ಕನ್ನಡಿ-5: ವಿದ್ಯುತ್ ಖರೀದಿಯಲ್ಲಿ ಭಾರಿ ಅವ್ಯವಹಾರ- ಗ್ರಾಹಕರ ಜೇಬಿಗೆ ಕತ್ತರಿ.

-ಚಿರಂತನ್.ಸಿ.

ರಾಜ್ಯದಲ್ಲಿ 2004 ರಿಂದ ವಿದ್ಯುತ್ ಖರೀದಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಿ, 6 ತಿಂಗಳೊಳಗೆ ವರದಿ ಸಲ್ಲಿಸಲು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ವಿಧಾನಸಭೆಯ ಸಮಿತಿ ರಚಿಸಿ, ಎರಡು ವರ್ಷವಾದರೂ ಸಮಿತಿ ಇನ್ನೂ ವರದಿ ನೀಡಿಲ್ಲ. ಸದನ ಸಮಿತಿ ರಚಿಸಿದ ಪ್ರಾರಂಭದಲ್ಲಿ ವಿದ್ಯುತ್ ಖರೀದಿಯಲ್ಲಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸದನ ಸಮಿತಿ ರಚನೆ ಅಗತ್ಯವಿರಲಿಲ್ಲ. ಇದು ನನ್ನ ವೈಯಕ್ತಿಕ ಅನಿಸಿಕೆ. ಆದರೆ, ಸದನದ ಅಭಿಪ್ರಾಯಕ್ಕೆ ಮನ್ನಣೆ ನೀಡಿ, ಸಮಿತಿ ರಚಿಸಿರುವುದರಿಂದ ಈ ಬಗ್ಗೆ ತನಿಖೆ ನಡೆಸಿ, ವರದಿ ಕೊಡಬೇಕಾಗಿದೆ ಎಂದು ತಿಳಿಸಿದ್ದು, ಸಮಿತಿಗೆ 6 ತಿಂಗಳು ಸಮಯ ನೀಡಿದ್ದರೂ ಆದಷ್ಟು ಬೇಗ ವರದಿ ಸಲ್ಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಕ್ಟೋಬರ್ 2014 ರಲ್ಲಿ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದರು. ಇದೊಂದು ರೀತಿ ಪೂರ್ವ ನಿಯೋಜಿತ ಸಂಚು. ತನಿಖೆ ಪ್ರಾರಂಭವಾಗುವ ಮುನ್ನವೆ ಸದನ ಸಮಿತಿ ರಚಿಸುವ ಅಗತ್ಯವಿಲ್ಲವೆಂಬ ಹೇಳಿಕೆ ಸದನಕ್ಕೆ ಮಾಡಿದ ಅಪಮಾನ. ಇಲ್ಲಿ ಡಿ.ಕೆ.ಶಿವುಕುಮಾರವರು ಇಂಧನ ಖರೀದಿ ಅವ್ಯವಹಾರವನ್ನು ಮುಚ್ಚಿ ಹಾಕಲು ಪೂರ್ವಗ್ರಹ ಪೀಡಿತ ಮನಸ್ಥಿತಿಯನ್ನು ವ್ಯಕ್ತಪಡಿಸಿದ್ದಾರೆ ಅಷ್ಟೇ. ಇಂತಹ ಜನಪ್ರತಿನಿಧಿಯಿಂದ ರಾಜ್ಯ ಎನನ್ನು ತಾನೆ ನಿರೀಕ್ಷಿಸಲು ತಾನೆ ಸಾಧ್ಯ

