ಅಹಿಂದ ವರ್ಗಗಳ ವಿರುದ್ದ ದೃವೀಕರಣಗೊಳ್ಳುತ್ತಿರುವ ಮೇಲ್ವರ್ಗಗಳು!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

ಇನ್ನೇನು ಹತ್ತು ತಿಂಗಳಲ್ಲಿ  ನಡೆಯಲಿರುವ ರಾಜ್ಯ ವಿದಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಅಹಿಂದ ರಾಜಕಾರಣದ ವಿರುದ್ದ ಸೃಷ್ಠಿಯಾಗುತ್ತಿರುವ ಮೇಲ್ವರ್ಗದ ರಾಜಕಾರಣದ ಹೆಜ್ಜೆಗಳನ್ನು ಅರ್ಥ ಮಾಡಿಕೊಳ್ಳಬೇಕಾದ ಅನಿವಾರ್ಯತೆಯ ದೃಷ್ಠಿಯಿಂದ ಇದನ್ನು ಬರೆಯಲೆಬೇಕಾಗಿದೆ.

1994ರಿಂದ 2013ರವರೆಗೆ (ಮದ್ಯದಲ್ಲಿ ಧರ್ಮಸಿಂಗ್   ಮುಖ್ಯಮಂತ್ರಿಯಾಗಿದ್ದ ಇಪ್ಪತ್ತು ತಿಂಗಳನ್ನು ಹೊರತು ಪಡಿಸಿ)  ಸತತವಾಗಿ ಹತ್ತೊಂಭತ್ತು ವರ್ಷಗಳ ಕಾಲ ರಾಜ್ಯವನ್ನು ಆಳಿದ ಮೇಲ್ಜಾತಿಗಳಿಗೆ 2013ರಲ್ಲಿ ಅಧಿಕಾರ ಕಳೆದುಕೊಂಡಾಗ ಪ್ರಾರಂಭವಾದ  ಅಸಹನೆಯ ಕುರುಹುಗಳನ್ನು ಕಳೆದ ನಾಲ್ಕು ವರ್ಷಗಳಿಂದ ನಾವು ಕಾಣುತ್ತಾ ಬಂದಿದ್ದೇವೆ. ಹೀಗಾಗಿ ಮುಂದಿನ ಚುನಾವಣೆಯ ಹೊತ್ತಿಗೆ ತಾವು ಒಂದಾಗಿ ರಾಜಕಾರಣ ಮಾಡದೇಹೋದಲ್ಲಿ ಮತ್ತೆ ಅಧಿಕಾರ ಅಹಿಂದ ವರ್ಗಗಳ ಪಾಲಾಗಲಿದೆಯೆಂಬ ಆತಂಕದಿಂದ ಮೇಲ್ಜಾತಿಗಳು ಇದೀಗ ದೃವೀಕರಣಗೊಳ್ಳಲು ಪ್ರಾರಂಭಿಸಿವೆ.. ಇದಕ್ಕಾಗಿಯೇ ಅವು  ಬಲಪಂಥೀಯ ಬಾಜಪವನ್ನು ಮತ್ತು  ಮೇಲ್ಜಾತಿಗಳ ಹಿಡಿತದಲ್ಲಿರುವ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿವೆ.

