ಇದ್ದದ್ದು ಇದ್ಹಾಂಗ ಹೇಳಿ ಯಾರ್ಗೂ ಹೇಳ್ದಂಗೆ ಹೊರಟೋದ್ರಾ ಕೋಟಿ

ನಾ ದಿವಾಕರ

ಸುತ್ತಲೂ ಶೂನ್ಯ ಆವರಿಸಿದಾಗ ಜಗತ್ತು ಮರೆಯಾಗುತ್ತದೆ. ಪ್ರಜ್ಞೆ ಮಸುಕಾಗುತ್ತದೆ. ಮನಸು ವಿಚಲಿತವಾಗುತ್ತದೆ. ಅಬ್ಬಾ, ಅದೆಂತಹ ಶೂನ್ಯ ಆವರಿಸಿಬಿಟ್ಟಿದೆ. ನಿಮ್ಮ ಅಗಲಿಕೆಯನ್ನು ಹೇಗೆ ಅರ್ಥೈಸಲಿ ಕೋಟಿ ಸರ್. ನಾವು ಕಳೆದುಕೊಂಡಿರುವುದು ಒಬ್ಬ ವ್ಯಕ್ತಿಯನ್ನಲ್ಲ, ಒಂದು ಸಂಸ್ಥೆಯ ಸ್ಥಾಪಕನನ್ನಲ್ಲ, ಅಥವಾ ಒಬ್ಬ ಚಿಂತಕನನ್ನಲ್ಲ. ಒಂದು ದಿಟ್ಟ ದನಿಯನ್ನು ಕಳೆದುಕೊಂಡಿದ್ದೇವೆ. ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೇವೆ ಎಂಬ ಹತಾಶೆ ಎದುರಾದಾಗಲೆಲ್ಲಾ, ಇದೋ ನಾನಿದ್ದೇನೆ ಎಂದು ನಿಲ್ಲುತ್ತಿತ್ತು ನಿಮ್ಮ ಸಂಪಾದಕತ್ವದ ಆಂದೋಲನ. ಅದೊಂದು ಪತ್ರಿಕೆ ಮಾತ್ರವಲ್ಲ ಕೋಟಿ ಸರ್. ಹೋರಾಟಗಾರರಿಗೆ ಕರಪತ್ರ, ಪ್ರತಿರೋಧದ ದನಿಗಳಿಗೆ ಸ್ಪೂರ್ತಿಯ ಚಿಲುಮೆ, ದಮನಿತರಿಗೆ ಸಾಂತ್ವನದ ದನಿ, ನೊಂದವರಿಗೆ ಆಶ್ರಯದ ಗಣಿ. ಇದ್ದದ್ದು ಇದ್ಹಾಂಗ ಹೇಳುತ್ತಿದ್ದ ನೀವು ಅದ್ಹೇಗೆ ಥಟ್ಟನೆ ಎಲ್ಲವನ್ನೂ ತೊರೆದುಬಿಟ್ಟಿರಿ ಕೋಟಿ ?

ನಿಜ, ಸಾವು ಎಷ್ಟು ಅನಿರೀಕ್ಷಿತವೋ ಅಷ್ಟೇ ನಿಶ್ಚಿತ. ಆದರೆ ಹೀಗೂ ಸಾವು ಎರಗಿಬರಬೇಕೇ ? ಗಾಜಿನ ಪಂಜರದಲ್ಲಿ ನೀವು ಮಲಗಿದ್ದನ್ನು ಕಂಡಾಗ ನನಗೆ ನೆನಪಾದದ್ದು ನಿಮ್ಮ ಅಂತರಂಗದ ಮಾತುಗಳು. ನಿಮ್ಮಲ್ಲಿ ನಾ ಕಂಡಿದ್ದ ವಿನಯ ಮತ್ತು ಜನರ ತುಡಿತಕ್ಕೆ ಥಟ್ಟನೆ ಸ್ಪಂದಿಸುವ ಸಂವೇದನೆಯ ನುಡಿಗಳು. ಏಕೆ ಮೌನವಾಗಿಬಿಟ್ಟಿರಿ ಕೋಟಿ ? ಗೌರಿಯನ್ನು ಕಳೆದುಕೊಂಡು ಅನಾಥರಂತಾಗಿದ್ದವರಿಗೆ ಮತ್ತೊಂದು ಅಘಾತ ನೀಡಿಬಿಟ್ಟಿರಲ್ಲಾ ? ಸಾಕಾಯಿತೇ ಈ ಪಯಣ. ಇನ್ನು ಈ ನಿರ್ವಾತದಲಿ ಏನ ಕಾಣಲು ಸಾಧ್ಯ ಕೋಟಿ ಸರ್ ? ನೀವು ಮತ್ತೊಮ್ಮೆ ಹುಟ್ಟಿ ಬರಲಿ ಎಂಬ ಭಾವನಾತ್ಮಕ ಆಕಾಂಕ್ಷೆಯೂ ನನಗಿಲ್ಲ. ಏಕೆಂದರೆ ನೀವು ಬರಲಾರಿರಿ. ಬರಲು ಸಾಧ್ಯವೂ ಇಲ್ಲ. ಇದು ನಿಮಗೂ ತಿಳಿದಿತ್ತು. ನಿಮ್ಮ ಇಚ್ಚೆಯಂತೆಯೇ ಅಂತ್ಯಕ್ರಿಯೆ ಸಂಸ್ಕಾರವಿಲ್ಲದೆಯೇ ನಡೆದಿದೆ. ನೀವು ಹಿಂದಿರುಗಲಾರಿರಿ.