25 ವರ್ಷಗಳ ಅವಧಿಗೆ ವಿದ್ಯುತ್ ಖರೀದಿಗೆ ಟೆಂಡರ್
ವಿದ್ಯುತ್ ಖರೀದಿಯಲ್ಲಿ ಮುಖ್ಯವಾಗಿ 25 ವರ್ಷಗಳ ದೀರ್ಘಾವಧಿ ಆಧಾರದ ಮೇಲೆ ಖರೀದಿಸಲು ಉದ್ದೇಶಿಸಿದ್ದ 1580 ಮೆಗಾವ್ಯಾಟ್ ವಿದ್ಯುತ್ ಖರೀದಿಯ ಟೆಂಡರನ್ನು ಏಕಾಏಕಿ ರದ್ದು ಪಡಿಸಿದ ಸರ್ಕಾರದ ನಿರ್ಧಾರದ ಹಿಂದೆ ಅನುಮಾನ ಎದ್ದಿದೆ. ಇಂಧನ ಇಲಾಖೆಯ ಪವರ್ ಕಾಪೋರೇಷನ್ ಆಫ್ ಕರ್ನಾಟಕ ಲಿಮಿಟೆಡ್ (ಪಿಸಿಕೆಎಲ್) ಸೆಪ್ಟಂಬರ್ 2009 ರಲ್ಲಿ ದೀರ್ಘಾವಧಿ ಆಧಾರದ ಮೇಲೆ 2000 ಮೆಗಾವ್ಯಾಟ್ ವಿದ್ಯುತ್ ಖರೀದಿಗೆ ಟೆಂಡರ್ ಕರೆದಿತ್ತು. ಸರ್ಕಾರದ ವಿದ್ಯುತ್‍ಚ್ಛಕ್ತಿ ಕಾಯಿದೆ ಅನುಸಾರ ಕರ್ನಾಟಕ ವಿದ್ಯುತ್‍ಚ್ಛಕ್ತಿ ನಿಯಂತ್ರಣ ಆಯೋಗದಿಂದ ಟೆಂಡರ್ ಕರೆಯಲು ಅನುಮೋದನೆ ಪಡೆಯಿತು. ಪಿಸಿಕೆಎಲ್ ಕರೆದ ಟೆಂಡರಗೆ 4 ಕಂಪನಿಗಳು ಬಿಡ್ ಸಲ್ಲಿಸಿದವು. ಸರ್ಕಾರ ನೇಮಿಸಿದ ಮೌಲ್ಯ ನಿರ್ಧಾರ ಸಮಿತಿಯು ಬಿಡ್‍ನಂತೆ ಅರ್ಹತೆ ಇಲ್ಲದ ಕಾರಣ ಮೆ. ಎನ್‍ಎಸ್‍ಎಲ್ ಪವರ ಲಿಮಿಟೆಡ್‍ನ ಬಿಡ್‍ನ್ನು ನಿರಾಕರಿಸಿ, ಉಳಿದ ಬಿಡ್‍ಗಳನ್ನು ತೆರೆದು, ಪ್ರತಿ ಕಿಲೋವ್ಯಾಟ್‍ಗೆ ನಮೂದಿಸಿರುವ ದರದ ಆಧಾರದ ಮೇಲೆ ವರ್ಗಿಕರೀಸಿ ಸಮಿತಿಯು ವಿದ್ಯುತ್ ಖರೀದಿಸಲು ಶಿಫಾರಸ್ಸು ಮಾಡಿದೆ. ಅದರಲ್ಲಿ ಕೇಂದ್ರ ಸರ್ಕಾರದ ಸ್ವಾಮ್ಯದ ಪವರ್ ಟ್ರೆಡಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್‍ದಿಂದ ಪ್ರತಿ ಯುನಿಟ್‍ಗೆ ಸರಾಸರಿ ರೂ. 3.771 ರಿಂದ ರೂ. 3.889 ರ ದರzಲ್ಲಿ 1305 ಮೆಗಾವ್ಯಾಟ್ ಮತ್ತು ಮೆ. ಜೆಎಸ್‍ಡಬ್ಲೂ ಎನರ್ಜಿ ಲಿಮಿಟೆಡ್, ತೋರಣಗಲ್ ಬಳ್ಳಾರಿರವರಿಂದ ಪ್ರತಿ ಯುನಿಟ್‍ಗೆ ರೂ. 3.812 ಖರೀದಿಸುವ ಪ್ರಸ್ತಾವನೆ ಇತ್ತು. ಕಡತವನ್ನು ಪಿಸಿಕೆಎಲ್ ಇಂಧನ ಇಲಾಖೆಗೆ ರವಾನಿಸಿತು. ಇಂಧನ ಇಲಾಖೆಯು 22-6-2010 ರಂದು ಕರಡು ಸಚಿವ ಸಂಪುಟ ಟಿಪ್ಪಣೆಯೊಂದಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತು. ಪ್ರಸ್ತಾವನೆ ಪರಿಶೀಲಿಸಿದ ಆರ್ಥಿಕ ಇಲಾಖೆ, ವಿದ್ಯುತ್ ಬೇಡಿಕೆ ಮತ್ತು ಸರಬರಾಜು ಲೆಕ್ಕಾಚಾರ. ಬಿಡ್‍ದಾರರು ಕೋಟ್ ಮಾಡಿರುವ ಪ್ರತಿ ಯುನಿಟ್ ದರದ ಸ್ಪರ್ಧಾತ್ಮಕ ಬೆಲೆ, ವಿದ್ಯುತ್ ಸರಬರಾಜು ಕಂಪನಿಗಳ ಆರ್ಥಿಕ ಸಧೃಡತೆ ಮತ್ತು ವಿದ್ಯುತ್ ಖರೀದಿಯಿಂದ ಸರ್ಕಾರದ ಆರ್ಥಿಕತೆಯ ಮೇಲೆ ಆಗುವ ಪರಿಣಾಮದ ಬಗ್ಗೆ ಪರಾಮರ್ಶಿಸಿ, ಆರ್ಥಿಕವಾಗಿ ಸಬಲವಾಗಿರುವ ಆಪ್ಸನ್ ಬಗ್ಗೆ ಮರು ಪರಿಗಣಿಸಲು ನಿರ್ದೇಶನ ನೀಡಿತು. ಮೇಲಿನ ನಾಲ್ಕು ಅಂಶಗಳಲ್ಲಿ ಪ್ರಮುಖವಾದದ್ದು ಪ್ರತಿ ಯುನಿಟ್‍ನ ಸ್ಪರ್ಧಾತ್ಮಕ ದರ.

