ಊರುಗಳೂ ಚೀಟಿಗಳೂ…

-ಹರಿಪ್ರಸಾದ್

moneyಒಂದಾನೊಂದು ಊರು. ಈ ಊರು ಸ್ವಲ್ಪ ದೊಡ್ಡದೇ. ಹೆಚ್ಚೂ ಕಮ್ಮಿ ಐನೂರು ಮನೆಗಳು. ಇರುವ ಮನೆಗಳಲಿ ಬಹುಪಾಲು ಮಂಗಳೂರು ಹೆಂಚಿನವು. ಅನೇಕ ತಾರಸಿ ಮನೆಗಳಿವೆ. ಇತ್ತೀಚೆಗೆ ಕಟ್ಟಿರುವ ಮನೆಗಳು ಮೊಜಾಯಿಹಾಸು ಕಂಡಿವೆ. ತೀರಾ ಗುಡಿಸಲುಗಳು ಇಲ್ಲದಿದ್ದರೂ ಅದಕ್ಕಿಂತ ಹೆಚ್ಚೇನು ಶೋಭಿಸದ ಮನೆಗಳೂ ಇವೆ. ಸರ್ಕಾರಿ ಆಸ್ಪತ್ರೆ, ಬ್ಯಾಂಕು, ಹೈಸ್ಕೂಲು, ಗ್ರಾಮಪಂಚಾಯಿತಿ, ವೈನುಶಾಪು, ಹಾಲಿನ ಡೈರಿ, ಕೆಇಬಿ ಆಫೀಸು ಇದೆ. ಅಂದಮೇಲೆ ನಿಮಗಾದರೂ ಈ ಊರಿನ ಒಂದು ಅಂದಾಜು ಸಿಕ್ಕಿರಬಹುದು.

ಈ ಊರಿನ ಐವತ್ತು ಭಾಗ ಮನೆಗಳಲ್ಲಿ ಕನಿಷ್ಠ ಒಂದು ಸೀಮೆಹಸು ಇದೆ. ಶಕ್ತಾನುಸಾರ ಮತ್ತು ಇಚ್ಚಾನುಸಾರ ಎರಡೂ ಬೆರೆತ ಮನೆಗಳಲ್ಲಿ ಈ ಸಂಖ್ಯೆ ಎರಡು, ಮೂರು, ನಾಲ್ಕರ ತನಕವೂ ಹೋಗುತ್ತದೆ. ಎಲ್ಲ ಮನೆಗಳ ಮುಂದೆ ದನ-ಕರುಗಳು ಇಲ್ಲದಿದ್ದರೂ ಈ ಊರಲ್ಲಿ ಸಾಕಷ್ಟು ದನಕರುಗಳು ಇವೆ. ಈ ಊರಲಿ ನೂರಾದರೂ ಬೈಕುಗಳು, ಹತ್ತಿಪ್ಪತ್ತು ಲಗೇಜು ಆಟೋ,ಕಾರು, ಟ್ರಾಕ್ಟರುಗಳಿವೆ. ಈ ಟ್ರಾಕ್ಟರ್‍ಗಳು ಹೊಸ ಭಾರತದ ಕೃಷಿ ಉಳಿದಿದೆ ಎಂದು ತೋರಿಸಲು ಇವೆಯೋ? ಬ್ಯಾಂಕುಗಳ ಸಾಲ ವಿತರಣೆಯ ಕುರುಹೋ? ರೈತಾಪಿ ಬದುಕಿಗೆ ಯಂತ್ರ ಅನಿವಾರ್ಯವಾಗುತ್ತಿರುವ ಪರಿಯೋ? ಅರಿಯಬೇಕಾಗಿದೆ.

ಈ ಊರಲ್ಲಿ ಪ್ರತಿನಿತ್ಯ ಸಂಜೆ ಆಯಿತು ಅಂದರೆ ಒಂದು ಗುಲ್ಲು ಏಳುತ್ತದೆ. ಅದು ನನಗೆ ತುಂಬಾ ಕಾಡುತ್ತಿದೆ. ಆದ್ದರಿಂದ ಅದರ ಬಗ್ಗೆ ಬರೆಯೋದು ತುರ್ತು ಅನಿಸಿದೆ. `ಸಂಜೆಯ ಗುಲ್ಲು ನಮಗೆ ಗೊತ್ತು ಬಿಡಯ್ಯ’ ಅಂತ ನೀವು ನಕ್ಕರೆ, ತಪ್ಪಾಗಿ ತಿಳಿಯುತ್ತಿದ್ದೀರಿ. ನಾನು ಹೇಳುತ್ತಿರುವ `ಸಂಜೆಯ ಗುಲ್ಲು’ ಈ ಊರಿನಲ್ಲಿ ಬೇರೆ ತೆರನಾದದ್ದು. ಸಂಜೆಗುಲ್ಲಿಗಿಂತ ಮೊದಲಿಗೆ ಈ ಊರಿನ ದಿನವಹಿಯ ಚಿತ್ರಣ ಹೇಳಲೇಬೇಕು.

ಬೆಳಿಗ್ಗೆ ಐದೂವರೆಗೆಲ್ಲ ಚಟುವಟಿಕೆ ಶುರುವಾಗುತ್ತದೆ. ಮುಖ್ಯವಾಗಿ ಹಾಲು ಕರೆವ ಕೆಲಸ. ಡೈರಿಗೆ ಹಾಲು ಹಾಕಿದ ಗಂಡಸರು ಹೊಟೆಲುಗಳಿಗೆ ಬಂದು ಕಾಫಿ, ಟೀ ಕುಡಿಯುತ್ತಾರೆ, ಪೇಪರ್ ಓದುತ್ತಾರೆ. ಆ ದಿನದ ಕೆಲಸಗಳಿಗೆ ಆಳುಗಳನ್ನು ಬುಕ್ಕಿಂಗ್ ಮಾಡುವ ಕೆಲಸವೂ ಅಲ್ಲೇ ನಡೆಯುತ್ತದೆ. ಅದೇ ಹೋಟೆಲುಗಳಲ್ಲಿ ತಿಂಡಿ ಕಟ್ಟಿಸಿಕೊಂಡು ಹೋಗುವ ಕೆಲ ಗಂಡಸರು ಮಕ್ಕಳನ್ನು ಶಾಲೆಗೆ -ಅಂದರೆ ಬಸ್ ಹತ್ತಿಸಿ ಕಾರ್ಮೆಂಟಿಗೆ-ಕಳಿಸುತ್ತಾರೆ. ಈ ಭಾಗ್ಯವಿಲ್ಲದ ಮಕ್ಕಳು ಸರ್ಕಾರಿ ಶಾಲೆಗೆ ಹೋಗುತ್ತವೆ. ನಂತರ ಒಂದಷ್ಟು ಜನ ದನಕರು ಅಟ್ಟಿಕೊಂಡು ಜಮೀನಿನ ಕಡೆ ಹೋಗುತ್ತಾರೆ. ಮತ್ತೆ ಕೆಲವರು ದನಕರು ಕಟ್ಟಿಬಂದು ಪೇಟೆ ಕಡೆಗೆ ಹೊರಡುತ್ತಾರೆ. ಇನ್ನು ಕೆಲವರಿಗೆ ಏನೇನೋ ಹಳವಂಡಗಳಿರುತ್ತವೆ. ಅವರು ಅದರ ಸಲುವಾಗಿ ಎತ್ತೆತ್ತಲೋ ಹೋಗುತ್ತಾರೆ. ಕೆಲ ಹೆಂಗಸರು ಕೂಲಿ ನಾಲಿಗೆ ಹೋಗುತ್ತಾರೆ. ಕೆಲ ಯುವತಿಯರು ಟೈಲರಿಂಗ್, ಬೂಟಿ ಪಾರ್ಲರ್ ಕೆಲಸಕ್ಕೆ ಹೋಗುತ್ತಾರೆ. ಕೆಲವೇ ಮನೆಗಳಲ್ಲಿ ಇರುವ ಹೆಂಗಸರು- ಹೊಟ್ಟೆಬಟ್ಟೆಗೆ ನೇರ್ಪಾಗಿರುವರು- ಕರೆಂಟು ಇದ್ದರೆ ಟೀವಿ ಹಾಕಿಕೊಂಡೋ, ಮೊಬೇಲ್ನಲ್ಲಿ ಹಾಡು ಕೇಳಿಕೊಂಡು ಮನೆವಾರ್ತೆಗಳಲ್ಲಿ ಮುಳುಗುತ್ತಾರೆ.

