ಉರಿಗೆ ಉರಿ ಔಷಧವಲ್ಲ

-ಡಾ. ರಾಜೇಗೌಡ ಹೊಸಹಳ್ಳಿ

‘ಪಾಕಿಸ್ಥಾನ ತನ್ನ ಮಾರ್ಗಗಳನ್ನು ತಿದ್ದಿಕೊಳ್ಳದಿದ್ದರೆ ಉಭಯ ರಾಷ್ಟ್ರಗಳ ನಡುವಣ ಯುದ್ಧ ಸಾಧ್ಯವೆಂಬ ಗಾಂಧೀಜಿಯವರ ಅಭಿಪ್ರಾಯ ದೊಡ್ಡ ಬಿರುಗಾಳಿಯನ್ನು ಎಬ್ಬಿಸಿತು’ ಈ ಮಾತು ಶಸ್ತ್ರಾಸ್ತ್ರಗಳನ್ನು ಸೈನ್ಯಗಳನ್ನು ಹೊಂದಿದ್ದ ಉಭಯ ರಾಷ್ಟ್ರಗಳನ್ನು ಕುರಿತವಾಗಿದ್ದವು. ಮೌಂಟ್ ಬ್ಯಾಟನ್ ಅವರು ಈಗ ಕಸಿವಿಸಿಗೊಂಡಿದ್ದರು. ಅದು ಗಾಂಧೀಜಿ ಅಭಿಪ್ರಾಯದಲ್ಲಿ ಉಷ್ಟ್ರ ಪಕ್ಷಿಯಂತೆ ಮರಳಿನಲ್ಲಿ ತಲೆ ಹೂಳುವುದರಿಂದ ಪ್ರಯೋಜನವಿಲ್ಲವೆಂಬುದಾಗಿತ್ತು. ಜನರಲ್ ಕಾರಿಯಪ್ಪನವರು ಗಾಂಧೀಜಿ ಬಳಿ ಬಂದು ನೆಲದ ಮೇಲೆ ಕುಳಿತು ಚರ್ಚಿಸಿದ್ದರು. ‘ಹಿಂಸೆಯ ಎದುರು ಅಸಹಾಯಕತಾಭಾವ ತಾಳುವುದು ಅಹಿಂಸೆಯಲ್ಲ, ಹೇಡಿತನ. ಹೇಡಿತನ ಮತ್ತು ಅಹಿಂಸೆಗಳ ನಡುವೆ ತಾಳಮೇಳವಿರಬಾರದು’ ಎಂದು ಗಾಂಧೀಜಿ ಹರಿಜನ ಪತ್ರಿಕೆಯಲ್ಲಿ 1940ರಲ್ಲೆ ಹಿಂಸೆ ಅಹಿಂಸೆ ಕುರಿತು ತಮ್ಮಭಿಪ್ರಾಯ ಸೂಚಿಸಿದ್ದರು.