ಪ್ರತಿ ಯುನಿಟ್‍ನ ಸ್ಪರ್ಧಾತ್ಮಕ ದರದ ಲೆಕ್ಕಾಚಾರ.
ಆರ್ಥಿಕ ಇಲಾಖೆಯು ಬಿಡ್‍ದಾರರು ಕೋಟ್ ಮಾಡಿರುವ ಪ್ರತಿ ಯುನಿಟ್‍ನ ಬೆಲೆ ರೂ. 3.757 ರಿಂದ ರೂ. 3.889 ವರೆಗೆ ಇದೆ. ಆದರೆ, ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್, ರಾಜಸ್ತಾನ ಮತ್ತು ಬಿಹಾರದಲ್ಲಿ ಕಡಿಮೆ ಮೊತ್ತಕ್ಕೆ ಬಿಡ್ ಆಗಿದೆ. ರಾಜ್ಯ ಸರ್ಕಾರಿ ಸ್ವಾಮ್ಯದ ಕೆಪಿಸಿಎಲ್‍ನ ಯರಮರ್ಸ್ ಮತ್ತು ಹೆಡ್‍ಲಾಪುರ ಘಟಕಗಳು ಉತ್ಪಾದಿಸುವ ಪ್ರತಿ ಯುನಿಟ್ ದರ ರೂ. 3.177 ರಿಂದ ರೂ. 3.370 ಆಗುತ್ತದೆ ಎಂದು ತಿಳಿಸಿತು.
ಪ್ರಸ್ತಾವನೆ ಹಿಂತಿರುಗಿದ ನಂತರ ಇಂಧನ ಇಲಾಖೆಯು ರಾಜ್ಯ ಮತ್ತು ಅಕ್ಕಪಕ್ಕದ ರಾಜ್ಯಗಳ ವಿದ್ಯುತ್ ಥರ್ಮಲ್ ಸ್ಥಾವರಗಳಿಂದ ಉತ್ಪಾದನೆ ಆಗುವ ಪ್ರತಿ ಯುನಿಟ್‍ನ ದರವನ್ನು ತುಲನೆ ಮಾಡಿತು. ಮಹಾರಾಷ್ಟ್ರದಲ್ಲಿ ಮೆ. ಅದಾನಿ ವಿದ್ಯುತ್ ಕಂಪನಿಯ ರೂ. 3.280, ಗುಜರಾತ್‍ನಲ್ಲಿ ಜಿಎಂಡಿಸಿಯು ರೂ. 2.345, ರಾಜಸ್ತಾನದಲ್ಲಿ ದರದಲ್ಲಿ ಮೆ. ಅದಾನಿ ವಿದ್ಯುತ್ ಕಂಪನಿಯು ರೂ. 3.250 ಮತ್ತು ಬಿಹಾರದಲ್ಲಿ ರೂ. 3.90 ರಿಂದ ರೂ. 4.20 ದರದಲ್ಲಿ ವಿದ್ಯುತ್ ಖರೀದಿಸಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಕಲ್ಲಿದ್ದಲು ಗಣಿ ಇದ್ದು, ಸ್ಥಳೀಯ ಕಲ್ಲಿದ್ದಲ್ಲನ್ನು ಉಪಯೋಗಿಸುತ್ತಿದ್ದು, ಕಲ್ಲಿದ್ದಲು ಸಾಗಾಣಿಕೆ ವೆಚ್ಚ ಇಲ್ಲ. ಗುಜರಾತ್‍ನಲ್ಲಿ ಜಿಎಂಡಿಸಿ ಸೇರಿದಂತೆ ಇತರ ವಿದ್ಯುತ್ ಸ್ಥಾವರಗಳು ರಾಜ್ಯದಲ್ಲಿದ್ದು, ರಾಜ್ಯ ಸರ್ಕಾರವು ವರದಾ ಪವರ್ ಕಂಪನಿಗೆ ಕಲ್ಲಿದ್ದಲು ಸರಬರಾಜು ವ್ಯವಸ್ಥೆ ಮಾಡಿದೆ.

