ಆನಂದ@ಆಸೆಗಳಲೋಕ

-ರಂಗನಾಥ ಕಂಟನಕುಂಟೆ

buddhaಪ್ರಿಯ, ಬುದ್ಧ ಗುರುವೆ. ಕ್ಷಮೆಯಿರಲಿ.
“ಆಸೆಯೇ ದುಃಖಕ್ಕೆ ಮೂಲ” ಎಂಬ ನಿನ್ನ ಲೋಕೋತ್ತರ `ಮಾತಿಗೆ’, “ಆಸೆಗಳೇ ಯಶಸ್ಸಿನ ಮೆಟ್ಟಿಲು!” ಅಂಥ ಕೊಂಚ ಹೊಸ ಶೇಪುಕೊಡುತ್ತಿದ್ದೇನೆ. `ಸಂತೆ’ಯ ಹೊತ್ತಿಗೆ ತಕ್ಕ ಹಾಗೆ….. ನಿನ್ನ ಶಿಷ್ಯನಾಗಿರುವುದಕ್ಕೆ ನನಗೆ ಅಷ್ಟು ಸ್ವಾತಂತ್ರ್ಯ ಬೇಡವೇ? ನಿನ್ನ ಹಳೆಯ ಮಾತಿಗೆ ಅಂಟಿಕೊಂಡಿದ್ದರೆ ನನ್ನನ್ನು ಮೊಂಡುಮೂಲನಿಷ್ಟವಾದ ಕಾಡಿಸಬಹುದು. ಲೋಕವೂ ಕುಟುಕಬಹುದು. ಈ ಲೋಕದ ಹೊಟ್ಟೆಯಲ್ಲಿ ನಿತ್ಯ ಹುಟ್ಟುವ ಅಸಂಖ್ಯ ಆಸೆಗಳ ಹಸಿವು ತಣಿಸಲಾಗದೆ ಸೋತ್ತಿದ್ದೇನೆ. ನನ್ನ ಬಳುಕುವ ಬಾಗುವ ಸಲಾಮು ಹೊಡೆವ ಭಾವನೆಗಳ ಮೇಲೆ ಆಸೆಗಳು ಸಾರಿರುವ ಐಂದ್ರಜಾಲಿಕ ಯುದ್ಧದಲ್ಲಿ. ಅಥವಾ ಆಸೆಗಳ ಬಚ್ಚಿಡಿಸಿ ನೀನೇ ಸೋಲಿಸಿದೆಯೋ? ಅವು ನನ್ನ ಮೇಲೆ ಸವಾರಿ ಮಾಡುತ್ತಿವೆ; ಪಶುಪ್ರವೃತ್ತಿಗಳು. ಅಲ್ಲ. ನನ್ನ `ಜಾತಿ’ಯ ಜೀವನಾಡಿಯವೇ ಕೂಸುಗಳು. ಇಲ್ಲಿ ಎಲ್ಲಕ್ಕೂ ಸ್ಪರ್ಧೆ!

ಮಲ ಹೊರಹಾಕುವುದಕ್ಕೂ. ಲೋಕದಲ್ಲಿ ಬದುಕಲಿಕ್ಕೂ ಅನರ್ಹವಾಗಿಸಬಹುದು ಎಂಬ ನೆವದಲ್ಲಿ ಪಿಳ್ಳೆಯ ಹುಡುಕುತ್ತ ಅವುಗಳಿಗೆ ಶರಣೋ ಶರಣು! ಸಹಸ್ರಾರು ಸಾಲುಗಳ ಶರಣು!
ನನ್ನ ಶರಣುಬುದ್ದಿಯನ್ನು ಬಿಡಬಾರದಲ್ಲವೇ? ಶರಣು ಶರಣಾರ್ಥಿ ಶರಣು ಎನ್ನುತ್ತಲೆ ಅಣ್ಣ ಬಸವಣ್ಣ ಇಬ್ಬರು ಮಾನಿನಿಯರಿಗೆ ಶರಣಾಗಲಿಲ್ಲವೇ? ಅದಕ್ಕಾಗಿಯೇ ನಿನ್ನ ಮಾತಿನ ಕೆಲವು ಪದಗಳ ಪಲ್ಲಟಿಸಿ ಅವುಗಳ ಧರಿಸಿರುವೆ. ಚಡ್ಡಿಯನ್ನು ಪ್ಯಾಂಟಾಗಿಸಿದಂತೆ, ಆ ಪ್ಯಾಂಟ ಮೇಲೆ ಹಳೆಯ ಚಡ್ಡಿ ತೊಟ್ಟಂತೆ. ಬೇಕಾದ ಹಾಗೆ ತೊಟ್ಟಿರುವೆ. ಚಡ್ಡಿ ಇರುವುದೇ ತೊಡಲಿಕ್ಕೆ. ಕಾನೂನು ಇರುವುದೇ ಭಂಗಿಸುವುದಕ್ಕೆ. ಮಾತಿರುವುದೇ ಮುರಿಯಲಿಕ್ಕೆ?

ಬಾಗಿದ ಮಾತಿನ ಜೋಲಿಯಲ್ಲಿ ನಿಂತು ರಸವತ್ತಾದ ದಾಕ್ಷಿಹಣ್ಣುಗಳು ಬಿಡಿಸಿಕೊಳ್ಳುತ್ತಿರುವೆ. ಕೈಗೆಟುಕಿದ ಹಣ್ಣುಗಳಲ್ಲಿ ಹುಳಿ ಇರುವುದಿಲ್ಲ. ಅಲ್ಲವೇ? ಹೊಸ ಕಾಲಕ್ಕೆ ಹೊಸ ರೂಪ ನೀಡಬೇಕಲ್ಲವೇ? ಅದಕ್ಕೇನೆ “ಆಸೆಯೇ ದುಃಖದ ಮೂಲ”ದ ಬದಲಿಗೆ, “ಆಸೆಗಳೇ ಯಶಸ್ಸಿನ ಮೆಟ್ಟಿಲು” ಮಾಡಿರುವೆ. ಆಸೆಯಿದ್ದಷ್ಟೂ ಕಾಲು ಚಾಚಬಹುದಲ್ಲವೇ? ತುಂಡವಾದ ಹಾಸಿಗೆಯಿದ್ದರೆ ನೆರೆಯವರು ಹೊರಗೆ ಒಣಗಿಸುತ್ತಿರುವ ಹಾಸಿಗೆ ಕದ್ದುಕತ್ತರಿಸಿ ಜೋಡಿಸಿಕೊಳ್ಳಬಹುದಲ್ಲ! ನೀನು ನೆಗೆಟಿವಾಗಿ ನೋಡಿದ್ದನ್ನು ನಾನು ಪಾಸಿಟಿವಾಗಿ ನೋಡಿರುವೆ. ಈಗ ದುಃಖ ಎಲ್ಲಿದೆ ಏಳಿ ಗುರುಗಳೇ?