ಅಂದರೇನಾಯಿತು? ಹಿಂಸೆ ಅಹಿಂಸೆಯೊಳು ಅಹಿಂಸೆ ಹಿಂಸೆಯೊಳು ತನ್ನ ಸ್ಥಾನವನ್ನು ನಿಗದಿಪಡಿಸಿಕೊಳ್ಳುತ್ತಿರುತ್ತದೆ. ಇಂದು ಭಾರತೀಯ ಸೈನ್ಯ ನೆಲೆಯನ್ನು ಪಾಕಿಸ್ಥಾನದ ಮಿಲಿಟರಿ ಮೂಗಿನ ನೇರದಲ್ಲೆ ಉಗ್ರರು ಧ್ವಂಸ ಮಾಡಿದ್ದಾರೆ. ಅದು ‘ಉರಿ’ ಎಂಬ ಸ್ಥಳ. ಇಂದು ಉಭಯ ದೇಶಗಳಲ್ಲಿ ಯುದ್ಧ ಪ್ರಾರಂಭವಾಯಿತೇ! ಎನ್ನುವಷ್ಟರ ಮಟ್ಟಿಗೆ ಉರಿಸುತ್ತಿದೆ. ಇಂದಿನ ಪ್ರಧಾನಿ ಉರಿದು ಬೀಳುತ್ತಿದ್ದಾರೆ. ‘ನೆತ್ತರು ನೀರು ಜತೆಯಾಗಿ ಹರಿಯದು’ ಎಂದು ಸಂದೇಶ ಕೂಡ ರವಾನಿಸಿದ್ದಾರೆ. ಭಾರತೀಯ ಸೈನ್ಯ ನಡುರಾತ್ರಿಯಲ್ಲಿ ಗಡಿ ಧಾಟಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಿ ವೀರತ್ವ ತೋರಿಸಿದೆ. ಪಾಕಿಸ್ಥಾನದಲ್ಲಿ ತುರ್ತು ಮಾತುಕತೆ ಈ ದೇಶದಲ್ಲೂ ತುರ್ತುಸಭೆ ಆಗುತ್ತಿವೆ. ಇವೆಲ್ಲವೂ ದಾಯಾದಿ ಮತ್ಸರದ ಬೀಜಗಳೆಂಬುದನ್ನು ಮರೆಯಬಾರದು. ‘ನೀರಿಗಿಂತ ರಕ್ತದಟ್ಟ’ ಎಂಬಂತೆ ಕಾಶ್ಮೀರದಲ್ಲಿ ಸೇನೆಯ ಹಿಂಸಾಚಾರಕ್ಕೆ 108 ಜನ ಮೃತಪಟ್ಟು 150 ಮಂದಿ ಕಣ್ಣು ಕಳೆದುಕೊಂಡಿರುವ ರಕ್ತ ಬಾಂಧವರ ಕೆಲಸವೆಂದು ‘ಉರಿ’ ಘಟನೆ ಕುರಿತು ಅದರ ಹಿನ್ನೆಲೆಗೆ ಪಾಕ್ ಪ್ರಧಾನಿ ಮೊನ್ನೆ ಹೇಳಿಕೆ ನೀಡಿದ್ದಾರೆ. ಇದನ್ನು ಸಂಪೂರ್ಣ ಅಲ್ಲಗಳೆಯುವಂತಿಲ್ಲ. ರಕ್ಷಣಾ ಮಂತ್ರಿಗಳೇ ಪೆಲೆಟ್ ಗುಂಡುಗಳನ್ನು ಬದಲಾಯಿಸುವುದಾಗಿ ಹೇಳಿದ್ದುಂಟು. ಆ ದೇಶ ಉಗ್ರರ ಅಂಗೈ ಮೇಲಿದೆ. ಈ ದೇಶ ವ್ಯಾಪಾರಿ ಉಗ್ರರ ಅಂಗೈ ಮೇಲಿದೆ. ಇದೆಲ್ಲದರ ನಡುವೆ ರಕ್ತದೊಡನೆ ನೀರು ಸಮೀಕರಿಸಿ; ಎರಡೂ ದೇಶಗಳ ನೀರು ನಂಬಿದ ಜನರನ್ನು ರಕ್ತಹರಿಸುವ ಯೋಧರೊಡನೆ ಸಮೀಕರಿಸಿದ್ದು ಅವಾಸ್ತವವಲ್ಲವೆ?

