ಇಂದಿಗೂ ಶಿಥಿಲಗೊಳ್ಳದ ಸಂಗೀತದ ಸೆಕ್ಯುಲರ್ ಸಾಮ್ರಾಜ್ಯ     

-ಡಾ.ಶಿವಕುಮಾರ್ ಕಂಪ್ಲಿ.

  FB_IMG_1487680581364  ಅಕ್ಷರದ ಸಾಲುಗಳ ಬೆನ್ನಟ್ಟಿದ ನಮಗೆ ಭೌತಿಕ ಸುಖದ ಅನುಭವಗಳೇ ಪ್ರಧಾನವೆನಿಸುತ್ತವೆ. ಲೋಕದ ಸಂಗತಿಯೊಂದನ್ನ ಪ್ರಶ್ನಿಸದೇ ಒಪ್ಪಲಾಗದ ಮನಸ್ಥಿತಿ ಹೊಂದಿದವರು ಆಧುನಿಕ  ಓದುಗರು. ವಿಜ್ಞಾನ ಮತ್ತು ವೈಚಾರಿಕ ಚರಿತ್ರೆಗಳು ಇಂತಹ ಸಾಕ್ಷಿ ತೋರುವ ಅಕ್ಷರಗಳ ಆಧಾರದಿಂದಲೇ ಮೊಳಕೆಯೊಡೆದು, ಚಿಗುರಿ  ಸಾಕ್ಷಾತ್ಕಾರಗೊಂಡಿವೆ. ಆಧುನಿಕ ಸಾಹಿತ್ಯವೂ ಕೂಡ ಅಲ್ಪ ಕಲ್ಪನೆಯನ್ನೂ ಬಹುಪಾಲು ವರ್ತಮಾನದ ಪ್ರಾಯೋಗಿಕ ಅನುಭವಗಳನ್ನ ತನ್ನ ಪ್ರಧಾನ ಆಕರವನ್ನಾಗಿಸಿಕೊಂಡಿದೆ.

    ಕಲ್ಪನೆ ಮತ್ತು ಭಾವನೆಗಳ ಬೆನ್ನು ಸವರುವ ಸಂಗೀತವು ಆಂತರಿಕ ಸುಖವನ್ನ ಪ್ರಧಾನವಾಗಿಸಿಕೊಂಡಿದೆ. ಸಂಗೀತದ ಸಂತೋಷ, ರೋಮಾಂಚನಗಳು ನಮ್ಮ ದೇಹಕ್ಕೆ ಮನಸ್ಸಿಗೆ, ತಟ್ಟುವುದಾದರೂ ಅವನ್ನ ಹೇಗೆ ಎಷ್ಟು ಎಂದು ಪ್ರಮಾಣೀಕರಿಸಿ ಪದಗಳಲ್ಲಿ ಹಿಡಿದಿಡಲಾಗದು. ಅವುಗಳ ಒಳ ಆಳಕ್ಕಿಳಿದಾಗಲೇ ಅವುಗಳ ಆನಂದ ಸಿಗಲು ಸಾಧ್ಯ. ಅವಿಲ್ಲದವರಿಗೆ ಅದು ಕೈಗೆ ಸಿಗದ ನೆಲ್ಲಿಕಾಯಿಯಂತೆ ಹುಳಿಯಾಗಿಯೇ ಕಾಣಬಲ್ಲದು.

     ಸಂಗೀತ ಸಾಹಿತ್ಯಗಳ ಒಲವಿಲ್ಲದವನನ್ನ ಮನುಷ್ಯ ಎನ್ನಲಾಗದು ಎಂದು ಮಹಾಕವಿ ಪಂಪ ಹೇಳುತ್ತಾನೆ. ಹಾಡಲ್ಲದ ಪಾಂಡಿತ್ಯ ಪ್ರಧಾನವಾದ ಓದು ತನ್ನ ಆಕರ್ಷಣೆಯನ್ನ ಕಳೆದುಕೊಂಡು ಸಾಹಿತ್ಯ ಜಡವೆನಿಸಿದಾಗ ಆನು ಒಲಿದಂತೆ ಹಾಡುವೆ ಎಂದು ಬಸವಣ್ಣ ಹಾಡೆಂಬ ಹೊಸ ಕ್ರಾಂತಿಗೆ ಕಾರಣೀ ಪುರುಷನಾದನು. ದಾಸರು ಕರ್ನಾಟಕ ಸಂಗೀತ ಎಂಬ ಹೊಸ ಪ್ರಕಾರವನ್ನೇ ಬಳಕೆಗೆ ತಂದರು. ತತ್ವ ಪದಕಾರರು ನಾದದ ಗುಂಗಿನಲ್ಲಿ ಮುಳುಗಿ ಧರ್ಮ ಧರ್ಮಗಳ ಸಂಘರ್ಷವನ್ನ ತೊಡೆದು ಹಾಕಲೆಂದೇ ಅಲ್ಲ ಮತ್ತು  ಅಲ್ಲಮನನ್ನ, ಪಲ್ಲಕ್ಕಿ ಮತ್ತು  ಅಡ್ಲಿಗಿಯನ್ನ ಒಂದು ಮಾಡಿದರು.

