ಆಧುನಿಕ ತಂತ್ರಜ್ಞಾನ ಮತ್ತು ಮಾನವ ಸಂಬಂಧಗಳು

-ನಾ ದಿವಾಕರ

IMG_4578ಮಾನವ ಸಮಾಜ ಆಧುನಿಕತೆಯತ್ತ ಹೊರಳುತ್ತಿದ್ದಂತೆಲ್ಲಾ ಮಾನವನ ಪರಸ್ಪರ ಸಂಬಂಧಗಳು ನಿಕಟವಾಗುತ್ತವೆ ಎಂಬ ನಂಬಿಕೆ ಇತಿಹಾಸ ಕಾಲದಿಂದಲೂ ಇದೆ. ಆದಿವಾಸಿ ನೆಲೆಯಿಂದ ಕೃಷಿ ನೆಲೆಗೆ, ಕೃಷಿಯಿಂದ ಕೈಗಾರಿಕಾ ಪ್ರಗತಿಯೆಡೆಗೆ, ಕೈಗಾರಿಕೆಯಿಂದ ತಂತ್ರಜ್ಞಾನದೆಡೆಗೆ, ತಂತ್ರಜ್ಞಾನದಿಂದ ಬಾಹ್ಯಾಕಾಶ ತಂತ್ರಜ್ಞಾನದೆಡೆಗೆ ದಾಪುಗಾಲು ಹಾಕಿರುವ ಮಾನವ ಸಮಾಜ ಇಂದು ಈ ನಂಬಿಕೆಯನ್ನು ಸಾಕಾರಗೊಳಿಸಿದೆಯೇ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. 1980ರ ದಶಕದಲ್ಲಿ ಮಾನವ ಜಗತ್ತು ಸಮತೆ, ಸಮಾನತೆ ಮತ್ತು ಸಹಭಾಗಿತ್ವದ ತತ್ವಗಳನ್ನು ಅಲ್ಲಗಳೆದು ಮಾರುಕಟ್ಟೆ ಆರ್ಥಿಕತೆಯತ್ತ ಹೊರಳಿದಾಗ ಮನುಜ ಸಂಬಂಧಗಳನ್ನು ಬೆಸೆಯಲು ತಂತ್ರಜ್ಞಾನವೇ ಅತ್ಯಂತ ಸೂಕ್ತ ಭೂಮಿಕೆ ಎಂಬ ಪ್ರತೀತಿ ದಟ್ಟವಾಗಿತ್ತು.

ಜಾಗತೀಕರಣದ ಹೆಸರಿನಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳನ್ನು ಆವರಿಸಿದ್ದ ನವ ಉದಾರವಾದ ತಂತ್ರಜ್ಞಾನದ ಮೂಲವೇ ಮಾನವ ಸಂಬಂಧಗಳನ್ನು ರಕ್ಷಿಸಿಕೊಂಡು ತನ್ನ ಬಂಡವಾಳ ಮಾರುಕಟ್ಟೆಯನ್ನು ವಿಸ್ತರಿಸಲು ನಿರ್ಧರಿಸಿತ್ತು. ಇಡೀ ಜಗತ್ತು ಒಂದು ಪುಟ್ಟ ಹಳ್ಳಿಯಂತಾಗುತ್ತದೆ, ವಿಭಿನ್ನ ಜನಸಮುದಾಯಗಳ ನಡುವಿನ ಸಂಪರ್ಕದ ಕೊಂಡಿಯಾಗಿ ತಂತ್ರಜ್ಞಾನ ಕಾರ್ಯ ನಿರ್ವಹಿಸುತ್ತದೆ, ಉತ್ತರ ಧೃವದಿಂದ ದಕ್ಷಿಣ ಧೃವದವರೆಗೆ ಕ್ಷಣ ಮಾತ್ರದಲ್ಲಿ ಸಂಪರ್ಕಿಸಬಹುದಾದ ಅತ್ಯಾಧುನಿಕ ತಂತ್ರಜ್ಞಾನ ಎಲ್ಲ ಜನಸಮುದಾಯಗಳ ನಡುವೆ ಸೌಹಾರ್ದತೆ ಮತ್ತು ಭ್ರಾತೃತ್ವ ಬೆಸೆಯುತ್ತದೆ ಎಂಬ ಭ್ರಮೆ ಈ ಸಂದರ್ಭದಲ್ಲಿ ಸೃಷ್ಟಿಯಾಗಿತ್ತು.