ಪ್ರಿಯ ಗುರುವೆ, ತೀರ ನೊಂದುಕೊಳ್ಳಬೇಡಿ. ಸರಿಯಾಗಿ ಯೋಚಿಸಿ ನೋಡಿ. ಈ ಹೊಸದಕ್ಕೆ ನಿನ್ನ ಹಳೆಯ ಮಾತೇ ಆಧಾರ. ನನಗೆ ನೀನೇ ಸ್ಫೂರ್ತಿ! ನಿತ್ಯ ನೀನಿಲ್ಲದೆ ನನಗೆ ಕನಸುಗಳೇ ಮೂಡುವುದಿಲ್ಲ. ಎಲ್ಲ ಕಷ್ಟಗಳಿಗೇ ನೀನೇ ದೀಪ. ಮನೆಯ ಗೋಡೆಯ ಮೇಲೆಲ್ಲ ನಿನ್ನ ಎಷ್ಟೊಂದು ಚಿತ್ರಗಳನ್ನು ಬಿಡಿಸಿದ್ದೇನೆ. ಈ ಚಿತ್ರಗಳಿಗೆ ಎಷ್ಟೊಂದು ಲೋಕೋತ್ತರ ಪ್ರಶಸ್ತಿಪತ್ರಗಳು ಸಿಕ್ಕಿಲ್ಲ ಹೇಳಿ? ಎಲ್ಲವೂ ನಿನ್ನ ಮೇಲಿನ ಶ್ರದ್ದೆಗೆ. ಅವುಗಳನ್ನು ನಿನ್ನ ಚಿತ್ರಗಳ ಸಾಲಿನಲ್ಲಿಯೇ ಜೋಪಾನವಾಗಿರಿಸಿದ್ದೇನೆ. ನನ್ನ ಕುಡಿಗಳಿಗೂ ಪ್ರೇಮಮೂರ್ತಿ ಗುರುವಿನ ಬಗೆಗೆ ಬಿಡಿಸಿ ಬಿಡಿಸಿ ಹೇಳಿ ಸ್ಪಷ್ಟವಾಗಿ ಕಲಿಸಿರುವೆ. ನಿತ್ಯ ಅವು ಕೂಡ ನಿನ್ನ ಚಿತ್ರಗಳನ್ನೇ ಬಿಡಿಸುತ್ತಿವೆ. ಅಲ್ಲದೇ ಅವುಗಳಿಗೆ ನಿನ್ನದೇ ನಾಮಾಂಕಿತವನ್ನಿಟ್ಟಿದ್ದೇನೆ. ಸಿದ್ಧ, ಸಿದ್ಧಾರ್ಥ, ಬುದ್ಧ, ಗೌತಮ ಇತ್ಯಾದಿ. ಸಹಸ್ರ ಹೆಸರುಗಳು ನಿತ್ಯವೂ ಲೋಕದಲ್ಲಿ ನಿನ್ನನ್ನು ಚಲಾವಣೆಯಲ್ಲಿಟ್ಟಿವೆ. ಎಲ್ಲ ದೇವರ ಸಾಲಿನಲ್ಲಿ ನಿನಗೇ ಅಗ್ರಸ್ಥಾನ. ಹಳೆಯ ಗುಡಿಗಳಲ್ಲಿ ನಿನಗೆ ಕಾಲೂರಲು ಎಡೆಯಿಲ್ಲದಾಗಿ, ನಿನಗೆ ಹೊಸ ಗು(ಂ)ಡಿಯ ಕಟ್ಟಿಸುತ್ತಿರುವೆ. ಇನ್ನೇನೂ ಬೇಕು ಹೇಳಿ ಗುರುವೇ?

ಕಾಲಕ್ಕನುಗುಣವಾಗಿ ಕತೆ, ಕವಿತೆ, ವಿಚಾರ, ಪರಂಪರೆಗಳನ್ನು ಮರುವಿಮರ್ಶೆ ಮಾಡಬೇಕು ಅಂಥ ಕವಿಗಳೊಬ್ಬರು ಶತಮಾನದ ಹಿಂದೆಯೇ ಹೇಳಿಲ್ಲವೇ? ಅದಕ್ಕಾಗಿಯೇ ನಿನ್ನ “ಧರ್ಮ”ದ ಮಾತುಗಳನ್ನು ಮರುವಿಮರ್ಶೆ ಮಾತ್ರ ಮಾಡದೆ, ಅದನ್ನು ಪರಿಷ್ಕರಿಸಿದರೆ ಹೇಗೆ? ಅಂಥ ಯೋಚಿಸಿದೆ. ನಿನ್ನ ದೇಶದ ಸಂವಿಧಾನವನ್ನೇ ಪರಿಷ್ಕರಿಸಬಹುದಾದರೆ, ಕೇವಲ ನಿನ್ನ ಒಂದು, ಒಂದೇ ಒಂದು ಮಾತಿನ ತುಣುಕನ್ನು ಮುರಿದರೆ ಏನಾದೀತು? ಹಳೆಯ ಮಾತುಗಳಿಗೆ ಗಂಟುಬಿದ್ದರೆ ಮೂಲ(ಭೂತ)ವ್ಯಾದಿ ಜಡ್ಡು ಹಿಡಿಯಬಹುದು. ನಮ್ಮ ಮೀಮಾಂಸಕರ ಮಾತುಗಳಿಗೆ ಆಚರಣೆಯ ಅಥೆಂಟಿಸಿಟಿ ಇಲ್ಲದೆ ಅಪಚಾರವಾಗಬಹುದು. ಮನದೊಳಗೊಳಗೆ ಹರಿಶ್ಚಂದ್ರರು ನೊಂದುಕೊಳ್ಳಬಹುದು. ನನ್ನಂತಹ ಚಾಲಾಕಿಗಳೇ ಅದನ್ನು ಮಾಡದಿದ್ದರೇ ನೀನು ಭೇಟಿ ಮಾಡಿದ, ನಿನ್ನ ನೆನಪಿನಲ್ಲಿ ಉಳಿಯದ ಅದೆಷ್ಟು ಕೋಟಿ ಹಸುಗೂಸುಗಳು ಏನು ಮಾಡುವುವು? ಮಾತಿಗೆ, ಕುರುಡು ಕಾಂಚಾಣಕ್ಕೆ ಜಡ್ಡು ಹಿಡಿದೇ ಚಾಕು-ಬಾಕು, ಬಾಂಬುಗಳ ಶೂಲ-ಪಿಸ್ತೂಲ(ು) ಲೋಕದಲ್ಲಿ ಆಕ್ಟೀವ್ ಆಗಿರೋದು.

