ಎಪ್ಪತ್ತು ವರ್ಷಗಳು ಏಳು ಹೆಜ್ಜೆಗಳು ಮತ್ತು ಎಂಟನೆಯ ಆಯಾಮ

ನಾ ದಿವಾಕರ

ಭಾರತದ ಪ್ರಜಾತಂತ್ರ ವ್ಯವಸ್ಥೆ ಏಳು ದಶಕಗಳನ್ನು ಪೂರೈಸುತ್ತಿದೆ. ಜೈ ಹಿಂದ್, ಭಾರತ್ ಮಾತಾ ಕಿ ಜೈ, ಹಿಂದೂಸ್ತಾನ್ ಹಮಾರ, ಇನ್‍ಕ್ವಿಲಾಬ್ ಜಿಂದಾಬಾದ್ ಮುಂತಾದ ಘೋಷಣೆಗಳ ಮೂಲಕ ಹೊಸ ಹುಟ್ಟನ್ನು ಪಡೆದ ಸ್ವತಂತ್ರ ಭಾರತ ಇಂದು ವಿಶ್ವದ ಅಗ್ರಮಾನ್ಯ ರಾಷ್ಟ್ರವಾಗುವ ನಿಟ್ಟಿನಲ್ಲಿ ಭರದಿಂದ ಸಾಗುತ್ತಿದೆ. ನವ ಉದಾರವಾದ ತನ್ನ ಉತ್ಕøಷ್ಟ ಹಂತದಲ್ಲಿರುವ ಸಂದರ್ಭದಲ್ಲಿ ವಿಶ್ವದ ಅಗ್ರಮಾನ್ಯ ರಾಷ್ಟ್ರವಾಗುವುದೆಂದರೆ ಬಂಡವಾಳ ಕ್ರೋಢೀಕರಣದಲ್ಲಿ ಮುಂಚೂಣಿಯಲ್ಲಿರುವುದು ಎಂದೇ ಅರ್ಥ. ಅಥವಾ ಹಣಕಾಸು ಬಂಡವಾಳದ ಚಲನಶೀಲತೆಗೆ ಪೂರಕವಾಗಿರುವುದು ಎಂದರ್ಥ.

KAS05:KASHMIR:MUSHKOH,INDIA,9JUL99 – Indian soldiers pose with their national tri-colour after they captured post number 4825 in Mushkoh July 9. India’s army said that it had made substantial advances against infiltrators on its side of the military control line in the Kashmiri mountains, but intense fighting was still going on. The death toll in the battle on both sides had risen to nearly 1,000 since India launched its biggest offensive in Kashmir two months ago. (INDIA OUT NO ARCHIVE NO RESALES) kk/DIGITAL/Photo/Str REUTERS

ಹಣಕಾಸು ಬಂಡವಾಳ ಭಾರತದ ಔದ್ಯಮಿಕ ಹಿತಾಸಕ್ತಿಗಳನ್ನು ಮಾತ್ರ ಪ್ರತಿನಿಧಿಸುತ್ತಿಲ್ಲ. ಈ ದೇಶದ ಸಾಂಸ್ಕøತಿಕ ರಾಜಕಾರಣ, ಸಾಮಾಜಿಕ ನ್ಯಾಯ ಪರಿಪಾಲನೆ, ಆಡಳಿತ ವ್ಯವಸ್ಥೆ , ರಾಜಕೀಯ ವಿದ್ಯಮಾನಗಳು ಮತ್ತು ಆರ್ಥಿಕ ವ್ಯವಸ್ಥೆ ಇವೆಲ್ಲವೂ ಇಂದು ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಕಬಂಧ ಬಾಹುಗಳಲ್ಲಿ ಸಿಲುಕಿರುವುದನ್ನು ಕಾಣುತ್ತಿದ್ದೇವೆ. ಹಾಗಾಗಿ ಸಮಾಜದ ನಿಕೃಷ್ಟ ಜೀವಿಗಳನ್ನು, ಶ್ರಮಜೀವಿಗಳನ್ನು, ಅವಕಾಶವಂಚಿತರನ್ನು, ಶೋಷಿತ ಜನಸಮುದಾಯಗಳನ್ನು ಹಾಗೂ ನಾಳಿನ ಚಿಂತೆಯಲ್ಲೇ ಬಸವಳಿಯುತ್ತಿರುವ ಹಸಿದ ಹೊಟ್ಟೆಗಳನ್ನು ಪ್ರತಿನಿಧಿಸುವ ಪ್ರತಿಯೊಂದು ದನಿಯೂ ದೇಶದ ಅಭಿವೃದ್ಧಿ ಪಥದ ವಿರೋಧಿ ದನಿಗಳಾಗಿ ಕೇಳಿಬರುತ್ತವೆ.

