ಕತೆಗಾರ ಟಿ ಎಸ್ ಗೊರವರ ’ರೊಟ್ಟಿಮುಟಗಿ’ ಕಾದಂಬರಿ

-ಸುನಂದಾ ಕಡಮೆ

’ಭ್ರಮೆ’ ಮತ್ತು ’ಕುದರಿ ಮಾಸ್ತರ’ ಎಂಬೆರಡು ಕಥಾಸಂಕಲನಗಳನ್ನು, ’ಆಡು ಕಾಯೋ ಹುಡುಗನ ದಿನಚರಿ’ ಎಂಬೊಂದು ವಿಶಿಷ್ಠ ಬಗೆಯ ಅನುಭವ ಕಥನವನ್ನೂ ತನ್ನ ದಾರಿಯಲ್ಲಿ ಕ್ರೆಡಿಟ್ ಆಗಿಟ್ಟುಕೊಂಡು ಇದೀಗ ಯುವ ಕವಿ ಕತೆಗಾರ ಟಿ ಎಸ್ ಗೊರವರ ’ರೊಟ್ಟಿ ಮುಟಗಿ’ ಎಂಬ ಅಪರೂಪದ ಪುಟ್ಟ ಕಾದಂಬರಿಯೊಂದನ್ನು ಕನ್ನಡದ ಓದುಗರಿಗೆ ನೀಡಿದ್ದಾನೆ. ಈ ಕಾದಂಬರಿಯಲ್ಲಿ ’ರೊಟ್ಟಿಮುಟಗಿ’ ಕೇವಲ ಒಂದು ದೇಸಿ ಆಹಾರ ಮಾತ್ರವಾಗಿರದೇ ತನ್ನ ಸ್ವಾಧ, ಘಮ ಹಾಗೂ ಪೌಷ್ಟಿಕಾಂಶವುಳ್ಳ ಆರೋಗ್ಯಕರ ಗುಣಗಳಿಂದ, ಇಡೀ ಕಥನದ ಸತ್ವವನ್ನು ಪ್ರತಿನಿಧಿಸುವ ಒಂದು ಇಡಿಯಾದ ರೂಪಕವಾಗಿ ಪರಿಣಮಿಸಿರುವದು, ಟಿ ಎಸ್ ಗೊರವರ ನ ಬರವಣಿಗೆಯ ಒಂದು ವಿಶಿಷ್ಠ ಛಾಪನ್ನು ತೋರಿಸುತ್ತದೆ.

ಅತ್ಯಂತ ಕೆಳವರ್ಗದ ಅನನ್ಯ ಅನುಭವ ಲೋಕವೊಂದನ್ನು ಈ ಕೃತಿ ನಮ್ಮೆದುರು ತೆರೆದಿಡುತ್ತಲೇ ಅನಕ್ಷರತೆ ಹಾಗೂ ಬಡತನಗಳು ಒಂದಕ್ಕೊಂದು ಪೂರಕವಾಗಿ ನಿಂತು ದ್ಯಾಮ ಮತ್ತು ಅವನ ತಾಯಿ ಶಂಕ್ರವ್ವನ ಯಾತನೆಯನ್ನು ಹೆಚ್ಚಿಸುವ ದಿನಚರಿಯಲ್ಲಿ ಎರಡು ಜೀವಗಳ ಮಾನಸಿಕ ಹಾಗೂ ದೈಹಿಕ ನೋವು ಎದ್ದು ಕಾಣಿಸುತ್ತದೆ. ಈಗಾಗಲೇ ಸಾಹಿತ್ಯ ಲೋಕಕ್ಕೆ ಅಪರಿಚಿತವಾಗಿರುವ ಭಿನ್ನ ವಿವರಗಳು ಇಲ್ಲಿಯ ಹೂರಣ. ಯಾವ ಸಿದ್ದಾಂತಗಳನ್ನೂ ಪ್ರತಿಪಾದಿಸದೇ ಗ್ರಾಮೀಣ ಭಿತ್ತಿಯ ಸಹಜ ಜೀವನಾನುಭವದ ಅಭಿವ್ಯಕ್ತಿಯಿಂದಾಗಿ ಈ ಕಥನ ಇನ್ನಷ್ಟು ಒಳಮೈಯನ್ನು ಬಿಚ್ಚಿಡುತ್ತದೆ.

