ಒಲಿಂಪಿಕ್ ಎಂಬ ಕ್ರೀಡಾ ಉತ್ಸವ.

ನಾಗಪ್ಪ.ಕೆ.ಮಾದರ

ಒಲಿಂಪಿಕ್ ಕ್ರೀಡಾಕೂಟ ಒಂದು ಅಂತರರಾಷ್ಟ್ರೀಯ ಕ್ರೀಡಾಕೂಟ. ಇದು ಅನೇಕ ಕ್ರೀಡೆಗಳನ್ನು ಒಳಗೊಂಡಿದೆ. ಈ ಕ್ರೀಡಾಕೂಟವನ್ನು ಬೇಸಗೆಯ ಕ್ರೀಡಾಕೂಟ ಹಾಗೂ ಚಳಿಗಾಲದ ಕ್ರೀಡಾಕೂಟಗಳೆಂದು ವರ್ಗೀಕರಿಸಲಾಗಿದೆ. ಎರಡೂ ಕೂಟಗಳನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸಲಾಗುವುದು. ೧೯೯೨ರವರೆಗೆ ಎರಡೂ ಕ್ರೀಡಾಕೂಟಗಳನ್ನು ಒಂದೇ ವರ್ಷದಲ್ಲಿ ನಡೆಸಲಾಗುತ್ತಿತ್ತು. ನಂತರ ಇವುಗಳ ಮಧ್ಯೆ ಎರಡು ವರ್ಷಗಳ ಅಂತರವಿರಿಸಲಾಗಿದೆ. ಕ್ರಿ.ಪೂ. ೭೭೬ರಲ್ಲಿ ಗ್ರೀಸ್ ದೇಶದ ಒಲಿಂಪಿಯಾದಲ್ಲಿ ಮೂಲ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ನಂತರ ಕ್ರಿ.ಶ. ೩೯೩ರವರೆಗೆ ಇದು ಮುಂದುವರೆಯಿತು.

hernandezಕಾರಣಾಂತರಗಳಿಂದ ನಿಂತುಹೋದ ಈ ಕ್ರೀಡಾಕೂಟವನ್ನು ಮತ್ತೆ ಪುನರಾರಂಭಿಸುವುದರಲ್ಲಿ ಆಸಕ್ತಿ ತೋರಿದವನು ಗ್ರೀಸ್ ದೇಶದ ಕವಿ ಹಾಗೂ ಪತ್ರಿಕಾ ಸಂಪಾದಕನಾಗಿದ್ದ ಪನಾಜಿಯೋಟಿಸ್ ಸೌಟ್ಸಾಸ್ ಎಂಬವನು. ಮುಂದೆ ೧೮೫೯ರಲ್ಲಿ ಇವಾಂಜೆಲಾಸ್ ಝಪ್ಪಾಸ್ ಎಂಬುವವನು ನವೀನಕಾಲದ ಪ್ರಪ್ರಥಮ ಅಂತರರಾಷ್ಟ್ರೀಯ ಒಲಿಂಪಿಕ್ ಕ್ರೀಡಾಕೂಟ ವನ್ನು ಪ್ರಾಯೋಜಿಸಿದನು. ೧೮೯೪ರಲ್ಲಿ ಫ್ರಾನ್ಸ್ ದೇಶದ ಗಣ್ಯನಾದ ಬ್ಯಾರನ್ ಪಿಯರಿ ದ ಕೂಬರ್ತಿಯು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯನ್ನು ಹುಟ್ಟುಹಾಕಿದನು. ಈ ಸಂಸ್ಥೆಯ ವತಿಯಿಂದ ಮೊದಲನೆಯ ಬೇಸಿಗೆ ಒಲಿಂಪಿಕ್ ಕ್ರೀಡಾಕೂಟವನ್ನು ಗ್ರೀಸ್ ದೇಶದ ಅಥೆನ್ಸ್ ನಗರದಲ್ಲಿ ೧೮೯೬ರಲ್ಲಿ ನಡೆಸಲಾಯಿತು. ಅಂದು ಕೆಲವೇ ರಾಷ್ಟ್ರಗಳು ಪಾಲ್ಗೊಂಡಿದ್ದ ಒಲಿಂಪಿಕ್ ಕ್ರೀಡಾಕೂಟ ಇಂದು ಹೆಚ್ಚೊಕಡಿಮೆ ವಿಶ್ವದ ಎಲ್ಲಾ ದೇಶಗಳೂ ಭಾಗವಹಿಸುವಷ್ಟರ ಮಟ್ಟಿಗೆ ಅಗಾಧವಾಗಿ ಬೆಳೆದಿದೆ. ಉಪಗ್ರಹ ಸಂಪರ್ಕದ ವ್ಯವಸ್ಥೆಯಿಂದಾಗಿ ಜಗತ್ತಿನ ಮೂಲೆಮೂಲೆಗಳಿಗೂ ಈ ಕೂಟದ ನೇರಪ್ರಸಾರ ಸಾಧ್ಯವಾಗಿದ್ದು ಒಲಿಂಪಿಕ್ ಕ್ರೀಡಾಕೂಟ ಇಂದು ಅಪಾರಪ್ರಮಾಣದ ಜನಪ್ರಿಯತೆ ಗಳಿಸಿಕೊಂಡಿದೆ.

