ಕನ್ನಡಿ-4: ಕರ್ನಾಟಕಕ್ಕೆ ಕಂಟಕವಾಗಿರುವ ಐಎಎಸ್ ಪಾಳೇಗಾರರು

-ಚಿರಂತನ್.ಸಿ

ಇತ್ತೀಚಿಗೆ ಭಾರತಕ್ಕೆ ಅಮೇರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ ಭೇಟಿ ಕೊಟ್ಟಿದ್ದರು. ದೆಹಲಿಯಲ್ಲಿ ಮಳೆಯ ಪ್ರವಾಹದ ಬಗ್ಗೆ ಮಾತನಾಡುತ್ತಾ ಭಾರತದಲ್ಲಿ ಅಭಿವೃದ್ಧಿಗೆ ಅಧಿಕಾರಿಗಳೆ ಅಡ್ಡಗಾಲು ಎಂದರು. ಅವರು ಹೇಳಿದ್ದು ಕಾರ್ಪೋರೇಟ್ ಅಭಿವೃದ್ಧಿಯೋ ಅಥವಾ ಸಾಮಾನ್ಯರ ಅಭಿವೃದ್ಧಿಯೋ ಎಂಬುದರ ಬಗ್ಗೆ ವಿವರಿಸಿಲ್ಲ. ಬ್ರಿಟಿಷರ ವ¸ಹತುಶಾಹಿ ಪಳಯುಳಿಕೆಯಂತಿರುವ ಆಡಳಿತಶಾಹಿ ಎಂದೆಂದಿಗೂ ಉಳ್ಳವರ ಬಾಲ ಹಿಡಿದಿದ್ದೇ ಹೆಚ್ಚು. ಆಡಳಿತಶಾಹಿಯ ಮುಖ್ಯ ಸೇವೆ ಭಾರತೀಯ ಆಡಳಿತ ಸೇವೆ. ಉಳ್ಳವರ ಸೇವೆ ಮಾಡುವ ಇವರಿಗೆ ‘ಬಾಬು’ಗಳು ಎಂಬ ಅಡ್ಡ ಹೆಸರು ಉಂಟು. ಇಂಗ್ಲಿಷಿನಲ್ಲಿ ಐ.ಎ.ಎಸ್. ಎಂದರೆ ಇನ್‍ವಿಸಿಬಲ್ ಆಫ್ಟರ್ ಸನ್‍ಸೆಟ್ ಅಂತಲೂ, ಯಾರಿಗೆ ಏನೇ ತೊಂದರೆಯಾದರೂ ತಮ್ಮ ಸುಭದ್ರತೆ ನೋಡಿಕೊಳ್ಳುವ ಮಂದಿ ಎಂದೂ ಕರೆಯಲಾಗುತ್ತದೆ. ಸರಕಾರದ ಸೇವೆ ಹೆಸರಿನಲ್ಲಿ ನುಂಗುವ ಇವರು ಮೈಯಲ್ಲಾ ಎಣ್ಣೆ ಹಚ್ಚಿಕೊಂಡು ನುಣುಚಿಕೊಳ್ಳುವ ರೀತಿ ನೀತಿ ನಿಯಮಗಳನ್ನು ತಮ್ಮ ರಕ್ಷಣೆಗೆ ಬಳಸಿಕೊಳ್ಳುವ ಐ ಯಾಮ್ ಸೇಫ್ ಎಂಬ ಗುಳ್ಳೆನರಿ ಬುದ್ದಿಯವರು. ತಪ್ಪಾದರೆ ರಾಜಕಾರಣಿಗಳ ಮುಂದೆ ಕೈಕಟ್ಟಿ ಐ ಯಾಮ್ ಸಾರಿ ಎನ್ನುವರು. ಜವಾನನಿಂದ ಹಿಡಿದು ದಿವಾನ ಕಾರ್ಯದರ್ಶಿವರೆಗೆ ಆಡಳಿತಶಾಹಿಯ ಹಿಡಿತ ಹೊಂದಿರುವ ಐ ಯಾಮ್ ಸೇಫ್‍ಗಳ ಬೇಜವಾಬ್ದಾರಿತನ, ಕರ್ತವ್ಯ ಲೋಪ, ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರದಿಂದ ವ್ಯವಸ್ಥೆಯ ಮೇಲೆ ಸಾರ್ವಜನಿಕರಿಗೆ ನಂಬಿಕೆಯೇ ಇಲ್ಲವಾಗಿದೆ. ದೇಶದಲ್ಲಿ ಯಾವುದೇ ಜಾತೀಯತೆ, ಧರ್ಮ, ಪ್ರಾದೇಶಿಕ ಮನೋಭಾವ ಇಲ್ಲದ ಕ್ಷೇತ್ರವೆಂದರೆ ಭೃಷ್ಟಾಚಾರ ಮಾತ್ರ. ಆದರೂ ಅದರಲ್ಲೂ ಉತ್ತರ ಭಾರದಿಂದ ಬರುವ ಐ ಯಾಮ್ ಸೇಫ್‍ಗಳ ಫ್ಯೂಡಲ್ ಮನಸ್ಥಿತಿಗೆ ಯಾವುದೇ ಸರಿಸಾಟಿ ಇಲ್ಲ.