’ರೊಟ್ಟಿಮುಟುಗಿ- ತತ್ತಿ ಸಾರು’ ಪ್ರಿಯನಾದ, ಓಣಿಯಲ್ಲಿ ಮಾರಲು ಬರುವ ಬರ್ಪು ತಿನ್ನುವ ಆಸೆಯುಳ್ಳ ದ್ಯಾಮನ ಮುಗ್ಧ ಲೋಕವೊಂದು ಒಡೆಯುವ ಗಳಿಗೆಯಲ್ಲಿ, ದನ ಮೇಯಿಸ ತೊಡಗಿದ ಆತ ಪರಿಸರದ ಕೂಸಾಗುವ ಪರಿಯ ವಿವರಗಳು ರೊಟ್ಟಿಮುಟಗಿಯ ಅತ್ಯುತ್ತಮ ಭಾಗ, ಅವ್ವನೊಡನೆ ಒಗಟು ಒಡೆಯುವ ಆಟವನ್ನೂ ಆಡುತ್ತಿದ್ದ ಸಂದರ್ಭದಲ್ಲಿ, ಅವನು ಕೇಳುವ ಒಗಟನ್ನೆಲ್ಲ ಒಡೆದರೆ ಎಲ್ಲಿ ಮಗನಿಗೆ ಬೇಸರವಾಗುತ್ತದೋ ಅಂತ ಶಂಕ್ರಮ್ಮ ಒಮ್ಮೊಮ್ಮೆ ಅವನು ಕೇಳುವ ಒಗಟಿಗೆ ಉತ್ತರ ಗೊತ್ತಿಲ್ಲದವಳಂತೆ ನಟಿಸುತ್ತಿದ್ದಳು ಎಂಬಲ್ಲಿ ತಾಯಿ ಮಗನ ಭಾಂದವ್ಯದ ಬಹು ಸೂಕ್ಷ್ಮ ಗೆರೆಯನ್ನು ಎಳೆದು ತೋರಿಸುತ್ತಾನೆ ಗೊರವರ.

ತಾಯಿ ಶಂಕ್ರವ್ವ, ಕೊನೆಯ ರೊಟ್ಟಿ ಹಿಟ್ಟಿಗೆ, ಒಂದು ದಪ್ಪ ರೊಟ್ಟಿ ಮಾಡಿ, ಆ ರೊಟ್ಟಿ ಮ್ಯಾಲ ಒಂದಿಷ್ಟು ಒಳ್ಳೆ ಎಣ್ಣಿ ಸವರಿ , ಎರಡು ಬೆಳ್ಳುಳ್ಳಿ ಎಸಳು, ಚಿಟಿಕೆ ಉಪ್ಪು, ಒಂದಿಷ್ಟು ಹಸಿ ಹಿಂಡಿ ಸವರಿ, ಹಿಂಡಿ ಕಲ್ಲೊಳಗೆ ಹಗೂರ ಕುಟ್ಟಿ, ಉಂಡಿ ತರಹ ಮಾಡಿ, ಮುಟಗಿ ಕಟ್ಟಿ ಕೊಟ್ಟರೆ, ದ್ಯಾಮ ಅದನ್ನು ಪ್ರಪಂಚವೇ ಮರೆತು ತಿನ್ನುತ್ತಿದ್ದ ಎಂಬಲ್ಲಿ, ಇಡೀ ಖಾರ ಖಾರ ರುಚಿಕಟ್ಟಾದ ಗ್ರಾಮೀಣ ಭಾಗದ ಆರೋಗ್ಯಕರ ಪರಿಸರದ ದೃಶ್ಯವನ್ನು ಕೊಡುವ ಜೊತೆಗೆ, ಅವ್ವ ಹದವಾಗಿ ಮಾಡುವ ತತ್ತಿ ಸಾರು ಉಂಡ ದ್ಯಾಮ, ಈರನ ಕೈಯಿಂದ ಅವನ ಬರ್ಪು ಕಸಿದು ತಿನ್ನುವವರೆಗೂ ಅವನ ಬಾಲ್ಯವನ್ನು ಕಟ್ಟಿದ ನೆಳಲು ಬೆಳಕನ್ನು ಪ್ರತಿನಿಧಿಸುತ್ತದೆ.