ನಿಧಾನವಾಗಿ ಊರು ಭಣಗುಟ್ಟತೊಡಗುತ್ತದೆ. ನಾಯಿ, ಕೋಳಿಗಳು ಓಡಾಡುವುದು ಬಿಟ್ಟರೆ ಹೆಚ್ಚಿನ ಜೀವಸಂಚಾರವೇನೂ ಇರುವುದಿಲ್ಲ. ಅಂಗಡಿ, ಹೋಟೆಲುಗಳಿಗೆ ಗಿರಾಕಿಗಳು ಕಡಿಮೆಯಾಗುತ್ತಾರೆ. ಬೀಡಿಗೋ, ಎಲೆಗೋ ಕಾಲೆಳೆದುಕೊಂಡು ಬಂದು ಹೋಗುವ ಮುದುಕ-ಮುದುಕೀರು, ಆಗೀಗ ಬರುವ ಥರಾವರಿ ವ್ಯಾಪಾರಿಗಳು, ಬಸ್ಸೋ-ವ್ಯಾನಿನ ಶಬುದ, ಏನಾದರೂ ಜಗಳ ಪಗಳವಾದರೆ ಮಾತ್ರ ಊರಿನ ಅಸ್ತಿತ್ವ ತಿಳಿಯೋದು. ಇಲ್ಲದಿದ್ದರೆ ಮೌನಸಾಮ್ರಾಜ್ಯ. ಹೆಚ್ಚೆಂದರೆ ಹೋಟೆಲುಗಳಲ್ಲಿ ಕಾಣುವ ಗಿರಾಕಿಗಳು-ಗರಿಗರಿ ಬಿಳಿಬಟ್ಟೆ ತೊಟ್ಟ- ಊರದಲ್ಲಾಳಿಗಳು. ಬೆಳಿಗ್ಗೆಯಿಂದ ಸಂಜೆಯವರೆಗೂ ಕೂರುವ ಇವರೇ ಊರಗ್ಯಾನಿಗಳು. ಈ ಗ್ಯಾನಿಗಳ ಸುತ್ತಾ ನಿಂತಿರುವ ಯುವಪಡೆ. ಈ ಊರಗ್ಯಾನಿಗಳಾದರೋ ಊರಲ್ಲಿ ಯಾರು ಹೆರುತ್ತಾರೆ, ಯಾರ ಜತೆ ಯಾರು ಓಡಿಹೋಗುತ್ತಾರೆ, ಯಾರು ಜಮೀನು ಮಾರುತ್ತಾರೆ, ಕೊಳ್ಳುತ್ತಾರೆ…. ಎಂಬೆಲ್ಲ ಸಕಲ ವರ್ತಮಾನವನ್ನು ಅರಿತವರು.

ಈ ಅರಿತಂತಿರುವ ಗ್ಯಾನಿಗಳ ಕಾಣ್ಕೆಯಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಯತ್ನಿಸುವ ಯುವಪಡೆ, ಅವರು ಕೊಡಿಸುವ ಟೀಯೋ, ಸಿಗರೇಟೋ ಆಗೀಗ ಸಿಗುವ ಕ್ವಾರ್ಟರ್‍ಗಾಗಿ ಕಾದವರು. ನಾಲ್ಕು ಗಂಟೆಯ ತನಕವೂ ಸ್ತಬ್ದವಾಗಿದ್ದ ಊರು ಮತ್ತೆ ಗರಿಗೆದರುತ್ತದೆ. ಮಕ್ಕಳು ಶಾಲೆಯಿಂದ ಬರುತ್ತವೆ. ಬೆಳಿಗ್ಗೆ ಎಲ್ಲೆಲ್ಲೋ ಹೋಗಿದ್ದವರೂ ಕೂಡ ಬಂದು ತಂತಮ್ಮ ದನಕರು ಹಿಡಕೊಂಡು ಬರುತ್ತಾರೆ. ಆ ವೇಳೆಗೆ ಪೇಟೆಯಿಂದಲೂ ಬಸ್ಸು ಬರುತ್ತದೆ. ಅದರಿಂದಲೂ ಒಂದಷ್ಟು ಮಕ್ಕಳು, ದೊಡ್ಡವರೂ ಇಳಿಯುತ್ತಾರೆ. ಮತ್ತೆ ಕೊಟ್ಟಿಗೆಗಳಲ್ಲಿ ಹಾಲು ಕರೆವ ಶಬ್ದ ಕೇಳತೊಡಗುತ್ತದೆ. ಆರೇಳು ಗಂಟೆಯೊಳಗೆ ಡೈರಿಗೆ ಹಾಲು ಹಾಕಿದ ಗಂಡಸರು ಮಕ್ಕಳನ್ನು ಟ್ಯೂಷನ್ನಿಗೆ ಅಟ್ಟಿ ಹೋಟೆಲುಗಳ ಕಡೆ ಬರುತ್ತಾರೆ. ಮತ್ತೆ ಕೆಲವರು ಮಧುಭಾಂಡ ಶಾಲೆಗಳ ಕಡೆ ನಡೆಯುತ್ತಾರೆ. ಹೋಟೆಲುಗಳಲ್ಲಿ ಕಾಫಿ, ಟೀ ಸರಬರಾಜು ಜೋರಾಗುತ್ತದೆ. ಚುರುಮುರಿ, ವಡೆ, ಬೋಂಡಾಗಳ ಹಬೆಯು ಮೂಗಿಗೆ ಅಡರುತ್ತದೆ. ಮನೆಯಲ್ಲೇ ಇದ್ದು ಬೋರಾದ ಮಂಡಿನೋವಿನ ಮುದುಕರು ಬೋಂಡಾ, ವಡೆಗಾಗಿ ಬಂದರೆ, ಹೊಸಕಾಲದ ಸೊಸೆಯರು ಚುರುಮುರಿಗಾಗಿ ಬರುತ್ತಾರೆ.

