ಆದಿವಾಸಿಗಳೇ ಅರಣ್ಯ ರಕ್ಷಕರು

ಸಂದರ್ಶನ : ಪುನೀತ್ ಕುಮಾರ್ 

ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿನ ಎನ್. ಎಸ್. ಡಿ. ಗೆ ಸೋಲಿಗರ ತಂಡವೊಂದು ಬಂದಿತ್ತು. ಅಲ್ಲಿ ಅವರು ಎನ್.ಎಸ್.ಡಿ ವಿದ್ಯಾರ್ಥಿಗಳಿಗೆ ತಮ್ಮ ಬುಡಕಟ್ಟಿನ ಪರಿಚಯ ಮಾಡಿಕೊಡುವುದರೊಂದಿಗೆ ಬಿಡುವಿನ ಸಮಯದಲ್ಲಿ ತಮ್ಮ ಕುರುಹಿಗಾಗಿ ಬುಗುರಿ ಮನೆಯನ್ನು ಕಟ್ಟುವುದರಲ್ಲಿ ಮಗ್ನರಾಗಿದ್ದರು. ಸೋಲಿಗರು ಕ್ರಿಯಾಶೀಲರು ಮತ್ತು ಶ್ರಮಜೀವಿಗಳು ಎಂದು ಕೇಳಿದ್ದ ನಮಗೆ ಅವರ ಬುಗುರಿ ಮನೆಯ ಕಾರ್ಯವೈಖರಿ ಕನ್ನಡಿಯಂತೆ ಪ್ರತಿಬಿಂಬಿಸುತಿತ್ತು. ಆ ಕಲಾಕೌಶಲ್ಯಕ್ಕೆ ಮನಸೋತು ಅವರ ಗುಂಪಿನ ಮುಖಂಡರಾದ ಬಸವರಾಜು ಅವರನ್ನು ಸಂದರ್ಶನ ಮಾಡಲಾಯಿತು. ಅದರ ಆಯ್ದ ಭಾಗವನ್ನು ಇಲ್ಲಿ ನಿರೂಪಿಸಲಾಗಿದೆ.

ಸೋಲಿಗರ ತಂಡದ ಮುಖಂಡ  ಬಸವರಾಜು ಮತ್ತು ಸಂದರ್ಶಕ ಪುನೀತ್ ಕುಮಾರ್

ಸೋಲಿಗರ ತಂಡದ ಮುಖಂಡ ಬಸವರಾಜು ಮತ್ತು ಸಂದರ್ಶಕ ಪುನೀತ್ ಕುಮಾರ್

 ಪ್ರಶ್ನೆ : ನಿಮ್ಮ ಸಮುದಾಯದ ಪರಿಚಯ  ಮಾಡಿಕೊಡಿ.
ಬಸವರಾಜು : ಚಾಮರಾಜನಗರ ಜಿಲ್ಲೆ ಮತ್ತು ತಾಲೋಕುಗಳಲ್ಲಿ ಆದಿವಾಸಿಗಳು ವಾಸ ಮಾಡುತ್ತಿದ್ದೇವೆ. ಈ ನಮ್ಮ ಬುಡಕಟ್ಟುಗಳಲ್ಲಿ ಸುಮಾರು ಬುಡಕಟ್ಟು ಇವೆ. ಎರವ, ಕೊರವ, ಮಲೆಕುಡಿಯಾ, ಸಿದ್ಧಿ, ಬೆಟ್ಟ ಕುರುಬ , ಕಾಡು ಕುರುಬ, ಜೇನು ಕುರುಬ, ಮತ್ತು ಸೋಲಿಗರು. ಚಾಮರಾಜನಗರದಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಸೋಲಿಗರು ವಾಸವಿದ್ದೇವೆ.

ನಮ್ಮ ಬುಡಕಟ್ಟು ತಲೆತಲಾಂತರದಿಂದ ಬಂದಿದೆ. ಕಾಡೇ ನಮಗೆ ದೇವರು. ಕಾಡಿನಲ್ಲಿರೋ ಪ್ರಾಣಿ, ಪಕ್ಷಿ, ಗಿಡ, ಮರ, ಬಳ್ಳಿಗಳೇ ನಮಗೆ ಸ್ನೇಹಿತರು. ನಮ್ಮ ಜೀವನಕ್ಕೆ ಕಿರುವನ ಉತ್ಪನ್ನಗಳೇ ನಮ್ಮ ಹೊಟ್ಟೆಪಾಡಾಗಿವೆ. ಈ ಕಿರುವನ ಉತ್ಪನ್ನ ಎಂದರೆ ಕಾಡಿನಲ್ಲಿ ಸಿಗುವ ಪಾಚಿ, ನೆಲ್ಲಿಕಾಯಿ, ಜೇನು, ಕುಂಬಳಕಾಯಿ, ಅಂಟ್ವಾಳ ಕಾಯಿ, ಸೀಗೇಕಾಯಿ. ಇವುಗಳನ್ನು ಶೇಖರಣೆ ಮಾಡಿ ಅದನ್ನು ನಮ್ಮ ಸೋಲಿಗರ ಜನಾಂಗದ “ಲ್ಯಾಂಪ್” ಸಹಕಾರ ಸಂಘ ಎಂದು ಸರ್ಕಾರದಿಂದ ಮಾಡಲಾಗಿರುವ ಸೊಸೈಟಿಗೆ ಕೊಡುತ್ತೇವೆ.

ಅಲ್ಲಿ ನಮಗೆ ಈ ಮರದಲ್ಲಿ ಬೆಳೆಯುವ ಬಿಳಿ ಬಣ್ಣದ 1kg ಪಾಚಿಗೆ 150 ರೂ.ರಂತೆ, ಜೇನು ತುಪ್ಪಕ್ಕೆ 1 kg 200 ರೂ. ರವರೆಗೂ ಇದೆ. ಇದು ನಮಗೆ ಹಿಂದಿನಿಂದಲೂ ಬಂದಿರೋ ಕಿರುವನ ಉತ್ಪನ್ನಗಳ ಮಾರಾಟವೇ ನಮ್ಮ ಜೀವನ. ನಾವು ವಲಸೆ ಹೋಗೊ ಜನ. ನಮ್ಮ ತಂದೆ ತಾಯಿಗಳು ಹಿಂದೆಲ್ಲಾ ಒಂದು ಕಾಡಿನಲ್ಲಿ ರಾಗಿ ಬೆಳಸಿ ಅದರಿಂದದಲೇ ಜೀವನ ಮಾಡುತ್ತಿದ್ದರು. ನಮ್ಮ ಭಾಷೆಯಲ್ಲಿ ಹಳ್ಳಿಯನ್ನು ಪೋಡುಗಳೆಂದು ಕರೆಯುತ್ತಾರೆ.

ಆ ಪೋಡಿನಲ್ಲಿ ಹಿಂದೆ ಒಂದು ಘೋರ ಖಾಯಿಲೆ ಬರುತಿತ್ತು. ಅದು ಪ್ರಾಣಿಗಳಿಂದಲೊ ಅಥವ ಇನ್ನಾವುದರಿಂದ ಬರುತಿತ್ತೊ ಗೊತ್ತಿಲ್ಲ. ನಮ್ಮಲ್ಲಿ ದೇವರ ನಂಬಿಕೆ ಜಾಸ್ತಿ. ಯಾರಾದ್ರು ಒಬ್ಬರಿಗೆ ಖಾಯಿಲೆ ಬಂದುಬಿಟ್ರೆ, ದೇವರಲ್ಲಿ ಶಾಸ್ತ್ರ-ಕಣಿ ನೋಡಿ ಕೆಟ್ಟದ್ದು ಅಂತ ಬಂದ್ರೆ, ಆ ಜಾಗ ಸರಿಯಿಲ್ಲವೆಂದು ಕಾಡಿನ ಮತ್ತೊಂದು ಕಡೆಗೆ ಹೊರಟು ಹೋಗುತ್ತಿದ್ದರು.