’ಇಳುಕಲು ಇದ್ದ ಕಡೆ ನೀರು ಹರಿದಂತೆ ತನ್ನ ಪಾಡಿಗೆ ತಾನು ಹರಿಯತೊಡಗಿದ ದ್ಯಾಮನ ಬದುಕು’ ಎಂಬ ರೂಪಕ ನಮ್ಮನ್ನು ಸೆಳೆಯುತ್ತದೆ. ಇಲ್ಲಿ ಬರುವ ಇಂಥ ಅನೇಕ ದ್ವನಿಪೂರ್ಣ ಸಾಲುಗಳನ್ನು ಸುಮ್ಮನೇ ಹೇಳುತ್ತ ಹೋಗುವುದಾದರೆ, ’ಅಂಗಳದೊಳಗೆ ಸಣ್ಣಗೆ ಸೆರಗು ಬೀಸ ತೊಡಗಿದ ತಂಗಾಳಿ ಹಿತಾನುಭವ ನೀಡುತ್ತಿತ್ತು’ ’ಸೂರ್ಯ ತನ್ನ ಉರಿಪಾದಗಳನ್ನು ಹಗೂರಾಗಿ ಎತ್ತಿಡುತ್ತ ತನ್ನ ದಿನಚರಿ ಆರಂಭಿಸಿದ. ಎಂದಿನಂತೆ ಊರು ಕಣ್ಬಿಟ್ಟು ಸೂರ್ಯನ ಆಜ್ಣೆ ಪಾಲಿಸುವಂತೆ ಕಾರ್ಯನಿರತವಾಯಿತು’ ’ಹೆಸರೇ ಗೊತ್ತಿಲ್ಲದ ಕಾಡು ಹೂಗಳ ಸಂಗ ಮಾಡಿದ್ದವು ಜೇನುಗಳು’ ’ದಿನಗಳು ಒಂದೊಂದಾಗಿ ಮರದ ಒಣಗಿದ ಎಲೆಗಳು ಉದುರಿ ಹೋಗುವಂತೆ ತಮ್ಮ ಪಾಡಿಗೆ ಅವು ಕಳೆದು ಹೋಗತೊಡಗಿದವು’ ಈಂಥ ಸಾಲುಗಳಲ್ಲೇ ಗೊರವರನ ಬರವಣಿಗೆಯ ರೂಪಕಗಳ ಬಳಕೆ ಗಮನ ಸೆಳೆಯುತ್ತದೆ. ಕಾಮನಿ, ಹಿಂಬಾಲ, ಬ್ಯಾಸರ, ಲಗಾಸು, ಸಾಪಳಿಸಿ, ಎದೀಗಡ್ರ, ಕಾಟರಿಸಿ, ಮನಾಸ, ತಟಗು, ಜಲ್ಮಕ್ಕೆ, ಸಾಬ ಸವರಾತ್ರಿ, ಕವ್ವುನೆಳ್ಳು.. ಮುಂತಾದ ಗ್ರಾಮೀಣ ಭಾಗದ ಅಪರೂಪದ ಪದಗಳು ಈ ಕೃತಿಯ ಘನತೆಯನ್ನು ಹೆಚ್ಚಿಸಿವೆ.

