‘ಕಗ್ಗತ್ತಲೆಯ ಕಾಲ’ದಲ್ಲಿ ಬೆಳಕಿಗಾಗಿ ಹಂಬಲಿಸಿದ ತತ್ವಪದ ಸಾಹಿತ್ಯ :

-ರಂಗನಾಥ ಕಂಟನಕುಂಟೆ

ನಾಳೆ ಬಿಡುಗಡೆಯಾಗಲಿರುವ ತತ್ವಪದ ಸಂಪುಟಗಳಲ್ಲಿ ಒಂದಾದ ಸಪ್ಪಣ್ಣನವರ ‘ಕೈವಲ್ಯಕಲ್ಪವಲ್ಲರಿ ‘ ಸಂಪುಟಕ್ಕೆ ಬರೆದ ಪ್ರಸ್ತಾವನೆಯ ಬರೆಹವಿದು. 

ಅನುಭಾವ ಸಾಹಿತ್ಯದ ಮೂಲೆಗುಂಪು
“ನಮ್ಮ ಸಾಹಿತ್ಯ ಚರಿತ್ರೆ ಮತ್ತು ಸಂಸ್ಕøತಿಯ ವಿಶ್ಲೇಷಣೆಯಲ್ಲಿ ಅನುಭಾವಿ ಕವಿಗಳ ಅಭಿವ್ಯಕ್ತಿಗೆ ತಕ್ಕ ನ್ಯಾಯ ದೊರೆತಿದೆ ಎನ್ನಿಸುವುದಿಲ್ಲ. ಈ ಕಾಲಮಾನದಲ್ಲಿ ಅಂದರೆ ಹದಿನೇಳು ಹದಿನೆಂಟನೆಯ ಶತಮಾನದಲ್ಲಿ ರಚನೆಯಾಗಿರುವ ತತ್ವಪದಗಳು ತುಂಬಾ ದೊಡ್ಡ ಕೆಲಸ. ನಾಡಿನ ತುಂಬ ಚದುರಿಹೋಗಿರುವ ಪದಗಳ ಸಂಖ್ಯೆ ಕೆಲವು ಸಾವಿರ ಸಂಖ್ಯೆಯನ್ನು ಮುಟ್ಟುತ್ತದೆ. ಕನ್ನಡ ದೇಸಿ ಛಂದೋವಿಧಾನದ ವೈವಿಧÀ್ಯಮಯ ಬಳಕೆಯನ್ನು ಈ ವಲಯ ಪ್ರಕಟಪಡಿಸುತ್ತದೆ. ಅಲ್ಲದೆ ಆಧುನಿಕ ಕನ್ನಡ ಕಾವ್ಯದ ಮೇಲೆ ಇದು ಉಂಟುಮಾಡಿರುವ ಪರಿಣಾಮ ಹೆಚ್ಚು ಸೂಕ್ಷ್ಮವಾದ ಅಧ್ಯಯನಕ್ಕೆ ತಕ್ಕ ಭಿತ್ತಿಯನ್ನು ಒದಗಿಸಿಕೊಡುತ್ತದೆ.”1 (ಕಿ. ರಂ. ನಾಗರಾಜ, ತೆರೆದ ಪಠ್ಯ, ಪು.209, ಸಂ. ನಟರಾಜ ಹುಳಿಯಾರ್)

ಕನ್ನಡ ಸಾಹಿತ್ಯ ಸಂಸ್ಕøತಿಯ ಪ್ರಸಿದ್ಧ ಚಿಂತಕರಾಗಿದ್ದ ಕಿ. ರಂ. ನಾಗರಾಜ ಅವರ ಮೇಲಿನ ಮಾತು ಗಮನಾರ್ಹವಾದುದು. ಹದಿನೇಳು ಹದಿನೆಂಟನೆಯ ಶತಮಾನದಲ್ಲಿ ರಚಿತವಾದ ತತ್ವಪದ ಸಾಹಿತ್ಯವನ್ನು ಕುರಿತು ಆಡಿರುವ ಅವರ ಈ ಮಾತು ಕನ್ನಡ ಸಾಹಿತ್ಯ ಚರಿತ್ರೆಯ ನಿರೂಪಣೆಯ ‘ನೋಟಕ್ರಮ’ಗಳಲ್ಲಿನ ಮೂಲಭೂತ ಸಮಸ್ಯೆಯ ಕಡೆಗೆ ಬೆರಳು ತೋರುತ್ತಿದೆ. ಅಂದರೆ ಆರಂಭಿಕ ಕಾಲಘಟ್ಟದ ಸಾಹಿತ್ಯ ಚರಿತ್ರೆಯ ನಿರೂಪಕರಿಗೆ ‘ಸಾಹಿತ್ಯ’ ಎಂಬುದರ ಬಗೆಗೆ ಇದ್ದ ‘ಅರಿವಿನ ಮಿತಿ’ಯನ್ನು ಉದ್ದೇಶಿಸಿದೆ. ಈ ಮಿತಿ ತತ್ವಪದಗಳನ್ನು ಸಾಹಿತ್ಯ ಚರಿತ್ರೆಯಿಂದ ಹೊರಗಿಡುವಂತೆ ಮಾಡಿರುವುದನ್ನು ಸೂಚಿಸುತ್ತಿದೆ. ಚರಿತ್ರೆಕಾರರಿಗೆ ಗ್ರಂಥಸ್ಥವಾಗಿದ್ದು ಯಾವುದು ಶಿಷ್ಟವೆಂದು ಕರೆಸಿಕೊಂಡಿತ್ತೋ ಅದು ಮಾತ್ರ ಕಂಡಂತಿದೆ. ಹಾಗೆಯೇ ಅರಮನೆಗೆ ಮತ್ತು ವೈದಿಕ ಪಂಡಿತರು ಹಾಗೂ ಆಚರಣಾ ಲೋಕಕ್ಕೆ ಯಾವುದು ಹೆಚ್ಚು ಹತ್ತಿರದಲ್ಲಿತ್ತೋ ಅದು ಮಾತ್ರವೇ ಸಾಹಿತ್ಯವೆಂದು ಭಾವಿಸಿದಂತಿದೆ. ಹಾಗಾಗಿಯೇ ತಮ್ಮ ಅನುಭವಲೋಕಕ್ಕೆ ದಕ್ಕದೆ ಹೋದ ಸಾಹಿತ್ಯವನ್ನು ಬದಿಗೆ ಸರಿಸಿ ಸಾಹಿತ್ಯ ಚರಿತ್ರೆ ನಿರೂಪಿಸಿದ್ದಾರೆ.

ಇಲ್ಲಿಯೇ ಇನ್ನೊಂದು ಸಂಗತಿಯನ್ನು ಗಮನಿಸಬೇಕಿದೆ. ಸಾಹಿತ್ಯ ಚರಿತ್ರೆಕಾರರು ಬರೆಹಗಾರರು ಮತ್ತು ನಾಯಕ ಕೇಂದ್ರಿತ ನೆಲೆಯಿಂದ ಸಾಹಿತ್ಯ ಚರಿತ್ರೆಯನ್ನು ನಿರೂಪಿಸಲು ಮುಂದಾಗಿ ಕರ್ತೃ ಮತ್ತು ನಾಯಕರಿಲ್ಲದ ಸಾಹಿತ್ಯವನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಿರುವುದು ಇಲ್ಲಿ ಕಂಡುಬರುತ್ತದೆ. ಜನಪದ ಸಾಹಿತ್ಯ ಕರ್ತೃ ಮತ್ತು ನಾಯಕರಿಲ್ಲದೆಯೇ ರಚನೆಗೊಂಡಿದೆ. ಅಲ್ಲಿ ನಾಯಕರಿದ್ದರೂ ಅವರು ವೈದಿಕ ಪುರಾಣ ಕಾವ್ಯಗಳ ರಾಮ-ಕೃಷ್ಣರಂತಹ ನಾಯಕರಂತಲ್ಲ. ಅವರು ತಳಸಮುದಾಯಗಳಿಂದ ಹುಟ್ಟಿಬಂದ ಜನನಾಯಕರು. ಅವರ್ಯಾರು ವೈದಿಕಸಂಸ್ಕøತಿಯ ವಿಸ್ತರಣೆಗೆ ದುಡಿದವರಲ್ಲ. ಬದಲಿಗೆ ಅವರೆಲ್ಲ ‘ಶಿವಸಂಸ್ಕøತಿ’ಯನ್ನು ಬೆಳೆಸಲು ಉಳಿಸಲು ದುಡಿದ ಸಾಂಸ್ಕøತಿಕ ನಾಯಕರು. ಮಂಟೇಸ್ವಾಮಿ, ಮಾದೇಶ್ವರ ಇತ್ಯಾದಿ ಜನಪದ ಮಹಾಕಾವ್ಯಗಳಲ್ಲಿ ಇದನ್ನು ಕಾಣಬಹುದು. ಇನ್ನು ತತ್ವಪದಗಳಲ್ಲಿಯಂತೂ ಇಂತಹ ನಾಯಕರಿಗೆ ನೆಲೆಯೇ ಇಲ್ಲ. ಇಂತಹ ನಾಯಕತ್ವವನ್ನು ದಿಕ್ಕರಿಸಿಯೇ ಹುಟ್ಟಿದ ಸಾಹಿತ್ಯವಿದು. ಅಲ್ಲದೆ ಇದು ಕೂಡ ವೈದಿಕ ಸಂಸ್ಕøತಿಗೆ ವಿರುದ್ದವಾಗಿ ಶಿವಸಂಸ್ಕøತಿಯನ್ನು ಬೆಳೆಸಲು ದುಡಿದ ಪಂಥವಾಗಿದೆ. ದೈವಕ್ಕಿಂತ ಹೆಚ್ಚಿನ ಆದ್ಯತೆಯನ್ನು ಗುರುವಿಗೆ ನೀಡಿ ಗುರುಮುಖೇನವಾಗಿ ಅರಿವಿನ ಹಾದಿಯಲ್ಲಿ ನಡೆದವರು. ಗುಡಿಗಳನ್ನು ದಿಕ್ಕರಿಸಿದವರು. ದೇಹವನ್ನೇ ಗುಡಿಯಾಗಿಸಿಕೊಂಡು ಅದರೊಳಗೆ ತಮ್ಮನ್ನು, ತಮ್ಮ ದೈವವನ್ನು ಕಾಣಲೆತ್ನಿಸಿದರು. ಹಾಗಾಗಿ ಅಲ್ಲಿ ನಾಯಕ ಸಂಸ್ಕøತಿ, ವೈದಿಕ ಪುರಾಣಗಳು, ವೇದಜ್ಞಾನಪರಂಪರೆ ಇತ್ಯಾದಿಗಳನ್ನು ತಿರಸ್ಕರಿಸಿ ಸದಾ ಅರಮನೆಗಳಿಂದ ದೂರವಿದ್ದು ಜನರ ನಡುವೆ ಜೀವಿಸಿದವರು ಸಂತರು; ಮತ್ತು ಅವರ ತತ್ವಸಾಹಿತ್ಯ. ಇಂದಿಗೂ ಹಾಗೆಯೇ ತನ್ನ ಚಹರೆಯನ್ನು ಉಳಿಸಿಕೊಂಡು ಬಂದಿದೆ. ಆದರೆ ಜೈನ, ವೀಶೈವ ಮತ್ತು ವೈಷ್ಣವ ಪಂಥಗಳಾಚೆಗೆ ಉಸಿರಾಡಿದ ಜನರ ನಾಡಿಬಡಿತವನ್ನು ಅರಿಯದೇ ಹೋದ ಸಾಹಿತ್ಯ ಚರಿತ್ರೆಕಾರರು ಅವುಗಳನ್ನು ಸಂಪೂರ್ಣವಾಗಿ ಹೊರಗಿಟ್ಟರು. ಇಂದಿಗೂ ಹಾಗೆ ಹೊರಗಿಟ್ಟ ಚರಿತ್ರೆಯೇ ಪ್ರಮಾಣೀಕೃತ ಕನ್ನಡ ಸಾಹಿತ್ಯ ಚರಿತ್ರೆಯಾಗಿದೆ. ಇವುಗಳ ಪ್ರಮಾಣೀಕೃತ ಧೋರಣೆಯನ್ನು ಪ್ರಶ್ನಿಸುವ ಕೆಲಸವಂತೂ ನಿರಂತರವಾಗಿ ನಡೆದಿದೆ.

ಜನಪದ ಮತ್ತು ತತ್ವಪದ ಸಾಹಿತ್ಯ ಪ್ರಕಾರಗಳನ್ನು ಗೊತ್ತಿದ್ದೋ, ಗೊತ್ತಿಲ್ಲದೆಯೋ ಸಾಹಿತ್ಯ ಚರಿತ್ರೆಕಾರರು ಕಡೆಗಣಿಸಿದ್ದಾರೆ. ಅವರ ಸೀಮಿತ ಅರಿವಿನ ಚೌಕಟ್ಟಿನಿಂದಾಚೆಗೆ ಸಾಹಿತ್ಯದ ಪರಿಕಲ್ಪನೆಯನ್ನು ವಿಸ್ತರಿಸಿಕೊಳ್ಳಲಾಗದೆ ಒಂದೇ ಬಗೆಯ ಶಿಷ್ಟ-ಗ್ರಂಥಸ್ಥ ಮಾದರಿಗೆ ಅಂಟಿಕೊಂಡರು. ಇದು ಕನ್ನಡ ಸಾಹಿತ್ಯದ ಹಲವು ರೆಕ್ಕೆಗಳನ್ನು ಕತ್ತರಿಸಿಹಾಕಿತು. ಸಾಹಿತ್ಯ ಚರಿತ್ರೆ ಬರೆಹದ ಪದ್ದತಿಯ ‘ಪಕ್ಷಪಾತಿ’ಯಾಯಿತು. ಇದರಿಂದ ಎಷ್ಟೋ ಕಾಲದವರೆಗೆ ಸಾಹಿತ್ಯದ ವಿದ್ಯಾರ್ಥಿಗಳ ಕಲ್ಪನೆ ಮತ್ತು ಅನುಭವಗಳು ವಿಸ್ತಾರಗೊಳ್ಳದೆ ಕುಬ್ಜಗೊಂಡೇ ಇರುವಂತೆ ಮಾಡಿತ್ತು. ಕನ್ನಡ ಕರ್ನಾಟಕ ಸಂಸ್ಕøತಿಯ ಇಡಿಯಾದ ತಿಳುವಳಿಕೆ ದೊರೆಯದೇ ಒಮ್ಮುಖವಾದ ಇಲ್ಲವೇ ಪಾಶ್ರ್ವಿಕವಾದ ನೋಟ ಮಾತ್ರವೇ ದೊರೆಯುವಂತಾಗಿತ್ತು. ಅನೇಕ ಸಮುದಾಯಗಳ ವಿಶಿಷ್ಟ ಅನುಭವಲೋಕಗಳು ಸಾಹಿತ್ಯ ಚರ್ಚೆಯ ಕೇಂದ್ರಕ್ಕೆ ಬಾರದೇ ದೂರವೇ ಉಳಿಯುವಂತಾಗಿತ್ತು. ಇಂತಹ ಎಷ್ಟೋ ಸಮಸ್ಯೆಗಳಿಗೆ ಇದು ಕಾರಣವಾಗಿತ್ತು. ಈಚಿನ ದಶಕಗಳಲ್ಲಿ ಹೊಸಕಾಲದ ಅಗತ್ಯಕ್ಕೆ ತಕ್ಕಂತೆ ಇದರಿಂದ ಹೊರಬರುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಇದು ಇಂದು ಕನ್ನಡ ಸಾಹಿತ್ಯವು ವಿಸ್ತಾರವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ. ಕನ್ನಡ ಸಾಹಿತ್ಯದ ಎಲ್ಲೆಗಳು ಇಂದು ನಿಜಕ್ಕೂ ವಿಸ್ತಾರಗೊಳ್ಳುತ್ತಿವೆ.