baaaaಪಂಪನಂತಹ ಮಹಾಕವಿಗಳು ನೀಡುವ ದೃಷ್ಟಿಯುದ್ಧ, ಮಲ್ಲಯುದ್ಧ, ಜಲಯುದ್ಧಗಳೆಂಬವು ಪ್ರತಿಮಾ ರೂಪಕಗಳು. ಬಾಹುಬಲಿಯನ್ನು ಚಕ್ರವರ್ತಿತನದಿಂದ ನಿರ್ವಾಣಕ್ಕೊಯ್ದವು. ಬುದ್ಧನನ್ನು ಜಲಯುದ್ಧ ನಿವಾರಣೆಯಲ್ಲಿ ಗುರುತನಕ್ಕೊಯ್ದವು. ಗಾಂಧೀಜಿಯನ್ನು ಮುಷ್ಠಿಗೊಡ್ಡಿ ಜೀವ ಪಡೆದವು. ವೈಶಂಪಾಯನ ಸರೋವರ ಕೌರವನನ್ನು ಕುರುಕ್ಷೇತ್ರದಲ್ಲಿ ಕೊನೆಯಾಗಿಸಿದ ನೀರದಡ. ಆಗ ಹಕ್ಕಿ ಪಕ್ಷಿಗಳು ಅಯ್ಯೊ ಧುರ್ಯೋಧನ! ನೀನು ನೀರಿನೊಳಕ್ಕೆ ಬರಬೇಡ ನಮ್ಮನ್ನು ಬದುಕಲು ಬಿಡು ಎಂದು ಬೇಡಿಕೊಂಡಿದ್ದವಂತೆ. ಅಂದರೆ ಅಂದರೆ ಯುದ್ಧ ಸೀಮೆಗೂ ನೀರ ಸೀಮೆಗೂ ಉತ್ತರ ದಕ್ಷಿಣದ ಅಂತರ. ಅಂತೆಯೇ 1960ರ ಸಿಂಧೂ ನದಿ ಹಕ್ಕುದಾರಿಕೆ ಭಾರತಕ್ಕೆ ಶೇ.20 ಪಾಕ್‍ಗೆ ಶೇ. 80 ಎಂದಿರುವುದನ್ನು ಮರುಪರಿಶೀಲನೆಗೊಡ್ಡಿ ನೀರ ನಿಲುವನ್ನು ರಕ್ತ ನಿಲುಗಡೆಗೆ ಪ್ರಧಾನಿಯವರು ಒಡ್ಡುತ್ತಿದ್ದಾರೆ. ಸಿಂಧೂ ನದಿಗೆ ಮೂರು ದೇಶಗಳ ಪಥಗಳುಂಟು. ಚೈನಾದಲ್ಲಿ (ಟಿಬೆಟ್) ಹುಟ್ಟಿ ಯಾವ ದೇಶದ ಗಡಿ ಹಂಗಿಲ್ಲದೆ ಕಾಶ್ಮೀರಕ್ಕೆ ನುಗ್ಗಿ ಅಲ್ಲಿಂದ ಪಾಕಿಸ್ಥಾನದಲ್ಲಿ ಬೋರ್ಗರೆಯುತ್ತಾಳೆ. ಹರಿವ ನೀರಿಗೆ ದೊಣ್ಣೆಪ್ಪನ ಇಚ್ಛೆಯೆ? ಎಂದು ಆಕೆ ಯಾರಿಗೂ ಬಗ್ಗುವವಳಲ್ಲ. ಜೇಲಂ, ಚೀನಾಬ್, ರಾವಿ, ಬಿಯಾಸ್, ಸೆಟ್ಲೆಜ್ ಹೀಗೆ ಅಕ್ಕತಂಗಿಯರೊಡಗೂಡಿ ಹಿಮವತ್‍ರಾಯನ ಕೃಪಾಶೀರ್ವಾದದಲ್ಲಿ ಭೂಗೋಳ ಮೀರುತ್ತಾಳೆ. ಭೂಮಿ ಮುನಿದರೆ ಆಕಾಶ ಕೆನೆದರೆ ಸಿಡಿಲು ಚಾಲನೆ ನೀಡಿದರೆ ಹುಲುಮಾನವರ ಕಟ್ಟುನಿಟ್ಟುಗಳನ್ನೆಲ್ಲಾ ಕಟ್ಟೊಡೆದು ‘ನೀರೆ’ ನೀರಾಗಿ ಸಾಗರ ಸೇರುತ್ತಾಳೆ.

ಈ ಅರಿವು ಎರಡೂ ದೇಶಗಳಿಗಿರಬೇಕು. ನೀರು ಈಗ ಅಂತರ ರಾಜ್ಯ ಅಂತರ ದೇಶೀ ಸಮಸ್ಯೆ. ಪಂಚರು ಕುಳಿತು ಬಗೆಹರಿಸುವ ಸಮಸ್ಯೆ. ಗಡಿಯ ಉರಿ ಅಲ್ಲಿ ಕಾವೇರಿ ಉರಿ ಇಲ್ಲಿ ಉರಿಯುತ್ತಿರುವ ಸಮಸ್ಯೆಗಳು ಹೌದು. ಇಂಥಾದಕ್ಕೆ ಪುಳ್ಳೆ ಉರಿ ಹಾಕುವ ಮಾಧ್ಯಮಗಳು ದೊಡ್ಡ ಉರಿ ಏಳಿಸುವ ರಾಜಕೀಯ ಪಕ್ಷಗಳು ಕಾಲದ ಎಚ್ಚರದಲ್ಲಿರಬೇಕು. ಪಾಕ್ ಆಕ್ರಮಿತ ಕಾಶ್ಮೀರವೀಗ ಚೈನಾ ಸಾಂಗತ್ಯದಲ್ಲಿ 30000 ಕಿ.ಮೀ. ಹೆದ್ದಾರಿ ಸೃಷ್ಟಿಸಿಕೊಳ್ಳುತ್ತಿದೆ. ಮಂಗನ ಕೈಲಿ ಮಾಣಿಕ್ಯವೆಂಬಂತೆ ಪಾಕ್ ಅಣುಶಕ್ತಿ ಅಂಗೈ ಮೇಲಿಟ್ಟುಕೊಂಡಿದೆ. ಆ ದೇಶವೀಗ ಉಗ್ರರು ಆಡಿಸುವ ಗಾಳಿಪಟ. ಜಗತ್ತಿನ ದೊಡ್ಡಣ್ಣಂದಿರು ಆನಂದಿಸುವ ನೋಡುಪಟ. ಇಂಡಸ್ ವಾಟರ್ ಟ್ರೀಟಿ’  ಎಂಬುದು ಮೋಸ್ಟ್ ಫಾರ್‍ವರ್ಡ್ ನೇಷನ್ ‘ ಎಂಬಿವುಗಳ ಕೂಸು. ಹೀಗಿರುವಾಗ ನೀರಿನ ವಿಚಾರದಲ್ಲಿ ನಾಜೂಕಿನ ನಡೆಯುರಬೇಕು. ಜಗತ್ತಿನಲ್ಲಿ ಮೂರನೇ ಮಹಾಯುದ್ಧ ನೀರಿನಿಂದಾಗುತ್ತದೆ ಎಂಬ ಎಚ್ಚರದ ಕಡೆ ಗಮನವಿರಬೇಕು. ಇದನ್ನೆ ಹಿಲರಿ ಕ್ಲಿಂಟನ್ ಹೇಳುತ್ತಿರುವುದು.

