ಇನ್ನೂ ಜಾತ್ಯಾತೀತತೆಯ ಭ್ರಮೆ ನಮ್ಮನ್ನು ಕಾಡಬೇಕೇ ?

ನಾ ದಿವಾಕರ

ಬಿಹಾರದ ಮುಖ್ಯಮಂತ್ರಿ ನೀತಿಶ್ ಕುಮಾರ್ ಮತ್ತೊಮ್ಮೆ ಬೇಲಿ ಹಾರಿದ್ದಾರೆ. ರಾಜಕೀಯದಲ್ಲಿ ಶಾಶ್ವತ ಶತ್ರುಗಳೂ ಇಲ್ಲ ಮಿತ್ರರೂ ಇಲ್ಲ ಎಂದು ನಿರೂಪಿಸಲು ಬಹುಶಃ ಭಾರತದ ತುರ್ತುಪರಿಸ್ಥಿತಿಯ ಕೂಸುಗಳೇ ಸಾಕು ಎನಿಸುತ್ತದೆ. ಸಮಾಜವಾದ, ಲೋಹಿಯಾವಾದದ ನೆರಳಿನಲ್ಲಿ ಜಾತ್ಯಾತೀತತೆಯ ಪ್ರವಾದಿಗಳಂತೆ ವರ್ತಿಸುವ ಜೆಪಿ ಅಂದೋಲನದ ಎಲ್ಲ ಭ್ರೂಣಗಳೂ ಇಂದು ರಾಜಕೀಯ ಅರಾಜಕತೆಯ ಸಂಕೇತವಾಗಿರುವುದು ದುರಂತವಾದರೂ ಸತ್ಯ. ಬಹುಶಃ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಜೆಪಿ ಅಂದೋಲನ ಭಾರತೀಯ ಪ್ರಭುತ್ವ ರಾಜಕಾರಣದ ವಿರುದ್ಧ ಹೋರಾಡಿದ್ದರೆ ಬಹುಶಃ ಅವರ ಕಾಂಗ್ರೆಸ್ ವಿರೋಧಿ ಧೋರಣೆಯಿಂದ ಜನಿಸಿದ ಈ ಭ್ರೂಣಗಳು ಸೃಷ್ಟಿಯಾಗುತ್ತಿರಲಿಲ್ಲ. ಆದರೆ ಜೆಪಿ ಹೂಡಿದ ಸಮಗ್ರ ಕ್ರಾಂತಿ ಮೂಲತಃ ಸಮಗ್ರವಾಗಿರಲಿಲ್ಲ. ಏಕೆಂದರೆ ಪ್ರಭುತ್ವ ರಾಜಕಾರಣದ ಸಮಗ್ರತೆಯನ್ನು ಈ ಆಂದೋಲನ ಸೂಕ್ಷ್ಮವಾಗಿ ಗಮನಿಸಿಯೇ ಇರಲಿಲ್ಲ. ತುರ್ತುಪರಿಸ್ಥಿತಿ ಕಾಂಗ್ರೆಸ್ ಪಕ್ಷದ ಅಥವಾ ಇಂದಿರಾಗಾಂಧಿಯ ವ್ಯಕ್ತಿಗತ ನಿಲುವಿನ ಫಲ ಎಂದೇ ಭಾವಿಸಿದ್ದ ಸಮಗ್ರ ಕ್ರಾಂತಿ, ಇಂದಿರಾ ಗಾಂಧಿಯ ಸರ್ವಾಧಿಕಾರಿ ಧೋರಣೆಗೆ ಭಾರತದ ಪ್ರಭುತ್ವ ಎದುರಿಸುತ್ತಿದ್ದ ಸನ್ನಿವೇಶಗಳೇ ಕಾರಣ ಎಂದು ಗ್ರಹಿಸಲೇ ಇಲ್ಲ.