ನಿಡುಗಾಲದ ಚರಿತ್ರೆಯನ್ನು ಹೊಂದಿರುವ ಕನ್ನಡ ಸಾಹಿತ್ಯದಲ್ಲಿ ಬೇರೆ ಬೇರೆ ಕಾಲದಲ್ಲಿ, ವಿಭಿನ್ನ ಬಗೆಯ ಸಾಹಿತ್ಯ ಸೃಷ್ಟಿಯಾಗಿದೆ. ಅದರ ಎಲ್ಲೆಗಳು ಹಲವು ದಿಕ್ಕುಗಳಿಗೆ ಪ್ರಕಾರಗಳಿಗೆ ವಿಸ್ತರಿಸಿಕೊಂಡಿವೆ. ಇದರ ಬಹುರೂಪಗಳನ್ನು ಅರಿಯದೆ ಒಮ್ಮುಖವಾಗಿ ಸಾಹಿತ್ಯ ಚರಿತ್ರೆ ನಿರೂಪಿಸಲು ಹೊರಟ ‘ಪಂಡಿತ’ ವರ್ಗ ಬರೆಹ ಪಕ್ಷಪಾತದ ಈ ಸಮಸ್ಯೆಯನ್ನು ಹುಟ್ಟಿಹಾಕಿದೆ. ಆದರೆ ಬರೆಹ ಪರಂಪರೆಯಲ್ಲಿಯೇ ಸಾಗಿಬಂದಿದ್ದ ‘ತತ್ವಪದ’ ಇಲ್ಲವೇ ‘ಅನುಭಾವ’ ಸಾಹಿತ್ಯವೂ ಒಂದು ಮುಖ್ಯ ಬಗೆಯಾಗಿದ್ದು ಅದನ್ನು ಕಡೆಗಣಿಸಿದ್ದು ಅಚ್ಚರಿಯ ಸಂಗತಿ. ಇಂತಹ ಜನಸಾಹಿತ್ಯವನ್ನು ಸಾಹಿತ್ಯದ ಮುಖ್ಯಚರ್ಚೆಗಳಿಂದ ಹೊರಗೆ ಉಳಿಸಿ ಸಾಹಿತ್ಯದ ಅರಿವು ಮತ್ತು ಚರ್ಚೆಗಳನ್ನೇ ಕುಗ್ಗಿಸಿದ್ದುದು ಎದ್ದು ಕಾಣುತ್ತದೆ. ಇದರಿಂದ ಕನ್ನಡದ ತಿಳಿವು ಒಮ್ಮುಖ ಮತ್ತು ಪಾಶ್ರ್ವಿಕವಾದ ತಿಳಿವೇ ಆಗಿತ್ತು ಎಂಬುದೂ ತಿಳಿಯುತ್ತದೆ.

ಅಂದರೆ ಇಡಿಯಾದ ಕನ್ನಡ ಸಾಹಿತ್ಯ ಚರಿತ್ರೆಯ ನೋಟಕ್ರಮವನ್ನೇ ದಕ್ಕಿಸಿಕೊಳ್ಳದ ಸಾಹಿತ್ಯ ಚರಿತ್ರೆಕಾರರು ಕೆಲವು ಸಾಹಿತ್ಯ ಪ್ರಕಾರಗಳನ್ನು ಬದಿಗೆ ಸರಿಸಿ ಸಾಹಿತ್ಯ ಚರಿತ್ರೆಯನ್ನು ನಿರೂಪಿಸಿದ ಕಾರಣದಿಂದಾಗಿ ಇಂತಹ ಸಮಸ್ಯೆ ಹುಟ್ಟಿಕೊಂಡಿದೆ. ಇದರಿಂದ ಕನ್ನಡ ಸಾಹಿತ್ಯ ಸಂಸ್ಕøತಿಯ ಪೂರ್ಣಕಲ್ಪನೆ ತಿಳಿಯದೇ ಹೋಗಿತ್ತು. ವಚನ ಮತ್ತು ಕೀರ್ತನೆಯ ಸಾಹಿತ್ಯವನ್ನು ಗಮನಿಸಿದ ಸಾಹಿತ್ಯ ಚರಿತ್ರೆಕಾರರಿಗೆ ಅಸಂಖ್ಯ ಅನುಭಾವಿ ಕವಿಗಳ ಅನುಭಾವ ಸಾಹಿತ್ಯ ಕಣ್ಣಿಗೆ ಕಾಣದೇ ಹೋದುದು ಸೋಜಿಗದ ಸಂಗತಿ. ಇದಕ್ಕೆ ಕಾರಣಗಳು ಏನೇ ಇದ್ದರೂ ಅನುಭಾವ ಸಾಹಿತ್ಯ ಪಂಥವನ್ನು ಇಲ್ಲವೇ ಪ್ರಕಾರವನ್ನು ಕಡೆಗಣಿಸಿರುವುದಂತೂ ಎದ್ದು ಕಾಣಿಸುತ್ತಿದೆ. ಈ ಅನುಭಾವಿಗಳು ರೂಪಿಸಿದ ದೇಸೀ ಸಂಗೀತವನ್ನು ಕೂಡ ಕರ್ನಾಟಕ ಶಾಸ್ತ್ರೀಯ ಸಂಗೀತದ ವ್ಯಾಪ್ತಿಯಿಂದ ಹೊರಗಿಟ್ಟದ್ದೂ ಇದೆ. ಇದು ಇಂದಿಗೂ ಮುಂದುವರೆದಿದೆ.

ಹೀಗೆ ಕಡೆಗಣಿಸಿರುವುದನ್ನು ಸಾಹಿತ್ಯ ಚರಿತ್ರೆಕಾರರು ತಮ್ಮಲ್ಲಿ ತಾವು ಕಂಡುಕೊಳ್ಳದೆ ಈ ಅನುಭಾವ ಸಾಹಿತ್ಯ ಸೃಷ್ಟಿಯಾದ ಕಾಲವನ್ನು ಕನ್ನಡ ಸಾಹಿತ್ಯದ ‘ಕಗ್ಗತ್ತಲೆ ಕಾಲ’ ಎಂಬ ಅಭಿಪ್ರಾಯ ತಾಳಿದರು. ಕುಮಾರವ್ಯಾಸನಿಂದ ಬಿ.ಎಂ.ಶ್ರೀ ಅವರ ಕಾಲದ ನಡುವೆ ಅಂತಹ ಮಹತ್ವದ ಕವಿಗಳಾರು ಹುಟ್ಟಿಬರಲಿಲ್ಲ ಎಂದರು. ಈ ಕಾಲದಲ್ಲಿ ಸೃಷ್ಟಿಯಾದ ಸಾಹಿತ್ಯವನ್ನು ಕಡೆಗಣಿಸಿ ಅದನ್ನು ಚರ್ಚಿಸದೆ ತಮ್ಮ ಅಭಿಪ್ರಾಯ ಮಂಡಿಸಿದ ಪರಿಣಾಮ ಈ ಕಾಲದಲ್ಲಿ ‘ವಿಶೇಷ ಸಾಹಿತ್ಯ’ ಸೃಷ್ಟಿಯಾಗಿಲ್ಲವೆಂಬ ಅಭಿಪ್ರಾಯವೇ ಇಂದಿಗೂ ನೆಲೆಸಿದೆ. ಯಾಕೆಂದರೆ ಅಭ್ಯಾಸಕ್ಕೆ ದೊರೆಯುವ ಎಲ್ಲ ಸಾಹಿತ್ಯ ಚರಿತ್ರೆಯ ಪಟ್ಯಗಳೂ ಕೂಡ ಈ ಕಾಲದಲ್ಲಿ ಸೃಷ್ಟಿಯಾಗಿರುವ ಅನುಭಾವ ಸಾಹಿತ್ಯವನ್ನು ಚರ್ಚೆಗೆ ಎತ್ತಿಕೊಳ್ಳುವುದಿಲ್ಲ. ಇಲ್ಲಿನ ಚರ್ಚೆಯಿಂದ ಗೈರುಹಾಜರಾದ ಅನುಭಾವ ಸಾಹಿತ್ಯ ಜನರ ಗಮನಕ್ಕೆ ಬಾರದೇಹೋದ ಕಾರಣ ಇಲ್ಲಿ ಸಾಹಿತ್ಯವೇ ಸೃಷ್ಟಿಯಾಗಿಲ್ಲ ಎಂಬ ಅಪಕಲ್ಪನೆ ಬೆಳೆದಿದೆ. ಚರಿತ್ರೆಯ ನಿರೂಪಕರ ಕಣ್ಣುಗಳಿಗೆ ಆವರಿಸಿಕೊಂಡ ಕತ್ತಲೆ ಸಮುದಾಯಕ್ಕೂ ದಾಟಿಕೊಂಡಿದ್ದು ಇಲ್ಲಿ ಎದ್ದು ಕಾಣುತ್ತದೆ.

ಆದರೆ ಈ ‘ಕಗ್ಗತ್ತಲೆಯ ಕಣ್ಕಟ್ಟು’ ದಾಟಿ ಆ ಕಾಲದಲ್ಲಿ ರಚಿತವಾದ ಸಾಹಿತ್ಯವನ್ನು ಇಂದು ತಿರುಗಿ ನೋಡಿದರೆ ಆ ಕಾಲದಲ್ಲಿ ಸಾಹಿತ್ಯ ವಿಫುಲವಾಗಿ ಸೃಷ್ಟಿಯಾಗಿರುವುದು ತಿಳಿಯುತ್ತದೆ. ಈ ಸಾಹಿತ್ಯ ಅರಮನೆಗಳ ಬಿರುದುಬಾವಲಿಗಳ ಹಂಗೂ ಇಲ್ಲದೆ ಜನರ ನಡುವೆ ಜೀವಂತವಾಗಿರುವುದು ತಿಳಿಯುತ್ತದೆ. ಅಲ್ಲದೆ ಅದು ವಾಚಿಕ ಪಟ್ಯವಾಗಿ ಮಾತ್ರವೇ ಉಳಿಯದೇ ಅದು ಗೇಯಪಟ್ಯವಾಗಿಯೂ ದೇಸೀ ಸಂಗೀತವಾಗಿ ಉಳಿದಿರುವುದು ಗೋಚರಿಸುತ್ತದೆ. ಅಂದರೆ ಚಾರಿತ್ರಿಕವಾಗಿ ಆ ಕಾಲ ಯಾವುದನ್ನು ನಿರೀಕ್ಷಿಸಿತೋ ಅದನ್ನು ಆ ಕಾಲದ ಅಸಂಖ್ಯ ಸಂತರು ಪೂರೈಸಿದ್ದಾರೆ. ಜನರು ಏನುಬಯಸಿದರೋ ಅದನ್ನು ಸಂತರಿಂದ ಪಡೆದುಕೊಂಡಿದ್ದಾರೆ. ಅದನ್ನು ಬದುಕಿನ ಭಾಗವಾಗಿಸಿಕೊಂಡು ಅದನ್ನು ಉಸಿರಾಡುತ್ತಿದ್ದಾರೆ. ಜನರಿಗೆ ಏನು ನೀಡಬೇಕೆನ್ನಿಸಿತೋ ಅದನ್ನು ಅರಿತು ಅನುಭಾವಿಗಳು ನೀಡಿದ್ದಾರೆ. ಇಂತಹ ಕೊಡುಕೊಳೆಯ ಸಂದರ್ಭವನ್ನು ಗಮನಿಸಿದರೆ ಅನುಭಾವಿ ಕವಿಗಳು ಸಮಾಜವಿಮುಖಿಗಳಾಗಿರಲಿಲ್ಲ ಎಂಬುದು ಖಚಿತವಾಗುತ್ತದೆ. ಏಕಾಂತದಲ್ಲಿದ್ದು ಲೋಕಾಂತವನ್ನು, ಲೋಕಾಂತದಲ್ಲಿದ್ದು ಏಕಾಂತವನ್ನು ಅನುಭವಿಸಿರುವುದು ಗೋಚರಿಸುತ್ತದೆ. ‘ಊರೊಳಗಿನ ಉತ್ಪಾತ’ವನ್ನು ಮನದೊಳಕ್ಕೂ ಎಳೆದು ತಂದರು. ಮನದೊಳಗಿನ ಉತ್ಪಾತವನ್ನು ಊರ ನಡುವೆಯೂ ಹಾಡಿದರು. ಊರು ಮತ್ತು ಮನಗಳಲ್ಲಿನ ಉತ್ಪಾತದ ಕಾರಣಗಳನ್ನು ಕಂಡು ಅದರಿಂದ ಉರಿದುಹೋಗುತ್ತಿದ್ದ ಬದುಕಿಗೆ ಸಮಾಜಕ್ಕೆ ತಣ್ಣನೆಯ ಅರಿವಿನ ಮುಲಾಮನ್ನು ಶೋಧಿಸತೊಡಗಿದರು. ಈ ಹಂತದಲ್ಲಿಯೇ ಅವರು ದಾರ್ಶನಿಕರಾಗಿ, ಕವಿಗಳಾಗಿ, ಸಂಗೀತಗಾರರಾಗಿ, ಸಮಾಜ ಸುಧಾರಕರಾಗಿ, ಲೋಕವಿರೋಧಿಗಳಾಗಿ ಕಂಡುಬರುತ್ತಾರೆ. ಜನರ ಜೊತೆಗೆ ಮತ್ತು ತಮ್ಮ ಒಳಗಿನೊಳಗಿನ ಸಾಕ್ಷಿಪ್ರಜ್ಞೆಯ ಜೊತೆಗೆ ಸಂವಾದ ನಡೆಸುತ್ತಲೇ ಅನುಭಾವ ಸಾಹಿತ್ಯ ಸೃಷ್ಟಿಸಿದ್ದಾರೆ. ಇದರ ಪ್ರಮಾಣವನ್ನು ಇಂದು ಲೆಕ್ಕಿಸಲು ಸಾಧ್ಯವಿಲ್ಲದಷ್ಟು ಹೇರಳವಾಗಿದೆ. ‘ಕಗ್ಗತ್ತಲೆಯ ಕಾಲ’ದಲ್ಲಿ ಬೆಳಕಿಗಾಗಿ, ಬಿಡುಗಡೆಗಾಗಿ ಹಂಬಲಿಸಿದ ಸಾಹಿತ್ಯ ಇಷ್ಟೊಂದು ರೂಪುಗೊಂಡಿದೆಯೇ ಎಂದು ಬೆರಗು ಮೂಡಿಸುವಷ್ಟು ಅಪಾರವಾಗಿದೆ. ಈ ದೃಷ್ಟಿಯಿಂದ ನೋಡಿದಾಗ ಕನ್ನಡದ ಇತರೆ ಸಾಹಿತ್ಯ ಮಾದರಿಗಳಿಗಿಂತ ಈ ಅನುಭಾವ ಸಾಹಿತ್ಯ ಜನರ ಬಿಡುಗಡೆಗೆ ಹೆಚ್ಚು ತುಡಿದಿರುವುದು ನಮ್ಮ ಅರಿವಿಗೆ ಬರುತ್ತದೆ.

ಅನುಭಾವ ಸಾಹಿತ್ಯದ ಅಭಿವ್ಯಕ್ತಿಯ ನೆಲೆಗಳು
“ಕಷ್ಟಕರವಾದ ಸಂಸಾರ ಸಾಗರವನ್ನು, ಪಾಪಪೂರಿತವಾದ ಐಹಿಕ ಜೀವನವನ್ನು ದಾಟಿ, ಅದರ ಆಚೆಯ ದಡವನ್ನು ತಲುಪುವುದಕ್ಕೆ ದಾರಿಯನ್ನು ಕಂಡುಹಿಡಿದು ಅನುಸರಿಸುವುದೇ ದರ್ಶನಗಳ ಪರಮೋತ್ತಮ ಗುರಿ ಎಂದು ಭಾರತೀಯ ಪರಂಪರೆ ಭಾವಿಸುತ್ತದೆ.”(ಭಾರತೀಯ ದರ್ಶನಗಳು, ಪು.52) ಎಂದು ದೇವಿಪ್ರಸಾದ್ ಚಟ್ಟೋಪಾಧ್ಯಾಯ ಅವರು ಭಾರತೀಯ ದರ್ಶನ ಪರಂಪರೆಗಳ ಮುಖ್ಯ ಕಾಳಜಿ ಮತ್ತು ಆಶಯವನ್ನು ವಿವರಿಸುತ್ತ ಹೇಳಿರುವ ಮಾತು ಗಮನಾರ್ಹವಾದುದು. ಇದು ಇತರೆ ಭಾರತೀಯ ದಾರ್ಶನಿಕ ಪಂಥಗಳಿಗೆ ಹೇಗೆ ಅನ್ವಯವಾಗುತ್ತದೆಯೋ ಹಾಗೆಯೇ ಕರ್ನಾಟಕದ ಅನುಭಾವಿಗಳ ಇಲ್ಲವೇ ತತ್ವಪದಕಾರರ ಸಾಹಿತ್ಯ ಪಂಥಕ್ಕೂ ಅನ್ವಯವಾಗುತ್ತದೆ. ಅನುಭಾವ ಸಾಹಿತ್ಯವು ಹಲವು ಕವಲುಗಳಲ್ಲಿ ಸೀಳಿಕೊಂಡಿದ್ದರೂ ಆಳದಲ್ಲಿ ಅದು ‘ಆಚೆ ದಡ’ದ ನೆಲೆಯ ಹುಡುಕಾಟವನ್ನೇ ಮಾಡುತ್ತಿರುವಂತೆ ಮೇಲ್ನೋಟಕ್ಕೆ ಕಂಡುಬರುತ್ತದೆ. ಸಂಸಾರ ಮತ್ತು ಲೌಕಿಕ ಜೀವನದಿಂದ ಬಿಡುಗಡೆಗೊಂಡು ಇನ್ನೊಂದು ದಡ ಇಲ್ಲವೇ ಲೋಕ ತಲುಪಬೇಕೆಂಬ ಹಂಬಲ ಇರುವುದು ಕಂಡುಬರುತ್ತದೆ. ಇದು ಯಾವುದೇ ಅನುಭಾವ ಸಾಹಿತ್ಯದಲ್ಲಿ ಕಂಡುಬರುವ ಸಾಮಾನ್ಯ ಸಂಗತಿ ಮತ್ತು ಅವುಗಳ ಪ್ರಮುಖ ಲಕ್ಷಣ. ಆದರೆ ಈ ಅನುಭಾವಿಗಳು ಇನ್ನೊಂದು ಲೋಕಕ್ಕಾಗಿ ತುಡಿದಿದ್ದಕ್ಕಿಂತ ಅವರು ಜೀವಿಸಿದ್ದ ಸಮಾಜದ ಸಾಮಾಜಿಕ ಒತ್ತಡಗಳಿಂದ ಮತ್ತು ವ್ಯಕ್ತಿಯಲ್ಲಿ ಹುಟ್ಟಿಕೊಂಡ ಆಂತರಂಗಿಕ ಉತ್ಪಾತಗಳಿಂದ ಬಿಡುಗಡೆ ಪಡೆಯುವುದೇ ಆಗಿತ್ತು ಎಂಬುದು ಗಮನಿಸಬೇಕಾದ ಸಂಗತಿ.