ನಾವು ವಿರೋಧಿಸಬೇಕಿರುವುದು ಬಂಡವಾಳವನ್ನು ಅಲ್ಲ, ಬಂಡವಾಳದ ವಿತರಣೆ ಮತ್ತು ಕ್ರೋಢೀಕರಣದ ವಿಧಾನ ಮತ್ತು ಮಾರ್ಗಗಳನ್ನು. ದಲಿತರಲ್ಲಿ ಅಂಬಾನಿ , ಅದಾನಿ ಅವರಂತಹ ಬಂಡವಾಳಿಗರು ಬರಬೇಕು ಎಂಬ ಕೂಗು ಇತ್ತೀಚೆಗೆ ಕೇಳಿಬಂದಿರುವ ಹಿನ್ನೆಲೆಯಲ್ಲಿ ಈ ಪ್ರಶ್ನೆ ಮಹತ್ವ ಪಡೆಯುತ್ತದೆ. ದಲಿತ ಸಮುದಾಯದಲ್ಲಿ ನಿಕೃಷ್ಟ ಜೀವನ ಸವೆಸುತ್ತಿರುವ, ದಿನ ನಿತ್ಯ ಸಾವಿನ ಕ್ಷಣಗಳನ್ನು ಎದುರಿಸುತ್ತಿರುವ ಶ್ರಮಜೀವಿಗಳ ಅಭ್ಯುದಯಕ್ಕೆ ಸೂಕ್ತ ಆರ್ಥಿಕ ವ್ಯವಸ್ಥೆ ಇಂದಿನ ತುರ್ತು ಅಗತ್ಯತೆಯೇ ಹೊರತು ಬಂಡವಾಳದ ಭಂಡಾರಗಳನ್ನು ಹೊತ್ತ ವ್ಯಕ್ತಿಗಳಲ್ಲ. ಈ ಆರ್ಥಿಕ ವ್ಯವಸ್ಥೆ ಇಂದು ಉಳ್ಳವರಿಗೆ ನೆರಳಾಗುತ್ತಿದ್ದರೆ ನಿರ್ಗತಿಕರಿಗೆ ಉರುಳಾಗುತ್ತಿದೆ.

ನವ ಉದಾರವಾದದ ಈ ಉರುಳು ಸಮಾಜವಾದ, ಜಾತ್ಯಾತೀತತೆ, ಆರ್ಥಿಕ ಪ್ರಗತಿ, ಜಾತಿ ವ್ಯವಸ್ಥೆ, ಸಾಮಾಜಿಕ ನ್ಯಾಯ, ಮತಾಂಧತೆ ಮತ್ತು ನವ ಉದಾರವಾದ ಎಂಬ ಏಳು ವರ್ಣಗಳಿಂದ ಅಲಂಕೃತವಾಗಿದೆ. ಹಾಗಾಗಿ ಈ ಉರುಳು ಜನಸಾಮಾನ್ಯರಿಗೆ ಅಲ್ಲಾದೀನನ ಅದ್ಭುತ ಲೋಕದ ಬಾಗಿಲುಗಳಂತೆ ಕಾಣುತ್ತಿದೆ. ಈ ರಂಗುಗಳ ಹೆಜ್ಜೆ ಗುರುತುಗಳನ್ನು 70ನೆಯ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಮೆಲುಕು ಹಾಕೋಣ.