ಹಾಗಾಗಿಯೇ ಕಾಂಗ್ರೆಸ್ ವಿರೋಧಿ ಧೋರಣೆಯೇ ಲೋಹಿಯಾವಾದಿಗಳ ಮತ್ತು ಸಮಾಜವಾದಿಗಳ ಮೂಲ ಮಂತ್ರವಾಗಿತ್ತು. ಕಾಂಗ್ರೆಸ್ ಪಕ್ಷದ ಅಂದಿನ ಧೋರಣೆ 1970ರ ದಶಕದ ಜಾಗತಿಕ ಮತ್ತು ಅಂತರಿಕ ಪ್ರಕ್ಷುಬ್ಧ ಸನ್ನಿವೇಶ ಹಾಗೂ ಬಂಡಾಯಗಳ ಹಿನ್ನೆಲೆಯಲ್ಲಿ ಸೃಷ್ಟಿಯಾದ ಒಂದು ವಿಶಿಷ್ಟ ಸಂದರ್ಭ ಎಂದು ಜೆಪಿ ಅಥವಾ ಅವರ ಸಹಚರರು ಗ್ರಹಿಸಲು ವಿಫಲರಾಗಿದ್ದರು. ಹಾಗೊಮ್ಮೆ ತುರ್ತುಪರಿಸ್ಥಿತಿ ವಿರೋಧಿ ಹೋರಾಟ ಸಂಪೂರ್ಣ ಸಮಗ್ರತೆಯನ್ನು ಪಡೆದುಕೊಂಡಿದ್ದಲ್ಲಿ ಅಂದಿನ ದಿನಗಳಲ್ಲಿ ಬಂಡಾಯದ ದನಿಗೆ ದನಿಗೂಡಿಸಿದ್ದ ಶ್ರಮಜೀವಿಗಳ ಹೋರಾಟ ಭಿನ್ನ ಆಯಾಮವನ್ನೇ ಪಡೆದುಕೊಳ್ಳುತ್ತಿತ್ತು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಮುಖ್ಯವಾಹಿನಿಯ ಎಡಪಕ್ಷಗಳ ಅಸ್ಪಷ್ಟ ನಿಲುವು, ಲೋಹಿಯಾವಾದಿ-ಸಮಾಜವಾದಿಗಳ ಸೀಮಿತ ದೃಷ್ಟಿಕೋನ ಮತ್ತು ನೇಪಥ್ಯದಲ್ಲಿ ಬಲಗೊಳ್ಳುತ್ತಿದ್ದ ಮತೀಯ ರಾಜಕಾರಣ ಭಾರತದ ಪ್ರಭುತ್ವಕ್ಕೆ ಮತ್ತಷ್ಟು ಬಲ ನೀಡಿದ್ದನ್ನು ಇಂದಿನ ಪರಿಸ್ಥಿತಿಯಲ್ಲಿ ಕಾಣಬಹುದಾಗಿದೆ. ಇಂದಿರಾಗಾಂಧಿಯ ಪದಚ್ಯುತಿ ಕಾಂಗ್ರೆಸ್ ಪಕ್ಷವನ್ನು ಶಿಥಿಲಗೊಳಿಸಿತ್ತು ಆದರೆ ಪ್ರಭುತ್ವವನ್ನಲ್ಲ. ಪ್ರಭುತ್ವ ರಾಜಕಾರಣ ಮತ್ತು ಅಧಿಪತ್ಯವನ್ನು ಅವಲಂಬಿಸಿಯೇ ತನ್ನ ಫ್ಯಾಸಿಸ್ಟ್ ಸಿದ್ಧಾಂತವನ್ನು ಅನಾವರಣಗೊಳಿಸುವ ಸಂಘಪರಿವಾರಕ್ಕೆ ಜೆಪಿ ನೀಡಿದ ರಾಜಕೀಯ ವೇದಿಕೆ ಮುಂದಿನ ರಾಜಕೀಯ ಪಲ್ಲಟಗಳಿಗೆ ನಾಂದಿಯಾಗಿ ಪರಿಣಮಿಸಿತ್ತು.