ಈ ವಿಚಾರವನ್ನು ಕಿ. ರಂ. ನಾಗರಾಜ ಅವರ ಅಭಿಪ್ರಾಯದ ಮೂಲಕ ವಿವರಿಸಿಕೊಳ್ಳಬಹುದು. ಕನ್ನಡದ ಅನುಭಾವಿ ಸಾಹಿತ್ಯ ಕುರಿತು ಅವರೆನ್ನುವಂತೆ, “ಬದುಕಿನಿಂದ ವಿಮುಖವಾಗುವ ದೃಷ್ಟಿ ಇಲ್ಲಿ ಮುಖ್ಯವಲ್ಲ. ಅಮೂರ್ತವಾದ ಆತÀ್ಯಂತಿಕ ನೆಲೆಯನ್ನು ಪಲಾಯನದಿಂದ ಹೋಗಿ ತಲುಪಬೇಕೆಂಬ ಉದ್ದೇಶವೂ ಇಲ್ಲ. ಈ ನಿರಾಕರಣೆ ಅವರ ಆಂತರಿಕ ಮತ್ತು ಬಾಹ್ಯಜಗತ್ತಿನ ಘರ್ಷಣೆಯಿಂದ ಸೃಷ್ಟಿಯಾದದ್ದು.” (ಕಿ. ರಂ. ನಾಗರಾಜ, ತೆರೆದ ಪಠ್ಯ, ಪು.219) ಎನ್ನುತ್ತಾರೆ. ಇದು ಚಟ್ಟೋಪಾಧ್ಯಾಯ ಅವರ ಹೇಳಿಕೆಗಿಂತ ಕೊಂಚ ಭಿನ್ನವಾಗಿದೆ. ಕಿರಂ ಅವರ ಮಾತಿನಲ್ಲಿರುವ ಒತ್ತು ‘ಆಚೆ ದಡ’ಕ್ಕೆ ಅಂದರೆ ‘ಪರವಸ್ತು’ವಿಗೆ ಬದಲಾಗಿ ವ್ಯಕ್ತಿ ಮತ್ತು ಸಮಾಜದ ನಡುವೆ ನಡೆಯುತ್ತಿರುವ ದೈನಂದಿನ ಜೀವನದ ತಾಕಲಾಟಗಳೇ ಮುಖ್ಯವಾಗಿರುವುದನ್ನು ಸೂಚಿಸುತ್ತದೆ. ಅಂದರೆ ‘ಆಂತರಿಕ’ ಎಂಬುದನ್ನು ವ್ಯಕ್ತಿಯೊಳಗೆ ಹುಟ್ಟುವ ಬೇಗುದಿಯೆಂದು ಮತ್ತು ಬಾಹ್ಯಜಗತ್ತು ಎಂಬುದನ್ನು ಸಮಾಜ ವ್ಯಕ್ತಿಯಲ್ಲಿ ಹುಟ್ಟಿಸುವ ತಲ್ಲಣಗಳು, ಇಕ್ಕಟ್ಟು-ಬಿಕ್ಕಟ್ಟುಗಳು ಎಂದು ವಿವರಿಸಿಕೊಂಡಾಗ ಇದು ಸ್ಪಷ್ಟವಾಗುತ್ತದೆ.

ವ್ಯಕ್ತಿ ಮತ್ತು ಸಮಾಜಗಳ ನಡುವಿನ ಸಂಘರ್ಷ ಹಲವು ಬಗೆಯ ಒಳಬೇಗುದಿಗಳನ್ನು ಹುಟ್ಟಿಹಾಕುತ್ತದೆ. ಈ ಕುದಿತವೇ ಅನುಭಾವಿಗಳ ಆಂತರಿಕ ತೊಳಲಾಟ ಮತ್ತು ಬಿಡುಗಡೆಯ ಹುಡುಕಾಟಗಳ ನಿಜವಾದ ಭಿತ್ತಿಯಾಗಿರುತ್ತದೆ. ಇದಲ್ಲದೆ ಅವರನ್ನು ಬಾಧಿಸಿರುವ ಮತ್ತೊಂದು ಸಂಗತಿಯೆಂದರೆ ಸಾವು. ಅಂದರೆ ಜೀವನದ ನಶ್ವರತೆ. ನಶ್ವರವಾದ ಜೀವನಕ್ಕಾಗಿ ಮನುಷ್ಯರು ಯಾಕೆ ಈ ಪರಿಯ ಸಾಮಾಜಿಕ ಮತ್ತು ಆಂತರಿಕ ಉತ್ಪಾತಗಳನ್ನು ಸೃಷ್ಟಿಸುತ್ತಾರೆ; ಅನುಭವಿಸುತ್ತಾರೆ ಎಂಬುದೇ ಅವರ ಮುಖ್ಯ ಪ್ರಶ್ನೆ, ತಲ್ಲಣ ಮತ್ತು ಹುಡುಕಾಟದ ಧ್ಯಾನ. ಅಂದರೆ ಅನುಭಾವಿಗಳು ‘ಊರು ಸೃಷ್ಟಿಸುವ ಉತ್ಪಾತ’ಗಳ ಜೊತೆಗೆ ಮುಖಾಮುಖಿಯಾಗದೆ ಪಲಾಯನ ಮಾಡಿದವರಲ್ಲ. ಅವುಗಳ ಜೊತೆಗೆ ನಿರಂತರವಾಗಿ ಗುದ್ದಾಡುತ್ತಲೇ ಅವುಗಳಿಂದ ಬಿಡುಗಡೆ ಪಡೆಯಲು ಬಯಸಿದವರು. ಸಾಮಾಜಿಕವಾಗಿ ತಮ್ಮ ಗುದ್ದಾಟವನ್ನು ಮುಂದುವರೆಸಿರುವ ಕಾರಣಕ್ಕಾಗಿಯೇ ಅವರು ನಮಗಿಂದು ಮುಖ್ಯರಾಗಿದ್ದಾರೆ. ಅಂತಹ ಗುದ್ದಾಟವೇ ಇಲ್ಲದೆ ಗಾಳಿಗೋಪುರಗಳಲ್ಲಿ ‘ಪಾರಮಾರ್ಥಿಕ ಚಿಂತನೆ’ಗಳನ್ನು ಮಂಡಿಸಿದ್ದರೆ ಖಂಡಿತವಾಗಿಯೂ ಇಂದು ಅಪ್ರಸ್ತುತರಾಗಿರುತ್ತಿದ್ದರು. ಅಂದೂ ಕೂಡ ಜನರಿಂದ ದೂರವೇ ಉಳಿದಿರುತ್ತಿದ್ದರು.

ಇದಲ್ಲದೆ ತಮ್ಮ ಕಾಲದಲ್ಲಿ ದೇಶದ ಒಳಹೊಕ್ಕಿದ್ದ ವಸಾಹತುಶಾಹಿಯು ಬಾಹ್ಯಜಗತ್ತಿನಲ್ಲಿ ಸೃಷ್ಟಿಸಿದ್ದ ಉತ್ಪಾತಗಳ ಬಗೆಗೂ ಅವರು ಗಂಭೀರವಾಗಿ ಪ್ರತಿಕ್ರಿಯಿಸಿದ್ದರು. ಈ ಬಗೆಗೆ ಕಿರಂ ಅವರು ಹೇಳುವಂತೆ “ರಾಜಪ್ರಭುತ್ವ ಮತ್ತು ಸಾಮ್ರಾಜ್ಯಶಾಹಿಗಳ ಒಳ ಒಪ್ಪಂದ ಮತ್ತು ದೇಶೀಯ ಸತ್ವದ ಉಳಿವಿಗಾಗಿ ತಮ್ಮ ಪರಿಮಿತ ಸಾಧನಗಳ ಮೂಲಕ ಹೋರಾಡಿ ಸಮುದಾಯದ ಒಳದನಿಗೆ ದನಿನೀಡುವ ಕೆಲಸವನ್ನು ಈ ಕವಿಗಳು ಮಾಡಿದರು. ಈ ಕಾಲಮಾನದ ದೊಡ್ಡ ಒತ್ತಡ, ಈ ಘರ್ಷಣೆ ಬದುಕನ್ನು ನುಚ್ಚುನೂರು ಮಾಡಿತ್ತಲ್ಲದೆ ನಮ್ಮ ಸಂಸ್ಕøತಿಯ ವಾಸ್ತವಕ್ಕೆ ದೊಡ್ಡ ಸವಾಲಾಯಿತು. ಸಾಮ್ಯಾಜ್ಯಶಾಹಿ ಹಿಡಿತ ದೃಢಗೊಂಡ ಬಳಿಕ ಸಮುದಾಯದ ಬದುಕು ಮತ್ತೂ ಅಸ್ತಿರತೆಯತ್ತ ಸಾಗಿತು. ಬದುಕನ್ನು ಈ ಅನುಭಾವಿಗಳು ಏಕೆ ಅಸ್ತಿರವೆಂದು ಕರೆಯುತ್ತಾರೆ ಎಂಬುದಕ್ಕೆ ಈ ಹಿನ್ನೆಲೆಯಲ್ಲಿ ಉತ್ತರ ಹುಡುಕುವುದು ಮುಖ್ಯವೆನ್ನಿಸುತ್ತದೆ. ಬದುಕನ್ನು ಹಬ್ಬಿಕೊಂಡ ಭಯಾನಕತೆಯನ್ನು ಕೊನೆಗಾಣಿಸಬೇಕೆಂಬ ನಿಲುವು ಇವರದಾಗಿದ್ದರೂ ಪರಿಹಾರಗಾಣದ ಸ್ಥಿತಿಯಲ್ಲಿದ್ದರು. ಅಲ್ಲದೆ ಧರ್ಮದ, ಅದರಲ್ಲೂ ಚಾತುರ್ವಣ್ಯದ ಚೌಕಟ್ಟು ಬೇರೆ ಪರ್ಯಾಯಗಳಿಲ್ಲದಂತಹ ಬಂಧನವನ್ನು ಒಡ್ಡಿತ್ತು. ಹೊಸ ಸಾಮಾಜಿಕ ಮುಗ್ಗಟ್ಟೊಂದು ರೂಪುಗೊಳ್ಳಲು ಸಿದ್ದವಾಗುತ್ತಿದ್ದ ಸ್ಥಿತಿಯಿಂದಾಗಿ ಬೇರೊಂದು ಆಡಳಿತ ಪದ್ದತಿಯನ್ನು ರೂಪಿಸಲು ಹೋರಾಡುವುದು ಸಾಧ್ಯವಾಗದೇ ಹೋಗಿತ್ತು. ಆದ್ದರಿಂದ ಭಗ್ನಗೊಂಡಿದ್ದ ವ್ಯವಸ್ಥೆಯನ್ನು ಪುನರ್ ಸ್ಥಾಪಿಸುವುದೇ ಅಂದಿನ ಮುಖ್ಯ ಉದ್ದೇಶವಾಗಿತ್ತು.” (ಕಿ. ರಂ. ನಾಗರಾಜ, ತೆರೆದ ಪಠ್ಯ, ಪು.224) ಎನ್ನುತ್ತಾರೆ. ಎಂದರೆ ಅನುಭಾವಿ ಕವಿಗಳು ತಮ್ಮ ಕಾಲದಲ್ಲಿ ಎದುರಿಸಿದ ಭೀಕರ ಸಮಸ್ಯೆಗಳ ಪರಿಣಾಮ ಅವರನ್ನು ಇನ್ನಿಲ್ಲದಂತೆ ಕಾಡಿತ್ತು. ದೇಶೀಯ ಮತ್ತು ವಿದೇಶೀಯ ಶಕ್ತಿಗಳೆರಡೂ ಕೂಡಿ ಸಮಾಜವನ್ನು ಕಿತ್ತುತಿನ್ನುತ್ತಿತ್ತು ಎಂಬುದು ಇದರಿಂದ ತಿಳಿಯುತ್ತದೆ.

ಒಟ್ಟಾರೆ ಅನುಭಾವಿ ಕವಿಗಳು ಕ್ರಿಯಾಶೀಲವಾಗಿದ್ದ ಕಾಲವು ವಸಾಹತುಶಾಹಿ ಮತ್ತು ಭೂಮಾಲಿಕ ಶಕ್ತಿಗಳು ಕೂಡಿಕೊಂಡು ಸಮಾಜವನ್ನು ಕಿತ್ತುತಿನ್ನುತ್ತಿದ್ದವು. ಇಂತಹ ಸನ್ನಿವೇಶದಲ್ಲಿ ತಮ್ಮ ಹುಡುಕಾಟದ ಹಾದಿಯಲ್ಲಿ ನಡೆದ ಸಂತರು ಸಹಜವಾಗಿಯೇ ಅಂತಹ ಸಮಾಜದ ಎಲ್ಲ ಸಾಂಸ್ಥಿಕ ನೆಲೆಗಳನ್ನು ವಿರೋಧಿಸಿದರು. ನಿರಾಕರಿಸಿದರು. ಅನೇಕ ತತ್ವಪದಗಳನ್ನು ಗಮನಿಸಿದರೆ ಅವರು ಸಂಸಾರ-ಕುಟುಂಬ ವ್ಯವಸ್ಥೆ, ಸಂಪತ್ತು-ಖಾಸಗಿ ಆಸ್ತಿ, ಜಾತಿ-ವರ್ಗ-ವರ್ಣ ವ್ಯವಸ್ಥೆ, ಪ್ರಭುತ್ವ ಅಂದರೆ ವಸಾಹತುಶಾಹಿ ಮತ್ತು ಭೂಮಾಲಿಕರ ಅಧಿಕಾರ-ಅಹಂ; ಅವುಗಳ ಕೇಂದ್ರಗಳು, ಇಂದ್ರಿಯ ಸುಖ-ಭೋಗ ಜೀವನ, ಅಜ್ಞಾನ ಅಂದರೆ ಪ್ರಸ್ತುತ ವ್ಯವಸ್ಥೆ ಜನರಿಗೆ ನೀಡಿರುವ ಸಾಮಾಜಿಕ ಮತ್ತು ಧಾರ್ಮಿಕ ತಿಳುವಳಿಕೆ; ವೇದ, ಶಾಸ್ತ್ರ, ತರ್ಕ ಪುರಾಣಗಳನ್ನು ಒಳಗೊಂಡಂತೆ ಪುರೋಹಿತಶಾಹಿ ವ್ಯವಸ್ಥೆ; ಇತ್ಯಾದಿಯಾಗಿ ಹಲವು ಸಾಮಾಜಿಕ ಸಂಸ್ಥೆಗಳನ್ನು ನಿರಾಕರಿಸುತ್ತಾರೆ. ಇಂತಹ ನಿರಾಕರಣೆಯ ಸಪ್ಪಣ್ಣನವರ ಒಂದು ತತ್ವಪದವನ್ನು ಇಲ್ಲಿ ಗಮನಿಸಬಹುದಾಗಿದೆ.

