ಉದ್ಯೋಗ ಖಾತ್ರಿ ಕತೆ-1: ಹಾಳಾದ ಉದ್ಯೋಗ ಖಾತ್ರಿ ಕೆಲ್ಸಕ್ಕೆ ಹೋಗಿ ಕೋರ್ಟಿಗೆ ತಿರುಗ್ಯಾಡದು ಬಂದಾದ

-ಭೀಮೇಶ್ ಮಾಚಕನಹಳ್ಳಿ

udyogakaatri ankanakke

ಗ್ರಾಮೀಣ ಪ್ರದೇಶದಲ್ಲಿ ಕೆಲಸವಿಲ್ಲದವರಿಗೆ ಕೆಲಸ ನೀಡಲು ಕೇಂದ್ರ ಸರಕಾರ ಆರಂಭಿಸಿದ ಉದ್ಯೋಗ ಖಾತ್ರಿ ಯೋಜನೆ ರಾಜಕಾರಣಿಗಳ, ಅಧಿಕಾರಶಾಹಿಗಳ ಅಸೂಕ್ಷ್ಮ ಧೋರಣೆಯಿಂದಾಗಿ ಹಳ್ಳ ಹಿಡಿದಿರುವುದು ಎಲ್ಲರಿಗೂ ತಿಳಿದಿದೆ. ಈ ಬಗೆಗೆ ಅಧ್ಯಯನ ಕೈಗೊಂಡ ಭೀಮೇಶ್ ಮಾಚಕನಹಳ್ಳಿಯವರು ಈ ಬಗೆಗೆ ಜನರನ್ನು ಸಂದರ್ಶಿಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಇವು ನಮ್ಮ ವ್ಯವಸ್ಥೆಯ ಕೆಟ್ಟ ಮನಸ್ಥಿಯನ್ನು ತೆರೆದಿಡುತ್ತವೆ. ಇವು ಜನರ ಕಣ್ಣೋಟಗಳಂತಿದ್ದು ಸರಣಿಯಾಗಿ ಕೆಲವು ಕಾಲ ಇಲ್ಲಿ ಬಿತ್ತರಗೊಳ್ಳಲಿವೆ.

ಹಾಳಾದ ಉದ್ಯೋಗ ಖಾತ್ರಿ ಕೆಲ್ಸಕ್ಕೆ ಹೋಗಿ ಕೋರ್ಟಿಗೆ ತಿರುಗ್ಯಾಡದು ಬಂದಾದ
ತಾಹಿರಾ ಬೇಗಂ, ಬೂದಗುಂಪ, ಕೊಪ್ಪಳ ತಾಲೂಕು.

`ನೋಡ್ರಿ ಸಾಬ್ರೆ ಈ ಹಾಳಾದ ಉದ್ಯೋಗ ಖಾತ್ರಿ ಕೆಲ್ಸಕ್ಕೆ ಹೋಗಿ ಕೋರ್ಟಿಗೆ ತಿರುಗ್ಯಾಡದು ಬಂದಾದ. ಮತ್ತೆ ನಮ್ ಊರಾಗ ನಮ್ಮನ್ನ ಜಾತಿಯಿಂದ ಬ್ಯಾರೆ ಇಟ್ಟಾರ. ಸಾಬ್ರೆ ನಾವು ತುಂಬಾ ಬಡವುರು ಐದೀವಿ. ಹಂಗಾಗಿ ದುಡಿಬೇಕು ತಿನ್ನಬೇಕು ಇಲ್ಲಂದ್ರೆ ಒಂದು ದಿನ ಮನ್ಯಾಗ ಕುಂತ್ರ ಜೀವ್ನ ನಡ್ಯಾದಿಲ್ಲ. ಹಂಗಾಗಿ ನಿಮ್ಮಂತ ತಿಳಿದವರು ಹೇಳಿದ್ರು ಸರಕಾರ ಬಡಜನಕ್ಕಾಗಿ ಉದ್ಯೋಗ ಖಾತ್ರಿ ಯೋಜನೆಯಾಗ ಪಂಚಾಯ್ತಿ ಕಡೆಯಿಂದ ಒಂದು ವರ್ಷದಾಗ ನೂರು ದಿನ ಕೆಲ್ಸ ಕೊಡ್ಬೇಕು ಅಂತೇಳಿ ಮಾಡ್ಯಾದ. ಆದ್ರ ಕೂಲಿ ಕೆಲಸ ಬಂದು ಒಂದು ವರ್ಷ ಆಯಿತು.