ಇತ್ತೀಚಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಉತ್ತರ ಭಾರತದಿಂದ ಬರುವ ಅಧಿಕಾರಿಗಳು ಕರ್ನಾಟಕವನ್ನು ಕೊಳ್ಳೆ ಹೊಡೆಯುವ ತಾಣವನ್ನಾಗಿ ಮಾಡಿಕೊಂಡಿದ್ದಾರೆ. ಎಲ್ಲರ ಆಸ್ತಿ ಬಗ್ಗೆ ತನಿಖೆಯಾಗಬೇಕೆಂದು ಆಗ್ರಹಿಸಿದ್ದಾರೆ. ಉತ್ತರ ಭಾರತದ ಹಿನ್ನಲೆಯ ಐ ಯಾಮ್ ಸೇಫ್‍ಗಳು ಷ್ಯೂಡಲ್ ಮನಸ್ಥಿತಿಯವರೇ ಹೆಚ್ಚು. ಉತ್ತರ ಭಾರತದವರಷ್ಟೆ ಅಲ್ಲದೇ ದಕ್ಷಿಣ ಭಾರತದ ಐ.ಎ.ಎಸ್. ಅಧಿಕಾರಿಗಳು ಕೂಡಾ ಯಾವುದರದಲ್ಲೂ ಕಮ್ಮಿ ಇಲ್ಲ. ಎಲ್ಲರೂ ಒಂದೇ ದೋಣಿಯ ಪಯಣಿಗರು. ಆಂಧ್ರ ಪ್ರದೇಶದವರು ತಮ್ಮ ರಾಜ್ಯದ ಗುತ್ತಿಗೆದಾರರಿಗೆ ರಾಜ್ಯದಲ್ಲಿನ ಗುತ್ತಿಗೆ ಕೊಡಿಸುವಲ್ಲಿ ಮಸಲತ್ತು ಮಾಡುತ್ತಾರೆ. ಇತರೇ ಸೌಕರ್ಯ, ಸವಲತ್ತು ವಿಸ್ತರಿಸಿ ಅವರ ಸಂಪತ್ತಿನ ಸಾಮ್ರಾಜ್ಯ ವಿಸ್ತರಿಸಲು ಕಂಕಣಬದ್ಧರಾಗಿದ್ದಾರೆ. ರಾಜ್ಯದಲ್ಲಿರುವ ಗುತ್ತಿಗೆದಾರರಲ್ಲಿ ಆಂಧ್ರದವರೇ ಹೆಚ್ಚು. ಇದಕ್ಕೆ ಕಾರಣವಾಗಿರುವವರು ಆ ರಾಜ್ಯದ ಐ ಎ ಎಸ್ ಅಧಿಕಾರಿಗಳೇ. ಇದರಲ್ಲಿ ತಮಿಳುನಾಡು ಮೂಲದ ಐ.ಎ.ಎಸ್.ಗಳೇನು ಹಿಂದೆ ಬಿದ್ದಿಲ್ಲ. ಇಲ್ಲಿ ಅನಾಥವಾಗಿರುವುದು ರಾಜ್ಯದ ಹಿತ. ಕನ್ನಡಿಗರು ಮಾತ್ರ.