ಅಸಲಿ ಗುಲ್ಲು ಶುರುವಾಗುವುದು ಇಲ್ಲಿಂದಲೇ….

ಅಲ್ಲೇ ಒಬ್ಬ ಪೀಠಿಕೆ ಹಾಕುತ್ತಾನೆ. `ಒಂದು ಸಾವಿರ ಇದ್ರೆ ಕೊಡು’ ಅಂತಾನೆ. ಎದುರಿನವನು `ನಂತಾವ ಎಲ್ಲೈತೆ’ ಎಂದು ರಾಗ ಪಾಡುತ್ತಾನೆ. ಆಗ ಪೀಠಿಕಸ್ತ `ಏ ನಾನ್ಯಾವಾಗ್ಲಾದ್ರೂ ಮಾತು ತಪ್ಪಿದ್ದೀನ. ದುಡ್ಡಿಗೆ ಮೋಸ ಮಾಡಿದೀನ’ ಎಂದು ತನ್ನ ವಿಶ್ವಾಸಾರ್ಹ ಇತಿಹಾಸವನ್ನು ಮಾತ್ರ ಬಣ್ಣಿಸಿಕೊಳ್ಳುತ್ತಾನೆ. ಕೊನೆಗೆ `ರಾತ್ರಿ ಚೀಟಿ ಕೂಗಿ ಕೊಟ್ಬುಡ್ತೀನಿ, ಕೊಡು’ ಅಂತ ಪುಸಲಾಯಿಸುತ್ತಾನೆ. ಈ ಕೊಡುಕೊಳ್ಳುವ ಆಟ ಪ್ರತಿಭೆಗೆ ಅನುಗುಣವಾಗಿ ನಡೆಯುತ್ತದೆ. ಕೆಲವರು ಇಲ್ಲಿ ಯಶಸ್ವಿ ಆಗುತ್ತಾರೆ. ಗಿಟ್ಟದಿದ್ದವರು ಬೇರೆ ಮೂಲಗಳನ್ನು ಅರಸಿ ಓಡಾಡುತ್ತಾರೆ. ಮೊಬೈಲುಗಳು ಬಿಜಿಯಾಗುತ್ತವೆ. ಹೀಗೆ ರಾತ್ರಿ ಎಂಟರ ತನಕವೂ ಹಣದ ಕ್ರೋಢೀಕರಣ ನಡೆಯುತ್ತದೆ. ಮತ್ತೆ ಕೆಲವರು ತಮ್ಮ ಕೈಲಾಗದಿದ್ದಾಗ ಹೆಂಗಸರನ್ನು ಮುಂದೆಬಿಟ್ಟು ಕೆಲಸ ಸಾಧಿಸುತ್ತಾರೆ. ಮತ್ತೂ ಕೆಲವರು ಅಪ್ರತಿಮ ಆಶಾವಾದಿಗಳಿರುತ್ತಾರೆ. ಚೀಟಿ ಮನೆಯಲ್ಲೇ ಯಾರ ಬಳಿಯಾದರೂ ಕಾಸು ಪೀಕುವ ಉಮೇದಿನಿಂದ ಬರುತ್ತಾರೆ. ಕೆಲ ಸಲ ಯಶಸ್ವಿಯಾಗಿಬಿಡುತ್ತಾರೆ. ಮತ್ತೆ ಕೆಲ ಸಲ ದಂಡ ಕಟ್ಟಿಸಿಕೊಳ್ಳುತ್ತಾರೆ. ಈ ಸಮಯದಲ್ಲಿ ಯಾರಾದರೂ ಆಕಡೆ-ಈಕಡೆ ಪತಂಗಪಿಳ್ಳೆ ಥರ ವಿಪರೀತ ಓಡಾಡ್ತಿದಾನೆ ಅಂದ್ರೆ ಆತ ಚೀಟಿಗೆ ಕಾಸು ಹೊಂದಿಸೋಕೆ ಪರದಾಡ್ತವನೆ ಅಂತ ಕುಂತಲ್ಲೇ ಕುಂತ ಊರಗ್ಯಾನಿಗಳು ತಮ್ಮ ಕಾಣ್ಕೆ ಪ್ರದರ್ಶಿಸುತ್ತಾರೆ. ಈ ಹಣದ ಕ್ರೋಢೀಕರಣವೇ ಒಂದೊಂದು ಮ್ಯಾನೇಜ್‍ಮೆಂಟ್‍ಕತೆ ಹೇಳುತ್ತದೆ.

