ಇಸ್ರೇಲ್‍ನಲ್ಲಿ ಮೋದಿ-ಆತ್ಮಸಾಕ್ಷಿ ಇದ್ದರೆ ಆತ್ಮಾವಲೋಕನ ಅಗತ್ಯ

-ನಾ ದಿವಾಕರ

ಇಸ್ರೇಲ್‍ಗೆ ಅಧಿಕೃತ ಭೇಟಿ ನೀಡಿದ ಭಾರತದ ಪ್ರಪ್ರಥಮ ಪ್ರಧಾನಿ ನರೇಂದ್ರ ಮೋದಿ ಎಂದು ಹೆಮ್ಮೆಯಿಂದ ಬೆನ್ನು ತಟ್ಟಿಕೊಳ್ಳುವ ಮುನ್ನ ಭಾರತದ ಪ್ರಜ್ಞಾವಂತ ಸಮಾಜ ಸ್ವತಃ ಕೆಲವು ಪ್ರಶ್ನೆಗಳಿಗೆ ಉತ್ತರ ಶೋಧಿಸಬೇಕಿದೆ. ಇಲ್ಲಿ ಇಸ್ರೇಲ್ ಭೇಟಿಯ ಔಚಿತ್ಯಕ್ಕಿಂತಲೂ ಹೆಚ್ಚು ಪ್ರಧಾನವಾಗುವುದು ಈ ಭೇಟಿಯ ವೈಭವೀಕರಣ ಮತ್ತು ಸ್ವಪ್ರಶಂಸೆಯ ವಂಧಿಮಾಗದ ಪ್ರವೃತ್ತಿ. ಪ್ರಜಾತಂತ್ರ ಮೌಲ್ಯಗಳನ್ನು ಪ್ರತಿನಿಧಿಸುವ ಯಾವುದೇ ವ್ಯಕ್ತಿ ದ್ವೇಷ ರಾಜಕಾರಣವನ್ನು ಅನುಮೋದಿಸಕೂಡದು. ರಾಜತಾಂತ್ರಿಕ ಸಂಬಂಧಗಳ ವಿಚಾರದಲ್ಲೂ ಇದು ಸತ್ಯ. ಆದರೆ ಈ ಪ್ರಜಾತಂತ್ರ ಮೌಲ್ಯಗಳನ್ನು ವಿಶ್ವ ಜನಸಮುದಾಯಗಳ ಹಿತಾಸಕ್ತಿಯ ದೃಷ್ಟಿಯಿಂದ ನೋಡಿದಾಗ ಕೆಲವು ಸಂದರ್ಭಗಳಲ್ಲಿ ಕಠಿಣ ನಿಲುವು, ಹಠಮಾರಿ ಧೋರಣೆ ಮತ್ತು ನಿಷೇಧ ರಾಜಕಾರಣ ಅಗತ್ಯ ಎನಿಸುತ್ತದೆ. 1990ರವರೆಗೂ ದಕ್ಷಿಣ ಆಫ್ರಿಕಾದ ವರ್ಣ ಬೇಧ ನೀತಿಯ ವಿರುದ್ಧ ಜಾಗತಿಕ ಸೈದ್ಧಾಂತಿಕ ಸಮರ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು. ನಿಜ, ದಕ್ಷಿಣ ಆಫ್ರಿಕಾದ ಆಳುವ ವರ್ಗಗಳ ವರ್ಣಬೇಧ ನೀತಿಯಿಂದ ಅಲ್ಲಿನ ಜನಸಾಮಾನ್ಯರು, ಕ್ರೀಡಾಪಟುಗಳು, ಅಪ್ರತಿಮ ಪ್ರತಿಭೆಗಳು ಹಿನ್ನಡೆ ಅನುಭವಿಸಿದ್ದೂ ಉಂಟು. ಕ್ರಿಕೆಟ್ ಜಗತ್ತಿನ ಅದ್ಭುತ ಪ್ರತಿಭೆ ಬ್ಯಾರಿ ರಿಚಡ್ರ್ಸ್ ಈ ದುರಂತದ ಒಂದು ದಂತಕಥೆ.

