” ಊರು ಸುಟ್ಟರೂ ಹನುಮಪ್ಪ ಹೊರಗೆ “

-ಸಿದ್ಧರಾಮ ಹಿರೇಮಠ,ಕೂಡ್ಲಿಗಿ.

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನಲ್ಲಿ ಅನೇಕ ಐತಿಹಾಸಿಕ ಸ್ಥಳಗಳಿರುವಂತೆಯೇ, ಅಚ್ಚರಿಯ ತಾಣಗಳೂ ಇವೆ. ಅವುಗಳಲ್ಲೊಂದು ಚೌಡಾಪುರದಲ್ಲಿರುವ ದೇವಸ್ಥಾನ. ಇದು ಬಹು ಜನರಿಗೆ ತಿಳಿಯದ  ತಾಣವಾಗಿದೆ.

FB_IMG_1493869128778ಮೊನ್ನೆ ಭಾನುವಾರ ನಾನು ನನ್ನ ಕೆಮರಾ ಹೆಗಲಿಗೇರಿಸಿಕೊಂಡು ಹೊರಟಾಗ ಬಹುದಿನಗಳ ನಂತರ ಚೌಡಾಪುರ ಕೆರೆಯ ಸ್ಥಿತಿ ಹೇಗಿದೆಯೆಂದು ನೋಡೋಣವೆಂದೇ ಹೋಗಿದ್ದೆ. ಆದರೆ ಚೌಡಾಪುರ ಕೆರೆಯೆಲ್ಲ ಬತ್ತಿ ಬರಿದಾಗಿ ಕ್ರಿಕೆಟ್ ಮೈದಾನದಂತಾಗಿರುವುದು ಬರದ ಭೀಕರತೆಯನ್ನು ತೋರಿಸಿತು. ಅದೇ ಕೆರೆಯ ಬಲಭಾಗದಲ್ಲಿ ಚೌಡಾಪುರ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿಯೇ ಪುಟ್ಟ ಹಳೆಯ ದೇವಸ್ಥಾನವೊಂದಿದೆ. ಈ ದೇವಸ್ಥಾನದ ಬಗ್ಗೆ ಬಹಳ ಜನರಿಗೆ ಗೊತ್ತಿಲ್ಲವೋ ಅಥವಾ ನಿರ್ಲಕ್ಷ್ಯವೋ ಸದಾ ಒಂಟಿಯಾಗಿ ಅನಾಥವಾಗಿ ನಿಂತಂತೆ ಕಾಣುತ್ತದೆ.

ಈ ದೇವಸ್ಥಾನದ ಬಗ್ಗೆ ಯಾಕೆ ಇಷ್ಟೊಂದು ಹೇಳುತ್ತಿದ್ದೇನೆಂದರೆ, ಸಾಮಾನ್ಯವಾಗಿ ಎಲ್ಲೆಡೆ ಆಂಜನೇಯ ದೇವಸ್ಥಾನಗಳಿರುವುದು ವಾಡಿಕೆ. ” ಊರು ಸುಟ್ಟರೂ ಹನುಮಪ್ಪ ಹೊರಗೆ ” ಎಂದು ನಮ್ಮಲ್ಲಿ ಮಾತೇ ಇದೆ. ಗ್ರಾಮವನ್ನು ರಕ್ಷಿಸಬೇಕೆಂಬ ನಿಟ್ಟಿನಲ್ಲಿಯೇ ಏನೋ ಆಂಜನೇಯನ ಗುಡಿ ಸಾಮಾನ್ಯವಾಗಿ ಗ್ರಾಮದ ಹೊರವಲಯದಲ್ಲಿರುತ್ತದೆ. ಆದರೆ ಇಲ್ಲಿರುವುದು ಸಹ ಆಂಜನೇಯನ ಗುಡಿಯೆಂದೇ ತಿಳಿದಿದ್ದೆ. ಆದರೆ ನಾನು ನೀವು ತಿಳಿದಂತೆ ಇದು ಆಂಜನೇಯನ ಗುಡಿಯಲ್ಲ, ಇದು “ಸುಗ್ರೀವನ” ಗುಡಿ. ನನಗೆ ತಿಳಿದಂತೆ ಸುಗ್ರೀವನ ಗುಡಿ ಅತ್ಯಂತ ವಿರಳ. ಇಲ್ಲಿ ಯಾರನ್ನೇ ಕೇಳಿದರೂ ಇದು ವಾಲಿಸುಗ್ರೀವನ ದೇವಸ್ಥಾನವೆಂದೇ ಹೇಳುವುದು. ಅಲ್ಲದೆ ದೇವಸ್ಥಾನದ ಮುಂಭಾಗದಲ್ಲಿಯೇ ಸ್ಪಷ್ಟವಾಗಿ ಇತ್ತೀಚೆಗೆ ನಾಮಫಲಕವನ್ನೂ ಹಾಕಲಾಗಿದೆ “ವಾಲಿ ಸುಗ್ರೀವ ದೇವಸ್ಥಾನ” ಎಂದು. ಅಂದಮೇಲೆ ಇದು ಸ್ಪಷ್ಟವಾಗಿ ಸುಗ್ರೀವನ ದೇವಸ್ಥಾನವೆಂದಾಯಿತು.