ಎಂಟು ಗಂಟೆಗೆ ಯಾರದೋ ಮನೆಯಲ್ಲೋ ಅಥವಾ ಶಾಲೆ ಕಾಂಪೋಂಡಿನಲ್ಲೋ ಚೀಟಿ ಆರಂಭವಾಗುತ್ತದೆ. ಕೆಲವೆಡೆ 20 ಜನರಿರುತ್ತಾರೆ. ಮತ್ತೆ ಕೆಲವೆಡೆ 30 ಜನರಿರುತ್ತಾರೆ. ಇವು ಚೀಟಿ ನಡೆಸುವವನ ಮನವೊಲಿಸುವಿಕೆ, ತಾಕತ್ತು, ಮಾತುಗಾರಿಕೆ ಇವೆಲ್ಲವನ್ನು ಒಳಗೊಂಡಿರುತ್ತವೆ. ಸುಮಾರು ಇಪ್ಪತ್ತು ಸಾವಿರದಿಂದ ಶುರುವಾಗುವ ಈ ಚೀಟಿಗಳು ಲಕ್ಷಗಳ ತನಕವೂ ಇರುತ್ತವೆ. ಇಲ್ಲಿ ಚೀಟಿ ಕಟ್ಟುವವರಾದರೂ ಎಂಥವರು? ತೀರಾ ದಿನಗೂಲಿಯವರಿಂದ ಹಿಡಿದು ಊರಿನ ಎಲ್ಲ ವೃತ್ತಿಗಳವರು ಚೀಟಿ ಕಟ್ಟುತ್ತಾರೆ. ಇವರುಗಳ ಮಧ್ಯೆಯೇ ಒಂದಿಬ್ಬರು ಸರಕಾರಿ ನೋಕರಿಯೋರು, ಒಂದಿಬ್ಬರು ವ್ಯಾಪಾರಿಗಳು ಇದ್ದೇ ಇರುತ್ತಾರೆ. ಇವರದೇನಿದ್ದರೂ ಸೇಫ್ ಝೋನ್ ಪ್ಲೇ. ಇನ್ನು ಕೆಲವರು ಭಯಂಕರ ಆರ್ಥಿಕ ತಜ್ಞರಿರುತ್ತಾರೆ. ಅವರಿಗಂತೂ ಆದಾಯದ ಮೂಲಗಳು ತೀರಾ ಕಡಿಮೆ. ಆದರೆ ಬಂಡವಾಳದ ವ್ಯಾಪ್ತಿ ಅಗಾಧ. ಊರ ತುಂಬ ನಡೆವ ಚೀಟಿಗಳಲ್ಲಿ ಇವರು ಖಾಯಂ ಸದಸ್ಯರು. ಇಲ್ಲಿ ಕಿತ್ತು ಅಲ್ಲಿ ಹಾಕಿ ಸದಾ ಚಲನಶೀಲರಾಗಿಯೇ ಇರುತ್ತಾರೆ. ಬಾಯಿಬಡುಕತನ ಇವರ ವಿಶೇಷ ಐಡೆಂಟಿಟಿ. ಈ ಐಡೆಂಟಿಟಿಯಿಂದಾಗಿಯೇ ಇವರನ್ನು ಚೀಟಿ ನಡೆಸುವಾತ ಮೇಂಟನ್ ಮಾಡುತ್ತಿರುತ್ತಾನೆ. ಇದು ಅನಿವಾರ್ಯ ಎಂದು ಚೀಟಿ ನಡೆಸುವಾತ ನಂಬಿರುತ್ತಾನೆ ಹಾಗೂ ಉಳಿದವರನ್ನು ನಂಬಿಸುತ್ತಿರುತ್ತಾನೆ.

ಸ್ಥೂಲವಾಗಿ ಚೀಟಿಗಳನ್ನು ವಿವರಿಸುವುದಾದರೆ: ಐವತ್ತು ಸಾವಿರದ ಚೀಟಿ ನಡೆಯುತ್ತದೆ ಎಂದಿಟ್ಟುಕೊಳ್ಳಿ. ಅದರಲ್ಲಿ ಹತ್ತುಸಾವಿರ ಬಿಟ್ಟು ಕೂಗಬೇಕೆಂಬ ನಿಯಮವಿರುತ್ತದೆ. ಅಂದರೆ ನಲವತ್ತು ಸಾವಿರಕ್ಕೆ ಶುರುವಾಗುವ ಈ ಪೈಪೋಟಿ ಎಲ್ಲಿಗೆ ಬೇಕಾದರೂ ಒಯ್ಯಬಲ್ಲುದು. ಉಳಿದ ಹಣವನ್ನು ಮಿಕ್ಕ ಸದಸ್ಯರಿಗೆ ಬಡ್ಡಿಚೀಟಿ ಎಂದು ಹಂಚಲಾಗುತ್ತದೆ. ಅವರವರ ಅಗತ್ಯಕ್ಕೆ ಅನುಗುಣವಾಗಿ ಸದಸ್ಯರು ಹಣ ಪಡೆಯುತ್ತಾರೆ. ಚೀಟಿಗಳು ತಂದೊಡ್ಡುವ ಪೈಪೋಟಿ ಊರಿನ ಆರೋಗ್ಯವನ್ನ ಆಗಾಗ ಕದಡುವುದೂ ಉಂಟು. ಅಲ್ಲಿ ದರ್ದು ಇರುವವನು ಚೀಟಿ ಕೂಗಲು ಬಂದಿರುತ್ತಾನೆ. ಇದು ಹೇಗೋ ವಿಷಯ ಬೇರೆಯವರಿಗೆ ತಿಳಿದಿರುತ್ತದೆ. ಎಷ್ಟೇ ಮುನ್ನೆಚ್ಚರಿಕೆಯಿದ್ದರೂ, ಪ್ರಶ್ನೆ ಪತ್ರಿಕೆ ಲೀಕ್ ಆಗುತ್ತದಲ್ಲ ಹಂಗೆ. ಅವರು ಕೂಗುವವನ ಅನಿವಾರ್ಯತೆ ಮನಗಂಡು ಈ ಚೀಟಿಯನ್ನು ಕೂಗುತ್ತಾರೆ, ಅಂದರೆ ಏರಿಸುತ್ತಾರೆ. ದರ್ದು ಇರುವವನ ನೀರಿಳಿಸುತ್ತಾರೆ. ಅವನಿಗೆ ಆದಿನ ಹಣ ಶತಾಯಗತಾಯ ಬೇಕಿರುತ್ತದೆ. ಆದ್ದರಿಂದ ಅವನು ಕೂಗದೆ ಇರಲಾರ. ಇದ ಮನಗಂಡು ಇತರರೂ ಅವನ ಅಸಹಾಯಕತೆಯನ್ನು ಹೆಚ್ಚಿಸುತ್ತಾರೆ. ಮತ್ತೆ ಕೆಲವು ಸಲ ದರ್ದು ಒಬ್ಬನಿಗಿಂತ ಹೆಚ್ಚಿನವರಿಗೆ ಇರುತ್ತದೆ. ಆಗ ಪೈಪೋಟಿ ಹೆಚ್ಚಾಗುತ್ತದೆ. ಚೀಟಿ ನಡೆಸುವವನಿಗೆ ಒಳಗೊಳಗೆ ಆನಂದವಾಗುತ್ತದೆ. ಯಾಕೆಂದರೆ ಸ್ಪರ್ಧೆ ಹೆಚ್ಚಿದಷ್ಟು ಚೀಟಿ ನಡೆಸುವವನಿಗೆ ಲಾಭವೇ ಇರುತ್ತದೆ. ಈ ಲಾಭಕ್ಕಾಗಿ ಅವನು ಕೆಲ ಒಳದಾರಿಗಳನ್ನು ಮಾಡಿಕೊಂಡಿರುತ್ತಾನೆ. ಚೀಟಿ ನಡೆಸುವಾತ ಒಬ್ಬನೇ ಆಗಿದ್ದರೂ ಹೆಂಡತಿ, ಮಗ, ಅಪ್ಪ ಹೀಗೆ ಯಾರದಾದರೂ ‘ಡಮ್ಮಿ’ ಹೆಸರುಗಳನ್ನು ಇಟ್ಟುಕೊಂಡು ಅವನು ಒಂದಕ್ಕಿಂತ ಹೆಚ್ಚು ಸದಸ್ಯತ್ವವನ್ನು ಹೊಂದಿರುತ್ತಾನೆ. ಮಿಕ್ಕ ಸದಸ್ಯರಿಗೆಲ್ಲ ಈ ಸೌಲಭ್ಯ ಇರುವುದಿಲ್ಲ. ಯಾರಿಗಾದರೂ ನಷ್ಟ ಮಾಡಬೇಕು ಎಂದಾಗ ಆ ಹೆಸರುಗಳನ್ನು ಬಳಸಿ ಚೀಟಿಯನ್ನು ಕೂಗುತ್ತಾನೆ. ಈ ಎಲ್ಲದರ ಗರಿಷ್ಠ ಲಾಭ ಪಡೆವವನು ಚೀಟಿ ನಡೆಸುವಾತ. ಇದಕ್ಕಾಗಿ ಆತ ಹೂಡುವ ತಂತ್ರ, ಮಾಡುವ ಗೂಢಚಾರಿಕೆ ಅಸಾಧಾರಣ.