     ಹೊಸಗನ್ನಡ ಕಾವ್ಯವೂ ಈ ಹಾಡಿನ  ಹಾದಿಯನ್ನ ಬಿಡಲಿಲ್ಲ. ಅದು ಭಾರತೀಯ ನಾದ ಪರಂಪರೆಯನ್ನ ಮತ್ತು ಪಾಶ್ಚಾತ್ಯದ ಗೇಯ ಪರಂಪರೆಯನ್ನ  ಇವಳ ಹಾಡ ಅವಳಿಗಿಟ್ಟು ನೋಡ ಬಯಸಿದೆ, ಅವಳ ತೊಡುಗೆ ಇವಳಿಗಿಟ್ಟು ಹಾಡಬಯಸಿದೆ ಎಂದಿತು. ಹೊಸ ಬಗೆಯ ಹಾಡಿನ ಈ ಝಲಕ್ಕನ್ನ  ಸುಮ್ಮನೆ ಕುಳಿತು ಕೇಳಿದರೂ ಅಲ್ಲಿ ಸಂಸ್ಕೃತದ ಶಾಸ್ತ್ರೀಯ ಕನ್ನಡದ ದೇಶೀಯ ಹಾಗೂ ಪಾಶ್ಚಾತ್ಯರ ನಾದ ಮಾದರಿಗಳು ಒಂದಕ್ಕೊಂದು ಕೈ ಕೈ ಹಿಡಿದು ನಡೆದಿರುವುದನ್ನ ಕಾಣಬಹುದು.

   ಅನುಭಾವ ಪ್ರಧಾನವಾದ ಭಾರತೀಯ ನಾದದ ಚರಿತೆಯು ಪವಾಡದ ನೆಲೆಯಲ್ಲಿ, ದೈವೀ ಶಕ್ತಿಯ ರೂಪಗಳಲ್ಲಿ ಗೋಚರಿಸುತ್ತದೆ. ಇಲ್ಲಿ ಶಿಷ್ಯ ಶರಣಾಗಿ, ಸೇವಕನಾಗಿ, ಗುಲಾಮನಾಗಿ ಅನೇಕ ವರ್ಷ ಸಾಧನೆ ಮಾಡಿದ ಮೇಲೆಯೇ ದೊರಕುವ ಗುರು ಕಾರುಣ್ಯದಂತೆ ಸಂಗೀತವು ಒಲಿದಿದೆ.

    ಸಂಗೀತದಲ್ಲಿ ಗುರು ಶಿಷ್ಯ ಪರಂಪರೆಗಳನ್ನ ಉತ್ತರ ದಕ್ಷಿಣ ವೈವಿಧ್ಯತೆಗಳನ್ನ ಬಗೆ ಬಗೆಯ ಮನೆತನಗಳ ವೈಶಿಷ್ಟ್ಯಗಳನ್ನ ಕಾಣಬಹುದಾಗಿದೆ. ಭಾರತೀಯ ಸಂಗೀತ ಲೋಕದಲ್ಲಿ ಹಾಡಿನಿಂದಲೇ ದೀಪ ಹಚ್ಚುವ, ಮಳೆ ತರಿಸುವ, ರೋಗ ವಾಸಿಮಾಡುವ, ಜೀವ ನೀಡುವ, ಜೀವ ಹರಣ ಮಾಡುವ, ದೇವಾದಿ ದೇವನನ್ನು ಒಲಿಸಿಕೊಳ್ಳುವ ಸಂಗತಿಗಳಿವೆ.