ಹೀಗೆ ವರ್ಷಕ್ಕೊಂದು ಬಾರಿ ಬೇರೆ ಬೇರೆ ಕಾಡಿನಲ್ಲಿ ವಾಸವಿರುತ್ತಿದ್ದೆವು. ಆ ಸಂದರ್ಭದಲ್ಲಿ ಊಟಕ್ಕೆ ಬಹಳ ಕಷ್ಟ ಇತ್ತು. ಆಗ ಈ ಕಾಡಿನಲ್ಲಿ ಸಿಗುವ ಗೆಡ್ಡೆ-ಗೆಣಸು, ಜೇನು, ಹಣ್ಣು ಹಂಪಲು ಸೊಪ್ಪು ಸೊದೆ ಇವನ್ನೆ ತಿಂದು ಜೀವಿಸುತಿದ್ದೆವು. ತೆಳುವಾದ ಹುಲ್ಲಿನಿಂದ ತಂಪು ಕೊಡುವಂತಹ ಗುಡಿಸಲುಗಳೇ ನಮಗೆ ಇಷ್ಟವಾದ ಮನೆಗಳಾಗಿದ್ದವು. ಮತ್ತು ಅದರಲ್ಲೇ ನಮ್ಮ ಇಡೀ ಕುಟುಂಬ ವಾಸಮಾಡ್ತಿದ್ರು. ಹೀಗಿರುವಾಗ 1963ರಲ್ಲಿ ನಿಜಲಿಂಗಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಿಳಿಗಿರಿ ರಂಗನ ಬೆಟ್ಟದಲ್ಲಿ 30 ಕಾಂಕ್ರೀಟ್ ಹೆಂಚಿನ ಮನೆಗಳನ್ನು ಕಟ್ಟಿಸಿ ಅಲ್ಲಿರುವಂತೆ ಬಂದು ಕರೆದರು. ನಮ್ಮ ತಂದೆ-ತಾಯಿಯರು ನಿರಾಕರಿಸಿದರು. ಸರ್ಕಾರದವರು ಎಷ್ಟು ಪ್ರಯತ್ನ ಪಟ್ಟರು ಸುಮಾರು ಐದು ವರ್ಷಗಳ ಕಾಲ ಬರಲೇ ಇಲ್ಲ, ಆಷ್ಟರಲ್ಲಾಗಲೆ ಆ ಮನೆಗಳಲ್ಲಿ ಕರಡಿ, ಹುಲಿ, ಚಿರತೆಗಳು ಜೀವಿಸುತ್ತಿದ್ದವಂತೆ. ಆಗ ಸರ್ಕಾರದವರು ಸಾಕಾನೆಗಳನ್ನು ತಂದು ನಮ್ಮ ಮನೆಗಳನ್ನು ಕಿತ್ತು ಹಾಕಿಸಿ ನಂತರ ನಮ್ಮನ್ನು ಕರೆತಂದು ಅವರು ಕಟ್ಟಿಸಿದ್ದ ಮನೆಗಳಿಗೆ ಬಿಟ್ಟರು. ಆಗ ಆ 30 ಮನೆಗಳಲ್ಲಿ ನಮ್ಮ ವಾಸ ಶುರುವಾಯಿತು.

ನಮಗೆ ಈ ಪ್ರಪಂಚ ಜ್ಞಾನದ ಅರಿವೇ ಇರಲಿಲ್ಲಾ. ನಗರ ಜನರೊಂದಿಗೆ ಮಾತನಾಡುವುದು, ಬೆರೆಯುವುದು ನಮಗೆ ಗೊತ್ತಿರಲಿಲ್ಲ. ಅವರು ಕೋಟು, ಪ್ಯಾಂಟು ಧರಿಸಿ ಬಂದ್ರೆ ಭಯ ಪಟ್ಟು ಓಡಿ ಹೋಗುತ್ತಿದ್ದೆವು. ಅದನ್ನು ಗಮನಿಸಿ ಡಾ. ಸುದರ್ಶನ್ ರವರು 1980ರಲ್ಲಿ ಬುಡಕಟ್ಟು ಜನಾಂಗದವರಿಗೆ ವಿದ್ಯಾಭ್ಯಾಸ ಕೊಟ್ಟು, ಆರೋಗ್ಯದ ಬಗ್ಗೆ ಅರಿವು ಮೂಡಿಸಿ ಒಂದು ಆಸ್ಪತ್ರೆ ಕಟ್ಟಿಸಿದರು,.

ಈಗ ನಮ್ಮ ಬುಡಕಟ್ಟು ಜನಾಂಗದವರೂ ಕೂಡ ವಿದ್ಯಾಭ್ಯಾಸದಲ್ಲಿ ಮುನ್ನಡೆ ಕಂಡು ಕೊಂಡಿದ್ದೇವೆ. ಇತ್ತೀಚಿನ ದಿನಗಳಲ್ಲಿ Ph.d ಮಾಡಿ ಡಾಕ್ಟರೇಟ್ ಪಡೆದವರು ಇದ್ದಾರೆ. ನಮಗೆ ಪ್ರಪಂಚದ ಅರಿವು ಮೂಡಿಸಿ ಪ್ರಬುದ್ಧರನ್ನಾಗಿ ಮಾಡಿದವರು ಡಾ. ಸುದರ್ಶನ್ ರವರು. ಈಗಲೂ ಕೆಲವು ಹಿರಿಕರು ಈ ಗಲಾಟೆ ಗದ್ದಲಗಳು ಬೇಕಿಲ್ಲವೆಂದು ಕಾಡಿನಲ್ಲೇ ಇದ್ದಾರೆ. ನಮ್ಮ ಜೀವನವೆಂದ್ರೆ ಇವೊತ್ತಿನ ಊಟ ಸಿಕ್ಕರೆ ಸಾಕು. ನಾಳೆಯ ವಿಚಾರ ನಾಳೆ ನೋಡಿಕೊಳ್ಳಣ ಎನ್ನುತ್ತೇವೆ. ಇದು ನಮ್ಮ ಅನಾದಿ ಕಾಲದಿಂದ ಬಂದ ಪದ್ದತಿ.betta kuruba (1)

ಪ್ರಶ್ನೆ: ನಿಮ್ಮ ಹಬ್ಬದ ಆಚರಣೆಗಳ ಬಗ್ಗೆ ಹೇಳುವಿರ? ಈ ರೊಟ್ಟಿ ಹಬ್ಬದ ವಿಶೇಷವೇನು?
ಬಸವರಾಜು : ನಮ್ಮ ಬುಟಕಟ್ಟು ಸೋಲಿಗರಲ್ಲೊಂದು ವಿಶೇಷ ಹಬ್ಬದಾಚರಣೆ ಇದೆ. ಅದರಲ್ಲೊಂದು ರೊಟ್ಟಿ ಹಬ್ಬ. ಇದನ್ನು ನಾವು ಈ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಸೋಮವಾರ ಅಥವಾ ಶುಕ್ರವಾರ ಮಾಡ್ತೀವಿ. ನಮ್ಮಲ್ಲಿ ಐದು ಕುಲವಿಗಳಿವೆ. ಈಶ್ವರ, ಮಾದೇಶ್ವರ ಮನೆ ದೇವರಾದರೆ, ಬಿಳಿಗಿರಿ ರಂಗನ ಬೆಟ್ಟದಲ್ಲಿನ ವಿಷ್ಣು ಭಾವನಾಗಬೇಕು. ಹಾಗಾಗಿ ನಮ್ಮ ಐದು ಕುಲಗಳಿಗೂ ಒಬ್ಬೊಬ್ಬ ದೇವರಿದ್ದಾರೆ. ಆ ದೇವರಿಗೆ ನಾವು ವರ್ಷಕ್ಕೊಂದು ಸಾರಿ ರೊಟ್ಟಿ ಹಬ್ಬ ಮಾಡುವುದು.

ಈ ಹಬ್ಬವನ್ನು ಸುತ್ತ,ಮುತ್ತಲಿನ ಆದಿವಾಸಿಗಳೆಲ್ಲಾ ಸೇರಿ ಒಬ್ಬರಿಗೊಬ್ಬರು ಪರಸ್ಪರ ಪರಿಚಯ ಮಾಡಿಕೊಂಡು ಮಾಡ್ತೀವಿ. ಇದು ನಮಗೆ ಹಿಂದಿನಿಂದಲೂ ಬಂದಿರೋ ಒಂದು ಜಾನಪದ ಹಬ್ಬ. ಈ ರೊಟ್ಟಿಹಬ್ಬದಲ್ಲಿ ರೊಟ್ಟಿ ತಯಾರಿಸುವ ಬಗೆ ಎಂದರೆ , ರಾಗಿಯನ್ನ ಕಲ್ಲಿನಿಂದ ಬೀಸಿ, ಮುತ್ತುಗದ ಎಲೆ, ಕಲ್ಲುಬಾಳೆ ಎಲೆ, ಕೂಗೆಲೆ, ಎಂಬ ಮೂರು ವಿಧದ ಕಾಡು ಎಲೆಗಳನ್ನ ತಂದು, ನೀರಲ್ಲಿ ರಾಗಿ ಹಿಟ್ಟನ್ನು ಕಲೆಸಿ, ಎಲೆಯ ಮೇಲೆ ತಟ್ಟಿ, ಬೆಂಕಿ ಕೆಂಡದಲ್ಲಿ ರೊಟ್ಟಿಯನ್ನು ಸುಡುತ್ತೇವೆ. ಆ ರೊಟ್ಟಿಯ ಜೊತೆ ನಮಗೆ ತಾಳಗ ಅಂದ್ರೆ ಕಾಡು ಹಲಸು, ಅವರೆ ಕಾಳು, ಕುಂಬಳ ಕಾಯಿ, ಇವೆಲ್ಲ ಸೇರಿಸಿ ಮಾಡಿದ ಪಲ್ಯ. ರೊಟ್ಟಿ, ಮತ್ತು ಪಲ್ಯವನ್ನು ಮಾಡಿ ನಮ್ಮ ಮನೆ ದೇವರುಗಳಾದ “ ರಂಗಪ್ಪ, ಕೇತಪ್ಪ, ದೊಡ್ಡಸಪ್ಪೆಗೆ, ಜಡೆಯಪ್ಪನಿಗೆ ಎಡೆ ಇಟ್ಟು. ಗೋರು ಗೋರುಕ ಗೋರುಕನ ಎಂಬ ಹಾಡು ಹೇಳಿಕೊಂಡು ನೃತ್ಯ ಮಾಡುತ್ತೇವೆ.