ಅದಾನಿ ವಿದ್ಯುತ್ ಕಂಪನಿಯ ರಾಜಸ್ತಾನ ಘಟಕವು ರಾಜ್ಯದಲ್ಲಿ ವಿದ್ಯುತ್ ಸ್ಥಾವರ ಹೊಂದಿದ್ದು, ಬಿಹಾರ ರಾಜ್ಯದಲ್ಲಿನ ಸ್ಥಾವರಗಳಿಗೆ ಸ್ಥಳೀಯವಾಗಿ ಕಲ್ಲಿದ್ದಲು ಸರಬರಾಜು ಆಗುತ್ತಿದೆ. ಎಲ್ಲ ಪ್ರಕರಣಗಳಲ್ಲಿ ಟ್ರಾನ್ಸ್‍ಮಿಷನ್ ಮತ್ತು ಡಿಸ್ಟ್ರಿಬ್ಯೂಷನ್ ಲಾಸ್ ಇರುವುದಿಲ್ಲ. ಆದರೆ ಪಿಸಿಕೆಎಲ್ ಕರೆದ ಬಿಡ್‍ನಲ್ಲಿ ಅಖೈರುಗೊಳಿಸಿರುವ ಬಿಡ್‍ದಾರರಲ್ಲಿ ಮೆ. ಜಿಎಸ್‍ಡಬ್ಲ್ಯೂ ಹೊರತು ಪಡಿಸಿ ಉಳಿದ ಬಿಡ್‍ದಾರರು ಹೊರ ರಾಜ್ಯದವರು. ಸರಬರಾಜು ಮಾಡುವ ಪ್ರತಿ ಯುನಿಟ್ ಬೆಲೆಯಲ್ಲಿ ಟ್ರಾನ್ಸ್‍ಮಿಷನ್ ನಷ್ಟ ಮತ್ತು ಟ್ರಾನ್ಸ್‍ಮಿಷನ್ ವೆಚ್ಚ ಒಳಗೊಂಡಿದೆ. ಮೆ. ಜಿಎಸ್‍ಡಬ್ಲೂ ವಿದ್ಯುತ್ ಸ್ಥಾವರ ಬಳ್ಳಾರಿಯಲ್ಲಿದ್ದರೂ ವಿದ್ಯುತ್ ಉತ್ಪಾದನೆಗೆ ಆಮದು ಕಲ್ಲಿದ್ದಲ್ಲನ್ನು ಉಪಯೋಗಿಸುತ್ತಿದೆ. ವಿದ್ಯುತ್ ಸ್ಥಾವರ ಬಂದರಿನಿಂದ ಸಾಕಷ್ಟು ದೂರವಿದೆ. ಕಲ್ಲಿದ್ದಲು ಸಾಗಾಣಿಕೆ ವೆಚ್ಚ ಪ್ರತಿ ಯುನಿಟ್‍ಗೆ 50 ಪೈಸೆ ಆಗುತ್ತದೆ. ಈ ವೆಚ್ಚವು ಬಿಡ್ ಮೊತ್ತದಲ್ಲಿಯೇ ಸೇರಿರುತ್ತದೆ. ಸದರಿ ಕಂಪನಿಯು ಬಿಡ್ ಮೊತ್ತದಲ್ಲಿ ಎಸ್ಕಾಲೇಶನ್ ಕಾಸ್ಟ್ ಸೇರಿರುವದಿಲ್ಲ. 25 ವರ್ಷದ ಅಂತ್ಯದಲ್ಲಿ ಕೂಡಾ ಮೆ. ಜಿಎಸ್‍ಡಬ್ಲೂ ಎರ್ನಜಿ ಲಿಮಿಟೆಡ್‍ರವರಿಂದ ಸರಬರಾಜು ಆಗುವ ಪ್ರತಿ ಯುನಿಟ್ ದರ ರೂ. 3.792 ರಿಂದ ರೂ. 3.856 ರ ಒಳಗಿರುತ್ತದೆ. ಆಕಸ್ಮಾತ್ ಸರ್ಕಾರದ ಶಿಫಾರಸ್ಸಿನಂತೆ ಮರು ಟೆಂಡರ್ ಕರೆದಲ್ಲಿ ಸರ್ಕಾರ ಈ ಲಾಭ ಕಳೆದುಕೊಳ್ಳುತ್ತದೆ. ಟಾಟಾ ಪವರ್‍ರವರು ಸರಬರಾಜು ಮಾಡುತ್ತಿರುವ ಪ್ರತಿ ಯುನಿಟ್ ದರವು ರೂ. 8.08 ಇದೆ. ವಿಜಯಪುರದ ಕೂಡಗಿ ಎನ್‍ಟಿಪಿಸಿ ಘಟಕದಿಂದ ಉತ್ಪಾದಿಸಲಾದ ಪ್ರತಿ ವಿದ್ಯುತ್ ದರವು ಪ್ರಥಮ ವರ್ಷದಲ್ಲಿ ರೂ. 4.10 ಆಗುತ್ತದೆ ಎಂದು 1580 ಮೆಗಾವ್ಯಾಟ್ ವಿದ್ಯುತ್‍ನ್ನು ಖರೀದಿಸಲು ಅನುಮತಿ ನೀಡುವಂತೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ.

ಇಲ್ಲಿ ಪ್ರಮುಖವಾಗಿ ಪರಿಗಣಿಸಬೇಕಾದ ಅಂಶವೆನೆಂದರೆ ಅಂದಿನ ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಅರ್ಥಿಕ ಇಲಾಖೆಯ ಅವಲೋಕನದ ಮೇಲೆ ತನ್ನ ಅಭಿಪ್ರಾಯಗಳೊಂದಿಗೆ 25 ವರ್ಷಗಳ ಧೀರ್ಘಾವದಿ ಅವಧಿಯ ಮೇರೆಗೆ ವಿದ್ಯುತ್ ಖರೀದಿಸಲು, ನಂತರ ಅನುಮೋದನೆಗಾಗಿ ಕರ್ನಾಟಕ ವಿದ್ಯುತ್‍ಚ್ಛಕ್ತಿ ನಿಯಂತ್ರಣ ಆಯೋಗದ ಅನುಮತಿ ಪಡೆಯಲು ಸಚಿವ ಸಂಪುಟದ ಅನುಮೋದನೆ ಕೋರಿರುತ್ತಾರೆ. ಆರ್ಥಿಕ ಇಲಾಖೆ ಕೂಡಾ ಇಂಧನ ಇಲಾಖೆಯ ಸ್ಪರ್ಧಾತ್ಮಕ ದರದ ಸಮುಜಾಯಿಸಿರುವುದನ್ನು ಪರಿಗಣಿಸಿ ವಿದ್ಯುತ್ ಖರೀದಿಯನ್ನು ಅನುಮೋದಿಸಲು ಕೋರಿದೆ. ಮೇಲಿನಂತೆ ಸಚಿವ ಸಂಪುಟದ ಟಿಪ್ಪಣೆಯನ್ನು ಅಂದಿನ ಇಂಧನ ಸಚಿವರಾದ ಕುಮಾರಿ ಶೋಭಾ ಕರಂದ್ಲಾಜೆಯವರಿಗೆ ಕಡತ ಸಲ್ಲಿಕೆ ಆಗಿದೆ.

