ಕನಕ ಮತ್ತು ಕನ್ನಡ ಕಾಲು ದಾರಿ ಮನಸ್ಸು

- ಎ. ಅರ್. ಗೋಪಾಲ ಕೃಷ್ಣ

ಕನಕದಾಸರ ಸಾಹಿತ್ಯ ಇಂದು ಪುನರ್ ವಾಖ್ಯಾನ ಗೊಳ್ಳುತ್ತಾ ಕಾವ್ಯ, ಕೀರ್ತನೆಗಳ ಒಳಗಹ್ರಹಿಕೆಗಳಿಂದ ವಿಸ್ರುತ ಆಯಾಮವನ್ನು ಪಡೆದುಕೊಳ್ಳುತ್ತಿದೆ. ಹಳೆಗಾಲದ/ಗತಕಾಲದ ಕವಿಯ ಬರವಣಿಗೆ, ಚಿಂತನೆಗಳು ಹೊಸಕಾಲದ ವಾಸ್ತವಗಳಿಗೆ ಉಂಟುಮಾಡುವ ಸವಲತ್ತುಗಳು ಸಕಾರಾತ್ಮಕವಾಗಿ ಮತ್ತು ನಕಾರಾತ್ಮಕವಾಗಿ ಬಳಕೆ ಗೊಳ್ಳುತ್ತಿರುತ್ತವೆ, ಅವುಗಳ ಸಕಾರಾತ್ಮಕ ಶೋಧನೆ ಸಮಾಜದ ಸ್ವಾಸ್ಥಕ್ಕೆ ಉಪಯುಕ್ತವಾಗುತ್ತದೆ; ನಕಾರಾತ್ಮಕ ಚಿಂತನೆ ಸಮಾಜದ ಅನಾರೋಗ್ಯಕ್ಕೆ ಕಾರಣವಾಗಬಹುದು, ಗಾಂಧೀಜಿ, ಅಂಬೇಡ್ಕರ್, ವಿವೇಕಾನಂದ ಮುಂತಾದವರು ಇಂದು ಈ ರೀತಿಯಾಗಿ ಬಳಕೆಗೊಳ್ಳುತ್ತಿರುವವರಲ್ಲಿ ಮುಖ್ಯರು. ಹಾಗೆಯೇ ದಾಸಪರಂಪರೆ, ವಚನಚಳುವಳಿಯೂ ಸಹ ಬಹಳಮುಖ್ಯವಾಗಿ ನಕಾರಾತ್ಮಕ ಚಿಂತನೆಯಲ್ಲಿ ಬಳಲುತ್ತರುವುದನ್ನು ಕಾಣಬಹುದು. ಇದು ಒಂದು ಜಾತಿಯ, ಒಂದು ಧರ್ಮದ ಹಿತಾಸಕ್ತಿಗಾಗಿ ಮಾತ್ರವೇ ಎಂಬುದನ್ನು ಗಮನಿಸಬೇಕು.kanaka mattu kannada kaalu daari manassu