ಕಾಕುಪೋಕು ವಿದ್ಯೆಗಳು ಅನೇಕ ಇದ್ದರೇನು ಜನ್ಮ
ಶೋಕವನ್ನು ನೀಗಿ ಮೋಕ್ಷದೇಕಾನಂದವೀಯವಿಂತೀ

ವೇದಾಗಮ ಪೌರಾಣಾದಿ ಗಾಥೆ ಶಬ್ದ ಶಾಸ್ತ್ರ ಮಂತ್ರ
ಭೇದ ಕಾವ್ಯ ತರ್ಕ ಮೀಮಾಂಸಾದಿ ಡಂಭ ವಿದ್ಯವಾ
ಹಾದಿಹೋಕರಲ್ಲಿಯಿಲ್ಲಿ ಓದಿ ದೈನ್ಯದೋರಿ ತಮ್ಮ
ಕಾದ ಹೊಟ್ಟೆಗನ್ನವಂ ಸಂಪಾದಿಸವರಲ್ಲದಿಂತೀ

ಜ್ಯೋತಿಷ್ಯ ಛಂದಸ್ಸು ಶಿಲ್ಪ ವಾಸ್ತು ವೈದ್ಯ ಗಾರುಡಂ ಸಂ-
ಗೀತ ನಾಟ್ಯ ಸಾಮುದ್ರಿಕ ಭೂತಾದ್ಯಲ್ಪ ವಿದ್ಯವ-
ನೋತು ಕಲ್ತರೆಲ್ಲ ತೂತು ಮಾತ ಮುಂದು ಮಾಡಿ ದೃಶ್ಯ
ಜಾತವನ್ನೇ ಹೇಳಿ ಯಮದೂತರಪ್ಪರಲ್ಲದಿಂತೀ

ವೇದಾಗಮ ಜ್ಯೋತಿಷ ಛಂದೋ ವಾದವಶ್ಯ ಬಂಧ ಲಕ್ಷ-
ವಾದಿಯಾದ ವಿದ್ಯವೆಲ್ಲ ಭೇದಮಾರ್ಗವೆನ್ನುತ-
ನಾದಿ ಗುರುಸಿದ್ಧನನ್ನೆ ಬೋಧಿಸುತ್ತದ್ವೈತರೂಪ-
ವಾದ ಮುಕ್ತಿಸೌಖ್ಯವೀವ ವೇದಾಂತಮೊಂದಲ್ಲದಿಂತೀ (ಸಪ್ಪಣ್ಣ, ತತ್ವಪದದ ಸಂಖ್ಯೆ, 105)

ಸಪ್ಪಣ್ಣನವರ ಮೇಲಿನ ತತ್ವಪದವು ವೈದಿಕ ಸಾಂಸ್ಕøತಿಕ ಪರಂಪರೆ ರೂಪಿಸಿಕೊಂಡು ಬಂದಿದ್ದ ಎಲ್ಲ ವಿಚಾರಗಳನ್ನು ಹೊಟ್ಟೆಪಾಡಿಗಾಗಿ ರೂಪಿಸಿಕೊಂಡಿರುವ ಡಂಭದ ವಿಚಾರಗಳು ಎನ್ನುವ ಮೂಲಕ ಅವನ್ನು ಸಾರಾಸಗಟಾಗಿ ನಿರಾಕರಿಸಿದೆ. ಅಲ್ಲದೆ ಅವೆಲ್ಲವು ಭೇದವನ್ನು ಸೃಷ್ಟಿಸುವ ವಿಚಾರಗಳು ಎನ್ನುತ್ತ ಅವುಗಳ ಬದಲಿಗೆ ವೇದಾಂತವನ್ನು ಮಂಡಿಸುವ ಕೆಲಸ ಮಾಡಿದೆ. ಇಂದೂ ಕೂಡ ಅವೈದಿಕ ಪರಂಪರೆ ವೈದಿಕ ಪರಂಪರೆಯ ಜೊತೆಗೆ ನಿತ್ಯದ ಗುದ್ದಾಟವನ್ನು ಮುಂದುವರೆಸಿದೆ. ವೈದಿಕಶಾಹಿಯ ಜ್ಞಾನಲೋಕ ಅವೈದಿಕತೆಯ ಮೇಲೆ ಸಾರಿರುವ ನಿತ್ಯದ ಆಕ್ರಮಣವು ಯಾವತ್ತೂ ಸಾಗಿದ್ದು ಅದನ್ನು ಎಲ್ಲ ಕಾಲದಲ್ಲಿಯೂ ಎದುರಿಸುತ್ತಲೇ ಬಂದಿದೆ. ಅದನ್ನು ತತ್ವಪದಕಾರರು ಮಾಡಿದ್ದಾರೆ. ಆ ದಾರಿಯಲ್ಲಿ ಸಾಗಿಬಂದ ಸಪ್ಪಣ್ಣನವರಲ್ಲಿಯೂ ಅದನ್ನು ಕಾಣಲು ಸಾಧ್ಯವಿದೆ.
ಅಂದರೆ ಸಪ್ಪಣ್ಣನವರು ಮತ್ತು ಇತರೆ ತತ್ವಪದಕಾರರು ವೈದಿಕಶಾಹಿಯ ಎದುರು ನಡೆಸಿದ ಸೆಣಸಾಟವನ್ನು ಬಹಳ ಸ್ಪಷ್ಟವಾಗಿ ಈ ತತ್ವಪದ ತೆರೆದು ತೋರಿಸುತ್ತದೆ.

ಹೀಗೆ ತತ್ವಪದಕಾರರು ವೈದಿಕ ಜ್ಞಾನಮೀಮಾಂಸೆಯನ್ನಲ್ಲದೆ ಮೇಲೆ ಹೆಸರಿಸಿದ ಪ್ರಭುತ್ವ, ಸಂಸಾರ-ಕುಟುಂಬ ವ್ಯವಸ್ಥೆ, ಸಂಪತ್ತು-ಖಾಸಗಿ ಆಸ್ತಿ, ಜಾತಿ-ವರ್ಗಗಳ ಸಾಮಾಜಿಕ ಅಸಮಾನತೆ ಇತ್ಯಾದಿಗಳನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಇವು ಆತ್ಮಜ್ಞಾನದ ಗಳಿಕೆಗೆ ಮುಕ್ತಿಗೆ ತಮ್ಮನ್ನು ತಾವು ಅರಿವುದಕ್ಕೆ ದೊಡ್ಡ ತೊಡಕುಗಳೆಂದು ಭಾವಿಸುತ್ತ ಅವುಗಳನ್ನು ನಿರಾಕರಿಸುವ ಮೀರುವ ಪ್ರಯತ್ನ ಮಾಡಿದ್ದಾರೆ. ಇದನ್ನು ಜನಸಾಮಾನ್ಯರಿಗೂ ಬೋಧಿಸಿದ್ದಾರೆ. ಆ ಮೂಲಕ ಪ್ರಸ್ತುತದ ಬಂಧನದ ವ್ಯವಸ್ಥೆಯಿಂದ ಬಿಡುಗಡೆಗೊಳ್ಳುವಂತೆಯೂ ಸೂಚಿಸಿದ್ದಾರೆ. ಇಂದು ವಾಸ್ತವದಲ್ಲಿ ಸಮಾಜ ವಿಜ್ಞಾನಿಗಳು, ಪ್ರಗತಿಪರ ಚಿಂತಕರು, ಕ್ರಾಂತಿಕಾರಿಗಳಾದಿಯಾಗಿ ಎಲ್ಲ ಪ್ರಗತಿಪರ ಚಿಂತಕರು ಈ ಸಾಮಾಜಿಕ ಸಂಸ್ಥೆಗಳ ವಿನ್ಯಾಸವನ್ನು ಪ್ರಶ್ನಿಸುತ್ತಿರುವುದು ತಿಳಿದ ಸಂಗತಿಯೇ. ಅನುಭಾವಿ ಕವಿಗಳು ಸಂತರು ಕೂಡ ಇದನ್ನೇ ಮಾಡಿದ್ದಾರೆ.

ಮೇಲೆ ಹೆಸರಿಸಿದ ಎಲ್ಲ ಸಂಸ್ಥೆಗಳನ್ನು ವಿಮರ್ಶಿಸುತ್ತ ಅವು ಬಂಧನವೆಂದೋ ಮಾನವತ್ವದ ಘನತೆಯ ಸಾಧನೆಗೆ ತೊಡಕೆಂದೋ ಭಾವಿಸುತ್ತ ಅವುಗಳಿಂದ ಪಾರಾಗುವ ದಾರಿಗಾಗಿ ನಿರಂತರವಾಗಿ ಹುಡುಕಾಟ ಮಾಡಿದ್ದಾರೆ. ಈ ಲೋಕದ ಸಾಮಾಜಿಕ ಬದುಕು ಬಂಧನ ಎನ್ನಿಸಿದಾಗ ಅದರಿಂದ ಮುಕ್ತಿ ಪಡೆವ ಕನಸು ಅವರಿಗೆ ಮೂಡಿದಂತಿದೆ. ಬದುಕು ‘ಮಾಯೆ’ಯಾಗಿ ಕಾಡಿಸಿದ ಪರಿಣಾಮವಾಗಿ ಅವರಿಂದ ಬಿಡುಗಡೆ ಬಯಸಿ ‘ಪರವಸ್ತು’ ಹುಡುಕಾಟಕ್ಕಾಗಿ ಹೆಚ್ಚು ಪರಿತಪಿಸಿದಾಗ, ಅಂತಹ ಭಾವನೆಗಳ ಕುದಿಯನ್ನು ಪದವಾಗಿಸಿ ಹಾಡಿದಾಗ ಸಾಮಾಜಿಕ ಬದುಕಿನಿಂದ ಪಲಾಯನ ಮಾಡಲು ಬಯಸಿದÀಂತೆ ಮೇಲ್ನೋಟಕ್ಕೆ ಕಾಣುತ್ತದೆ. ಪಲಾಯನವಾದಿ ಜೀವನಮೀಮಾಂಸೆ ಮುಂದಿಟ್ಟಿರುವಂತೆ ಕಾಣಿಸುತ್ತದೆ. ಆದರೆ ಅವರನ್ನು ಬಾಧಿಸಿದ ‘ಸಾಮಾಜಿಕ ಅವ್ಯವಸ್ಥೆ’ ಉತ್ಪಾತಗಳನ್ನು ಚರ್ಚೆಯ ಕೇಂದ್ರವಾಗಿಸಿಕೊಂಡಾಗ, ಅದರ ವಿರುದ್ಧ ಅವರು ನಡೆಸಿದ ಗುದ್ದಾಟವನ್ನು ಮುಖ್ಯವಾಗಿ ಪರಿಗಣಿಸಿದಾಗ ಅನುಭಾವಿಗಳ ಪಾರಮಾರ್ಥಿಕ ಹುಡುಕಾಟದ ಮೂಲಬೇರುಗಳು ಸ್ಪಷ್ಟವಾಗುತ್ತವೆ. ಅವರು ಸಾಮಾಜಿಕ ಬದುಕಿನಿಂದ ಪಲಾಯನ ಮಾಡುತ್ತಿದ್ದಾರೆ ಎನ್ನಿಸುತ್ತಿರುವಾಗಲೇ ಅವರು ಸಾಮಾಜಿಕ ವ್ಯವಸ್ಥೆಯ ಪ್ರಮುಖ ಟೀಕಾಕಾರಾಗಿ ಅದನ್ನು ದಿಕ್ಕರಿಸುತ್ತಿರುವುದು ಕಂಡುಬರುತ್ತದೆ.

ಇಲ್ಲಿಯೇ ಗಮನಿಸಬೇಕಾದ ಒಂದು ಸಂಗತಿಯೆಂದರೆ, ಇವರು ಕೇವಲ ವ್ಯವಸ್ಥೆಯನ್ನು ಮಾತ್ರ ಪ್ರಶ್ನಿಸುವುದಿಲ್ಲ. ಬದಲಿಗೆ ತಮ್ಮ ಆತ್ಮವಿಮರ್ಶೆಗೂ ತೊಡಗುತ್ತಾರೆ. ಅಂದರೆ ನಿರಾಕರಣೆ ಮತ್ತು ದಿಕ್ಕರಿಸುತ್ತಿರುವುದರ ಹಿಂದೆ ಆಳವಾದ ಸಾಮಾಜಿಕ ಮತ್ತು ಜೀವನಾನುಭವದ ಅರಿವು ಎಚ್ಚರ ಅವರಲ್ಲಿರುವುದು ತಿಳಿದುಬರುತ್ತದೆ. ಸಾಮಾಜಿಕ ಬದಲಾವಣೆಗೆ ಮಾತ್ರ ಒತ್ತಾಯಿಸದೆ ವ್ಯಕ್ತಿಯ ಪೂರ್ಣ ಬದಲಾವಣೆಗೂ ಒತ್ತಾಯಿಸುತ್ತಾರೆ. ಹೊಸವ್ಯಕ್ತಿತ್ವವನ್ನು ಜನರು ಪಡೆಯಬೇಕಿರುವುದನ್ನು ಸೂಚಿಸುತ್ತಾರೆ. ಹಾಗಾಗಿ ಆನುಭಾವಿಕ ಪಥವನ್ನು ಬದುಕಿನ ಕಷ್ಟಗಳಿಗೆ ಎದುರಿದ ಅಧೀರ ಮನದವರು ಮಾಡಿಕೊಂಡ ಆಯ್ಕೆ ಎನ್ನಲಾಗುವುದಿಲ್ಲ. ಸಾಮಾಜಿಕ ವ್ಯವಸ್ಥೆಯ ಮತ್ತು ವ್ಯಕ್ತಿಗಳ ಜೀವನದ ಮಿತಿಗಳ ಬಗೆಗೆ ಖಚಿತ ಅರಿವು ಎಚ್ಚರ ಪಡೆದುಕೊಂಡೇ ಅವರು ಅದರಿಂದ ಬಿಡುಗಡೆ ಬಯಸಿ ತಮ್ಮ ಅನುಭಾವದ ಚಿಂತನೆಗಳನ್ನು ಮಂಡಿಸಿದ್ದಾರೆ.

ಈ ಲೌಕಿಕ ಬದುಕಿನಿಂದ ಬಿಡುಗಡೆ ಬಯಸುತ್ತಿರುವುದು. ಅದನ್ನು ನಿರಾಕರಿಸುತ್ತಿರುವುದು. ನಿರಾಕರಣೆಯ ಜೊತೆ ಜೊತೆಗೆ ‘ಪರವಸ್ತು’ವನ್ನು ಅಪ್ಪಿಕೊಳ್ಳುತ್ತಿರುವುದು ಎಲ್ಲವೂ ನಡೆಯುತ್ತಿರುವುದು ಲೋಕದ ಜೊತೆಗೆ ಸೆಣಸಾಡುತ್ತಲೇ. ‘ಪರವಸ್ತು’ವನ್ನು ಅಪ್ಪಿಕೊಳ್ಳುವ ಸಂತರ ತತ್ವಸಾಹಿತ್ಯ ಕುರಿತು ಕಿರಂ ಅವರೇ ಹೇಳುವಂತೆ, “ಮೇಲುನೋಟಕ್ಕೆ ಈ ಎಲ್ಲ ಅಭಿವ್ಯಕ್ತಿಯ ಸಂರಚನಾತ್ಮಕ ಲಕ್ಷಣಗಳ ಸ್ವರೂಪ ಒಂದೇ ಎಂಬಂತೆ ತೋರುತ್ತದೆ. ಈ ರಚನೆಗಳನ್ನು ದೇವರಿಗಾಗಿ ಹಳಹಳಿಸುವ ಆತÀ್ಯಂತಿಕವಾದ ಅಮೂರ್ತವಾದ ನೆಲೆಗಳತ್ತ ಧಾವಿಸುವ ರಚನೆಗಳೆಂದು ಕರೆದುಕೊಂಡು ಬರಲಾಗಿದೆ. ಈ ರಚನಕಾರರ ಎಲ್ಲ ಒತ್ತಡಗಳು (ಮಾನಸಿಕ, ತಾತ್ವಿಕ ಮತ್ತು ಸಾಮಾಜಿಕ) ನಮ್ಮ ಕಾವ್ಯಪರಂಪರೆಯ ಪ್ರತಿಮೆ ಪ್ರತೀಕಗಳ ನೆಲೆಗಟ್ಟಿನಿಂದಲೇ ಅಭಿವ್ಯಕ್ತಿಗೊಳ್ಳುವಂತಹವಾಗಿದೆ. ಪ್ರೀತಿ, ಅಂತರಂಗದ ಪ್ರಾಮಾಣ್ಯ, ಉಗ್ರ ಆತ್ಮವಿಮರ್ಶೆ ಈ ರಚನೆಗಳ ಮುಖ್ಯಸತ್ವವೂ ಆಗಿದೆ. ಈ ಪರಂಪರೆ ‘ಭಕ್ತಿ ಮತ್ತು ವಿರಕ್ತಿಯ ಮಾರ್ಗಗಳನ್ನು ತನ್ನ ಮುಖ್ಯಗ್ರಹಿಕೆಗಳೆಂದು ಒಪ್ಪಿದೆ.” (ಕಿ. ರಂ. ನಾಗರಾಜ, ತೆರೆದ ಪಠ್ಯ, ಪು.219) ಎನ್ನುತ್ತಾರೆ.

