತಪ್ಪುಗಳ ಬಗ್ಗೆ ದೂರು ಕೊಡಬಹುದು. ಅದನ್ನು ಸಂವಿಧಾನ ವಿಧಿಸಿದ ರೀತಿಯಲ್ಲಿ ತನಿಖೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇದು ಬರಿಯ ನೀತಿಯಲ್ಲ. ಇದು ಜಾರಿಯಾದ ಹಲವು ಉದಾಹರಣೆಗಳಿವೆ. ಆಗ (ಅವಿಭಜಜಿತ) ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ಕಾ. ಬಿ,ಟಿ.ರಣದಿವೆ ಅವರನ್ನು ರಾಜಕೀಯ-ಸಂಘಟನಾ ತಪ್ಪುಗಳಿಗಾಗಿ ಜಿಲ್ಲಾ ಸಮಿತಿಗೆ ಡಿಮೋಟ್ ಮಾಡಲಾಗಿತ್ತು. ಸಿಪಿಐ(ಎಂ) ನಲ್ಲೂ ಹಲವು ಕೇಂದ್ರ/ರಾಜ್ಯ ಸಮಿತಿಯ ಸದಸ್ಯರೂ, ರಾಜ್ಯ  ಕಾರ್ಯದರ್ಶಿಗಳ ಮೇಲೆ ವಿವಿಧ ರೀತಿಯ (ಉಚ್ಛಾಟನೆ ಸೇರಿದಂತೆ) ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಆದರೆ ಸಾಮಾನ್ಯ ನ್ಯಾಯಶಾಸ್ತ್ರದಂತೆ ಆಪಾದನೆ ಬಗ್ಗೆ ತನಿಖೆ ನಡೆದು ವರದಿ ಬರುವವರೆಗೆ ಶಿಕ್ಷೆ ವಿಧಿಸುವ ಪದ್ಧತಿ ಇಲ್ಲ.

 ಕಾ. ದೀಪಕ್ ಅವರು ತಮ್ಮನ್ನು ಕಾಮ್ರೆಡ್ ಎಂದು ಕರೆದುಕೊಂಡರೂ ಈ ಬರಹ ಈಗಾಗಲೇ ವಿಶದಪಡಿಸಿದ ಹಾಗೆ ಒಂದು ಲೆನಿನ್ ವಾದಿ ಪಕ್ಷದ ನೀತಿಗಳ ಮೇಲೆ ಆಧಾರಿತ ಕಮ್ಯುನಿಸ್ಟ್ ಪಕ್ಷದ ಸಂಘಟನಾ ಪ್ರಕ್ರಿಯೆಗಳ ಅರಿವು ಅಥವಾ ಅದರ ನೈಜ ಅನುಭವ ಅವರಿಗೆ ಇಲ್ಲದಿರುವುದನ್ನು ತೋರಿಸುತ್ತದೆ. ಕಾ. ದೀಪಕ್ ನಮ್ಮ ದೇಶದಲ್ಲಿ ‘ಎಡ’ ‘ಕಮ್ಯುನಿಸ್ಟ್’ ಎಂದು ಹೇಳಿಕೊಳ್ಳುತ್ತಲೇ ಅಪಾರದರ್ಶಕ ಎನ್.ಜಿ.ಒ. ಮಾದರಿಯ ಸಂಘಟನಾ ವಿಧಾನ ಅನುಸರಿಸುವ ಸಂಘಟನೆಯ ಅರೆಬರೆ ಅನುಭವದಿಂದ ಬರೆದಿದ್ದಾರೆ ಎಂದು ನಮಗೆ ಅನಿಸುತ್ತದೆ.