ನಿಮ್ಮ ದನಿಗೆ ಇನ್ನೂ ಜೀವವಿದೆ. ನಿಮ್ಮ ಚೇತನಕ್ಕೆ ಇನ್ನೂ ಚೈತನ್ಯವಿದೆ. ನಿಮ್ಮ ಸಾಂತ್ವನದ ನುಡಿಗಳಿಗೆ ಇನ್ನೂ ನಮ್ಮ ಹೃದಯಾಂತರಾಳದಲ್ಲಿ ಜಾಗವಿದೆ. 20ನೆಯ ವರ್ಷಕ್ಕೆ ಕಾಲಿಡುತ್ತಿದೆ ನಮ್ಮೀರ್ವರ ನಡುವಿನ ಸಂವಹನ ಸಂಬಂಧ. ನನಗೊಂದು ಅಸ್ಮಿತೆಯನ್ನೇ ಕಲ್ಪಿಸಿಬಿಟ್ಟಿರಿ. ಒಂದು ಭೂಮಿಕೆಯನ್ನು ಸೃಷ್ಟಿಸಿಬಿಟ್ಟಿರಿ. ಒಂದು ವೇದಿಕೆಯನ್ನು ಒದಗಿಸಿದ್ದೀರಿ. ಅಂತರಾಳದ ಭಾವನೆಗಳು ಸಮ್ಮಿಲನಗೊಂಡಾಗ ಸಂಬಂಧಗಳು ಬೆಸೆಯಲು ಮುಖಾಮುಖಿಯಾಗಲೇಬೇಕಿಲ್ಲ ಅಲ್ಲವೇ ಕೋಟಿ. ನಮ್ಮೀರ್ವರ ಅಕ್ಷರ ಬಾಂಧವ್ಯವೇ ಇದಕ್ಕೆ ಸಾಕ್ಷಿ. ನನ್ನ ಚಿಂತನೆಗಳಿಗೆ ಅಕ್ಷರ ರೂಪ ನೀಡಿದ ಸಂದರ್ಭದಲ್ಲಿ ಜನರಿಗೆ ತಲುಪುವುದು ಹೇಗೆ ಎಂದು ಯೋಚಿಸುತ್ತಿದ್ದಾಗ ನನಗೆ ದೊರೆತಿದ್ದು ನಿಮ್ಮ ಕನಸಿನ ಕೂಸು ಆಂದೋಲನ ಎಂಬ ಪತ್ರಿಕೆ. ಎಲ್ಲಿದ್ದೆ ನಾನು ಎಲ್ಲಿಗೆ ತಂದು ನಿಲ್ಲಿಸಿಬಿಟ್ಟಿರಿ ನೀವು ? ವರ್ಣಿಸಲಸಾಧ್ಯ.