ಈ ಗೋರು ಗೋರುಕ ಗೋರುಕನ ಅನ್ನೊದು ತಲೆ ತಲಾಂತರದಿಂದ ಬಂದ ಜಾನಪದ ನೃತ್ಯ. ಈ ಹಾಡಿನಲ್ಲಿ ಬರುವ ಕಾನ ಎಂದರೆ “ ಚಂಪಕಾರಣ್ಯ” ಗೋರು ಎಂದರೆ ದಟ್ಟವಾದ ಕಾಡಿನಲ್ಲಿ ಗಾಳಿಯಿಂದ ಉಂಟಾಗುವ “ಗುರ್ ರ್” ಎಂಬ ಶಬ್ದ. ಅದನ್ನೆ ಗೋರುಕನ ಅಂತ ಕರೆಯುತ್ತೇವೆ. ಅಂದರೆ ದೇವರ ಕಾಡು ಎಂದರ್ಥ. ಈ ಗೋರುಕನದಲ್ಲಿ ಪ್ರಾಣಿ, ಪಕ್ಷಿ, ಮರ, ಗಿಡ, ಹೂ ಇತ್ಯಾದಿಗಳ ಮೇಲೆ ಹಾಡನ್ನು ಕಟ್ಟುತ್ತೇವೆ. ಕೂಸು, ಕುಂಚು, ಮೊಗ್ಗು, ಮೊಗರು, ಅಂದರೆ ಮಕ್ಕಳಿಂದ ಹಿಡಿದು ದೊಡ್ಡವರ ತನಕ, ಮತ್ತೆ ಹೂವಿಂದ ಹಿಡಿದು ಮರಗಳ ತನಕ ನೀ ಚೆನ್ನಾಗಿ ಕಾದು ಕಾಪಾಡು ,ರಕ್ಷಿಸು ಎಂದು ಆ ದೇವರಲ್ಲಿ ಬೇಡಿಕೊಳ್ಳುವ ಬಗೆ ಈ ಹಾಡಿನ ಅರ್ಥ.

ರಾತ್ರಿ 8 ಗಂಟೆಗೆ ಬಂದ ಜನರಿಗೆ ರೊಟ್ಟಿ ಕುಂಬಳಕಾಯಿ ತಾಳಗಗಳನ್ನು ಊಟವಾಗಿ ಕೊಟ್ಟು ನಂತರ ಈ ನೃತ್ಯ ಶುರುವಾಗುತ್ತದೆ. ಅಂದರೆ ರಾತ್ರಿ 8 ರಿಂದ ಬೆಳಗ್ಗೆ ಸೂರ್ಯ ಮೂಡೊ ವರೆಗೂ ನೃತ್ಯ ಮಾಡುತ್ತೇವೆ. ಪುರುಷರಲ್ಲಿ ಯುವಕರು ನೃತ್ಯ ಮಾಡುತ್ತಾರೆ. ಜೊತೆಗೆ ಅಲ್ಲಿ ಬಂದಿರುವ ಹೆಣ್ಣು ಮಕ್ಕಳು , ಮಹಿಳೆಯರೆಲ್ಲಾ ದೇವರ ಮುಂದೆ ಹಾಡು ಹೇಳುತ್ತಾ ನೃತ್ಯವನ್ನು ನೋಡುತ್ತಿರುತ್ತಾರೆ.

ಪ್ರಶ್ನೆ: ಈ ರೊಟ್ಟಿ ಹಬ್ಬದ ವಿಶೇಷವೇನು?
ಬಸವರಾಜು : ಈ ರೊಟ್ಟಿ ಹಬ್ಬದ ಮತ್ತೊಂದು ವಿಶೇಷವೆಂದರೆ ಮದುವೆ. ನಮ್ಮ ಬುಡಕಟ್ಟುಗಳಲ್ಲಿ ಹಣ ಖರ್ಚುಮಾಡಿ ಮದುವೆ ಮಾಡುವುದಿಲ್ಲ, ನಮ್ಮಲ್ಲಿ ಖರ್ಚಿಲ್ಲದ ಮದುವೆಗಳೇ ಹೆಚ್ಚು. ಹೇಗೆಂದರೆ ರೊಟ್ಟಿ ಹಬ್ಬದಲ್ಲಿ ನೃತ್ಯ ಮಾಡುವ ಪುರುಷರನ್ನು ಸುತ್ತ ಕೂತು ನೋಡುವ ಮಹಿಳೆಯರು ಯುವಕರಲ್ಲಿ ಯಾರು ಬಹಳ ಚೆನ್ನಾಗಿ ನೃತ್ಯ ಮಾಡುತ್ತಾರೊ ಅಂತವರನ್ನು ಕೂತ ಹೆಣ್ಣು ಮಕ್ಕಳಲ್ಲಿ ಒಬ್ಬಳು ಗುರುತಿಸಿ ಯಾರಿಗೂ ಗೊತ್ತಾಗದ ಹಾಗೆ ಸಣ್ಣದೊಂದು ಕಲ್ಲಿಂದ ಆ ಯುವಕನಿಗೆ ಹೊಡಿತಾಳೆ. ಇತ್ತೀಚಿನ ದಿನಗಳಲ್ಲಿ ಕಲ್ಲಿನ ಬದಲಾಗಿ ಬಾಳೆಹಣ್ಣು, ಬಿಸ್ಕೆಟ್ಟು, ಹಾಗು ಮಿಠಾಯಿಗಳಲ್ಲಿ ಹೊಡಿತಾರೆ.

ಆಗ ಆ ಯುವಕ ನೃತ್ಯ ಮಾಡಿಕೊಂಡೇ ತಿರುಗಿ ನೋಡ್ತಾನೆ, ಮತ್ತೊಂದು ಸುತ್ತು ಬರ್ತಾನೆ ಮತ್ತೊಮ್ಮೆ ಹುಡುಗಿ ಅದೇ ರೀತಿ ಹೊಡಿಯುತ್ತಾಳೆ, ಮತ್ತೆ ಆ ಹುಡುಗ ತಿರುಗಿ ನೋಡ್ತಾನೆ. ಹೀಗೆ ಮೂರನೇ ಬಾರಿ ಸುತ್ತು ಹಾಕುವಾಗ ಆ ಹುಡುಗ ಮತ್ತೆ ಹೊಡೆಸಿಕೊಂಡು ಹೋಗಿ ಆ ಹುಡುಗಿಯ ಹತ್ತಿರ ನನಗ್ಯಾಕೆ ಕಲ್ಲು ಹೊಡೆದೆ ಎಂದು ಕೇಳ್ತಾನೆ. ಆಗ ಆ ಹುಡುಗಿ ನೀನು ನನಗೆ ಇಷ್ಟ ಎಂದು ಹೇಳುತ್ತಾಳೆ. ಆಗ ಆ ಹುಡುಗ ನೀನು ನನ್ನನ್ನು ಮದುವೆ ಆಗ್ತಿಯಾ ಅಂತ ಕೇಳ್ತಾನೆ. ರಾತ್ರಿ ಒಬ್ಬರಿಗೊಬ್ಬರು ಮಾತಾಡಿಕೊಂಡು ರಾತ್ರಿ ಸುಮಾರು 12 ಗಂಟೆಗೆ ಹೊತ್ತಿಗೆ ಕಾಡಿಗೆ ಓಡಿ ಹೋಗ್ತಾರೆ.