ಇಲ್ಲಿತನ ನಮ್ಮೂರಾಗ ದುಡ್ಕಂಡು ತಿನ್ನವರಿಗೆ ಕೆಲಸಾನೇ ಕೊಟ್ಟಿಲ್ಲ. ಬ್ಯಾರೆ ಊರಾಗ ಬ್ಯಾಸಿಗಿ ಟೈಂದಾಗ ಕೆಲಸ ಕೊಟ್ಟಾರ. ಹಿಂಗಾದ್ರೆ ಪಂಚಾಯ್ತಿಯವರು ಮಾತುಕೇಳಾದಿಲ್ಲ. ಕೂಲಿ ಮಾಡಂತ ಹೆಣ್ಮಕ್ಕಳು ಎಲ್ಲಾರು ಸೇರಿ ರೈತ ಸಂಘ ಸೇರ್ರಿ ನಾವು ನಿಮ್ಮಿಂದ ಇರ್ತಿವಿ. ಎಲ್ಲಾರು ಸೇರಿ ಕೆಲಸ ಕೊಡ್ಬೇಕು ಅಂತೇಳಿ ಹೋರಾಟ ಮಾಡಾನು ಅಂತ ನಿಮ್ಮಂತ ತಿಳಿದವರು ಹೇಳಿದ್ರು. ಆ ಪ್ರಕಾರ ನಾವು ರೈತ ಸಂಘಕ್ಕೆ ಸೇರಿದ್ವಿ. ಆಮ್ಯಾಲೆ ನಮ್ ಸಂಘದ ಕಡೆಯಿಂದ ಮಹಿಳೆಯರೆಲ್ಲ ಸೇರಿ, ಕುಡ್ಯಾನೀರಿನ ಸಲುವಾಗಿ ಟ್ರೈಕ್‍ಮಾಡಿದ್ವಿ.ಆಮ್ಯಾಲೆ ಊರು ಒಳಗಿನ ರೋಡ್ ಕೆಟ್ಟಾದ ಅವುನ್ನ ಸರಿ ಮಾಡಬೇಕು ಅಂತೇಳಿ ಟ್ರೈಕ್ ಮಾಡಿದ್ವಿ. ಆಮ್ಯಾಲೆ ಪಂಚಾಯ್ತಿಯವರು ಕುಡ್ಯಾನೀರಿನ ಯವಸ್ಥೆ ಮಾಡಿದ್ರು. ಊರಾಗಿನ ರೋಡ್ ಮಾಡಿದ್ರು. ಇದೆಲ್ಲ ಆದ್ಮೇಲೆ ದುಡಿಯಾಕ ಕೆಲಸ ಕೊಡ್ಬೇಕು ಅಂತೇಳಿ ನಮ್ಮ ಸಂಘದ ಕಡೆಯಿಂದ ಅರ್ಜಿ ಕೊಟ್ಟು ಕೆಲಸ ತಗಂಡ್ವಿ. ನಾನು ಸಂಘಕ್ಕ ಯಾವಾಗ ಸೇರಿದ್ನೋ ಆವಾಗಿಂದ ಎಗಲ ಮ್ಯಾಲೆ ಹಸಿರು ಟವಲ್ ಹಾಕ್ಕೆಂಡು ಟ್ರೈಕ್ (ಸ್ಟ್ರೈಕ್, ಪ್ರತಿಭಟನೆ) ಮಾಡಾಕ ಹೋಗ್ತಿದ್ದೆ. ಮತ್ತೆ ಬೆಂಗಳೂರಾಗ ಮೀಟಿಂಗ್ ಏನಾರ ಇದ್ರೆ ಹೋಗ್ತಿದ್ದೆ.

