ಕನಕ ನಡೆ ಮತ್ತು ಪುರೋಹಿತಶಾಹಿಗಳ ಬುದ್ಧಿಮಾಲಿನ್ಯ

ನಾ. ದಿವಾಕರ

kanakanadeವಿಶ್ವದ ಯಾವುದೇ ಭಾಗದಲ್ಲಿ ಸಾಮಾನ್ಯವಾಗಿ ಮಾಲಿನ್ಯ ಎಂದರೆ ಪರಿಸರ ಮಾಲಿನ್ಯ, ವಾಯು, ಜಲ, ಶಬ್ದ ಮಾಲಿನ್ಯ ಇಷ್ಟು ಮಾತ್ರವೇ ಚರ್ಚೆಗೊಳಗಾಗುತ್ತವೆ. ನಿಘಂಟಿನಲ್ಲೂ ಸಹ ಈ ಪದಗಳನ್ನು ಮೀರಿದ ವ್ಯಾಖ್ಯಾನವನ್ನು ಕಾಣಲಾಗುವುದಿಲ್ಲ. ಆದರೆ ಭಾರತದಲ್ಲಿ ಮಾತ್ರ ಬೌದ್ಧಿಕ ಮಾಲಿನ್ಯ ಮತ್ತು ಸ್ಪರ್ಶ ಮಾಲಿನ್ಯ ಎಂಬ ಎರಡು ವಿದ್ಯಮಾನಗಳು ಕಂಡುಬರುತ್ತವೆ. ಮಾಲಿನ್ಯ ಮತ್ತು ಶುದ್ಧೀಕರಣ ಒಂದು ಸಾರ್ವತ್ರಿಕ ವಿದ್ಯಮಾನವಾಗಿರುತ್ತದೆ. ಮಲಿನಗೊಳಿಸುವುದು ಹೇಗೆ ಸಕಲ ಜನರ ವರ್ತನೆಯಾಗಿರುತ್ತದೋ ಹಾಗೆಯೇ ಶುದ್ಧೀಕರಣವೂ ಸಹ ಎಲ್ಲರ ಕರ್ತವ್ಯವಾಗಿರುತ್ತದೆ. “ ನಾನು ಕಸ ಬಿಸಾಡುತ್ತೇನೆ ನೀನು ಸ್ವಚ್ದಗೊಳಿಸು ” ಎನ್ನುವ ಅಹಂಭಾವ, “ ನನ್ನ ಕಸವನ್ನು ಮಾತ್ರವೇ ನಾನು ಸ್ವಚ್ಚಗೊಳಿಸುತ್ತೇನೆ ” ಎನ್ನುವ ಮನೋಭಾವವಾಗಲೀ ಸಾರ್ವತ್ರಿಕ ಲಕ್ಷಣವಾಗಿ ಕಂಡುಬರುವುದಿಲ್ಲ. ಮಲಿನಗೊಳಿಸುವುದು ಮಾನವನ ನಿತ್ಯ ಜೀವನದ ಪ್ರಕ್ರಿಯೆಯಲ್ಲಿ ಸಂಭವಿಸುವ ಒಂದು ವಿದ್ಯಮಾನ. ಆದರೆ ಸ್ವಚ್ಚಗೊಳಿಸುವುದು ಸಾಮೂಹಿಕ ಪ್ರಜ್ಞೆ ಮತ್ತು ನಾಗರಿಕ ಪ್ರಜ್ಞೆಗೆ ಸಂಬಂಧಿಸಿದ ವಿದ್ಯಮಾನ. ನಾಗರಿಕ ಪ್ರಜ್ಞೆ ಜಾಗೃತವಾಗಿರುವ ಯಾವುದೇ ಸಮಾಜದಲ್ಲಿ ಮಾಲಿನ್ಯ-ಸ್ವಚ್ಚತೆ-ಶುದ್ಧೀಕರಣ ಪ್ರಕ್ರಿಯೆಗಳು ಪರಸ್ಪರ ಪೂರಕವಾಗಿರುತ್ತವೆ. ನಿರ್ದಿಷ್ಟ ಅಹಮಿಕೆಗಳಿಂದ ಹೊರತಾದ ಸಾರ್ವಜನಿಕ ವಿದ್ಯಮಾನವಾಗಿರುತ್ತವೆ. ಆದರೆ ಭಾರತದ ಸಂದರ್ಭದಲ್ಲಿ ಹೀಗಾಗುವುದಿಲ್ಲ.