ಇಂಧನ ಸಚಿವರ ಏಕಪಕ್ಷೀಯ ನಿರ್ಧಾರ.
ಇಂಧನ ಮತ್ತು ಆರ್ಥಿಕ ಇಲಾಖೆಯು ಖರೀದಿಸಲು ಉದ್ದೇಶಿಸಿರುವ ವಿದ್ಯುತ್ ದರ ಬಹಳ ಸಮಂಜಸ ಮತ್ತು ನ್ಯಾಯೋಚಿತವಾಗಿದೆ ಎಂದು ಸಕಾರಣ ಮತ್ತು ವಿವರಗಳೊಡನೆ ಸಲ್ಲಿಸಿದ್ದರೂ ಕೂಡಾ ಶೋಭಾ ಕರಂದ್ಲಾಜೆ ಕಡತದಲ್ಲಿ “ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ನಡೆದ ಟೆಂಡರ್‍ನಲ್ಲಿ ಪ್ರತಿ ಯುನಿಟ್‍ಗೆ ಜಾಸ್ತಿ ಕಾಸ್ಟ ನಮೂದಾಗಿರುವ ಕಾರಣ ಈ ಟೆಂಡರನ್ನು ಕ್ಯಾನ್ಸಲ್ ಮಾಡಿ, ಹೊಸ ಟೆಂಡರ್ ಕರೆಯಬಹುದಾಗಿದೆ. ಸಚಿವ ಸಂಪುಟದ ಅನುಮೋದನೆಗಾಗಿ ಕೋರಿದೆ” ಎಂದು ಸಚಿವ ಸಂಪುಟದ ಮುಂದೆ ಕಡತ ಮಂಡಿಸಿರುತ್ತಾರೆ. ದಿನಾಂಕ 05-05-2011 ರಂದು ನಡೆದ ಸಚಿವ ಸಂಪುಟ ಸಭೆಯು ಮಾನ್ಯ ಇಂಧನ ಸಚಿವರ ಪ್ರಸ್ತಾವನೆಗಳನ್ನು ಅನುಮೋದಿಸಿದೆ.  ಶೋಭಾ ಕರಂದ್ಲಾಜೆಯವರ ಏಕಪಕ್ಷೀಯ ತಿರ್ಮಾನವನ್ನು ಸಚಿವ ಸಂಪುಟ ಅನುಮೋದಿಸಿತು. ಯಡಿಯೂರಪ್ಪ ಸಂಪುಟದಲ್ಲಿ ಪ್ರಭಾವಿ ಸಚಿವರಾಗಿದ್ದ ಶೋಭಾ ಕರಂದ್ಲಾಜೆರವರ ಪ್ರಭಾವ ಕೆಲಸ ಮಾಡಿತು.

ಇಲ್ಲಿ ಬಹಳ ಆತಂಕಕಾರಿ ಅಂಶವೆನೆಂದರೆ ಇಂಧನ ಇಲಾಖೆ ಕಾರ್ಯದರ್ಶಿ ಸಲ್ಲಿಸಿದ ಪ್ರಸ್ತಾವನೆ ಬಗ್ಗೆ ಭಿನ್ನಾಭಿಪ್ರಾಯವಿದ್ದಲ್ಲಿ ಶೋಭಾ ಕರಂದ್ಲಾಜೆಯವರು ಮರು ಪರಿಶೀಲನೆಗೆ ಕಡತವನ್ನು ಇಂಧನ ಇಲಾಖೆಗೆ ಕಳುಹಿಸಬೇಕಿತ್ತು. ನಂತರವೂ ಆಕಸ್ಮಾತ್ ಕಾರ್ಯದರ್ಶಿ ಮತ್ತು ಸಚಿವರ ನಡುವೆ ಭಿನ್ನಾಭಿಪ್ರಾಯವಿದ್ದಲ್ಲಿ ಕಡತವನ್ನು ಮಾನ್ಯ ಮುಖ್ಯಮಂತ್ರಿಗೆ ಸಲ್ಲಿಸಬೇಕಿತ್ತು. ಆದರೆ, ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ನೇರವಾಗಿ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತರಾತುರಿಯಲ್ಲಿ ಅನುಮೋದನೆ ಪಡೆದಂತಿದೆ. ಸಚಿವ ಸಂಪುಟದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಅಧಿಕಾರವಿದೆ. ಸಾಮೂಹಿಕ ಜವಾಬ್ದಾರಿ ಕೂಡಾ. ಆದರೆ, ಸಚಿವ ಸಂಪುಟದ ಟಿಪ್ಪಣೆಗೆ ವಿರುದ್ದವಾಗಿ ಸಚಿವ ಸಂಪುಟದ ನಿರ್ಣಯ ಅನುಮಾನಕ್ಕೆ ಎಡೆಮಾಡಿಕೊಡುತ್ತದೆ. ಸಾರ್ವಜನಿಕ ಹಿತಾಸಕ್ತಿಗೆ ವಿರುದ್ದವಾಗಿ ಇಂಧನ ಸಚಿವರು ತೆಗೆದುಕೊಂಡ ಏಕಪಕ್ಷೀಯ ನಿರ್ಧಾರಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು ಸಂವಿಧಾನದಡಿ ಸಚಿವ ಸಂಪುಟಕ್ಕಿರುವ ವಿವೇಚನಾಧಿಕಾರವನ್ನು ದುರಪಯೋಗಪಡಿಸಿಕೊಂಡಿರುವುದು ರಾಜ್ಯದ ರಾಜಕೀಯ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆ.
ಟೆಂಡರ್ ರದ್ದತಿ ಕ್ರಮ ಕಾನೂನು ಬಾಹಿರ