ನಾನೊಂದು ಘಟನೆಯನ್ನು ಖುದ್ದು ನೋಡಿದೆ. ಉದಾಹರಣೆಗೆ ಕೆಲವು ದಿನ ಎರಡು ಕಡೆ ಚೀಟಿ ನಡೆಯುತ್ತಿರುತ್ತದೆ. ಕೆಲವರು ಎರಡೂ ಕಡೆಯೂ ಇರುತ್ತಾರೆ. ಆದಿನ ಈಶ್ವರಾಚಾರಿ ಎಂಬುವವನಿಗೆ ಹಣದ ದರ್ದು ಸಿಕ್ಕಾಪಟ್ಟೆ ಇತ್ತು. ಅವನು ರಾಮಮಂದಿರದಲ್ಲಿ ನಡೆವ ಚೀಟಿಯಲ್ಲಿ ಹಣ ಪಡೆಯಲೇಬೇಕೆಂದು ಬಂದಿದ್ದ. ಆದರೆ ಅವನ ದುರಾದೃಷ್ಟ. ಮಿಕ್ಕವರು ಅವನನ್ನು ಚೆನ್ನಾಗಿ ಹಣಿದರು. ಇದನ್ನು ಆ ಜಾಗದಲ್ಲಿದ್ದ ಗೂಢಚಾರರು ನೋಡಿಕೊಂಡರು. ಅದೇ ದಿನದ ಇನ್ನೊಂದು ಚೀಟಿಯಲ್ಲಾದರೂ ಈ ಹಣ ಕೂಗಲು ಆತ ಓಡಿದ. ಅಷ್ಟರಲ್ಲಿ ಗೂಢಚಾರರು ಮೊಬೈಲಿನ ಮೂಲಕ ಸದರಿ ಸುದ್ದಿಯನ್ನು ಅಲ್ಲಿಗೆ ವರ್ಗಾಯಿಸಿದ್ದರು. ಆ ದಿನ ಈಶ್ವರಾಚಾರಿಯ ಅಸಹಾಯಕತೆ ಹೇಳತೀರದು. ಕೊನೆಗೂ ಆತ ಹಣ ತೆಗೆದುಕೊಂಡ. ಅವನ ದರ್ದು ಅಂತಹದು. ಅವನಿಗಿದ್ದ ಅಗತ್ಯಕ್ಕಿಂತ ಅವನ ಕೈ ಸೇರಿದ ಹಣ ತೀರಾ ಕಡಿಮೆ. ಆ ಈಶ್ವರಾಚಾರಿಯನ್ನು ಹಣಿಯಲು ಯಾವುದೋ ಹಳೇ ಜಗಳ ಬಾಕಿ ಇತ್ತೆಂದು ಮಿಕ್ಕವರು ಹೇಳಿದರು. ಇದು ಎಷ್ಟು ನಿಜವೋ? ಎಷ್ಟು ಸುಳ್ಳೋ? ಅದೇನೆ ಇರಲಿ. ಒಬ್ಬ ಮನುಷ್ಯನ ಅಸಹಾಯಕತೆಯನ್ನು, ದುರುಪಯೋಗ ಪಡಿಸಿಕೊಳ್ಳೋನು ಇನ್ನೊಬ್ಬ ಮನುಷ್ಯ ಹೇಗಾದಾನು?
ಈ ಪ್ರಕರಣದಲ್ಲಿ ಇನ್ನೊಂದು ಅಂಶವಿದೆ. ಅದೇನೆಂದರೆ ಸದರಿ ಈಶ್ವರಾಚಾರಿಯು ಈ ಎರಡೂ ಜಾಗದಲ್ಲಿ ಚೀಟಿ ಕಟ್ಟುತ್ತಿರುವುದು ಸರಿಯಷ್ಟೇ. ಅದು ನಿಜವಾಗಿ ಅವನ ಅಗತ್ಯಕ್ಕಿಂತ ಈ ಎರಡೂ ಕಡೆ ಚೀಟಿ ನಡೆಸುವವರ ಒತ್ತಡವೇ ಕಾರಣ. `ಅವಂತಾವ ಕಟ್ತೀಯ, ನಂತಾವ ಕಟ್ಟಾಕಿಲ್ವ?’ ಎಂಬ ಕಾಳಜಿ ರೂಪದ ಬೆದರಿಕೆಯೇ ಆತ ಹಣ ಹೂಡಲು ಕಾರಣವಾಗಿದ್ದು. ಹೀಗೆ ಎರಡೂ ಕಡೆಯವರು ಅವನಿಂದ ಹಣ ಹೂಡುವ ತನಕ ಚೆನ್ನಾಗಿದ್ದು, ಆಮೇಲೆ ತಕರಾರುಗಳನ್ನು ಮಾಡುತ್ತಾ ಬಂದಿದ್ದರು. ಆ ಇಬ್ಬರೂ ಚೀಟಿ ನಡೆಸುವವರಲ್ಲಿ ಒಬ್ಬ ತಾಲ್ಲೂಕ್ ಮಟ್ಟದ ರಾಜಕಾರಣಿ. ಇನ್ನೊಬ್ಬ ಊರಲ್ಲಿ ಲೇವಾದೇವಿ ಮಾಡುವವನು. ಇದು ಈಶ್ವರಾಚಾರಿಯ ಇಕ್ಕಟ್ಟು.