ಸಮಾಜವಾದ ಎಂದರೆ ಮೂಲತಃ ಸಂಪತ್ತಿನ ಸಮಾನ ಹಂಚಿಕೆ ಅಥವಾ ವಿತರಣೆ ಎಂದೇ ವ್ಯಾಖ್ಯಾನಿಸಲಾಗುತ್ತದೆ. ಸಮಾಜವಾದ ಮತ್ತು ಸಮತಾವಾದದ ತತ್ವಗಳು ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ವಿಭಿನ್ನ ಸ್ವರೂಪಗಳಲ್ಲಿ ಜಾರಿಯಲ್ಲಿವೆ. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಸಮತಾವಾದದ ಛಾಯೆ ಆರಂಭದಿಂದಲೇ ಕಂಡುಬಂದಿದ್ದರೂ ಸಮಾಜವಾದ ಮತ್ತು ಸೆಕ್ಯುಲರ್ ತತ್ವಗಳಿಗೆ ಸಾಂವಿಧಾನಿಕ ಮೊಹರು ದೊರೆತಿದ್ದು 1970ರ ದಶಕದಲ್ಲೇ. ಆಳುವ ವರ್ಗಗಳಿಗೆ ಸಮಾಜವಾದ ಆಡಳಿತ ನಿರ್ವಹಣೆಯ ಒಂದು ಭೂಮಿಕೆಯಾದರೆ ರಾಜಕೀಯ ಪಕ್ಷಗಳಿಗೆ ಜನಸಾಮಾನ್ಯರ ಮನ್ನಣೆ ಗಳಿಸುವ ಒಂದು ಅಸ್ತ್ರವಾಗಿರುವುದು ವಾಸ್ತವ. ಬ್ಯಾಂಕ್, ವಿಮೆ , ಕೈಗಾರಿಕೆ, ಸಾರಿಗೆ, ಸಂಪರ್ಕ ಮತ್ತಿತರ ಔದ್ಯಮಿಕ ಕ್ಷೇತ್ರಗಳ ರಾಷ್ಟ್ರೀಕರಣವನ್ನೇ ಸಮಾಜವಾದದ ಉತ್ತುಂಗದ ನೆಲೆ ಎಂಬ ಧೋರಣೆಯಲ್ಲೇ ಸಮಾಜವಾದದ ಸೋಗು ಹಾಕುತ್ತಿರುವ ಭಾರತದ ಆಡಳಿತ ವ್ಯವಸ್ಥೆಯಲ್ಲಿ ಈ ದೇಶದ ಸಂಪತ್ತು ಇಂದಿಗೂ ಸಮಾನ ವಿತರಣೆ ಅಥವಾ ಹಂಚಿಕೆಯನ್ನು ಕಂಡಿಲ್ಲ ಎನ್ನುವುದು ದುರಂತವಾದರೂ ಸತ್ಯ. ಸಂಪನ್ಮೂಲ ಹಾಗೂ ಬಂಡವಾಳ ಕ್ರೋಢೀಕರಣದ ನಡುವೆಯೇ ದೇಶದ ದುಡಿಯುವ ವರ್ಗಗಳಿಗೆ, ಅವಕಾಶವಂಚಿತರಿಗೆ ಕೆಲವು ಸವಲತ್ತು ಸೌಕರ್ಯಗಳನ್ನು ನೀಡುವ ಪ್ರವೃತ್ತಿಯನ್ನೇ ಸಮಾಜವಾದ ಎಂದು ಬಿಂಬಿಸಲಾಗುತ್ತಿದೆ. ಇದೇ ಮಾರ್ಗವನ್ನು ಅನುಸರಿಸಲಾಗುತ್ತಿದೆ. ಇದರ ನೇರ ಪರಿಣಾಮ ಎಂದರೆ ಸಮಾಜವಾದ ಒಂದು ಶಾಶ್ವತ ಚುನಾವಣಾ ಪ್ರಣಾಳಿಕೆಯಾಗಿ ಈ ದೇಶದ ರಾಜಕಾರಣವನ್ನು ಆವರಿಸಿದೆ. ಸಮತೆ, ಸಮಾನತೆಯನ್ನು ಬಯಸುವ ದುಡಿಯುವ ವರ್ಗಗಳ ಆಶಯಗಳು ಮರೀಚಿಕೆಯಂತೆಯೇ ಉಳಿದಿದೆ.

ಸೆಕ್ಯುಲರಿಸಂ-ಜಾತ್ಯಾತೀತತೆ ಮಾನವ ಸಮಾಜದ ಅಭ್ಯುದಯದ ಹಾದಿಯಲ್ಲಿ ಮೂಡಿಬಂದ ಒಂದು ತತ್ವ. ವಿಶ್ವದ ಇತಿಹಾಸ ಅವಲೋಕನ ಮಾಡಿದಾಗ ಸೆಕ್ಯುಲರಿಸಂ ಎಂಬ ತತ್ವದಲ್ಲಿ ಕಂಡುಬರುವ ಸ್ಪಷ್ಟತೆ ಮತ್ತು ನಿಖರತೆ ಭಾರತದ ಸಂದರ್ಭದಲ್ಲಿ ಮಾಯವಾಗುತ್ತದೆ. ಏಕೆಂದರೆ ಇಲ್ಲಿ ಸೆಕ್ಯುಲರಿಸಂ ತಾತ್ವಿಕ ನೆಲೆಯಲ್ಲಿ ಅನಾವರಣಗೊಂಡಿಲ್ಲ, ರಾಜಕೀಯ ಅನಿವಾರ್ಯತೆಗಳ ನೆಲೆಯಲ್ಲಿ ಅನಾವರಣಗೊಂಡಿದೆ. ಸೆಕ್ಯುಲರಿಸಂ ಅಥವಾ ಜಾತ್ಯಾತೀತತೆ ವ್ಯಷ್ಟಿಯ ನೆಲೆಯ ಅಭಿವ್ಯಕ್ತಿಯೋ ಅಥವಾ ಸಮಷ್ಟಿ ನೆಲೆಯ ವಿದ್ಯಮಾನವೋ ಎಂಬ ಗೊಂದಲಕ್ಕೆ ಭಾರತದ ಸಂದರ್ಭದಲ್ಲಿ ಬಹುಶಃ ಉತ್ತರ ದೊರೆಯಲಾರದು. ಸೆಕ್ಯುಲರ್ ತತ್ವಗಳನ್ನು ಪ್ರಭುತ್ವದ ನೆಲೆಯಲ್ಲಿ ನಿಂತು ನೋಡಿದಾಗ ಭಾರತದಲ್ಲಿ ಈ ತತ್ವ ತನ್ನ ಮೂಲ ಅರ್ಥವನ್ನೇ ಕಳೆದುಕೊಂಡಿರುವುದು ಸ್ಪಷ್ಟವಾಗುತ್ತದೆ. ತಾತ್ವಿಕ ನೆಲೆಯಲ್ಲಿ , ವಾಸ್ತವದ ನೆಲೆಯಲ್ಲಿ ಅನುಷ್ಟಾನಗೊಳ್ಳದ ಸೆಕ್ಯುಲರ್ ಎಂಬ ಘೋಷವಾಕ್ಯ ಅಥವಾ ಹಣೆಪಟ್ಟಿ ಸಾಮಾಜಿಕ ಸೌಹಾರ್ದತೆಗೆ ಪೂರಕವಾಗುವುದಕ್ಕಿಂತಲೂ ಮಾರಕವಾಗುವ ಸಂಭವವೇ ಹೆಚ್ಚು. ಹಾಗಾಗಿಯೇ ಭಾರತದಲ್ಲಿ ಸೆಕ್ಯುಲರ್ ತತ್ವಗಳು ಧರ್ಮ ನಿರಪೇಕ್ಷತೆ, ಸರ್ವಧರ್ಮ ಸಮಭಾವ ಮುಂತಾದ ಧೋರಣೆಗಳಿಗೆ ಬಲಿಯಾಗಿ ತನ್ನ ಅಂತಃಸತ್ವವನ್ನೇ ಕಳೆದುಕೊಂಡಿದೆ.

