ಕಡಿ ಪಂಗ್ತಿ

-ಪಿ. ಮಂಜುನಾಥ

ದುkadeರಗೇಶಿ ಸಮುದ್ದರದಂತಾ ಜಾತ್ರಿಯ ಜನಗೋಳನ ದಾಟಿ ಓಡ್ಕೋಂತ ಬಂದು ಕೆಳಗೇರಿಯ ಮಂದೀನ ಕೂಡಿದಾಗ ನೆತ್ತಿ ಮ್ಯಾಗಿನ ಹೊತ್ತು ಹೊಳ್ಳಿ ಇಳವಾರಿಗಿ ಬಿದ್ದಿತ್ತು. ಒಂದ್ ಕೈಯ್ಯಾಗ ಸಿಲಾವರ್ ಬೋಗಾಣಿ ಮತ್ತೊಂದ್ ಕೈಯ್ಯಾಗ ನೆಗ್ಗಿದ ತಾಟ್ ಹಿಡಕೊಂಡು ಪಕಪಕ ಕಣ್ ಹೊಳ್ಳ್ಯಾಡಸತಾ ಗಾಬರಾಸಿದ್ಹಂಗ ನಿಂತ. ಕವರಾಬವರ್ಯಾಗಿದ್ದ ಅಂವನ್ನ ನೋಡಿದ ಕಳ್ಳ್ಯಾಗೋಳ ಸಾವಂತ್ರವ್ವಾಯಿ “ಇನ್ನಾ ಊರಾನವರ ಪಂಗತಿಗೋಳ ನಡದ್ದಾವ ತೊಗೊ ಕೂಸ„„… ಕಡಿಪಂಗತಿಗಿ ಯೆಳೆ ಆದೋತು…” ಅಂತಂದಳು. ಬೆವತ ಹಣಿ ಮ್ಯಾಗ ಗಾಳಿ ತೀಡಿದಂಗಾಗಿ ದುರಗೇಶಿ ಹಗೂರಕ ಅಕಿ ಬಾಜೂಕ ಕುಂತ. ಹಾಂಗ ಕುಂತಾಂವ ಒಂದ್ಸಲ ಸುತ್ತಿರಗಿ ಕಣ್ಣಾಡಿಸಿದ. ಅರ್ಧಕ್ಕರ್ಧ ಹೊಲಗೇರಿ-ಮಾದರಕೇರಿಯ ಜನ ಕಿತ್ತೆದ್ದು ಬಂದಂತಿತ್ತು. ಅಲ್ಲದ ಬಿಕ್ಕೆ ಬೇಡೋ ಮುದಕರೂ, ಮುದಕ್ಯಾರೂ ಕಂಡರು. ಎಲ್ಲಾರ ಕೈಯ್ಯಾಗೂ ನೀಡಸ್ಕೋರಾಕಂತ ಒಂದೊ ಎರಡೋ ಸಾಮಾನಗೋಳಿದ್ದೂ. ಅವರೆಲ್ಲ ಬಸವಣ್ಣದೇವರ ಗುಡಿಯ ಪೌಳಿ ಬಾಜೂಕಿನ ಬಯಲಿನೊಳಗ ಪಂಗತಿಗಂತ ಹಾಕಿದ್ದ ಹಂದರದ ಹೊರಗ ಅಲ್ಲಲ್ಲಿ ಠೋಳಿ ಠೋಳಿಯಾಗಿ ಕುಂತೋ ನಿಂತೋ ಮಾತಾಡತಿದ್ದರು. ಒಂದ ನಜರ್ ಹಂದರದ ಕಡೇನ„ ಇಟ್ಟು ತಮನ್ನೆಲ್ಲ ಯಾವಾಗ ಕರೀತಾರೋ ಅಂತ ಮೈಯೆಂಬೋ ಮೈಯನ್ನೆಲ್ಲ ಕಿವಿಯಾಗಿಸಿ ಕಾಯತ್ತಿದ್ದರು. ಹಂದರ ಮತ್ತವರ ನಡುವ ಜನಾ ಸಾಲಾಗಿ ಹೋಗಾಕಂತ ಅಡ್ಡಮಾಡಿ ಸಬಳಾದ ಗಳಗೋಳನ ಬಿಗಿದಿದ್ದರು. ಹಂದರದ ಹಿಂದ ಅಡಗಿಗಂತ ಮರಿಮಾಡಿ, ಪೆಂಡಾಲಿನ ಬಣ್ಣದ ಪಡದಾ ಕಟ್ಟಿದ್ದರು. ಅದರಾಗಿಂದ ಹೊಗಿ ಏಕ„ ಬರತಿತ್ತು.