ಅವಿಭಜಿತ ಮೈಸೂರು ಜಿಲ್ಲೆಯ ಅಂದಿನ ನಂಜನಗೂಡು ಉಪವಿಭಾಗದಲ್ಲಿ ಎ.ಸಿ., ಆಗಿದ್ದ ಉತ್ತರ ಭಾರತ ಐ.ಎ.ಎಸ್ ಅಧಿಕಾರಿ ಮತ್ತು ಅವನ ಪತ್ನಿ ತನ್ನ ಮನೆಯ ಕೆಲಸದ ಹುಡುಗಿಗೆ ಸಾಕಷ್ಟು ಹಿಂಸೆ ಕೊಟ್ಟರು. ನೊಂದ ಯುವತಿ ಕ್ವಾಟ್ರಸಿನ ಬಾವಿಯೊಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಳು. ಹೆದರಿದ ಐ.ಎ.ಎಸ್. ಅಧಿಕಾರಿ ಹೆಂಡತಿಯೊಡನೆ ಮೈಸೂರು ಜಿಲ್ಲಾಧಿಕಾರಿಯ ಬಂಗಲೆಯ ಮಹಡಿಯ ಕೋಣೆಯಲ್ಲಿ ಬಚ್ಚಿಟ್ಟುಕೊಂಡರು. ರಾಜಿ ಸಂಧಾನ ಮಾಡಿದ ತಹಶೀಲ್ದಾರರು ಮೃತ ಯುವತಿಯ ಕುಟುಂಬಕ್ಕೆ ಧನ ಸಹಾಯ ಮಾಡುವಂತೆ ತೀರ್ಮಾನನಿಸಿದರು. ಜವಾಬ್ದಾರಿಯುತ ಅಧಿಕಾರಿಯಾಗಿ ಸತ್ತ ಯುವತಿಗೆ ಕನಿಕರ ತೋರಿಸದೇ ತನ್ನ ಕೈಯಿಂದ ಧನ ಸಹಾಯ ಕೂಡಾ ಮಾಡದೇ, ಗ್ರಾಮ ಲೆಕ್ಕಾಧಿಕಾರಿಗಳಿಂದ ವಂತಿಗೆ ಸಂಗ್ರಹಿಸಿ ಮೃತ ಯುವತಿಯ ಕುಟುಂಬಕ್ಕೆ ಪರಿಹಾರ ನೀಡಿ ಕೈತೊಳೆದುಕೊಂಡು ಪ್ರಕರಣ ಮುಚ್ಚಿ ಹಾಕಲಾಯಿತು.

ಮತ್ತೊಬ್ಬ ಉತ್ತರ ಭಾರತದ ಲೋಭಿ ಅಧಿಕಾರಿ ಎರಡು ದಶಕದ ಹಿಂದೆ ಮಂಡ್ಯದ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು. ಆ ಸಮಯದಲ್ಲಿ ಬಡವರ ಬಡತನ ಹೋಗಲಾಡಿಸಲು ಹಸು ನೀಡುವ ಕಾರ್ಯಕ್ರಮ ಇತ್ತು, ಈ ಅಧಿಕಾರಿ ಬಡವರ ಹೆಸರಿನಲ್ಲಿ ಹನ್ನೆರಡು ಹಸುಗಳನ್ನು ತನ್ನ ಕಾಂಪೌಂಡಿಲ್ಲಿಯೇ ಕಟ್ಟಿ ಹಾಕಿದ್ದರು. ಅದರ ಮೇಲ್ವಿಚಾರಣೆಗೆ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರನ್ನು ನೇಮಿಸಿದ್ದರು. ಸಹಾಯಕ ನಿರ್ದೇಶಕ ಹಸುಗಳಿಗೆ ಮೇವು ಹಿಂಡಿ ಹಾಕಿ, ಕರೆದ ಹಾಲನ್ನು ಹೋಟೆಲ್‍ಗಳಿಗೆ ಮಾರಾಟ ಮಾಡಿ ಹಣವನ್ನು ಅಧಿಕಾರಿಗೆ ಕೊಡಬೇಕಿತ್ತು. ಕನ್ನಡಿಗರ ದೌರ್ಬಲ್ಯವೇನೊ ಈ ಇಬ್ಬರು ಈಗ ವಿಧಾನ ಸೌಧದಲ್ಲಿ ಆಯಕಟ್ಟಿನ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು.