ನನ್ನನ್ನು ಬಿಡಿ ಕೋಟಿ ಸರ್. ಮೈಸೂರಿನ ವೈಚಾರಿಕ ಮನಸುಗಳು, ವೈಜ್ಞಾನಿಕ ಪ್ರಜ್ಞೆ ಮತ್ತು ಮಾನವ ಸಂವೇದನೆಯ ತಂತುಗಳು ನಿಮ್ಮೊಡನೆ ಪಿಸುಗುಟ್ಟುತ್ತಿಲ್ಲವೇ ? ನೀವು ದಿವ್ಯ ಮೌನಕ್ಕೆ ಶರಣಾಗಿ, ಚಿರನಿದ್ರೆಗೆ ಜಾರಿ ಇಹಲೋಕದ ಪಯಣ ಮುಗಿಸಿಬಿಟ್ಟಿರಿ. ನಿಮ್ಮ ಸ್ಪಂದನೆಗಾಗಿ ಹಾತೊರೆಯುವ ಈ ಮನಸುಗಳು ಅನಾಥ ಭಾವ ಎದುರಿಸುವುದಿಲ್ಲವೇ ? 43 ವರ್ಷಗಳ ಸುದೀರ್ಘ ಪಯಣದಲ್ಲಿ ಪತ್ರಿಕೋದ್ಯಮವನ್ನೇ ಉಸಿರಾಡಿದ ನಿಮ್ಮ ಚೇತನ ಭೌತಿಕವಾಗಿ ನಿರ್ಗಮಿಸಿದೆ. ಆದರೆ ಬೌದ್ಧಿಕವಾಗಿ ನಮ್ಮ ನಡುವೆಯೇ ಇದೆ. ಭವಿಷ್ಯದ ಭರವಸೆಯೊಂದಿಗೆ ಸಮತೆ, ಸಮಾನತೆ , ಸೌಹಾರ್ದತೆ, ಭ್ರಾತೃತ್ವ ಮತ್ತು ಸಂವೇದನೆಯ ಮನಸುಗಳಿಗಾಗಿ ಹಗಲಿರುಳು ಶ್ರಮಿಸಿದ ನಿಮ್ಮ ಆಂತರ್ಯದ ಆಂದೋಲನವೇ 43 ವರ್ಷಗಳ ಕಾಲ ಅಕ್ಷರ ರೂಪದಲ್ಲಿ ಶೋಷಿತ ಜನರೊಡನೆ ಸಂಭಾಷಣೆ ನಡೆಸಿದೆ.

ನಿಮ್ಮ ಅಗಲಿಕೆಯಿಂದ ಉಂಟಾಗಿರುವ ನೋವು ಶಮನವಾಗಲು ಇನ್ನೆಷ್ಟು ಕಾಲ ಬೇಕೋ ? ಏಕೆಂದರೆ ಈ ನೋವು ಶೂನ್ಯದಲ್ಲಿ ನುಲಿಯುತ್ತದೆ. ನಿರ್ವಾತದಲ್ಲಿ ಪರದಾಡುತ್ತದೆ. ಸಂವೇದನೆಯ ಕತ್ತು ಹಿಸುಕುವ ಪ್ರಯತ್ನಗಳು ವ್ಯವಸ್ಥಿತವಾಗಿ ನಡೆಯುತ್ತಿರುವ ವಿಷಮ ಸನ್ನಿವೇಶದಲ್ಲಿ ನಿಮ್ಮ ಆ ದನಿ, ಅಕ್ಷರ ರೂಪದ ಮಾರ್ದನಿ ದಮನಿತರಿಗೆ ನೀಡುತ್ತಿದ್ದ ಸ್ಪೂರ್ತಿ ಮರಳಿ ಪಡೆಯಲು ಸಾಧ್ಯವೇ ? ಬಹುಶಃ ಇಲ್ಲ ಎನ್ನಬಹುದು. ಈ ನಿರಾಸೆಯೊಂದಿಗೇ ನಿಮ್ಮ ದನಿಯನ್ನು ನಮ್ಮ ಮನದಾಳದಲಿ ಹೊತ್ತು ಮುನ್ನಡೆಯಬೇಕಿದೆ.

ಇದ್ದದ್ದು ಇದ್ಹಾಂಗ ಹೇಳುತ್ತಿದ್ದ ನೀವು ಇದ್ದಕ್ಕಿದ್ಹಂಗೆ ನಿರ್ಗಮಿಸಿದ್ದಾದರೂ ಏಕೆ ? ನೀವು ಇಲ್ಲವಾದ ಸಂದರ್ಭದಲ್ಲಿ ಕಣ್ಣಂಚಿನಲಿ ಮೂಡಿದ ಕಂಬನಿ ತೊಟ್ಟಿಕ್ಕಲಾರಂಭಿಸಿದಾಗ ವೇದನೆಯ ನಡುವೆಯೂ ಮನದಾಳದಿ ಮೂಡಿದ ಪದಗಳು ಇವು – ಕೋಟಿ ನಿಮಗೆ ನೀವೇ ಸಾಟಿ !

Leave a Reply

Your email address will not be published.