ಆರ್ಥಿಕ ಪ್ರಗತಿ-ಅಭಿವೃದ್ಧಿ ಈ ದೇಶದ ಆಳುವ ವರ್ಗಗಳ ಮೂಲ ಮಂತ್ರವಾಗಿದೆಯೇ ಹೊರತು ಈ ಅಭಿವೃದ್ಧಿಯ ಮಾರ್ಗದಲ್ಲಿ ತಮ್ಮ ಬೆವರು, ನೆತ್ತರು ಸುರಿಸಿ ಶ್ರಮಿಸುವ ಶ್ರಮಜೀವಿಗಳ ಆಶಯಗಳನ್ನು ಈಡೇರಿಸುವ ಮಂತ್ರವಾಗಿಲ್ಲ. ಅಭಿವೃದ್ಧಿಯ ವ್ಯಾಖ್ಯಾನದಿಂದ ಶ್ರಮಜೀವಿಗಳನ್ನು ಸದಾ ದೂರ ಇರಿಸಿ ಈ ದೇಶದ ಅರ್ಥವ್ಯವಸ್ಥೆಯನ್ನು ಒಂದು ಭ್ರಮಾಲೋಕದಂತೆ ನಿರ್ಮಿಸಿರುವ ಕೀರ್ತಿ ಈ ದೇಶದ ಆಳ್ವಿಕರಿಗೆ ಸಲ್ಲುತ್ತದೆ. ಭಾರತದ ಅರ್ಥವ್ಯವಸ್ಥೆ ಮಹಾಭಾರತದ ಮಯಸಭೆಯಂತೆ ಕಂಡುಬಂದರೆ ಈ ಸಭೆಯೊಳಗೆ ಪ್ರವೇಶಿಸುವ ನಾಗರಿಕರು ಸುಯೋಧನನಂತೆ ಕಾಣುತ್ತಾರೆ. ಆಳ್ವಿಕರು ಪಾಂಚಾಲಿಯಂತೆ ಗಹಗಹಿಸುತ್ತಿರುತ್ತಾರೆ. ನೈಸರ್ಗಿಕ ಸಂಪನ್ಮೂಲಗಳೂ ಹಿಡಿದು ಶ್ರಮಜೀವಿಗಳು ತಮ್ಮ ಬೆವರು ಸುರಿಸಿ ಉತ್ಪಾದಿಸುವ ಸಂಪತ್ತು ಉಳ್ಳವರ ಭಂಡಾರವನ್ನು ಸೇರುತ್ತಿರುವಂತೆಯೇ, ಈ ಭಂಡಾರದ ಮಾಲಿಕರನ್ನು ಪ್ರತಿನಿಧಿಸುವ ಆಳ್ವಿಕರು ಎಸೆಯುವ ತುಣುಕುಗಳು ನಾಗರಿಕರನ್ನು ತೃಪ್ತಿಪಡಿಸುತ್ತಿವೆ.

ಈ ತುಣುಕುಗಳನ್ನೇ ತಮ್ಮ ಶ್ರಮದ ಪ್ರತಿಫಲ ಎಂದು ಭಾವಿಸಿರುವ ಅಮಾಯಕ ಪ್ರಜೆಗಳಿಗೆ ತಾವು ಇಡೀ ದೇಶದ ಸಂಪತ್ತಿನ ಒಡೆಯರು ಎಂಬ ಭಾವನೆಯೇ ಮೂಡದಂತಹ ವಾತಾವರಣವನ್ನು ಸೃಷ್ಟಿಸಲಾಗಿದೆ. ನಾಳಿನ ಚಿಂತೆಯಲ್ಲಿರುವವನಿಗೆ ಗತಕಾಲದ ವೈಭವದ ರಸದೌತಣ ಉಣಬಡಿಸುವ ಆಳ್ವಿಕರಿಗೆ ಶ್ರಮಿಕರ ಕಷ್ಟ ವ್ಯಸನಗಳೆಲ್ಲವೂ ಭವಿಷ್ಯ ಭಾರತದ ನಿರ್ಮಾಣಕ್ಕಾಗಿ ಮಾಡಿದ ತ್ಯಾಗ ಬಲಿದಾನದಂತೆ ಕಾಣುತ್ತದೆ. ಹಾಗಾಗಿಯೇ ಉತ್ಪಾದಕೀಯ ಶಕ್ತಿಗಳು ಅಬಿವೃದ್ಧಿ ಪಥದ ಹಾಸುಗಲ್ಲುಗಳಾದರೆ ಈ ಶಕ್ತಿಗಳ ಶ್ರಮದ ಪ್ರತಿಫಲವನ್ನು ಸವಿಯುವ ಭಂಡಾರಗಳು ಪ್ರಗತಿ ಪಥದ ಮೈಲಿಗಲ್ಲುಗಳಾಗುತ್ತಿವೆ.