ನಾಲ್ಕೈದು ತಿಂಗಳ ಹಿಂದೆ ನೀರಾವರಿ ಇಲಾಖೆಯ ಕಾರ್ಯದರ್ಶಿಯ ಮನೆಯ ಮೇಲೆ ಲೋಕಾಯುಕ್ತ ದಾಳಿ ನಡೆಸಿದಾಗ ಕೋಟ್ಯಾಂತರ ಹಣ ಮತ್ತು ಮಕ್ಕಳ ಲೈಂಗಿಕ ಸಿ.ಡಿ. ಗಳು ದೊರಕಿದವು. ಆತ ಕೂಡಾ ಉತ್ತರ ಭಾರತದವರು. ಕಳೆದ ಒಂದು ತಿಂಗಳಿನಿಂದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ ಭೂಹಗರಣದ ಬಗ್ಗೆ ಮಾಧ್ಯಮಗಳಲ್ಲಿ ಬಹಳ ಚರ್ಚೆಯಾಗುತ್ತಿದೆ. ಮಣ್ಣು, ಹೊನ್ನು ಮತ್ತು ಹೆಣ್ಣಿನ ವಿಚಾರದಲ್ಲಿ ಐ ಯಾಮ್ ಸೇಫ್‍ಗಳು ಬಹಳ ಮುಕ್ತ ಮನಸ್ಸಿನವರು. ಮುಗ್ಧರು ಕೂಡಾ. ಅರವಿಂದ ಜಾಧವ ಸೇವೆಗೆ ಸೇರಿದ ಹೊಸದರಲ್ಲಿ ಎಂಭತ್ತರ ದಶಕದಲ್ಲಿ ರಾಯಚೂರ ಎ.ಸಿ.ಯಾಗಿ ಕಾರ್ಯನಿರ್ವಹಿಸುತ್ತಿರುವಾಗಲೇ ತಮ್ಮ ತಂದೆಯ ಹೆಸರಿನಲ್ಲಿ ಜಮೀನು ಖರೀದಿಸಿದ್ದರು. ನಂತರದಲ್ಲಿ ತಾಯಿಯ ಹೆಸರಿನಲ್ಲಿ ದೇವನಹಳ್ಳಿಯಲ್ಲಿ ಜಮೀನು ಖರೀದಿಸಿದ್ದಾರೆ. ನಂತರ ಆನೇಕಲ್ಲಿನ ರಾಮನಾಯಕನಹಳ್ಳಿಯಲ್ಲಿ ಜಮೀನು ಖರೀದಿಸಿದ್ದಾರೆ. ಸರ್ಕಾರದಿಂದ ಮಂಜೂರಾದ ಜಮೀನನ್ನು ಮಂಜೂರುದಾರರಿಂದ ಖರೀದಿಸಿ ಪೋಡಿ ಮಾಡಿಕೊಡುವಂತೆ ಒತ್ತಡ ಹೇರಿದ್ದಾರೆ.

ಇದರಲ್ಲಿ ಗಮನಿಸಬೇಕಾದ ಅಂಶವಂದರೆ ಸರ್ಕಾರಿ ಗೋಮಾಳದಲ್ಲಿ ಹೆಚ್ಚಿನ ಜನರಿಗೆ ಮಂಜೂರಾಗಿದ್ದಾಗ ಒಬ್ಬ ವ್ಯಕ್ತಿಗೆ ಪೋಡಿ ಮಾಡಲು ಅವಕಾಶ ಇದೇಯೇ ಎಂಬುದು. 2009ರ ಸರ್ಕಾರಿ ಆದೇಶದಲ್ಲಿ ಏಕ ವ್ಯಕ್ತಿಗೆ ಪೋಡಿ ಮಾಡಬೇಕೆಂದರೆ ಸರ್ವೆ ನಂಬರಿನ ಒಟ್ಟು ವಿಸ್ತೀರ್ಣ ಮಂಜೂರು ವಿಸ್ತೀರ್ಣಕ್ಕಿಂತ ಹೆಚ್ಚಿರಬಾರದು. ಆದರೆ ಇಲ್ಲಿ ಮಂಜೂರಾದ ವಿಸ್ತೀರ್ಣ ಪಹಣಿಯ ವಿಸ್ತೀರ್ಣಕ್ಕೂ ತಾಳೆಯಾಗುತ್ತಿಲ್ಲ. ಜಿಲ್ಲಾ ಒತ್ತಡದಲ್ಲಿ ಜಿಲ್ಲಾಧಿಕಾರಿ ದಾಖಲೆ ಇಲ್ಲದನ್ನು ಮಿಸ್ಸಿಂಗ್ ದಾಖಲೆಯೆಂದು ದಾಖಲೆ ಸೃಷ್ಟಿಸಿ ಪೋಡಿ ಮಾಡಲು ಆದೇಶ ಮಾಡಿದ್ದಾರೆ. ಇದೇ ಮಾನದಂಡವನ್ನು ರಾಜ್ಯದ ರೈತರಿಗೆ ವಿಸ್ತರಿಸಿದರೆ ರಾಜ್ಯದಲ್ಲಿ ಯಾವುದೇ ಪೋಡಿ ಪ್ರಕರಣಗಳು ಬಾಕಿ ಇರುವದಿಲ್ಲ. ರೈತರು ತಾಲೂಕು ಕಚೇರಿಗೆ ಅಲೆಯುವ ಕಾಟ ತಪ್ಪುತ್ತದೆ. ಅಧಿಕಾರಿಗಳ ಜೇಬು ತುಂಬಿಸುವ ಸಮಸ್ಯೆ ಇರುವುದಿಲ್ಲ. ಆದರೆ ಬಡ ರೈತ ಮುಖ್ಯ ಕಾರ್ಯದರ್ಶಿಯಂತೆ ಪ್ರಭಾವಿಶಾಲಿಯಲ್ಲ. ಬೆಂಗಳೂರ ನಗರ ಜಿಲ್ಲಾಧಿಕಾರಿಯಂತೆ ಇನ್ನುಳಿದ ಇಪ್ಪತ್ತೊಂಭತ್ತು ಜಿಲ್ಲಾಧಿಕಾರಿಗಳು ವಿಶಾಲ ಹೃದಯಿಗಳಲ್ಲ. ಪ್ರಕರಣ ಬೆಳಕಿಗೆ ಬಂದ ತಕ್ಷಣ ಲಿಖಿತ ಹೇಳಿಕೆ ನೀಡಿದ ಮುಖ್ಯ ಕಾರ್ಯದರ್ಶಿ ತನ್ನ ತಾಯಿ ದೇವನಹಳ್ಳಿಯಲ್ಲಿ ಕೃಷಿ ಜಮೀನು ಮಾರಿ ಬಂದ ಹಣದಲ್ಲಿ ಆನೇಕಲ್‍ನಲ್ಲಿ ಜಮೀನು ಖರೀದಿಸಿರುವದಾಗಿ ಹೇಳಿದ್ದಾರೆ. ಆದರೆ ಅದು ವಾಣಿಜ್ಯ ಉದ್ದೇಶಕ್ಕೆ ಪರಿವರ್ತಿಸಿದ ಜಮೀನು. ಕೃಷಿಯೇತರ ಆದಾಯದಿಂದ ಬಂದ ಹಣದಲ್ಲಿ ಕೃಷಿ ಜಮೀನು ಖರೀದಿಸುವದು ಭೂಸುಧಾರಣಾ ಕಾಯ್ದೆ ಕಲಂ 79ಎ ಮತ್ತು ಬಿ ಯಲ್ಲಿ ನಿಷಿದ್ದ. ಆದರೆ ಈ ಪ್ರಕರಣದಲ್ಲಿ ಕಳ್ಳನೇ ಕಾವಲದಾರನಂತೆ.