ಕಾಡಿನಲ್ಲಿ 3-4 ದಿನ ಕಲ್ಲಿನ ಗುಹೆಯಲ್ಲಿ ಜೀವನ ಮಾಡುತ್ತಾರೆ. ಅಲ್ಲಿ ಹುಡುಗಿ ಹುಡುಗನನ್ನು ಪರೀಕ್ಷೆ ಮಾಡುತ್ತಾಳೆ. ಆ ಹುಡುಗ ಜೇನು, ಹಣ್ಣು-ಹಂಪಲು, ಸೊಪ್ಪು, ಸದೆ ಹಾಗೆ ಗೆಡ್ಡೆ ಗೆಣಸು ಅಗಿದು ತಂದು ಕೊಡಬೇಕು. ಹೀಗೆ ಹಲವು ಪರೀಕ್ಷೆಗಳನ್ನು ಓಡ್ಡಿ ಅವನಿಂದ ಕೆಲಸ ಮಾಡಿಸಿಕೊಂಡು ತನ್ನನ್ನು ಬಾಳಿಸುವನೆಂದು ಖಾತ್ರಿಯಾಗಿ 3 ದಿನ ಕಳೆದ ಮೇಲೆ ತಮ್ಮ ಪೊಡಿಗೆ ( ಹಳ್ಳಿಗೆ) ಬರುತ್ತಾರೆ. ಅವರು ಪೊಡಿಗೆ ಬಂದಾಗ ಊರಿನ ಮುಖಂಡರು ಮತ್ತು ಗ್ರಾಮಸ್ಥರು ಅವರನ್ನು ಕರೆಸಿ ನೀವಿಬ್ಬರು ‘ರೊಟ್ಟಿ ಹಬ್ಬದ’ ದಿನ ಒಬ್ಬರನ್ನೊಬ್ಬರು ಇಷ್ಟಪಟ್ಟು ಕಾಡಿಗೆ ಹೋಗಿ ಮದುವೆಯಾಗಿ ಬಂದಿರುವಿರಿ.

ಹಾಗಾಗಿ ಇನ್ನು ಮುಂದೆ ನೀವು ಇರುವ ವರೆಗು ಚೆನ್ನಾಗಿ, ಸುಖವಾಗಿ ಬಾಳಬೇಕೆಂದು ಪ್ರಮಾಣ ಮಾಡಿಸಿ ಭಾಷೆ ತಗೆದು ಕೊಳ್ಳುತ್ತಾರೆ. ಆದಾದ ನಂತರ ಮದುವೆಯ ಖರ್ಚು 12 ರೂ, 25 ಪೈಸೆಯನ್ನು “ ತೆರ” ಅಂತ ಕರೀತೀವಿ. ಹೇಳದೆ ಕೇಳದೆ ಓಡಿ ಹೋಗಿ ಮದುವೆಯಾಗಿದಕ್ಕೆ ದಂಡದ ರೂಪದಲ್ಲಿ ಕಟ್ಟುವ ತಪ್ಪು ಕಾಣಿಕೆಯಾಗಿ ಈ ತೆರ 12 ರೂ. 25 ಪೈಸೆಯನ್ನು ಹುಡುಗ ಪಂಚಾಯ್ತಿಗೆ ಕಟ್ಟಬೇಕು. ಇದನ್ನು ಕಟ್ಟಿದರೆ ನಮ್ಮ ಸಂಪ್ರದಾಯದಲ್ಲಿ ಮದುವೆ ಮುಗಿಯಿತು ಎಂದರ್ಥ.
ಈ ರೀತಿ ಪ್ರತಿ ರೊಟ್ಟಿ ಹಬ್ಬದಲ್ಲೂ ಕೂಡ 5-6 ಜೋಡಿ ಮದುವೆಯಾಗುತ್ತಾರೆ. ಮತ್ತು ಈಗಾಗಲೇ ರೊಟ್ಟಿ ಹಬ್ಬದಲ್ಲಿ ಓಡಿ ಹೋಗಿ ಮದುವೆಯಾದವರೆಲ್ಲಾ ಚೆನ್ನಾಗಿ ಬಾಳುತ್ತಿದ್ದಾರೆ. ಇದು ನಮ್ಮಲ್ಲಿ ಮದುವೆಯಾಗೊ ಪದ್ದತಿ. ಹೀಗೆ ನಮ್ಮಲ್ಲಿ ಇನ್ನೂ ಒಳ್ಳೊಳ್ಳೆ ಪದ್ದತಿಗಳಿವೆ.

betta kuruba (3)ಪ್ರಶ್ನೆ. ನಿಮ್ಮ ಆಹಾರ ಪದ್ದತಿಯ ಬಗ್ಗೆ ತಿಳಿಸುವಿರ ?
ಬಸವರಾಜು : ನಮಗೆ ಇಷ್ಟವಾದ ಊಟವೆಂದರೆ ಮುದ್ದೆ. ನಾವು ಮುದ್ದೆ ಜೊತೆಗೆ ಸೊಪ್ಪು ಸದೆಗಳನ್ನು ಆಹಾರವಾಗಿ ತಿನ್ನುತ್ತೇವೆ. ದಿನಕ್ಕೆ ಬೆಳಿಗ್ಗೆ 7ಕ್ಕೆ, ಸಂಜೆ 6ಕ್ಕೆ ಎರಡು ಹೊತ್ತು ಊಟ ಮಾಡುತ್ತೇವೆ. ಪ್ರತಿದಿನ ಮದ್ಯಾಹ್ನ ಕಪ್ಪು ಟೀ ಯನ್ನು ಸೇವಿಸುತ್ತೇವೆ. ನಮ್ಮ ಅಡಿಗೆಯನ್ನು ಪಕ್ಕದ ಮನೆಯವರಿಗೆ ಕೊಟ್ಟೇ ತಿನ್ನಬೇಕು ಅದು ಸಂಪ್ರದಾಯ. ಹೀಗೆ ಪರಸ್ಪರ ಹಂಚಿತಿನ್ನುವುದರಿಂದ ಪ್ರೀತಿ ವಿಶ್ವಾಸ ಹೆಚ್ಚಾಗಿ ಬಾಂಧವ್ಯ ಉಂಟಾಗುತ್ತದೆ.

ಪ್ರಶ್ನೆ. ನಿಮ್ಮ ಬುಡಕಟ್ಟಿನಲ್ಲಿ ಜನರ ಹೊಂದಾಣಿಕೆ ಹೇಗೆ? ಮತ್ತು ಅಪರಾಧ ಕೃತ್ಯಗಳೇನಾದರು ಇವೆಯೆ ?
ಬಸವರಾಜು : ನಾವು ಪರಸ್ಪರ ಕಾದಾಡೋದಿಲ್ಲ,ಜಗಳ ಬರೋದೆ ವಿರಳ. ಒಂದು ವೇಳೆ ಜಗಳ ಬಂದಾಗ ಬಹಳ ಬೇಗ ಮೂಗು ಸನ್ನೆಗಳಲ್ಲೇ ಸರಿ ಮಾಡಿಕೊಂಡು ಒಂದೆರಡು ದಿನ ಮರೆತು ಬಿಡುತ್ತಾರೆ. ಯಾವುದಾದರು ಸಮಾರಂಭದೊಂದಿಗೆ ಕೆಲಸ ಮಾಡುವಾಗ ಮಾತನಾಡುತ್ತ ಮತ್ತೆ ನಮ್ಮ ಬುಡಕಟ್ಟಿನವರು ಒಂದಾಗುತ್ತೇವೆ. ನಮ್ಮಲ್ಲಿ ಅತ್ಯಾಚಾರ, ಕೊಲೆ, ಬೈಗುಳ, ಸುಲಿಗೆ, ಕಳ್ಳತನವಿಲ್ಲ. ಬೇರೆಯವರ ವಸ್ತು ಸಿಕ್ಕರೆ ಅದು ಚಿನ್ನವಾದರು ಮುಟ್ಟುವುದಿಲ್ಲ. ಅವರ ಸ್ವತ್ತು ಅವರಿಗೇ ಅನ್ನೊ ವಾಡಿಕೆ. ನಮ್ಮಲ್ಲಿ ಒಂದು ನಂಬಿಕೆ ಇದೆ. ಬೇರೆಯವರ ವಸ್ತು ಮುಟ್ಟಿದರೆ ಅವರ ದೆವ್ವ ನಮಗೆ ಬಂದು ಬಿಡುತ್ತದೆ ಎಂದು. ಹಾಗಾಗಿ ಬೇರೊಬ್ಬರ ವಸ್ತುಗಳನ್ನು ನಾವು ಮುಟ್ಟುವುದಿಲ್ಲ.