ಭಾರತದ ಸಮಾಜವಾದಿ ರಾಜಕಾರಣಕ್ಕೆ ಒಂದು ಸ್ಪಷ್ಟ ಆಯಾಮ ಮತ್ತು ದಿಕ್ಕನ್ನು ತೋರಿದ ಲೊಕನಾಯಕ ಜಯಪ್ರಕಾಶ್ ನಾರಾಯಣ್ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಇಟ್ಟ ಕೆಲವು ತಪ್ಪು ಹೆಜ್ಜೆಗಳು ಇಂದು ಸಮಾಜವಾದಿ ತತ್ವವನ್ನೇ ಸಾರ್ವಜನಿಕ ನ್ಯಾಯಪೀಠದ ಕಟಕಟೆಯಲ್ಲಿ ನಿಲ್ಲಿಸಿದೆ. ತುರ್ತುಪರಿಸ್ಥಿತಿ ಪ್ರಭುತ್ವ ಪ್ರೇರಿತ ಪ್ರಕ್ರಿಯೆ ಎನ್ನುವ ಸೂಕ್ಷ್ಮವನ್ನು ಜೆಪಿ ಅಂದು ಗ್ರಹಿಸಿದ್ದರೆ ಜನತಾಪಕ್ಷ ಕೇವಲ ಕಾಂಗ್ರೆಸ್ ವಿರೋಧಿ ಒಕ್ಕೂಟವಾಗುತ್ತಿರಲಿಲ್ಲ. ಬದಲಾಗಿ ಭಾರತದ ರಾಜಕೀಯ ದಿಕ್ಕನ್ನೇ ಬದಲಾಯಿಸುವ ಜನಪರ ಪ್ರಭುತ್ವದ ಸಂಕೇತವಾಗಿ ಹೊರಹೊಮ್ಮುತ್ತಿತ್ತು. ಹಾಗೊಮ್ಮೆ ಜೆಪಿ ಮತ್ತು ಸಹಚರರು ಯೋಚಿಸಿದ್ದರೆ ಫ್ಯಾಸಿಸ್ಟ್ ಜನಸಂಘ ಜನತಾಪರಿವಾರದ ಒಂದು ಭಾಗವಾಗಿ ಅಧಿಕಾರ ರಾಜಕಾರಣದ ರುಚಿಯನ್ನೂ ನೋಡುತ್ತಿರಲಿಲ್ಲ, ಹಲವು ವರ್ಷಗಳ ಬಳಿಕ ಒಂದು ಸ್ವತಂತ್ರ ರಾಜಕೀಯ ಪಕ್ಷವಾಗಿಯೂ ಹೊರಹೊಮ್ಮುತ್ತಿರಲಿಲ್ಲ. ನೀತಿಶ್ ಕುಮಾರ್, ಪಾಸ್ವಾನ್, ಮುಲಾಯಂ ಅವರಂತಹ ಸಮಾಜವಾದಿಗಳೂ ಜನಿಸುತ್ತಿರಲಿಲ್ಲ. ಇಂದು ಇದೇ ಸಮಾಜವಾದಿಗಳು ಬಿಜೆಪಿಯನ್ನು ಅಪ್ಪಿಕೊಳ್ಳುತ್ತಲೂ ಇರಲಿಲ್ಲ.

ಸೆಕ್ಯುಲರಿಸಂ, ಜಾತ್ಯಾತೀತತೆ, ಧರ್ಮನಿರಪೇಕ್ಷತೆ ಅಥವಾ ವಾಜಪೇಯಿ ಹೇಳುವಂತೆ ಸರ್ವಧರ್ಮ ಸಮಭಾವ ಇವೆಲ್ಲವೂ ದೇಶದ ಸಂವಿಧಾನದಲ್ಲಿ ಇದೆ. ಆದರೆ ವಾಸ್ತವ ರಾಜಕಾರಣದಲ್ಲಿ ಅನುಸರಿಸಲ್ಪಡುತ್ತಿದೆಯೇ ಎಂಬ ಪ್ರಶ್ನೆ ಎದುರಾದಾಗ ಸೆಕ್ಯುಲರಿಸಂ ಕೆಲವರಿಗೆ ಆತ್ಮರಕ್ಷಣೆಯ ಕವಚವಾಗಿ ಇನ್ನು ಕೆಲವರಿಗೆ ಆತ್ಮರತಿಯ ಸಂಕೇತವಾಗಿ ಇನ್ನೂ ಕೆಲವರಿಗೆ ಪ್ರತಿರೋಧ ರಾಜಕಾರಣದ ಭೂಮಿಕೆಯಾಗಿ ಪರಿಣಮಿಸಿರುವುದನ್ನು ಕಾಣಬಹುದು. ಸಂವಿಧಾನದಲ್ಲಿ ಹೇಳಲಾಗಿರುವ ಸೆಕ್ಯುಲರ್ ತತ್ವಗಳನ್ನು ಭಾರತದ ಸಾಮಾಜಿಕ ಮತ್ತು