ಪ್ರಾಚೀನ ಒಲಿಂಪಿಕ್ ಕ್ರೀಡಾಕೂಟದ ಬಗ್ಗೆ ಹಲವಷ್ಟು ದಂತಕಥೆಗಳು ಹಾಗೂ ಊಹಾಪೋಹಗಳಿವೆ. ಇವುಗಳ ಪೈಕಿ ಅತಿ ಜನಪ್ರಿಯವಾದ ಕತೆಯೊಂದರ ಪ್ರಕಾರ – ಹೆರಾಕ್ಲಿಸ್ ಪ್ರಾಚೀನ ಒಲಿಂಪಿಕ್ ಕ್ರೀಡಾಕೂಟದ ಸೃಷ್ಟಿಕರ್ತನು. ಇವನು ತನ್ನ ತಂದೆ ಸ್ಯೂಸ್ ನ ಗೌರವಾರ್ಥವಾಗಿ ೧೨ ಕ್ರೀಡಾಂಗಣಗಳನ್ನು ನಿರ್ಮಿಸಿ ಕೂಟವನ್ನು ನಡೆಸಿದನು. ಈ ಕತೆಯ ಪ್ರಕಾರ ಈತನು ನೇರದಾರಿಯಲ್ಲಿ ೪೦೦ ಬಾರಿ ದಾಪುಗಾಲನ್ನಿಟ್ಟು ಕ್ರಮಿಸಿ ಆ ದೂರವನ್ನು ಒಂದು ಸ್ಟೇಡಿಯಸ್ ಎಂದು ಕರೆದನು. ಈ ದೂರವನ್ನೇ ರೋಮನ್ನರು ಸ್ಟೇಡಿಯಮ್ ಹಾಗೂ ಆಂಗ್ಲರು ಸ್ಟೇಜ್ ಎಂದು ಹೆಸರಿಸಿದರು. ಇಂದು ಕೂಡಾ ಆಧುನಿಕ ಕ್ರೀಡಾಂಗಣದ ಟ್ರ್ಯಾಕ್ ನ ಸುತ್ತಳತೆ ೪೦೦ ಮೀ. ಇರುವುದು. ಕ್ರಿ. ಪೂ. ೭೭೬ರ ಮೊದಲನೆಯ ಕ್ರೀಡಾಕೂಟದ ನಂತರ ಗ್ರೀಸ್ ದೇಶದಲ್ಲಿ ಒಲಿಂಪಿಕ್ಸ್ ಜನಪ್ರಿಯತೆ ಹೆಚ್ಚಿಸಿಕೊಂಡು ಕ್ರಿ.ಪೂ. ೬ ನೆಯ ಹಾಗೂ ೫ನೆಯ ಶತಮಾನದಲ್ಲಿ ಉಚ್ಛ್ರಾಯಸ್ಥಿತಿಯನ್ನು ತಲುಪಿದ್ದಿತು. ಮೊದಲಿಗೆ ಕೆಲವೇ ಕ್ರೀಡೆಗಳನ್ನೊಳಗೊಂಡು ಒಂದು ದಿನದಲ್ಲಿಯೇ ಮುಗಿಯುತ್ತಿದ್ದ ಕೂಟವು ಮುಂದೆ ೨೦ರಷ್ಟು ಸ್ಪರ್ಧೆಗಳೊಂದಿಗೆ ಹಲವು ದಿನಗಳವರೆಗೆ ನಡೆಯುತ್ತಿತ್ತು.