ಇಲ್ಲಿ ಮುಖ್ಯ ಕಾರ್ಯದರ್ಶಿಯ ತಾಯಿಯ ಕೃಷಿ ಜಮೀನಿನ ಪೋಡಿ ಮೇಲಸ್ತುವಾರಿ ಮಾಡಲು ವಾಟ್ಸ್‍ಫ್ ಗ್ರೂಪ್ ಮಾಡಲಾಗಿದೆ. ಅದರಲ್ಲಿ ಮುಖ್ಯ ಕಾರ್ಯದರ್ಶಿ ಪಹಣಿಯ ತಂತ್ರಾಂಶ ನಿರ್ವಹಣೆ ಮಾಡುವ ಭೂಮಿ ಉಸ್ತುವಾರಿ ಕೋಶದ ಅಧಿಕಾರಿಗಳಿಗೆ ಧಮಕಿ ಹಾಕಿದ್ದಾರೆ. ಇದು ಒತ್ತಡ ಹೇರಿದ್ದಕ್ಕೆ ಸರ್ಕಾರಿ ಕೆಲಸ ನಿರ್ವಹಣೆಯಲ್ಲಿ ಹಸ್ತಕ್ಷೇಪವಲ್ಲವಂತೆ. 73 ಎಕರೆ ಇದ್ದ ಸರ್ಕಾರಿ ಗೋಮಾಳ 08 ಎಕರೆಯಾಗಿದ್ದು ಯಾವುದೇ ಅಕ್ರಮವಾಗಿಲ್ಲವೆಂದು ಎ.ಸಿ. ಮತ್ತು ಡಿ.ಸಿ. ಸರ್ಕಾರಕ್ಕೆ ವರದಿ ನೀಡಿದ್ದಾರೆ, ಮಿಸ್ಸಿಂಗ್ ರೆಕಾರ್ಡ್ ಸೃಷ್ಟಿಸಲು ಆದೇಶ ನೀಡಿದ ಡಿ.ಸಿ. ತನ್ನ ಅದೇಶದ ವಿರುದ್ಧ ತಪ್ಪೆಂದು ಹೇಗೆ ತಾನೇ ಸ್ವಯಂ ವರದಿ ಕೊಡಬಲ್ಲರು. ಅಷ್ಟೊಂದು ನ್ಯಾಯಪರತೆ ನಿರೀಕ್ಷಿಸುವದು ಕಲಿಗಾಲದಲ್ಲಿ ತಪ್ಪು ಕೂಡಾ. ಸರ್ಕಾರಕ್ಕೆನಾದರೂ ಸತ್ಯಾಂಶವನ್ನು ಬಯಲಿಗೆ ತರಬೇಕೆÀಂದು ಇಚ್ಛಾಶಕ್ತಿ ಇದ್ದರೇ ನಿವೃತ್ತ ಕಂದಾಯ ಅಧಿಕಾರಿ ಒಬ್ಬರಿಂದ ತನಿಖೆ ಮಾಡಿಸುವದು ಸೂಕ್ತವಾಗುತ್ತಿತ್ತು. ಆದರೆ ಸರ್ಕಾರ ಇಲ್ಲಿ ಮಾಡ ಹೊರಟಿರುವದು ಸತ್ಯದ ಮಾರಣ ಹೋಮ.