ಈ ವಿಚಾರಗಳೊಂದಿಗೆ ಜಯಪ್ರಕಾರ್ಶ ಶೆಟ್ಟಿಯವರು ಬರೆದಿರುವ ಕನಕ ಮತ್ತು ಕನ್ನಡ ಕಾಲುದಾರಿ ಮನಸ್ಸು ಇನ್ನಷ್ಟು ಗಂಭೀರ ವಿಚಾರಗಳನ್ನು ಹೇಳುತ್ತದೆ, ಇಲ್ಲಿನ ವಿಚಾರಗಳು ಪ್ರಸ್ತುತ ಭಾರತ ಮತ್ತು ಜಾಗತೀಕ ರಾಜಕೀಯಗಳೊಂದಿಗೆ ಕನ್ನಡದ ಪ್ರಾದೇಶಿಕ ಚಿಂತನೆ ವಿಶ್ವಮಟ್ಟದ ಚಿಂತನೆಯನ್ನು ಹೇಳುವಂತದ್ದು. ಕನಕನ ಸಾಹಿತ್ಯದ ರೂಪಕಗಳು ಇಂದಿನ ರಾಜಕೀಯದ ರೂಪಕಗಳಾಗಿ ಅರ್ಥೈಸಬಹುದಾದ ವಿಧಾನವನ್ನು ಈ ಹೊತ್ತಿಗೆಯಲ್ಲಿ ಕಾಣಬಹುದು; ಪ್ರಮುಖವಾಗಿ ಬಲಪಂಥೀಯ ಚಿಂತನೆಗಳು ಸಮಾಜದ ಪ್ರಭಾವಿ ವ್ಯಕ್ತಿಗಳನ್ನು ಪ್ರಚಾರಕ್ಕಾಗಿಯೋ ಅಥವಾ ತಮ್ಮ ಪ್ರಗತಿಗಾಗಿಯೋ ಬಳಸಿಕೊಳ್ಳುವುದು ಸಾಮಾನ್ಯ, ಗತಕಾಲದ ವ್ಯಕ್ತಿಗಳಾದರೂ ತಮ್ಮದೇ ಸ್ವತ್ತುಗಳಂತೆ ಬಳಸಿ ಅದರ ಮೂಲಕ ಬೃಹತ್ ಲಾಭವನ್ನು ಪಡೆಯುವ ಮಾರ್ಗವನ್ನು ಕಂಡುಕೊಳ್ಳುತ್ತವೆ. . . . . ಹಾಗೆಯೇ ಕನಕ ದಾಸರ ವಿಷಯದಲ್ಲೂ ಆಗಿರುವ ಜಾತಿ ದೃವೀಕರಣ ಕಾಣಬಹುದು ಮತ್ತು ಅದರ ವಿಶ್ಲೇಷಣೆಗೆ ಕನಕರ ಸಾಹಿತ್ಯ, ಕನಕದಾಸರ ಪವಾಡ, ನಾಣ್ಣುಡಿಗಳ ಮೂಲಕ ವಿವರಿಸಿರುವುದು, ಸಮರ್ಥಿಸಿರುವುದು ಹಾಗು ಜನತೆಯನ್ನು ನಂಬಿಸಿರುವುದು ನೋಡಬಹುದು.

ಭಾರತದ ರಾಜಕೀಯ ವಿಷಯಗಳಲ್ಲಿ ಚರ್ಚೆಯಾಗುತ್ತಿರುವ ಮೀಸಲಾತಿ ನಿಲುಗಡೆ, ಆಹಾರದ ನಿರ್ಭಂಧಗಳು, ಜಾತಿ ಅಸಮಾನತೆ, ಮಹಿಳಾ ಶೋಷಣೆ, ಅಧಿಕಾರ ಮತ್ತು ಧರ್ಮದ ದರ್ಪ ಇವುಗಳೆಲ್ಲವನ್ನು ಕನಕದಾಸರ ಕೃತಿಗಳ ಮುಖೇನ ಹಾಗೂ ಕನ್ನಡ ಜಗತ್ತಿನ ಶ್ರಮಣಧಾರೆಯ ತತ್ವಚಿಂತನೆಯಲ್ಲಿ ವಿವರಿಸಿರುವುದು ಬಹಳ ಮುಖ್ಯವಾಗಿ ಗಮನಿಸಬೇಕು, ಆಹಾರದ ವಿಷಯದಲ್ಲಂತೂ ಇಂತದ್ದು ತಿನ್ನಬಾರದು, ಅದುಕೀಳು ಎಂದು ಹೇಳಿ ನಿಶೇಧಾಜ್ಞೆಗಳನ್ನಷ್ಟೇ ಅಲ್ಲದೆ ಅದೇಕಾರಣಕ್ಕಾಗಿ ಕೊಲೆ, ಧಾಳಿಯಾಗುತ್ತಿರುವ ಸಂಧರ್ಭಗಳಲ್ಲಿ ಅದನ್ನು ಸಮರ್ಥಿಸುವ ಸರ್ಕಾರ ಮತ್ತು ಅದರ ಉದ್ದೇಶಗಳನ್ನು ಬಹಳ ನಿಖರವಾಗಿ ಲೇಖಕರು ಚರ್ಚಿಸಿದ್ದಾರೆ. ಕನಕದಾಸರ ರಾಮಧಾನ್ಯ ಚರಿತೆ, ನಡೆಕಾರ ವೆಂಕಟಗಿರಿಯಪ್ಪನ ಆಹಾರದ ಬಗೆಗಿನ ಮಾತುಗಳು ಮತ್ತು ಜನಪದರ ಆಹಾರದ ಆಯ್ಕೆಗಳು ಲೇಖಕರ ಚಿಂತನೆಯಲ್ಲಿ ವಿಸ್ತøತಗೊಂಡಿವೆ.