ಆದರೆ ಪ್ರಜಾತಂತ್ರ ಮೌಲ್ಯಗಳ ನೆಲೆಯಲ್ಲಿ ಮನುಕುಲದ ಮಾನವೀಯ ಮೌಲ್ಯಗಳನ್ನೇ ದಮನಿಸುವ ಯಾವುದೇ ಧೋರಣೆಯನ್ನು ಮಾನ್ಯ ಮಾಡುವುದು ಆತ್ಮದ್ರೋಹವಾಗುತ್ತದೆ. ದಕ್ಷಿಣ ಆಫ್ರಿಕಾದ ಪ್ರಜ್ಞಾವಂತ ಮನಸುಗಳೂ ಸಹ ಈ ಚಿತ್ರಹಿಂಸೆಯನ್ನು ಅನುಭವಿಸಿವೆ. ಇದೇ ಹಿನ್ನೆಲೆಯಲ್ಲಿ ಯೋಚಿಸುವಾಗ ದಕ್ಷಿಣ ಆಫ್ರಿಕಾದ ವರ್ಣಬೇಧ ನೀತಿಯನ್ನೂ ಮೀರಿಸುವ ಒಂದು ಶಕ್ತಿಯನ್ನು ಪ್ರಸ್ತುತ ಇಸ್ರೇಲ್‍ನಲ್ಲಿ ಕಾಣಬಹುದು. ಇಸ್ರೇಲ್‍ನೊಡನೆ ರಾಜತಾಂತ್ರಿಕ ಸಂಬಂಧಗಳನ್ನು ಇಟ್ಟುಕೊಳ್ಳುವುದು ಸರಿಯೋ ತಪ್ಪೋ ಎನ್ನುವುದಕ್ಕಿಂತಲೂ ಪರಕೀಯ ಶಕ್ತಿಯಾಗಿ ತನ್ನ ಸೇನಾಬಲದಿಂದ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭೂಪ್ರದೇಶದ ಮೇಲೆ ತನ್ನ ಒಡೆತನ, ಅಧಿಪತ್ಯ ಸಾಧಿಸಿರುವ ಒಂದು ಕೃತಕ, ಕೃತ್ರಿಮ ರಾಷ್ಟ್ರಕ್ಕೆ ಮಾನ್ಯತೆ ನೀಡಬೇಕೋ ಬೇಡವೋ ಎನ್ನುವುದು ಮುಖ್ಯವಾಗುತ್ತದೆ. ಒಂದು ಸ್ವತಂತ್ರ ರಾಷ್ಟ್ರದ ಪ್ರಧಾನಿಯಾಗಿ ನರೇಂದ್ರ ಮೋದಿ ಇಸ್ರೇಲ್‍ಗೆ ಭೇಟಿ ನೀಡುವುದು ಸರ್ಕಾರದ ಧೋರಣೆ ಮತ್ತು ರಾಜತಾಂತ್ರಿಕ ನೀತಿಗೆ ಸಂಬಂಧಿಸಿದ ವಿಚಾರ. ವರ್ಣಬೇಧ ನೀತಿ ಉತ್ತುಂಗದಲ್ಲಿದ್ದಾಗಲೂ ದಕ್ಷಿಣ ಆಫ್ರಿಕಾದೊಡನೆ ಸ್ನೇಹ ಹಸ್ತ ಚಾಚಿದ್ದ ರಾಷ್ಟ್ರಗಳೂ ಇದ್ದವು. ಇಲ್ಲಿ ಅಸ್ಮಿತೆ ಅಥವಾ ಅಸ್ತಿತ್ವದ ಪ್ರಶ್ನೆಗಿಂತಲೂ ಮುಖ್ಯವಾಗಿ ಕಾಣುವುದು ಭಾರತ ಜಾಗತಿಕ ರಾಜಕಾರಣದಲ್ಲಿ ಅನುಸರಿಸಿಕೊಂಡು ಬಂದಿರುವ ಪ್ರಜಾತಾಂತ್ರಿಕ ಧೋರಣೆ ಹಾಗೂ ಮಾನವೀಯ ಮೌಲ್ಯಗಳು. ಆದರೆ ದೇಶದ ಸಂವಿಧಾನವನ್ನೇ ವ್ಯವಸ್ಥಿತವಾಗಿ ಬುಡಮೇಲು ಮಾಡಲು ಮುಂದಾಗಿರುವ ಆಳ್ವಿಕರಿಗೆ ಇದು ಅನಗತ್ಯ ಎನಿಸುತ್ತದೆ.
ಇಸ್ರೇಲ್‍ನ ರಾಜಕೀಯ ಚೌಕಟ್ಟು ಮತ್ತು ಅಂತಾರಾಷ್ಟ್ರೀಯ ದೃಷ್ಟಿಕೋನವನ್ನು ಪರಾಮರ್ಶಿಸುವ ಮುನ್ನ ನಮ್ಮ ಸುತ್ತಲೂ ಇರುವ ಕೆಲವು ವಿದ್ಯಮಾನಗಳ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳುವುದು ಒಳಿತು.

1. ಭಾರತಕ್ಕೆ ಸೇರಬೇಕಾದ ಕಾಶ್ಮೀರದ ಕೆಲವು ಪ್ರದೇಶಗಳನ್ನು ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿದೆ. ಪಾಕ್ ಆಕ್ರಮಿತ ಪ್ರದೇಶ ಎಂದೇ ಮಾನ್ಯತೆಯನ್ನೂ ಪಡೆದಿದೆ. 70 ವರ್ಷಗಳ ಪ್ರತಿರೋಧ ಮತ್ತು ಹೋರಾಟದ ನಂತರವೂ ಈ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ವಿಮೋಚನೆ ದೊರೆತಿಲ್ಲ. ಅಲ್ಲಿನ ಜನಕ್ಕೆ ಸ್ವಾತಂತ್ರ್ಯ ಬೇಕೋ, ಪಾಕಿಸ್ತಾನ ಬೇಕೋ ಅಥವಾ ಭಾರತದೊಡನೆ ವಿಲೀನವಾಗುವ ಇಚ್ಚೆ ಇದೆಯೋ ಎಂದು ಅರಿಯುವ ಪ್ರಯತ್ನವೇ ಈವರೆಗೂ ನಡೆದಿಲ್ಲ. ಜನಾಭಿಪ್ರಾಯ ಸಂಗ್ರಹಕ್ಕೆ ಮಾನ್ಯತೆಯೇ ಇಲ್ಲದ ಪ್ರಜಾಪ್ರಭುತ್ವದಲ್ಲಿ ನಾನು ಬಾಳುತ್ತಿರುವುದಕ್ಕೆ ಇದಕ್ಕಿಂತಲೂ ಉತ್ತಮ ನಿದರ್ಶನ ಬೇಕಿಲ್ಲ. ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಿದ್ದು ಎಂದು ಭಾರತ ಸರ್ಕಾರ ಅಧಿಕೃತ ಘೋಷಣೆ ಮಾಡಿರುವ ಸುದ್ದಿ ಹರಡಿದೆ. ಇದು ಹೆಮ್ಮೆಯ ವಿಚಾರ ಎಂದು ಬೆನ್ನುತಟ್ಟಿಕೊಳ್ಳುವ ವಂದಿಮಾಗಧರಿಗೇನೂ ಕಡಿಮೆಯಿಲ್ಲ. ಆದರೆ ವಸ್ತುಸ್ಥಿತಿ ಇದರಿಂದ ಬದಲಾಗುವುದಿಲ್ಲ. ಪಾಕ್ ಆಕ್ರಮಿತ ಪ್ರದೇಶದಲ್ಲಿ ಜನರು ವಾಸಿಸುತ್ತಿದ್ದಾರೆ ಅವರಿಗೂ ಬೇಕು ಬೇಡಗಳಿವೆ ಎಂಬ ಪ್ರಜ್ಞೆ ಇರಬೇಕಲ್ಲವೇ. ಈ ಪ್ರಜ್ಞೆ ಆಳುವ ವರ್ಗಗಳಿಗೆ ಇರುವುದಿಲ್ಲ. ಅಷ್ಟೆ.