ಅಂದರೆ ಸಮಾಜದ ಮೂಲ ರಚನೆಗಳನ್ನು ನಿರಾಕರಿಸುವುದರ ಹಿಂದೆ ಬೇರೆ ಯಾವುದೇ ಅಮೂರ್ತ ನೆಲೆಗಳು ಇಲ್ಲವೇ ಅನ್ಯ ಕಾರಣಗಳಿಲ್ಲ. ವಾಸ್ತವದ ಮತ್ತು ಲೌಕಿಕÀ ಬದುಕಿನ ಬಗೆಗೆ ಆ ನಿರಾಕರಣೆ ಹುಟ್ಟಿಕೊಂಡಿದೆ. ಬದುಕು ನಶ್ವರ ಮತ್ತು ಕ್ಷಣಿಕವೆನ್ನಿಸಿ ಈ ಕ್ಷಣಿಕವಾದ ಬದುಕಿಗಾಗಿ ಪರದಾಡುವ ಸಾಮಾಜಿಕರನ್ನು ಕಂಡೇ ಅವರು ಆಚೆ ದಡದ ಇಲ್ಲವೇ ‘ಪಲಾಯನ ವಾದಿ’ ವಿಚಾರಧಾರೆಯನ್ನು ಮುಂದಿಟ್ಟಿದ್ದಾರೆ. ಅಂದರೆ ಕಿರಂ ಎಂದಂತೆ ಭಕ್ತಿ ಮತ್ತು ವಿರಕ್ತಿಯ ಮಾರ್ಗಗಳನ್ನು ಮುಂದಿಟ್ಟಿದ್ದಾರೆ. ಅಂದರೆ ಇದುವರೆಗೂ ಲೌಕಿಕವಾಗಿ ಕಲಿತುಕೊಂಡಿದ್ದ ಇಲ್ಲವೇ ರೂಢಿಗತವಾಗಿ ಬಂದಿದ್ದ ತಿಳುವಳಿಕೆಯನ್ನು ಕಳಚಿಕೊಳ್ಳುವುದೇ ಇಲ್ಲಿ ‘ವಿರಕ್ತಿ’ಯ ಅರಿವಾಗಿರುತ್ತದೆ. ಸಾಧನೆಯೂ ಆಗುತ್ತದೆ. ಹಾಗಾಗಿ ಅದಕ್ಕೆ ಪಾರಮಾರ್ಥಿಕ ಆನುಭಾವಿಕವಾದ ಯಾವುದೇ ಚಹರೆಗಳನ್ನು ಅಂಟಿಸಿದರೂ ಅದು ಮೂಲದಲ್ಲಿ ಇದುವರೆಗೂ ಹೊಂದಿದ್ದ ‘ಅಜ್ಞಾನ’ವನ್ನು ಕಳಚಿಕೊಂಡು ಸುಜ್ಞಾನದತ್ತ, ಬಾಳು ಬೆಳಗುವ ಅರಿವಿನತ್ತ ನಡೆಯುವ ಸಾಮಾಜಿಕ ದರ್ಶನವೇ ಅನುಭಾವಿಗಳ ನೈಜ ನಡೆಯಾಗಿರುವುದು ತಿಳಿದುಬರುತ್ತದೆ.

ಈ ದಾರಿಯಲ್ಲಿ ಬಹುದೂರ ಸಾಗಿದ ಮೇಲೆ ಪಾರಮಾರ್ಥಿಕ ಕಲ್ಪನೆಯಿಂದಲೂ ಬಿಡುಗಡೆಗೊಂಡು, ತನ್ನ ತಾನರಿವುದೇ ನಿಜವಾದ ಅರಿವು ಎಂಬ ನೆಲೆಗೆ ಬಂದು ಮುಟ್ಟುತ್ತಾರೆ. ‘ನಿನ್ನ ನೀನರಿತುಕೋ’ ಎಂಬುದೇ ಅವರ ಸಂದೇಶವಾಗುತ್ತದೆ. ಅಂತಹ ನೆಲೆಯಲ್ಲಿ ಆ ದಡದ ಕನಸು ಕೂಡ ಚಿದ್ರವಾಗಿ ದೂರವಾಗಿರುತ್ತದೆ. ನಿಂದ ನೆಲೆಯಲ್ಲಿಯೇ ಎಲ್ಲವನ್ನೂ ಕಾಣುವ ತವಕ ಮತ್ತು ಅದೂ ತೀರಿದ ನಂತರ ಮೌನವೇ ‘ಕನಸು ಕಾಣ್ಕೆ’ಯಾಗಿರುತ್ತದೆ. ಅಂತಹ ನೆಲೆಯಲ್ಲಿ ಪಲಾಯನವಾದಿ ವಿಚಾರವು ಕೇವಲ ಆರೋಪವಷ್ಟೇ ಆಗಿ ಉಳಿಯಬಹುದು. ಅನುಭಾವಿಗಳು ಜೀವನ ವಿಮುಖತೆ ಬಯಸುತ್ತಾರೆ ಎಂಬ ವಿಚಾರವೂ ಅಲ್ಲಿ ಅರ್ಥವಿಲ್ಲದಂತಾಗುತ್ತದೆ. ಸಮಾಜ ಮತ್ತು ಸಂಸಾರದಲ್ಲಿದ್ದುಕೊಂಡೇ ಅವುಗಳನ್ನು ಮೀರಿ ಬದುಕುವ ಬಗೆಯನ್ನು ಅವರು ಶೋಧಿಸುತ್ತಿರುವುದು ಕಂಡುಬರುತ್ತದೆ. ಇಂತಹ ಹುಡುಕಾಟದ ನೆಲೆಯಲ್ಲಿ ಅನುಭಾವ ಸಾಹಿತ್ಯವೂ ಹುಟ್ಟಿಕೊಂಡಿರುವುದು. ಅಂದರೆ ಮೇಲೆ ಹೇಳಿದಂತೆ ಅನುಭಾವಿಗಳ ಪ್ರಾಮುಖ್ಯತೆ ಇರುವುದೇ ಇರುವ ಸಾಮಾಜಿಕ ವ್ಯವಸ್ಥೆಯನ್ನು ಅಲ್ಲಿನ ಎಲ್ಲ ಸಂರಚನೆಗಳನ್ನು ನಿರಾಕರಿಸುವುದರಲ್ಲಿ. ಇಂತಹ ನಿರಾಕರಣೆಯ ಮೂಲಕ ಪ್ರಸ್ತುತ ವ್ಯವಸ್ಥೆಗೆ ತೀವ್ರವಾದ ಪೆಟ್ಟುಕೊಡುವುದರಲ್ಲಿ. ಅದರ ಅಡಿಗಲ್ಲನ್ನು ಕದಲಿಸುವುದರಲ್ಲಿ. ಭದ್ರವಾಗಿದ್ದ ಜಡವ್ಯವಸ್ಥೆಯ ಗೋಡೆಗಳಲ್ಲಿ ಬಿರುಕು ಮೂಡಿಸಿ ಅಲ್ಲಿ ಹೊಸಗಾಳಿ ಹೊಸವಿಚಾರಗಳನ್ನು ನುಗ್ಗಿಸಲು ಪ್ರಯತ್ನಿಸಿರುವುದರಲ್ಲಿ. ಎಂಬುದು ಮುಖ್ಯವಿಚಾರ. ಇಂತಹ ಎಲ್ಲ ವಿಚಾರಗಳನ್ನು ಹೀರಿಕೊಂಡು ಜನರು ಉಸಿರಾಡುವಂತೆ ಮಾಡಿರುವುದು ಅವರ ಹೆಗ್ಗಳಿಕೆ.

ಹೀಗೆ ಪ್ರಸ್ತುತ ವ್ಯವಸ್ಥೆಯ ಜೊತೆಗೆ ಯುದ್ಧ ಹೂಡಿದ್ದಾರೆ. ಇದು ಅವರು ಬದುಕಿನಿಂದ ಪಲಾಯನ ಮಾಡುವ ಬಯಕೆ ಹೊಂದಿರುವ ಅನುಭಾವಿಗಳು ಮಾತ್ರವಾಗಿರದೆ ವ್ಯವಸ್ಥೆಯ ಜೊತೆಗೆ ಸೆಣಸಾಡುತ್ತ ಅದನ್ನೇ ತಮ್ಮ ಅಭಿವ್ಯಕ್ತಿಯ ನೆಲೆಯನ್ನಾಗಿಸಿಕೊಂಡಿರುವುದು ಇದರಿಂದ ಖಚಿತವಾಗಿ ತಿಳಿದುಬರುತ್ತದೆ. ಆದರೆ ಸಮಾಜದ ಜೊತೆಗೆ ಸಂಘರ್ಷ ನಡೆಸುತ್ತ ಇವುಗಳಿಗೆ ಬದಲಿಯಾಗಿ ಬಿಡುಗಡೆಯ ಹಾದಿಯಾಗಿ ವಿರಕ್ತಿ ವೈರಾಗ್ಯ ಮೋಕ್ಷ ಇತ್ಯಾದಿ ಕಲ್ಪನೆಗಳನ್ನು ಮಂಡಿಸುತ್ತಾರೆ. ಇವುಗಳ ತೀವ್ರ ಹಂಬಲದೊಂದಿಗೆ ಪರವಸ್ತುವಿಗಾಗಿ ತುಡಿವುದೇ ಬಿಡುಗಡೆ ಎಂದು ಭಾವಿಸುತ್ತಾರೆ. ಆದರೆ ಇಂತಹ ‘ಭಕ್ತಿ ಮತ್ತು ವಿರಕ್ತಿ’ ಮಾರ್ಗದ ಈ ಆಯ್ಕೆ ಸಾಮಾಜಿಕರಿಗೆ, ‘ಭವಿ’ಗಳಿಗೆ ಎಂದೂ ಒಪ್ಪಿಗೆಯಾಗದಿರಬಹುದು. ಇದು ಬೇರೆಯ ವಿಚಾರ. ಎಲ್ಲ ಬಗೆಯ ಸಾಮಾಜಿಕ ಸಂಸ್ಥೆಗಳನ್ನು ಸಮಸ್ಯೆಗಳನ್ನು ನಿರಾಕರಿಸುವಾಗಲೂ ಮತ್ತು ತಮ್ಮ ಎಲ್ಲ ತತ್ವಪದಗಳು ಇಂತಹ ಆಶಯದೊಂದಿಗೆ ಕೊನೆಯಾಗುವುದರಿಂದ ಹಾಗನ್ನಿಸುತ್ತದೆ. ಇದನ್ನು ಒಪ್ಪಬಹುದು ಇಲ್ಲದೆ ಇರಬಹುದು. ಆದರೆ ಅವರ ಮುಖ್ಯ ತಕರಾರು ಮತ್ತು ಗುದ್ದಾಟ ಇರುವುದು ವ್ಯವಸ್ಥೆಯ ವಿರುದ್ದ ಎಂಬುದಂತೂ ಖಚಿತ. ಅಂತಹ ಗುದ್ದಾಟವನ್ನು ನಡೆಸಿರುವ ಕಾರಣಕ್ಕಾಗಿಯೇ ಅವರಿಂದು ಜನಪರವಾದ ಪ್ರಗತಿಪರವಾದ ಚಿಂತನೆಗಳನ್ನು ಮಂಡಿಸಿರುವ ಸಂತರಾಗಿ ಕಾಣಿಸುತ್ತಿರುವುದು. ಇಲ್ಲವಾದರೆ ಅವರಿಂದು ಇಂದಿನ ಅಧ್ಯಯನಗಳಿಂದಲೂ ದೂರವೇ ಉಳಿದುಬಿಡುತ್ತಿದ್ದರು.

ಸಂತಪರಂಪರೆಯನ್ನು ಎದುರಾದಾಗಲೆಲ್ಲ ಕಾಣಿಸುವ ಒಂದು ಸಮಸ್ಯೆ ಎಂದರೆ ಅದು ಹೆಣ್ಣನ್ನು ಕುರಿತಾದ ಅವರ ಗ್ರಹಿಕೆ. ಅದರ ಬಗೆಗೆ ಎಷ್ಟೇ ಯೋಚಿಸಿದರೂ ಅಲ್ಲಿ ಮಂಡಿತವಾಗಿರುವ ವಿಚಾರಧಾರೆಯು ಹೆಣ್ಣನ್ನು ಸಮಾನವಾದ ನೆಲೆಯಲ್ಲಿ ಗ್ರಹಿಸಿಯೇ ಇಲ್ಲ. ಹಲವು ಮಹಿಳಾ ತತ್ವಪದಕಾರ್ತಿಯರು ಈ ಸಾಧಕರ ಪರಂಪರೆಯಲ್ಲಿದ್ದರೂ ಕೂಡ ಪುರುಷ ತತ್ವಪದಕಾರರಲ್ಲಿನ ವಿಚಾರಗಳನ್ನು ಹೆಣ್ಣನ್ನು ಸಮಾನವಾದ ನೆಲೆಯಲ್ಲಿ ಕಂಡಿಲ್ಲ. ಹೆಣ್ಣನ್ನು ಮಾಯೆ, ರಾಕ್ಷಸಿ, ಪೀಡಕಿ, ಸಾಧನೆಗೆ ತೊಡಕಾಗಿರುವ ಬಂಧನದ ಬಲೆ ಇತ್ಯಾದಿ ಅರ್ಥಗಳ ನೆಲೆಯಲ್ಲಿಯೇ ಪರಿಗಣಿಸಲಾಗಿದೆ. ಇತರೆ ಹಲವು ಸಾಮಾಜಿಕ ತರತಮದ ನೆಲೆಗಳನ್ನು ವಿರೋಧಿಸಿದ ಸಂತರು ಮಹಿಳೆ ಮತ್ತು ಪುರುಷರ ನಡುವೆ ಇರುವ ಕಂದರವನ್ನು ಮಹಿಳೆಯ ನೆಲೆಯಿಂದ ನೋಡುವ ಪ್ರಯತ್ನ ಮಾಡಲೇ ಇಲ್ಲ. ಅದು ಪೂರ್ಣವಾಗಿ ಇಂದಿಗೂ ಗಂಡುನೋಟದ ನೆಲೆಯಲ್ಲಿಯೇ ನೋಡಲಾಗಿದೆ. ಅಂದರೆ ಸಂತರಲ್ಲಿಯ ವೈಚಾರಿಕತೆ ಪ್ರಖರವಾಗಿದ್ದಾಗಲೂ ಹೆಣ್ಣಿನ ಬಗೆಗೆ ಬಂದಾಗ ಅದು ನಕಾರಾತ್ಮಕ ಧೋರಣೆಯನ್ನು ಹೊಂದಿರುವುದೇ ಕಂಡುಬರುತ್ತದೆ. ಸಂತರರೊಂದಿಗೆ ಈ ವಿಚಾರದಲ್ಲಿ ಸದಾ ಭಿನ್ನಮತವನ್ನು ಇಟ್ಟುಕೊಂಡೇ ಅವರನ್ನು ಮುಖಾಮುಖಿಯಾಗಬೇಕಿದೆ. ಇದು ಕನಕ-ಪುರಂದರರಂತಹ ಕೀರ್ತನೆಕಾರರ ವಿಚಾರದಲ್ಲಿಯೂ ನಿಜ. ಅವರೂ ಕೂಡ ಇತರೆಲ್ಲ ಸಾಮಾಜಿಕ ತರತಮದ ನೆಲೆಗಳನ್ನು ಬಹಳ ಕಟುವಾಗಿ ಟೀಕಿಸಿದರೂ ಹೆಣ್ಣನ್ನು ಕುರಿತು ಮಾತ್ರ ಅದು ಪುರುಷವಾದಿಯಾದ ನೆಲೆಯೇ. ಹೀಗೆ ಹೆಣ್ಣು ಮತ್ತು ಇಡೀ ಸಮಾಜ ಎಲ್ಲ ನೆಲೆಗಳನ್ನು ನಿರಾಕರಿಸುವ ಅವರು ಮಂಡಿರುವ ಪಾರಮಾರ್ಥದ ಆತ್ಯಂತಿಕ ಪರಿಹಾರಗಳ ಬಗೆಗೆ ಭಿನ್ನಮತದ ಎಚ್ಚರದೊಂದಿಗೆ ಅವರನ್ನು ಮುಖಾಮುಖಿಯಾಗಬೇಕು.