ನಿಜ ಭೌತಿಕವಾಗಿ ಈ ಭ್ರಮೆ ಒಂದು ಹಂತಕ್ಕೆ ಸಾಕಾರಗೊಂಡಿದೆ. ಜಗತ್ತಿನ ಒಂದು ಅಂಚಿನಲ್ಲಿ ನಡೆವ ಘಟನೆ ಕ್ಷಣಮಾತ್ರದಲ್ಲಿ ಮತ್ತೊಂದು ಅಂಚಿನಲ್ಲಿ ಪ್ರವಹಿಸುತ್ತದೆ. ಉತ್ತರ ದಕ್ಷಿಣಗಳು, ಪೂರ್ವ ಪಶ್ಚಿಮಗಳು, ಘಟ್ಟ ಕಣಿವೆಗಳು ಕ್ಷಣಮಾತ್ರದಲ್ಲಿ ಒಂದಾಗುತ್ತವೆ. ಅಂತರ್ಜಾಲ, ಮೊಬೈಲ್ ತಂತ್ರಜ್ಞಾನ, ಗಣಕ ಯಂತ್ರದ ಅವಿಷ್ಕಾರಗಳು, ಸಂಪರ್ಕ ಮಾಧ್ಯಮದ ಅತ್ಯಾಧುನಿಕ ಪರಿಕರಗಳು ಮನುಷ್ಯನನ್ನು ಭೌತಿಕವಾಗಿ ವಿಶ್ವ ಮಾನವನನ್ನಾಗಿ ಮಾಡಿವೆ. ಕುಳಿತಲ್ಲಿಯೇ ಜಗತ್ತನ್ನು ಕಾಣುವ ಮಾನವನ ಭ್ರಮೆಯನ್ನು ಆಧುನಿಕ ತಂತ್ರಜ್ಞಾನಗಳು ಸಾಕಾರಗೊಳಿಸಿವೆ. ಆದರೆ ಮಾನವ ಸಂಬಂಧಗಳನ್ನು ಭೌತಿಕವಾಗಿ ಬೆಸೆದಿರುವ ಈ ತಂತ್ರಜ್ಞಾನದ ಕ್ಷಿಪ್ರ ಕ್ರಾಂತಿ ಭೌದ್ಧಿಕವಾಗಿ ಬೆಸೆಯಲು ಸಾಧ್ಯವಾಗಿದೆಯೇ ಎಂಬ ಪ್ರಶ್ನೆ ಎದುರಾದಾಗ ನಿರುತ್ತರರಾಗುತ್ತೇವೆ.