ಹಂದರದ ಆಜೂ-ಬಾಜೂಕಿನ ಬಯಲೆಲ್ಲ ಮಂದೀನ ತುಂಬಿದ್ದರು. ಹಂದರದೊಳಗ ಮ್ಯಾಗಿನಕೇರಿಯೋರ ಪಂಗತಿಗೋಳು ಒಂದರಮ್ಯಾಲೊಂದ್ ಮುಗಿತ್ತಿದ್ದೂ. ಹಂಗ ಅದರಚಿಕಡಿಯಿಂದ ಹುಗ್ಗಿ, ಅನ್ನ, ಪಲ್ಲೇದ ಗಮ-ಗಮ ವಾಸನಿಯು ಬೀಸೋ ಗಾಳಿ ಜೊತಿ ಹಬ್ಬಿ ಬರುತ್ತಿತ್ತು. ಆ ವಾಸನಿಗಿ ಇಚಿಕಡಿಯ ಒಬ್ಬೊಬ್ಬರೂ ಒಂದೊಂಥರ ಮಾರಿ ಅಡ್ಡಾಗಲಾಗಿಸಿ ಅನ್ನದ ಕನಸಿನೊಳಗ ತೇಲಿದ್ಹಂಗಾಡುತ್ತಿದ್ದರು.
ಇಡೀ ಬಯಲೊಳಗ ಅಲ್ಲೆಲ್ಲೂ ನೆಳ್ಳ„ ಇರಲಿಲ್ಲ. ಸಾವಂತ್ರವ್ವಾಯಿ ಕೈಯಾಗಿನ ತಾಬಾಣನ್ನ ಬಿಸಿಲಿಗಡ್ಡ ಹಿಡದಾಗ ದುರಗೇಶೀನೂ ಹಂಗ„ ಮಾಡಿದ; ಇನ್ನೊಂದ್ ಕೈಯಾಗಿನ ಬೋಗಾಣಿ ಗಚ್ಚ್ಯಾಗಿ ಹಿಡಕೋಳ್ಳಾಕ ಮರೀಲಿಲ್ಲ.

“ಅದೆಲ್ಲಿ ಹೋಗ್ತೈತಿ…? ಅಟ್ಟ್ಯಾಕ್ ತ್ರಾಸ್ ತೊಗೊಂಡ ಹಿಡದ್ದೀ… ಬಿಡೋ” ಅಂತ ಕೆಳಗಡ್ಯಾರ ಪಾರವ್ವ ನಕ್ಕಾಗ ದುರಗೇಶಿ ಸಡಲಾಗಿ ಕುಂತ. ಆಗಂವಗ ಅವ್ವಂದೂ, ತಮಗೋಳದೂ, ತಂಗೀದೂ ನೆಪ್ಪಾತು. ಹಾಸಿಗಿ ಹಿಡಿದು ಬಿದ್ದ ಅವ್ವ “ದುರಗಾ… ನಂಗಂತೂ ಜಾತ್ರಿ ಸೊಗಸಿಲ್ಲ… ದುಡ್ಯಾಕ ಹ್ವಾದ ಹಿರ್ಯಾ ತಿಂಗಳೊಪ್ಪೊತ್ತಾದರೂ ಹೊಡಮಳ್ಳಿ ಬಂದಿಲ್ಲ… ಯಾನರೆ ಮಾಡಲಿ… ನಿಮ್ ಕೈಯಾಗ ಕೊಡಬೇಕಂದರ ಒಂದಮ್ಮಡಿ ರೊಕ್ಕೂ ಇಲ್ಲಾ… ಸ್ವಾದೀಲೆ ಮಾಡಿ ಹಾಕಬೇಕಂದರ ಯಾನೂ ಇಲ್ಲ… ಗುಡಿಗಿ ಹೋಗಿ ಹುಗ್ಗಿ ಕಿಚಡಿ ನೀಡಸ್ಕೊಂಡ ಬಾ” ಅಂದು ತಾಟ-ಬೋಗಾಣಿ ತಗದಿಟ್ಟಿದ್ಲು… ಆ ನೆಪ್ಪಿಂದ ಕಳ್ಳಾಗ ಕತ್ರಿಯಾಡಿಸಿದಂತಾಗಿ ‘ಹ್ಯಂಗರೆ ಮಾಡಿ… ಹೆಚ್ ನೀಡಸ್ಕೊಂಡೊಯ್ಯಬೇಕ’ ಅಂತ ಮನಸ್ಸಿನ್ಯಾಗ ಅಂದುಕೊಂಡ.