  ಸುಡುವ ವರ್ತಮಾನದ ಹಾಡುಗಳು ಕೂಡ ಇಂತಹ ಪವಾಡದ ರೀತಿಯಲ್ಲೇ ಅನೇಕ ಹೋರಾಟಗಳಿಗೆ ನಾಂದಿಯಾಗಿರುವುದನ್ನ ನಮ್ಮ ಲಾವಣಿಗಳು ತತ್ವ ಪದಗಳು, ಕಾಲಜ್ಞಾನಿ ಪದಗಳು, ಸ್ವರವಚನಗಳು  ಕಾರಣವಾಗಿರುವುದನ್ನ ಇಂದಿಗೂ ಗುರುತಿಸಬಹುದಾಗಿದೆ. ಭಾರತ ಸ್ವತಂತ್ರ ಸಂಗ್ರಾಮದ ಸೈನಿಕರ ವೀರಾವೇಶ, ಗಾಂಧೀಜಿಯ ಅಹಿಂಸೆ, ಎಷ್ಟು ಮಹತ್ವ ಪಡೆದಿವೆಯೋ ಅಷ್ಟೇ ಮಹತ್ವವು ವಂದೇ ಮಾತರಂ ಗೀತೆಗೆ ದಕ್ಕಿದೆ. ಇಂದಿಗೂ ಈ ಹಾಡು ಕೋಟ್ಯಾಂತರ ಭಾರತೀಯರ ಎದೆಯಲ್ಲಿ ರೋಮಾಂಚನದ ಹೊಳೆ ಹರಿಸುತ್ತಿರುವುದು ವಿಶೇಷವಲ್ಲವೇ?. ನಮ್ಮ ರಾಷ್ಟ್ರಗೀತೆಗೂ ನಾಡಗೀತೆಗೂ ರೈತಗೀತೆಗೂ ಮನಸೋಲದವರಾರು?

        ಹಾಡಿಗೆ  ಅಸಲು ಭಾಷೆಯ ಚೌಕಟ್ಟಿಲ್ಲ, ಧರ್ಮದ ಎಲ್ಲೆ ಇಲ್ಲ. ದೇಶ ವಿದೇಶ ಎಂಬ ಗಡಿಗಳ ಸೀಮಾರೇಖೆಗಳಿಲ್ಲ. ಮೇಡ ಇನ್ ಇಂಡಿಯಾ ಹಾಡಿದ ಆಲಿಶಾಳ ಹಾಡಿಗೆ ತೀರಾ ಸಣ್ಣ ಹಳ್ಳಿಯ ಕುರಿಕಾಯುವ ಹುಡುಗನೂ ತಲೆದೂಗಿದ ಕಥೆ ಇಲ್ಲವೇ? ನಮ್ಮ ಭೀಮ್‌ಸೇನ್ ಜೋಶಿ, ಗಂಗೂಬಾಯಿ ಹಾನಗಲ್, ಮಲ್ಲಿಕಾರ್ಜುನ ಮನ್ಸೂರ, ಸಿದ್ಧರಾಮ ಜಂಬಲದಿನ್ನಿಯವರನ್ನ ಮೆಚ್ಚದವರುಂಟೆ?

     ಲತಾ ಮಂಗೇಶ್‌ಕರ್, ಮಹ್ಮದ್ ರಫಿ, ಕಿಶೋರ್‌ಕುಮಾರ್, ಎಸ್.ಪಿ.ಬಾಲಸುಭ್ರಮಣ್ಯಂ, ಪಿ.ಬಿ.ಶ್ರೀನಿವಾಸ್ ಅಷ್ಟೆಲ್ಲಾ ಯಾಕೆ ಈ ಹೊತ್ತಿನ ಸಂಗೀತಾ ಕಟ್ಟಿ, ಕುನಾಲ್ ಗಾಂಜಾವಾಲ, ರಘುದೀಕ್ಷಿತ್, ಫಯಾಜ್ ಖಾನ್, ಸೋನು ನಿಗಂ, ವಿಜಯ ಪ್ರಕಾಶ್ ಮೊದಲಾದವರೆಲ್ಲಾ ಯಾರಿಗೆ ಇಷ್ಟವಾಗಲಾರರು? ಶಾಸ್ತ್ರೀಯ, ಸುಗಮ ಸಂಗೀತ, ಚಿತ್ರಗೀತೆಗಳು ನಮ್ಮ ಮಣ್ಣಿನ ಜನಪದ ಪ್ರಕಾರಗಳು ಭಾರತೀಯರನ್ನೆಲ್ಲಾ ಮನಸೋಲುವಂತೆ ಮಾಡಿಲ್ಲವೇ?