ಊರ ತುಂಬಾ ಇಂಥ ಬಲಿಷ್ಠರೇ ಇದ್ದರೂ ಅವರೇ ಎಲ್ಲಾ ಆಗಿರುವುದಿಲ್ಲ. ಇಂಥವರ ಜೊತೆ ಹಿಂಬಾಲಕರಾಗಿದ್ದವರು ಒಂದಷ್ಟು ಅನುಭವ ಪಡೆದುಕೊಂಡ ನಂತರ ತಾವೇ ಇಂಥ ಚೀಟಿಗಳನ್ನು ಶುರು ಮಾಡುತ್ತಾರೆ. ಅವರ ನಿರೀಕ್ಷೆಗೆ ತಕ್ಕಂತೆ ಜನ ಅವರನ್ನು ಬೆಂಬಲಿಸುವುದಿಲ್ಲ. ಆದರೂ ಸಣ್ಣಪುಟ್ಟ ಮೊತ್ತದ ಚೀಟಿಗಳಿಗೆ ಕೈಹಾಕುತ್ತಾರೆ. ಇವರು ತಮ್ಮ ಮೂಲ ನಾಯಕರ ವಿರುದ್ದ ಬಂಡೆದ್ದು ಬಂದವರಾದ್ದರಿಂದ ಇವರಿಗೆ ಹಣ ಮಾಡುವುದಕ್ಕಿಂತ, ಅವರ ವಿರುದ್ದ ತಾವೂ ಬೆಳೆಯಬೇಕು ಎಂಬ ಹಠವೇ ಮುಖ್ಯ. ಹೀಗಾಗಿ ಇವರು ಆರಂಭದಲ್ಲಿ ಜನ ಸೆಳೆಯುವ ತಂತ್ರಗಳಲ್ಲಿ ಮುಳುಗಿಹೋಗುತ್ತಾರೆ. ಮುಖ್ಯವಾಗಿ ನಂಬಿಕೆ ಗಳಿಸುವತ್ತಲೇ ಗಮನ ಹರಿಸುತ್ತಾರೆ. ಹೊಸ ಅನುಭವಿಗಳು ನಡೆಸುವ ಚೀಟಿಯಲ್ಲಿ ಏನಾಗುತ್ತದೆ ಎಂಬುದಕ್ಕೆ ಇನ್ನೊಂದು ಉದಾಹರಣೆ ನೋಡೋಣ. ಹೊಸಬರು ಮೊದಮೊದಲಿಗೆ ಸಣ್ಣಪುಟ್ಟ ಆಸೆಗಳಿಂದ ತಮ್ಮ ವೃತ್ತಿಜೀವನ ಆರಂಭಿಸುತ್ತಾರೆ. ಆ ದಿನ ಚೀಟಿ ನಡೆಸುವವನಿಗೆ ವಿಪರೀತ ಕುಡಿಯಬೇಕೆಂಬ ಆಸೆಯಾಯಿತೆನ್ನಿ. ಸ್ವಂತ ದುಡ್ಡಲ್ಲಿ ಕುಡಿಯೋಕೆ ಸಂಕಟ. ಆತನೂ ಒಂದೆರಡು ಚೇಲಾಗಳನ್ನು ಮೇಂಟನ್ ಮಾಡುತ್ತಿರುತ್ತಾನೆ. ಅವರಿಗೆ ಬಡ್ಡಿಚೀಟಿ ಹಣ ಕೊಡುವಾಗ ಕರಾಮತ್ತು ಮಾಡುತ್ತಾನೆ. ಚೇಲಾನಿಗೆ 1000 ಕೊಡುವಾಗ 1500 ಕೊಡ್ತಾನೆ. ಲೆಕ್ಕದಲ್ಲಿ 1000 ಮಾತ್ರ ತೋರಿಸುತ್ತಾನೆ. ಆಮೇಲೆ ಅವರೆಲ್ಲ ಸೇರಿ ಪಾರ್ಟಿ ಮಾಡ್ಕೊತಾರೆ. ಒಂದು ನಂಬಿಕೇಲಿ ಚೀಟಿ ನಡೆತಿರುತ್ತೆ ಆದ್ರಿಂದ ನಂಬಿಕೇನ ದುರುಪಯೋಗ ಮಾಡಿಕೊಳ್ಳೋಕೆ ಯಾವ ಹಿಂಜರಿಕೆಯೂ ಇರುವುದಿಲ್ಲ.

ಎಲ್ಲ ಬರೆ ಇಂತಹ ನೆಗೆಟಿವ್ ಸ್ಟೋರಿಗಳೆ ಇರುವುದಿಲ್ಲ. ಒಂದು ವೇಳೆ ಚೀಟಿ ಸದಸ್ಯನೊಬ್ಬ ತೀರಿಕೊಂಡÀರೆ ಅಲ್ಲಿ ಮಾನವೀಯತೆ ಕೂಡ ಕಾಣಿಸಿಕೊಳ್ಳುತ್ತದೆ. ಅವನ ಮನೆಯವರಿಗೆ ಕೆಲ ರಿಯಾಯಿತಿ ಕೂಡ ಸಿಗುತ್ತವೆ. ಈ ರೀತಿಯ ಬೇರೆ ಬೇರೆ ಉದಾಹರಣೆಗಳನ್ನು ನಾನು ಈ ಊರಿನಲ್ಲಿ ನೋಡಿದ್ದೇನೆ. ಈ ಚೀಟಿಗಳಲ್ಲೂ ಒಂದು ಶ್ರೇಣೀಕರಣ ಇರುತ್ತದೆ. ಅದು ಮೊತ್ತದ ದೃಷ್ಟಿಯಿಂದ ಮಾತ್ರವೇ ಅಲ್ಲ. ಅಲ್ಲಿ ಸೇರುವ ಸದಸ್ಯರಿಂದ ಕೂಡ ಅದಕ್ಕೊಂದು ಶ್ರೇಣೀಕರಣ ಲಗತ್ತಾಗಿ ಬಿಡುತ್ತದೆ. ಈ ಚೀಟಿಗಳಲ್ಲಿ ಶೇ. 80 ಭಾಗ ಗಂಡಸರೇ ಇರುತ್ತಾರೆ. ಹೆಂಗಸರು ನೇರವಾಗಿ ಭಾಗವಹಿಸುವುದು ಕಡಿಮೆ. ಸ್ತ್ರೀ ಶಕ್ತಿ ಸಂಘಗಳಲ್ಲಿರುವವರು ಕೂಡ ಇಲ್ಲಿ ಕಾಣಸಿಗುವುದಿಲ್ಲ. ಆದರೆ ಅಗೋಚರವಾದ ಭಾಗವಹಿಸುವಿಕೆ ಇರುತ್ತದೆ. ಕೆಲವು ಧಾರ್ಮಿಕ ಚೀಟಿಗಳಿದ್ದು, ತಿರುಪತಿ ತಿಮ್ಮಪ್ಪ, ಕೇರಳದ ಅಯ್ಯಪ್ಪ, ಧರ್ಮಸ್ಥಳದ ಮಂಜಪ್ಪನವರು ದರ್ಶನಕ್ಕೆ ಭಕ್ತಾದಿಗಳನ್ನು ಕರೆಸಿಕೊಳ್ಳುತ್ತಾರೆ.