ಎಲ್ಲ್ಯಾದರೂ ಹೋರಾಟ ಇದ್ರೆ, ಯಾವದಾದ್ರೆ ಪಂಚಾಯ್ತಿಯಾಗ ಕೂಲಿಕಾರರಿಗೆ ಕೂಲಿ ಹಣ ಕೊಟ್ಟಿಲ್ಲ ಅಂದ್ರೆ ಟ್ರೈಕ್ ಮಾಡತ್ತಿದ್ವಿ. ಮತ್ತೆ ನಮ್ಮೂರಾಗ ನಾಲ್ಕುಜನ ಉದ್ಯೋಗ ಖಾತ್ರಿ ಕೆಲಸಕ್ಕೆ ಹೋದಂಗ ನಾನು ನನ್ನ ಸೊಸೆ ಕೆಲಸಕ್ಕೆ ಹೋಗ್ತಿದ್ವಿ. ಆದ್ರೆ ಇದ್ಯಾವದು ನಮ್ಮ ಜಾತಿಯವರಿಗೆ ಸೇರಿಕಿ ಇರಲಿಲ್ಲ. ಯಾಕಂದ್ರ ನಮ್ ಜಾತಿಯಾಗ ಮನೆಯಿಂದ ಹೊರಗಡೆ ಬಂದ್ರೆ ಎಲ್ಲಾ ಹೆಣ್ಣು ಮಕ್ಕಳು ಬುರ್ಕಾ ಹಾಕೆಂಡು ಹೊರಗಡೆ ಹೋಗ್ತಾರ. ಮತ್ತೆ ನಮ್ ಜಾತಿಯಾಗ ಯಾರು ಟ್ರೈಕ್ ಮಾಡಾಕ ಆಗಲಿ, ಹೋರಾಟ ಮಾಡಾಕ ಆಗಲಿ, ಚಳವಳಿ ಮಾಡಾಕ ಆಗಲಿ, ಯಾರು ಹೋಗಾದಿಲ್ಲ. ಆದ್ರೆ ನಾನು ಸಂಘದಾಗ ಐದೀನಿ ನಾಲ್ಕು ಜನಕ್ಕ ಒಳ್ಳೆದಾಗ್ತಾದ ಅಂದ್ರೆ ನಾನ್ಯಾಕ ಟ್ರೈಕ್ ಮಾಡಾಕ ಹೋಗ್ಬಾರದು. ನಾನೇನು ತಪ್ಪೇನು ಮಾಡಿಲ್ಲ. ಅಂತ ತಿಳ್ಕಂಡು ಯಾರು ಏನೇ ಆಂದ್ರೂನ್ ನಾನು ಇಂತವುಕೆಲ್ಲ ಹೋಗ್ತಿದ್ದೆ.

ಆಮ್ಯಾಲೆ ಏನಾಯಿತಂದ್ರೆ ಇಡೀ ನಮ್ ಜಾತಿಯವರೆಲ್ಲ ಬಂದು ನೀನು ಉದ್ಯೋಗ ಖಾತ್ರಿ ಕೆಲಸಕ್ಕೆ ಹೋಗಬಾರದು, ನೀನು ಸಂಘದಾಗ ಇರಬಾರದು, ಹಸಿರು ಟವಲ್ ಹಾಕಬಾರದು, ನೀನು ಇನ್ನು ಮುಂದ ಎಲ್ಲಿಗಾದ್ರೆ ಹೋದ್ರೆ ಬುರ್ಕಾ ಹಾಕ್ಕೆಂಡು ಅಡ್ಯಾಡಬೇಕು ಅಂತ ಬೆದರಕಿ ಹಾಕಿದ್ರು. ನಮ್ ಧರ್ಮದ ಗುರುಗಳು ಬಂದು ನಿನ್ನ ನಮ್ ಧರ್ಮದಾಗಿನಿಂದ ಹೊರಾಗ ಇಡ್ತಿವಿ ಅಂತ ಹೆದರಿಸಿದ್ರು. ಆದ್ರೆ ನಾನು ಇದು ಯಾವದು ಲೆಕ್ಕಕ್ಕೆ ತಗಾಲಿಲ್ಲ. ಯಾಕಂದ್ರೆ ಎಲ್ಲಾರು ಮನೆ ಪರಿಸ್ಥಿತಿ ಒಂದ್ರೀತಿ ಇದ್ರೆ ನಮ್ ಮನೆ ಪರಿಸ್ಥಿತಿ ಬ್ಯಾರೆ ಐತಿ.