ಇದನ್ನು ನರೇಂದ್ರ ಮೋದಿ ಸರ್ಕಾರದ ಸ್ವಚ್ಚತಾ ಅಭಿಯಾನದಲ್ಲಿ ಕಾಣಬಹುದು. ಅಭಿಯಾನದ ಮೂಲ ಉದ್ದೇಶ, ರಾಜಕೀಯ ಧೋರಣೆ ಏನೇ ಇದ್ದರೂ ದೇಶದಲ್ಲಿ ಸ್ವಚ್ಚತೆಯ ಅರಿವು ಮೂಡಿಸುವ ಪ್ರಯತ್ನ ಸ್ತುತ್ಯಾರ್ಹ, ಸ್ವಾಗತಾರ್ಹ. ದಾರ್ಶನಿಕ ನಾಯಕರ ಉದಾತ್ತ ಚಿಂತನೆಗಳನ್ನು ಸಾರ್ವಜನಿಕ ವಲಯದಲ್ಲಿ ಬಳಸಿಕೊಳ್ಳುವ ಹಪಾಹಪಿ ಸಹಜವಾದದ್ದು. ಭಾರತದಲ್ಲಿ ಇಂತಹ ಕೆಲವು ಪ್ರಯತ್ನಗಳು ವಿಡಂಬನೆಯಾಗಿರುವುದೂ ಸತ್ಯ. ಅಂಬೇಡ್ಕರ್ ಕೇವಲ ದಲಿತ ರಾಜಕಾರಣ-ಮೀಸಲಾತಿಯ ಹರಿಕಾರರಾಗುತ್ತಾರೆ. “ ಏಳಿ ಎದ್ದೇಳಿ ಗುರಿ ಸಾಧಿಸುವವರೆಗೂ ಹೋರಾಡಿ ” ಎಂದು ದೇಶದ ಯುವಜನತೆಗೆ ಕರೆ ನೀಡಿದ ವಿವೇಕಾನಂದರ ಈ ಘೋಷಣೆಯನ್ನು ಹಿಂದೂಗಳಿಗೆ ಅನ್ವಯಿಸುವ ಮೂಲಕ ಅವರನ್ನು ಹಿಂದೂ ಧರ್ಮದ ಪ್ರವರ್ತಕರನ್ನಾಗಿ ಮಾಡಲಾಗುತ್ತದೆ. ತಮ್ಮ ಉದಾತ್ತ ಮಾನವೀಯ ಚಿಂತನೆಗಳೊಡನೆ ಸ್ವಚ್ಚತೆಯನ್ನು ಪ್ರತಿಪಾದಿಸಿದ ಗಾಂಧಿ ಸ್ವಚ್ಚ ಭಾರತ ಅಭಿಯಾನದ ಕೃಪೆಯಿಂದ ಕೇವಲ ಸ್ವಚ್ಚತೆಯ ಹರಿಕಾರರಾಗಿದ್ದಾರೆ. ಹಾಗಾಗಿಯೇ ಗಾಂಧಿ ಜಯಂತಿಯಂದು ಪೊರಕೆಗಳ ಮೆರವಣಿಗೆ ನಡೆಯುತ್ತದೆ, ಗಾಂಧೀಜಿಯ ಇತರ ತತ್ವಗಳನ್ನು ಪೊರಕೆ ಹಿಡಿದವರೇ ಗುಡಿಸಿ ಹಾಕುತ್ತಿದ್ದರೂ ನಾವು ತೆಪ್ಪಗಿರುತ್ತೇವೆ. ಬೌದ್ಧಿಕ ಶೌಚವನ್ನೇ ಮೈವೆತ್ತ ಮನಸುಗಳು ಶೌಚಾಲಯಗಳ ಮೂಲಕ ಭಾರತವನ್ನು ಸ್ವಚ್ಚಗೊಳಿಸಲು ಹಾತೊರೆಯುತ್ತಿರುವುದನ್ನು ಸಮಗ್ರ ಕ್ರಾಂತಿ ಎಂದು ಭಾವಿಸುತ್ತೇವೆ.