ಒಂದು ಸಂವಹನ ಸಾಧನವಾಗಿ ತಂತ್ರಜ್ಞಾನ ಸಂಬಂಧಗಳನ್ನು ಬೆಸೆಯುವ ಸೇತುವೆಯಾಗಿ ರೂಪುಗೊಳ್ಳಬಹುದು. ಆದರೆ ಈ ಸೇತುವೆಯ ಅಡಿಪಾಯದಲ್ಲಿರುವ ಮಾನವ ಸಂವೇದನೆ ಮತ್ತು ಹೃದಯಸ್ಪರ್ಶಿ ಭಾವನೆಗಳನ್ನು ಪರಿವರ್ತಿಸುವಲ್ಲಿ ತಂತ್ರಜ್ಞಾನ ವಿಫಲವಾಗಿದೆ. ಏಕೆಂದರೆ ತಂತ್ರಜ್ಞಾನ ಕ್ರಾಂತಿಯ ಮೂಲ ಸೆಲೆ ಮಾರುಕಟ್ಟೆ , ಬಂಡವಾಳ ಮತ್ತು ಸಂಪತ್ತಿನ ಕ್ರೋಢೀಕರಣದಲ್ಲಿ ಇರುವುದೇ ಹೊರತು ಮನುಜ ಸಂಬಂಧಗಳನ್ನು ಬೆಸೆಯುವ ಸಂವೇದನೆಯ ನೆಲೆಯಲ್ಲಿ ಅಲ್ಲ. ಹಾಗಾಗಿಯೇ ಇಡೀ ಜಾಗತೀಕರಣ ಯುಗದಲ್ಲಿ ಇಡೀ ಜಗತ್ತು ಭೌಗೋಳಿಕವಾಗಿ, ಭೌತಿಕವಾಗಿ ಒಂದು ಪುಟ್ಟ ಹಳ್ಳಿಯಂತೆ ಕಂಡುಬಂದರೂ ನೇಪಥ್ಯದಲ್ಲಿ ಗಡಿ, ಗಡಿ ರೇಖೆ, ನಿಯಂತ್ರಣ ರೇಖೆ ಮತ್ತು ಜಾತಿ-ಧರ್ಮ-ಭಾಷೆಗಳ ಅಸ್ಮಿತೆಗಳ ಕಂದರಗಳು ನಿರ್ನಾಮವಾಗಿಲ್ಲ, ನಿರ್ಮಾಣವಾಗುತ್ತಿವೆ. ಕಂದರಗಳ ವಿಸ್ತೀರ್ಣ ಹೆಚ್ಚಾಗುತ್ತಿದೆ. ದ್ವೇಷಾಸೂಯೆಗಳು ಹೆಚ್ಚಾಗುತ್ತಿವೆ. ತಂತ್ರಜ್ಞಾನ ಪ್ರಣೀತ ವಿಶ್ವ ಮಾನವ ತನ್ನ ಮಾನವೀಯ ಮೌಲ್ಯಗಳನ್ನೇ ಕಳೆದುಕೊಂಡು ಹಣಕಾಸು ಬಂಡವಾಳದ ಸೂತ್ರದ ಗೊಂಬೆಯಂತಾಗುತ್ತಿದ್ದಾನೆ.

ತಂತ್ರಜ್ಞಾನದ ಕನವರಿಕೆ ಸಂಬಂಧಗಳ ಬೆಸುಗೆ
IMG_4562ವಾಸ್ತವ ಸನ್ನಿವೇಶವನ್ನು ಒಮ್ಮೆ ಅವಲೋಕಿಸಿದಾಗ ಕೆಲವು ಸಂಗತಿಗಳು ಧುತ್ತೆಂದು ನಮ್ಮೆದುರು ಪ್ರತ್ಯಕ್ಷವಾಗುತ್ತವೆ. ನಿಜ ಇಂದು ಸಂವಹನ ಮಾಧ್ಯಮ ಮತ್ತು ಸಂಪರ್ಕ ಕ್ರಾಂತಿ ಮಾನವ ಸಮಾಜವನ್ನು ಎಲ್ಲೆಡೆಯಿಂದ ಆವರಿಸಿದೆ. ಸಂವಹನ ಮತ್ತು ಮನುಜರ ನೇರ ಸಂಬಂಧಗಳ ನಡುವೆ ಪಾರಂಪರಿಕ ಸಮಾಜದಲ್ಲಿದ್ದ ಸಂಪರ್ಕ ಮತ್ತು ಭಾಂಧವ್ಯ ಇಂದು ಇಲ್ಲವಾಗಿದೆ. ಜಗತ್ತಿನ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಕ್ಷಣಮಾತ್ರದಲ್ಲಿ ಸಂದೇಶ ರವಾನಿಸಲು ಶಕ್ಯನಾಗಿರುವ ಆಧುನಿಕ ತಂತ್ರಜ್ಞಾನದ ಮಾನವ ತನ್ನ ಸಮೀಪದಲ್ಲೇ ಇರುವ ಮತ್ತೊಬ್ಬನನ್ನು ಸಂವೇದನಾಶೀಲತೆಯಿಂದ ನೋಡಲು ಹಿಂಜರಿಯುತ್ತಿದ್ದಾನೆ. ಏಕೆ ಹೀಗೆ ?