ವಿಪರೀತ ಗಬೆಯಲ್ಲಿ ಜಗತ್ತು ಬೇಯುತ್ತಿರೋದು. ಈ ಗಬೆಯನ್ನು ಕೂಲು ಮಾಡಲು ನನ್ನ ಬಳಿ ರೊಕ್ಕ ಇಲ್ಲ. ನಿನ್ನ ಮತ್ತು ನಿನ್ನ ಸೋದರ ಮಹಾವೀರನನ್ನು ನೆನೆಯುತ್ತಲೇ ಭಕ್ತಿಯ ಮತ್ತಿನಲ್ಲಿ ಎಲ್ಲ ಹೊತ್ತೊಯ್ದು ತಮ್ಮ ಮಹಲುಗಳಲ್ಲಿ ಭದ್ರವಾಗಿಟ್ಟಿದ್ದಾರಂತೆ. ನಿನ್ನ ಭಕ್ತರು. ನಿನಗೆ ಬೆಳ್ಳನೆಯ ಗುಡಿಗಳನ್ನು ಜೋಡಿಸುವರು. ಅದಕ್ಕೆ ಪ್ರೀತಿ-ಪ್ರೇಮ, `ಮಾನವ ಸಂಬಂಜಗಳು’ ಎಲ್ಲ ಬಂಬೂಬಜಾರಿನ ಗುಜರಿ ಸೇರಿರೋದು. ನಿನ್ನ ಜೋಳಿಗೆಯಲ್ಲಿ ಹಂಚಲೆಂದೇ ತುಂಬಿಕೊಂಡಿರುವ ಪ್ರೇಮದ ಉತ್ತತ್ತಿ, ನಿನ್ನ ಬಳಿಯೇ ಬೆಚ್ಚಗಿರುವುದು. ನೀನು ನೀಡಿದರೂ ಅದನ್ನು ಪಡೆಯುವ ಶಕ್ತಿ, ಯಾವ ಕೈಗಳಿಗಿದೆ ಹೇಳು ಗುರುದೇವ? ಆ ಎರಿಕ್ ಫ್ರಾಮ್ ಬೇರೆ ಪ್ರೀತಿ ಬಗ್ಗೆ ಏನೇನೂ ಹೇಳಿಬಿಟ್ಟಿದ್ದಾನೆ. ಅದನ್ನು ಕೇಳಿದರೆ ನೀನು ಬ್ಯಾಡ. ನಿನ್ನ ಬುತ್ತೀನು ಬ್ಯಾಡ ಅನ್ನಿಸ್ತಿದೆ.

ಹೀಗೆ ಮತ್ತೆ ಮತ್ತೆ ಯೋಚಿಸಿ ನಿನ್ನ ಮಾತನ್ನು ಪರಿಷ್ಕರಿಸಿರುವೆ. ಯಾರಾದರೂ ಕೇಳಿದರೆ ಬುದ್ದಗುರು ತನ್ನ ಹುಣ್ಣಿಮೆಯ ದಿನ ಕನಸಿನಲ್ಲಿ ಬಂದು ನನಗೊಬ್ಬನಿಗೆ ಆದೇಶ ನೀಡಿದ್ದಾನೆ ಎಂದರೂ ನಡೆಯುತ್ತದೆ; ನೀನಂತೂ ಲೋಕಕ್ಕೆ ಮರಳಿ ಬರಲಾರೆ. ಬಂದು, ಕಟಕಟೆಯಲ್ಲಿ ನಿಂತು ನನ್ನ ವಿರುದ್ಧ ಸಾಕ್ಷಿ ಹೇಳಲಾರೆ. ಇಲ್ಲಿ ಕೋರ್ಟುಗಳು ನಿನ್ನ ಪ್ರಜಾನ್ಯಾಯ ಕೇಂದ್ರಗಳಂತಲ್ಲ. ಇಲ್ಲಿ ನೀನು ನಡೆಯಬಹುದಾದ ದಾರಿಯುದ್ದಕ್ಕೂ ಮೂಳೆ ಮಾಂಸಗಳ ಪರ್ವತಗಳೆ ಚೆಲ್ಲಿವೆ. ನಿತ್ಯ ಕಳಿಂಗ ನಡೆಸುವ ಕಾಳಿಂಗಗಳು ಬುಸುಗುಡುತ್ತಿವೆ. ಅವುಗಳ ಮೆಟ್ಟಿದರೆ ನಿನ್ನ ಹೃದಯ ತತ್ತರಿಸಿ ಅತ್ತುಬಿಡುತ್ತದೆ. ವಿಷ ಅಪಾದಮಸ್ತಕಕ್ಕೇರಿ ಸತ್ತುಬಿಡುವೆ. ಅದಕ್ಕೆ ಹೇಳಿದ್ದು, ನೀನು ಮರಳಿ ಬಂದರೆ, ಪಾದ ಊರಲೂ ಎಡೆಯಿಲ್ಲವೆಂದು. ಮತ್ತೆ ನೀನು ಗುಹೆಯ ಹೊಕ್ಕು ಎದುರಾದರೆ ಅಲ್ಲಿರುವುದು ಅಂಗುಲಿಮಾಲನಲ್ಲ. ಅಂಗುಲಿಯ ಪಿತೃಗಳು. ಕಾಳಿಂಗಿಗಳು. ಅಂಗುಲಿಮಾಲನಿಗೆ ನೀನು ಯಕಶ್ಚಿತ್ ಅಲ್ಲ. ಪ್ರೇಮ ಮೂರ್ತಿ. ಅವನಿಗೆ ಅಪರಾಧಗಳನ್ನು ತಾನೇಕೆ ಮಾಡುತ್ತಿದ್ದೆ ಎಂಬ ಅರಿವಿತ್ತು. ಅದನ್ನು ತಿದ್ದಿಕೊಳ್ಳುವ ಮನುಷ್ಯ ಅವನಲ್ಲಿದ್ದ. ಎಲ್ಲರಂತೆ ಅವನನ್ನು ಅರಿತು ಅವನೊಳಗೂ ಮಾನವತೆಯ ದೀಪವ ಹತ್ತಿಸಿದೆ. ಅವನೂ ಬಿಡುಗಡೆಯಾದ. ನೀನು ಲೋಕಗುರುವಾದೆ.