2. ಕಾಶ್ಮೀರದ ಪಂಡಿತರು, ಹಿಂದೂ ಸಮುದಾಯಕ್ಕೆ ಸೇರಿದವರು, ನಿರಾಶ್ರಿತರಾಗಿ ಮೂರು ದಶಕಗಳೇ ಸಂದಿವೆ. ಈ ಕಾಶ್ಮೀರದ ಪಂಡಿತರು ನಿಜಕ್ಕೂ ಬಡಪಾಯಿಗಳು. ಒಂದೆಡೆ ಕಾಶ್ಮೀರದ ಜನತೆಗೆ ಇವರು ಹತ್ತಿರದವರಾಗಿದ್ದಾರೆ. ಅಲ್ಲಿನ ಸಾಮಾನ್ಯ ಜನತೆ ಇವರೊಡನೆಯೇ ಶತಮಾನಗಳ ಕಾಲ ಬಾಳಿ ಬದುಕಿದ್ದಾರೆ. ಇಂದಿಗೂ ಸಹ ಅವರೊಡನೆ ಬಾಳಲು ಇಚ್ಚಿಸುತ್ತಾರೆ. ಅಮರನಾಥ ಯಾತ್ರೆಯ ದಾರಿಯುದ್ದಕ್ಕೂ ಸೇವೆ ಸಲ್ಲಿಸುವ ಕಾಶ್ಮೀರಿಗಳು ಮೇಲ್ನೋಟಕ್ಕೆ ಕಾಣುವ ನಿದರ್ಶನವಷ್ಟೆ. ಆದರೂ ಕ್ಷುದ್ರ ರಾಜಕಾರಣ ಮತ್ತು ಹಿಂಸಾತ್ಮಕ ಚಟುವಟಿಕೆಯ ಪರಿಣಾಮವಾಗಿ ಪಂಡಿತರು ತಮ್ಮ ಮೂಲ ನೆಲೆಯನ್ನೇ ಕಳೆದುಕೊಂಡಿದ್ದಾರೆ. ಭಾರತದ ರಾಜಕಾರಣದಲ್ಲಿ ಸೆಕ್ಯುಲರ್ ಎನಿಸಿಕೊಂಡಿರುವ ರಾಜಕೀಯ ಪಕ್ಷಗಳು ಈ ಪಂಡಿತರ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ. ಎಲ್ಲಿ ಕಾಶ್ಮೀರದ ಮುಸ್ಲಿಮರ ವೈರತ್ವ ಕಟ್ಟಿಕೊಳ್ಳಬೇಕಾಗುತ್ತದೋ ಎಂಬ ಭೀತಿ. ಚುನಾವಣೆಯಲ್ಲಿ ಮುಸ್ಲಿಂ ಮತಗಳನ್ನು ಕಳೆದುಕೊಳ್ಳುವ ಭೀತಿ ಇವರನ್ನು ಕಾಡುತ್ತದೆ.

ಆದರೆ ಕೋಲಾರ ಜಿಲ್ಲೆಯ ಕುಗ್ರಾಮದಲ್ಲಿ ವಾಸಿಸುವ ಮುಸ್ಲಿಮರಿಗೆ ತಮ್ಮ ನಿತ್ಯ ಜೀವನವೇ ಹೊರೆಯಾಗಿರುವಾಗ ತಾನು ಕೇಳರಿಯದ ಕಾಶ್ಮೀರದ ಪಂಡಿತರ ಗೊಡವೆ ಏಕಿರುತ್ತದೆ ? ಈ ಪ್ರಶ್ನೆ ಒತ್ತಟ್ಟಿಗಿರಲಿ. ಒಂದು ಮಾತಂತೂ ನಿಜ. ಭಾರತದ ಸೆಕ್ಯುಲರ್ ಎನಿಸಿಕೊಳ್ಳುವ ಪಕ್ಷಗಳು ಪಂಡಿತರ ಬಗ್ಗೆ ಸೊಲ್ಲೆತ್ತುವುದಿಲ್ಲ.