ಕಾರಣ ಸ್ಪಷ್ಟ . ಸಂವಹನ ಮಾಧ್ಯಮಗಳು ಮತ್ತು ಸಂಪರ್ಕ ಕ್ರಾಂತಿಯ ಸಾಧನಗಳು ಮಾನವೀಯ ಸಂಬಂಧಗಳನ್ನು ಬೆಸೆಯುವ ನಿಟ್ಟಿನಲ್ಲಿ ಸಾಗುತ್ತಿಲ್ಲ. ಬದಲಾಗಿ ಮಾನವ ಸಮಾಜದ ಗರ್ಭದಲ್ಲಿ ಅಡಗಿರುವ ಭೌದ್ಧಿಕ ಸಂಪನ್ಮೂಲಗಳನ್ನು ಬಳಸಿಕೊಂಡು ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಮಾಡುವ ನಿಟ್ಟಿನಲ್ಲಿ ಸಾಗುತ್ತಿವೆ. ಹಾಗಾಗಿಯೇ ವಿಶ್ವದ ಬಹುತೇಕ ದೇಶಗಳು ಜನಸಾಮಾನ್ಯರು ಬಳಸುವ ಇ ಮೇಲ್, ಮೊಬೈಲ್ ಮತ್ತಿತರ ಸಂವಹನ ಮಾಧ್ಯಮಗಳ ಮೇಲೆ ನಿಯಂತ್ರಣ ಸಾಧಿಸಲು ಯತ್ನಿಸುತ್ತಿವೆ. ಅಂದರೆ ಜಗತ್ತಿನ ಸಮಸ್ತ ಜನತೆಯನ್ನು ಒಂದು ಪುಟ್ಟ ಹಳ್ಳಿಯಲ್ಲಿ ಬಂಧಿಸಿಡುವ ಆಲೋಚನೆಯ ನೇಪಥ್ಯದಲ್ಲಿ ತಂತ್ರಜ್ಞಾನ ಮತ್ತು ಹಣಕಾಸು ಬಂಡವಾಳದ ಮೂಲಕ ಜನಸಾಮಾನ್ಯರ ಸಾಮಾಜಿಕ ಪ್ರಜ್ಞೆಯನ್ನೇ ಬಂಧಿಸಿಡುವ ಹುನ್ನಾರವನ್ನು ಕಾಣಬಹುದು. ಇದು ತಂತ್ರಜ್ಞಾನ ಯುಗದ ಹರಿಕಾರರ ಕನವರಿಕೆಯೇ ಆದರೂ ಆಳುವ ವರ್ಗಗಳು ಈ ಕನವರಿಕೆಯನ್ನು ಸಾಕಾರಗೊಳಿಸಲು ಸಜ್ಜಾಗುತ್ತಿವೆ. ಮೋದಿ ಸರ್ಕಾರದ ಕಾರ್ಯವೈಖರಿಯೇ ಇದಕ್ಕೆ ಸಾಕ್ಷಿ.