ಯಾಕಂದ್ರೆ ನನ್ ಗಂಡ ಇರಾತನ ಹೊರಗಡೆ ಕೂಲಿ ಕೆಲಸಕ್ಕೆ ಹೋಗಿದಿಲ್ಲ. ನನ್ ಗಂಡ ಸತ್ತಮ್ಯಾಲೆ ಮಕ್ಕಳು ಸಲುಹುಬೇಕಾದ್ರೆ, ಸಂಸಾರ ನಿಬಾಯಿಸಬೇಕಾದ್ರೆ ನಾನು ಕೂಲಿ ಕೆಲಸಕ್ಕೆ ಹೋಗ್ಬೇಕಾಯಿತು. ಹೆಂಗೋ ಉಪವಾಸ ವನವಾಸ ಮಾಡಿ ಸಣ್ಣ-ಸಣ್ಣ ಮಕ್ಕಳ್ನ ಜೋಪಾನ ಮಾಡಿ ದೊಡ್ಡವು ಮಾಡಿದೆ. ಆಮೇಲೆ ದೊಡ್ಡ ಮಗನಿಗೆ ಮದ್ವಿ ಮಾಡಿದೆ. ಮದ್ವಿ ಆದ ನಾಲ್ಕೈದು ವರ್ಸದಾಗ ನನ್ ದೊಡ್ಡ ಮಗನಿಗೆ ಜಡ್ಡು ಸೇರಿಕೆಂತು. ಇನ್ನೊಬ್ಬ ಸಣ್ಣ ಮಗನ್ನ ಕಷ್ಟದಾಗ ಸಾಲಿ ಓದ್ಸಿದೆ. ನೌಕರಿ ತಗಂತಾನಂತ ಆಸೆ ಇಟಗಂಡಿದ್ದೆ. ಆದ್ರೆ ಆ ಅಲ್ಲಾ ಆಗಲಿ, ಆ ಪರಮಾತ್ಮ ಆಗಲಿ ನನ್ನ ಪಾಲಿಗೆ ಬರಲಿಲ್ಲ. ಆದ್ರೆ ನನ್ ಸಣ್ಣ ಮಗ ಇದಕ್ಕಿದಂಗೆ ಎರಡು ವರ್ಷದ ಕೆಳಾಗ ಆತ್ಮಹತ್ಯೆ ಮಾಡಿಕೆಂಡು ಸತ್ತ. ದೊಡ್ಡ ಮಗಾನು ಬಾಳಾ ವರ್ಷದಿಂದ ಜಡ್ಡಾಗಿ ಬಳಲುತ್ತಿದ್ದ. ಮೊನ್ನೆ ಆರು ತಿಂಗಳ ಹಿಂದ ಅವನು ಸತ್ತುಹೋದ. ಗಂಡ ಸತ್ತಮ್ಯಾಲೆ ಗಣಮಗ ದುಡದಂಗ ದುಡುದು ಮಕ್ಕಳನ್ನ ಸಲವಿದ್ಯಾ ಮುಪ್ಪಿನ ಕಾಲದಾಗ ನನ್ನ, ನನ್ನ ಮೊಮ್ಮಕ್ಕಳನ್ನು ಮತ್ತೆ ಸೊಸೆನ್ನ ದುಡಿದು ಸಲುವುತಾರ ಅನ್ಕೊಂಡಿದ್ಯಾ. ಆದ್ರೆ ವಿಧಿ ಬರಹನೇ ಬ್ಯಾರೆ ಆಗಿತ್ತು ನೋಡ್ರಿ.