       ಇಷ್ಟೆಲ್ಲ ಹೇಳಲು ಕಾರಣವೆಂದರೆ ಹಾಡು ಮತ್ತು ಹಾಡಿನ ಹಾದಿಗಳ ನಿರೂಪಣೆ ಕುರಿತು ಬಂದ ಬರಹಗಳು ತೀರಾ ಕಡಿಮೆ. ಅದರಲ್ಲೂ ಶಾಸ್ತ್ರೀಯ ಸಂಗೀತದ ರೂಪ ನಿರೂಪಗಳ ಪುಸ್ತಕಗಳು ಅಪರೂಪವೇ ಅಂತಹ ಅಪರೂಪದ ಕನ್ನಡ ಪುಸ್ತಕಗಳಲ್ಲೊಂದು ಕೂಡ್ಲಿಗಿಯವರೇ ಆಗಿರುವ ಡಾ.ಡಿ.ಪಿ.ಜ್ಯೋತಿಲಕ್ಷ್ಮಿಯವರು ಬರೆದಿರುವ ಹಿಂದೂಸ್ಥಾನಿ ಸಂಗೀತಕ್ಕೆ ಗ್ವಾಲಿಯರ್ ಘರಾಣೆಯ ಕೊಡುಗೆ(ಉತ್ತರ ಕರ್ನಾಟಕವನ್ನ ಅನುಲಕ್ಷಿಸಿ).

    ಡಾ.ಜ್ಯೋತಿ ಕೂಡ್ಲಿಗಿಯವರು ಆರು ಅಧ್ಯಾಯಗಳ ತಮ್ಮ ಈ ಪುಸ್ತಕದಲ್ಲಿ ಸಂಗೀತದ ಪರಿಕಲ್ಪನೆ, ಅರ್ಥ, ಸ್ವರೂಪ, ವೈಶಿಷ್ಟ್ಯಗಳನ್ನ ಸಂಗೀತದ ಚಾರಿತ್ರಿಕ ವಿವರಗಳನ್ನ, ಸಂಗೀತ ಪರಂಪರೆಗಳ ಸೂಕ್ಷ್ಮ ಅವಲೋಕನವನ್ನ ಮಾಡಿದ್ದಾರೆ. ಜೊತೆಗೆ ಉತ್ತರ ಕರ್ನಾಟಕದಲ್ಲಿ ಗ್ವಾಲಿಯರ್ ಘರಾಣ ಮನೆತನಗಳ ವೈಶಿಷ್ಟತೆಯನ್ನೂ ಉತ್ತರ ಕರ್ನಾಟಕ ಸಂಗೀತದ ಮಹಾನ್ ಸಾಧಕರನ್ನೂ ಇಲ್ಲಿ ಕಟ್ಟಿಕೊಟ್ಟಿದ್ದಾರೆ.