ಯಾಕೆ ಹೀಗೆ ಊರತುಂಬ ಇಂಥ ಚೀಟಿಗಳು ನಡೆಯುತ್ತದೆ? ಎಂದು ಕಾರಣ ಕೆದಕುತ್ತಾ ಹೋದರೆ ಬಹುಪಾಲು ಜನರ ಅನಿಶ್ಚಿತ ವರಮಾನ ಎದ್ದು ಕಾಣುತ್ತದೆ. ಈ ಊರಿನಲ್ಲಿ ಬ್ಯಾಂಕು, ಅಂಚೆ ಕಛೇರಿ, ಸ್ತ್ರೀ ಶಕ್ತಿ ಸಂಘದ ಉಳಿತಾಯ ಯೋಜನೆಗಳು ಇವೆ. ಆದರೆ ಇವೆಲ್ಲ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿವೆ. ಇನ್ನು ಸರ್ಕಾರದ ಸಬ್ಸಿಡಿಗಳಿಗೇ ಕಾಯುವ ಒಂದು ವರ್ಗವಿದೆ. ಇನ್ನೊಂದು ವರ್ಗ ಫಲಾನುಭವಿಗಳಾಗಲು ಬೇಕಾದ ಸರ್ಕಾರಿಸಾಕ್ಷರತೆಯಿಂದ ದೂರವಿದೆ. ಈ ವರ್ಗ ಫಲಾನುಭವಿಯಾಗಲು ಸರ್ಕಾರಿಸಾಕ್ಷರತೆಯನ್ನು ಸಾಧಿಸಿರುವ ಊರಗ್ಯಾನಿಗಳ ಆಶ್ರಯ ಬೇಕೆಬೇಕು. ಈ ಊರಗ್ಯಾನಿಗಳ ಭಕ್ಷಭೋಜ್ಯದ ವೆಚ್ಚವೋ ಅಧಿಕ.
ಹೀಗೆ ಚೀಟಿ ಕಟ್ಟುವವರ ದರ್ದು ಏನಿರುತ್ತದೆ? ಎಂದು ಪಟ್ಟಿ ಮಾಡುತ್ತಾ ಹೋದರೆ ಮನೆ ಕಟ್ಟೋದು, ಪುಣ್ಯ ಕ್ಷೇತ್ರಗಳ ದರ್ಶನ, ಮೊಬೇಲ್-ವಾಹನ -ದನಗಳ ವ್ಯಾಪಾರ, ಮದುವೆ-ಆರೋಗ್ಯ-ಶಿಕ್ಷಣದ ಬಾಬತ್ತು ಅಥವಾ ಬ್ಯಾಂಕಿನ ಸಾಲದ ತೀರುವಳಿಗೆ ಹಣ… ಹೀಗೆ ಒಬ್ಬೊಬ್ಬನದು ಒಂದೊಂದು ಕಾರಣ. ಇವು ಹೊಸದೇನಲ್ಲದಿದ್ದರೂ `ಭೂಭಾರತ’ಕ್ಕೆ ಊರು ತೆರೆದುಕೊಂಡ ಮೇಲೆ ಇವೇ ದುಬಾರಿಯಾಗಿವೆ. ಅಂದರೆ ಹೆಚ್ಚುತ್ತಿರುವ ಸಾಮಾಜಿಕ ಸಂಪರ್ಕಗಳು-ಅದು ತೋರುತ್ತಿರುವ ಸಾಧ್ಯತೆ-ಅದಕ್ಕನುಗುಣವಾಗಿ ಖರ್ಚುಗಳು ಹೆಚ್ಚುತ್ತಿವೆ. ಇದು ಸರಿ- ತಪ್ಪಿನ ಪ್ರಶ್ನೆಯಲ್ಲ. ಚೀಟಿಗಳು ಹೇಗೆ ಪ್ರಾಮುಖ್ಯತೆ ಪಡೆಯುತ್ತಿವೆ ಎಂಬುದಕ್ಕೆ ದಿಕ್ಸೂಚಿಯಾಗಿದೆ.

2012ರ ಆಗಸ್ಟ್ ಪತ್ರಿಕಾ ವರದಿಗಳ ಪ್ರಕಾರ ಪ್ರತಿ ಗ್ರಾಮೀಣನ ದಿನವಹಿ ತಲಾದಾಯ 18ರೂ. ಒಬ್ಬನ ಆದಾಯ 18 ರೂ ಆದರೆ, ಅವನ ಅಗತ್ಯಗಳಿಗೆ ಕಾಸು ಹೇಗೆ ಹೊಂದಿಸುತ್ತಾನೆ? ಮಳೆ-ಬೆಳೆ ಎನ್ನುವುದು ಹಳ್ಳಿಗರ ಒಂದು ಅದಮ್ಯ ಆಶಾಭಾವವೇ ಹೊರತು ಅದು ಅವರ ವಾಸ್ತವದ ಬಿಡುಗಡೆಗೆ ಎಷ್ಟು ಉಪಯುಕ್ತವಾಗಿದೆÉ ಎಂಬುದನ್ನು ಖಚಿತವಾಗಿ ಹೇಳಲಾಗದು. ಇನ್ನುಳಿದಂತೆ ನಾನು ಕಂಡಂತೆ ಈ ಊರಿನಲ್ಲಿ ಸೀಮೆಹಸುಗಳ ಸಂಖ್ಯೆ ಜಾಸ್ತಿ ಆಗಲು ನಿಶ್ಚಿತ ವರಮಾನದ ಕನಸೇ ಕಾರಣವಾಗಿದೆ. ಹೀಗಾಗಿ ಸಾಲ ಮಾಡಿಯಾದರೂ ಜನ ಹಸು ಸಾಕುತ್ತಾರೆ. ಅದರ ಆದಾಯದಿಂದ ಮನೆ ತೂಗಿಸಲು ಪ್ರಯತ್ನ ಪಡುತ್ತಾರೆ. ಹಾಗೆ ಬಂದ ಒಂದು ಆದಾಯದ ಪಾಲನ್ನು ಚೀಟಿಗೆ ತೊಡಗಿಸಿ ತಮ್ಮ ಕನಸನ್ನು ಇನ್ನಷ್ಟು ಜೀವಂತಗೊಳಿಸುತ್ತಾರೆ. ಬ್ಯಾಂಕಿಗೆ ಹಣ ಕಟ್ಟುವುದಕ್ಕಿಂತ ಚೀಟಿಗೆ ಹಣ ಹೂಡುವುದು ಅವರಿಗೆ ಆಪ್ತವಾಗಿದೆ. ಜೊತೆಗೆ ಹಣದ ಮೊಬಿಲಿಟಿ ಈ ಚೀಟಿಗಳ ಮುಖ್ಯ ಅಂಶ. ಈ ಮೊಬಿಲಿಟಿಯೇ ಅವರ ಹತ್ತಾರು ಆಸೆಗೂ, ಅಗತ್ಯಕ್ಕೂ ದಾರಿ ತೋರುವ ಭರವಸೆಯನ್ನು ಹುಟ್ಟಿಸುತ್ತಲೇ ಹೋಗುತ್ತದೆ. ಅವರಿಗೆ ಹೇಗೋ ಒಂದು ಚಲನೆ ಬೇಕಾಗಿದೆ. ಆ ಚಲನೆಯನ್ನು ಈ ಚೀಟಿಗಳು ತಂದುಕೊಡುತ್ತವೆ. ಇದು ಚೀಟಿಗಳ ಹೊರಮುಖ.