ಇವತ್ತು ನಾನು ಮತ್ತೆ ಸೊಸೆ ಇಬ್ಬರು ದುಡದು ನಮ್ಮ ಕುಟುಂಬ ಸಲಹುತೀವಿ. ನಮ್ ಕಷ್ಟ ಹಿಂಗಿರಬೇಕಾದ್ರೆ ಈ ಹಾಳಾದ ಉದ್ಯೋಗಖಾತ್ರಿ ಯೋಜನದಾಗ ನನ್ ಸೊಸೆ, ನಾನು ಒಬ್ಬೊಬ್ರು ನಲವತ್ತೈದು ದಿನ ದುಡದೀವಿ. ಆದ್ರೆ ಪಂಚಾಯ್ತಿಯವರು ದುಡದಂತ ಕೂಲಿನೇ ಕೊಡ್ಲಿಲ್ಲ. ಆಮ್ಯಾಲೆ ಎಲ್ಲಾರು ಸೇರಿ ಪಂಚಾಯ್ತಿ ಮುಂದ ದುಡದಂತ ಕೂಲಿ ಕೊಡ್ರಿ ಅಂತೇಳಿ ಟ್ರೈಕ್ ಮಾಡಿದ್ವಿ. ಆದ್ರೂನ್ ಕೂಲಿ ಕೊಡ್ಲಿಲ್ಲ. ಇಷ್ಟೆಲ್ಲ ಆದ್ಮೇಲೆ ನಮ್ ಸಂಘದವರು, ಕೂಲಿಕಾರರು ಎಲ್ಲಾರು ಕೊಪ್ಪಳ ತಾಲೂಕ ಆಫೀಸಿನ ಮುಂದ ಟ್ರೈಕ್ ಮಾಡ್ಬೇಕು ಅಂತ ಹೇಳಿದ್ರು. ನಾಲ್ಕು ಜನ್ರ ಜತಿಗಿ ನಾನು ಟ್ರೈಕ್‍ಗೆ ಹೋದೆ. ಅಲ್ಲಿ ಮೂರು ದಿನ ಟ್ರೈಕ್ ಮಾಡಿದ್ವಿ. ಯಾರು ಕೇಳಲಿಲ್ಲ. ಆಮ್ಯಾಲೆ ನಮ್ ಸಂಘದವರು, ಕೂಲಿಕಾರರೆಲ್ಲ ಸೇರಿ ಬೀಗ ಹಾಕಾಕ ಹೋದಾಗ ಪೆÇಲೀಸರು ಲಾಠಿ ಚಾರ್ಜ್ ಮಾಡಿದ್ರು.