ಇನ್ನು ಹಿಂದುತ್ವವಾದಿಗಳಿಗೆ ಪಂಡಿತರು ನಿರಾಶ್ರಿತರಾಗಿದ್ದಷ್ಟೂ ಒಳ್ಳೆಯದು. ಎಕೆಂದರೆ ಈ ಬತ್ತಳಿಕೆಯಿಂದಲೇ ಅಸ್ತ್ರಗಳನ್ನು ಬಳಸುತ್ತಾ ಕಾಶ್ಮೀರದಲ್ಲಿ ಹಿಂದುತ್ವ ರಾಜಕಾರಣದ ನೆಲೆ ಭದ್ರಪಡಿಸಿಕೊಳ್ಳುವ ಉದ್ದೇಶ ಇವರದು. ಹಾಗಾಗಿ ಕಾಶ್ಮೀರ ಪಂಡಿತರಿಗೆ ಸಾಂತ್ವನ ತೋರುತ್ತಾ, ನೋವಿಗೆ ಮುಲಾಮು ಹಚ್ಚುತ್ತಾ ಅವರ ನೋವನ್ನೇ ತಮ್ಮ ರಾಜಕೀಯ ಮೆಟ್ಟಿಲುಗಳಾಗಿ ಪರಿವರ್ತಿಸಿ ಅಧಿಕಾರ ರಾಜಕಾರಣದಲ್ಲಿ ಉತ್ತುಂಗಕ್ಕೇರುವ ವಿಕೃತ ಪರಂಪರೆಯನ್ನು ಕಾಣಬಹುದು. ಆದರೆ ಪಂಡಿತರು ಮತ್ತು ಕಾಶ್ಮೀರಿಗಳ ನಡುವೆ ಔಚಿತ್ಯಪೂರ್ಣವಾದ ಮಾತುಕತೆಯನ್ನು ಏರ್ಪಡಿಸುವ ಒಂದೇ ಒಂದು ಪ್ರಯತ್ನವನ್ನು ಈವರೆಗೂ ಕಂಡವರಿಲ್ಲ ಏಕೆ ? ಸಮಸ್ತ ಕಾಶ್ಮೀರಿಗಳನ್ನು ಉಗ್ರಗಾಮಿಗಳು ಎಂದು ಭಾವಿಸುವ ವಿಕೃತ ರಾಜಕಾರಣವೇ ಈ ಪ್ರಯತ್ನಗಳಿಗೆ ತೊಡಕಾಗಿದೆ. ಕಾಶ್ಮೀರದಲ್ಲೂ ಸಹ 70 ವರ್ಷಗಳ ಸ್ವತಂತ್ರ ಭಾರತದಲ್ಲಿ ಜನಾಭಿಪ್ರಾಯ ಸಂಗ್ರಹಕ್ಕೆ ಮನ್ನಣೆ ದೊರೆತಿಲ್ಲ. ಪಂಡಿತರ ಬವಣೆ ಒಂದು ರೀತಿಯಲ್ಲಿ ಷೇರು ಮಾರುಕಟ್ಟೆಯ ಸೂಚ್ಯಂಕದಂತಾಗಿದೆ. ಬವಣೆ ಹೆಚ್ಚಾದರೆ ಹಿಂದುತ್ವವಾದಿ ರಾಜಕಾರಣಕ್ಕೆ ಲಾಭ. ಬವಣೆ ಕ್ಷೀಣಿಸಿದರೆ ಸೆಕ್ಯುಲರ್ ಎನಿಸಿಕೊಂಡ ಪಕ್ಷಗಳಿಗೆ ಲಾಭ.

3. ನಮ್ಮ ಸಮೀಪದಲ್ಲೇ ಇರುವ ಮತ್ತೊಂದು ಆಕ್ರಮಿಕ ಪ್ರದೇಶ ಟಿಬೆಟ್. ಚೀನಾದಿಂದ ಹಲವು ದಶಕಗಳ ಹಿಂದೆಯೇ ಆತಿಕ್ರಮಣಕ್ಕೊಳಗಾದ ಟಿಬೆಟ್ ಇಂದಿಗೂ ಆಕ್ರಮಿತ ಪ್ರದೇಶವಾಗಿಯೇ ಇದೆ. ಟಿಬೆಟ್‍ನ ಸ್ವಾತಂತ್ರ್ಯದ ಕೂಗು, ವಿಮೋಚನೆಯ ಆಕ್ರಂದನ ಜಗತ್ತಿನ ಜನತೆಗೆ ಕೇಳಿಸುತ್ತಲೇ ಇಲ್ಲವೇನೋ ಎನ್ನುವಂತಿದೆ. ಟಿಬೆಟ್‍ಗೆ ಸಾಂತ್ವನ ಹೇಳಲೂ ಹೆದರುವ ರಾಷ್ಟ್ರಗಳೂ ಇವೆ. ಏಕೆಂದರೆ ಮಿತ್ರ ಚೀನಾ ಸಹನೀಯ. ಶತ್ರು ಚೀನಾ ಅಪಾಯಕಾರಿ. ಆದರೂ ವಿಶ್ವದ ಎಲ್ಲ ರಾಷ್ಟ್ರಗಳೂ ಟಿಬೆಟ್ ಜನತೆಯ ವಿಮೋಚನೆಗಾಗಿ ಆಗ್ರಹಿಸುತ್ತಿವೆ. ಚೀನಾದ ಆಕ್ರಮಣಕಾರಿ ನೀತಿಯನ್ನು ಖಂಡಿಸುತ್ತಿವೆ. ಭಾರತವೂ ಸಹ ಟಿಬೆಟ್‍ನ ಜನತೆಯ ಆರಾಧ್ಯ ದೈವ ಎನ್ನಬಹುದಾದ ದಲೈಲಾಮಾಗೆ ಆಶ್ರಯ, ಮನ್ನಣೆ, ಉನ್ನತ ಸ್ಥಾನಮಾನ ನೀಡುತ್ತಿದೆ.