ಸಾಂಸ್ಕøತಿಕ ಸಂದರ್ಭಗಳಿಗೆ ಅನ್ವಯಿಸಿ ನೋಡುವಾಗ ನಮ್ಮ ದೇಶದ ಯಾವುದೇ ರಾಜಕೀಯ ಪಕ್ಷಗಳೂ ಸೆಕ್ಯುಲರ್ ತತ್ವಗಳನ್ನು ಮೂಲತಃ ಗ್ರಹಿಸಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಹಾಗಾಗಿಯೇ ಇಲ್ಲಿ ಸೆಕ್ಯುಲರಿಸಂ ರಾಜಕೀಯ ಪರಿಭಾಷೆಯಲ್ಲಿ ಬಳಸಲ್ಪಟ್ಟು ಅಧಿಕಾರ ರಾಜಕಾರಣದ ಒಂದು ಘೋಷಣೆಯಾಗುತ್ತಿದೆಯೇ ಹೊರತು ತಾತ್ವಿಕವಾಗಿ ಗಟ್ಟಿಯಾಗುತ್ತಿಲ್ಲ.

ಈ ದೌರ್ಬಲ್ಯಕ್ಕೆ ಜೆಪಿ ಅಥವಾ ಇತರ ಯಾವುದೇ ಸೈದ್ಧಾಂತಿಕ ಆಂದೋಲನ ಕಾರಣ ಎಂದು ಹೇಳಲಾಗುವುದಿಲ್ಲ. ಆದರೆ ಒಟ್ಟಾರೆಯಾಗಿ ಸ್ವತಂತ್ರ ಭಾರತದಲ್ಲಿ ಅಧಿಕಾರ ರಾಜಕಾರಣ ನಡೆದುಬಂದ ಹಾದಿಯಲ್ಲೇ ಲೋಪದೋಷಗಳಿವೆ. ಸೆಕ್ಯುಲರಿಸಂ ಅಥವಾ ಜಾತ್ಯಾತೀತತೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಸಾಮಾನ್ಯರಿಗೆ ಸ್ಪಂದಿಸುವ ಒಂದು ರಾಜಕೀಯ ಪರಿಭಾಷೆಯಾಗಿ ಮೂಡುವುದರ ಬದಲಾಗಿ ಅಧಿಕಾರ ರಾಜಕಾರಣದ ಹಸ್ತಾಂತರಕ್ಕೆ ಭೂಮಿಕೆಯಾಗಿ ಪರಿಣಮಿಸಿರುವುದು ದುರಂತ. ಅಯೋಧ್ಯಾಕಾಂಡದ ನಂತರದಲ್ಲಿ ಹಿಂದುತ್ವ ರಾಜಕಾರಣ ದೇಶದಲ್ಲಿ ನೆಲೆಯೂರಿದ ನಂತರ ಸೆಕ್ಯುಲರಿಸಂ ಮತ್ತಷ್ಟು ಸಂಕೀರ್ಣತೆಯನ್ನು ಪಡೆದಿರುವುದೂ ಅಷ್ಟೇ ಸತ್ಯ 1990ರ ದಶಕದಲ್ಲಿ ಎಲ್ ಕೆ ಅಡ್ವಾಣಿ ಅದುವರೆಗೂ ಕಾಂಗ್ರೆಸ್ ಪಕ್ಷ ಅನುಸರಿಸುತ್ತಿದ್ದ ಸೆಕ್ಯುಲರಿಸಂ ಮಾದರಿಯನ್ನು ಕಪಟ ಸೆಕ್ಯುಲರಿಸಂ ಎಂದು ಹೀಗಳೆದಾಗ ಠಿseuಜo seಛಿuಟಚಿಡಿism ಎಂಬ ಪದ ಜನಪ್ರಿಯತೆ ಪಡೆಯಿತೇ ಹೊರತು, ಬಿಜೆಪಿ ಅನುಸರಿಸುವ ಸೆಕ್ಯುಲರ್ ಮಾದರಿ ಯಾವುದು ಎಂಬ ಪ್ರಶ್ನೆ ಉದ್ಭವಿಸಲೇ ಇಲ್ಲ. ಬಿಜೆಪಿ ಅಧಿಕಾರ ರಾಜಕಾರಣದಲ್ಲಿ ನೆಲೆಯೂರಿದ ನಂತರ ಪಕ್ಷದೊಡನೆ ಕೈಜೋಡಿಸಿದ ಸೆಕ್ಯುಲರ್ ಹಣೆಪಟ್ಟಿ ಹೊತ್ತ ಪ್ರಾದೇಶಿಕ ಪಕ್ಷಗಳೂ ಸಹ ಈ ಪ್ರಶ್ನೆಗೆ ಪ್ರಾಮುಖ್ಯತೆ ನೀಡಲಿಲ್ಲ.