ಹೆಂಗಸರನ್ನ, ಗಂಡ್ಸರ್ನ ಯಾರನ್ನ ಬುಡಲಾರದಂಗ ಓಡ್ಸಾಡಿ ಹೊಡುದ್ರು. ಹೆಂಗಸರ ಪರಿಸ್ಥಿತಿ ಅಂತ ಹೇಳಬಾರದು. ಹೆಂಗಸರ್ನ ಎಳದಾಡಿ ಸೀರೆ ಬಿಚ್ಚಂಗ ಹೊಡೆದ್ರು. ಮತ್ತೆ ಪೆÇಲೀಸರ್ನ ನಾವೇ ಹೊಡದೀವಿ ಅನ್ನಂಗ ಪೆÇಲೀಸರು ನಮ್ ಮ್ಯಾಲೆ ಕೇಸ್ ಮಾಡ್ಯಾರ. ಈಗ ಮೂರು ವರ್ಷ ಆಯಿತು. ಕೋರ್ಟಿಗೆ ಆಡ್ಯಾಡಕತ್ತೀವಿ. ಈಗ ನಮ್ ಧರ್ಮದ ಗುರುಗಳು ಏನಂತಾರ ಅಂದ್ರೆ, ನಾವು ಹೇಳಿದ ಮಾತು ಕೇಳಲಿಲ್ಲ. ನಮ್ ಜಾತಿಗೆ ಅವಮಾನ ಮಾಡಿದ್ಲು. ಕುರಾನ್‍ಗೆ ವಿರುದ್ಧವಾಗಿ ನಡಕಂಡ್ಲು. ಮತ್ತೆ ಬುರ್ಕಾ ಬುಟ್ಟು ಹಸಿರು ಟವಲ್ ಹಾಕ್ಕೆಂಡ್ ನಮ್ ಧರ್ಮಕ್ಕ ದ್ರೋಹ ಮಾಡಿದ್ಲು. ಹೋರಾಟ, ಟ್ರೈಕ್ ಮತ್ತೆ ಚಳುವಳಿ ಅಂತ ಮಾಡಾಕ ಹೋಗಿ ನಮ್ ಮುಸ್ಲಿಂ ಜಾತಿಗೆ ಅವಮಾನ ಮಾಡಿದ್ಲು ಹಂಗಾಗಿ ಇವತ್ತು ಆ ಅಲ್ಲಾನೇ ಬಂದು ನಿನಗ ತಕ್ಕಶಿಕ್ಷೆ ಕೊಟ್ಟಾನ. ನಿನಗ ಹಿಂಗ ಆಗಬೇಕಾಗಿತ್ತು ಹಂಗಾಗಿ ಆ ಅಲ್ಲಾ ಈ ರೂಪದಲ್ಲಿ ಬಂದು ಶಿಕ್ಷೆ ಕೊಟ್ಟಾನ ಅಂತೇಳಿ ನಮ್ ಧರ್ಮದ ಗುರುಗಳು ಮತ್ತೆ ಹಿಡೀ ನಮ್ ಜಾತಿಜನ ಮಾತಾಡಿಕೆಂತಾರ. ಹಂಗಾಗಿ ಇವತ್ತು ನಮ್ ಮನೆ ಒಂದನ್ನ ಜಾತಿಯಿಂದ ಬ್ಯಾರೆ ಇಟ್ಟಾರ. ಮತ್ತೆ ಒಬ್ಬೊಬ್ರು ಒಂದೊಂದು ಮಾತು ಆಡ್ತಾರ. ಸಣ್ಣ ವಯಸ್ಸಿಗೆ ಗಂಡ ಸತ್ರು ಬುದ್ದಿ ಬರಲಿಲ್ಲ ಅಂತ ಆಡಿಕೆಳ್ತಾರ. ಅಂಗೆ ಒಬ್ಬ ಮೊಮ್ಮಗಳು ಮದ್ವಿ ವಯಸ್ಸಿಗೆ ಬಂದಾಳ. ಆಕಿಗೆ ಮದ್ವಿ ಮಾಡಬೇಕಂದ್ರೆ ಯಾರು ನಮ್ ಮನ್ಯಾಗ ಬೀಗಸ್ತಾನ ಮಾಡಾಕ ಮುಂದ ಬರಲಿಲ್ಲ. ಬೀಗಸ್ತನ ಮಾಡಾಕ ಬಂದವರನ್ನೆಲ್ಲ ಅವರು ಮನ್ಯಾಗ ಬೀಗಸ್ತಾನ ಮಾಡಬ್ಯಾಡ್ರಿ. ಅವರ ಮನೆತನ ಚಲೋ ಇಲ್ಲ. ಅವರನ್ನ ನಮ್ ಜಾತಿಯಿಂದ ಹೊರಗಿಟ್ಟೀವಿ ಅಂತೇಳಿ ಹುಡಿಗಿನ್ನ ನೋಡಾಕ ಬಂದವರಿಗೆಲ್ಲ ಹೇಳಿ ಕಳಸ್ತಿದ್ರು. ಹಂಗಾಗಿ ನನ್ ಮೊಮ್ಮಗಳಿಗೆ ವರ ಬರಾದಿಲ್ಲಂತೇಳಿ ನಮ್ ಸಂಬಂಧಿಕರಾಗ ಮದ್ವಿ ಪಿಕ್ಸ್ ಮಾಡೀವಿ.