ಕ್ರೀಡೆಗಳಲ್ಲಿ ವಿಜಯ ಸಾಧಿಸಿದ ಸ್ಪರ್ಧಾಳುಗಳನ್ನು ನಾಡು ಅತ್ಯಭಿಮಾನ ಹಾಗೂ ಆದರದಿಂದ ಕಾಣುತ್ತಿತ್ತು. ಕವನಗಳ ಮತ್ತು ಪ್ರತಿಮೆಗಳ ಮೂಲಕ ಇವರನ್ನು ಅಮರರನ್ನಾಗಿಸಲಾಗುತ್ತಿತ್ತು. ಕ್ರಿ.ಪೂ. ೬ನೆಯ ಶತಮಾನದಲ್ಲಿದ್ದ ಮಿಲೋ ಎಂಬ ಕುಸ್ತಿಪಟುವು ಸತತ ೬ ಒಲಿಂಪಿಕ್ ಕ್ರೀಡಾಕೂಟ ಗಳಲ್ಲಿ ವಿಜಯ ಸಾಧಿಸಿದ್ದನು. ಈ ದಾಖಲೆಯನ್ನು ಇಂದಿನವರೆಗೂ ಸರಿಗಟ್ಟಲಾಗಿಲ್ಲ. ಗ್ರೀಸ್ ದೇಶದ ಮೇಲೆ ರೋಮನ್ನರ ಅಧಿಪತ್ಯವುಂಟಾದ ಮೇಲೆ ಒಲಿಂಪಿಕ್ ಕ್ರೀಡಾಕೂಟವು ಕ್ರಮೇಣ ಅವನತಿಯತ್ತ ಸಾಗಲಾರಂಭಿಸಿತು. ಕ್ರಿಶ್ಚಿಯನ್ ಧರ್ಮವು ರೋಮ್ ಸಾಮ್ರಾಜ್ಯದ ಅಧಿಕೃತ ಧರ್ಮವೆಂದು ಘೋಷಿಸಲ್ಪಟ್ಟ ಮೇಲೆ ಒಲಿಂಪಿಕ್ ಕ್ರೀಡಾಕೂಟವು ಆ ಧರ್ಮದ ನಡವಳಿಕೆಗಳಿಗೆ ಅನುಗುಣವಾಗಿಲ್ಲವೆಂದು ಪರಿಗಣಿಸಲ್ಪಟ್ಟಿತು.

ತರುವಾಯ ಕ್ರಿ.ಶ. ೩೯೩ರಲ್ಲಿ ರೋಮನ್ ಸಮ್ರಾಟ ಮೊದಲನೆಯ ಥಿಯೋಡೋರಸ್ ಒಲಿಂಪಿಕ್ ಕ್ರೀಡಾಕೂಟವನ್ನು ಧರ್ಮಬಾಹಿರವೆಂದು ಘೋಷಿಸಿದನು. ಹೀಗೆ ಸುಮಾರು ೧೦೦೦ ವರ್ಷಗಳ ಪರಂಪರೆಯೊಂದು ಕೊನೆಗೊಂಡಿತು. ಪ್ರಾಚೀನ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಕೇವಲ ಯುವಕರಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶವಿದ್ದಿತು. ಕ್ರೀಡಾಕೂಟವು ಮಾನವಶರೀರದ ಸಾಧನೆಯ ದ್ಯೋತಕವೆಂದು ಪರಿಗಣಿಸಲಾಗುತ್ತಿದ್ದುದರಿಂದ ಸ್ಪರ್ಧಾಳುಗಳು ನಗ್ನರಾಗಿಯೇ ಪಾಲ್ಗೊಳ್ಳುತ್ತಿದ್ದರು. ವಿಜಯೀ ಸ್ಪರ್ಧಾಳುಗಳಿಗೆ ಆಲಿವ್ ಎಲೆಗಳಿಂದ ಮಾಡಿದ ಕಿರೀಟವನ್ನು ಉಡುಗೊರೆಯಾಗಿ ನೀಡಲಾಗುತ್ತಿತ್ತು. ಪ್ರಾಚೀನ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಒಲಿಂಪಿಕ್ ಜ್ಯೋತಿಯಾಗಲೀ ಒಲಿಂಪಿಕ್ ವರ್ತುಲಗಳಾಗಲೀ ಬಳಕೆಯಲ್ಲಿರಲಿಲ್ಲ. ಇವು ಮುಂದೆ ಆಧುನಿಕ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಸೇರಿಕೊಂಡವು.

ಓರ್ವ ಸಿರಿವಂತ ಗ್ರೀಕ್ ದಾನಿ ಇವಾಂಜೆಲಾಸ್ ಝಪ್ಪಾಸನು ಪ್ರಥಮ ಆಧುನಿಕ ಅಂತರರಾಷ್ಟ್ರೀಯ ಒಲಿಂಪಿಕ್ ಕ್ರೀಡಾಕೂಟವನ್ನು ಪ್ರಾಯೋಜಿಸಿದನು. ೧೮೭೦ ಹಾಗೂ ೧೮೭೫ರಲ್ಲಿ ಒಲಿಂಪಿಕ್ ಕ್ರೀಡಾಕೂಟಗಳಿಗೆ ಬಳಸಲಾದ ಪಾನ್ ಅಥೀನಿಯನ್ ಕ್ರೀಡಾಂಗಣವನ್ನು ಈತನು ದುರಸ್ತಿಗೊಳಿಸಿದನು. ಅಲದೆ ಒಲಿಂಪಿಕ್ ಗ್ರಾಮವೊಂದನ್ನು ಸಹ ಇವನು ವ್ಯವಸ್ಥೆಗೊಳಿಸಿದನು. ಮುಂದೆ ಬ್ಯಾರನ್ ಪಿಯರಿ ದ ಕೂಬರ್ತಿಯು ೧೮೯೪ರಲ್ಲಿ ಪ್ಯಾರಿಸ್ ನಗರದಲ್ಲಿ ಜರಗಿದ ಸಮಾವೇಶವೊಂದರಲ್ಲಿ ಒಲಿಂಪಿಕ್ ಕ್ರೀಡಾಕೂಟವನ್ನು ಪುನರಾರಂಭಿಸುವುದರ ಬಗ್ಗೆ ತನ್ನ ಅಭಿಪ್ರಾಯಗಳನ್ನು ಮುಂದಿಕ್ಕಿದನು. ಈ ಸಮಾವೇಶದ ಕೊನೆಯಲ್ಲಿ ಪ್ರಥಮ ಆಧುನಿಕ ಒಲಿಂಪಿಕ್ ಕ್ರೀಡಾಕೂಟವನ್ನು ಅಥೆನ್ಸ್ ನಗರದಲ್ಲಿ ೧೮೯೬ರಲ್ಲಿ ನಡೆಸುವುದೆಂದು ನಿರ್ಣಯಿಸಲಾಯಿತು. ಇದನ್ನು ಆಯೋಜಿಸುವುದರ ಸಲುವಾಗಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯನ್ನು ಹುಟ್ಟುಹಾಕಲಾಯಿತು.

ಗ್ರೀಸ್ ದೇಶದ ಡಿಮೆಟ್ರಿಯಸ್ ವಿಕೆಲಾಸ್ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಮೊಟ್ಟಮೊದಲ ಅಧ್ಯಕ್ಷನಾದನು. ಹೀಗೆ ಪ್ರಪ್ರಥಮ ಆಧುನಿಕ ಒಲಿಂಪಿಕ್ ಕ್ರೀಡಾಕೂಟ ಅಥೆನ್ಸ್ ನಗರದ ಪಾನ್ ಅಥೀನಿಯನ್ ಕ್ರೀಡಾಂಗಣದಲ್ಲಿ ೧೮೯೬ರಲ್ಲಿ ನಡೆಯಿತು. ಈ ಕೂಟದಲ್ಲಿ ಕೇವಲ ೧೪ ದೇಶಗಳ ೨೪೧ ಪುರುಷ ಕ್ರೀಡಾಳುಗಳು ಮಾತ್ರ ಪಾಲ್ಗೊಂಡಿದ್ದರು. ಆದರೆ ಆ ಕಾಲದ ಮಟ್ಟಿಗೆ ಇದು ಜಗತ್ತಿನ ಅತಿ ದೊಡ್ಡ ಅಂತರರಾಷ್ಟ್ರೀಯ ಕ್ರೀಡಾಕೂಟವೆಂದು ಪರಿಗಣಿಸಲ್ಪಟ್ಟಿತ್ತು. ನಾಲ್ಕು ವರ್ಷಗಳ ನಂತರ ೧೯೦೦ರಲ್ಲಿ ಪ್ಯಾರಿಸ್ ನಗರದಲ್ಲಿ ನಡೆದ ಕ್ರೀಡಾಕೂಟದಲ್ಲಿ ಮಹಿಳಾ ಕ್ರೀಡಾಪಟುಗಳೂ ಪಾಲ್ಗೊಂಡರು. ಹೀಗೆ ಸಣ್ಣ ಪ್ರಮಾಣದಲ್ಲಿ ಆರಂಭವಾದ ಒಲಿಂಪಿಕ್ ಕ್ರೀಡಾಕೂಟ ೨೦೦೪ರಲ್ಲಿ ಅಥೆನ್ಸ್ ನಲ್ಲಿ ನಡೆದ ಕೂಟದಲ್ಲಿ ೨೦೨ ರಾಷ್ಟ್ರಗಳ ಸುಮಾರು ೧೧೦೦೦ ಕ್ರೀಡಾಳುಗಳು ಪಾಲ್ಗೊಳ್ಳುವ ಮಟ್ಟಿಗೆ ಬೆಳೆಯಿತು.