ಪ್ರಶ್ನೆ. ಕಾಡಿನಲ್ಲಿ ನಿಮ್ಮ ಆರೋಗ್ಯದ ಸ್ಥಿತಿ ಮತ್ತು ನಿಮ್ಮಲ್ಲಿನ ನಾಟಿ ಔಷಧಿ ಪದ್ದತಿಯ ಬಗ್ಗೆ ಹೇಳುವಿರ ?
ಬಸವರಾಜು: ಮೊದಲು ನಮ್ಮಲ್ಲಿ ಖಾಯಿಲೆಗಳೆ ಇರಲಿಲ್ಲಾ. ಆಗ ವರ್ಷಕ್ಕೊಂದು ಬಾರಿ ಖಾಯಿಲೆ ಬರೋದೇ ಕಷ್ಟ ಇತ್ತು. ಖಾಯಿಲೆ ಬಂದಾಗ ಗಿಡಮೂಲಿಕೆಗಳನ್ನ ತಿಂದು ಚೇತರಿಸಿಕೊಳ್ತಾ ಇದ್ವಿ. ಈಗಲೂ ನಾವು ಎಂತ ಮಳೆಯಲ್ಲೂ ಓಡಾಡ್ತೀವಿ ಜ್ವರ, ನಗಡಿ, ಶೀತ ಬರೋದಿಲ್ಲ. ನಮ್ಮಲ್ಲಿ ಮಹಿಳೆಯರು ಹೆರಿಗೆ ಮನೆಯಲ್ಲೇ ಮಾಡಿಕೊಳ್ಳುತ್ತಾರೆ. ಹಾಗೆ ಮಹಿಳೆಯರನ್ನು ಮಲಗಿಸಿ ಹೆರಿಗೆ ಮಾಡಿಸಿದರೆ ಮಗುವಿನ ಹೃದಯಕ್ಕೆ ಆಪತ್ತು ಎಂದು ಕೂರಿಸಿ ಹೆರಿಗೆ ಮಾಡಿಸಲಾಗುತ್ತದೆ. ಕೆಲವೊಂದು ಸಾರಿ ಒಬ್ಬೊಬ್ಬರೆ ಹೆರಿಗೆ ಮಾಡಿಕೊಳ್ಳುತ್ತಾರೆ. ಬೇರೆ ಜನಾಂಗಗಳಲ್ಲಿ 9 ತಿಂಗಳು ಯಾವ ಕೆಲಸ ಮಾಡದಂತೆ ಮನೆಯಲ್ಲೇ ಇರಿಸಿಕೊಳ್ತಾರೆ. ಅವರಿಗೆ ನೀರು ಸಹ ಮುಟ್ಟಿಸೋದಿಲ್ಲ. ಆದರೆ ನಮ್ಮಲ್ಲಿ ರಾತ್ರಿ ಹೆರಿಗೆ ಆದರೆ ಆಕೆ ಬೆಳಿಗ್ಗೆ ಹಿಟ್ಟುಮಾಡಿಕೊಡುತ್ತಾಳೆ, ರಾಗಿ ಬೀಸಿಕೊಡುತ್ತಾಳೆ, ನೀರು ತರುತ್ತಾಳೆ. ಎಲ್ಲಾ ಕೆಲಸವನ್ನು ಮಾಡುತ್ತಾಳೆ. ಏಕಂದ್ರೆ ನಮ್ಮ ಕಾಡಿನ ಗೆಡ್ಡೆ, ಗೆಣಸು, ಜೇನಿನಲ್ಲಿ ಅಂಥಶಕ್ತಿಇದೆ. ಈ ಶುಗರ್ನಂತ ಖಾಯಿಲೆಗೂ ನಮ್ಮಲ್ಲಿ ಔಷಧಿ ಇದೆ. ಆದರೆ ಬಹಳ ಚಿಂತಾಜನಕ ಸ್ಥಿತಿಬಂದಾಗ ಆಸ್ಪತ್ರೆಗೆ ಹೋಗುತ್ತೇವೆ.

ಇತ್ತೀಚೆಗೆ ರಾಸಾಯನಿಕ ಪದಾರ್ಥಗಳ ಬಳಕೆ ಶುರುವಾದಾಗಿನಿಂದ ಚಿಕನ್ಗುನ್ಯ, ರಕ್ತಹೀನತೆ, ಗ್ಯಾಂಗ್ರೀನ್, ಶುಗರ್ ಇತ್ಯಾದಿ ಕೆಲವು ಖಾಯಿಲೆಗಳು ಕಳೆದ 10 ವರ್ಷಗಳಿಂದ ಕಂಡುಬಂದಿವೆ. ನಾವು ಮುಂಚೆ ಸಾವಯವ ಪದಾರ್ಥಗಳನ್ನು ತಿನ್ನುವಾಗ ಈ ಖಾಯಿಲೆಗಳು ಇರಲಿಲ್ಲ. ಇತ್ತೀಚೆಗೆ ಹೊರಗಡೆಯಿಂದ ರೇಶನ್ತರುವಂತಾಗಿದೆ. ಅದು ಸಹ ಒಂದು ಕಾರಣ.

ಹಾಗೆ ನೋಡಿದರೆ ಮೊದಲಿದ್ದ ಸ್ವಾತಂತ್ರ ನಮಗೆ ಈಗ ಇಲ್ಲ. ಕಾಡಿನ ಆಜೀವನ ಬಹಳ ಚೆನ್ನಾಗಿತ್ತು. ಆಗ ನಮ್ಮದೇ ಆದ ಸ್ವಾತಂತ್ರ್ಯ ಇತ್ತು. ನಾವೆಲ್ಲ ನಮ್ಮ ಸಂಸ್ಕೃತಿ , ಪದ್ದತಿಗಳನ್ನು ಬಹಳ ಸೊಗಸಾಗಿ ಬೆಳೆಸಿಕೊಂಡಿದ್ದೆವು.

ಪ್ರಶ್ನೆ. ಕಾಡಿನಿಂದ ನಿಮ್ಮ ಕಿರುವನ ಉತ್ಪನ್ನವನ್ನ ತರೋಕೆ ಅವಕಾಶ ಇದ್ಯಾ, ಅಥವ ಅರಣ್ಯ ಇಲಾಖೆಯಿಂದ ತೊಂದರೆಗಳಾಗ್ತಿದ್ಯಾ?
ಬಸವರಾಜು : ಅರಣ್ಯ ಇಲಾಖೆ ಕೆಲವೊಂದು ವಿಚಾರಗಳಿಗೆ ತೊಂದರೆ ಕೊಡ್ತಿದ್ದಾರೆ. ಈ ಟೈಗರ್ ಪ್ರೊಜೆಕ್ಟ್ ಬಂದ ಮೇಲೆ ಸೌದೆ ತಂದು ಅಡುಗೆ ಮಾಡುವುದೂ ಕಷ್ಟವಾಗಿದೆ. ಹಿಂದಿನ ನಮ್ಮ ಪೂಜೆ ಪುನಸ್ಕಾರ ಪದ್ದತಿಗಳನ್ನು ಅವರಿಗೆ ಮೊದಲೇ ತಿಳಿಸಿ ಸೀಮಿತ ಅವಧಿಯಲ್ಲಿ ಹಿಂತಿರುಗಬೇಕು. ಹೀಗಾಗಿ ಮೊದಲಿದ್ದ ಸ್ವಾತಂತ್ರ್ಯ ಈಗ ಇಲ್ಲ. ಕೆಲವು ಪರಿಸರವಾದಿಗಳು ಹೇಳುತ್ತಾರೆ ‘ಈ ಗಿರಿಜನರಿಂದ ಕಾಡು ಹಾಳಾಗಿದೆ ಅಂತ’. ಆದರೆ ನಾವು ಸರಕಾರಕ್ಕೆ ಮನವಿ ಮಾಡಿಕೊಳ್ಳುವುದೇನೆಂದರೆ “ಆದಿವಾಸಿಗಳನ್ನು ರಕ್ಷಿಸಿದರೆ ಖಂಡಿತ ಕಾಡಿನ ರಕ್ಷಣೆಯಾಗುತ್ತದೆ”. ಏಕೆಂದರೆ ನಾವು ಕಾಡನ್ನು ದೇವರೆಂದು ಪೂಜಿಸುತ್ತೇವೆ. ಉದಾಹರಣೆಗೆ ನಾವು ತಾರೆಮರ, ಸಂಪಿಗೆ ಮರವನ್ನು ದೇವರೆಂದು ಪೂಜಿಸುತ್ತೇವೆ.
ಹಾಗಾಗಿ ನಾವು ಆ ಮರಗಳನ್ನು ಹತ್ತಲು ಸಹ ಹೋಗುವುದಿಲ್ಲ. ಹಾಗೆ ಕಾಡು ಪ್ರಾಣಿಗಳಾದ ಹುಲಿ, ಆನೆ, ಕರಡಿ, ಹಂದಿ, ನವಿಲುಗಳನ್ನು ದೇವರೆಂದು ಪೂಜೆ ಮಾಡುತ್ತೇವೆ. ಹೀಗಾಗಿ ನಾವು ಅವುಗಳಿಗೆ ಯಾವುದೆ ತೊಂದರೆ ಕೊಡುವುದಿಲ್ಲ. ಅದೇ ರೀತಿ ಸರ್ಕಾರ ಟೈಗರ್ ಪ್ರೊಜೆಕ್ಟಿನಲ್ಲಿ ನಮ್ಮನ್ನು ಸೇರಿಸಿಕೊಂಡಿದ್ದರೆ. ಅನಾದಿಕಾಲದಿಂದಲೂ ಹುಲಿಗಳ ರಕ್ಷಣೆ ಮಾಡುತ್ತಿರುವ ನಾವು ಸರ್ಕಾರದ ಜೊತೆ ಸೇರಿ ಮತಷ್ಟು ರಕ್ಷಣೆ ಕೊಡುತಿದ್ದೆವು.

