ಇನ್ನೆಷ್ಟು ದಿನ ನಿದ್ರಾವಸ್ಥೆ ? ಜಾಗೃತರಾಗೋಣವೇ ?

ನಾ ದಿವಾಕರ

ಭಾರತದಲ್ಲಿ ಪ್ರಜಾತಂತ್ರ ವ್ಯವಸ್ಥೆ ಅಪಾಯಕ್ಕೆ ಸಿಲುಕಿ ಮೂರು ದಶಕಗಳೇ ಸಂದಿವೆ. ಅವಸಾನದತ್ತ ಸಾಗಲು ಆರಂಭಿಸಿ ಒಂದು ದಶಕ ಕಳೆದಿದೆ. ಶೈಶಾವಸ್ಥೆ ತಲುಪಲು ಕೆಲವೇ ವರ್ಷಗಳು ಬಾಕಿ ಉಳಿದಿವೆ. ಅಂತ್ಯಕ್ರಿಯೆಗೆ ಮುನ್ನ ಎಚ್ಚೆತ್ತುಕೊಳ್ಳಿ ಎಂದು ಈ ದೇಶದ ಸಾರ್ವಭೌಮ ಪ್ರಜೆಗಳಿಗೆ ಸರ್ವೋಚ್ಛ ನ್ಯಾಯಾಲಯದ ನಾಲ್ವರು ಹಿರಿಯ ನ್ಯಾಯಾಧೀಶರುಗಳು ಹೇಳುತ್ತಿದ್ದಾರೆ. ಮಲಗಿರುವವರನ್ನು ಎಬ್ಬಿಸುವುದು ಹೇಗೆ ? ಸತ್ತ ಸಂವೇದನೆಗೆ ಪುನರ್ಜೀವ ನೀಡುವುದು ಹೇಗೆ ? ನಾವು ಕುಂಭಕರ್ಣ ನಿದ್ರೆಯಲ್ಲಿದ್ದೇವೆ. ಜಾತಿ, ಮತ, ಕೋಮು, ಧರ್ಮ, ಮಠ, ಆಧ್ಯಾತ್ಮ, ದೇಶ, ಭಾಷೆ, ಪ್ರದೇಶ ಹೀಗೆ ಹತ್ತು ಹಲವಾರು ಅಸ್ಮಿತೆಗಳ ನಡುವೆ ಸಿಲುಕಿ ನಾವು 70 ವರ್ಷಗಳ ಕಾಲ ಬಾಳಿ ಬದುಕಿರುವ ಒಂದು ಸಾಮಾಜಿಕ ವ್ಯವಸ್ಥೆ, ಸಾಂವಿಧಾನಿಕ ಚೌಕಟ್ಟು ಮತ್ತು ಸಾಂಸ್ಕøತಿಕ ಭೂಮಿಕೆ ಅವಸಾನದತ್ತ ಸಾಗುತ್ತಿರುವುದನ್ನು ಗಮನಿಸುತ್ತಲೇ ಇಲ್ಲ. ಅಥವಾ ಗಮನಿಸಿಯೂ ನಮಗೇಕೆ ಉಸಾಬರಿ ಎಂಬ ಸಿನಿಕತನದಿಂದ ಸೊರಗಿ ಬಳಲುತ್ತಿದ್ದೇವೆ.

ಹಾಗಾಗಿಯೇ ಸಾರ್ವಜನಿಕ ವಲಯದ ನಿತ್ಯ ಸಂಕಥನಗಳಲ್ಲಿ ಉದ್ಯಾನಗಳಿಗಿಂತಲೂ ಸ್ಮಶಾನವೇ ಹೆಚ್ಚಾಗಿ ಗೋಚರಿಸುತ್ತಿದೆ. ಈ ಸ್ಮಶಾನದಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನೇ ಹುಗಿದು ಹಾಕುವ ಮುನ್ನ ಜಾಗೃತರಾಗುವಂತೆ ಈ ಹಿರಿಯ ನ್ಯಾಯಮೂರ್ತಿಗಳು ರಣಕಹಳೆ ಮೊಳಗಿಸಿದ್ದಾರೆ. ಇಲ್ಲಿ ಶತ್ರುಗಳು ಯಾರು ? ನಾವೇ ! ಏಕೆಂದರೆ ನಾವು ನಿಜವಾದ ಶತ್ರುಗಳನ್ನು ಗುರುತಿಸಲು ವಿಫಲರಾಗಿದ್ದೇವೆ. ಮಿತ್ರರನ್ನು ಕಳೆದುಕೊಂಡಿದ್ದೇವೆ.