ಈ ಸಮಗ್ರ ಕ್ರಾಂತಿಯ ಚಿಂತನೆಯ ಹಿಂದೆ ಭಾರತದ ಶ್ರೇಣೀಕೃತ ಸಮಾಜದಲ್ಲಿ ಅಂತರ್ಗತವಾಗಿರುವ ಸ್ಪರ್ಶ ಮಾಲಿನ್ಯ ಮತ್ತು ಬೌದ್ಧಿಕ ಮಾಲಿನ್ಯವನ್ನು ಶುಚಿಗೊಳಿಸುವ ಯಾವುದೇ ಉದ್ದೇಶ ಕಂಡುಬರುತ್ತಿಲ್ಲ. ವಿಶ್ವದ ಇತರ ದೇಶಗಳಲ್ಲೂ ಸಹ ಮೇಲು ಕೀಳು ಎಂಬ ಭಾವನೆ ಇದೆ. ವರ್ಗ ತಾರತಮ್ಯಗಳಿವೆ. ವರ್ಗ ಶೋಷಣೆ ಇದೆ. ಭೌತಿಕ ಅಸ್ಪøಶ್ಯತೆಯನ್ನು ಹೋಗಲಾಡಿಸಿದ್ದರೂ ಬೌದ್ಧಿಕ ನೆಲೆಯಲ್ಲಿ ಇನ್ನೂ ಜೀವಂತವಾಗಿದೆ. ಆದರೆ ಬೌದ್ಧಿಕ ಮಾಲಿನ್ಯ ಮತ್ತು ಸ್ಪರ್ಶ ಮಾಲಿನ್ಯ ಭಾರತದ ಜಾತಿ ವ್ಯವಸ್ಥೆಯಲ್ಲಿ ಒಂದು ಸಾಂಸ್ಥಿಕ ಸ್ವರೂಪ ಪಡೆದುಕೊಂಡಿದೆ. ಆಧುನಿಕತೆಯ ಸೋಗಿನಲ್ಲಿ ಸ್ಪರ್ಶ ಮಾಲಿನ್ಯಕ್ಕೆ ಕೊಂಚ ಮಟ್ಟಿಗೆ ವಿದಾಯ ಹೇಳಿರುವ ಸಮಾಜ ಬೌದ್ಧಿಕ ಮಾಲಿನ್ಯವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡಿರುವುದನ್ನು ಕಾಣಬಹುದು. ಈ ಮಾಲಿನ್ಯ ನಿಯಂತ್ರಣ ಮಂಡಲಿಗಳು ಬಹಿರಂಗವಾಗಿ ಕಾರ್ಯನಿರ್ವಹಿಸದಿದ್ದರೂ ಸಾಂಕೇತಿಕ ಆಚರಣೆಗಳ ಮೂಲಕ ತಮ್ಮ ಶ್ರೇಷ್ಠತೆಯನ್ನು (?) ಉಳಿಸಿಕೊಳ್ಳಲು ಹೆಣಗಾಡುತ್ತವೆ.