bಆಗಲೇ ಹೇಳಿದಂತೆ ಈ ಕಾಳಿಂಗಿಗಳಲ್ಲಿರುವುದು ವಿಷ. ಅದಕ್ಕೆ ಕೊಲ್ಲುವುದು ಬಿಟ್ಟು ಬೇರೆ ಗೊತ್ತಿಲ್ಲ. ಪ್ರೇಮದ ಭಾಷೆಗೆ ಅಲ್ಲಿ ಎಡೆಯಿಲ್ಲ. ವಿಷ ಅದರ ಪ್ರಕೃತಿ. ಅದನ್ನು ಶುದ್ಧೀಕರಿಸಿಸಲು ಯಾವ ತಿಳಿವು ಬಳಸೋಣ. ನೀವೇ ಹೇಳಿ. ಮತ್ತೆ ಇಲ್ಲಿ ಯಾವುದೇ ಕೆಲಸವಾಗಬೇಕಾದರೂ ಖಾಸಗಿ ಕಂಪನಿಗೆ ಟೆಂಡರ್ ಕೊಡಬೇಕು. ಅಲ್ಲಿ ಪರ್ಸೆಂಟೇಜ್ ಇರುತ್ತದೆ. ಅದೆಲ್ಲ ನಿನಗೆ ಅರ್ಥವಾಗೋದಿಲ್ಲ ಬಿಡು. ಅದಕ್ಕೇ ಹೇಳಿದ್ದು ಆ ಪಿತೃಗಳಿಗೆ ನೀನು ಯಕಶ್ಚಿತ್ ಸನ್ಯಾಸಿ. ಈ ಲೋಕದಲ್ಲಿ ಬದುಕಲಾರದೆ ಎಲ್ಲವ ತ್ಯಜಿಸಿದವನು. ತನ್ನ ರಹದಾರಿ ಸವಾರಿಗೆ ನಿನ್ನನ್ನೆ ಸೋಪಾನ ಮಾಡಿಕೊಂಡುಬಿಡುತ್ತಾರೆ. ನಿನ್ನ ಪ್ರೇಮದ ಮಾತುಗಳು ಅವರ ಕಠೋರ ಪಾದಗಳನ್ನು ಇರಿಯುವುದಿಲ್ಲ ನೋಡು. ಅದಕ್ಕೆ ನೀನು ಇಲ್ಲಿ ಮರಳಿ ಬರುವುದೇ ಬೇಡವೆಂದು ನಾನೇ ಅಡ್ಡದಾರಿಯ ಹಿಡಿದಿದ್ದೇನೆ! ರಹದಾರಿಗಳು ಇದ್ದ ಮೇಲೆ ಅದನ್ನು ಸೇರುವ ಅಡ್ಡದಾರಿಗಳು ಇರಬೇಕಲ್ಲವೇ? ಕಡಲ ಸೇರುವ ಕಿರು ನದಿಗಳಂತೆ.
ಹೀಗೆ ನನ್ನ ದಾರಿಯನ್ನು ನಾನು ನೋಡಿಕೊಂಡ ಕತೆಯನ್ನು ನನ್ನ ಮಮತೆಯ ಮೂರ್ತಿಗೆ ತಿಳಿಸಲೆಂದೇ ಈ ಅವಗಾಹನೆಯ ಓಲೆ ಹುಟ್ಟಿರೋದು!

ಮತ್ತೆ ನಾನು ನಿನಗೆ ನಂಬಿಕಸ್ಥನಾಗಿದ್ದು ಕೊಂಡೇ ವಂಚಿಸಿದೆ ಎಂದು ಅನ್ನಿಸಬಾರದಲ್ಲವೇ? ಅದಕ್ಕೆ ನಿತ್ಯ ನಿನ್ನ ನೆನೆದೇ ಎಲ್ಲವನ್ನೂ ಮಾಡುತ್ತಿದ್ದೇನೆ. ನಿನ್ನ ಮಾತನ್ನು ಮುರಿದದ್ದನ್ನು ಕೂಡ! ಭೂತದ ಮಾತಿಗೆ ಅಂಟಿಕೊಳ್ಳುವುದು ಔಚಿತ್ಯವಲ್ಲವಲ್ಲ. ಭೂತದ ಮಾತಿನಲ್ಲಿಯೇ ಮೂಡಿದ ಕಲ್ಚರಲ್ ಪೋಲಿಸ್‍ಗಿರಿಗೆ, ಕೋಮಲೆಯರ ಪ್ಯಾಂಟು ಟೀಶರ್ಟುಗಳ ಉಬ್ಬಿದ ಭಾಗಗಳ(ಉಟ್ಟ ಸೀರೆ-ರವಿಕೆಯಲ್ಲಿ ಕಾಣದ್ದು) ಮೇಲೆ ಕಣ್ಣುಬಿದ್ದು ದಾಳಿ ಮಾಡಿದಂತೆ! ನಿನ್ನ ಮಾತಿನ ಮೇಲೆ ಅಪಾರ ನಂಬಿಕೆಯುಳ್ಳವರು; ಅಮೆರಿಕದ ಪೇಟೆಂಟ್ ಮಂಡಳಿಯಿಂದ ನಿನ್ನ ಮಾತುಗಳ ಮೇಲೂ ಪೇಟೆಂಟ್ ಪಡೆದುಕೊಳ್ಳಬಹುದು; ಲಂಕಾ, ಚೀನ, ಜಪಾನುಗಳಲ್ಲಿ “ರಾಜಪಕ್ಷ”ಗಳು ಪಡೆದುಕೊಂಡಂತೆ. “ಭಯೋತ್ಪಾದಕ”ರಂತೆ ಜನರ ಆಸೆಗಳ ಮೇಲೆ ಬಾಂಬುಗಳ ದಾಳಿ ಮಾಡಿಬಿಡಬಹುದು. ನಿನ್ನ ಅಹಿಂಸೆಯ ವ್ರತವನ್ನು ಭಂಗಗೊಳಿಸಿದ ನಿನ್ನ ಆನಂದ ಬಳಗ ಬೋಧಿವೃಕ್ಷಕ್ಕೆ ಕೆನ್ನೀರೆಯಬಹುದು. ಅಥವಾ ಅಳಿದುಳಿದಿರುವ ನಿನ್ನ ಕುರುಹುಗಳ ಮೇಲೆ ಮತ್ತೆ ಗರಿಗೆದರಿರುವ ಶಂಕರ ಸಂತತಿ ಎರಗಿ `ಸಮಾದಿ’ಯನ್ನು ನುಂಗಿಬಿಡಬಹುದು.