ಇದರ ಪರಿಣಾಮ ಏನಾಯಿತೆಂದರೆ ಸೆಕ್ಯುಲರಿಸಂ ಎನ್ನುವ ಪರಿಕಲ್ಪನೆ ಅಧಿಕಾರ ರಾಜಕಾರಣದ ಹಂಚಿಕೆಯ ಸಾಧನವಾಗಿ ಪರಿಣಿಮಿಸಿತು. ಪ್ರಜಾತಂತ್ರ ವ್ಯವಸ್ಥೆಯ ಒಂದು ಭೂಮಿಕೆ ಆಗಲಿಲ್ಲ. ಜೆಪಿ ಚಳುವಳಿಯ ಮೂಲಕ ಪ್ರವರ್ಧಮಾನಕ್ಕೆ ಬಂದ ನವ ಯುಗದ ಸಮಾಜವಾದಿ ನಾಯಕರು ಜಾತಿ ರಾಜಕಾರಣದ ಮೊರೆ ಹೋದರು. ಪ್ರಾದೇಶಿಕತೆ ಮತ್ತು ನಿರ್ದಿಷ್ಟ ಪ್ರದೇಶದ ಜಾತಿ ರಾಜಕಾರಣದಿಂದಾಚೆ ಯೋಚಿಸುವ ವ್ಯವಧಾನವೇ ಇಲ್ಲದ ಈ ಪಕ್ಷಗಳ ಹೋರಾಟ ಕೇವಲ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸೀಮಿತವಾಯಿತು. ಸಿದ್ಧಾಂತ, ತತ್ವ ಮತ್ತು ಪ್ರಜಾತಂತ್ರ ಮೌಲ್ಯಗಳು ನೇಪಥ್ಯಕ್ಕೆ ಸರಿದವು. ಬಿಜೆಪಿ ವಿರೋಧಿ ಧೋರಣೆ ಈ ಪಕ್ಷಗಳನ್ನು ಕಾಂಗ್ರೆಸ್ ಪಕ್ಷದೆಡೆಗೆ ವಾಲುವಂತೆ ಮಾಡಿದರೆ ಕಾಂಗ್ರೆಸ್ ವಿರೋಧಿ ಧೋರಣೆ ಬಿಜೆಪಿಯೆಡೆಗೆ ವಾಲುವಂತೆ ಮಾಡಿತ್ತು. ಇಲ್ಲಿ ಸೆಕ್ಯುಲರಿಸಂ ವಿನಿಮಯ ರಾಜಕಾರಣದ ಸಾಧನವಾಗಿ ಅವಸಾನ ಹೊಂದಿದ್ದನ್ನು ದೇವೇಗೌಡ, ಮಾಯಾವತಿ, ಮುಲಾಯಂಸಿಂಗ್, ರಾಮ್ ವಿಲಾಸ್ ಪಾಸ್ವಾನ್, ಶರದ್ ಪವಾರ್, ನೀತಿಶ್ ಕುಮಾರ್, ದಿ. ಜಯಲಲಿತಾ, ಮಮತಾ ಬ್ಯಾನರ್ಜಿ, ಶ್ರೀನಿವಾಸ ಪ್ರಸಾದ್ ಮುಂತಾದ ಸಮಾಜವಾದಿ-ದಲಿತಪರ-ಒಬಿಸಿ ಪರ ರಾಜಕಾರಣಿಗಳ ಮತ್ತು ಈ ನಾಯಕರು ಪ್ರತಿನಿಧಿಸುವ ಪಕ್ಷಗಳ ರಾಜಕೀಯ ನಿಲುವು ಮತ್ತು ನಿರ್ಧಾರಗಳಲ್ಲಿ ಸ್ಪಷ್ಟವಾಗಿ ಕಾಣಬಹುದು.