ಕರ್ನಾಟಕದ ಮಟ್ಟಿಗೆ ಇದೇನೂ ಹೊಸ ಬೆಳವಣಿಗೆಯಲ್ಲ!.ಎಪ್ಪತ್ತರ ದಶಕದಲ್ಲಿ ಕಾಂಗ್ರೆಸ್ಸಿನ ಮುಖ್ಯಮಂತ್ರಿಗಳಾಗಿದ್ದ ದೇವರಾಜ್ ಅರಸುರವರು ಜಾರಿಗೆ ತಂದ ಹಲವಾರು ಜನಪರ ಯೋಜನೆಗಳು ತಮ್ಮ ಆರ್ಥಿಕ, ಸಾಮಾಜಿಕ, ರಾಜಕೀಯ ಹಿತಾಸಕ್ತಿಗಳಿಗೆ ಮಾರಕವಾಗಿ ಪರಿಣಮಿಸಿದಾಗ ರಾಜ್ಯದ ಮೇಲ್ವರ್ಗಗಳು ಜನತಾ ಪರಿವಾರದ ರೂಪದಲ್ಲಿ ಕಾಂಗ್ರೆಸ್ಸಿಗೆ ಪರ್ಯಾಯವಾದ ಒಂದು ರಾಜಕೀಯ ಶಕ್ತಿಯಾಗಿ ರೂಪುಗೊಳ್ಳಲು ಕಾರಣವಾಗಿದ್ದವು. ಅರಸರು ತಂದಂತಹ ತಳಸ್ತರದ ಜನತೆಯ ಪರವಾದ ಹಲವಾರು ಯೋಜನೆಗಳು ತಲೆತಲಾಂತರದಿಂದ ರಾಜ್ಯದ ಬಹುತೇಕ ಭೂಮಿಯನ್ನು, ವಾಣಿಜ್ಯ-ವ್ಯವಹಾರಗಳನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡಿದ್ದ ಮೇಲ್ಜಾತಿಗಳ ಕೆಂಗಣ್ಣಿಗೆ ಗುರಿಯಾಗಿದ್ದವು. ಭೂಸುಧಾರಣೆಯಂತಹ ಕಾನೂನುಗಳು ಮೇಲ್ಜಾತಿಗಳ ಜಮೀನ್ದಾರಿಕೆಯನ್ನು ಇಲ್ಲವಾಗಿಸಿತು. ದಲಿತರಿಗೆ ಮತ್ತು ಹಿಂದುಳಿದ ವರ್ಗಗಳಿಗೆ ಕಲ್ಪಿಸಲಾದ ಮೀಸಲಾತಿಯಿಂದಾಗಿ ಮೇಲ್ಜಾತಿಗಳು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದ ಸರಕಾರಿ ನೌಕರಿಗಳು ಸಹಜವಾಗಿ ಕೆಳಸ್ತರದ ಜನರ ಪಾಲಾಗತೊಡಗಿದವು. ಇದರ ಜೊತೆಗೆ ರಾಜ್ಯದ ರಾಜಕಾರಣವನ್ನು ತಮ್ಮಿಚ್ಚೆಗೆ ತಕ್ಕಂತೆ ನಡೆಸುತ್ತಿದ್ದ ಮೇಲ್ವರ್ಗಗಳು ತಳಜಾತಿಗಳ ಜೊತೆ ಆ ಅಧಿಕಾರವನ್ನು ಹಂಚಿಕೊಳ್ಳಬೇಕಾದ ಸನ್ನಿವೇಶ ಸೃಷ್ಠಿಯಾಯಿತು. 1980ರ ವೇಳೆಗೆ ಇಂತಹ ಬೆಳವಣಿಗೆಗಳಿಂದ ಆತಂಕಕ್ಕೆ ಈಡಾದ ಮೇಲ್ವರ್ಗಗಳು ಪರ್ಯಾಯ ರಾಜಕೀಯ ಶಕ್ತಿಯೊಂದನ್ನು ಸೃಷ್ಠಿಸಿಕೊಂಡು ಅಧಿಕಾರವನ್ನು ಹಿಡಿಯದೆ ಹೋದರೆ ತಮಗೆ ಉಳಿಗಾಲ ಇಲ್ಲವೆಂಬ ನಿರ್ದಾರಕ್ಕೆ ಬಂದಿದ್ದವು.