ಜಾತಿ ವ್ಯವಸ್ಥೆ ಈ ದೇಶಕ್ಕೆ ಬಡಿದಿರುವ ಒಂದು ಶಾಪ. ವಿಡಂಬನೆ ಎಂದರೆ ಆಳುವ ವರ್ಗಗಳಿಗೆ ಈ ಕ್ರೂರ ಜಾತಿ ವ್ಯವಸ್ಥೆಯೇ ಒಂದು ವರದಾನ. ಡಾ ಬಿ ಆರ್ ಅಂಬೇಡ್ಕರ್ ಜಾತಿ ವಿನಾಶದ ಆಶಯವನ್ನು ವ್ಯಕ್ತಪಡಿಸಿ ಬಹುಶಃ ಒಂದು ಶತಮಾನವೇ ಕಳೆದಿದೆ. ಆದರೆ ಇಂದು ಸ್ವತಃ ಅಂಬೇಡ್ಕರ್ ಜಾತಿ ಮನಸುಗಳಲ್ಲಿ ಬಂಧಿಯಾಗಿಬಿಟ್ಟಿದ್ದಾರೆ. ರಾಜಕೀಯ ವೇದಿಕೆಗಳನ್ನು ಅಲಂಕರಿಸುವ ಆಭರಣದಂತಾಗಿದ್ದಾರೆ. ಪ್ರತಿಮೆಗಳಲ್ಲಿ ಹುದುಗಿ ಹೋಗಿರುವ ಅಂಬೇಡ್ಕರ್ ಆರಾಧನಾ ಮನೋಭಾವದ ಬಲಿಪಶುವಿನಂತೆ ದೇಶದ ಸಾಮಾಜಿಕ, ಸಾಂಸ್ಕøತಿಕ, ರಾಜಕೀಯ ವಿದ್ಯಮಾನಗಳಲ್ಲಿ ಕಂಡುಬರುತ್ತಿದ್ದಾರೆ. ಸಾಂವಿಧಾನಿಕ ರಕ್ಷಣೆಯ ನಡುವೆಯೇ ದಲಿತ ಸಮುದಾಯಗಳು ಶೋಷಣೆ, ದೌರ್ಜನ್ಯ, ತಾರತಮ್ಯ ಮತ್ತು ತಾತ್ಸಾರವನ್ನು ಅನುಭವಿಸುತ್ತಿರುವುದು ಸ್ವತಂತ್ರ ಭಾರತದ ಅತಿ ದೊಡ್ಡ ದುರಂತ. ಊನ ಗ್ರಾಮದ ಘಟನೆ ಈ ದೇಶದ ನಾಗರಿಕ ಪ್ರಜ್ಞೆಯನ್ನು ಅಲುಗಾಡಿಸಲೂ ಸಾಧ್ಯವಾಗಲಿಲ್ಲ ಎಂದರೆ ಜಾತಿವ್ಯವಸ್ಥೆಯ ಕಬಂಧ ಬಾಹುಗಳು ನಮ್ಮ ನಾಗರಿಕ ಸಮಾಜವನ್ನು ಹೇಗೆ ಆವರಿಸಿದೆ ಎಂದು ಅರಿವಾಗುತ್ತದೆ. ಮೇಲ್ನೋಟಕ್ಕೆ ಕಾಣುವ ಜಾತ್ಯಾತೀತತೆಯ ಸೋಗು ಅಂತರ್ಯದಲ್ಲಿ ಅಡಗಿರುವ ಅಸ್ಪøಶ್ಯತೆಯನ್ನು ಮರೆಮಾಚುತ್ತಿರುವುದನ್ನು ಅಲ್ಲಗಳೆಯುತ್ತಾ ಹೋದರೆ ಬಹುಶಃ ಅಸ್ಪøಶ್ಯತೆ ಮತ್ತು ಜಾತಿ ಪ್ರಜ್ಞೆ ಅಳಿಸುವುದೇ ಇಲ್ಲ.