ಹಾಗೆ ದಾಳಿ ಮಾಡುವ ಮೊದಲು ನಿನ್ನ ಮಾತುಗಳ ತಿರುಳು ಯಾರಿಗೂ ಅರಿಯದಂತೆ ಅದರ ಕರುಳು ಬಗೆದು ಗುಟ್ಟಾಗಿ ಹೂತುಬಿಟ್ಟಿರುವೆ. ಆಮೇಲೆ ಅದು ತಿಳಿದರೂ “ಮಿತ್ರಮಂಡಳಿ”ಗಳ ಹಾಸ್ಯೋತ್ಸಗಳ ಜೋಕುಗಳಂತಿದ್ದು, ಯಾರಿಗೂ ಹರ್ಟ್ ಮಾಡದಂತಿರಲಿ. ಸುತ್ತಮುತ್ತ ಹರ್ಟ್ ಮಾಡಲಿಕ್ಕೆ ಸಾವಿರಾರು ದಾರಿಗಳಿರುವಾಗ ನಿನ್ನ ಮಾತೂ ಕೂಡ ನಿನ್ನ ಗಣವನ್ನೇ ಯಾಕೆ ಹರ್ಟ್ ಮಾಡಬೇಕು? ತಲೆಕೆಡಿಸಬೇಕು? ಅದು ಮನಸ್ಸನ್ನು ಕಲಕಿ ಯಾಕೆ ಡಿಸ್ಟರ್ಬ್ ಮಾಡಬೇಕು? ನಿತ್ಯದ ಲೋಕದ ಜಂಜಾಟಗಳೇ ಜುಟ್ಹಿದು ಜಗ್ಗಿ ಹಿಟ್ಟಿನಕೋಲಿನಿಂದ ಬಡಿವಾಗ ನಿನ್ನ ಮಾತು ಆಸೆಗಳ ಗಣದ ಕನಸನ್ನೇಕೆ ಕೊಲ್ಲಬೇಕು? ಹಾವು ಬದುಕಿದ್ದು ಹಲ್ಲಿಲ್ಲದಂತಿರಲಿ! ಹಲ್ಲು ಪಂಜಗಳನ್ನು ಬೇರು ಸಹಿತ ಕಿತ್ತು ಹಾಕಿ ಹುಲಿ ಸವಾರಿ ಮಾಡುವ ಸುಖದಂತಿರಲಿ. ಇದು ತಿರುಳು. ಸಂತೆಯ ಕಾಲದ ನನ್ನ ಮನದ ತಿರುಳು! ನಿನ್ನ ಮಾತಿನ ಹೊಸ ತಿರುಳು!

ಕವಿ ಹೇಳಿದಂತೆ ಮಾಡದಿದ್ದರೆ, ಕವಿ ಗೋಪಾಲಕೃಷ್ಣ ಅಡಿಗರ “ಮಣ್ಣಿನ ವಾಸನೆ” ಕಳೆದು ಹೋಗಿಬಿಡುತ್ತದೆ. ಪಂಪರೆಯಲ್ಲಿ ಅರಿವಿನಗಣಿ ವಿಸ್ಮøತಿಗೆ ಒಳಗಾಗಿ ಸ್ವರ್ಗಸ್ಥ ಡಿ. ಆರ್. ಮೇಷ್ಟ್ರಿಗೆ ಬೇಸರವಾಗಿ ಬಿಡುತ್ತದೆ. ಮತ್ತೆ ಹೊಸದನ್ನು ಕಟ್ಟಲುಬೇಕಾದ ಕಸುವು ಸಿಗದೆ ‘ಹೊಸತಲೆಮಾರು’ ಅನಿಮಿಕ್ ಆಗಿಬಿಡುತ್ತದೆ. ಅದಕ್ಕಾಗಿಯೇ ಪೂರ್ವಸೂರಿಗಳು ಹೇಳಿದಂತೆ ನನ್ನೆಲ್ಲ ಪ್ರತಿಭೆಯನ್ನು ಶೋಧಿಸುತ್ತ ಆಸೆಗಳ ಲೋಕದಲ್ಲಿ ನಿನ್ನನ್ನು ಚಲಾವಣೆಗೆ ತರುತ್ತಿದ್ದೇನೆ! ಮತ್ತೆ ನನ್ನ ಜಾತಿಯ ಬೋನಿನಲ್ಲಿ ಕೂಡಿಟ್ಟು ನಿತ್ಯ ಕಿತ್ತು ತಿನ್ನುವ ಆ ಕುಲಧರ್ಮಕ್ಕೆ ಗುಡ್‍ಬೈ ಹೇಳಿ ನಿನ್ನನೇ “ದೇವರು” ಮಾಡಿಕೊಂಡಿರುವೆ. ನಿನ್ನನ್ನು ದೇವರು ಮಾಡಿಕೊಳ್ಳಲಾದರೂ ನನಗೆ ಆಸೆ ಬೇಡವೇ? ಆಸೆಗಳ ಲೋಕದಲ್ಲಿ ಹೋರಾಡಲು ನನಗೆ ಆಸೆಗಳೇ ಬೇಡವೇ.

ಅದಕ್ಕೆ ಆಸೆಗಳನ್ನು ಹಸಿವನ್ನು ಇಂಗಿಸಿಕೊಳ್ಳಲು ಹೊಸದಾರಿಗಳನ್ನು ಹುಡುಕುತ್ತಿರುವೆ. ಇಲ್ಲಿ ಅಡ್ಡದಾರಿಗಳೇ ರಹದಾರಿಗಳಾಗಿ ರಹದಾರಿಗಳು ದರೋಡೆಯ ಕೇಂದ್ರಗಳಾಗಿರುವಾಗ, ಅಷ್ಟೊಂದು ಸುಂಕ ತೆರಲಾಗದ ನನ್ನ ಬಡತನ ಒಳದಾರಿಗಳನ್ನು ಹುಡುಕಿದೆಯಷ್ಟೇ! ಅದನ್ನು ಅಡ್ಡದಾರಿ ಎಂದು ಯಾಕೆ ಜರಿಯುತ್ತೀಯೇ? ಅಡ್ಡಕಸಬಿನವನು ನಾನೆಂಬಂತೆ!