ಇದೇ ಸಮಯದಲ್ಲಿ ಅರಸುರವರ ನಂತರ ಅಧಿಕಾರಕ್ಕೆ ಬಂದಿದ್ದ ಗುಂಡೂರಾಯರ ಬೇಜವಾಬ್ದಾರಿ ಆಳ್ವಿಕೆ ಸಮಾಜದ ಎಲ್ಲ ಸ್ಥರಗಳ ಜನತೆಯಲ್ಲೂ ನಿರಾಸೆಯನ್ನು ಉಂಟು ಮಾಡಿತ್ತು. ತಮಗೆ ಮುಖ್ಯಮಂತ್ರಿ ಕುರ್ಚಿ ದೊರೆಯಲಿಲ್ಲವೆಂಬ ಏಕೈಕ ಕಾರಣದಿಂದಾಗಿ ಕ್ರಾಂತಿರಂಗವನ್ನು ಕಟ್ಟಿದ್ದ ಬಂಗಾರಪ್ಪನವರಿಗೂ ಕಾಂಗ್ರೆಸ್ಸನ್ನು ಸೋಲಿಸಿ ತಮ್ಮ ಬಲವನ್ನು ತೋರಿಸಬೇಕೆಂಬ ಹಟವಿತ್ತು. ಈ ಅವಧಿಯಲ್ಲಿ ಭುಗಿಲೆದ್ದ ರೈತ ಚಳುವಳಿ,ದಲಿತ ಚಳುವಳಿ ಮತ್ತು ಗೋಕಾಕ್ ಚಳುವಳಿಗಳು ಕಾಂಗ್ರೆಸ್ ಸರಕಾರದ ನೀತಿಗಳ ವಿರುದ್ದ ಜನಾಭಿಪ್ರಾಯ ಮೂಡಿಸುವಲ್ಲಿ ಯಶಸ್ವಿಯಾದವು. ಕಾಂಗ್ರೆಸ್ ಸರಕಾರದಲ್ಲಿ ತಮಗೆ ಅಧಿಕಾರ ದೊರೆಯದಿದ್ದಕ್ಕೆ  ಕೋಪಗೊಂಡಿದ್ದ ಮೇಲ್ವರ್ಗಗಳು ಇಂತಹದೊಂದು ಅವಕಾಶಕ್ಕಾಗಿ ಕಾಯುತ್ತಿದ್ದವು. ಆದಾಗಲೇ ಅಸ್ಥಿತ್ವದಲ್ಲಿದ್ದ ಜನತಾ ಪಕ್ಷದ ಜೊತೆಗೆ, ಹೊಸದಾಗಿ ಹುಟ್ಟಿಕೊಂಡಿದ್ದ ಬಾಜಪ ಸಹ ಕರ್ನಾಟಕದಲ್ಲಿ ನೆಲೆಗೊಳ್ಳಲು  ಅವಕಾಶಕ್ಕಾಗಿ ಕಾಯುತ್ತಿತ್ತು. ಹೇಗಾದರು ಮಾಡಿ ಕಾಂಗ್ರೇಸ್ಸನ್ನು ಸೋಲಿಸಬೇಕೆಂಬ ಹಟಕ್ಕೆ ಬಿದ್ದ ಮೇಲ್ವರ್ಗಗಳು ಜನತಾ ಪಕ್ಷ ಮತ್ತು ಬಾಜಪವನ್ನು ಬೆಂಬಲಿಸಿದವು. ಈ ಹಂತದಲ್ಲಿ ಅದು ಹಿಂದುಳಿದ ವರ್ಗಗಳ ನಾಯಕರಾದ ಬಂಗಾರಪ್ಪನವರನ್ನು ಸಹ ತನ್ನ ಆಯುಧವನ್ನಾಗಿ ಬಳಸಿಕೊಂಡಿತು. ರಾಜ್ಯದ ಎಲ್ಲ ಪ್ರಗತಿಪರ ಚಳುವಳಿಗಳನ್ನು ತನ್ನ ಻ನುಕೂಲಕ್ಕಾಗಿ ಬಳಸಿಕೊಂಡ ಮೇಲ್ವರ್ಗಗಳು ಜನತಾಪಕ್ಷ ಮತ್ತು ಬಾಜಪದ ಹೆಸರಲ್ಲಿ ಒಂದಾಗ ತೊಡಗಿದವು.