ಈ ಮೇಲಿನ ಮೂರೂ ಉದಾಹರಣೆಗಳನ್ನು ಉಲ್ಲೇಖಿಸಿದ ಉದ್ದೇಶವೆಂದರೆ ಇಲ್ಲಿ ಆಕ್ರಮಿತ ಪ್ರದೇಶಗಳಿವೆ. ಅತಿಕ್ರಮಣಕ್ಕೊಳಗಾಗಿ ಆಕ್ರಮಿತ ಪ್ರದೇಶದಲ್ಲಿ ಅತಂತ್ರರಾಗಿ, ಆಕ್ರಮಣಕಾರಿ ಆಡಳಿತಕ್ಕೆ ಬಲಿಯಾಗಿ ತಮ್ಮ ಮೂಲ ನೆಲೆಯನ್ನೇ ಕಳೆದುಕೊಂಡಿರುವ ಜನಸಾಮಾನ್ಯರ ನೋವಿನ ದನಿ ಇದೆ. ಒಂದಲ್ಲಾ ಒಂದು ರೀತಿಯಲ್ಲಿ ಈ ಮೂರೂ ಪ್ರದೇಶಗಳ ಜನತೆಯ ಬಗ್ಗೆ ನಮ್ಮಲ್ಲಿ, ಅಂದರೆ ಪ್ರಜ್ಞಾವಂತ ಜನರಲ್ಲಿ, ಸಹಾನುಭೂತಿಯ ತುಣುಕುಗಳನ್ನು ಕಾಣಬಹುದು. ರಾಜಕೀಯ ಉದ್ದೇಶದಿಂದಲೂ ಈ ಮೂರೂ ಪ್ರದೇಶಗಳ ಜನತೆ ಸಹಾನುಭೂತಿ ಗಳಿಸುತ್ತಲೇ ಇದ್ದಾರೆ. ವಿಶೇಷವಾಗಿ ಭಾರತದ ರಾಷ್ಟ್ರೀಯವಾದಿಗಳು, ಉನ್ಮತ್ತ ರಾಷ್ಟ್ರೀಯತೆಯ ಪ್ರತಿಪಾದಕರು ಮತ್ತು ಹಿಂದುತ್ವವಾದಿಗಳು ಈ ಕೃತ್ರಿಮ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ. ಆದರೆ ಇಸ್ರೇಲ್‍ನಿಂದ ಅತಿಕ್ರಮಣಕ್ಕೊಳಗಾಗಿ, ತಮ್ಮ ಮೂಲ ನೆಲೆಯನ್ನೇ ಕಳೆದುಕೊಂಡು, ತಮ್ಮದೇ ಆದ ಮಾತೃಭೂಮಿಯಲ್ಲಿ ನಿರಾಶ್ರಿತರಂತೆ ಬದುಕು ಸವೆಸುತ್ತಿರುವ ಪ್ಯಾಲೆಸ್ಟೇನೀಯರು ಏಕೆ ಸಹಾನುಭೂತಿ ಗಳಿಸುವುದಿಲ್ಲ. ಈ ಪ್ರಶ್ನೆಯೊಂದಿಗೇ ಇಸ್ರೇಲ್‍ನ ಉಗಮ , ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಅವಲೋಕನ ಮಾಡಲು ಸಾಧ್ಯ.

ಶೂನ್ಯದಿಂದ ಉಗಮಿಸಿದ ದೇಶ

ವಿಶ್ವದ ಭೂಪಟದಲ್ಲಿ ಒಂದು ಚುಕ್ಕೆಯಷ್ಟೂ ಕಾಣದ ದೇಶವೊಂದು ಹಠಾತ್ತನೆ 1948ರ ಮೇ 14ರಂದು ಉದಯಿಸುತ್ತದೆ. ಟೆಲ್ ಅವಿವ್‍ನಲ್ಲಿ ಯಹೂದಿ ಏಜೆನ್ಸಿಯ ಅಧ್ಯಕ್ಷ ಡೇವಿಡ್ ಬೆನ್ ಗುರಿಯನ್ ಇಸ್ರೇಲ್ ಉಗಮವನ್ನು ಘೋಷಿಸುತ್ತಾನೆ. 2000 ವರ್ಷಗಳ ಇತಿಹಾಸದಲ್ಲಿ ಪ್ರಪ್ರಥಮ ಯಹೂದ್ಯರ ದೇಶ ನಿರ್ಮಾಣವಾಗುತ್ತದೆ. ಆಧುನಿಕ ಇಸ್ರೇಲ್‍ನ ಮೂಲವನ್ನು 19ನೆಯ ಶತಮಾನದಲ್ಲಿ ರಷ್ಯಾದ ಸಾಮ್ರಾಜ್ಯದಲ್ಲಿ ಉಗಮಿಸಿದ ಯಹೂದಿಗಳ ಪ್ರತ್ಯೇಕ ರಾಷ್ಟ್ರದ ಆಂದೋಲನದಲ್ಲಿ ಕಾಣಬಹುದು. ಶತಮಾನಗಳ ಶೋಷಣೆ ಮತ್ತು ದೌರ್ಜನ್ಯಗಳ ವಿರುದ್ಧ ಹೋರಾಡುತ್ತಿದ್ದ ಯಹೂದ್ಯರಿಗೆ ತಮ್ಮದೇ ಆದ ಪ್ರತ್ಯೇಕ ರಾಷ್ಟ್ರ ನಿರ್ಮಾಣವೇ ಪರಿಹಾರ ಒದಗಿಸಬಲ್ಲದು ಎಂದು ಬಲವಾಗಿ ಪ್ರತಿಪಾದಿಸುವ ಕರಪತ್ರವೊಂದನ್ನು ಯಹೂದಿ ಪತ್ರಕರ್ತ ಥಿಯೋಡರ್ ಹರ್ಜಲ್ ಪ್ರಕಟಿಸುತ್ತಾನೆ.

ಈ ಹಿನ್ನೆಲೆಯಲ್ಲೇ 1897ರಲ್ಲಿ ಹರ್ಜಲ್ ನೇತೃತ್ವದಲ್ಲಿ ಸ್ವಿಜರ್‍ಲೆಂಡ್‍ನಲ್ಲಿ ಪ್ರಪ್ರಥಮ ಯಹೂದಿ ಸಮಾವೇಶವನ್ನು ಏರ್ಪಡಿಸಲಾಗುತ್ತದೆ. ಯಹೂದಿಗಳ ಮೂಲ ಸ್ಥಾನ ಎನ್ನಲಾಗುವ , ಅಟೋಮನ್ ಸಾಮ್ರಾಜ್ಯದ ಅಧಿಪತ್ಯದಲ್ಲಿರುವ ಪ್ಯಾಲೆಸ್ಟೀನ್ ನೂತನ ಯಹೂದಿ ರಾಷ್ಟ್ರ ಸ್ಥಾಪನೆಗೆ ಪ್ರಶಸ್ತ ಎಂದು ನಿರ್ಧರಿಸಲಾಗುತ್ತದೆ. 1905ರ ರಷ್ಯಾದ ಕ್ರಾಂತಿ ವಿಫಲವಾದ ನಂತರ ಪೂರ್ವ ಯೂರೋಪ್ ಮತ್ತು ರಷ್ಯಾದ ಅಸಂಖ್ಯಾತ ಯಹೂದಿಗಳು ಪ್ಯಾಲೆಸ್ಟೇನಿಗೆ ವಲಸೆ ಹೋಗಲಾರಂಭಿಸುತ್ತಾರೆ. ಇದಕ್ಕೂ ಮುನ್ನ ಇಲ್ಲಿ ವಾಸಿಸುತ್ತಿದ್ದ ಯಹೂದಿಗಳೊಡನೆ ಸೇರುತ್ತಾರೆ.