ಸುಗ್ರೀವ ರಾಮಾಯಣದಲ್ಲಿ ಬರುವ ಪ್ರಮುಖವಾದ ಪಾತ್ರ. ಸೀತೆಯನ್ನು ರಾವಣ ಅಪಹರಿಸಿದ ನಂತರ ರಾಮ ಲಕ್ಷ್ಮಣರು ಸೀತೆಯನ್ನು ಹುಡುಕುತ್ತ ಅಲೆಯುವಾಗ, ತನ್ನ ಅಣ್ಣ ವಾಲಿಯಿಂದ ರಾಜ್ಯವನ್ನು ಕಳೆದುಕೊಂಡಿದ್ದ ಸುಗ್ರೀವ ತನಗೆ ಬೆಂಬಲವನ್ನು ಸೂಚಿಸುವಂತೆಯೂ ಸೀತೆಯನ್ನು ಹುಡುಕಿಕೊಡುವ ಜವಾಬ್ದಾರಿ ತನ್ನದೆಂದೂ ಸುಗ್ರೀವ ಹೇಳುತ್ತಾನೆ. ಅಂತೆಯೇ ರಾಮನು ವಾಲಿ ಸುಗ್ರೀವರು ಯುದ್ಧ ಮಾಡುವಾಗ ಮರೆಯಲ್ಲಿ ನಿಂತು ವಾಲಿಯನ್ನು ಕೊಲ್ಲುತ್ತಾನೆ. ಇದಕ್ಕೆ ಪ್ರತಿಯಾಗಿ ಸುಗ್ರೀವನು ಸೀತೆಯನ್ನು ಹುಡುಕಿಸಿಕೊಡುವಲ್ಲಿ ಹಾಗೂ ರಾಮನೊಂದಿಗೆ ಲಂಕೆಯ ಮೇಲೆ ಯುದ್ಧ ಸಾರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ. ಇಲ್ಲಿ ಸೀತೆಯನ್ನು ಹುಡುಕಿಸಿಕೊಡುವಲ್ಲಿ ಹನುಮಂತನೊಂದಿಗೆ ಸುಗ್ರೀವ ಹೇಗೆ ಸಹಾಯ ಮಾಡಿದ ಎಂಬುದು ಮುಖ್ಯವಾಗುತ್ತದೆ. ಇದು ಸುಗ್ರೀವ ಎಂಬ ಹೆಸರಿನ ಹಿನ್ನೆಲೆ. ಇನ್ನು ನಮ್ಮ ಸುಗ್ರೀವನನ ದೇವಸ್ಥಾನಕ್ಕೆ ಮರಳೋಣ.