ಮಾತ್ರವಲ್ಲದೆ, ಸಿಪಿಐ(ಎಂ) ಸಮ್ಮೇಳನದ ಬಗ್ಗೆ ಸಿಪಿಐ(ಎಂ) ಬಗ್ಗೆ ಪೂರ್ವಗ್ರಹಪೀಡಿತರ ಕೆಲವು “ವದಂತಿ”ಗಳಿಂದ ಮತ್ತು ಮೇಲೆ ಹೇಳಿದ ಅರಿವಿನ ಅಭಾವದಿಂದ ಅವರು ಗೊಂದಲಕ್ಕೆ ಈಡಾಗಿದ್ದಾರೆ.  ಆಧರೆ ಅದರ ಜತೆ ಸಿಪಿಐ(ಎಂ) ನಂತಹ ಎಡ ಪಕ್ಷಗಳ ಸಂಘಟನಾ ವಿಷಯಗಳ ಬಗ್ಗೆ ಕಾಳಜಿಯೂ ಅವರಿಗೆ ಇರುವಂತೆ ಕಾಣುತ್ತದೆ.  ಸಿಪಿಐ(ಎಂ) ದೇಶದಲ್ಲಿ ಲೆನಿನ್ ವಾದಿ ಪಕ್ಷದ ನೀತಿಗಳ ಮೇಲೆ ಆಧಾರಿತ ಸಂಘಟನಾ ವಿಧಾನ/ಪ್ರಕ್ರಿಯೆಗಳನ್ನು ಅತ್ಯಂತ ಕಟ್ಟು ನಿಟ್ಟಾಗಿ ಅನುಸರಿಸುವ .ಪ್ರಮುಖ ಪಕ್ಷ. ಇದನ್ನು ಮುಂದೆಯೂ ಅನುಸರಿಸುತ್ತೇವೆ ಎಂದು ಅವರಿಗೆ ನಾವು ಆಶ್ವಾಸನೆ ಕೊಡಬಯಸುತ್ತೇವೆ.

 ಕಾ. ದೀಪಕ್ ನಿಮ್ಮ ಅಧಿಕೃತ ವರದಿಗಾರರೋ ಅಥವಾ ಕ್ಯಾಶುವಲ್ ಬರಹಗಾರರೋ ಗೊತ್ತಿಲ್ಲ. ಏನೇ ಇದ್ದರೂ ಅವರ ಕಾಳಜಿಯನ್ನು ಅರ್ಥಮಾಡಿಕೊಳ್ಳುವ ಹಾಗೂ ಕಮ್ಯುನಿಸ್ಟ್ ರಾಜಕಾರಣ ಮತ್ತು ಸಂಘಟನೆ ಬಗ್ಗೆ ಅವರಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದು ನಮಗೆ ಅನಿಸುತ್ತದೆ. ಆ ಬಗ್ಗೆ ಕಾ. ದೀಪಕ್ ಜತೆ ಚರ್ಚಿಸಲು ನಾವು ಉತ್ಸುಕರಾಗಿದ್ದೇವೆ. ಅದಕ್ಕೆ ಅನುವು ಮಾಡಿಕೊಡಬೇಕೆಂದು ಕೋರುತ್ತೇವೆ.

 ಈಗಾಗಲೇ ಹೇಳಿದ ಹಾಗೆ ಎಡ-ಪ್ರಗತಿಪರ ಎಂದು ಪರಿಗಣಿಸಲಾಗುವ ನಿಮ್ಮ ಪತ್ರಿಕೆಯಲ್ಲಿ ಇಂತಹ ಬಾಲಿಶ ಆಧಾರರಹಿತ ಬೇಜವಾಬ್ದಾರಿಯ ಲೇಖನವನ್ನು ಇನ್ನು ಮುಂದೆ ಪ್ರಕಟಿಸಬೇಡಿ ಎಂಬುದು ನಮ್ಮ ನಮ್ರ ವಿನಂತಿ. ಫ್ಯಾಸಿಸ್ಟ್-ವಿರೋಧಿ ಹೋರಾಟದಲ್ಲಿ ಎಲ್ಲಾ ಎಡ-ಪ್ರಜಾಸತ್ಥಾತ್ಮಕ ಶಕ್ತಿಗಳು ಒಂದುಗೂಡಿ ಕೆಲಸ ಮಾಡಬೇಕಾದ ಇಂದಿನ ಸನ್ನಿವೇಶದಲ್ಲಿ ಇಂತಹ ಕೆಸರೆರಚಾಟ ಮಾಡದೆ ಇರುವುದು ನಮ್ಮೆಲ್ಲರ ಕನಿಷ್ಟ ಜವಾಬ್ದಾರಿ.

 ಈ ಪ್ರತಿಕ್ರಿಯೆಯನ್ನು ನಿಮ್ಮ ವೆಬ್ ಪತ್ರಿಕೆಯಲ್ಲಿ ಮೂಲ ಬರಹ ಪ್ರಕಟಿಸಿದಷ್ಠೇ ಢಾಳಾಗಿ ಪ್ರಕಟಿಸಬೇಕೆಂದು ಕೋರುತ್ತೇವೆ.

ಇತೀ

– ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿಯ ಪರವಾಗಿ

Leave a Reply

Your email address will not be published.