ಪ್ರಥಮ ಮಹಾ ಯುದ್ಧದಲ್ಲಿ ಅಟೋಮನ್ ಸಾಮ್ರಾಜ್ಯ ಪತನಗೊಂಡ ನಂತರ 1917ರಲ್ಲಿ ಬ್ರಿಟನ್ ಪ್ಯಾಲೆಸ್ಟೇನ್ ಮೇಲೆ ತನ್ನ ಅಧಿಪತ್ಯ ಸಾಧಿಸುತ್ತದೆ. 1917ರಲ್ಲಿ ಲಾರ್ಡ್ ಬೆಲ್‍ಫೋರ್ಡ್‍ನ ನೇತೃತ್ವದಲ್ಲಿ ಯಹೂದಿಗಳಿಗೆ ಪ್ಯಾಲೆಸ್ಟೇನೀಯರ ಪ್ರಾಂತ್ಯದ ಒಂದು ಭಾಗವನ್ನು ಯಹೂದಿಯರ ಪವಿತ್ರ ನಾಡಿನ ರೂಪದಲ್ಲಿ ಪರಭಾರೆ ಮಾಡುತ್ತದೆ. ಲಾರ್ಡ್ ಬೆಲ್‍ಫೋಡ ತನ್ನ ಬೆಲ್‍ಫೋರ್ಡ್ ಘೋಷಣಾ ಪತ್ರವನ್ನು ಯಹೂದಿ ಬ್ಯಾಂಕರ್ ಲಾರ್ಡ್ ರಾತ್‍ಷೀಲ್ಡ್‍ಗೆ ನೀಡಿ ಅದನ್ನು ಯಹೂದ್ಯರ ನಾಯಕರಿಗೆ ತಲುಪಿಸಲು ಆದೇಶಿಸುತ್ತಾನೆ. ಆದರೆ ಬ್ರಿಟೀಷ್ ಸರ್ಕಾರದ ಈ ಕ್ರಮಕ್ಕೆ ಲೀಗ್ ಆಫ್ ನೇಷನ್ಸ್ ಸಮ್ಮತಿ ಇರುವುದಿಲ್ಲ. ಯಹೂದ್ಯರಿಗೇ ಅಧಿಕಾರವಿಲ್ಲದ ಭೂಪ್ರದೇಶವನ್ನು ಅವರಿಗೆ ಪರಭಾರೆ ಮಾಡಲು ಬ್ರಿಟನ್ನಿಗೆ ಯಾವುದೇ ಅಧಿಕಾರ ಇರಲಿಲ್ಲ. ಕುತೂಹಲಕಾರಿ ಸಂಗತಿ ಎಂದರೆ ಯಹೂದ್ಯರನ್ನು ಹೊರತುಪಡಿಸಿ ಇತರ ಜನಾಂಗದ ಜನತೆಯ ವಿರುದ್ಧ ಯಾವುದೇ ಧಾರ್ಮಿಕ ಅಥವಾ ನಾಗರಿಕ ಹಕ್ಕುಗಳ ಉಲ್ಲಂಘನೆ ಮಾಡುವಂತಿಲ್ಲ ಎಂದು ಬೆಲ್‍ಫೋರ್ಡ್ ಘೋಷಣೆಯಲ್ಲಿ ಹೇಳಲಾಗಿದೆ. ಆದರೆ ಯಹೂದ್ಯರು ಈ ಷರತ್ತುಗಳನ್ನು ಉಲ್ಲಂಘಿಸಿರುವುದಷ್ಟೇ ಅಲ್ಲ ತಾವು ಸಮ್ಮತಿಸಿದ್ದ ಎಲ್ಲ ಒಪ್ಪಂದಗಳನ್ನೂ ಉಲ್ಲಂಘಿಸುತ್ತಿದ್ದಾರೆ.