ಆಕಾಶದ ಚುಕ್ಕಿ ಎಣಿಸುವ ಆಟವಾಡುತ್ತಿದ್ದ ದ್ಯಾಮಣ್ಣ ಹದಿನೈದರ ವಯಸ್ಸಿಗೆ ಬರುತ್ತಿದ್ದಂತೆ ತಾಯಿಯೊಂದಿಗೆ ಹತ್ತಿ ಬಿಡಿಸಲು ಕಳೆ ತೆಗೆಯಲು ಶೇಂಗಾ ಹರಿಯಲು ಜೋಳದ ತೆನೆ ಮುರಿಯಲು ಹೋಗುವಲ್ಲಿಯೇ ಅವನ ಕಾಯಕ ಪ್ರೀತಿ ತೋರುತ್ತದೆ ಮತ್ತು ಪಕ್ಕದ ಮನೆಯ ಅಜ್ಜಿ ರುದ್ರಮ್ಮಳೊಡನೆ ಮಾಡುವ ತಮಾಷೆ ಅವನ ಹರೆಯವನ್ನು ಕಾಣಿಸುತ್ತದೆ. ಮಗನ ಭವಿಷ್ಯದ ಕುರಿತು ಅಪಾರ ಕಾಳಜಿಯಿರುವ ಶಂಕ್ರಮ್ಮ ಒಂದು ರಾತ್ರಿ ಇದ್ದಕ್ಕಿದ್ದಂತೆ ಪಿಡುಸು ರೋಗ ಮರುಕಳಿಸಿ ತೀರಿಕೊಳ್ಳುತ್ತಾಳೆ. ರುದ್ರಮ್ಮ ನ ಸೊಸೆ ದನ ಕಾಯುವ ಕೆಲಸ ಹಚ್ಚಿಕೊಡುತ್ತಾಳೆ ನಂತರ ದ್ಯಾಮ ಊರಿನ ಎಲ್ಲ ದನಗಳನ್ನು ಕೇಳಿ ಪಡೆದು ಮೇಯಿಸಲು ಒಯ್ಯತೊಡಗುತ್ತಾನೆ. ಹಾದಿಮನಿ ಜೋಗಿನ, ಹಿರೇಮಠ, ಕಾತ್ರಾಳ , ಕಮಾಟ್ರಿ, ಸುಣಗಾರ, ಮುಜಾವರ, ಗೌಡರ ಹೀಗೆ ದ್ಯಾಮ ನಾನಾ ಸಮುದಾಯದವರೆಲ್ಲರ ದನಗಳನ್ನೂ ಕಾಯತೊಡಗುವ ಕೆಲಸದಲ್ಲೇ ಒಂದು ರೀತಿಯ ಸಮಾನತೆಯ ಎಳೆಗಳು ಗ್ರಾಮೀಣ ಭಾಗದ ಜನತೆಯನ್ನು ಕಾಯುತ್ತಿರುವ ಸುಳಿವನ್ನು ಈ ಕೃತಿ ಲೇಖಕನ ಅರಿವಿಗೂ ಬಾರದೇ ಮೂಡಿ ನಿಂತಿದೆ.
ಆಕಳು ಹೋರಿ ಎಲ್ಲ ಸೇರಿ ಹತ್ತಿಪ್ಪತ್ತು ದನಗಳು ದನಕಾಯುವ ಕೆಲಸ ಆರಂಭಿಸುವ ಮೊದಲು ಊರ ದುರ್ಗವ್ವನಿಗೆ ಎಣ್ಣೆ ಬತ್ತಿ ಹಚ್ಚಿ ಬರುವಷ್ಟು ದೇವರನ್ನು ನಂಬುವ ದ್ಯಾಮ ತನ್ನ ಅಂತ್ಯವನ್ನು ದುರ್ಗವ್ವನಿಗೆ ಬಿಟ್ಟಂತೆ ಭ್ರಮೆಯಾಗುತ್ತದೆ. ಅಪರಿಚಿತ ದನಗಳು ಹಾಯ್ದಾಟ ಮಾಡತೊಡಗಿದರೆ ಲೆಕ್ಕಿ ಜರಲಿನಿಂದ ಹೊಡೆಯುತ್ತಿದ್ದ ಅವನ ಮುಗ್ಧತೆ ಕೂಡ ಅಷ್ಟೇ ನಿರುಪಾಯವಾದದ್ದು.