ಪ್ರಜಾತಂತ್ರ ಎಂದರೇನು ? ಸಮಸ್ತ ಜನತೆಯೂ ಸಮಾನ ಹಕ್ಕುಗಳನ್ನು ಹೊಂದಿದ್ದು, ಸಮಾನ ಆಶಯಗಳನ್ನು ಕೈಗೂಡಿಸಲು ಸಮಗ್ರ ಚಿಂತನೆಯಡಿ ಒಟ್ಟಾಗಿ ಸಹಜೀವನದತ್ತ ಮುನ್ನಡೆಯುವ ಒಂದು ಮಾರ್ಗ. ಈ ಸಮಾನತೆ, ಸಮಗ್ರತೆ ಮತ್ತು ಸಹಜೀವನದ ಮೌಲ್ಯಗಳೇ ಪ್ರಜಾತಂತ್ರದ ಜೀವಾಳ. ಪ್ರಜಾತಂತ್ರದ ಸಾಧನೆಗೆ ಸಂವಿಧಾನ ಎನ್ನುವುದು ಒಂದು ಆಧಾರ ಸ್ತಂಭವಷ್ಟೆ. ಮೂಲತಃ ಪ್ರಜಾತಂತ್ರದ ರಕ್ಷಣೆಗೆ ಬೇಕಿರುವುದು ಮಾನವೀಯ ಸಂವೇದನೆ ಮತ್ತು ಸಹಮಾನವರನ್ನು ಪರಸ್ಪರ ಅರಿತು ಬಾಳುವ ಸಂಯಮ. ಬಹುಶಃ ಭಾರತೀಯ ಸಮಾಜ ಈ ಸಂಯಮವನ್ನು ಹಂತಹಂತವಾಗಿ ಕಳೆದುಕೊಳ್ಳುತ್ತಿದೆ. ಮಾನವ ಸಂಬಂಧಗಳನ್ನು ನಿರ್ದಿಷ್ಟ ಅಸ್ಮಿತೆಗಳ ಸೂಕ್ಷ್ಮ ದರ್ಶಕಗಳ ಮೂಲಕ ನೋಡುವ ವಿಕೃತ ಪ್ರವೃತ್ತಿ ನಮ್ಮಲ್ಲಿ ಬೆಳೆಯುತ್ತಿದೆ. ಹಾಗಾಗಿ ಪ್ರತಿಯೊಂದು ಹಂತದಲ್ಲೂ ಮಾನವ ಸಂವೇದನೆ ಪ್ರಶ್ನಾರ್ಹವಾಗುತ್ತಿದೆ. ಎಲ್ಲರನ್ನೂ ಒಪ್ಪಿಕೊಳ್ಳುವ, ಎಲ್ಲವನ್ನೂ ಅಪ್ಪಿಕೊಳ್ಳುವ, ಭಿನ್ನಮತಗಳ ನಡುವೆಯೇ ಬಾಳುವ, ಭಿನ್ನಾಭಿಪ್ರಾಯದ ನಡುವೆಯೇ ಬದುಕುವ ಪ್ರವೃತ್ತಿ ಕ್ರಮೇಣ ಮರೆಯಾಗುತ್ತಿದೆ. ಎಲ್ಲವೂ ಪ್ರಶ್ನಾರ್ಹವಾಗಬೇಕಾದ ವೈಚಾರಿಕತೆಯ ಬದಲು ಎಲ್ಲವೂ ಪ್ರಶ್ನಾತೀತವಾಗುವ ಪ್ರತಿಗಾಮಿ ಧೋರಣೆ ಶರವೇಗದಲ್ಲಿ ವ್ಯಾಪಿಸುತ್ತಿದೆ.