ಹುಂಡ ಬಿಸಿಲಿನ ಅಂಥಾ ಹೊತ್ತೊಳಗ ಸಾವಂತ್ರವ್ವಾಯಿ ಮಾತಿನ ಕ್ರಿಯೆಗಿಳೀತಾ ದೊಡ್ಡದಾಗಿ “ಎಂಥಾ ಬಿಸಿಲ„ ತಾಯಿ… ಹುರದ್ ಮುಕ್ಕಾದೇತಿ…” ಅಂದ್ಲು.
ಪಾರವ್ವ “ಯಾನ್ ಮಾಡೋದ„ ಯವ್ವಾ. ಈ ಸಲಾ ಮಳೀನ ಕೈ ಕೊಟ್ಟಿತಲ್ಲ…” ಅಂದು ಸಾವಂತ್ರವ್ವಾಯಿಯ ಸನೇ ಮಾಡಿ ಕುಂತ್ಲು.
ಮಾರ್ ದೂರಿದ್ದ ಸಿದ್ದಪ್ಪಜ್ಜ ಬೊಚ್ಚ ಬಾಯಗಲಿಸಿ “ಮಳಿಯಿಲ್ಲದ ಊರು ಬರದಾಗಿನ ಹೆಣ ಆಗೇತಿ ನೋಡವಾ…” ಅಂದ.
“ಹಂತಾದರಾಗೂ ಜಾತ್ರಿ ನಡದೇತಿ… ನಮ್ ಪುಣ್ಯಾ..” ಅಂದ್ಲು ಪಾರವ್ವ.

“ಯಾನ್ ಪುಣ್ಯಾನೋ ಯಾನ್ ಕರ್ಮೋ. ನಮ್ ಕಾಲದಾಗ ಜಾತ್ರಿಯಂದರ ಹೆಂಗಿರತಿತ್ತ… ಗಮ್ಮತ್ತ„ ಬ್ಯಾರೆ ಇತ್ತು. ಆಗ ಜಾತ್ರಿಯಂದರ ಮನಿ, ಓಣಿ, ಕೇರಿ, ಊರ ತುಂಬೆಲ್ಲಾ ಮಂದಿ-ಮಕ್ಕಳ ಉಲವಿರತಿತ್ತು. ಈಗ ಒಂದ್ ಓಣ್ಯಾಗ ಮಂದಿಯಿದ್ದರ ಮತ್ತೊಂದ್ ಕಡಿ ಇಲ್ಲಾ… ಇನ್ನ ಆ ಪುಣ್ಯೇದ ಮಳಿ ಇಲ್ಲಾರದ ಊರಮನಿ ಮಂದಿ ಪರೂರಗೋಳದಾಗ ದುಡ್ಯಾಕ ಹೋಗೋದಾತು…” ಅಂತ ಸಾವಂತ್ರವ್ವಾಯಿ ಅಂದಳು. ಹೀಂಗ ಮಳಿ ಮತ್ತು ಊರು-ಕೇರಿಯ ಇಚಾರ ಅವರವರ ಮಾತಿನ್ಯಾಗ ಹಬ್ಬಿ-ಹರವಿ ಹೊಂಟಿದ್ದವು.

ಸುಡೊ ಬಿಸಿಲಿಗಿ ಜನರ ನೆತ್ತಿ ಕಾದು ಭಾಂಡೆ ಥರ ಆಗಿದ್ದೂ. ಉರ್ಯೋ ಬೆಂಕಿಗಿ ತುಪ್ಪಾ ಸುರದ್ಹಂಗ ಬಿಸಿಗಾಳಿ ಆಗಾಗ ಸುಳದು ಮತ್ತಷ್ಟ ಧಗೀ ಹೆಚ್ಚಿಸತಿತ್ತು.
ತಾಟಿನಿಂದ ತಲಿಗಿ ಆಸರಿ ಹಿಡಿದಿದ್ದ ಕೈ ಇದ್ದಕ್ಕಿದ್ದಂಗ ಬ್ಯಾನಿಲೆ ನೂಸಾಕ ಸುರುವಾದಾಗ ದುರಗೇಶಿ ಬೋಗಾಣಿ ಮ್ಯಾಲ ತಾಟು ಕುಕ್ಕಿದ. ಅಂಗಿ ಮ್ಯಾಲೆತ್ತಿ ಹಗೂರಕ ಕೈ ನೋಯದ್ಹಂಗ ಬೆವರಿನಿಂದ ತೋದಿದ್ದ ಮಕಾ ಒರಸ್ಕೊಂಡ. ಬಗಲಾಗ ಅಳಕಿದಂಗಾತು. ಮಾರಿ ಕಿವುಚಿ ‘ಹಾಂ’ ಅಂದ. ಸಾವಂತ್ರವ್ವಾಯಿ “ಯಾಕೊ ಕೂಸ„… ಹಸದ್ದೀಯೇನು…?” ಕೇಳಿದ್ಲು. ಅವಂಗೇನೂ ಹಿತ ಅನಿಸದ ಸುಮ್ಮ ಕುಂತ.