ಹಾಗೆ ನಮ್ಮ ಪೊಡಿಗೆ ಒಂದು ಕಾಡು ಇರುತ್ತೆ ಅದರ ರಕ್ಷಣೆಯನ್ನು ನಾವೇ ನೇಮಿಸಿಕೊಂಡಿರುತ್ತೇವೆ. ಬೇರೆ ಪೊಡಿನವರು ಆ ಕಾಡಿಗೆ ಬರುವಂತಿಲ್ಲ. ಏಕೆಂದರೆ ಬೇರೆ ಪೊಡಿನವರು ಬಂದು ಕಾಡನ್ನು ಹಾಳು ಮಾಡಬಾರದೆಂದು ಆಗಿನಿಂದ ನೆಡೆದು ಬಂದಿರುವ ಸಂಪ್ರದಾಯ. ನಮ್ಮ ಕಿರುವನ ಉತ್ಪನ್ನ, ಹಬ್ಬ, ಹರಿದಿನ, ಪೂಜಿಸುವ ದೇವರುಗಳೆಲ್ಲ ಕಾಡಿನಲ್ಲೇ ಇರುವುದು. ಹಾಗಾಗಿ ಕಾಡಿನಲ್ಲೇ ಹೋಗಿ ವರ್ಷಕ್ಕೊಂದು ಬಾರಿ ರೊಟ್ಟಿ ಹಬ್ಬ ಮಾಡಬೇಕು ಹಾಗೂ ಕಾಡಿಗೂ ಪೂಜೆ ಮಾಡಬೇಕು. ನಮಗೆ ಕಾಡಿನೊಳಗೆ ಕೇವಲ 2-3 ಕಿ.ಮೀ ಮಾತ್ರ ಹೋಗಬೇಕೆಂದು ಅಡೆ ತಡೆ ಹಾಕುತ್ತಿದ್ದಾರೆ. ಇದರಿಂದ ತೊಂದರೆ ಆಗ್ತಿದೆ. ನಮ್ಮ ಆಚರಣೆಗಳೆಲ್ಲಾ ಈಗ ಕಡಿಮೆಯಾಗ್ತಿದೆ.

ಈಗ ಕೇಂದ್ರ ಸರ್ಕಾರದಿಂದ ಅರಣ್ಯ ಖಾಯಿದೆ ಹೊರಡಿಸಿದ್ದಾರೆ. ಇದರಿಂದ ಗಿರಿಜನರು ಸುಮಾರು 10 ಎಕರೆ ಯಷ್ಟು ಸ್ವಂತ ಜಮೀನು ಮಾಡಿಕೊಳ್ಳಬಹುದು. ಯಾಕೆಂದರೆ ಅರಣ್ಯ ಇಲಾಖೆಯವರು ನಮ್ಮ ಸ್ಥಳವನ್ನೆಲ್ಲ ಒತ್ತುವರಿ ಮಾಡಿ ತೆಗೆದುಕೊಂಡಿದ್ದರು. ಆದರೆ ಈ ಯೋಜನೆಯಿಂದ ನಮಗೆ ಹಿಂದೆ ಇದ್ದಂತಹ 2-3 ಎಕರೆ ಜಮೀನನ್ನು ಪಟ್ಟಿಮಾಡಿ ನಮಗೇ ವಹಿಸಿ ಕೊಟ್ಟಿದ್ದಾರೆ. ಈ Act ನಿಂದ ನಮಗೆ ಮತ್ತೊಂದು ಉಪಯೋಗ ಅಂದ್ರೆ ಸಮುದಾಯ ಆಧಾರಿತ Act ಕೊಟ್ಟಿದ್ದಾರೆ. ಇದರಿಂದ ನಮಗೆ ಕಿರುವನ ಉತ್ಪನ್ನಗಳನ್ನು ನಾವು ಬದುಕಿರುವ ವರೆಗೂ ಮಾರಿ ತಿನ್ನಬಹುದು. ಈ  Act ಬಾರದೆ ಹೋಗಿದ್ದರೆ ಬಹಳ ಕಷ್ಟವಾಗ್ತಿತ್ತು. ಇಷ್ಟಾದರೂ ಅರಣ್ಯ ಇಲಾಖೆಯಿಂದ ತಕ್ಕ ಮಟ್ಟಿಗೆ ಈಗಲೂ ಕಿರುಕುಳವಿದೆ. ಸರ್ಕಾರ ಅದನ್ನು ಗಮನಕ್ಕೆ ತಗೆದುಕಳ್ಳಬೇಕು. ಯಾರಿಂದ ಕಾಡಿನ ರಕ್ಷಣೆ, ಯಾರಿಂದ ಈ ಕಾಡು ಬೆಳೆದು ನಿಂತಿದೆ ಎಂಬ ಅಂಶವನ್ನು ಗಮನಿಸಬೇಕು. ಯಾಕಂದ್ರೆ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಬುಡಕಟ್ಟು ಜನಾಂಗದವರೆ ಅದನ್ನು ಬೆಳಸಿ ಉಳಿಸಿರುವುದು.

ಪ್ರಶ್ನೆ. ಸೋಲಿಗರು ಬೇಟೆಯಾಡುವರು ಎಂದು ಹೇಳುತ್ತಾರೆ ಅದಕ್ಕೆ ನೀವು ಏನು ಹೇಳುವಿರಿ?
ಬಸವರಾಜು : ಅದು ಶುದ್ದ ಸುಳ್ಳು. ನಾವು ಮಾಂಸಹಾರಿಗಳೇ. ಆದರೆ ನಾವು ಬೇಟೆ ಆಡುತ್ತಿದ್ದ ರೀತಿ ಬೇರೆ. ಈ ಬಂದೂಕು, ಬಾಣದಿಂದ ಕೊಂದು ನಾವು ತಿನ್ನುತ್ತಿರಲಿಲ್ಲ, ಬದಲಾಗಿ ನೀರು ಕುಡಿಯಲು ಬಂದ ಜಿಂಕೆಗಳಿಗೆ ಹುಲಿ, ಸಿಂಹ, ಚಿರತೆ ಕಾದು ಬೇಟೆಯಾಡುತ್ತಿದ್ದವು. ನಾವು ಅವು ಬೇಟೆಯಾಡಿದ ನಂತರ ಅವುಗಳನ್ನು ಓಡಿಸಿ ಬೇಟೆಯಾದ ಮಾಂಸವನ್ನ ತರುತಿದ್ದೆವು. ಈಗಲೂ ನಮ್ಮಲ್ಲಿ ಅದೇ ಪದ್ದತಿ, ನಾವೇ ಸ್ವತಃ ಬೇಟೆಯಾಡುವುದಿಲ್ಲ.

ಪ್ರಶ್ನೆ. ಕಾಡು ಪ್ರಾಣಿಗಳಿಂದ ನೀವು ಯಾವ ರೀತಿ ರಕ್ಷಣೆ ಪಡೆಯುವಿರಿ?
ಬಸವರಾಜು : ನೋಡಿ ಕಾಡು ಪ್ರಾಣಿ-ಪಕ್ಷಿಗಳನ್ನು ಅನಾದಿಕಾಲದಿಂದಲೂ ದೇವರೆಂದು ಪೂಜಿಸುತ್ತಾ ಬಂದಿದ್ದೀವಿ. ಅದರಲ್ಲೂ ಹುಲಿಯನ್ನು ನಾವು ಪೂಜಿಸುವುದರಿಂದ ಅವು ನಮ್ಮ ಮೇಲೆ ದಾಳಿ ಮಾಡೊದಿಲ್ಲ. ನಾವು ಈ ಕಾಡಿನಲ್ಲಿ ಪ್ರಾಣಿಗಳ ವಾಸನೆಯಿಂದಲೇ ಅವುಗಳನ್ನ ಪತ್ತೆ ಮಾಡುತ್ತೆವೆ. ಉದಾಹರಣೆಗೆ ನಮಗೆ ಒಂದು ಆನೆ ಮೂರು ಮೈಲು ದೂರವಿದ್ದರು ಗಾಳಿಯಲ್ಲಿ ಜಿಡ್ಡಿನ ವಾಸನೆ ಬರುತ್ತದೆ, ನಾಗರ ಹಾವು 10 ಅಡಿ ದೂರದಲ್ಲಿ ಬಿದ್ದಿದ್ದರೆ ಹಲಸಿನ ಹಣ್ಣಿನ ವಾಸನೆಯಂತೆ ಬರುತ್ತದೆ, ಹಾಗೆ ಮಂಡಲದ ಹಾವು, ಹಸಿರು ಹಾವು ಇವನ್ನು ವಾಸನೆ ಮೂಲಕ ಪತ್ತೆ ಮಾಡುತ್ತೆವೆ, ವಾಸನೆಯಿಂದ ಬಹಳ ದೂರದಿಂದಲೆ ಪತ್ತೆ ಮಾಡಿಕೊಂಡು ನಮ್ಮ ಕಿರುವನ ಉತ್ಪನ್ನಗಳನ್ನು ತೆಗೆದುಕೊಂಡು ಹೊರಟು ಹೋಗುತ್ತೇವೆ.