The first person to be driven out of a newly constructed villa will be its watchman ಈ ಮಾತುಗಳನ್ನು ಎಲ್ಲೋ ಓದಿದ ನೆನಪು. ಇದು ಎಷ್ಟು ಸತ್ಯ ಅಲ್ಲವೇ. ಆದರೆ ಇದು ವರ್ಗ ಹಿನ್ನೆಲೆಯಲ್ಲಿ ಬಂದಿರುವ ಮಾತುಗಳು. ಭಾರತದ ಸಂದರ್ಭದಲ್ಲಿ, ಜಾತಿ ಪದ್ಧತಿಯ ಆಚರಣೆಗಳ ನೆಲೆಯಲ್ಲಿ ಇದನ್ನು ಪರಾಮರ್ಶಿಸಿದಾಗ ಹಿಂದೂ ಸಂಪ್ರದಾಯದ ಗೃಹಪ್ರವೇಶದ ಸಂದರ್ಭದ ಕೆಲವು ಆಚರಣೆಗಳು ಮುನ್ನೆಲೆಗೆ ಬರುತ್ತವೆ. ಗೃಹಪ್ರವೇಶದ ಸಂದರ್ಭದಲ್ಲಿ ನಡೆಯುವ ಶುದ್ಧೀಕರಣ ಪ್ರಕ್ರಿಯೆ, ಪರಿಶಿಂಚನೆ, ಗಂಜಲದ ಪ್ರೋಕ್ಷಣೆ ಮುಂತಾದ ವಿಧಿವಿಧಾನಗಳ ಹಿಂದೆ ಕೇವಲ ಅಗೋಚರ ದುಷ್ಟ ಶಕ್ತಿಗಳನ್ನು ಓಡಿಸುವ ಉದ್ದೇಶ ಮಾತ್ರ ಇರುವುದಿಲ್ಲ. ಗೃಹ ನಿರ್ಮಾಣದ ಪ್ರತಿ ಹಂತದಲ್ಲಿ ತಮ್ಮ ಪರಿಶ್ರಮ ವಹಿಸಿ ಬೆವರು ಸುರಿಸಿ ದುಡಿಯುವ ಕೂಲಿ ಕಾರ್ಮಿಕರ ಹೆಜ್ಜೆ ಗುರುತುಗಳನ್ನು ಅಳಿಸಿ ಹಾಕುವ ಒಂದು ಜಾತಿ ಪ್ರಜ್ಞೆಯ ಸಾಂಕೇತಿಕ ಸ್ವರೂಪವನ್ನು ಈ ಆಚರಣೆಗಳಲ್ಲಿ ಕಾಣಬಹುದು. ಹೊಸ ಮನೆಯನ್ನು ಪ್ರವೇಶಿಸುವ ಮುನ್ನ ಗೋವನ್ನು ಮನೆಯೊಳಗೆ ಕರೆತರುವುದು ಸಹ ಈ ಮಲಿನವನ್ನು ಹೋಗಲಾಡಿಸುವ ಒಂದು ವಿಶಿಷ್ಟ ಪ್ರಕ್ರಿಯೆಯೇ ಆಗಿದೆ.