‘ಕನಕ ಮತ್ತು ಕಾಲುದಾರಿ ಸಂತ, ನಡೆಕಾರ ಪರಂಪರೆ ರೂಪಿಸಿರುವ ಮುಖ್ಯವಾಹಿನಿಯ ಆಹಾರ ಪರಂಪರೆಗಳು ಜನಸಾಮಾನ್ಯರದ್ದೇ ಹೊರತು ಇಂದು ಸರ್ಕಾರ ನಿರ್ದರಿಸುತ್ತಿರುವ ಆಹಾರದ ರೀತಿಯದ್ದಲ್ಲ ಎಂಬುದು ಗಮನಿಸಬೇಕು.

ದಾಸಪರಂಪರೆ ವೈಷ್ಣವಪಂಥದ ಪುನರ್ ಪ್ರಚಾರಕ್ಕಾಗಿ ರೂಪುತಳೆದ ಚಳುವಳಿ, ಅದರಲ್ಲಿ ಬರುವ ವ್ಯಾಸರಾಯರು, ಜಗನ್ನಾಥ ದಾಸರು, ಶ್ರೀ ಪಾದರು, ಇವರೆಲ್ಲರೂ ಕುಲದಲ್ಲಿ ಬ್ರಾಹ್ಮಣರೇ ಆದರೆ ಅಲ್ಲಿ ವಿಶಿಷ್ಟವಾಗಿ ಕಾಣುವ ವ್ಯಕ್ತಿ ಕನಕ. ಈ ಕನಕನ ಕುಲ, ಆತನ ಹಿನ್ನಲೆ ದಾಸಕೂಟಕ್ಕಿಂತ ತೀರಾ ವಿಭಿನ್ನವಾದ್ದು. ಕನಕ ಆತನ ಕಾಲದಲ್ಲಿ ಎದುರಿಸಬಹುದಾದ್ದ ತೊಂದರೆಗಳು, ಕೇಳಿಕೊಂಡಿರುವ ಪ್ರಶ್ನೆಗಳು, ಕೆಲವೊಂದು ಒಪ್ಪಿ ಕೊಂಡ ಸನ್ನಿವೇಶಗಳು, ಇವುಗಳನ್ನು ಲೇಖಕರು ಕನಕದಾಸರ ಕಾವ್ಯ, ಕೀರ್ತನೆಗಳ ಅದ್ಯಯನದ ಸೂಕ್ಷ್ಮಗ್ರಹಿಕೆಯಿಂದ ವಿವರಿಸಿದ್ದಾರೆ. ಅದರಲ್ಲಿ ಜಾತಿ ಮತ್ತು ಕುಲದ ಕುರಿತಾದ ತೀರ್ಮಾನಗಳು ಬಹುಮುಖ್ಯವಾಗಿ ಚರ್ಚಿಸಿದ್ದಾರೆ. ಹಾಗೆಯೇ ಪ್ರಜಾಪ್ರಭುತ್ವದ ದರ್ಪದಬಗೆಗೆ ಸಾಮಾನ್ಯನ ಜೀವನದ ಬಗೆಗೂ ಅದೇ ಕಾವ್ಯಗಳ ನಿದರ್ಶನಗಳ ಮೂಲಕ ಇಂದಿನ ರಾಜಕೀಯ ಅಧಿಕಾರಕ್ಕೆ ಒಪ್ಪುವಂತೆ ಹೇಳಿದ್ದಾರೆ.