ಈ ಮೇಲೆ ಚರ್ಚಿಸಿದ ಎಲ್ಲ ಸಂಗತಿಗಳನ್ನು ತಮ್ಮಲ್ಲಿ ಅನುಭವಿಸಿ ತಮ್ಮ ತತ್ವಪದಗಳಲ್ಲಿ ಅವನ್ನು ಅಭಿವ್ಯಕ್ತಿಸಿದ ಮುಖ್ಯ ಅನುಭಾವಿ ಕವಿ ಸರ್ಪಭೂಷಣ ಶಿವಯೋಗಿಗಳು. ಕರ್ನಾಟಕದ ಅನುಭಾವಿ ಪರಂಪರೆಯಲ್ಲಿ ಇವರ ಹೆಸರು ಬಹಳ ಮಹತ್ವದ್ದಾಗಿ ಕಂಡುಬರುತ್ತದೆ. ನಿಜಗುಣ ಶಿವಯೋಗಿ, ಮುಪ್ಪಿನ ಷಡಕ್ಷರಿ, ಬಾಲಲೀಲ ಮಹಾಂತ ಶಿವಯೋಗಿ, ಶಿಶುನಾಳ ಶರೀಫರು, ಕಡಕೋಳದ ಮಡಿವಾಳಪ್ಪ, ಖೈನೂರು ಕೃಷ್ಣಪ್ಪ, ತೆಲಗಬಾಳದ ರೇವಪ್ಪ, ಕಡ್ಲೆವಾಡ ಸಿದ್ದಪ್ಪ, ಚೆನ್ನೂರ ಜಲಾಲ ಸಾಹೇಬ, ಕೂಡಲೂರ ಬಸಲಿಂಗಪ್ಪ, ಶಂಕರಾನಂದ, ಹಾಗಲ್ವಾಡಿ ಮುದ್ವೀರಸ್ವಾಮಿ ಮುಂತಾಗಿ ನೂರಾರು ಜನ ಸಂತರಿದ್ದಾರೆ. 17, 18 ಮತ್ತು 19ನೆಯ ಶತಮಾನಗಳಲ್ಲಿ ಇವರ ತತ್ವಚಿಂತನೆಯ ಸಾಮಾಜಿಕ ಮತ್ತು ಆನುಭಾವಿಕ ಕಾಯಕ ನಡೆದಿದೆ. ಅಂತಹ ಪರಂಪರೆಯಲ್ಲಿ ಸಾಗಿಬಂದವರೇ ಸಪ್ಪಣ್ಣನವರು; ಅಂದರೆ ಶ್ರೀ ಸರ್ಪಭೂಣ ಶಿವಯೋಗಿಗಳು. ಅವರ ಆನುಭಾವಿಕ ಚಿಂತನೆಗಳನ್ನು ಪ್ರಕಟಪಡಿಸುವ ಮಹತ್ವದ ಕೃತಿಯೇ ಕೈವಲ್ಯ ಕಲ್ಪವಲ್ಲರಿ. ಇದಕ್ಕೆ ನಿಜಗುಣ ಶಿವಯೋಗಿಗಳ ‘ಕೈವಲ್ಯಪದ್ದತಿ’ಯೇ ಪ್ರೇರಣೆಯಾಗಿರುವ ಕೃತಿ. ಅಂದರೆ ಸಪ್ಪಣ್ಣನವರು ತಮ್ಮ ಪೂರ್ವಿಕರಿಂದ ಪ್ರೇರಣೆ ಪಡೆದೇ ಅದೇ ಪರಂಪರೆಯಲ್ಲಿ ಮುಂದುವರೆದಿದ್ದಾರೆ. ತತ್ವಪದ ಪರಂಪರೆಯಲ್ಲಿ ಮೌಖಿಕ ಮತ್ತು ಬರೆಹಗಳೆಂಬ ಎರಡು ಪರಂಪರೆಗಳಿವೆ. ಕನ್ನಡದ ಬಹುತೇಕ ತತ್ವಪದಕಾರರು ಮೌಖಿಕ ಪರಂಪರೆಯವರು. ಆದರೆ ಸಪ್ಪಣ್ಣನವರು ಬರೆಹ ಪರಂಪರೆಗೆ ಸೇರಿದವರು. ಅವರು ನಿಜಗುಣರ ಜೊತೆಗೆ ನಡೆಸುವ ಅನುಸಂಧಾನ ಮತ್ತು ಸಂಸ್ಕøತ ಪಾಂಡಿತ್ಯವನ್ನು ಗಮನಿಸಿದರೆ ಅವರು ಯಾವ ಪರಂಪರೆಗೆ ಸೇರಿದವರು ಎಂಬುದನ್ನು ತೋರಿಸಿಕೊಡುತ್ತದೆ.

ಮಹಾಮಾರ್ಗಕಾರ ಸಪ್ಪಣ್ಣನವರು
ಇಂತಹ ಮಹಾಪರಂಪರೆಯಲ್ಲಿ ಬೆಳೆದು ಬಂದ ಸರ್ಪಭೂಷಣ ಶಿವಯೋಗಿಗಳು ಮೂಲತಃ ಬೆಂಗಳೂರು ನಗರಜಿಲ್ಲೆಯವರು. ನಗರಕ್ಕೆ ಸಮೀಪದಲ್ಲಿರುವ ಚಿಕ್ಕಬಾಣಾವರದ ಮಲ್ಲಿಕಾರ್ಜುನಪ್ಪ ಮತ್ತು ಚನ್ನಮ್ಮ ದಂಪತಿಗಳ ಮಗನಾಗಿ ಕ್ರಿ. ಶ. 1795ರಲ್ಲಿ ಹುಟ್ಟಿದವರು. ಇವರದು ಮೂಲತಃ ವ್ಯಾಪಾರಿ ಮನೆತನ. ಕೆಲಕಾಲದ ನಂತರ ಮಲ್ಲಿಕಾರ್ಜುನಪ್ಪನವರು ಚಿಕ್ಕಬಾಣಾವರದಿಂದ ತಮ್ಮ ನೆಲೆ ಬದಲಿಸಿ ನಗರದ ಮಾಮೂಲು ಪೇಟೆಯಲ್ಲಿ ಅಡಿಕೆ ಅಂಗಡಿಯನ್ನಿಟ್ಟುಕೊಂಡು ವ್ಯಾಪಾರ ಮುಂದುವರೆಸಿದರು. ಈ ದಂಪತಿಗಳಿಗೆ ಶಾಂತಪ್ಪ, ಸಪ್ಪಣ್ಣ, ಮಲ್ಲಣ್ಣ, ಹುಚ್ಚಣ್ಣರೆಂಬ ನಾಲ್ವರು ಗಂಡುಮಕ್ಕಳಿದ್ದರು. ಹೀಗೆ ತಮ್ಮ ಮೂಲನೆಲೆಯನ್ನು ಬದಲಿಸಿ ನಗರದಲ್ಲಿ ನೆಲೆಸಿದ ನಂತರ ಮಲ್ಲಿಕಾರ್ಜುನಪ್ಪನವರಿಗೆ ಬೆಂಗಳೂರು ನಗರದ ತಿಪ್ಪಶೆಟ್ಟಿಮಠದಲ್ಲಿದ್ದ ಗುರುಸಿದ್ದಸ್ವಾಮಿಗಳ ಸಂಪರ್ಕವಾಯಿತು. ಅವರು ಸಪ್ಪಣ್ಣನವರ ವಿದ್ಯಾಭ್ಯಾಸದ ಹೊಣೆವಹಿಸಿಕೊಂಡರು. ಕನ್ನಡ ಸಂಸ್ಕøತಗಳ ಪಾಂಡಿತ್ಯ ಪಡೆವಂತೆ ಮಾಡಿದರು. ಮುಂದೆ ಆ ಮಠದ ಉತ್ತರಾಧಿಕಾರಿಯನ್ನಾಗಿಸಲು ತಂದೆತಾಯಿಗಳಿಂದ ಒಪ್ಪಿಗೆಯನ್ನೂ ಪಡೆದರು.

ಹೀಗೆ ಶ್ರೀ ಗುರುಸಿದ್ದರಿಂದ ತಮ್ಮ 20ನೆಯ ವಯಸ್ಸಿನಲ್ಲಿ ಗುರುದೀಕ್ಷೆ ಪಡೆದ ಸಪ್ಪಣ್ಣನವರು ವಿರಕ್ತಾಶ್ರಮ ಪ್ರವೇಶಿಸಿದರು. ಇದಾದ ನಂತರ ಒಂದು ದಶಕಕ್ಕೂ ಹೆಚ್ಚು ಕಾಲ ದೇಶ ಸಂಚಾರ ಮಾಡಿ ತಮ್ಮ ಅನುಭವವನ್ನು ವಿಸ್ತರಿಸಿಕೊಂಡರು. ಬೆಂಗಳೂರು, ಚಿತ್ರದುರ್ಗದ ಬೃಹನ್ಮಠ, ದಾವಣಗೆರೆ, ಹರಿಹರ, ಹಾವೇರಿ, ಬಂಕಾಪುರ, ಹುಬ್ಬಳ್ಳಿ, ಕಾಶಿ, ಸೊನ್ನಲಿಗೆ ಕೂಡಲಸಂಗಮ, ಹುನಗುಂದ, ಇಳಕಲ್, ಗುಳೇದಗುಡ್ಡ, ಬಾಗಿಲಕೋಟೆ, ಗದಗ, ಕೊಪ್ಪಳ, ಬಳ್ಳಾರಿ, ಉರುವಕೊಂಡ, ಶ್ರೀಶೈಲ, ಹಂಪಿ, ನಾರದಗಡ್ಡೆ, ಸುರಪುರ, ಚೆಳ್ಳಗುರ್ಕಿ, ಜೋಳದರಾಶಿ, ಆದವಾನಿ, ರಾಯಚೂರು, ದೊಡ್ಡಬಾಣಾವರ ಬೆಂಗಳೂರು ಹೀಗೆ 1815ರಿಂದ 1828ರವರೆಗೆ ದೀರ್ಘಕಾಲ ಸಂಚರಿಸಿದರು. ಇಂತಹ ಸಂಚಾರದಿಂದಾಗಿ ಹಲವು ಮಠಗಳು, ಅಲ್ಲಿನ ಸ್ವಾಮಿಗಳ ಜೊತೆಗೆ ನಿಕಟ ಸಂಪರ್ಕ ಸಾಧಿಸಿದ್ದರು. ಇದಕ್ಕೆ ಒಂದು ಉದಾಹರಣೆಯನ್ನು ನೀಡಬಹುದು. “ಶ್ರೀಸರ್ಪಭೂಷಣ ಶಿವಯೋಗಿಗಳು ಬೆಂಗಳೂರು ಪ್ರಾಂತದಲ್ಲಿ ಜನ್ಮಧಾರಣ ಮಾಡಿದಂತೆ ತಿಳಿಯುತ್ತದೆ. ಅವರ ಸಮಾಧಿಯಾದರೂ ಬೆಂಗಳೂರಲ್ಲಿಯೇ ಇದೆ. ಇವರು ಬಾಗಲಕೋಟೆಯಲ್ಲಿ ವಿಶ್ವವೇದಮೂರ್ತಿ ಅನಂತಾಚಾರ್ಯ ಲೋಕನಾಥಾಚಾರ್ಯ ಪ್ರಭಾಕರ ಇವರ ಜೊತೆಯಲ್ಲಿ ಕೆಲವು ಕಾಲ ಇದ್ದಂತೆ ಕೆಲವರು ಅವರನ್ನು ನೋಡಿದ ವೃದ್ಧಮಹನೀಯರು ಹೇಳಿರುವರು. ಈಗ ಆ ಆಚಾರ್ಯರ ವಂಶಜರಾದ ವೇದಮೂರ್ತಿ ನಾರಾಯಣಾಚಾರ್ಯ ಪ್ರಭಾಕರ ಅವರ ಮನೆಯಲ್ಲಿಯ ಕಾಗದಪತ್ರಗಳನ್ನು ಓದಿನೋಡಲಾಗಿ ವೇದಮೂರ್ತಿ ಅನಂತಾಚಾರ್ಯರು ಶಾಲಿವಾಹನ ಶಕೆ 1698ನೆಯ ದುರ್ಮುಖಿನಾಮ ಸಂವತ್ಸರದದಲ್ಲಿ ಜನಿಸಿ 80 ವರ್ಷದವರಾಗಿ ಶಕೆ 1778ರಲ್ಲಿ ಕಾಲವಾದಂತೆ ತಿಳಿಯುತ್ತದೆ. ಅವರು ಕಾಲವಾಗಿ ಈಗಿನ ಶಕೆ 1849ನೆಯ ವರ್ಷಕ್ಕೆ 71ವರ್ಷಗಳಾದವು. ಅವರ ವಿದ್ಯಮಾನದ ಕಾಲದಲ್ಲಿ ಶ್ರೀ ಶಿವಯೋಗಿಗಳು ಇದ್ದರೆಂದ ಬಳಿಕ ಅವರು ನೂರು ವರ್ಷಗಳ ಹಿಂದೆ ಇದ್ದರೆಂದಾಗಿ ವ್ಯಕ್ತವಾಗುತ್ತದೆ.”(ಮಾನಪ್ಪ ಅವ್ವಣ್ಣಪ್ಪಾ ನಾಲತವಾಡ, ಇಳಕಲ್ಲ, ಪ್ರಸ್ತಾವನೆಯಲ್ಲಿ)

ಇದಾದ ನಂತರ ದೀಕ್ಷಾಗುರು ಗುರುಸಿದ್ದ ಸ್ವಾಮಿಗಳು ದೈವಾಧೀನರಾದರು. ನಂತರ ಚಿಕ್ಕಗುರುಸಿದ್ದ ಸ್ವಾಮಿಗಳನ್ನು ತಿಪ್ಪಶೆಟ್ಟಿಮಠದ ಉತ್ತರಾಧಿಕಾರಿಗಳನ್ನಾಗಿ ನೇಮಿಸಿದರು. ಈ ಮೊದಲೇ ಮಠದ ಉತ್ತರಾಧಿಕಾರಿಗಳನ್ನಾಗಿ ಮಾಡುವುದಾಗಿಯೇ ಹೇಳಿ ಕರೆತಂದಿದ್ದ ಸಪ್ಪಣ್ಣನವರು ಅಲ್ಲಿಂದ ದೂರವಾದರು. ಈ ಹೊತ್ತಿಗಾಗಲೇ ಶ್ರೀಶೈಲದಲ್ಲಿ ಪರಿಚಯವಾಗಿದ್ದ ಶ್ರೀ ಪಾಲಲೋಚನ ಸ್ವಾಮಿಗಳು ಬೆಂಗಳೂರಿಗೆ ಆಗಮಿಸಿ ಸಪ್ಪಣ್ಣನವರ ಜೊತೆಗೆ ವಾಸಿಸತೊಡಗಿದ್ದರು. ಇದೇ ಸಂದರ್ಭದಲ್ಲಿ ಭಕ್ತರು ಸ್ವಾಮಿಗಳ ಅನುಮತಿ ಪಡೆದು ಮಠವನ್ನು ಕಟ್ಟಿಕೊಡಲು ಯತ್ನಿಸಿದರು. ಆದರೆ ಮಠದ ಕಟ್ಟದ ಕೆಲಸ ಮುಗಿಯುವ ಮೊದಲೇ 1839ರಲ್ಲಿ ಸರ್ಪಭೂಷಣರು ದೇಹತ್ಯಾಗಮಾಡಿದರು. ಈ ಮಠದಲ್ಲಿಯೇ ಅವರ ಗದ್ದುಗೆಯನ್ನು ಸ್ಥಾಪಿಸಲಾಗಿದೆ. ಅದು ಇಂದಿಗೂ ಅಲ್ಲಿದೆ. ಸರ್ಪಭೂಷಣರ ನಂತರ ಶ್ರೀ ಪಾಲಲೋಚನ ಸ್ವಾಮಿಗಳೇ ಮಠದ ಹೊಣೆವಹಿಸಿಕೊಂಡರು.