ರಾಜಕೀಯ ನೆಲೆಯಲ್ಲಿ ಸಂವಹನ ಮಾಧ್ಯಮ ಮತ್ತು ಸಂಪರ್ಕ ಸಾಧನಗಳು ಆಳುವ ವರ್ಗಗಳ ಪ್ರಾತಿನಿಧಿತ್ವ ವಹಿಸಿರುವುದನ್ನು ಬದಿಗಿರಿಸಿ ಜನಸಾಮಾನ್ಯರ ನೆಲೆಯಿಂದಲೇ ಗಮನಿಸಿದಾಗ ಇನ್ನೂ ಆಘಾತಕಾರಿ ಬೆಳವಣಿಗೆಗಳನ್ನು ಕಾಣಬಹುದು. ಮನುಷ್ಯ ಸಂಬಂಧಗಳಿಗೆ ಪೂರಕವಾಗಿ ಸಂವಹನ ಮಾಧ್ಯಮವಾಗಿ ಕಾರ್ಯನಿರ್ವಹಿಸಬೇಕಾದ ಮೊಬೈಲ್, ಇ ಮೇಲ್, ಅಂತರ್ಜಾಲ ಮುಂತಾದ ತಂತ್ರಜ್ಞಾನ ಸಾಧನಗಳು ಕ್ರಮೇಣ ಮನುಷ್ಯರ ಪರಸ್ಪದ ಸಂಬಂಧಗಳನ್ನು ಹೊಸಕಿ ಹಾಕುವ ಸಾಧನಗಳಾಗಿ ಪರಿಣಮಿಸುತ್ತಿರುವುದನ್ನು ನಿತ್ಯ ಜೀವನದಲ್ಲೇ ಕಾಣಬಹುದು. ಮೊಬೈಲ್ ತಂತ್ರಜ್ಞಾನ ದೂರ ತೀರದ ಸಂಬಂಧಗಳನ್ನು ಹೊಸೆಯುವ ಸಾಧನವಾಗಿರುವುದು ನಿಜ ಆದರೆ ಬೌದ್ಧಿಕವಾಗಿ, ಭಾವುಕತೆಯ ನೆಲೆಯಲ್ಲಿ ಮೊಬೈಲ್ ಬಳಕೆಯಿಂದ ಮಾನವರ ಪರಸ್ಪರ ಸಂಬಂಧಗಳು ನಶಿಸಿಹೋಗುತ್ತಿವೆ.

ಮಾರುಕಟ್ಟೆ ಆರ್ಥಿಕತೆ ತಂತ್ರಜ್ಞಾನವನ್ನು ತನ್ನ ಪ್ರಧಾನ ಅಂಗವಾಗಿ ಬಳಸಿಕೊಳ್ಳುತ್ತಿದ್ದು ನಾಗರಿಕ ಸಮಾಜವೂ ಸಹ ಈ ಬಲೆಯಲ್ಲಿ ಸಿಲುಕಿ ಹೆಮ್ಮೆಯಿಂದ ಮುನ್ನಡೆಯುತ್ತಿದೆ. ಆನ್‍ಲೈನ್ ಮಾರುಕಟ್ಟೆ ಎಂಬ ಆಧುನಿಕ ಮಾರಾಟ ಮತ್ತು ಸರಬರಾಜಿನ ಚಕ್ರವ್ಯೂಹ ಮಧ್ಯಮ ವರ್ಗಗಳನ್ನು ಆಕರ್ಷಿಸಿದೆ. ಈ ವ್ಯವಸ್ಥೆಯಲ್ಲಿ ಮಾರುವವರ ಮತ್ತು ಕೊಳ್ಳುವವರ ನಡುವಿನ ಸೂಕ್ಷ್ಮ ಮಾನವೀಯ ಸಂಬಂಧಗಳಿಗೆ ತಿಲಾಂಜಲಿ ನೀಡುತ್ತಿರುವ ಈ ವ್ಯವಸ್ಥೆ ಇದೀಗ ಔಷಧಿ ಮಾರುಕಟ್ಟೆಯನ್ನೂ ಆಕ್ರಮಿಸಿದೆ. ಇಲ್ಲಿ ಉತ್ಪಾದಕರು, ಉತ್ಪಾದನಾ ಸಂಬಂಧಗಳು, ಉತ್ಪಾದನಾ ಸಾಧನಗಳು ಎಲ್ಲವೂ ಅಗೋಚರವಾಗಿದ್ದು ಉತ್ಪನ್ನ ಮಾತ್ರವೇ ಕಣ್ಣೆದುರು ಇರುತ್ತದೆ.