ಇಂಧನ ಇಲಾಖೆ ಸಚಿವರು ಮೆ. ಜೆಎಸ್‍ಡಬ್ಲ್ಯೂ ಎರ್ನಜಿ ಲಿಮಿಟೆಡ್‍ರವರನ್ನು ರಕ್ಷಿಸಲು ಟೆಂಡರ್ ರದ್ದು ಪಡಿಸಿರುವ ಸಂಶಯವಿದೆ. ಇಂಧನ ಇಲಾಖೆ ಮತ್ತು ಜೆಎಸ್‍ಡಬ್ಲ್ಯೂ ನಡೆದಿರುವ ಪತ್ರ ವ್ಯವಹಾರಗಳು ಟೆಂಡರ್ ರದ್ದು ಪಡಿಸಿರುವ ಪ್ರಕ್ರಿಯೆ ಪೂರ್ವನಿಯೋಜಿತ ಸಂಚೆಂಬ ಅಂಶ ಎದ್ದು ಕಾಣುತ್ತದೆ. ಪ್ರತಿ ಮೆಗಾ ಯುನಿಟ್‍ಗೆ ರೂ. 30 ಲಕ್ಷದಂತೆ ರೂ. 180 ಕೋಟಿಗೆ ಬ್ಯಾಂಕ್ ಗ್ಯಾರಂಟಿ ನೀಡಬೇಕಿತ್ತು. ಆದರೆ, ಜೆಎಸ್‍ಡಬ್ಲ್ಯೂ ನೀಡಿರುವುದು ರೂ. 60 ಕೋಟಿಗೆ ಮಾತ್ರ. ವಿದ್ಯುತ್ ಖರೀದಿ ಒಪ್ಪಂದ ಮಾಡಿಕೊಳ್ಳುವಂತೆ ಅನೇಕ ಬಾರಿ ಪತ್ರ ಬರೆದರೂ ಖರೀದಿ ಒಪ್ಪಂದ ಮಾಡಿಕೊಂಡಿಲ್ಲ. ಜೆಎಸ್‍ಡಬ್ಲ್ಯೂ ಕಂಪನಿಯ ಧೀರ್ಘಾವಧಿ ಕಲ್ಲಿದ್ದಲು ಸರಬರಾಜಿಗಾಗಿ ಮತ್ತು ಆಮದುಗಾಗಿ ಪ್ರಯತ್ನ ಪ್ರಕ್ರಿಯೆ ಚಾಲ್ತಿಯಲ್ಲಿದೆ. ರೆಜೆಂಟ್ ಅಫ್ ಸರೋಗನ್‍ರವರ ಕಲ್ಲಿದ್ದಲು ಗುತ್ತಿಗೆಯನ್ನು ಸುಪ್ರಿಂ ಕೋರ್ಟ ರದ್ದು ಪಡಿಸಿದೆ. ಸಿಐಸಿ ಎನರ್ಜಿ ಲಿಮಿಟೆಡ್ ಕಂಪನಿಯು ಬೈಂಡಿಂಗ್ ಅಕ್ವಿಜಿಷನ್ ಅಗ್ರಿಮಂಟ್ ಅಂತಿಮ ಹಂತದಲ್ಲಿದೆ, ಎಂದು ಕಾಲದೂಡಿದೆ. ಅಂದರೆ, ಬಿಡ್ ಸಲ್ಲಿಸುವ ಸಂದರ್ಭದಲ್ಲಿ ಸ್ಥಳೀಯವಾಗಿ ಕಲ್ಲಿದ್ದಲು ಸರಬರಾಜು ಆಗುವ ಭರವಸೆಯೊಂದಿಗೆ ಬಿಡ್ ಸಲ್ಲಿಸಿದ್ದ ಕಂಪನಿಗೆ ಸುಪ್ರಿಂ ಕೋರ್ಟ ಕಲ್ಲಿದ್ದಲು ಗಣಿ ಗುತ್ತಿಗೆಗಳನ್ನು ರದ್ದು ಪಡಿಸಿದ ನಂತರ, ವಿದೇಶದ ಕಂಪನಿಗಳೊಡನೆ ಕಲ್ಲಿದ್ದಲು ಆಮದಿಗೆ ಪ್ರಯತ್ನಿಸುತ್ತಿತ್ತು. ಕಲ್ಲಿದ್ದಲು ಸರಬರಾಜು ಖಾತ್ರಿ ಇಲ್ಲದ ಕಾರಣ ಪ್ರಭಾವಬೀರಿ ಟೆಂಡರನ್ನು ರದ್ದು ಪಡಿಸಿರುವ ದೂರುಗಳಿವೆ. ಅಕಸ್ಮಾತ್ ಟೆಂಡರ ರದ್ದುಪಡಿಸದೆ ವಿದ್ಯುತ್ ಸರಬರಾಜು ಮಾಡುವಂತೆ ಕಂಪನಿಗೆ ಕಾರ್ಯಾದೇಶ ನೀಡಿದರೆ, ಕಂಪನಿಯು ಪ್ರತಿ ಯುನಿಟಿಗೆ ರೂ.3.80 ದgದÀಲ್ಲಿ ವಿದ್ಯುತ್ ಸರಬರಾಜು ಮಾಡಬೇಕಿತ್ತು.