‘ಕನ್ನಡದ ಕಾಲು ದಾರಿ ಮನಸ್ಸು’ ಈಹೊತ್ತಿಗೆಯ ಹೆಸರಿನ ಭಾಗ, ಕನಕದಾಸರನ್ನು ಹಾಗೂ ಕನ್ನಡ ಜಗತ್ತಿನ ಕಾಲುದಾರಿ ಪರಂಪರೆಯನ್ನು ವಿವರಿಸುವ ಮೂಲಕವೇ ವಾಸ್ತವವನ್ನು ಕೆದಕಿ ನೋಡುತ್ತಾರೆ ಲೇಖಕರು. ಶಿಷ್ಟದಾಸ ಪರಂಪರೆಯಲ್ಲಿ ಬಂದಂತಹ ಕಾವ್ಯ, ಕೃತಿ, ಕೀರ್ತನೆಗಳು ಯಾವ ವಸ್ತುವನ್ನು ಪ್ರಚಾರ ಮಾಡಿದವು, ತತ್ವದ ಸಾರಾಂಶÀಗಳ ಮುಖ್ಯ ಉದ್ದೇಶವೇನು ಎಂಬುದನ್ನು ಹರಿ ಎಂಬ ಪದದ ಸುತ್ತಲೇ ನಡೆದಿರುವ ಚಟುವಟಿಕೆಯಂತೆ ಕಾಣುತ್ತದೆ ಎಂಬುದನ್ನು ವಿವರಿಸುತ್ತಾರೆ. ಆದರೆ ಕನಕದಾಸರು ಈ ಪಂಥದೊಳಗಿಂದಲೇ ಕೇಳುವ ಜಾತಿ, ಆಹಾರ, ಭಕ್ತಿಯ ಕೆಲವು ಮುಖ್ಯ ಪ್ರಶ್ನೆಗಳು ಕನಕರನ್ನು ವಿಶಿಷ್ಟವಾಗಿ ಗುರ್ತಿಸುವಂತೆ ಮಾಡುತ್ತವೆ

ಶ್ರಮಣಧಾರೆ ಮತ್ತು ಶಿವಸಂಸ್ಕøತಿಯ ಗಾಢ ತಿಳುವಳಿಕೆಯ ಕಾರಣದಿಂದಾಗಿ ತಮ್ಮ ಪ್ರದೇಶಗಳ ಆಚರಣೆ ಅದರೊಂದಿಗೆ ಶಿವಸಂಸ್ಕøತಿಯ ಸಂಬಂಧ ಅದರ ಕುರುಹುಗಳು, ಕಾಲಾನಂತರ ಆದ ಬದಲಾವಣೆಗಳು ಗಮನಸೆಳೆಯುತ್ತವೆ. ಕರಾವಳಿ ಪ್ರದೇಶಗಳ ನಂಬುಗೆಗಳಲ್ಲಿ, ಆಚರಣೆಗಳಲ್ಲಿ ಅನೇಕ ಕುರುಹುಗಳನ್ನು ಈಹಿನ್ನಲೆಯಲ್ಲಿ ನಿದರ್ಶನವಾಗಿ ಕೊಟ್ಟಿದ್ದಾರೆ; ತುಳಸಿಕಟ್ಟೆ, ಜೋಗಿ ಆಚರಣೆ, ಬೂದೀಸ್ನಾನ, ಮತ್ತು ಜನರು ಕಟ್ಟಿರುವ ಕೆಲವೊಂದು ನುಡಿಗಟ್ಟುಗಳ ಹಿನ್ನಲೆಯಲ್ಲಿ ಶಿವಸಂಸ್ಕøತಿಯ ಕುರುಹುಗಳನ್ನು ಗುರ್ತಿಸುವುದನ್ನು ಕಾಣಬಹುದು.