ಈ ಹಾಳಾದ ಉದ್ಯೋಗ ಖಾತ್ರಿ ಯೋಜನೆ ಸೇರಿ, ಮತ್ತೆ ಈ ರೈತ ಸಂಘ ಅಂತೇಳಿ ಸೇರಿ ಇವತ್ತು ನಮ್ ಜಾತಿಯವರೆಲ್ಲ ನಮ್ಮನ್ನ ದೂರ ಇಟ್ಟಾರ. ನೋಡ್ರಿ ನಮಗ ಈ ಬ್ಯಾಸಿಗಿ ಟೈಂದಾಗ ಜೀವ್ನ ನಡಸಾದ ಬಾಳ ಕಷ್ಟ ಆಗ್ಯಾದ. ಯಾಕಂದ್ರ ನಾವು ಬರೀ ಮನ್ಯಾಗ ಹೆಣ್ಮಕ್ಕಳು ಇದ್ದವರು. ಮನ್ಯಾಗ ಗಣಮಕ್ಳು ಇದ್ದವರು ಆದ್ರೆ ಬ್ಯಾಸಿಗಿ ಟೈಮ್‍ದಾಗ ದುಡಿಯಾಕ ಬೆಂಗಳೂರು, ಪೂನಾ, ಗೋವಾಕ್ಕ ದುಡಿಯಾಕ ಹೋಗ್ತಾರ. ಆದ್ರೆ ನಾವು ಬರೀ ಹೆಣ್ಣುಮಕ್ಕಳು ಇದ್ದವರು ಹೋಗಾಕ ಆಗ್ತಾದೇನು? ಗಂಡ ಸತ್ತ ಒಂಟಿ ಹೆಣ್ಣು ಮಕ್ಕಳನ್ನ ಈ ದುನಿಯಾ ಬಾಳಾ ಕೆಟ್ಟದಾಗಿ ನೋಡ್ತಾದ. ಅಂತದ್ರಾಗ ದೂರದ ಊರಿಗೆ ದುಡಿಯಾಕ ಹೋದ್ರೆ ಈ ಜನ ಸುಮ್ನೆ ಬಿಡ್ತಾದೇನು? ಹಂಗಾಗಿ ನಾವು ಇದ್ದು ಊರಾಗ ದುಡಕಂಡು ತಿನ್ನಾನು ಅಂದ್ರೆ ಪರಿಸ್ಥಿತಿ ಹಿಂಗಾದ ನೋಡ್ರಿ.

ನೀವು ಏನಾದ್ರೆ ಮಾಡಿ ನಮ್ಮನ್ನು ಕೇಸಿನಿಂದ ಪರ್ಲೆಬ್ಬಿಸಿಬಿಡ್ರಿ. ಇಲ್ಲಂದ್ರೆ ನಮ್ಮಂತ ಬಡವರು ಸಾಯಾದು ಒಂದೇ ಬಾಕಿ ಐತಿ ನೋಡು ಯಾಕಂದ್ರೆ ನಾವು ಬರೀ ಹೆಂಗಸರು ಇದ್ದವರು ಅಡಿವ್ಯಾಗ ಹೊಲ ಇಲ್ಲ ಊರಾಗ ಮನೆ ಇಲ್ಲ ದುಡಿಬೇಕು ತಿನ್ಬೇಕು. ಅಂತದ್ರಾಗ ಮೂರು ವರ್ಸದಿಂದ ಕೋರ್ಟಿಗೆ ಅಡ್ಯಾಡಕತ್ತೀವಿ. ಕೋರ್ಟಿಗೆ ಅಡ್ಯಾಡದು ಸುಮ್ನೆ ಆಗ್ತಾದ? ಒಂದ್ಸಲ ಕೋರ್ಟಿಗೆ ಹೋದ್ರ ಎರಡ್ನೂರು ರೂಪಾಯಿ ಖರ್ಚು ಬರ್ತಾದ. ನಾವು ದಿನ ಐವತ್ತು-ಅರವತ್ತು ರೂಪಾಯಿ ದುಡಿತೀವಿ ಇದರಾಗ ಸಂಸಾರ ನಡುಸಾದೆ ಕಷ್ಟ ಐತಿ. ಇಂತದ್ರಾಗ ತಿಂಗಳಾ-ತಿಂಗಳಾ ಕೋರ್ಟಿಗೆ ಹೋಗಾಕ ಎರಡ್ನೂರು ರೂಪಾಯಿ ಎಲ್ಲಿಂದ ತರಬೇಕು. ಹಂಗಾಗಿ ಮೂರು ವರ್ಸದಿಂದ ಸಾಲಮಾಡಿ ಕೋರ್ಟಿಗೆ ತಿರುಗ್ಯಾಡಂಗ ಆಗ್ಯಾದ ನಮ್ ಬಾಳೇವ್ರು. ನೀನು ಯಂಗಾರ ಮಾಡಿ ಈ ಕೇಸಿನಿಂದ ನಮ್ಮನ್ನ ಪರ್ಲೆಬ್ಬಿಸಿಬಿಡು ತಂದೆ ಎಂದು ಕಣ್ಣೀರಿಟ್ಟಳು.

Leave a Reply

Your email address will not be published.