ಒಲಿಂಪಿಕ್ ಜ್ಯೋತಿ :

olympic-torchಈಚಿನ ವರ್ಷಗಳಲ್ಲಿ ಒಲಿಂಪಿಕ್ ಜ್ಯೋತಿಯ ಶ್ರೇಷ್ಠ ಪರಂಪರೆಯೊಂದು ಆರಂಭವಾಗಿದೆ. ಪ್ರತಿ ಒಲಿಂಪಿಕ್ ಕ್ರೀಡಾಕೂಟದ ಕೆಲ ಸಮಯದ ಮುನ್ನ ಗ್ರೀಸ್ ದೇಶದ ಒಲಿಂಪಿಯಾದಲ್ಲಿ ಮಸೂರ ಮತ್ತು ಸೂರ್ಯಕಿರಣಗಳ ಸಹಾಯದಿಂದ ದೊಂದಿಯೊಂದನ್ನು ಹಚ್ಚಲಾಗುವುದು. ಇದೇ ಒಲಿಂಪಿಕ್ ಜ್ಯೋತಿ. ಈ ಒಲಿಂಪಿಕ್ ಜ್ಯೋತಿಯನ್ನು ಒಲಿಂಪಿಕ್ ಕ್ರೀಡಾಕೂಟದ ಆತಿಥೇಯ ನಗರದವರೆಗೆ ಭೂಮಿಯ ಬಹುತೇಕ ರಾಷ್ಟ್ರಗಳ ಮೂಲಕ ಹಾಯಿಸಿ ಕೊಂಡೊಯ್ಯಲಾಗುವುದು. ಪ್ರತಿ ರಾಷ್ಟ್ರದ ಮೂಲಕ ಹಾದುಹೋಗುವಾಗ ಆಯಾ ದೇಶದ ಪ್ರಮುಖ ಕ್ರೀಡಾಪಟುಗಳು ಮತ್ತು ಇತರ ಗಣ್ಯರು ರಿಲೇ ಓಟದ ಮೂಲಕ ಜ್ಯೋತಿಯನ್ನು ಸಾಗಿಸುವರು. ಇದರಲ್ಲಿ ಪಾಲ್ಗೊಳ್ಳುವುದು ಒಂದು ಗೌರವದ ಹಾಗೂ ಪ್ರತಿಷ್ಠೆಯ ಸಂಗತಿ. ನಂತರ ಕೂಟದ ಉಧ್ಘಾಟನಾ ಸಮಾರಂಭದಲ್ಲಿ ಮುಖ್ಯ ಕ್ರೀಡಾಂಗಣದಲ್ಲಿ ಒಂದು ದೊಡ್ಡ ಜ್ಯೋತಿಯನ್ನು ಬೆಳಗಲು ಈ ದೊಂದಿಯನ್ನು ಬಳಸಲಾಗುವುದು. ಈ ಮುಖ್ಯ ಜ್ಯೋತಿಯು ಕ್ರೀಡಾಕೂಟವು ಮುಗಿಯವರೆಗೂ ಅವಿರತವಾಗಿ ಬೆಳಗುತ್ತಲೇ ಇರುವುದು. ಒಲಿಂಪಿಕ್ ಕ್ರೀಡಾಕೂಟದ ಮುಕ್ತಾಯ ಸಮಾರಂಭದಲ್ಲಿ ಇದನ್ನು ನಂದಿಸಲಾಗುವುದು.