tsgಬೋರಂಗಿ ಆಡಿಸುವದನ್ನು ಇಷ್ಟಪಡುವ ದ್ಯಾಮ, ಕರಿನಾಳ ಅಡವಿ, ಅಮರಪ್ಪನ ಗುಡ್ಡ ಎರಡೂ ಸ್ಥಳಗಳಿಗೆ ದನಗಳನ್ನು ಹೊಡೆದುಕೊಂಡು ಹೋಗುತ್ತಿದ್ದಾಗ ಪ್ರವೇಶಿಸುವ ಲಂಬಾಣಿ ಹುಡುಗಿಯ ನೆನಪುಗಳನ್ನು ನಿಷ್ಕಾರಣವಾಗಿ ಹಿಡಿದಿಟ್ಟುಕೊಳ್ಳುವ ಮತ್ತು ಮೊಲ ಹಾಗೂ ಏಡಿ ಹಿಡಿಯಲು ಬರುವ ಲಂಬಾಣಿ ಹುಡುಗರೊಂದಿಗೆ ಏಡಿ ಹಿಡಿದು ಸುಟ್ಟು ತಿನ್ನುವ ಸಂಭ್ರಮವೇ ದ್ಯಾಮನ ತಾರುಣ್ಯದ ವಿಸ್ತಾರವನ್ನು ಹೆಚ್ಚಿಸುತ್ತಿತ್ತು. ದ್ಯಾಮ ಶ್ರಮವಹಿಸಿ ಮೇಯಿಸಿದ ಆಕಳುಗಳು ಮೊದಲಿಗಿಂತ ಹೆಚ್ಚು ಹಾಲು ಕೊಡಲಾರಂಭಿಸುತ್ತವೆ. ದನ ಮೇಯಿಸುವ ಸಮಯದಲ್ಲಿ ಹತ್ತಿಪ್ಪತ್ತು ದನಗಳಿಗೆ ತಾನೇ ಒಡೆಯನೆಂಬ ಗತ್ತು , ದನಗಳು ಏಳಿಸುತ್ತಿದ್ದ ಧೂಳು, ಅವು ಸಗಣಿ ಹಾಕುತ್ತಾ ಓಡುವಾಗ ಕಾಣುವ ತಮಾಷೆ, ಹಳ್ಳದಲ್ಲಿ ಕಲಿತ ಈಸು, ಎಮ್ಮೆಯ ಮೈ ತಿಕ್ಕುವ ಖುಷಿ ಅದರ ಜೊತೆಜೊತೆಯಲ್ಲೇ ನಡೆಯುವ ಅವನ ಪಾತರಗಿತ್ತಿ ಹಿಡಿಯುವ ಆಟ , ಅದು ತಪ್ಪಿಸಿಕೊಂಡು ಹೋದರೂ ಅದರ ಬಣ್ಣ ದ್ಯಾಮನ ಕೈಯಿಗೆ ಮೆತ್ತಿರುವುದೇ ಅವನ ಸಂಕಟಗಳ ಪ್ರತಿರೂಪವಾಗಿ ಓದುಗರನ್ನು ಕಾಡುತ್ತದೆ.

ಸುಟ್ಟ ಏಡಿಯ ರುಚಿಯಲ್ಲೇ ಹೊಸ ದಾರಿಯೊಂದರ ತಿರುವಿನಲ್ಲಿದ್ದ ದ್ಯಾಮನಿಗೆ ಆ ಉರಿಯನ್ನು ಮುಟ್ಟಬೇಕೆನಿಸಿ ಉರಿಯೊಳಗೇ ಕೈ ಚಾಚಿ ಸ್ನೇಹಿತರ ಹತ್ತಿರ ಬೈಸಿಕೊಂಡಿದ್ದ ಗಳಿಗೆಯೊಂದು ಅವನ ಬದುಕಿನ ಅಂತ್ಯವನ್ನು ಸೂಕ್ಷ್ಮವಾಗಿ ಹಿಡಿದಿಟ್ಟಿದೆ. ನಂತರ ಬೆದೆಗೆ ಬಂದ ಆಕಳನ್ನು ಕಟ್ಟಿಸಿಕೊಂಡು ಬರಲು ಹೋದ ದ್ಯಾಮ, ತನ್ನ ಸಂಬಂಧಿಯೇ ಆಗಿದ್ದ ಯಂಕಣ್ಣನ ಮಗಳು ಲಕ್ಷ್ಮಿಯ ವಿಷಯ ಪ್ರಸ್ತಾಪವಾದ ಕೂಡಲೇ ಕಾದಂಬರಿ ಲವಲವಿಕೆಯನ್ನು ಹೆಚ್ಚಿಸಿಕೊಂಡಿದೆ. ಮದುವೆಯ ನಂತರ ದನ ಕಾಯುವ ಕೆಲಸ ಬಿಟ್ಟು ಜಾಲಿ ಕಡಿಯುವ ಕೆಲಸಕ್ಕೆ ಹೋಗುತ್ತಾನೆ