ದುರಗೇಶಿಯ ಅವ್ವ ಬೆಳ್‍ಬೆಳಗ್ಗೇ ಸಂಗವ್ವಗೌಡ್ತಿಯ ಮನಿಗಿ ಕಳಿಸಿದ್ದಳು. ಅವನ ಅವ್ವ ಕಸಾಕಳಿ ಅಂತ ಗೌಡ್ತಿಯಲ್ಲೇ ದುಡಿತಿದ್ದಳು. ಆಗಾಗ ಕಡ್ನಾ-ಕಟ್ಟಾ, ರೊಕ್ಕಾ-ರೂಪಾಯಿ ಅಂತ ಗೌಡ್ತಿ ಆಗಿ ಬರತಿದ್ದಳು. ಹಂಗಂತ ಅಕಿಯೇನ್ ಭಾಳ ದೊಡ್ಡ ದಾನಶೂರತಿಯೇನಲ್ಲ…! ಪೈಗಿ ಪೈ ಲೆಕ್ಕಾಯಿಟ್ಟು ವಸೂಲಿ ಮಾಡತಿದ್ದಳು. ಲೆಕ್ಕಕ ಸಮಾ ಆಗೋವಂಗ ದುಡಸ್ಕೋತಿದ್ದಳು.

ಎರಡ್ವಾರೊಪ್ಪತ್ಲಿಂದ ಮೈ ಆರಾಮ ತಪ್ಪಿದ್ದಕ್ಕ ದುರಗೇಶಿಯ ಅವ್ವ ಅತ್ತಾಗಿ ಹೋಗಿರಲಿಲ್ಲ. ಅಕಿ ಗೌಡ್ತಿ ಕಡಿಗಿ ದಗದಕ ಬರತೇನಂತ ಮುಂದಾಗಳೆ ಕಡ್ನಾ ಬ್ಯಾರಿ ಮಾಡಿಯಾಗಿತ್ತು. ಜಾತ್ರಿ ನೆವಾ ಮಾಡಿ ಗೌಡ್ತಿ ದುರಗೇಶಿಯ ಅವ್ವನ್ನ ಕರಿ ಕಳಿಸಿದ್ದಳು.
ದುರಗೇಶಿಯಿದ್ದಾಂವ ಗೌಡ್ತಿಯ ಮನಿಯಂಗಳ ಮುಟ್ಟಿದಾಗ “ಯಾಕೋ ದುರಗ್ಯಾ ನಿಮ್ಮವ್ವಗ ಹೇಳಿ ಕಳಿಸಿದ್ನಿ… ನೀ ಬಂದ್ಯಲ್ಲ್ಯೋ?” ಅಂತ ಗೌಡ್ತಿ ಕೇಳಿದ್ದಳು.
ಅಂವ “ಅಕಿಗಿನ್ನಾ ಆರಾಮಾಗಿಲ್ಲರಿ ಗೌಡ್ತ್ಯಾರ… ನಾನ„ ಬಂದ್ಯಾನ್ರೀ…” ಅಂದಿದ್ದ.