ನಿಮ್ಮನ್ನು ಕುರಿತು ಬೇಂದ್ರೆ ಮಾಸ್ತರು ತಮ್ಮ `ಬುದ್ಧ’ ಪದ್ಯದಲ್ಲಿ ಹೇಳಿಲ್ಲವೇ? ಅಲ್ಲಿ ಮಾಸ್ತರು ನಿನ್ನನ್ನು ಅಮೂರ್ತ ಲೋಕದಲ್ಲಿ ಹುಡುಕಿ ಹುಡುಕಿ ದಣಿದು ಕೊನೆಗೆ, “ಬುದ್ಧನ ಸಮಾಧಿಯದು ಮಾನವ ಹೃದಯ” ಎಂದು ಹೇಳಿದರಲ್ಲ. ನಾನು ಆನಂದರಾನಂದಾನಂದ. ಅಥವಾ ನಿನ್ನ ಉಳಿದ ಬಾಲದ ಪಳಯುಳಿಕೆ ಎಂದು ಬೇಕಾದರೂ ಹೇಳು. ಲೌಕಿಕ. ಇಂದ್ರಿಯವಲ್ಲದುದರಲಿ ನನಗೆ ನಂಬಿಕೆಯಿಲ್ಲ. ಅದಕ್ಕೆ ನಿನ್ನನ್ನು, ನಿನ್ನ ವಿಚಾರಗಳನ್ನು ನಮ್ಮ ಸಮಕಾಲೀನಗೊಳಿಸಿ “ಆಸೆಯೇ ಯಶಸ್ಸಿನ ಮೂಲ ಮೆಟ್ಟಿಲು”ಎಂದು ಭಾವಿಸಿರುವೆ. ಅದಕ್ಕೆ ನಿನ್ನ, ನನ್ನ ಹೃದಯದಲ್ಲಿಯೇ `ಸಮಾದಿ’ ಮಾಡುತ್ತಿರುವೆ. ನೀನು ಬಿಟ್ಟ ಕಾಮ, ಕ್ರೋಧ, ಮದ, ಮತ್ಸರ. ಮೋಹ, ಲೋಭಗಳೇ ಸಮಾಧಿಯ ದಾರಿ ದೀಪಗಳು. ಹತಾರಗಳು. ಅಲ್ಲಿ ಬದುಕಿಸಿಯೇ ನಿನ್ನ ಮತ್ತು ನನ್ನ ಇರುವನ್ನು ಸಾರುತ್ತೇನೆ. ನೀನು ನೋಡು ನಮ್ಮೆದುರಿಗೆ ಬಾರದೆ ಎಲ್ಲವನ್ನೂ ಕೇಳಿಸಿಕೊಳ್ಳುತ್ತ ಅಮೂರ್ತದಲ್ಲಿ ಅಮೂರ್ತವಾಗಿ ಜೀವಿಸಿರುವೆ. ಆದರೆ ಕವಿ ಕೋವಿದರಾಗಿ, ರೈತ ಗೋಪಾಲಕರಾಗಿ, ನವೀನ ರಾಜಾಧಿರಾಜರಾಗಿ ಅವತಾರವೆತ್ತಿರುವ ನಮಗೆ ನಿನ್ನಷ್ಟು ಶಕ್ತಿ ಸಹನೆಯಿಲ್ಲ ಬಿಡು. ಅದಕ್ಕೆ ನನ್ನ ಹೃದಯವೇ ನಿನ್ನ ಸಮಾಧಿ.

ನೀನು ಅಂದು ನುಡಿದ, ಹೇಳಿದ ಮಾತೆಲ್ಲ ಸರಿ ಎಂದು ನಿನ್ನ ಪ್ರಿಯ ಶಿಷ್ಯರಾದ ನಾವು ಅಂದಿನಿಂದಲೂ ನಂಬಿದ್ದೇವೆ. ಮುಂದೆಯೂ ನಂಬುತ್ತೇವೆ. ಪುಸ್ತಕಗಳಲ್ಲಿಯೂ ಸಮಾಧಿ ಮಾಡಿಟ್ಟು. ಬುದ್ಧಗುರುವು ಎಲ್ಲ ಹೇಳಿದ್ದಾನೆ. ಎಲ್ಲ ಕಾಲಕ್ಕೂ ಒಪ್ಪುವ ವಿಚಾರವನ್ನೇ ಹೇಳಿದ್ದಾನೆ ಎಂದು. ನಿನ್ನ ಹಾಗೆಯೇ ನಿನ್ನ ಸೋದರರಾದ ಜೀಸಸ್, ಪೈಗಂಬರ್, ಬಸವ, ಅಂಬೇಡ್ಕರ್, ಕೊನೆಗೆ ಗಾಂಧಿ. ಎಲ್ಲರನ್ನೂ; ಅವರು ಹೇಳಿದ ಹಾಗೆ. ಅಲ್ಲದೇ ಬೇಕಾದ ಹಾಗೆ ಬೇಕಾದ ಕಾಲಕ್ಕೆ ತಕ್ಕಂತೆ ಮುರಿದುಕೊಂಡು ನಿಮ್ಮ ಮಾರ್ಗದಲ್ಲಿಯೇ ಬಾಳುತ್ತೇವೆ ಎಂದು ಪ್ರಮಾಣ ಮಾಡುವೆ. ಅದಕ್ಕೆ ಅಂದು ನೀನು ಹೇಳಿದ್ದನ್ನು ಅಂದಿಗೆ ನಂಬಿದ್ದೆವು. ಇಂದಿಗೆ ಪಾಲಿಸಲಾಗದ ಆ ವಿಚಾರಗಳನ್ನು ಇಂದಿಗೆ ಬೇಕಾದ ಹಾಗೆ ಮುರಿದು ಕಟ್ಟಿರುವೆ.
ಕೊನೆಯದಾಗಿ ಒಂದು ಮಾತು ಗುರುವೆ. ನಮಗೆ ನೀವು ಬೋಗಿಗಳಾಗಿ ಎಂದು ಹೇಳಿದ್ದರೂ, ಅಂದು ನಾವು ಬೋಗಿಸಲು ಏನಿತ್ತು ಬಿಡು?