1947ರಲ್ಲಿ ಪ್ಯಾಲೆಸ್ಟೇನ್ ಪ್ರದೇಶವನ್ನು ಇಸ್ರೇಲ್ ಮತ್ತು ಪ್ಯಾಲೆಸ್ಟೇನ್ ನಡುವೆ ಹಂಚಿಕೊಳ್ಳುವ ವಿಶ್ವಸಂಸ್ಥೆಯ ಒಪ್ಪಂದವೊಂದು ಜಾರಿಗೆಬಂದಿತ್ತು. ಈ ಸಂದರ್ಭದಲ್ಲಿ ವಸಾಹತು ಆಳ್ವಿಕೆಯಿಂದ ಮುಕ್ತಿ ಪಡೆದ ಹಲವು ರಾಷ್ಟ್ರಗಳು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಾಗಿದ್ದವು. ಭಾರತ ಈ ವಿಭಜನೆಯ ಪ್ರಸ್ತಾಪವನ್ನು ತಿರಸ್ಕರಿಸಿದ್ದೇ ಅಲ್ಲದೆ ಇಸ್ರೇಲ್ ದೇಶದ ಸೃಷ್ಟಿಗೆ ವಿರೋಧ ವ್ಯಕ್ತಪಡಿಸಿತ್ತು. ಆದರೂ ವಿಶ್ವಸಂಸ್ಥೆಯ ಪ್ರಸ್ತಾಪಕ್ಕೆ ಅನುಮತಿ ದೊರೆತಿತ್ತು. ನಂತರ 1948ರಲ್ಲಿ ನಡೆದ ನಕ್ಬಾದಲ್ಲಿ ಏಳು ಲಕ್ಷಕ್ಕೂ ಹೆಚ್ಚು ಪ್ಯಾಲೆಸ್ಟೇನೀಯರನ್ನು ಅವರ ತಾಯ್ನಾಡಿನಿಂದ ಉಚ್ಚಾಟಿಸಲಾಯಿತು. ಈ ಉಚ್ಚಾಟಿತ ಜನತೆಗೆ ಮತ್ತು ಅವರ ಪೂರ್ವಿಕರಿಗೆ ತಮ್ಮ ತಾಯ್ನಾಡಿಗೆ ಹಿಂದಿರುಗುವ ಅವಕಾಶವನ್ನೇ ನೀಡಲಿಲ್ಲ. 1948ರಲ್ಲಿ ಯಹೂದಿ ಗುಂಪುಗಳಾದ ಇರ್ಗುನ್ ಮತ್ತು ಸ್ಟರ್ನ್ ಪ್ಯಾಲೆಸ್ಟೀನ್ ಗ್ರಾಮ ದೀರ್ ಯಾಸಿನ್ ಮೇಲೆ ನಡೆಸಿದ ಮಾರಣಾಂತಿಕ ದಾಳಿಯಲ್ಲಿ ನೂರಾರು ಜನರ ಹತ್ಯೆ ಮಾಡಲಾಯಿತು. ಯಹೂದಿ ಗುಂಪುಗಳು ಮತ್ತು ಭೂಗತ ಸೇನೆ ಹಂಗನಾ ಪ್ಯಾಲೆಸ್ಟೇನಿನ ಕಿಂಗ್ ಡೇವಿಡ್ ಹೋಟೆಲ್ ಮೇಲೆ ನಡೆಸಿದ ದಾಳಿಯಲ್ಲಿ ಅಮೆರಿಕದ ರಾಯಭಾರಿ ಕೌಂಡ್ ಬೆರ್ನಾಡೊಟ್ ಮೃತಪಟ್ಟಿದ್ದರು.

1948ರ ಈ ಹತ್ಯಾಕಾಂಡಗಳು, 1956ರ ಸೂಯೆಜ್ ಕಾಲುವೆ ಮೇಲಿನ ಆಕ್ರಮಣ, 1967ರ ಪ್ಯಾಲೆಸ್ಟೇನ್ ಇಸ್ರೇಲ್ ಸಮರ, 1973ರ ಸಮರ, ಕೆಲವು ವರ್ಷಗಳ ಹಿಂದೆ ಗಾಜಾ ಪ್ರಾಂತ್ಯದ ಮೇಲೆ ಇಸ್ರೇಲ್ ಆಕ್ರಮಣ ( ಈ ಸಂದರ್ಭದಲ್ಲಿ 550 ಮಕ್ಕಳನ್ನೂ ಸೇರಿದಂತೆ 2200 ಪ್ಯಾಲೆಸ್ಟೇನೀಯರು ಮೃತಪಟ್ಟಿದ್ದರು ) ಹೀಗೆ ಸಾಮ್ರಾಜ್ಯಶಾಹಿಯ ಆಕ್ರಮಣಗಳು ನಡೆಯುತ್ತಲೇ ಇವೆ. ಗಾಜಾ ಸೇರಿದಂತೆ ಒಟ್ಟು ಒಂದು ಶತಕೋಟಿ ಡಾಲರ್ ನಷ್ಟ ಸಂಭವಿಸಿದೆ. ಈ ಕಾಳಗಗಳ ನಡುವೆಯೇ ಪ್ಯಾಲೆಸ್ಟೇನಿನ ನಾಗರಿಕರ ಮೇಲೆ ಯಹೋದಿ ಸೇನೆ ಮಾರಣಾಂತಿಕ ಹಲ್ಲೆ ನಡೆಸುತ್ತಲೇ ಇದೆ. ಯಹೂದಿಗಳು ಪ್ಯಾಲೆಸ್ಟೇನಿನ ಹೆಚ್ಚು ಹೆಚ್ಚು ಪ್ರದೇಶವನ್ನು ಆಕ್ರಮಿಸುತ್ತಲೇ ಇದ್ದಾರೆ. 1967ರ ಅರಬ್ ಇಸ್ರೇಲ್ ಕಾಳಗದ ಸಂದರ್ಭದಲ್ಲಿ ನಡೆದ ಆರು ದಿನಗಳ ಭೀಕರ ಯುದ್ಧದಲ್ಲಿ ಇಸ್ರೇಲ್ ಜೋರ್ಡಾನ್, ಈಜಿಪ್ಟ್, ಸಿರಿಯಾ, ಹಳೆಯ ಜೆರುಸೆಲಮ್ ನಗರ, ಸಿನಾಯ್ ಪರ್ಯಾಯ ದ್ವೀಪ, ಗಾಜಾ ಪಟ್ಟಿ, ಗೋಲನ್ ಹೈಟ್ಸ್ ಮತ್ತು ಪಶ್ಚಿಮ ತೀರದ ಕೆಲವು ಪ್ರದೇಶಗಳನ್ನು ಆಕ್ರಮಿಸಿ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತದೆ . ಈವರೆಗೂ ವಿಶ್ವ ಸಂಸ್ಥೆಯಲ್ಲಿ ಪ್ಯಾಲೆಸ್ಟೀನ್ ಇಸ್ರೇಲ್ ಕುರಿತಂತೆ 78 ನಿರ್ಣಯಗಳನ್ನು ಅನುಮೋದಿಸಲಾಗಿದೆ. ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ಈ ನಿರ್ಣಯಗಳಿಗೆ ವೀಟೋ ನೀಡಿವೆ. ಇಸ್ರೇಲ್‍ನಲ್ಲಿರುವುದಕ್ಕಿಂತಲೂ ಹೆಚ್ಚು ಯಹೂದಿಯರು ಅಮೆರಿಕದಲ್ಲಿದ್ದಾರೆ. ಜೆರುಸೆಲಂನ ಅತಿಕ್ರಮಣ ಮುಂದುವರೆದಿದೆ. ಪ್ಯಾಲೆಸ್ಟೀನ್ ನಾಗರಿಕರು ಸಾಯುತ್ತಲೇ ಇದ್ದಾರೆ. ಈ ಆಕ್ರಮಿತ ಭೂ ಪ್ರದೇಶವನ್ನು ಕುರಿತಂತೆ ರಹಸ್ಯವಾದುದೇನೂ ಇಲ್ಲ.