ಪ್ರಜಾತಂತ್ರ ವ್ಯವಸ್ಥೆ ಸ್ಥಿರವಾಗಿ ನೆಲೆಸಲು ಪ್ರಜಾತಂತ್ರ ಮೌಲ್ಯಗಳು ಬೇರೂರಬೇಕು. ಸಹನೆ, ಸಂಯಮ, ಭ್ರಾತೃತ್ವ ಮತ್ತು ಸಮಾನತೆ ಪ್ರಜಾತಂತ್ರದ ಮೂಲ ಮಂತ್ರಗಳು. ದುರಂತ ಎಂದರೆ ಕಳೆದ ಮೂರು ದಶಕಕ್ಕೂ ಹೆಚ್ಚು ಕಾಲದ ರಾಜಕಾರಣದಲ್ಲಿ ಈ ಎಲ್ಲ ಮೌಲ್ಯಗಳನ್ನು ವ್ಯವಸ್ಥಿತವಾಗಿ ನಾಶಮಾಡುತ್ತಲೇ ಬರಲಾಗಿದೆ. ಸಹಿಷ್ಣುತೆಯನ್ನು ಮತೀಯ ಅಸ್ಮಿತೆಯ ತಕ್ಕಡಿಯಲ್ಲಿ ತೂಗುವ ಮೂಲಕ ಮಾನವ ಸಂವೇದನೆಯನ್ನೇ ನಮ್ಮ ಸಮಾಜ ಕಳೆದುಕೊಂಡಿದೆ. ಸಹಜವಾಗಿಯೇ ಪ್ರಜಾತಂತ್ರದ ಮೌಲ್ಯಗಳೂ ಕ್ಷೀಣಿಸುತ್ತಿವೆ. ತತ್ಪರಿಣಾಮ ಪ್ರತಿರೋಧ ಮತ್ತು ವಿದ್ರೋಹ ಎರಡನ್ನೂ ಸಮಾನ ನೆಲೆಯಲ್ಲಿ ಕಾಣಲಾಗುತ್ತಿದೆ. 1975ರ ತುರ್ತುಪರಿಸ್ಥಿತಿಯ ಸಂದರ್ಭಕ್ಕಿಂತಲೂ ಹೆಚ್ಚಿನ ಬಿಗುವಿನ ವಾತಾವರಣ ದೇಶದಲ್ಲಿ ಸೃಷ್ಟಿಯಾಗಿದ್ದರೆ ಅದಕ್ಕೆ ಕಾರಣ ಈ ಪ್ರವೃತ್ತಿಯೇ ಆಗಿದೆ. ಪ್ರಭುತ್ವ ಪ್ರತಿರೋಧವನ್ನು ಸಹಿಸುವುದಿಲ್ಲ, ಇದು ಸಹಜ. ಏಕೆಂದರೆ ಪ್ರಭುತ್ವಕ್ಕೆ ಅಧಿಪತ್ಯ ರಾಜಕಾರಣವನ್ನು ರಕ್ಷಿಸುವ ಆಕಾಂಕ್ಷೆ ಇರುತ್ತದೆ. ಅಧಿಪತ್ಯ ಸಾಧಿಸದೆ ಹೋದರೆ ಪ್ರಭುತ್ವ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತದೆ. ಹಾಗಾಗಿ ಆಳುವ ವರ್ಗಗಳು ಎಲ್ಲ ರೀತಿಯ ಪ್ರತಿರೋಧವನ್ನು ಹತ್ತಿಕ್ಕುತ್ತಲೇ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಯತ್ನಿಸುತ್ತದೆ.