ದುರಂತವೆಂದರೆ ಅಂದಿನ ಬಹುತೇಕ ಪ್ರಗತಿಪರರು, ಬರಹಗಾರರು ಸಹ ಕಾಂಗ್ರೆಸ್ಸಿನ ಭ್ರಷ್ಟತೆಯ, ಜಡತೆಯ ವಿರುದ್ದದ ಮತ್ತು ಕಾಂಗ್ರೇಸ್ಸಿನ ವಂಶಪಾರಂಪರ್ಯ ಆಳ್ವಿಕೆಯ ವಿರುದ್ದದ ಹೋರಾಟದ ನೆಪದಲ್ಲಿ ಜನತಾ ಪರಿವಾರದ ಬೆಂಬಲಕ್ಕೆ ನಿಂತರು. ಇವನ್ನೆಲ್ಲ ಕ್ರೋಢೀಕರಿಸಿಕೊಂಡು ತನ್ನ ಅನುಕೂಲಕ್ಕೆ ಬಳಸಿಕೊಂಡ ಮೇಲ್ವರ್ಗ 1983ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲು ಕಾರಣವಾಯಿತು. ಬಾಜಪದ ಬಾಹ್ಯ ಬೆಂಬಲ ಪಡೆದ ಜನತಾಪಕ್ಷ ಸರಕಾರ ರಚಿಸಿತು. ಒಕ್ಕಲಿಗನಾಯಕರಾದ ದೇವೇಗೌಡರನ್ನು ಮತ್ತು ಹಿಂದುಳಿದ ವರ್ಗಗಳ ನಾಯಕರಾದ ಬಂಗಾರಪ್ಪನವರನ್ನು  ತೆರೆಮರೆಗೆ ಸರಿಸಿ ಬ್ರಾಹ್ಮಣರಾದ ರಾಮಕೃಷ್ಣ ಹೆಗ್ಗಡೆಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು.  ಅಚ್ಚರಿಯೆಂದರೆ ಅಹಿಂದ ವರ್ಗದ ಮೇಲಿನ ಅಸಹನೆಯನ್ನು ಬಳಸಿಕೊಂಡು ಅಧಿಕಾರ ಹಿಡಿದ ಜನತಾ ಪರಿವಾರವೇ ಮುಂದೆ ಹಲವು ದಲಿತ ಮತ್ತು ಹಿಂದುಳಿದ ವರ್ಗಗಳ ಹಲವು ನಾಯಕರುಗಳನ್ನು ಸೃಷ್ಠಿಸಿದ್ದು. ಇವತ್ತಿನ ಅಹಿಂದ ನಾಯಕರಾದ ಸಿದ್ದರಾಮಯ್ಯನವರು ಸಹ ಅದೇ ಜನತಾ ಪರಿವಾರದ ಕೂಸೆಂಬುದನ್ನು ನಾವು ಮರೆಯಬಾರದು.

ಅಹಿಂದವರ್ಗಗಳ ಮೇಲಿನ ಅಸಹನೆಯಿಂದ ಮತ್ತು ತಾನೇ ಅಧಿಕಾರ ಹಿಡಿಯಬೇಕೆಂಬ ಮೇಲ್ವರ್ಗಗಳ ಮನಸ್ಥಿತಿಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಕಳೆದ ಮೂರು ದಶಕಗಳಲ್ಲಿ ಯಾವಾಗೆಲ್ಲ ಕಾಂಗ್ರೇಸ್ ಮೇಲ್ಜಾತಿಗಳ ನಾಯಕರುಗಳನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ  ಸಾಧ್ಯತೆಗಳಿದ್ದವೋ ಹಾಗೆಲ್ಲ ಮೇಲ್ಜಾತಿಗಳು ಕಾಂಗ್ರೇಸ್ಸಿನ ಪರವಾಗಿ ನಿಂತಿರುವುದನ್ನೂ ನಾವು  ಗಂಭೀರವಾಗಿ ಗಮನಿಸಬೇಕಾಗುತ್ತದೆ.

1989ರಲ್ಲಿ ಲಿಂಗಾಯಿತ ಸಮುದಾಯದ ವೀರೇಂದ್ರ ಪಾಟೀಲರು ಕಾಂಗ್ರೇಸ್ಸಿನಿಂದ ಮುಖ್ಯಮಂತ್ರಿಯಾಗುತ್ತಾರೆಂಬ ಸುಳಿವು ಸಿಕ್ಕಿದ ಮೇಲ್ವರ್ಗಗಳು ಕಾಂಗ್ರೇಸ್ಸಿಗೆ ಅತ್ಯದ್ಬುತವಾದ ಬಹುಮತ ದೊರಕಿಸಿಕೊಟ್ಟಿದ್ದವು. ನಂತರ 1999ರಲ್ಲಿ ಒಕ್ಕಲಿಹನಾಯಕರಾದ ಎಸ್.ಎಂ.ಕೃಷ್ಣಾರವರು ಕಾಂಗ್ರೇಸ್ಸಿನ ಅದ್ಯಕ್ಷರಾಗಿದ್ದಾಗಲೂ ಕಾಂಗ್ರೇಸ್ಸಿಗೆ ಸ್ಪಷ್ಟಬಹುಮತ  ಸಿಕ್ಕಿತ್ತು. ಆದರೆ, 2004ರಲ್ಲಿ  ಮಲ್ಲಿಕಾರ್ಜುನ ಖರ್ಗೆಯವರು ಪಕ್ಷದ ಅದ್ಯಕ್ಷರಾಗಿದ್ದಾಗ ದಲಿತರೊಬ್ಬರು ಮುಖ್ಯಮಂತ್ರಿಯಾಗಿಬಿಡುತ್ತಾರೆಂಬ ಅಸಹನೆಯಿಂದ ಕಾಂಗ್ರೇಸ್ಸಿಗೆ ಬಹುಮತ ಸಿಗದೆ ಇರುವಂತೆ ನೋಡಿಕೊಳ್ಳಲಾಯಿತು.