ಒಲಿಂಪಿಕ್ ಚಿಹ್ನೆ :

ಒಂದಕ್ಕೊಂದು ಹೆಣೆದುಕೊಂಡಿರುವ ಐದು ವರ್ತುಲಗಳು ಒಲಿಂಪಿಕ್ ಚಿಹ್ನೆ. ಈ ಐದು ವರ್ತುಲಗಳು ಪ್ರಪಂಚದ ಐದು ಜನವಸತಿಯುಳ್ಳ ಭೂಖಂಡಗಳನ್ನು ಪ್ರತಿನಿಧಿಸುತ್ತವೆ. ( ಉತ್ತರ ಹಾಗೂ ದಕ್ಷಿಣ ಅಮೆರಿಕ ಖಂಡಗಳನ್ನು ಒಂದಾಗಿ ಪರಿಗಣಿಸಲಾಗಿದೆ). ಶ್ವೇತವರ್ಣದ ಒಲಿಂಪಿಕ್ ಧ್ವಜದಲ್ಲಿ ಈ ೫ ವರ್ತುಲಗಳು ೫ ವರ್ಣಗಳಲ್ಲಿ ಗೋಚರಿಸುತ್ತವೆ. ಕೆಂಪು,ನೀಲಿ,ಹಸಿರು,ಹಳದಿ ಹಾಗೂ ಕಪ್ಪು ಇವೇ ಆ ಐದು ವರ್ಣಗಳು. ಅತಿ ವಿಶಿಷ್ಟ ಸಂಗತಿಯೆಂದರೆ ವಿಶ್ವದ ಪ್ರತಿಯೊಂದು ರಾಷ್ಟ್ರದ ಧ್ವಜದಲ್ಲಿ ಈ ಆರು ವರ್ಣಗಳಲ್ಲಿ ( ಮೇಲಿನ ೫ ಮತ್ತು ಧ್ವಜದ ಬಿಳಿ ವರ್ಣ) ಕನಿಷ್ಠ ಒಂದಾದರೂ ಇದ್ದೇ ಇದೆ.

ಒಲಿಂಪಿಕ್ ಧ್ಯೇಯ:

ಲ್ಯಾಟಿನ್ ಭಾಷೆಯ ” ಸಿಟಿಯಸ್ , ಆಲ್ಟಿಯಸ್ , ಫೋರ್ಟಿಯಸ್ ” ಅಂದರೆ “ಕ್ಷಿಪ್ರವಾಗಿ , ಎತ್ತರಕ್ಕೆ ಹಾಗೂ ಬಲಿಷ್ಠ” ಎಂಬುದೇ ಒಲಿಂಪಿಕ್ ಧ್ಯೇಯ. ಮೊದಮೊದಲು ಸ್ಪರ್ಧೆಗಳು ಓಟ, ಜಿಗಿತ ಮತ್ತು ಭಾರ ಎತ್ತುವಿಕೆ ಅಥವಾ ಭಾರ ಎಸೆಯುವಿಕೆಗೇ ಸೀಮಿತವಾಗಿದ್ದುದರಿಂದ ಈ ಧ್ಯೇಯ ರಚಿತವಾಯಿತು. ಕೂಬರ್ತಿಯ ಪ್ರಕಾರ ” ಹೇಗೆ ಜೀವನದಲ್ಲಿ ಹೋರಾಡುವುದು ಮುಖ್ಯವೇ ಹೊರತು ಜಯಿಸುವುದಲ್ಲವೋ ಹಾಗೆಯೇ ಒಲಿಂಪಿಕ್ಸ್ ನ ಅತಿಮುಖ್ಯ ಸಂಗತಿಯೆಂದರೆ ಪಾಲ್ಗೊಳ್ಳುವುದೇ ವಿನಹ ಗೆಲ್ಲುವುದಲ್ಲ. ಅವಶ್ಯ ವಿಚಾರವೆಂದರೆ ಉತ್ತಮವಾಗಿ ಹೋರಾಡುವುದು. ವಿಜಯ ಸಾಧಿಸುವುದೇ ಗುರಿ ಅಲ್ಲ.

 

 

Leave a Reply

Your email address will not be published.