ಏಡಿಯನ್ನು ಸುಟ್ಟು ತಿನ್ನುವ ದ್ಯಾಮನ ಹೊಸ ರುಚಿಯನ್ನು ಮೀರಿದ ಪರಿಸರ ಜ್ಣಾನವೊಂದು ಅವನಲ್ಲಿ ಹರಳುಗಟ್ಟುತ್ತಾ ಸಾಗುವುದು, ಅವನ ಮುಗ್ಧ ಪ್ರಪಂಚದ ಬಿಂಬವಾಗಿಯೇ ಕಾಣತೊಡಗುತ್ತದೆ. ಏಡಿ ಸುಡುತ್ತಿರುವ ಬೆಂಕಿಯ ಸುಳಿಗಳು ಅವನ ತಾಯಿ ಶಂಕ್ರಮ್ಮನ ಉರಿವ ಒಲೆಯನ್ನೇ ನೆನಪಿಸುತ್ತವೆ. ದ್ಯಾಮನ ಮನಸ್ಸಿನ ತುಮುಲಗಳು, ಬಾಲ್ಯದ ಅನುಭವಗಳು, ತಾಯಿ ಶಂಕ್ರಮ್ಮನ ವೇದನೆಗಳು, ಎಲ್ಲವೂ ಮೀರಿ ದ್ಯಾಮ ತಾಯನ್ನು ಕಳಕೊಂಡ ನಂತರದ ಅನಾಥಾ ಭಾವದಲ್ಲಿ ಅವನಿಗೆ ದೊರಕುವ ಹೊರ ಜಗತ್ತಿನ ಸಂಬಂಧ, ಎಲ್ಲವೂ ’ರೊಟ್ಟಿ ಮುಟಗಿ’ ಯೊಳಗಣ ಹದವಾದ ಸ್ವಾದವೊಂದು ಎಲ್ಲಿಯೂ ಅಳೆದು ಹೋಗದ ಬಿಂದುವಿನಲ್ಲಿ ಹಿಡಿಯಲ್ಪಟ್ಟು ಗೋಲವಾಗಿ ಪಡಿಮೂಡಿದೆ.

ಕಾದಂಬರಿಯ ಕೊನೆಯಲ್ಲಿ, ಗೋಲ್ ಗುಂಬಜಿನ ಆಕಾರದ ಇದ್ದಿಲು ಭಟ್ಟಿ ದ್ಯಾಮನಿಗೆ ತನ್ನವ್ವನಂತೆ ಕಾಣತೊಡಗಿ, ಅಲ್ಲಿ ಸುಡುತ್ತಿರುವ ಉರಿಯ ಕೆನ್ನಾಲಿಗೆಗಳು ತನ್ನೊಳಗೂ ಸುಡುತ್ತಿರುವಂತೆ ಅನುಭವಕ್ಕೆ ಬರುತ್ತಿದ್ದಂತೆಯೇ ಆತ ಓದುಗರ ಮನಕಲಕುವಂತೆ ಅದನ್ನೇ ಪ್ರವೇಶಿಸಿಬಿಡುತ್ತಾನೆ. ಹೀಗೆ ನಡೆದ ಪ್ರಸಂಗಕ್ಕೆ ಸರಪಳಿಯಂತೆ ತೆಗೆದುಕೊಳ್ಳುವುದಾದರೆ, ಈ ಕೃತಿಯನ್ನು ಗೊರವರ, ’ಕಟ್ಟಿಗೆ ಉರಿದು ಇದ್ದಿಲಾಗುವ ಸೋಜಿಗ’ಕ್ಕೆ ಅರ್ಪಿಸಿದ್ದು ಅಷ್ಟೇ ಸಾಂಕೇತಿಕವಾದದ್ದು. ಮರದ ಜೀವಂತಿಕೆಯೊಂದು ಬಿಸಿಲ ಶಾಖಕ್ಕೆ ಕ್ರಮೇಣ ಒಣಗಿ ಕಟ್ಟಿಗೆಯಾಗಿ ಮುಂದೆ ಬೆಂಕಿಯಲ್ಲಿ ಅದು ಬೂದಿಯಾಗುವ ಬದಲು, ಇದ್ದಿಲಾಗುವ ವಿಸ್ಮಯ ಸಂಭವಿಸುತ್ತದೆ. ಇಲ್ಲಿ ಶ್ರಮಿಕರ ದಾರುಣ ಬದುಕನ್ನು ಸಕಾರಾತ್ಮಕ ನೆಲೆಯಲ್ಲಿ ನೋಡಗೊಡುವುದು ವಿಪರ್ಯಾಸವೇ ಸರಿ, ಆದರೆ ಇದ್ದಿಲಾಗುವ ಹಂತದಲ್ಲಿ ಬೆಂದು ಕರಕಲಾಗುವ ವಾಸ್ತವ ಕೂಡ ಶ್ರಮಿಕರ ನಿಸ್ವಾರ್ಥದ ಬೆಳಕಿಗೆ ನಾಂದಿ. ದಹಿಸುವ ನೋವಿನ ಆಕ್ರಂದನದ ಬೆಂಕಿ ಉತ್ಪತ್ತಿಗೆ ಮೂಲ ಸ್ಥಾಯಿಯಾಗುವ ರೀತಿಯ ಅದೇ ಇದ್ದಿಲು, ಇಡೀ ಕಾದಂಬರಿಯನ್ನು ಓದಿ ಮುಗಿಸಿದ ನಂತರ ದ್ಯಾಮನ ರೂಪದಲ್ಲಿ ಮನಸ್ಸಿನ ಮೂಲೆಯಲ್ಲಿ ಕೊರೆಯತೊಡಗುತ್ತದೆ.