ಇಲ್ಲಿ ಪ್ರಶ್ನೆ ಇರುವುದು ಪ್ರಜಾತಂತ್ರ ಮೌಲ್ಯಗಳು ಮತ್ತು ನಾಗರಿಕ ಸಮಾಜವನ್ನು ಕುರಿತಾದದ್ದು. ಆಧುನಿಕತೆ, ತಂತ್ರಜ್ಞಾನ ಮತ್ತು ವೈಜ್ಞಾನಿಕ ಸಾಧನೆಗಳ ಮೆಟ್ಟಿಲುಗಳನ್ನು ಏರುತ್ತಲೇ ಹೋಗುತ್ತಿರುವ ನಾಗರಿಕ ಸಮಾಜದಲ್ಲಿ ಸಹಬಾಳ್ವೆಯ ಪರಿಕಲ್ಪನೆಯೇ ನಶಿಸುತ್ತಿರುವುದು ಪ್ರಜಾತಂತ್ರದ ಸೋಲಿನ ಪ್ರಥಮ ಸೋಪಾನ ಎನ್ನಬಹುದು. ಪ್ರಜಾತಂತ್ರ ಎಂದರೆ ಕೇವಲ ಸಾಂವಿಧಾನಿಕ ಚೌಕಟ್ಟಿನಲ್ಲಿ ನಡೆಯುವ ಮತದಾನ ಹಾಗೂ ಅಧಿಕಾರ ರಾಜಕಾರಣದ ವಿದ್ಯಮಾನಗಳಲ್ಲ. ವಿಭಿನ್ನ ದೃಷ್ಟಿಕೋನಗಳು, ವಿಭಿನ್ನ ತತ್ವ ಸಿದ್ಧಾಂತಗಳು ಮತ್ತು ವೈವಿಧ್ಯಮಯ ಜೀವನ ಶೈಲಿಯ ನಡುವೆ ಸೌಹಾರ್ದ ಸಂಬಂಧಗಳನ್ನು ರೂಪಿಸುವ ಮೂಲಕ ಸಹಬಾಳ್ವೆ ನಡೆಸುವುದು ಪ್ರಜಾತಂತ್ರದ ಮೂಲ ಆಶಯವಾಗಬೇಕು. ದುರಂತ ಎಂದರೆ ಭಾರತದಲ್ಲಿ ಈ ವೈವಿಧ್ಯತೆಯನ್ನು ವ್ಯವಸ್ಥಿತವಾಗಿ ನಾಶಪಡಿಸಲಾಗುತ್ತಿದೆ. ಎಲ್ಲವನ್ನೂ ಪ್ರಶ್ನಿಸುವ ವೈಚಾರಿಕತೆಯನ್ನು ಹಂತಹಂತವಾಗಿ ಕೊಲ್ಲಲಾಗುತ್ತಿದೆ. ಪ್ರಶ್ನಾತೀತತೆಯನ್ನು ವೈಭವೀಕರಿಸಲಾಗುತ್ತಿದೆ. ಪ್ರಜಾತಂತ್ರದ ಉಳಿವಿಗೆ ಅಗತ್ಯವಾದ ಸಂವಿಧಾನವೂ ಕ್ರಮೇಣ ಪ್ರಶ್ನಾತೀತವಾಗುತ್ತಿದೆ. ಇದು ಚರ್ಚಾಸ್ಪದ ವಿಚಾರ.