ಕಲ್ಲಿದ್ದಲು ಗಣಿ ಗುತ್ತಿಗೆ ಅಥವಾ ಕಲ್ಲಿದ್ದಲು ಸರಬರಾಜು ಕಂಪನಿಯ ಜವಾಬ್ದಾರಿಯಾಗಿತ್ತು. ಕಂಪನಿಯು ಕಲ್ಲಿದ್ದಲು ಸರಬರಾಜು ಖಾತ್ರಿ ಇಲ್ಲದ ಕಾರಣ ಟೆಂಡರ್ ರದ್ದುಪಡಸಲು ಇಂಧನ ಸಚಿವರ ಮೇಲೆ ಪ್ರಭಾವ ಬೀರಿರುವ ಅಂಶದ ಬಗ್ಗೆ ಹೆಚ್ಚಿನ ತನಿಖೆಯ ಅವಶ್ಯವಿದೆ. ಟೆಂಡರ್ ರದ್ದು ಪಡಿಸುವ ಮುನ್ನ ವಿದ್ಯುತ್‍ಚ್ಛಕ್ತಿಯ ಅಧಿನಿಯಮದಂತೆ ಕರ್ನಾಟಕ ವಿದ್ಯುತ್‍ಚ್ಛಕ್ತಿ ನಿಯಂತ್ರಣ ಆಯೋಗದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಿದೆ. ಸರ್ಕಾರ ಈ ನಿಯಮವನ್ನು ಕೂಡಾ ಗಾಳಿಗೆ ತೂರಿದೆ. ಕರ್ನಾಟಕ ವಿದ್ಯುತ್‍ಚ್ಛಕ್ತಿ ನಿಯಂತ್ರಣ ಆಯೋಗ ಇಂಧನ ಇಲಾಖೆಗೆ ಪತ್ರ ಬರೆದು ತನ್ನ ಅನುಮತಿ ಇಲ್ಲದೇ ಬಿಡ್ ರದ್ದುಪಡಿಸಿರುವುದು ಕಾನೂನು ಬಾಹಿರವೆಂದು ತಿಳಿಸಿದೆ. ಇಂಧನ ಇಲಾಖೆಯ ಕಾನೂನು ಸಲಹೆಗಾರರು ಕೂಡಾ ಅದೇ ಅಭಿಪ್ರಾಯ ನೀಡಿದ್ದಾರೆ. ಆದರೆ ಕರ್ನಾಟಕ ವಿದ್ಯುತ್‍ಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷರು ಕಾಟಾಚಾರಕ್ಕೆ ಒಂದು ಪತ್ರ ಬರೆದು ನಂತರ ಮೌನಕ್ಕೆ ಶರಣಾಗಿರುವುದು ಕೂಡ ಅನುಮಾನಸ್ಪದ.
ಟೆಂಡರ್ ರದ್ದುಪಡಿಸಿದ ಕಂಪನಿಯಿಂದ ಹೆಚ್ಚಿನ ದರದಲ್ಲಿ ವಿದ್ಯುತ್ ಖರೀದಿ.

ರದ್ದತಿಯಾದ ಟೆಂಡರ್‍ನಲ್ಲಿ ಕಂಪನಿಯು 25 ವರ್ಷಗಳ ಅವಧಿಗೆ ಪ್ರತಿ ಯುನಿಟ್‍ಗೆ ರೂ. 3.80 ಗೆ ಬಿಡ್ ಸಲ್ಲಿಸಿತ್ತು. ವಿಚಿತ್ರವೆಂದರೆ, ಟೆಂಡರ ರದ್ದು ಪಡಿಸಿದ ನಂತರ ಅದೇ ಕಂಪನಿಯಿಂದ ಅಲ್ಪಾವಧಿ ಆಧಾರದ ಮೇಲೆ 2011-12ನೇ ಸಾಲಿನಲ್ಲಿ ಪ್ರತಿ ಯುನಿಟ್‍ಗೆ ಸರಾಸರಿ ರೂ. 4.26 ರಿಂದ ರೂ. 5.50 ರ ದರದಲ್ಲಿ ರೂ. 1872.42 ಕೋಟಿಗೆ ವಿದ್ಯುತ್ ಖರೀದಿಸಲಾಗಿದೆ. 2012-13 ನೇ ಸಾಲಿನಲ್ಲಿ ಸರಾಸರಿ ರೂ. 4.25 ದರದಲ್ಲಿ ರೂ. 347.91 ಕೋಟಿಗೆ ಮತ್ತು 2013-14ನೇ ಸಾಲಿನಲ್ಲಿ ಸರಾಸರಿ ರೂ. 5.25 ದರದಲ್ಲಿ ರೂ. 1024 ಕೋಟಿಗೆ ವಿದ್ಯುತ್ ಖರೀದಿಸಲಾಗಿದೆ. ಇಲ್ಲಿ ಭ್ರಷ್ಟಾಚಾರ ನಡೆದಿರುವ ಗುಮಾನಿ ಮೂಡುವುದು ಸಹಜ.