ಉತ್ಪಾದನಾ ಸಂಬಂಧಗಳ ಮೂಲಕವೇ ಸಾಮಾಜಿಕ ಅಭ್ಯುದಯವನ್ನು ಕಾಣುತ್ತಾ ಬಂದಿರುವ ಮನುಕುಲ ಇಂದು ತಂತ್ರಜ್ಞಾನದ ಅವಿಷ್ಕಾರಗಳಿಗೆ ಬಲಿಯಾಗಿ ತನ್ನ ಮೂಲ ಮಾನವೀಯ ನೆಲೆಯನ್ನೇ ಕಳೆದುಕೊಳ್ಳುತ್ತಿರುವುದು ದುರಂತ. ಹೃದಯ ಸ್ಪರ್ಶಿ ಮಾತು, ದೈಹಿಕ ಸ್ಪರ್ಶ, ಭೌದ್ಧಿಕ ಚರ್ಚೆ, ಸಂವೇದನಾಶೀಲ ಸಂವಾದ ಮತ್ತು ಪರಸ್ಪರ ಭೇಟಿ ಇವೆಲ್ಲವೂ ಸಹ ಗೌಣವಾಗುತ್ತಿದೆ. ಸ್ನೇಹ ಸಂಬಂಧ, ಬಾಂಧವ್ಯ ಮತ್ತು ಆಪ್ತತೆಗಳೆಲ್ಲವೂ ಮೊಬೈಲ್ ಆ್ಯಪ್‍ಗಳಲ್ಲಿ, ವಾಟ್ಸ್‍ಆ್ಯಪ್‍ಗಳಲ್ಲಿ, ಫೇಸ್‍ಬುಕ್, ಟ್ವಿಟರ್‍ಗಳಲ್ಲಿ ಅಡಗಿದೆ. ಮುಖ ಪರಿಚಯವೇ ಇಲ್ಲದೆ ನೂರಾರು ಮೈಲು ದೂರದಲ್ಲಿರುವವರನ್ನು ಸಾಮಾಜಿಕ ತಾಣಗಳ ಮೂಲಕ ಫ್ರೆಂಡ್ ಎಂದು ಗುರುತಿಸುವ, ಅವರೊಡನೆ ದಿನಗಟ್ಟಲೆ ಚಾಟ್ ಮಾಡುವ ಯುವ ಜನಾಂಗ ತನ್ನ ಬದಿಯಲ್ಲೇ ಇರುವ ಹೃದಯಸ್ಪರ್ಶಿ ಸ್ನೇಹದ ಸೆಲೆಯನ್ನು ನಿರ್ಲಕ್ಷಿಸುತ್ತಿದೆ. ಆಧುನಿಕ ತಂತ್ರಜ್ಞಾನ ಮಾನವ ಸಮಾಜವನ್ನು ಭೌತಿಕವಾಗಿ, ಲೌಕಿಕವಾಗಿ ಮುನ್ನಡೆಸುತ್ತಿದೆ. ಆದರೆ ಬೌದ್ಧಿಕವಾಗಿ ಮನುಕುಲ ಜಡಗಟ್ಟುತ್ತಿದೆ. ಭಾವನೆಯ ಸೆಲೆಗಳು ಬತ್ತಿಹೋಗುತ್ತಿವೆ. ಸಂವೇದನೆಯ ನೆಲೆಗಳು ನಾಶವಾಗುತ್ತಿವೆ. ಈ ವಿಷವರ್ತುಲದಿಂದ ಹೊರಬರುವ ಮೂಲಕ ಮನುಜ ಸಂಬಂಧಗಳನ್ನು ಬೆಸೆಯುವ ಪ್ರಯತ್ನಗಳು ನಡೆಯಬೇಕಿದೆ.

Leave a Reply

Your email address will not be published.