ಭಾರತದ ರಾಜಕಾರಣದಲ್ಲಿ ಯಾವ ಪಕ್ಷ ಸೆಕ್ಯುಲರ್ ಎಂದು ನಿರ್ಧರಿಸಲು ದೆಹಲಿಯಲ್ಲಿ ಅಥವಾ ವಿವಿಧ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಸರ್ಕಾರಗಳತ್ತ ನೋಡುವುದು ಪರಿಪಾಠವಾಗಿದೆ. ಏಕೆಂದರೆ ಕಾಂಗ್ರೆಸ್ ಅಥವಾ ಬಿಜೆಪಿಯ ಸಖ್ಯವೇ ಪ್ರಾದೇಶಿಕ ಪಕ್ಷಗಳ ಸೆಕ್ಯುಲರ್ ಅರ್ಹತೆಯನ್ನು ನಿರ್ಧರಿಸುವ ಮಾನದಂಡವಾಗಿದೆ. ಈ ವಿಶಿಷ್ಟ ಪ್ರಕ್ರಿಯೆಗೆ ನೀತಿಶ್ ಕುಮಾರ್, ಕರ್ನಾಟಕದ ಶ್ರೀನಿವಾಸ್ ಪ್ರಸಾದ್ ಮುಂತಾದವರು ಸಾಕ್ಷಿಗಳಾಗಿದ್ದಾರೆ. ಆದರೆ ಇಂದು ಈ ದೇಶದ ಪ್ರಜ್ಞಾವಂತ ಜನತೆ ಯೋಚಿಸಬೇಕಿರುವ ವಿಚಾರ ಎಂದರೆ, ಭಾರತದಲ್ಲಿ ಸೆಕ್ಯುಲರಿಸಂ ಅಥವಾ ಜಾತ್ಯಾತೀತತೆ ಒಂದು ಸ್ಪಷ್ಟ ನೆಲೆ ಕಂಡುಕೊಂಡಿದೆಯೇ ? ಬಹುಶಃ ಎಡಪಕ್ಷಗಳನ್ನು ಹೊರತುಪಡಿಸಿ ಮತ್ತಾವ ಪಕ್ಷವೂ ಈ ನಿಟ್ಟಿನಲ್ಲಿ ಪ್ರಾಮಾಣಿಕ ಉತ್ತರ ನೀಡಲಾಗುವುದಿಲ್ಲ. ನೀತಿಶ್ ಕುಮಾರ್ ಈ ಅಸ್ಪಷ್ಟತೆ ಮತ್ತು ಅನಿಶ್ಚಿತತೆಯ ಸಂಕೇತವಾಗಿ ಇಂದು ಎನ್‍ಡಿಎ ಬಾಹುಗಳಲ್ಲಿ ಬಂಧಿತರಾಗಿದ್ದಾರೆ.