IMG_7495ಐಎಎಸ್ ಅಧಿಕಾರಿಗಳ ವಾಟ್ಸಾಫ್ ಗ್ರೂಪಿನಲ್ಲಿ ಇಬ್ಬರು ಮಹಿಳಾಮಣಿ ಅಧಿಕಾರಿಗಳು ಮುಖ್ಯ ಕಾರ್ಯದರ್ಶಿಗೆ ಅನ್ಯಾಯವಾಗಿದೆ. ಅವರ ತೇಜೋವಧೆಯಾಗಿದೆ. ಐಎಎಸ್ ವರ್ಗಕ್ಕೆ ಅವಮಾನವನ್ನು ಸಹಿಸಲು ಅಸಾಧ್ಯ. ಇದನ್ನು ¸ಂಘದ ಮುಂದಿನ ಮಾಸಿಕ ಸಭೆಯಲ್ಲಿ ಪ್ರಸ್ಥಾಪಿಸಿ ಮುಖ್ಯ ಕಾರ್ಯದರ್ಶಿಗೆ ನೈತಿಕ ಧೈರ್ಯ ತುಂಬಬೇಕು ಎಂದು ಚಾಟ್ ಮಾಡಿದ್ದಾರೆ. ನೈತಿಕತೆಯೇ ದುಬಾರಿಯಾಗಿರುವಾಗ ನೈತಿಕ ಸೈರ್ಯ ಎಲ್ಲಿಂದ ತರುವುದು. ವಿಶೇಷವೆಂದರೆ ಈ ಇಬ್ಬರೂ ಮಹಿಳಾ ಮಣಿಗಳು ಕೂಡಾ ಸಂಬಂಧಿಕರ ಮತ್ತು ಬೇನಾಮಿ ಹೆಸರಿನಲ್ಲಿ ರಾಜ್ಯದಲ್ಲಿ ಸಾಕಷ್ಟು ಜಮೀನು ಇದೆ.

ಒಟ್ಟಾರೆ ಮೇಲಿನ ಪ್ರಕರಣಗಳನ್ನು ನೋಡಿದಾಗ ಕರ್ನಾಟಕ ಎಂಬುದು ಹೊರರಾಜ್ಯದ ಐ.ಎ.ಎಸ್. ಅಧಿಕಾರಿಗಳಿಗೆ ಮೇಯಲು ಇರುವ ಹುಲ್ಲುಗಾವಲಾಗಿದೆ. ಇವರಿಗೆ ಈ ನಾಡು, ನುಡಿ ಜಲದ ಬಗ್ಗೆ ಅಭಿಮಾನವಾಗಲಿ; ಕರ್ತವ್ಯ ನಿಷ್ಠೆಯಾಗಲಿ ಇಲ್ಲ. ಈ ನಿರೀಕ್ಷೆಯೇ ಹಗಲುಗನಸು. ಅಂದ ಮಾತ್ರಕ್ಕೆ ರಾಜ್ಯದ ಅಧಿಕಾರಿಗಳೇನು ಸಜ್ಜನರಲ್ಲ. ಪ್ರಾಮಾಣಿಕರೆಂದಲ್ಲ. ಇಲ್ಲಿಯ ಐ.ಎ.ಎಸ್. ಅಧಿಕಾರಿಗಳು ಮಾಡಿದ ಮೋಸದ ಹಣ ಇಲ್ಲಿಯೇ ಹೂಡಿಕೆಯಾಗುತ್ತದೆ. ಕರ್ನಾಟಕ ಮೂಲದ ಐಎಎಸ್ ಗಳ ಸಂಖ್ಯೆ ನಗಣ್ಯ. ನೂಲಿನಂತೆ ಸೀರೆ ಎಂಬ ಗಾದೆಯಂತೆ ಆಡಳಿತಶಾಹಿಯ ಪಿರಾಮಿಡ್‍ನಲ್ಲಿ ಅಧಿಕಾರಿಗಳಿಲ್ಲದ ನೈತಿಕತೆಯನ್ನು ಇಲ್ಲಿನ ಕೆಎಎಸ್ ಅಧಿಕಾರಿಗಳಲ್ಲಿ ಕಾಣಲು ಸಾಧ್ಯವೇ? ಹೊರಗಿನವರ ಹಣ ವಿದೇಶಗಳಲ್ಲಿ ಮತ್ತು ಹೊರ ರಾಜ್ಯಗಳಲ್ಲಿ ಹೊಡಿಕೆಯಾಗುತ್ತಿದ್ದು, ಸಮರ್ಪಕ ತನಿಖೆಯಾದರೇ ಸಾವಿರಾರು ಕೋಟಿ ಹಣ ರಾಜ್ಯದ ಖಜಾನೆಗೆ ಬರುತ್ತದೆ. ದುರ್ಬಲ ರಾಜಕೀಯ ನಾಯಕತ್ವದ ನೆರಳಲ್ಲಿ ಮನಸೋ ಇಚ್ಚೆ ಕುಣಿದು ಕುಪ್ಪಳಿಸುತ್ತಿರುವ ಅಧಿಕಾರಶಾಹಿಗೆ ಅಂಕುಶ ಹಾಕುವ ಧೀಮಂತಿಕೆ ಕಾಣಿಸುತ್ತಿಲ್ಲ.