ಜಾತಿ, ಧರ್ಮ, ಆಹಾರದ ರಾಜಕಾರಣಗಳ ಬಗೆಗೆ ಕನಕದಾಸರ ನಿಲುವನ್ನು ಪ್ರಸ್ತುತಗೊಳಿಸುವುದು ಬಹಳ ಮುಖ್ಯ ಹಾಗು ಆತ ತೆಗೆದ ಪ್ರಶ್ನೆಗಳನ್ನು  ಗೊಳಿಸುತ್ತಾ ಮುಂದುವರೆಯುವುದು ಅಗತ್ಯ. ಈ ಹಿನ್ನಲೆಯಲ್ಲಿ ಕನಕನ ಚಿಂತನೆ ವಾಸ್ತ ವಗೊಳ್ಳಬೇಕು ಇವುಗಳ ನಡುವೆಯೇ ಆತನಸೀಮಿತತೆಯನ್ನು ಲೇಖಕರು ಗುರ್ತಿಸಿದ್ದಾರೆ, ಸ್ತ್ರೀಕುರಿತಾದ ನಿಲುವು (ಹುಟ್ಟಿನ ಬಗೆಗೆ ಕನಕದಾಸರ ಕಾವ್ಯದಲ್ಲಿ ಬಂದಿರುವಂತಹ ಅಂಶಗಳ ಆಧಾರದಲ್ಲಿ) ಸಾಂಪ್ರದಾಯಕವಾಗಿರುವಂತೆಯೇ ಮುಂದುವರೆದಿದೆ. ಇದಕ್ಕೆ ಕಾರಣವೂ ಅವರು ವೈಷ್ಣವ ಪಂಥದೊಳಗೆ ಸೇರಿಕೊಂಡಿರುವ ಚೌಕಟ್ಟಾಗಿರಬಹುದೇ? ಎಂಬ ಪ್ರಶ್ನೆಯ ಮುಖಾಂತರ ಪರಿಹಾರ ನೀಡಲೆತ್ನಿಸಿದ್ದಾರೆ.

 