ಪ್ರಜಾತಂತ್ರ ವ್ಯವಸ್ಥೆಯ ಆಧಾರ ಸ್ತಂಭಗಳಾದ ಕಾರ್ಯಾಂಗ ಮತ್ತು ಶಾಸಕಾಂಗ ತುಕ್ಕು ಹಿಡಿದು ಹಲವು ವರ್ಷಗಳೇ ಕಳೆದಿವೆ. ಸಂವಿಧಾನರೀತ್ಯಾ ನಡೆಯುವ ಮತದಾನ ಪ್ರಕ್ರಿಯೆಯನ್ನು ಹೊರತುಪಡಿಸಿ ಮತ್ತಾವುದೇ ಹಂತದಲ್ಲಿ ಈ ದೇಶದ ಆಳುವ ವರ್ಗಗಳು ಪ್ರಜಾತಂತ್ರ ಮೌಲ್ಯಗಳನ್ನು ಪಾಲಿಸುತ್ತಿಲ್ಲ. ಶಾಸಕಾಂಗದಲ್ಲಿ ಸಾರ್ವಭೌಮ ಪ್ರಜೆಗಳನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ಪ್ರಜಾತಂತ್ರ ಮೌಲ್ಯಗಳನ್ನು ದಿನನಿತ್ಯ ಉಲ್ಲಂಘಿಸುತ್ತಲೇ ಇದ್ದಾರೆ. ಶಾಸಕರನ್ನು ಮಾರುಕಟ್ಟೆಯ ಸರಕಿನಂತೆ ಕೊಂಡುಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಶಾಸನ ಸಭೆಗಳಲ್ಲಿ ನಡೆಯುವ ಕಲಾಪಗಳಲ್ಲಿ ಜನಹಿತ ಮೂಲೆಗುಂಪಾಗಿದ್ದು ರಾಜಕೀಯ ಪ್ರತಿಷ್ಠೆ ಮತ್ತು ಅಹಮಿಕೆಯೇ ಪ್ರಧಾನವಾಗಿದೆ. ಕತ್ತಿ ಹಿಡಿಯುವ ಸಂಸದರು, ಕೊಲೆ ಮಾಡಲು ಸಜ್ಜಾಗುವ ಶಾಸಕರು, ಕತ್ತು ಕಡಿಯುವ ನಾಯಕರು, ಸಂವಿಧಾನವನ್ನು ಅವಹೇಳನ ಮಾಡುವ ಪ್ರತಿನಿಧಿಗಳು ಅಪರಾಧಿ ಪ್ರಜ್ಞೆಯೇ ಇಲ್ಲದೆ ತಮ್ಮ ಕೈಂಕರ್ಯ ಮುಂದುವರೆಸಿದ್ದಾರೆ. ಪರಿಣಾಮ, ಸಂಸತ್ತಿನ ಚರ್ಚೆಗಳಲ್ಲಿ, ವಿಧಾನಸಭೆಯ ಕಲಾಪಗಳಲ್ಲಿ ದೇಶವನ್ನು ಕಾಡುತ್ತಿರುವ ಬಡತನ, ನಿರುದ್ಯೋಗ, ಕೃಷಿ ಬಿಕ್ಕಟ್ಟು, ರೈತರ ಆತ್ಮಹತ್ಯೆ, ಮಹಿಳೆಯರ ಮೇಲಿನ ದೌರ್ಜನ್ಯ, ಶೋಷಿತರ ಮೇಲಿನ ದಬ್ಬಾಳಿಕೆ, ಅಸ್ಪøಶ್ಯತೆ, ಜಾತಿ ದೌರ್ಜನ್ಯ ಮುಂತಾದ ಜ್ವಲಂತ ಸಮಸ್ಯೆಗಳು ಚರ್ಚೆಗೊಳಗಾಗುತ್ತಿಲ್ಲ.

ಈ ಕಳೆಗೆಟ್ಟ ಶಾಸಕಾಂಗದಿಂದ ಕಾರ್ಯಾಂಗವನ್ನು ಸರಿಪಡಿಸಲು ಸಾಧ್ಯವೇ ಎಂಬ ಪ್ರಶ್ನೆ ಇಂದು ಮುನ್ನೆಲೆಗೆ ಬಂದಿದೆ. ಜನಸಾಮಾನ್ಯರ ದೈನಂದಿನ ಜೀವನದ ಸಂಕಷ್ಟಗಳಿಗೆ ಸ್ಪಂದಿಸಬೇಕಾದ ಕಾರ್ಯಾಂಗ ತನ್ನ ಸಾಂವಿಧಾನಿಕ ಕರ್ತವ್ಯವನ್ನೇ ಮರೆತು ಅಧಿಕಾರಸ್ಥ ರಾಜಕಾರಣದ ಬಾಲಂಗೋಚಿಯಾಗಿರುವುದು ದುರಂತವಾದರೂ ಸತ್ಯ. ಭ್ರಷ್ಟಾಚಾರ ಒತ್ತಟ್ಟಿಗಿರಲಿ, ಕರ್ತವ್ಯ ನಿಷ್ಠೆಯನ್ನೇ ಕಳೆದುಕೊಂಡಿರುವ ಕಾರ್ಯಾಂಗ ಸ್ವಾಮಿನಿಷ್ಠೆಗೆ ಬಲಿಯಾಗಿರುವುದು ಕಣ್ಣೆದುರಿಗಿನ ಸತ್ಯ. ನವ ಉದಾರವಾದ ಮತ್ತು ಬಂಡವಾಳಶಾಹಿ ಅರ್ಥವ್ಯವಸ್ಥೆಯ ಫಲಾನುಭವಿಗಳನ್ನು ರಕ್ಷಿಸುವ ನಮ್ರ ಸೇವಕರಂತೆ ಕಾರ್ಯಾಂಗ ಕಾರ್ಯ ನಿರ್ವಹಿಸುತ್ತಿರುವುದನ್ನು ಕಳೆದ ಎರಡು ದಶಕಗಳಲ್ಲಿ ಕಾಣುತ್ತಿದ್ದೇವೆ. ಹಾಗಾಗಿಯೇ ಒಂದೆಡೆ ಬಡತನ, ಹಸಿವು, ಸಾಲದ ಹೊರೆ ತಾಳಲಾರದೆ ಮೂರು ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲೇ ಮೂವರು ಬಂಡವಾಳಿಗರು ದೇಶದ ಸಮಸ್ತ ಸಂಪತ್ತಿನ ಒಡೆಯರಾಗಲು ಹವಣಿಸುತ್ತಿದ್ದಾರೆ. ಸಮಾಜವಾದ ಎಂದರೆ ಸಂಪತ್ತಿನ ಸಮಾನ ಹಂಚಿಕೆಯೇ ಹೊರತು ಕ್ರೋಢೀಕರಣ ಅಲ್ಲ. ಆದರೆ ಭಾರತದಲ್ಲಿ ಸಮಾಜವಾದ ಎಂದರೆ ಜನಸಾಮಾನ್ಯರಿಗೆ ಆಳುವ ವರ್ಗಗಳು ಎಸೆಯುವ ತುಣುಕುಗಳೇ ಆಗಿದೆ. ಈ ಕ್ರೋಢೀಕರಣ ಮತ್ತು ಹಂಚುವಿಕೆಯ ಪ್ರಕ್ರಿಯೆಗೆ ಕಾರ್ಯಾಂಗದ ಸ್ವಾಮಿನಿಷ್ಠೆ ಮತ್ತು ನಿಷ್ಕ್ರಿಯತೆಯೇ ಕಾರಣ.