“ಅಯ್ಯ.. ಜಾತ್ರಿ ಹೆಸರ್ ಹೇಳಿ ಆಳಮಕ್ಕಳ್ಯಾರೂ ಬಂದಿಲ್ಲ. ಅಡಗಿ ಮನ್ಯಾಂದ್ ಬಿಟ್ಟರ ಹೊರಗಿನ ದಗದಾ ಯಾನೂ ಆಗಿಲ್ಲಪಾ. ದನಗೋಳ ಹೆಂಡಿಗಸಾ ಇನ್ನಾ ತಗದಿಲ್ಲಾ. ನಿಮ್ಮವ್ವ ಇದ್ದಿದ್ದರ ಅನುಕೂಲಾಗ್ತಿತ್ತು.” ಅಂತ ಅಂಗಳನ್ನೆಲ್ಲಾ ಕಣ್ಣಾಡಿಸಿದ್ದಳು. ಅದ„ ಹೊತ್ತಿಗಿ ಮನಿಯೊಳಗಿಂದ ಗೌಡ್ತಿಯ ಮಗಳು ಊದಕಡ್ಡಿ, ನೈವೇದಿಯ ಬೆಳ್ಳಿ ತಾಟ್ ಹಿಡಕೊಂಡು ಹಾದ್ ಹೋಗತಿದ್ದಳು. ದುರಗೇಶಿಯ ಕಣ್ಣು ಬ್ಯಾಡಂದರೂ ನೈವೇದಿ ತಾಟನ್ನ ನೋಡಿದ್ದೂವು. ಅದರಾನ ಹೋಳಗಿ ಅಂವನ ಕಣ್ಣಿನಾಳಕ್ಕ ಇಳೀತಿದ್ದೂವು. ಹುಡುಗಿ ಸರಾಸರಾ ಸರದು ಹೋಗಿದ್ದಳು.

ಅಂವಾ ನಜರ್ ಬದಲಾಸಿ ಗೌಡ್ತಿಗಿ “ನಾ ದಗದಾ ಮಾಡ್ತ್ಯಾನ ತರ್ರೀ…” ಅಂತಂದು ಬುಟ್ಟಿಗುಡಾ ಸಡ್ ತೊಗೊಂಡ್ ದನಗೋಳ್ ಗ್ವಾದ್ನಿ ಕಡೆ ಹೊಂಟೆದ್ದಿದ್ದ.
“ಚೊಲೊ ಆತು… ಶೆಗಣಾ ತಗದು, ದನಗೋಳಿಗಿ ಕಣಕಿ ಹಾಕಿದರ ಸಾಕ್” ಅಂತ ಗೌಡ್ತಿ ದಗದಾ ನೇಮಿಸಿದ್ದಳು.
ಒಳಗ ಹೋಗೋವಾಗ “ದುರುಗ್ಯಾ… ಎಲ್ಲಾ ಮುಗದ ಮ್ಯಾಲ್ ನನ್ ಕರಿ… ____” ಅಂದಿದ್ದಳು. ಕೊನಿಯ ಶಬುದಗಳು ಅವನ ಕಿವಿಗಿಳಿದಿರಲಿಲ್ಲ. ಮತ್ತೇನರೆ ದಗದಾ ಹೇಳತೇನಂದಳೋ ಇಲ್ಲ ಮನಿಗೇನರೆ ಕೊಡತೇನಂದಳೋ ಅಂಬೋದು ಗೊತ್ತಾಗದ ಮನಸಿನ್ಯಾಗ ತಡಬಡಿಸಿ ದನಗೋಳ ಕಾಲಾಗಿನ ಹೆಂಡಿಗಿ ಕೈ ಹಾಕಿದ್ದ.
kade1ಎಂಟ್ಹತ್ತು ದನಗೋಳು, ಗ್ವಾಂತಲ್ ಗ್ವಾಂತಲಾಗಿ ಶೆಗಣಿ ಬಿದ್ದಿತ್ತು. ಗ್ವಾದ್ನೆಲ್ಲ ಹಸನಾಗಾಕ ದುರಗೇಶಿಯ ಕೈಗೋಳೆರಡೂ ಸುದ್ದಿಯಿಲ್ದಂಗ ಬಿದ್ ಹೋಗಿದ್ದೂ. ಅದಲ್ಲದ ಬಣವ್ಯಾಗಿನ ಕಣಕಿ ಹಿರಿದು ಈಳಗಿಗಿಟ್ಟು ಕತ್ತರಿಸಿ ದನಗೋಳಿಗಿ ಹಾಕಿದಾಗ ಅಂವಾ ಹೈರಣಾಗಿದ್ದ. ಅಂಗಳದ ಮೂಲ್ಯಾಗಿನ ಟಾಕಿ ನೀರನ್ನ ಕುಡದು, ಬಾಗಲದ ಹಂತೇಕ ಕುಂತು ಸೋತ ದನಿಯಿಂದ ಗೌಡ್ತೀನ ಕರೆದಿದ್ದ.
ಗೌಡ್ತಿ ಹೊರಗ ಬಂದಿದ್ದಳು. ಅಕಿಯ ಒಂದ್ ಕೈಯಾಗ ಹೋಳಗಿಯಿದ್ದ ಪತ್ರೋಳಿ ಮತ್ತಿನ್ನೊಂದ್ ಕೈಯಾಗ ಬೆಲ್ಲದ ನೀರಿನ ತಂಬಗಿಯಿತ್ತು. ಪತ್ರೋಳಿ ಅವನ ಮುಂದಿಟ್ಟು “ತಗೋ ದುರಗ್ಯಾ ಹೋಳಗಿ ತಿನ್ನು” ಅಂತಂದು, ಹೋಳಗಿಗಿ ಬೆಲ್ಲದ ನೀರ ಸುರುಬೇಕನ್ನೋಟರಾಗ ದುರಗೇಶಿ ಪತ್ರೋಳೀನ ಹಿಂತಗೊಂಡಿದ್ದ.
ಹುಬ್ಬೇರಿಸಿದ್ದ ಗೌಡ್ತಿಗಿ “ಮನೀಗೊಯ್ಯತೇನ ಬಿಡ್ರಿ…” ಅಂದಿದ್ದ.