ಪ್ರಶ್ನೆ. ಆನೆ ಪಳಗಿಸುವುದರಲ್ಲಿ ಸೋಲಿಗರು ಏನು ಮಾಡುತ್ತಾರೆ? ಮತ್ತು ಮೈಸೂರು ಅರಮನೆಗೆ ಸೋಲಿಗರು ಬಿಟ್ಟರೆ ಬೇರೆ ಯಾರು ಆನೆ ಪಳಗಿಸಿ ಕೊಡ್ತಿದ್ರು?
ಬಸವರಾಜು : ಆನೆಗಳನ್ನು ಪಳಗಿಸೋಕೆ ನಮ್ಮದೇ ಆದ ಭಾಷೆ ಇದೆ. ಮೊದಲು ಗುಂಡಿ ತೋಡಿ ಅದರಲ್ಲಿ ಆನೆ ಬೀಳಿಸುತ್ತೇವೆ. ಆಮೇಲೆ ಅವಕ್ಕೆ ಬುದ್ದಿ ಕಲಿಸುತ್ತಾರೆ. ಇದು ರಾಜಮಹಾರಾಜರ ಕಾಲದಿಂದಲೂ ಬಂದ ಪದ್ದತಿ. ಮೈಸೂರು ಅರಮನೆಗೆ ಕೇವಲ ನಮ್ಮ ಸೋಲಿಗರು ಮಾತ್ರ ಆನೆ ಪಳಗಿಸಿ ಕೊಡ್ತಿದ್ರು. ಅದಕ್ಕೆ ಕಾರಣ ಕಾಡಿನಲ್ಲಿ ಇದ್ದವರು ಸೋಲಿಗರು ಮಾತ್ರ. ಆನೆಗಳನ್ನು ನಮ್ಮ ಸೋಲಿಗರಿಂದಲೇ ಹಿಡಿಸಿ ಪಳಗಿಸಿ ಆನಂತರ ಅರಮನೆಗೆ ತರುತ್ತಿದ್ದರು. ಒಂದು ಕಾಲದಲ್ಲಿ ಆನೆಗಳನ್ನ ಕೊಂದು ಅದರ ದಂತಗಳನ್ನು ಅರಮನೆಯಲ್ಲಿ ಶೇಖರಿಸಿದ್ದಾರೆ. ಆದರೆ ಈಗ ಅದು ನಿಂತು ಹೋಗಿದೆ. ಈಗ ಅಂಬಾರಿಗೆ ಮಾತ್ರ ಆನೆಗಳನ್ನು ಕರೆಸುತ್ತಾರೆ. ಬ್ರಿಟೀಷರಿದ್ದ ಕಾಲದಲ್ಲಿ ಆನೆಗಳನ್ನು ಹಿಡಿಸಿ ದಂತವಿದ್ದ ಆನೆಗಳನ್ನು ಕೊಲ್ಲಿಸಿ ಅದರ ದಂತಗಳನ್ನು ಶೇಖರಿಸಿ ಮಾರಾಟ ಮಾಡುತ್ತಿದ್ದರು.IMG_2179

ಪ್ರಶ್ನೆ. ಮೊದಲಿನಿಂದಲೂ ಕಾಡಿನಲ್ಲೇ ಹುಟ್ಟಿ ಬೆಳೆದ ಸೋಲಿಗರಿಗೆ ಈ ನಾಗರೀಕತೆ ಹೇಗೆ ಪ್ರಭಾವ ಬೀರಿದೆ?
ಬಸವರಾಜು : ಅದೇ ಮಾರಕವಾಗಿದೆ. ಯಾಕಂದ್ರೆ ಈ ಹುಲಿ ಯೋಜನೆಯಿಂದ ಸರ್ಕಾರ ಕಾಡಿನಲ್ಲಿ ಇದ್ದ ನಮಗೆ ಪಟ್ಟಣಗಳಲ್ಲಿ ಇರುವಂತೆ ಆದೇಶ ಹೊರಡಿಸಿದೆ. ಒಂದು ವೇಳೆ ನಾವು ಪಟ್ಟಣಕ್ಕೆ ಬಂದರು ಕೂಲಿ ಮಾಡಿ ಬದುಕಲು ಕಷ್ಟವಾಗುತ್ತದೆ. ನಮ್ಮ ಸಂಸ್ಕೃತಿ ಎಲ್ಲಾ ನಶಿಸಿ ಹೋಗುತ್ತದೆ. ನಮ್ಮ ರೊಟ್ಟಿ ಹಬ್ಬ, ಆಡು-ಪಾಡು ಪದ್ದತಿಗಳು ಹೊರಟು ಹೋಗಿ ನಾವು ನಿಜವಾಗಿಯೂ ಮಾರಕವಾಗುತ್ತೇವೆ ಎನ್ನಿಸುತ್ತದೆ. ಆದ್ದರಿಂದ ನಾವು ಹೇಳೋದೇನಂದ್ರೆ ನಾವಿರೋ ಜಾಗದಲ್ಲೇ ನಮ್ಮನ್ನು ಇರಲು ಬಿಡಿ. ನಾವೆಲ್ಲಿಗೂ ಬರೋದಿಲ್ಲ ಎಂದು ಸರ್ಕಾರಕ್ಕೆ ಹೇಳುತ್ತಿದ್ದೇವೆ. ನಮ್ಮ ಸಂಸ್ಕೃತಿ, ನಮ್ಮ ಪದ್ದತಿ, ನಮ್ಮ ಭಾಷೆ ಉಳಿಯಬೇಕೆಂದರೆ ನಾವು ಕಾಡಿನಲ್ಲೇ ಇರಬೇಕು.

ಪ್ರಶ್ನೆ. ಸೋಲಿಗರಲ್ಲಿ ಇದ್ದಂತಹ ಗಿಡಮೂಲಿಕೆಗಳ ಔಷಧಿ ಜ್ಞಾನ ಈಗಲೂ ಮುಂದುವರೆಯುತ್ತಿದೆಯೋ? ಅಥವ ಕೈ ತಪ್ಪಿಹೋಗುತ್ತಿದೆಯೋ?
ಬಸವರಾಜು : ಹಿಂದಿನವರು ಆಸಕ್ತಿ ತೋರಿ ಕಲಿತಿದ್ರು. ಆದರೆ ಈ ನಗರದ ವಿದ್ಯಾಭ್ಯಾಸ ಬಂದಾಗಿನಿಂದ ಇತ್ತೀಚಿನವರು ಆಸಕ್ತಿ ತೋರುತ್ತಿಲ್ಲ. ಕೆಲವೊಂದು ಔಷಧಿ ಗಿಡಗಳ ಬಗ್ಗೆ ನಮಗೆ ನಮ್ಮ ಹಿರಿಯರು ಹೇಳಿ ಕೊಡ್ತಿದ್ರು. ಇನ್ನೂ ಕೆಲವದರ ಬಗ್ಗೆ ಹೇಳಿ ಕೊಟ್ಟಿಲ್ಲ. ಅದು ಅವರಲ್ಲೆ ಉಳಿದು ಹೋಯ್ತು. ಈಗ ಕೆಲವು ಔಷಧಿಗಳನ್ನ ತೋರಿಸಿ ಹೆಸರಿಸಬಹುದು. ಇನ್ನೂ ಕೆಲವು ಆಗೋದಿಲ್ಲ. ಈಗಲೂ ಒಂದು ಪೋಡಿನಲ್ಲಿ 3-4 ಜನ ಪಂಡಿತರು ಇದ್ದೇ ಇರ್ತಾರೆ. ಅವರೆ ನಮಗೆ ಹೇಳಿಕೊಡುತ್ತಾರೆ.
ಪ್ರಶ್ನೆ. ಶಾಲಾ ಶಿಕ್ಷಣ ಕಲಿತ ಮೇಲೆ ಪಟ್ಟಣಕ್ಕೆ ಹೋಗುವ ಸೋಲಿಗರ ಸಂಖ್ಯೆ ಹೆಚ್ಚಾಗಿದ್ಯಾ?
ಬಸವರಾಜು : ವಿದ್ಯಾಭ್ಯಾಸ ಕಲಿತು ಪಟ್ಟಣಕ್ಕೆ ಹೋದ್ರೂ 3-4 ದಿನದಲ್ಲೆ ವಾಪಸಾಗುತ್ತಾರೆ. ಯಾಕಂದ್ರೆ ಅವರಿಗೆ ಪಟ್ಟಣ ಹಿಡಿಸೋದಿಲ್ಲ. ಕಾಡೆ ಬೇಕೆನ್ನುತ್ತಾರೆ. ಹಾಗೆ ಈ ಕೇರಳ, ಮಡಿಕೇರಿಗೂ ವಲಸೆ ಹೋಗಿದ್ದರು. ಆದರೆ ಒಂದೇ ವಾರದಲ್ಲಿ ನಮ್ಮ ಕಾಡಿಗೆ ಬಂದುಬಿಟ್ಟರು.