    ಡಾ.ಜ್ಯೋತಿ ಕೂಡ್ಲಿಗಿಯವರು ಮೂಲತಹ ಹಿಂದೂಸ್ಥಾನೀ ಗಾಯಕಿಯಾದ್ದರಿಂದಲೇ ಸಂಗೀತದ ಸೂಕ್ಷ್ಮ ಮತ್ತು ವೈಶಾಲ್ಯವನ್ನ ಸಹಜವಾಗಿ ಹಿಡಿದಿಡಲು ಸಾಧ್ಯವಾಗಿದೆ. ಹಾಡು ಹಕ್ಕಿಗಳ ಗೂಡಿನ ಕಲರವದಂತಿರುವ ಇವರ ಮನೆತನವೇ ಸಂಗೀತಮಯವಾದದ್ದು. ಹಾಡೆಂಬ ದೇಸೀಯ ಮರದ ಗೂಡಿಂದ ಸಂಗೀತದ ವಿಶಾಲ ದಿಗಂತಕ್ಕೆ ಹಾರಿದ ಇವರು ತಾವು ಕಂಡ ಮತ್ತು ತಮ್ಮ ಅನುಭವದ ಅರಿವಿಗೆ ದಕ್ಕಿದ ಬೃಹತ್ ಮತ್ತು ಮಹತ್ ಸಾಧಕರನ್ನ ಅಷ್ಟೇ ಸೌಜನ್ಯದಿಂದ ಮತ್ತು ವಿನಯದಿಂದ ನಿರೂಪಿಸಿದ್ದಾರೆ. ಪುಸ್ತಕಕ್ಕೇ ಮೆರುಗು ನೀಡುವ ಮುನ್ನುಡಿ ಮತ್ತು ಬೆನ್ನುಡಿಗಳಿಂದ ಇವರ ಸಾಧನೆಯ ಎಳೆಯ ಪರಿಚಯ ಕಂಡಮೇಲೂ ನಾವು ಪುಸ್ತಕದ ಆಳ ಹೊಕ್ಕರೆ ಅಲ್ಲಿಯೂ ಇವರ ಬರಹ ಎಲ್ಲೂ ಅಹಂಗೆ ಒಳಗಾಗದೇ ಎಂದರೋ ಮಹಾನುಭಾವುಲು ಅಂದರಿಕಿ ನಾ ವಂದನಮುಲು ಎಂಬ ಧಾಟಿಯಲ್ಲೇ ಸಾಗುತ್ತಾ ಹೋಗಿದೆ.

    ಸಂಗೀತದ ಮೂಲ ಪ್ರಕೃತಿಯೇ ಪಶು ಪಕ್ಷಿಗಳ ಕೂಗು, ದುಂಬಿಗಳ ಗುಂಜಾರವ, ಪ್ರಕೃತಿಯ ಚರಾಚರಗಳಲ್ಲಿ ಕಾಣುವ ನಾದಗಳ ಅನುರಣನಗಳೇ ಸಂಗೀತಕ್ಕೆ ಮೂಲ. ಸಂಗೀತವೊಂದು ಸಹಜ ಯೋಗ, ಪರಮಾನಂದ ಪ್ರಾಪ್ತಿಯ ಅನುಭಾವಿಯ ಹಿರಿಯ ಸಾಧನ. ಸಾಧಕನೊಬ್ಬನ  ಸಂಗೀತವು ಏಕಕಾಲಕ್ಕೆ  ಹಾಡುವವರನ್ನೂ ಕೇಳುವವರನ್ನೂ ಮೈಮರೆಸಿಬಿಡುತ್ತದೆ.

    ಸಂಗೀತದ ಸಾಧನೆ ಅಷ್ಟು ಸುಲಭದ್ದಲ್ಲ. ಸಂಗೀತವೆಂಬುದು ಕೇವಲ ಮನೋರಂಜನೆಯ ಸಾಧನವಾಗಿರದೆ ಅದು ಇಂದ್ರಿಯಾತೀತವಾದ ಆಧ್ಯಾತ್ಮಿಕ ರಸಾನುಭವ. ಇದು ಬಯಸಿದ ಪ್ರತಿಯೊಬ್ಬರಿಗೂ ಕೈಗೆಟುಕುವ ಸಾಧನವಲ್ಲ. ಸಂಗೀತಕ್ಕೆ ಹಾತೊರೆವ ಸಾಧಕ ಭೌತಿಕ ಆಮಿಷ ಆಕರ್ಷಣೆಗಳಿಗೆ ತಿಲಾಂಜಲಿಯಿಟ್ಟು ಜೀವನವನ್ನು ಸದಾ ಸಂಗೀತದ ಸಾಧನೆಗಾಗಿಯೇ ಮೀಸಲಿಡಬೇಕಾಗುತ್ತದೆ. ಸಾಧಕನು ಆಮಿಷಗಳೆಂಬ ಸದ್ದು ಗೊಂದಲಗಳ ಪೇಟೆಯನ್ನ ಬಿಟ್ಟು ಏಕಾಂತವಾಸಿಯಾಗಿ ಸಾಧಿಸಬೇಕಾಗುತ್ತದೆ. ಸಾಧನೆಯ ಆಸಕ್ತಿ ಇದ್ದವರಿಗೆ ಮಾತ್ರ ಈ ವಿದ್ಯೆ ದಕ್ಕುತ್ತದೆ ಎಂಬ ಮಾತುಗಳು ಹಾಡಿನ ಹಾದಿಗೆ ಅಡ್ಡ ದಾರಿಗಳಿಲ್ಲ ಎಂಬುದನ್ನ ಸಾಬೀತುಪಡಿಸುತ್ತವೆ.