ಹೀಗೆ ವ್ಯಾಪಾರಿ ಕುಟುಂಬದಲ್ಲಿ ಹುಟ್ಟಿ ಗುರುಸಿದ್ದರಿಂದ ದೀಕ್ಷೆ ಪಡೆದು ವಿರಕ್ತರಾಗಿ ಬೆಳೆದವರು. ಈ ನಡುವೆ ಜ್ಞಾನದ ಆಸಕ್ತಿಯಿಂದ ಕನ್ನಡ ಮತ್ತು ಸಂಸ್ಕøತಗಳನ್ನು ಅಭ್ಯಾಸ ಮಾಡಿದವರು. ಅವುಗಳಲ್ಲಿ ಅಪಾರ ಪಾಂಡಿತ್ಯ ಗಳಿಸಿದವರು. ಎರಡು ಭಾಷೆಗಳಲ್ಲಿ ಕೃತಿ ರಚನೆ ಮಾಡಿದರು. ‘ಜ್ಞಾನ ಶತಕ’ಎಂಬುದು ಅವರ ಸಂಸ್ಕøತ ಕೃತಿ. ಇದು ಅದ್ವೈತ ತತ್ವವನ್ನು ಪ್ರತಿಪಾದಿಸುವ ದಾರ್ಶನಿಕ ಕೃತಿ. ಅನುಷ್ಟಬ್, ತ್ರಿಷ್ಟುಬ್ ಆರ್ಯ ಮುಂತಾದ 121 ವಿವಿಧ ವೃತ್ತಗಳಲ್ಲಿದೆ. ಇದು ‘ಪ್ರಸ್ತಾನತ್ರಯ ಬಾಷ್ಯಗಳ ಸಮಗ್ರ ಸಾರರೂಪ’ ದ ಕೃತಿ. ಇದಲ್ಲದೆ ‘ಭುಜಂಗಮಾಲಾ ಶಿವಸಂಕೀರ್ತನಂ’ ಎಂಬುದು ಅವರ ಇನ್ನೊಂದು ಸಂಸ್ಕøತ ಕೃತಿ. ಇದು 31 ಪಂಚಚಾಮರ ವೃತ್ತಗಳಲ್ಲಿ ರಚಿತವಾಗಿದೆ. ಶಿವಸ್ತುತಿಯೇ ಇದರ ವಸ್ತು. ಇದು ಇವರ ಮೊದಲ ಕೃತಿಯಾಗಿದೆ ಎಂದು ಕೆಲವರ ಅಭಿಪ್ರಾಯ. ಇವುಗಳಲ್ಲದೆ ಇವರ ಮಹತ್ವದ ಕನ್ನಡದ ಕೃತಿ ಕೈವಲ್ಯಕಲ್ಪವಲ್ಲರಿ. ಅನುಭಾವ, ಆಧ್ಯಾತ್ಮ ಮತ್ತು ಸಾಮಾಜಿಕ ವಿಮರ್ಶೆಯ ಉನ್ನತ ಚಿಂತನೆಗಳನ್ನು ಹೊಂದಿರುವ ವಿಶಿಷ್ಟ ಕೃತಿ.

ಕೈವಲ್ಯ ಕಲ್ಪವಲ್ಲರಿ
‘ಕೈವಲ್ಯ ಕಲ್ಪವಲ್ಲರಿ’ಯ ಸ್ವರೂಪವನ್ನು ಕಿ.ರಂ. ನಾಗರಾಜರು ಹೀಗೆ ವಿವರಿಸಿದ್ದಾರೆ. ಅವರೆನ್ನುವಂತೆ, “ಸರ್ಪಭೂಷಣರ ರಚನೆಗಳು ಸಾಹಿತ್ಯ ಮತ್ತು ಸಂಗೀತದ ಸಮಸ್ಯೆಗಳು ಅನುಭಾವಿಕ ಅಭಿವ್ಯಕ್ತಿಯ ಸಂದರ್ಭದಲ್ಲಿ ಎದುರಾಗುವ ವಿಧಾನಕ್ಕೆ ಶ್ರೇಷ್ಟ ಉದಾಹರಣೆಗಳಾಗಿವೆ. ಅವರ ‘ಕೈವಲ್ಯ ಕಲ್ಪವಲ್ಲರಿ’ಯಲ್ಲಿ 177 ರಚನೆಗಳಿವೆ. ಈ ರಚನೆಗಳು ಪಾಂಡಿತ್ಯಪೂರ್ಣ ರಚನೆಗಳಿಗಿಂತ ಭಿನ್ನ. ನಿಜಗುಣ ಶಿವಯೋಗಿಯ ರಚನೆಗಳ ಮಾದರಿ ಕೈವಲ್ಯ ಕಲ್ಪವಲ್ಲರಿಗೆ ಭಿತ್ತಿಯಾದರೂ ಇಲ್ಲಿನ ರಚನೆಗಳಿಗೆ ಸ್ವತಂತ್ರವಾದ ಜೀವಸತ್ವವಿದೆ. ಸಂಗೀತದ ಸಾಧ್ಯತೆಗಳ ಆವಿಷ್ಕಾರವನ್ನು ಕಾವ್ಯಕ್ರಿಯೆಗೆ ಪೂರಕವಾಗಿ ದೃಢಗೊಳಿಸುವ ಇಲ್ಲಿನ ರಚನೆಗಳನ್ನು ನೋಡಿದರೆ ಸಪ್ಪಣ್ಣನವರು ಸಂಗೀತದಲ್ಲಿ ಬಲ್ಲಿದರೆಂಬುದು ನಿರ್ವಿವಾದವಾದುದು. ಈ ಗ್ರಂಥದಲ್ಲಿ ನಲ್ವತ್ತರ ಮೇಲ್ಪಟ್ಟು ಭಿನ್ನರಾಗಗಳನ್ನು ಅವುಗಳ ವಿವಿಧ ಪ್ರಕಾರಗಳನ್ನು ಬಳಸಿದ್ದಾರೆ. ಭೋಗ, ಪರಿವರ್ಧಿನಿ, ವಾರ್ಧಕ ಷಟ್ಪದಿಗಳನ್ನು ವಿವಿಧ ರಾಗಗಳಿಗೆ ಹೊಂದಿಸಿಕೊಂಡಿರುವುದು ಕಂಡುಬರುತ್ತದೆ. ಅಲ್ಲದೆ 3, 4, 5 ಮಾತ್ರೆಗಳಿಂದ ನಡೆಯುವ ಗಣಗಳಿಂದ ರಚಿತವಾದ ಪದ್ಯಗಳನ್ನೇ ಹೆಚ್ಚಾಗಿ ರಚಿಸಿರುವುದು ಕಂಡುಬರುತ್ತದೆ. ಸಂಗೀತಾನುಗುಣವಾಗಿ ಹ್ರಸ್ವಾಕ್ಷರಗಳನ್ನು ದೀರ್ಘವಾಗಿಯೂ ದೀರ್ಘಾಕ್ಷರಗಳನ್ನು ಹ್ರಸ್ವವಾಗಿಯೂ ಮಾಡಿಕೊಂಡಿರುವುದು ಕಂಡುಬರುತ್ತದೆ. ‘ಕೈವಲ್ಯ ಕಲ್ಪವಲ್ಲರಿ ಸಂಗೀತಕ್ಕಾಗಿ ರಚಿಸಿದ ಸಾಹಿತ್ಯವಾದರೂ ಇದರಲ್ಲಿ ಉಚ್ಚ ಸಾಹಿತ್ಯದ ಯಾವ ಮುಖ್ಯ ಲಕ್ಷಣಕ್ಕೂ ಚ್ಯುತಿ ಬಂದಿಲ್ಲವೆಂದೇ ಹೇಳಬಹುದು” (ಕಿ. ರಂ. ನಾಗರಾಜ, ತೆರೆದ ಪಠ್ಯ, ಪು.224) ಕಿರಂ ಅವರ ಈ ಮಾತು ‘ಕೈವಲ್ಯಕಲ್ಪವಲ್ಲರಿ’ಯು ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಸಾಧಿಸಿರುವ ಎತ್ತರವನ್ನು ಕುರಿತು ಸರಿಯಾಗಿಯೇ ವಿವರಿಸಿದೆ.

ಕಿರಂ ಅವರು ವಿವರಿಸಿದಂತೆ ಈ ಕೃತಿಯಲ್ಲಿ ಒಟ್ಟು 177 ತತ್ವಪದಗಳಿದ್ದು ಅವು 5 ವಿಭಾಗಗಳಲ್ಲಿ ಹರಡಿಕೊಂಡಿವೆ. ಶಿವಕಾರುಣ್ಯಸ್ಥಲ(26) ಜೀವಸಂಬೋಧನ ಸ್ಥಲ(21), ನೀತಿಕ್ರಿಯಾಚರ್ಯಸ್ಥಲ(25), ಯೋಗಪ್ರತಿಪಾದನ ಸ್ಥಲ(29) ಹಾಗೂ ಜ್ಞಾನಪ್ರತಿಪಾದನ ಸ್ಥಲ(76) ಎಂಬ ವಿಭಾಗಗಳಲ್ಲಿ ಹರಿಡಿಕೊಂಡಿವೆ. ಮೊದಲನೆಯದರಲ್ಲಿ ಶಿವಸ್ತುತಿಯಿದೆ. ಹಾಗೆಯೇ ಬಸವಾದಿ ಶರಣರ ಸ್ಮರಣೆಯಿದೆ. ಜೀವಸಂಬೋಧನೆಯ ಸ್ಥಲದಲ್ಲಿ ಸಂಸಾರ, ಕುಟುಂಬ ವ್ಯವಸ್ಥೆ, ಸಂಪತ್ತು ಖಾಸಗಿ ಆಸ್ತಿ ಇತ್ಯಾದಿಗಳ ಚರ್ಚೆ ಮತ್ತು ನಿರಾಕರಣೆಯಿದೆ. ಮೇಲೆ ಚರ್ಚಿಸಿದಂತೆ ಸರ್ಪಭೂಷಣರು ಬಹಳ ತೀವ್ರವಾಗಿಯೇ ಇವುಗಳನ್ನು ಪ್ರಸ್ತಾಪಿಸಿ ಚರ್ಚಿಸಿ ಅವುಗಳನ್ನು ನಿರಾಕರಿಸಿದ್ದಾರೆ. ಯೋಗಪ್ರತಿಪಾದನ ಸ್ಥಲದಲ್ಲಿ ಯೋಗಸಾಧನೆಯ ನೆಲೆಗಳನ್ನು ಪ್ರಸ್ತಾಪಿಸಿದ್ದಾರೆ. ಜ್ಞಾನಪ್ರತಿಪಾದನೆಯ ಸ್ಥಲದಲ್ಲಿ ‘ಕಾಕುಪೋಕು ವಿದ್ಯೆ’ಗಳನ್ನೆಲ್ಲ ಜಾಲಾಡಿ ಅವುಗಳನ್ನು ಡಂಭದ ಜ್ಞಾನವೆಂದು ಜರಿದು ವೇದಾಂತವೇ ಜ್ಞಾನವೆಂದು ವಾದಿಸಿದ್ದಾರೆ. ಹೀಗೆ ಕೈವಲ್ಯ ಕಲ್ಪವಲ್ಲರಿಯಲ್ಲಿ ಭಕ್ತಿ, ಅಧ್ಯಾತ್ಮ, ಪಾರಮಾರ್ಥ, ದೇವರು, ಸಾಮಾಜಿಕ ವಿಡಂಭನೆ ಮತ್ತು ಲೋಕದ ವ್ಯಾವಹಾರಿಕ ಲಾಭಕ್ಕಾಗಿ ಹುಟ್ಟಿಕೊಂಡಿರುವ ಎಲ್ಲ ಜ್ಞಾನವನ್ನು ತಿರಸ್ಕರಿಸಿ ‘ಆತ್ಮಜ್ಞಾನದ ವಿದ್ಯೆ’ಗೆ ಮಾತ್ರವೇ ಒತ್ತುಕೊಟ್ಟು ಹೇಳಿದ್ದಾರೆ. ಕೊನೆಗೆ ಎಲ್ಲ ನಿರಾಕರಿಸಿ ನಿಂದನೆಲೆಯಲ್ಲಿ ‘ತನ್ನ ತಾನರಿಯುವುದನ್ನೇ’ ಪ್ರತಿಪಾದಿಸಿದ್ದಾರೆ. ಕೀರ್ತನಕಾರರಂತೆ ಜನರನ್ನು ಹೊರಗಿನ ಗುಡಿಗೆ ದಾಸರನ್ನಾಗಿಸದೆ ಒಳಗಿನೊಳಗಣ ದೈವನ್ನು ಅರಿಯಿರೋ ಎನ್ನುವ ಮೂಲಕ ತಮ್ಮಲ್ಲಿಯೇ ಅದನ್ನು ಕಾಣುವಂತೆ ಒತ್ತಾಯಿಸುತ್ತಾರೆ. ಇಂತಹ ಆನುಭಾವಿಕ ಚಿಂತನೆಗಳನ್ನು ಮಂಡಿಸುತ್ತಲೇ ಸಾಹಿತ್ಯಕವಾಗಿ ಮಹತ್ವವಾಗಿರುವ ಹಲವು ರೂಪಕ ಪ್ರತಿಮೆಗಳನ್ನು ರಚಿಸಿ ತಮ್ಮ ಕೃತಿಯ ಸಾಹಿತ್ಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ‘ಧರೆಯನೆಲ್ಲವನೊಂದೆ ಕೊಡೆಯಿಂದಲಾಳುವದು’, ‘ಕೀವ ಕುಡಿವ ನೊಣ ಕುಸುಮ ರಸಕೈದುವದೆ’, ಪ್ರಸೂತಿ ವೈರಾಗ್ಯ, ಪುರಾಣ ವೈರಾಗ್ಯ, ಸ್ಮಶಾನ ವೈರಾಗ್ಯಗಳೆಂಬ ಕಲ್ಪನೆ ನೀಡಿದ್ದಾರೆ.

ಹೀಗೆ ಅನೇಕ ಹೊಸ ಪ್ರತಿಮೆಗಳನ್ನು ಸೃಷ್ಟಿಸಿ ತಾವು ಕವಿಯಾಗಿಯೂ ಮುಖ್ಯರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹೀಗೆ ಸರ್ಪಭೂಷಣರು ರಚಿಸಿರುವ ತತ್ವಪದಗಳಲ್ಲಿ ಹಲವು ಪ್ರಭಾವಗಳು ಕೆಲಸ ಮಾಡಿರುವ ಸಾಧ್ಯತೆಯಿಲ್ಲದಿಲ್ಲ. ಈಗಾಗಲೇ ತಿಳಿದಿರುವಂತೆ ನಿಜಗುಣ ಶಿವಯೋಗಿಗಳ ಕೈವಲ್ಲ ಪದ್ದತಿಯ ಪ್ರಭಾವವು ಕಲ್ಪವಲ್ಲರಿಯ ಮೇಲಿರುವುದು ತಿಳಿದ ವಿಚಾರವೇ. ಇದಲ್ಲದೆ ಕಿರಂ ಅವರು ಹೇಳುವಂತೆ, “ತತ್ವಪದಗಳ ರಚನೆಯಲ್ಲಿ ಆಗಿಂದಾಗ್ಗೆ ಪಂಡಿತ ಪ್ರಭಾವ ಉಂಟಾಗಿರುವುದನ್ನು ನಾವು ಕಾಣಬಹುದು. ವಚನಕಾರರ ಕೆಲವು ಸಂಸ್ಕøತ ಭೂಯಿಷ್ಠ ರಚನೆಗಳು, ಹರಿದಾಸ ಪರಂಪರೆಯ ವ್ಯಾಸಕೂಟದ ರಚನೆಗಳು ಪಾಂಡಿತ್ಯವನ್ನೇ ಪ್ರಧಾನವಾಗಿ ಅವಲಂಬಿಸಿದವುಗಳಾಗಿವೆ. ಅಂತೆಯೇ ಕನ್ನಡ ಕಾವ್ಯದಲ್ಲಿ ಬೆಳೆದು ಬಂದಿರುವ ಗೀತರಚನೆಯ ಪರಂಪರೆಯ ಮೇಲೂ ಇಂತಹ ಪ್ರಭಾವಗಳಾಗಿವೆ. ಈ ಶತಮಾನದ ಅನುಭಾವಿ ಕವಿಗಳು ಇಂತಹ ತಾಂತ್ರಿಕ ರಚನೆಗಳಿಂದ ಉಂಟಾಗಿದ್ದ ಜಡತೆಯನ್ನು ನಿವಾರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಇದು ಹೊಸ ಪ್ರತಿಮೆ, ಪ್ರತೀಕಗಳನ್ನು ಬಳಸಿಕೊಳ್ಳುವ ಕ್ರಮ. ಒಂದು ನೈತಿಕ ದೃಷ್ಟಿಕೋನದ ರಚನೆಯನ್ನು ಹೊಸ ವೈಜ್ಞಾನಿಕ ಚಿತ್ರದ ಮೂಲಕ ಸಂವಹನಿಸುವ ಈ ದೃಷ್ಟಿ ಕನ್ನಡ ನವೋದಯ ಪೂರ್ವದ ಚಾರಿತ್ರಿಕ ನಿಲುವುಗಳ ಅಭ್ಯಾಸದ ದೃಷ್ಟಿಯಿಂದ ಮಹತ್ವದ್ದು.” (ಕಿ. ರಂ. ನಾಗರಾಜ, ತೆರೆದ ಪಠ್ಯ, ಪು.212) ಎನ್ನುತ್ತಾರೆ.