FB_IMG_1493869125747ದೇವಸ್ಥಾನವು ಅತ್ಯಂತ ಹಳೆಯದಾಗಿದ್ದು, ಹಾಸುಬಂಡೆಗಳಿಂದ ನಿರ್ಮಿಸಲಾಗಿದೆ. ಬಹುಶ: ಇದು ಮಹತ್ವದ ದೇವಸ್ಥಾನ ಎಂದು ಆದ್ಯತೆ ನೀಡದಿದ್ದುದರಿಂದಲೇನೋ ಹಳೇಯದಾದರೂ ಶಿಲ್ಪಕಲೆ ಅಥವಾ ಕುಸುರಿ ಕೆತ್ತನೆಯ ಯಾವ ಕುರುಹುಗಳೂ ಇಲ್ಲ. ಗರ್ಭಗುಡಿಯ ಮೇಲೆ ಗೋಪುರ ಇರುವುದಾದರೂ ಅದು ಇತ್ತೀಚೆಗೆ ನಿರ್ಮಿಸಿದ್ದೆಂದು ಅನಿಸುತ್ತದೆ. ಆದರೆ ದೇವಸ್ಥಾನದ ಆವರಣವನ್ನು ಗಮನಿಸಿದರೆ ಇದೊಂದು ಹಳೆಯ ದೇವಸ್ಥಾನವೇ. ಇಡೀ ಗುಡಿಯನ್ನು ಹಾಸುಬಂಡೆಗಳಿಂದ, ಕಲ್ಲುಗಳಿಂದ ನಿರ್ಮಿಸಲಾಗಿದೆ. ಒಳಗಿರುವ ಸುಗ್ರೀವನ ಶಿಲ್ಪ ಕಪ್ಪುಶಿಲೆಯಿಂದ ಕೆತ್ತನೆಗೊಂಡಿದೆ. ವಿಶೇಷವೆಂದರೆ ಸಾಮಾನ್ಯವಾಗಿ ಆಂಜನೇಯನ ದೇವಸ್ಥಾನದಲ್ಲಿ ಆಂಜನೇಯನ ಮುಖದ ಒಂದು ಬದಿ ಮಾತ್ರ ಕೆತ್ತನೆ ಮಾಡಲಾಗಿರುತ್ತದೆ.

ಇಲ್ಲಿ ಸುಗ್ರೀವನ ಶಿಲ್ಪದಲ್ಲಿ ಸುಗ್ರೀವನ ಮುಖವನ್ನು ನೇರವಾಗಿ ಕೆತ್ತನೆ ಮಾಡಲಾಗಿದೆ. ಮುಖವನ್ನು ಸ್ಪಷ್ಟವಾಗಿ ಮುಂಭಾಗ ಕಾಣುವಂತೆಯೇ ಕೆತ್ತನೆ ಮಾಡಲಾಗಿದೆ. ಮೂರ್ತಿಯ ಸುತ್ತಲೂ ಪ್ರಭಾವಳಿಯಿದೆ. ಬಲಗೈ ಅಭಯ ಹಸ್ತವನ್ನು ತೋರಿದರೆ ಎಡಗೈಯಲ್ಲಿ ಹೂವಿನಾಕಾರದ ಗಿಡವೊಂದನ್ನು ಹಿಡಿದಿರುವಂತಿದೆ. ಸುಗ್ರೀವನ ಬಾಲ ಮೂರ್ತಿಯ ಸುತ್ತಲೂ ಸುತ್ತುವರೆದಿದೆ. ಮೂರ್ತಿಯ ಮೈ ಮೇಲೆಲ್ಲ ಎಣ್ಣೆ, ಕುಂಕುಮ, ಅರಿಶಿಣವನ್ನು ಹೆಚ್ಚಾಗಿ ಸುರಿದಿರುವುದರಿಂದ ಹೆಚ್ಚಿನ ವಿವರಗಳು ಸ್ಪಷ್ಟವಾಗಿ ಕಾಣುವುದಿಲ್ಲ.  ಉಳಿದಂತೆ ಹೆಚ್ಚಿನ ಮಾಹಿತಿ ದೊರೆಯುವುದಿಲ್ಲ.

Leave a Reply

Your email address will not be published.