   ಭಾರತೀಯ ಸಂಗೀತವು ಎರಡು ವಿಧದಲ್ಲಿ ವಿಸ್ತಾರಗೊಂಡಿರುವುದನ್ನ ಲೇಖಕಿಯು ಮಾರ್ಗೀಯ ಶೈಲಿ ಮತ್ತು ದೇಶೀಯ ಶೈಲಿ ಎಂದು ವಿಭಜಿಸಿ ವಿವರಿಸುತ್ತಾರೆ. ಮಾರ್ಗೀಯ ಸಂಗೀತದಲ್ಲಿ ಋಷಿಮುನಿಗಳು ಗಂಧರ್ವರು ದೇವತೆಗಳು ಹಾಡಲ್ಪಡುತ್ತಾರೆ. ಪ್ರಾಚೀನ ಕಾಲದಲ್ಲಿ ಈ ಸಂಗೀತವನ್ನ ಋಷಿಮುನಿಗಳು ದೇವರ ಸಾಕ್ಷಾತ್ಕಾರಕ್ಕಾಗಿ ಹಾಡುತ್ತಿದ್ದರು ಎನ್ನುತ್ತಾರೆ.

   ದೇಶೀ ಸಂಗೀತವು ಮಾನವರಿಂದ ಮಾತ್ರ ಹಾಡಲ್ಪಡುತ್ತದೆ. ದೇಶೀ ಸಂಗೀತವು ಮಾನವ ನಿರ್ಮಿತವಾಗಿದ್ದು ಅದರ ಉದ್ದೇಶ ಜನಮನ ರಂಜನೆಯಾಗಿದೆ. ಆದ್ದರಿಂದ ದೇಶೀ ಸಂಗೀತವು ಜನರ ಅಭಿರುಚಿಗೆ ತಕ್ಕಂತೆ ಅದರಲ್ಲಿ ವಿಭಿನ್ನ ಹಾದಿಗಳೆಂಬ ರೀತಿಯ ಬದಲಾವಣೆಗಳಾದವು ಎನ್ನುತ್ತಾರೆ.

    ಡಾ.ಜ್ಯೋತಿಕೂಡ್ಲಿಗಿ ಅವರ ಸಂಗೀತದ ಈ ಪುಸ್ತಕ ನಮಗೆ ಮುಖ್ಯವೆನಿಸುವುದು ಅದರ ಧರ್ಮಾತೀತ ನೆಲೆಯಿಂದ ಸಂಗೀತ ಹೇಗೆ ಆರ್ಯ ಮತ್ತು ದ್ರಾವಿಡವನ್ನ ಹಿಂದೂ ಮತ್ತು ಮುಸ್ಲಿಂ ಧರ್ಮವನ್ನ ದೇಶ ಮತ್ತು ಪಾಶ್ವಾತ್ಯವನ್ನ ಒಂದು ಮಾಡಿದೆ ಎಂಬ ವಿವರಗಳಿಂದ.

ಬೌದ್ಧ, ಜೈನ ಮತ್ತು ಹಿಂದೂ ಸಂಗೀತದ ನಂತರ ಭಾರತೀಯರನ್ನ ಬೆಸೆದುಕೊಂಡದ್ದು ಮುಸ್ಲಿಂ ಸಂಗೀತ. ೧೨೯೬ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಅಲ್ಲಾವುದ್ದೀನ್ ಖಿಲ್ಜಿ ಮಹಾನ್ ಸಂಗೀತ ಪ್ರೀಮಿಯಾಗಿದ್ದ ಈತ ತನ್ನ ದರ್ಬಾರ್‌ನಲ್ಲಿ ಅಮೀರ್ ಖುಸ್ರೋ ಎಂಬ ಪಾರ್ಸಿ ಕವಿಗೆ ಆಶ್ರಯ ನೀಡಿದ್ದ. ಭಾರತೀಯ ಸಂಗೀತದಲ್ಲಿ ತನ್ನ ಹೊಸ ರಾಗಗಳಿಂದ ಬದಲಾವಣೆ ತಂದವನೇ ಅಮೀರ್ ಖುಸ್ರು. ಇಂದು ಎಲ್ಲರೂ ನುಡಿಸುವ ತಬಲಾ ಕಂಡು ಹಿಡಿದವನೇ ಅಮೀರ್ ಖುಸ್ರು. ಭಾರತೀಯ ಸಂಗೀತಕ್ಕೆ ಖ್ಯಾಲ್ ಹಾಗೂ ಕವ್ವಾಲಿ ಪದ್ಧತಿಯನ್ನ ಪ್ರಚಾರಕ್ಕೆ ತಂದವನೀತ.