ಸಾಮಾಜಿಕ ನ್ಯಾಯ ಈ ಪದಪುಂಜವೇ ನಮ್ಮ ದೇಶದ ರಾಜಕೀಯ ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿರಿಸಲು ಬಳಸಲಾಗುತ್ತಿರುವ ಅಸ್ತ್ರ. ನಿಜ, ಭಾರತದಂತಹ ಶ್ರೇಣೀಕೃತ ಜಾತಿ ವ್ಯವಸ್ಥೆಯ ದೇಶದಲ್ಲಿ ಸಾಮಾಜಿಕ ನ್ಯಾಯ ಒಂದು ಪ್ರಬಲ ಅಸ್ತ್ರವಾಗಿ ಪರಿಣಮಿಸುತ್ತದೆ. ಆದರೆ ಈ ನ್ಯಾಯ ಪರಿಪಾಲನೆ ಈ ದೇಶದ ಸಂಪತ್ತನ್ನು ಉತ್ಪಾದಿಸುವ ಶ್ರಮಜೀವಿಗಳ ಏಳಿಗೆಯ ಉದ್ದೇಶ ಹೊಂದಿರಬೇಕೇ ಹೊರತು ರಾಜಕೀಯ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವ ಧ್ಯೇಯ ಹೊಂದಿರಬಾರದು. ಸಮತಾವಾದ, ಸಮಾಜವಾದ ಮತ್ತು ಸಾಮಾಜಿಕ ನ್ಯಾಯದ ಚೌಕಟ್ಟಿನಲ್ಲೇ ಶೋಷಿತ ವರ್ಗಗಳನ್ನು ಇಂದಿಗೂ ಸಹ ಶೊಷಣೆಗೊಳಪಡಿಸುತ್ತಿರುವುದು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನೇ ಅಣಕಿಸುವಂತಿದೆ. ಆಳುವ ವರ್ಗಗಳು ಸಂವಿಧಾನದ ಚೌಕಟ್ಟಿನಲ್ಲಿ ಎಸೆಯುವ ತುಣುಕುಗಳನ್ನು ಆಯ್ದುಕೊಳ್ಳಲು ಶ್ರಮಜೀವಿಗಳು, ಶೋಷಿತ ಸಮುದಾಯಗಳು ಅಬ್ಬೇಪಾರಿಗಳಲ್ಲ ಎಂಬ ವಾಸ್ತವವನ್ನು ನಾಗರಿಕ ಸಮಾಜ ಅರಿಯುವುದು ಇಂದಿನ ತುರ್ತು ಅಗತ್ಯತೆ. ಇಲ್ಲವಾದಲ್ಲಿ ಕೆಲವೇ ಶ್ರೀಮಂತರ ಭಂಡಾರದಲ್ಲಿ ಕ್ರೋಢೀಕೃತವಾಗುವ ದೇಶದ ಸಂಪತ್ತಿನ ತುಣುಕುಗಳೇ ಈ ದೇಶದ ಸಮಾಜವಾದದ ಸಂಕೇತವಾಗುತ್ತವೆ.

ಮತಾಂಧತೆ ಈ ದೇಶವನ್ನು ಕಾಡುತ್ತಿರುವ ಸಮಸ್ಯೆ ಮಾತ್ರವಲ್ಲ. ಮತಧರ್ಮಗಳನ್ನು ರಾಜಕೀಯ ಚಿಮ್ಮುಹಲಗೆಯಂತೆ ಬಳಸಿ ತಮ್ಮ ಅಧಿಕಾರ ರಾಜಕಾರಣದ ಹೆಜ್ಜೆಗುರುತುಗಳನ್ನು ಮೂಡಿಸುತ್ತಲೇ ಬಂದಿರುವ ಆಳುವ ವರ್ಗಗಳಿಗೆ ಮತಾಂಧತೆ ವರದಾನವೂ ಹೌದು. ಎಲ್ಲಿಯವರೆಗೂ ಮತಾಂಧತೆ ಜೀವಂತವಾಗಿರುವುದೋ ಅಲ್ಲಿಯವರೆಗೂ ಆಳುವ ವರ್ಗಗಳಿಗೆ ಪ್ರಜಾಕ್ರಾಂತಿಯ ಭೀತಿ ಇರಲಾರದು. ಏಕೆಂದರೆ ಕ್ರಾಂತಿಯ ಕಿಡಿಗಳನ್ನು ಹೊಸಕಿಹಾಕಲು ಧರ್ಮದ ಪಂಜುಗಳು ಸದಾ ಸಿದ್ಧವಾಗಿರುತ್ತವೆ. ಅಯೋಧ್ಯೆ, ಬಾಬ್ರಿ ಮಸೀದಿ, ದಾದ್ರಿ ಮತ್ತು ಕಾಶ್ಮೀರ ಏಕಾಏಕಿ ಸೃಷ್ಟಿಯಾದ ಸಮಸ್ಯೆಗಳಲ್ಲ. ವ್ಯವಸ್ಥಿತವಾಗಿ ಪೋಷಿಸಿಕೊಂಡು ಬಂದಿರುವ ಸೂತ್ರಗಳು. ಒಡೆದು ಆಳುವ ನೀತಿಯನ್ನು ಬ್ರಿಟೀಷರು ಭಾರತಕ್ಕೆ ಪರಿಚಯಿಸಿದರು ಎನ್ನುವುದು ಹಸಿ ಸುಳ್ಳು. ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಅಂತರ್ಗತವಾಗಿದ್ದ ಒಡೆದು ಆಳುವ ನೀತಿಗೆ ಬ್ರಿಟೀಷರು ಹೊಸ ಆಯಾಮ ನೀಡಿದ್ದರು ಎನ್ನಬಹುದು. ಶವಗಳ ರಾಶಿಯಲ್ಲಿ ಮತಧರ್ಮಗಳ ಅಸ್ಮಿತೆಗಳನ್ನು ಹೆಕ್ಕಿ ತೆಗೆಯುವ ಮಟ್ಟಿಗೆ ಈ ದೇಶದಲ್ಲಿ ಮತಾಂಧತೆ ಬೇರೂರಿದೆ. ಈ ಮತಾಂಧತೆಯನ್ನು ಪೋಷಿಸಲು ಆಳ್ವಿಕರಿಗೆ ಹಿಂದೂ-ಮುಸ್ಲಿಂ ಸಂಘರ್ಷಗಳು ಭೂಮಿಕೆ ಒದಗಿಸಿವೆ. ಹಾಗಾಗಿಯೇ ವ್ಯಕ್ತಿಗತ ನೆಲೆಯಲ್ಲಿ ಸೌಹಾರ್ದತೆ ಬಯಸುವವರೂ ಸಹ ಸಾಮುದಾಯಿಕ ಪ್ರಜ್ಞೆ ಕಾಡಿದಾಗ ಮತಾಂಧರಾಗಿಬಿಡುತ್ತಾರೆ. ಈ ವಿಡಂಬನೆಯನ್ನು ಪ್ರಜ್ಞಾವಂತ ಜನಗೆ ಗಮನಿಸಲೇಬೇಕು.