ಕಾಶ್ಮೀರ ಒಂದು ಸ್ವರ್ಗದ ತುಂಡು ಎಂದು ರವೀಂದ್ರರು ಸಂಭ್ರಮಪಟ್ಟಿದ್ದರು. ಗಾಂಧೀಜಿ ಇದನ್ನು ಅನುಮೋದಿಸುತ್ತಲೇ ಆ ಮೂರ್ಖರಾಜ ಮಾಡಿಹೋದ ಗಾಯದ ಹುಣ್ಣು ಎಂದು ಕೋಪಗೊಂಡಿದ್ದರು. ಅಲ್ಲಿ ಅದೇ ರಾಕ್ಷಸ ಬೀಜಗಳು ವೃದ್ಧಿಯಾಗಿವೆ. ವೃದ್ಧಿಯಾಗುತ್ತವೆ. ಅದಕ್ಕಾಗಿ ಹುನಾರದ ನಡಿಗೆ ಬೇಕು. ಮುಳ್ಳಿನ ಬೇಲಿ ಮೇಲಿನ ಬಟ್ಟೆ ಎತ್ತಿಕೊಳ್ಳುವಾಗಿನ ಹುನಾರದ ರೀತಿಯದು. ಆಳುವ ಪಕ್ಷವೀಗ ಮೋದಿಯವರನ್ನು ತಿಲಕರಿಗೆ ಹೋಲಿಸುತ್ತಿದೆ. ಮಾಳವೀಯರ ದೇಶಭಕ್ತಿ ಕುರಿತು ಭೂತದ ಸಂಭ್ರಮದಲ್ಲಿದೆ. ಅದೇ ಕನ್ನಡಕದಲ್ಲಿ ನೆರೆ ದೇಶವನ್ನು ನೋಡುತ್ತಿದೆ. ಅದು ಇದರ ತುಂಡು ಎಂಬುದನ್ನು ಮರೆತು ಬಿಡುತ್ತದೆ. ಸಿರಿಯಾದಲ್ಲಿರಲಿ ಪಾಕಿನೊಳಗಿರಲಿ ಜಗತ್ತಿನ ದೊಡ್ಡಣ್ಣಂದಿರ ಠಸ್ಸೆ ಹತಾರಗಳಿರುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅದನ್ನೆ ಗಾಂಧೀಜಿ ಹೇಳುತ್ತಾರೆ. : ‘ಹಸಿ ಗಡಿಗೆ ಒಂದಕ್ಕಲ್ಲ ಮತ್ತೊಂದಕ್ಕೆ ತಗಲಿ ಒಡೆದು ಹೋಗುತ್ತದೆ. ಯಾವುದಕ್ಕೂ ತಗಲದಂತೆ ಗಡಿಗೆಯನ್ನು ದೂರ ಇಡುವುದಲ್ಲ ಉಪಾಯ; ಒಡೆಯದಂತೆ ಗಡಿಗೆಯನ್ನು ಸುಡುವುದು’ ಹೌದು ಈ ಸುಟ್ಟ ಗಡಿಗೆಗಳು ಇಟ್ಟಿಗೆಗಳು ಸಿಂಧೂ ಸಂಸ್ಕøತಿಯನ್ನು ಅಲ್ಲಿ ಇಲ್ಲಿ ಪ್ರತಿನಿಧಿಸುತ್ತಿವೆ. ಗಡಿಗೆಯೀಚೆ ಬಿದ್ದ ಬೀಜ ಎರಡೂ ದೇಶಗಳಲ್ಲಿ ಬೆಳೆದು ನಿಂತಿವೆ. ಬಾಬ್ರಿ, ಗೋದ್ರಾ, ಮುಂಬೈ, ಊನ, ದಾದ್ರಿ, ಇವೆಲ್ಲವೂ ಹುಚ್ಚು ಅಪವ್ಯಯಗಳು. ಮಲಗಿದ್ದ ನಾಯಿ ಮರಿ ತುಳಿದ, ನಾಗರಹಾವಿನ ಬಾಲ ತುಳಿವ ಕೀಟಲೆಗಳು. ಅವು ಮಲಗಿರುವ ಅಣುವಿನೊಡನೆ ಕಿಡಿಕಾರಬಾರದು. ಶೀತಲ ಸಮರದ ಒಳಗುದಿಗಳಾಗಬಾರದು. ಕ್ಯಾಲಿಫೋರ್ನಿಯಾ ಲೋಟದ ನೀರಿಗೆ ಲೆಕ್ಕ ಹಾಕುತ್ತಿದೆ.