ಆಂಧ್ರಪ್ರದೇಶ, ಗುಜರಾತ್, ತಮಿಳುನಾಡಿನಲ್ಲಿ ಸ್ಥಳೀಯ ಅಧಿಕಾರಿಗಳಿಗೆ ಪ್ರಾಶಸ್ತ ನೀಡಿರುವುದರಿಂದ ಆ ರಾಜ್ಯಗಳು ಆಡಳಿತ ನಿರ್ವಹಣೆಯಲ್ಲಿ ಕರ್ನಾಟಕಕ್ಕಿಂತ ಮುಂದಿವೆ. ಆಡಳಿತದಲ್ಲಿ ಐಎಎಸ್ ಅಧಿಕಾರಿಗಳೆಂಬ ಪಾಳೇಗಾರರ ಪಾಬಲ್ಯ ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಅದು ಕರ್ನಾಟಕಕ್ಕೆ ಕಂಟಕವಾಗುವ ಸಂಭವವೇ ಹೆಚ್ಚು. ತಮಿಳಿನಾಡಿನಲ್ಲಿ ಇರುವಂತೆ ರಾಜ್ಯದ ಶ್ರೇಣಿಯ ಅಧಿಕಾರಿಗಳನ್ನು 50;50 ಅನುಪಾತದಲ್ಲಿ ಐ.ಎ.ಎಸ್.ಗೆ ಪದೋನ್ನತಿ ನೀಡಿದರೆ ಹೊರರಾಜ್ಯದ ಅಧಿಕಾರಿಗಳ ಅಟ್ಟಹಾಸವನ್ನು ಕೊಂಚಮಟ್ಟಿಗೆ ತಗ್ಗಿಸಬಹುದೇನೋ?

5 Responses to "ಕನ್ನಡಿ-4: ಕರ್ನಾಟಕಕ್ಕೆ ಕಂಟಕವಾಗಿರುವ ಐಎಎಸ್ ಪಾಳೇಗಾರರು"

 1. ಗೋದೂರು ಪ್ರಸನ್  September 10, 2016 at 12:53 pm

  ವಾಸ್ತವದ ಕಠೋರ ಸತ್ಯದ ಅನಾವರಣ ಎಂತಲೇ ಹೇಳಬೇಕು. . .

  Reply
 2. ಗೋದೂರು ಪ್ರಸನ್  September 10, 2016 at 12:54 pm

  ವಾಸ್ತವದ ಕಠೋರ ಸತ್ಯದ ಅನಾವರಣ ಎಂತಲೇ ಹೇಳಬೇಕು. . .
  ಚಿಂತನಾತ್ಮಕ ಬರವಣಿಗೆ.

  Reply
 3. CHANNAPPA  September 12, 2016 at 2:19 pm

  ಧನ್ಯವಾದಗಳು ಸರ್ ಮಾಹಿತಿ ನೀಡಿದ್ದಕ್ಕೆ. ನನಗೆ ಕೆಎಎಸ್ ಹಾಗು ಐಎಎಸ್ ಅಧಿಕಾರಿಗಳ ನಡುವಿನ ಸಂಬಂಧ ಗೊತ್ತಿರಲಿಲ್ಲ. ಮುಂದೆ ಕೆಎಎಸ್ ಅಧಿಕಾರಿಗಳಿಗೆ ಶೇ. ೫೦ ರಷ್ಟು ಪದೊನ್ನತಿ ನೀಡಬೇಕೆಂದು ಒತ್ತಾಯ ಮಾಡೋಣ.