ನವ ಉದಾರವಾದ ಉದ್ಯಮಿಗಳಿಗೆ ವರದಾನ ಶ್ರಮಜೀವಿಗಳಿಗೆ ಶಾಪ ಎನ್ನಲಡ್ಡಿಯಿಲ್ಲ. ಭಯೋತ್ಪಾದನೆ, ಕೋಮುಸಂಘರ್ಷ, ಬಾಂಬ್ ದಾಳಿ, ಜಾತಿ ಸಂಘರ್ಷ ಈ ಎಲ್ಲ ಅನಿಷ್ಠಗಳಿಂದ ಸ್ವತಂತ್ರ ಭಾರತದಲ್ಲಿ 50 ಸಾವಿರ ಜನರು ಬಲಿಯಾಗಿರಬಹುದು. ಆದರೆ ನವ ಉದಾರವಾದದ ಕರಾಳ ಬಾಹುಗಳಿಗೆ ಸಿಲುಕಿರುವ ಭಾರತದಲ್ಲಿ ಕಳೆದ ಎರಡೂವರೆ ದಶಕದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೂ ನಮ್ಮ ಆಳುವ ವರ್ಗಗಳಿಗೆ ಭಯೋತ್ಪಾದನೆ ಪ್ರಥಮ ಶತ್ರುವಾಗಿ ಕಾಣುತ್ತದೆ. ನವ ಉದಾರವಾದ ಅಪ್ಯಾಯಮಾನವಾಗುತ್ತದೆ. ಜಾಗತಿಕ ಹಣಕಾಸು ಬಂಡವಾಳದ ಅಧಿಪತ್ಯದಲ್ಲಿ ತನ್ನ ಅಸ್ತಿತ್ವ ಮತ್ತು ಅಸ್ಮಿತೆಯನ್ನೇ ಕಳೆದುಕೊಳ್ಳುತ್ತಿರುವ ಸಾರ್ವಭೌಮ ದೇಶ ಇಂದು ಕಾರ್ಪೋರೇಟ್ ಉದ್ಯಮಿಗಳಿಂದ ನಿಯಂತ್ರಿಸಲ್ಪಡುತ್ತಿರುವುದು ಪ್ರತ್ಯಕ್ಷ ಸತ್ಯ. ಗ್ರಾಮೀಣ ಕೃಷಿ ಆರ್ಥಿಕತೆಯನ್ನು ಆವರಿಸಿದ್ದ ನವ ಉದಾರವಾದದ ಉರುಳು ಇಂದು ಔದ್ಯಮಿಕ ಮತ್ತು ಹಣಕಾಸು ಕ್ಷೇತ್ರವನ್ನೂ ಆವರಿಸಿದ್ದು ಅಮಾನ್ಯೀಕರಣ, ಡಿಜಿಟಲೀಕರಣ ಮತ್ತು ಖಾಸಗೀಕರಣದ ಭರಾಟೆಯಲ್ಲಿ ಸಾರ್ವಜನಿಕ ಎನ್ನಲಾಗುವ ಎಲ್ಲವನ್ನೂ ಹೊಸಕಿ ಹಾಕುತ್ತಿದೆ. ವಿಪರ್ಯಾಸವೆಂದರೆ ಸಮಾಜವಾದ, ಸಮತಾವಾದವನ್ನು ಪ್ರತಿಪಾದಿಸುವ ಎಲ್ಲ ದನಿಗಳೂ, ಮಾಧ್ಯಮಗಳನ್ನೂ ಸೇರಿದಂತೆ, ನವ ಉದಾರವಾದವನ್ನು ಅಪ್ಪಿಕೊಂಡುಬಿಟ್ಟಿವೆ. ಪ್ರತಿರೋಧದ ಕೆಲವೇ ಕ್ಷೀಣ ದನಿಗಳನ್ನು ನಿರ್ದಾಕ್ಷಿಣ್ಯವಾಗಿ ದಮನಿಸಲಾಗುತ್ತಿದೆ.