ಅದೇ ಹೆಣ್ಣು, ಹೊನ್ನು ಮತ್ತು ಮಣ್ಣು. ಯಾವುದಕ್ಕೂ ನಾಜೂಕಿರಲಿಲ್ಲ. ಆಗ ನಿಮ್ಮನ್ನು ನಂಬಿದ ನಾವು ಇದ್ದದ್ದೇ ಮಣ್ಣಿನಲ್ಲಿ. ಕಾಡಿನಲ್ಲಿ. ಅಲೆದಾಟದಲ್ಲಿ. ಅದನ್ನು ಅನುಭವಿಸಲು ಏನು ತಾನೆ ಇತ್ತು. ಇಂದು ನೂರಾರು ಜನ್ಮಗಳಲ್ಲಿ ಅನುಭವಿಸಲು ಬೇಕಾದ ಸ್ವರ್ಗಗಳಿವೆ! ಹೆಣ್ಣು-ಹೊನ್ನು-ಮಣ್ಣುಗಳು ಸಾವಿರಾರು ರೂಪಗಳ ಪಡೆದು ನಾಜೂಕಾಗಿ ಕಣ್ಮನಗಳನ್ನು ತಣಿಸುತ್ತಿವೆ. ಓಹ್! ಇಂದು ಅನುಭವಿಸಲು ಇರುವ ಮೆನು ನಿನಗೆ ನೀಡಲು ಸಾಧ್ಯವಿಲ್ಲ ಬಿಡು. ನೀಡಿದರೆ, ಅದನ್ನು ನೋಡಿ ನೀನು ತಲೆತಿರುಗಿ ಬಿದ್ದುಬಿಡುತ್ತೀಯಾ. ಮತ್ತೆ ಎಲ್ಲ ತೊರೆದ ನಿನಗೇಕೆ ಈ ಲೋಕದ ಆಸೆಗಳ ಮೆನು? ಅಥವಾ ರಾಹುಲನಿಗೆ ಕೊಡುವ ಆಸೆ ನಿನ್ನಲ್ಲಿಯೇನಾದರೂ ಹೊಸದಾಗಿ ಮೂಡಿದೇಯೇ! ಕಲಿಮಠಗಳ ಪೀಠಿಗಳಂತೆ. ನನ್ನಂಥ ಲೌಕಿಕನಿಗೇನೆ ಅದನ್ನು ಕಂಡು ತಲೆತಿರುಗುತ್ತದೆ. ಅದಕ್ಕೆ ಮುಂದಿನ ಜನ್ಮದಲ್ಲಿ ಮಾಡಲು ಏನಾದರೂ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಈಗಲೇ ಒಂದಷ್ಟು ಕೂಡಿಡುವ ಪಂಚವಾರ್ಷಿಕ ಯೋಜನೆಗಳ ಮಾಡಿರುವೆ. ಅದಕ್ಕೂ ಕಾರಣವಿದೆ ದೇವ. ನಮ್ಮದು, ಅಂದರೆ ನಿನ್ನ ಉತ್ತರೋತ್ತರ ನಾಡಿನದು, ಒಂದೂಕಾಲು ಬಿಲಿಯನ್ ಜನರದೇಶ. ಮುಂದಿನ ಜನ್ಮದ ಹೊತ್ತಿಗೆ ಎಷ್ಟಾಗುತ್ತೋ ಗೊತ್ತಿಲ್ಲ. ಏಳು ಜನ್ಮಗಳನ್ನು ಎತ್ತಿ ಈ ಜನ್ಮದ ಎಲ್ಲ ಪಾಪಗಳನ್ನು ತೀರಿಸಿ ಬರುವ ಹೊತ್ತಿಗೆ ಇನ್ನೊಂದು ಸಹಸ್ರಮಾನವಾಗಬಹುದು. ಮೊದಲೇ ಹೇಳಿದಂತೆ ಈಗಿರುವ ಸ್ಪರ್ಧೆ ಆಗೇನನಾಗಬಹುದು ಹೇಳಿ. `ಮಲ’ ತಿನ್ನಲಿಕ್ಕೂ ಸ್ಪರ್ಧೆ!

IMG_4257ನಮ್ಮಲ್ಲಿ ಫ್ಯಾಮಿಲಿ ಪ್ಲಾನಿಂಗ್ ಕೂಡ ಕೈಕೊಡುತ್ತಿದೆ. ಕಾಂಡೋಮ್ ತಯಾರಿಕೆಯ ಕಂಪನಿಗಳು ಪೂರೈಸುವ ಕಾಂಡೂಮುಗಳು ಕೈಕೊಟ್ಟು ನಮ್ಮ ದೇಶದ ಯುವಕರು ಕೈಚೆಲ್ಲಿ ಕೂತಿದ್ದಾರೆ. ಕಾಂಡೋಮ್ಗಳನ್ನು ಬಳಸಿ ಬಳಸಿ ಜನಸಂಖ್ಯೆ ಕಡಿಮೆಯಾಗಿ ಮುಂದಿನ ಮೂವತ್ತು ವರ್ಷಗಳ ನಂತರ ಕಾಂಡೋಮ್ ಬಳಕೆದಾರರ ಸಂಖ್ಯೆ ಕಡಿಮೆಯಾಗಬಹುದು. ಮಾರಾಟ ಕುಸಿದು ರಿಸೆಷ್ಸನ್ ಬರಬಹುದು ಅಂಥ ಅವುಗಳ ಆತಂಕ. ಅದಕ್ಕೆ ಅವುಗಳು ದೂರದೃಷ್ಟಿ ಯೋಜನೆ ರೂಪಿಸಿ ಕಾಂಡೋಮ್ಗಳ ಮಾರಾಟವೂ ಹೆಚ್ಚಾಗಿ, ಮಕ್ಕಳು ಸಂಖ್ಯೆಯೂ ಹೆಚ್ಚಾಗುವಂತೆ ಮಾಡುವುದ್ಹೇಗೆ ಎಂಬ ಕಳ್ಳ ಒಳಯೋಜನೆ ರೂಪಿಸಿವೆ. ಹಾಗಾಗಿ ನಮ್ಮ ದೇಶದಲ್ಲಿ ಜನಸಂಖ್ಯೆ ಕಮ್ಮಿಯಾಗಿ ಸ್ಪರ್ಧೆ ಇಳಿಯೋ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಅದಕ್ಕೆ ನಾನೂ ಒಂದಿಷ್ಟು ದೂರದೃಷ್ಟಿ ಯೋಜನೆಗಳಿಗೆ ಕೈಹಾಕಿದ್ದೇನೆ.

ಅದಕ್ಕೆ ನನ್ನ ಹೃದಯಲ್ಲಿ ನಿನ್ನ ಸಮಾಧಿ ಮಾಡಿ, ಇತರ ಎಲ್ಲ ಅಂಗಗಳನ್ನು ಕಟ್ಟಿಟ್ಟು ಬುದ್ಧಿ-ಬಾಹುಗಳನ್ನು ಮಾತ್ರ ಎಲ್ಲೆಂದರಲ್ಲಿ ಸಲೀಸಾಗಿ ನುಸುಳಾಡುವಂತೆ ಪಳಗಿಸಿಬಿಟ್ಟಿದ್ದೇನೆ. ಬೇಕಾದಾಗ ಅವು ಅಪ್ಸರೆಯ ತೋಳುಗಳಂತೆ ಬಾಗಬೇಕು. ಬಳುಕಬೇಕು. ಬೆರಳುಗಳ ಮಾತನಾಡಿ ಬಂಧುಗಳ ತೃಪ್ತಿಪಡಿಸಬೇಕು. ಅನಿವಾರ್ಯವಾದಾಗ ನಿನ್ನ ಸೋದರ ಅಂಗುಲಿಮಾಲ ಅನ್ಯರ ಬೆರಳುಗಳ ಮಾಲೆಮಾಡಿಕೊಳ್ಳುವುದಿಲ್ಲವೇ? ಹಾಗೆ. ಅದ್ಯಾಕೆ ನನ್ನ ಆ ಬೆರಳುಗಳ ಮೇರೆ ಕಣ್ಣಿಟ್ಟು ಹಾಗ್ನೋಡ್ತಿದ್ದಿಯಾ. ಅದೆಲ್ಲ ಮಾಮೂಲಿ. ಮಾಲೆ ಮಾಡಿಕೊಳ್ಳುವಾಗ ಕೆಲವು ಚಾಲಾಕಿ ಇಲಿಗಳು ಅಂಗುಲಿಗಳ ಕೊರಕಿ ಅವು ಕುಷ್ಠರೋಗಿಗಳ ಬೆರಳುಗಳಂತೆ ಕಂಡು ವಾಕರಿಕೆಯನ್ನು ತರಿಸುತ್ತಿವೆ. ಸ್ವಲ್ಪ ಬೇಸರ ಅಷ್ಟೇ. ಬಿಲಕ್ಕೆ ಕೈತೂರಿಸಿದಾಗ ಹಾವು ಕಚ್ಚಬಾರದು ಎಂದರೆ ಹೇಗೆ? ಅದನ್ನು ಹಿಡಿಯಲೇಬೇಕೆಂಬ ಹಠಕ್ಕೆ ಬಿದ್ದಿರುವಾಗ ಕಚ್ಚಿಸಿಕೊಳ್ಳದೇ ಬೇಟೆಯಾಡುವುದು ಹೇಗೆ? ಇದೆಲ್ಲ ಆಟದ ನಿಯಮಗಳಲ್ಲವೇ? ಗೆಲ್ಲಬೇಕೆಂದು ಆಡುವಾಗ ಸೋಲು ಅದರ ಒಂದು ಅಂಗ ಅಲ್ಲವೇ?