ಕಾಲು ಮುರಿದಕೊಂಡ ಸಾರ್ವಜನಿಕ ಹಿತಾಸಕ್ತಿ
ಸರ್ಕಾರ ಟೆಂಡರ ರದ್ದುಪಡಿಸುವ ತಪ್ಪು ನಿರ್ಧಾರ ಕೈಗೊಳ್ಳದಿದ್ದರೆ ಅಲ್ಪಾವಧಿ ಅವಧಿಯ ಮೇಲೆ ವಿದ್ಯುತ್ ಖರೀದಿಸುವ ಪ್ರಸಂಗವೇ ಬರುತ್ತಿರಲಿಲ್ಲ. ಕೆಇಆರ್‍ಸಿಯ ಅಧಿಕೃತ ಮಾಹಿತಿಯಂತೆ 2017-18ನೇ ಸಾಲಿನಲ್ಲಿ ಆರ್‍ಟಿಪಿಎಸ್ 1-7, ಆರ್‍ಟಿಪಿಎಸ್ 8, ಬಿಟಿಪಿಎಸ್ 1, ಬಿಟಿಪಿಎಸ್ 2 ರಿಂದ ಸರಬರಾಜಾಗುವ ಪ್ರತಿ ಯೂನಿಟ್ ವಿದ್ಯುತ್‍ಗೆ ಎಸ್ಕಾಂಗಳು ಕ್ರಮವಾಗಿ ರೂ.4.35, 4.67, 4.61 ಮತ್ತು ರೂ.4.93 ದರ ಪಾವತಿಸುತ್ತವೆ. ಇದನ್ನು ಗಮನಿಸಿದಾಗ ಇಂಧನ ಇಲಾಖೆಯು ಕಡತ ಮತ್ತು ಸಚಿವ ಸಂಪುಟ ಟಿಪ್ಪಣಿಯಲ್ಲಿ ನಿರ್ಧರಿಸಿದ ಅಂಕಿ-ಅಂಶಗಳು ನಿಜವಿದ್ದವೆಂಬುದನ್ನು ಸಾಭೀತುಪಡಿಸುತ್ತವೆ. 2011-12 ರಿಂದ ಪ್ರಸಕ್ತ ಸಾಲಿನವರೆಗೆ ಟೆಂಡರ್ ರದ್ದು ಪಡಿಸಿದ್ದರಿಂದ ರಾಜ್ಯ ಸರ್ಕಾರಕ್ಕೆ ಆದ ನಷ್ಟ ರೂ. 5895 ಕೋಟಿಗಳು. ಇದೇ ಮಾನದಂಡ ಅನುಸರಿಸಿದರೆ 25 ವರ್ಷಗಳಲ್ಲಿ ಸರ್ಕಾರದ ಬೊಕ್ಕಸಕ್ಕೆ ಆಗುವ ನಷ್ಟದ ಪ್ರಮಾಣ ರೂ.

ಇಪ್ಪತ್ತೊಂದು ಸಾವಿರಕ್ಕೂ ಹೆಚ್ಚು. ರದ್ದುಪಡಿಸಲಾದ 1580 ಮೆಗಾವ್ಯಾಟ್‍ನ ಲೋಡ್ ಪ್ಯಾಕ್ಟರ್ ಶೇ. 85 ರಷ್ಟನ್ನು ಪರಿಗಣಿಸಿದರೆ ವಾರ್ಷಿಕವಾಗಿ ರಾಜ್ಯದ ವಿದ್ಯುತ್ ಗ್ರೀಡ್‍ಗೆ ದೊರೆಯುತ್ತಿದ್ದ ವಿದ್ಯುತ್ ಪ್ರಮಾಣ 11,765 ಮೆಗಾವ್ಯಾಟ್. ಪ್ರತಿ ಯುನಿಟ್‍ಗೆ ರೂ. 1 ರಂತೆ ನಷ್ಟ ಪರಿಗಣಿಸಿದರೂ ರಾಜ್ಯದ ಬೊಕ್ಕಸಕ್ಕೆ ಆಗುವ ನಷ್ಟದ ಪ್ರಮಾಣ ರೂ. 29413 ಕೋಟಿ. 2011 ನೇ ಸಾಲಿನಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮಾಸಿಕ 200 ಯುನಿಟ್ ಬಳಸುವ ಗ್ರಾಹಕರು ಪ್ರತಿ ಯುನಿಟಿಗೆ ರೂ.5.50 ಪೈಸೆ ದರವಿತ್ತು. ಪ್ರಸಕ್ತ ಸಾಲಿನಲ್ಲಿ ರೂ.6.90 ಪೈಸೆವಿದೆ. 6 ವರ್ಷಗಳಲ್ಲಿ ಶೇಕಡಾ 25ರಷ್ಟು ವಿದ್ಯತ್ ದರ ಏರಿಕೆಯಾಗಿದೆ. ಸರ್ಕಾರ ಬಿಡ್‍ನ್ನು ರದ್ದುಪಡಿಸದಿದ್ದರೆ, ಬಹುಶಃ ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳ ಮಾಡುವ ಪ್ರಶ್ನೆ ಉದ್ಭವಿಸುತ್ತಿರಲಿಲ್ಲ. ಆದರೆ, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಪ್ರಭಾವಿ ಪವರ್ ಮಿನಿಸ್ಟರ್ ಆಗಿದ್ದ ಕು. ಶೋಭಾ ಕರಂದ್ಲಾಜೆಯವರ ನಿರ್ಧಾರದಿಂದ ವಿದ್ಯುತ್ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ವೈಯಕ್ತಿಕ ಹಿತಾಸಕ್ತಿ ಮುಂದೆ ಸಾರ್ವಜನಿಕ ಹಿತಾಸಕ್ತಿ ಕಾಲು ಮುರಿದುಕೊಂಡು ಬಿದ್ದಂತಾಗಿದೆ. ಸೂಕ್ತ ತನಿಖೆ ನಡೆದರೆ ಪೂರ್ಣ ಸತ್ಯ ಹೊರಬಹುದೆನೋ?.

Leave a Reply

Your email address will not be published.