   ಹುಮಾಯೂನ್ ಕಾಲದಲ್ಲಿ ಪ್ರಚಾರಕ್ಕೆ ಬಂದ ಭಜನ್ ಗಾಯನ ಪ್ರಕಾರವು ಜನಸಾಮಾನ್ಯರನ್ನ ಸಂಗೀತದ ಕಡೆಗೆ ಆಕರ್ಷಿಸಿತು. ಅಕ್ಬರ್‌ನ ಕಾಲವನ್ನ ಹಿಂದೂಸ್ಥಾನೀ ಸಂಗೀತದ ಸುವರ್ಣ ಯುಗ ಎನ್ನಲಾಗುತ್ತದೆ. ಗ್ವಾಲಿಯರ್‌ನ ತಾನ್‌ಸೇನ್ ಈತನ ಆಸ್ಥಾನದಲ್ಲಿದ್ದನು. ಸ್ವತಃ ಅಕ್ಬರ್ ನಕ್ಕಾರಎಂಬ ವಾದ್ಯವನ್ನ ನುಡಿಸುವಲ್ಲಿ ಪ್ರಾವಿಣ್ಯತೆಯನ್ನ ಪಡೆದಿದ್ದನು. ಆತನ ಮಗ ಜಹಂಗೀರ್ ಅಪರೂಪದ ಸಿತಾರ್ ವಾದಕನಾಗಿದ್ದ. ಹಮಾಯೂನನ ಪತ್ನಿ ನೂರ್‌ಜಹಾನ್ ಸಂಗೀತ ಜ್ಞಾನವುಳ್ಳ ಕವಯತ್ರಿಯಾಗಿದ್ದಳು. ಈತನ ಆಸ್ಥಾನದಲ್ಲಿ ಶ್ರೇಷ್ಟ ಹಿಂದೂ ಮುಸ್ಲಿಂ ಗಾಯಕರಿದ್ದರು. (ಬಿಲಾಸ್ ಖಾನ್, ಪರವೇಜದಾದ್, ಖುರಂದಾದ್, ಹಮಖಾನ್, ಪತ್ತರ್‌ಖಾನ್, ಪಂಡಿತ್ ಸೋಮನಾಥ, ಪಂಡಿತ್ ದಾಮೋದರ)