“ಮನೀಗೂ ಒಂದೆರಡ್ ಕೊಡತೀನಿ… ಇವನ್ನ ತಿನ್ನೋ” ಅಂತ ಗೌಡ್ತಿ ಒತ್ತಾಯಿಸಿದ್ದಳು. ಅಂವಾ ಅಲ್ಲೇ ತಿನ್ನೋದಕ್ಕೊಪ್ಪದ ಕುಂತಿದ್ದ. ಗೌಡ್ತಿ ಇನ್ನೆರಡ ಹೋಳಗಿ ತಂದು ಪತ್ರೋಳ್ಯಾಗ ಹೆಟ್ಟಿದ್ದಳು. ಅಂವೆದ್ದು ಬಂದಿದ್ದ.
ಮನೀಗಿ ಬಂದು ಪತ್ರೋಳಿ ಇಡೋದಷ್ಟ„ ಬೇಕಾಗಿತ್ತು. ದುರಗೇಶಿಯ ತಂಗೀನೂ ತಮ್ಮಗೋಳೂ ಕೂಡಿ ಪತ್ರೋಳ್ಯಾಗ ಹೋಳಗಿ ಇದ್ದ ಗುರತನ್ನೆಲ್ಲಾ ಅಳಿಸಿದ್ದರು. ಅದರಾಗ ದುರಗೇಶಿಗಿ ಸಿಕ್ಕಿದ್ದಂದ್ರ ಒಂದ„ ಚೂರು. ಅಟ್ ತಿಂದಂವಾ ನೀರ್ ಕುಡದು ತಣ್ಣಗಾದ. ಹುಡಗೋರು ಇನ್ನಾ ಕಚ್ಚಾಡತಿದ್ದರು. ಅವರು ಪತ್ರೋಳಿ ತಿನ್ನೋದೊಂದ„ ಬಾಕಿಯಿತ್ತು. ಅವರವ್ವಗ ಕಚ್ಚಾಟ ನಿಲ್ಸಾಕ ಸಾಕ್ಸಾಕಾಗಿತ್ತು. ಅವಾಗಲ… ಅಕಿ “ದುರಗಾ… ನಂಗಂತೂ ಜಾತ್ರಿ ಸೊಗಸಿಲ್ಲ… … ಗುಡಿಗಿ ಹೋಗಿ ಹುಗ್ಗಿ ಕಿಚಡಿ ನೀಡಸ್ಕೊಂಡ ಬಾ” ಅಂದು ತಾಟ-ಬೋಗಾಣಿ ತಗದಿಟ್ಟಿದ್ಲು…

ತಾಸೆರಡತಾಸಿನಿಂದ ಕಾದ ಕುಂತ ಕೆಳಗೇರಿಯವರನ್ನ ಬಿಸಿಲಿನ ಹೊಡತ, ಮ್ಯಾಲೇಳತ್ತಿದ್ದ ಮಣ್ಣು, ಹೊಟ್ಟ್ಯಾಗಿನ ಹಸವು ಮಿದು ಮಾಡಿಬಿಟ್ಟವು. ಹಂದರದ ಕಡಿಂದ ‘ಕಡಿಪಂಗತ್ಯಾವರು ಬರ್ರ್ಯೋ’ ಅಂದು ಕರಿಯೋ ದನಿ ಆಗ ಬಂದೋತು ಈಗ ಬಂದೋತಂತ ಕಾಯುತ್ತಿದ್ದವರು ಕಾದಿಟ್ಟ ಕನಸೊಂದು ಕನಸಾಗೇ ಉಳಿಯೋ ಭಯದೊಳಗ ಕಂಗಾಲಾದರು. ಮಾತು-ನಗಿ, ಸಹನೆ ಎಲ್ಲಾ ಖಾಲಿಯಾದಂಗಾತು.