Narendra_Modiಈ ದೇಶದ ಸರ್ವೋಚ್ಛ ನ್ಯಾಯಾಲಯ ಕಡತಗಳಲ್ಲಿ ನೀರಹನಿ ಲೆಕ್ಕ ಹಾಕುತ್ತಿದೆ. ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಹಚ್ಚುತ್ತಿದೆ. ಹೀಗಿರುವಾಗ ದೇಶದ ಪ್ರಧಾನಿ ಸಿಂಧೂ ಆರ್ಭಟವನ್ನು ಕೆನೆಯುವ ಕುದುರೆಯನ್ನು ಪಳಗಿಸಿದಂತೆ ಪಳಗಿಸಿಕೊಳ್ಳಬೇಕು. ನೆಲಯುದ್ಧ, ಜಲಯುದ್ಧಗಳಿಗೆ ಹುಲುಮಾನವ ಕಾರಣನಾಗಬಹುದು. ಅದನ್ನು ಮೀರಿದ ಇಂದ್ರಜಿತುವಿನ ಮಾಯಾ ಯುದ್ಧಗಳಿವೆ. ಅವು ನರ ರಕ್ಕಸರ ಅಂಗೈ ಮೇಲೆ ಹೊಗೆಯಾಡುತ್ತಿವೆ. ಇತ್ತ ಶ್ರೀರಾಮ ಅತ್ತ ರಹೀಮ ಗಾಂಧಿ ಮತ್ತು ಗಡಿನಾಡು ಗಾಂಧಿಗಳ ನಾಮೋಚ್ಚಾರದಲ್ಲಿ ಕಿಡಿ ಶಮನ ಬೀಜಗಳಾಗಬೇಕು. ಈ ಆಲಿಕೆ ಸಿಂಹಾಸನ ಹಿಡಿದವರ ಕಿವಿ ರಂಧ್ರದೆಚ್ಚರದಲ್ಲಿರಬೇಕು. ನೆಲಜಲವೆಂದರೆ ಅಣುಸ್ಫೋಟದ ಕೋಟಿ ಕೋಟಿ ವರುಷಗಳ ಅವಳಿ ಸ್ವರೂಪ. ಆ ಪಂಚಭೂತಗಳ ಕಾಪಾಡುವಿಕೆ ಈಗಿನ ತುರ್ತು. ಸಿಂಧೂ ಅವಳಿ ದೇಶಗಳಿಗೆ ತಾಯಿ. ಯಾರು ಕರುಳು ಬಗೆದರೂ ಅಯ್ಯೋ ಮಗನೇ! ಎಂದಾಳು. ಅದೇ ಮಾತು ಕಾವೇರಿಗೂ ಇಲ್ಲಿ ಅನ್ವಯಿಸುತ್ತದೆ. ವಿಶ್ವಮಾನತ್ವವೆಂದರೆ ನೀರಿಗಿಂತ ರಕ್ತ ತೆಳಪಾಗುವಿಕೆ. ಉರಿಗೆ ಉರಿ ಔಷಧವಲ್ಲ. ಹಾಗೆ ಗೆದ್ದ ಯಾವ ಭೂಪನೂ ಜಗದ ಮೇಲೆ ಇಲ್ಲ. ಅದನ್ನೆ “ಕೌರವ ಬಿದ್ದನೆ? ಭೀಮನು ಗೆದ್ದನೆ?” ಎಂದು ಕುವೆಂಪು ಹೇಳಿರುವುದು.

 

Leave a Reply

Your email address will not be published.