ಹಿಂದೂ, ಮುಸ್ಲಿಂ, ದಲಿತ, ಆದಿವಾಸಿ ಹೀಗೆ ಜಾತಿ ಧರ್ಮಗಳಿಂದಾಚೆಗೆ ಸೆಕ್ಯುಲರ್ ತತ್ವವನ್ನು ಯೋಚಿಸುವ ದೂರದೃಷ್ಟಿ ನಮ್ಮ ರಾಜಕೀಯ ನಾಯಕರುಗಳಿಗಾಗಲೀ ಪಕ್ಷಗಳಿಗಾಗಲೀ ಇಲ್ಲ ಎನ್ನುವುದನ್ನು ಸಾಕಷ್ಟು ಬಾರಿ ನಿರೂಪಿಸಲಾಗಿದೆ. ಮೂಲತಃ ಭಾರತದ ಜನಸಾಮಾನ್ಯರು ತಮ್ಮ ನಿತ್ಯ ಜೀವನದಲ್ಲಿ ಸೆಕ್ಯುಲರ್ ಆಗಿರುತ್ತಾರೆ. ಈ ದೇಶದ ದಲಿತರು ಪರಿಪೂರ್ಣವಾಗಿ ಸೆಕ್ಯುಲರ್ ಆಗಿರುವುದರಿಂದಲೇ ನಿರಂತರ ಶೋಷಣೆ ಮತ್ತು ಜಾತಿ ದೌರ್ಜನ್ಯದ ನಡುವೆಯೂ ದೇಶ ಒಂದಾಗಿ ಉಳಿದಿದೆ. ಈ ದೇಶದ ಮುಸ್ಲಿಮರು ಸೆಕ್ಯುಲರ್ ಆಗಿರುವುದರಿಂದಲೇ ಜನಸಾಮಾನ್ಯರ ನೆಲೆಯಲ್ಲಿ ಸೌಹಾರ್ದತೆ ಕಾಣಬಹುದಾಗಿದೆ. ವಿಪರ್ಯಾಸವೆಂದರೆ ಆಳುವ ವರ್ಗಗಳಿಗೆ ಈ ಸೆಕ್ಯುಲರ್ ತತ್ವಗಳು ಅಪ್ಯಾಯಮಾನವಾಗುವುದಿಲ್ಲ. ರಾಜಕೀಯ ಪಕ್ಷಗಳು ತಮ್ಮ ಅಧಿಕಾರ ರಾಜಕಾರಣದ ಲಾಲಸೆಯನ್ನು ತೀರಿಸಿಕೊಳ್ಳಲು ಸೆಕ್ಯುಲರ್ ತತ್ವಗಳನ್ನು ಚಿಮ್ಮುಹಲಗೆಯಂತೆ ಬಳಸಿಕೊಳ್ಳುತ್ತಿರುವುದನ್ನು ಕಾಣಬಹುದು. ಇಲ್ಲಿಯೂ ನೀತಿಶ್ ಕುಮಾರ್ ಮತ್ತು ಇತರ ತುರ್ತುಪರಿಸ್ಥಿತಿಯ ಕೂಸುಗಳು ಸಾಕ್ಷಿಯಾಗಿ ನಿಲ್ಲುತ್ತಾರೆ.

ಸಮಾಜವಾದ ಎಂದರೆ ಸಂಪನ್ಮೂಲ ಹಾಗು ಸಂಪತ್ತಿನ ಸಮಾನ ವಿತರಣೆ. ಸೆಕ್ಯುಲರಿಸಂ ಎಂದರೆ ಪ್ರಭುತ್ವದ ದೃಷ್ಟಿಯಲ್ಲಿ ಎಲ್ಲ ಜನಸಮುದಾಯಗಳೂ ಒಂದೇ ಎಂದು ನೋಡುವ ಮನೋಭಾವ. ಈ ಎರಡೂ ಮೌಲ್ಯಗಳು ಪ್ರಸ್ತುತ ರಾಜಕೀಯ ಪರಿಭಾಷೆಯಲ್ಲಿ ಕಾಣುತ್ತಿಲ್ಲ. ಸಂಪತ್ತಿನ ಕ್ರೋಢೀಕರಣ ಮತ್ತು ಕಬಳಿಸುವಿಕೆಯ ನಡುವೆಯೇ ಅವಕಾಶವಂಚಿತ ಬಡ ಜನತೆಗೆ ತುಣುಕುಗಳನ್ನು ಎಸೆಯುವುದನ್ನೇ ಸಮಾಜವಾದ ಎನ್ನುವ ಪರಿಸ್ಥಿತಿಯನ್ನು ಕಾಣುತ್ತಿದ್ದೇವೆ. ಮತ್ತೊಂದೆಡೆ ವಿಭಿನ್ನ ಧರ್ಮಗಳ ಸಮನ್ವಯ ಸಾಧಿಸುವ ಸರ್ಕಾರಗಳ ಕಸರತ್ತುಗಳೇ ಸೆಕ್ಯುಲರಿಸಂ ಎನ್ನುವಂತಾಗಿದೆ. ಈ ಸಮನ್ವಯದ ಹಪಾಹಪಿ ವಿಭಿನ್ನ ಧರ್ಮಗಳ ಶೋಷಿತ ಸಮುದಾಯಗಳಿಗೆ ಅಗತ್ಯ ಎನಿಸುವುದೇ ಇಲ್ಲ. ಆದರೆ ಈ ಸಮುದಾಯಗಳ ಹಿತಾಸಕ್ತಿಯನ್ನು ಕಾಪಾಡುವ ಆಳುವ ವರ್ಗಗಳ ಕುಹಕ ಪ್ರಯತ್ನಗಳಿಗೆ ಸೆಕ್ಯುಲರಿಸಂ ಬಲಿಯಾಗುತ್ತದೆ.