ಪ್ರಜಾತಂತ್ರ ವ್ಯವಸ್ಥೆಯ ಈ ಎರಡು ಸ್ತಂಭಗಳ ನಿಷ್ಕ್ರಿಯತೆ ಮತ್ತು ನಿರ್ಲಕ್ಷ್ಯದ ನಡುವೆಯೇ ದೇಶದ ಸರ್ವೋಚ್ಚ ನ್ಯಾಯಾಲಯದ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ನ್ಯಾಯಾಂಗದಲ್ಲೂ ಪ್ರಜಾತಂತ್ರ ಮೌಲ್ಯಗಳು ಕುಸಿಯುತ್ತಿರುವುದರ ವಿರುದ್ಧ ಬಂಡಾಯದ ಕಹಳೆ ಮೊಳಗಿದ್ದಾರೆ. ನ್ಯಾಯಾಂಗದ ಸ್ವಾತಂತ್ರ್ಯ ಹರಣ ಇದೇ ರೀತಿ ಮುಂದುವರೆದರೆ ಪ್ರಜಾತಂತ್ರ ಉಳಿಯದು ಎಂಬ ಎಚ್ಚರಿಕೆಯ ಮಾತುಗಳನ್ನಾಡುವ ಮೂಲಕ ನಾಲ್ವರು ನ್ಯಾಯಾಧೀಶರು ಪ್ರಜಾತಂತ್ರದ ಮೂರನೆಯ ಸ್ತಂಭವೂ ಶಿಥಿಲವಾಗುತ್ತಿರುವುದರ ಸೂಚನೆ ನೀಡಿದ್ದಾರೆ. ಈ ಗಂಭೀರ ಆರೋಪಗಳಿಗೆ ಈಗಾಗಲೇ ತೇಪೆ ಹಾಕುವ ಪ್ರಕ್ರಿಯೆ ಆರಂಭವಾಗಿದ್ದು ಸಾರ್ವಭೌಮ ಪ್ರಜೆಗಳನ್ನು ಮತ್ತೊಮ್ಮೆ ಕತ್ತಲಿನ ಕೂಪಕ್ಕೆ ದೂಡಲಾಗುತ್ತಿದೆ. ನಾಲ್ವರು ನ್ಯಾಯಾಧೀಶರ ಆರೋಪಗಳು ಆಡಳಿತಾರೂಢ ಪಕ್ಷ ಮತ್ತು ಪ್ರಭುತ್ವದ ಪ್ರತಿನಿಧಿಗಳಿಗೆ ಆಘಾತಕಾರಿಯಾಗಿ ಕಾಣಬಹುದು. ಆದರೆ ಜನಸಾಮಾನ್ಯರಿಗೆ ಇದು ಹೊಸತೇನಲ್ಲ. ನ್ಯಾಯಾಂಗದ ಸ್ವಾಮಿನಿಷ್ಠೆ ಮತ್ತು ಪ್ರಭುತ್ವ ಪರ ನಿಲುವು ಈಗಾಗಲೇ ಜಗಜ್ಜಾಹೀರಾಗಿದೆ.