ನಿನ್ನ ಕಾಲದಲ್ಲಿ ಆಸೆಗಳು ಇನ್ನೂ ಚಿಗುರುತ್ತಿದ್ದವು. ಅವುಗಳನ್ನು ಕಂಡೆ ನೀನು ಬೆಚ್ಚಿಬಿದ್ದು ಇರುವುದೆಲ್ಲವನ್ನು ಬಿಟ್ಟು ಇರದುದರೆಡೆಗೆ ತುಡಿದುಬಿಟ್ಟೆ. ನಿನ್ನ ನಂತರ ಭೂಮಿ-ಸೂರ್ಯರ ಸರಸದಲ್ಲಿ ಎರಡೂವರೆ ಸಾವಿರ ವರ್ಷಗಳು ಹೊಸ ಹೊಸ ಆಸೆಗಳ ಹೆತ್ತಿವೆ. ನಿನಗೆ ಜ್ಞಾನೋದಯ ನೀಡಿದ ಬೋಧಿವೃಕ್ಷ ಆಸೆಗಳ ಬೆಂಕಿಯಲ್ಲಿ ಮುಳುಗಿದೆ. ಇದೆಲ್ಲ ಕಂಡು ನನ್ನ ಅಡ್ಡದಾರಿಯ ಪ್ರಣಯಗಾಥೆಯನ್ನು ನಿನಗೆ ತಿಳಿಸುವ “ಆಸೆ”ಯಾಯ್ತು. ತಿಳಿಸಿರುವೆ. ಮನಸ್ಸಿಗೆ ಬೇಸರವಾಗಿದ್ದರೆ ದಯವಿಟ್ಟು ಕ್ಷಮಿಸು. ಮರೆವ ಮುನ್ನ ಒಂದು ಮಾತು; “ಸಾವಿಲ್ಲದವರ ಮನೆಯ ಸಾಸಿವೆ”ಯ ತರುವ ಬದಲಿಗೆ, ಮರೆಯದೇ ಒಂದು ಹೊಸ ಮಾತು ಕಳಿಸು. “ಸಾವೇ ಇಲ್ಲದ ಜೀವ ಹುಟ್ಟಿಸು” ಅಂಥ. ಆಗ ನಾನು ಸಾವನ್ನೇ ಹುಟ್ಟಿಸುವೆ!

ಜೀವಗಳ ಮುರಿದು ಸಾವನ್ನು ಹುಟ್ಟಿಸುವೆ. ಆಸೆಗಳ ಕಮರಿಯಲ್ಲಿ ಅಮರವ ಸುಡುವೆ. ಮುಂದಿನ ಜನ್ಮದಲ್ಲಿ ಮತ್ತೆ ಮಾತುಮುರಿದು ನಿನ್ನದೇ ವೇಷದಲ್ಲಿ ನಾನು ಬದುಕಬೇಕಲ್ಲೇ? ನಿಮ್ಮ ವೇಷವನ್ನು ಧರಿಸದೇ ನಮ್ಮಂತಹ ಹುಲುಮಾನವರು ಬದುಕುವುದೆಂತು? ಅವರನ್ನು ಕಾಪಾಡುವುದೆಂದತು? ಮೋಕ್ಷ ನೀಡುವುದೆಂತು? ಅದಕ್ಕೆ ಒಂದೇ ಒಂದು ಆನ್‍ಲೈನ್ ಮಾತುಸಾಕು. ನನ್ನ ವಿಳಾಸ. ಆನಂದ@ ಆಸೆಗಳಲೋಕ.ಕೋ.ಇನ್.ಬೆಂ ಇದು ಕನ್ನಡ ವಿಳಾಸ. ಇಂಗ್ಲಿಶ್ ವಿಳಾಸ ಕೊಟ್ಟರೆ ನಮ್ಮ ಹೊಸ ವೈರಸ್‍ಗಳು ನೀನು ಕಳಿಸಲಿರುವ ಹೊಸ ಮಾತನ್ನು ಕದ್ದೊಯ್ಯುತ್ತವಂತೆ. ಆಸೆಗಾಗಿ ರಹದಾರಿಗೆ ತಿರುಗಿಸಿಬಿಟ್ಟು ಆ ಮಾತನ್ನೇ ತಮ್ಮ ಸೋಪಾನವಾಗಿಸಿಬಿಡುತ್ತವಂತೆ.

ಅದಕ್ಕೆ ನನ್ನ ಮನದ ಮಾತನ್ನು ಗುಟ್ಟಾಗಿ ಹೇಳುತ್ತಿದ್ದೇನೆ. ನನ್ನ ಆಸೆಗಾಗಿ. ನೀನು ಗುಟ್ಟಾಗಿ ಮಾತನ್ನು ಕಳಿಸು. ಒಳಗಣ ಬೆಳಕಿಗಲ್ಲ. ಹೊರಗಣ ಅಲಂಕಾರಕ್ಕೆ. ನನ್ನ ಹೊರ ಅಹಂಕಾರಕ್ಕೆ. ಮತ್ತೆ ಭೇಟಿಯಾಗೋಣ. ಆಸೆಗಳ ಹಾದಿಯಲ್ಲಿ. ಅಂಗುಲಿಮಾಲನ ಗುಹೆಯ ಮುಂದೆ.
ನಿನ್ನ ಪ್ರಥಮ ಶಿಷ್ಯ
ಆನಂದ.

Leave a Reply

Your email address will not be published.