ಇಂತಹ ಒಂದು ದೇಶಕ್ಕೆ ಪ್ರಧಾನಿ ಮೋದಿ ಏಕೆ ಭೇಟಿ ನೀಡುತ್ತಿದ್ದಾರೆ ? ಜನಾಂಗೀಯ ದ್ವೇಷವನ್ನು ಅನುಸರಿಸುವ, ಸಾಮ್ರಾಜ್ಯಶಾಹಿ ದೇಶಕ್ಕೆ ಭೇಟಿ ನೀಡಿದ ಭಾರತದ ಪ್ರಪ್ರಥಮ ಪ್ರಧಾನಿ ಏಕಾಗುತ್ತಾರೆ. ವಿಶ್ವದ ಅನೇಕ ಮಹಾನ್ ವ್ಯಕ್ತಿಗಳು ಯಹೂದಿಗಳ ಜನಾಂಗೀಯ ನೀತಿಯನ್ನು ಧಿಕ್ಕರಿಸಿ ಹೊರದೇಶಗಳಲ್ಲಿ ನೆಲೆಸಿದ್ದಾರೆ. ಪ್ರಸಿದ್ಧ ವಿದ್ವಾಂಸ ನೋಮ್ ಚೋಮ್ಸ್‍ಕಿ, ಅಂತಾರಾಷ್ಟ್ರೀಯ ನ್ಯಾಯಶಾಸ್ತ್ರಜ್ಞ ರಿಚರ್ಡ್ ಫಾಕ್, ಇಸ್ರೇಲ್‍ನ ಇತಿಹಾಸಕಾರ ಇಲಾನ್ ಪಾಪೆ (ಇವರು 2008ರಲ್ಲಿ ಇಸ್ರೇಲ್ ತೊರೆದು ಈಗ ಅಮೆರಿಕದಲ್ಲಿ ಭೋಧನೆ ಮಾಡುತ್ತಿದ್ದಾರೆ ) ಇವರೆಲ್ಲರೂ ಯಹೂದಿಗಳ ಜನಾಂಗೀಯ ನೀತಿಯನ್ನು ಧಿಕ್ಕರಿಸಿ ದೇಶ ತೊರೆದಿದ್ದಾರೆ. ಇಂತಹ ಸನ್ನಿವೇಶದಲ್ಲಿ ಮೋದಿ ಇಸ್ರೇಲ್‍ಗೆ ಭೇಟಿ ನೀಡುವ ಮರ್ಮವೇನು ? ಇಸ್ರೇಲ್‍ನ ಮಾಜಿ ಅಧ್ಯಕ್ಷ ಮತ್ತು ಪ್ರಭಾವಿ ನಾಯಕ ಸೈಮನ್ ಪೆರೆಸ್ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಲು ಅವರಿಂದ ಸಲಹೆ ಕೋರಿದ್ದರು. ಈ ಕಪಟ ನಾಯಕ ನೀಡಿದ ಪರಿಹಾರ ಎಂದರೆ ಕಾಶ್ಮೀರ ಕಣಿವೆಯಲ್ಲಿ ಕಾಶ್ಮೀರಿಯೇತರ ಜನರನ್ನು ಹೆಚ್ಚು ಮಾಡುವುದು.

ಇಂತಹ ಒಂದು ಪ್ರಜಾತಂತ್ರ ವಿರೋಧಿ ದೇಶಕ್ಕೆ ಭೇಟಿ ನೀಡಿದ ಭಾರತದ ಪ್ರಪ್ರಥಮ ಪ್ರಧಾನಿ ಎಂಬ ಹೆಗ್ಗಳಿಕೆಗಿಂತಲೂ, ಸುತ್ತಲಿನಆಕ್ರಮಿತ ಪ್ರದೇಶಗಳಲ್ಲಿನ ಜನತೆಗೆ ಸದಾ ಸಾಂತ್ವನ ಹೇಳುವ ದೇಶವೊಂದು 70 ವರ್ಷಗಳಿಂದಲೂ ತಮ್ಮ ಸ್ವಂತ ನೆಲದಲ್ಲೇ ಅಸ್ತಿತ್ವವನ್ನು ಕಳೆದುಕೊಂಡು ಬದುಕುತ್ತಿರುವ ಪ್ಯಾಲೆಸ್ಟೀನ್‍ನ ಜನತೆಯ ಬವಣೆಯನ್ನು ನಿರ್ಲಕ್ಷಿಸುವುದು ಸಮರ್ಥನೀಯವೇ ಎಂದು ಯೋಚಿಸಬೇಕಿದೆ. ಇದು ವಿದೇಶಾಂಗ ನೀತಿ, ರಾಜತಾಂತ್ರಿಕ ಸಂಬಂಧಗಳ ಪ್ರಶ್ನೆಯಷ್ಟೇ ಅಲ್ಲ. ಮಾನವೀಯ ನೆಲೆಯಲ್ಲಿ ವಿಶ್ವ ಭ್ರಾತೃತ್ವವನ್ನು ರೂಪಿಸುವ ಪ್ರಶ್ನೆ. ಆತ್ಮಸಾಕ್ಷಿ ಎನ್ನುವುದೊಂದಿದ್ದರೆ ಆತ್ಮಾವಲೋಕನ ಅಗತ್ಯ ಎನಿಸುವುದಿಲ್ಲವೇ ?

Leave a Reply

Your email address will not be published.