ಚೀಟಿಗಳ ಒಳಮುಖ ಇನ್ನೊಂದಿದೆ: ಒಂದು ವೇಳೆ ಈ ಊರಿನವರಿಗೆಲ್ಲ ನಿಶ್ಚಿತವಾದ ವರಮಾನ ಸಿಕ್ಕಿ ಬಿಡುಗಡೆಗೊಂಡರೆ ಚೀಟಿಗಳು ನಿಂತು ಬಿಡುತ್ತವೆಯೇ? ಗೊತ್ತಿಲ್ಲ…. ಈ ಸಮಸ್ಯೆ ಅಷ್ಟು ಸರಳವೆಂದು ಅನಿಸುವುದಿಲ್ಲ. ಈ ಚೀಟಿಗಳು ಕಾನೂನುಬಾಹಿರವಲ್ಲವೇ ಎಂಬ ಪ್ರಶ್ನೆ ಹಾಕಿದರೆ, ಕ್ರಿಕೆಟ್ಟು- ಎಲೆಕ್ಷನ್ನುಗಳಲ್ಲಿ ಕೋಟ್ಯಂತರ ಬೆಟ್ಟಿಂಗ್ ನಡೆಯುತ್ತದಲ್ಲ ಅದು ಮಾನ್ಯವೇ ಎಂಬ ಉತ್ತರರೂಪದ ಪ್ರಶ್ನೆ ವಾಪಸ್ ಬರುತ್ತದೆ. ಏಕೆಂದರೆ ಈಗ್ಗೆ 5 ವರ್ಷಗಳ ಹಿಂದೆ ಈ ಊರಿನಲ್ಲಿ ತಿಂಗಳಿಗೆ ಎಂಟು ಚೀಟಿಗಳು ನಡೆಯುತ್ತಿದ್ದವಂತೆ. ಈಗ ಅವುಗಳ ಸಂಖ್ಯೆ ತಿಂಗಳಿಗೆ 28 ಆಗಿದೆ. ಹೆಚ್ಚೂ ಕಡಿಮೆ ದಿನಕ್ಕೊಂದು ಸರಾಸರಿ ಎನ್ನಬಹುದಾದ ಈ ಚೀಟಿಗಳ ವಹಿವಾಟು ತಿಂಗಳಿಗೆ ಕನಿಷ್ಠ 15 ಲಕ್ಷ.

ಇದು ಊರು ರೂಪಾಂತರಗೊಳ್ಳುತ್ತಿರುವುದರ ದ್ಯೋತಕವಾಗಿದೆ. ಇನ್ನೊಂದು ಕುತೂಹಲಕಾರಿ ಅಂಶವಿದೆ. ಮಳೆ ಬೀಳುವುದು ಕಡಿಮೆ ಆದಷ್ಟೂ ಚೀಟಿಗಳು ಹೆಚ್ಚುತ್ತಾ ಹೋಗುತ್ತವೆ… ಈ ಚೀಟಿಗಳನ್ನು ನಡೆಸುವರಾದರೂ ಯಾರು? ಊರ ಪ್ರಬಲ ಜಾತಿಗಳು, ವ್ಯಾಪಾರಿಗಳು, ಲೋಕಲ್ ಪುಢಾರಿಗಳು ಅಥವ ಸರ್ಕಾರಿ ನೋಕರಿಯೋರು ಮುಖ್ಯವಾಗಿ ಮೇಷ್ಟ್ರುಗಳು! (ನಗರಗಳಲ್ಲೂ ಸರ್ಕಾರಿ ನೋಕರಿಯೋರು ಇದನ್ನೆ ಈಚೆಗೆ ವಿಪರೀತ ಮಾಡುವರೆಂದು ಕೇಳಿದ್ದೇನೆ,) ಇವರ ಬೇರುಗಳು ಹಳ್ಳಿಯಲ್ಲಿದ್ದರೂ, ವ್ಯಾಪ್ತಿಯ ರೆಂಬೆ-ಕೊಂಬೆಗಳು ಎಲ್ಲೆಲ್ಲೋ ಹರಡಿಕೊಂಡಿವೆ. ಈ ರೆಂಬೆ-ಕೊಂಬೆಗಳಿಗೆ ಯಾವ್ಯಾವುದೋ ಗಾಳಿ-ಬೆಳಕು ಸ್ಪರ್ಶಿಸುತ್ತಿದೆ. ಇದರಿಂದಾಗಿ `ಹೊಸ ಕನಸುಗಳು’ ಹುಟ್ಟುತ್ತಿವೆÉ. ಈ ಹೊಸ ಕನಸುಗಳು, ಹೊಸ ಭರವಸೆಗಳನ್ನು ಕೊಡುತ್ತಿವೆ. ಈ ಕನಸು ಮತ್ತು ಭರವಸೆಗಳು ಬಂಡವಾಳವನ್ನು ಬೇಡುತ್ತವೆ. ಈ ಬಂಡವಾಳಕ್ಕಾಗಿ ಚೀಟಿಗಳು ನಡೆಯಲೇಬೇಕಿದೆ. ಚೀಟಿಗಳು ಬಂಡವಾಳದ ಮೂಲಗಳಾಗುವ ಜೊತೆಗೆ ಜನಸಂಪರ್ಕದ ಮೂಲಗಳಾಗಿಯೂ ಮುಖ್ಯವಾಗಿವೆ. ತಿಂಗಳಲ್ಲಿ ಮೂರ್ನಾಕು ಚೀಟಿ ನಡೆಸುವಾತ ಈ ಕಾಲದ ಮಾನ್ಯನು. ಹೀಗಾಗಿ ಈ ಮಾನ್ಯರು ಕನಸುಗಳ ಬಿಕರಿಗಾಗಿ ಚೀಟಿಗಳನ್ನು ಬೆಳೆಸುತ್ತಲೇ ಹೋಗುತ್ತಾರೆ….

ಒಟ್ಟಾರೆ ತಾತ್ಪರ್ಯ ಏನು? ಯಾವ ದುಡಿಮೆಯೂ ಯಾರಿಗೂ ಸಾಲುತ್ತಿಲ್ಲ. ಇದು ಏಕೆ ಹೀಗಾಗುತ್ತಿದೆ? ಇವೆಲ್ಲಕ್ಕಿಂತ ಇದನ್ನು ಅರ್ಥ ಮಾಡಿಕೊಳ್ಳುವ ಬಗೆಯಾದರೂ ಹೇಗೆ ಬಾಪೂ?

Leave a Reply

Your email address will not be published.