ಹರಿದಾಸ ಪರಂಪರೆಯ ಮುಖಾಂತರ ಗುರ್ತಿಸುವ ಕನಕದಾಸರು ಯಾವ ಯಾವ ಸಂಧರ್ಭಗಳಲ್ಲಿ ದಾಸ ಪರಂಪರೆಗಿಂತ ವಿಶಿಷ್ಟವಾಗಿ ಕಾಣಿಸುತ್ತಾರೆ ಎಂಬುದನ್ನು ವಿವರಿಸುತ್ತಾ. . . ಕನಕನನ್ನಾಗಿ ನೋಡಿದರೆ ವೈದಿಕ/ಶಿಷ್ಟ ಸಮುದಾಯದೊಳಗೆ ಬಂಡಾಯಗಾರನಾಗಿ, ದಾಸ ಎಂದಾಗ ಕೆಲವೊಂದು ಸಾಂಪ್ರದಾಯಕ ಜಾಡ್ಯಗಳಿಗೆ ಮೌನಿಯಾಗಿ ಇಲ್ಲವೇ ಒಪ್ಪಿತಸ್ಥನಾಗಿ ಇರುವುದನ್ನು ಗುರ್ತಿಸಿದ್ದಾರೆ, ಪುರುಷ ಸೂತ್ರವನ್ನು ಒಪ್ಪಿರುವಂತೆ ಕಾಣುವ ಕನಕದಾಸರನ್ನು ಅನೇಕ ಅಂಶಗಳಿಂದ ಚರ್ಚಿಸಿರುವುದನ್ನು ಕಾಣುತ್ತಾರೆ. ಕುಲ ಶ್ರೇಷ್ಟತೆಗೆ ಮತ್ತು ಹುಟ್ಟಿನ ಕಾರಣಕ್ಕೆ ಹೆಣ್ಣಿನ ಜನನಾಂಗಗಳ ಬಗೆಗೆ ತಳೆಯುವ ನಿಲುವು ಹೆಣ್ಣನ್ನು, ಆಕೆಯ ಸಾಮಾಜಿಕ ಗುರುತನ್ನೂ ವೈದಿಕ ಪುರುಷ ದೃಷ್ಟಿಯಲ್ಲಿ ನೋಡಿರುವುದನ್ನು, ಹಾಗೆಯೇ ಆಹಾರ, ಜಾತಿ ಕುಲ, ಪ್ರಭುತ್ವಗಳ ಬಗೆಗೆ ಮಂಡಿಸಿರುವ ಅನೇಕ ವಿಚಾರಗಳನ್ನು ಅವರ ಕಾವ್ಯ ಕೀರ್ತನೆಗಳಿಂದ ಉದಾಹರಿಸಿ ವಿವರಿಸಿದ್ದಾರೆ. ‘ಈ ಎರಡೂ ತಾತ್ವಿಕತೆಗಳಿಗೆ ಸರಿಯಾಗುವಂತೆ ಲೇಖಕರು ಹೇಳಿರುವ ಮಾತೊಂದನ್ನು ಗಮನಿಸಬಹುದು ಕನಕನ ಇಬ್ಬಗೆಯ ತನ ‘ ದೇಗುಲ ಪ್ರವೇಶ ನಿರಾಕರಿಸಿದವರಿಗೆ ಸೆÀಡ್ಡು ಹೊಡೆದು ಹೊಸದೇಗುಲಗಳನ್ನು ನಿರ್ಮಾಣ ಮಾಡಿ ಅರ್ಚನೆಗೆ ಮತ್ತೆ ಅವರನ್ನೇ ಕರೆದು ಗರ್ಭ ಗುಡಿಯ ಹೊರಗೆ ಕೈ ಮುಗಿದು ನಿಲ್ಲುವಂತೆ ‘ ಈ ಮಾತು ಕನಕ ದಾಸರ ಕೆಲವೊಂದು ಸಂಧರ್ಭಗಳಿಗೆ ಅನ್ವಯಿಸುತ್ತದೆ. ಹಾಗೆಯೇ ಈ ರೀತಿಯ ಕನಕನ ಅಭಿವ್ಯಕ್ತಿ ದಾಸಕೂಟದ ಒಳಗಿದ್ದ ಪರಿಣಾಮವೋ.? ಎಂಬುದು ಪ್ರಶ್ನೆಯಾಗಬಹುದು. ಶಿವಶರಣರು/ವಚನಕಾರರು  ಜಾತಿ, ಪುರಾಣ, ವೇದ, ಅಕ್ಷರಸ್ಥ ಸಮುದಾಯ, ಭಕ್ತಿ ಇವುಗಳ ಬಗೆಗೆ ತಳೆದ ತೀವ್ರ ಸ್ವರೂಪದ ಬಂಡಾಯ ಕನಕದಾಸರಲ್ಲಿ ಕೆಲವೊಂದು ಸಂಧರ್ಭಗಳಲ್ಲಿ ಕಾಣಲಾಗದು ಎಂಬುದೂ ಸಹ ಕನಕದಾಸರ ಕೆಲವೊಂದು ಸೀಮಿತತೆಗಳನ್ನು ಗುರುತುಮಾಡುತ್ತದೆ . ಇವರು ಆ ಸನ್ನಿವೇಶಗಳನ್ನೂ ಮೀರಿ ಕನಕನನ್ನು ಯೋಚಿಸಿ , ಕನಕನ ಒಟ್ಟಾರೆ ಚಿತ್ರಣವನ್ನು ರೂಪಿಸಿ ಆತನ ಮುಖ್ಯವಿಚಾರಗಳನ್ನು ಮರೆಮಾಡಿ ಬಂಧಿ ಮಾಡುತ್ತಿರುವವರಿಂದ ಬಿಡಿಸಬೇಕೆಂಬುದು ಲೇಖಕರ ಆಶಯದಂತೆ ತಿಳಿಯಬಹುದು.

 