2006 ರ ನಂತರ ಅಧಿಕಾರದ ಕನಸನ್ನು ಜನತಾದಳ ಮತ್ತು ಬಾಜಪದ ರೂಪದಲ್ಲಿ ಈಡೇರಿಸಿಕೊಂಡ ಮೇಲ್ವರ್ಗಗಳು 2013ರ ನಂತರ ಮತ್ತೆ ಅತೃಪ್ತ ಆತ್ಮವಾಗಿವೆ. ತನ್ನನ್ನು ತಾನು ಅಹಿಂದ ಮುಖ್ಯಮಂತ್ರಿ ಎಂದು ಘೋಷಿಸಿಕೊಂಡ ಸಿದ್ದರಾಮಯ್ಯನವರು ಸಹಜವಾಗಿಯೇ ಮೇಲ್ವರ್ಗಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಅಹಿಂದ ವರ್ಗಗಳ ಪರವಾಗಿ ಅವರು ಜಾರಿಗೊಳಿಸಿದ ಹಲವಾರು ಯೋಜನೆಗಳನ್ನು ಕಟುವಾಗಿ ಟೀಕಿಸುತ್ತ ಪರೋಕ್ಷವಾಗಿ ಮೇಲ್ವರ್ಗಗಳ ಅಸಹನೆಯನ್ನು ಜನತಾದಳ ಮತ್ತು ಬಾಜಪಗಳು ಹೊರಹಾಕುತ್ತಿವೆ. ಮೇಲ್ನೋಟಕ್ಕೆ ಜನತಾದಳ ಮತ್ತು ಬಾಜಪಗಳು ದೂರವಿರುವಂತೆ ಕಂಡರೂ ಆಳದಲ್ಲಿ ಅಂದರೆ ಸಿದ್ದರಾಮಯ್ಯನವರನ್ನು ಅವರು ಪ್ರತಿನಿಧಿಸುವ ಅಹಿಂದವನ್ನು ಹೀಗಳೆಯುವ ವಿಚಾರದಲ್ಲಿ ಮಾತ್ರ ಅವು ಎಂದಿಗೂ ಒಂದೇನೆ. ಅವುಗಳ ರಾಜಕೀಯ ಹೋರಾಟವೂ ಇದೇ ದಾಟಿಯಲ್ಲಿ ನಡೆಯುತ್ತಿದೆ. ಬಹುಶ: ಮುಂದಿನ ವರ್ಷದ ಚುನಾವಣೆಗಳು ಘೋಷಣೆಯಾಗುವ ಹೊತ್ತಿಗೆ ಮೇಲ್ವರ್ಗಗಳು ಇನ್ನಷ್ಟು ದೃವೀಕರಣಗೊಳ್ಳುವುದು ಖಚಿತ.