ಜಾತಿ ಪ್ರಜ್ಞೆಯನ್ನು ಜೀವಂತವಾಗಿರಿಸುವ ಈ ಆಚರಣೆಗಳ ಹಿಂದೆ ಬೌದ್ಧಿಕ-ಸ್ಪರ್ಶ ಮಾಲಿನ್ಯದ ಪರಿಕಲ್ಪನೆ ದಟ್ಟವಾಗಿರುವುದನ್ನು ಗಮನಿಸಬಹುದು. ವಿಪರ್ಯಾಸವೆಂದರೆ ಹಿಂದೂ ಧರ್ಮದ ಆಚರಣೆಗಳು ಮತ್ತು ಧಾರ್ಮಿಕ ಆಚರಣೆಗಳನ್ನು ಸಾಂಸ್ಕøತಿಕ ಚೌಕಟ್ಟಿನಲ್ಲಿ ವ್ಯಾಖ್ಯಾನಿಸುವ ಪರಂಪರೆಗೆ ಬಲಿಯಾಗಿರುವ ದಲಿತ ಸಮುದಾಯಗಳೂ ತಮ್ಮ ಅರಿವಿಲ್ಲದೆಯೇ ಈ ಕ್ರೂರ ಆಚರಣೆಗಳನ್ನು ಅನುಸರಿಸುತ್ತಿದ್ದಾರೆ. ಬಾಹ್ಮಣ್ಯ ಮತ್ತು ವೈದಿಕ ಪರಂಪರೆ ಜೀವಂತವಾಗಿರಬೇಕೆಂದರೆ ಈ ಆಚರಣೆಗಳೂ ಜೀವಂತವಾಗಿರಬೇಕು. ಹಾಗಾಗಿಯೇ ಗಣಹೋಮ ಇಂದು ಸತ್ಯನಾರಾಯಣ ಪೂಜೆಯಂತೆ ಸಾರ್ವತ್ರಿಕವಾಗಿದೆ. ಈ ಕ್ರೌರ್ಯದ ಸಾರ್ವಜನಿಕ ಅಭಿವ್ಯಕ್ತಿಯನ್ನು ಕನಕನಡೆ ಕಾರ್ಯಕ್ರಮದಲ್ಲಿ ಕಾಣಬಹುದು. ಚಲೋ ಉಡುಪಿಯಿಂದ ಉಡುಪಿಯ ಹಾದಿ ಬೀದಿಗಳು ಮಲಿನಗೊಂಡಿವೆ ಹಾಗಾಗಿ ಕನಕನಡೆಯ ಮೂಲಕ ಉಡುಪಿಯ ಶುದ್ಧೀಕರಣದಲ್ಲಿ ತೊಡಗಿದ್ದೇವೆ ಎಂಬ ಹಿಂದೂ ಮೂಲಭೂತವಾದಿಗಳ ಗುಂಪಿನಲ್ಲಿ ದಲಿತರೂ ಇರಬಹುದು, ಹಿಂದುಳಿದ ವರ್ಗಗಳೂ ಇರಬಹುದು. ಇಲ್ಲಿ ಬೌದ್ಧಿಕ ಮಾಲಿನ್ಯದ ಪರಿಕಲ್ಪನೆ, ಸ್ಪರ್ಶ ಮಾಲಿನ್ಯದ ಮನೋಭಾವ ಮತ್ತು ಶುದ್ಧೀಕರಣದ ಧೋರಣೆಗಳು ಪ್ರಶ್ನಾರ್ಹವಾಗುತ್ತವೆ.

ಜಗನ್ನಾಥ ಪುರಿ ದೇವಾಲಯದಲ್ಲಿ ಜಗಜೀವನ್ ರಾಮ್ ಎದುರಿಸಿದ ಅಪಮಾನ, ಮಹಾಡ್ ಆಂದೋಲನದ ನಂತರ ಅಂಬೇಡ್ಕರ್ ಎದುರಿಸಿದ ಸನ್ನಿವೇಶ ಇವೆಲ್ಲವೂ ಕೇವಲ ಚಾರಿತ್ರಿಕ ಘಟನೆಗಳಲ್ಲ. ಶತಮಾನಗಳ ಕಾಲ ಒಂದು ಜನಸಮುದಾಯವನ್ನು ಶೋಷಣೆಗೊಳಪಡಿಸಿರುವ ಸಾಮಾಜಿಕ ವ್ಯವಸ್ಥೆಯ ಸಾಂಸ್ಥಿಕ ಸ್ವರೂಪವನ್ನು ಈ ಘಟನೆಗಳಲ್ಲಿ ಕಾಣಬಹುದು. ಈ ಸಾಂಸ್ಥಿಕ ಸ್ವರೂಪದ ಆಧುನಿಕ ರೂಪಕವನ್ನು ಕನಕನಡೆ ಬಿಂಬಿಸುತ್ತದೆ. ದೇವಾಲಯ ಪ್ರವೇಶ ಎಲ್ಲ ಜನಸಮುದಾಯಗಳಿಗೂ ಮುಕ್ತವಾಗಿದೆ ಎಂಬ ಸಾರ್ವತ್ರಿಕ ಘೋಷಣೆ ನಮ್ಮನ್ನು ಮಂತ್ರಮುಗ್ಧರನ್ನಾಗಿಸಿದೆ. ಹಾಗಾಗಿ ದೇವಾಲಯದ ಪ್ರಾಂಗಣ ಮತ್ತು ಗರ್ಭಗುಡಿಯ ನಡುವೆ ಇರುವ ಸೂಕ್ಷ್ಮ ತರಂಗಗಳನ್ನು ಗ್ರಹಿಸಲು ವಿಫಲರಾಗಿದ್ದೇವೆ. ಗರ್ಭಗುಡಿಯೊಳಗೆ ಎಲ್ಲ ಜಾತಿಯ ಜನರಿಗೂ ಪ್ರವೇಶ ನೀಡುವ ಒಂದಾದರೂ ದೇವಾಲಯ ಭಾರತದಲ್ಲಿದೆಯೇ ? ಪುರೋಹಿತಶಾಹಿಯ ವಿಕೃತ ಮನೋಧರ್ಮವೊಂದು ಗರ್ಭಗುಡಿಯನ್ನು ಆಕ್ರಮಿಸಿದೆ. ಈ ವಿಕೃತ ಮನೋಧರ್ಮವೇ ಪ್ರತಿನಿತ್ಯ ಪ್ರಾತಃಕಾಲದ ಪೂಜೆಗೆ ಮುನ್ನ ದೇವಾಲಯದ ಪ್ರಾಂಗಣದ ಶುದ್ಧೀಕರಣದಲ್ಲಿ ತೊಡಗುತ್ತದೆ. ಇದು ಬೌದ್ಧಿಕ ಹಾಗೂ ಸ್ಪರ್ಶ ಮಾಲಿನ್ಯದ ಸಾಂಸ್ಥಿಕ ಸ್ವರೂಪ. ಈ ಸ್ವರೂಪದ ಒಂದು ಆಯಾಮವನ್ನು ಕನಕನಡೆ ಪ್ರತಿನಿಧಿಸುತ್ತದೆ.