ಇನ್ನೊಂದು ಮುಖ್ಯ ವಿಚಾರವೆಂದರೆ ತತ್ವಪದಕಾರರ, ದಾಸಪರಂಪರೆಯ, ಶಿವಸಂಸ್ಕøತಿಯ ವಿವಿಧ ಶಾಖೆಗಳು ಇವರುಗಳ ಮೂಲಕ ವಿವರಿಸಿರುವ ದೇಸೀ ಚಿಂತನೆ, ಸಾಂಸ್ಕøತಿಕ ಚರ್ಚೆ ಈ ಪುಸ್ತಕಗಳ ವಿಶಿಷ್ಟತೆಗಳಲ್ಲಿ ಮುಖ್ಯವಾದದ್ದು. ಕನ್ನಡ ಸಾಹಿತ್ಯ ಮೀಮಾಂಸೆ ಇವುಗಳಲ್ಲಿಯೇ ಗುರ್ತಿಸಲು ಮುಂದಾಗುವ ವಿಧಾನ, ಅದರ ವಿಶಿಷ್ಟತೆಗಳನ್ನು, ಜೀವಂತಿಕೆಯನ್ನು ಸಂಸ್ಕøತ ಕಾವ್ಯಮೀಮಾಂಸೆಯಿಂದ ದೂರವಿಡುವ ರೀತಿ ಬಹಳಮುಖ್ಯ ಎನಿಸುತ್ತದೆ. ಪುಸ್ತಕದ ಒಟ್ಟಾರೆ ಚರ್ಚೆ ಸಾಂಸ್ಕøತಿಕ ವಿಷಯಗಳಲ್ಲೇ ಮುಂದುವರೆದಿದೆ. ಅದರಲ್ಲೂ ಈ ನೆಲಮೂಲದ ಹುಡುಕಾಟಿಕೆ ತೀವ್ರವಾಗಿರುವುದನ್ನು ಗಮನಿಸಬಹುದು. ಇಲ್ಲಿನ ಬರವಣಿಗೆಯಲ್ಲಿ ಕಾಣುವ ಶಿಷ್ಟ-ಅಶಿಷ್ಟ, ವೈದಿಕ-ಅವೈದಿಕ, ವೈಷ್ಣವ-ಶೈವ ನೆಲೆಯಲ್ಲಿ ನಡೆದಿರುವ ಚರ್ಚೆಗಳು ಇನ್ನೂ ಮುಂದುವರೆದರೆ ಕನ್ನಡ ಸಾಹಿತ್ಯಲೋಕದ ಭ್ರಾಂತಿಗಳು ಅರಿವಿಗೆ ಬರಬಹುದೆಂದು ಮತ್ತು ಬದಲಾಗಬಹುದೆಂಬ ಆಶಾವಾದ ಹುಟ್ಟುತ್ತದೆ.

ಕೊನೆಯದಾಗಿ ಗಂಟಿಲ್ಲದ ನೂಲಿನಿಂದ ಸದೃಢವಾದ ಬಟ್ಟೆಯನ್ನು ನೇಯಬಹುದು, ಅದೇ ಗಂಟಿರುವ ನೂಲು ಆ ಬಟ್ಟೆಯ ಸದೃಢತಡಯನ್ನೇ ಕೆಡಿಸ ಬಲ್ಲದು, ಹಾಗೆಯೇ ಭಾಷೆಯೂ ಕೂಡ. ಕನ್ನಡ ಚಿಂತನೆಯನ್ನು ಕಟ್ಟುವಾಗ ಸರಳವಾದ ಕನ್ನಡ ಬಹಳ ಮುಖ್ಯ, ಹಾಗೂ ಹೇಳುತ್ತಿರುವ ವಿಚಾರ ಜನರಿಗೆ ಅರ್ಥವಾಗುವ ಅಗತ್ಯತೆ ಬಹಳ ಮುಖ್ಯ, ಗೊಂದಲಗಳಾಗಲೀ, ಓದುವಿಕೆಗೆ ತೊಂದರೆಗಳಾಗಲಿ ಭಾಷೆಯಲ್ಲಿ ಸೃಷ್ಟಿಯಾದರೆ ಜನರು ಅದನ್ನು ಓದದೇ ಇರುವ ಸಾಧ್ಯತೆಗಳು ಇರುತ್ತವೆ.  ದೀರ್ಘ ವಾಕ್ಯಗಳು, ಸಮಾಸ ಭರಿತ ಪದಗಳು ಈ ತೊಂದರೆಗೆ ಕಾರಣವಾಗುತ್ತವೆ. ಜಯಪ್ರಕಾಶ್ ಶೆಟ್ಟಿಯವರ ಈ ಪುಸ್ತಕದಲ್ಲಿ ಭಾಷೆಯ ಬಳಕೆ ಉತ್ತಮವಾಗಿದ್ದರೂ ಓದುವಿಕೆಗೆ ಸರಾಗವೆನಿಸದ ಬಿಕ್ಕಟ್ಟು ಇದೆ ಅನ್ನಿಸುತ್ತದೆ. . . ಈ ಬಿಕ್ಕಟ್ಟನ್ನು ನಿವಾರಿಸಿ ಓದಿಕೊಂಡರೆ ಇದೊಂದು ಅತ್ಯುಪಯುಕ್ತ ಪುಸ್ತಕವೆಂದು ಹೇಳಬಹುದು.

Leave a Reply

Your email address will not be published.