ದುರಗೇಶಿಯ ಕೈಬ್ಯಾನಿ ಹೆಚ್ಚಾಗತ್ತಿತ್ತು. ನೋವಿನ ದೆಸಿಂದ ನರಗೋಳೆಲ್ಲ ಬಿಗುವಾದವು. ಹದನೈದೊರ್ಸದ ಎಳಿ ಜೀಂವಾ ಅದು; ಬ್ಯಾಸರಾಗಿತ್ತು.
ಪೌಳಿಯಚಿಕಡೆ ಜಾತ್ರಿಯ ಗದ್ದಲ ರಂಗೇರಿತ್ತು. ಕರಡಿ ಮಜಲಿನೋರ ಬಾರಸೂಣಕಿ, ಮಕ್ಕಳ್ಮರಿಗೋಳ ಉಲಿವು, ಪೀಪಿಗೋಳ ಅವಾಜು, ಗುಡಿ ಕಳಶದ ಬಾಜೂ ಕಟ್ಟಿದ ಲೌಡ್-ಸ್ಪೀಕರಿನ್ಯಾಗಿಂದ ತೂರೋ ಹಾಡು. ದುರಗೇಶಿಗಿ ಇವ್ಯಾವೂ ಸಹನನಿಸಲಿಲ್ಲ.
ಅಸಹನಿಯಿಂದ ಸಾವಂತ್ರವ್ವಾಯೀನ “ಆಯಿ… ಊಟಕ್ಕ ಯಾವಾಗ ಹಾಕತಾರ„?” ಕೇಳಿದ.

ಮುದಕಿಯ ದನಿ ಸಣ್ಣಾಗಿತ್ತು- “ಇನ್ನೇನ ತಡಾ ಆಗಕ್ಕಿಲ್ಲ… ಕಡಿಪಂಗತಿಯಂದರ ಹಂಗ„… ಎಲ್ಲಾರ್ದ ಮುಗದಮ್ಯಾಲ„ ನಮ್ಮ ಪಾಳೆ” ಅಂದಳು.
ಯಾರೋ “ಅಡಗಿ ತೀರೈತೇನೋ…?” ಅಂದರು. ಬಹುತೇಕರ ಎದಿಯೊಳಗ ಆತಂಕದ ಅಲೆಯೆದ್ದಿತು. ಅವರಿಗೆಲ್ಲಾ ಪಾರವ್ವ “ಬಸವಣ್ಣೆಪ್ಪ ದೊಡ್ಡಾಂವ. ಪರಸಾದ ಕೊಡಸದ ಇರತಾನೇನ?” ಅಂತಂದು ಸಮಾದಾನ ಮಾಡಿದ್ಲು. ಅಷ್ಟಿಷ್ಟ ಮಂದಿ ಬಿಗಿದ ಉಸರನ್ನ ಹಗೂರಕ ಬಿಟ್ಟ ನಿರಮ್ಮಳಾಗೊ ಹೊತ್ತಿಗಿ ಹಂದರದಾಗ ಉಂಡವರ ಮುಸುರಿ ತಗ್ಯಾಕಿದ್ದ ಕೆಳಗೇರಿಯ ಕಲ್ಲಪ್ಪ ತಂಬಾಕಿನ ತಲಬಿಗಂತ ಗಳಗೋಳನ್ನ ದಾಟಿ ಬಂದ. ಕೆಳಗೇರಿ ಮಂದ್ಯೆಲ್ಲ ಅಂವನ್ನ ಕೇಳೇ ಕೇಳಿದರು. ಅಂವಾ “ಆತಿನ್ನೇನ್ ಕಡಿಪಂಗತೀನ„…!” ಅಂದು ಹ್ವಾದ.

ಬೇರು ಬಿಟ್ಕೊಂಡ್ ಕುಂತಿದ್ದ ಜನರೆಲ್ಲಾ ಎದ್ದರು. ಪೆಟ್ಟಿಗಿ ಅಲ್ಲೆಲ್ಲ ಮಣ್ಣು ಹಾರಿ ಧೂಳು ಹರಡಿಕೋಂತು. ಎದ್ದವರು ಮನಸಿನ್ಯಾಗ ಎದೆದರಾಗ ಎಷ್ಟೆಷ್ಟು ನೀಡಸ್ಕೋರೋದು… ಅಲ್ಲೇ ಎಷ್ಟ್ ತಿನ್ನೋದು… ಮನಿಗೆಷ್ಟೊಯ್ಯೋದು… ಎಂಬೋ ಲೆಕ್ಕಾಚಾರದಾಗಿದ್ದಾಗಲ„ ಹಂದರಕ್ಕಿದ್ದ ಅಡ್ಡ ಗಳಾ ತಗದರು. ಮಂದಿ ಹುಯ್ಯಂತ ಹಂದರದ ಕಡಿಗಿ ಚಿಮ್ಮಿದರು.