ಒಟ್ಟಿನಲ್ಲಿ ಕಾಂಗ್ರೆಸ್ಸಿಗೆ ಪರ್ಯಾಯ ರಾಜಕೀಯ ಶಕ್ತಿಯೊಂದನ್ನು ಸೃಷ್ಠಿಸುವ ಬಗ್ಗೆ ಮೆಲುದನಿಯಲ್ಲಿ ಮಾತಾಡುತ್ತಿರುವ ಮೇಲ್ವರ್ಗ ಮುಂದಿನ ಚುನಾವಣೆಯ ಹೊತ್ತಿಗೆ ಕಾಂಗ್ರೆಸ್ಸಿನಲ್ಲಿರುವ ಮೇಲ್ವರ್ಗಗಳ ನಾಯಕರುಗಳನ್ನು ತನ್ನತ್ತ ಸೆಳೆಯುವ ಮತ್ತು ಅಹಿಂದ ವರ್ಗವನ್ನು ಒಡೆಯುವ ಸಂಚನ್ನು ಮಾಡುವುದು ನಿಶ್ಚಿತ. ಬಾಜಪದ ನಾಯಕರಾದ ಈಶ್ವರಪ್ಪನವರು ರಾಯಣ್ಣ ಬ್ರಿಗೇಡ್ ಮತ್ತು ಹಿಂದ ಸಂಘಟನೆಯನ್ನು ಹುಟ್ಟು ಹಾಕಿ ಯಡಿಯೂರಪ್ಪನವರ ಇಚ್ಚೆಗೆ ವಿರುದ್ದವಾಗಿ ನಡೆದುಕೊಳ್ಳುತ್ತಿರುವುದನ್ನು ನೋಡಿಯೂ ಬಹಳ ತಿಂಗಳುಗಳ ಕಾಲ ಸುಮ್ಮನಿದ್ದ ಬಾಜಪದ ಹೈಕಮ್ಯಾಂಡ್ ಮತ್ತು ಸಂಘಪರಿವಾರವನ್ನು ನೋಡಿದರೆ ಅಹಿಂದ ವರ್ಗವನ್ನು ಒಡೆಯಲು ಅದು ಈ ತಂತ್ರವನ್ನು ಹೂಡಿದ್ದಿರಬಹುದೆಂದು ಬಾಸವಾಗುತ್ತದೆ. ಹಾಗಾಗಿ ಇನ್ನೇನು ಚುನಾವಣೆಗಳು ಘೋಷಣೆಯಾಗಿಬಿಡುತ್ತವೆ ಎನ್ನುವ ಸಮಯಕ್ಕೆ ಸರಿಯಾಗಿ ಕಾಂಗ್ರೆಸ್ಸಿನಿಂದ ಹಲವು ಮಂದಿ ನಾಯಕರುಗಳು ಬೇರೆ ಪಕ್ಷಗಳಿಗೆ ಪಕ್ಷಾಂತರ ಮಾಡುವ ಸಾದ್ಯತೆ ಇದೆ. ಕಾಂಗ್ರೆಸ್ಸಿನ ಅಹಿಂದ ರಾಜಕಾರಣವನ್ನು ಆಳದಲ್ಲಿ ಅರಗಿಸಿಕೊಳ್ಳಲಾಗದ ಕಾಂಗ್ರೆಸ್ಸಿನಲ್ಲಿಯೇ ಇರುವ ಹಲವಾರು ಮೇಲ್ವರ್ಗಗಳ ನಾಯಕರುಗಳು ಮೇಲ್ವರ್ಗಗಳ ಹಿತಾಸಕ್ತಿಗಳನ್ನು ಕಾಪಾಡುವ ನೆಪದಲ್ಲಿ ಪಕ್ಷ ತೊರೆಯುವ ಸಂಭವವಿದೆ.

ಅಹಿಂದ ವರ್ಗಗಳ ಹಿತ ಕಾಯಬಲ್ಲಂತಹ ರಾಜಕಾರಣವನ್ನು ಸಹಿಸಿಕೊಳ್ಳದ ಮೇಲ್ವರ್ಗಗಳು ಕಾಂಗ್ರೆಸ್ಸಿಗೆ ಪರ್ಯಾಯ ರಾಜಕಾರಣ ಎಂಬಂತೆ ಮಾತಾಡುತ್ತ ಅಹಿಂದ ವಿರುದ್ದ ಮೇಲ್ವರ್ಗಗಳ ಬೆಂಬಲಕ್ಕೆ ನಿಲ್ಲಬಲ್ಲ ಬಲಪಂಥೀಯ ರಾಜಕೀಯ ಪಕ್ಷವೊಂದರ ಪರವಾಗಿ ನಿಲ್ಲತೊಡಗಿವೆ. ಇಂತಹದೊಂದು ಅಪಾಯವನ್ನು ಮನಗಂಡು ರಾಜಕೀಯವಾಗಿ ಸದೃಢವಾಗಿ ಒಗ್ಗಟ್ಟಾಗಿ ನಿಲ್ಲಬೇಕಾದ ಅನಿವಾರ್ಯತೆ ಇವತ್ತು ಅಹಿಂದ ವರ್ಗಗಳಿಗಿದೆ.

Leave a Reply

Your email address will not be published.