    ಜಹಂಗೀರನ ನಂತರ ಬಂದ ಷಹಜಹಾನನೂ ಸಂಗೀತ ಪ್ರೇಮಿಯಾಗಿದ್ದ. ದ್ರುಪದ ಗಾಯನ ಶಾಯಿರಿ, ಭಜನ್‌ಗಳು ಈತನಿಗೆ ಅತ್ಯಂತ ಪ್ರಿಯವಾಗಿದ್ದವು. ಈತನ ಕಾಲದಲ್ಲಿ ಶ್ರೇಷ್ಟ ಹಿಂದೂ ಮುಸ್ಲಿಂ ಗಾಯಕರು ಮತ್ತು ನೃತ್ಯಗಾರರಿದ್ದರು.    ಚರಿತ್ರೆಯಲ್ಲಿ ಕರಾಳ ಮುಖವನ್ನ ಹೊತ್ತ ತುಘಲಕ್, ಸಿಕಂದರ್ ಲೂದಿ, ಔರಂಗಜೇಬರು ಸಂಗೀತದ ಪರಮ ಶತ್ರುಗಳಾಗಿದ್ದರು ಎಂಬ ಅಂಶವನ್ನ ದಾಖಲಿಸುತ್ತ ಲೇಖಕರು ಸಂಗೀತವೆಂಬುದು ಮಾನವೀಯ ಮುಖ ಹೊತ್ತವರ ಸೊತ್ತು ಎಂಬ ಚಾರಿತ್ರಿಕವಾದ ಸಾರ್ವಕಾಲಿಕ ಮೌಲ್ಯವನ್ನ ಎತ್ತಿ ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲೇ ನಾವೂ ಮತ್ತೊಮ್ಮೆ ಸಾಹಿತ್ಯ ಸಂಗೀತಗಳ ಒಲವಿಲ್ಲದವನು ಮನುಷ್ಯನೇ ಅಲ್ಲ ಎಂಬ ಪಂಪನನ್ನ ಮತ್ತೊಮ್ಮೆ ನೆನೆಯಬೇಕು.
ಔರಂಗಜೇಬನ ನಂತರ ಸಂಗೀತವು ಕ್ಷೀಣಿಸುತ್ತಾ ಹೋಯಿತು. ಸಂಗೀತಗಾರರೂ ತಮ್ಮ ಮನೆತನದವರಿಗೆ ಮಾತ್ರ ಕಲಿಸುವ ಪದ್ದತಿ ಹುಟ್ಟುಹಾಕಿದರು. ಇದರಿಂದ ಜನರಲ್ಲಿ ಸಂಗೀತದ ಬಗ್ಗೆ ಕೀಳರಿಮೆ ಮತ್ತು ತಿರಸ್ಕಾರಗಳು ಕಂಡುಬರತೊಡಗಿದವು. ಈ ಬಗೆಯ ನಡೆಯನ್ನ ಮತ್ತೆ ತೊಡೆದು ಹಾಕಿ ಸಂಗೀತಕ್ಕೆ ತಮ್ಮ ಅಧ್ಯಯನಗಳಿಂದ ಹೊಸ ಆಕರ್ಷಣೆ ತಂದವರೇ ಆಂಗ್ಲರು. ಜೋನ್ಸ ಕ್ಯಾಪ್ಟನ್ ಡೇ, ಕ್ಯಾಪ್ಟನ್ ಮಿಲಿಯಮ್‌ರ ವಿಶೇಷ ಅಧ್ಯಯನವನ್ನೂ ಈ ಕೃತಿ ಉದಾಹರಿಸಿದೆ.

   ಸಂಗೀತದ ಪ್ರಕಾರಗಳಾದ ಖ್ಯಾಲ್, ಠುಮ್ರಿ, ಕವ್ವಾಲಿ, ಟಪ್ಪಾ, ದಾದ್ರ, ತರಾನ, ಚತುರಂಗದ ವಿವಿಧ ವಿಧಾನಗಳನ್ನ ಈ ಕೃತಿ ಕೂಲಂಕಷವಾಗಿ ವಿವರಿಸುತ್ತದೆ. ಒಂದೇ ಪರಂಪರೆಯ ಹಾಡಿನ ಹಾದಿಯ  ರಾಗ, ಲಯ, ಸ್ವರ ಚಮತ್ಕಾರಗಳನ್ನು, ನಿರೂಪಣಾ ವೈಖರಿಗಳನ್ನೂ ಈ ಪುಸ್ತಕ ಬಿಡಿಸಿ ತೋರಿದೆ. ಈ ಎಲ್ಲಕ್ಕಿಂತಲೂ ಮಿಗಿಲಾಗಿ ಸಮಾಜೋ ಧಾರ್ಮಿಕ ಲೋಕ ಬದಲಾದರೂ ಸಂಗೀತದ ಈ ಹಾಡಿನ ಲೋಕ ಇಂದಿಗೂ ಹೇಗೆ ತನ್ನ ಪರಿಧಿಯಲ್ಲಿ ಸೆಕ್ಯುಲರ್‌ತನವನ್ನ ಗಟ್ಟಿಗೊಳಿಸುತ್ತಲೇ ಬಂದಿದೆ ಎಂಬ ಮಹತ್ವದ ಅಂಶದತ್ತ ಈ ಕೃತಿ ಬೆರಳು ಮಾಡುತ್ತದೆ. ಬೆರಗು ಮೂಡಿಸುತ್ತದೆ.

Leave a Reply

Your email address will not be published.