ದುರಗೇಶಿ ಎಲ್ಲಾ ತಾಕತ್ತೂ ಒಟ್ಟಾಗಿಸಿ ಓಡಿದ್ದ. ಅಂವಾ ಹೋಗೋವಟ್ಟಿಗಿ ಕಡಿಪಂಗತಿ ಸಾಲಾಗಿ ರೂಪಾ ಪಡದಿತ್ತು. ಅಂವಾ ಎಡಮಗ್ಗಲ ದಂಡಿಗಿ ಕುಂತ. ಇದಿರಿನ ಸಾಲಿನ್ಯಾಗ ಮದಲಿಗೇ ಕುಂತಿದ್ದ ಸಾವಂತ್ರವ್ವಾಯಿ “ಇಲ್ಲೇ ಬಾರೋ ಕೂಸ„ ಇಲ್ಲಿಂದನ„ ನೀಡಾಕ ಸುರು ಮಾಡತಾರು” ಅಂತ ಕರದಳು. ದುರಗೇಶಿಯೆದ್ದು ಮುದಕಿ ಮಗ್ಗಲ ಕುಂತ.

ಸಾವಂತ್ರವ್ವಾಯಿಯ ಲೆಕ್ಕಾಚಾರ ಉಲ್ಟಾ ಆಗಿ ನೀಡೋರು ಬಲಕಿನ ಮಗ್ಗಲ ಬಿಟ್ಟು ಎಡಕಿನಿಂದ ಚಾಲೂ ಮಾಡಿದರು. ದುರಗೇಶಿ ಧೂಳಾಗಿದ್ದ ತಾಟನ್ನ ಹರಕ ಅಂಗಿಯಿಂದ ಒರಸ್ಕೋಂತ, ಮಕಾ ಉಬ್ಬಿಸಿ ಸಾವಂತ್ರವ್ವಾಯಿಗೇನೋ ಹೇಳಬೇಕನ್ನೋಟರಾಗ ಪೆಂಡಾಲಿನ ಪಡದಾ ಕಡಿಗಿನ ದಂಡ್ಯಾಗ ಗದ್ದಲಾ ಕೇಳಿಸಿತು. ನೋಡ್ನೋಡತ್ತಿದ್ದಂಗ ಸುಂಟರಗಾಳಿಯೊಂದು ಮಣ್ಣು, ಕಸಾ-ಕಡ್ಡೀನೆಲ್ಲ ಸುಳಿ ಸುಳಿಯಾಗಿಸ್ಕೋಂತ ಆಕಡಿಯಿಂದ ಈಕಡಿಗಿ ಸುಳೀತು.
ಬಣ್ಣದ ಪಡದಾಕ ಬೆಂಕಿ ಹತ್ತಿ ಉರಿಯಾಕ ಸುರುವಾತು.
ಕಡಿಪಂಗತಿಯವರೆಲ್ಲಾ ಕಿತ್ತೆದ್ದು ಚೆಲ್ಲಾಪಿಲ್ಲಿಯಾದರು.
ದುರಗೇಶಿಯ ತಾಟು ಗಾಳಿಗೆಲ್ಲೋ ಹೋಗಿತ್ತು.
ಬೋಗಾಣಿ ಯಾರದೋ ಕಾಲಿಗಿ ಸಿಕ್ಕು ಚಿಪ್ಪಾಗಿತ್ತು. ಅಂವಾ ಏಳಬೇಕೆಂದ. ಧಾಢಸಿಯಾಗಿದ್ದವರ್ಯಾರೋ ಅವನ ಮ್ಯಾಲ ಬಿದ್ದರು.
ಬಿದ್ದ ಖಡತಿಗಿ ಗೋಣು ಚೆಲ್ಲಿ ಡಬ್ಬಾದ.
ಹೊಟ್ಟ್ಯಾಗ ನೂರ್ಕಾಲದ ಹಸಿವು ಹಂಗ„ ಉಳದು ಕಣ್ಣುಗಳೊಳಗ ಕತ್ತಲಿ ಬಳ್ಳಿಯಾಗಿ ಹಬ್ಬುತ್ತಿತ್ತು.

Leave a Reply

Your email address will not be published.