ಇದು ಇಡಿಯಾಗಿ ತತ್ವಪದ ಪರಂಪರೆಗೆ ಅನ್ವಯವಾಗುವಂತೆ ಸಪ್ಪಣ್ಣನವರಿಗೂ ಅನ್ವಯವಾಗುತ್ತದೆ. ಸಂಸ್ಕøತ ಪಾಂಡಿತ್ಯವಿದ್ದ ಸಪ್ಪಣ್ಣನವರಿಗೆ ಕೈವಲ್ಯಕಲ್ಪವಲ್ಲರಿಯನ್ನು ರಚಿಸುವಾಗ ಇಂತಹ ಸಂಸ್ಕøತ ಪಾಂಡಿತ್ಯದ ಪ್ರಭಾವವಿರುವುದು ಎದ್ದು ಕಾಣುತ್ತದೆ. ಎಷ್ಟೋ ಸಲ ಇಲ್ಲಿನ ಕೆಲವು ರಚನೆಗಳನ್ನು ಸರಳವಾಗಿ ಓದಿಕೊಳ್ಳಲು ಸಾಧ್ಯವಾಗದಷ್ಟು ಕ್ಲಿಷ್ಟವೆನ್ನಿಸುತ್ತದೆ. ಇದು ಓದುಗರನ್ನು ಕೊಂಚ ದೂರವಿಡುವ ಅಪಾಯವನ್ನು ಹೊಂದಿದೆ. ಇದನ್ನು ದಾಟಿಯೇ ಅವರ ಕಲ್ಪವಲ್ಲರಿಯನ್ನು ಅರಿಯಲು ಪ್ರಯತ್ನಿಸಬೇಕು. ಅಂದರೆ ಸಪ್ಪಣ್ಣನವರ ಮೇಲೆ ನಿಜಗುಣ ಶಿವಯೋಗಿಗಳ ಪ್ರಭಾವ ಇರುವ ಹಾಗೆಯೇ ಕೆಲವು ಸಂಸ್ಕøತ ಕೃತಿಗಳ ಲೇಖಕ ಮತ್ತು ಭಾಷೆಯ ಪ್ರಭಾವ ಇರುವುದು ಎದ್ದು ಕಾಣುತ್ತದೆ. ಅವರ ತತ್ವಪದಗಳಲ್ಲಿ ಬಳಸಿರುವ ಪದಗಳನ್ನು ಗಮನಿಸಿದರೆ ಅವರ ಮೇಲೆ ಸಂಸ್ಕøತ ಭಾಷೆ ಮತ್ತು ಅದರ ವಿಚಾರ, ಪಾಂಡಿತ್ಯಗಳ ಪ್ರಭಾವ ಇರುವುದು ಕಾಣಿಸುತ್ತದೆ.

ಕೃತಿಸಂಪಾದನೆ:
ಕನ್ನಡದ ತತ್ವಪದ ಸಾಹಿತ್ಯ ಪರಂಪರೆಯಲ್ಲಿ ‘ಕೈವಲ್ಯಕಲ್ಪವರಿ’ಯ ಬಳಕೆಯ ಪರಿಸರ ವಿಸ್ತಾರವಾದುದು. ಸ್ಥಳೀಯವಾದ ನೆಲೆ ಮಾತ್ರವಲ್ಲದೆ ಇಡೀ ಕರ್ನಾಟಕದ ಉದ್ದಕ್ಕೂ ಅದರ ಬಳಕೆಯ ಪರಿಸರವಿದೆ. ಇದುವರೆಗೂ ಪ್ರಕಟವಾಗಿರುವ ಅದರ ವಿವಿಧ ಆವೃತ್ತಿಗಳನ್ನು ಗಮನಿಸಿದರೆ ಅದು ತಿಳಿಯುತ್ತದೆ. 1948ರಲ್ಲಿ ಪ್ರಕಟವಾದ ಶಿ. ಶಿ. ಬಸವನಾಳರ ಆವೃತ್ತಿ, 1972ರಲ್ಲಿ ಧಾರವಾಡದಿಂದ ಪ್ರಕಟವಾದ ವೈ. ನಾಗೇಶಶಾಸ್ತ್ರಿಗಳಿಂದ ಸಂಪಾದಿತವಾಗಿ ಪ್ರಕಟವಾದ ಟೀಕಾಸಹಿತವಾದ ಭಾವಾರ್ಥ ಬೋಧಿನಿ ಆವೃತ್ತಿ, ಇಳಕಲ್ಲಿನ ಮಾನಪ್ಪ ನಾಲತವಾಡರಿಂದ ಸಂಪಾದಿತವಾದ ‘ಕೈವಲ್ಯ ಕಲ್ಪವಲ್ಲರಿಯ ಅರ್ಥವು’ ಪದಪದಾರ್ಥದ ಆವೃತ್ತಿ, 1976ರಲ್ಲಿ ಎಚ್. ಟಿ. ಮಹಾಂತೇಶ ಶಾಸ್ತ್ರಿಗಳಿಂದ ಸಂಪಾದಿತವಾಗಿ ಸಟೀಕಾರ್ಥವಾಗಿ ಗದಗಿನಿಂದ ಪ್ರಕಟಿತವಾದ ಆವೃತ್ತಿ. ಎಸ್. ಶಿವಣ್ಣ ಅವರಿಂದ ಸಂಪಾದಿತವಾಗಿ ಸರ್ಪಭೂಷಣ ಶಿವಯೋಗಿಗಳ ಮಠದಿಂದಲೇ ಪ್ರಕಟವಾದ ಜನಪ್ರಿಯ ಆವೃತ್ತಿ. ಹೀಗೆ ಕೈವಲ್ಯಕಲ್ಪವಲ್ಲರಿಯ ಹಲವು ಆವೃತ್ತಿಗಳು ಪ್ರಕಟವಾಗಿವೆ. ಇವೆಲ್ಲವೂ ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ಸ್ಥಳಗಳಿಂದ ಪ್ರಕಟವಾಗಿರುವುದು ಅದರ ಜನಪ್ರಿಯತೆಯನ್ನು ಅದು ವ್ಯಾಪಕವಾಗಿ ಬಳಕೆಯಲ್ಲಿರುವುದನ್ನು ಸೂಚಿಸುತ್ತದೆ. ಇದರ ಮುಂದುವರಿಕೆಯಾಗಿ ಪ್ರಸ್ತುತ ಈ ಆವೃತ್ತಿ ಸಿದ್ದವಾಗಿ ಪ್ರಕಟವಾಗುತ್ತಿದೆ. ಇದು ಮೇಲಿನ ಪ್ರಕಟಿತ ಪುಸ್ತಕಗಳ ನೆರವಿನಿಂದ ಸಿದ್ದಪಡಿಸಲಾಗಿರುವ ಆವೃತ್ತಿಯಾಗಿದೆ. ಇದರಲ್ಲಿ ಎಸ್. ಶಿವಣ್ಣ ಅವರು ಸಂಪಾದಿಸಿದ ಮುದ್ರಿತ ಆವೃತ್ತಿಯನ್ನೇ ಆಧಾರವಾಗಿಟ್ಟುಕೊಂಡು ಅದರ ಅನುಸಾರವಾಗಿಯೇ ಸಿದ್ದಪಡಿಸಲಾಗಿದೆ. ಅಂದರೆ ಇದುವರೆಗಿನ ಪ್ರಕಟಿತ ಆವೃತ್ತಿಗಳ ನೆರಳಿನಲ್ಲಿಯೇ ಇದೂ ಕೂಡ ರೂಪುಗೊಂಡು ಪ್ರಕಟಿತವಾಗುತ್ತಿದೆ. ಈ ಎಲ್ಲ ಆವೃತ್ತಿಗಳೂ ಕೂಡ ಸಪ್ಪಣ್ಣನವರನ್ನು ಮತ್ತೆ ಮತ್ತೆ ಓದಿಸುವ ಜನರಿಗೆ ತಲುಪಿಸುವ ಉದ್ದೇಶದಿಂದ ಸಾಧ್ಯವಾದಷ್ಟು ಸರಳವಾಗಿ ಜನರಿಗೆ ಅರ್ಥವಾಗುವಂತೆ ಸಿದ್ದಪಡಿಸಲಾಗಿದೆ.

ಈ ಕೃತಿಗೆ ಪೂರಕವಾಗಿ ರೂಪುಗೊಂಡಿರುವ ಟೀಕಾರ್ಥಗಳ ಆವೃತ್ತಿಗಳು ಹೆಚ್ಚಿನ ಪ್ರಮಾಣದಲ್ಲಿ ಬಂದಿರುವುದನ್ನು ಗಮನಿಸಿದರೆ ಇದರ ಜನಪ್ರಿಯತೆ ಅರ್ಥವಾಗುತ್ತದೆ. ಅಲ್ಲದೆ ಬೇರೆ ತತ್ವಪದಕಾರರ ಕೃತಿಗಳಿಗೆ ಬಾರದಷ್ಟು ಹೆಚ್ಚಿನ ಪ್ರಮಾಣದಲ್ಲಿ ಇದಕ್ಕೆ ಟೀಕಾರ್ಥಗಳು ಬಂದಿರುವುದು ಅದು ಓದುಗರಿಗೆ ಸುಲಭದಲ್ಲಿ ಅರ್ಥವಾಗದೇ ಇರುವುದು ಕಾರಣವಾಗಿರಬಹುದು. ಯಾಕೆಂದರೆ ಇಲ್ಲಿ ಬಳಕೆಯಾಗಿರುವ ಹೆಚ್ಚಿನ ಪದಗಳು ಹಳಗನ್ನಡ ಮತ್ತು ಸಂಸ್ಕøತ ಮೂಲದವಾಗಿರುವುದರಿಂದ ಆಧುನಿಕ ಸಂದರ್ಭದಲ್ಲಿ ಅದು ಓದಿಗೆ ತೊಡಕಾಗಿರುವುದು ಎದ್ದುಕಾಣುತ್ತದೆ. ಅಂದರೆ ಸಪ್ಪಣ್ಣನವರಿಗಿದ್ದ ಸಂಸ್ಕøತ ಪಾಂಡಿತ್ಯದ ವ್ಯುತ್ಪತ್ತಿ ಅವರ ತತ್ವಪದಗಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಪ್ರಭಾವ ಬೀರಿ ಕೆಲವು ತತ್ವಪದಗಳ ಲಾಲಿತ್ಯ ಕಡಿಮೆಯಾಗಿದೆ. ಅವುಗಳ ಭಾಷೆ ನುಡಿಗಟ್ಟು ಪೆಡಸುತನವನ್ನು ಪಡೆದುಕೊಂಡಿದೆ. ಸುಲಭದಲ್ಲಿ ಓದಿ ಅರಿತುಕೊಳ್ಳುವುದು ಕೊಂಚ ಕಷ್ಟದ ಕೆಲಸ ಎನ್ನಿಸಿದೆ. ಬಹುಶಃ ಆ ಕಾರಣಕ್ಕಾಗಿಯೇ ತತ್ವಪದ ಸಾಹಿತ್ಯದಲ್ಲಿ ಮಹತ್ವ ಪಡೆದಿರುವ ಈ ಕೃತಿಗೆ ಹೆಚ್ಚಿನ ಭಾವಾರ್ಥದ ಟೀಕಾರ್ಥದ ಸ್ವರೂಪದ ಸಂಪಾದಿತ ಆವೃತ್ತಿಗಳು ಬಂದಿವೆಯೆನಿಸುತ್ತದೆ. ಈ ಹಿನ್ನೆಲೆಯಲ್ಲಿ ಕೈವಲ್ಯಕಲ್ಪವಲ್ಲರಿಯನ್ನು ಹೊಸ ಓದುಗರು ಗಮನಿಸಬಹುದು.

ಇದಲ್ಲದೆ ಸಪ್ಪಣ್ಣನವರ ಸಾಹಿತ್ಯವನ್ನು ಕುರಿತು ಹಲವರು ವಿಮರ್ಶಾ ಬರೆಹಗಳನ್ನು, ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಇವು ಸಪ್ಪಣ್ಣನವರ ಅಧ್ಯಯನಕ್ಕೆ ನೆರವು ನೀಡುತ್ತವೆ. ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರು ಸರ್ಪಭೂಷಣ ಶಿವಯೋಗಿ’ ಎಂಬ ಕೃತಿರಚಿಸಿದ್ದಾರೆ. ಡಾ. ಶಾಂಭವಿ ಎಂಬುವವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಪ್ಪಣ್ಣನವರನ್ನು ಕುರಿತು ಪಿಎಚ್.ಡಿ. ಮಾಡಿದ್ದಾರೆ. ಷಣ್ಮುಖಯ್ಯ ಅಕ್ಕೂರ ಮಠ ಅವರು ಕೂಡ ಸಪ್ಪಣ್ಣನವರ ಬಗೆಗೆ ಒಂದು ಹೊತ್ತಗೆಯನ್ನು ರಚಿಸಿದ್ದಾರೆ. ಹೀಗೆ ಕಳೆದ ಎರಡು ಶತಮಾನಗಳಿಂದಲೂ ಸಪ್ಪಣ್ಣನವರನ್ನು ಮತ್ತೆ ಮತ್ತೆ ಎದುರಾಗುವ ಕೆಲಸವನ್ನು ಕನ್ನಡ ಸಾಂಸ್ಕøತಿಕ ಲೋಕ ನಡೆಸಿದೆ. ವಿಶೇಷವಾಗಿ ವಿರಕ್ತರು, ಶಿವಸಂಸ್ಕøತಿಯಲ್ಲಿ ಕಾಳಜಿಯುಳ್ಳವರು ಅದನ್ನು ಮಾಡಿದ್ದಾರೆ. ಇದು ಜಾತಿ ಮೀರಿಯೂ ನಡೆದಿದೆ. ಸದ್ಯ ಕನಕ ಅಧ್ಯಯನ ಕೇಂದ್ರವು ಹೊರತರುತ್ತಿರುವ ಸಮಗ್ರ ತತ್ವಪದಗಳ ಸಂಪುಟಗಳ ಸಾಲಿನಲ್ಲಿ ಮತ್ತೆ ಪ್ರಕಟವಾಗುತ್ತಿದೆ. ಇದು ಸಪ್ಪಣ್ಣನವರ ಕೃತಿ ಮತ್ತು ಒಟ್ಟು ತತ್ವಪದ ಸಾಹಿತ್ಯವನ್ನು ಮತ್ತೆ ಮತ್ತೆ ಓದು ಕೆಲಸವಾಗುತ್ತಿರುವುದನ್ನು ತೋರಿಸುತ್ತದೆ. ಹಾಗಾಗಿ ಈ ಸಾಹಿತ್ಯ ರಚನೆಯಾದ ಕಾಲವನ್ನು ಕತ್ತಲೆಯ ಕಾಲವೆಂದು ಕರೆಯುವುದಾದರೂ ಹೇಗೆ?

Leave a Reply

Your email address will not be published.