ಕೆಲ ಎಳೆಗಳು ಅಲ್ಲಲ್ಲಿ ತುದಿ ತೂರಿಸಿ ಕಾಣಿಸಿಕೊಳ್ಳುತ್ತಿದ್ದರೂ ಗೊರವರ ಅದನ್ನು ಮುಟ್ಟಲು ಹೋಗದೇ , ತಾನು ಹಿಡಿದ ನೇರ ಉದ್ದ ದಾರವನ್ನೇ ಹೆಣೆದು ಎಳೆದು ಬಂಧಿಸಿ ಒಂದು ಗಟ್ಟಿ ಹಗ್ಗವಾಗಿ ರೂಪಿಸಿ ಓದುಗರ ಚಿಂತನೆಗೆ ಬಿಟ್ಟಿದ್ದಾನೆ. ಬಿಟ್ಟ ಆ ಎಲ್ಲ ಎಳೆಗಳನ್ನು ಹೆಣೆದು ಜೋಡಿಸಿದ್ದರೆ, ಕಾದಂಬರಿ ಇನ್ನಷ್ಟು ವಿಸ್ತೃತವಾಗಿ ಬೆಳೆಯುತ್ತಿತ್ತು ಅನಿಸುತ್ತದೆ. ಅಂತಹ ಎಳೆಗಳಲ್ಲಿ ಕೆಲವನ್ನು ಇಲ್ಲಿ ಗುರುತಿಸುವುದಾದರೆ, ಶಂಕ್ರಮ್ಮನ ಒಡಲಾಳದ ಇನ್ನಷ್ಟು ಚಿತ್ರಗಳು, ಅಲ್ಲಲ್ಲಿ ಬಂದು ಮರೆಯಾಗುವ ಲಂಬಾಣಿ ಹುಡುಗಿಯ ಪೂರಕ ಸಂಬಂಧಗಳು, ದ್ಯಾಮ ದನ ಮೇಯಿಸುವ ಸಂದರ್ಭದ ಕಾಡಿನ ಹಲವು ಪರಿಣಾಮಕಾರೀ ದೃಶ್ಯಗಳು, ಕರಿನಾಳ ಅಡವಿ, ಅಮರಪ್ಪನ ಗುಡ್ಡದ ಹಲವು ರಹಸ್ಯಗಳು.. ಇವೆಲ್ಲ ಹೊಳಹುಗಳು ಗೊರವರ ಈಗ ಯೋಚಿಸಿದರೂ ಹೊಸದೊಂದೇ ಕಾದಂಬರಿಯ ಕಥನವಾಗಿಯೂ ರೂಪಗೊಳ್ಳಬಹುದಾಗಿದೆ. ಅಷ್ಟು ಸಶಕ್ತ ಕಥನ ಸಾಧ್ಯತೆಗಳು ಅವಕ್ಕಿವೆ. ಆದರೆ ಇಂದಿನ ಅವಸರದ ಬದುಕಿನಲ್ಲಿ ಸುದೀರ್ಘ ಕಾದಂಬರಿಗಳನ್ನು ಓದಿ ಗ್ರಹಿಸುವ ಸಮಯದ ಅಭಾವವುಳ್ಳ ಸಹೃದಯರಿಗೆ ಇದರ ಗಾತ್ರದ ಕುರಿತೇನೂ ತಕರಾರಿರಲಾರದು. ಪತ್ರಿಕಾ ರಂಗದಂತಹ ಒತ್ತಡದ ವೃತ್ತಿಯ ಹಿನ್ನೆಲೆಯಲ್ಲಿ, ಯುವ ಶಕ್ತಿಗೆ ಧ್ಯೋತಕವಾದ ಗೊರವರನ ಇಂಥ ಹರಿತ ಬರವಣಿಗೆ ನಿರಂತರ ಸಾಗಲಿ ಎಂಬುದೇ ನಮ್ಮ ಮಮತೆಯ ಹಾರೈಕೆ.

Leave a Reply

Your email address will not be published.