ಪ್ರಶ್ನೆ. ನಿಮ್ಮಲ್ಲಿ ಕಲಿಕೆಯಲ್ಲಿ ಹೆಣ್ಣು-ಗಂಡು ಇಬ್ಬರೂ ಸರಿಸಮಾನರೇ?
ಬಸವರಾಜು : ಖಂಡಿತ ಕಲಿಕೆಯಲ್ಲಿ ಹೆಣ್ಣು-ಗಂಡು ಇಬ್ಬರೂ ಸರಿಸಮಾನರು. ಪಟ್ಟಣದಲ್ಲೀಗ ಜಡೇಗೌಡ ಎಂಬುವವರಿದ್ದಾರೆ. ಅವರು Ph.D ಮಾಡಿದ್ದಾರೆ. ಹಾಗೆ ಪೊನ್ನಂಪೇಟೆಯಲ್ಲಿ ಪ್ರೊಫೆಸರ್ ಆಗಿದ್ದಾರೆ. ಅವರು ಹಬ್ಬಗಳಿಗೆ ನಮ್ಮಲ್ಲಿ ಬರುತ್ತಾರೆ. ಮತ್ತು ಮಾದೇಗೌಡ್ರು Ph.D ಮುಗಿಸಿ ಡಾಕ್ಟರೇಟ್ ಪಡೆದು ಕೊಂಡಿದ್ದಾರೆ.

ಪ್ರಶ್ನೆ. ನಿಮ್ಮಲ್ಲಿ ಸ್ತ್ರೀಯರ ಸ್ಥಾನ ಮಾನಗಳ ಬಗ್ಗೆ ತಿಳಿಸುವಿರ? ಈ ವಿಧವೆಯರ ಮರು ವಿವಾಹ, ವಿಚ್ಛೇಧನ ಪದ್ದತಿಗಳ ವ್ಯವಸ್ಥೆಯ ಬಗ್ಗ ತಿಳಿಸುವಿರ?
ಬಸವರಾಜು : ನಮ್ಮಲ್ಲಿ ವಿಧವೆಯರು ಮತ್ತೊಂದು ಮದುವೆ ಆಗಬಹುದು ಅದಕ್ಕೆ ಸ್ವಾತಂತ್ರ್ಯ ಇದೆ. ಆಕೆಗೆ ಮಕ್ಕಳಿದ್ದರೂ ವಿವಾಹವಾಗಬಹುದು. ಈ ಮದುವೆಯನ್ನ ತಾವೇ ಇಷ್ಟ ಪಟ್ಟು ಆಗಿ ಊರಿನ ನಾಯಕನ ಮುಖಾಂತರ ಊರಿಗೆ ತಿಳಿಸುತ್ತಾರೆ. ಅವರಿಗೆ ತೊಂದರೆ ಕೊಡುವುದಿಲ್ಲ. ಹೀಗೆ ಗಂಡಸರಿಗೂ ಹೆಂಡತಿ ಸತ್ತರೆ ಮದುವೆಯಾಗುವ ಪದ್ದತಿ ಇದೆ. ಒಂದು ವೇಳೆ ಹೆಂಡತಿ ಬದುಕಿದ್ದೂ ಮತ್ತೊಂದು ಮದುವೆ ಆದರೆ ಅದಕ್ಕೆ ಸಾಕಷ್ಟು ಕಟ್ಟುಪಾಡುಗಳಿವೆ. ನ್ಯಾಯ ಮಾಡ್ತೀವಿ, ಮೊದಲನೇ ಹೆಂಡತಿಯನ್ನು ಸಾಕಬೇಕು. ಅವಳನ್ನು ಬಿಟ್ಟು ಹೋಗಬಾರದು. ಮೊದಲನೇ ಹೆಂಡತಿ ಹಾಗೂ ಗಂಡನ ಒಪ್ಪಿಗೆ ಪಡೆದೇ ನಾವು ತೀರ್ಮಾನ ಮಾಡುತ್ತೇವೆ. ಹೀಗೆ ಹೆಣ್ಣು ಮಕ್ಕಳಿಗೂ ಇದೇ ಪದ್ದತಿ ಇದೆ. ಆದರೆ ಹೆಣ್ಣು ಮಕ್ಕಳ ಮರು ಮದುವೆಯ ಸಂಖ್ಯೆ ಕಡಿಮೆ.

ಎರಡನೇ ಮದುವೆಯಾದ ಮೇಲೆ ಆ ಮದುವೆಯನ್ನು ಮೊದಲನೇ ಹೆಂಡತಿ ಖಂಡಿಸಿದರೆ ಅಂಥವರನ್ನು ನಮ್ಮ ಕುಲದಿಂದ ಹೊರಗೆ ಹಾಕಿ ಒಂದು ಕಡ್ಡಿಯನ್ನು ಮುರಿದು ಎರಡೂ ಹೆಂಡತಿಯರಿಗೆ ಅರ್ಧ ಅರ್ಧ ಭಾಗಕೊಟ್ಟು ನಮ್ಮ ಕುಲದಿಂದ ನಮಗೂ ನಿಮಗೂ ಸಂಬಂಧವಿಲ್ಲವೆಂದು ಹೊರಗೆ ಹಾಕುತ್ತೇವೆ. ಇದರ ಅರ್ಥ ಇನ್ನು ಮುಂದೆ ಅವರ ಪಾಡಿಗೆ ಅವರು ಇರಬಹುದು. ಅವರಿಗೆ ಇಷ್ಟವಾದವರ ಜೊತೆ ಮದುವೆಯಾಗಬಹುದು.

ಪ್ರಶ್ನೆ. ನಿಮ್ಮ ಸೋಲಿಗರ ಭಾಷೆಯ ಬಗ್ಗೆ ಹೇಳುವಿರ?
ಬಸವರಾಜು : ನಮಗೆ ಬೇರೆ ಭಾಷೆ ಇದೆ. ನಮ್ಮಲ್ಲಿ ಹುಡುಗನಿಗೆ ಕುನ್ನ, ಹುಡುಗಿಗೆ ಕುನ್ನಿ, ಹಳ್ಳಿಗೆ ಪೋಡು, ಬರ್ತೀಯಗೆ ಬಂದೆಯಾ, ಹೋಗ್ತಿಯಾ- ಹೋದೆಯ, ಊಟ ಆಯ್ತಾ- ಹೊಟ್ಟೆ ಪಾಡಾಯ್ತಾ, ಗಂಡನ ಹೆಸರಿನಿಂದ ಕರೆಯೋದಿಲ್ಲ ಬಾರ ಎನ್ನುತ್ತಾರೆ. ಹೆಂಡತಿಗೆ ಏನಮ್ಮಿ ಎಂದು ಕರೆಯಲಾಗುತ್ತದೆ, ನಮ್ಮಲ್ಲಿ ಏಕವಚನ ಇದೆ. ಬಹುವಚನ ಸ್ವಲ್ಪ ಕಡಿಮೆ.
ಹಾಗೆ ಹುಲಿಗೆ ದೊಣ್ಣೆಗೆ ನಾಯಿ. ಆನೆಗೆ ಕೊಕ್ಕೆ ದನ, ಚಿರತೆ- ಕಿರುಬ, ಹಂದಿ- ಜೂಟ, ಹದ್ದಿಗೆ- ಗುಮ್ಮ, ಚಂದ್ರನಿಗೆ ಎರೆ, ಸೂರ್ಯನಿಗೆ ಹೊತ್ತು ಇತ್ಯಾದಿಯಾಗಿ ನಮ್ಮ ಭಾಷೆಯಲ್ಲಿ ಹೇಳಲಾಗುತ್ತದೆ.

Leave a Reply

Your email address will not be published.