  Reply
 4. ಪುಟ್ಟು  September 14, 2016 at 11:51 pm

  ನಿಮ್ಮ ಕೆಳಗಿನ ಈ ಸಾಲುಗಳು ಅಕ್ಷರಶಃ ನಿಜ…ಸರ್

  ಬ್ರಿಟಿಷರ ವ¸ಹತುಶಾಹಿ ಪಳಯುಳಿಕೆಯಂತಿರುವ ಆಡಳಿತಶಾಹಿ ಎಂದೆಂದಿಗೂ ಉಳ್ಳವರ ಬಾಲ ಹಿಡಿದಿದ್ದೇ ಹೆಚ್ಚು.

  ಬೇಲಿ ಎದ್ದು ಹೊಲ ಮೆಯ್ದಂತೆ…ಅನ್ನುವುದು ಇದಕ್ಕೆ ಏನೋ!

  ಉಳ್ಳವರಿಗೆ ಒಂದು ನ್ಯಾಯ, ಬಡವರಿಗೆ ಒಂದು ನ್ಯಾಯ ಎಂಬ ವಾತಾವರಣ ಸೃಷ್ಟಿಯಾಗಿದೆ.

  ಹೀಗಾಗಿಯೇ ಪ್ರಭುತ್ವದ ನಿಜ ಆಶಯಗಳು ಎಲ್ಲವು ಬರಹ ಭಾಷಣಕ್ಕೆ ಸೀಮಿತವಾಗಿ… ಬಡವರ ರಕ್ತಹೀರುವರ ಸಂಖ್ಯೆ ಹೆಚ್ಚಾಗಿದೆ. ಭ್ರಷ್ಟರನ್ನು ಮಾನವೀಯ ಮನಸ್ಸುಗಳೆಲ್ಲ ಒಗ್ಗೂಡಿ ಪಾಠ ಕಳಿಸಬೇಕಿದೆ.

  Reply
 5. ದೊಡ್ಡಿಪಾಳ್ಯ ನರಸಿಂಹಮೂರ್ತಿ  November 9, 2016 at 8:08 am

  ಈ ಐ.ಎ.ಎಸ್ ಗಳಿಲ್ಲದಿದ್ದರೆ ಆಡಳಿತ ಸಾಧ್ಯವೇ ಇಲ್ಲವೆ? ಈ ಶ್ರೇಣಿ ಅಷ್ಟೊಂದು ಅನಿವಾರ್ಯವೆ? ಎಲ್ಲ ಇಲಾಖೆಗಳ ಆಯಕಟ್ಟಿನ ಜಾಗದಲ್ಲಿ ಅಧಿಕೃತವಾಗಿ ಪ್ರತಿಷ್ಠಾಪಿತರಾಗುವ ಈ ವರ್ಗದ ಭ್ರಷ್ಟಾಚಾರ, ದುರಾಡಳಿತ, ಜನವಿರೋಧಿ ನೀತಿಗಳು ಕಣ್ಣಿಗೆ ರಾಚುತ್ತಿವೆ. ಎಲ್ಲ ಪ್ರಮುಖ ಯೋಜನೆಗಳಲ್ಲೂ ಇವರದೇ ಹಿಡಿತ. ಹಲವು ಜನಪರ ಯೋಜನೆಗಳು ಹಳ್ಳ ಹಿಡಿಯಲು ಈ ವರ್ಗ ನೇರ ಕಾರಣ.
  ಸಾರ್ವಜನಿಕ ಉದ್ಯಮಗಳನ್ನು, ಸಾರ್ವಜನಿಕ ಸಂಪತ್ತನ್ನು ಕಾರ್ಪೊರೇಟ್ ಕಂಪನಿಗಳ ಬಾಯಿಗೆ ಹಾಕುವುದರಲ್ಲಿ ಇವರದೇ ಕೀಲಕ ಪಾತ್ರ. ಬಹಳಷ್ಟು ಮಂದಿ ಐಎಎಸ್‍ಗಳು ಇಂಥಾ ಲೂಟಿಯ ನೇರ ಪಾಲುದಾರರಾಗಿದ್ದಾರೆ. ಮುಂದಿನ ದಿನಗಳಲ್ಲಿ ಐ.ಎ.ಎಸ್ ಹಠಾವೋ ಚಳವಳಿ ಆರಂಭಿಸುವ ಅನಿವಾರ್ಯತೆ ಬರಬಹುದು. ಅಂಥಾ ದಿನಗಳು ಆದಷ್ಟು ಬೇಗ ಬರಲಿ.

  Reply

Leave a Reply

Your email address will not be published.