ಪ್ರಜಾತಂತ್ರ ವ್ಯವಸ್ಥೆಯ ಈ ಮೂರು ಆಧಾರ ಸ್ತಂಭಗಳು ಕುಸಿಯುತ್ತಿರುವ ಸಂದರ್ಭದಲ್ಲಿ ಮಾಧ್ಯಮ ಎನ್ನುವ ನಾಲ್ಕನೆಯ ಸ್ತಂಭ ಜನಜಾಗೃತಿನ ನೆಲೆಯಾಗಬೇಕು. ಆದರೆ ಈ ದೇಶದ ದುರಂತ, ಮಾಧ್ಯಮ ಲೋಕವೂ ಸ್ವಾಮಿನಿಷ್ಠೆಗೆ ಬಲಿಯಾಗಿದೆ. ರಾಜಕೀಯ ಪ್ರೇರಿತ ಮಾಧ್ಯಮ, ಕಾರ್ಪೋರೇಟ್ ನಿಯಂತ್ರಿತ ಮಾಧ್ಯಮಗಳಿಂದ ಪ್ರಜಾತಂತ್ರ ಮೌಲ್ಯಗಳ ರಕ್ಷಣೆಯನ್ನು ಬಯಸುವುದೇ ತಪ್ಪಾಗುತ್ತದೆ. ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಹಾಳುಮಾಡಿ ಜನಸಾಮಾನ್ಯರನ್ನು ಮೌಢ್ಯದ ಅಂಧಕಾರದಲ್ಲಿ ಕೂಡಿಹಾಕುವ ಆಳುವ ವರ್ಗಗಳ ಬೃಹತ್ ಯೋಜನೆಗೆ ವಿದ್ಯುನ್ಮಾನ ಮಾಧ್ಯಮಗಳು ನೆರವಾಗುತ್ತಿವೆ. ಸಾಮಾಜಿಕ ತಾಣಗಳು ಈ ಪ್ರಕ್ರಿಯೆಯ ಮತ್ತೊಂದು ವೇದಿಕೆಯಾಗಿ ಪರಿಣಮಿಸಿವೆ. ಮುದ್ರಣ ಮಾಧ್ಯಮಗಳು ಕೊಂಚ ಮಟ್ಟಿಗೆ ತಮ್ಮ ಸ್ವಂತಿಕೆಯನ್ನು ಉಳಿಸಿಕೊಂಡಿದ್ದರೂ ಕ್ರಮೇಣ ಕಾರ್ಪೋರೇಟ್ ಸಂಸ್ಕøತಿಗೆ ಬಲಿಯಾಗಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿವೆ.

ಈ ಸಂದರ್ಭದಲ್ಲಿ ಪ್ರಜಾತಂತ್ರ ಮೌಲ್ಯಗಳನ್ನು ಸಂರಕ್ಷಿಸುವ ಹೊಣೆಗಾರಿಕೆ ಈ ದೇಶದ ಜನಸಾಮಾನ್ಯರ ಮೇಲಿದೆ. ಪ್ರಶ್ನಾತೀತತೆಯನ್ನು ಬದಿಗಿಟ್ಟು ವೈಚಾರಿಕ ಮನೋಭಾವವನ್ನು ರೂಪಿಸುವ ನಿಟ್ಟಿನಲ್ಲಿ ನಾಗರಿಕ ಸಮಾಜ ಮುನ್ನಡೆಯಬೇಕಿದೆ. ಪ್ರಜಾತಂತ್ರದ ಉಳಿವಿಗೆ ಇದು ಅನಿವಾರ್ಯ.

Leave a Reply

Your email address will not be published.