udutepಇಂದು ಶುದ್ಧೀಕರಣ ಆಗಬೇಕಿರುವುದು ಹಾದಿ ಬೀದಿಗಳಲ್ಲಿ ಅಲ್ಲ. ದೇವಾಲಯಗಳ ಸುತ್ತ ಅಲ್ಲ. ಏಕೆಂದರೆ ಬಾಹ್ಯ ಸ್ವರೂಪದ ಮಾಲಿನ್ಯ ತಂತಾನೆ ಸ್ವಚ್ಚವಾಗುತ್ತದೆ. ಇಟ್ಟ ಹೆಜ್ಜೆ ಗುರುತುಗಳು ಮಳೆ ನೀರಿಗೆ ಸಮಾಧಿಯಾಗುತ್ತವೆ. ನಿಸರ್ಗ ಭೂಮಿಯ ಮೇಲಿನ ಎಲ್ಲ ಗುರುತುಗಳನ್ನೂ ಅಳಿಸಿ ಹಾಕುವ ಸಾಮಥ್ರ್ಯ ಹೊಂದಿದೆ. ಆದರೆ ಆಂತರಿಕವಾಗಿ ಜಾತಿ ವ್ಯವಸ್ಥೆಯ ಆರಾಧಕರ ಮನದಾಳದಲ್ಲಿ ಅಡಕವಾಗಿರುವ ಮಾಲಿನ್ಯವನ್ನು ನೈಸರ್ಗಿಕ ಪ್ರಕ್ರಿಯೆಗಳು ಹೋಗಲಾಡಿಸುವುದಿಲ್ಲ. ಕನಕನಡೆಯ ಕೊಳಕು ಮನಸುಗಳು ರಾಮಮಂದಿರದಲ್ಲಿ ಜನಿಸಿದ ಕೂಸುಗಳಲ್ಲ. ಇವು ಶತಮಾನಗಳಿಂದ ಪೋಷಿಸಲ್ಪಟ್ಟಿರುವ ಇತಿಹಾಸದ ಪಳೆಯುಳಿಕೆಗಳು. ಈ ಮನಸುಗಳು ಇಂದು ಕೇವಲ ಬ್ರಾಹ್ಮಣರನ್ನು ಮಾತ್ರವೇ ಅಲ್ಲದೆ ಎಲ್ಲ ಜಾತಿಗಳನ್ನೂ ಆವರಿಸಿವೆ. ಈ ಬೌದ್ಧಿಕ ಮಾಲಿನ್ಯದ ವಿರುದ್ಧ ಹೋರಾಡುವ ಮುನ್ನ ಕುವೆಂಪು ಹೇಳಿದಂತೆ ಗುಡಿ ಮಸೀದಿ ಚರ್ಚುಗಳಿಂದ ನಾವು ಬೌದ್ಧಿಕವಾಗಿ ಹೊರಬರಬೇಕಿದೆ. ನೂರಾರು ದೇವರುಗಳ ನೂಕಾಚೆ ದೂರ ಎನ್ನುವ ಕವಿ ವಾಣಿ ನಮ್ಮ ಘೋಷವಾಕ್ಯವಾಗಬೇಕಿದೆ.