ಎಂಟನೆಯ ಆಯಾಮ :

ಭಾರತದ ಸಾರ್ವಭೌಮ ಪ್ರಜೆಗಳಿಗೆ, ಅಸಹಾಯಕ ಜನಸಮುದಾಯಗಳಿಗೆ, ಅವಕಾಶವಂಚಿತರಿಗೆ, ಶೋಷಿತ ಸಮುದಾಯಗಳಿಗೆ, ಶ್ರಮಜೀವಿಗಳಿಗೆ ಮತ್ತು ನಾಳಿನ ಬದುಕನ್ನು ಕಾದು ನೋಡುತ್ತಿರುವ ಅಸಂಖ್ಯಾತ ಜನತೆಗೆ ಸ್ವತಂತ್ರ ಭಾರತದ ಎಂಟನೆಯ ಆಯಾಮವನ್ನು ನರೇಂದ್ರ ಮೋದಿ ಸರ್ಕಾರ ಪರಿಚಯಿಸುತ್ತಿದೆ. ಸಾಂಸ್ಕøತಿಕ ರಾಷ್ಟ್ರೀಯತೆ, ಕಾರ್ಪೋರೇಟ್ ನಿಯಂತ್ರಣ, ಹಣಕಾಸು ಬಂಡವಾಳದ ಅಧಿಪತ್ಯ, ನಿರಂಕುಶ ಪ್ರಭುತ್ವ, ಸರ್ವಾಧಿಕಾರಿ ಧೋರಣೆ, ಮತೀಯ ರಾಜಕಾರಣ ಈ ಎಲ್ಲ ವಿದ್ಯಮಾನಗಳ ಸಮ್ಮಿಲನವನ್ನು ಸ್ವತಂತ್ರ ಭಾರತದ 70ನೆಯ ವರ್ಷದಲ್ಲಿ ಕಾಣುತ್ತಿದ್ದೇವೆ. ಸಾಂವಿಧಾನಿಕ ಮೌಲ್ಯಗಳನ್ನು ಅಧಿಪತ್ಯ ರಾಜಕಾರಣಕ್ಕೆ ಒತ್ತೆ ಇಡಲಾಗುತ್ತಿದೆ. ಪ್ರತಿರೋಧದ ದನಿಗಳನ್ನು ಸಂವಿಧಾನದ ಚೌಕಟ್ಟಿನಲ್ಲೇ ಹೊಸಕಿಹಾಕಲಾಗುತ್ತಿದೆ. ನವ ಉದಾರವಾದದ ಉರುಳು ಬಿಗಿಯಾಗುತ್ತಿರುವಂತೆಯೇ ಪ್ರಜಾತಂತ್ರದ ಕೊಂಡಿ ಕಳಚಿಕೊಳ್ಳುತ್ತಿದೆ. ದ್ವೇಷ,ಮತಾಂಧತೆಯ ಸಂಕೋಲೆ ಜನಸಾಮಾನ್ಯರನ್ನು ಬಂಧಿಸುತ್ತಿದೆ. ಈ ಎಂಟನೆಯ ಆಯಾಮದ ಮುನ್ನಡೆಯಲ್ಲೇ ಸ್ವಚ್ಚ ಭಾರತ ಅಭಿಯಾನದಡಿ ಭಾರತದ ಬಹುಮುಖಿ ಸಂಸ್ಕøತಿಯನ್ನು ಗುಡಿಸಿಹಾಕಲಾಗುತ್ತಿದೆ.

ಏಳು ದಶಕಗಳ ಸಾರ್ಥಕತೆಯ ವೈಭವದಲಿ ಕಳೆದುಹೋಗುವ ಮುನ್ನ ಎಂಟನೆಯ ಆಯಾಮದ ಆತಂಕಗಳನ್ನು ನಿವಾರಿಸಲು ಮುಂದಾಗುವುದು ಸ್ವಾತಂತ್ರ್ಯ ದಿನದ ಆಶಯವಾದಲ್ಲಿ ಶ್ರಮಜೀವಿಗಳ ಭಾರತ ತನ್ನ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಉಳಿಸಿಕೊಳ್ಳಲು ಸಾಧ್ಯ.

Leave a Reply

Your email address will not be published.