ಈ ಹಿತಾಸಕ್ತಿ ರಾಜಕಾರಣವನ್ನೇ ನೀತಿಶ್ ಕುಮಾರ್, ಲಲ್ಲೂ ಯಾದವ್, ಮುಲಾಯಂ, ಮಾಯಾವತಿ , ದೇವೇಗೌಡ ಮುಂತಾದ ನಾಯಕರು ಅನುಸರಿಸಿದ್ದಾರೆ. ಹಾಗಾಗಿಯೇ ಈ ಅವಕಾಶವಾದಿ ರಾಜಕಾರಣಿಗಳಿಗೆ ಕೆಲವೊಮ್ಮೆ ಕಾಂಗ್ರೆಸ್ ಸೆಕ್ಯುಲರ್ ಪಕ್ಷವಾಗಿ ಕಂಡರೆ ಕೆಲವೊಮ್ಮೆ ಬಿಜೆಪಿ ಸೆಕ್ಯುಲರ್ ಆಗಿ ಕಾಣುತ್ತದೆ. ಬಿಜೆಪಿಯೊಡನೆ ಎಂದಿಗೂ ಕೈ ಜೋಡಿಸದ ಲಲ್ಲೂ ಸೆಕ್ಯುಲರ್ ಆಗಿ ಕಾಣುತ್ತಾರೆ. ಬಹುಶಃ ತುರ್ತು ಪರಿಸ್ಥಿತಿಯ ಸಂದರ್ಭದ ಸಮಗ್ರ ಕ್ರಾಂತಿ ಸಮಾಜವಾದ ಮತ್ತು ಸೆಕ್ಯುಲರಿಸಂನ ನೆಲೆಯಲ್ಲಿ ಪ್ರಭುತ್ವದ ವಿರುದ್ಧದ ಹೋರಾಟವಾಗಿ ರೂಪುಗೊಂಡಿದಲ್ಲಿ ಇಂದು ಈ ಪ್ರಹಸನಗಳನ್ನು ನೋಡುವ ಅವಶ್ಯಕತೆ ಉದ್ಭವಿಸುತ್ತಿರಲಿಲ್ಲ. ಕಾಂಗ್ರೆಸ್, ಬಿಜೆಪಿ ಮತ್ತು ಜಾತಿವಾದ ಮತ್ತು ಪ್ರಾದೇಶಿಕತೆಯನ್ನೇ ಭೂಮಿಕೆಯನ್ನಾಗಿ ಮಾಡಿಕೊಂಡಿರುವ ಇತರ ಪಕ್ಷಗಳಿಂದಾಚೆಗಿನ ಸೆಕ್ಯುಲರ್ ತತ್ವಗಳನ್ನು ಭಾರತದ ಜನಸಾಮಾನ್ಯರಲ್ಲಿ, ಸಾಂವಿಧಾನಿಕ ಮೌಲ್ಯಗಳಲ್ಲಿ ಮತ್ತು ಜನತೆಯ ನಿತ್ಯ ಜೀವನದಲ್ಲಿ ಕಾಣುವ ದಾರ್ಶನಿಕತೆ ಇಂದಿನ ತುರ್ತು ಅಗತ್ಯತೆ.

Leave a Reply

Your email address will not be published.