ಎಂತಹುದೇ ಪ್ರತಿರೋಧವನ್ನು ನುಂಗಿಹಾಕುವ ಸಾಮಥ್ರ್ಯ ಒಂದು ಪ್ರಬಲ ಸಾಂಸ್ಥಿಕ ವ್ಯವಸ್ಥೆಗೆ ಇರುತ್ತದೆ. ಭಾರತದ ಜಾತಿ ವ್ಯವಸ್ಥೆಯನ್ನು ತನ್ನ ಕಬಂಧ ಬಾಹುಗಳಲ್ಲಿ ಅಪ್ಪಿಕೊಂಡಿರುವ ಪುರೋಹಿತಶಾಹಿ ವ್ಯವಸ್ಥೆ ಇದಕ್ಕೆ ಪ್ರತ್ಯಕ್ಷ ಸಾಕ್ಷಿ. ಈ ಪುರೋಹಿತಶಾಹಿ ಪ್ರಜ್ಞೆಯಿಂದ ಮುಕ್ತಿ ಪಡೆಯುವುದು ದಲಿತ ಸಮುದಾಯಗಳ ಪ್ರಥಮ ಆದ್ಯತೆಯಾದಾಗ ಮಾತ್ರ ಕನಕನಡೆಯನ್ನು, ಪೇಜಾವರರ ಆರ್ಭಟವನ್ನು ಎದುರಿಸಲು ಸಾಧ್ಯ. ಬೌದ್ಧಿಕ ಮಾಲಿನ್ಯವನ್ನು, ಸ್ಪರ್ಶ ಮಾಲಿನ್ಯವನ್ನು ಹೋಗಲಾಡಿಸಲು ಸಾಧ್ಯ. ಈ ಸ್ವಚ್ಚತಾ ಅಭಿಯಾನಕ್ಕೆ ಬೇಕಿರುವುದು ಕಡ್ಡಿಪೊರಕೆ ಅಲ್ಲ , ಮಾನವೀಯ ಸಂವೇದನೆ ಮತ್ತು ಬೌದ್ಧಿಕ ಚಿಂತನೆ. ಅಂಬೇಡ್ಕರ್ ಮತ್ತು ಗಾಂಧಿ ಎರಡು ವಿಭಿನ್ನ ನೆಲೆಗಳಲ್ಲಿ ಈ ಅವಶ್ಯಕತೆಗೆ ಪೂರಕವಾಗಿ ಕಾಣುತ್ತಾರೆ. ಇಂದು ಈ ಎರಡೂ ಚಿಂತಕರ ಹೆಜ್ಜೆಗುರುತುಗಳನ್ನು ಅಳಿಸಿ ಹಾಕುವ ಪ್ರಯತ್ನ ನಡೆಯುತ್ತಿದೆ. ಕನಕ ನಡೆಯಲ್ಲಿ ಇದು ಸ್ಪಷ್ಟವಾಗಿ ಕಾಣುತ್ತಿದೆ.

One Response to "ಕನಕ ನಡೆ ಮತ್ತು ಪುರೋಹಿತಶಾಹಿಗಳ ಬುದ್ಧಿಮಾಲಿನ್ಯ"

  1. Purohit  October 25, 2016 at 10:02 am

    And u need a sanskrit name to tell all these? Why dont you use your real name?

    Reply

Leave a Reply

Your email address will not be published.